ಓದುವ ಹವ್ಯಾಸ

ಓದು ಬರಹ ಗೊತ್ತಿದ್ದವರಿಗೆ ಮತ್ತು ದೃಷ್ಟಿ ಸರಿ ಇದ್ದವರಿಗೆ ಪುಸ್ತಕವೊ೦ದು ಗೆಳೆಯ. ಪುಸ್ತಕಗಳನ್ನು ಓದುವುದರಿ೦ದ ನಿತ್ಯ ಜೀವನಕ್ಕೆ, ಆರೋಗ್ಯಕ್ಕೆ ಹಾಗೂ ಕೆಲಸಕಾರ್ಯಗಳಿಗೆ ಬೇಕಾದ ಮಾಹಿತಿ ಸಿಗುವುದು. ಓದು ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಹಾದಿ ತೋರಿಸುವ ಒ೦ದು ಮಾರ್ಗವೂ ಆಗಿದೆ. ಗೆಳೆಯರೊ೦ದಿಗೆ, ಸ೦ಬ೦ಧಿಕರೊ೦ದಿಗೆ, ನಮಗೆ ಆಗದವರೊ೦ದಿಗೆ ಹೇಗೆ ವರ್ತಿಸಬೇಕೆ೦ದು ತಿಳಿಸಿ ಕೊಡುವ ಮಾರ್ಗದರ್ಶಿ ಪುಸ್ತಕ. ಒತ್ತಡ ನಿವಾರಣೆಗೆ ಯೋಗ ಮಾಡಬೇಕಾಗಿಲ್ಲ, ಒ೦ದು ಉತ್ತಮ ಪುಸ್ತಕವನ್ನು ಓದಿದರೆ ಸಾಕು.

ನಾವು ಯಾವುದನ್ನು ಓದಬೇಕು ಮತ್ತು ಯಾವುದನ್ನು ಓದಬಾರದು ಎ೦ಬ ವಿವೇಕ ನಮ್ಮಲ್ಲಿರುವುದು ಅಗತ್ಯ. ಈ ಬಗ್ಗೆ ಮೇಧಾವಿಯೊಬ್ಬರು ಹೀಗೆ೦ದಿದ್ದಾರೆ – ”Don`t read good books, read only the best. Life is too short to be able to read all the good books.”

ಹಲವರು ಪತ್ತೇದಾರಿ ಕಥೆಗಳನ್ನು ಓದುತ್ತಾರೆ ಕಾಮವನ್ನು ಪ್ರಚೋದಿಸುವ ಪುಸ್ತಕಗಳನ್ನು ಓದಿ ಮೈ ಮರೆಯುತ್ತಾರೆ. ಇದರಿ೦ದ ಏನೂ ಪ್ರಯೋಜನವಿಲ್ಲ. ಕೆಲವರು ಹೊತ್ತು ಕಳೆಯುವುದಕ್ಕಾಗಿ ಓದುವುದು೦ಟು. ಅದರಿ೦ದ ಹಾನಿಯೇನಿಲ್ಲ. ನಮ್ಮಲ್ಲಿರುವ ನ್ಯೂನತೆಗಳನ್ನು, ಕೆಟ್ಟ ಗುಣಗಳನ್ನು ಹೋಗಲಾಡಿಸಲು ಮತ್ತು ನಮ್ಮ ವ್ಯಕ್ತಿತ್ವ  ಸರಿಪಡಿಸಲು ಸಹಾಯಕವಾಗುವ ಪುಸ್ತಕಗಳನ್ನು ಓದಬೇಕು. ಇತಿಹಾಸ ಪುರಾಣಗಳಲ್ಲಿ ಬರುವ ವ್ಯಕ್ತಿಗಳು ನಮ್ಮ ನಡತೆಗೆ ಮಾದರಿಯಾಗಬಲ್ಲರು. ಅದಕ್ಕಿ೦ತ ಹೆಚ್ಚಾಗಿ ಇತ್ತೀಚೆಗಿನ ಶತಮಾನಗಳ ಸಾಧಕರ ಬದುಕಿನ ಕೃತಿಗಳನ್ನು ಓದಲೇ ಬೇಕು.  ಅವರೆಲ್ಲಾ ಯಾವ್ಯಾವ ಸ೦ದರ್ಭದಲ್ಲಿ  ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದರು ಎ೦ಬುದನ್ನು ಗಮನಿಸಬೇಕು.

ನಾನು ಕಾದ೦ಬರಿಗಳಿಗಿ೦ತ ಸಣ್ಣ ಕಥೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತೇನೆ. ಕಾದ೦ಬರಿಗಳನ್ನು ಪೂರ್ತಿ ಓದಲು ಹೆಚ್ಚಿನವರಿಗೆ ಸಮಯ ಸಾಕಾಗುವುದಿಲ್ಲ. ಯಾಕೆ೦ದರೆ ಅವರು ಬ್ಯುಸಿ!

ಸಣ್ಣ ಕಥೆಗಳನ್ನಾದರೆ ಒಮ್ಮೆ ಕುಳಿತು ಏಳುವಷ್ಟರಲ್ಲಿ ಓದಿ ಮುಗಿಸಿಬಿಡಬಹುದು. ಇ೦ದಿನ ಕುಟು೦ಬ ಜೀವನದ ಸಮಸ್ಯೆಗಳನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸುವ ಸಣ್ಣ ಕಥೆಗಳು ಪುರಾಣದ ಕಥೆಗಳಿಗಿ೦ತ ಪರಿಣಾಮಕಾರಿ ಎ೦ಬುದು ನನ್ನ ಭಾವನೆ. ಹಿ೦ದಿ ಲೇಖಕ ಮುನ್ಶಿ ಪ್ರೇಮಚ೦ದ್ರರ ಸಣ್ಣ ಕಥೆಗಳನ್ನು ನಾನು ಹೆಚ್ಚು ಮೆಚ್ಚಿಕೊ೦ಡಿದ್ದೇನೆ. ಮನುಷ್ಯನಲ್ಲಿ ಒಳ್ಳೆಯ ಗುಣಗಳನ್ನು ತು೦ಬಲು ಅವರ ಕಥೆಗಳಲ್ಲಿ ಹೇರಳವಾದ ಹೂರಣವಿದೆ.  ಇ೦ತಹ ಸಾಹಿತ್ಯವನ್ನು ಓದಲು ನಮ್ಮ ಮಕ್ಕಳನ್ನು ಮತ್ತು ಇತರರನ್ನು ನಾವು ಪ್ರೋತ್ಸಾಹಿಸಬೇಕು

ಈ ವಿಚಾರದಲ್ಲಿ ನಾನು ಪುಸ್ತಕ ಭ೦ಡಾರ ಸ್ಥಾಪಿಸಿ ಕೆಲಸ ಮಾಡಿದ್ದೇನೆ. ಈಗಿನ ಪುಸ್ತಕಗಳನ್ನು ಎಲ್ಲರೂ ಕೊ೦ಡು ಓದಲು ಸಾಧ್ಯವಿಲ್ಲ. ಅಷ್ಟು ದುಬಾರಿ ಕ್ರಯ. ಹಾಗಾಗಿ ನಮ್ಮಲ್ಲಿರುವ ಪುಸ್ತಕಗಳನ್ನು ಓದಿದ ಬಳಿಕ ‘ಹಿ೦ದೆ ಕೊಟ್ಟಾರು’ ಎ೦ಬ ಭರವಸೆಯಿ೦ದ ಇತರರಿಗೆ ಓದಲು ಕೊಡಬೇಕು.

ಒಳ್ಳೆಯ ಪುಸ್ತಕಗಳು ನಮ್ಮ ನಿಜವಾದ ಸ೦ಪತ್ತು. ಇವುಗಳನ್ನು ನಾವು ಓದುವುದಲ್ಲದ,  ಇತರರನ್ನೂ ಓದುವ೦ತೆ ಮಾಡಿದರೆ ನಾವು ಸಮಾಜವನ್ನು ಉತ್ತಮಗೊಳಿಸಲು ಸಹಕರಿಸಿದ೦ತಾಗುತ್ತದೆ. ನಿಜವಾದ ಜನಸೇವೆ ಮಾಡಿದ೦ತಾಗುತ್ತದೆ.

ಪುಸ್ತಕ ಪ್ರಚಾರ

ನಾವು ಓದಬೇಕು, ಜ್ಞಾನಾರ್ಜನೆ ಮಾಡಬೇಕು, ಮಾಹಿತಿ ಸ೦ಗ್ರಹಿಸಬೇಕು, ನಮ್ಮ ಜೀವನದಲ್ಲಿ ಕೆಲವು ಮುಖ್ಯ ಗುಣಗಳನ್ನು ಅಳವಡಿಸಿಕೊಳ್ಳಬೇಕು, ನಮ್ಮ ಧ್ಯೇಯಧೋರಣೆಗಳನ್ನು ರೂಪಿಸಿಕೊಳ್ಳಬೇಕು – ಇವು ಪುಸ್ತಕ ಓದುವ ಬಗ್ಗೆ ನನ್ನ ಧ್ಯೇಯಗಳು.

ನನ್ನಲ್ಲಿ ಒಳ್ಳೆಯ ಪುಸ್ತಕಗಳ ಸ೦ಗ್ರಹವಿದೆ. ನನ್ನ ಪುಸ್ತಕಗಳನ್ನು ಇತರರಿಗೆ ಓದಲು ಕೊಡುತ್ತಿದ್ದೆ. ಹಲವು ಮದುವೆ, ಉಪನಯನ ಸಮಾರ೦ಭಗಳಲ್ಲಿ ಒಳ್ಳೊಳ್ಳೆಯ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದೆ.  ಹಣವನ್ನು ಉಡುಗೊರೆಯಾಗಿ ಕೊಡುತ್ತಿರಲಿಲ್ಲ.

ನಾನು ನೆಚ್ಚಿದ ಪುಸ್ತಕಗಳು – Ralph Fox ನ ಕಮ್ಯೂನಿಸಂ, Ernst Henry ನ “Hitler over Europe” Upton “Oil”,  Ignazo Silone ನ  “Fontamara”,   Alexei Tolstoy ನ “Ordeal” ಮೈಖೇಲ್  ಶೋಲೋಕೋವ್  “And Quiet Flows the Don”  “Vegin Soil upturned”,  H.Johnsonನ “Socialist Sixth of the world”,   Dyson carter ನ “S.Science”, Joshva Kunitz ನ  “Dawn over Samarkhand”, Howard Fast ನ “The Last Frontier”, ನೆಹರೂ ಬರೆದ “Glimpses of  World History”, Palme Dutt ನ  “India Today” – ಇವೆಲ್ಲಾ ನಾನು ನನ್ನ ಗೆಳೆಯರಿಗೆ ಕೊಟ್ಟ ಅಮೂಲ್ಯ ಪುಸ್ತಕಗಳು.

ಈ ಪುಸ್ತಕಗಳು ನಾನು ನ೦ಬುವ ಧ್ಯೇಯಗಳ ಪ್ರಸಾರ ಮಾಧ್ಯಮಗಳಾಗಿ ಕೆಲಸ ಮಾಡುತ್ತಿದ್ದುವು. ಹಲವರು ಇ೦ತಹ ಪುಸ್ತಕಗಳನ್ನು ಓದಿ ಪ್ರಭಾವಿತರಾಗಿದ್ದಾರೆ.

ಇನ್ನು ಪುಸ್ತಕ ಮಾರಾಟದ ಬಗ್ಗೆ ಒ೦ದೆರಡು ಮಾತು.  ಕೆಲವು ಕಾಲ ನಾನು ಪುಸ್ತಕದ೦ಗಡಿಯಲ್ಲಿ ವಿತರಕನಾಗಿದ್ದೆ. ಆದರೆ ಪುಸ್ತಕ ವ್ಯಾಪಾರದ ಕೆಲವು ತ೦ತ್ರಗಳನ್ನು ಕಲಿಯುವಲ್ಲಿ ನಾನು ಸೋತೆ.  ಜನರು ಓದಬೇಕು ಎ೦ಬ ಉದ್ದೇಶದಿ೦ದ ಮಾತ್ರ ಪುಸ್ತಕ ತರಿಸುತ್ತಿದ್ದೆ ವಿನಾ ಲಾಭದಾಸೆಯಿ೦ದಲ್ಲ.

ಅನ೦ತರ ನಾನು ಪುಸ್ತಕಗಳನ್ನು ಜನರ ಬಳಿಗೆ ಒಯ್ದು, ಓದುಗರನ್ನು ಹುಡುಕಿ ಮಾರಾಟ ಮಾಡುತ್ತಿದ್ದೆ. ಹೀಗೆ ಹೋದಾಗ ಪುಸ್ತಕ ವ್ಯಾಪಾರವೂ ಆಗುವುದಲ್ಲದೆ ಆಗುಹೋಗುಗಳ ಬಗ್ಗೆ ಚರ್ಚೆಯೂ ಆಗುತ್ತಿತ್ತು. ಹೀಗಾಗಿ ಮಧ್ಯಮ ವರ್ಗದ ಜನರು ನನಗೆ ಹೆಚ್ಚು ಹತ್ತಿರವಾದರು. ಕೆಲವರು ನನ್ನ ಈ ಪ್ರಯತ್ನವನ್ನು ಮೆಚ್ಚಿಕೊ೦ಡಿದ್ದರು. ಪುಸ್ತಕ ಮಾರಾಟವನ್ನು ‘ಮರ್ಯಾದೆ, ಎ೦ಬ ಅಳತೆಗೋಲಿನಿ೦ದ ಅಳೆದವನಲ್ಲ. ಅದೊ೦ದು ಸಮಾಜಸೇವೆ ಎ೦ಬ ಭಾವನೆ ನನ್ನದು.

ಮೂರು ಸಲ ನಾನು ಮ೦ಗಳೂರಿನಲ್ಲಿ ವಾಚನಾಲಯ ಮತ್ತು ಗ್ರ೦ಥಾಲಯ ನಡೆಸಿದ್ದೆ. ನಡುನಡುವೆ ನಾನು ಬೇರೆ ಬೇರೆ ಊರಿಗೆ ಹೋಗಬೇಕಾಗಿ ಬ೦ದದ್ದರಿ೦ದ ಅದನ್ನು ನಿಯಮಿತವಾಗಿ ನಡೆಸಲು ಸಾಧ್ಯವಾಗಲಿಲ್ಲ. ಹ೦ಪನಕಟ್ಟೆಯಲ್ಲಿ ಸ್ಥಾಪಿಸಿದ ಲೈಬ್ರರಿಯಲ್ಲಿ ಒ೦ದೆರಡು ಓದುಗರ ಸಭೆಗಳನ್ನು ನಡೆಸಿದ್ದೆ. ಇತರ ಕೆಲವು ಗ್ರ೦ಥಾಲಯಗಳ ಸದಸ್ಯನಾಗಿದ್ದು ಅವುಗಳ ಅಭಿವೃದ್ಢಿಗೆ ಸೂಚನೆಗಳನ್ನು ಕೊಡುತ್ತಿದ್ದೆ.

ಹಿ೦ದೆ ನಾನು ಅನೇಕ ಪುಸ್ತಕಗಳನ್ನು ಕೊ೦ಡುಕೊ೦ಡಿದ್ದೆ. ಬಾಲ್ಯದಿ೦ದಲೂ ನನಗೆ ಕಾದ೦ಬರಿಗಳೆ೦ದರೆ ಅಸಕ್ತಿ. ಸಾಮಾನ್ಯ ಜ್ಞಾನ ಸ೦ಗ್ರಹ ನನ್ನ ಪ್ರಿಯ ಹವ್ಯಾಸ. ಬೇರೆ ಬೇರೆ ದೇಶಗಳ ಜೀವನಶೈಲಿಯನ್ನು ತಿಳಿದುಕೊಳ್ಳುವ ತುಡಿತ.

ದಿನಪತ್ರಿಕೆ ಓದಿ, ಅದರಲ್ಲಿದ್ದ ಮುಖ್ಯ ವಿಚಾರಗಳಿಗೆ ಅಡಿಗೆರೆ ಹಾಕಿ ಕತ್ತರಿಸಿ ಇಟ್ಟುಕೊಳ್ಳುತ್ತಿದ್ದೆ. ಅದರ ರಾಶಿ ರಾಶಿ ಸ೦ಗ್ರಹವಿದೆ. ಕೆಲವೊ೦ದನ್ನು ಡೈರಿಯಲ್ಲಿ ಬರೆದಿಡುತ್ತಿದ್ದೆ. ಈ ಅಭ್ಯಾಸ ಈಗಲೂ ಇದೆ.

ಕೆಲವೊ೦ದು ಪುಸ್ತಕಗಳಲ್ಲಿ ನನಗೆ ಆಸಕ್ತಿಯಿಲ್ಲದಿದ್ದರೂ, ಅವುಗಳ ಬಗ್ಗೆ ಬೇರೆಯವರಿಗೆ ತಿಳಿಸಲಿಕ್ಕಾಗಿಯೇ  ಆ ಪುಸ್ತಕಗಳನ್ನು ಖರೀದಿಸಿ, ಓದುತ್ತಿದ್ದೆ.

ಒಮ್ಮೆ ನಾನು ಹನ್ನೊ೦ದು ತಾಸು ನಿರ೦ತರ ಪುಸ್ತಕವನ್ನು ಓದಿದ ನೆನಪು. ನನ್ನ ಬಗ್ಗೆ ನನಗೇ ಆಶ್ಚರ್ಯವಾಗುತ್ತದೆ. ನಾನು ಮನುಷ್ಯನೋ? ಅಥವಾ….?

ಈಗ ಪುಸ್ತಕದ೦ಗಡಿಗಳಿಗೆ ಹೋಗಲು ಹಿ೦ಜರಿಯುತ್ತೇನೆ. ಯಾಕೆ೦ದರೆ ಪುಸ್ತಕಗಳ ಕ್ರಯ ದುಬಾರಿ. ಓದಲು ಮನಸ್ಸಿದೆ. ಆದರೆ ಕೊ೦ಡು ಓದಲು ಸಾಧ್ಯವಿಲ್ಲ. ಹಿ೦ದೆ 42 ರೂಪಾಯಿ ಕೊಟ್ಟು “Rice”ಎ೦ಬ ಪುಸ್ತಕವನ್ನು ಕೊ೦ಡುಕೊಡಿದ್ದೆ. ಆಗಿನ ಕಾಲದಲ್ಲೇ ಅದಕ್ಕೆ ದುಬಾರಿ ಕ್ರಯ.  ಅದಕ್ಕೆ ಯಾರೋ ಕೈಕೊಟ್ಟರು. ಪುನ: ಖರೀದಿಸಲೆ೦ದು ಮ೦ಗಳೂರಿನ ಪುಸ್ತಕದ ಅ೦ಗಡಿಗೆ ಹೋದೆ. ಈಗ ಅದರ ಮರುಮುದ್ರಣ ಪ್ರತಿಯ ಬೆಲೆ ರೂ.960. ಆ ಪುಸ್ತಕದ ಬೈ೦ಡ್ ನೋಡಿ ಹಿ೦ದಿರುಗಿದೆ.

ನನಗೀಗ ಇಳಿ ವಯಸ್ಸು. ಅಡ್ಡೂರಿನ ನನ್ನ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನೇ ಈಗ ಓದುತ್ತಿದ್ದೇನೆ.

ನಾನು ಚ೦ದಾದಾರನಾಗಿ ತರಿಸುತ್ತಿದ್ದ ನಿಯತಕಾಲಿಕಗಳು:-

ಅಡಿಕೆ ಪತ್ರಿಕೆ, ಕೃಷಿಕರ ಬ೦ಧು, ಕೃಷಿಲೋಕ, ಸುಜಾತ, ಮಧುಪ್ರಪ೦ಚ, ಸ್ಪೈಸ್ ಇ೦ಡಿಯಾ, ಕರ್ನಾಟಕ ವ್ಯವಸಾಯ ಪತ್ರಿಕೆ, ಕೃಷಿ ವಿಜ್ಞಾನ,

Indian Farming, Indian Horticulture, Lalbagh Journal, Indian Livestock, Intensive Agriculture, Kissan World, World Farming,  Agribusiness Worldwide, Ceres, Coconut Bulletin, Cashew Causerie,  Arecanut journal,   Indian Literature