ಕೃಪಲಾನಿ ಜಿತೇಂದ್ರಿಯ ಯೋಗಿಯೂ ಅಲ್ಲ; ಅಧಿಕಾರ ಶಾಹೀ ‘ಕಾಮಿಸಾರ’ನೂ ಅಲ್ಲ. ತನಗಿಂತ ತುಂಬ ಕಿರಿಯವಳಾದ ಹೆಣ್ಣನ್ನು ಗಾಂಧಿ ಆಶ್ರಮದ ಹಲವರ ವಿರೋಧ ಎದುರಿಸಿ ಮದುವೆಯಾದವರು : ಅಂತೆಯೇ, ಸುಮಾರು ತನ್ನ ಅರ್ಧ ಆಯುಷ್ಯ ತಾನು ಕಟ್ಟಿ ಬೆಳೆಸಿದ ಕಾಂಗ್ರೆಸ್ಸಿಗರು ಅಧಿಕಾರ ಪಡೆದು ಕಾಮಿಸಾರಾರಾದಾಗ, ಅವರ ತೆವಲು ದರ್ಪಗಳು ನಿರಂಕುಶವಾಗದಂತೆ ಹದ್ದಿನಲ್ಲಿಡಲು ಪ್ರತಿಪಕ್ಷದವನಾಗಿಯೇ ಬದುಕಿ ಸತ್ತವರು. ಜನತಂತ್ರದ ಇಂಥ ಧೀಮಂತ ಮಿತ್ರನಾದ ಕೃಪಲಾನಿ ಸಾವಿನಿಂದ ಗಾಂಧಿಯುಗದ ಜೊತೆ ನಮಗಿದ್ದ ಕೊನೆಯ ಕೊಂಡಿ ಕಳಚಿದಂತೆ ಆಯಿತು; ಕೃಶವಾಗುತ್ತ ಹೋಗುತ್ತಿರುವ ರಾಷ್ಟ್ರದ ನೈತಿಕ ಪ್ರಜ್ಞೆಯನ್ನು ಜಾಗೃತವಾಗಿ ಇಡಲು ತನ್ನ ಕೊನೆ ಘಳಿಗೆಯ ತನಕ ಶ್ರಮಿಸುತ್ತಿದ್ದ ಇಡೀ ದೇಶದ ‘ದಾದಾ’ ಸತ್ತು ನಾವು ಸಣ್ಣವರಾದೆವು.

ಕೃಪಲಾನಿ ನೋಡಲೂ ಚೂಪು; ಅವರ ಮಾತೂ ಚೂಪು. ಜಡವಾದ ಬುರುಗು ಶಬ್ದಗಳೇ ಇಲ್ಲದ ಅವರ ಬರವಣಿಗೆ, ಅವರ ಖಡಾಖಂಡಿತ ಮಾತು – ಯಾವತ್ತೂ ಕೇವಲ ಜನಪ್ರಿಯತೆಗಾಗಿ ಆಶಿಸಿದಂತೆ, ಬಹುಮಂದಿಗೆ ಅಪ್ರಿಯವಾದ ನಿಲುವನ್ನು ತೆಗೆದುಕೊಳ್ಳಲು ಹಿಂಜರಿಯದಂತೆ ನಡೆಸಿದ ಅವರ ಜೀವನಕ್ರಮದ ಫಲವಾಗಿದ್ದವು. ನಿಷ್ಠುರವಾಗಿಲ್ಲದೇ ಪ್ರಾಮಾಣಿಕನಾಗಿರುವುದು ಸಾಧ್ಯವಿಲ್ಲ ಎಂಬುದನ್ನು ಕೃಪಲಾನಿಯವರ ಜೀವನ ಸಾರುತ್ತದೆ. ಇದನ್ನು ರಾಜಕೀಯಲ್ಲಿ ಸಾಧಿಸುವುದು ಸಾಹಿತ್ಯದಲ್ಲಿ ಸಾಧಿಸುವುದಕ್ಕಿಂತಲೂ ಹೆಚ್ಚು ಕಠಿಣವೆಂಬುದನ್ನು ಹೇಳುವುದು ಅನಗತ್ಯ. ಆದರೆ ಎರಡರಲ್ಲೂ ಈ ನಿಷ್ಠುರತೆ, ಉಪಯೋಗಿಸುವ ಭಾಷೆಯಲ್ಲೇ ನಿಚ್ಚಳವಾಗಿ ವ್ಯಕ್ತವಾಗುತ್ತದೆ ಎಂಬುದನ್ನು ನಾವು ಕೃಪಲಾನಿಯಲ್ಲಿ ಗಮನಿಸಬಹುದು.

ಮಾತಿನ ಹರಿತ ಮತ್ತು ಸ್ಪಷ್ಟತೆಯಲ್ಲಿ ಕೃಪಲಾನಿ ರಾಜಾಜಿಯವರನ್ನು ನೆನಪಿಗೆ ತರುತ್ತಿದ್ದರು. ರಾಜಾಜಿಯಂತೆ ಕೃಪಲಾನಿ ಚಾಣಾಕ್ಷರಲ್ಲದಿದ್ದರೂ, (ಅದೇ ಕೃಪಲಾನಿಯವರ ಹೆಚ್ಚುಗಾರಿಕೆಯೆಂದು ಹೇಳಬಹುದಾದರೂ) ಹಲವು ವಿಷಯಗಳಲ್ಲಿ ರಾಜಾಜಿಯಂತೆ ಅವರೂ ಸಂಪ್ರದಾಯವಾದಿಯಾಗಿದ್ದರು ಎನ್ನಬಹುದು. ಕೊನೆಯಲ್ಲಿ, ತಮಗಿಂತ ಕಿರಿಯರಾದ ಜಯಪ್ರಕಾಶರ ಜೊತೆಯಲ್ಲಿ ನಿಂತ ಕೃಪಲಾನಿ, ತುಸು ಭೋಳೆ ಸ್ವಭಾವದ ಲೋಕನಾಯಕನ ‘ಸಂಪೂರ್ಣ ಕ್ರಾಂತಿ’ ತತ್ತ್ವವನ್ನು ಒಪ್ಪಿಕೊಳ್ಳಲಿಲ್ಲ. ಒಗರಾದ ಮಾತು, ಒಳದನಿಯ ಶ್ರುತಿ ಕೆಡದೇ ಇರಲೆಂದು ಭಾವುಕವಾದ್ದನ್ನು ಓರೆಗಣ್ಣಿನಿಂದ ನೋಡುವ ಐರಾನಿಕ್ ದೃಷ್ಟಿ, ಕೃಪಲಾನಿಯನ್ನು ಭೋಳೆಯಾಗದಂತೆ ಕಾಪಾಡಿದವು; ಅಂತೆಯೇ ಅವರನ್ನು ಜನನಾಯಕನಾಗದಂತೆಯೂ ತಡೆದವು. ಇದನ್ನು ಕೂಡ ಕೃಪಲಾನಿಯ ಪ್ರಾಮಾಣಿಕತೆಯ ಸಾಧನೆಯೆಂದೇ ನಾವು ಕಾಣಬೇಕು. ಗಾಂಧೀಜಿಯ ಜನತಾ ಆಂದೋಳನವೂ ಈ ದೃಷ್ಟಿಯಿಂದ ಅನನ್ಯವಾದದ್ದು; ಯಾಕೆಂದರೆ ರಾಜಾಜಿ ಕೃಪಲಾನಿಯಂಥ ಜನರಿಗೂ ಅದರಲ್ಲಿ ಮಾನ್ಯತೆಯಿತ್ತು. ಕೃಪಲಾನಿಯಂಥವರನ್ನು ಸಹಿಸಲಾರದ್ದರಿಂದಲೇ ಕೇವಲ ಬೊಗಳೆಗಳು ಮಾತ್ರ ಮೆರೆದಾಡಬಲ್ಲ ನಮ್ಮ ಈ ಪಾಪ್ಯುಲಿಸ್ಟ್‌ಯುಗದ ಆಂದೋಳನಗಳು ವಿಕಾರಗೊಳ್ಳುತ್ತಿರುವುದು.

ಮಹಾರಾಜಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಚೂಪು ಮುಖದ, ಉದ್ದ ಕೂದಲಿನ ಇವರನ್ನು ನಾನು ಮೊದಲು ನೋಡಿದ್ದು, ಕೇಳಿಸಿಕೊಂಡದ್ದು. ಅವರ ದನಿಯಲ್ಲಿ ಯಾವ ಸುಳ್ಳು ಆರ್ತತೆಯೂ ಇರಲಿಲ್ಲವೆಂಬುದು ಅಂಥದಕ್ಕಾಗಿ ಹಾತೊರೆಯುತ್ತಿದ್ದ ಯುವಕರಿಗೆಲ್ಲ ನಿರಾಶೆಯನ್ನುಂಟುಮಾಡಿತು ಇದೇ ಹೇಳಬೇಕು. ೫೦ ರ ದಶಕದ ಪ್ರಾರಂಭದ ದಿನಗಳವು. ಸಭೆಗೆ ಮುನ್ನ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹಾಡಿಗೆ ನಾವೆಲ್ಲ ನಿಂತದ್ದು ಕೃಪಲಾನಿಯವರನ್ನು ಕೆರಳಿಸಿತು. “ಇದೇನು ನಿಮ್ಮದೊಂದು ಪರ‍್ಯಾಯ ರಾಷ್ಟ್ರಗೀತೆಯೋ?” ಎಂದು ಹಂಗಿಸಿದರು. ಗವರ್ನರ್ ಹುದ್ದೆಯ ಆಮಿಷಕ್ಕೆ ತಾನು ಬಲಿಯಾಗಬಹುದೆಂದು ತಿಳಿದಿದ್ದ ಸರ್ಕಾರವನ್ನು ಹೀಯಾಳಿಸಿದರು. ಪಾರ್ಲಿಮೆಂಟಿನಲ್ಲಿ ಒಮ್ಮೆ ಕೃಪಲಾನಿ “ಈ ಕಾಂಗ್ರೆಸ್ ಜನಕ್ಕೆ ಹಾಸ್ಯಪ್ರಜ್ಞೆ ಏನಾದರೂ ಇದ್ದಿದ್ದಲ್ಲಿ, ನನ್ನ ಮೂದಲಿಕೆಯಿಂದಲೇ ಅವರನ್ನು ನಾಶ ಮಾಡಿಬಿಡುತ್ತಿದ್ದೆ” ಎಂದಿದ್ದರು. ಭಾರತ – ಚೀನಾ ಘರ್ಷಣೆಯ ಸಮಯದಲ್ಲಿ ದೆಹಲಿಯಲ್ಲಿ ನಡೆದ ಒಂದು ಸಭೆ ನನಗೆ ನೆನಪಿಗೆ ಬರುತ್ತದೆ. ಜಯಪ್ರಕಾಶರ ಅಧ್ಯಕ್ಷತೆಯಲ್ಲಿ ನಡೆದ ಈ ಸಣ್ಣ ಸಭೆಯಲ್ಲಿ ಕೃಪಲಾನಿ ಎಷ್ಟು ಕಟುವಾಗಿ ಕೋಪದಲ್ಲಿ ಉರಿಯುತ್ತ ಮಾತಾಡಿದರೆಂದರೆ, ಭಾಷಣದ ಮಧ್ಯೆ ಜಯಪ್ರಕಾಶರು ಎದ್ದು ಬಂದು ಕೃಪಲಾನಿಯನ್ನು ಮೃದುವಾಗಿ “ದಾದಾ, ಅಷ್ಟು ಸಾಕು” ಎಂದು ಸಂತೈಸುತ್ತಾ ಕೂರಿಸಬೇಕಾಯಿತು. ಮತ್ತೆ ಜನತಾ ಸರ್ಕಾರ ನಿರ್ಮಾಣಗೊಂಡ ಹುರುಪಿನ ಭಾವುಕ ಬೃಹತ್ ಸಭೆಯಲ್ಲಿ – ದೆಹಲಿಯ ಮೈದಾನದಲ್ಲಿ – ಅಣಕದ ಧ್ವನಿಯಲ್ಲಿ ಕೃಪಲಾನಿ ಹೇಳಿದ ಮಾತುಗಳನ್ನು ಯಾರೂ ಅಂಥ ಸಭೆಯಲ್ಲಿ ನಿರೀಕ್ಷಿಸಿರಲಿಲ್ಲ : “ರಾಜಕಾರಣಿಗಳನ್ನು ಎಂದೂ ನಂಬಬೇಡಿ. ಗೌರವಿಸಬೇಡಿ. ಕಾಲು ಮುಟ್ಟಿ ನಮಸ್ಕರಿಸಿಕೊಳ್ಳಲು ಯಾವ ರಾಜಕಾರಣಿಯೂ ಅರ್ಹನಲ್ಲ” ಎಂದಿದ್ದರು. ಹೀಗೆ ಕಹಿಯಾಗಿ ನಿಷ್ಠುರವಾಗಿ ಎಲ್ಲವನ್ನೂ ನೋಡಬಲ್ಲಂಥ ವ್ಯಕ್ತಿಯೊಬ್ಬರು ಗಾಂಧೀಜಿಯ ನಾಯಕತ್ವವನ್ನು ತನ್ನ ವಿಮರ್ಶಾತ್ಮಕ ದೃಷ್ಟಿಯನ್ನು ಕಳೆದುಕೊಳ್ಳದಂತೆ ವಿನಯದ ಯೋಧನಾಗಿ ಒಪ್ಪಿಕೊಂಡಿದ್ದರು ಎಂಬುದು ಸೋಜಿಗದ ಸಂಗತಿಯೆ.

ಅವರ ಮಾತುಗಳೆಲ್ಲ ಹೀಗೇ ಕಟುವಾಗಿಯೇ ಇರುತ್ತಿದ್ದವು; ಯಾರಿಗೂ ಅದು ರುಚಿಸಬೇಕೆಂಬ ಹಂಗಿಲ್ಲದಂತೆ ಇರುತ್ತಿದ್ದವು. ಮೆಕ್ಕಾದಲ್ಲಿ ನಡೆದ ಘಟನೆಯೊಂದಕ್ಕೆ ಪ್ರತೀಕಾರವಾಗಿ ಹೈದರಾಬಾದಿನಲ್ಲಿ ಮುಸ್ಲಿಮರು ಎಸಗಿದ ಹಿಂಸಾಕಾರ್ಯವನ್ನು ಖಂಡಿಸುವ ಎದೆಗಾರಿಕೆ ಯಾರಿಗೂ ಇಲ್ಲದಿದ್ದಾಗ ಕೃಪಲಾನಿ ಆಡಿದ ಮಾತುಗಳು ಹೋದ ದಶಕದ ಮಹತ್ವದ ದಾಖಲೆಗಳಲ್ಲಿ ಒಂದು ಎಂದು ನಾನು ತಿಳಿದಿದ್ದೇನೆ. ತಮ್ಮ ಹಿಂಬಾಲಕನಿಗೆ ತಿಳುವಳಿಕೆ ಹೇಳಲಾರದ ಭ್ರಷ್ಟ ಮುಸ್ಲಿಂ ನಾಯಕರನ್ನು ಅವರು ಈ ಹೇಳಿಕೆಯಲ್ಲಿ ಟೀಕಿಸಿದರು. ಈಗಿನ ಪಾಕಿಸ್ತಾನವನ್ನೇ ತನ್ನ ತವರಾಗಿ ಪಡೆದ ಕೃಪಲಾನಿಗೆ ಮುಸ್ಲಿಂ ಜನಾಂಗದ ಬಗ್ಗೆ ಇದ್ದ ಕಳಕಳಿ ಜನಪ್ರಿಯತೆಗಾಗಿ ಹಂಬಲಿಸುವ ಯಾವ ಹಿಂದು ಅಥವಾ ಮುಸ್ಲಿಂ ನಾಯಕನಿಗು ಇರಲಿಲ್ಲ. ಆದ್ದರಿಂದಲೇ ಆರ್.ಎಸ್.ಎಸ್. ನಾಯಕರಾದ ಶ್ರೀ ದೇವರಸ್ ಆಡಲು ಹಿಂಜರಿಯಬಹುದಾಗಿದ್ದ ಮಾತುಗಳನ್ನು ಆಡಬಲ್ಲ ಅಧಿಕಾರವನ್ನು ಕೃಪಲಾನಿ ಸಂಪಾದಿಸಿಕೊಂಡಿದ್ದರು.

ಕೆಲವು ಸಂಗತಿಗಳಲ್ಲಿ ಕೃಪಲಾನಿ ಕನ್ಸರ್ವೆಟಿವ್  ಆಗಿದ್ದರು ಎಂದೆ. ಆದರೆ ಗೊಡ್ಡು ಸಂಪ್ರದಾಯವಾದಿಗಳ ಹಿನ್ನೋಟದ ಹಳಹಳಿಕೆಯ ರಾಜಕೀಯ ಕೃಪಲಾನಿಯದಲ್ಲ; ಮನುಷ್ಯನಿಗೆ ಮಿತಿಗಳಿವೆ; ನಡೆದು ಬಂದ ದಾರಿಯಿಂದ ನಾವು ಕಲಿಯಬೇಕಾದ್ದಿದೆ ಎಂಬ ವಿವೇಕದಿಂದ ಹುಟ್ಟುವ ಸಂಪ್ರದಾಯಶೀಲತೆ ಅವರದು. ನಮ್ಮ ಎಡಪಂಥೀಯರ ಅತ್ಯಂತ ದೊಡ್ಡ ದೌರ್ಬಲ್ಯವೆಂದರೆ ಅವರ ಬಾಯ್ಬಡುಕುತನ. ಸ್ವಾನುಭವದ ಪ್ರಾಮಾಣಿಕತೆಯನ್ನು ಬಿಟ್ಟು ಬಡಾಯಿಗಳಾಗಿ ಬಿಡುವ ಎಡಪಂಥೀಯರು ಕ್ರಮೇಣ ಚಾಳುಜಾಳಾದ ನುಡಿಕಟ್ಟುಗಳಲ್ಲಿ ಸಿಕ್ಕಿಬೀಳುತ್ತಾರೆ; ಅಮೂರ‍್ತ ತತ್ವಗಳಿಗೆ ದಾಸರಾಗಿಬಿಡುತ್ತಾರೆ. ಜನತೆಯ ಸ್ವಾತಂತ್ರ‍್ಯವನ್ನು ನೆಹರೂ ಮನೆತನ ಕ್ರಮೇಣ ಕಿತ್ತುಕೊಳ್ಳುತ್ತ ಹೋದೀತೆಂಬುದನ್ನು ಸಿ.ಪಿ.ಐ. ತಿಳಿಯಲೇ ಇಲ್ಲ; ಆದರೆ ಕೃಪಲಾನಿ, ರಾಜಾಜಿಯಂಥವರಿಗೆ ಅದು ಗೊತ್ತಿತ್ತು. ಎಡಪಂಥೀಯರಲ್ಲಿ ಸ್ವಾತಂತ್ರ‍್ಯ ಬಂದ ಪ್ರಾರಂಭದಲ್ಲೇ ಇದನ್ನು ತಿಳಿದಿದ್ದವರೆಂದರೆ ಲೋಹಿಯಾ ಒಬ್ಬರೇ. ಆದ್ದರಿಂದಲೇ ಪ್ರಾಯಶಃ ಲೋಹಿಯಾಗೆ ಕೃಪಲಾನಿ ‘ದಾದಾ’ ಆಗಿದ್ದರು. ರಾಜಾಜಿ ತಂದೆಯ ಹಿರಿತನ ಪಡೆದವರಂತೆ ಕಂಡಿದ್ದರು. ಭಾರತದಲ್ಲಿ ನಾವು ಬಲಪಂಥೀಯರೆಂದು ತಿಳಿಯುವ ಇಂಥ ಜನ ವಿಲಕ್ಷಣ ವ್ಯಕ್ತಿಗಳಾಗಿರುತ್ತಾರೆ. ಖಾಸಗಿ ಆಸ್ತಿ, ರಾಷ್ಟ್ರೀಕರಣ – ಇಂಥ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಕೂಡದು ಎಂಬುದರಲ್ಲಿ ಇವರದು ಮೊಂಡು ಹಠ (ಉದಾಹರಣೆಗೆ ನಮ್ಮವರೇ ಆದ ಕಾರಂತರು ಅಂಥವರೇ). ಆದರೆ ಮನುಷ್ಯನ ಘನತೆ, ಸ್ವಾತಂತ್ರ‍್ಯ – ಇಂಥ ವಿಷಯಗಳಲ್ಲಿ ಇವರ ನಿಲುವು ದೃಢವಾದ್ದು, ಅಚಲವಾದ್ದು. ಹಾಗೆಯೇ ಆಸ್ತಿಯ ವಿಷಯದಲ್ಲಿ ಅತ್ಯಂತ ಕ್ರಾಂತಿಕಾರಿಯಾಗಿ ಯೋಚಿಸುವ ಎಡಪಂಥೀಯರು ತಮ್ಮ ತತ್ತ್ವದ ಮಬ್ಬಿನಲ್ಲಿ ಮನುಷ್ಯನ ಘನತೆ ಕಳೆದುಹೋಗುವುದನ್ನು ಕಾಣಲಾರದ ಜನರಾಗಿ ಬಿಡುವುದುಂಟು. ಇದೊಂದು ವಿಪರ‍್ಯಾಸ. ಆದರೆ ಡಾಂಗೆ, ಸ್ಟಾಲಿ‌ನ್, ಕೃಪಲಾನಿ – ಇವರ ನಡುವೆ ನಾನು ಆಯುವುದು ಕೃಪಲಾನಿಯನ್ನು.

ನಮಗಿರುವ ಭರವಸೆಯಿಂದ ಗಾಂಧೀವಾದದಲ್ಲಿ ಕೃಪಲಾನಿ ಜೊತೆ ಲೋಹಿಯಾ ಕೂಡ ಇರುವುದು ಸಾಧ್ಯವೆಂಬುದು; ವಿಕೇಂದ್ರಿಕರಣಕ್ಕೆ ಬದ್ಧವಾದ ನಿಲುವುಗಳಲ್ಲಿ ಇರುವ ವಿರೋಧಗಳು ಅಪರಿಹಾರ‍್ಯವಲ್ಲ ಎಂಬುದು. ಆದರೆ ಗಾಂಧೀವಾದದ ಅಣಕವಾದ ವಿನೋಬಾಜೀ, ಲೋಹಿಯಾವಾದದ ಅಣಕವಾದ ರಾಜ್‌ನಾರಾಯಣ್ ಹಾಗೂ ಮಧ್ಯಮಜಾತಿಗಳ ಹಿತವನ್ನು ಮಾತ್ರ ಬೆಂಬಲಿಸುವ ನಮ್ಮ ಕನ್ನಡದ ಕೆಲವು ಲೋಹಿಯಾ ವಾದಿಗಳು, ಮಾರ್ಕ್ಸ್‌ವಾದವನ್ನು ವಿಕಾರಗೊಳಿಸಿದ ಕಮ್ಯೂನಿಸ್ಟ್ ದೇಶಗಳ ಸಾಮ್ರಾಟರು, ವ್ಯಕ್ತಿವಾದದ ಸೋಗಿನಲ್ಲಿ ಭೀಕರವಾದ ಶೋಷಣೆಯನ್ನು, ಅಸಮಾನತೆಗಳನ್ನು, ನಿಸರ್ಗವನ್ನೇ ನಾಶಮಾಡಬಲ್ಲ ಪಿಪಾಸೆಯನ್ನು ಹುಟ್ಟು ಹಾಕುತ್ತಿರುವ ಅಮೆರಿಕನ್ ಬಂಡವಾಳಶಾಹಿ – ಇಂಥ ಕ್ರೂರಸತ್ಯಗಳ ನಡುವೆ ಕೇವಲ ತಾತ್ತ್ವಿಕ ಆಯ್ಕೆಗಳೂ ಅಸಂಬದ್ಧವೆಂದು ತೋರುತ್ತವೆ. ಸದಾ ಎಚ್ಚರವಾಗಿರುವ ನೈತಿಕಪ್ರಜ್ಞೆ, ಮೂರ‍್ತ ಕ್ರಿಯೆಯಲ್ಲಿ ಮಾತ್ರ ಜೀವಂತವಾಗಿರಬಲ್ಲ ಮಾನವಪ್ರೀತಿ, ಈ ಮಾನವ ಪ್ರೀತಿಗೇ ಅಗತ್ಯವಾದ ಮೃಗ-ಸಸ್ಯ ಪರಿಸರದ ಪ್ರೇಮ. ಇವುಗಳ ಅನಿವಾರ್ಯತೆಯನ್ನು ಮರೆಸುವ ಯಾವ ತಾತ್ತ್ವಿಕತೆಯಿಂದಲೂ ಪ್ರಯೋಜನವಿಲ್ಲ ವೆಂಬುದನ್ನು ನಮಗೆ ಕೃಪಲಾನಿಯಂಥವರು ಕಲಿಸುತ್ತಾರೆ.

ಜಾರ್ಜ್‌‌ಫರ್ನಾಂಡೀಸರು The Other Side ಪತ್ರಿಕೆಯ ತಮ್ಮ ಸಂಪಾದಕೀಯದಲ್ಲಿ (ಏಪ್ರಿಲ್, ೧೯೮೨) ಕೃಪಲಾನಿ ಬಗ್ಗೆ ಬರೆದ ಕೆಲವು ಮಾತುಗಳು ನನ್ನನ್ನು ಕಲಕಿದುವು. ನಾನು ಮೆಚ್ಚುವ ರಾಜಕಾರಣಿಗಳಲ್ಲಿ ಒಬ್ಬರಾದ ಜಾರ್ಜರ ಜನತಾ ಸರ್ಕಾರದ ಕಾಲದ ಅಪ್ರಬುದ್ಧ ಕ್ರಿಯೆಗಳಿಂದ ಬೇಸರಪಟ್ಟಿದ್ದ ನನ್ನಂಥವರಿಗೆ ಈ ಸಂಪಾದಕೀಯದ ಕೆಲವು ಒಳನೋಟಗಳು ಜಾರ್ಜರ ಬಗ್ಗೆ ಮತ್ತೆ ಆಪ್ತಭಾವನೆಯನ್ನು ಬೆಳೆಸುವಂಥವಾಗಿವೆ. ಕೃಪಲಾನಿ ಸಾಯುವ ೭ ವಾರಗಳ ಮುಂಚೆ ಜಾರ್ಜ್, ಅವರನ್ನು ಭೇಟಿಯಾದರು. ಕೃಪಲಾನಿಯವರು ಕೋಲೋಸ್ವಮಿ ಎಂಬ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ಅವರ ಮಲವನ್ನು ಶೇಖರಿಸಲೆಂದಿದ್ದ ಹೊಟ್ಟೆಯ ಹೊರಗಿನ ಚೀಲ – ಎರಡು ಗಂಟೆಯೊಳಗೆ ಒಮ್ಮೆ ಶುಚಿ ಮಾಡಬೇಕಾದ ಚೀಲ – ತುಂಬಿದ್ದರಿಂದಲೋ ಏನೋ, ಅಸಹನೀಯವಾಗಿ ಇಡೀ ಕೋಣೆ ನಾರುತ್ತಿತ್ತಂತೆ. ಆದರೂ ದಾದಾ ರಾಷ್ಟ್ರದ ಬಗ್ಗೆ ಕಳಕಳಿಯಿಂದ ಮಾತಾಡುತ್ತಿದ್ದರಂತೆ. ಯಾವ ಪ್ರಾಮಾಣಿಕ ಉತ್ತರವನ್ನೂ ಕೊಡಲಾರದ ನಿಸ್ಸಹಾಯಕತೆಯಲ್ಲಿ ಜಾರ್ಜ್ ಈ ಪ್ರಶ್ನೆಗಳನ್ನು ಎದುರಿಸಬೇಕಾಯಿತು.

ಯಾಕೆ ವಿರೋಧ ಪಕ್ಷಗಳು ಒಟ್ಟಾಗುತ್ತಿಲ್ಲ? ಆಸೆಬುರುಕ ಮುದುಕರನ್ನು ಕಡೆಗಣಿಸಿ ಯುವಕರೆಲ್ಲರೂ ಬೇರೆ ಏನಾದರೂ ಮಾಡಬಾರದೇ? ತಾನೇ ಪ್ರಧಾನಿಯಾಗಿ ಆರಿಸಿದ್ದ ಮೊರಾರ್ಜಿಯಲ್ಲಿ ಕೃಪಲಾನಿ ಭ್ರಮನಿರಸನರಾಗಿದ್ದರು. ಕೊನೆಗಾಲದಲ್ಲಿ ಈ ವಯೋವೃದ್ಧ ಆಚಾರ್ಯ ತೀರಾ ಒಂಟಿಯಾಗಿಬಿಟ್ಟಿದ್ದರು. ಕೃಪಲಾನಿಯವರ ಅಂತ್ಯಸಂಸ್ಕಾರದಲ್ಲಿ ಹಾಜರಿದ್ದವರು ಸುಮಾರು ಐನೂರು ಜನ ಮಾತ್ರ – ಇವರಲ್ಲಿ ಸಬರಮತಿ ಆಶ್ರಮದ ನೂರೈವತ್ತು ಹುಡುಗಿಯರೂ ಸೇರಿದ್ದರು. ಜಾರ್ಜ್‌ಬರೆಯುತ್ತಾರೆ: ‘’ತಮ್ಮ ಕೊನೆಯ ಪ್ರಣಾಮ ಅರ್ಪಿಸಲು ಇನ್ನೂ ಹೆಚ್ಚು ಜನ ಬರದೇ ಇರಲು ಕಾರಣ ಕೃಪಲಾನಿಯ ದೀರ್ಘ ಆಯುಷ್ಯವೇ, ಅಥವಾ ಸಾರ್ವಜನಿಕ ಸ್ಮೃತಿಯೇ ಕ್ಷೀಣವಾದ್ದು ಎಂಬುದೇ? ಪ್ರಾಯಶಃ ಈ ಎರಡೂ ಅಲ್ಲ. ದಾದಾ ಅವರು ಪ್ರತಿನಿಧಿಸಿದ್ದ ಮೌಲ್ಯಗಳು ಆದರ್ಶಗಳೂ ಈಗಿನವರಿಗೆ ಅರ್ಥಹೀನವಾಗಿ ಬಿಟ್ಟಿರಬಹುದು ಎನಿಸುತ್ತದೆ. ಸತ್ಯ ಹೇಳುವುದಾದರೆ, ಅವೀಗ ನಶಿಸಿಹೋಗಿವೆ. ರಾಷ್ಟ್ರದ ಬದುಕಿನಲ್ಲಿ ಮಹತ್ವವಾದುದನ್ನು ಪ್ರತಿನಿಧಿಸಿದವನೊಬ್ಬನ ಸಾವಿನಿಂದ ಜನ ದುಃಖತಪ್ತರಾಗುತ್ತಿದ್ದ ಕಾಲ ಮುಗಿದುಹೋಗಿದೆ. ಜನರು ಈಗ ಶೋಕಿಸುವುದು ನಷ್ಟ ವೈಯಕ್ತಿಕವಾಗಿದ್ದಾಗ ಮಾತ್ರ. ಕೃಪಲಾನಿ ಸಾಯುವುದಕ್ಕಿಂತ ಕೆಲವು ದಿನಗಳ ಮುಂಚೆ ಮೃತನಾದ ಢಕಾಯಿತ ಛಾಭೀ ರಾಮನ… ಬುಲೆಟ್‌ಗಳಿಂದ ತೂತಾದ ಶವದ ಗೌರವಾರ್ಥ ಒಂದು ಲಕ್ಷ ಜನರಾದರೂ ನೆರೆದಿದ್ದರಂತೆ. ಅವನ ಅಂತ್ಯಕ್ರಿಯೆಯನ್ನು ಸರಿಯಾಗಿ ನಡೆಸಲು ಪೊಲೀಸರು ಅವಕಾಶವಿತ್ತಿದ್ದ ಪಕ್ಷದಲ್ಲಿ ಇದಕ್ಕೂ ಐದು ಪಟ್ಟು ಹೆಚ್ಚು ಜನರಾದರೂ ಸೇರಿ ಅವನಿಗೆ ತಮ್ಮ ಅಂತ್ಯಗೌರವ ಸಮರ‍್ಪಿಸುತ್ತಿದ್ದರೆಂದು ನಾನು ಕೇಳಿದ್ದೇನೆ. ಅಂದರೆ ಇದರ ಅರ್ಥ ಛಾಭೀರಾಮನು ಕೃಪಲಾನಿಗಿಂತ ಹೆಚ್ಚು ಜನರಿಗೆ ಹೆಚ್ಚು ಸಮೀಪವಾದ ಅರ್ಥವಂತಿಕೆಯನ್ನು ಪಡೆದುಕೊಂಡಿದ್ದ ಎಂಬುದು… ಮಹಾತ್ಮಾಗಾಂಧಿಯ ಭಾರತ ಸ್ತತಿದೆ. ಶ್ರೀಮತಿ ಗಾಂಧಿಯ ಗತಿಸಿದ ಮಗ ಬಲಪಡಿಸಿ  ಬೆಳೆಸಿದ ಭಾರತದ ಮಾಫಿಯಾ ಸಂಸ್ಕೃತಿಯ ಪ್ರತಿನಿಧಿ ಛಾಭೀರಾಮ್. ಈ ಬಗೆಯ ಸಂಸ್ಕೃತಿಯಲ್ಲಿ ಕೃಪಲಾನಿ ಒಬ್ಬ ಅಸಂಗತ ವ್ಯಕ್ತಿ.”

ಜಾರ್ಜ್ ವ್ಯಕ್ತಪಡಿಸುವ ಈ ವಿಷಾದ ರಾಜಕೀಯದಲ್ಲಿ ತೊಡಗಿದವರಲ್ಲಿ ಒಂದು ಬಗೆಯ ನೆಮ್ಮದಿಯನ್ನೋ ಅಥವಾ ಏನು ಮಾಡಲೂ ಸಾಧ್ಯವಿಲ್ಲೆಂಬ ಸಿನಿಕತನವನ್ನೋ ತಂದುಬಿಡಬಹುದು. ಅದಕ್ಕಿಂತ ದೊಡ್ಡ ಅಪಾಯ ಬೇರೊಂದಿಲ್ಲ.

ರುಜುವಾತು , ೧೯೮೨.

* * *