ಕರ್ನಾಟಕದಲ್ಲಿ ಹುಟ್ಟಿ ಹೊರನಾಡುಗಳನ್ನೂ ವ್ಯಾಪಿಸಿರುವ ಐತಿಹ್ಯ, ಪುರಾಣ ಹಾಗೂ ಚರಿತ್ರೆಯ ಮಜಲುಗಳಲ್ಲಿ ಹರಡಿರುವ ಎಲ್ಲ ವರ್ಗ, ವರ್ಣಗಳ ಜನಸಮೂಹದಲ್ಲಿ ಸೇರಿಕೊಂಡಿರುವ ತುಂಬಾ ಸಂಕೀರ್ಣ ಪುರುಷದೇವತೆ ಮೈಲಾರಲಿಂಗ. ಒಂದು ಅಂದಾಜಿನ ಪ್ರಕಾರ ಪ್ರಮುಖ – ಅಪ್ರಮುಖ ಸೇರಿ ಈತನ ಐದುನೂರು ದೇವಾಲಯಗಳು ಕಂಡು ಬರುತ್ತವೆ. ಶೈವ, ವೈಷ್ಣವ ಸಂಪ್ರದಾಯಗಳನ್ನು ತನ್ನಲ್ಲಿ ಸಂಗಮಿಸಿಕೊಂಡು, ಜೈನ ಕಾವ್ಯಗಳಲ್ಲಿಯೂ ಉಲ್ಲೇಖಿತನಾದ ಈತನು ವಿವಿಧ ಬುಡಕಟ್ಟು, ಮತ, ಪಂಥಗಳಿಗೆ ಸೇರಿದ ಜನರಿಂದ ಪೂಜಿಸಿಕೊಳ್ಳುತ್ತಾನೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲೂ ಈತನ ಕ್ಷೇತ್ರ ಹಾಗೂ ಭಕ್ತವರ್ಗಗಳಿವೆ.

ಪ್ರಸ್ತುತ ಪ್ರಬಂಧದಲ್ಲಿ ಮೈಲಾರಲಿಂಗನ ಪೂಜಾರಿ ಮತ್ತು ಭಕ್ತರಿಗೆ ಸಂಬಂಧಪಟ್ಟ ಜಾತಿ, ವರ್ಗ, ಆಚರಣೆ ಮತ್ತು ಪ್ರಾದೇಶಿಕ ಭಿನ್ನತೆಗಳನ್ನು ಕುರಿತು ವಿವೇಚಿಸಲಾಗಿದೆ. ಈ ಪ್ರಬಂಧ ಸಿದ್ದಪಡಿಸಿಕೊಳ್ಳುವಲ್ಲಿ ನಾನು ಕಲಬುರ್ಗಿ ಜಿಲ್ಲೆಯ ಯಾದಗಿರಿ ತಾಲೂಕಿನ ಮೈಲಾಪೂರ ಹಾಗೂ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಕ್ಷೇತ್ರಕಾರ್ಯ ನಡೆಸಿದ್ದೇನೆ. ಮೈಲಾರಲಿಂಗನ ಭಕ್ತರು ಹಲವು ವಿಧ. ಅವರ ಭಕ್ತಿಯ ಬಗೆ ಸೇವೆ ಸಲ್ಲಿಸುವ ರೀತಿಗಳನ್ನು ಗಮನಿಸಿ ಮುಖ್ಯವಾಗಿ ಐದು ಭಕ್ತವರ್ಗಗಳನ್ನು ರೂಪಿಸಬಹುದು.

೧. ಆಡಳಿತ ವರ್ಗ

೨. ಅರ್ಚಕ ವರ್ಗ

೩. ಸೇವಕ ವರ್ಗ

೪. ಪ್ರಮುಖ ಭಕ್ತವರ್ಗ ಹಾಗೂ

೫. ಇತರ ಭಕ್ತ ವರ್ಗ

. ಆಡಳಿತವರ್ಗ : ಈ ವರ್ಗ ಕೇವಲ ಪ್ರಸಿದ್ದ ಕ್ಷೇತ್ರಗಳಲ್ಲಿ ಮಾತ್ರ ಇರುತ್ತದೆ. ಇವರನ್ನು ಧರ್ಮದರ್ಶಿಗಳೆಂದೂ, ಧರ್ಮಾಧಿಕಾರಿಗಳೆಂದೂ ಕರೆಯುತ್ತಾರೆ. ವಿಶೇಷವಾಗಿ ಸಮಾಜದ ಪ್ರತಿಷ್ಠಿತರಾದ ಗೌಡ, ಪೋಲಿಸಗೌಡ, ನಾಡಗೌಡ, ದೀಕ್ಷೀತ, ಕುಲಕರ್ಣಿ ಮುಂತಾದವರು ಈ ಅಧಿಕಾರ ಹಿಡಿದಿರುತ್ತಾರೆ. ಇವರು ಇಡೀ ಕ್ಷೇತ್ರದ ಮೇಲ್ವಿಚಾರಕರು. ಗುಡಿಯ ಜೀರ್ಣೋದ್ದಾರ, ಅರ್ಚನೆಯ ವ್ಯವಸ್ಥೆ, ಬಂದ ಭಕ್ತರಿಗೆ ಅನುಕೂಲತೆಗಳನ್ನು ಒದಗಿಸುವುದು ಇತ್ಯಾದಿ ಕೆಲಸಗಳನ್ನು ಮಾಡುವ ಇವರು ಭಕ್ತರಿಂದ ಬಂದ ನಿಧಿಯಲ್ಲಿಯೇ ಆಯ ವ್ಯಯವನ್ನು ತೂಗಿಸಿಕೊಂಡು ಹೋಗುತ್ತಾರೆ.

. ಅರ್ಚಕವರ್ಗ : ಪ್ರತಿನಿತ್ಯ ಮೈಲಾರಲಿಂಗನ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದಲ್ಲಿ ನೆರವೇರಿಸುವ ಇವರು ಪೂಜಾರಿಗಳೆಂದೇ ಕರೆಯಿಸಿಕೊಳ್ಳುತ್ತಾರೆ. ಇವರಿಗೆ ಏಳುಕೋಟಿಗಳೆಂದೂ ಕರೆಯುತ್ತಾರೆ. ಕೆಲವೊಂದು ದೇವಸ್ಥಾನದ ಪೂಜಾರಿಗಳು ಮೂಲದಲ್ಲಿ ಒಂದೇ ಕುಟುಂಬದವರಿದ್ದು ಕಾಲಾನುಕ್ರಮದಲ್ಲಿ ಅನೇಕ ಮನೆಗಳಾಗಿ ಬೆಳೆದು ಸರದಿಯ ಪ್ರಕಾರ ಪೂಜೆಯನ್ನು ಮಾಡುತ್ತಾರೆ. ವಾರಕ್ಕೊಮ್ಮೆ ಇಲ್ಲವೆ ಹುಣ್ಣಿಮೆ ಅಮವಾಸ್ಯೆಗೊಮ್ಮೆ ಇವರ ಪೂಜೆಯ ಸರದಿ ಬರುತ್ತದೆ. ಇವರಲ್ಲಿ ಒಬ್ಬನು ಪಟ್ಟದ ಪೂಜಾರಿ ಇರುತ್ತಾನೆ. ದೇವರ ಉತ್ಸವದಲ್ಲಿ ಹಾಗೂ ಭಕ್ತರ ಮನೆಗಳಲ್ಲಿ ಜರುಗುವ ಮಂಗಲಕಾರ್ಯಗಳಲ್ಲಿ ಈತನದೇ ಪ್ರಧಾನ ಪಾತ್ರ. ಉತ್ಸವ ಮೂರ್ತಿಯನ್ನು ಹೊರುವ ಕಾರ್ಯವೂ ಈತನದೇ. ಜಾತ್ರೆಯ ಸಮಯದಲ್ಲಿ ಈತನಿಂದ ಕಾರಣಿಕ (ಹೇಳಿಕೆ) ನಡೆಯುತ್ತದೆ. ಕಾರಣಿಕವೆಂದರೆ ಭವಿಷ್ಯ ನುಡಿಯುವುದು. ಹೇಳಿಕೆ ಕಟ್ಟೆಗೆ ಉತ್ಸವದ ದೇವರು ಬಂದಾಗ ಈತ ಆ ಕಟ್ಟೆಯನ್ನೇರಿ, ಕೆಲವು ಊರುಗಳಲ್ಲಿ ಕೋಲನ್ನು ಏರಿ ಮುಂಬರುವ ದಿನಮಾನಗಳಲ್ಲಿಯ ಮಳೆ, ಬೆಳೆ, ರೋಗ-ರುಜಿನ, ದೇಶದ ರಾಜಕೀಯ ಕುರಿತು ಭವಿಷ್ಯ ನುಡಿಯುತ್ತಾನೆ. ಮಣ್ಣ ಮೈಲಾರದಲ್ಲಿ ಹೇಳುತ್ತಲಿದ್ದ ಕಾರಣಿಕವನ್ನು ಪ್ರತಿವರ್ಷ ಮದ್ರಾಸ ಸರಕಾರ ಅಧಿಕೃತವಾಗಿ ದಾಖಲು ಮಾಡುತ್ತಿದ್ದಿತೆಂದು ತಿಳಿದು ಬರುತ್ತದೆ. ಇದರಿಂದ ಈ ಕಾರಣಿಕದ ಮಹತ್ವ ತಿಳಿದು ಬರುತ್ತದೆ. ಪೂಜಾರಿಯು ಸಂಸಾರಿಯಾಗಿದ್ದು ಉಪವಾಸ ಮೊದಲಾದ ಅತ್ಯಂತ ಕಠಿಣ ವೃತ ನಿಯಮಗಳನ್ನು ಪಾಲಿಸುತ್ತಾನೆ.

ಮೈಲಾರಲಿಂಗನ ವಾರ ರವಿವಾರ. ಈ ದಿನ ಪೂಜಾರಿಯಿಂದ ವಿಶೇಷ ಪೂಜೆ ಸಲ್ಲಬೇಕು. ಪೂಜೆಯ ಕಾಲದಲ್ಲಿ ದೇವರಿಗೆ ಗಂಧ, ಭಂಡಾರ ಮತ್ತು ಕುಂಕುಮಗಳ ಲೇಪನ ಮಾಡುತ್ತಾರೆ. ಅಂದು ಭಕ್ತರ ಹರಕೆಗಳಿಗನುಗುಣವಾಗಿ ಪೂಜೆಯಲ್ಲಿ ವೈವಿಧ್ಯತೆಯೂ ಇರುತ್ತದೆ. ಕೆಲವು ಕ್ಷೇತ್ರಗಳಲ್ಲಿ ದಿನಕ್ಕೆ ಎರಡು ಹೊತ್ತು ಇಲ್ಲವೆ ಮೂರು ಹೊತ್ತು ಪೂಜೆ ನಡೆಯುತ್ತದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಜಾತಿಯ ಪೂಜಾರಿಗಳಿದ್ದಾರೆ. ವೀರಶೈವ, ಪಂಚಮಸಾಲಿಗಳು, ಹೂಗಾರರು, ಒಡೆಯರು, ಹಂಡೇಗುರುಬಿದ್ರು ಕುರುಬರು ಈ ದೇವತೆಯ ಪೂಜಾರಿಗಳಾಗಿರುವ ವಿಷಯ ತಿಳಿದು ಬರುತ್ತದೆ. ಆದರೆ ಒಂದೇ ಕ್ಷೇತ್ರದಲ್ಲಿ ಮಿಶ್ರ ಜಾತಿಯ ಪೂಜಾರಿಗಳಿದ್ದುದು ನಮ್ಮ ಗಮನಕ್ಕೆ ಬಂದಿಲ್ಲ. ಇವರು ಪೂಜಾ ಕಾಯಕದ ಜೊತೆಗೆ ಉಪಜೀವನಕ್ಕೆ ಕೃಷಿಯನ್ನು ಅವಲಂಭಿಸಿರುತ್ತಾರೆ. ಕೆಲವು ಕ್ಷೇತ್ರಗಳಿಗೆ ಭೂಮಿಗಳನ್ನು ಉಂಬಳಿ ಹಾಕಿ ಕೊಟ್ಟಿದ್ದುಂಟು. ಪೂಜಾರಿಗಳು ತಮ್ಮ ಸರದಿಯ ಪ್ರಕಾರ ಈ ಭೂಮಿಯನ್ನು ಉಪಭೋಗಿಸುತ್ತಾರೆ. ಅವು ಮಾನೇದೊಡ್ಡಿ, ಎಣ್ಣೆಹೊಲ, ಹೂವಿನ ತೊಟ ಮುಂತಾದ ಹೆಸರುಗಳಿಂದ ಗುರುತಿಸಿಕೊಳ್ಳುತ್ತವೆ. ಕೆಲವು ಕ್ಷೇತ್ರಗಳಲ್ಲಿ ಭಕ್ತರ ಹರಕೆಯ ಕಾಣಿಕೆಗಳಿಂದ ಮಾತ್ರ ಪೂಜಾರಿಗಳು ಉಪಜೀವನ ಸಾಗಿಸಬೇಕು. ಪೂಜಾರಿಗಳಿಗೆ ನಿರ್ದಿಷ್ಟವಾದ ವೇಷ ಭೂಷಣಗಳಿರುವದಿಲ್ಲ ಭಂಡಾರ ಧರಿಸುವುದು ಮಾತ್ರ ಇವರಿಗೆ ಕಡ್ಡಾಯ. ಬ್ರಾಹ್ಮಣ ಭಕ್ತರು ಪೂಜೆ ಸಲ್ಲಿಸಬೇಕಾದ ಸಂದರ್ಭದಲ್ಲಿ ಬ್ರಾಹ್ಮಣ ಪುರೋಹಿತರಿಂದ ಅಭಿಷೇಕ ಮುಂತಾದ ಪೂಜಾ ವಿಧಿಗಳನ್ನು ಮಾಡಿಸುತ್ತಾರೆ. ಇಂಥ ಪುರೋಹಿತರ ಉಪಜೀವನಕ್ಕಾಗಿ ನಿರ್ದಿಷ್ಟವಾದ ಭೂಮಿ ಇತ್ಯಾದಿ ಇರುವುದಿಲ್ಲ.

. ಸೇವಕವರ್ಗ : ಇವರು ನೇರವಾಗಿ ಮೈಲಾರಲಿಂಗನ ಸೇವೆ ಮಾಡುವವರು. ಇವರಲ್ಲಿ ಮಳ್ಳರು, ಭಂಡಾರದವರು ಎಂದು ಎರಡು ವರ್ಗ. ಮಳ್ಳರು ಎಂದರೆ ದೇವರಿಗೆ ಮರುಳಾದವರು ಎಂದು ಅರ್ಥ. ಜಾತಿಯಿಂದ ಕುರುಬರು. ಪಲ್ಲಕ್ಕಿ ಸೇವೆ, ಕುದುರೆ ಸೇವೆ, ಗುಡಿಯ ಪ್ರಾಕಾರ ಸ್ವಚ್ಛತೆ ಇತ್ಯಾದಿ ಇವರ ಸೇವೆ. ಭಂಡಾರದವರು ಅರಿಷಿಣದಿಂದ ಭಂಡಾರ ಸಿದ್ದಪಡಿಸುವುದು, ಪೂಜಾ ಸಮಯದಲ್ಲಿ ನಗಾರಿ ಬಾರಿಸುವುದು, ಗದ್ದುಗೆ ಸ್ವಚ್ಛಮಾಡುವುದು, ಪೂಜೆಗೆ ಬೆಂಕಿ ಪೂರೈಸುವುದು ಮುಂತಾದ ಸೇವೆ ಮಾಡುತ್ತಾರೆ. ಈ ವರ್ಗದವರಿಗೂ ಭಂಡಾರದ ಹೊಲ, ಚಾಕರಿ ಹೊಲ ಇತ್ಯಾದಿ ಹೆಸರಿನ ಹೊಲಗಳುಂಟು. ಈ ಸೇವೆ ವಂಶ ಪರಂಪರೆಯಿಂದ ನಡೆದುಕೊಂಡು ಬಂದಿರುತ್ತದೆ.

. ಪ್ರಮುಖ ಭಕ್ತವರ್ಗ : ಮೈಲಾರಲಿಂಗನ ಸಂಪ್ರದಾಯದಲ್ಲಿ ಈ ವರ್ಗಕ್ಕೆ ಉನ್ನತ ಗೌರವ ಸ್ಥಾನವಿದೆ. ಇವರ ಸಂತೃಪ್ತಿಯೆಂದರೆ ಮೈಲಾರಲಿಂಗನ ಸಂತೃಪ್ತಿ ಎಂದು ಇತರ ಭಕ್ತ ಸಮೂಹದ ಭಾವನೆಯಾಗಿರುತ್ತದೆ. ಇವರನ್ನು

ಅ. ಗೊರವರು

ಬ. ಕುದುರೆಕಾರರು

ಕ. ಬಾಲೇರು ಎಂದು ವರ್ಗೀಕರಿಸಬಹುದು.

ಗೊರವರು: ಮೈಲಾರಲಿಂಗನ ಭಕ್ತರಲ್ಲಿ ಗೊರವರಿಗೆ ವಿಶೇಷ ಸ್ಥಾನವಿದೆ. ಒಂದರ್ಥದಲ್ಲಿ ಇವರು ಸ್ಥಾವರ ಮೈಲಾರಲಿಂಗನ ಜಂಗಮ ಪ್ರತಿನಿಧಿಗಳೇ ಆಗಿರುತ್ತಾರೆ. ಕಾಲಬದಲಾದರೂ ತಮ್ಮ ಸಂಪ್ರದಾಯವನ್ನು ಬದಲಿಸಿಕೊಳ್ಳಲು ಇವರು ಸಿದ್ದರಿಲ್ಲ. ವಿಲಕ್ಷಣ ವೇಷ-ಭೂಷಣ ಹೊಂದಿದ ಇವರ ಹೆಸರಿನಲ್ಲಿ ಪ್ರಾದೇಶಿಕ ಭಿನ್ನತೆಯುಂಟು. ಉತ್ತರ ಕರ್ನಾಟಕದಲ್ಲಿ ವಗ್ಗಯ್ಯ, ಗೊರವಯ್ಯ, ಗುರುವ ಮಳ್ಳಗೊಗ್ಗಯ್ಯ ಎಂದು ದಕ್ಷಿಣ ಕರ್ನಾಟಕದಲ್ಲಿ ಗೊರವ, ಗಡಬಡಯ್ಯ, ಗೊಗ್ಗಯ್ಯ, ಗೊರವಪ್ಪನೆಂದೂ ಮಹಾರಾಷ್ಟ್ರದಲ್ಲಿ ವಾಘೆ, ವಾಘ್ಯಾನೆಂದೂ ಇವರು ಕರೆಯಿಸಿಕೊಳ್ಳುತ್ತಾರೆ. ಹೆಸರಿನಂತೆ ವೇಷ-ಭೂಷಣದಲ್ಲಿಯೂ ಭಿನ್ನತೆಯಿದೆ. ಉತ್ತರ ಕರ್ನಾಟಕದವರು ತಲೆಗೆ ಬಿಳಿಯ ರುಮಾಲನ್ನು ಸುತ್ತಿದರೆ ದಕ್ಷಿಣ ಕರ್ನಾಟಕದವರು ಕರಡಿಯ ಕೂದಲಿನ ಕುಲಾವಿ ಇಲ್ಲವೆ ಟೋಪಿಗಳನ್ನು ತೊಡುತ್ತಾರೆ. ಕಂಬಳಿಯ ನಿಲವಂಗಿ ಕೆಲವು ಕಡೆ ತೊಟ್ಟರೆ ಕೆಲವು ಕಡೆ ಸಾದಾ ಅಂಗಿ ತೊಡುತ್ತಾರೆ. ಕೊರಳಲ್ಲಿ ಭಂಡಾರದ ಚೀಲ, ಕವಡೆ ಸರ, ಹೆಗಲಿಗೆ ಭಿಕ್ಷಾಪಾತ್ರೆ ಅಂದರೆ ದೋಣಿ, ಕೈಯಲ್ಲಿ ಡಮರುಗ, ಗಂಟೆ, ತ್ರಿಶೂಲ, ಪಿಳ್ಳೆಂಗೋವಿ ಇಲ್ಲವೆ ಕೊಳಲು ಇವು ಇವರ ಸಾಮಗ್ರಿಗಳು. ಕುರುಬ, ಮಾದಿಗ, ಹೊಲೆಯ, ಕಬ್ಬಲಿಗ, ಗೊಲ್ಲ, ಬೇಡ, ಮುಂತಾದ ಜಾತಿಯವರು ಈ ಗೊರವ ದೀಕ್ಷೆಯನ್ನು ಪಡೆದಿರುತ್ತಾರೆ. ಈ ದೀಕ್ಷೆಯು ಹಿರಿಯ ಗೊರವನಿಂದ ಶಾಸ್ತ್ರೋಕ್ತವಾಗಿ ನೆರವೇರುತ್ತದೆ. ಈ ದೀಕ್ಷಾಕ್ರಮ ಮದುವೆಯ ಸಮಾರಂಭವನ್ನು ನೆನೆಪಿಗೆ ತರುತ್ತದೆ. ಮದುವೆಯ ಸುರಗಿಯಲ್ಲಿ ಬೇಕಾದ ಚಾಜದ ವಸ್ತುಗಳು ಇಲ್ಲಿಯೂ ಬೇಕು. ಕೈಗೆ ಕಂಕಣ, ಪಂಚಕಳಸ, ಕರಿ ಕಂಬಳಿಯ ಗದ್ದಿಗೆ, ಅದರ ಮೇಲೆ ಸೇಸಕ್ಕೆ ಇಟ್ಟು ಗೊರವ ಆಗಲಿರುವ ಹಿರಿಯ ಮಗನನ್ನು ಮಡಿಯಿಂದ ಕರೆದು ತಂದು ಕುಳ್ಳಿರಿಸಿ, ಹೊಸಬಟ್ಟೆ ತೊಡಿಸಿ ದೀಕ್ಷಾಗುರುವಿನಿಂದ ನೀತಿ ಬೋಧಿಸಲಾಗುತ್ತದೆ. ಅದು ಕಳವು ಮಾಡಬಾರದು, ಸುಳ್ಳು ಹೇಳಬಾರದು, ಸತ್ತವರ ಅಂತ್ಯಕ್ರಿಯೆ ಮಾಡಿಯೇ ಉಣ್ಣಬೇಕು, ಊಟಮಾಡುವಾಗ ದೀಪ ಆರಿದರೆ ಅಷ್ಟಕ್ಕೇ ಊಟ ಬಿಡಬೇಕು, ಕಾಲಲ್ಲಿ ಚಪ್ಪಲಿ ಹಾಕಬಾರದು, ಹಾವನ್ನು ಸಾಯಿಸಬಾರದು, ತಂದೆ-ತಾಯಿಯರಿಗೆ ಕೆಟ್ಟದ್ದು ಬಗೆಯಬಾರದು-ಹೀಗೆ ಬೋಧಿಸಲಾಗುತ್ತದೆ. ಗೊರವ ವೇಷಧಾರಿಯಾದ ಹುಡುಗನು ದೀಕ್ಷೆಯ ಬಳಿಕ ದೇವರು, ಗುರು, ಹಿರಿಯರನ್ನು ನಮಸ್ಕರಿಸಿ ಐದು ಮನೆಯ ಭಿಕ್ಷೆ ಎತ್ತಿಕೊಂಡು ಬರುತ್ತಾನೆ. ಇಲ್ಲಿಗೆ ದೀಕ್ಷಾ ಕ್ರಿಯೆ ಮುಗಿಯುತ್ತದೆ. ನಂತರ ಆತ ದಿನವೂ ಗೊರವ ವೇಷಧರಿಸಿ ಮೈಲಾರಲಿಂಗನ ಮಹಿಮೆಯನ್ನು ಸಾರುತ್ತ, ಭಿಕ್ಷೆ ಎತ್ತುತ್ತ ಸಂಚರಿಸಬಹುದು. ಇಲ್ಲವೆ ಸ್ವಾಮಿಯ ದಿನವಾದ ರವಿವಾರ ಮಾತ್ರ ತಪ್ಪದೇ ಈ ಸಂಪ್ರದಾಯವನ್ನು ನಡೆಸಿಕೊಂಡು ಬರಬೇಕು. ಸ್ತ್ರೀಯರಿಗೂ ಗೊರವ ದೀಕ್ಷೆಕೊಡಲಾಗುತ್ತದೆ. ಇಲ್ಲಿ ಪುರುಷರಂತೆಯೇ ದೀಕ್ಷಾಕ್ರಮ ಜರಗುತ್ತದೆ. ಆದರೆ ಗೊರವಮ್ಮ ಕಂಬಳಿಯ ನಿಲುವಂಗಿಗೆ ಬದಲು ಬಗಲಿಗೆ ಗಂಟೆಸರ ಹಾಕಿ ಕೈಯಲ್ಲಿ ಭಂಡಾರ ಚೀಲ ಹಿಡಿದಿರುತ್ತಾಳೆ. ಗೊರವರಂತೆ ಗೊರವಮ್ಮನೂ ಊರಾಡಬಹುದು. ಮಹಾರಾಷ್ಟ್ರದಲ್ಲಿ ಇವರನ್ನು ‘ಮುರಳಿಯರು’ ಎಂದು ಕರೆಯುತ್ತಾರೆ. ಇದರ ನಿಜವಾದ ರೂಪ ‘ಮರುಳೆಯರು’ ಎಂದು ಡಾ. ಪಿ. ಬಿ. ದೇಸಾಯಿ ಮತ್ತು ಡಾ. ಎಂ. ಎಂ. ಕಲಬುರ್ಗಿಯವರು ಹೇಳುತ್ತಾರೆ. ಮೈಲಾರ ಲಿಂಗನ ಭಕ್ತರು ಉತ್ಸವದ ಕಾಲದಲ್ಲಿ ಮೊದಲಿಗೆ ಗೊರವರನ್ನು ಉಣ್ಣಿಸಿ, ಭಕ್ತಿ ಕಾಣಿಕೆ ಅರ್ಪಿಸುತ್ತಾರೆ. ಬ್ರಾಹ್ಮಣ ಪುರೋಹಿತರಿಗೂ ಲಿಂಗಾಯತ ಜಂಗಮರಿಗೂ ಇದ್ದ ಸ್ಥಾನ ಮಾನ ಇವರಿಗೂ ಇರುತ್ತದೆ. ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ಬಳಿಕೆಯಲ್ಲಿರುವ ಬಾರಾ ಬಲೂತ ಎಂಬ ಹಳ್ಳಿಯ ಕಸಬುಗಾರರಲ್ಲಿ ‘ಗೊರವ’ನೂ ಒಬ್ಬನಿದ್ದಾನೆ. ಅಲ್ಲಿ ಇವನು ಜಂಗಮ ಜೋಯಿಸ, ಮೌಲಾನಾಗಳ ಉನ್ನತ ಸ್ಥಾನದಲ್ಲಿದ್ದಾನೆ ಎಂಬುದು ಗಮನಾರ್ಹವಾದುದು. ಭಕ್ತರ ಮನೆಗಳಲ್ಲಿ ಗೀತಗೋಷ್ಠಿ ನಡೆಸುತ್ತ ಸ್ವಾಮಿಯ ಮಹಿಮೆಯನ್ನು ಸಾರುವ ಇವರು ಜಾನಪದ ವೃತ್ತಿಗಾಯಕರ ಸಾಲಿನಲ್ಲಿ ಸೇರುತ್ತಾರೆ. ಇವರೂ ಕಾರಣಿಕವನ್ನು ನಡೆಸುತ್ತಾರೆ. ದೇವರ ಉತ್ಸವಕಾಲದಲ್ಲಿ ಕೆಲವು ಆಶ್ಚರ್ಯಕರ ಪವಾಡಗಳು ಇವರಿಂದ ಜರುಗುತ್ತವೆ. ಅವು ಸರಪಣಿ ಪವಾಡ, ಶೂಲದ ಪವಾಡ, ಗೂಟದ ಪವಾಡ, ಕಾರಣಿಕ ಪವಾಡ, ಕಾಯಿ ಪವಾಡ, ಶಿರಸ ಪವಾಡ, ಅಲಗು ಪವಾಡ, ಮುಳ್ಳು ಪವಾಡ ಇತ್ಯಾದಿ. ಭಕ್ತ ಸಮೂಹದ ಸಾಕ್ಷಿಯಲ್ಲಿ ಪವಾಡಗಳನ್ನು ಪ್ರದರ್ಶಿಸಿ ಸ್ವಾಮಿಯ ಮಹತ್ವವನ್ನು ಇವರು ಮೆರೆಯುತ್ತಾರೆ. ನಾಯಿಯಂತೆ ಅಭಿನಯಿಸುತ್ತಾ ದೋಣಿಯಲ್ಲಿ ಉಣ್ಣುತ್ತಾರೆ. ನಾಯಂತೆ ತಾವು ದೇವರಿಗೆ ನಂಬಿಗಸ್ಥರೂ, ಪ್ರಾಮಾಣಿಕರೂ ಎಂಬುದನ್ನು ಅಭಿಮಾನದಿಂದ ಹೇಳುತ್ತಾರೆ.

ಕುದುರೆಕಾರರು : ವಿಶೇಷವಾಗಿ ಇವರು ಹೊಲೆಯ, ಮಾದಿಗ ಈ ಕೆಳವರ್ಗದವರಿರುತ್ತಾರೆ. ಇವರಿಗೂ ತಮ್ಮದೇ ಆದ ವೇಷಭೂಷಣಗಳಿವೆ. ಭಂಡಾರ ಧರಿಸಿ ಬಿಳಿ ನಿಲುವಂಗಿ ಹಾಕಿಕೊಂಡು ಸೂಂಟಿಕ್ಕೆ ಗಂಟಿಸರ ಕಟ್ಟಿಕೊಂಡು ಕೈಯಲ್ಲಿ ಬಿಚುಗತ್ತಿ ಹಿಡಿದು ಅದನ್ನು ಜಳಪಿಸುತ್ತಾ ಕುಣಿಯುತ್ತಾರೆ. ಕುದುರೆಯ ಕುಣಿತದಂತೆ ಅಭಿನಯಿಸುತ್ತಾರೆ. ತಮ್ಮ ಕಾಲಿಗೆ ಛಡಿಯಿಂದ, ಚಾಟಿಯಿಂದ ಹೊಡೆದುಕೊಳ್ಳುತ್ತಾರೆ. ಇವರು ಮೈಲಾರಲಿಂಗನ ಉತ್ಸವಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸ್ವಾಮಿ ಹೆಸರಿನ ಮೇಲೆ ಭಿಕ್ಷೆ ಬೇಡಿ ಉಪಜೀವನ ಸಾಗಿಸುತ್ತಾರೆ.

ಬಾಲೇರು : ಇವರನ್ನು ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ. ತುರಂಗಬಾಲೇರು, ವೇಶ್ಯೆಯರು, ಮಾತಂಗೇರು, ಲೇಸಿಯರು, ಬಾಲೇರು ಮುಂತಾದ ಹೆಸರುಗಳಿವೆ. ಇವರಿಗೂ ಮುರುಳೇರು ಎಂಬ ಪದ ಬಳಕೆಯಲ್ಲಿದೆ. ಸ್ವಾಮಿಯ ಸಾನಿಧ್ಯದಲ್ಲಿ ಉತ್ಸವ ಕಾಲಕ್ಕೆ ನೃತ್ಯ ಸೇವೆ ಇವರಿಂದ ನಡೆಯುತ್ತದೆ. ಭಂಡಾರ ಲೇಪಿಸಿಕೊಂಡು, ಜಡೆಬಿಟ್ಟು ಸೀರೆಯ ಸೆರಗನ್ನು ಸೊಂಟಕ್ಕೆ ಸುತ್ತಿ ವಿವಿಧ ಕುಣಿತಗಳನ್ನು ಡೊಳ್ಳಿನ ವಾಲಗದ ಮಧ್ಯದಲ್ಲಿ ಪ್ರದರ್ಶಿಸುತ್ತಾರೆ. ತಾವು ಸ್ವಾಮಿಗೆ ಮರುಳಾದವರು ಎಂಬ ಭಾವನೆ ಭಕ್ತರಲ್ಲಿ ಮೂಡಿಸುತ್ತಾರೆ.

. ಇತರ ಭಕ್ತವರ್ಗ : ವೀರಗಾರರು, ಕಂಚರು, ಪುರವಂತರು ಮುಂತಾದವರು ಉತ್ಸವ ಕಾಲದಲ್ಲಿ ಸ್ವಾಮಿಭಕ್ತಿಯನ್ನು ಪ್ರದರ್ಶಿಸುತ್ತಾರೆ. ಇವರಲ್ಲಿ ವೀರಗಾರರು ಕಬ್ಬಿಣ ಗುಂಡಿನಿಂದ ಮೈಗೆ ಹೊಡೆದುಕೊಳ್ಳುವುದು, ಮೀನಗಂಡದಲ್ಲಿ ಹಗ್ಗ ಪೋಣಿಸಿ ಎಳೆದುಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಾರೆ. ಕಂಚರು ಶಸ್ತ್ರವನ್ನು ಚುಚ್ಚಿಕೊಳ್ಳುತ್ತಾರೆ.

ಮೈಲಾರಲಿಂಗನು ಮುಖ್ಯವಾಗಿ ಒಬ್ಬ ಮಿಶ್ರ ಸಮೂಹದ ದೇವನಾದ್ದರಿಂದ ಅವನ ಭಕ್ತ ಬಳಗದಲ್ಲಿ ಸಾಂಘಿಕತೆಯನ್ನು ಕಾಣುತ್ತೇವೆ. ಹಾರುವನಿಂದ ಹೊಲೆಯನವರೆಗಿನ ಎಲ್ಲ ಜಾತಿಯವರಲ್ಲಿ ಈ ದೇವರ ಭಕ್ತರಿದ್ದಾರೆ. ಮೂಡಲ್ಲಿ ಮುಣಗಲ್ಲಿ ಇಂಥ ದೇವರು ಸಿಗುವುದಿಲ್ಲವೆಂಬುದು ಈ ಭಕ್ತರ ಭಾವನೆ. ಯಾರು ನಡೆದುಕೊಳ್ಳುತ್ತಾರೆ ಅವರು ಪಡೆದುಕೊಳ್ಳುತ್ತಾರೆ ಎಂಬ ನಂಬಿಕೆಯೂ ಇವರದಾಗಿರುತ್ತದೆ. ಈತನ ಉತ್ಸವಗಳು ಪ್ರಾದೇಶಿಕವಾಗಿ ಭಿನ್ನ ಭಿನ್ನ ಸಂದರ್ಭದಲ್ಲಿ ಜರಗುತ್ತದೆ. ಮೈಲಾಪೂರದಲ್ಲಿ ಮಕರಸಂಕ್ರಮಣ, ದೇವರ ಗುಡ್ಡದಲ್ಲಿ ಭಾರತ ಹುಣ್ಣಿಮೆ, ದೇವರ ಹಿಪ್ಪರಿಗೆಯಲ್ಲಿ ದಸರೆ ಸಂದರ್ಭಗಳಲ್ಲಿ ಜಾತ್ರೆ ನಡೆಯುತ್ತದೆ. ಅಲ್ಲಲ್ಲಿಯ ಭಕ್ತರು ಅಲ್ಲಲ್ಲಿಯ ಜಾತ್ರೆಗೆ ನೆರೆಯುತ್ತಾರೆ ಭಕ್ತಿ ಸೇವೆ ನಡೆಸುತ್ತಾರೆ. ಎಲ್ಲ ಭಕ್ತ ವರ್ಗದವರಿಂದಲೂ ಒಂದೇ ಒಂದು ಜಯ ಘೋಷಣೆ. ಅದು “ಏಳುಕೋಟಿ ಏಳುಕೋಟಿ ಉಘೇ” ಎಂಬುದು. ಇದರ ಅರ್ಥವೇನೇ ಇರಲಿ ಸಮೂಹದ ಒಕ್ಕೊರಲಿನಿಂದ ಹೊಮ್ಮಿದ ಈ ಘೋಷಣೆ ಭಕ್ತರಲ್ಲಿ ಏಕತೆ ಮೂಡಿಸುವುದರ ಜೊತೆಗೆ ಇದು ಅವರವರ ಭಾವನೆಗಳನ್ನು ಭಗವಂತನಲ್ಲಿ ಲೀನಗೊಳಿಸುವ ಪರಿಣಾಮಕಾರಿ ಮಾಧ್ಯಮವಾಗಿ ಪರಿಣಮಿಸಿದೆ.