ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯರು ೧೯೦೫ ರಂದು ಮೇಲುಕೋಟೆಯಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಚೀಫ್ ಕಮಾಂಡೆಂಟ್ ರ ಕಛೇರಿಯಲ್ಲಿ ವೃತ್ತಿ ಜೀವನ ಆರಂಬಿಸಿದರು. ಪು.ತಿ.ನ ಎಂಬುದು ಅವರ ಕಾವ್ಯ ನಾಮ. ಪು.ತಿ.ನ. ರವರು ಭಾವಗೀತೆ, ಗೀತನಾಟಕ, ಭಾವನಾಚಿತ್ರ, ರಸಚಿತ್ರ, ಸಂಗೀತರೂಪಕ, ಪ್ರಬಂಧ, ವಿಚಾರಸಾಹಿತ್ಯ, ಸಣ್ಣಕಥೆ, ಗದ್ಯನಾಟಕ, ಮಹಾಕಾವ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಗೀತನಾಟಕಗಳು ಇವರ ಪ್ರಾತಿನಿದಿಕ ಪ್ರಕಾರ. ಇವರ ಗೀತನಾಟಕಗಳನ್ನು ಸ್ಥೂಲವಾಗಿ, ಸಾಹಿತ್ಯಪ್ರಮುಖವಾದವು. ಮತ್ತು ಸಂಗೀತ ಪ್ರಮುಖವಾದವು ಎಂದು ವಿಂಗಡಿಸಬಹುದು. ಅಹಲ್ಯೆ, ಶಬರಿ ಮತ್ತು ಸತ್ಯಾಯನ ಹರಿಶ್ಚಂದ್ರ ಈ ನಾಟಕಗಳು ವಸ್ತುವಿನ ದೃಷ್ಟಿಯಿಂದ ಪುರಾಣ ವ್ಯಕ್ತಿಗಳನ್ನು ಕುರಿತ ಬಹುಶಃ ಅವರು ತಮ್ಮ ಜೀವನದಲ್ಲಿ ಕಂಡುಕೊಂಡ ತತ್ವದ ಅಬಿವ್ಯಕ್ತಿ, ಬಾಳಿನ ಹಂಬಲ ಕಂಡ ಕೂಡಲೆ ಬಾಳು ಅರ್ಥಹೀನವಾಗುತ್ತದೆ. ಕೃತಕೃತ್ಯ ಚೇತನ ಮುಕ್ತಿಗೆ ಪ್ರಯತ್ನಿಸುತ್ತದೆ ಎಂಬುದು ‘ಶಬರಿ ನಾಟಕದ ಸಂದೇಶ, ಅಹಲ್ಯೆ ಕನ್ನಡ ಗೀತನಾಟಕ ಪ್ರಪಂಚದಲ್ಲೇ ಅನುಪಮವಾದದ್ದು.

ದ್ರೋಹಿಯ ಬಿನದ, ಮತ್ತು ಕವಿ ಕನ್ನಡಕ್ಕೆ ಹೊಸಬಗೆಯ ಕೊಡುಗೆಗಳು ಪ್ರಕೃತಿವಸ್ತುಗಳಿಗೆ ವ್ಯಕ್ತಿರೂಪ ನೀಡಿರುವುದು ಈ ಎರಡು ನಾಟಕಗಳಲ್ಲಿನ ವಿಶೇಷ. ವಸ್ತುವಿನ ದೃಷ್ಟಿಯಿಂದ ‘ವಿಕಟಕವಿ ವಿಜಯ, ಮಹತ್ವ ಪೂರ್ಣವಾದ ಕೃತಿ.

ಹಣತೆ, ಮಾಂದಳಿರು, ಶಾರದಾಯಾಮಿನಿ, ಗಣೇಶ ದರ್ಶನ, ರಸಸರಸ್ವತಿ, ಮಲೆ ದೇಗುಲ, ಈ ಭಾವಗೀತೆಗಳಲ್ಲಿ ನವೋದಯದ ಸೊಗಸಾದ ಪ್ರಕೃತಿ, ಪ್ರೇಮ, ಭಕ್ತಿ, ಮತ್ತು ಆಧ್ಯಾತ್ಮಗಳು ಕವನಗಳ ವಸ್ತುಗಳಾಗಿವೆ. ಇದರ ಜೊತೆಗೆ ಅಂದಿನ ರಾಷ್ಟ್ರೀಯ ಎಚ್ಚರದ ಧನಿಯೂ ಸಹ ಸ್ಥಾನ ಪಡೆದಿದೆ. ಇವರ ಎರಡು ಪ್ರಭಂದ ಸಂಕಲನಗಳಾದ ‘ಈಚಲುಮರದ ಕೆಳಗೆ, ಹಾಗೂ ಧೇನುಕ ಪುರಾಣಗಳಲ್ಲಿ ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರಗಳ ಸಂಸ್ಕಾರದಿಂದ ಬಂದಿರುವ ತಾರ್ಕಿಕ ಶಕ್ತಿ, ತಿಳಿ ಹಾಸ್ಯ, ಲಘು ವಿಡಂಬನೆ, ಎಲ್ಲವೂ ಕಾಣುತ್ತದೆ.

ಇವರ ಹಂಸ ದಮಯಂತಿ ಮತ್ತು ಇತರ ರೂಪಕಗಳು ಗ್ರಂಥಕ್ಕೆ ೧೯೬೫ ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೬೬ ರ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾಲಯ ಗೌರವ ಡಿ.ಲಿಟ್ ಪ್ರಶಸ್ತಿಯನ್ನು ನೀಡಿದೆ. ಇವರ ಮಹಾಕಾವ್ಯ ‘ಶ್ರೀಹರಿಚರಿತೆ,ಗೆ ಪಂಪ ಪ್ರಶಸ್ತಿ ದೊರೆತಿದೆ.

ಪು.ತಿ.ನ. ಅವರ ಧ್ವಜರಕ್ಷಣೆ, ಯಲ್ಲಿಯ ಕೆಲವು ಕಥೆಗಳು ಸತ್ವಪೂರ್ಣವಾಗಿವೆ. ಈ ಕಥೆಯ ವಸ್ತು ರಾಜಕೀಯದ ಹೋರಾಟವನ್ನು ಬಣ್ಣಿಸುತ್ತದೆಯಾದರೂ, ಒಬ್ಬ ಆದರ್ಶಪ್ರಿಯ ಯುವಕನ ಅಂತರಂಗದ ತುಮುಲವನ್ನು ಅದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಹೀಗೆ ಹೋರಾಟ ಇಮ್ಮುಖವಾಗಿ ಕತೆಯ ಪರಿಣಾಮವನ್ನು ಸಬಲವಾಗಿಸಿದೆ. ಆದರೆ ಇವರ ಎಲ್ಲ ಕತೆಗಳ ಸಂವಿಧಾನವೂ ಕೃತ್ರಿಮವಾಗಿ ಕಾಣುತ್ತದೆ.