ದಟ್ಟ ಅರಣ್ಯದ ನಡುವೆ ಒಂದು ಮನೆ. ಮನೆಯೊಳಗೆ ಕಾಡು ನುಗ್ಗೀತೆಂದು ನನ್ನ ಅಜ್ಜ ನಿತ್ಯ ಕತ್ತಿಯಿಂದ  ಗಿಡ ಮೊಟ್ಟುಗಳನ್ನು ತರಿದು ಬರುತ್ತಿದ್ದರು. ಶಾನುಭೋಗರಾಗಿದ್ದ ನನ್ನ ತಂದೆ ಊರೂರು ಸುತ್ತುತ್ತಿದ್ದಾಗ, ಕತ್ತಲಾದ ಮೇಲೆ ಹುಲಿಯ ಗರ್ಜನೆಗೆ ಹೆದರಿ ನನ್ನ ತಾಯಿ ಬಾಗಿಲುಗಳನ್ನು ಮುಚ್ಚಿ ನಮ್ಮನ್ನು ಮಲಗಿಸಿಕೊಂಡು ಹೆದರಿದ ಹಸುಗಳ ಕೊರಳಿನ ಬಿದಿರು ಗಂಟೆಗಳನ್ನು ಕಾತರದಿಂದ ಆಲಿಸುತ್ತ ಕೂತಿರುತ್ತಿದ್ದರು. ಹಗಲು, ಆಳುಗಳು ಬಂದು ಹೆಜ್ಜೆಗುರುತು ಬಿಟ್ಟು ಹೋದ ಹುಲಿ ಚಿರತೆಗಳ ಕಥೆ ಹೇಳುತ್ತಿದ್ದರು. ಒಂದೇ ಒಂದು ದಾಳಿಂಬೆ ಮರದಲ್ಲಿ ಬಿಟ್ಟ ಒಂದೇ ಒಂದು ಹಣ್ಣನ್ನು ಬಯಕೆಯ ತನ್ನ ರಾಜಕುಮಾರಿಗಾಗಿ ಕೊಯ್ಯಲು ಬಿಡದಂತೆ ಕಾಯುತ್ತ ಕೂತಿದ್ದ ರಾಕ್ಷಸನ ಕಥೆಯನ್ನು ನಿದ್ದೆ ಹತ್ತುವ ತನಕ ಅಜ್ಜ ನನಗೆ ಎಳೆದು ಎಳೆದು ಹೇಳುವುದು. ಅಕ್ಷರಗಳನ್ನು ನಾನು ಬರೆಯಲು  ಕಲಿತದ್ದು ಚಾವಡಿಯಲ್ಲಿ – ಹರಡಿದ ಮರಳಿನ ಮೇಲೆ, ಉರಿಯುತ್ತಿದ್ದ ಬೆರಳಿನಿಂದ. ದಾಳಿಂಬೆ, ಪಾರಿಜಾತ, ನಂದಬಟ್ಟಲು, ಸಂಜೆಮಲ್ಲಿಗೆ, ದಾಸವಾಳ, ರತ್ನಗಂಧಿಗಳು ಬೆಳೆದ ಅಂಗಳದಲ್ಲಿ ಆಗೊಮ್ಮೆ, ಈಗೊಮ್ಮೆ ಹುಲಿವೇಷದ ಕುಣಿತ, ಕರಡಿ ವೇಷದ ಕುಣಿತ. ಮನೆಗೆ ದೂರದಲ್ಲಿದ್ದ ಆಳುಗಳ ಗುಡಿಸಿಲಿನಲ್ಲಿ ಗಣ ಬರುತ್ತಿದ್ದ ಅಬ್ಬಕ್ಕನದೂ ಒಂದು ಗುಡಿಸಲು. ಅವಳ ಅಂಗಳದಲ್ಲಿ ಹೀರೇಕಾಯಿಗಿಡ, ಬಸಲೆ ಸೊಪ್ಪಿನ ಬಳ್ಳಿ, ಹಿತ್ತಲಲ್ಲಿ ತೊಂಡೆ ಚಪ್ಪರ, ವರ್ಷಕ್ಕೊಮ್ಮೆ ಅಡಿಕೆ ಕೊಳ್ಳಲೆಂದು ಬಂದು ನನ್ನಲ್ಲಿ ಚುಂಗಿನಿಂದ ಅಲಂಕೃತವಾದ ಚೂಪು ಮೂತಿಯ ಜೋಡು, ಪಟ್ಟಣದ ಬೆಂಡು ಬತ್ತಾಸುಗಳ ಆಸೆ ಹುಟ್ಟಿಸಿದ ಬ್ಯಾರಿಗಳು; ಹುಲಿಯ ಬಾಯಿಗೆ ಸಿಕ್ಕು ಸತ್ತ ಕೌಲಿಗಾಗಿ ಅಮ್ಮ ಕಣ್ಣೀರು ಸುರಿಸಿದ್ದು; ಒಂದಿಡೀ ದಿನ ಮೂರ್ಛೆ ಹೋಗಿದ್ದ ನನ್ನ ತಮ್ಮನೊಬ್ಬನನ್ನು ವೈದ್ಯರು ಎಚ್ಚರಿಸಲೆಂದು ಚುಟುಕ ಹಾಕಿದ್ದು; ತಂದೆಯ ಗೆಳೆಯರೊಬ್ಬರು ಅವನನ್ನು ಉಳಿಸಲೆಂದು ಮೃತ್ಯುಂಜಯ ಜಪ ಮಾಡಿದ್ದು ಇಂಥ ನೆನಪುಗಳು ಬಾಲ್ಯದಿಂದ ಮರುಕಳಿಸುತ್ತವೆ. ನಾನು ಮಗುವಾಗಿದ್ದಾಗ ಆಡಿದ ಒಂದು ಮಾತು ಅಮ್ಮ ಯಾವತ್ತೂ ನೆನೆಸುತ್ತಿದ್ದುದರಿಂದಲೋ ಏನೊ- ಇನ್ನೂ ನೆನಪಿದೆ: ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕಂಡೋಯ್ತು’ ಎಂದು ಲಯಬದ್ಧ ಮಾತಿನಿಂದ ಹಿರಿಯ ಮುದ್ದಿಗೆ ನಾನು ಕರಣಾಗಿದ್ದೆ.

ಸಂಜೆ ತಲೆಗೆದರಿ ಕುಂಕುಮ ಬಳಿದುಕೊಂಡು ತಥ್ಥರ ನಡುಗುತ್ತ  ಸಿಂಗಾರ ಹಿಡಿದು ಕುಣಿಯುತ್ತಿದ್ದ ಅಬ್ಬಕ್ಕ ಮಾರನೇ ದಿನ ನಗು ನಗುತ್ತ ಎರಡು ಕಂಕುಳದಲ್ಲಿ ತನ್ನ ಅವಳಿ ಜವಳಿ ಮಕ್ಕಳನ್ನು ಎತ್ತಿಕೊಂಡು ಬಂದದ್ದು ಕಂಡರೆ ನನಗೆ ಅಪಾರವಾದ ಪ್ರೀತಿ, ವಿಸ್ಮಯ. ಇಮಥ ಅಬ್ಬಕ್ಕನೇ ನನ್ನನ್ನು ಚಿಕ್ಕಯ್ಯನೆಂದು ಬಹುವಚನದಲ್ಲಿ ಕರೆಯುತ್ತಿದ್ದಳೆಂದು ಹೆಮ್ಮೆ.

ನನ್ನ ತಮ್ಮ ಈಗ ಅವನಿಲ್ಲ ಬಕಾಸುರನಂತೆ ಎಷ್ಟು ತಿಂದರೂ ಬಡಕಲಾಗಿದ್ದನೆಂದು ನಮ್ಮ ಮನೆಯಲ್ಲಿ  ರಾವು ಬಿಡಿಸುವ ರಣದೌತಣ ನಡೆದಿತ್ತು. ಕೆಂಪಾದ ಅನ್ನ ರಾಶಿಯೆದುರು ಕೂರಿಸಿ ಅಳುತ್ತಿದ್ದ ರಾವು ಬಿಡಿಸುವ ರಣದೌತಣ ನಡೆದಿತ್ತು. ಕೆಂಪಾದ ಅನ್ನ ರಾಶಿಯೆದುರು ಕೂರಿಸಿ ಅಳುತ್ತಿದ್ದ ನಮ್ಮ ತಮ್ಮನಿಗೆ ತಿನ್ನು ತಿನ್ನು ಎಂದು ಯರ‍್ಯಾರೋ ಪುಸಲಾಯಿಸುತ್ತಿದ್ದರು. ಯಾರದೋ ಮದುವೆ ಮನೆಗೆ ಹೋದಾಗ ಕುತೂಹಲದಿಂದ ನನ್ನ ಎರಡು ಮೂಗಿನೊಳಗೂ ಹುಣಿಸೇ ಬೀಜವನ್ನು ತೂರಿಸಿಕೊಂಡು, ಅವು ನೆತ್ತಿಗೆ ಹೋಯಿತೆಂದು, ಇಡೀ ಮದುವೆ ಮನೆಯನ್ನು ನಾನು ಕಂಗಾಲುಗೊಳಿಸಿದ್ದೆ. ಕಂಡ ಕಂಡ ದೇವರಿಗೆಲ್ಲ ಹರಕೆ ಹೇಳಿಕೊಂಡು, ಮುಂದೇನು ತಿಳಿಯದಿದ್ದಾಗ ಗಾಡಿ ಕಟ್ಟಿಸಿಕೊಂಡು ದೂರದ ಪೇಟೆಗೆ ನನ್ನ ಸಾಗಿಸಬೇಕು ಎನ್ನುವಷ್ಟರಲ್ಲಿ ಹುಣೆಸೆ ಬೀಜಗಳನು ಮೂಗಿನಿಂದ ಜಾರಿ ಹೊರ ಬಂದು, ಅಷ್ಟೂ ಹೊತ್ತೂ ಎಲ್ಲರ ಮರುಕಕ್ಕೆ ಒಳಗಾಗಿದ್ದ ನಾನು ಈಗ ಹಿರಿಯರ ಭಯಂಕರ ಕೋಪಕ್ಕೆ ತುತ್ತಾಗಿದ್ದೆ.

ನನಗೆ ಪಾಠ ಹೇಳಲು ಬರುತ್ತಿದ್ದ ಮಾಸ್ತರರ ಹೆಸರು ಕೃಷ್ಣಪ್ಪಯ್ಯ. ಅವರದೊಂದು ಕಾಲು ಕುಂಟು. ಆಯ್ದು ತಂದ ರಂಜದ ಹೂವನ್ನು ಬಾಳೆನಾರಿನಲ್ಲಿ ಪೋಣಿಸುತ್ತ ಕೂರುವುದೆಂದರೆ ಅತ್ಯಂತ ಖುಷಿ ಕೊಡುತ್ತಿದ್ದ ಹೊತ್ತಿನಲ್ಲೆ ಅವರು ಪಾಠ ಹೇಳಲು ಬರುವುದು ನಾನು ಮುಚ್ಚಿ ಕೂತರೆ, ಕಾಡಿನಲ್ಲಿ ಸೌದೆ ತರಲು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಕಥೆ ಹೇಳುತ್ತ ಹೋಗುತ್ತಿದ್ದ ಅಜ್ಜನೇ ನನ್ನನ್ನು ನಿಷ್ಠುರವಾಗಿ ಹೊಡೆದು ಎಳೆದು ತಂದು ಮೇಷ್ಟ್ರು ಎದುರು ಕೂರಿಸುತ್ತಿದ್ದರು. ನಾನು ಮುಂದೆ ಓದಿ ಬರೆಯುವುದನ್ನು ಕಲಿತ ಮೇಲೆ ಕಾದಿರುವ ಮೋಜು ಈಗಿಂದಲೇ ನನಗೆ ಪ್ರಿಯವಾಗಲೆಂದು ಅಜ್ಜ ಅಳಲೆಕಾಯಿ, ಕಬ್ಬಿಣದ ಕಿಟ್ಟ ಇತ್ಯಾದಿಗಳನ್ನು ತಂದು ಕುದಿಸಿ ಶಾಯಿ ಮಾಡುತ್ತಿದ್ದರು. ನನ್ನನ್ನು ಕಾಡಿಗೆ ಕರೆದುಕೊಂಡು ಹೋಗಿ ಲೇಖನಿಗಾಗಿ ಹದ್ದಿನ ಗರಿ ಹುಡುಕಿಸುತ್ತಿದ್ದರು…

* * *

ಇಂಥ ಮೇಲಿನ ನೆನಪುಗಳೆಲ್ಲ ಭೂತಕಾಲದ ಕಾಂತಿಯಲ್ಲಿ ಹೊಳೆಯುತ್ತವೆ. ನನ್ನ ಈ ಲೋಕಕ್ಕೆ ನನ್ನ ಮನಸ್ಸು ಬೆಳೆಯುವಾಗ ಬಂದವರು ಕಾರಂತರು. ಅವರನ್ನು ಓದಿದ್ದರಿಂದ ಇಂಥ ನೆನಪುಗಳು ನನಗೆ ಮುಖ್ಯ ಎನಿಸುತ್ತವೆಯೆ? ನಾನು ನೆನೆಸಿಕೊಳ್ಳುವುದರಲ್ಲಿನ ನಿಜ ಪಾಲೆಷ್ಟು? ಕಲ್ಪನೆಯಷ್ಟು? ಕಾರಂತರ ಕೃತಿಗಳ ಹಿನ್ನೆಲೆಯಲ್ಲಿ ಮಿನುಗುವ ಇಂಥ ವಿವರಗಳು ನನ್ನ ಬರವಣಿಗೆಯಲ್ಲಿ ಮುನ್ನೆಲೆಯಲ್ಲೆ ಯಾಕೆ ಬಂದು ನಿಲ್ಲುತ್ತವೆ?

ಮನೆಯೆದುರು ಬೇಲಿಯ ಕಳ್ಳಿಯ ಎಲೆಯನ್ನು ಮುರಿದು, ನಾಜೂಕಾಗಿ ಅದರ ಹಾಲು ಕನ್ನಡಿಯಾಗುವಂತೆ ಹಿಗ್ಗಿಸಿ ಅದರ ಮೇಲೆ  ಸೂರ್ಯನ ಕಿರಣಗಳನ್ನು ಪಡೆದು ರಂಗು ರಂಗಿನ ರೇಖೆಗಳನ್ನು ಕಂಡು ಚೋಟುದ್ದದವ ಹಿಗ್ಗುವುದು ಕಾರಂತರಿಗೆ ಮುಖ್ಯವೆನಿಸಬಹುದೆ? (ಅವರ ಸಮಕಾಲೀನರಲ್ಲಿ ಕುವೆಂಪುವಿಗೆ ಮಾತ್ರ ಇಂಥವು ಮುಖ್ಯವೆನ್ನಿಸುತ್ತವೆ) ದೀಪಾವಳಿಯ ದಿನ ದೂರದ ಊರಲ್ಲಿದ್ದ ಸೋದರಮಾವನ ಹೆಂಡತಿ ಮನೆಗೆ ಹೋಗಿ ಸತ್ತದ್ದನ್ನು ಜೀ ಜೀ ಎಂದು ಎಣ್ಣೆ ಕುಡಿದು ಸದ್ದು ಮಾಡುವ ಚಪ್ಪಲಿ ಮೆಟ್ಟಿ ಲಾಟೀನು ಹಿಡಿದು ಬಂದವರು ನಡುರಾತ್ರಿಯಲ್ಲಿ ಎಬ್ಬಿಸಿ ಹೇಳಿದ್ದು, ಅದರ ಮುಂದಿನ ದೀಪಾವಳಿಯಲ್ಲಿ ಮನೆಯ ರಂಪ ರಗಳೆ ದುಃಖಗಳಲ್ಲಿ ನಾನೊಬ್ಬನೇ ಎಣ್ಣೆ ಹಚ್ಚಿ ಎರಕೊಂಡು ಪ್ರಾತಃಕಾಲ ಹೊರಬಂದಾಗ ಆಕಾಶದಲ್ಲಿ ದಿವ್ಯಕಾಂತಿಯ ಏನೋ ಹಾರಿದಂತೆ ಕಂಡದ್ದು ಕಾರಂತ ಲೋಕದಲ್ಲಿ ಜರುಗಿದರೂ, ಅದಕ್ಕೆ ಅವರೆಷ್ಟು ಪ್ರಾಶಸ್ತ್ಯ ಕೊಟ್ಟಾರು?

ನಾನು ಬರೆಯಲು ಪ್ರಾರಂಭಿಸಿದ ದಿನಗಳಲ್ಲಿ ಕಾರಂತರ ಕೃತಿಗಳು ನನಗೆ ದೀಪವೂ ಆಗಿದ್ದವು, ಕನ್ನಡಿಯೂ ಆಗಿದ್ದವು. ಆದರೆ ಬೆಳಕಲ್ಲಿ ನನಗೆ ಬೇಕಾದ್ದನ್ನು ನಾನು ಹುಡುಕಿಕೊಂಡೆ; ಅದರ ಕನ್ನಡಿಯಲ್ಲಿ ಕಾಣಬೇಕೆನ್ನಿಸಿದಂತೆ ಕಾಣಲು ಪ್ರಯತ್ನಿಸಿದೆ. ಅವರಿಂದ ನಡೆಯುವುದನ್ನು ಕಲಿತು, ಬೇರೆ ದಿಕ್ಕಿಗೆ ಹೊರಳಲು ಯತ್ನಿಸದಿದ್ದರೆ ಅವರನ್ನೆ ಕಾಪಿ ಹೊಡೆಯುತ್ತ ಇರುತ್ತಿದ್ದೆ; ಅಥವಾ ಮೆಚ್ಚಿಕೆಯಲ್ಲಿ ಅವರಿಂದ ಪರವಶನಾಗಿ ಇದ್ದುಬಿಡುತ್ತಿದ್ದೆ. ಅವರ ದಟ್ಟ ಜೀವಾನಾನುಭವದಿಂದ ಹುಟ್ಟಿದ ನಿಷ್ಠುರವಾದ ದೃಷ್ಟಿಯನ್ನು ಇನ್ನೂ ಗಳಿಸಿಕೊಳ್ಳದ ನನ್ನಂಥ ಲೇಖಕರಿಗೆ ಎರಡನೆಯದೂ ವಿನಯಪೂರ್ವಕವಾಗಿ ಒಪ್ಪಿಕೊಳ್ಳಬಹುದಾದ ಪರ್ಯಾಯವಾಗಿಯೆ ಉಳಿದಿದೆ. ನನ್ನ ಪೀಳಿಗೆಯವರ ಹಿಂದೆ ಕಾರಂಥರಂಥ ಒಬ್ಬ ಲೇಖಕರಿದ್ದಾಗ  ಅವರನ್ನು ಅರಗಿಸಿಕೊಂಡು ಬೇರೆಯಾಗುವುದು ಅಷ್ಟೇನೂ ಸುಲಭದ ಸಂಗತಿಯಲ್ಲ. ನಾನು ಈಚೆಗೆ ಓದಿದ ಅನೈಕ್ಷಿಟಿ ಆಫ್ ಇನ್‌ಫ್ಲೂಯೆನ್ಸ್ ಎಂಬ ಗ್ರಂಥದಲ್ಲಿ ತಮ್ಮ ಹಿಂದಿನ ಪ್ರತಿಭಾವಂತರಿಂದ ಸೃಜನದ ಪ್ರೇರಣೆಗಳನ್ನು ಪಡೆಯಲು ಅವರನ್ನು ಅಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದೂ ಒಂದು ಬಗೆಯೆದು ಹೆರಾಲ್ಡ್ ಬ್ಲೂಮ್ ಹೇಳುತ್ತಾನೆ. ನಮಗೆ ಬೇಕಾದ್ದನ್ನು ಮಾತ್ರ ಆಯ್ದು, ಅದನ್ನು ಹಿಗ್ಗಿಸಿ, ಇನ್ನೊಂದು ರೂಪಕ್ಕದನ್ನು ತಂದು ಬಳಸುವ ಲೂಟಿ ಜಗತ್ತಿನ ಸಾಹಿತ್ಯದಲ್ಲೆಲ್ಲ ಉಂಟೆಂಬುದನ್ನು ಅವನು ತೋರಿಸುತ್ತಾನೆ. ಹೆಚ್ಚು ಕಡಿಮೆ ಅವರ ಕೃತಿಗಳು ಕಾಣಿಸುವ ಪರಿಸರವನ್ನು ಬಾಲ್ಯದಲ್ಲಿ ಪಡೆದಿದ್ದ ನನಗೆ ಕಾರಂತರಿಂದ ಕಲಿಯುವುದು ಬಹಳ ಇತ್ತು. ಈ ಕಲಿಕೆಯೂ ಅಪ್ರಜ್ಞಾಪೂರ್ವಕವಾದಾಗ ಮಾತ್ರ ಸೃಜನಕ್ರಿಯೆಗೆ ಸಹಾಯವಾಗುತ್ತದೆ. ಆದ್ದರಿಂದಲೇ ತಪ್ಪು ಗ್ರಹಿಕೆ, ಫೋಕಸಿನ ಬದಲಾವಣೆ, ಅವರಲ್ಲಿ ತೆಳುವಾದ್ದನ್ನು ತುಂಬಿ ಸ್ವಂತದ್ದಾಗಿ ಮಾಡಿಕೊಳ್ಳುವ ಹವಣಿಕೆ ಇವೆಲ್ಲವೂ ದೊಡ್ಡ ಲೇಖಕನೊಬ್ಬನಿಂದ ಬೇರೆಯಾಗಿ ನಿಲ್ಲುವುದರಲ್ಲಿ ಕಿರಿಯ ಲೇಖಕನಿಗೆ ಒದಗುವ ಉಪಾಯಗಳು ಎನ್ನಬಹುದು.

ಮೇಲಿನದಕ್ಕೆ ಪೂರಕವಾಗಿ ಇನ್ನಷ್ಟು ಹೇಳುವೆ. ನಾನು ಬೆಳೆದ ಪರಿಸರದಲ್ಲಿ ಕಾರಂತರು ನನ್ನ ಹಿರಿಯರಿಗೆ ಹೇಗೆ ಕಾಣುತ್ತಿರೆಂಬುದೂ, ಈ ಹಿರಿಯ ಲೋಕದೃಷ್ಟಿಯಿಂದ ಒಡೆದು ನಿಲ್ಲಲು ಯತ್ನಿಸುತ್ತಿದ್ದ ನನಗೆ ಮುಖ್ಯವಾಗಿರಬೇಕು. ನಮ್ಮ ಅಗ್ರಹಾರದಲ್ಲಿ ಕಥೆ ಪುಸ್ತಕಗಳನ್ನು ಓದುತ್ತಿದ್ದ ಮಠದ ಶಾನುಭೋಗರೊಬ್ಬರು ಇದ್ದರು. ಮೊದಲಿಗೆ ಗಳಗನಾಥ ವೆಂಕಟಾಚಾರ್ಯ ಓದುತ್ತಿದ್ದ ನನ್ನ ಕೈಗೆ ಕಾರಂತರ ಪುಸ್ತಕವನ್ನು ಕೊಡುವಾಗ ಈ ಹಿರಿಯ ರಸಿಕರು ಮುಗುಳ್ನಗುತ್ತ ಹೇಳಿದ್ದು ನನಗಿನ್ನೂ ನೆನಪಿದೆ. ಅವರು ಹೇಳಿದ ಮಾತುಗಳೇ ಈಗಿಲ್ಲಿ ಬೇಡ. ಕಾರಂತರನ್ನು ಪ್ರತಿಭಾಶಾಲಿಯೆಂದು ಮೆಚ್ಚಿದ ಅವರು, ಆದರೆ ಮಾತ್ರ ಇವರೊಬ್ಬ ಹಿಂಡಗಲಿದ ಪುಂಡು ಆನೆ ಎಂಬಂತೆ ಮಾತಾಡಿದ್ದರು. ನೇಮನಿಷ್ಠೆಗಳಿಲ್ಲದ ಈ ಬ್ರಾಹ್ಮಣ ಲೇಖಕ ಅವರಿಗೆ ಅನನುಸರಣೀಯ ಎನ್ನಿಸಿದ್ದರು. ಅವರು ಕೊಟ್ಟ ಈ ಎಚ್ಚರಿಕೆ ನನ್ನಲ್ಲಿ ಅಪಾರ ಕುತೂಹಲ ಹುಟ್ಟಿಸಿದ್ದು ಮಾತ್ರವಲ್ಲ, ನನ್ನ ಆವರಣದಿಂದ ನಾನು ಬೇರೆಯಾಗುವಂತೆ ಕಾರಂತರು ನನಗೆ ಕಲಿಸುವುದನ್ನೂ ಸಾಧ್ಯ ಮಾಡಿತ್ತು.

* * *

ಹಿಂದೆ ನಾನು ಓದಿದ್ದ ‘ಮರಳಿ ಮಣ್ಣಿಗೆ’ಯನ್ನು ಮತ್ತೆ ನಾನು ಈಗ ಓದುವಾಗ ನಾಗವೇಣಿ ಕಾದಂಬರಿಯ ಕಲ್ಪನಾ ರಾಜ್ಯದಲ್ಲಿ ಶರಣು ಹೋಗುವ ಸಂದರ್ಭ ಕುತೂಹಲಕರವಾಗಿ ತೋರಿತು. ಅವಳು ಓದುತ್ತಿದ್ದ ಕಾದಂಬರಿಗಳು ಎಂಥವೋ! ಅಂತೂ ಅವು ಅವಳ ಸುಪ್ತ ಬಯಕೆಗಳನ್ನು ಕೆದರುತ್ತವೆ. ತಾನೀಗ ಗಂಡನಿಲ್ಲದೆ ಒಂಟಿಯಾಗಿ ಬದುಕುವ ಇಪ್ಪತ್ತೈದು ವಯಸ್ಸಿನವಳು ಎಂಬುದರ ಅರಿವಾಗುತ್ತದೆ (೩.೨೫)

[1]. ಅವಳಿಗೆ ಪ್ರಾಯಶಃ ಓದಲು ಸಿಗುತ್ತಿದ್ದುದು ರಂಜಕ ಕಥೆಗಳೇ ಇರಬಹುದು. ಅಂಥ ಕಥೆಗಳ ನಂತರವೆ ನನ್ನ ವಾರಿಗೆಯವರೆಲ್ಲ ಕಾರಂತರನ್ನು ತಲ್ಪಿದ್ದು ಎನ್ನಬಹುದು. ಕಾರಂತರ ನಂತರ ಅನಕೃಗೆ ಕೊಂಚ ಕಾಲವಾದರೂ ಪರವಶರಾಗಿದ್ದು ಅನಂತರ ಅಲ್ಲಿಂದ ಬಿಡುಗಡೆಯನ್ನು ನಮ್ಮಲ್ಲಿ ಹಲವರು ಪಡೆದದ್ದು.

ನಾನು ನಿತ್ಯ ನೋಡುತ್ತಿದ್ದುದನ್ನು ಕಾರಂತರ ಕೃತಿಗಳು ಕಾಂತಿಯುಕ್ತವಾಗಿ ಮಾಡಿ ಇನ್ನೊಂದು ಬಗೆಯಲ್ಲಿ ನೋಡುವಂತೆ ಮಾಡಿದವು. ಅಗ್ರಹಾರದ ಪರಿಸರದಲ್ಲಿ ನನ್ನ ಬಾಲ್ಯವನ್ನು ನನ್ನ ಹದಿನಾರು ತುಂಬುವ ತನಕ ಕಳೆದ ನನಗಂತೂ ಮರಳಿ ಮಣ್ಣಿಗೆ ಬೆಟ್ಟದ ಜೀವ, ಚೋಮನ ದುಡಿಗಳು ಕ್ರಾಂತಿಕಾರಕ ಕೃತಿಗಳಾದವು. ಚೋಮನದುಡಿ, ಅಸ್ಪೃಶ್ಯತೆಯ ಬಗ್ಗೆ ಮಡಿವಂತ ಪರಿಸರದಲ್ಲಿ ಬೆಳೆದ ನನ್ನ ದೃಷ್ಟಿಯನ್ನೇ ಬದಲು ಮಾಡಿಬಿಟ್ಟಿತು. ಪ್ರಾಯಶಃ ಈ ದಿಸೆಯಲ್ಲಿ ಕನ್ನಡ ಕಾದಂಬರಿ ಲೋಕದಲ್ಲಿ ಇದೊಂದು ಅಪೂರ್ವಕೃತಿ.ಕಾರಂತರ ಬ್ರಾಹ್ಮಣ ಪಾತ್ರಗಳು ಆ ವರ್ಗದ ಎಲ್ಲರಿಗೂ ಸಾಮಾನ್ಯವಾದ ಲಕ್ಷಣಗಳನ್ನು ಪಡೆದವಾಗಿ ಪ್ರಾತಿನಿಧಿಕವಾದರೆ, ಚೋಮ ಮಾತ್ರ ಅಸಾಧಾರಣ ಭಾವ ತುಮುಲಗಳನ್ನು ಪಡೆದ, ನಾನು ಆಗ ಕಂಡ ಯಾವ ಅಸ್ಪೃಶ್ಯನಂತೆಯೂ ಇಲ್ಲದ ಅಸಾಮಾನ್ಯನಾದ್ದರಿಂದಲೇ ಪಂಚಮರೆಲ್ಲರಲ್ಲಿ ಸುಪ್ತವಾದದ್ದನ್ನು ಪ್ರತಿನಿಧಿಸಬಲ್ಲ ಪಾತ್ರವಾಗುತ್ತಾನೆ. ಕಾರಂತರು ಈ ಪಾತ್ರ ರಚನೆಯಲ್ಲಿ ಬಳಸುವ ಕೃತಿ ನಿರ್ಮಾಣದ ಬಗೆ ಅಂದರೆ ಪ್ರಕಟವಾಗಬೇಕಾದ ಸತ್ಯಕ್ಕಾಗಿ ವಾಸ್ತವದ ಮೂಲಾಂಶಗಳನ್ನು ಮಾತ್ರ ಹಿಡಿದು ಉತ್ಕಟಗೊಳಿಸುವ ಬಗೆ ನನ್ನ ಬರವಣಿಗೆಗೆ ಮುಖ್ಯ ಪ್ರೇರಣೆಕೊಟ್ಟ ಕೃತಿಯಾಗಿರಬಹುದು. ಜೀವನವನ್ನು ದಟ್ಟ ವಿವರಗಳಲ್ಲಿ ಹಿಡಿಯುವುದೊಂದು ಬಗೆಯಾದರೆ, ಚೋಮನ ದುಡಿಯದು ರೂಪಕ ಪ್ರತಿಭೆಯ ದಿಟ್ಟನೆಗೆತದ ಇನ್ನೊಂದು ಕ್ರಮ. ವಿಶೇಷವಾದ್ದರ ಮುಖಾಂತರ ಪ್ರಕಟವಾದ್ದನ್ನೂ ಸುಪ್ತವಾದ್ದನ್ನೂ ಒಟ್ಟಿಗೆ ಧ್ವನಿಸಬಹುದೆಂದೂ, ಒಂದರ ಮುಖಾಂತರ ಹಲವನ್ನು ಒಳಗೊಳ್ಳಲು ಇಂಥ ವಿಶೇಷ ಪಾತ್ರ ರಚನೆ ಅಗತ್ಯವೆಂಬುದನ್ನೂ ಚೋಮನ ದುಡಿಯಲ್ಲಿ ನಾನು ಕಂಡುಕೊಂಡೆ. ಚೋಮ, ನಾವು ಕಂಡಿರಬಹುದಾದ ಯಾವ ಒಬ್ಬ ಅಸ್ಪೃಶ್ಯನಲ್ಲದಿದ್ದರೂ, ಎಲ್ಲ ಕಾಳದ ಎಲ್ಲ ದೇಶದ ದಲಿತನ ನೋವನ್ನು ಪ್ರಕಟಿಸಬಲ್ಲವನಾಗುತ್ತಾನೆ ಯಾಕೆಂದರೆ ಅವನು ವಿಶೇಷ ವ್ಯಕ್ತಿಯಾದ್ದರಿಂದ. ಸಂಸ್ಕಾರದ ಪ್ರಾಣೇಶಾಚಾರ್ಯ, ಪ್ರಕೃತಿಯ ಸಂಕಪ್ಪಯ್ಯ ಮೌನಿಯ ಕುಪ್ಪಣ್ಣ ಭಟ್ಟರಂಥವರ ಸೃಷ್ಟಿಯಲ್ಲಿ ಇಂಥ ಒಂದು ಉದ್ದೇಶ ಎಷ್ಟು ಯಶಸ್ವಿಯಾಗಿದೆಯೋ ತಿಳಿಯದು ಕೆಲಸ ಮಾಡಿದೆಯೆಂದು ನಾನು ತಿಳಿದಿದ್ದೇನೆ. ಇಂಥಲ್ಲಿ ಕಣ್ಣಿಗೆ ಕಾಣುವ ಪರಿಚಿತ ವಾಸ್ತವನ್ನು ಭೇದಿಸಿ ಅದರ ಒಳತಿರುಳನ್ನು ತಿಳಿಯಲೆಂದು ಕಲ್ಪನೆ ವಾಸ್ತವದ ಜೊತೆ ಸ್ವಾತಂತ್ರ್ಯದಿಂದ ವರ್ತಿಸುತ್ತದೆ.  ಚೋಮನ ಕೈಯಲ್ಲಿ ಕಾರಂತರು ಪಿಟೀಲನ್ನು ಕೊಡಲಾರರು ಅಷ್ಟರಮಟ್ಟಿಗೆ ವಾಸ್ತವವನ್ನು ಅವರು ಮೀರಲಾರರು. ಆದರೆ ಮುಖ ಕಾಂತಿಯನ್ನು ಹಿಡಿಯಲೆಂದು ರೇಖಾ ಚಿತ್ರಕಾರ ಮುಖವನ್ನು ಕೊಂಚ ಸೊಟ್ಟಗೋ ಚೂಪಾಗಿಯೊ ಮಾಡಿಯಾನು. ವಾಲೇಸ್ ಸ್ಟೀವನ್ನಿನ ಪದ್ಯ ಒಂದರಲ್ಲಿ ಆಗುವಂತೆ ಅಡ್ಡಾದಿಡ್ಡಿಯಾಗಿ ಬೆಳೆದ ಕಾನನದ ನಡುವಿರುವ ಬೆಟ್ಟದ ಮೇಲೊಂದು ಜಾರನ್ನು ಇಟ್ಟದ್ದೇ, ಆ ಜಾರಿನ ಸುತ್ತ ಬೆಟ್ಟವೂ, ಬೆಟ್ಟದ ಸುತ್ತ ಕಾಡು ಪೊದೆಗಳೂ ರೂಪ ಧಾರಣೆ ಮಾಡುತ್ತವೆ. ಆದರೆ ಜಾರ್ ಕೃತಕ. ಪೊದೆಗಳಿಗೆ ರೂಪ ಕೊಟ್ಟ ಅದು ಕುರುಚಲು ಪೊದೆಯಂತೆ ಹಕ್ಕಿಗಳನ್ನು ಹುದುಗಿಸಿಟ್ಟುಕೊಂಡಿಲ್ಲ.

ವಾಸ್ತಕ್ಕೆ ತನ್ನ ಸ್ವಧರ್ಮದಿಂದಲೇ ಗಂಟುಬಿದ್ದ ಕಾದಂಬರಿ ಪ್ರಕಾರ ಒಂದು ದೃಷ್ಟಿಯಿಂದ ಪತ್ರಿಕಾ ವ್ಯವಸಾಯ ಮತ್ತು ಕಾವ್ಯಗಳಿಗೆ ಹುಟ್ಟಿದ ಹಡಬೆ; ಆದರೂ ಅದು ಅಡ್ಡಾದಿಡ್ಡಿ ಬೆಳೆದ ಪೊದೆಗಳ ನಡುವೆ ಎಲ್ಲಿಡಬೇಕೊ ಅಲ್ಲೊಂದು ಜಾರನ್ನು ಇಟ್ಟು ನಮ್ಮ ಅರಿವನ್ನು ಬದಲಾಯಿಸುತ್ತದೆ. ಎಲ್ಲ ಅರಿವಿನಲ್ಲೂ ಕಂಡದ್ದರ ಆಚೆಗಿನ ನೆಗೆತವಿದ್ದೇ ಇದೆ. ಜೀವನದಂತೆಯೇ ಇದೆ ಎನ್ನಿಸುವ, ಎಲ್ಲೆಂದರಲ್ಲಿ ಬೆಳೆಯುತ್ತ ಹೋದ ಸಹಜ ವ್ಯಾಪಾರವೆನ್ನಿಸುವ ‘ಮರಳಿ ಮಣ್ಣಿಗೆ’ಯಲ್ಲೂ ಡಿಸೈನ್ ಇದೆ. ಮತ್ತೆ ಮತ್ತೆ ಯಾಕೆ ಮದುವೆಗಳ ವರ್ಣನೆ ಬರಬೇಕು ಎಂದು ಡಿ.ಎಲ್.ಎನ್. ಪ್ರಶ್ನೆಗೆ ಉತ್ತರ ಕೊಡುವಾಗ ಗಿರಡ್ಡಿ ಗೋವಿಂದರಾಜು ಇದನ್ನು ಸಮರ್ಥವಾಗಿ ತೋರಿಸಿದ್ದಾರೆ. ಇಂಥ ಡಿಸೈನನ್ನು ಕಾಣುವಂತೆ ನಮ್ಮನ್ನು ಪ್ರೇರೇಪಿಸುವ ಶಕ್ತಿಯನ್ನು ‘ಮರಳಿ ಮಣ್ಣಿಗೆ’ ಪಡೆಯುವುದು ಕೂಡ ಕಾರಂತರು ತಾವು ಮೆಚ್ಚುವ ಮುದುಕಿಯರಿಗೆ ಇಚ್ಛಾಮರಣದಂಥ ಅಪೂರ್ವ ಸಾವನ್ನು ಕೊಡುವ ಧೈರ್ಯ ಮಾಡಿದಾಗ; ರಾಮ ಮತ್ತು ನಾಗವೇಣಿಯವರ ಕೈಯಲ್ಲಿ ಪಿಟೀಲು ಕೊಟ್ಟು ಕಡಲೆದುರು ಅವರನ್ನು ಕೂರಿಸಿದಾಗ; ಅಥವಾ ಬಣ್ಣದ ಚಾಪೆಯ ಮೇಲೆ ಕೂತು ಮರುಮದುವೆಯಾದ ಐತಾಳ ಬೆಲ್ವಪತ್ರೆಯ ನಸ್ಯದ ಡಬ್ಬಿಯ ಬದಲು ಬೆಳ್ಳಿಕಟ್ಟಿದ ಬುರುಡೆಯನ್ನು ಮಯ್ಯನಿಗೆ ಒಡ್ಡಿ ಅವನಿಗೆ ಆ ಘಟನೆಯೊಂದು ಕನಸಿನಲ್ಲೂ ಕಾಡುವ ಗೀಳಾಗುವಂತೆ ಮಾಡಿದಾಗ; ಅಥವಾ ಸರಸೋತಿ ಕಾಡಿನಿಂದ ಉಪ್ಪಿನ ಕಾಯಿಗೆ ಮಾವಿನ ಮಿಡಿ ತರುವಾಗ.

ಉಬ್ಬರವಿಲ್ಲದ ಜೀವನದ ನಿರಂತರ ದೈನಿಕದ ಚಿತ್ರ ಕೂಡ ಇಂಥ ಉತ್ಕಟ ಕ್ಷಣಗಳನ್ನು ಬೇಡುತ್ತದೆ. ನಾವು ಓದಲೆಂದು ಪುಸ್ತಕವನ್ನೆತ್ತಿಕೊಳ್ಳುವುದೇ ಇಲ್ಲಿ, ಏನೋ ಆಗುತ್ತದೆಯೆಂಬ ನಿರೀಕ್ಷೆಯಲ್ಲಿ ಅಲ್ಲವೆ? ಅಂದರೆ, ಓದುವುದ ಕೂಡ ಬದುಕಲು ಹೊರಟಂತೆಯೇ.

ಕೃತಿಗೆ ತತ್ವವನ್ನು ಹುಟ್ಟು ಹಾಕುವ ಸಾಮರ್ಥ್ಯವಾಗಲಿ, ನಮ್ಮ ಅರಿವನ್ನು ಹಿಗ್ಗಿಸುವ ಕಾಂತಿಯಾಗಲಿ ಬರುವುದು, ‘ಹಳೇ ಒಡಂಬಡಿಕೆ’, ‘ಮಹಾಭಾರತ’ಗಳಲ್ಲಿಯಂತೆ, ರೂಪಕ ಪ್ರತಿಭೆ ಕಥನ ಕ್ರಿಯೆಯನ್ನೇ ಚಿಂತನಾಕ್ರಿಯೆಯನ್ನಾಗಿಯೂ ಮಾಡಬಲ್ಲ ಪುನರ್‌ಸೃಷ್ಟಿಯ ಬೀಸಿನಲ್ಲಿ ಕೆಲಸ ಮಾಡಿದಾಗ. ಇಂಥದಕ್ಕೆ ಕಾರಂತರು ಹಿಂಜರಿಯುತ್ತಲೇ ಮುಂದುವರಿಯುತ್ತಾರೆಂಬುದು ಅವರ ಕೃತಿಗಳಲ್ಲಿರುವ ಆಕರ್ಷಕ ಅಂಶ. ಅವರ ಈ ಹಿಂಜರಿತದ ಬಗ್ಗೆ ನಾನೀಗಾಗಲೇ ‘ಕಾರಂತರ ಅಥೆಂಟಿಕ್ ಪ್ರಪಂಚ’ವೆಂಬ ನನ್ನ ಲೇಖನವೊಂದರಲ್ಲಿ ಬರೆದಿದ್ದೇನೆ. ಸ್ವತಃ ಒಬ್ಬ ಕೃತಿಕಾರನಾಗಿ ಬರೆದ ಲೇಖನ ಅದೆಂದು ನಾನು ಆಗ ಪ್ರತ್ಯಕ್ಷವಾಗಿ ಒಪ್ಪಿಕೊಂಡು ಹೊರಟಿದ್ದರೆ ನನ್ನ ನಿಲುವು ಇನ್ನಷ್ಟು ಸ್ಪಷ್ಟವಾಗುತ್ತಿತ್ತು. ನಾನು ಎಲ್ಲಿ ಬೇರೆಯಾಗಲು ಹವಣಿಸುತ್ತಿದ್ದೇನೆಂಬ ವಿಚಾರ ಆ ಲೇಖನದಲ್ಲಿ ಪರೋಕ್ಷವಾಗಿ ಸೇರಿಕೊಂಡದ್ದು ಕಾಣದೆ ಅದೊಂದು ತೀರಾ ವಸ್ತುನಿಷ್ಠ ವಿಶ್ಲೇಷಣೆಯೆಂಬ ಭ್ರಮೆಯನ್ನುಂಟು ಮಾಡಬಹುದು. ಆದರೆ ಈಗ ಬರೆಯುತ್ತಿರುವುದರಲ್ಲಿ ನಾನು ಸಂಕೋಚವಿಲ್ಲದೆ ನನ್ನನ್ನೂ ಎದುರಿಗಿಟ್ಟು ಕೊಂಡಿರುವುದರಿಂದ ಕಾರಂತರನ್ನು ನಾನು ನೋಡುವ ದೃಷ್ಟೀಕೋನದಲ್ಲಿ ವಸ್ತುನಿಷ್ಠತೆಯ ದರ್ಪವಿರುವುದಿಲ್ಲೆಂದು ಭಾವಿಸುವೆ.

ಒಟ್ಟಿನಲ್ಲಿ ಎಲ್ಲ ಕಲಾಕೃತಿಯ ಹಿಂದಿರುವ ಪ್ರಶ್ನೆ ನೆಗೆತದ್ದೇ. ಆದರೆ ‘ಕಾಣ್ಕೆ ಕಣ್ಕಟ್ಟುಗಳ ನಡುವೆ ಗೆರೆ  ಬಲುತೆಳುವು’ ಆದ್ದರಿಂದ ಇದು ಪರಿಚಿತದ ಅಂಚಿನಲ್ಲಿ ನಿಂತು ನಿಜವಾಗಿ ನೆಗೆದದ್ದೋ ಅಥವಾ ನಿಂತಲ್ಲೇ ನಿಂತು ನೆಗೆದಾಡುತ್ತಿರುವ ಭ್ರಮೆಯೋ ಎಂಬುದು ಸಾಹಿತ್ಯ ವಿಮರ್ಶೆಯ ಅತ್ಯಂತ ಕ್ಲಿಷ್ಟ ಪ್ರಶ್ನೆಯಾಗಿರುತ್ತದೆ. ಗ್ರಹಿಸುವ ಮನಸ್ಸು ಎಷ್ಟನ್ನು ಕೂಡಿಸುತ್ತ ಅಹುದು, ಅಹುದು, ಎನ್ನಿಸುತ್ತ ಅಹುದೆ?’ ಎಂಬ ವಿಸ್ಮಯಕ್ಕೆ ಸದಾ ಸನ್ನಾಹ ಮಾಡುತ್ತ ಚಲಿಸುತ್ತಿದೆಯೇ ಎಂಬುದಕ್ಕೆ ಸಂಬಂಧಿಸಿದ್ದು ಇದು. ದುಡಿಮೆಯ ಜೀವನದ ನಿಷ್ಠುರ ಅನಿವಾರ್ಯತೆಗಳ ಬಗ್ಗೆ, ಎಂಥ ಇಕ್ಕಟ್ಟಿನಲ್ಲೂ ಅರಳುವ ಬಾಳಿನ ಹಂಬಲದ ಬಗ್ಗೆ, ಸ್ವಾತಂತ್ರ್ಯ ಸ್ವೈರಗಳ ನೈತಿಕ ಅಂತರದ ಬಗ್ಗೆ, ಮಾನವರ ಪರಸ್ಪರ ಸಂಬಂಧ ಹೇಗೋ, ಹಾಗೆಯೇ ಅವರು ನೆಚ್ಚಿದ ದೈವದ ಜೊತೆಗಿನ ಸಂಬಂಧದ ಬಗ್ಗೆ ಮರಳಿ ಮಣ್ಣಿಗೆ ಹೊಸೆಯುತ್ತ ಹೋಗುವ ಹೆಣಿಗೆಯನ್ನು ಕಾದಂಬರಿಯ ಯಾವ ಸಾಮಾನ್ಯ ವಾಕ್ಯದಲ್ಲಾದರೂ ಕಾಣಬಹುದು. ನೋಡಿ, ಇದೊಂದು ಸಾಮಾನ್ಯ ವಾಕ್ಯ: ‘ನವರಾತ್ರಿಯ ಹೊಸತು ಊಟಕ್ಕೆ ಪರರ ಮನೆಯ ಭತ್ತವನ್ನು ತಂದು, ಸುಲಿದು, ಹಾಲು ಪಾಯಸ ಮಾಡುವ ಗತಿ ಬರಲಿಲ್ಲ. ಈ ವಾಕ್ಯದಲ್ಲಿ ಕಾದಂಬರಿಯ ಪಾತ್ರಗಳು ಆರ್ಥಿಕ ಸ್ವಾವಲಂಬನೆಯ ವಿಷಯದಲ್ಲಿ, ಧಾರ್ಮಿಕ ಆಚರಣೆಯ ವಿಷಯದಲ್ಲಿಯಾವ  ಧೋರಣೆ ತಾಳಿದ್ದಾರೆಂಬುದು, ಋತುವಿನಿಂದ ಋತುವಿಗೆ ಪುನರಾವೃತ್ತವಾಗುವ ಕಾಲದಲ್ಲಿ ಅವರು ಹೇಗೆ ಬದುಕಿ ಹೊಂದಿಕೊಳ್ಳಲು ಅಪೇಕ್ಷಿಸುತಾರೆಂಬುದು ಸದ್ದಿಲ್ಲದಂತೆ ಧ್ವನಿತವಾಗುತ್ತದೆ. ಹಲವರು ಈಗಾಗಲೇ ಗಮನಿಸಿರುವಂತೆ ಕಷ್ಟದ ದುಡಿಮೆಯ ಅನಿವಾರ್ಯತೆಯೇ ಕಾದಂಬರಿಯ ಪಾತ್ರಗಳ ಉಲ್ಲಾಸ ದುಃಖಗಳಿಗೆ, ಒಡಮೂಡುವ ಪರಸ್ಪರ ಸಂಬಂಧಗಳಿಗೆ ಶೃತಿ ಹಿಡಿಯುತ್ತದೆ. ನಾಗವೇಣಿ ಆಗಿಹೋದ ಕಾಲಗಳ ಗಣನೆ ಮಾಡುವುದನ್ನು ನೋಡಿ;

“ಕಾರು  ತಿಂಗಳಿಗೆ ಬತ್ತದ ಬೇಸಾಯ, ಮುಂದೆ ಕೋಡಿ ತಿಂಗಳಲ್ಲಿ ಹುರುಳಿ ಬೇಸಾಯ, ಮಕರ ಸಂಕ್ರಾಂತಿಗೆ ಸೌತೆಯ ಹಿತ್ತಲು ಇವನ್ನೆಲ್ಲ ಎಣಿಸಿದಳು. ನಡು ನಡುವೆ ಕೊರಳಿಗೆ ತಾಳಿಬಿದು ಇಷ್ಟು ಕಾಲವಾಯಿತು ಅವರ ಮುಖ ಕಾಣದೆ, ಇಷ್ಟು ವರ್ಷವಾಯಿತು ಪುಟ್ಟು ಕೈ ಬಿಟ್ಟು ಇಷ್ಟು ದಿನವಾಯಿತು ಎನ್ನುತ್ತಾಳೆ ಅವಳ ಪಾಲಿಗೆ ಸರಸೋತ್ತಿಯೇ ಈಗೊಂದು ಕೂಸಿನಂತಾಗಿದ್ದಾಳೆ.” (೨೫೦)

ದುಡಿಮೆಗೆ ಕರೆಯುವ ನಿರಂತರವಾದ ಋತುಗಳು, ಜೀವನ ತರುವ ದುಃಖ, ವಿಫಲವಾದ ಆಸೆ, ಇಂಥಲ್ಲೂ ಮೂಡುವ ಸಾಫಲ್ಯ, ಈ ಎಲ್ಲವೂ ಮೇಲಿನ ಮಾತುಗಳಲ್ಲಿ ಸಾಕಾರವಾಗಿವೆ.

ಬದುಕೆಂದರೆ ಅದು ಎಷ್ಟು ಇಕ್ಕಟ್ಟಿನದು, ಎಷ್ಟು ಸ್ವಾತಂತ್ರ್ಯ ಪಡೆದದ್ದು ತತ್ವಜ್ಞಾನಿಗಳ ಸಮಸ್ಯೆಯಾದ ಈ ನೆಸಿಟ್ ಅಂಡ್ ಫ್ರೀಡಂ ಮರಳಿ ಮಣ್ಣಿಗೆಯಲ್ಲಿ ಉದ್ದಕ್ಕೂ ವಾಕ್ಯ ವಾಕ್ಯದಲ್ಲೂ ಹೆಣೆಯುತ್ತ ಹೋಗುವ ಧ್ಯಾನವಾಗಿದೆ. ಋಣವಿಲ್ಲದೇ ಬದುಕಬೇಕೆಂಬ ನಿರಂತರ ಕಷ್ಟದ ದುಡಿಮೆಯಲ್ಲೇ ಸ್ವಾವಲಂಬನೆಯ ಹಠದ ಸ್ವಾತಂತ್ರ್ಯದ ಕಲ್ಪನೆಯಿದೆ. ಈ ಹಠವಿಲ್ಲದಿದ್ದಾಗ ಲಚ್ಚನ ಸ್ವಾತಂತ್ರ್ಯದ ಅಪೇಕ್ಷೆ ಸ್ವೈರವಾಗಿ ಬಿಡುತ್ತದೆ. ಬೇಸಾಯ ಜೀವನದ ಕ್ರೂರ ವಾಸ್ತವಗಳನ್ನು ಒಪ್ಪಿಕೊಳ್ಳದ ಹಳ್ಳಿಜೀವನವೆಂದರೆ ಬೇಸರ ಪಡುವ ಲಚ್ಚ ಲಾಲಸ ಪ್ರವೃತ್ತಿಯವನಾಗುತ್ತಾನೆ. ಅವನನ್ನು ಹಾಗಾಗುವಂತೆ ಮಾಡುವುದು ಕಾದಂಬರಿಯ ಉಳಿದ ಪಾತ್ರಗಳಲ್ಲಿ ಮುಖ್ಯವಾಗಿ ತಂದೆ ರಾಮ ಐತಾಳನಲ್ಲೂ ಇರುವ ಕಷ್ಟದ ದುಡಿಮೆಯಿಂದ ಬಿಡುಗಡೆ ಪಡೆಯುವ ಹಂಬಲವೆಂಬುದೂ ಕಾದಂಬರಿಯ ನೈತಿಕ ಪ್ರಜ್ಞೆಗೊಂದು ಸೂಕ್ಷ್ಮನ್ನು ತರುತ್ತದೆ. ಲಚ್ಚನಿಗೆ ಯಾಕೆ ಇಂಗ್ಲಿಷ್ ಕಲಿಸಬೇಕೆಂಬ ಬಗ್ಗೆ ಐತಾಳ ಸರಸೋತಿಗೆ ಹೇಳುವುದನ್ನು ಕೇಳಿ:

ಇನ್ನಿನ್ನು ಯಕ್ಷಗಾನ ತಾಳಮದ್ದಲೆಯಿಂದ ಮಕ್ಕಳ ಆಯುಷ್ಯ ಸಾಗಲಿಕ್ಕಿಲ್ಲ. ನೋಡು ನಾನು ವೈದಿಕನಾಗಿ ನನಗೆ ಇಗುವ ಮಾನ ಎಷ್ಟೆಂದು ನಿನಗೆ ಗೊತ್ತಿದೆ. ಹೋಟೆಲಿನಲ್ಲಿ ನಾಲ್ಕು ಕಾಸು ಸಂಪಾದನೆಗೆ ದಾರಿಯಾದುದರಿಂದ ಶೀನಮಯ್ಯನಿಗೆ ಬರುವ ಮಾನ ಎಷ್ಟೆಂಬುದೂ ನಿನಗೆ ಗೊತ್ತಿದೆ.(೧೪೭)

ಐತಾಳರ ಎರಡನೇ ಸಂಬಂದದ ಮಾವ ಹೇಳುವುದೂ ಅದೇ: ಇನ್ನೇನು ಈಗಿನ ದಿನಗಳಲ್ಲಿ ಇಂಗ್ಲಿಷ್ ನಾಲ್ಕು ಅಕ್ಷರವಾದರೂ ಬರುವವರಿಗೆ ಭರಾಮು, ಈ ಅಷ್ಟೋತ್ತರ, ಅಧ್ಯಯನ ಕಲಿತವರಿಗೆ ಬರಲಾರದು. ಐತಾಳರಿಗೂ ಲಚ್ಚತನ್ನಂತೆ ವೈದಿಕನಾಗುವುದು ಬೇಡ, ಲೌಕಿಕನಾಗೇಕು ಎಂಬ ಹಂಬಲದಲ್ಲೆ ಬದಲಾಗುತ್ತಿರುವ ಕಾಲದ ಪ್ರಭಾವವಿದೆ. ಲೌಕಿಕ ಶೀನಮಯ್ಯ ಮಯ್ಯರಾದದ್ದನ್ನು ಐತಾಳ ನೋಡಿದ್ದಾನೆ. ಊರಿನ ಗುರಿಕಾರರಿಂದ ಮದುವೆ ಮನೆಯಲ್ಲಿ ಅವಮಾನಿತನಾದ ಐತಾಳ ಅಂತು ಊರಿನ ಗುರಿಕಾರರ ಕೈಯಲ್ಲಿ ಇದೊಂದು ಶ್ರಾದ್ಧದ ಬ್ರಾಹ್ಮಣ ಅನಿಸಿಕೊಳ್ಳದಿದ್ದರೆ ಸಾಕು’ ಎಂದು ಆಸೆ ಪಡುತ್ತಾನೆ ನಿಷ್ಠುರ ದುಡಿಮೆಯಿಂದ ನಿವೃತ್ತನಾಗುವ ಅಪೇಕ್ಷೆ ಲಚ್ಚನನ್ನು ಹಿಂಡಗಲಿದ ಪುಂಡನನ್ನಾಗಿ ಮಾಡುತ್ತದೆ. ಸ್ವತಃ ಕಾರಂತರೇ ಲೇಖಕರಾದದ್ದೂ ಹಳ್ಳಿಯ ವಿರಾಮವಿಲ್ಲದ ದುಡಿಮೆಯ ಬದುಕಿನ ಅನಿವಾರ‍್ಯತೆಗಳಿಂದ ಮುಕ್ತರಾದದ್ದರಿಂದಲೂ  ಇರಬಹುದು ಎಂಬುದನ್ನು ನೆನೆದಾಗ ಈ ದಿಕ್ಕಿನಲ್ಲಿ ಲೇಖಕರು ತೋರಿಸುವ ದ್ವಂದ್ವಗಳು ಅರ್ಥಪೂರ್ಣವಾಗುತ್ತವೆ. ಕನ್ನಡದ ಯಾವ ಲೇಖಕ, ತನ್ನ ವೈಚಾರಿಕತೆಯಲ್ಲಿ ಬದಲಾವಣೆ ಮತ್ತು ಪ್ರಗತಿಯ ಬೆಂಬಲಿಗನಾಗಿದ್ದರೂ ಸಹ, ತನ್ನ ಕಲಾಕೃತಿಯಲ್ಲಿ ಬದಲಾವಣೆ ಬಗ್ಗೆ ನಿಸದಿಗ್ದ ಧೋರಣೆ ತಾಳಿದ್ದಾನೆ?

* * *

ಅಜ್ಜನ ಕಾಲದಲ್ಲಿ ವೈದಿಕರಾಗಿದ್ದವರ ಮನೆಯಲ್ಲಿ ಹುಟ್ಟಿ, ಕ್ರಾಪು ಜುಟ್ಟುಗಳ ಸಂದಿಗ್ಧದಲ್ಲಿದ್ದ ತಂದೆಯನ್ನು ಪಡೆದು, ಆಧುನಿಕ ವಿದ್ಯಾಭ್ಯಾಸಕ್ಕೆ ಹಾತೊರೆದ ನನ್ನಂಥವರಿಗ ಲಚ್ಚನ ಪಾತ್ರ ನಮ್ಮಂಥವರೆಲ್ಲರ ಆಮಿಷಗಳನ್ನೂ, ಹಿಂಡಗಲುವ ದಿಗಿಲುಗಳನ್ನೂ, ಹಳ್ಳಿ ಜೀವನ ಕ್ರಮದ ಬಗೆಗಿನ ಬೇಸರ ಮತ್ತು ಮಮತೆಗಳನ್ನೂ ಧ್ವನಿಸಬಲ್ಲುದಾಗಿತ್ತು. ಹೀಗೆ ಅವನೊಬ್ಬ ಆರ್ಕಿಟೈಪ್ ಆಗಿಬಿಟ್ಟಿದ್ದಾನೆ ಕನ್ನಡದಲ್ಲಿ ಅವನ ಅವನತಿಯ ಹಂತಗಳೂ ಸಹ ಕುತೂಹಲಕರವಾಗಿವೆ: ಶುರುವಿನಲ್ಲಿ ಪೇಟೆಯ ಕಾಫಿ ತಿಂಡಿಯ ಚಟ, ಮತ್ತೆ ಇಸ್ಪೀಟಿನ ಚಟ, ಆಮೇಲೆ ಸಾಲ, ಹಿರಿಯರಂತೆ ಬೇಗೆ ಮದುವೆಯಾಗದ್ದರಿಂದ ಹುಟ್ಟುವ ಹೆಣ್ಣಿನ ಚಟ, ಆಮೇಲೆ ಅಧಿಕಾರದಲ್ಲಿ ಲಂಚಕೋರತನ, ಹಿರಿಯರ ಬಗ್ಗೆ ಅನಾದರ, ಹೊಸ ಹಳೆಯದರ ಅಪಕ್ವ ಬೆರಕೆಯಿಂದ ಹುಟ್ಟುವ ಭಾವ ಜೀವನದ ಅಸ್ಥಿರತೆ, ಇವೆಲ್ಲ ಕೂಡಿ ಅವನು ತಲ್ಪುವ ಸ್ವಾಭಿಮಾನವಿಲ್ಲದ ಪರಾವಲಂಬನೆ – ಹೀಗೆ ಇಂಗ್ಲಿಷ್ ವಿದ್ಯಾಭ್ಯಾಸದಿಂದಾಗಿ ಪ್ರಾರಂಭವಾದ್ದು ಹೇಗೆ ಕೊನೆಯಾಗುತ್ತದೆಂಬುದು, ಅವನ ಮಗ ರಾಮನಲ್ಲಿ ಹೀಗಾಗದೇ ಇರುವುದು ನಿಯಮಕ್ಕೊಂದು ವಿನಾಯಿತಿಯಂತೆ ಮಾತ್ರ ತೋರುತ್ತದೆಂಬುದು ಅತ್ಯಂತ ಗಮನಾರ್ಹ. ಬದಲಾವಣೆಯನ್ನು ಬೆಂಬಲಿಸುವ ಕಾರಂತರಿಂದ ಬದಲಾವಣೆ ಬಗ್ಗೆ ಈ ಒಳನೋಟ ಹುಟ್ಟಿದೆಯೆಂಬುದು ನಾನೀಗ ನನ್ನ ಉದ್ದೇಶಕ್ಕಾಗಿ ಕಾಣಿಸುತ್ತಿರುವುದಕ್ಕಿಂತಲೂ ಹೆಚ್ಚಿನ ಅಭ್ಯಾಸಕ್ಕೆ ಅರ್ಹವಾದ ಸಂಗತಿ. ಮುಂದೆ ಸ್ವಾತಂತ್ರ್ಯ ಚಳವಳಿಯಲ್ಲಿ ಜೈಲಿಗೆ ಹೋಗಿ ಬಂದ, ತಂದೆಯಂತೆಯೇ ಇಂಗ್ಲಿಷ್ ಕಲಿತ, ಅಜ್ಜನ ವೃತ್ತಿಯಿಂದ ದೂರನಾದ ರಾಮ ಮಾತ್ರ ತನ್ನ ಪರಿಸರದಿಂದ ಭಿನ್ನವಾಗಿದ್ದೂ ತನ್ನ ಜನರನ್ನು ಅಭಿಮಾನ ಗೌರವಗಳಿಂದಲೂ ತುಸು ಹಾಸ್ಯದಿಂದಲೂ ಕಾಣಬಲ್ಲವನಾಗುತ್ತಾನೆ. ಆದರೆ ಅವನ ಸಾಧನೆ ಪ್ರಾತಿನಿಧಿಕವಲ್ಲ; ವೈಯಕ್ತಿಕ. ಜೊತೆಗೇ ರಾಮನ ಕಥೆ, ಎಂಜಿಕೆ ಹೇಳುವಂತೆ, ‘……………………..’ ಎಂದೂ ಅನ್ನಿಸುತ್ತದೆ.

ಎಲ್ಲ ಮೌಲ್ಯಗಳನ್ನೂ ದುಡಿಮೆಯ ನಿಷ್ಠುರ ಅನಿವಾರ್ಯತೆಯಲ್ಲಿ ಹುಟ್ಟುವುದೆಂದು ಕಾಣುವ ಕಾರಂತರು ವಿರಾಮದ ಇತ್ಯಾತ್ಮಕ ಅಂಶವಾಗಿ ರಾಮ ಮತ್ತು ನಾಗವೇಣಿಯರನ್ನು ಕಡಲೆದುರು ಪಿಟೀಲು ಕೊಟ್ಟು ಕೂರಿಸುತ್ತಾರೆ. ಬೇಸಾಯದ ದುಡಿಮೆ ವಿರಾಮವಿಲ್ಲದ್ದು; ಮನಸ್ಸಿನ ಮುಕ್ತ ವಿಲಾಸಕ್ಕೆ ಎಡೆ ಕೊಡದೇ ಇರುವಂಥದು. ಆದರೆ ಅದು ಋತುಗಳ ಜೊತೆ, ನೈಮಿತ್ತಿಕ ಆಚರಣೆಗಳ ಜೊತೆ, ಇಹಪರಗಳ ಜೊತೆ, ಮನುಷ್ಯರನ್ನು ಇತರ ಮನುಷ್ಯ ಜೊತೆ ಬೆಸೆಯಬಲ್ಲ ಶಕ್ತಯುಳ್ಳದ್ದು. ಈ ಕ್ರಿಯೆಗಳೆಲ್ಲ ಅಪ್ರಜ್ಞಾಪೂರ್ವಕವಾದದ್ದು. ಕಾರಂತರು ದುಡಿಮೆಯ ದೃಶ್ಯಗಳನ್ನು ಮೃದುವಾದ ಹಾಸ್ಯದಲ್ಲಿ ಚಿತ್ರಿಸಬಲ್ಲರು. ನದಿಯಿಂದ ಕೆಸರು ತೆಗೆದು ಗದ್ದೆಗೆ ತುಂಬಿಸುವಾಗ ಐತಾಳರು “ಒಂದೇ ಒಂದು ಕೋವಣಾಲಂಕೃತರಾಗಿ, ಮೈತುಂಬ ಕೆಸರು ಬಳೆದವರಾಗಿ, ದೋಣಿಯ ಹಿಂಗೋಟಿನ ಮೇಲೆ ಸ್ಥಾಪಿತರಾಗಿದ್ದರು.” ಮಗುವಿನ ಜನನದ ವಾರ್ತೆ ಹೇಳಲು ಬಂದಾಗ ಅವರಿಗಿಂತ ಹೆಚ್ಚು ಶ್ರೀಮಂತನಾದ ಭಾವ ಕಂಡ ನೋಟ ಇದು. ದುಡಿದು ಸುಸ್ತಾದ ಐತಾಳರು ಊಟದಿಂದೇಳುವಾಗ “ಭಾವನು ಸಂಜೆ ನೋಡಿದ ಕೆಸರು ತುಂಬಿದ ದೋಣಿಯಂತೆ ಜಡವಾಗಿ ಬಿಟ್ಟಿದ್ದರು.” (೯೧-೯೨). ಮಾವಿನ ಮಿಡಿಗೆಂದು ದೂರ ನಡೆದು ಹೋಗಿ ದಣಿದು ಬಂದ ಸರಸೋತಿ ಸ್ನಾನವಾದ ಮೇಲೆ “…. ಅವಸರ ಅವಸರದಿಂದ ನಿಯಮದಂತೆ ನೂರೆಂಟು ‘ಓಂ ನಮಃ ಶಿವಾಯ’ಗಳನ್ನು ಮುಗಿಸಿಕೊಂಡು ಉದ್ದುಹಾಕಿ ಮಾಡಿದ ಕೆಸುವೆಸೊಪ್ಪಿನ ಚಟ್ನಿಯನ್ನು ಧ್ವಂಸ ಮಾಡತೊಡಗಿದಳು” (೪೯). ಇಂಥ ಜೀವನದ ಕಷ್ಟವನ್ನೂ ಸುಖವನ್ನೂ ಹೇಳಬಲ್ಲ ಕಾರಂತರಿಗೆ ಲಚ್ಚನ ಆಲಸ್ಯ ಹಲವು ಕೇಡುಗಳ ಮೂಲವಾಗಿ ಕಾಣಿಸುತ್ತದೆ; ಇದು ಬೇಸಾಯಗಾರನ ನೈತಿಕ ಪ್ರಜ್ಞೆ. ಓದು ಸಂಗೀತಗಳಿಗೆ ತೆರವಾದಾಗ ಮಾತ್ರ, ರಾಮ ನಾಗವೇಣಿಯಲ್ಲಿ ಆದಂತೆ, ವಿರಾಮದ ಆಸೆ ಮೌಲಿಕವಾಗುತ್ತದೆ. ಆದರೆ ಸಂಗೀತದಲ್ಲಿನ ರಾಮನ ತತ್ಪರತೆ ದುಡಿಮೆಯ ಬಚ್ಚಿಗೆ ಮರುಳಾಗಿ ತೋರುತ್ತದೆ (೩೬೭). ರಾಮನ ಕಥೆ ಕಾರಂತರ ಮನಸ್ಸಿನಿಂದ ಬಂದದ್ದು; ಬದಲಾವಣೆಯಲ್ಲಿ ಒಳ್ಳೆಯದು ಸಾಧ್ಯವೆಂಬುದನ್ನು ಚಿತ್ರಿಸಲು ಇಚ್ಛಾಪೂರ್ವಕ ಯತ್ನಿಸಿದ್ದು. ಆದರೆ ರಾಮನ ಸಂಗೀತ ತತ್ಪರತೆಯಲ್ಲಿನ ಮೌಲಿಕತೆ ‘ಕೋವಣಾಲಂಕೃತ’ ಐತಾಳನದರಂತೆ ನಮ್ಮ ಮನಸ್ಸಿನಲ್ಲಿ ಊರುವುದಿಲ್ಲ. ಇದಕ್ಕೇನು ಕಾರಣವಿರಬಹುದು ನೋಡಬೇಕು.

* * *

ತನ್ನ ಸಹಜ ವೈಯಕ್ತಿಕ ಮೂರ್ತ ಅಸ್ತಿತ್ವನನ್ನು ಉಳಿಸಿಕೊಂಡೇ ತತ್ತ್ವವನ್ನೂ ಹುಟ್ಟುಹಾಕಬಲ್ಲ ಪಾತ್ರರಚನೆಗಿಂತ ಹೆಚ್ಚಾಗಿ ಕಾರಂತರ ಒಲವಿರುವುದು ಇನ್ನೂ ಮೊಳಕೆಯಂತಿರುವ ಪ್ರಜ್ಞೆಯನ್ನು ಪಡೆದ ಪಾತ್ರಗಳ ರಚನೆಯಲ್ಲಿ. ಐತಾಳ, ಸರಸೋತಿ, ಪಾರೋತಿ ಇಂಥವರು. ಈ ಪ್ರಜ್ಞೆ ಬದುಕಿನ ಪ್ರಯಾಸದಲ್ಲಿ ನೆನೆದು ಬೆಂದು ಹುಟ್ಟಿದ್ದು. ಬೇಸಾಯದಿಂದ ನಿಯಂತ್ರಿತವಾದ ಸಂಸ್ಕೃತಿಯಲ್ಲಿ (ಅಂದರೆ ಅತ್ಯಂತ ಕಟ್ಟುನಿಟ್ಟಾದ ಇಕ್ಕಟ್ಟಿನಲ್ಲಿ) ಏನೇನು ಎಷ್ಟೆಷ್ಟು ಅರಳೀತು ಎಂದು ನೋಡುವುದು ಬದುಕಿನಲ್ಲಿ ಯಾವುದಕ್ಕೆಷ್ಟು ಬೆಲೆ, ಸಫಲತೆಯೆಂದರೇನು ಎಂಬ ಪ್ರಶ್ನೆಗಳಿಗೆ ನಿಕಷಪ್ರಾಯವಾಗುತ್ತದೆ.

ನಿರುಪಯೋಗವಾದ್ದಕ್ಕೆ ಎಡೆಯೇ ಇಲ್ಲದ, ಸಂಯಮ ಮತ್ತು ಮಿತ ವ್ಯಯದ ಜೀವನಕ್ರಮ ಅನಿವಾರ್ಯವೆನ್ನಿಸುವ ಬೇಸಾಯಮೂಲ ಸಂಸ್ಕೃತಿಯಲ್ಲಿ ಸೌಂದರ್ಯಕ್ಕೆ ಜಾಗವಿಲ್ಲವೆಂದಲ್ಲ; ಆದರೆ ಈ ಸೌಂದರ್ಯ ನಿರುದ್ದಿಶ್ಯವಲ್ಲ. ನಿರುದ್ದಿಶ್ಯವಾದ್ದಕ್ಕೆ ಎಡೆಯೇ ಇಲ್ಲದಲ್ಲಿ ಮೆಟಫಿಸಿಕ್ಸ್ ಇಲ್ಲ; ಕೇವಲ ಪ್ರೇಮದ ಅಥವಾ ಪ್ರಕೃತಿಯ ಉಪಾಸಕರಿರುವುದಿಲ್ಲ; ಇಂಥಲ್ಲಿ ಈವಿಲ್ ಕೂಡ ಸೃಷ್ಟಿಯಲ್ಲೇ ಅಂತರ್ಗತವಾಗಿರುವ ಒಂದು ತತ್ತ್ವವೆಂದು ಅನ್ನಿಸುವುದಿಲ್ಲ. ಯಾವುದಕ್ಕೂ ಪುರುಸೊತ್ತು ಇಲ್ಲವೆಂದು ಬದುಕುವ ಈ ಜನ ಸಾವು ನೋವು ಯಾತನೆಗಳನ್ನು ವಿರೋಧಿಸಿ ಹಣೆ ಚಚ್ಚಿಕೊಳ್ಳುವುದಿಲ್ಲ – ಬಂದದ್ದನ್ನು ಒಪ್ಪಿಕೊಂಡುಬಿಡುತ್ತಾರೆ. ಸರಸೋತಿ ಹೆಣ್ಣಿನ ಪಾಡಿನ ಬಗ್ಗೆ ಹೇಳುವುದು ಕೇಳಿ : “ನೀನು ಏನೇ ಹೇಳು ಮಗು, ಈ ಹೆಣ್ಣಿನ ಜನ್ಮ ಎಂಬುದು ಹಿಂದೆ ಯಾವ ಯಾವುದೋ ಪಾಪ ಮಾಡಿ ಬಂದದ್ದು. ಇದು ನರಕ ಅನುಭವಿಸಲಿಕ್ಕೇ ಬಂದ ಜನ್ಮ : ಸುಖಕ್ಕಲ್ಲ” (೨೪೩, ೨೪೪). ಸಾವಿನ ಬಗ್ಗೆ ಅವಳು ಹೇಳುವುದು ಕೇಳಿ : “ಅವನದ್ದೇ ಏನೋ ಒಂದು ಲೆಕ್ಕವಿರಬೇಕು, ನಮಗೆ ಅದೆಲ್ಲ ತಿಳಿಯುತ್ತದೆಯೇ? (೨೪೭).” ಈ ಮಾತುಗಳು ತತ್ತ್ವವಾಗಿ ಸತ್ಯವೆ ಎಂಬ ಪ್ರಶ್ನೆ ಹುಟ್ಟುವಂತೆ ಕಾರಂತರು ಬರೆಯುವುದೇ ಇಲ್ಲ. ಇಗೋ ಇಂಥ ಜನ ತಮ್ಮ ಜೀವನ ಕ್ರಮದಿಂದಾಗಿ ಹೀಗೆ ಭಾವಿಸಿದರು ಎಂದು ಮಾತ್ರ ಹೇಳುತ್ತಾರೆ.

ಕಾರಂತರು ಹೀಗೆ ತಮ್ಮ ಪಾತ್ರಗಳಿಗೇ ಬದ್ಧರಾಗಿ ಬರೆಯುತ್ತಾರೆಂಬುದು, ಈ ಪಾತ್ರಗಳು ತಾವು ಕಂಡುಂಡ ಜೀವನಕ್ಕೆ ಬದ್ಧವಾಗಿದ್ದು ಪಡೆದಷ್ಟನ್ನೇ ಚಿಂತಿಸುತ್ತಾರೆಂಬುದು ಕಾರಂತ ಬರವಣಿಗೆಯ ದೊಡ್ಡ ಗುಣವೆಂದು ಕಾಣದ ವಿಮರ್ಶಕನೇ ಇಲ್ಲ. ಸ್ವಯಂಪೂರ್ಣವೆನ್ನಿಸುವ ಈ ಪ್ರಪಂಚಕ್ಕೆ ತಲೆಬಾಗಿ ಕಾರಂತರ ಪಾತ್ರಗಳು ಬದುಕುತ್ತಿರಬಹುದು. ಆದರೂ ಪಾರೋತಿಯದು ಯಾಕೆ ಬರಡು ಜೀವನವಾಗಬೇಕು? ಸರಸೋತಿ ಯಾಕೆ ವಿಧವೆಯಾಗಿ ಬದುಕಬೇಕು? ನಾಗವೇಣಿಗೆ ಬೇರೊಂದು ಬದುಕೇ ಸಾಧ್ಯವಿಲ್ಲವೆ?

ಐತಾಳಗೇಕೆ ಮನೆಗೆ ಹೆಂಚು ಹೊದೆಸುವ ಹುಚ್ಚು, ಮರು ಮದುವೆಯ ಆಸೆ, ಮಯ್ಯನನ್ನು ಮೀರಿಸಬೇಕೆಂಬ ಛಲ, ಮಗನನ್ನು ವಕೀಲನನ್ನಾಗಿ ಮಾಡಿಸಬೇಕೆಂಬ ಹಂಬಲಗಳು ಹುಟ್ಟಬೇಕು? ಅವನ ಆಸೆಯ ಹಿಂದಿರುವ ಆಮಿಷಗಳು ಲಚ್ಚನ ಪೇಟೆ ಜೀವನದಲ್ಲಿ ವ್ಯಕ್ತವಾಗುವುದು ಸಹಜವಲ್ಲವೆ? ಲಚ್ಚನನ್ನು ಕಾರಂತರು ಕೇವಲ ಸ್ವಾರ್ಥಿಯೆಂದೂ, ಪರೋಪಕಾರಿಯಲ್ಲೆಂದೂ ಕಂಡರು ಸಹ, ಅವನನ್ನು ಕಾಡುವ ಆಮಿಷ ಜೀವನಕ್ಕೇ ಮೂಲಭೂತವಾದ-ಎಲ್ಲರಲ್ಲೂ ಅಡಿಗಿರಬಹುದಾದ ಅಂಶವಲ್ಲವೆ?

ಈ ಪ್ರಶ್ನೆಗಳು ಕಾದಂಬರಿಯಲ್ಲಿ ಇಣುಕುತ್ತವೆ. ಅಂದರೆ, ಕಾರಂತರ ಆಶಯವನ್ನೂ ಮೀರಿ ಇಣುಕುತ್ತವೆ. ಉಸಿರಾಡುವ ಎಲ್ಲ ಕೃತಿಗಳಲ್ಲಿರಬೇಕಾದ ಗುಣವಿದು. ಬಂದಿರುವ ಬದುಕನ್ನು ಜೀವಿಸದ ಹೊರತು ಬೇರೆ ದಿಕ್ಕಿಲ್ಲವೆಂಬ ಪಾತ್ರಗಳು ಅದೃಷ್ಟವನ್ನು ಕೆಣಕದೇ ಇರಬಹುದು. ಕೆಣಕಬಲ್ಲವರು ಚೋಮನಂಥವರು; ಹಿಂದೆ ನಾನು ಹೇಳಿದಂತೆ ತತ್ತ್ವ ಹುಟ್ಟು ಹಾಕಬಲ್ಲ ವಿಶೇಷ ಅಸ್ತಿತ್ವವುಳ್ಳವರು. ವೈದಿಕ ವೃತ್ತಿ ಮತ್ತು ಬೇಸಾಯದ ಸಂಸ್ಖೃತಿಯ ಬಿರುಕಿನಲ್ಲಿ ಕಣ್ಣೊಡೆದ ಲಚ್ಚ ಇಂಥವನಾಗಿದ್ದರೆ? ಹಿರಿಯರ ಆಶಯದ ಫಲವೂ ಅವನಾದ್ದರಿಂದ ಅವನು ಬರಿ ಒಬ್ಬ ಕೆಡುಕನಾಗದೇ ಇರಬಹುದಿತ್ತು; ಅವನ ಸವಾಲು ಮೆಟಫಿಸಿಕಲ್ ಆಯಾಮ ಪಡೆಯಬಹುದಿತ್ತು.

* * *

ಪಡೆದಿದೆ ಎಂದುಕೊಂಡಿದೇನೆ ನಾನು ‘ಸಂಸ್ಕಾರ’ ಕೃತಿಯ ನಾರಣಪ್ಪನಲ್ಲಿ. ಇದೇನೂ ಪ್ರಜ್ಞಾಪೂರ್ವಕವಾಗಿ ನಾನು ಮಾಡಿದ್ದಲ್ಲ. ಯಾಕೆಂದರೆ ನಾನು ತನ್ಮಯನಾಗಿ ‘ಮರಳಿ ಮಣ್ಣಿಗೆ’ ಓದಿದ್ದು ಅಗ್ರಹಾರದಲ್ಲಿ ನಾನು ಬಾಲಕನಾಗಿದ್ದಾಗ ಮತ್ತು ಈಗ ಈ ಲೇಖನ ಬರೆಯಲೆಂದು. ನನ್ನ ಎಲ್ಲ ಬರವಣಿಗೆಯ ಹಿಂದೆ ಕಾರಂತರಿಂದ ಮೈಗೂಡಿಸಿಕೊಂಡದ್ದು ಇರುವುದು ಅನಿವಾರ್ಯವಾದ್ದರಿಂದ ಲಕ್ಷ್ಮೀನಾಯಣನೇ ನಾರಣಪ್ಪನಾಗಿದ್ದರೆ ಆಶ್ಚರ್ಯವಿಲ್ಲ. ಕಾರಂತರನ್ನು ಯಾವ ಕನ್ನಡ ಲೇಖಕ ತಾನೆ ತೊರೆದು ನಿಂತಾನು? ಆದರೆ ಇಂಥ ಹೊರಳುವಿಕೆ ನಡೆಯುವಾಗ ಲೇಕಕ ತನ್ನ ಹಿರಿಯರಲ್ಲಿ ಇರುವುದನ್ನು ಅಗತ್ಯಕ್ಕಿಂತ ಹೆಚಚಾಗಿ ಊಹಿಸಿರಬಹುದು-ಮೊದಲೇ ನಾನು ಸೂಚಿಸಿದಂತೆ. ಆದ್ದರಿಂದ ನನ್ನಂಥವರ ವ್ಯಾಖ್ಯಾನದಲ್ಲಿ ಸ್ವಾರ್ಥವಿರುತ್ತದೆಂಬ ಗುಮಾನಿ ನಿಮಿಗರುವುದು ಒಳ್ಳೆಯದೇ. ತನ್ನ ಕೃತಿ ರಚನೆಗೆ ಪರರಿಂದ ಬೇಕಾದ್ದನ್ನು ಮಾತ್ರ ಆಯುವ, ತನ್ನ ಕೃತಿಯಲ್ಲಿ ಕೆಲಸಮಾಡುವ ಮನೋಗತಗಳನ್ನು ಓದುಗರ ಅರಿವಿಗೆ ತರಲೆಂದೇ ಬೇರೆಯವರಲ್ಲಿ ತನಗೆ ಬೇಕಾದ್ದನ್ನು ಮಾತ್ರ ಎತ್ತಿಹಿಡಿಯುವ ಪ್ರವೃತ್ತಿಯಿಂದ ಸ್ವತಃ ಕೃತಿಕಾರನಾದವನು ಪಾರಾಗಲಾರ. ಇದು ನನ್ನಂಥವರ ಮಿತಿ. ಸ್ವಂತದ ಬಗ್ಗೆ ಎಷ್ಟೇ ವಿಮರ್ಶಕ ಧೋರಣೆ ಇದ್ದಾಗಲೂ, ತನ್ನ ಹಾದಿಯ ಸಮರ್ಥನೆಯ ಉದ್ದೇಶ ಅಡಗಿಯಾದರೂ ಲೇಖಕನಲ್ಲಿ ಕೆಲಸ ಮಾಡುತ್ತದೆಂದು ನಾನು ತಿಳಿದಿರುವೆ. ಡಾ. ಆಮೂರರು ‘ಮರಳಿ ಮಣ್ಣಿಗೆ’ಯ ಮೇಲಿನ ತಮ್ಮ ಲೇಕನದ ಕೊನೆಯಲ್ಲಿ ಆಡಿದ ಮಾತು (ಕಾರಂತ ಪ್ರಪಂಚ, ೪೬೧) ನನಗೆ ಮೇಲಿನದನ್ನು ಹೇಳುವ ಧೈರ್ಯ ಕೊಟ್ಟಿದೆ.

ಹೀಗೆ ಹೊರಳಿಕೊಳ್ಳದ ಹೊರತು ಹೊಸ ಲೇಖನೊಬ್ಬನಿಗೆ ಬೇರೆ ದಿಕ್ಕೇ ಇಲ್ಲ. ಅದೂ ಕಾರಂತರಂಥ ಶಕ್ತ ಲೇಖನನ್ನು ಹಿಂದಕ್ಕೆ ಇಟ್ಟುಕೊಂಡಾಗ. ಇನ್ನೊಂದು ಊರಿನ ಕಥೆಯನ್ನು ‘ಮರಳಿ ಮಣ್ಣಿಗೆ’ಯಂಥದೇ ವಾಸ್ತವ ಶೈಲಿಯಲ್ಲಿ, ಒಂದರ ನಂತರ ಇನ್ನೊಂದು ಬರುವ ಕಾಲಾನುಕ್ರಮ ಅನುಸಾರಿಯಾದ ಶಿಲ್ಪದಲ್ಲಿ ಅರಿವಿಗೆ ಹೊಸದೊಂದನ್ನು ಸೇರಿಸಲಾರದು; ಇನ್ನೊಂದು ಊರಲ್ಲಿ ಜನ ಹೀಗೆ ಬದುಕುತ್ತಾರೆ ಎಂಬ ನಮ್ಮ ವಿಷಯಜ್ಞಾನವನ್ನು ಕೊಂಚ ಹಿಗ್ಗಿಸೀತು ಅಷ್ಟೆ. ಒಳ್ಳೆಯ ಸಮಾಜ ಶಾಸ್ತ್ರಜ್ಞನೂ ಅದನ್ನು ಮಾಡಿಯಾನು. ಆಗಲೇ ತಿಳಿದಿದ್ದಕ್ಕೆ ಹೊಸ ಉದಾಹರಣೆಗಳನ್ನು ಪೇರಿಸುತ್ತ ಹೋಗುವುದು ಕಲೆಯ ಕೆಲಸವಲ್ಲ. ‘ಮರಳಿ ಮಣ್ಣಿಗೆ’, ‘ಪಥೇರ ಪಂಚಾಲಿ’, ‘ಅನ್ನ ಕರನೀನ’ನದಂಥ ಕೃತಿಗಳನ್ನು ಬರೆದವರು ಆ ಬಗೆಯ ಬರವಣಿಗೆ ಕೊಡಬಲ್ಲ ಅನುಭವವನ್ನೆಲ್ಲಾ ಸೂರೆ ಮಾಡಿಬಿಟ್ಟಿರುತ್ತಾರೆ. ಕೃತಿಖಾರ ಬೆಳೆಯುವ ಸಾಧ್ಯತೆಯಿರುವುದು ತನ್ನ ಮನಸ್ಸನ್ನೂ, ತನಗೆ ಅನನ್ಯವಾದ ಗ್ರಹಿಕೆಯನ್ನು ಕೊಡುವ ತನ್ನ ಸಂವೇದನೆಯನ್ನೂ, ಬೆಳೆಸಿಕೊಳ್ಳುತ್ತ ಹೋದಾಗ. ಕಾರಂತರು ತನ್ನನ್ನು ಹಿಂದಿಟ್ಟುಕೊಂಡು ಬರದಂತೆ, ತನ್ನನ್ನು ಮುಂದಿಟ್ಟುಕೊಂಡೂ ಬರೆದಿದ್ದಾರೆ. ಬ್ಲೇಕ್ ಹೇಳುವಂತೆ ‘ಇದು ನನ್ನದು, ಆದರೆ ನನ್ನದು ಮಾತ್ರ ಅಲ್ಲ’ ಎನ್ನಿಸುವಂಥ ಕೃತಿಗಳನ್ನು ಅವರು ಕೊಟ್ಟಿರುವುದು ಮಾತ್ರ ಹೆಚ್ಚಾಗಿ ತನ್ನನ್ನು, ಅಂದರೆ ತನ್ನ ವೈಚಾರಿಕತೆಯನ್ನು, ಹಿಂದಿಟ್ಟುಕೊಂಡು ಬರೆದಾಗ. ತನ್ನನ್ನೇ ಲೇಕಕ ಮುಂದಿಟ್ಟುಕೊಂಡು ಬರೆದದ್ದೂ ಹೀಗೆ ಲೇಖಕನನ್ನು ಬಿಟ್ಟು ನಿಲ್ಲುವುದು ಸಾಧ್ಯ. ತನ್ನನ್ನು ಮುಂದಿಟ್ಟುಕೊಂಡು ಎಂದರೆ ‘ತನ್ನ ವ್ಯಕ್ತಿತ್ವವನ್ನು ನಿಲ್ಲುವುದು ಸಾಧ್ಯ. ತನ್ನನ್ನು ಮುಂದಿಟ್ಟುಕೊಂಡು ಎಂದರೆ ‘ತನ್ನ ವ್ಯಕ್ತಿತ್ವವನ್ನು ಸಮರ್ಥಿಸಿಕೊಳ್ಳಲೆಂದು’ ಎಂಬುದು ತನ್ನ ಅರ್ಥವಲ್ಲ; ತನ್ನ ಕಲಾಸಂವೇನೆಯನ್ನು ಬುದ್ಧಿಪೂರ್ವಕವಾಗಿ ತೊಡಗಿಸಿಕೊಂಡು ಬರೆಯುವುದರಲ್ಲೂ ತನ್ನನ್ನು ಮೀರಿಸಿಕೊಳ್ಳುವುದು ಸಾಧ್ಯವೆಂಬುದನ್ನು ತಪ್ಪರ್ಥಕ್ಕೆ ಎಡೆಯಾಗದಂತೆ ನಾನು ಹೇಳಲು ಪ್ರಯತ್ನಿಸುತ್ತಿದ್ದೇನೆ.

* * *

‘ಸಂಸ್ಕಾರ’ದ ಹಿಂದೆ ಕಾರಂತರ ಪ್ರಭಾವ ಅಜ್ಞಾತವಾಗಿ, ಬೇರೆ ದಿಕ್ಕಿನಲ್ಲಿ ನಾನು ನಡೆಯುವುದಕ್ಕೆ ಪ್ರೇರಕವಾಗಿಯಾದರೂ ಕೆಲಸ ಮಾಡಿರಬಹುದೆಂದು ಹೇಳಿದೆ. ಆದರೆ ಪ್ರತ್ಯಕ್ಷವಾಗಿ ನನಗೆ ನೆನಪಿರುವ ಎರಡು ಘಟನೆಗಳು ನಾನು ಹೀಗೆ ಕಾರಂತರಿಂದ ನುಣುಚಿಕೊಳ್ಳುವುದಕ್ಕೆ ಸಹಾಯಕವಾಗಿರಬಹುದು. ಮೊದಲನೆಯದು: ನಾನು ಅಗ್ರಹಾರದಲ್ಲಿ ಓದುತ್ತಿದ್ದಾಗ ನನ್ನ ಹದಿನಾಲ್ಕನೇ ವಯಸ್ಸಿನಲ್ಲಿ ನಡೆದದ್ದು. ಸೇನೆ ಯಲ್ಲಿದ್ದು ಅಗ್ರಹಾರದ ಯುವಕನೊಬ್ಬ (ನನ್ನ ಪಾಲಿಗೆ ಲಚ್ಚನ ಬಗೆಯವ) ಹಿಂದೆ ಬಂದಿದ್ದ. ನಮಗೆ ಇನ್ನೊಂದು ಲೋಕವನ್ನು ರಂಗಾಗಿ ವರ್ಣಿಸುತ್ತಿದ್ದ ಈತ ಕೊಟ್ಟಿಗೆ ಕೆಲಸಕ್ಕೆ ಬರುತ್ತಿದ್ದವಳೊಬ್ಬಳ ಜೊತೆ ಗುಪ್ತವಾಗಿ ಸಂಬಂಧ ಬೆಳೆಸಿದ್ದು ನನಗೆ ಮಾತ್ರ ಗೊತ್ತಿತ್ತು. ಅಸ್ಪೃಶ್ಯತೆಯನ್ನು ಉಗ್ರವಾಗಿ ಸಮರ್ಥಿಸುತ್ತಿದ್ದ ಅಗ್ರಹಾರದಲ್ಲಿ ವೈದಿಕರೊಬ್ಬರ ಮಗ ಹೀಗೆ ವರ್ತಿಸಿದ್ದು ನನ್ನ ಕಣ್ಣು ತೆರೆಸಿತ್ತು. ತೀರ್ಥಹಳ್ಳಿಗೆ ಬಂದ ಪ್ಲೇಗು ನಮ್ಮ ಹಳ್ಳಿಯ ಹರಿಜನರಿಗೂ ತಗುಲಿತು. ಯಾಕೆಂದರೆ ಅಸ್ಪೃಶ್ಯರೆಂದು ಬ್ರಾಹ್ಮಣ ಡಾಕ್ಟರರು ಅವರಿಗೆ ಇನ್ಯಾಕ್ಯುಲೇಷನ್ ಕೊಟ್ಟಿರಲಿಲ್ಲ. ಅಗ್ರಹಾರದ ನಿಷ್ಠ ಬ್ರಾಹ್ಮಣರು ಮಾತ್ರ ಕಲಿಸ್ವರೂಪನಾದ ಗಾಂಧಿಯ ಮಾತು ಕೇಳಿ, ಯಾವ ಊರಿನದೋ ಹರಿಜನರು ದೇವಸ್ಥಾನ ಪ್ರವೇಶಿಸಿದ್ದರಿಂದ ಈ ಊರಲ್ಲಿ ಹರಿಜನರು ಸಾಯುತ್ತಿರುವುದೆಂದು ವ್ಯಾಖ್ಯಾನಿಸಿದ್ದರು. ಗುಡಿಸಲುಗಳಲ್ಲಿ ಇಡೀ ಸಂಸಾರಗಳು ಸತ್ತು, ಗುಡಿಸಲುಗಳಿಗೆ ಬೆಂಕಿ ಕೊಟ್ಟು ಸುಡುವ ಪ್ರಸಂಗ ಒದಗಿತು. ಆಗ ಬ್ರಾಹ್ಮಣ ಯುವಕನಿಗೆ ಒಲಿದಿದ್ದ ಆ ಕಪ್ಪು ಚೆಲುವೆ ಮಾತ್ರ ಊರು ಬಿಟ್ಟು ಓಡಿ ಹೋದಳು. ಆಗಿನ ನನ್ನ ಭಾವನೆಯನ್ನು ನಾನೊಂದು ಕಥೆ ಮಾಡಿ ಬರೆದಿದ್ದೆ-ನೇರವಾಗಿ ಬರೆಯುವ ಭಯದಿಂದ ಯಾವುದೋ ಕಟ್ಟು ಕಥೆಯೆಂಬಂತೆ. ರೂಪಕದ ಅಗತ್ಯ ನನಗೆ ಮೊದಲು ಬಿದ್ದದ್ದೇ ಹಾಗೆ. ‘ಮುಟ್ಟಿಸಿಕೊಂಡಿದ್ದರಿಂದಲೇ ಅಸ್ಪೃಶ್ಯಳ ಮನಸ್ಸಲ್ಲಿ ತಾನು ಪಶುವಿನಂತೆ ಸಾಯಬೇಕಾದ್ದು ಅನಿವಾರ್ಯವಲ್ಲವೆಂಬ ಪ್ರಜ್ಞೆ ಮೂಡಿತು. ಆದ್ದರಿಂದ ಅವಳು ಓಡಿ ಹೋದಳು’-ಎಂಬುದೇ ಕಥೆಯ ಆಶಯವಾಗಿತ್ತು. ಕೈಬರಹದ ಪತ್ರಿಕೆಗೆ ಬರೆದದ್ದು ಇದು. ‘ಮುಟ್ಟುವುದು’ ಅಂದಿನಿಂದಲೂ ನನಗೊಂದು ಗೀಳಿನ ವಸ್ತುವಾಗಿರಬಹುದು. ‘ಚೋಮನದುಡಿ’ ಓದಿದ್ದರ ಪ್ರಭಾವವೂ ಈ ಕಥೆಯ ಮೇಲಾಗಿರಬಹುದು.

ಈ ಕಥೆಯನ್ನು ಮತ್ತೆ ಬರೆಯಬೇಕೆಂಬ ಆಸೆಯಲ್ಲಿ, ಮಾರ್ಕ್ಸ್, ಲೋಹಿಯಾ, ಜಿಕೆಯವರ ಪ್ರಭಾವದಲ್ಲಿ, ಲಾರೆನ್ಸ್‌ನ ಗುಂಗಿನಲ್ಲಿ ಇರುತ್ತಿದ್ದ ನಾನು ಒಂದು ಸಂಜೆ ನನ್ನ ಅಧ್ಯಾಪಕರೂ ಲೇಖಕರೂ ಆದ ಮಾಲ್ಕಮ್ ಬ್ರಾಡ್‌ಬರಿ ಜೊತೆಯಲ್ಲಿ ಬರ್ಗ್‌ಮನ್ನಿನ Seventh Seal ಸಿನಿಮಾವನ್ನು ಬರ್ಮಿಂಗಂ ವಿಶ್ವವಿದ್ಯಾಲಯದ ಫಿಲ್ಮ್ ಕ್ಲಬ್ಬಿನಲ್ಲಿ ನೋಡಿದೆ. ಸಬ್ ಟೈಟಲ್‌ಗಳು ಇಲ್ಲದಿದ್ದ ಪ್ರಿಂಟು ಅದು. ನಾನು ಅದರಿಂದ ಅಸ್ಪಷ್ಟವಾಗಿ, ಆದರೆ ಗಾಢವಾಗಿ ಪ್ರಭಾವಿತನಾದೆ. ಎಲ್ಲೋ ಅಲ್ಲ ಸ್ವಲ್ಪ ಅರ್ಥವಾಗಿದ್ದರೂ ನಂಬಿಕೆಯ ಕ್ರೈಸಿಸ್ಸಿನ ಚಿತ್ರವಿದೆಂದು ತಿಳಿಯಿತು. ಬ್ರಾಡ್‌ಬರಿಗೆ ಹೇಳಿದೆ, “ನೀವು ಸಂಶೋಧನೆಯಿಂದ ತಿಳಿಯುವ ಮಧ್ಯಯುಗ ನನಗೆ ಭಾರತದಲ್ಲಿ ಸಮಕಾಲೀನ ಅನುಭವ. ನಾವು ನಿಮ್ಮ ಹಲವು ಯುಗಗಳನ್ನು ಒಟ್ಟಾಗಿ ಬದುಕುತ್ತೇವೆ.” ಅದಕ್ಕೆ ಬ್ರಾಡ್‌ಬರಿ, “ನೀನೇಕೆ ಅಂಥ ಒಂದು ಕಥೆ ಬರೆಯಬಾರದು” ಎಂದರು. ನನ್ನ ಸಂಶೋಧನೆಯ ಕೊಡಬೇಕಾಗಿದ್ದ ಚಾಪ್ಪರನ್ನು ಮುಂದೂಡಬಹುದಾದ ಗೆಲುವಿನಲ್ಲೇ ಎರಡು ವರ್ಷ ಊರಿಂದ ದೂರವಿದ್ದುದರಿಂದಲೋ, ಕನ್ನಡ ಮಾತಾಡಲಾರದೇ ಬಾಯಿ ಕಟ್ಟಿದಂತಾದ್ದರಿಂದಲೋ, ಬಾಲ್ಯದ ಅಗ್ರಹಾರದ ನೆನಪುಗಳಿಗೆ ಹಳಹಳಸಿಯೋ ನಾನು ‘ಸಂಸ್ಕಾರ’ ಬರೆದದ್ದು. ಲಕ್ಷ್ಮೀನಾರಾಯಣ (ಲಚ್ಚ) ನಾರಣಪ್ಪನನ್ನು ಪ್ರೇರಿಸಿದನೆ?; ಬರ್ಗ್‌ಮನ್ನಿನ ಜಿಪ್ಸಿ ಪುಟ್ಟನಾದನೆ, ಅಸ್ಪೃಶ್ಯ ಬೆಳ್ಳಿಯ ಕಥೆ ಎತ್ತೆತ್ತಲೊ ಬೆಳೆದುಬಿಟ್ಟಿತೆ?, ಮದುವೆಯಿಂದಾಗಿ ಹಿಂಡಗಲಿದ ನನ್ನವೇ ದಿಗಿಲು ದುಮ್ಮಾನಗಳು ಎಲ್ಲಕ್ಕೂ ಮುಖ್ಯ ಪ್ರೇರಣೆಯೆ? ಲೋಹಿಯಾ, ಲಾರೆನ್ಸ್, ಜೆಕೆಯವರು ನನಗೆ ಬಗೆವ ಕಣ್ಣುಗಳಾದುವೆ-ಯಾವುದನ್ನೂ ನಾನು ಸ್ಪಷ್ಟವಾಗಿ ಹೇಳಲಾರೆ. ಚಿಲುಮೆಯನ್ನು ತಟ್ಟಿ ಎಬ್ಬಿಸಿದ್ದು ಮಾತ್ರ ನಾನು ಅಸಮರ್ಪಕವಾಗಿ ಅರ್ಥಮಾಡಿಕೊಂಡಿದ್ದ ಬರ್ಗ್‌ಮನ್ನಿನ Seventh Seal. ಆದರೆ ಇದನ್ನು ಖ್ಯಾತ ಮನಶಾಸ್ತ್ರಜ್ಞ ಎರಿಕ್ ಎರಿಕ್‌ಸನ್‌ರಿಗೆ ನಾನು ಹೇಳಿದಾಗ Seventh Sealಗೆ ಬದಲಾಗಿ Wild Strawberries ನಲ್ಲಿ ನನ್ನ ಕೃತಿಯ ಮುಖ್ಯ ಸ್ಥಿತ್ಯಂತರಗಳನ್ನು ಆರ್ಕಿಟೈಪ್ ಎಂಬಂತೆ ಅವರು ಕಂಡರು (ನೋಡಿ: ಸುಧೀರ್ ಕಾಕರ್ ಸಂಪಾದಿಸಿದ Identity and Adulthood; O.U.P) ಆದರೆ ನಾನು Wild Strawberries ಅನ್ನು ೧೯೭೮ನೇ ಇಸವಿ ತನಕ ನೋಡಿರಲಿಲ್ಲ.

* * *

ಕೃತಿ ಹುಟ್ಟುವ ಬಗಗೆ ವಿಚಿತ್ರವಾದ್ದು. ಬರೆಯಲು ಹೊರಟಾಗ ನಾವುಮುಖ್ಯವೆಂದು ತಿಳಿದಿದದ್ದು ಅ ಮುಖ್ಯವಾಗಿ ಬಿಡುತ್ತದೆ. ಮನಸ್ಸು ಸ್ವೀಕರಿಸುವ ಸ್ಥಿತಿಯಲ್ಲಿರುವುದರಿಂದ ಬುದ್ಧಿಪೂರ್ವಕ ತಿಳಿದದ್ದು ಅಜ್ಞಾತವಾಗಿ ಅಡಗಿದ್ದು, ಕನಸಿನ ಲೋಕಕ್ಕೆ ಸೇರಿದ್ದು ಎಲ್ಲ ಏಕತ್ರ ಬಂದೊದಗುತ್ತವೆ. ಮನಸ್ಸಿನಲ್ಲಿ ಸದಾ ಕೊರೆಯುತ್ತಿರುವ ಗೀಳೀನ ಹಾಗಿರುವ ಆಸಕ್ತಿಗಳಿಗೆ ಹೀಗೆ ಒದಗಿಬರುವ ಎಲ್ಲವೂ ಆಹಾರವಾಗಿ ಬಿಡುತ್ತವೆ.

ಇದು ಸಾಧ್ಯವಾದಾಗ ಮಾತ್ರ ಲೇಖಕ ತನ್ನ ಕೃತಿಯ ಬಗ್ಗೆ ಹೇಳಿಕೊಳ್ಳಬಲ್ಲ; “ಇದು ನನ್ನದು. ಆದರೆ ನನ್ನದು ಮಾತ್ರವಲ್ಲ”.[2]

ಕೃಪೆ: ಕರ್ನಾಟಕ ಸಾಹಿತ್ಯ ಅಕಾಡೆಮಿ

* * **[1]  ಪುಟಸಂಖ್ಯೆಗಳು ಮರಳಿ ಮಣ್ಣಿಗೆ ಕಾದಂಬರಿಯವು.

[2] ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಇಲಾಖೆ ನಡೆಸಿದ ಸೆಮಿನಾರಿನಲ್ಲಿ ಓದಿದ್ದು.