ಇತ್ತೀಚೆಗೆ ನಾನು ಹೋಗಿದ್ದಾಗ
ಕೇರಳಕ್ಕೆ ಒಂದು ಸೆಮಿನಾರಿಗೆ,
ಕರೆದುಕೊಂಡು ಹೋಗಿದ್ದರು
ಅಲ್ಲಿನ ಗೆಳೆಯರು
ಕಾಲಡಿ ಎಂಬ ಊರಿಗೆ.

ಕಾಲಡಿ, ನಿಮಗೆ ಗೊತ್ತಿರುವಂತೆ
ಮಹಾದಾರ್ಶನಿಕ
ಆಚಾರ್ಯ ಶಂಕರರು ಹುಟ್ಟಿದೂರು.
ದೇಶಾದ್ಯಂತ ವಸಂತದ ಹಾಗೆ
ಸಂಚಾರ ಮಾಡಿದ ಈ ಸಂತ
ಉತ್ತರದ ಎತ್ತರದ ಕೇದಾರದಲ್ಲಿ
ಅದ್ವೈತವಾದರು.

ಬಸ್ಸಲ್ಲಿ ನಾವು ಕಾಲಡಿಯನ್ನು ತಲುಪಿದಾಗ
ಮಟಮಟ ಮಧ್ಯಾಹ್ನ.
ನಾನೂ ನನ್ನ ಗೆಳೆಯರೂ, ಶಂಕರಮಠದ
ಒಳಹೊಕ್ಕು, ಶೃಂಗೇರಿ ಶಾರದೆಗೆ ಕೈಮುಗಿದು
ಆಚಾರ್ಯ ಶಂಕರರ ತಾಯಿ ಆರ್ಯಾಂಬೆಯ
ಗದ್ದುಗೆಗೆ ತಲೆಬಾಗಿ, ಪೂರ್ಣಾನದಿಯ
ದಂಡೆಗೆ ಬಂದು ನೋಡಿದರೆ, ಥಳತ್ತಳಿಸಿ
ಹೊಳೆವ ಪಾರದರ್ಶಕ ಜಲದ ಆಕರ್ಷಣೆಗೆ
ಮತ್ತೆ ಬಿಸಿಲಿನ ಝಳಕ್ಕೆ ‘ಸ್ನಾನ ಮಾಡೋ-
ಣವೇ’ ಅಂದರು, ಜತೆಗೆ ಬಂದವರು.

‘ನೀವು ಮಾಡಿ, ನಾನು ದಡದಲ್ಲಿಯೇ ಕೂತು
ನೋಡುತ್ತೇನೆ, ಅಥವಾ ಹೀಗೆಯೇ ಒಂದಷ್ಟು
ಸುತ್ತಾಡಿ ಬರುತ್ತೇನೆ’ ಎಂದೆ. ನೀರಿಗೆ ಇಳಿದ
ಗೆಳೆಯರಿಗೆ ಕಾಡಿತು ಮಾಯೆ, ತಂಪಾಗಿ
ಮೈಗೆ ಹಿತವಾಗಿ. ನಾನು ಹಾಗೆಯೇ ಆ
ಹೊಳೆಯ ದಂಡೆಯಗುಂಟ ಮುಂದಕೆ ನಡೆದು
ಬಾಚುಕೊಂಬೆಯ ಮರದ ಬುಡದ ನೆರಳನು
ಹಿಡಿದು, ನದಿಯ ಅಲೆಗಳ ಮೇಲೆ ಹೊಳೆವ
ಬಿಸಿಲನು ಕಂಡು ಮರುಳಾಗಿ ಕೂತೆ….

ಆ ಹೊಳೆ, ಆ ಬಿಸಿಲು, ಆ ಮರ, ಮತ್ತ-
ದರ ನೆರಳು, ಎಲ್ಲವೂ ತಮ್ಮ ದ್ವೈತ-
ವನುಳಿದು, ಅದ್ವೈತವಾದೊಂದು ಸ್ತಬ್ದ
ಮಾಯಾಭ್ರಾಂತಿಯೊಳಗದ್ದಿರಲು, ಏನೋ
ಸದ್ದಾಗಿ ತಿರುಗಿ ನೋಡಿದರೆ ಅನತಿ ದೂರ-
ದಲ್ಲೇ ಒಂದು ಭಾರೀ ಮೊಸಳೆ, ದಡದ
ಮರಳಿನ ಮೇಲೆ ದೊಡ್ಡ ಕೊರಡಿನ ಹಾಗೆ
ಬಿದ್ದಲ್ಲಿಯೇ ಬಿದ್ದು ಬಿಸಿಲು ಕಾಸುತ್ತಿದೆ
ಕಣ್ಣನರೆ ಮುಚ್ಚಿ, ತನ್ನ ಗರಗಸಬಾಯ
ಸ್ವಲ್ಪವೇ ತೆರೆದು : ‘ಅಚಲೋಯಂ ಸನಾತನಃ’!

ಎಲಾ ಇದರ! ಇದೆಲ್ಲಿಂದ ಬಂತಪ್ಪ ಈ ಮೊಸಳೆ !
ನಿಜವಾಗಿಯೂ ಇದು, ಅದೇ ಇರಬಹುದೆ?
ಚಿಕ್ಕಂದಿನಲ್ಲಿ ಬಾಲಶಂಕರನನ್ನು ಸ್ನಾನ
ಮಾಡುವ ಹೊತ್ತು ಹಿಡಿದು ಎಳೆದಿತ್ತೆಂದು
ಕತೆಯಲ್ಲಿ ಓದಿದ್ದೆನಲ್ಲ, ಅದೇ ಮೊಸಳೆಯೇ
ಇದು, ಅಂದುಕೊಳ್ಳುತ್ತ ದಿಗ್ಭ್ರಮೆಯಲ್ಲಿ ನೋಡಿದೆ.

ಅದೇನು ಚಮತ್ಕಾರವೋ ಏನೊ, ಬಂದಂತೆ
ವರ್ತಮಾನಕ್ಕೆ ಪ್ರಾಚೀನತೆಯ ನಾಲಗೆ
ದನಿಯೊಂದು ಕೇಳಿಸಿತು : ‘ಹೌದು ವತ್ಸಾ
ಹೌದು. ನಾನೇ ಅವೊತ್ತಿನ ಮೊಸಳೆ. ಬಾಲ
ಶಂಕರನನ್ನು ಈ ಇದೇ ನದಿಯಲ್ಲಿ, ಸ್ನಾನ
ಮಾಡುವ ವೇಳೆ ಹಿಡಿದು ಎಳೆದದ್ದು ನಾನೇ,
ಅನಂತರ ನಡೆದ ಕಥೆ ನಿನಗೆ ಗೊತ್ತೇ ಇದೆ.’
ಇಷ್ಟು ಹೇಳಿದ್ದೆ, ಮತ್ತೆ ಸ್ಥಾಣುವಿನಂತೆ
ಬಿದ್ದುಕೊಂಡಿತು ಮೊಸಳೆ. ಅದರ ಮೈಮೇಲೆ
ಅನೇಕ ಶತಮಾನಗಳ ಕಪ್ಪು ಛಾಯೆ.

ಆ ನಿಶ್ಶಬ್ದ ಛಾಯೆ, ಕ್ರಮಕ್ರಮೇಣ, ನಾನಿ-
ದ್ದೇನೆ, ನಾನೇ ಎಲ್ಲ, ನಾನಿಲ್ಲದಿನ್ನಿಲ್ಲ ಎನ್ನುವ
ಹಾಗೆ ಆಕ್ರಮಿಸತೊಡಗಿತ್ತು ನನ್ನ ಅರಿವನ್ನೆಲ್ಲ.

ನೋಡುತ್ತೇನೆ : ಇಡೀ ನದಿ ಭಾರೀ ಮೊಸಳೆ-
ಯೊಂದರ ನಾಲಗೆಯಂತೆ ನಿಡಿದಾಗಿ ಚಾಚಿ
ಕೊಂಡಿದೆ. ಮೇಲೆ ತೆರೆದಾಕಾಶ, ಕೆಳಗೆ
ಹಾಸಿದ ಭೂಮಿ. ನಿಜವಾಗಿಯೂ ನಾವೆಲ್ಲ
ಮೊಸಳೆಯೊಂದರ ಬಾಯೊಳಗೆ ಇದ್ದೇವೆ
ಎಂದಿನಿಂದಲೊ ಏನೊ, ನಮಗೆ ಬಿಡುಗಡೆಯಿಲ್ಲ.