ನಾನು ತುಂಬ ಸಂತೋಷದಲ್ಲಿ ಮಾತನಾಡಲು ನಿಂತಿದ್ದೇನೆ. ಕೇವಲ ದಾಕ್ಷಿಣ್ಯದ ಮಾತಲ್ಲ ಇದು. ಹಲವು ಕಾರಣಗಳಿಂದ ನನಗೆ ತುಂಬ ಆನಂದವಾಗಿದೆ. ಕನ್ನಡ ಸಾರಸ್ವತ ಲೋಕದ ಪ್ರತಿನಿಧಿಯಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ದೊರೆಯಬಹುದಾದ ಅತ್ಯಂತ ದೊಡ್ಡ ಮರ್ಯಾದೆ ನನಗೆ ಇವತು ಸಿಕ್ಕಿದೆ. ಅದೂ ನಾನು ತುಂಬ ಗೌರವಿಸುವ ಇನ್ನಿತರ ನಾಲ್ಕೂ ಜನ ಸಾಹಿತಿಗಳ ಜೊತೆಗೆ ಸಿಕ್ಕಿದೆ. ಈ ನಾಲ್ವರ ಸಹವಾಸದಿಂದಾಗಿ ನನಗೆ ಸಿಕ್ಕಿದ ಮರ್ಯಾದೆಗೆ ಬೆಲೆ ಹೆಚ್ಚಿದ! ಈ ಮರ್ಯಾದೆ ದೊರೆತ ಸಮಯವೂ ಎಂಥದು?ಡಾ. ಶಿವರುದ್ರಪ್ಪನವರಂತಹ ಹಿರಿಯ ಸಾಹಿತಿಯೊಬ್ಬರು ಅಕಾಡೆಮಿಯ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಮೂರು ದಶಕಗಳಿಗೂ ಹಿಂದೆ ನನ್ನ ಎಳೆಹರಯದ ವಿದ್ಯಾರ್ಥಿ ದೆಸೆಯಲ್ಲಿ ನಾನು ಬರೆದೊಂದು ಕಿರುಕಥೆಯನ್ನು ಅವರು ಮೆಚ್ಚಿ ಆಡಿದ್ದರು. ಮಹಾರಾಜರ ಕಾಲೇಜಿನ ಕ್ಯಾಂಟೀನ್‌ನಲ್ಲಿ ನಾನು ಕೂತಿದ್ದಲ್ಲಿಗೆ ಬಂದು ಈ ಹಿರಿಯರು ಒಳ್ಳಯ ಮಾತಾಡಿದ್ದರು. ಇವತ್ತು ಅವರ ಅಧ್ಯಕ್ಷತೆಯಲ್ಲಿ ನನಗೆ ಈ ಪ್ರಶಸ್ಸತಿ ದೊರಕಿದೆ ಎಂಬುದು ಹಳೆಯ ಕಾಲವನ್ನೆಲ್ಲ ನೆನಪಿಗೆ ತರುತ್ತದೆ. ಇವತ್ತಿನ ಈ ಘಟನೆಗೆ ಇನ್ನೂ ಒಂದು ಹೆಚ್ಚಳವಿದೆ. ಅದೆಂದರೆ ನಮ್ಮ ನಾಡಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬರಾದ ಶ್ರೀ ಕೆಎಸ್.ನರಸಿಂಹಸ್ವಾಮಿಗಳ ಘನ ಅಧ್ಯಕ್ಷತೆಯಲ್ಲಿ ಈ ಪದವಿ ನಮಗೆಲ್ಲ ದೊರೆಯುತ್ತಿದೆ.

ಸದಾ ಚೈತನ್ಯಶೀಲರಾದ ಗೆಳೆಯ ಶಾಂತಿನಾಥ ದೇಸಾಯಿ, ಗೆಳೆಯ ತೇಜಸ್ವಿ, ಶ್ರೀಮತಿ ಶಾಂತಾದೇವಿ ಕಣವಿ. ಡಾ.ಕುಶಾಲಪ್ಪ ಗೌಡರ ಬಗ್ಗೆ ನಾನು ಈಗ ಹೇಳುವುದು ನಿಜವಲ್ಲದಿರಬಹುದು. ಆದರೆ ನನ್ನ ಬಗ್ಗೆಯಂತೂ ಇದು ನಿಜ: ನಾನು ಸೃಜನಶೀಲನಾಗಿ ಎಷ್ಟು ಹಿಗ್ಗುವುಇದೆಯೋ ಅಷ್ಟೇ ಕುಗ್ಗಿರುವುದೂ ಇದೆ. ಹಲವು ಸಾರಿ ನಾನು ಇನ್ನೇನು ಮುಂದೆ ಬರೆಯಲಾರೆ ಎನ್ನಿಸಿದ್ದಿದೆ. ಅಂತ ಸಂದರ್ಭಗಳಲ್ಲಿ ಈ ಬಗೆಯ ಪ್ರಶಸ್ತಿಗಳು ತರುವ ಕೀರ್ತಿ ಲೇಖಕನಿಗೆ ಮತ್ತೆ ತನ್ನಲ್ಲಿ ನಂಬಿಕೆ ಹುಟ್ಟಿಸುವಂತಿರುತ್ತದೆ. ಧೈರ್ಯ ಕೊಡುವಂತಿರುತ್ತದೆ. ನೈಜ ಸ್ವಧರ್ಮವೇನೆಂಬುದನ್ನು ನೆನಪು ಮಾಡಿಕೊಡುತ್ತದೆ. ಇಗೋ ನೀನು ಕುಲಪತಿಯಾಗಿರುವುದಾಗಲೀ ಪ್ರಾಧ್ಯಾಪಕನಾಗಿರುವುದಾಗಲೇ ಸಾಮಾಜಿಕ ಸ್ಥಾನಮಾನಗಳನ್ನು ಪಡೆದು ಎತ್ತರದಲ್ಲಿರುವುದಾಗಲಿ ಅಪ್ರಸ್ತುತಃ ಆದರೆ ನೀನು ನಿಜವಾಗಿ ಏನೆಂದರೆ ಲೇಖಕ-ಕನ್ನಡಕ್ಕೆ ಬೇಕಾದ ಲೇಖಕ-ಎಂಬ ಎಚ್ಚರಿಕೆಯನ್ನು ಕೊಡುತ್ತದೆ. ಯಾರೋ ಮೊನ್ನೆ ನನ್ನ ಕೇಳಿದರು. ಕೇರಳದಲ್ಲಿ ಯೂನಿವರ್ಸಿಟಿ ಆಡಳಿತ ನಡೆಸುವುದು ಕಷ್ಟವೆನ್ನಿಸುವುದಿಲ್ಲವೇ ಎಂದು. ನಾನು ಹೇಳಿದೆ: ಇಲ್ಲ ಇವತ್ತಿಗೂ ನನನಗೆ ಒಂದು ಒಳ್ಳೆಯ ಕಥೆ ಬರೆಯುವುದೆ ಹೆಚ್ಚು ಕಷ್ಟದ ವಿಷಯವನ್ನಿಸುತ್ತದೆ ಎಂದು. ಇವತ್ತಿನ ಪ್ರಶಸ್ತಿ ನನಗೆ ನನ್ನ ಜೀವನದಲಿ ಯಾವುದು ಮಹತ್ವದ್ದಾಗಿ ಉಳಿದಿರಬೇಕೆಂಬ ಎಚ್ಚರಿಕೆ ಕೊಡುತ್ತಿದೆ. ಅದಕ್ಕಾಗಿ ಎಲ್ಲರಿಗೂ ನಾನು ಕೃತಜ್ಞ.

ಕನ್ನಡದಲ್ಲಿ ಬರೆಯುವ ನಮಗೆಲ್ಲರಿಗೂ ಇರಬೇಕಾದ ಎಚ್ಚರವೆಂದರೆ ಜ್ಞಾನದ ಕ್ಷೇತ್ರದಲ್ಲಿ ಸಂಸ್ಕೃತ ಆಳುತ್ತಿದ್ದಾಗ, ಇವತ್ತು ಎಲ್ಲ ಕ್ಷೇತ್ರಗಳಲ್ಲೂ ಇಂಗ್ಲಿಷ್ ಆಳುತ್ತಿರುವಾಗ ಕನ್ನಡ ಧೀಮಂತರಿಗೆ ಕನ್ನಡದಲ್ಲಿ ಕನ್ನಡದಲ್ಲಿ ಬರೆಯುವುದು ಸಾಧ್ಯವಾದ್ದು, ಬರೆಯುವುದು ಅಗತ್ಯವೆನ್ನಿಸಿದ್ದು ಕನ್ನಡದಂಥ ಭಾಷೆಗಳೆಲ್ಲದರ ಬಗ್ಗೆ ಇದು ನಿಜ ನಿರಕ್ಷಕರರು ಉಳಿಸಿಕೊಂಡು ಬಂದ ಭಾಷೆ ಭಾರತೀಯ ಭಾಷೆಗಳು ಎನ್ನುವುದು. ಇವರು ನಿರಕ್ಷಕರಾದರೂ ಅಸಂಸ್ಕೃತರಲ್ಲ. ವಿಪರ‍್ಯಾಸವೆಂದರೆ ಇಂದು ಒಬ್ಬ ಭಾರತೀಯ ಯಾವ ಪ್ರಾದೇಶಿಕ ಭಾಷೆಯನ್ನೂ ಅರಿಯದೆ ಕೇವಲ ಇಂಗ್ಲಿಷ್ ಆಡಿಕೊಂಡು ಬೆಳೆದವನಾದರೆ ಅವನು ಅಸಂಸ್ಕೃತನಾಗಿರುತ್ತಾನೆಂಬುದು. ಅಂತೂ ಅವನಿಗೆ ತನ್ನ ನೆಲದ ಸಂವೇದನೆಯಿಂದ ಬರುವ ನೈ ಸಂಸ್ಕೃತಿಯಿರುವುದಿಲ್ಲ. ಇವತ್ತು ಇಂಗ್ಲಿಷಲ್ಲಿ ಬರೆಯುತ್ತಿರುವ ಅತ್ಯತ್ತಮ ಭಾರತೀಯ ಲೇಖಕರೆಲ್ಲರೂ ರಾಜಾರಾಯರಿರಲಿ, ಮುಲ್ಕ್‌ರಾಜ್ ಆನಂದ್ ಇರಲಿ, ನಾರಾಯಣ್ ಇರಲಿ ತಮ್ಮ ತಮ್ಮ ಮಾತೃಭಾಷೆಗಳಲ್ಲಿ ತಮ್ಮ ಬಾಲ್ಯ ಕಾಲವನ್ನಾದರೂ ಕಳೆದವರು

ಈಗ ನಮಗೆ ಎದರುರಾಗುತ್ತಿರುವ ಟೆಕ್ನಾಲಜಿ ಯುಗದಲ್ಲಿ ಕನ್ನಡ ತನ್ನ ಪ್ರಾಮುಖ್ಯತೆಯನ್ನುಳಿಸಿಕೊಂಡೆ ಇರುತ್ತದೆಯೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಗಾಂಧೀಜಿ ಬಯಸಿದ್ದ ರಾಷ್ಟ್ರ ಕಲ್ಪನೆಯಲ್ಲಿ ಸರ್ವೋದಯದ ರಾಷ್ಟ್ರ ಕಲ್ಪನೆಯಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಮುಕ್ತ ಬೆಳವಣಿಗೆಯ ಅವಕಾಶವಿದೆ. ಆದರೆ ನಾವು ಇಂದು ನಮ್ಮ ವಿದ್ಯಾಭ್ಯಾಸ ಕ್ರಮದಲ್ಲೂ ನಮ್ಮ ಒಟ್ಟು ಆಶಯಗಳಲ್ಲೂ ಆಯ್ದುಕೊಂಡಿರುವ ಆಧುನಿಕ ನಾಗರಿಕತೆಗೆ ಪ್ರಾದೇಶಿಕ ಭಾಷೆಗಳು ತೊಡಕಾಗಿ ಕಾಣುತ್ತವೆ. ಸಂಪದಭಿವೃದ್ಧಿಯ ಪ್ರಾಪಂಚಿಕ ದೃಷ್ಟಿಯಿಂದ ನಾವೆಲ್ಲರೂ ಹೆಚ್ಚು ಹೆಚ್ಚು ಕೇಂದ್ರೀಕರಣ ಬಯಸುತ್ತೇವೆ; ಆದರೆ ಆತ್ಮದ ಬೆಳವಣಿಗೆಯ ದೃಷ್ಟಿಯಿಂದ ಸೌಂದರ್ಯದ ದೃಷ್ಟಿಯಿಂದ, ರಸದ ದೃಷ್ಟಿಯಿಂದ ಹೆಚ್ಚು ಹೆಚ್ಚು ವಿಕೇಂದ್ರಿಕರಣ ಬಯಸುತ್ತೇವೆ. ಸರ್ವೋದಯಕ್ಕೆ ವಿಕೇಂದ್ರಕರಣ ಬೇಕು: ಕನ್ನಡ, ತುಳು, ಕೊಡವ, ತಮಿಳು, ಮರಾಠಿ, ಉರ್ದು ಎಲ್ಲ ಬೇಕು. ವ್ಯವಸ್ಥೆ ಎಷ್ಟು ಚಿಕ್ಕದಾದಷ್ಟು ಅಷ್ಟು ವ್ಯಕ್ತಿ ಸರ್ವಾಂಗ ಅರಳಿಯಾನೆಂಬ ದೃಷ್ಟಿ ಉದು. ಸೌಂದರ್ಯದ ಸೃಷ್ಟಿಗೆ ಅಗತ್ಯವಾದ ಸಾವಯವ ಸಂಬಂಧ ಕೌಟುಂಬಿಕ ಪ್ರಜ್ಞೆಯಿದೆ. ಈ ಕುಟುಂಬ ಭಾವನೆಯಲ್ಲಿ ಪಶುಪಕ್ಷಿ ಮರಗಿಡಗಳು, ವಿಶ್ವದ ಜಡ ಚೈತನ್ಯರಾಶಿಯೆಲ್ಲವೂ ಸೇರಿಕೊಳ್ಳುತ್ತದೆ. ಆಧುನಿಕ ಯುಗದ ಇನ್ನೊಂದು ಬಗೆಯ ತುಡಿತದಲ್ಲಿ ವ್ಯವಸ್ಥೆ ಹೆಚ್ಚು ಹೆಚ್ಚು ಜಟಿಲವೂ ಆಗಾಧವೂ ಬೃಹದಾಕಾರವೂ ಆಗಿರಬೇಕಾಗುತ್ತದೆ. ನ್ಯೂಯಾರ್ಕಿನ ಜೊತೆ ಮೈಸೂರು ದಿನನಿತ್ಯದ ವ್ಯವಹಾರ ಪಡೆದಿರಬೇಕೆಂಬ ಹಂಬಲದ ಈ ವ್ಯವಸ್ಥೆಯ ಕೇಂದ್ರೀಕೃತ ಕಾರ್ಯ ವಿಧಾನದಲ್ಲಿ ಇಂಗ್ಲಿಷ್ ಮಾತ್ರ ಸಾಕು. ಕನ್ನಡ, ತುಳು, ತೆಲುಗುಗಳ ತೊಡಕು, ಈ ಭಾಷೆಗಳು ಉಳಿಯುವುದಾದರೆ ಹಿತ್ತಲಲ್ಲೋ ಅಡಿಗೆ ಮನೆಯಲ್ಲೋ ಅವು ಉಳಿದರೆ  ಸಾಕು. ಟೆಲಿಫೋನ್ ಸಂಪರ್ಕದ ನಡುಮನೆಗೆ ಕನ್ನಡ ಬೇಡ. ಜೆಟ್ ಪ್ರಯಾಣತಕ್ಕದು ಬೇಡ. ಇಂಥ ಕೇಂದ್ರಿಕೃತ ವ್ಯವಸ್ಥೆಗೆ ಜೀವಾಳವಾದ ವಿದ್ಯಾಭ್ಯಾಸ ಕ್ರಮ ಸರ್ವೋದಯವನ್ನು ಬಯಸವುಂಥದಲ್ಲ; ಜಟಿಲವಾದದ್ದನ್ನು ನಿರ್ವಹಿಸಬಲ್ಲ ಎಲೀಟಿಸ್ಟ್ ಮಾದರಿಯದು. ಬುದ್ಧಿ ಬಲದ ಈ ಉಚ್ಛತೆ ಖಂಡಿತ ನಾವು ಬಯಸಬೇಕಾದ ಜ್ಞಾನದ ಶ್ರೇಷ್ಠತೆಯಲ್ಲ. ಅನುಭವದ ಸಮಗ್ರತೆಗೆ ಇದರಲ್ಲಿ ಬೆಲೆಯಿಲ್ಲ.

ಇಂಥ ನಾಗರೀಕತೆಯನ್ನು ಬಯಸುವ ನಮ್ಮ ಪರಿಸರದಲ್ಲಿ ಕನ್ನಡ ಎಷ್ಟು ಕಾಲ ಕೇವಲ ಸಾಹಿತ್ಯದ ಭಾಷೆಯಾಗಿ ಉಳಿದೀತು? ಬಾಲ್ಯದಲ್ಲಾದರೂ ಕನ್ನಡದ ಮುಖೇನ ಮಕ್ಕಳ ಬುದ್ಧಿ ಬೆಳೆಯದಿದ್ದಲ್ಲಿ ಅವರು ಕನ್ನಡ ಓದುವರಾಗಿ ಉಳಿದಾರೆ? ಜನಜೀವನದಲ್ಲಿ ಸಮೃದ್ಧವಾಗದ ಭಾಷೆಯಲ್ಲ ಕಾಳಿದಾಸ, ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್ ಹುಟ್ಟುತ್ತಿರುವುದು ಸಾಧ್ಯವೇ? ಸರ್ವೋದಯ ಬಯಸುವಾತನ ಶ್ರೇಷ್ಟತೆಯ ಕಲ್ಪನೆ ಬೇರೆಯಾಗಿರುತ್ತದೆ. ಬುದ್ಧಿದರ್ಪದ ರಾಕ್ಷಸರಿಗೆ ಅದರಲ್ಲಿ ಜಾಗವಿಲ್ಲ. ವ್ಯಕ್ತಿತ್ ಸಮಗ್ರವಾಗಿ ನಿಸರ್ಗಕ್ಕೆ ಹೊಂದಿಕೊಂಡಂತೆ ಬೆಳೆಯಬೇಕೆಂದು ಅದು ಅಪೇಕ್ಷಿಸುತ್ತದೆ. ಅಂಥ ದೃಷ್ಟಿಗೆ ಬಹು ಭಾಷೆಗಳ ಭಾರತ ತೊಡಕಾಗಿ ಕಾಣಿಸುವುದರ ಬದಲಾಗಿ ಸರಸ್ವತಿಯ ವರವಾಗಿ ಕಾಣಿಸುತ್ತದೆ.

ಕನ್ನಡ ಸಂಸ್ಕೃತಿಯನ್ನು ಪ್ರೀತಿಸುವ ನಾವೆಲ್ಲರೂ ಇಂದು ಕಾಲದ ಪ್ರವಾಹಕ್ಕೆ ಎದುರಾಗಿ ಈಜಬೇಕಾಗಿದೆ. ಆಧುನಿಕ ಯುಗದ ಐರೋಪ್ಯ ಕೇಂದ್ರಿತ ದೃಷ್ಟಿಯಿಂದ ಬಿಡುಗಡೆ ಹೊಂದಿ, ಕನ್ನಡವನ್ನು ನಮ್ಮ ಬೆಚ್ಚನೆಯ ಗೂಡಾಗಿ ಮಾಡಿಕೊಂಡು ಮುಂದಿನ ಒಳ್ಳೆಯದಕ್ಕಾಗಿ ಕಾದು ಕೂರಬೇಕಾಗಿದೆ. ಕಾಲದ ಒಟ್ಟು ಈ ನಿರ್ಲಕ್ಷ್ಯದಲ್ಲಿ ಇಂಥ ಸಾಹಿತ್ಯದ ಪ್ರಶಸ್ತಿಗಳು ನಮಗೆ ನಾವು ಧೈರ್ಯ ತಂದುಕೊಳ್ಳುವ ವಿಧಾನಗಳು ಎನ್ನಬಹುದು.

ನಾವು ಮಾಡಿದ ಕೆಲಸವನ್ನು ಕನ್ನಡ ಜನ ಮೆಚ್ಚಿಕೊಂಡಿದೆ. ಹಾಗೆಂದು ಈ ನಾವು ಐವರಿಗೆ ಅಕಾಡೆಮಿ ಹೇಳುತ್ತಿದೆ. ಇದರಿಂದ ನಮಗೆ ಇನ್ನಷ್ಟು ಕೆಸ ಮಾಡಬೇಕೆಂಬ ಆಸೆ ಧೈರ್ಯ ಹುಟ್ಟಿದೆ. ಇದಕ್ಕಾಗಿ ನಾವು ಕೃತಜ್ಞರು.

[1]

ರುಜುವಾತು, ೨೮.

* * *[1] ೧೯೮೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಸನ್ಮಾನಿಸಿದ ಸಂದರ್ಭದಲ್ಲಿ ಮಾಡಿದ ಭಾಷಣ.