ಸದ್ಯದ ಮೂಡನ್ನು ಅವಲಂಬಿಸಿ ನಾವು ಭಾರತದ ಸಂಸ್ಕೃತಿಯನ್ನು ಕುರಿತಂತೆ ಧೋರಣೆಯ ಮಾತುಗಳನ್ನಾಡಿಬಿಡುವುದೇ ಹೆಚ್ಚು; ಒಂದೋ ಸಿನಿಕರಂತೆ ಅಥವಾ ಭೋಳೆಗಳಂತೆ. ಸದ್ಯದಲ್ಲಿ ನಮ್ಮ ಎದುರಾಳಿ ಯಾರು ಎಂಬ ಅರಿವಿನಿಂದಲೂ ಈ ಮೂಡು ನಿರ್ಧರಿಸಲ್ಪಡುತ್ತದೆ. ನಿದರ್ಶನವಾಗಿ ಕೇರಳದಲ್ಲಿ ನಡೆದ ಸಂಕಿರಣವೊಂದರ ಅನುಭವ ಹೇಳುವೆ : ಗತಿಸಿದ ಶ್ರೀ ದೀನ್‌ದಯಾಳ್ ಉಪಾಧ್ಯಾಯರ ಶಿಷ್ಯರೊಬ್ಬರು ಹಿಂದೂ ಸಂಸ್ಕೃತಿಯ ಪ್ರಾಚೀನ ಮೌಲ್ಯಗಳಿಗೆ ನಾವು ಹಿಂದಿರುಗಬೇಕೆಂದೂ, ರಾಜಕೀಯ ಆಧ್ಯಾತ್ಮಿಕವಾಗಬೇಕೆಂದೂ ಉಬ್ಬಿದ ಪದಪುಂಜಗಳಲ್ಲಿ ಯಥಾಪ್ರಕಾರವೆನ್ನಿಸುವ ವಾದ ಮಂಡಿಸಿದರು. ಅವರ ಪುನರುತ್ಥಾನದ ಭಾವುಕತೆಗೆ ನಿಲುಕುತ್ತಿದ್ದುದು ಶಿವಾಜಿ ಕಾಲದ ನಂತರ ಇತಿಹಾಸ ಮಾತ್ರ. ಈ ಬಗೆಯ ಮನಸ್ಸಿಗೆ ತನ್ನ ಸ್ಮೃತಿ ಇನ್ನೂ ಹಿಂದೆ ಹೋಗಿ ಯಾಜ್ಞವಲ್ಕ್ಯನ ಕಳವಳದಿಂದ ಹುಟ್ಟಿದ ಬೌದ್ಧಿಕ ಶೋಧವನ್ನು ಈ ಕಾಲಕ್ಕೂ ಅನ್ವಯಿಸುವಂತೆ ಅರಿಯಬೇಕೆಂಬ ತುರ್ತು ಇದ್ದಂತೆ ನನಗೆ ತೋರಲಿಲ್ಲ. ನಮ್ಮ ಹಿಂದನ್ನು ಚಿಂತಿಸುವಾಗ ಗರ್ವವಾಗಲೀ, ಆರಾಧನಾಭಾವವಾಗಲೀ, ರಸಿಕತೆಯಾಗಲೀ, ರಾಜಕೀಯ ಯುಕ್ತಿಯಾಗಲೀ ನಮ್ಮ ಚಿಂತನಾಕ್ರಮವನ್ನೇ ನಿರ್ದೇಶಿಸತೊಡಗಿದಾಗ ಅವುಗಳಿಂದ ಹುಟ್ಟುವ ಮಾತುಗಳ ಸುಖದಲ್ಲಿ ನಾವು ಮೈ ಮರೆಯುತ್ತೇವೆ. ಅಷ್ಟಕ್ಕೆ ಕೃತಾರ್ಥರಾದೆವೆಂಬ ಭ್ರಮೆಯಲ್ಲಿ ನಮ್ಮನ್ನೇ ನಾವು ಮೆರೆದುಕೊಂಡುಬಿಡುತ್ತೇವೆ. ಉಬ್ಬು ಮಾತು, ಉಕ್ಕುವ ಧ್ವನಿ, ಗದ್ಗದ ಕಂಠ – ಸದ್ಯದ ಬಿಕ್ಕಟ್ಟುಗಳನ್ನು ಮರೆಸಲು ಇವು ನೆರವಾಗುತ್ತವೆ. ರಸಿಕಭಾವದಿಂದ ಹಿಂದಿನ ವೈಭವವನ್ನು ಆಸ್ವಾದಿಸುವುದು, ಹೀಗೆ ಆಸ್ವಾದಿಸುತ್ತಿರುವ ಸಂದರ್ಭದಲ್ಲಿ ಹಿಗ್ಗುವುದು ಅಪ್ಯಾಯಮಾನವಾದ್ದು. “ಯುದ್ಭಾವಂ ತದ್ಭವತಿ” – ತಾನು ಭಾವಿಸಿದಂತೆ ಸತ್ಯವೂ ಇದೆ ಎಂದುಕೊಳ್ಳುವುದು ಆಸ್ವಾದವೇ ಮುಖ್ಯ ಗುರಿಯಾದ ರಸಿಕದೃಷ್ಟಿ ಅರಿಯುವ ಕ್ರಮ. ಇಂಗ್ಲಿಷ್ ಶಬ್ದವಾದ ‘ಏಸ್ತೇಟ್’ ಅಂಥ ಪ್ರವೃತ್ತಿಯಲ್ಲಿನ ಉಚ್ಚ-ಹೀನ ಅಂಶಗಳೆರಡನ್ನೂ ಧ್ವನಿಸುತ್ತದೆ. ಭಾರತೀಯರಾದ ನಾವು ‘ಪ್ರಾಚೀನ’ದ ರಸಿಕರಾಗಿರುವುದೇ ಹೆಚ್ಚಾದ್ದರಿಂದ ಪ್ರಾಚೀನವನ್ನು ಇಂದಿಗೂ ಹೇಗೆ ಎಷ್ಟು ಉಪಯುಕ್ತವೆಂದು ಕಾರಣಲಾರದವರಾಗಿದ್ದೇವೆ. ಪ್ರಾಚೀನದಿಂದ ಹಿಗ್ಗುವ ಸಂಭ್ರಮದಲ್ಲಿ ನಾವು ಇಂದಿನ ಹಲವು ಹೊಲಸುಗಳನ್ನು ಕಡೆಗಣಿಸುತ್ತೇವೆ. ನಮ್ಮನ್ನು ಪೀಡಿಸುತ್ತಿರುವ ಇಂದಿನ ಸಮಸ್ಯೆಗಳು ಅಗಾಧವಾದುವು. ಅವುಗಳಲ್ಲಿ ಕೆಲವು ಪ್ರಾಚೀನಕ್ಕೂ ಚಾಚಿದಂತವು – ಎಲ್ಲವೂ ಒಂದಕ್ಕೊಂದು ಸಂಬಂಧಿಗಳು ಕೂಡ. ಅಸ್ಪೃಶ್ಯತೆ, ಹರಿಜನರನ್ನು ಸಜೀವ ಸುಡುವುದು, ಉಚ್ಚೆವಾಸನೆಯಿಂದ ಅಹಸ್ಯವಾದೆಡೆಗಳಲ್ಲಿ ಅಮೃತಶಿಲೆಯ ಮನೆಗಳನ್ನು ಕಟ್ಟುವುದು, ಶ್ರೀಮಂತರ ಅಟ್ಟಹಾಸ, ಉನ್ನತ ಪದವಿಯಲ್ಲಿರುವವರ ಭ್ರಷ್ಟಾಚಾರ. ಈ ಭ್ರಷ್ಟಾಚಾರಗಳನ್ನು ಅಗತ್ಯಗೊಳಿಸುವ ಪ್ರೇಮವಿಲ್ಲದ ಅದ್ಧೂರಿ ಮದುವೆಗಳು, ಯಾಂತ್ರಿಕ ಧರ್ಮಾಚರಣೆಗಳು, ಕಣ್ಣಿಗೆ ಅಸಹ್ಯವಾದ ಸಿಮೆಂಟ್ ಮನೆಗಳು, ಹಾದಿಬೀದಿಗಳಲ್ಲಿ ಧುತ್ತೆಂದು ತಲೆ ಎತ್ತುವ ಕ್ರೌರ್ಯ, ಮತದ್ವೇಷದಲ್ಲಿ ಮಕ್ಕಳನ್ನೂ, ಹೆಂಗಸರನ್ನೂ ಕೊಲ್ಲುವುದು, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಅಫೀಸು ಕಚೇರಿಗಳಲ್ಲಿ ಸಜ್ಜನಿಕೆಯ ಅಭಾವ – ಇವೆಲ್ಲವೂ ನಮ್ಮ ಪ್ರಸ್ತುತದ ಚಿತ್ರಗಳೇ. ನಾವು ಉಬ್ಬುವಾಗೆಲ್ಲ ಇವೆಲ್ಲವನ್ನೂ ಮನಸ್ಸಿನಿಂದ ತಳ್ಳಿಬಿಟ್ಟಿರುತ್ತೇವೆ. ಇಂಥ ವಾಸ್ತವಗಳಿಗೆ ಪ್ರತಿಕ್ರಿಯಿಸುತ್ತಲೇ ಪ್ರಾಚೀನ ಸಂಸ್ಕೃತಿಗೆ ಸ್ಪಂದಿಸಿದ್ಧ ಗಾಂಧೀಜಿಯವರ ವ್ಯಕ್ತಿತ್ವ ಮಾತ್ರ ಕೇವಲ ರಸಿಕನದೋ, ಭಕ್ತನದೋ, ಆರಾಧನಕನದೋ, ಸಿನಿಕನದೋ ಆಗದೇ ಹೋಯಿತು. ಪಾಶ್ಚಾತ್ಯರ ಆಧುನಿಕ ಸಂಸ್ಕೃತಿಯನ್ನು ಅವರು ಟೀಕಿಸುವಾಗಲೂ, ಅದಕ್ಕೆ ನಾವ್ಯಾಕೆ ಮನಸೋತೆವೆಂಬುದನ್ನು ಚಿಂತಿಸಿದರು. ನಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ನೈಜ ಪ್ರತಿರೋಧಕ ಶಕ್ತಿಯುಳ್ಳ ಅಂಶಗಳನ್ನು ನಿತ್ಯಜೀವನದ ಪ್ರಸ್ತುತದಲ್ಲೇ ಅವು ಸಜೀವವಾಗಿ ಉಳಿದಲ್ಲಿ ಹುಡುಕಿದರು : ತಾಯಿಯಿಂದ ಸತ್ಯಾಗ್ರಹ ಕಲಿತರು; ಇನ್ನೇನು ಗೆದ್ದಲು ಹತ್ತಬಹುದಾಗಿದ್ದ ಚರಕಾವನ್ನು ಹಳ್ಳಿ ಹಳ್ಳಿ ಅಲೆದು ಹುಡುಕಿ ಚಾಲೂ ಮಾಡಿದರು. ರಾಮಸ್ಮರಣೆಗೆ ಸ್ವರಾಜ್ಯ ಉಸಿರು ತುಂಬಿದರು. ಅಂದರೆ ಪ್ರಾಚೀನಕ್ಕೆ ನಾವು ಋಷಿ/ಸಂತರಂತೆ ಸ್ಪಂದಿಸುತ್ತೇವೆಯೋ, ರಾಜಕಾರಣಿಯಂತೆಯೋ, ಅಥವಾ ರಸಿಕರಂತೆಯೋ ಎಂಬುದು ನಮ್ಮ ಸದ್ಯದ ಸ್ಥಿತಿ ಎಷ್ಟು ನಮ್ಮನ್ನು ಬಾಧಿಸುತ್ತಿದೆ ಎಂಬುದರಿಂದ ನಿರ್ಣಯಿತವಾಗುತ್ತದೆ. ಸ್ಮೃತಿ ಸತತವೆಂಬಂತೆ ಈ ನಮ್ಮ ಪ್ರಸ್ತುತದಲ್ಲೂ ಹರಿಯಬೇಕೆಂದು ಋಷಿ/ಸಂತರ ಅಪೇಕ್ಷೆಯಾಗಿರುತ್ತದೆ. ರಾಜಕಾರಣಿಗೆ ನಮ್ಮ ಪೂರ್ವಿಕರು ಕೇವಲ ದಾಳಗಳು; ರಸಿಕರಿಗೆ ಅವರು ಪ್ರಾಚೀನದ ರಂಜಕ ಚೌಕಟ್ಟಿನಲ್ಲಿ ಮೆರೆಯುವ ಚಿತ್ರಗಳು.

ಗತಿಸಿದ ದೀನ್ ದಯಾಳರ ಶಿಷ್ಯರಿಗೆ ವಿರೋಧಿಯಾಗಿ ಅವತ್ತಿನ ಕೇರಳಿನ ಸಭೆಯಲ್ಲಿ ಕಮ್ಯೂನಿಸ್ಟ್ ಬುದ್ಧಿಜೀವಿಯೊಬ್ಬರು ಆಡಿದ ಮಾತುಗಳು ಸಹ ಇಂಥ ವಾದಕ್ಕೆ ಹುಟ್ಟಿಕೊಂಡ ಪ್ರತಿವಾದ ಮಾತ್ರವಾಗಿತ್ತು. ‘ಭಾರತದ ಧರ್ಮ ಸಂಸ್ಕೃತಿಗಳು ಕೇವಲ ಜಾತಿಯ ಧರ್ಮ ಸಂಸ್ಕೃತಿಗಳು; ಪ್ರಾಚೀನರ ದರ್ಶನ ಕೇವ ಫ್ಯೂಡಲ್ ಯುಗದ ಆಳುವ ವರ್ಗದ ಆಸಕ್ತಿಗಳನ್ನು ಪ್ರತಿಬಿಂಬಿಸುತ್ತದೆ; ಪ್ರಸ್ತುತದ ಬಿಕ್ಕಟ್ಟುಗಳ ನಿವಾರಣೆಗೆ ಅಗತ್ಯವಾದ್ದು ವೈಜ್ಞಾನಿಕ ಸಮಾಜವಾದ-ಉಪನಿಷತ್ತುಗಳು ಅಧ್ಯಯನಕ್ಕೆ ಮಾತ್ರ ಯೋಗ್ಯ, ಅನುಸರಣೆಗಲ್ಲ….’ ಹೀಗೆ ಇನ್ನೊಂದು ಪ್ರತಿವಾದ ಹುಟ್ಟಿಸುವಂತೆ ಸಂಸ್ಕೃತಿಯನ್ನು ಚರ್ಚಿಸುವ ಸಂದರ್ಭ ನನ್ನಂಥವರ ಬಾಯಿಕಟ್ಟಿಸಿ ಬಿಡುತ್ತದೆ. ಯಾಕೆಂದರೆ ಇಬ್ಬರ ಕಣ್ಣೂ ರಾಜಕೀಯ ಗೆಲುವಿನ ಮೇಲೆ.

ಯಾವ ಕಾಲದ ಮನುಷ್ಯನೇ ಆಗಲಿ, ತನ್ನ ಪಾಲಿಗೆ ಬಂದ ಸುಖದುಃಖಗಳನ್ನು ಉಣ್ಣುವಾಗಲೂ, ಸ್ವಹಿತಕ್ಕೆ ಬದ್ಧನಾಗಿ ಯೋಚಿಸಲೇಬೇಕಾದ ಅನಿವಾರ್ಯದಲ್ಲೂ, ಸದ್ಯದಿಂದ ನಿವೃತ್ತನಾಗಿ, ದೃಷ್ಟಾರನೂ ಆಗಬಲ್ಲನೆಂದು ತಿಳಿಯುವವನಿಗೆ ಪ್ರಾಚೀನ ಪಳೆಯುಳಿಕೆಯಲ್ಲ; ಅಂತೆಯೇ ಗೋಜುಗೊಂದಲಗಳಿಂದ ಅಬಾಧಿತವಾದ ದೇಶ-ಕಾಲಾತೀತ ಸತ್ಯವೂ ಅಲ್ಲ. ಮನುಷ್ಯನಿಗೆ ಕಷ್ಟಗಳಿದ್ದೇ ಇವೆ. ಎಲ್ಲ ಕಾಲದಲ್ಲೂ, ಹಾಗೆಯೇ ತನ್ನ ಮೂಲಕ ದಿವ್ಯವನ್ನು ಹೊಳೆಯಿಸುತ್ತಾನೆ – ಎಲ್ಲಾ ಕಾಲದಲ್ಲೂ. ಮಾತ್ರವಲ್ಲ – ಎಲ್ಲಾ ದೇಶದಲ್ಲೂ. ಅಥವಾ ಹೀಗೂ ಹೇಳಬಹುದು, ತನ್ನ ಮೂಲಕ ಸತ್ಯವನ್ನು ಹೊಳೆಯಿಸಲಾರದಂತೆ ಮನುಷ್ಯ ತೊಳಲಿದ ಕಾಲಗಳೂ ಇವೆ, ದೇಶಗಳೂ ಇವೆ- ಅಂದರೆ, ಮೀರುವ – ತಿಳಿಯು ಸಾಮರ್ಥ್ಯ ಪಡೆದಿದ್ದೂ ಅವನು ಸೋಲಬಹುದೆಂದು ಹೇಳಿದಂತಾಗುತ್ತದೆ. ಆದ್ದರಿಂದಲೇ ಮನುಷ್ಯ ತನ್ನನ್ನು ಕುರೂಪಗೊಳಿಸುವ ಕೇಡುಗಳ ವಿರುದ್ಧ, ಅನಿಷ್ಟಗಳ ವಿರುದ್ಧ, ಜಡತೆಯ ವಿರುದ್ಧ (ಅವು ಅವನ ಒಳಗೂ ಇರುವಂಥವಾದ್ದರಿಂದ) ಹೋರಾಡುತ್ತಲೇ ಇರುವುದು ಅನಿವಾರ್ಯ – ವ್ಯಕ್ತಿಯಾಗಿಯೂ, ಸಮುದಾಯವಾಗಿಯೂ.

* * *

ಮೇಲಿನ ಮಾತುಗಳನ್ನು ಬರೆಯುತ್ತ ಕೂತಿರುವ ನನಗೆ ಹೊರಗಿನ ಗದ್ದಲದಿಂದ ಕಿರಿಕಿರಿಯಾಗುತ್ತಿದೆ. ಈಗ ರಾತ್ರಿ ೧೧ ರ ಸಮಯ. ನಾನಿರುವ ಮೊಹಲ್ಲಾದ ಅಯ್ಯಪ್ಪ ಭಕ್ತರು ಮೈಕಿನಲ್ಲಿ ಅಯ್ಯಪ್ಪ ಕೀರ್ತನೆಗಳನ್ನು ಕಿರುಚುತ್ತಿದ್ದಾರೆ. ಸುರತೋನ್ಮಾದದ ಬಗೆಯಲ್ಲಿ ಹಲಬುತ್ತ ಚೀರುತ್ತ ತಂಪಾದ ರಾತ್ರೆಯ ಮೌನವನ್ನು ಕೆಡಿಸುತ್ತಿದ್ದಾರೆ. ಕಮ್ಯುನಿಸ್ಟ್‌ಕೇರಳದ ಹೃದಯದಲ್ಲೇ ಹುಟ್ಟಿದ ಈ ಅಯ್ಯಪ್ಪ ಚಳುವಳಿಯ ಬಗ್ಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆಂಬುದು ಭಾರತೀಯಸಂಸ್ಕೃತಿ ಕುರಿತು ಬರೆಯುತ್ತಿರುವ ನನಗೆ ನಿಕಷವಾಗಿದೆ. ನನಗೆ ಗೊತ್ತಿರುವ ಎಷ್ಟೋ ಯುವಕರೀಗ ಸಮಾಜವಾದೀ ಸಿದ್ಧಾಂತದ ದಳಗಳನ್ನು ಸೇರುವ ಬದಲು ಅಯ್ಯಪ್ಪ ಮಂಡಳಿಯನ್ನೇ ಸೇರಿಯಾರೆಂದು ನನಗನ್ನಿಸುತ್ತದೆ. ನಲವತ್ತು ದಿನಗಳವರೆಗಂತೆ – ಕ್ಷೌರ ಮಾಡಿಕೊಳ್ಳದೆ, ಕಪ್ಪು ಲುಂಗಿಯುಟ್ಟು, ಅಬ್ಬರದ ಭಜನೆಗಳನ್ನು ಮಾಡುತ್ತ ಮಧ್ಯರಾತ್ರಿಯ ತನಕ ಕೂತಿದ್ದು, ಮುಟ್ಟಾದ ಹೆಂಗಸರಿಂದ ಮಲಿನವಾಗಬಾರದೆಂಬ ಎಚ್ಚರದಲ್ಲಿ ಹೆಂಗಸರಿಂದಲೇ ದೂರವಿದ್ದು, ಬೀಡಿ ಸಿಗರೇಟುಗಳನ್ನು ಸೇದದೆ, ಹೆಂಡ ಕುಡಿಯದೆ – ನಿಷ್ಠುರವ್ರತಿಗಳಾಗುವ ಈ ಸರ್ವೇಸಾಮಾನ್ಯರಾಗಿ ಕಾಣುವ ಯುವಕರ ಮನಸ್ಸಲ್ಲಿ ಏನು ಆಗುತ್ತಿದೆ ನನಗೆ ತಿಳಿಯದು. ಈ ನಿಷ್ಠುರ ವ್ರತದ ಕೊನೆಯಲ್ಲಿ ಪರ್ವತಾರೋಹಣವಿದೆ, ಅಯ್ಯಪ್ಪನ ಬೆಳಕು ಆಕಾಶದಲ್ಲಿ ಮಿಂಚಿದನ್ನು ಕಾಣುವುದಿದೆ. ಅಯ್ಯಪ್ಪನಾದರೋ ಎರಡು ಗಂಡು ದೇವರುಗಳ ಸಂಗಮದ ಫಲ. ಭಸ್ಮಾಸುರನ ಸಂಹಾರಕ್ಕಾಗಿ ಮೋಹಿನಿಯ ರೂಪತಾಳಿದ ವಿಷ್ಣುವಿನಲ್ಲಿ ಶಿವ ಮೋಹಿತನಾಗಿ ಅಯ್ಯಪ್ಪ ಜನಿಸಿದ್ದು. ಇವೆಲ್ಲದರ ಆಕರ್ಷಣೆ ತರ್ಕಾತೀತವಾದದ್ದು. ಆದರಿಂದ ಉತ್ಪನ್ನವಾಗುವ ಅಬ್ಬರ ಎಷ್ಟೆಂದರೆ ನಾನದನ್ನು ಕ್ಷುಲ್ಲಕವೆಂದು ಕಡೆಗಣಿಸಲಾರೆ.

ಅಂತೆಯೇ ಅದರಿಂದ ಗಂಭೀರವಾಗಿ ಆಕರ್ಷಿತನೂ ಆಗಲಾರೆ. ಕರ್ನಾಟಕದಲ್ಲಿ ೧೨ನೇ ಶತಮಾನದ ಭಕ್ತಿ ಆಂದೋಲನ ಮಹತ್ವದ ವಚನಕಾರರನ್ನು ಕೊಟ್ಟಿತು. ಆಮೇಲೆ ಬಂದ ದಾಸರ ಭಕ್ತಿಯೂ ಮೃದುವಾದ ಸುಂದರವಾದ ಅಭಿವ್ಯಕ್ತಿಯನ್ನು ಪಡೆಯಿತು. ನಿತ್ಯಜೀವನದ ಸುಖದುಃಖಗಳನ್ನು ಒಳಗೊಳ್ಳುತ್ತಲೆ ಮೀರುವ ಆಶಯದ ಸಾಹಿತ್ಯ ಸೃಷ್ಟಿಗೆ ಇವು ಕಾರಣವಾದವು. ಬಹಿರಂಗದಲ್ಲಿ ಈ ಆಂದೋಳನಗಳ ಸ್ವರೂಪವನ್ನು ಪಡೆದ ಅಯ್ಯಪ್ಪ ಭಕ್ತಿ ಏನನ್ನು ಸೃಷ್ಟಿಸುತ್ತಿದೆ? ಖಾಲಿ ಜಾಗಗಳಲ್ಲೆಲ್ಲ ತಲೆಯೆತ್ತುವ ಪೆಂಡಾಲ್‌ಗಳು, ಕಣ್ಣು ಕುಕ್ಕುವ ನಿಯಾನ್ ದೀಪಗಳು, ಕರ್ಕಶ ಚೀತ್ಕಾರಗಳು, ಸಿನಿಮಾ ಸಂಗೀತದ ಕಾಪಿಗಳಾದ ಭಾವಾತೀರೇಕದ ಹಾಡುಗಳು, ಅರಿವಿಗೆ ನಿದ್ದೆ ತರುವಂಥ ಗುಂಗು ಹುಟ್ಟಿಸುವ ಭಜನೆಗಳು – ಇಷ್ಟಲ್ಲದೆ ಇನ್ನೇನನ್ನು ಅಯ್ಯಪ್ಪ ಆಂದೋಲನ ಸೃಷ್ಟಿಸುತ್ತಿದೆ?

ಆದರೂ ಈ ಅಯ್ಯಪ್ಪನನ್ನು ಕಡೆಗಣಿಸುವಂತಿಲ್ಲ. ನಮ್ಮ ಸಂಸ್ಕೃತಿಗೆ ಸಹಜವೆನಿಸುವ ಅನೇಕ ಸಂಗತಿಗಳು – ಹಿಂದಿನ ಭಕ್ತಿಪಂಥಗಳ ಆಂದೋಲನಗಳಲ್ಲಿ ಕಂಡಂಥವೂ – ಈ ಅಯ್ಯಪ್ಪ ಪಂಥದಲ್ಲೂ ಇವೆ. ಎಲ್ಲ ಜಾತಿಪಂಗಡಗಳ ಜನರೂ ಅಯ್ಯಪ್ಪ ಭಕ್ತರಾಗುತ್ತಾರೆ – ಪಂಚಮರೂ ಸೇರಿದಂತೆ. ನಿತ್ಯ ಕುಡಿಯುವವರೂ ಆ ಸಮಯದಲ್ಲಿ ತಮ್ಮ ಚಟದಿಂದ ದೂರವಿರುತ್ತಾರೆ. ತಮ್ಮ ಜಾತಿಗೂ ಕಸುಬಿಗೂ ಅಂಟಿಕೊಂಡ ತಮ್ಮ ವ್ಯಕ್ತಿತ್ವದ ಮಿತಿಗಳನ್ನು ಆ ಸಮಯದಲ್ಲಿ ಅವರು ಮೀರಿಬಿಡುತ್ತಾರೆ. ತಮ್ಮ ಎಂದಿನ ಹೆಸರು ಕುಲಗೋತ್ರಗಳಿಗೆ ಅವರು ಆಗ ಹೊರತಾಗಿ ಕೇವಲ ‘ಸ್ವಾಮಿ’ಗಳಾಗುತ್ತಾರೆ. ಆಗ ಅವರನ್ನು ನಾವು ಹೇಗೆ ಕರೆಯಬೇಕು. ಎಲ್ಲರೂ ಆಗ ಒಂದೇ ಅನುಭಾವೀ ಕುಟುಂಬಕ್ಕೆ ಸೇರಿದ ಸದಸ್ಯರು – ತಮ್ಮ ಪ್ರತ್ಯೇಕ ಜಾತಿ, ಕುಲ, ಗೋತ್ರಗಳನ್ನು ಕಳಕೊಂಡವರು.

ನಮ್ಮ ಯೂನಿವರ್ಸಿಟಿಯಲ್ಲಿ ತೋಟಿಯಾಗಿ ಕೆಲಸ ಮಾಡುವವನೊಬ್ಬ ಹೀಗೆ ‘ಸ್ವಾಮಿ’ಯಾದಾಗ ನಾನು ಅವನ ಹೆಂಡತಿಯನ್ನು ಕೇಳಿದೆ – ಅವಳ ಗಂಡನ ಹೊಸ ವ್ಯಕ್ತಿತ್ವ ಏನು ಪರಿಣಾಮ ಮಾಡುತ್ತದೆ ಅವನ ಸ್ವಭಾವದಲ್ಲಿ? ಎಂದು. ಮನೆಯಲ್ಲಿ ಅವನು ಮಲಗುವುದಿಲ್ಲ. ಕುಡಿಯುವುದಿಲ್ಲ. ಕುಡಿದು ಹೆಂಡತಿ ಮಕ್ಕಳನ್ನು ಚಚ್ಚುವುದಿಲ್ಲ. ಇವೆಲ್ಲ ಅವಳಿಗೆ ಸಂತೋಷದ ವಿಷಯಗಳೇ ಆಗಿದ್ದವು. ಆದರೆ ೪೦ ದಿನಗಳ ನಂತರ? ‘ಅಯ್ಯೋ, ನಾಯಿಬಾಲ ಡೊಂಕೇ ಅಲ್ಲವೆ?’ ಎಂದಳು. ಅವಳು ಅಂದದ್ದು ನಿಜವಿರಲೇಬೇಕು. ಆದರೂ ‘ಅಯ್ಯಪ್ಪ, ಅವನ ಪಾಲಿಗೆ ನಿಷ್ಪ್ರಯೋಜಕವೆಂದು ನಾನು ತಿಳಿಯಲಾರೆ. ಅವನಿಗೆ ತನ್ನ ನಿತ್ಯಜೀವನದ ಕ್ಷುಲ್ಲಕತೆಯನ್ನು ಮೀರಲು ಇದಲ್ಲದೆ ಬೇರೆ ಯಾವ ಉಪಾಯವಿದೆ – ನಮ್ಮ ಸಂದರ್ಭದಲ್ಲಿ? ಹೊಸ ವ್ಯಕ್ತಿತ್ವ, ಹೊಸ ಗೆಣೆತನ, ಸಾಹಸ, ನಿಗ್ರಹದ ಸಮಾಧಾನ – ಇನ್ನೆಲ್ಲಿ ಅವನಿಗೆ ಸಿಗಬಲ್ಲವು? ಪುರಾತನ ಭಕ್ತಿಪಂಥಗಳಲ್ಲಿನ ಉಜ್ವಲವೆನಿಸುವ ಯಾವ ಅಂಶವನ್ನೂ ಪಡೆಯದ, ನನ್ನ ಕಿವಿಗೂ ಮನಸ್ಸಿಗು ಕರ್ಕಶವೆನ್ನಿಸುವ, ಆದರೂ ಹಿಂದಿನವುಗಳ ಸ್ವರೂಪದಲ್ಲೇ ಈಗ ತಲೆಯೆತ್ತಿರುವ, ‘ಅಯ್ಯಪ್ಪ’ಗಳ ಬಗ್ಗೆ ಹೀಗೆ ಯೋಚಿಸುತ್ತಿದ್ದಂತೆ ನಾನು ಗೊಂದಲಕ್ಕೊಳಗಾಗುತ್ತೇನೆ.

ಹೀಗೆಯೇ, ನಮ್ಮ ಸಂಸ್ಕೃತಿಯ ಹಲವು ಆಧುನಿಕ ಅಭಿವ್ಯಕ್ತಿಗಳು ಶುಷ್ಕವೆನ್ನಿಸುತ್ತವೆ. ನಿದರ್ಶನವಾಗಿ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಬಗೆಗಿನ ಭಕ್ತಿ ಮತ್ತು ಅದನ್ನು ತಣಿಸಲು ಹುಟ್ಟಿಕೊಂಡಿರುವ ರೆಕಾರ‍್ಡೆಡ್ ಹಾಡುಗಳು. ಅವುಗಳ ಇಂಪು ರಂಜನೀಯ ಸಿನಿಮಾದ್ದೇ. ನಮ್ಮ ಸೌಂದರ್ಯಪ್ರಜ್ಞೆಗೆ ಕಿರಿಕಿರಿಯುಂಟು ಮಾಡುವಂಥದು ನಮ್ಮ ಅರಿವನ್ನು ಹೇಗೆ ತಾನೇ ಹಿಗ್ಗಿಸೀತು? ಅವುಗಳಿಂದ ಹುಟ್ಟುವುದು ಖಂಡಿತ ಧಾರ್ಮಿಕ ಭಾವನೆಯಲ್ಲ. ಶೇಷಶಾಯಿಯಾದ ಸಾಯಿಬಾಬಾರನ್ನು  ನೋಡಿದಾಗಲಂತೂ ಈ ಐದು ಹೆಡೆಯ ಸರ್ಪ ರಟ್‌ಟಿನದೆಂದು ನಾನು ಆಲೋಚಿಸದೆ ಇರಲಾರೆ. ಈ ಅವತಾರಪುರುಷ ರಟ್ಟಿನ ಮೇಲೆ ಮಲಗಿ ಕ್ಯಾಮರಾದ ಕ್ಲಿಕ್ಕಿಗೆ ಮುಗುಳ್ನಗುವುದಲ್ಲವೆ? ಆದರೂ ನಮ್ಮ ಕಾಲದ ಮಹತ್ವದ ಕವಿಯೊಬ್ಬರು ರಟ್ಟಿನ ಶೇಷನ ಮೇಲೆ ಮಲಗಿದವನನ್ನು ಪೊಳ್ಳೆಂದು ತಿಳಿಯಲಿಲ್ಲ. ನಾನು ತುಂಬ ಗೌರವಿಸುವ ಈ ಕವಿಗೆ ಧಾರ್ಮಿಕ ವಿಷಯದಲ್ಲಿ ವಿಮರ್ಶಾಪ್ರಜ್ಞೆಯ ಅಗತ್ಯವೇ ಇರಲಿಲ್ಲವೆಂಬುದು ಮತ್ತು ಅಂತಹ ಅವರ ಪ್ರವೃತ್ತಿ ಈ ನಮ್ಮ ಸಂಸ್ಕೃತಿಗೆ ಸಹಜವಿರಬಹುದು ಎಂಬುದು ನಮ್ಮನ್ನ ಯೋಚನೆಗೀಡುಮಾಡುತ್ತದೆ. ಯಾಕೆಂದರೆ ಇದನ್ನು ಹಳಿದು ನಗೆಯಾಡಿ ಮರೆತುಬಿಡುವುದು ಸಾಧ್ಯವಿಲ್ಲ. ನಾನು ಮೆಚ್ಚುವ ಕವಿ ಮಹಾ ಪ್ರತಿಭಾಶಾಲಿ. ನನ್ನ ಗೆಳೆಯರೊಬ್ಬರು ಈ ಕವಿಯನ್ನು ಅವರು ಸಾಯಿಬಾಬಾರಿಂದ ಸನ್ಮಾನಿತರಾದ ಔಚಿತ್ಯವನ್ನು ಪ್ರಶ್ನಿಸಿದಾಗ ಕವಿ ಕೊಟ್ಟ ಉತ್ತರ ಆಶ್ಚರ‍್ಯಕರವಾಗಿತ್ತು: ನಾಪಿತ ಜಾತಿಯಲ್ಲಿ ಜನಿಸಿದ ಸಂತನೊಬ್ಬ ಬ್ರಾಹ್ಮಣನಾದ ಈ ಕವಿಯನ್ನು ಕರೆದು ಸನ್ಮಾನಿಸಬೇಕು, ಕವಿ ಅದನ್ನು ಗೌರವದಿಂದ ಸ್ವೀಕರಿಸಬೇಕು – ಇದು ಸನಾತನ ಧರ್ಮ – ಹೀಗೆ. ಈ ಬಗೆಯ ಆಲೋಚನಾಕ್ರಮಗಳಿಂದ ದೂರವಾಗಿಬಿಟ್ಟ ನನ್ನಂಥವರಿಗೆ ಈ ಉತ್ತರ ಬೆರಗುಗೊಳಿಸುತ್ತದೆ – ಅಷ್ಟೆ.

ಹೀಗೆ ದೂರವಾದ್ದು ನನ್ನ ತಪ್ಪೆ? ನನ್ನ ಆಂಗ್ಲ ವಿದ್ಯಾಭ್ಯಾಸದ ಪರಿಣಾಮವೆ? ಅಲ್ಲವೆಂದು ನಾನು ತಿಳಿದಿರುವೆ. ನಮ್ಮ ಹಿಂದಿನ ಆಚಾರ‍್ಯರು ಅಯ್ಯಪ್ಪನನ್ನೂ ಸಾಯಿಬಾಬಾರನ್ನೂ ನಿರಾಕರಿಸುತ್ತಿದ್ದರು ಎಂದು ನನ್ನ ನಂಬುಗೆ. ಮತಾಚಾರ್ಯರ ವೈಚಾರಿಕತೆಯನ್ನು ಆಳವಾಗಿ ಬಲ್ಲವರು ಅವರ ಬಗೆಗಿನ ನನ್ನ ಈ ಅಭಿಪ್ರಾಯ ಸರಿಯೇ ಹೇಳಬೇಕು. ನಾನು ತಿಳಿದಂತೆ ಶಂಕರ ರಾಮಾನುಜ ಮಧ್ವರು ತಮ್ಮ ಸ್ವಾನುಭವದ ಅರಿವಿಗೂ, ಶೃತಿಸ್ಮೃತಿಗಳಲ್ಲಿ ದಾಖಲಾದ ಕಾಣ್ಕೆಗೂ ನಡುವಿನ ಸಂಬಂಧವನ್ನು ಅತ್ಯಂತ ಹರಿತವಾದ ತರ್ಕದ ಶಿಸ್ತಿನಲ್ಲಿ ಸ್ಥಾಪಿಸಲು ಹೆಣಗಿದವರು. ತಮ್ಮ ಅನುಯಾಯಿಗಳ ಒಪ್ಪಿಗೆಯನ್ನು ಅವರ ಅರಿವಿನ ಮಟ್ಟವನ್ನು ಏರಿಸುವ ಮುಖೇನ ಪಡೆಯಲು ಯತ್ನಿಸಿದರೇ ವಿನಹ ಕುಗ್ಗಿಸುವ ಮೂಲಕವಲ್ಲ. ನಮ್ಮ ಕಾಲದವರೇ ಆದ ಗಾಂಧೀಜಿಯವರು ತಮ್ಮ ಸತ್ಯಾನ್ವೇಷಣೆಯ ವಿಮರ್ಶಾತ್ಮಕ ಅರಿವಿನಲ್ಲಿ ನಮ್ಮ ಸಂಸ್ಕೃತಿಯ ಸಜೀವ ಆಚರಣೆಗಳಲ್ಲಿ ತಮಗೆ ನೈಜವೆನಿಸಿದ್ದನ್ನು ಮಾತ್ರ ಆಯ್ದರು. ದಕ್ಷಿಣ ಆಫ್ರಿಕದಿಂದ ಅವರು ಭಾರತಕ್ಕೆ ಹಿಂದಿರುಗಿ, ಹಳ್ಳಿಗಳಲ್ಲಿ ಸಂಚರಿಸುತ್ತ, ತ್ರಿಕರಣಶುದ್ಧಿಯಲ್ಲಿ ತನ್ನ ಜನರಿಗಾಗಿ ದುಡಿಯುವ ಮಾರ್ಗವನ್ನವರು ಹುಡುಕುತ್ತಿದ್ದಾಗ ಪಂಡಿತನೊಬ್ಬ ಅವರನ್ನು ಭೇಟಿಯಾಗಿ ಹೀಗೆ ಹೇಳುತ್ತಾನೆ: ನಿವು ಮಹಾತ್ಮರಾಗಲಿದ್ದೀರಿ” ನಿಮ್ಮಂಥವರಿಗೆ ಈ ಐರೋಪ್ಯ ಕ್ರಾಪು ಸಲ್ಲದು; ನೀವು ಯಜ್ಞೋಪವೀತ ಹಾಕಿಕೊಂಡು ಜುಟ್ಟು ಬಿಡಬೇಕು – ಎಂದು. ಕ್ರಾಪಿನ ಬಗ್ಗೆ ಆತ ಹೇಳಿದ್ದನ್ನು ಗಾಂಧೀಜಿ ಒಪ್ಪುತ್ತಾರೆ. ಐರೋಪ್ಯರ ನಡುವೆ ತಾನು ಹಾಸ್ಯಾಸ್ಪದನಾಗಿ ಕಂಡೇನೆಂಬ ಮುಜುಗರದಿಂದ ಕ್ರಾಪುಬಿಟ್ಟಿದ್ದು ನಿಜವೇ. ಆದರೆ ಲಕ್ಷಾಂತರ ದೀನದಲಿತರು ಯಜ್ಞೋಪವೀತದ ಅಧಿಕಾರ ಪಡೆಯದೆಯೂ ಧರ್ಮಿಷ್ಟ ಜೀವನ ನಡೆಸುತ್ತಿರುವಾಗ ತಾನೊಬ್ಬ ದ್ವಿಜನೆಂಬ ಮಾತ್ರಕ್ಕೆ ಯಜ್ಞೋಪವೀತ  ಧರಿಸಬೇಕಿಲ್ಲ = ಹೀಗೆ ಭಾರತೀಯ ಸಂಸ್ಕೃತಿಯ ಜುಟ್ಟನ್ನು ಮಾತ್ರ ಆಯ್ದು, ಜನಿವಾರನ್ನು ತ್ಯಜಿಸಿದ ಗಂಧೀಜಿಯ ನೈತಿಕ ವಿಮರ್ಶಾಪ್ರಜ್ಞೆಯಲ್ಲಿ ಸೃಜನಶೀಲತೆಯಿದೆ; ಸಾರಾಸಗಟಾಗಿ ಭಾರತೀಯತೆಯನ್ನು ಒಪ್ಪಿಕೊಳ್ಳುವ, ಅಥವಾ ನಿರಾಕರಿಸುವ ಗೊಡ್ಡುತನವಾಗಲೀ ಸಿನಿಕತನವಾಗಲೀ ಗಾಂಧೀಜೀಯಲ್ಲಿ ಇರಲಿಲ್ಲವೆಂಬುದು ಈ ಸಣ್ಣ ನಿದರ್ಶನಕ್ಕೆ ಮಹತ್ವದ ಸಾಂಕೇತಿಕ ಅರ್ಥವನ್ನು ತಂದುಕೊಡುತ್ತದೆ. ಬ್ರಾಹ್ಮಣೀಕರಣ ಅಥವಾ ಐರೋಪೀಕರಣಗಳ ವಿಪರೀತಗಳಲ್ಲಿ ಮಾತ್ರ ಭಾರತದ ಭವಿಷ್ಯವನ್ನು ಕಾಣುವಂಥವರಿಗೆ ಪ್ರಾಚೀನದಲ್ಲಿ ಯಾವುದು ಉಳಿಯಬೇಕು, ಯಾವುದು ಬೇಡ ಎಂಬ ಸತತ ಜಾಗೃತಪ್ರಜ್ಞೆ ಇರುವುದಿಲ್ಲ. ಸಂಸ್ಕೃತಿಯ ಸಜೀವತೆ ಇರುವುದು ಇಂಥ ಹಲವು ಆಯ್ಕೆಗಳ ನೈತಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಕೆಲಸ ಮಾಡುತ್ತಿರುವಾಗ, ಏಕಕಾಲದಲ್ಲಿ ಮಡಿವಂತರ ಪೊಳ್ಳುಶ್ರೇಷ್ಠತೆಯನ್ನೂ, ಶ್ರೂದ್ರನ ಪೆದ್ದುಮೌಢ್ಯವನ್ನೂ, ಸಾಮ್ರಾಜ್ಯವಾದಿಯ ದುರಾಶೆಯನ್ನೂ ಕಿತ್ತುಹಾಕುವಂತೆ ಹೋರಾಡುವುದು ಗಾಂಧೀಜಿಗೆ ಸಾಧ್ಯವಾದ್ದು ಈ ಬಗೆಯ ಪ್ರಜ್ಞೆಯಿಂದ. ರಸಿಕ, ಸಿನಿಕ, ಆರಾಧಕರ ಲೋಲುಪತೆಯ ಸುಖ ಬಿಟ್ಟುಕೊಟ್ಟ ಮನಸ್ಸಿಗೆ ಮಾತ್ರ ಇಂಥ ಪ್ರಜ್ಞೆ ಸಾಧ್ಯವಾಗುವುದು. ಆಚರಣೆಯಲ್ಲಿ ಯಾವುದು ಸಾಚ, ಯಾವುದು ಮೋಸವೆಂಬ ಎಚ್ಚರ ಕನ್ನಡದ ಹನ್ನೆರಡನೇ ಶತಮಾನದ ಆಂದೋಲನದಲ್ಲೂ, ನಂತರ ದಾಸರಲ್ಲೂ ಕಾಣಬಹುದು. ಅಲ್ಲಮ, ಬಸವ, ಪುರಂದರ, ಕಬೀರ – ಇವರೆಲ್ಲ ಎಷ್ಟು ನಿಷ್ಠುರರು, ನಿರ್ಮಮ ಶೋಧಕರು ಎಂಬುದನ್ನು ಅರಿತಾಗ ನಮ್ಮ ಕಾಲದ ಧಾರ್ಮಿಕತೆಯ ಬರಡುತನದ ಅರಿವಾಗುತ್ತದೆ.

ಒಂದು ಬಗೆಯ ವೈಚಾರಿಕ ಮನಸ್ಸಿಗೆ ನಾನು ಮೇಲೆ ಎತ್ತಿದ ಪ್ರಶ್ನೆಗಳು ಅಪ್ರಕೃತವೆನ್ನಿಸಬಹುದು. ಸಾಮ್ರಾಜ್ಯಶಾಹಿಯ ಶಕ್ತಿ ಮತ್ತು ಸಂಪತ್ತುಗಳಿಂದ ಪುಷ್ಟಿ ಪಡೆದು ಬೆಳೆದ ಐರೋಪ್ಯರ ವೈಜ್ಞಾನಿಕ ಪ್ರಗತಿ ಮಾತ್ರ ಜಗತ್ತಿಗಿರುವ ಭವಿಷ್ಯದ ಮಾರ್ಗವೆಂದು ತಿಳಿದವರಿಗೆ ಯಾವ ಗೊಂದಲವೂ ಇರದು. ಅಯ್ಯಪ್ಪ ಸಾಯಿಬಾಬರು ಪ್ರತಿನಿಧಿಸುವ ಪ್ರಜ್ಞೆ ಆಗ ಕೇವಲ ಹುಸಿಯೆನ್ನಿಸುತ್ತದೆ. ಆದರೂ ಜನ ಅಂಥವುಗಳಿಂದ ಯಾಕೆ ಆಕರ್ಷಿತರಾಗುತ್ತಾರೆಂಬುದನ್ನು, ಯಾವ ದಾಹವನ್ನು ಈ ಬಗೆಯ ಧಾರ್ಮಿಕ ಪಂಥಗಳು ಹಿಂಗಿಸುತ್ತವೆ ಎಂಬುದನ್ನು ಚಿಂತಿಸಿದಾಗ ನಾವು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಹುಸಿಧಾರ್ಮಿಕತೆಯ ಬದಲು ನೈಜವಾದ್ದು ಇರಲು ಸಾಧ್ಯವಿಲ್ಲವೆ? ಮನುಷ್ಯನ ಅಂಥ ಅಗತ್ಯದ ಪೂರೈಕೆ ಆಳವಾದ ಕಾಣ್ಕೆಗಳಿಂದ ಅಗಬಹುದಲ್ಲವೆ? ಆದರೂ ಈ ಕಾಲದಲ್ಲಿ ಯಾಕೆ ಆಗುತ್ತಿಲ್ಲ – ಇದೇ ನಮ್ಮನ್ನು ಕಾಡಬೇಕಾದ ಪ್ರಶ್ನೆ.

ಇನ್ನೂ ಜೀವಂತವಾಗಿರುವ ನೆನಪಿನಲ್ಲಿ ಭಾರತದಲ್ಲಿ ಆಳವಾದ್ದು, ಗಹನವಾದ್ದು ಇತ್ತೆಂದು ಅನ್ನಿಸುತ್ತದೆ. ಅಲೆಯುವ ಕರ್ಮಯೋಗಿಯಾಗಿ ಗಾಂಧೀಜಿಯಿದ್ದರು; ಕೂತ ಜ್ಞಾನಯೋಗಿಯಾಗಿ ರಮಣರಿದ್ದರು; ಉತ್ಕಟತೆಯಲ್ಲಿ ಹಾಡಿ ಕುಣಿಯುವ ಭಕ್ತಿಯೋಗಿಯಾಗಿ ರಾಮಕೃಷ್ಣರಿದ್ದರು. ಭಾರತದ ಮೂರ ಮಹತ್ವದ ಮಾರ್ಗಗಳ ಪ್ರತಿನಿಧಿಗಳು ಇವರು.

ಇವರ ನಂತರವೂ ಪ್ರಾಚೀನರ ಎಷ್ಟೋ ಆಚರಣೆಗಳು ಹಾಗೇ ಭಾರತದಲ್ಲಿ ಉಳಿದು ಬಂದಿವೆ. ವಿನೋಬಾರು ‘ಅಲೆದಾಡುವ’ ಸಂತರಾಗಿದ್ದು, ಕ್ಷೇತ್ರಸನ್ಯಾಸದಲ್ಲಿ ‘ಕೂತ’ ಸಂತರಾದರು. ಪ್ರಾಯೋಪವೇಶದಲ್ಲಿ ಇಚ್ಚಿಸಿ ಸತ್ತರು – ಭೀಷ್ಮರಂತೆ. ಪುರಾಣದ ಜನಕ ದಶರಥರಂತೆ ನಮ್ಮನ್ನು ಈಗ ಆಳುವ ರಾಜಕೀಯ ಜನ ತಮ್ಮ ಹಲವು ಕಾಷ್ಠವ್ಯಸಗಳ ನಡುವೆಯೂ ಹೆಲಿಕಾಪ್ಟರುಗಳಲ್ಲಿ ಸಂತರ ದರ್ಶನ ಮಾಡಿಹೋಗುತ್ತಾರೆ. ದೆಹಲಿ ಗ್ರೀಸುಗಳನ್ನು ಆಳಿದವರು, ಆಳುವವರು ಚಾತುರ್ಮಾಸ್ಯದಲ್ಲಿ ಕೂತ ಕಂಚಿ ಜಗದ್ಗುರುಗಳನ್ನು ಅವರು ಇರುವಲ್ಲೇ ಬಂದು ನೋಡಿ ಆಶೀರ್ವಾದ ಪಡೆಯುತ್ತಾರೆ; ರಾಷ್ಟ್ರಾಧ್ಯಕ್ಷರು ವಾನಪ್ರಸ್ತಾಶ್ರಮ ಸ್ವೀಕರಿಸುವ ಮುಂಚೆ ಅವರ ದರ್ಶನ ಪಡೆಯುತ್ತಾರೆ. ಇಲ್ಲಿ ನಾನು ಕೂತಿರುವ ಕಿಟಕಿಯ ಹೊರಗಿನ ಚಳಿಯ ಕತ್ತಲಿನಲ್ಲಿ ಅಯ್ಯಪ್ಪ ಭಕ್ತರು ಆವೇಶದಿಂದ ಹಾಡುತ್ತಿದ್ದಾರೆ. ಲೋಕಾಯತ ಮಾರ್ಗದ ಋಷಿಯಂತೆ ಕಾಣುತ್ತಿದ್ದ ಪೆರಿಯಾರರ ತಮಿಳುನಾಡಿನಲ್ಲಿ ಎಷ್ಟೋ ರಿಕ್ಷಾಚಾಲಕರು ಸ್ನಾನಮಾಡಿ ಕಪ್ಪು ಮುಂಡುಟ್ಟು, ಹಣೆಯ ಮೇಲೆ ವಿಭೂತಿ ಧರಿಸಿ ಕುರುಚಲು ಗಡ್ಡ ಬೆಳೆದ ಮುಖದಲ್ಲಿ ಮುನಿಗಳಂತೆ ಕಾಣುತ್ತಾರೆ. ಇವರ ಜೊತೆ ನಾನು ಒಬ್ಬನಾಗಲಾರೆ – ಇದಕ್ಕೆ ಕಾರಣ ನನ್ನ ಪಾಶ್ಚಿಮಾತ್ಯ ವಿದ್ಯಾಭ್ಯಾಸವೆ? ಅಥವಾ ಪಾಶ್ಚಿಮಾತ್ಯ ಸಂಸ್ಕೃತಿಯ ಬಗ್ಗೆ ನಮ್ಮಂಥ ಹಲವರಲ್ಲಿ ಈಚೆಗೆ ಕಾಣಿಸಿಕೊಳ್ಳುತ್ತಿರುವ ಅತೃಪ್ತಿ ಕೂಡ, ಪಾಶ್ಚಿಮಾತ್ಯರಲ್ಲೆ ತಮ್ಮ ಬಗ್ಗೆ ಈಗೀಗ ಬಲವಾಗುತ್ತಿರುವ ಅತೃಪ್ತಿಯ ಅನುಕರಣೆಯೆ?

ಪುರಾಣದ ಭಾರತ ಈಗಲೂ ನಮ್ಮನ್ನು ಕವಿದು ಕೂತಿದೆ, ಎಂಬುದಕ್ಕೆ ನಮ್ಮ ಸಿನಿಮಾ ಸಂಸ್ಕೃತಿಯಿಂದ ಬೆಳೆದುಬಂದ ನಟರಿಗಿರುವ ಜನಪ್ರಿಯತೆಯೂ ಒಂದು ನಿದರ್ಶನ. ಅಯ್ಯಪ್ಪ, ರಾಘವೇಂದ್ರಸ್ವಾಮಿ, ಸಾಯಿಬಾಬರ ಜೊತೆಗೇ ಕರ್ನಾಟಕದ ರಾಜಕುಮಾರ್, ಆಂಧ್ರದ ಎನ್.ಟಿ.ಆರ್., ತಮಿಳುನಾಡಿನ ಎಂ.ಜಿ.ಆರ್. ಕೂಡ ನಮ್ಮ ಜನಪ್ರಿಯ ಸಂಸ್ಕೃತಿಯ ವೈಶಿಷ್ಟ್ಯಗಳಾಗಿದ್ದಾರೆ. ಬಾಹುಬಲಿಯ ನಂತರ ಡಾ. ರಾಜಕುಮಾರರೇ ಅತ್ಯಂತ ಎತ್ತರದ ವಿಗ್ರಹ – ಅವರ ಕಟ್‌ಔಟ್ ಚಿತ್ರಕ್ಕೆ ನಕ್ಷತ್ರಗಳ ತೋರಣ ಕಟ್ಟಲು ಮುಂದಾಗುವ ಅವರ ಅಭಿಮಾನಿಗಳು ಅಸಂಖ್ಯ. ರಾಘವೇಂದ್ರಸ್ವಾಮಿಯಾಗಿ, ಬೇಡರ ಕಣ್ಣಪ್ಪನಾಗಿ, ಕಳ್ಳ ಸಾಗಾಣಿಕೆಯ ವಿರುದ್ಧ ಹೋರಾಡುವ ಶೂರನಾಗಿ, ಬಡವಿಯ ಪ್ರೇಮದ ಪುತ್ರನಾಗಿ, ಕನ್ನಡಿಗರ ಅಭಿಮಾನದ ಶ್ರೀ ಕೃಷ್ಣದೇವರಾಯನಗಿ – ಜನತೆ ಪುರಾಣಪುರುಷನಾದ ರಾಜಕುಮಾರರಿಗೆ ಯೂನಿವರ್ಸಿಟಿ ಡಾಕ್ಟರೇಟ್ ಕೊಟ್ಟಿದೆ. ಗೋಕಾಕ್ ಚಳುವಳಿಯಲ್ಲಿ ಕನ್ನಡಿಗರನ್ನು ಹುರಿದುಂಬಿಸಿದ ಡಾ. ರಾಜಕುಮಾರರನ್ನು ಶ್ರೀ ತೇಜಸ್ವಿಯವರು ಬಟ್ರಾಂಡ್ ರಸೆಲ್, ಅರವಿಂದರ ನಿದರ್ಶನಗಳನ್ನು ಕೊಟ್ಟು ರಾಜಕೀಯದ ನಾಯಕರಾಗುವಂತೆಯೂ ಕೋರಿ ಬರೆದಿದ್ದಾರೆ. ಲಂಕೇಶ್, ತೇಜಸ್ವಿ, ಡಾ. ಚಿದಾನಂದ ಮೂರ್ತಿ, ಚಂದ್ರಶೇಖರ ಪಾಟೀಲರಂಥ ಸಾಹಿತಿಗಳಿಗೂ, ವಿಶ್ವವಿದ್ಯಾಲಯಗಳಿಗೂ, ಸರ್ಕಾರಕ್ಕೂ, ಜನತೆಗೂ ಏಕಕಾಲದಲ್ಲಿ ಮಹಾಪುರುಷರಾದವರು ಡಾ. ರಾಜಕುಮಾರ್ ಒಬ್ಬರೇ.

ಸಿನಿಮಾದಲ್ಲಿ ಡಾ. ರಾಜಕುಮಾರ್ ಆದರ್ಶವ್ಯಕ್ತಿಯಾಗಿ ಜನತೆಗೆ ಕಾಣುತ್ತಾರೆ – ಎಂ.ಜಿ.ಆರ್., ಎನ್.ಟಿ.ಆರ್.ರಂತೆಯೇ ಅವರು ಕುಡಿಯುವುದಿಲ್ಲ, ಸೇದುವುದಿಲ್ಲ, ಪರನಾರಿಯನ್ನು ಬಯಸುವುದಿಲ್ಲ. ಇವರ ನಡುವೆ ಎಂ.ಜಿಆರ್. ಕ್ರಾಂತಿಕಾರಿ ಇಮೇಜು ಪಡೆದವರು ಕೂಡ. ಎಂ.ಜಿ.ಆರ್. ಸದ್ಗುಣಸಂಪನ್ನರಾದ್ದರಿಂದ ಅವರು ಹೀರೋ ಆದ ಸಿನಿಮಾ ಸಪ್ಪೆಯಾಗುವುದಿಲ್ಲವೆ? ಕ್ಯಾಬರೆ, ಪ್ರೇಮ ಪ್ರಕರಣಗಳು ಸಿನಿಮಾದಲ್ಲಿ ಅಗತ್ಯವಾದ ಮಸಾಲೆಗಳಲ್ಲವೆ? ಇದನ್ನೊಂದು ಉಪಾಯದಿಂದ ನಿವಾರಿಸಲಾಗುತ್ತದೆಯೆಂದು ನಾನು ಕೇಳಿರುವ. ಎಂ.ಜಿ.ಆರ್. ಪರನಾರಿಯನ್ನು ಬಯಸದಿದ್ದರೂ ಪರನಾರಿ ಎಂ.ಜಿ.ಆರ್.ರನ್ನು ಬಯಸುವುದರಿಂದ ಅವಳ ಹಗಲುಗನಸಿನ ಸೀಕ್ವೆನ್ಸ್‌ಗಳಾಗಿ ಜನ ನೋಡಬಯಸುವುದನ್ನೆಲ್ಲಾ ನೋಡುತ್ತಾರೆ; ಎಂ.ಜಿ.ಆರ್. ಹೀಗೆ ಪವಿತ್ರರಾಗಿಯೂ ಉಳಿಯುತ್ತಾರೆ. ಎನ್.ಟಿ.ಆರ್.ಗೆ ಅವರನ್ನು ಪೂಜಿಸುವ ದೇವಾಲಯವೂ ಇದೆಯಂತೆ.

ಈ ನಟರು ಪ್ರಾಚೀನ ಪುರಾಣಗಳ ಮೂಲಕ ಜನರ ಮನಸ್ಸಿನಲ್ಲಿ ಬೇರುಬಿಟ್ಟಿದ್ದಾರೆ. ಜೊತೆಗೇ ಇವರು ಆಧುನಿಕ ಬಂಡವಾಳಶಾಹೀ ವ್ಯವಸ್ಥೆಯ ಹಣ ಗಳಿಸುವ ವಿಧಾನಗಳಲ್ಲಿ ನುರಿತವರೂ ಆಗಿರುತ್ತಾರೆ. ಅಯ್ಯಪ್ಪ, ಸಾಯಿಬಾಬಾ, ತಿರುಪತಿ, ರಾಘವೇಂದ್ರಸ್ವಾಮಿಗಳಂತೆ ಇವರಲ್ಲೂ ಪುರಾಣ, ಆಧ್ಯಾತ್ಮ, ಹಣ, ರಾಜಕಾರಣ, ಜನಪ್ರಿಯ ಭಾವಾತಿರೇಕತೆ, ಆದರ್ಶ ಪ್ರಿಯತೆ- ಇತ್ಯಾದಿಗಳು ಒಂದರೊಳಗೊಂದು ಮಿಳಿತವಾಗಿರುತ್ತವೆ. ಇಂಥದನ್ನು ಸ್ವೀಕರಿಸುವ ಅಪಾರ ಜನಕೋಟಿಯ ಮನಸ್ಸು ಅವಿಮರ್ಶಾತ್ಮಕವೂ, ಸಾಂತ್ವನಕ್ಕೆ ಹಾತೊರೆಯುವಂಥದೂ ಆಗಿರುತ್ತದೆ. ತಮ್ಮಿಂದ ದೂರವಿರುವವರ ಜೀವನವನ್ನೂ ಪ್ರವೇಶಿಸುವ ಶಕ್ತಿ ಈ ನಟರಿಗಿರುತ್ತದೆ. ಅವರ ಜನಪ್ರಿಯತೆಯ ಹಿಂದೆ ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಪುರಾಣಗಳಿವೆಯಾದ್ದರಿಂದ ಒಳಿತಿಗಾಗಲೀ ಕೆಡುಕಿಗಾಗಲೀ ಅವರಿಗಿರುವ ಶಕ್ತಿ ಅಪಾರವಾದ್ದು.

ಈಚಿನ ದಿನಗಳಲ್ಲಿ (ನೋಡಿ, ಡಿಸೆಂಬರ್ ೧೭ರ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’) ಡಾ. ರಾಜಕುಮಾರ್‌ರಿಗೆ ಸಂಬಂಧಿಸಿದಂತೆ ನಡೆದೊಂದು ಘಟನೆ ನಮ್ಮ ಆತಂಕಗಳನ್ನು ಹೆಚ್ಚಿಸುತ್ತದೆ. ಸುಧಾ ವಾರಪತ್ರಿಕೆಯಲ್ಲಿ ಡಾ. ರಾಜಕುಮಾರ್‌ರು ಬಸವನ ಪಾತ್ರದಲ್ಲಿ ಹೇಗೆ ಕಾಣುತ್ತಾರೆಂಬ ಚಿತ್ರವನ್ನು ಪ್ರಕಟಿಸಿದರೆಂದು ಶ್ರೀ ಗಂಗಾಧರ ಮೊದಲಿಯಾರ್ ಮತ್ತು ಶಿವಯೋಗಿಯವರನ್ನು ಹಾರಿಸಿಕೊಂಡು ಹೋಗಲಾಯಿತು. ವರದಿಯ ಪ್ರಕಾರ ಅವರನ್ನು ಬೆದರಿಸಲಾಯಿತು. ಇಲ್ಲಿ ಅತ್ಯಂತ ಸೂಕ್ಷ್ಮವಾಗಿ ನಮ್ಮ ಧಾರ್ಮಿಕ ನಂಬಿಕೆಗಳು ಕೆಲಸ ಮಾಡಿದ ಕ್ರಮ ದಿಗಿಲುಹುಟ್ಟಿಸುವಂಥದು. ಹಿಂಸಕರಲ್ಲಿ ಒಬ್ಬರು ಅಯ್ಯಪ್ಪ ವ್ರತದಲ್ಲಿದ್ದವರು, ತಾನು ಶ್ರೀ ಮೊದಲಿಯಾರ್‌ಗೆ ಅಯ್ಯಪ್ಪ ಪ್ರಸಾದವನ್ನು ಕೊಟ್ಟೆನೆಂದು ಅವರು ಸ್ವಸಮರ್ಥನೆಯಲ್ಲಿ ಹೇಳಿಕೊಂಡಿದ್ದಾರೆ. ಹಾರಿಸಿಕೊಂಡು ಹೋಗುವುದು, ಬೆದರಿಸುವುದು ಅವರಿಗೆ ಅಕ್ಷಮ್ಯವೆನ್ನಿಸಲಿಲ್ಲ, ಆದರೆ ಕಿಡ್‌ನ್ಯಾಪ್ ಆಗಿ ಬೆದರಿಕೆಯಲ್ಲಿದ್ದವರಿಗೆ ಒತ್ತಾಯ ಮಾಡಿ ಊಟ ಮಾಡಿಸಿದ ಡಾ. ರಾಜಕುಮಾರರ ಆತಿಥ್ಯಕ್ಕೆ ಗಂಗಾಧರ ಮೊದಲಿಯಾರ್ ದ್ರೋಹ ಬಗೆದರೆಂದು ನಿಂದಿಸಲಾಯಿತು. ಬಸವಣ್ಣನ ಪಾತ್ರವನ್ನು ಡಾ. ರಾಜಕುಮಾರ್ ಮಾಡುತ್ತಾರೋ ಇಲ್ಲವೋ ಎಂಬುದು ಎಷ್ಟು ರಾಜಕುಮಾರರ ಧಾರ್ಮಿಕ ನಿಷ್ಠೆಯ ಪ್ರಶ್ನೆಯೋ, ಅಷ್ಟೇ ಅದು ಸಿನಿಮಾರಂಗದ ಆರ್ಥಿಕ ವ್ಯವಹಾರಕ್ಕೂ ಸಂಬಂಧಿಸಿದ್ದಾಗಿತ್ತು. ಸುಧಾದ ಚಿತ್ರಲೇಖನ ಡಾ. ರಾಜಕುಮಾರ್‌ರನ್ನು ಇತರೇ ಎರಡು ನಟರಿಗೆ ಹೋಲಿಸಿದಾಗ ವಯಸ್ಸಾದವರಂತೆ ಕಾಣುವಂತೆ ಚಿತ್ರಿಸಿತೆಂದೂ, ಗೋಕಾಕ್ ಚಳುವಳಿಯ ಸಮಯದಲ್ಲಿ ಮಹಾಪುರುಷ ಬಸವಣ್ಣನಾಗಿ ಕಾಣಿಸಿಕೊಳ್ಳುವೆನೆಂದ ಡಾ. ರಾಜಕುಮಾರರ ವಾಗ್ದಾನವನ್ನು ಸಂಶಯದಿಂದ ಕಂಡಿತೆಂದೂ ರಾಜಕುಮಾರ್ ಅಭಿಮಾನಿಗಳಿಗೆ ಸಿಟ್ಟುಬಂದದ್ದು. ಹೀಗೆ ಈ ಪ್ರಸಂಗದಲ್ಲಿ ಧಾರ್ಮಿಕ ನಂಬಿಕೆ, ಆರ್ಥಿಕ ವ್ಯವಹಾರ, ಅತಿಥಿ ಸತ್ಕಾರ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ಜನರಿಗಿರುವ ಭಾವನೆಗಳು – ಎಲ್ಲ ಕಲಸುಮೇಲೋಗರವಾಗಿ ಒಟ್ಟಿನಲ್ಲಿ ಅಸಹನೆ ಮತ್ತು ಹಿಂಸೆಗಳಾಗಿ ವ್ಯಕ್ತವಾದವು. ಗೋಕಾಕ್ ಚಳುವಳಿಯನ್ನು ವಿರೋಧಿಸಿದ್ದ ಶ್ರೀ ಹರಿಕುಮಾರ್‌ರನ್ನು ಮುಗಿಸಿಬಿಡುತ್ತೇವೆಂದು ಬೆದರಿಸಲೂ ಒಬ್ಬ ಅಭಿಮಾನಿ ಅಂಜಲಿಲ್ಲ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಈ ಸಂದರ್ಭದಲ್ಲಿ ತನ್ನ ಗಂಡನ ಕೌಟುಂಬಿಕ ಗುಣಗಳನ್ನು ಎತ್ತಿಹಿಡಿದು ಆಡಿದ ಮಾತಂತೂ ಈ ಲೇಖನದ ವಿಶ್ಲೇಷಣೆಯ ಚೌಕಟ್ಟಿನಲ್ಲಿ ಅರ್ಥಪೂರ್ಣ ವಿವರವಾಗುತ್ತದೆ. ಅಯ್ಯಪ್ಪ, ರಾಘವೇಂದ್ರಸ್ವಾಮಿ, ಸಾಯಿಬಾಬರನ್ನು ಖಂಡಿಸುವ ನಮ್ಮ ಕೆಲವು ಸಾಹಿತಿಗಳು, ಅದೇ ಪುರಾಣಲೋಕದಿಂದ ಪೋಷಿತರಾದ ಡಾ. ರಾಜಕುಮಾರರ ಅನುಯಾಯಿಗಳಾದರೆಂಬುದು ಒಂದು ಮುಖ್ಯ ಸತ್ಯವನ್ನು ಹೇಳುತ್ತದೆ: ನಮ್ಮ ಸಂಸ್ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಅರಿತು, ವಿಶ್ಲೇಷಿಸಿ, ಅದರಲ್ಲಿ ಜೀವಪೋಷಕ ವಾದ್ದನ್ನು ಆಯುವ ಜವಾಬ್ದಾರಿಯನ್ನು ಬಿಟ್ಟುಕೊಟ್ಟ ನಮ್ಮ ಆಧುನಿಕ ಶಿಕ್ಷಿತ ವರ್ಗವೂ ಒಂದಲ್ಲ ಒಂದು ಬಗೆಯಲ್ಲಿ ವಿಮರ್ಶೆಗೆ ಅತೀತವೆಂಬಂತೆ ಬೆಳೆಯುತ್ತಿರುವ ಈ ಪ್ರಜ್ಞಾಪ್ರವಾಹಕ್ಕೆ ಬಲಿಯಾಗುತ್ತದೆ.

[1]

* * *

ತನ್ನ ಸಂಸ್ಕೃತಿಯಲ್ಲಿ ಬೇರೂರಿದ ಮನಸ್ಸು ಆ ಸಂಸ್ಕೃತಿಯನ್ನು ನಿಷ್ಠುರವಾಗಿ ವಿಮರ್ಶಿಸದ ಹೊರತು – ಹೀಗೆ ಸತತವಾಗಿ ನಡೆಯುವ ವಿಮರ್ಶೆಯನ್ನು ಜೀವಪೋಷಕ ಅಂಶಗಳನ್ನು ಬಲಪಡಿಸುತ್ತಾ ಹೋಗದ ಹೊರತು – ವ್ಯಕ್ತಿ ಕುಬ್ಜನಾಗುತ್ತಾನೆ, ಸಮುದಾಯ ರೋಗಪೀಡಿತವಾಗುತ್ತದೆ. ಔದ್ಯೋಗೀಕರಣದಿಂದಾಗಿ ಬಿರುಸಿನ ಬದಲಾವಣೆಗಳಿಗೆ ಒಳಗಾದ ಸಮಾಜದಲ್ಲಂತೂ ಈ ಬಗೆಯ ವಿಮರ್ಶಾ ಪ್ರಜ್ಞೆ, ಪ್ರವಾಹಕ್ಕೆ ಇದಿರು ನಿಲ್ಲುವ ಧೈರ್ಯ ಅತ್ಯಗತ್ಯವಾಗುತ್ತದೆಂದು ಇಂಗ್ಲೆಂಡಿನ ಧೀಮಂತ ಕವಿ ಮ್ಯಾಥ್ಯೂ ಆರ್ನಾಲ್ಡ್‌ಅರಿತಿದ್ದ. ಸುಮಾರು ೩೦ ವರ್ಷಗಳ ಹಿಂದೆಯೇ ಡಿ.ವಿ.ಜಿ.ಯವರು ಆರ್ನಾಲ್ಡ್‌ನನ್ನು ಅತ್ಯಂತ ಮನೋಜ್ಞವಾಗಿ ಕನ್ನಡಿಗರಿಗೆ ತಮ್ಮ ಪುಸ್ತಕ ‘ಸಂಸ್ಕೃತಿ’ಯಲ್ಲಿ ಪರಿಚಯ ಮಾಡಿಕೊಟ್ಟಿದ್ದರು. ಆರ್ನಾಲ್ಡ್ ಮತ್ತು ಡಿ.ವಿ.ಜಿ.ಯವರು ‘ಸಂಸ್ಕೃತಿ’ ಪದವನ್ನು ಅದರ ಶ್ರೇಷ್ಠವಾದ, ಅಂದರೆ, ಯಾವುದು ಇರಬೇಕಾದದ್ದು, ಎಂಬ ಅರ್ಥದಲ್ಲಿ ಬಳಸುತ್ತಾರೆ. ಆದರೆ ನಾನು ಈ ಪದವನ್ನು ಈವರೆಗೆ ಬಳಸಿರುವುದು ಅಂಥ್ರೋಪಾಲಜಿಯಲ್ಲಿ ಬಳಸಿದಂತೆ: ಜನರ ನಂಬಿಕೆ ನಡಾವಳಿಗಳಲ್ಲಿ, ದೈನಿಕಗಳಲ್ಲಿ ವ್ಯಕ್ತವಾಗಿಯೂ ಇಂಗಿತವಾಗಿಯೂ ಕಾಣುವುದೆಲ್ಲವೂ ಸಂಸ್ಕೃತಿ, ಎಂಬ ಅರ್ಥದಲ್ಲಿ. ರೇಮಡ್ ವಿಲಿಯಮ್ಸ್ ಎಂಬ ಈ ಕಾಲದ ಮುಖ್ಯ ಆಂಗ್ಲ ವಿಮರ್ಶಕ ಇಂಗ್ಲಿಷಿನ ಕಲ್ಚರ್ (Culture) ಎಂಬ ಪದ ಇತಿಹಾಸದಲ್ಲಿ ಪಡೆದ ವಿವಿಧ ಅರ್ಥಗಳ ಬೆಳವಣಿಗೆಯನ್ನೂ, ಕೊನೆಯಲ್ಲಿ ನಾನು ಮೇಲೆ ಹೇಳಿದ ಅರ್ಥವನ್ನು ಹೇಗೆ ಪಡೆಯಿತೆಂಬುದನ್ನೂ ಮನೋಜ್ಷವಾಗಿ ವಿವರಿಸಿದ್ದಾನೆ. ಅದು ಹೀಗಿದೆ : ಕೈಗಾಗಿಕಾ ಕ್ರಾಂತಿಗೆ ಮುನ್ನ ‘ಕಲ್ಚರ್’ ಪದಕ್ಕೆ ಜೈವಿಕ ಬೆಳವಣಿಗೆಯ ಪೋಷಣೆ ಎಂಬ ಅರ್ಥವಿತ್ತು. ಅಗ್ರಿಕಲ್ಚರ್, ಹಾರ್ಟಿಕಲ್ಚರ್, ಸಿರಿಕಲ್ಚರ್ – ಪದಗಳ ಉದ್ಭವವಾದದ್ದು ಹೀಗೆ. ಈ ನೈಸರ್ಗಿಕ ಕ್ರಿಯೆಯನ್ನು ಸಾಂಕೇತಿಕವಾಗಿ ಮನುಷ್ಯನ ಅಭಿವರ್ಧನೆಗೂ ಅನ್ವಯಿಸುವುದ ಮೂಲಕ, ೧೮ ಮತ್ತು ೧೯ನೇ ಶತಮಾನಗಳಲ್ಲಿ ‘ಕಲ್ಚರ್’ ಪದ ಸ್ವಯಂ ಇರುವ ಅಂದರೆ ಪ್ರತ್ಯೇಕ ಅಸ್ತಿತ್ವ ಪಡೆದ ತತ್ವವಾಯಿತು. ಹೀಗೆ ಒಂದು ಪರಿಪಕ್ವ ಮನೋಸ್ಥಿತಿ ಎಂಬ ಅರ್ಥಪಡೆದ ಈ ಶಬ್ದ ಮನುಷ್ಯನ ಪೂರ್ಣತ್ವದ ಅಪೇಕ್ಷೆಯನ್ನು ಪ್ರತಿನಿಧಿಸಿತು. ನಂತರ ಇಡೀ ಸಮಾಜದ ಬೌದ್ಧಿಕ ಪ್ರಗತಿ ಎಂಬ ಅರ್ಥ ಪಡೆಯಿತು. ಆಮೇಲೆ ಕಲೆಗಳಿಗೆ ಅನ್ವಯವಾಗುವ ಪದವಾಯಿತು. ಕೊನೆಯಲ್ಲಿ ಬೌದ್ಧಿಕ, ಆಧ್ಯಾತ್ಮಿಕ ಹಾಗು ಪ್ರಾಪಂಚಿಕ ವಿದ್ಯಮಾನಗಳನ್ನು ಒಳಗೊಂಡಂತೆ ಇಡೀ ಜೀವನದ ರೀತಿಯನ್ನು ಹೇಳಬಲ್ಲ ಪದವಾಯಿತು.[2]

ಅಂದರೆ ಇಂಗ್ಲೆಂಡ್‌ನಲ್ಲಾಗುತ್ತಿದ್ದ ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಗಳಿಗೆ ಉತ್ತರವಾಗಿ ‘ಕಲ್ಚರ್’ ಪದವೂ ಬೇರೆ ಬೇರೆ ಅರ್ಥಗಳನ್ನು ಒಳಗೊಳ್ಳುತ್ತ ಹೋಯಿತು. ಜೈವಿಕ ಕ್ರಿಯೆಯನ್ನು ವಿವರಿಸುವ ಈ ಶಬ್ದ, ಮಾನವ ಸಮುದಾಯಕ್ಕೂ /ವೈಯಕ್ತಿಕ ಜೀವನಕ್ಕೂ, ಪೂರ್ಣತೆಯ ಹಂಬಲಕ್ಕೂ/ಜೀವದ ಒಟ್ಟು ವಾಸ್ತವಕ್ಕೂ ಅನ್ವಯವಾಗುವ ಸಾಮರ್ಥ್ಯ ಪಡೆದದ್ದು ಹೀಗೆ. ಅರ್ನಾಲ್ಡನೂ ‘ಕಲ್ಚರ್’ ಶಬ್ದವನ್ನು ಮನುಷ್ಯನ ವೈಯಕ್ತಿಕ ವಿಶಿಷ್ಟ ಸಾಧನೆಗೂ ಸಮುದಾಯದ ಒಟ್ಟು ಸಾಧನೆಗೂ ಏಕಕಾಲಕ್ಕೆ ಅನ್ವಯವಾಗುವಂತೆ, ಒಂದು ಇನ್ನೊಂದರ ಮಗ್ಗುಲೆಂಬಂತೆ ತಿಳಿದು ಬಳಸುತ್ತಾನೆ. ಸಮರಸವಾಗಿ ನಮ್ಮ ವ್ಯಕ್ತಿತ್ವದ ವಿಭಿನ್ನ ಅಂಶಗಳನ್ನು ಬೆಳೆಸುವಂತೆಯೇ, ಹೀಗೆ ಬೆಳೆಸಿಕೊಳ್ಳುವ ಪ್ರಕ್ರಿಯೆಯಲ್ಲೇ, ಇಡೀ ಸಮಾಜದ ಎಲ್ಲ ಭಾಗಗಳನ್ನೂ ಬೆಳೆಸುವುದೇ ‘ಕಲ್ಚರ್’ – ಅರ್ನಾಲ್ಡ್‌ಗೆ ತಿಳಿದಂತೆ. ಆದ್ದರಿಂದ, ರಾಜಕೀಯ ರಂಗದಲ್ಲಿನ ವಿನಾಶಕಾರೀ ಪ್ರವೃತ್ತಿಗಳನ್ನೂ, ‘ಅನಾರ್ಕಿ’ಯನ್ನೂ – ಅಂದರೆ ಅರಾಜಕ ಬೇಕಾಬಿಟ್ಟಿತನವನ್ನೂ – ನಿವಾರಿಸಲು ಇರುವ ಏಕೈಕ ಮಾರ್ಗ, ಆರ್ನಾಲ್ಡ್‌ಗೆ ‘ಕಲ್ಚರ್’. ಅವನ Culture and Anarchy ಯ ವಾದದ ಒಟ್ಟು ತಿರುಳು ಇದು.

ಅರ್ನಾಲ್ಡ್ ಪ್ರಕಾರ ಯಾವ ವ್ಯಕ್ತಿಯೂ ದ್ವೀಪವಲ್ಲ; ತನ್ನಷ್ಟಕ್ಕೆ ತನ್ನಲ್ಲೇ ಅವನು ‘ಕಲ್ಚರ್’ ಪಡೆಯಲಾರ. ಉಳಿದವರನ್ನೂ ತನ್ನ ಜೊತೆ ಒಯ್ಯದೇನೆ ಅವನು ಪರಿಪೂರ್ಣತೆಯತ್ತ ನಡೆಯಲಾರ. ಆದರೂ ‘ಕಲ್ಚರ್’ ಎಂದರೆ ವ್ಯಕ್ತಿಯ ಒಳಜೀವನದಲ್ಲಿ ನಡೆಯುವ ಕ್ರಿಯೆ; ಒಳ ಜೀವನ ಪಡೆವ ಒಂದು ಸಾಮರಸ್ಯದ ಸ್ಥಿತಿ – ಉಳಿದವನ್ನೂ ತನ್ನ ಜೊತೆ ಒಯ್ಯುವ ಮೂಲಕ ಮಾತ್ರ ಈ ತನ್ನೊಳಗಿನ ಸ್ಥಿತಿಯನ್ನು ಅವನು ಪಡೆಯಬಲ್ಲ. ಸಮುದಾಯ ಮುಕ್ಕಾಗಿದ್ದರೆ ವ್ಯಕ್ತಿ ಪರಿಪೂರ್ಣನಾಗಲಾರ; ನಿಜ. ಆದರೆ ಒಳಜೀವನದ ಪರಿಪೂರ್ಣತೆಯ ವಾಂಛೆಯಲ್ಲಿಯೇ ಈ ವ್ಯಕ್ತಿ – ಸಮಷ್ಟಿ ಕ್ರಿಯೆಯ ಉಗಮವಿರುವುದು.

ಹೀಗೆ ವ್ಯಕ್ತಿಯ ಪರಿಪೂರ್ಣತೆಯ ಹಂಬಲ, ಈ ಹಂಬಲದಿಂದಲೇ ಹುಟ್ಟಿದ ಒಟ್ಟು ಸಮಾಜದ ಒಳಿತಿಗಾಗಿನ ಕಳಕಳಿ ಅರ್ನಾಲ್ಡ್‌ನ ಯೋಚನಾಕ್ರಮವನ್ನು ನಿರ್ಧರಿಸುತ್ತದೆ. ಆದ್ದರಿಂದಲೇ ‘ಸಂಸ್ಕೃತಿ ವಿಮರ್ಶೆ’ ಎಂದು ಕರೆಯಬಹುದಾದ ಬರವಣಿಗೆಗೆ ಅವನ ಬರಹ ಮಾದರಿಯಾಗಿ ಉಳಿದಿದೆ.

ಪ್ರಜಾಸತ್ತೆ ಎಂದರೆ ತಮಗಿಷ್ಟ ಬಂದಂತೆ ವರ್ತಿಸುವುದು ಎಂದು ತಿಳಿದಿದ್ದ ತನ್ನ ಕಾಲದ ಇಂಗ್ಲಿಷ್ ಜನರನ್ನು ಅವರು ನಿರ್ದಯವಾಗಿ ಟೀಕಿಸುತ್ತಾನೆ. ಅರಾಜಕತೆಯನ್ನು ಎದುರಿಸಲು ಪ್ರಭುತ್ವಕ್ಕೆ ಯಾವ ವರ್ಗ ವಾರಸುದಾರ ಎಂಬ ಹುಡುಕಾಟದಲ್ಲಿ ಅವನಿಗೆ ಇಂಗ್ಲೆಂಡಿನ ಎಲ್ಲ ವರ್ಗದ ಜನರೂ ಅಪೂರ್ಣವಾಗಿ ಕಾಣುತ್ತಾರೆ. ನಡತೆಯ ಮಾಧುರ್ಯ ಮತ್ತು ತಿಳುವಳಿಕೆಯ ಬೆಳಕನ್ನು ಒಟ್ಟಾಗಿ ಪಡೆದ ಯಾವ ವರ್ಗವೂ ಇಂಗ್ಲೆಂಡಿನಲ್ಲಿ ಇಲ್ಲವೆಂದು ಅವನು ಹೇಳುತ್ತಾನೆ. ಮನುಷ್ಯನಿಗೆ ನೈತಿಕ ಕೆಚ್ಚು ಬೇಕು; ಆದರೆ ಜ್ಞಾನದಿಂದ ವಂಚಿತವಾದ ನೈತಿಕ ಕೆಚ್ಚು ಹುಂಬತನವಾದೀತು. ತನ್ನ ಮೂಗಿನ ನೇರ ಮಾತ್ರ ನೋಡಬಲ್ಲವರ ನೈತಿಕ ಕೆಚ್ಚು ದುರಹಂಕಾರ ಬೆಳೆಸೀತು. ಅಂತೆಯೇ ಸಾಕಷ್ಟು ಜ್ಞಾನವಿದ್ದು, ನೈತಿಕ ಕೆಚ್ಚಿಲ್ಲದೇ ಹೋದವನದು ಡೋಲಾಯಮಾನ ವ್ಯಕ್ತಿತ್ವವಾದೀತು. ಇಂಗ್ಲೆಂಡಿನ ‘ಕಲ್ಚರ್’ ಒಂದು ಕಡೆ ಹೀಬ್ರೂ ಮೂಲದಿಂದ ನೈತಿಕತೆ ಪಡೆಯುತ್ತದೆ. ಇನ್ನೊಂದು ಕಡೆ ಹೆಲನಿಕ್ (ಗ್ರೀಕ್) ಮೂಲದಿಂದ ಜ್ಞಾನ ಪಡೆಯುತ್ತದೆ. ಯಹೂದ್ಯ, ಕ್ರೈಸ್ತಧರ್ಮಗಳನ್ನು ಯುರೋಪಿಗೆ ಕೊಟ್ಟ ಹೀಬ್ರೂ ಮೂಲ ಅಂತಸಾಕ್ಷಿಗೆ ನಿಷ್ಠನಾಗಿರುವುದನ್ನು, (ನೈತಿಕತೆಯನ್ನು) ಕಲಿಸುತ್ತದೆ; ಯುರೋಪಿನ ಕಾವ್ಯ ತತ್ವಜ್ಞಾನಗಳಿಗೆ ಪ್ರೇರಣೆ ಕೊಟ್ಟ ಹೆಲನಿಕ್ ಮೂಲ ಅರಿವಿನ ಉಲ್ಲಾಸದಲ್ಲಿ ಕೃತಾರ್ಥತೆ ಕಾಣುತ್ತದೆ. ಮುಂಬತ್ತಿಯ ದೀಪಕ್ಕೂ, ಜೇನಿನ ಮಾಧುರ‍್ಯಕ್ಕೂ ಕಾರಣವಾದ ಜೇನುಹುಳದ ಉಪಮೆಯಿಂದ ಸ್ವಿಫ್ಟ್ ಎಂಬ ಲೇಖಕ Sweetness and Light ಎಂಬ ಕಲ್ಪನೆಯನ್ನು ಪಡೆದ. ಈ ಕಲ್ಪನೆಯನ್ನು ಅರ್ನಾಲ್ಡ್ ಬೆಳೆಸುತ್ತಾನೆ. ನಡತೆಯ ಮಾಧುರ‍್ಯವನ್ನೂ, ತಿಳಿವಿನ ಬೆಳಕನ್ನೂ, ಅಂತೆಯೇ ಹೀಬ್ರಾಯಿಕ್ ನೈತಿಕ ಕೆಚ್ಚನ್ನೂ, ಹೆಲಿನಿಕ್ ಅರಿವಿನ ಉಲ್ಲಾಸವನ್ನೂ ಒಳಗೊಂಡ ವರ್ಗವೆಲ್ಲಿದೆ ಎಂದು ಅರ್ನಾಲ್ಡ್ ಹುಡುಕುತ್ತಾನೆ.

ಅವನ ಕಾಲದ ಶ್ರೀಮಂತರು ಒಂದು ವರ್ಗವಾಗಿ ‘ಬಾರ್ಬೇರಿಯನ್ನರು’ ಎಂದು ಅರ್ನಾಲ್ಡ್ ಹೇಳುತ್ತಾನೆ. ಅವರದು ಅರ್ಥಹೀನ ಸಭ್ಯತೆ. ಬದಲಾವಣೆಗೆ ಅವರು ವಿರೋಧಿಗಳು. ಅವರ ಒರಟು ಮನಸ್ಸಿಗೆ ಹೊಸ ವಿಚಾರಗಳು ಒಗ್ಗುವುದಿಲ್ಲ. ದೈಹಿಕ ಪುಷ್ಟಿ, ಶಿಷ್ಟ ನಡವಳಿಕೆ – ‘ಇವಗಳಿಗೆ ಮಾತ್ರ ಅವರ ಆಸಕ್ತಿ ಸೀಮಿತ. ಮಧ್ಯಮ ವರ್ಗದವರಾದರೋ ‘ಫಿಲಿಸ್ಟೈನರು’ – ‘ಪಡೆಯು’ವುದೇ ಅವರ ಗುರಿ; ‘ಆಗು’ವುದಲ್ಲ. ಆಸ್ತಿ, ಕೈಗಾರಿಕೆ, ಉತ್ಪನ್ನ, ಪ್ರಗತಿ – ಇತ್ಯಾದಿಗಳು ಮನುಷ್ಯನ ಪರಿಪೂರ್ಣತೆಯ ಹಂಬಲಕ್ಕೆ ಸಾಧನಗಳು ಮಾತ್ರ ಎಂದು ಅವರು ತಿಳಿಯುವುದಿಲ್ಲ. ಅವುಗಳನ್ನು ಹೇಗಾದರೂ ಪಡೆದುಬಿಡಬೇಕು – ಇಷ್ಟೇ ಅವರ ಗುರಿ. ವಸ್ತುಗಳ ಗಳಿಕೆಯಷ್ಟಕ್ಕೇ ಅವರ ಬಡಿದಾಟ; ಅವರ ರಾಜಕೀಯ, ಕೂಲಿಕಾರ್ಮಿಕ ವರ್ಗವನ್ನು ಅರ್ನಾಲ್ಡ್ ‘ಪಾಪ್ಯುಲೇಸ್’ ಎಂದು ಕರೆಯುತ್ತಾನೆ. ಇವರ ಹಂಬಲ ಮಧ್ಯಮವರ್ಗಕ್ಕೆ ಏರಬೇಕೆಂಬುದು; ಆದರೂ ಇವರ ಶಕ್ತಿ ಪ್ರಚ್ಛನ್ನವಾದ್ದು ಎಂದು ಅರ್ನಾಲ್ಡ್ ತಿಳಿಯುತ್ತಾನೆ. ಶಿಕ್ಷಕನಾಗಿದ್ದ ಅರ್ನಾಲ್ಡ್‌ಗೆ ಇವರ ಬೆಳವಣಿಗೆಯಲ್ಲಿ, ಸಾಧ್ಯತೆಗಳಲ್ಲಿ ವಿಶೇಷ ಆಸಕ್ತಿ ಇತ್ತು.

ಅರ್ನಾಲ್ಡ್ ಪ್ರಕರ ಜ್ಞಾನದ ಮುಖ್ಯ ಗುಣ: ಯಾವ ವಿಷಯವನ್ನೇ ಆಗಲಿ ಅದರ ನಿಜಸ್ಥಿತಿಯಲ್ಲಿ ಅರಿಯುವುದು. ಒಳ್ಳೆಯದಕ್ಕಾಗಿ ಹಂಬಲಿಸುವ ನೈತಿಕ ಕೆಚ್ಚು ಈ ವಸ್ತುನಿಷ್ಠತೆಯ ಜೊತೆ ಸೇರಿಕೊಳ್ಳಬೇಕು. ಆದರೆ ತನ್ನ ಕಾಲದ ಹುಂಬ ಧಾರ್ಮಿಕ ಆಂದೋಳನಗಳಿಂದ ರೋಸಿಹೋಗಿದ್ದ ಅರ್ನಾಲ್ಡ್‌ಗೆ ಮಧ್ಯಮ ವರ್ಗದ ಧಾರ್ಮಿಕತೆ ಇನ್ನೊಂದು ‘ಗಳಿಕೆ’ಯಾಗಿ ಮಾತ್ರ ಕಂಡಿತ್ತು. ಧನಸಂಪಾದನೆ ಮತ್ತು ಪುಣ್ಯ ಸಂಪಾದನೆ – ಇವೇ ಮಧ್ಯಮ ವರ್ಗದ ಜೀವನದ ಗುರಿ. ಬಡವನಾಗಿಬಿಡಬಹುದೆಂಬ ದಿಗಿಲು ಹಾಗೂ ನರಕಕ್ಕೆ ಹೋದೇನೆಂಬ ಭಯ – ಇವುಗಳಿಂದಾಗಿ ಮಧ್ಯಮ ವರ್ಗದವರು ಸದಾ ನಿರತರಾಗಿರುತ್ತಿದುದ್ದು; ಆಗುವುದಲ್ಲಿ ಅಲ್ಲ, ಗಳಿಸುವುದರಲ್ಲಿ. ಚರಿತ್ರೆಯಲ್ಲಿ ಹೀಬ್ರಾಯಿಕ್ ಮೂಲದ ನೈತಿಕ ನಿಷ್ಠಾವಂತಿಕೆಯೂ, ಹೆಲನಿಕ್ ಮೂಲದ ಅರಿವಿನ ಉಲ್ಲಾಸವೂ ಹೆಣೆದುಕೊಳ್ಳುತ್ತವೆ. ಕೆಲವೊಮ್ಮೆ ಒಂದರ ಅವಶ್ಯಕತೆ ಹೆಚ್ಚಿರುತ್ತದೆ; ಇನ್ನು ಕೆಲವೊಮ್ಮೆ ಇನ್ನೊಂದು ಹೆಚ್ಚು ಮುಖ್ಯರಾಗುತ್ತದೆ. ಮನಸ್ಸು ಹೊಸ ವಿಚಾರಗಳಿಗೆ ತೆರೆದುಕೊಳ್ಳಬೇಕಾದ ತನ್ನ ಕಾಲದಲ್ಲಿ ಹೀಬ್ರಾಯಿಕ್ ಅಂಶ ಅತಿಯಾಯಿತೇನೋ ಎಂದು ಅರ್ನಾಲ್ಡ್ ಭಾವಿಸುತ್ತಾನೆ. ಯಾವ ವಿಷಯವನ್ನೇ ಆಗಲಿ ಅದನ್ನು ಅದರ ನಿಜ ಸ್ವರೂಪದಲ್ಲಿ ಅರಿಯುವುದೇ ಮುಖ್ಯವೆಂದು ತಿಳಿದಿದ್ದ ಅರ್ನಾಲ್ಡ್ ಒಟ್ಟಿನಲ್ಲಿ ಹೆಲನಿಕ್ ಅಂಶಕ್ಕೆ ವಾಲಿದ್ದಾನೆ ಎಂದು ನಮಗೆ ಅನ್ನಿಸುತ್ತದೆ.

ಜ್ಞಾನದ ಉಲ್ಲವಾಸವೇನೂ ಅನೈತಿಕವಲ್ಲ. ಸತ್ಯ ಮತ್ತು ಅಹಿಂಸೆ ಬೇರೆಬೇರೆಯಲ್ಲವೆಂದು ತಿಳಿದಿದ್ದ ಗಾಂಧೀಜಿ ಎರಡಕ್ಕೂ ತಾನು ಒಟ್ಟಾಗಿ ನಿಷ್ಠನಾಗಿರಬಲ್ಲನೆಂದು ತಿಳಿದಿದ್ದರು. ಆದರೂ, ಸತ್ಯ ಅಹಿಂಸೆಗಳು ಒಂದು ವೇಳೆ ಬೇರೆಬೇರೆಯಾಗಿದ್ದ ಪಕ್ಷದಲ್ಲಿ, ಎರಡರಲ್ಲಿ ಯಾವುದಕ್ಕೆ ನಿಮ್ಮ ನಿಷ್ಠೆ ಎಂದು ಅವರನ್ನು ಕೇಳಿದಾಗ, ‘ಸತ್ಯಕ್ಕೇ’ ಎಂದಿದ್ದರು. ಇದು ಅರ್ನಾಲ್ಡ್ ಭಾಷೆಯಲ್ಲಿ ‘ಹೆಲನಿಕ್’ ಉತ್ತರ.

ಈಗ ಕೆಲವು ಪ್ರಶ್ನೆಗಳು

೧. ಅರ್ನಾಲ್ಡ್‌ ಮಾಡಿದಂತೆ ನಮ್ಮ ಪ್ರಚಲಿತ ಸಂಸ್ಕೃತಿಯನ್ನೂ ತೀವ್ರವಾದ ವಿಮರ್ಶೆಗೆ ಗುರಿಪಡಿಸುವುದು ಹೇಗೆ? ೨. ನಮ್ಮ ವೈದಿಕ ಸಂಸ್ಕೃತಿ, ಜನಸಾಮಾನ್ಯರ ಸಂಸ್ಕೃತಿ, ಈಚೆಗೆ ತಲೆಯೆತ್ತುತ್ತಿರುವ ಧಾರ್ಮಿಕ ಪಂಥಗಳು – ಇವುಗಳನ್ನು ಒಟ್ಟಾಗಿ ಅರಿಯುವುದು ಹೇಗೆ? ೩. ನಮ್ಮ ಪ್ರಜಾಸತ್ತೆ ಪಾಪ್ಯುಲಿಸ್ಟ್ ಆಗುತ್ತಿರುವುದರಲ್ಲಿನ ಅಪಾಯವೇನು? ೪. ಈ ಅಪಾಯದ ಹಿಂದೆ ಅವ್ಯಕ್ತವಾಗಿ ಯಾವ್ಯಾವ ಪೌರಾಣಿಕ ನಂಬಿಕೆಗಳೂ ಕೆಲಸಮಾಡುತ್ತಿವೆ? ೫. ಪಾಶ್ಚಿಮಾತ್ಯ ವಿದ್ಯಾಭ್ಯಾಸದಿಂದ ಪ್ರಭಾವಿತರಾಗಿ ವಿಚಾರವಾದಿಗಳೆಂದುಕೊಳ್ಳುವವರಲ್ಲೂ ತಮ್ಮ ನಿಸ್ಸಹಾಯಕತೆಯಿಂದಾಗಿ, ಅಥವಾ ತಮ್ಮಲ್ಲಿ ಅಡಗಿರುವ ಹಳೆಯ ನಂಬಿಕೆಗಳಿಂದಾಗಿ, ಪಾಪ್ಯುಲಿಸ್ಟ್ ಪ್ರವಾಹಕ್ಕೆ ಇದಿರಾಗುವ ಶಕ್ತಿ ಕುಂಠಿತವಾಗಿದೆಯೆ? ೬. ಹಿಂದಿನ ಕಾಲಗಳಲ್ಲಿ ಭಾರತದ ಬೌದ್ಧಿಕ ಪರಂಪರೆ ಜನಸಾಮಾನ್ಯರ ನಂಬಿಕೆ ಆಚರಣೆಗಳ ಜೊತೆ ಗುದ್ದಾಡಿದಂತೆ, ಅವನ್ನು ಒಳಗೊಳ್ಳುತ್ತಲೇ ಬದಲಾಯಿಸುತ್ತ ಬದಲಾಗುತ್ತ ಹೋದಂತೆ ಈಗೇಕೆ ಆಗುತ್ತಿಲ್ಲ? ೭. ಆಂಗ್ಲ ವಿದ್ಯಾಭ್ಯಾಸದಿಂದ ಪಡೆದ ಬೌದ್ಧಿಕತೆ ಈ ಜನರಿಗೂ ಸಾಮಾನ್ಯರಿಗೂ ಯಾವ ಕೊಂಡಿಯೂ ಇಲ್ಲದಂತೆ ಮಾಡಿದೆಯೆ? ಇದರ ಪರಿಣಾಮ ಇತ್ತ ಅನುಕರಣೆಯ ಶುಷ್ಕ ಬೌದ್ಧಿಕತೆಯಾಗಿ, ಅತ್ತ ಹುಂಬ ರಾಜಕೀಯ ಧಾಮಿಕ ಚಳವಳಿಗಳಾಗಿ ವ್ಯಕ್ತವಾಗುತ್ತಿವೆಯೇ? – ಈ ಪ್ರಶ್ನೆಗಳ ಸರಮಾಲೆಯನ್ನು ನಾನು ಈಗ ಎತ್ತಬಲ್ಲೆ, ಉತ್ತರಿಸಲಾರೆ. ಪ್ರಶ್ನೆಗಳನ್ನು ನಮ್ಮ ಪರಿಸ್ಥಿತಿಗೆ ಪ್ರಕೃತವೆಂಬಂತೆ ಸರಿಯಾಗಿ ಎತ್ತಿದ್ದೇನೆಯೋ ಎಂಬುದರಲ್ಲಿ ನನಗೆ ಅನುಮಾನಗಳಿವೆ. ಏಟ್ಸ್‌ಕವನದ ಸಾಲುಗಳು ಈ ಸಂದರ್ಭದಲ್ಲಿ ಅರ್ಥಪೂರ್ಣವೆನ್ನಿಸಬಹುದು. “The best lack all conviction, while the worst are full of passionate intesity.”

ವೈಯಕ್ತಿಕವಾಗಿ ಹೇಳುವುದಾದರೆ ಭಾರತೀಯ ಪರಂಪರೆ ಬಗ್ಗೆ ನನ್ನ ತಿಳಿವಳಿಕೆ ತೀರಾ ಕಡಿಮೆಯೆಂದು ನನಗೆ ನನ್ನ ಬಗ್ಗೆಯೇ ತೀವ್ರ ಅಸಮಾಧಾನವಿದೆ. ವೃತ್ತಿಯಿಂದಾಗಿ, ಜೀವನ ಕ್ರಮದಿಂದಾಗಿ ನಾನು ವಯಸ್ಕನಾದನಂತರ ಬಾಲ್ಯದಲ್ಲಿ ನಾನು ಕಿವಿಯಿಂದ ಕೇಳಿ ತಿಳಿದದ್ದನ್ನು ಕೂಲಂಕಷವಾಗಿ ಓದಿದ್ದೇ ಇಲ್ಲ. ಅಧ್ಯಯನಶೀಲತೆಯಿಂದ ಓದಲೇಬೇಕಾದ ರಾಮಾಯಣ ಭಾರತ, ಬೃಹತ್ಕಥಾ, ಉಪನಿಷತ್ತುಗಳು, ಗೀತೆ, ಈ ಗ್ರಂಥಗಳಿಗೂ ನನಗೂ ನಡುವೆ ಹಲವು ಇಂಗ್ಲಿಷ್ ಪುಸ್ತಕಗಳು ಅಡ್ಡಬಂದಿವೆ. ಏಟ್ಸ್ ಸಾಲಿನ ‘ಉತ್ತಮ’ರಲ್ಲಿ ಭಾರತದ ನನ್ನಂಥವರು ಸೇರಿದ್ದಾರೆಂಬ ಅಹಂಕಾರವೂ ಹಾಸ್ಯಾಸ್ಪದವೇ.

ಈ ಲೇಖನವನ್ನು ತಯಾರಿಸುತ್ತಿದ್ದಂತೆ ಅದೃಷ್ಟವಶಾತ್ ಪದ್ಮನಾಭ ಎಸ್. ಜೈನಿ ಎಂಬುವರು ಇಂಗ್ಲಿಷ್‌ನಲ್ಲಿ ಬರೆದೊಂದು ಲೇಖನ ನನಗೆ ಕಣ್ಣಿಗೆ ಬಿತ್ತು. (Chapters in Indian Civilization, University of Wisconsin) ಇಂಥ ವಿಷಯಗಳ ಬಗ್ಗೆ ನನ್ನ ಜ್ಞಾನ ತುಂಬ ತೆಳುವಾದ್ದರಿಂದಲೋ ಏನೋ ನಾನು ಓದಿದ್ದು ನನ್ನ ಮೇಲೆ ತುಂಬ ಪರಿಣಾಮ ಮೂಡಿತು. ಅಯ್ಯಪ್ಪ ಇತ್ಯಾದಿಗಳ ಬಗ್ಗೆ ನಾನು ಹಿಂದೆ ದಾಖಲು ಮಾಡುತ್ತ ಹೋದ ನನ್ನ ಸಹಜಪ್ರತಿಕ್ರಿಯೆಗಳನ್ನು ಒಂದು ವಿನ್ಯಾಸದಲ್ಲಿಟ್ಟು ನೋಡಬಹುದೆನ್ನಿಸಿತು. ಅರ್ನಾಲ್ಡ್‌ಗೆ ತನ್ನ ಸಂಸ್ಕೃತಿಯ ಮೂಲಾರ್ಕಗಳನ್ನು ಹೀಬ್ರಾಯಿಕ್ ಮತ್ತು ಹೆಲನಿಕ್ ಎಂದು ವಿಂಗಡಿಸಿ ನೋಡಿದ್ದರಿಂದ ದೊರೆತ ಪ್ರವೇಶ, ಸ್ಪಷ್ಟತೆಗಳು ನಮಗೂ ಭಾರತದ ಸಂಕೀರ್ಣ ಸಾಂಸ್ಕೃತಿಕ ಹೆಣಿಗೆಯಲ್ಲಿ ಮುಖ್ಯವಾದ ಎರಡು ಎಳೆಗಳನ್ನು ಬಿಡಿಸಿ ನೋಡುವುದರ ಮುಖೇನ ದೊರೆಯಬಹುದೇನೊ ಎನ್ನಿಸಿತು. ಈ ಎರಡು ಮುಖ್ಯ ಎಳೆಗಳು ‘ವೈದಿಕ’ ಮತ್ತು ‘ಶ್ರವಣ’ ಪರಂಪರೆಗಳು. ಹಿಂದಿನ ಅರ್ಥಪೂರ್ಣ ಪರಂಪರೆಗಳಾಗಿದ್ದ ಈ ಎರಡರ ಇವತ್ತಿನ ಬಿಕನಾಸಿ ಪ್ರತಿನಿದಿಗಳಾಗಿ ನ್ಯೂಯಾರ್ಕ್‌‌ನ್ನು ತಾನು ಸೇರಬೇಕಾದ ಸ್ವರ್ಗವೆಂದು ಭಾವಿಸುವ, ಪ್ರಾಯಶಃ ತನ್ನ ಗುರಿ ಫಲಿಸಿದ ಮೇಲೆ ಟೆರಲಿನ್ ನೂಲಿನ ಜನಿವಾರ ಹಾಕಿಕೊಳ್ಳುವ ಬ್ರಾಹ್ಮಣನೂ, ಮೈಕಿನಲ್ಲಿ ಮಧ್ಯರಾತ್ರಿ ತನ್ನ ಭಕ್ತಿಯನ್ನು ಅರಚುವ ಅಯ್ಯಪ್ಪನ ಕುರುಚಲು ಗಡ್ಡದ ಭಕ್ತನೂ ನನಗೆ ಎದುರಾದರು. ಮುಖಾಮುಖಿಯಾಗದ ನಮ್ಮ ಸಂಸ್ಕೃತಿಯ ಈ ಎದುರು-ಬದರು ಪ್ರತಿನಿಧಿಗಳು ನನ್ನ ವಾದಕ್ಕೆ ತೀರಾ ನೀಟಾದ ನಾಟಕೀಯತೆಯನ್ನು ಒದಗಿಸಬಲ್ಲರೆಂಬ ಅನುಮಾನದಲ್ಲೂ ನನ್ನ ವಿಚಾರವನ್ನು ಮುಂದುವರಿಸುವೆ. ನಾನು ಸಮಾಜವಿಜ್ಞಾನಿಯಲ್ಲ – ಸಾಹಿತಿ. ಹೀಗೆ ಸಾಹಿತಿಯಾದವನೊಬ್ಬ ತನ್ನದೇ ಒಳನೋಟಗಳಿಗೆ ಬದ್ಧನಾಗಿದ್ದಾಗ ಅವನಿಂದ ಹೊಮ್ಮುವ ಊಹಾಪೋಹಗಳು ಪೊಳ್ಳಿರಲಾರವು ಎಂಬ ನಂಬಿಕೆಯನ್ನೂ ಇಲ್ಲಿ ನಾನು ಮುಚ್ಚಿಡುತ್ತಿಲ್ಲ.

ಅರ್ನಾಲ್ಡ್‌ನ ‘ಹೆಲನಿಕ್’, ‘ಹೀಬ್ರಾಯಿಕ್’ ಅಂಶಗಳು ಬೆರೆಯುತ್ತ ಹೋದಂತೆ ಭಾರತದಲ್ಲೂ ‘ವೈದಿಕ’ ಮತ್ತು ‘ಶ್ರಮಣ’ ಅಂಶಗಳು ಸಂಸ್ಕೃತಿಯಲ್ಲಿ ಹೆಣೆದುಕೊಂಡಿದ್ದಾವೆಯೆ ಎಂಬುದರ ಅಧ್ಯಯನವಾಗಬೇಕಾಗಿದೆ. ಈಗಲೂ ನಮ್ಮ ವಿಚಾರಕ್ರಮಗಳನ್ನು, ಧಾರ್ಮಿಕ ಚಳುವಳಿಗಳನ್ನು ಇವು ನಿರ್ಣಯಿಸುವಂತೆ ಪ್ರಭಾವಶಾಲಿಯಾಗಿ ಉಳಿದಿವೆಯೆ? ‘ಶ್ರಮ’ ಎನ್ನುವ ಶಬ್ದದಿಂದ ಹುಟ್ಟಿದ ಈ ಶ್ರಮಣರನ್ನು ವೇದದ ಋಷಿಗಳೂ ಬಲ್ಲರು ಎಂದು ಜೈನಿ ಹೇಳುತ್ತಾರೆ. ಈ ಶ್ರಮಣರು ಟಾಯನ್‌ಬಿ ಹೇಳುವ internal proletarians ರಂತೆ ಕಾಣುತ್ತಾರೆ. ಎಲ್ಲ ಸಮಾಜಗಳ ಒಳಗೂ ಆಯಾ ಸಮಾಜ ನಿರ್ವೀರ್ಯವಾಗುತ್ತಿದ್ದಂತೆ ಅದಕ್ಕೆ ಜೀವಸ್ಪರ್ಶ ಮಾಡಬಲ್ಲ ಶಕ್ತಿ ಈ ‘ಒಳದಲಿತ’ರಿಗೆ ಇರುತ್ತದೆ. ಬುದ್ಧ, ಕ್ರಿಸ್ತ, ಬಸವ ಅಂಥವರು; ತಮ್ಮ ತಮ್ಮ ಕಾಲದ ಯಜಮಾನ ಸಂಸ್ಕೃತಿಗಳಲ್ಲಿ ಸೃಜನಶೀಲ ಅಲ್ಪ ಸಂಖ್ಯಾತರೆಂದರೆ ಇವರು ಮತ್ತು ಇವರ ಹಿಂದಿರುವ ಜನ. ಶ್ರಮಣರು ತಮ್ಮ ಸುವ್ಯವಸ್ಥಿತ ಸಮಾಜಗಳಿಂದ ಹೊರಗೆ ನಿಂತ ಕ್ಷುದ್ಧರು. ಉದ್ದ ಕೂದಲಿನ ಈ ‘ಕೇಶಿನ್‌’ರನ್ನು ಋಗ್‌ವೇದ ಹೀಗೆ ವರ್ಣಿಸುತ್ತದೆ: ‘ಉದ್ದ ಕೂದಲಿನವರು ಅಗ್ನಿಯನ್ನು ಒಯ್ಯುವರು, ವಿಷವನ್ನು ಒಯ್ಯುವರು, ಭೂಮಿ ಸ್ವರ್ಗಗಳನ್ನು ಒಯ್ಯುವರು, ಈ ಉದ್ಧ ಕೂದಲಿನವರನ್ನು ಬೆಳಕೆನ್ನುತ್ತಾರೆ. ಈ ಮುನಿಗಳು ಗಾಳಿಯಿಂದ ಆವೃತರು ಅಥವಾ ಮಲಿನ ಕಾವಿಯನ್ನುಟ್ಟವರು[3]– ಇಂಥ ಮಾತುಗಳಲ್ಲಿ ಅಚ್ಚರಿಯಿಂದಲೂ ಅನುಮಾನದಿಂದಲೂ ಈ ಶ್ರಮಣರು ವರ್ಣಿತರಾಗುತ್ತಾರೆ. ಮನುಷ್ಯನ ಹಂಬಲಗಳು ಯಜ್ಞದಿಂದ ಫಲಪ್ರದವಾಗುತ್ತವೆ ಎಂಬ ವೈದಿಕ ಆಶಾವಾದವನ್ನೂ ಅದರ ಭಾವಗೀತಾತ್ಮಕ ಜೀವನ ಸಂತೋಷವನ್ನೂ ಕೆಣಕುವಂಥ ಜನ – ಈ ಶ್ರಮಣರು. ಜೈನಿಯ ಪ್ರಕಾರ ಈ ಶ್ರಮಣರು ಪ್ರಾಯಶಃ ಅವೈದಿಕರು (ಶೂದ್ರರು?) – ಇವರೇ ಕರ್ಮ ಮತ್ತು ಪುನರ್ಜನ್ಮದ ವಾದಿಗಳು. ಸತ್ತ ನಂತರ ಪುರುಷನಿಗೆ ಏನಾಗುತ್ತದೆಂದು ಅರ್ಥಭಾಗನು ಯಾಜ್ಞವಲ್ಕ್ಯನನ್ನು ಕೇಳಿದಾಗ, ಯಾಜ್ಞವಲ್ಕ್ಯನು ಅವನನ್ನು ಕರೆದುಕೊಂಡು ಹೋಗಿ ಗುಟ್ಟಿನಲ್ಲಿ ಹೀಗೆ ಹೇಳುತ್ತಾನೆ : ‘ಇದು ಸಾರ್ವಜನಿಕವಾಗಿ ನಾವು ಮಾತಾಡಬಾರದ ವಿಷಯ.’ ಉಪನಿಷತ್ತು ಅವರ ಉತ್ತರವನ್ನು ವಿವರಿಸುತ್ತವೆ.: ‘ಇಬ್ಬರೂ ದೂರ ಹೋಗಿ ಚರ್ಚಿಸಿದರು. ಅವರು ಚರ್ಚಿಸಿದ್ದು ‘ಕರ್ಮ’ವನ್ನು…’ ಜೈನಿಯ ಪ್ರಕಾರ ಈ ಗುಟ್ಟಿಗೆ ಕಾರಣ – ಕರ್ಮದ ವಿಚಾರ ಶ್ರಮಣರದ್ದು ಎಂಬುದು. ಶ್ರಮಣರ ವಿಶಿಷ್ಟತೆಯಿರುವುದು ಅವರ ವಿರಕ್ತಿಯಲ್ಲಿ, ‘ಪುರುಷಸೂಕ್ತ’ದ ಆಶಾವಾದಕ್ಕೆ ಶ್ರಮಣರು ವಿರೋಧಿಗಳು. ಇವರಲ್ಲೆಲ್ಲ ಅತಿಶ್ರೇಷ್ಠರಾದ ಬುದ್ಧ ಶ್ರಮಣರ ಅತಿಯಾದ ದೇಹದಂಡನೆಯನ್ನೂ ನಿಗ್ರಹವನ್ನೂ ವಿರೋಧಿಸಿದ. (ವೈದಿಕ ಶ್ರಮಣಗಳನ್ನು ಬೆಸೆದ?). ಶ್ರಮಣ ಮತ್ತು ವೈದಿಕರ ತಿಕ್ಕಾಟದಿಂದ ಭಾರತೀಯ ಪರಂಪರೆ ಸೃಜನಶೀಲವಾಗಿ ಉಳಿಯಿತು ಎನ್ನಬಹುದು. ಪ್ರಾಚೀನ ಕಾಲದಲ್ಲಿ ಬುದ್ಧಹುಟ್ಟಿದಂತೆಯೇ, ನಮ್ಮ ಕಾಲದಲ್ಲಿ ಗಾಂಧೀಜಿ ಈ ತಿಕ್ಕಾಟದ ಫಲವೆನ್ನಬಹುದೇನೋ? ಉಪನಿಷತ್ತುಗಳ ಅತ್ಯಂತ ಗಹನ ವಿಚಾರಗಳೂ ಈ ಶ್ರಮಣರ ಸವಾಲಿನಿಂದ ಉದ್ಭವಿಸಿರಬಹುದು. ಶ್ರಮಣರಲ್ಲಿ ಕೆಲವರು – ಪುರಾಣಕಶ್ಯಪ, ಮಕ್ಕಲಿಗೋಸಾಲ, ಅಜಿತಕೇಶ ಕಂಬಲಿ, ಕಚ್ಛಾಯನರಂಥವರು – ಅತ್ಯಂತ ಆಧುನಿಕ ಅಸ್ತಿತ್ವವಾದಿಗಳನ್ನು ನೆನಪಿಗೆ ತರುತ್ತಾರೆ. ಅಂಬೇಡ್ಕರ್‌ರಂತಹ ಆಧುನಿಕ ಮಹಾವ್ಯಕ್ತಿಯೊಬ್ಬರು ಅಸ್ಪೃಶ್ಯರ ಬಿಡುಗಡೆಗಾಗಿ ಹಲವು ಮಾರ್ಗಗಳನ್ನು ಹುಡುಕಿ, ಕೊನೆಯಲ್ಲಿ ಬುದ್ಧನಿಗೆ ಶರಣಾದರೆಂಬುದು ಭಾರತೀಯ ಪರಂಪರೆಯಲ್ಲಿನ ಈ ಶ್ರಮಣ ಅಂಶ ಈ ಕಾಲದ ಬಿಕ್ಕಟ್ಟುಗಳಿಗೂ ಜವಾಬಾಗಬಲ್ಲುದೆಂಬ ನಂಬಿಕೆಯನ್ನು ಹುಟ್ಟಿಸುತ್ತದೆ.

ಈ ಕಾಲದ ಧಾರ್ಮಿಕ ಸಾಂಸ್ಕೃತಿಕ ಆಂದೋಳನಗಳನ್ನು ವೈದಿಕ-ಶ್ರಮಣ ಚೌಕಟ್ಟಿನಲ್ಲಿಟ್ಟು ನೋಡುವುದರಲ್ಲಿ ಸಂಕೀರ್ಣವಾದ್ದನ್ನು ಸರಳಗೊಳಿಸುವ ಅಪಾಯವಿದೆಯೆಂಬುದು, ಶ್ರಮಣರು ನೆನಪಿಗೆ ತರುವ ಅಯ್ಯಪ್ಪ ಪಂಥ ತೀರಾ ಜುಜುಬಿಯಾಗಿ ವ್ಯಕ್ತವಾಗುತ್ತಿದೆಯೆಂಬುದು ನನ್ನ ಆಲೋಚನಾಕ್ರಮವನ್ನು ಅಲ್ಲಗೆಳೆಯುವುದಿಲ್ಲ. ಸಾಂಸ್ಕೃತಿಕ ಅಭಿವ್ಯಕ್ತಿ ಕ್ಷುಲ್ಲಕವಾದ್ದಾಗಲೂ, ಅವು ಯಾವ ಮೂಲದಿಂದ ಹೊಮ್ಮುತ್ತಿದ್ದಾವೆ ಎಂಬುದರ ಅರಿವು ನಮ್ಮ ವಿಚಾರಕ್ಕೆ ಸೂಕ್ಷ್ಮತೆಯನ್ನು ತಂದುಕೊಡಬಲ್ಲದು. ನನ್ನ ವಾದಕ್ಕೆ ಮುಖ್ಯವಾದ ವಿಚಾರವೆಂದರೆ ಇದು : ವೈದಿಕ – ಶ್ರಮಣಗಳು ಈ ನಮ್ಮ ಕಾಲದಲ್ಲಿ ಮುಖಾಮುಖಿಯಾಗುತ್ತಿಲ್ಲ. ಐರೋಪ್ಯ ವಿದ್ಯೆಯಿಂದಾಗಿ ವೈದಿಕದ ವಾರಸುದಾರರು ಈ ದೇಶದ ಮಣ್ಣಿಗೆ ಅನ್ಯರಾಗಿಬಿಡುತ್ತಿದ್ದಾರೆ. ಸುತ್ತಲಿನ ಜನರಿಂದ ಅವರ ಕೊಡುಕೊಳ್ಳುವಿಕೆ ನಿಂತುಹೋಗುತ್ತಿದೆ. ಆದರೆ ಭಾರತದ ಅವೈದಿಕ ಮಂದಿ ಇಂದಿಗೂ ತೀವ್ರವಾದ ಧರ್ಮನಿಷ್ಠರಾಗಿ ಉಳಿದಿದ್ದಾರೆ. ಶ್ರಮಣದಿಂದ ದೂರವಾಗಿ ವೈದಿಕ ಶುಷ್ಕವಾಗಿದೆ; ವೈದಿಕವಾದ ವಂಚಿತವಾದ ಶ್ರಮಣ ಒರಟಾಗಿದೆ. ಹೀಗಾಗಿ ಈ ಎರಡೂ ಪರಂಪರೆಗಳೂ ಉತ್ಕಟತೆಯನ್ನೂ ಜ್ಞಾನವನ್ನೂ ಬೆಸೆಯಲಾರದೆ ಹೋಗಿ ಬರಡಾಗುತ್ತಿವೆ.

* * *

ಭೋಪಾಲಿನಲ್ಲಿ ಡಿಸೆಂಬರ್ ತಿಂಗಳಿನ ಕೊನೆಯ ವಾರದಲ್ಲಿ ನಡೆದ ಸಂಕಿರಣಕ್ಕಾಗಿ ಸಿದ್ಧಪಡಿಸಿದ ಇನ್ನೂ ವಿಸ್ತೃತವಾದ ಲಹರಿಯೊಂದರ ಸಂಕ್ಷಿಪ್ತರೂಪ ಮೇಲಿನದು. ಈ ಮಾತುಗಳನ್ನು ಆಡಿದ ನಂತರ ನನ್ನ ವಿಚಾರವನ್ನು ಚರ್ಚೆಗೆ ಎತ್ತಿಕೊಂಡವರು ಖ್ಯಾತ ಮಾನವಶಾಸ್ತ್ರಜ್ಞ ಡಾ. ರಾಯ್ ಬರ‍್ಮನ್, ಸಮಾಜಶಾಸ್ತ್ರಜ್ಞ ಪ್ರೊ. ಇಂದ್ರದೇವ್, ಬಂಗಾಳದ ಕಲಾವಿಮರ್ಶಕ ಪ್ರಣಾಬ್ ರಂಜನ್ ರಾಯ್ ಮತ್ತು ಗಾಂಧೀಜಿಯವರ ಮೊಮ್ಮಗ ತತ್ವಶಾಸ್ತ್ರಜ್ಞ ರಾಮಚಂದ್ರ ಗಾಂಧಿ. ರಾಮಚಂದ್ರ ಗಾಂಧಿ ತೀವ್ರವಾಗಿ ನನ್ನ ಮಾತುಗಳನ್ನು ಚರ್ಚಿಸುತ್ತ ನನ್ನ ಮಾತಿನ ಹಿಂದಿನ ಆರ್ತಧಾಟಿಯೇ ನನ್ನ ಕಾಣುವ ಶಕ್ತಿಯನ್ನು ಕುಗ್ಗಿಸಬಲ್ಲದು ಎಂದರು. ನಾನೊಬ್ಬ ಅದ್ವೈತಿಯಾಗಿ ನೋಡಿದ್ದಲ್ಲಿ ನಾನು ಹಂಗಿಸುವ ‘ಅವರು’ ನನ್ನಿಂದ ಪ್ರತ್ಯೇಕರಾದವರು ಎಂಬ ಭ್ರಮೆ ನನಗಿರುತ್ತಿರಲಿಲ್ಲ ಎಂದರು. ಮೇಲಿನ ಆತಂಕದ ಧಾಟಿಯ ನನ್ನ ಬರವಣಿಗೆಯೂ ಪಾಶ್ಚಾತ್ಯರ ಈಚಿನ ಪರಂಪರೆಯೊಂದರಿಂದ ಪ್ರೇರಿತವೆಂದೂ, ಈ ಬಗೆಯ ಆತಂಕದಿಂದ ನೋಡುವುದರ ಬದಲು ಅದ್ವೈತಿಯಾಗಿ ನೋಡಿದಲ್ಲಿ ಮನಸ್ಸು ಹೆಚ್ಚು ಆರ್ದ್ರವಾಗಿ ಅರಿಯಬಲ್ಲದೆಂದೂ ಅಂದರು. ಅವರ ಟೀಕೆ ಉತ್ಕಟವಾದ ಅವರ ವ್ಯಕ್ತಿತ್ವದ ಅತ್ಯಂತ ಆಕರ್ಷಕ ಪ್ರದರ್ಶನವೂ ಆಗಿತ್ತು. ಇದು ಅವರ ಅದ್ವೈತದ ಜೊತೆ ಹೇಗೆ ಸಮರ್ಪಕವೆನಿಸುತ್ತದೆ ಎಂದು ನಾನು ಅವರನ್ನು ಕೇಳಿದೆ. ತಾನು ಹೇಳುತ್ತಿರುವ ವಿಷಯದಷ್ಟೇ ತಾನು ಹೇಳುವ ಕ್ರಮವೂ ಚೆನ್ನಾಗಿರಬೇಕೆಂಬ ಮೋಹ ನನಗೆ ಪ್ರಿಯರಾದ ಈ ವ್ಯಕ್ತಿಗೆ ಇರಬಹುದೆನ್ನುವ ಸಂಶಯ ನನ್ನನ್ನು ಕಾಡಿತು. ಅಷ್ಟು ಆಕರ್ಷಕವಾಗಿತ್ತು – ಅವರ ಮಾತಿನ ಚಕಮಕಿ, ತನ್ನ ಮಾತಿನಿಂದ ತಾನೇ ಮತ್ತಾಗುವ ಅವರ ಹಾವಭಾವಗಳು, ಅವರು ಇಷ್ಟಪಡುವ ರಮಣನ ಅಭಿವ್ಯಕ್ತಿಯ ಕ್ರಮ ಮಾತ್ರ ಅವರ ಈ ಬಗೆಗೆ ತದ್ವಿರುದ್ದ.

ಪ್ರಣಾಬ್ ರಂಜನ್ ರಾಯ್ ಬಂಗಾಳದ ಪಾಪ್ಯುಲಿಸ್ಟ್ ಸಂಸ್ಕೃತಿಯೂ ಕನ್ನಡದ ಬಗೆಯಲ್ಲೆ ಮತಿಹೀನವಾಗುತ್ತಿದೆಯೆಂದೂ, ಸಿನಿಮಾದಿಂದ ಪ್ರೇರಿತವಾದ ಧಾರ್ಮಿಕ ಚಳವಳಿಗಳು ಅಲ್ಲೂ ಬೆಳೆಯುತ್ತಿದೆಯೆಂದೂ ನನ್ನನ್ನು ಸಮರ್ಥಿಸಿದರು. ಪ್ರೊಫೆಸರ್ ಇಂದ್ರದೇವ್ ಮತ್ತು ಡಾ. ರಾಯ್ ಬರ್ಮನ್‌ರಿಂದಲೂ ಬಲವಾದ ಬೆಂಬಲ ನನ್ನ ಆತಂಕಕ್ಕೆ ಸಿಕ್ಕಿತ್ತು. ರಾಮಚಂದ್ರ ಗಾಂಧಿಯಂತೆ ಈ ಸಮೂಹ ಸನ್ನಿಗಳನ್ನು ಅದ್ವೈತದ ಉಲ್ಲಾಸದಲ್ಲಿ ಸಹಿಸಲು  ಉಳಿದವರು ತಯಾರಿರಲಿಲ್ಲ. ಪ್ರಸಿದ್ಧ ಹಿಂದೀ ಸಾಹಿತಿ ನಿರ್ಮಲ್ ವರ್ಮರು ಮೂರ್ತ ಪ್ರಪಂಚದಿಂದ ಬಾಧಿತವಾಗದಂತೆ ಅದ್ವೈತಕ್ಕೆ ವಕೀಲಿ ವಹಿಸುವ ರಾಮಚಂದ್ರ ಗಾಂಧಿಯ ವಾದಸರಣಿಯಿಂದ ಕುಪಿತರಾದರು.

ನನ್ನ ಇಡೀ ಲೇಖನ ನಾನು ಬರೆಯುತ್ತಿದ್ದಾಗಿನ ಸನ್ನಿವೇಶಕ್ಕೆ ಅತ್ಯಂತ ಸದ್ಯವೆನ್ನುವಂತೆ ಪ್ರತಿಕ್ರಿಯಿಸುತ್ತ ಹುಟ್ಟಿದ್ದಾಗಿತ್ತು. ನಾನು ಬರೆಯುವಾಗ ಅಯ್ಯಪ್ಪ ಭಜನೆ ನಡೆಯುತ್ತಿತ್ತು. ಡಾ. ರಾಜಕುಮಾರ್ ಹಗರಣ ಪ್ರಕಟವಾಯಿತು – ಜೊತೆಗೇ ನನ್ನ ಓದು ಬರಹಗಳು ನಡೆದಿದ್ದುವು. ಮೂರ್ತದಿಂದ ಅಮೂರ್ತಕ್ಕೆ ಮತ್ತು ಮೂರ್ತಕ್ಕೆ ಚಲಿಸುತ್ತ, ಈ ಬಗೆಯಲ್ಲಿ ನನ್ನ ವಿಚಾರಗಳನ್ನು ಕ್ರಮೇಣ ಸ್ಪಷ್ಟಪಡಿಸಿಕೊಳ್ಳುತ್ತ, ನನ್ನ ಭಾವನೆಯ ಎಲ್ಲ ಗಂಟುಗೋಜಲುಗಳನ್ನೂ ಎದುರಿಡುವಂತೆ ನಾನು ಬರೆದಿದ್ದ ಲೇಖನದ ಹಿಂದಿದ್ದ ಆತಂಕ ಕೆಲವರಿಗೆ ಇಷ್ಟವಾಯಿತು, ಇನ್ನೂ ಕೆಲವರಿಗೆ ಅದೂ ಒಂದು ಆತ್ಮ ಪ್ರದರ್ಶನವೆನ್ನಿಸಿತು – ನನಗೆ ರಾಮಚಂದ್ರ ಗಾಂಧಿಯದೂ ಆತ್ಮ ಪ್ರದರ್ಶನವೆನ್ನಿಸಿದಂತೆ. ಹೀಗಾಗಿ ಚರ್ಚಿತವಾಗಬೇಕಾದ್ದು ಚರ್ಚೆಗೆ ದಕ್ಕಲಿಲ್ಲ. ನನ್ನ ಮನಸ್ಸಿನಲ್ಲಿ ಈಗ ಉಳಿದಿರುವುದು ರಾಮಚಂದ್ರ ಗಾಂಧಿ ಗಣೇಶನನ್ನು ಅದ್ಭುತವಾಗಿ ಸ್ತುತಿಸುವಂತೆ ವರ್ಣಿಸಿ ಓದಿದ ಒಂದು ಲೇಖನ.

* * *

ನನ್ನ ಈ ಟಿಪ್ಪಣಿಗಳು ಎತ್ತತ್ತಲೋ ಹರಿದು ಈಗ ಕರ್ನಾಟಕ ಆಂಧ್ರಗಳ ಚುನಾವಣೆ ಬಗ್ಗೆ ಅಂತ್ಯವಾಗುತ್ತಿರುವುದು ನನ್ನ ಲಹರಿಗೆ ಅಪ್ರಸ್ತುತವಲ್ಲ. ಬಹಳ ದಿನಗಳಿಂದ ನಾನು ಅನುಭವಿಸದೇ ಇದ್ದ ಸಂತೋಷ ವಿರೋಧಪಕ್ಷಗಳ ಗೆಲುವಿನಿಂದ ನನಗೆ ಆಗಿದೆ. ಭಾರತ ಒಂದು ಸಮುದಾಯವಾಗಿ ಉಳಿಯಬೇಕಾದರೆ ಅದರ ಅಸ್ತಿವಾರಗಳು; ಪ್ರಜಾತಂತ್ರ, ಜಾತ್ಯಾತೀತ ಸರ್ಕಾರ ಮತ್ತು ಫೆಡರಲ್ ವ್ಯವಸ್ಥೆಯ ಮಾದರಿಯ ರಾಜ್ಯಗಳು ಸ್ವಾಯತ್ತತೆ. ಪ್ರಜಾತಂತ್ರವನ್ನು ಕೆಣಕಲು ಹೋಗಿ ತುರ್ತುಪರಿಸ್ಥಿತಿಯ ನಂತರ ಶ್ರೀಮಂತಿ ಇಂದಿರಾಗಾಂಧಿ ಸೋಲನ್ನು ಅನುಭವಿಸಿದರು. ಸರ್ಕಾರದ ಜಾತ್ಯಾತೀತ (ಸೆಕ್ಯೂಲರ್) ನೀತಿಗೆ ಕಂಟಕವಾದರೆಂದು ಕೆಲವರು ಆರೆಸ್ಸಸ್ ಹಿಡಿತದಿಂದ ಬೆದರಿ ಜನತಾ ಸರ್ಕಾರವನ್ನು ಒಡೆದರು. ರಾಜ್ಯಗಳ ಸ್ವಾಯತ್ತತೆಯ ಅಭಿಮಾನಕ್ಕೆ ನೋವಾಗುವಂತೆ ಇಂದಿರಾ ಹೈಕಮ್ಯಾಂಡ್ ವರ್ತಿಸುತ್ತ ಬಂದಿದ್ದರಿಂದ ಹಲವು ರಾಜ್ಯಗಳು ಈಗ ಬಂಡೆದ್ದಿವೆ.

ಆಂಧ್ರದಲ್ಲಿ ಎನ್.ಟಿ.ಆರ್.ರ ಪೌರಾಣಿಕ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಜನ ಮಾಡಿದ ಬದಲಾವಣೆಗಿಂತಲೂ, ಕರ್ನಾಟಕದಲ್ಲಿ ಆದ ಬದಲಾವಣೆ ಹೆಚ್ಚು ಪಕ್ವವಾದ್ದು; ರಾಜಕೀಯವಾಗಿ ಪ್ರಬುದ್ಧವಾದ್ದು. ಆದರೂ ನನ್ನ ಲೇಖನದಲ್ಲಿರುವ ಅನುಮಾನಗಳನ್ನು ಬಿಟ್ಟುಕೊಡದಂತೆ ಎನ್‌ಟಿಆರ್ ರ ದಿಟ್ಟ ಹೆಜ್ಜೆಗಳನ್ನು ಅಭಿನಂದಿಸಬೇಕೆನಿಸುತ್ತದೆ. ರಾಮನನ್ನು ಧಾರ್ಮಿಕವಾಗಿ ಮೆಚ್ಚುತ್ತ ರಾಜಕೀಯವಾಗಿ ಕೃಷ್ಣನನ್ನು ತಾನು ಮಾದರಿಯಾಗಿಟ್ಟುಕೊಂಡಿದ್ದೇನೆಂಬ ಎನ್‌ಟಿಆರ್ ಕೇವಲ ಪಾಪ್ಯುಲಿಸ್ಟ್ ಸ್ಟಂಟ್‌ಗಳನ್ನು ಮಾಡುತ್ತ ತೃಪ್ತರಾಗುತ್ತಾರೋ ಅಥವಾ ಜನಜೀವನದ ಈಗ ಅಭದ್ರವಾದ ಅಡಿಪಾಯಗಳನ್ನೆ ಅಗತ್ಯವಿದ್ದಲ್ಲಿ ಬದಲಾಯಿಸುತ್ತಾರೊ ಕಾದು ನೋಡಬೇಕಾಗಿದೆ. ನಮ್ಮ ಪುರಾಣಗಳ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂಬುದಂತೂ ಆಂಧ್ರದಲ್ಲಿ ಸ್ಪಷ್ಟವಾಗಿದೆ; ಆದರೆ ಈ ಜೀವಂತಿಕೆ ‘ಇರುವುದನ್ನು ಅದರ ನಿಜಸ್ಥಿತಿಯಲ್ಲಿ ಅರಿಯಬಲ್ಲ’ ಜ್ಞಾನದಿಂದ ಪೋಷಿತವಾಗುತ್ತದೋ – ಅದು ನಮ್ಮ ಎದುರಿರುವ ಪ್ರಶ್ನೆ. ಕರ್ನಾಟಕದ ಶ್ರೀ ರಾಮಕೃಷ್ಣ ಹೆಗ್ಗಡೆಯವರಲ್ಲಿ ಯಥೇಚ್ಛವಾದ ವಿವೇಕ, ಮುತ್ಸದ್ದಿತನಗಳಿವೆ. ಈ ಗುಣಗಳು ನೈತಿಕ ಕೆಚ್ಚು ಮತ್ತು ಭಾವುಕತೆಗಳಿಂದ ಉದ್ದೀಪನಗೊಳ್ಳಬೇಕಾಗಿವೆ. ನಿಷ್ಠಾವಂತ ನೈತಿಕತೆ, ಶ್ರದ್ಧೆ, ಪ್ರೇಮ, ವಸ್ತುನಿಷ್ಠ ಜ್ಞಾನ – ಇವುಗಳ ಸಂಗಮದಿಂದ ನಮ್ಮನ್ನು ಹಿಗ್ಗಿಸಬಲ್ಲ ಕೆಚ್ಚಿನ ಅರಿವು ಹುಟ್ಟುತ್ತದೆ. ಶ್ರಮಣ ವೈದಿಕಗಳು ಹೀಗೆ ಕೂಡುತ್ತವೆ. ಈ ಕೂಡುವಿಕೆಯಲ್ಲೇ ನಮ್ಮ ಸಂಸ್ಕೃತಿಯ ಸೃಜನಶೀಲ ಜೀವಂತಿಕೆ ಅಡಗಿದೆ. ಜೊತೆಗೇ ಜನರೋಚಕ (Populist) ರಾಜಕೀಯ ಪ್ರಲೋಭನೆಯಿಂದ ನಮ್ಮ ಪ್ರಜಾತಂತ್ರವನ್ನು ಪಾರುಮಾಡುವ ಶಕ್ತಿಯೂ ಅದಕ್ಕಿದೆ.

ರುಜುವಾತು , ಜನವರಿಮಾರ್ಚ್, ೮೩.

* * *[1] ಡಾ. ರಾಜಕುಮಾರ್‌ರ ಪ್ರಕರಣ ‘ಪ್ರಜಾವಾಣಿ’ ‘ಡೆಕ್ಕನ್‌ಹೆರಾಲ್ಡ್‌’ಗಳಲ್ಲಿ ಪ್ರಕಟವಾಗುವಂತೆ ಶ್ರೀ ಹರಿಕುಮಾರ್‌ರನ್ನು ನಾನು ನನ್ನ ಮನೆಗೆ ಕರೆಸಿಕೊಂಡು ಒತ್ತಾಯಿಸಿದನೆಂಬ ‘ವದಂತಿ’ಯಿದೆಯೆಂದು ‘ಲಂಕೇಶ’ ಪತ್ರಿಕೆಯಲ್ಲಿ ಬರೆಯಲಾಯಿತು. ಕನ್ನಡದ ಗಣ್ಯ ಲೇಖಕರೊಬ್ಬರು ಸಂಪಾದಿಸುವ ಪತ್ರಿಕೆ ಈ ಮಟ್ಟಕ್ಕೆ ಇಳಿದದ್ದು ವಿಷಾದನೀಯವೆಂದು ಅನ್ನಿಸಬಹುದು – ಆದರೆ ‘ಪಾಪ್ಯುಲಿಸ್ಟ್‌’ ಸಂಸ್ಕೃತಿಯಿಂದ ಪ್ರಸಾರವನ್ನು ಹೆಚ್ಚಿಸಿಕೊಳ್ಳಬಯಸುವ ಸಾಹಿತಿ ಕೂಡ ಹೀಗಾಗುವುದು ಅನಿವಾರ್ಯ.

[2] ‘ಸಂಸ್ಕೃತಿ’ ನಾವು ಬಳಸುವ ಅರ್ಥದಲ್ಲಿ ನಮಗೂ ಹೊಸ ಪದವೇ. ಸಮುದಾಯಕ್ಕೂ ವ್ಯಕ್ತಿಗೂ ಒಟ್ಟಾಗಿ ಅನ್ವಯವಾಗುವ ಈ ಪದದ ಬದಲು ನಮ್ಮಲ್ಲಿದ್ದುದು ವ್ಯಕ್ತಿಗೆ ಮಾತ್ರ ಅನ್ವಯವಾಗುವ ‘ಸಂಸ್ಕಾರ’ ಎಂಬ ಪದ.

ಕೇಶ್ಯಗ್ನಿಂ ಕೇಸೀ ವಿಷಂ ಕೇಶೀ ಬಿಭರ್ತಿ ರೋದಸೀ
ಕೇಶೀ ವಿಶ್ವಂ ಸದೃಶೇ ಕೇಶೀದಂ ಜ್ಯೋತಿರುಚ್ಯತೇ
ಮುನಯೋ ವಾತರಶನಾಃ ಪಿಶ್ವಂಗಾ ವಸತೇ ಮಲಾ
ವಾತಸ್ಯಾನು ಧ್ರಾಜಿಂ ಯಾತಿ ಯದ್ಧೇವಾಸೋ ಅವಿಕ್ಷತ
– ಮಂ. ೧೦. ಅ. ೧೧. ಸೂ. ೧೩೬

ಈ ಸಾಲುಗಳಿಗೆ ಮೇಲೆ ನಾನು ಬಳಸಿರುವ ಅರ್ಥವಲ್ಲದೆ ಬೇರೆ ವಿವರಣೆಗಳೂ ಇವೆ. ಜೈನಿಯವರು ವೇದವನ್ನು ತಿಳಿಯುವ ದೃಷ್ಟಿ ಸಾಮಾಜಿಕ – ಐತಿಹಾಸಿಕ ದೃಷ್ಟಿಕೋನವನ್ನು ಪಡೆದದ್ದು. ವೇದಗಳನ್ನು ಐತಿಹಾಸಿಕ ‘ವಿಕಾಸ’ ದೃಷ್ಟಿಯಿಂದ ಗ್ರಹಿಸುವುದು ಒಂದು ಕ್ರಮವಾದರೆ, ‘ಪ್ರಕಾಶ’ಗೊಂಡ ಸತ್ಯವೆಂದು ಆಧ್ಯಾತ್ಮಿಕವಾಗಿ ಗ್ರಹಿಸುವುದು ಇನ್ನೊಂದು. ಈ ಎರಡರಲ್ಲಿ ನಾನು ಐತಿಹಾಸಿಕ ದೃಷ್ಟಿಯನ್ನು ನನ್ನ ಉದ್ದೇಶಕ್ಕೆ ಉಪಯುಕ್ತವೆಂದು ಆರಿಸಿಕೊಂಡಿದ್ದೇನೆ. ಈ ವಿಷಯದಲ್ಲಿ ನನಗಿರುವ ಪ್ರವೇಶ ಅಲ್ಪವಾದ್ದರಿಂದ ಇದೇ ಸರಿಯೆಂಬ ಹಟ ನನಗಿಲ್ಲ.