ಪತ್ರಿಕಾಹೇಳಿಕೆ:

ಶಾಂತವೇರಿ ಗೋಪಾಲಗೌಡರು ಬದುಕಿದ್ದಾಗ ನನ್ನ ಮೇಲೆ, ನನ್ನ ಬರವಣಿಗೆಯ ಮೇಲೆ ವಿಶೇಷವಾದ ಪ್ರಭಾವ ಮಾಡಿದ ವ್ಯಕ್ತಿ. ಅವರನ್ನು ಕುರಿತು ನಾನು ೧೯೭೪ರಲ್ಲಿ ಎಂದು ಕಾಣುತ್ತದೆ, ಬರೆದೊಂದು ಲೇಖನವಿದೆ. ಗೌಡರನ್ನು ಬಲ್ಲವರೆಲ್ಲರೂ ಈ ಲೇಖನ ಓದಿದ್ದಾರೆ. ವ್ಯಕ್ತಿತ್ವವನ್ನು ಇಷ್ಟು ತೃಪ್ತಿಯಾಗುವಂತೆ ನಾನು ಬರೆದಿದ್ದಿಲ್ಲ. ಕಾರಣ, ಗೌಡರ ಬಗ್ಗೆ ನನಗಿದ್ದ ಗೌರವ ಮತ್ತು ಆತ್ಮೀಯತೆ ಲೇಖನದಲ್ಲಿ ಮೂಡಿರುವ ಕ್ರಮ. ನನ್ನ ಮೊದಲ ಕಾದಂಬರಿ ಸಂಸ್ಕಾರವೂ ಗೋಪಾಲ ಗೌಡರಿಗೆ ಅರ್ಪಿತವಾದ್ದು. ಆದ್ದರಿಂದ ಕಾದಂಬರಿಯ ಸೋಗಿನಲ್ಲಿ ಅವರ ಜೀವನ ಚರಿತ್ರೆಯನ್ನು ನಾನು ಬರೆಯಬೇಕಾದ ಅಗತ್ಯವಿಲ್ಲ. ಖುದ್ದಾಗಿ ಅವರ ಜೀವನ ಚರಿತ್ರೆಯನ್ನು – ಅದರ ಎಲ್ಲ ವಾಸ್ತವತೆಯಲ್ಲೂ ಬರೆದು – ಅವರೆಷ್ಟು ದೊಡ್ಡವರೆಂದು ನಾನು ಹೇಳಬಲ್ಲೆ. ದೊಡ್ಡವರ ಜೀವನಚರಿತ್ರೆ ಕೀರ್ತನೆಯಾಗಬೇಕಿಲ್ಲ. ವಿಮರ್ಶಕ ದೃಷ್ಟಿಯಲ್ಲೂ ತನ್ನ ಸತ್ವವನ್ನು ದೊಡ್ಡ ಜೀವನ ಸಾರಬಲ್ಲದು. ಯಾವ ವ್ಯಕ್ತಿಯನ್ನಾಗಲೀ, ಮಹಾತ್ಮ ಗಾಂಧಿಯನ್ನಾಗಲಿ, ಸರ್ವಗುಣ ಸಂಪನ್ನನೆನ್ನುವುದು ಸತ್ಯ ದೂರವಷ್ಟೇ ಅಲ್ಲ, ಮಾನವತೆಯ ಮಿತಿಯಲ್ಲೂ ದೈವಿಕವಾಗಬಲ್ಲ ಚೈತನ್ಯದ ಬಗ್ಗೆ ನಮಗಿರುವ ಅಜ್ಞಾನದ ಪ್ರದರ್ಶನ. ಭಾರತೀಯರು ಬರೆಯುವ ಜೀವನ ಚರಿತ್ರೆಯಲ್ಲಿ ಇದೊಂದು ಊನವೆಂದೇ ಹೇಳಬೇಕು. ಗಾಂಧೀಜಿಯನ್ನು ಬಿಟ್ಟರೆ ಇನ್ಯಾರೂ ತಮ್ಮ ಆತ್ಮಚರಿತ್ರೆಯಲ್ಲೂ ನಿಷ್ಠುರ ಸತ್ಯ ಹೇಳಿಕೊಳ್ಳುವುದಿಲ್ಲ.

ಅವಸ್ಥೆ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಮಾತ್ರವಲ್ಲದದ್ದರಿಂದಲೇ ಅದು ತನ್ನ ಕೊನೆಯ ಪುಟಗಳಲ್ಲಿ ಜೆಪಿಯಂಥವರ ಕೊನೆಯನ್ನೂ ಧ್ವನಿಸುತ್ತದೆಂದು ನಾನು ತಿಳಿದಿದ್ದೇನೆ. ಆದ್ದರಿಂದಲೇ ಹಿಂದಿಯಲ್ಲಿ  ಅನುವಾದಿತವಾದ ಈ ಕೃತಿ ಹಲವು ತರುಣ ಸಮಾಜವಾದಿಗಳಿಗೆ ಪ್ರಿಯವಾಗಿದೆ. ಯಾವ ಕೃತಿಯಾಗಲಿ ಕನ್ನಡಿಯಂತೆ ನೋಡಿಕೊಂಡವರ ಮುಖವನ್ನು ತೋರಿಸುತ್ತದೆ ಆಳದಲ್ಲಿ ಮುಚ್ಚಿರುವ ನಮ್ಮ ನಮ್ಮ  ಮಾತುಗಳನ್ನು.

ನಾನು ಸಾಮಾನ್ಯವಾಗಿ ನನ್ನ ಕೃತಿಗಳನ್ನು ಸಮರ್ಥಿಸಿಕೊಂಡು ಮಾತಾಡುವುದಿಲ್ಲ. ಆದರೆ ಈಗ ಅವಸ್ಥೆ  ಸಿನಿಮಾ ಮಾತ್ರವನ್ನಲ್ಲದೆ ಕಾದಂಬರಿಯನ್ನೂ ಬಹಿಷ್ಕರಿಸಬೇಕೆಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆ ಕೇವಲ ಕಾನೂನಿನ ಚೌಕಟ್ಟಿನಲ್ಲಿ ನಿರ್ಧಾರವಾಗಲಾರದು. ಯಾಕೆಂದರೆ ಕಾನೂನು ಕೂಡ ಕೃತಿಯ ಸ್ವರೂಪವೇನೆಂದು ತಿಳಿದು ವ್ಯವಹರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕನ್ನಡದ ಪ್ರಜ್ಞಾವಂತ ವಿಮರ್ಶಕರು ಮತ್ತು ಓದುರಗರು ನನ್ನ ಕಾದಂಬರಿ ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯಂತೆ ಕಾಣುತ್ತದೋ ಕಂಡರೆ ಅದು ಅವಹೇಳನಾತ್ಮಕ ಉದ್ದೇಶದ ಜೀವನ ಚರಿತ್ರೆಯಂತೆ ಕಾಣುತ್ತದೊ ಅಥವಾ ಈ ಎರಡೂ ಅಲ್ಲದೆ ನನ್ನ ಕೃತಿ ಒಂದು ಸಾರ್ವತ್ರಿಕ ಸತ್ಯವನ್ನು ಧ್ವನಿಸಬಲ್ಲ ತಾತ್ವಿಕ ರಾಜಕೀಯ ವಸ್ತುವನ್ನೊಳಗೊಂಡ ಕೃತಿಯೋ ಎಂಬುದನ್ನು ಚರ್ಚಿಸಿ ನಿರ್ಧರಿಸಬೇಕು. ಮೊದಲನೆಯದಾದರೆ ನಾನು ಸೋತಂತೆ, ಎರಡನೆಯದಾದರೆ ನಾನು ಹೀನರೀತಿಯಲ್ಲಿ ನಡೆದುಕೊಂಡಂತೆ, ಮೂರನೆಯದಾದರೆ ನಾನು ಯಶಸ್ವಿಯಾದಂತೆ.

ಅವಸ್ಥೆ ನನ್ನಿಂದ ಹುಟ್ಟಿದ್ದು ಮೂರನೇಯ ರೀತಿಯ ಕೃತಿಯಾಗಿ ಎಂದು ನಾನು ತಿಳಿದಿದ್ದೇನೆ. ಎಲ್ಲ ನೈಜ ಕೃತಿಗಳೂ ಅವತಾರಗಳು. ಆದರೆ ಅರ್ಧಾವತಾರಗಳೂ ಇರುತ್ತವೆ. ಪೂರ್ಣಾವತಾರಗಳೂ ಇರುತ್ತವೆ. ಕಾವ್ಯದ ಸೂಕ್ಷ್ಮ ದೇಹ ಪೂರ್ಣಾವತಾರಕ್ಕೆ ಅಗತ್ಯ. ಸಮಕಾಲೀನ ವಸ್ತುವನ್ನೊಳಗೊಂಡ ಕಾದಂಬರಿಯೊಂದು ಗದ್ಯದಲ್ಲಿ ಈ ಸೂಕ್ಷ್ಮತೆ ಪಡೆದುಕೊಳ್ಳುವುದು ಎಷ್ಟು ಕಷ್ಟವೆಂದು ತಿಳಿದವರು ನ್ನನ ‘ಅವಸ್ಥೆ’ಯ ಬಂಧವನ್ನೂ, ವಿವರದ ಪ್ರಪಂಚವನ್ನೂ, ಅದರ ಸದ್ಯತನವನ್ನೂ, ಅದರ ಕನಸುಗಾರಿಕೆಯನ್ನೂ ಅರ್ಥ ಮಾಡಿಕೊಂಡರು.

ಪತ್ರಿಕಾಹೇಳಿಕೆ:

ಪ್ರತಿಯೊಂದು ಯಶಸ್ವಿಯಾದ ಸಾಹಿತ್ಯ ಕೃತಿಯೂ ಒಂದು ಅವತಾರ, ಕಲಾವಿದನ ಮನಸ್ಸಲ್ಲಿ ಮೂಡಿದ ಕಲ್ಪನೆ ಒಂದು ವಿಶಿಷ್ಟ ಜಾಗದ, ಕಾಲದ, ವ್ಯಕ್ತಿಯ ರೂಪ ಪಡೆಯುತ್ತದೆ. ಆದರೆ ಈ ಅನುಭವ ಕೇವಲ ಒಂದು ಪ್ರದೇಶಕ್ಕೂ, ಕಾಲಕ್ಕೂ, ವ್ಯಕ್ತಿಗೂ ಸೀಮಿತವಾಗಿರುವುದಿಲ್ಲ. ಜೀವನ ಚರಿತ್ರೆಗೂ ಕಲಾಕೃತಿಗೂ ನಡುವಿರುವ ಮುಖ್ಯ ವ್ಯತ್ಯಾಸ ಇದೇ.

ಮ್ಯಾಕ್‌ಬೆತ್‌ನ ಜೀವನ ಚರಿತ್ರೆಯನ್ನು ಯಾರಾದರೂ ಬರೆದಿದ್ದಲ್ಲಿ ಅದು ಒಬ್ಬ ಮ್ಯಾಕ್‌ಬೆತ್ ಎಂಬ ಮಹತ್ವಾಂಕ್ಷಿಯಾದ ಕೊಲೆಗಾರನ ಚರಿತ್ರೆಯಾಗಿರುತ್ತಿತ್ತು. ಆದರೆ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಓದುವಾಗ ನಾವು ಮ್ಯಾಕ್‌ಬೆತ್‌ನ ಅನುಭವ ನಮ್ಮದೇ ಎನ್ನುವಂತೆ ಓದುತ್ತೇವೆ. ಕೊಲೆಗಾರನಲ್ಲದ ಓದುಗನೂ ಕೊಲೆಗಾರನ ಮನೋಯಾತನೆಯನ್ನೂ ಸಹಾನುಭೂತಿಯಲ್ಲಿ ಅನುಭವಿಸುತ್ತಾನೆ. ಇದನ್ನೇ ಭಾರತೀಯ ಮೀಮಾಂಸಕಾರರು ಸಾಧಾರಣೀಕರಣವೆನ್ನುವುದು. ವಿಶಿಷ್ಟ ರೂಪ ಪಡೆದು ಅವತಾರವಾದ ಕಲಾವಿದರ ಅನುಭವ ಸಹೃದಯನ ಅನುಭವದಲ್ಲಿ ಸಾರ್ವತ್ರಿಕ ಸತ್ಯವಾಗುವ ಕಲೆಯ ಸೋಜಿಗ ಇದು.

ನನ್ನ ಒಂದು ಕೃತಿ ಪಡೆದುಕೊಂಡ ರೂಪ ಅಲ್ಲಿ ಇಲ್ಲಿ ಅವರಿವರರನ್ನು ಹೋಲಿದರೆ ಅದು ಉದ್ದೇಶಪೂರ್ವಕವಾದ್ದಲ್ಲ. ಲೇಖಕ ಪಡೆದ ಅನುಭವದ ವಿವರಗಳು ಕೃತಿಯೊಳಗೆ ಹಾಗೆ ಅಪ್ರಜ್ಞಾಪೂರ್ವಕವಾಗಿ ಬಂದಿರಬಹುದು. ಆದರೆ ಈ ಕೃತಿ ಕೊಡುವ ಅನುಭವ ಓದುಗನಿಗೆ ಒಂದು ಜೀವನ ಚರಿತ್ರೆಯನ್ನು ಓದುವ ಕುತೂಹಲದ್ದಲ್ಲ; ಈ ಅನುಭವ ತನ್ನದೇ ಆಗಬಹುದಿತ್ತು ಎಂಬ ತಾದಾತ್ಮ್ಯದ್ದಾಗಿರುತ್ತದೆ ಓದುಗನ ಪಾಲಿಗೆ. ಯಾಕೆಂದರೆ ಸಾಹಿತ್ಯಕೃತಿ ಮುಟ್ಟುವುದು ಓದುಗನ ಪ್ರಜ್ಞೆಯ ತಳಾತಳವನ್ನೂ ಕೂಡ ಯಾಕೆಂದರೆ ಅದು ಹುಟ್ಟಿದ್ದೂ ಅಲ್ಲಿಂದಲೇ.

ಪತ್ರಿಕಾಹೇಳಿಕೆ

ನಾನು ಗೌರವದಿಂದ ಕಾಣುತ್ತ ಬಂದಿರುವ ಶ್ರೀಮತಿ ಗೋಪಾಲಗೌಡರಿಗೆ ‘ಅವಸ್ಥೆ’ ಕಾದಂಬರಿಯಿಂದಲೂ, ಅದರಿಂದ ಆಧಾರಿತವಾದ ಚಲನಚಿತ್ರದಿಂದಲೂ ಮನಸ್ಸಿಗೆ ಆಘಾತವಾಗಿದೆ ಎಂದು ಕೇಳಿ ನನಗೆ ತುಂಬಾ ನೋವಾಗಿದೆ. ನನ್ನ ಕಾದಂಬರಿ ೧೯೭೮ರಲ್ಲಿ ಪ್ರಕಟವಾದಾಗ ಶ್ರೀಮತಿ ಗೋಪಾಲಗೌಡರು ನನಗೆ ಏನೂ ಹೇಳಿರಲಿಲ್ಲ. ಪ್ರಾಯಶಃ ಪತ್ರಿಕೆಗಳು ಸಿನಿಮಾ ಬಗ್ಗೆ ಬರೆಯುವಾಗ ‘ಅವಸ್ಥೆ’ಯ ನಾಯಕನಿಗೂ ಗೋಪಾಲಗೌಡರಿಗೂ ಕೆಲವು ಸಾಮ್ಯಗಳಿವೆ ಎಂದು ಹೇಳಿದ್ದರಿಂದ ಅವರ ಮನಸ್ಸು ಕೆಟ್ಟಿರಬಹುದು. ಇದಕ್ಕೆ ನಾನಾಗಲಿ ಚಿತ್ರದ ತಯಾರಕರಾಗಲಿ ಜಾಬ್ದಾರರಲ್ಲ. ನನ್ನ ಕೃತಿ ಸತ್ವಪೂರ್ಣವಾಗಿದ್ದಲ್ಲಿ ಅದು ಗೋಪಾಲಗೌಡರ ಬಗ್ಗೆ ಮಾತ್ರವಲ್ಲ, ಆದರ್ಶವಾದಿಯಾದ ಯಾವ ಧೀಮಂತ ಸಮಾಜವಾದಿ ರಾಜಕಾರಣಿಯ ಬಗ್ಗೆಯೂ ಇರಬಹುದು ಎನ್ನಿಸಬೇಕು. ಎಲ್ಲ ಒಳ್ಳೆಯ ಕೃತಿಗಳೂ ಹೀಗೆ ಸಾರ್ವತ್ರಿಕ ವ್ಯಾಪ್ತಿ ಪಡೆಯುತ್ತದೆ. ‘ಅವಸ್ಥೆ’ಯೂ ಹಾಗೆನ್ನಿಸಬೇಕೆಂದು ನನ್ನ ಆಸೆ. ಈಗ ಶ್ರೀಮತಿ ಗೋಪಾಲಗೌಡರಿಗೆ ನೋವಾಗಿರುವುದು ಮಾತ್ರವಲ್ಲ; ನನ್ನ ಕಾದಂಬರಿಗೂ ಅನ್ಯಾಯವಾಗಿದೆ. ಯಾಕೆಂದರೆ ‘ಅವಸ್ಥೆ’ಯ ನಾಯಕನಿಗೂ ಗೋಪಾಲಗೌಡರಿಗೂ ಕೆಲವು ಸಾಮ್ಯಗಳಿವೆ ಎಂದು ಹೇಳಿದ್ದರಿಂದ ಅವರ ಮನಸ್ಸು ಕೆಟ್ಟಿರಬಹುದು. ಇದಕ್ಕೆ ನಾನಗಲಿ ಚಿತ್ರದ ತಯಾರಕಾರಾಗಲಿ ಜವಾಬ್ದಾರರಲ್ಲ. ನನ್ನ ಕತಿ ಸತ್ವಪೂರ್ಣವಾಗಿದ್ದಲ್ಲಿ ಅದು ಗೋಪಾಲ ಗೌಡರ ಬಗ್ಗೆ ಮಾತ್ರವಲ್ಲ, ಆದರ್ಶವಾದಿಯಾದ ಯಾವ ಧೀಮಂತ ಸಮಾಜವಾದಿ ರಾಜಕಾರಣಿಯ ಬಗ್ಗೆಯೂ ಇರಬಹುದು ಎನ್ನಿಸಬೇಕು. ಎಲ್ಲ ಒಳ್ಳೆಯ ಕೃತಿಗಳೂ ಹೀಗೆ ಸಾರ್ವತ್ರಿಕ ವ್ಯಾಪ್ತಿ ಪಡೆಯುತ್ತದೆ. ‘ಅವಸ್ಥೆ’ಯೂ ಹಾಗೆನ್ನಿಸಬೇಕೆಂದು ನನ್ನ ಆಸೆ. ಈಗ ಶ್ರೀಮತಿ ಗೋಪಾಲಗೌಡರಿಗೆ  ನೋವಾಗಿರುವುದು ಮಾತ್ರವಲ್ಲ; ನನ್ನ ಕಾದಂಬರಿಗೂ ಅನ್ಯಾಯವಾಗಿದೆ. ಯಾಕೆಂದರೆ ‘ಅವಸ್ಥೆ’ ಒಂದು ಕಲಾಕೃತಿಯೆಂದು ನಾನು ತಿಳಿದಿದ್ದೇನೆ. ಕೃಷ್ಣ ಮಾಸಡಿ ನನ್ನ ಕೃತಿಯನ್ನು ಬಹಳ ಇಷ್ಟಪಟ್ಟು ತಯಾರಿಸಿದ ಇನಿಮಾವೂ ಒಂದು ಕಲಾಕೃತಿಯೆಂಉ ನಾನು ತಿಳಿದಿದ್ದೇನೆ. ಗೌಡರನ್ನು ಬಲ್ಲ ನಾನು ಇಷ್ಟನ್ನು ಹೇಳಬಯಸುತ್ತೇನೆ. ಅವರು ಬದುಕಿದ್ದರೆ ಅವರ ಹೆಸರಲ್ಲಿ ಎದ್ದಿರುವ ಈ ವಿವಾದದಿಂದ ಅವರಿಗೆ ನೋವಾಗುತ್ತಿತ್ತು. ಯಾಕೆಂದರೆ ಕಲಾಕೃತಿಯ ಸ್ವರೂಪ ಬಲ್ಲವರಾಗಿದ್ದರು ಅವರು. ನನ್ನ ಕಾದಂಬರಿಯ ನಾಯಕ ಉದಾತ್ತನಾದ ವ್ಯಕ್ತಿ. ಆದರೂ ಕೂಡ ನಾನು ಗೋಪಾಲಗೌಡರ ಜೀವನ ಚರಿತ್ರೆಯಾಗಿ ‘ಅವಸ್ಥೆ’ಯನ್ನು ಬರೆದದ್ದಲ್ಲವೆಂದು ಹೇಳಬಯಸುತ್ತೇನೆ.

೧೯೬೪ರಲ್ಲಿ ಇಂಗ್ಲೆಂಡ್‌ನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಒಮ್ಮೆ  ಲಾರೆನ್ಸ್ ಹುಟ್ಟಿದ ಊರಿಗೆ ಹೋಗಿದ್ದೆ. ಒಬ್ಬ ಯಾತ್ರಿಕನಂತೆ. ಅಲ್ಲಿ ನನಗೊಂದು ಸೋಜಿಗದ ಅನುಭವವಾಯಿತು. ಹೋಗುವ ದಾರಿಯಲ್ಲಿ ಒಬ್ಳು ಎದುರಾದಳು, ಮಾತಿಗೆ ತೊಡಗಿದಳು. “ನೀವು ಪರದೇಸದವರು ಲಾರೆನ್ಸಿನಲ್ಲಿ ಅದೇನುವಿಶೇಷ ಕಂಡು ಈ ಊರಿಗೆ ಬರುತ್ತೀರೋ! ನಾನು ಕಾಣೆ. ಇಲ್ಲಿ ಯಾರಿಗೂ ಲಾರೆನ್ಸ್‌ನನ್ನು ಕಂಡರೆ ಇಷ್ಟವಿಲ್ಲ. ಯಾಕೆ ಗೊತ್ತಾ? ತಮ್ಮನ್ನೆಲ್ಲ ಒಂದಲ್ಲ ಒಂದು ಕಥೆಯಲ್ಲಿ ಸೇರಿಸಿಬಿಟ್ಟಿದ್ದಾನೆ ಅಂತ” ಎಂದಳು.  ಲಾರೆನ್ಸ್ ಬೆಳೆದ ಮನೆ, ಅವನ ತಂದೆ ಕುಡಿಯಲು ಹೋಗುತ್ತಿದ್ ಪಬ್, ಕಲ್ಲಿದ್ದಲು ಗಣಿಗಳ ಕೊಳಕನ್ನೆಲ್ಲ ಸುರಿಯುತ್ತಿದ್ದ ಕಣಿವೆ, ಆ ಕಣಿವೆ ದಾಟಿದ ನಂತರ ಇದ್ದ ಹಳ್ಳಿ, ಅಲ್ಲಿದ್ದ ತನ್ನ ಪ್ರೇಯಸಿ ಮಿರಿಯಂಳನ್ನು ಕಾಣಲು ಲಾರೆನ್ಸ್ ಹೋಗುತ್ತಿದ್ದುದು ಇವೆಲ್ಲವನೂ ಆಗಷ್ಟೇ ಕಂಡಿದ್ ನನಗೆ, ಇವೆಲ್ಲವೂ ಒಂದು ವಿಶಿಷ್ಟ ಬದುಕಿನ ವಿಶಿಷ್ಟ ಸಂಗತಿಗಳು ಮಾತ್ರ ಆಗಿರದೆ, ಕೈಗಾರಿಕಾ ಕ್ರಾಂತಿಯಲ್ಲಿ ಇಂಗ್ಲೆಂಡ್ ಪಟ್ಟ ಯಾತನೆ, ಹಾಗೂ ತನ್ನ ಸ್ವರೂಪಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಇವನ್ನೂ ನನ್ನ ಪಾಲಿಗೆ ಸಂಕೇತಿಸಿದವು. ಆದರೆ ಈ ಮಾತುಗಾರ್ತಿ ಲಾರೆನ್ಸಿನ ಅನುಭವಗಳೆಲ್ಲವೂ ಆ ಊರಿನವರ ಪಾಲಿಗೆ ಇನ್ನೂ ಹಸಿಹಸಿಯಾಗಿ ಉಳಿದುಕೊಂಡಿವೆ ಎಂಬಂತೆ ಮಾತಾಡಿದಳು. ಹತ್ತರ ಬಂದು ಕಿವಿಯಲ್ಲಿ ಪುಸುಗಿಟ್ಟಿದಳು. ‘ನಾನು ಹೇಳಿದೆ ಎಂದು ಎಲ್ಲೂ ಬಾಯಿಬಿಚ್ಚಬೇಡ. ಅಲ್ಲಿ, ಅಗೋ ದೂರದಲ್ಲಿ ಒಂದು ಮನೆ  ಕಾಣುತ್ತಿದೆಯಲ್ಲವೇ, ಅಲ್ಲಿ ಒಬ್ಬ ವೃದ್ಧಿ ಇದ್ದಾಲೆ. ಅವಳ ಮತ್ತು ಲಾರೆನ್ಸ್‌ನ ನಡುವೆ ಏನೋ ಇತ್ತಂತೆ. ಕೆಲ ಅಮೆರಿಕನ್ ಪ್ರವಾಸಿಗರು ಆಕೆಯನ್ನು ಹೋಗಿ ನೋಡಿದ್ದೂ ಉಂಟು. ಲಾರೆನ್ಸ್ ಬಗ್ಗೆ ಕೇಳಲು  ಬೇಕಾದರೆ ನೀನೂ ಹೋಗಬಹುದು, ನಿನ್ನ ಬಳಿಯೂ ಮಾತಾಡಿಯಾಳು.’

ಈ ಇಳಿವಯಸ್ಸಿನ ಹೆಣ್ಣಿನಲ್ಲಿ ಲವಲವಿಕೆಯಿತ್ತು. ಗುಪ್ತವಾದದ್ದನ್ನು ಬಯಲಿಗೆಳೆಯುವ ಸಂಚುಗಾರನ ಖುಷಿಯೂ ಇತ್ತು. ಈಕೆಯನ್ನು ನೋಡು ನೋಡುತ್ತಿದ್ದಂತೆಯೇ ಲಾರೆನ್ಸಿನ ಕೆಲವು ಕಥೆಗಳಲ್ಲಿನ ಕೆಲ ಹೆಂಗಸರನ್ನು ಈಕೆಯಲ್ಲಿ ನಾನು ಕಂಡೆ. ಈಂಥ ಹೆಂಗಸರ ಸಂಚು, ಕಪಟ, ಜಗಳಗಂಟತನ, ಕಾರ್ಪಣ್ಯ, ಮಕ್ಕಳ ಮೇಲಿನ ಮೋಹ, ಗಂಡನ ಮೇಲಿನ ಸಿಟ್ಟು, ಜೊತೆ ತನ್ನ ದೇಹಕ್ಕೆ ಅಂಟಿಕೊಂಡ ಪ್ರೀತಿ -ಇವೆಲ್ಲನ್ನು ಕಾಣಿಸುತ್ತಲೇ, ಲಾರೆನ್ಸ್ ಈ ಯಾವುದೂ ಅಲ್ಲದ, ಆದರೆ ಒಳಗೆ ಅಡಗಿದ ಹೆಣ್ಣನ್ನು ಕಾಣಿಸುತ್ತಿದ್ದನು. “ಇಗೋ, ಕಾಣಲು ಇದು ವಜ್ರ” ಎಂದರೆ “ಅಲ್ಲ, ನಿಜದಲ್ಲಿ ಇದು ಇದ್ದಿಲು” “ಇ ಎನ್ನುವಂತೆ ವಜ್ರವನ್ನೂ ಇದ್ದಿಲನ್ನೂ ಒಟ್ಟಾಗಿಯೇ ಲಾರೆನ್ಸ್ ಅರಿಯುತ್ತಿದ್ದ. ‘ತನ್ನ ಅಹಂನಲ್ಲಿ ಹೆಣ್ಣು ತಾನು ಏನೆಂದು ತಿಳಿದುಕೊಳ್ಳುವಳೋ ಆ ಪಾತ್ರವನಲ್ಲ ನಾನು ಸೃಷ್ಟಿಸುತ್ತಿರುವುದು, ನಿಜದಲ್ಲಿ ಆಕೆ ಏನೋ ಅದನ್ನು ‘ ಎಂಬುದನ್ನು ಲಾರೆನ್ಸ್ ತನ್ನ ಬರಹಗಳಲ್ಲಿ ಸಾಧಿಸಿದ್ದ.

ಈ ಘಟನೆಯಿಂದ ನಾವು ಲೇಖಕರಾಗಿ ಕಲಿಯುವುದು ಇದೆ. ಲಾರೆನ್ಸಿನಂತಹ ದಾರ್ಶನಿಕವಾದ ಲೇಖಕನನ್ನೇ ಈ ಪ್ರಶ್ನೆ ಕಾಡಿದೆ ಎಂದರೆ ಹೆಚ್ಚು ವಾಸ್ತವ ಶೈಲಿಯಲ್ಲಿ ಬರೆಯುವ ಲೇಖಕರ ಪಾಡೇನು?…

ಕೃತಿಯ ಪ್ರತಿಯೊಂದು ಪಾತ್ರವೂ ಘಟನೆಯೂ ನಿಜಜೀವನದಲ್ಲಿ ಯಾರನ್ನೋ ಹೋಲಿರುತ್ತದೆ, ಅಥವಾ ಹಲವರ ಸಂಯೋಜಿತ ಚಿತ್ರವಾಗಿರುತ್ತದೆ, ನಮ್ಮ ಗಣಪತಿ ಮೂರ್ತಿಯಂತೆ. ಗಣಪತಿ ಹೆಚ್ಚು ಪಾಲು ಆನೆ, ನಿಜ. ಆದರೆ ಅವನ ಹೊಟ್ಟೆ ಗಮನಿಸಿ. ಅವನ ವಾಹನ ಗಮನಿಸಿ. ಇರುವುದನ್ನೇ ಸಂಯೋಜಿಸುವ ಅಥವಾ ಇರುವುದರಲ್ಲಿಯೇ ಹೊಸ ಸಂಬಂಧಗಳನ್ನು ಕಟ್ಟುವ/ ಕಾಣುವ ಕಲ್ಪನೆಯನ್ನೇ ನಾವು ಪ್ರತಿಭೇ ಎಂದು ಗುರುತಿಸುವುದು, ಹೇಳುವುದು. ಆದರೆ ಪಂಡಿತರು ಬಿಡುವುದಿಲ್ಲ. ಮೂಲದ ಬಗ್ಗೆಯೇ ಅವರಿಗೆ ತಣಿಯದ ಕುತೂಹಲ. ಪ್ರಖ್ಯಾತ ಲೇಖಕ ಜೇಮ್ಸ್ ಚಾಮ್ಸನ ಮಹಾ ಕಾದಂಬರಿ ‘ಯೂಲಿಸಿಸ್‌ನಲ್ಲಿನ ಪ್ರತಿಯೊಂದು ಪಾತ್ರ, ಘಟನೆಯನ್ನೂ ನಿಜ ಜೀವನದಲ್ಲಿ ಪಂಡಿತರು ಗುರುತಿಸಿಬಿಟ್ಟಿದ್ದಾರಂತೆ! ಬರಡು ವಿಚಾರವಾದಿ ಜಾರ್ಜ್ ಬರ್ನಾಡ್ ಶಾ, ಜಾಯ್ಸನ ಕಾದಂಬರಿ ಓದಿ “ಓ… ಡಬ್ಲಿನ್ ಹಿಂದೆ ಇದ್ದ ಹಾಗೆ ಈಗಲೂ ಇದೆ” ಎಂದು ಉದ್ಗಾರವೆತ್ತಿದನಂತೆ! ಸಾಹಿತ್ಯದ ಧ್ವನ್ಯರ್ಥಗಳಿಗೆ ಕಿವುಡನಾದ ಶಾ ‘ಯೂಲಿಸಿಸ್’ನಂತ ಆಧುನಿಕ ಮಹಾಪುರಾಣದಲ್ಲೂ ಕಂಡದ್ದು ಅಷ್ಟೇ, ಪಡೆದದ್ದೂ ಅಷ್ಟೇ, ಈ ಕೃತಿಯ ಧ್ವನ್ಯರ್ಥಗಳಿಗೆ ಆತ ತೆರೆದುಕೊಳ್ಳಲಿಲ್ಲ.

ಲಾರೆನ್ಸಿನ ದಾರ್ಶನಿಕ ಕಾದಂಬರಿಗಳಾದ ದಿ ರೈಂಬೊ, ವುಮೆನ್ ಇನ್ ಲವ್ ಓದಿದವರೂ ಕೂಡ ಅಲ್ಲಿ ಬರುವ ಹರ್ಮಿಯೋನ್ ಎಂಬ  ಪಾತ್ರವು ಆತನ ಗೆಳತಿಯಾದ  ಲೇಡಿ ಆಟೋಲಿನ್ ಮಾರನ್ ಎಂಬುವಳದ್ದು ಎಂದು ಹೇಳುವುದೂ ಉಂಟು; ಆಪ್ತ ಗೆಳತಿಯೊಬ್ಬಳನ್ನು ಹೀಗೆ ವ್ಯಂಗ್ಯಾರ್ಥಕ್ಕೆ ಗುರಿ ಮಾಡಿರುವುದು ಸರಿಯೇ ಎಂಬ ಪ್ರಶ್ನೆ ಕೆಲವರು ಎತ್ತಿರುವುದೂ ಉಂಟು. ಅಷ್ಟೇ ಅಲ್ಲ, ಲಾರೆನ್ಸ್ ತನ್ನ ಮತ್ತು ಮಿಡಲ್‌ನ್ ಮರ್ರಿ ನಡುವಿನ ಸಂಬಂಧವನ್ನೂ, ಆ ಸಂಬಂಧದೊಳಗೆ ಆಗುತ್ತಿದ್ದ ವ್ಯತ್ಯಾಸಗಳನ್ನು ಪ್ರತಿಬಿಂಬಿಸುವಂತೆ ಕೆಲವು ಪಾತ್ರಗಳನ್ನು ಸೃಷ್ಟಿಸಿದ್ದಾನೆ ಎಂದೂ ಹೇಳುತ್ತಾರೆ.

ಇವೆಲ್ಲವೂ ಒಟ್ಟಿನಲ್ಲಿ ಅಪ್ರಸ್ತುತ, ಅಪ್ರಯೋಜಕ. ಒಂದು ಕೃತಿಯನ್ನು ಓದುವಾಗ, ನಿಜಜೀವನದ ಒಬ್ಬ ವ್ಯಕ್ತಿಯೋ, ಘಟನೆಯೋ ಪದೇ ಪದೆ ನಮಗೆ ಎದುರಾದರೆ ಓದುವುದಕ್ಕೆ ಅಗತ್ಯವಾಗಿ ಬಏಕಾದ ಏಕಾಗ್ರತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. ಕೆಲವು ಕೃತಿಗಳು ಈ ಬಗೆಯ ಹಸಿನೆನಪುಗಳನ್ನು ಕಾಲದಲ್ಲೂ ದೇಶಲ್ಲೂ ದೂರವಾಗುತ್ತಾ ಹೋದಂತೆ ಕಾಲಾನುಕ್ರಮದಲ್ಲಿ ಕಳೆದುಕೊಳ್ಳುತ್ತದೆ.

ವಿವರಗಳಲ್ಲಿ ನೈಜವೆನ್ನಿಸುವ ವಿಶಿಷ್ಟತೆ, ಒಟ್ಟಂದದಲ್ಲಿ ಧ್ವನಿಪೂರ್ಣವಾದ ದಾರ್ಶನಿಕತೆ ಎರಡನ್ನೂ ತನ್ನ ಅಸ್ತಿತ್ವದಲ್ಲೇ ಪಡೆದುಕೊಂಡಿರುವ ಕಾದಂಬರಿ ಮಾಧ್ಯಮ ಇಂಥ ಸಮಸ್ಯೆಯಿಂದ ಎಂದೂ ತಪ್ಪಿಸಿಕೊಳ್ಳಲಾರದು. ಕಾದಂಬರಿ ಹುಟ್ಟಿರುವುದೇ ಪತ್ರಿಕೋದ್ಯಮ ಮತ್ತು ಕಾವ್ಯದ ಅಕ್ರಮ ಶಿಶುವಾಗಿ, ಅವರ ಸದ್ತನವೂ ಆಳವೂ ಇಂಥ ಬಗೆಯ ಹುಟ್ಟಿನಿಂದಲೇ ಅದು ಪಡೆದುಕೊಂಡಿರುವ ಗುಣಗಳು. ನಿಜಜೀವನದ ಕಥೆ ಮಾತ್ರವಾಗಿ ಒಂದು ಕೃತಿ ಅಮೂರ್ತ ಪಾತ್ರಗಳನ್ನು ಮಾತ್ರ ಪಡೆದುಕೊಂಡರೆ ಅದೊಂದು ಅಲಿಗರಿಯಾಗಿ ಬಿಡುತ್ತದೆ. ಅಲಿಗರಿಗಳು ಎಷ್ಟೇ ಜಾಣವಾಗಿದ್ದರೂ, ಚೆನ್ನಾಗಿದ್ದರೂ ರಕ್ತಮಾಂಸಗಳಿಂದ ಕೂಡಿದ ನೈಜತೆಯನ್ನು ಪಡೆಯುವುದೇ ಇಲ್ಲ. ಅಡಿಗರು, ಚಿತ್ತಾಲರಿಗೆ ಮುನ್ನುಡಿ ಬರೆಯುತ್ತ ‘ಮುಕ್ತ ಕಥೆಗಳು ಮತ್ತು ಬದ್ಧ ಕಥೆಗಳು’ ಎಂಬ ಹೆಸರುಗಳನ್ನು ಬಳಸಿರುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ನನ್ನನ್ನು ನಾನು ಸಂಪೂರ್ಣ ಒಪ್ಪಿಸಿಕೊಂಡು  ಬರೆದಿರುವ ಕೆಲವು ಕೃತಿಗಳಲ್ಲಿ ಒಂದು ಗುಣವನ್ನು ಕಂಡಿದ್ದೇನೆ. ಆ ಗುಣವಿದ್ದಲ್ಲಿ ಆತ್ರ ಅದು ನನ್ನ ಪಾಲಿಗೆ ನೈಜಕೃತಿಯಾಗುತ್ತದೆ. ನನಗೆ ಹೀಗೆ ನೈಜವೆನ್ನಿಸುವ ಕೃತಿಯು ಎಷ್ಟು ಒಳ್ಳೆಯ ಕೃತಿಯೆಂಬುದು ಸಹೃದಯರ ರಸಾನುಭವದ ತೀರ್ಮಾನಕ್ಕೆ ಬಿಟ್ಟದ್ದು. ಆದರೆ ನಾನು ಹೇಳುತ್ತಿರುವುದು ನಾನು ಬರೆದದ್ದು ನನಗೆ ಯಾವಾಗ ಸುಖವನ್ನು ಕೊಡುತ್ತದೆ ಎಂಬುದನ್ನು.

ವಾಲ್ಮೀಕಿಗೆ ಬ್ರಹ್ಮ, ‘ರಾಮಾಯಣ’ ಬರೆಯುವ ಮುನ್ನ ವರವನ್ನು ಕೊಡುತ್ತಾನೆ: ನಿನಗೆ ನಿನ್ನ ಕಾವ್ಯದ ಪಾತ್ರಗಳು ಆಪ್ತವಾಗಿ ಪರಸ್ಪರ ಹೇಲಿಕೊಂಡದ್ದೆಲ್ಲವೂ ತಿಳಿಯಲಿ. ಅಷ್ಟೇ ಅಲ್ಲ, ಯಾವ ಪಾತ್ರವೇ ಆಗಲಿ,  ತನ್ನ ತನ್ನಲ್ಲೇ ತನ್ನೊಳಗೆ ಹೇಳಿಕೊಂಡದ್ದೂ ನಿನಗೆ ಗೊತ್ತಾಗಲಿ; ಇದಕ್ಕೂ ದೊಡ್ಡಾದದ ವರವೆಂದು ನನಗನ್ನಿಸುವುದು ಬ್ರಹ್ಮ ಹೇಳುವ ಮುಂದಿನ ಈ ಮಾತು: ‘ನೀನು ಬರೆದದ್ದು ಕೇಳಸಿಕೊಂಡವರಿಗೆ ನಿಜ ಎನ್ನಿಸಲಿ’. ಕೊನೆಯ ಈ ವರವು ಎಲ್ಲ ಲೇಖಕರಿಗೂ ಎಲ್ಲ ಕೃತಿಗಳಲ್ಲೂ ಒಂದೇ ಪ್ರಮಾಣದಲ್ಲಿ ಪ್ರಾಪ್ತಿಯಾಗುವುದಿಲ್ಲ.

ನನ್ನ ಬಾಲ್ಯವನ್ನು ನಾನು ಕಳೆದದ್ದು ಒಂದು ಅಗ್ರಹಾರದಲ್ಲಿ. ಎಷ್ಟೋ ವರ್ಷಗಳ ನಂತರ, ಪರಮದೇಶದಲ್ಲಿದ್ದಾಗ, ನನ್ನಲ್ಲಿ ಅಜ್ಞಾತವಾಗಿ ಹುದುಗಿದ್ದ ಎಷ್ಟೋ ಚಿತ್ರಗಳು ನನ್ನ ಕಣ್ಣೆದುರು ದುತ್ತೆಂದು ನಿಂತುಕೊಂಡು ಬರೆಸಿಕೊಂಡವು. ಈ ಚಿತ್ರಗಳನ್ನೆಲ್ಲಾ ಏಕತ್ರ ಗ್ರಹಿಸಬಲ್ಲಂತಹ ಒಂದು ಥೀಮ್ ನನ್ನ ಮನಸ್ಸಿನಲ್ಲಿ ಮೊದಲೇ ಇತ್ತು. ಪರಿಣಾಮವಾಗಿ ಹುಟ್ಟಿದ ನನ್ನ ‘ಸಂಸ್ಕಾರ’ ಕಾದಂಬರಿ ಎರಡೂ ತುದಿಗಳಲ್ಲಿ ಯಾವ ಯಾವ ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟಿಸಿದೆ ಎಂಬುದನ್ನು ಈ ಮೊದಲು ಹೇಳಿದ್ದಕ್ಕೆಲ್ಲಾ ಸೂಕ್ತ ಉದಾಹರಣೆಯಾಗಿ ನಾನು ಕೊಡಲು ಬಯಸುತ್ತೇನೆ.

ಕೆಲವು ವರ್ಷಗಳ ಹಿಂದೆ, ನಾನು ಹುಟ್ಟಿ ಬೆಳೆದ ಅಗ್ರಹಾರಕ್ಕೆ ಹೋಗಿದ್ದೆ, ನೀರು ಸೇದುವಾಗ, ಬಟ್ಟೆ ಒಗೆಯುವಾಗ, ಹಪ್ಪಳ ಸಂಡಿಗೆ ಮಾಡುವಾಗ, ಹಾಡು ಹಸೆಗಳನ್ನು ಚಾವಡಿಯಲ್ಲಿ ಕುಳಿತು ಹಂಚಿಕೊಳ್ಳುವಾಗ ಇಂಥ ಸಂದರ್ಭಗಳಲ್ಲೆಲ್ಲಾ ನನ್ನನ್ನು ಹತ್ತಿರದಿಂದ ಬಲ್ಲವರಾಗಿದ್ದ ಆ ಅಗ್ರಹಾರದಲ್ಲಿ ಹೆಂಗಸರು ನನ್ನನ್ನು ಹಿಂದಿನ ಆಪ್ತತೆಯಿಂದ ಆದರೆ ಕೊಂಚ ಅನುಮಾನದಿಂದ, ಸ್ವಾಗತಿಸಿದರು. ಅವರ ಕಣ್ಣಿನಲ್ಲಿ ನಾನೀಗ ಬರಹಗಾರನಾಗಿ ಬಿಟ್ಟಿದ್ದರಿಂದ ಬದುಕಿನ ಒಂದು ಒಪ್ಪಂದವನ್ನು ಮುರಿದವನಂತೆ ಕಾಣಿಸಿದ್ದರಿಬೇಕು.

ಬಾಲಕನಾಗಿದ್ದಾಗ, ನನ್ನನ್ನು ಪ್ರೀತಿಯಿಂದ ಕಂಡಿದ್ದ ಈ ತಾಯಂದಿರಿಗೆ ಈಗ ಮುಚ್ಚಿಡಬೇಕಾದ್ದನೂ ಬಿಚ್ಚಿಡುವ ಲೇಖಕನಾದ ನಾನು ಂಕೋಚನ್ನುಂಉ ಮಾಡಿರಬೇಕು. ” ಮತ್ತೆ ಏನನ್ನು ನೋಡಿ ಬರೆಯಲೆಂದು ಬಂದೆ?” ಎಂದು ನನ್ನ  ಹಾಸ್ಯ ಮಾಡಿದರು. ಸಂಕೋಚ, ಮುಜುಗರ ಕಡಿಮೆಯಾಗುತ್ತಿದ್ದಂತೆ ನನ್ನ ಕಾದಂಬರಿಯ ಪ್ರತಿಯೊಂದು ಪಾತ್ರವನ್ನೂ ನಮ್ಮ ಊರಿನ ಕಡಿಮೆಯಾಗುತ್ತಿದ್ದಂತೆ ನನ್ನ ಕಾದಂಬರಿಯ ಪ್ರತಿಯೊಂದು ಪಾತ್ರವನ್ನೂ ನಮ್ಮ ಊರಿನ ಅವರಿಗೋ ಇವರಿಗೋ ಹೋಲಿಸಿ ನಕ್ಕರು. ಅವರಲ್ಲಿ ಹಲವರು ಈ ವೇಳೆಗಾಗಲೇ ಗತಿಸಿದ್ದರಿಂದ ಮನಸ್ಸಿನ ಈ ಧಾರಾಳವು ಆ ಹೆಂಗಸರಿಗೆ ಸುಲಭ ಸಾಧ್ಯವಾಗಿರಬೇಕು.

ಪ್ರತಿ ಪಾತ್ರದಲ್ಲೂ ಹೀಗೆ ವಿಶಿಷ್ಟವಾಗಿ ಕಂದ ನನ್ನ “ಸಂಸ್ಕಾರ” ದೇಶಕ್ಕೆ ದೂರವಾಗುತ್ತಿದ್ದಂತೆಯೇ ಹೇಗೆ ಹೆಚ್ಚು ಹೆಚ್ಚು ಅಮೂರ್ತವಾಗುತ್ತ ಹೋಗಿದೆ ಎಂಬುದು ನನಗೆ ಈಗಲೂ ಅಚ್ಚರಿಯ ಸಂಗತಿ. ನಮ್ಮ ಜಿಲ್ಲೆಯಲ್ಲಿ ‘ಸಂಸ್ಕಾರ’ ಕೃತಿಯು ಮಾಧ್ವರ ಮೇಲಿನ ಟೀಕೆಯಾಗಿ ಕಂಡರೆ, ನಮ್ಮ ದೇಶದಲ್ಲಿ ಅದು ಒಟ್ಟಾರೆ ಬ್ರಾಹ್ಮಣರ ಮೇಲಿನ ವ್ಯಂಗ್ಯವಾಗಿ ಕಂಡಿತು. ನಮ್ಮ ದೇಶದಿಂದ ದೂರವಿರುವ ನಯಪಾಲರಿಗೆ ಒಟ್ಟು ಹಿಂದೂ ಧರ್ಮದ ವಿಶ್ಲೇಷಣೆಯಾಗಿ ನನ್ನ ಕೃತಿ ಕಂಡರೆ, ಖ್ಯಾತ ಮನೋವಿಜ್ಞಾನಿ ಎರಿಕ್ ಎರಿಕ್‌ಸನ್‌ರಿಗೆ, ಶ್ರೇಷ್ಟ ನಿರ್ದೇಶಕ ಬರ್ಗ್‌ಮನ್‌ನಂತೆಯೇ ಮಧ್ಯವಯಸ್ಸಿನ ಮನಸ್ಸಿನ ಕ್ಷೋಭೆಯನ್ನು ಕುರಿತು ನಾನೂ ಬರೆಯುತ್ತಿದ್ದೇನೆ ಎನ್ನಿಸಿತು. ಹೀಗೆ ತನ್ನ ವಿವರಗಳ ವಿಶಿಷ್ಟತೆಯಲ್ಲಿ, ನಿಜವಾಗಿಯೂ ಬದುಕಿದ್ದ, ನಮ್ಮೊಡನೆ ಇದ್ದ ವ್ಯಕ್ತಿಗಳನ್ನು ಕೇವಲ ನೆನಪು ಮಾಡಿಕೊಡುವ ಕೃತಿಮಾತ್ರವಾಗಿ ‘ಸಂಸ್ಕಾರ’ನನ್ನೂರಿನ ಜನರ ಪಾಲಿಗೆ ಸೀಮಿತವಾಯಿತು. ಅವರು ಓದುವಾಗ ನಿಜವಾಗಿಯೂ ನನ್ನ ಕೃತಿಯನ್ನು ಓದಿಲ್ಲ, ಓದುತ್ತಿಲ್ಲ ಎಂದೇ ನಾನು ತಿಳಿದುಕೊಂಡಿದ್ದೇನೆ. ಆದರೆ ಕೃತಿಯ ಇನ್ನೊಂದು ತುದಿಯ ಧ್ವನಿಯನ್ನು ವಿಚಾರವಾಗಿ ಮಾತ್ರವಲ್ಲದೆ ವಿವರಗಳ ಮೂಲಕವೂ ಎರಿಕ್‌ಸನ್‌ರಂತೆ ಹಿಡಿದವನು ಕೃತಿಯ ಆಶಯಕ್ಕೆ ನಿಜವಾಗಿಯೂ  ಹತ್ತಿರವಾಗಿದ್ದಾನೆ.

ಯಾವಾಗಲೂ ಒಂದು ಕೃತಿ ತನ್ನ ವಿವರಗಳ ವಿಶಿಷ್ಟತೆಯಲ್ಲೂ, ಈ ವಿವರಗಳು ಒಟ್ಟಂದದಲ್ಲಿ ಬಿಟ್ಟು ಕೊಡುವ ಧ್ವನ್ಯರ್ಥದಲ್ಲೂ ಒಟ್ಟೊಟ್ಟಿಗೆ ಇರುತ್ತವೆ. ಹೀಗೆ ಇರಬೇಕಾಗಿರುವುದು ಕಾದಂಬರಿ ಮಾಧ್ಯಮದ ಅನಿವಾರ್ಯವಾದ ಪಾಡೂ ಹೌದು.