ಜನವರಿ ೧೯೮೧ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಕೇಂದ್ರದವರು ನಡೆಸಿದ ಒಂದು ವಿಚಾರ ಸಂಕಿರಣದಲ್ಲಿ ನಾನು ಆಡಿದ ಮಾತುಗಳನ್ನು ಟೇಪ್ ರಿಕಾರ್ಡ್ ಮಾಡಿಕೊಂಡು, ಅದರಿಂದ ಪಡೆದ ಪಾಠವನ್ನು ಪರಿಷ್ಕರಿಸಿ (ಭಾಷೆಯ ದೃಷ್ಟಿಯಿಂದ) ಸಿದ್ಧಪಡಿಸಿದ್ದು ಇದು. ನನ್ನ ಭಾಷಣ ಆ ಸಭೆಯಲ್ಲೂ ನಂತರವೂ ವಿವಾದವನ್ನೆಬ್ಬಿಸಿತು. ‘ಲಂಕೇಶ ಪತ್ರಿಕೆ’ಯಲ್ಲಿ ಗೆಳೆಯ ಚಫಾರವರೂ ತೇಜಸ್ವಿಯವರೂ ನನ್ನನ್ನು ಖಂಡಿಸಿ ಬರೆದರು. ಈ ಸಭೆಯ ನಂತರ ಊಟ ಮಾಡಿ ನಾವು ಬರುವಾಗ ಗೆಳೆಯ ಚಂಪಾ ಮತ್ತು ನನ್ನ ನಡುವೆ ನಡೆದೊಂದು ಮಾತುಕತೆಯೂ ಇಲ್ಲಿ ಉಲ್ಲೇಖಕ್ಕೆ ಅರ್ಹ. ದಾರಿಯಲ್ಲೊಬ್ಬರು ಚಂಪಾರನ್ನು ನಿಲ್ಲಿಸಿದರು. ಧಾರವಾಡದ ಕಡೆಯ ಹಳ್ಳಗರಂತೆ ಕಾಣುತ್ತಿದ್ದ ಅವರನ್ನು ಚಂಪಾ ಆತ್ಮೀಯತೆಯಿಂದ ಬೆಂಗಳೂರಿನಲ್ಲಿ ಮಾತಾಡಿಸಿದ್ದು ಕಂಡು ನನಗೆ ಸಂತೋಷವಾಯಿತು.ಸಂಪ್ರದಾಯಸ್ಥರಂತೆ ಕಾಣುತ್ತಿದ್ದ ಹಳ್ಳಿಗ, ಪ್ಯಾಂಟ್ ಧರಿಸಿದ ವಿಚಾರವಾದಿ ಚಂಪಾ-ಇಂಥ ಇಬ್ಬರನ್ನು ಬೆಂಗಳೂರಿನ ಬೀದಿಯಲ್ಲೂ ಆತ್ಮೀಯರನ್ನಾಗಿ ಮಾಡಿದ್ದು ಯಾವುದು? ತಾವು ಒಂದೇ ಊರವರು ಎಂಬುದಿರಬಹುದು, ಜಾತಿಯೂ ಇರಬಹುದು, ನಾವು ವರ್ಗದಲ್ಲಿ ಬೇರೆ ಬೇರೆಯಾದಾಗಲೂ ಜಾತಿ ನಮ್ಮನ್ನು ಒಟ್ಟಿಗೆ ತರುತ್ತದೆ. ಒಳ್ಳೆಯದಕ್ಕೂ, ಕೆಟ್ಟದಕ್ಕೂ, ಆಧುನಿಕ ಕಾಲದ ಸಂವೇದನೆಗೂ ಅಗತ್ಯಗಳಿಗೂ ಅಸಂಗತ ಮತ್ತು ವಿನಾಶಕಾರಿ ಎನ್ನಿಸುವ ಜಾತಿ ಇವತ್ತಿಗೂ ನಮ್ಮ ಆಪ್ತ ಸಂಬಂಧಗಳನ್ನು ನಿರ್ಧರಿಸುತ್ತದೆ. ಇದನ್ನು ಚಂಪಾರಿಗೆ ಸೂಚಿಸಿದೆ. ನಮ್ಮ ಅನುಭವಕ್ಕೆ ನಿತ್ಯ ಬರುವ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ವಿಚಾರ ಮಾಡುವುದರಿಂದ ಆಲೋಚನಾ ಕ್ರಮದಲ್ಲಿ ನಾವು ಸುಳ್ಳಾಗುತ್ತೇವೆಂದು ವಾದಿಸಿದೆ. ಚಂಪಾರು ನನ್ನ ಮಾತನ್ನು ತಳ್ಳಿ ಹಾಕಿದರು.

ಜಾತಿಯನ್ನು ನಾವು ಮೀರಬೇಕಾಗಿದೆ-ಈ ಕಾಲಕ್ಕದು ಖಂಡಿತ ಸಲ್ಲುವ ವ್ಯವಸ್ಥೆಯಂತೂ ಅಲ್ಲ. ಲೇಖಕರಾಗಿ ಚಂಪಾ, ತೇಜಸ್ವಿ, ಮಹಾದೇವ ನಾನು ನಮ್ಮ ವೃತ್ತಿಯಿಂದಾಗಿ ಪರಸ್ಪರ ಹಂಚಿಕೊಳ್ಳಬಲ್ಲ ಆಸಕ್ತಿಗಳು ನಮ್ಮ ನಮ್ಮ ಜಾತಿಯವರ ಜೊತೆ ನಮಗೆ ಇರುವುದಕ್ಕಿಂತಲೂ ಹೆಚ್ಚಿವೆ. ಇಷ್ಟಿದ್ದೂ ಜಾತಿ ನಮ್ಮೆಲ್ಲರನ್ನೂ ಕೆಟ್ಟದಕ್ಕೂ ಒಳ್ಳೆಯದಕ್ಕೂ ಸೆಳೆಯಬಲ್ಲ ಶಕ್ತಿಯಾಗಿ ಉಳಿದಿದೆ. ಇದನ್ನು ನಿಜದಲ್ಲಿ ಗೆಲ್ಲಬೇಕೆಂಬ ನಾವು ಕಣ್ಣುಬಿಟ್ಟು ಅನುಭವದ ಸತ್ಯವನ್ನು ನೋಡಬಲ್ಲವರಾಗಬೇಕು ಎಂಬ ಉದ್ದೇಶದಿಂದಲೇ ವಾಗ್ವಾದ ಮುಂದುವರಿಯಲೆಂದು, ಅದರಲ್ಲಿ ನಾನೇ ಸೋಲಲೆಂದು ಈ ಲೇಖನವನ್ನು ‘ಪಂಚಮ’ದಲ್ಲಿ ಪ್ರಕಟಿಸಿ ಎಂದು ಸಂಪಾದಕರನ್ನು ಕೇಳಿಕೊಂಡಿರುವೆ.

ಇವತ್ತು ನಾನು ಈ ವಿಷಯವನ್ನು ಒಂದು ಚರ್ಚೆಯಾಗಿ ಮಂಡಿಸುತ್ತಿದ್ದೇನೆ-ಕೆಲವು ಸಮಸ್ಯೆಗಳನ್ನು ಎತ್ತುವ ದೃಷ್ಟಿಯಿಂದ. ಈ ವಿಷಯದ ಬಗ್ಗೆ ನಾನು ಎಷ್ಟು ಬರೆದೋ, ಮಾತನಾಡಿಯೋ ಇದ್ದೇನೆ ಎಂದರೆ, ಈಗ ಮತ್ತೆ ನಿಮ್ಮೆದುರು ನಿಂತು ಹೊಸದೇನೂ ಹೇಳುವುದು ಇಲ್ಲದಿದ್ದರೂ ಪ್ರೊ. ಶಿವರುದ್ರಪ್ಪನವರ ವಿಶ್ವಾಸದ ಕರೆಗೆ ಒಪ್ಪಿಬಿಟ್ಟಿದ್ದರಿಂದ, ವಿಷಾದಪಡುತ್ತ ಮಾತನಾಡುತ್ತಿದ್ದೇವೆ.

ಎಪ್ಪತ್ತರ ದಶಕದ ಕೊನೆ ಅನೇಕ ಭ್ರಮೆಗಳ ಕೊನೆ ಎಂದು ನಾನು ಈಗಾಗಲೇ ಹಲವು ಸಾರಿ ಹೇಳಿಯಾಗಿದೆ; ಬರೆದೂ ಆಗಿದೆ. ಈ ಶತಮಾನದ ಮೊದಲಿನಿಂದ ಈವರೆಗೆ, ಪರ್ಯಾಯ ವ್ಯವಸ್ಥೆ ಎನ್ನಿಸಿದ್ದ ರಷ್ಯಾದ ಸೋವಿಯತ್ ಮಾಡೆಲ್, ಚೈನಾದ ಮಾಡೆಲ್, ವಿಯೆಟ್ನಾಂ ಮಾಡೆಲ್, ಕ್ಯೂಬಾದ ಮಾಡೆಲ್‌ಗಳೂ ಕೂಡ-ಅವುಗಳ ಘೋಷಿತ ಉದ್ದೇಶ ಏನೇ ಇರಲಿ, ತೋರಿಕೆಯ ವ್ಯತ್ಯಾಸಗಳು ಏನೇ ಇರಲಿ-ಆಧುನಿಕ ಯಂತ್ರ ನಾಗರಿಕತೆಯನ್ನು ತಮ್ಮ ತಮ್ಮ ದೇಶಗಳಲ್ಲಿ ಆದಷ್ಟು ಬೇಗ ತಂದುಕೊಳ್ಳಲು ಮಾಡಿದ ಪ್ರಯತ್ನಗಳೇ ಎಂದು ಎಪ್ಪತ್ತರ ದಶಕ ಮುಗಿಯುತ್ತಿದ್ದಂತೆ ನಮ್ಮಲ್ಲಿ ಕೆಲವರಿಗಾದರೂ ಅನ್ನಿಸಿದೆ. ಏಕೆಂದರೆ ಇಪ್ಪತ್ತರ ದಶಕದ ಯೂರೋಪಿನಲ್ಲಿ ಎಲ್ಲರಿಗೂ ರಷ್ಯಾ ಪರ್ಯಾಯ ವ್ಯವಸ್ಥೇ ತರುತ್ತೆ ಎಂದು ಅನ್ನಿಸಿತ್ತು. ಆದರೆ ಅದು ತರಲಿಲ್ಲ. ಈಗ ಚೈನಾ ದೇಶವೂ ಆಧೂನೀಕರಣದ ಹಾದಿಯಲ್ಲೇ ಇದೆ. ಗಾಂಧೀಜಿ ೧೯೦೮ರಲ್ಲಿ ‘ಹಿಂದ್ ಸ್ವರಾಜ್’ ಎನ್ನುವ ಪುಸ್ತಕವನ್ನು ಬರೆದರು. ಇದು ಬಹಳ ಮುಖ್ಯವಾದ ಪುಸ್ತಕ. ಇದರಲ್ಲಿ ಮನುಷ್ಯ ಜೀವನದ ಕೃತಾರ್ಥಗೆ ಈ ಆಧುನಿಕ ನಾಗರಿಕ ಅನಗತ್ಯ ಮಾತ್ರವಲ್ಲ, ಮಾರಕ ಕೂಡ ಎಂದಿದ್ದರು. ಆದರೆ ಆ ಆಧುನಿಕ ನಾಗರಿಕತೆಯೇ ನಮಗೂ ಕೂಡ-ಇಂಡಿಯಾದಲ್ಲಿ-ಮಾಡೆಲ್ ಆಯಿತು. ಆಧ್ಯಾತ್ಮ ಮಾತ್ರ ನಮಗೆ ಮುಖ್ಯ ಎಂದು ಜಂಭಪಡುತ್ತಾ ಇದ್ದರೂ ಕೂಡ ನೆಹರೂ ನೇತೃತ್ವದಲ್ಲಿ ನಾವು ಆಯ್ದದ್ದು ಈ ಆಧುನಿಕ ನಾಗರಿಕತೆಯನ್ನೇ.

ನೆಹರೂ ಪ್ರಧಾನಮಂತ್ರಿ ಆಗುವ ಸಂದರ್ಭದಲ್ಲಿ ಗಾಂಧೀಜಿ ನೆಹರೂಗೆ ಬರೆದ ಕಾಗದವೊಂದನ್ನು ಹೀಗೆ ಪ್ರಾರಂಭಮಾಡುತ್ತಾರೆ; ಈ ಕಾಗದವನ್ನು ಇಂಗ್ಲಿಷಿನಲ್ಲಿ ಬರೆಯಬೇಕೋ, ಹಿಂದೂಸ್ಥಾನಿಯಲ್ಲಿ ಬರೆಯಬೇಕೋ, ಗೊತ್ತಿಲ್ಲ; ಬಹಳ ದಿನ ಯೋಚನೆ ಮಾಡಿ ಇದನ್ನು ಬರೆಯುತ್ತಾ ಇದ್ದೇನೆ. ನಮ್ಮ ದೇಶ ಬೇರೆ ದೇಶಗಳ ಹಾಗಾಗಬಾರದು. ನಮ್ಮ ಮಾರ್ಗ ಬೇರೆ ಆಗಬೇಕು. ನೀವು ಎಂದೂ ನಾನು ಬರೆದ “ಹಿಂದ್ ಸ್ವರಾಜ್” ಅನ್ನು ಸೀರಿಯಸ್ಸಾಗಿ ಗಣನೆಗೆ ತೆಗೆದುಕೊಂಡ ಹಾಗಿಲ್ಲ ಎಂದು ಮುಂತಾಗಿ ಗಾಂಧೀಜಿ ನೆಹರೂರವರನ್ನು ಪ್ರೀತಿಯಿಂದ ದೂರುತ್ತಾರೆ. ನೆಹರೂ ಅದಕ್ಕೆ ಉತ್ತರಿಸುತ್ತಾ, “ನಾನು ಹಿಂದ್ ಸ್ವರಾಜ್ ಅನ್ನು ಓದಿದ್ದೇನೆ. ಆದರೆ ನನಗೆ ಅದು ವ್ಯಾವಹಾರಿಕ ಎಂದು ಅನ್ನಿಸುವುದಿಲ್ಲ. ನಾವು ಬೇರೆ ದಿಕ್ಕನ್ನೇ ಹಿಡಿಯಬೇಕು.” ಮತ್ತೆ ಮುಂದುವರಿಸುತ್ತಾ ನೆಹರೂ ಹೇಳುತ್ತಾರೆ. “ಯಂತ್ರನಾಗರೀಕತೆಯ ಆಧುನೀಕರಣ ಪ್ರಾಯಶಃ ಅನಿವಾರ್ಯ. ಇಡೀ ಜಗತ್ತೇ ಆತ್ಮನಾಶದ ಹಾದಿಯಲ್ಲಿರುವಂತೆ ನನಗೆ ಅನ್ನಿಸುತ್ತದೆ. ಆದ್ದರಿಂದ ನಾವು ಬೇರೇನು ಮಾಡುವುದಕ್ಕೆ ಸಾಧ್ಯ?”

ಹೀಗೆ ಅದರ ಬಗ್ಗೆ ಏನಾದರೂ ಮಾಡಲಿಕ್ಕ ಸಾಧ್ಯವಿದ್ದ ನೆಹರೂ, ಯಂತ್ರ ನಾಗರಿಕತೆಯನ್ನು ಒಂದು ಕಡೆ ಒಪ್ಪಿಕೊಂಡು, ಇನ್ನೊಂದು ಕಡೆ ಬಹಳ ದೊಡ್ಡ ತತ್ವಜ್ಞಾನಿಯಂತೆ ವಿಷಾದವನ್ನು ವ್ಯಕ್ತಪಡಿಸುತ್ತಾರೆ. ಪ್ರಾಯಶಃ ನಮ್ಮೆಲ್ಲರ ಮನಸ್ಥಿತಿ ನೆಹರೂರವರದ್ದು ಎಂದು ಅನ್ನಿಸುತ್ತದೆ. ನಾವು ಕೂಡ ಅದೇ ರೀತಿ ಯೋಚನೆ ಮಾಡುವವರಾಗಿದ್ದೇವೆ. ಒಂದು ದೃಷ್ಟಿಯಿಂದ ನಾವು ಆ ನೆಹರೂ ಯುಗದ ಫಲಗಳೇ. ಇದರ ಹಿಂದೆ, ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತ ತಾನಾಗಿಯೇ ಯಾವ ಬದಲಾವಣೆಯನ್ನು ಮಾಡಿಕೊಳ್ಳಲಾರದೆಂದು ತಿಳಿದಿದ್ದ ರಾಜರಾಮ ಮೋಹನರಾಯ್ ರವರು ಆಂಗ್ಲ ವಿದ್ಯಾಭ್ಯಾಸ ಮತ್ತು ಆಂಗ್ಲ ನಾಗರಿಕತೆ ಇಲ್ಲದ ಹೊರತು ನಾವು ಏನೂ ಅಗಲಿಕ್ಕೆ ಸಾಧ್ಯವಿಲ್ಲ ಎಂದಿದ್ದರು; ಇಂಗ್ಲಿಷ್ ಭಾಷೆಯನ್ನು ಕಲಿಸಿಕೊಡಬೇಕು ಎಂದು ರಾಯ್ ಆಗಲೇ ಬ್ರಿಟಿಷರನ್ನು ಬೇಡಿಕೊಂಡಿದ್ದರು. ಇವತ್ತು ನಾವು ಇರುವುದು ಆವತ್ತು ಮಾಡಿದ ಅನೇಕ ಆಯ್ಕೆಗಳ ಫಲ ಅನ್ನುವುದನ್ನು ನಾವು ಮರೆಯಬಾರದು.

ಅದರ ಜೊತೆಗೇ, ನಾವು ಯಂತ್ರ ನಾಗರಿಕತೆಯನ್ನು ಮತ್ತು ಆಧೂನಿಕ ಐರೋಪ್ಯ ಸಂಸ್ಕೃತಿಯನ್ನು ಒಪ್ಪಿಕೊಂಡ ನಂತರ ಒಂದು ಪಾಪಪ್ರಜೆಯಿಂದ ನರಳಲು ಆರಂಭಿಸಿದೆವು. ಅದಕ್ಕೋಸ್ಕರ ನಾವು ಪುರಾತನತೆಯನ್ನು ಆರಾಧಾನಾ ಭಾವದಿಂದ ಕಾಣುವ ‘ಒರಿಯಂಟಲಿಸ್ಟ್’ ಆದವು, ಹಿಂದೂ ದೇಶದ ಸಂಸ್ಕೃತಿ ಈ ದೇಶದಲ್ಲಿ ಗಾಢವಾಗಿದ್ದಾಗ ಜಗಳಗಳಲ್ಲಿಯೇ ಅದು ಬೆಳೆದುಬಂದದ್ದು ಎನ್ನುವುದನ್ನು. ರಾಮಾನುಜಾಚಾರ್ಯರು ಶಂಕರರನ್ನು ಒಪ್ಪುವುದಿಲ್ಲ; ಆನಂದತೀರ್ಥ ಶಂಕರನ್ನೂ, ರಾಮಾನುಜಾಚಾರ್ಯರನ್ನೂ ಒಪ್ಪುವುದಿಲ್ಲ. ಅಂಥವರೆಲ್ಲ ಪರಸ್ಪರ ಗುದ್ದಾಡಿಕೊಂಡು ಬೆಳೆಸಿದ ಈ ಸಂಸ್ಕೃತಿ ನಂತರ ನಮ್ಮ ಪಾಲಿಗೆ ಬಂದು ಓರಣವಾದ ಓರಿಯೆಂಟಲ್ ಸಂಸ್ಕೃತಿ ಆಯಿತು. ಯಾಕೆಂದರೆ ನಮ್ಮ ನಿತ್ಯ ಜೀವನದಲ್ಲಿ ನಾವು ಆಂಗ್ಲರಂತಾಗುತ್ತಾ ಹೋದ ಹಾಗೆ, ಭಾವುಕರಾಗಿ ಭಾರತೀಯರಾಗುತ್ತಾ ಹೋಗುತ್ತೇವೆ. ಹಿಂದೆ ರಾಜಾರಾಮ ಮೋಹನರಾಯ್ ಮತ್ತು ನೆಹರೂರವರು ಮಾಡಿದ ಈ ಆಯ್ಕೆಯ ಫಲ ನಾವು. ಇದರ ಪರಿಣಾಮವೆಂದರೆ, ಕ್ರಮೇಣ ಎಲ್ಲರಿಗೂ ಅಮೆರಿಕಾದಂತೆ ತಾವು ಆಗಬೇಕು ಅನ್ನುವ ಆಶೆ ಇದೆ. ಎಲ್ಲ ಕಡೆಯೂ ಈ ಅಮೆರಿಕಾ ಒಂದು ಮಾಡೆಲ್. ಇದನ್ನು ಯೋಚನೆ ಮಾಡುವಾಗ ನನಗೆ ಅನ್ನಿಸುತ್ತೆ, ಮಾರ್ಕ್ಸ್ ಮಾಡಿದ ತಪ್ಪುಗಳು ಮುಖ್ಯವಾಗಿ ಎರಡು ಎಂದು:

ಅ) ಉತ್ಪಾದನಾ ಸಾಧನಗಳು ಬೆಳೆದ ದೇಶದಲ್ಲಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿನ ಅಂತರ್ವಿರೋಧಗಳಿಂದ ಸಮಾಜವಾದಿ ವ್ಯವಸ್ಥೆ ಉದ್ಭವಿಸುತ್ತದೆಂದು ತಿಳಿದದ್ದು ಮೊದಲನೆಯ ತಪ್ಪು.

ಆ) ಎರಡನೆಯದು, ಮಾನವನ ಭೌತಿಕ ಪ್ರಗತಿ ಅಕುಂಠಿತವಾಗಿ ಬೆಳೆಯುವುದನ್ನು ಸಾಧ್ಯವಾಗಿಸುವ ಅಕ್ಷಯಪಾತ್ರೆ ಈ ನಮ್ಮ ಭೂಮಿ ಎಂದು ತಿಳಿದದ್ದು.

ಉತ್ಪಾದನಾ ಸಾಧನಗಳೆಲ್ಲಾ ಬೆಳೆದ ನಂತರ ಸಮಾಜವಾದ ಬರುತ್ತದೆಂದು ಮಾರ್ಕ್ಸ್ ತಿಳಿದಿದ್ದು ಯಾಕೆ ತಪ್ಪು ಅಂದರೆ:

ಅ) ಜರ್ಮನ, ಅಮೆರಿಕಾಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆ ಸಮಾಜವಾದಿ ಆಗಲಿಲ್ಲ.

ಆ) ಅವನ ತತ್ತ್ವವನ್ನೇ ಆಧರಿಸಿ ಲೆನಿನ್ ರಷ್ಯಾದಲ್ಲಿ ಕಟ್ಟಿದ ವ್ಯವಸ್ಥೆಯೂ ಮಾನವೀಯ ಸಂಬಂಧಗಳನ್ನು ಸಮಾಜವಾದಿ ತತ್ವ್ತದ ಆಧಾರದ ಮೇಲೆ ಬೆಳೆಸುವುದರಲ್ಲಿ ಸೋತಿದೆ.

ರಷ್ಯಾ ಇವತ್ತು ಸಮಾಜವಾದವನ್ನುಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಕ್ಕಿಲ್ಲ. ರಷ್ಯರನ್ನರು ಬಹ್ಯುತ್ಪನ್ನವನ್ನು ಆಶೀಸುವ ವ್ಯಕ್ತಿವಾದಿಗಳೇ. ಟೆಕ್ನಾಲಜಿ ಬೆಳೆದ ರಷ್ಯಾದಲ್ಲಿ ಇನ್ನೂ ನಾವು ಕಾಣುವ ಮನುಷ್ಯನ ಒಳ್ಳೆಯತನ, ಸ್ನೇಹ, ಪ್ರೇಮ, ಇತ್ಯಾದಿಗಳು, ದಾಸ್ತೋವಸ್ಕಿಯಂಥವರು ಝಾರ್ ಕಾಲದ ನರಕದಲ್ಲೂ ಕಂಡಂಥವೇ. ಅಂದಿನಿಂದ ಇಂದಿನವರೆಗೂ ಅದು ಉಳಿದುಬಂದಿದೆ. ಆದರೆ ಆಧುನಿಕತೆಯೇ (Modern Civilization) ಗುರಿಯಾದ ಯಂತ್ರ ವ್ಯವಸ್ಥೆ ಬೆಳೆದಂತೆ ಮನುಷ್ಯನಿಗೆ ಸಮುದಾಯದ ಕಲ್ಪನೆ ಸಡಿಲವಾಗುತ್ತಾ ಹೋಗುತ್ತದೆಂಬುದನ್ನೂ, ಆದರೆ ತೀರಾ ಬಡರಾಷ್ಟ್ರಗಳಲ್ಲಿ ವ್ಯಕ್ತಿಯೂ ಸಮುದಾಯದ ಅಂಗವೆಂಬ ಕಲ್ಪನೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಇರುತ್ತದೆಂಬುದನ್ನೂ ನಾವು ಮನಗಾಣಬೇಕಾಗಿದೆ. ಅಂದರೆ ಸಮಾಜವಾದಿ ವ್ಯವಸ್ಥೆ ಪ್ರಾಯಶಃ ಬೆಳೆದ ದೇಶದಲ್ಲಿ ಬರುವುದಕ್ಕಿಂತ ಬೆಳೆಯದೇ ಇರುವ ದೇಶಗಳಲ್ಲಿ ಸುಲಭವಾಗಿ ಬರುವುದು ಸಾಧ್ಯ ಎಂದು ನಮಗೆ ಅನ್ನಿಸುವುಕ್ಕೆ ಶುರುವಾಗಿದೆ. ಯಾಕೆಂದರೆ ಇಲ್ಲಿ, ಇಂಡಿಯಾದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ತನಗೊಂದು ಕಾರ್ ಬೇಕು, ತನಗೆ ಮನೆಯಲ್ಲಿ ಎರಡು ಟೆಲಿವಿಷನ್ ಸೆಟ್‌ಗಳು ಬೇಕು, ಎನ್ನುವ ಆಸೆ ಪಡುತ್ತಿಲ್ಲ- ಪಾಶ್ಚಾತ್ಯ ದೇಶದ ಜನಗಳು ಪಡುವಂತೆ. ಸಮುದಾಯದ ಕಲ್ಪನಜೆ ಇನ್ನೂ ಗಟ್ಟಿಯಾಗಿರುವುದು ಈ ಬಡರಾಷ್ಟ್ರಗಳಲ್ಲೇ ಹೊರತು ಬೆಳೆದ ರಾಷ್ಟ್ರಗಳಲ್ಲಲ್ಲ. ಇವತ್ತು ಕಮ್ಯೂನಿಸ್ಟ್ ಪೂರ್ವಜರ್ಮನಿ ಬಂಡವಾಳಶಾಹೀ ಪಶ್ಚಿಮ ಜರ್ಮನಿ ಎರಡರಲ್ಲೂ ಒಂದೇ ರೀತಿಯ ಸಮಾಜವಿದೆ. ಆದರೆ ಮಾರ್ಕ್ಸ್ ಕನಸುಕೊಂಡ ಸಮುದಾಯವೇ ಮುಖ್ಯವಾದ ಸಮಾಜ ಅಲ್ಲಲ್ಲಿ. ಟೆಕ್ನಾಲಜಿ ಬೆಳೆದಲ್ಲಿ ಅದು ಬರುವುದಿಲ್ಲ. ಟೆಕ್ನಾಲಜಿ ಬೆಳೆಯದೇ ಇರುವಲ್ಲಿ ಸಮಾಜವಾದ ತೀರಾ ಅಗತ್ಯ ಅಂತ ಕೂಡ ಅನ್ನಿಸುತ್ತದೆ. ಈಗ ನಾನು ಮೈಸೂರಿನಲ್ಲಿರುವ ನನ್ನ ಮನೆಯಿಂದ ಒಂದರಡು ಫರ್ಲಾಂಗ್ ಆಚೆಗೆ ಇರುವ ಬಡಜನರ ಕೊಪ್ಪಲಿಗೆ ಹೋದರೆ, ಅಲ್ಲಿ ಒಂದು ರೀತಿಯ ಸಮಾಜವಾದ ವ್ಯವಸ್ಥೆ ಇದ್ದೇ ಇರುತ್ತದೆ ಅವರ ನಡುವಿನ ಕೊಡುಕೊಳ್ಳುವಿಕೆಯ ಸಂಬಂಧಗಳಲ್ಲಿ, ಮತ್ತು ಬಡಿದಾಟಗಳಲ್ಲಿಯೂ ಕೂಡಾ.

ಬಹುಶಃ ಚೈನಾದಲ್ಲೂ ರಷ್ಯಾದಲ್ಲಿರುವುದಕ್ಕಿಂತ ಸ್ವಲ್ಪ ಹೆಚ್ಚಿನ ಸಮಾಜವಾದ ಇರುವ ಸಾಧ್ಯತೆ ಇದೆ. ಆದ್ದರಿಂದ ಚೈನಾ ರಷ್ಯಾಕ್ಕಿಂತ ಉತ್ತಮ. ಆಧುನಿಕವಾಗಬೇಕೆಂಬ ಈಗಿನ ನಾಯಕರ ಬಯಕೆಯಲ್ಲಿ ಚೈನಾ ಹಾಗೆಯೇ ಉಳಿದಿರುತ್ತದೋ, ತಿಳಿಯದು. ಹಾಂಗ್‌ಕಾಂಗ್ ಗೆ -ಬರುವ ಚೈನೀ ಪ್ರವಾಸಿ ಯುವಕರು ತಾವು ಕೊಳ್ಳುವ ಗಾಗಲ್ಸ್‌ನ ಮೇಲಿರುವ ‘Made in America’ ಚೀಟಿ ಕೀಳದೆ ಅದನ್ನು ಧರಿಸುತ್ತಾರೆಂದು ಹಾಂಗ್‌ಕಾಂಗ್‌ನಿಂದ ಬಂದವರು ಹೇಳಿದ್ದನ್ನು ನಾನು ಕೇಳಿದ್ದೇನೆ. ಇದು ಸಾಂಸ್ಕೃತಿಕ ಕ್ರಾಂತಿ ಆದನಂತರವೂ ಚೈನಾದ ಯುವಕರಲ್ಲಿ ಉಳಿದಿರುವ ಆಸೆ. ಗಾಂಧೀಜಿ ಹೇಳಿದ ಸರಳ ಜೀವನದ ಸಮಾಜವಾದದ ಬದಲು ಆಧುನಿಕ ನಾಗರಕತೆಯನ್ನು ನಾವು ಆಯ್ದದ್ದರಿಂದಲೇ ಎಪ್ಪತ್ತರ ದಶಕದ ತುರ್ತುಪರಿಸ್ಥಿತಿ ಅನಿವಾರ್ಯವಾಗಿದ್ದು. ಯಂತ್ರ ನಾಗರಿಕತೆ ಈ ದೇಶದಲ್ಲಿ ಊರಲು ಪ್ರಜಾತಂತ್ರದ ನಿಧಾಗತಿ ಕಾಲ್ತೊಡಕಾಗಿ ಕಾಣದೇ ಇರಲು ಸಾಧ್ಯವೇ? ಆಧುನಿಕತೆಯನ್ನು ಗುರಿಮಾಡಿಕೊಂಡ ರಷ್ಯಾಕ್ಕೆ ಸ್ಟಾಲಿನನ ಕ್ರೂರ ಸರ್ವಾಧಿಕಾರ ಅನಿವಾರ್ಯವಾದ್ದು ಸಹಜವೇ. ನಾವಿರುವುದೂ ಅದೇ ಹಾದಿಯಲ್ಲಿ.

ಬಯಸಿದಷ್ಟು ಮುಂದುವರಿಯಲಾಗದಿದ್ದಾಗ ಮಿಲಿಟರಿ ಸರ್ವಾಧೀಕಾರ, ಏಕಾಧಿಪತ್ಯ, ನರ-ಪರಗಳನ್ನು ಕತ್ತರಿಸುವ ಆತುರ, ಬಡವರಿಂದ ಬಿಸಿಲಲ್ಲಿ ಕಲ್ಲೊಡೆಸುವ ಕಾನಸೆನ್‌ಟ್ರೆಶನ್ ಕ್ಯಾಂಪುಗಳು ಎಲ್ಲಾ ಅಗತ್ಯವಾಗುತ್ತವೆ. ಪಾಪ-ಸಂಜಯಗಾಂಧಿ ಇಂದಿರಾಗಾಂಧಿಯವರಿಗೆ ಪ್ರಜಾತಂತ್ರ ಕಾಲ್ತೊಡಕು ಅನ್ನಿಸಿದ್ದರೆ ಅದಕ್ಕೆ ರಾಯ್, ನೆಹರೂ ಪರಂಪರೆಯ ಈ ನಮ್ಮ ಆಯ್ಕೆಯೂ ಮುಖ್ಯ ಕಾರಣ ಎನ್ನದೇ ವಿಧಿ ಇಲ್ಲ. ಹಿಂಸೆಯಿಲ್ಲದೇ ಇಷ್ಟೊಂದು ಜನ ಸಂಖ್ಯೆಯ ದೇಶದಲ್ಲಿ ಆಧುನಿಕ ನಾಗರೀಕತೆ ಅಸಾಧ್ಯವೆಂಬುದು ಕಮ್ಯೂನಿಸ್ಟರಿಗೂ ಗೊತ್ತಿರಲೇಬೇಕು. ಆಧುನಿಕ ನಾಗರೀಕತೆ ದಿಕ್ಕಲ್ಲಿ ನಾವು ಚಲಿಸುವುದು ಅನಿವಾರ್ಯವೆಂದು ತಿಳಿದವರಿಗೆ ನಾನೇನೂ ಹೆಚ್ಚಿಗೆ ಹೇಳುವುದಕ್ಕೆ ತೊಡಕುಗಳಿಂದ, ಸಂಬಂಧಗಳ ಪೇಚುಗಳಿಂದ, ಸಾವಿನಂಥ ಕ್ರೂರ ನಿಷ್ಠುರ ನಿಜಗಳಿಂದ ನರಳಬಹುದೆಂಬುದು ಸೂಕ್ಷ್ಮ ಮನಸ್ಸಿನವನಿಗೆ ಗೊತ್ತಿರುತ್ತದೆ. ಸಮಾಜ ಎಷ್ಟು ಮುಂದುವರೆದಿದರೂ, ಅದರ ವ್ಯವಸ್ಥೆಯ ಅನ್ಯಾಯಗಳು ಎಷ್ಟು ಕಮ್ಮಿಯಾದರೂ ಕೆಲವು ತೊಡಕುಗಳು ಮನುಷ್ಯನಿಗೆ ಉಳಿದೇ ಇರುತ್ತವೆ ಎನ್ನುವುದು ಅಂಥವನಿಗೆ ಗೊತ್ತಿರುತ್ತದೆ. ಎಂದರೆ ಸಾಮಾಜಿಕ ಬದಲಾವಣೆಯಾದ ಕೂಡಲೇ ಇಲ್ಲಿ ಎಲ್ಲ ಸ್ವರ್ಗವಾಗುತ್ತದೆ ಎಂದು ತಿಳಿಯುವುದು ಅವನಿಗೆ ಕಷ್ಟ. ಸಾಮಾಜಿಕ ಬದಲಾವಣೆಗಳು ಯಾವ ಕಾಲದಲ್ಲೂ ವ್ಯಕ್ತಿಯ ಒಳಜೀವನದ ಎಲ್ಲ ಸಮಸ್ಯೆಗಳನ್ನ ಪರಿಹರಿಸಲಾರವು. ಜೊತೆಗೇ ಇದು ಕೂಡ ಮುಖ್ಯ: ಸಾಮಾಜಿಕ ಅನ್ಯಾಯಗಳಿಂದ ಅನಿವಾರ್ಯವಲ್ಲದ ಕಷ್ಟಗಳಿಗೂ ಮನುಷ್ಯ ಒಳಗಾಗುತ್ತಾನೆಂಬುದು ನಮಗೆ ಗೊತ್ತಿರಬೇಕು. ಈಗ ನಾವು ಎದುರಿಸುತ್ತಿರುವಂಥ ಕಷ್ಟಗಳಲ್ಲಿ ಕೆಲವು ಸುಲಭವಾಗಿ ಹೋಗಲಾಡಿಸಬಲ್ಲಂಥವೂ ಕೂಡ ಇವೆ. ಅಂದರೆ ಯಾವುದು ಅನಿವಾರ್ಯ ಎನ್ನುವ ಪ್ರಜ್ಞೆ ಸಾಹಿತಿಗಂತೂ ಇರಲೇಬೇಕಾಗುತ್ತದೆ.

ನಮ್ಮಂಥ ದೇಶಗಳಲ್ಲಂತೂ ಎಷ್ಟೋ ಕಷ್ಟಗಳು ಸಾಮಾಜಿಕ ಬದಲಾವಣೆಯಿಂದ ಪರಿಹಾರವಾಗಬಲ್ಲಂಥವು ಎಂಬುದನ್ನು ಅರಿಯದೇ ಇರುವುದು ತೀರಾ ಆತ್ಮವಂಚಕ ಆಧ್ಯಾತ್ಮಿಕತೆಯಾಗಿ ಬಿಡುತ್ತದೆ. ಈ ಇಬ್ಬಗೆಯ ಅರಿವಿನಲ್ಲಿ ಹುಟ್ಟುವ ಸಾಹಿತಯ ರಾಜಕೀಯ ಪ್ರಜ್ಞೆಯೇ ಅತ್ಯಂತ ಗಾಢವದುದಾಗಿರುತ್ತದೆ. ಪ್ರಾಯಶಃ ಕಬೀರ, ಬಸವ, ನಾನಕರಂಥ ಸಂತರಿಗೆ, ಅರ್ವೆಲ್, ಟಾಲ್‌ಸ್ಟಾಯ್ ಮುಂತಾದ ಪಾಶ್ಚಾತ್ಯ ದಾರ್ಶನಿಕರಿಗೆ ಈ ಇಬ್ಬಗೆಯ-ಯಾವುದು ಅನಿವಾರ್ಯ, ಯಾವುದು ನಿವಾರ್ಯ-ಎಂಬ ಅರಿವಿದೆ.

ನಾನು ರಷ್ಯಾದಲ್ಲೊಂದು ದೊಡ್ಡ ದುರಂತ ಕಂಡೆ. ಒಂದೇ ಕಾಲದಲ್ಲಿದ್ದವರು, ಟಾಲ್‌ಸ್ಟಾಯ್ ಮತ್ತು ಲೆನಿನ್. ಕಾಣಲು ಅಷ್ಟೇನೂ ಎತ್ತರದ ವ್ಯಕ್ತಿಯಲ್ಲದ ಸಾಮಾನ್ಯರು ಪ್ರೀತಿಸುವಂತಿದ್ದ ಲೆನಿನ್ ಒಂದೊಂದು ಊರಿನಲ್ಲೂ ರಾಕ್ಷಸ ಎತ್ತರದ ವಿಗ್ರಹವಾಗಿದ್ದಾನೆ. ಕೊಳೆಯದಂತೆ ಕಾಪಾಡಿದ ರಾಜಮರ್ಯಾದೆಯನ್ನು ಪಡೆಯುತ್ತಿರುವ ಶವವಾಗಿ ಉಳಿದಿದ್ದಾನೆ. ಆದರೆ ಟಾಲ್‌ಸ್ಟಾಯ್‌ನ್ನು ಹೂಳಿದ ಯಾಸ್ನಾ ಪೊಲ್ಯಾನಕ್ಕೆ ಹೋದರೆ, ರೈತರಿಗಿರುವ ಹಾಗೆ ಒಂದಿಷ್ಟೆತ್ತರದ ಮಣ್ಣಿನಿಂದ ಒಂದು ಗೋರಿಯನ್ನು ಟಾಲ್‌ಸ್ಟಾಯ್‌ನ ಇಚ್ಛೆ ಮೇರೆಗೆ ಕಟ್ಟಲಾಗಿದೆ: ನಾನು ಹೇಳುತ್ತಿರುವುದರಲ್ಲಿ ಅನೇಕ ಅರ್ಥಗಳಿವೆ. ನನಗೆ ಲೆನಿನ್‌ಗಿಂತ ಟಾಲ್‌ಸ್ಟಾಯ್ ಮುಖ್ಯವೆನ್ನಿಸುತ್ತಾನೆ-ಅವರಿಬ್ಬರು ಸತ್ತ ಮೇಲೆ ಈಗ ಉಳಿದಿರುವ ಕ್ರಮದಲ್ಲಾದರೂ. ಯಾಕೆಂದರೆ ಲೆನಿನ್ ಕಟ್ಟಿದ ರಷ್ಯಾ, ಅಮೇರಿಕಾದಂತಾಗುವ ಹಂಬಲವನ್ನು ಹೇಗೋ ಅದುಮಿಟ್ಟುಕೊಂಡಿದೆ. ಒಂದು ಚೂರು ಬಿರುಕು ಬಿಟ್ಟರೆ ಅದರೊಳಗೆ ನುಗ್ಗುವುದು ಅಮೇರಿಕಾವೇ. ಆದರೆ ಮಣ್ಣಾದ ಟಾಲ್‌ಸ್ಟಾಯ್‌ಗೆ ಮಾತ್ರ ಇವೆಲ್ಲದಕ್ಕಿಂತ ಬೇರೆಯಾದ ಪ್ರರ್ಯಾಯ ಕಲ್ಪನೆ ಇತ್ತು; ನಮ್ಮ ದೇಶದಲ್ಲಿ ಗಾಂಧೀಜಿಗಿದ್ದಂಥ ಒಂದು ಪರ್ಯಾಯ ಕಲ್ಪನೆ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’-ಲೆನಿನ್‌ಸ್ಥಾವರವಾದರೆ, ಟಾಲ್‌ಸ್ಟಾಯ್ ಜಂಗಮ.

ಎಪ್ಪತ್ತರ ದಶಕದಲ್ಲಿ ಒದಗಿ ಬಂದ ಎಮರ್ಜೆನ್ಸಿ ಇಂಥದೊಂದು ಆಳವಾದ ಚಂತನದಲ್ಲಿ ನಮ್ಮನ್ನು ತೊಡಗಿಸಬಲ್ಲುದಾಗಿದೆ: ನಮ್ಮ ಆಯ್ಕೆ ಯಾವುದಾಗಬೇಕಿತ್ತು? ಈಗ ನಾವೇನಾಗಿದ್ದೇವೆ? ಇಂದಿರಾ-ಸಂಜಯರ ನಿರ್ದಯ ಕಾರ್ಯಕ್ರಮಗಳಲ್ಲಿ ಅನೇಕವು ನಾವು ವಿದ್ಯಾವಂತ ಜನ, ನಮ್ಮ ಅಭ್ಯುದಯಕ್ಕಾಗಿ ಬಯಸಿದಂಥವೇ ಆಗಿದ್ದವು. ನಿರ್ಗತಿಕರಿಗೆ ಆಶೆ ಹುಟ್ಟಿಸುವಂತ ಕಾರ್ಯಕ್ರಮಗಳಲ್ಲಿ ಕೆಲವು ತುರ್ತು ಪರಿಸ್ಥೀತಿಯ ಪ್ರಾರಂಭದಲ್ಲಾದರೂ ಜಾರಿಗೆ ಬಂದವು. ಆದರೆ ಅದರಲ್ಲಿದ್ದ ಮುಖ್ಯವಾದ ದುಷ್ಟಬೀಜ, ನಮ್ಮ ಏಕಸ್ವಾಮ್ಯದ ಬಂಡವಾಳಶಾಹಿ ವರ್ಗ ಬಯಸುವ, ಆಧುನಿಕ ನಾಗರಿಕತೆಯನ್ನು ಕ್ಷಿಪ್ರವಾಗಿ ತರಬೇಕೆಂಬ ಆಮಿಷವೇ ಆಗಿತ್ತು. ಆದ್ದರಿಂದಲೇ ಆ ಆಶೆಯನ್ನು ತಮ್ಮ ಕಚ್ಚಾಟದಲ್ಲಿ ಪಾಲಿಸಲಾಗದೇ ಹೋದ ಜನತಾಸರ್ಕಾರ ಅಷ್ಟು ಬೇಗ ಕೆಳಗಿಳಿಯಬೇಕಾಗಿಬಂತು. ನಾನು ಇವನ್ನೆಲ್ಲ ಹೇಳುತ್ತಿರುವು ಕ್ರಮ ಅತಿ ಸರಳವೆನ್ನಿಸಬಹುದು. ಆದರೆ ಸರಳಗೊಳಿಸುವ ಧೈರ್ಯ ಮಾಡದೆ ಹೊರತು ಕೆಲವು ಮೂಲ ಸತ್ಯಗಳು ಹೊಳೆಯವುದೇ ಇಲ್ಲ.

ಎಪ್ಪತ್ತರ ದಶಕದ ರಾಜಕೀಯ ಮತ್ತು ಸಾಹಿತ್ಯಕ ಚಳುವಳಿಗಳಲ್ಲೂ ನಮ್ಮಂಥ ಇಬ್ಬಂಧಿಗಳ ಅನೇಕ ಗೊಂದಲಗಳಿವೆ. ಆದರೆ ಅದನ್ನು ನಾವು ಗಮನಿಸಿಲ್ಲ. ಎಮರ್ಜೆನ್ಸಿಯಲ್ಲಿ ನಾನು ಬಯಸಿದ್ದರ ಜೊತೆಗೇ ನಾವೂ ಬಯಸದ್ದೂ ಕ್ರೂರವಾಗಿ ಪ್ರತ್ಯಕ್ಷವಾದಂತೆ ನಮ್ಮ ಉಳಿದ ಆಂದೋಲನಗಳಲ್ಲೂ-ಜಾತಿ ವಿನಾಶ, ವಿಚಾರವಾದ, ದಲಿತ ಚಳುವಳಿಗಳು ಇತ್ಯಾದಿಗಳಲ್ಲೂ-ಅನೇಕ ಅಪ್ರತ್ಯಕ್ಷ ತೊಡಕುಗಳು ಇವೆ.

ಉದಾಹರಣೆಗೆ: ಜಾತಿ, ಒಬ್ಬ ಅಸ್ಪೃಶ್ಯನ ದೃಷ್ಟಿಯಿಂದ ಇದಕ್ಕಿಂತ ಅನಿಷ್ಟವಾದದ್ದು ಇನ್ನೊಂದಿಲ್ಲ. ಅವನ ಪಾಲಿಗೆ ಗ್ರಾಮಜೀವನದಲ್ಲಿ ಅಸ್ಪೃಶ್ಯತೆ ನಾಶವಾಗುವುದು ಸದ್ಯದಲ್ಲಂತೂ ಅಸಂಭವ. ಆದರೆ ಅವನು ಪೇಟೆಗೆ ಬಂದಾಗ ಅದರ ಕಾದಿಂದ ಕಿಂಚಿತ್ತಾದರೂ ಪಾರಾಗುತ್ತಾನೆ. ಆದ್ದರಿಂದ ಬೇರೆ ಬಗೆಯ ಹಿಂಸೆಗಳಿಗೆ ಕಾರಣವಾಗಬಹುದಾದ ಆಧುನಿಕ ನಾಗರೀಕತೆಯ ನಗರೀಕರಣ ಅವನಿಗೆ ಸದ್ಯದ ಸೌಖ್ಯದ ದೃಷ್ಟಿಯಿಂದ ಎಷ್ಟೋ ಮೇಲೆನ್ನಿಸುವುದು ಸಾಧ್ಯ. ಅವನು ಖಂಡಿತ ಕೇಂದ್ರೀಕೃತ ವ್ಯವಸ್ಥೆಯಿಂದ ತನಗೆ ಲಾಭವೆಂದೇ ತಿಳಿಯುತ್ತಾನೆ. ಏಕೆಂದರೆ, ಅದುಭ್ರಮೆಯೇ ಇರಲಿ, ಅವನದು ಅಖಿಲ ಭಾರತ ಜಾತಿಯೆಂಬ ಭಾವನೆ ಅವನಿಗಿದೆ. ಆದರೆ ದಲಿತರಲ್ಲಿ ಸೂಕ್ಷ್ಮಜ್ಞರೂ ಮುನ್ನೋಟ ಉಳ್ಳವರೂ ವಿಕೇಂದ್ರೀಕರಣ ಬೇಕೆಂದು ಬಯಸುತ್ತಾರೆ. ನಮ್ಮಂಥ ಮೇಲಿನ ಜಾತಿಯವರು ನಮ್ಮ ಐಡೆಂಟಿಟಿ ಹುಡುಕಿಕೊಂಡು ಹೋದರೆ ದಲಿತನಿಗೆ, ತನ್ನ ಭಾಷೆಯಲ್ಲಿ, ನಡಾವಳಿಯಲ್ಲಿ, ಬಟ್ಟೆಬರೆಯಲ್ಲಿ, ಹೆಸರಲ್ಲಿ ತನ್ನ ಬತ್ತಿದ ಕೆನ್ನೆಗಳಲ್ಲಿ ತನ್ನ ಜಾತಿಯನ್ನು ಅಚ್ಚೊತ್ತುವ ಐಡೆಂಟಿಟಿಯನ್ನು ಪೇಟೆಯಲ್ಲಿ ಕಳಕೊಂಡು ಅನಾಮಿಕನಾಗುವುದೇ ಹಾಯೆನ್ನಿಸುತ್ತದೆ. ಅಮೆರಿಕಾದ ನೀಗ್ರೋಗೆ ಅವನ ಬಣ್ಣದಿಂದಾಗಿ ಇದು ಸಾಧ್ಯವಿಲ್ಲ. ಆದ್ದರಿಂದ ಅವನು Black is beautiful ಎನ್ನುತ್ತಾನೆ.

ಈ ಪ್ರಶ್ನೆಯನ್ನು ನಾನು ಎತ್ತಲು ಮುಖ್ಯ ಕಾರಣ ಇದು; ಹರಿಜನರ ಧೀಮಂತರು ನಗರೀಕರಣ, ಪಾಶ್ಚಾತ್ಯೀಕರಣ-ಅಂದರೆ ಕೇಂದ್ರಿಕರಣ-ವನ್ನು ಬಯಸುತ್ತಾರೆಯೇ ಅಥವಾ ವಿಕೇಂದ್ರೀಕೃತ ವ್ಯವಸ್ಥೆಯನ್ನು ಬಯಸುತ್ತಾರೆಯೇ? ಅಥವಾ ಏಕಕಾಲದಲ್ಲಿ ಅವರು ಅಸ್ತಿತ್ವದ ದೃಷ್ಟಿಯಿಂದ ಮೊದಲಿನವನ್ನೂ-ಅಂದರೆ ನಗರೀಕರಣ ಮತ್ತು ಕೈಗಾರೀಕರಣವನ್ನೂ ವೈಚಾರಿಕವಾಗಿ ಎರಡನೆಯದನ್ನೂ ಅವರು ಆಯ್ದಾಗ ಯಾವ ಬಗೆಯ ದ್ವಂದ್ವಕ್ಕವರು ಗುರಿಯಾಗುತ್ತಾರೆ? ಇಲ್ಲಿ ನಮ್ಮಲ್ಲಿ ಅನೇಖ ಜನರು ಸಮಾಜವಾದಿಗಳಾಗಿ ಸುಖ ಜೀವನ ನಡೆಸುವಾಗ ಯಾವ ದ್ವಂದ್ವ ಬರುತ್ತದೆ ಎಂದು ಇವತ್ತು ರಾಘವೇಂದ್ರ ರಾವ್ ಹೇಳಿದರೋ, ಆ ರೀತಿಯ ದ್ವಂದ್ವ ಒಬ್ಬ ಹರಿಜನನಿಗೂ ಬರುವುದಕ್ಕೆ ಸಾಧ್ಯ. ಈ ದ್ವಂದ್ವದಿಂದ ಯಾವ ಬಗೆಯ ಸಾಹಿತ್ಯ ಹುಟ್ಟುತ್ತದೆ? ಈ ದ್ವಂದ್ವವನ್ನೊಮ್ಮೆ ಆತ ಎದುರಿಸಿದಾಗ, ಬರೀ ತನ್ನ ಜನರ ಗೋಳನ್ನಾಗಲೀ, ಸಿಟ್ಟನ್ನಾಗಲೀ ಬರೆಯುವ ಸಾಹಿತಿಯಾಗಿರುವುದು ಮಾತ್ರವೇ ಅಲ್ಲದೇ ಅವನು ವೈಚಾರಿಕವಾಗಿಯೂ ಆತ್ಮಪರೀಕ್ಷೆಯ ಸಂದಿಗ್ಧಗಳಲ್ಲಿ ಮುಂದೆ ಹೋಗಲೇಬೇಕಾಗುತ್ತದೆ. ಏಕೆಂದರೆ ಅವನಿಗೂ ಬಹಳ ಮೂಲಭೂತವಾದ ವೈಚಾರಿಕ ತಾತ್ವಿಕ ಸಮಸ್ಯೆಗಳಿವೆ.

ದಲಿತ ಚಳುವಳಿಗಳಲ್ಲಿ ನನಗೆ ಮುಖ್ಯರೆನಿಸುವ ದೇವನೂರು ಮಹಾದೇವ, ಗೋವಿಂದಯ್ಯನಂಥವರಿಗೆ ನಾನು ಈ ಪ್ರಶ್ನೆ ಕೇಳುತ್ತಿದ್ದೇನೆ: ತಮ್ಮ ಜನರ ದಿನನಿತ್ಯದ ಹಿತ ಕಾಯುವ ಕ್ರೂರ ಹೋರಾಟದಲ್ಲಿರುವ ಇವರಿಗೆ ನಮ್ಮ ದೇಶದ ಮುಖ್ಯ ಸ್ರೋತವೆನ್ನಿಸುವ ಚಳುವಳಿಗಳಲ್ಲಿ ಭಾಗವಹಿಸುವುದು ಸಾಧ್ಯವೇ? ಉದಾಹರಣೆಗೆ, ಎಮರ್ಜೆನ್ಸಿ ಕಾಲದಲ್ಲಿ ಇವರ ಒಳಜೀವನ ಹೇಗೆ ಮಿಡಿಯಿತು? ಈಗ ರೈತ ಚಳುವಳಿಯಲ್ಲಿ ಅವರು ಮನಃಪೂರ್ವಕವಾಗಿ ಭಾಗಿಗಳಾಗಲು ಸಾಧ್ಯವೇ? ಯಾಕೆಂದರೆ, ಹಳ್ಳಿಯಲ್ಲಿ ಅವರ ಮನೆಗಳಿಗೇ ಬೆಂಕಿ ಹಚ್ಚುವ ಜನರೇ ಈಗ ರೈತರ ಚಳುವಳಿಯಲ್ಲೂ ಹಸಿರು ಟೋಪಿ ಹಾಕಿಕೊಂಡು ಓಡಾಡುತ್ತಿರುವವರು. ನಮ್ಮ ಭಾಷೆಯಲ್ಲಿ ಹಾಸುಹೊಕ್ಕಾಗಿರುವ ಧಾರ್ಮಿಕ ಪೌರಾಣಿಕ ಆಲ್ಯೂಶನ್‌ಗಳಿಂದ ಭಾಷೆಯನ್ನಿವರು ಕಿತ್ತು ಉಪಯೋಗಿಸಬಲ್ಲರೆ? ಅವರು ಸೂಕ್ಷ್ಮಜ್ಞರಾದಂತೆಲ್ಲಾ ತಮ್ಮ ಸ್ವಂತ ಜನ ನಿತ್ಯ ಜೀವನದಲ್ಲಿ ಮಿಡಿಯುವ ಕ್ರಮದಿಂದ, ವ್ಯಾವಹಾರಿಕ ಸತ್ಯಗಳಿಂದ ದೂರವಾಗುತ್ತ ಹೋಗಬೇಕಾಗಿ ಬರುತ್ತದೆ. ಅಶೋಕಪುರಂನಲ್ಲಿ ಎಲ್ಲರೂ ಯಾವುದನ್ನು ಆಯುತ್ತಾರೋ (ಉದಾಹರಣೆಗೆ ಇಂದಿರಾಗಾಂಧೀ), ಅಲ್ಲೇ ಬದುಕು ದೇವನೂರು ಮಹಾದೇವ ಅದನ್ನು ಆಯಲಾರದು. ಅಂದರೆ ಪ್ರತಿಯೊಬ್ಬ ಸಾಹಿತಿ ತನ್ನ ಜಾತಿಯಿಂದ ಹೇಗೆ ದೂರವಾಗುತ್ತಾನೋ-ಬ್ರಾಹ್ಮನ ಸಾಹಿತಿ ಜಾತಿಯಿಂದ ದೂರವಾದಂತೆ-ಹಾಗೆಯೇ ದಲಿತ ಜಾತಿಯವರು ಸೂಕ್ಷ್ಮಜ್ಞರಾದಾಗ ಇಬ್ಬಂದಿಗಳಾಗುತ್ತಾರೆ. ಯಾವ ಬಗೆಯ ಒಳತೊಟಿಗಳಿಗಿವರು ಗುರಿಯಾಗುತ್ತಾರೆ? ರಾಜಕೀಯ ದೃಷ್ಟಿಯಿಂದಲೂ ಸಾಹಿತ್ಯದ ದೃಷ್ಟಿಯಿಂದಲೂ ಇದು ಅತ್ಯಂತ ಆಪ್ತಸೂಕ್ಷ್ಮ ವಿಚಾರಗಳನ್ನು ಎಬ್ಬಿಸಬಲ್ಲ ಪ್ರಶ್ನೆ ಎಂದು ನಾನು ತಿಳಿದಿದ್ದೇನೆ.

ಇನ್ನು ಎಪ್ಪತ್ತರ ದಶಕದಲ್ಲಿ ಪ್ರಾರಂಭವಾದ ವಿಚಾರವಾದಿಗಳ ಆಂಧೋಲನ ನೋಡೋಣ. ನಾಗರಬನವನ್ನು ನಂಬುವ ಗ್ರಾಮದ ಧರ್ಮನಿಷ್ಠರು ಟೆಕ್ನಾಲಜಿಯಿಂದ ಮೋಹಿತರಾದ ವಿಚಾರವಾದದ ವೈಜ್ಞಾನಿಕ ಬೆಳಕಲ್ಲಿ ಬೆಳೆದು ಬಂದವರಿಗಿಂತ ಗಾಢವಾದ ಜೈವಿಕ ಪ್ರಜ್ಞೆ ಉಳ್ಳವರಾಗಿ ಕಂಡಾಗ ಪ್ರಾಮಾಣಿಕನಾದ ವಿಚಾರವಾದಿಗೆ ಏನನ್ನಿಸುತ್ತದೆ? ನನಗೊಬ್ಬರು ಆಂಥ್ರೋಪಾಲಜಿಸ್ಟ್ ಹೇಳಿದರು. ಮಹಾರಾಷ್ಟ್ರದಲ್ಲಿ ಇವರು ಎಷ್ಟು ಪ್ರಚಾರ ಮಾಡಿದರೂ ಯಾವ ಕಾಡೂ ಉಳಿಯಲಿಲ್ಲವಂತೆ. ಅಲ್ಲಿ ಇವತ್ತಿಗೂ ಉಳಿದಿರುವುದು ಎಲ್ಲೆಲ್ಲಿ ಧರ್ಮದ ನಿಷ್ಠೆಯಿಂದಾಗಿ ಕೆಲವು ಕಾಡುಗಳಿದ್ದವೋ ಅವು ಮಾತ್ರ. ಆದ್ದರಿಂದ ವಿಚಾರವಾದಿಗಳೆಂದುಕೊಂಡು ಧರ್ಮವನ್ನು ನಾವು ಅಲ್ಲಗಳೆದು, ಧರ್ಮಗಳಲ್ಲಿ ಹಾಸುಹೊಕ್ಕಾಗಿರುವ ಜೀವದಯೆಯನ್ನು ನಾಶಪಡಿಸಿಬಿಟ್ಟಲ್ಲಿ ಏನೇನೂ ಆಗಬಹುದು ಅನ್ನು ಪ್ರಶ್ನೆ ವಿಚರವಾದಿಯನ್ನು ಬಾಧಿಸಲೇಬೇಕಾಗುತ್ತದೆ.

ನಮ್ಮ ಹಲವು ಜಾತಿಗಳು, ನಂಬಿಕೆಗಳು, ನಡವಳಿಕೆಗಳು, ವಿಕೇಂದ್ರೀಕೃತ ವ್ಯವಸ್ಥೆಯ ಫಲಗಳು. ನನಗೆ ಅನೇಕ ಸಾರಿ ಅನ್ನಿಸಿದೆ: ಈ ದೇಶದಲ್ಲಿ ಸರಕಾರ, ಕಾನೂನಿನ ವ್ಯವಸ್ಥೆ ಇಲ್ಲದೇ ಇದ್ದಾಗ್ಯೂ ಈ ದೇಶ ಹಾಗೂ ಹೀಗೂ ಮುಂದುವರಿದುಕೊಂಡು ಬಂದಿರುವುದಕ್ಕೆ ಕಾರಣ-ಜಾತಿ. ಜಾತಿ ಒಂದು ರೀತಿಯ ಬ್ಯಾಂಕ್‌ನ ಹಾಗೆ, ಒಂದು ವೆಲ್‌ಫೇರ್ ಸಿಸ್ಟಮ್‌ನ ಹಾಗೆ ಕೆಲಸ ಮಾಡುತ್ತಾ ಬಂದಿರುವುದರಿಂದಲೇ ಅದು ಇವತ್ತಿಗೂ ಆಯಾಯ ಜಾತಿಗಾದರೂಕ್ರಿಯೇಟಿವ್ ಆಗಿ ಉಳಿದುಕೊಂಡಿದೆ. ಹರಿಜನರ ದೃಷ್ಟಿಯಿಂದ ಎಲ್ಲ ಜಾತಿಗಳೂ ಕೆಡುಕಾಗಿದ್ದರೂ ಉಳಿದ ಜಾತಿಗಳಿಗೆ ಅವಕ್ಕಂಟಿಕೊಂಡವರ ಭರವಸೆಗಳು, ಆಸೆಗಳು ಕಳೆದು ಹೋಗುವಷ್ಟು ಅವು ಕೆಟ್ಟಿಲ್ಲ. ಕೆಟ್ಟು ಹೋಗಿದ್ದ ಪಕ್ಷದಲ್ಲಿ ಅವುಗಳನ್ನು ನಾಶಮಾಡಿ ಬಿಡಬಹುದಿತ್ತೇನೋ? ಒಂದು ರೀತಿಯ ಚಲನಶಕ್ತಿಯನ್ನು ಆಯಾ ಜಾತಿಗಳು ಉಳಿಸಿಕೊಂಡಿವೆ ಎನ್ನಿಸುತ್ತದೆ. ಇದು ಸರಿ ಅಥವಾ ತಪ್ಪು ಎಂದು ಣಾನು ಹೇಳುತ್ತಾ ಇಲ್ಲ. ನಾನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯ್ನಿಸುತ್ತಾ ಇದ್ದೇನೆ. ಜಾತಿ ವ್ಯವಸ್ಥೆ ಇರಬೇಕು ಅಂತ ನಾನು ಹೇಳಿದೆನೆಂದು ದಯವಿಟ್ಟು ತಿಳಿಯಬೇಡಿ. ನಾನು ಹೇಳುತ್ತಿರುವುದು, ಒಬ್ಬ ಸಾಹಿತಿಯಾಗಿ ಆ ಪ್ರಶ್ನೆ ಎತ್ತುವಾಗ-ನಾನು ಮೇಲೆ ಹೇಳಿದ ಸತ್ಯ ಎದುರಾದಾಗ ಸಾಹಿತಿ ಏನು ಮಾಡುತ್ತಾನೆ? ಇಂಥದನ್ನು ಎದುರಿಸದೇ ಇದ್ದರೆ ನಾವು ಗಾಢವಾದ ಸಾಹಿತ್ಯ ಕೃತಿಯನ್ನು ರಚಿಸುವುದಕ್ಕೆ ಸಾಧ್ಯವಿಲ್ಲ.

ಅಲ್ಲದೇ ಜಾತಿ ಕೂಡ ಒಂದು ವಿಕೇಂದ್ರೀಕೃತ ವ್ಯವಸ್ಥೆಯ ಫಲವೇ ಆದ್ದರಿಂದ ಮೇಲಿನ ಪ್ರಶ್ನೆಗಳನ್ನು ನಾನು ಶಿವರಾಮಕಾರಂತರಲ್ಲಿ ಅಥವಾ ಗೆಳೆಯ ತೇಜಸ್ವಿಯಲ್ಲಿ ಮಾತ್ರ ಕೇಳಬಲ್ಲೆ. ಈ ಪ್ರಶ್ನೆ ಕೇವಲ ವೈದಿಕ ಒಳಸಂಚಿನಿಂದಲೋ ಅಥವಾ ವೈದಿಕ ಗುಪ್ತಪ್ರೀತಿಯಿಂದಲೋ ಹುಟ್ಟಿದ್ದೆಂಬ ಗುಮಾನಿಯನ್ನು ಪಡೆದೇ ನನ್ನ ಪ್ರಶ್ನೆಗೆ ಅವರು ತಮ್ಮೊಳಗೂ ಉತ್ತರ ಹುಡುಕುವರೆಂಬ ಭರವಸೆ ನನಗಿದೆ. ಯಾಕೆಂದರೆ ‘ನೀನು ಬ್ರಾಹ್ಮಣ. ಆದುದರಿಂದ ನಿನಗೆ ಜಾತಿಯಿದ್ದರೆ ಒಳ್ಳೆಯದೇನೇ. ಅದಕ್ಕೇ ನೀನು ಹೀಗೆ ಹೇಳ್ತೀದೀಯ’ ಅಂದರೆ, ಅದಕ್ಕೆ ನನ್ನ ಹತ್ತಿರ ಯಾವ ಉತ್ತರವೂ ಇಲ್ಲ. ಜನರ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವ ಪುರೋಹಿತಶಾಹಿಯ ಹುಟ್ಟಡಗಿಸಲು ರಷ್ಯಾದ ಟ್ಯಾಂಕುಗಳನ್ನು ಬೇಕಾದರೂ ಈ ದಿನ ಆಮಂತ್ರಿಸಲು ತುದಿಗಾಲಲ್ಲಿ ಕಾತರರಾಗಿ ನಿಂತವರನ್ನು ನಾನು ಪ್ರರ್ಶನೆ ಕೇಲಿ ಪ್ರಯೋಜನವಿಲ್ಲ. ಏಕೆಂದರೆ ಜನರ ಮೌಢ್ಯವನ್ನು ಟ್ಯಾಂಕಿನಿಂದ ಅದೂ ರಷ್ಯನ್ ಟ್ಯಾಂಕಿನಿಂದ ಹೋಗಲಾಡಿಸಬಹುದು ಅಂತ ತಿಳಿದವರಿಗೆ ನಾನೇನೂ ಹೇಳಲಾರೆ. ಹಾಗೆಯೇ ಕೋಕಾಕೋಲಾ ಇತ್ಯಾದಿ ಮಾರುವ ಬಹುರಾಷ್ಟ್ರ ಸಂಸ್ಥೆಗಳ ಆಪ್ತ ಒಳಸಂಚಿನಿಂದ ನಮ್ಮನ್ನು ಜನಿವಾರ, ಶಿವದಾರಗಳಿಂದ ಬಿಡುಗಡೆ ಮಾಡಬೇಕೆನ್ನುವವರನ್ನೂ ನಾನು ಈ ಪ್ರಶ್ನೆ ಕೇಳುವುದಿಲ್ಲ. ಯಾಕೆಂದರೆ ರಷ್ಯನ್ ಟ್ಯಾಂಕಿಗಿಂತ ಹೆಚ್ಚು ಶಕ್ತಿಯುಳ್ಳದ್ದು ಕೋಕಾಕೋಲಾ. (ಕೋಕಾಕೋಲಾವನ್ನು ದೇಶದಿಂದ ಓಡಿಸಿದ ಜಾರ್ಜ್‌ಫರ್ನಾಂಡೀಸ್‌ರವರು ಇಲ್ಲಿ ಇದ್ದಾರಲ್ಲ-ಅವರನ್ನೇ ಬೇಕಾದರೆ ಕೇಳಿ.)

ಇರಲಿ ಮೂಢನಂಬಿಕೆಗಳು ಯಾಕೆ ತಪ್ಪು ಅಂದರೆ, ನಮ್ಮ ಅರಿವಿನ ಮಟ್ಟ ಏರದೇ ಇದ್ದ ಹಾಗೆ ಅವು ತಡೆಯುತ್ತವೆ-ಆದ್ದರಿಂದ. ನಮ್ಮ ಅರಿವಿನ ಮಟ್ಟ ಏರದೇ ಇದ್ದರೆ ಅಷ್ಟರಮಟ್ಟಿಗೆ ಸಂಪೂರ್ಣ ಮಾನವತ್ವವನ್ನು ಪಡೆಯುವುದು ಸಾಧ್ಯವಾಗದೇ ಹೋಗುತ್ತದೆ. ಅದಕ್ಕೇ ನಾವು ಮೂಢನಂಬಿಕೆಗಳನ್ನು ತೊಡೆದು ಹಾಕಬೇಕು; ಯಾಕೆಂದರೆ ಅಥವಾ ಕೆಲವು ರೀತಿಯ ಧಾರ್ಮಿಕ ಆಚರಣೆಗಳು ಸಹ ಸುಲಭ ಸಾಂತ್ವನ ನೀಡಿ ನಮ್ಮ ಅರಿವಿನ ಮಟ್ಟವನ್ನು ಕೆಳಗೆ ಇಳಿಸುತ್ತವೆ. ಆದರೆ ವೈಜ್ಞಾನಿಕ ವೈಚಾರಿಕತೆಯೂ ಮೂಢನಂಬಿಕೆಯಷ್ಟೇ ನಮ್ಮ ಅರಿವನ್ನು ಮೊಂಡಗೊಳಿಸಬಲ್ಲುದೆಂಬುದನ್ನು ಮರೆಯಬಾರದು. ಇದಕ್ಕೊಂದು ಉದಾಹರಣೆ ಕೊಡುತ್ತೇನೆ. ಬಂಗಾಲದಲ್ಲಿ ಕಾಲರಾ ಹರಡಿದಾಗ ಎರಡು ರೀತಿ ವಿವರಣೆಗಳು ಬಂದವು:

ಅ) ಬ್ರಿಟಿಷರು ವೈಜ್ಞಾನಿಕವಾಗಿ ಕೊಟ್ಟ ವಿವರಣೆ: ಈ ಬಂಗಾಳಿಗಳು ಕೊಳಕು ನೀರನ್ನು ಕುಡಿಯುತ್ತಾರೆ, ಅವರಿಗೆ ಸ್ವಚ್ಚಾತೆ ಬಗ್ಗೆ ನೈರ್ಮಲ್ಯದ ಬಗ್ಗೆ ಹಚ್ಚು ಕಾಳಜಿ ಇಲ್ಲ, ಆದ್ದರಿಂದ ಅವರು ಕಾಲರಾದಿಂದ ಸಾಯುತ್ತಿದ್ದಾರೆ.

ಆ) ಬಂಗಾಳಿಗಳು ಕೊಟ್ಟ ವಿವರಣೆ: ನಮ್ಮ ದೇಶಕ್ಕೆ ಮೈಲಿಗೆ ಆಗಿಬಿಟ್ಟಿದೆ; ಪರಕೀಯರು ಬಂದಿದ್ದಾರೆ; ಆದ್ದರಿಂದ ಕಾಳಿಗೆ ಕೋಪ ಬಂದಿದೆ. ಹಾಗಾಗಿ ಕಾಲರಾ ಬಂತು.

ಇವೆರಡನ್ನೂ ವಿಶ್ಲೇಷಣೆ ಮಾಡಿ ನೋಡಿದಾಗ ಯಾವುದು ಹೆಚ್ಚು ವೈಜ್ಞಾನಿಕ ಎಂದು ಕೇಳಿದರೆ, ಬಂಗಾಳಿ ಜನರ ಮೂಢನಂಬಿಕೆಯಿಂದ ಹುಟ್ಟಿದ ಪುರಾಣವೇ ಹೆಚ್ಚು ವೈಜ್ಞಾನಿಕ. ಏಕೆಂದರೆ ಈ ಬ್ರಿಟಿಷರು ಬಂಗಾಳಿಗಳು ಕುಡಿಯುತ್ತಾ ಇದ್ದ ನೀರು ಕೊಳಕಾಗಿ ಬಿಡುವಷ್ಟು ಅಲ್ಲಿನ ನೀರಿನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದರು. ಆದ್ದರಿಂದ ಯಾವುದೋ ಒಂದು ಪುರಾಣದ ನೆಲೆಯಲ್ಲಿ ಅವರು ನಾಡಿನ ದೇವತೆಯಾದ ಕಾಳಿಗೆ ಮೈಲಿಗೆಯಾಗಿದೆ ಅಂತ ತಿಳಿದಿರುವುದರಲ್ಲಿ ಹೆಚ್ಚು ಸತ್ಯಗಳನ್ನು ಒಳಗೊಳ್ಳುವಂತಹ ಆಲೋಚನಾಕ್ರಮ ಇರುವುದಕ್ಕೆ ಸಾಧ್ಯವಿದೆ; ಆದರೆ ಬ್ರಿಟಿಷರು ವೈಜ್ಞಾನಿಕವಾಗಿಯೇ ವಿವರಿಸಿದ್ದು-ಕೊಳಚೆ ನೀರು ಕುಡಿದರು, ಆದ್ದರಿಂದ ಸತ್ತರು ಅನ್ನುವುದು-ಕಣ್ಣಿಗೆ ಕಾಣುವಂತೆ ನಿಜ, ಆದರೆ ಒಟ್ಟಿನಲ್ಲಿ ಅದು ನಿಜವಲ್ಲ. ಯಾಕೆಂದರೆ ಯಾಕೆ ಅವರು ಕೊಳಕು ನೀರನ್ನುಕುಡಿಯಬೇಕಾಗಿ ಬಂತು ಅನ್ನುವುದನ್ನು ವಿಶ್ಲೇಷಣೆ ಮಾಡುವಷ್ಟು ವೈಜ್ಞಾನಿಕತೆ ಅಲ್ಲಿರಲಿಲ್ಲ. ಆದ್ದರಿಂದ ನಮ್ಮ ಜನ ಒಂದೊಂದು ಸಾರಿ ತಮ್ಮ ನಂಬಿಕೆಗಳ ಮೂಲದಿಂದಲೂ ಹೆಚ್ಚಿನ ವಿವರಣೆಯನ್ನು ತಮ್ಮ ಪಾಡಿಗೆ ಕೊಟ್ಟುಕೊಳ್ಳುವುದಕ್ಕೆ ಸಾಧ್ಯ ಅನ್ನುವ ವಿನಯ ನಮ್ಮಲ್ಲಿ ಇರಬೇಕು.

‘ಭಾರತೀಪುರ’ ಬರೆದ ನಾನು ಒಂದು ಸಾರಿ ತುರ್ತುಪರಿಸ್ಥಿತಿ ಕಾಲದಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿಯ ಕಾಲೇಜಿನಲ್ಲಿ ಮಾತನಾಡಲಿಕ್ಕೆಂದು. ತಲೆಬೋಳಿಸಿಕೊಂಡು ನೂರಾರು ಜನ ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ನಿಂತದ್ದನ್ನು ನೋಡಿದೆ. ಈ ದೇಶದಲ್ಲಿ ಶಕ್ತಿಯ ಕೇಂದ್ರವಿರುವುದು ಒಂದಲ್ಲ, ಹಲವು ಶಕ್ತಿಯ ಕೇಂದ್ರಗಳು ಇವೆ ಅನ್ನಿಸಿತು. ದೆಹಲಿಯಲ್ಲಿ ಮಾತ್ರ ಶಕ್ತಿಕೇಂದ್ರವಿರುವುದಲ್ಲ, ಹಳ್ಳಿಗಳಲ್ಲಿರುವ ಪ್ರತಿ ಭೂತವೂ ಶಕ್ತಿಕೇಂದ್ರವೇ. ಆದ್ದರಿಂದ ಜನರ ನಂಬಿಕೆಯನ್ನು ಸದ್ಯ ವಿರೋಧಿಸಬಾರದೋ ಏನೋ ಅಂತ ಅನ್ನಿಸಿತು. ಆದರೆ ಆ ದೇವಸ್ಥಾನವನ್ನು ನಡೆಸುವವರು ಆರ್ಥಿಕ ಕಾರಣಗಳಿಗಾಗಿ ಸರ್ವಾಧಿಕಾರಿಯ ಬ್ಲಾಕ್ ಮೇಲ್‌ಗೆ ಒಳಗಾಗಬಹುದು ಎಂಬುದನ್ನು ಕಡೆಗಣಿಸಬಾರದು. ಆದ್ದರಿಂದ ಜನರ ಈ ನಂಬಿಕೆಗಳೂ ಕೂಡ ಎಲ್ಲ ಕಾಲಕ್ಕೂ ಸಮರ್ಥ ರೀತಿಯಲ್ಲಿ ಸರ್ವಾಧಿಕಾರವನ್ನು ತಡೆದು ನಿಲ್ಲಿಸುತ್ತವೆ ಎಂದು ನಾನು ಹೇಳುತ್ತಾ ಇಲ್ಲ. ಆದರೂ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಎಲ್ಲ ಜನರ ಮನಸ್ಸನ್ನೂ ಹಿಡಿಯುವಂಥ ಒಂದು ಸರ್ವಾಧಿಪತ್ಯವನ್ನು ಈ ದೇಶದಲ್ಲಿ ನಿರ್ಮಿಸುವುದು ಕಷ್ಟ ಅಂತ ಅನ್ನಿಸುವಂತೆ ಜನ ಬದುಕುವುದನ್ನು ಕಾಣುತ್ತೇವೆ. ನಾನೂ ಈ ಜನರಂತೆ ಈ ದೇವರುಗಳನ್ನೆಲ್ಲ ನಂಬುವೆನೋ ಇಲ್ಲವೋ ಇಲ್ಲಿ ಮುಖ್ಯವಲ್ಲ. ನಾನೂ ಒಬ್ಬ ಲೇಖಕನಾದ್ದರಿಂದ ಮತ್ತು ರಾಜಕಾರಿಣಿಯಂತೆ ಹೇಳಿಕೆ ಕೊಡಬೇಕಾಗಿಲ್ಲದಿರುವುದರಿಂದ ಇದನ್ನು ಹೇಳುತ್ತಿದ್ದೇನೆ, ಅಲ್ಲದೇ ಸಾಹಿತಿಯಾಗಿ ನಾನು ಎಂದೆಂದೂ ವಿಚಾರವಾದಿಗಳಂತೆ ಗೀತೆಯನ್ನಾಗಲೀ, ಬೈಬಲ್ಲನ್ನಾಗಲೀ, ಖುರಾನನ್ನಾಗಲೀ ಸುಡು ಎಂದು ಹೇಳಲಾರೆ. ಸೃಷ್ಟಿ ರಹಸ್ಯದ ಬಗ್ಗೆ ಇರುವ ಬೆರಗಿಗೆ ವಿಜ್ಞಾನವೂ ಕಿಂಡಿಯಾದಾಗ ಧರ್ಮ ವಿಜ್ಞಾನಗಳು ಅವಳಿ-ಜವಳಿಗಳಾಗುತ್ತವೆ.

ನನಗೆ ಇತ್ತೀಚಿಗೆ ಅದಕ್ಕೊಂದು ಉದಾಹರಣೆ ಸಿಕ್ಕಿದ್ದೆಂದರೆ ತೇಜಸ್ವಿಯವರ ‘ಕರ್ವಾಲೋ’ನಲ್ಲಿ. ಅದು ಒಂದು ಧಾರ್ಮಿಕ ಚಿಂತನೆ ಹುಟ್ಟಿಸಬಹುದಾದ ಸೃಷ್ಟಿಯಲ್ಲಿನ ರಹಸ್ಯ ಭಾವನೆಯನ್ನು ನಮ್ಮಲ್ಲಿ ಹುಟ್ಟಿಸಲು ಯತ್ನಿಸುವ ಕೃತಿ. ಆದರೆ ಧರ್ಮ, ಮತಗಳ ಬಗ್ಗೆ ಒಂದು ವಿಷಯ ನಮಗೆ ನೆನಪಿರಬೇಕು: ಧರ್ಮವನ್ನು ನಾವು ಶುದ್ಧಮಾಡುತ್ತೇವೆ ಎಂದು ಸಿಪ್ಪೆ ಸುಲಿಯುತ್ತಾ ಹೋದರೆ ಅದರ ಸಿಪ್ಪೆಯೇ ತಿರುಳು; ಇನ್ನೇನೂ ಬೇರೆ ತಿರುಳಿಲ್ಲ. ಅವುಗಳ ಶುದ್ಧರೂಪದಲ್ಲಿ ಮಾತ್ರ ಧರ್ಮ, ಮತಗಳನ್ನು ಒಪ್ಪುತ್ತೇನೆ ಎನ್ನುವುದು ಈ ಕಾರಣದಿಂದ ಸಾಧ್ಯವಾಗದೇ ಹೋಗಬಹುದು.

ಈಗ ಪ್ರಚಾರದ ಮೂಲಕ ಪ್ರಸಿದ್ಧರಾಗಿರುವ ಪವಾಡಪುರುಷರಾದ ಸಾಯಿಬಾಬರಂಥವರನ್ನು ವಿರೋಧಿಸಲು ನರಸಿಂಹಯ್ಯನಂಥವರ ನಾಯಕತ್ವದಲ್ಲಿ ಬಹಳ ಪ್ರಯತ್ನ ನಡೆದಿದೆ. ಆದರೆ ಈ ಪವಾಡಪುರುಷರು ಅನೇಕರಿಗೆ ಸೈಕಿಯಾಟ್ರಿಸ್ಟರಂತೆ ಮನಸ್ಸಿಗೆ ಸಾಂತ್ವನವನ್ನು ಕೊಡುತ್ತಿರುವುದರಿಂದ ಇಂಥ ಚಳುವಳಿಗಳು ಎಪ್ಪತ್ತರ ದಶಕದಲ್ಲಿ ಕೇವಲ ಅಲ್ಪಸಂಖ್ಯಾತ ಚಳವಳಿಗಳಾಗಿ ಉಳಿದವು. ಧರ್ಮದ ಬಗ್ಗೆ ಗಾಢವಾದ ತಿಳುವಳಿಕೆಯುಳ್ಳ ಯಾರೂ, ನನ್ನ ಪ್ರಕಾರ, ಶೇಷಸಾಹಿ ಇತ್ಯಾದಿ ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುವ ಶ್ರೀಬಾಬಾರನ್ನು ಒಪ್ಪಿಕೊಳ್ಳಲಾರರು. ಶಾಸ್ತ್ರದ ಶಿಸ್ತನ್ನೂ, ಒಳಾನುಭವವನ್ನೂ, ಪರಂಪರೆಯಿಂದ ಬಂದ ವೇದೋಪನಿಷತ್ತುಗಳನ್ನೂ ಒಟ್ಟಂದದಲ್ಲಿ ಕೂಡಿಸಿಕೊಳ್ಳಲು ಪ್ರಯತ್ನಿಸಿದ ನಮ್ಮ ದೇಶದ ಯಾವ ದೊಡ್ಡ ಮತಸ್ಥಾಪಕರೂ-ಶಂರ, ರಾಮಾನುಜ, ಆನಂತೀರ್ಥರಂಥವರು-ಈ ಬಗೆಯ ಪವಾಡಪುರುಷರನ್ನು ಒಪ್ಪಿಕೊಳ್ಳಲಾರರೆಂದು ನನಗನ್ನಿಸುತ್ತದೆ. ಧರ್ಮ ನಮ್ಮ ಅರಿವಿನ ಮಟ್ಟವನ್ನು ಹಿಗ್ಗಿಸುವುದು, ಮನಸ್ಸಿನ ಸಾಂತ್ವನಕ್ಕಾಗಿ ಮಾತ್ರ ಅದನ್ನು ಆಶ್ರಯಿಸದೇ ಇದ್ದಾಗ; ಅಂದರೆ, ಸತ್ಯಾನ್ವೇಷಣೆಗೆ ಅದು ಸಾಧನವಾದಾಗ, ಧ್ಯಾನದ ಶಿಸ್ತಾದಾಗ ಮಾತ್ರ ಅದು ಗಾಢವಾದದ್ದಾಗುತ್ತದೆ. ಆದ್ದರಿಂದ ನಮ್ಮ ಧರ್ಮಗಳ ಅವನತಿಯಿಂದಾಗಿಯೇ-ಅಂದರೆ ಅನ್ವೇಷಕ ಮನಸ್ಸು ಧರ್ಮದ ಆಚರಣೆಗಳಿಂದ ಮಾಯವಾದ್ದರಿಂದಲೇ-ಈಗಿನ ಧಮಾಧೀಪತಿಗಳೆನ್ನಿಸಿಕೊಂಡವರೆಲ್ಲ ಈ ಬಗೆಯ ದಿಢೀರ್ ಪವಾಡ ಪುರುಷರ ಬಗ್ಗೆ ಚಕಾರವೆತ್ತದೇ ಸುಮ್ಮನಿರುವುದು. ಶಂಕರ, ರಾಮಾನುಜ, ಆನಂದತೀರ್ಥ, ಬಸವ, ಅಲ್ಲಮ ಯಾರೇ ಆಗಲೀ ಅರಿವಿಗಾಗಿ ಧರ್ಮವನ್ನು ಹಿಡಿದವರಾದ್ದರಿಂದ, ತಮ್ಮ ಹಿಂದಿನದನ್ನು, ಸಮಕಾಲೀನವಾದುದನ್ನು ನಿಷ್ಠುರವಾಗಿ ವಮರ್ಶಿಸುತ್ತಲೇ ತಮ್ಮ ವಾದಗಳನ್ನು ಮಂಡಿಸಿದರು. ಈಗಲೂ ಯೂರೋಪ್‌ನಲ್ಲಿ ಕ್ರಿಶ್ಚಿಯಾನಿಟಿ ಸೃಜನಶೀಲವಾಗಿ ಉಳಿದಿವೆ. ಉದಾಹರಣೆಗೆ ಕೆರ್ಕೆಗಾರ್ಡ್ ಮತ್ತು ಎಲಿಯಟ್‌ರಂಥ ಲೇಖಕರು ಅಲ್ಲಿ ಬಂದಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಪ್ರಾಯಶಃ ರಾಮಕೃಷ್ಣ, ರಮಣ ಮಹಷಿಗಳ ನಂತರ ನಮ್ಮ ಧಾರ್ಮಿಕ ಚಿಂತನೆ ಮೊಂಡಾಗಿದೆ. ಇಲ್ಲವಾದಲ್ಲಿ ಗೊಡ್ಡು ಧಾರ್ಮಿಕತೆಗೆ, ಚೀಪಾದ ಪವಾಡಗಳಿಗೆ ಧರ್ಮದ ಒಳಗಿಂದಲೇ ಚುರುಕಾದ ವಿರೋಧ ಹುಟ್ಟಿರುತ್ತಿತ್ತು. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಒಂದು ಕಷ್ಟಕರವಾದ ಪ್ರಶ್ನೆಯನ್ನು ಎತ್ತುವುದಕ್ಕೆ ನಾನಿಲ್ಲಿ ನೋಡುತ್ತಿದ್ದೇನೆ; ಜಾತಿ ನಿರ್ಮೂಲನವನ್ನು ಆಧುನಿಕ ನಾಗರಿಕತೆಯ ಮೂಲಕ, ಕೇಂದ್ರೀಕರಣವನ್ನು ಅಗತ್ಯ ಮಾಡುವ ನಗರೀಕರಣದ ಮೂಲಕ ಸಾಧಿಸುವುದನ್ನು ಒಪ್ಪದಿದ್ದವರಿಗೆ ಮಾತ್ರ ಈ ಪ್ರರ್ಶನೆ ಏಳುತ್ತದೆ.

ಹತ್ತೊಂಬತ್ತನೆಯ ಶತಮಾನದಲ್ಲಿ ನಾವು ಹೀಗೆಯೇ ಪಾಶ್ಚಾತ್ತ್ಯೀಕರಣವಾಗದೇ ಇಂಡಿಯಾ ಉದ್ಧಾರವಾಗುವುದಿಲ್ಲವೆಂಬ ತೀರ್ಮಾನಕ್ಕೆ ಬಂದು ರಾಜಾರಾಮ ಮೋಹನರಾಯರಂಥವರ ನೇತೃತ್ವದಲ್ಲಿ ನಾವಿರುವ ಪ್ರಸ್ತುತ ಹಾದಿಯನ್ನು ಆಗಲೇ ಹಿಡಿದೆವು ಎಂದು ಹಿಂದೆ ಹೇಳಿದೆ. ಇದು ಇನ್ನೊಂದು ಬಗೆಯ ಮೂಢನಂಬಿಕೆಗೆ, ಈಗಿರುವುದಕ್ಕಿಂತಲೂ ಹೆಚ್ಚು ವಿನಾಶಕಾರಿಯಾದ, ಮಾನವ ಜೀವಿತಕ್ಕೆ ಯಾವುದು ಒಳಿತೆಂದೇ ತಿಳಿಯಲಾರದ ಮೌಢ್ಯಕ್ಕೆ ನಮ್ಮನ್ನು ತಳ್ಳಬಹುದು. ಆದರೆ ನಮ್ಮ ವಿಚಾರವಾದಿಗಳು ಇಂಥ ಪ್ರಶ್ನೆಗಳಿಂದ ತಲೆ ಕೆಡಿಸಿಕೊಂಡಂತೆ ನನಗಂತೂ ಕಾಣುವುದಿಲ್ಲ. ಏಕೆಂದರೆ ನಮ್ಮ ಧರ್ಮದಲ್ಲೇ ಇರುವ ಒಂದು ಶಕ್ತಿಯ ಮುಖಾಂತರ ಇದಕ್ಕೆ ವಿರೋಧ ಬಂದಿದ್ದರೆ ಬಹುಶಃ ಜಾತಿವ್ಯವಸ್ಥೆಯ ಕೆಡುಕುಗಳನ್ನು ಬಹಳ ಬೇಗ ನಿರ್ನಾಮ ಮಾಡಬಹುದಿತ್ತು. ಹಿಂದೆ ದಯಾನಂದ ಸರಸ್ವತಿ ಇತ್ಯಾದಿ ಬಂದರಲ್ಲ-ಆ ಬಗೆಯಲ್ಲಿ. ಕುವೆಂಪು, ಅಡಿಗ, ಶ್ರೀರಂಗ, ಮಾಸ್ತಿಯಂಥವರು ಆ ಪರಂಪರೆಯಲ್ಲಿ ಬಂದವರು. ಆದ್ದರಿಂದಲೇ ಭಾರತದ ಧರ್ಮದಲ್ಲಿ ಉತ್ತಮವಾದ ಕೆಲವನ್ನು ಉಳಿಸಿಕೊಂಡು ಅಸಹ್ಯವೆನ್ನಿಸುವ ಕೆಲವನ್ನು ಬಿಡುವುದು ಹೇಗೆಂದು ಅವರು ಚೀಂತಿಸುತ್ತಾ ಬಂದಿದ್ದಾರೆ. ಈಗ ವಿಚಾರವಾದ ಎಂದು ಮೆರೆಯುತ್ತಾ ಇರುವುದು ಆಧುನಿಕ ನಾಗರಿಕತೆಗೆ ಮತ್ತು ಕೇಂದ್ರೀಕರಣಕ್ಕೆ ನಮ್ಮ ಮನಸ್ಸುಗಳನ್ನು ಸಿದ್ಧಪಡಿಸುವಂಥ, ಜನಸಾಮಾನ್ಯರಿಂದ ನಮ್ಮನ್ನು ದೂರಮಾಡುವಂಥ ಉಪಾಯಗಳು ಎಂದು ಅನ್ನಿಸಿದಾಗ ಅನುಮಾನಗಳು, ಸಂದಿಗ್ಧಗಳು ಹುಟ್ಟಿಕೊಳ್ಳುತ್ತವೆ. ಈ ವಿಚಾರವಾದದ ಪರಿಣಾಮ ನಾವು ಬಯಸಿದ ರೀತಿಯಲ್ಲಿ ಆಗದೇ ಇನ್ನೊಂದು ರೀತಿಯಲ್ಲಿ ಆಗಬಹುದು. ರಷ್ಯನ್ ಟ್ಯಾಂಕುಗಳನ್ನು ನಂಬುವವರಿಗೆ ಈ ಪ್ರಶ್ನೆಗಳೇ ಇಲ್ಲ; ನಂಬದೇ ಇರುವವರಿಗೆ-ಗಾಂಧಿ ಲೋಹಿಯಾದ ಹಿಂದೆ ಬಂದವರಿಗೆ-ಈ ಪ್ರಶ್ನೆಗಳಿವೆ.

ನನಗಿದು ಯಾವಾಗ ತೀವ್ರವಾಗಿ ಅನ್ನಿಸಿತು ಹೇಳುವೆ. ರಷ್ಯಾದ ಒಂದು ಮೀಟಿಂಗ್‌ನಲ್ಲಿ ನಾನಿದನ್ನು ಹೇಳಿದೆ. ರಷ್ಯಾದಲ್ಲಿ ಕನ್ಸ್ಯೂಮರಿಸಮ್-ಅಂದರೆ ಗ್ರಾಹಕ ದುರಾಸೆ-ಶುರುವಾಗಿದೆ. ಎಲ್ಲಿ ಹೋದರೂ ‘ಡಾಲರ್, ಡಾಲರ್’ ಅಂತ ಕೇಳುತ್ತಾರೆ. ನಮ್ಮಲ್ಲೂ ಇದೆ ಅದು ನಗರಗಳಲ್ಲಿ. ಆದರೆ ನಾನು ಅಮೆರಿಕಾಕ್ಕೆ ಹೋಗಿ ಹತ್ತು ತಿಂಗಳಿದ್ದು ಹಿಂದಕ್ಕೆ ಬರುವಾಗ ಮನೆಯಲ್ಲಿನ ಎಲ್ಲರಿಗೂ ಏನೇನೂ ಕೊಂಡುಕೊಳ್ಳಬೇಕು ಎಂದು ಯೋಚಿಸುತ್ತಿದ್ದಾಗ ನನ್ನ ತಾಯಿಗೆ ಏನು ತೆಗೆದುಕೊಳ್ಳಬೇಕು ಅಂತ ಗೊತ್ತಾಗಲಿಲ್ಲ. ಅಂದರೆ ನನ್ನ ತಾಯಿಗೆ ಬೇಕಾದಂಥ ವಸ್ತು ಅಮೆರಿಕಾದಲ್ಲಿರಲಿಲ್ಲ. ಅಂದರೆ ಇಂಥ ಒಬ್ಬ ಅಗ್ರಾಹಕಳನ್ನು ನಮ್ಮ ಧರ್ಮ ಸೃಷ್ಟಿಸಿದೆ. ಕಮ್ಯುನಿಸಮ್‌ಗೂ ಅದನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಗಿಲ್ಲ. ಗ್ರಾಹಕ ದುರಾಸೆಯಲ್ಲಿ ಒಂದು ಈವಿಲ್ ಇದೆಯೆಂದು ನೀವು ತಿಳಿದವರಾದರೆ ಅದನ್ನು ಸೃಷ್ಟಿಸುವ ವೈಜ್ಞಾನಿಕ ನಾಗರಿಕತೆಯಲ್ಲಿ ಕಮ್ಯುನಿಸ್ಟ್ ಮತ್ತು ಬಂಡವಾಳಶಾಹಿ ವ್ಯವಸ್ಥೆ ಎರಡರಲ್ಲೂ-ನಿಮಗೆ ಸಂದೇಹ, ಅನುಮಾನ ಉಂಟಾಗುತ್ತೆ.

ನಮ್ಮ ಸಾಹಿತ್ಯ ಪ್ರಪಂಚ ಮೇಲೆ ನಾನು ಹಿಂದೆ ಎತ್ತಿದ ಎಮರ್ಜೆನ್ಸಿ ಮತ್ತು ವಿಚಾರವಾದದ ಪ್ರಶ್ನೆಗಳು ಯಾವ ಬಗೆಯ ಪರಿಣಾಮ ಮಾಡಿತೆಂದು ಸ್ಪಷ್ಟಪಡಿಸಿಕೊಳ್ಳಲು ಈಗ ಪ್ರಯತ್ನಿಸೋಣ. ರೇಡಿಯೋ ಅಣತಿಯ ಮೇರೆಗೆ ಯಾವ ವಿಷಯದ ಮೇಲೆ ಬೇಕಾದರೂ ಕವನ ಬರೆಯಬಲ್ಲವಂಥವರು ಎಮರ್ಜೆನ್ಸಿಯಲ್ಲಿಯೂ ‘ಇಪ್ಪತ್ತು ಅಂಶ’ಗಳನ್ನು ಹೊಗಳಿ ಬರೆದರು. ಆದರೆ ಸ್ವಾನುಭವದ ಮೇಲೆ, ಹಿನ್ನೋಟವನ್ನು ಅಗತ್ಯಗೊಲಿಸುವ ಸಾಂದ್ರತೆಯ ಮೇಲೆ, ವೈಯಕ್ತಿಕ ಸಾಕ್ಷಿತ್ವದ ಮೇಲೆ ಒತ್ತು ಹಾಕಿದ್ದ ನವ್ಯ ಸಾಹಿತ್ಯದ ಮಾರ್ಗ-ಪ್ರಜಾತಂತ್ರದಲ್ಲಿ ಮಾತ್ರ ಬೆಳೆಯಬಲ್ಲ ಪ್ರಯೋಗಶೀಲ ಮನೋಧರ್ಮದ ಮಾರ್ಗವಾದ್ದರಿಂದ-ಎಮರ್ಜೆನ್ಸಿಗೆ ತಕ್ಷಣದಲ್ಲಿ ಪ್ರತಿಕ್ರಿಯಿಸಲಾರದೇ ಹೋಯಿತು ಅಡಿಗ, ಜಿ.ಎಸ್. ಸದಾಶಿವ ಪಾಟೀಲರಂಥವರು ಮಾಡಿದ ಪ್ರತಿಕ್ರಿಯೆ ಕೂಡ ಸೂಕ್ಷ್ಮಜ್ಞರನ್ನು ಮಾತ್ರ ತಲುಪುವಂಥದ್ದಾಗಿತ್ತು; ಅಂದರೆ ರೂಪಕದ ಭಾಷೆ ಅರ್ಥ ಆಗುವವರಿಗೆ ತಲುಪುವಂಥದ್ದಾಗಿತ್ತು. ಉದಾಹರಣೆ, ‘ಗಾಂಧಿ ಸ್ಮರಣೆ’ ಯಂಥ ಪದ್ಯದ ಐರನಿ ಕೂಡ ತಲುಪುವುದು ಯಾರಿಗೆ ಅಂದರೆ, ಐರನಿ ಅಂದರೆ ಏನು ಅಂತ ಅರ್ಥ ಆಗುವವರಿಗೆ.

ಜನರ ಮನಸ್ಸನ್ನು ರಾಜಕೀಯವಾಗಿ ತಕ್ಷಣ ಪರಿಣಾಮಕಾರಿಯಾಗುವಂತೆ ಬೇರೆ ದಿಕ್ಕಿನಲ್ಲಿ ಕಟ್ಟುವುದು ಪ್ರಾಯಶಃ ದಟ್ಟ ಸಾಂದ್ರ ಮಾಧ್ಯಮಕ್ಕೆ ಸಾಧ್ಯವಿಲ್ಲ. ಈ ಪ್ರಶ್ನೆಯಿಂದ ನಾನೀಗ ಒಕ್ಕೂಟದ ಪ್ರಶ್ನೆಗೆ ಬರುತ್ತೇನೆ. ಅದು ವೈದಿಕ ಧರ್ಮವನ್ನು ವಿರೋಧಿಸುವುದಕ್ಕೋಸ್ಕರವಾಗಿ ಹುಟ್ಟಿದ ಒಂದು ಚಳುವಳಿ, ಅದರ ಬಗ್ಗೆ ನಾನು ಈಗಾಗಲೇ ಬೇರೆ ಕಡೆ ಬರೆದಿರುವುದರಿಂದ ಇನ್ನೊಂದು ಹೊಸ ವಿಷಯ ಅಂತ ಅನ್ನಿಸಿದ್ದನ್ನು ಮಾತ್ರ ಇಲ್ಲಿ ಹೇಳುವುದಕ್ಕೆ ಪ್ರಯತ್ನ ಪಡುತ್ತೇನೆ.

ನವೋದಯ ಮಾರ್ಗದಲ್ಲಿ ಬರೆದ ಕುವೆಂಪುರಂಥವರೂ ಸಂಸ್ಕೃತೀಕರಣವನ್ನು ಒಪ್ಪಿಕೊಂಡವರು. ಆಮೇಲೆ ಅವರ ದಿಕ್ಕಿನಲ್ಲೇ ಬೆಳೆದ ಬ್ರಾಹ್ಮಣೇತರ ಲೇಖಕರಾದ ಕಣವಿಯವರಿಗೇ ಆಗಲಿ ಶಿವರುದ್ಧಪ್ಪನವರಿಗೇ ಆಗಲಿ ಸಂಸ್ಕೃತೀಕರಣ ಸಮಸ್ಯೆಯಾಗಲಿಲ್ಲ. ಅಂದರೆ ಈ ನವ್ಯ ಯುಗದಲ್ಲಿ ಬಂದ, ನನ್ನಜೊತೆಗೇ ಬೆಳೆದುಬಂದ, ಕೆಲವರಿಗೆ ಈ ಸಂ‌ಸ್ಕೃತೀಕರಣದ ಮುಖಾಂತರ ಜಾತಿಯನ್ನು ಮೀರುವುದು ಸಾಲದು ಅಂತ ಅನ್ನಿಸಿತು. ಆಗ ಇದಕ್ಕಿಂತ ಉತ್ತಮವಾದ ಬೇರೆ ಮಾರ್ಗ ಯಾವುದು ಅನ್ನುವ ಪ್ರಶ್ನೆ ಹುಟ್ಟುತ್ತದೆ. ನಮಗೆ ಕಾಣುತ್ತ ಇರುವ ಹಾಗೆ ಇನ್ನೊಂದು ಮಾರ್ಗವೆಂದರೆ, ಪಾಶ್ಚಾತ್ಯೀಕರಣ. ಆದರೆ ಇವೆರಡೂ ಮಾರ್ಗಗಳನ್ನೂ ಒಪ್ಪಿಕೊಳ್ಳದೇ ಇರುವವರಿಗೆ ಬಹಳ ತೊಡಕುಗಳಿವೆ.

ನನಗೆ ಈಚೆಗೆ ಒಂದು ವಿಷಯ ಹೊಳೆಯಿತು. ಅದನ್ನು ನಾನಿನ್ನೂ ಯೋಚಿಸಿ ಬೆಳೆಸಿಲ್ಲ. ಲಂಕೇಶರ ‘ಅವ್ವ’ ಪದ್ಯವನ್ನು ಒಂದು ವರ್ಕ್‌‌ಶಾಪಿನಲ್ಲಿ ವಿವರಿಸುತ್ತಿದ್ದಾಗ ಥಟ್ಟನೆ ಅದರಲ್ಲೊಂದು ಸೂಕ್ಷ್ಮ ಕಂಡಿತು. ಪ್ರಾಯಶಃ ಬ್ರಾಹ್ಮಣೇತರ ಬಡ ಕುಟುಂಬದಲ್ಲಿ ಹುಟ್ಟಿಬಂದವರು ಬೆಳೆಯುತ್ತಾ ನಗರೀಕರಣವಾದ ನಂತರ ತಮ್ಮ ಜನರ ಬಗ್ಗೆ ಒಂದು ರೀತಿಯ ಸಂಕೋಚವನ್ನೂ ಅವಮಾನವನ್ನೂ ಬೆಳೆಸಿಕೊಳ್ಳುವುದಕ್ಕೆ ಸಾಧ್ಯ. ಬ್ರಾಹ್ಮಣ ಹುಡುಗರನ್ನು ಈ ಸಮಸ್ಯೆ ಅಷ್ಟು ಬಾಧಿಸಲಾರದು. ಬ್ರಾಹ್ಮಣೇತರ ಹುಡುಗರಿಗೆ ಇದು ಬಹುಶಃ ಬೆಳೆಯುವ ಕ್ರಿಯೆಲ್ಲಿ ವಿದ್ಯಾಭ್ಯಾಸದ ಕ್ರಿಯೆಯಲ್ಲಿ ಇರಬಹುದಾದ ಸಮಸ್ಯೆ ಎಂದು ಕಾಣುತ್ತದೆ. ಹಿಂದೆ ಕುವೆಂಪುರವರು ಸಂಸ್ಕೃತೀಕರಣವನ್ನು ಒಪ್ಪಿಕೊಂಡಾಗ ಇನ್ನೂ ಗೊಡ್ಡು ನಂಬಿಕೆಗಳಿರುವವರ ಜೊತೆಗೆ ಹೂವಯ್ಯನಿಗಿರುವ ಸಂಬಂಧವನ್ನು ‘ಕಾನೂರು ಹೆಗ್ಗಡತಿ’ಯಲ್ಲಿ ಅವರು ಚಿತ್ರಿಸುವ ಬಗೆ ನೋಡಿ. ನಂತರ ಇದಕ್ಕೆ ವ್ಯತಿರಿಕ್ತವನ್ನಿಸುವಂತಿರುವ ಲಂಕೇಶರ ಪದ್ಯದಲ್ಲಿ ಅವ್ವನ ಜೊತೆ ಕವನದ ನಾಯಕನಿಗಿರುವ ಸಂಬಂಧ ನೋಡಿ. ಅಲ್ಲಿರುವ ಪ್ರತಿಯೊಂದು ಸಾಲು ಹೇಗಿದೆಯೆಂದರೆ; ಇವಳು ಹುಡುಕಿಕೊಂಡುಹೊರಟದ್ದು ಅನ್ನುತ್ತಾರೆ-ಅಂದರೆ, ಏನೋ ಒಂದು ಧರ್ಮಕ್ಕಾಗಿ ಅನ್ನುವ ಆಶೆಯನ್ನು ಪ್ರಚೋದಿಸಿ ‘ಕಳೆದುಹೋದ ಎಮ್ಮೆಗಾಗಿ’ ಅನ್ನುತ್ತಾರೆ. ಅಂದರೆ ಸಂಸ್ಕೃತಿಕರಣದ ಮೌಲ್ಯಗಳನ್ನು ಅಪೇಕ್ಷಿಸುವಂಥ ಸಾಲುಗಳನ್ನು ಸೃಷ್ಟಿಸಿ, ಅವುಗಳ ಕೊನೆಯಲ್ಲಿ ಅವಳು ಬರೇ ಕಾಯಕ ಜೀವಿಯಾಗಿದ್ದದ್ದನ್ನು ತೋರಿಸಿ ಅದನ್ನೇ ಕೀರ್ತಿಸುತ್ತಾರೆ. ‘ನಮ್ಮವ್ವನಿಗೆ ಭಗವದ್ಗೀತೆ ಇತ್ಯಾದಿಗಳು ಬೇಡ’ ಎನ್ನುತ್ತಾರೆ. ಎಲ್ಲಿ ಒಂದು ದ್ವಂದ್ವ ಮತ್ತು ಘರ್ಷಣೆ ಹುಟ್ಟಿಕೊಳ್ಳಬಹುದಿತ್ತೋ ಅಲ್ಲಿ ಇವರು ಶೂದ್ರತವನ್ನು, ಅದು ಇರುವಂತೆಯೇ ಒಪ್ಪಿಕೊಳ್ಳುವ ನಿಲುವಿನಲ್ಲಿ ನಿಂತು, ಸಂಕೋಚವನ್ನು ಮೀರುತ್ತಾರೆ. ಆದರೆ ಇದು ಎಷ್ಟು ಕಷ್ಟದ್ದು ಎಂಬುದಕ್ಕೆ ಇವರ ಇನ್ನೊಂದು ಪದ್ಯ ‘ಅಕ್ಕ-ತಮ್ಮ’ಅನ್ನುವುದನ್ನು ನೋಡಬಹದು; ಅಲ್ಲಿ ತನ್ನಕ್ಕನ ಬಗ್ಗೆ ಅವನಿಗೆ ಸಂಶಯ ಬರುತ್ತದೆ; ಜೊತೆಯ ಹುಡುಗರು ಹಾಸ್ಯ ಮಾಡುತ್ತಿರುತ್ತಾರೆ: ಆಗ ಕವನದ ನಾಯಕ ಕುಡುಮಿಯಾಗಿ ಬಿಡುತ್ತಾನೆ. ಅಂದರೆ ತಾನು ದೊಡ್ಡ ವಿದ್ಯಾವಂತನಾಗುವುದರ ಮುಖಾಂತರ ತನ್ನ ಜನರ ನಡುವಿನ ಗೊಂದಲಗಳನ್ನು ಮೀರುವುದಕ್ಕೆ ನೋಡುತ್ತಾನೆ. ಅಕ್ಕನನ್ನು, ಇವನು ಹಠಮಾಡಿದನೆಂದು, ಮನೆಯವರು ಅವಳು ಒಲ್ಲದ ಗಂಡನ ಮನೆಗೆ ಕಳುಹಿಸುತ್ತಾರೆ. ಅದರಿಂದಾಗಿ ಕವನದ ನಾಯಕ ಪಾಪಪ್ರಜ್ಞೆಗೆ ಒಳಗಾಗುತ್ತಾನೆ.

‘ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ’ ಎನ್ನುವ ಕಥೆಯಲ್ಲಿ ನಾಯಕ ಸ್ಕಾಲರ್‌ಶಿಪ್ ಪಡೆದುಕೊಳ್ಳುವುದಕ್ಕೋಸ್ಕರವಾಗಿ, ಆ ಮನೆಯ ಯಜಮಾನನ ಹತ್ತಿರ ಹೋಗಿದ್ದಾಗ (ಯಜಮಾನನ ಮಗಳು ಇವನ ಸಹಪಾಟಿ ಕೂಡ ಆಗಿರುತ್ತಾಳೆ) ಅಲ್ಲಿ ಅವನ ತಾಯಿ ಮತ್ತು ಅಕ್ಕ ತರಕಾರಿಯನ್ನೋ, ಏನನ್ನೋ ಕದ್ದು, ಭಾರೀ ಅವಮಾನದ ಒಂದು ಪ್ರಸಂಗ ಅವನಿಗೆ ಒದಗುತ್ತದೆ. ಅದೆ ಉಮಾಪತಿ ಈ ಸನ್ನಿವೇಶದಿಂದ ಸಿಳ್ಳೆ ಹೊಡೆಯುತ್ತ ನಡೆದುಬಿಡುತ್ತಾನೆ-ಇದು ಕೂಡ ಒಂದು ಮೀರುವ ಬಗೆಯೇ.

ಸಂಸ್ಕೃತೀಕರಣದ ಬಗ್ಗೆ ಸಂಕೋಚ, ಪಾಶ್ಚಾತ್ಯೀಕರಣದ ಬಗ್ಗೆ ಅನುಮಾನ, ಆದರೆ ಜಾತಿಪದ್ಧತಿಯನ್ನು ಮೀರಬೇಕು ಅನ್ನುವ ಆಶೆ, ಜೊತೆಗೇ ಶೂದ್ರತ್ವದ ಜೀವನ ಸಂತೋಷ ಎಷ್ಟೋ ಮೌಲ್ಯಗಳನ್ನು ಕಾದಿರಿಸಿಕೊಂಡಿದೆ ಎಂಬ ಭಾವನೆ-ಇವೆಲ್ಲವೂ ಲೇಖಕನ ಪ್ರಜ್ಞೆಯಲ್ಲಿ ಮಿಳಿತವಾದಾಗ ಅದು ಸೃಜನಶೀಲತೆಯಲ್ಲಿ ಜೀವನದ ಹೊಸ ಸಾಧ್ಯತೆಗಳನ್ನು ಹುಡುಕಲು ತೊಡಗುತ್ತದೆ. ಒಕ್ಕೂಟದಿಂದ ಪ್ರಾರಂಭವಾದ ಚಳವಳಿ, ಚಿಲ್ಲರೆ ಪ್ರಶ್ನೆಗಳಲ್ಲಿ ತನ್ನ ಶಕ್ತಿಯನ್ನು ವ್ಯಯಮಾಡಿಕೊಳ್ಳದಿದ್ದಲ್ಲಿ ಅದು ಇಂಥ ಗಂಭೀರ ಪ್ರಶ್ನೆಯನ್ನು ಎದುರಿಸಬಹುದಿತ್ತು; ಸಂಸ್ಕೃತೀಕರಣ,. ಪಾಶ್ಚಾತ್ಯೀಕರಣ-ಇವೆರಡನ್ನೂ ಒಪ್ಪಿಕೊಳ್ಳದೇ, ಇರುವ ಸ್ಥಿತಿಯಲ್ಲೇ ನಾವು ಜೀವನ ಒಪ್ಪಿಕೊಳ್ಳುವ ಕ್ರಮಗಳು ಇವೆಯೇ? ಇಂಥ ಪ್ರಶ್ನೆಗೆ ಉತ್ತರ ಹುಡುಕುವ ತಾಳ್ಮೆಯಿದ್ದಲ್ಲಿ ಮಾತ್ರ ಜಾತಿಯ ಬಗ್ಗೆ ನಡೆದ ಚಳವಳಿ ಸಾಹಿತ್ಯದ ದೃಷ್ಟಿಯಿಂದ ಸಾರ್ಥಕವಾಗಬಹುದು. ಅದಿಲ್ಲದೇ ನೀವು, ಅನಂತಮೂರ್ತಿ ಬ್ರಾಹ್ಮಣ ಎಂದು ನನ್ನನ್ನು ಬಯ್ಯೋದು, ಹಾಸ್ಯ ಮಾಡೋದು, ಅಡಿಗ ಬ್ರಾಹ್ಮಣ ಅಂತ ಅವರನ್ನು ಬಯ್ಯೋದು, ಹಾಸ್ಯ ಮಾಡೋದು-ಇವುಗಳಲ್ಲಿ ತೃಪ್ತರಾದರೆ ನೀವು ಜುಜುಬಿಯಾಗಿಬಿಡುತ್ತೀರಿ, ಅಷ್ಟೇ.

ಒಟ್ಟಿನಲ್ಲಿ ನನ್ನ ಮಾತಿನ ತಾತ್ಪರ್ಯ ಇದು. ವಿಚಾರವಾದದ ಚಳವಳಿ, ದಲಿತ ಚಳವಳಿ ಇತ್ಯಾದಿಗಳು ಎದುರಿಸಲೇಬೇಕಾದ ಮೂಲಪ್ರಶ್ನೆ ಯಾವುದೆಂದರೆ, ಸಂಸ್ಕೃತೀಕರಣ, ಪಾಶ್ಚಾತ್ಯೀಕರಣ ಈ ಎರಡು ಮಾರ್ಗಗಳನ್ನೂ ಬಿಟ್ಟು ಬೇರೆ ರೀತಿಯಲ್ಲಿ ನಮ್ಮ ದೇಶ ಸೃಜನಶೀಲವಾಗುವುದು ಸಾಧ್ಯವಿದೆಯೇ? ವಿಕೇಂದ್ರಿಕರಣ ಸಾಧ್ಯವೇ? ವಿಕೇಂದ್ರಿಕರಣದ ಕೆಲವು ಅಂಶಗಳೂ ಇನ್ನೂ ಜೀವಂತವಾಗಿರುವ ಜಾತಿಪದ್ಧತಿಯ ಚೌಕಟ್ಟಿನೊಳಗೆ ಹರಿಜನರ ಪ್ರಶ್ನೆಯನ್ನು ಬಗೆಹರಿಸುವುದು ಸಾಧ್ಯವೇ? ಅಥವಾ ನಮಗೆ ಇರುವ ಒಂದೇ ಮಾರ್ಗ: ಜಾತಿ ಸಮಾಜವನ್ನು ವರ್ಗ ಸಮಾಜವಾಗಿ ಮಾಡಿ, ಅದರಿಂದ ಹುಟ್ಟುವ ತಿಕ್ಕಾಟಗಳ ಮುಖೇನ, ಅಥವಾ ರಷ್ಯಾದಿಂದಲೋ, ಅಮೇರಿಕಾದಿಂದಲೋ ಪಡೆದ ಟ್ಯಾಂಕುಗಳ ಮುಖೇನ ‘ಆಧುನಿಕ’ ‘ಪ್ರಗತಿಶೀಲ’ ‘ವೈಜ್ಞಾನಿಕ’ ಇತ್ಯಾದಿ ಗುಣಸಂಪನ್ನನಾದ ಮನುಷ್ಯನನ್ನು ಇನ್ನೊಂದು ಬಗೆಯಲ್ಲಿ ನರಳುವಂತೆ ಮಾಡುವ, ಕೇಂದ್ರೀಕೃತ ಹೊಸವ್ಯವಸ್ಥೆಯನ್ನು ಹುಟ್ಟುಹಾಕುವುದೋ? ಈ ಸಮಸ್ಯೆಯನ್ನು ಬಿಡಿಸಿಕೊಳ್ಳ ಹೊರತು, ನಾವು ಜಾತಿ, ವಿಚಾರವಾದ ಇತ್ಯಾದಿಗಳ ಬಗ್ಗೆ ಏನೂ ತೊಡಕಿಲ್ಲ ಎಂದು ಮಾತಾಡಬಾರದು. ತೊಡಕುಗಳಿವೆಯೆನ್ನುವುದಕ್ಕೋಸ್ಕರ ನಾನು ಈ ಪ್ರಶ್ನೆಯನ್ನು ಎತ್ತಿ ನನ್ನ ಮಾತು ಮುಗಿಸುತ್ತೇನೆ.

(ಕೃಪೆ: ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಪಂಚಮ”.
ದಲಿತರೈತ ಚಳುವಳಿ ವಿಶೇಷಾಂಕ, ೧೯೮೩)

* * *