ಕೈಯಲ್ಲಿ ಪೈಪ್ ಹಿಡಿದು, ಆಗಾಗ ಅದನ್ನು ಎಳೆಯುತ್ತಾ ನಿರಾಯಾಸವಾಗಿ ಮಜಬೂತಾಗಿ ಮಾತಡಬಲ್ಲ ಶಕ್ತಿಯುಕ್ತಿಗಳನ್ನು ಪಡೆದಿದ ಹೆರಾಲ್ಡ್ ವಿಲ್ಸನ್ ಇಂಗ್ಲೆಂಡಿನ ಪ್ರಧಾನಿಯಾಗಿದ್ದಾಗ, ಅಷ್ಟೇನೂ ಚುರುಕು ಮಾತುಗಾರನಲ್ಲದ ಎಡ್ವರ‍್ಡ್‌ಹೀತ್ ವಿರೋಧಪಕ್ಷದ ನಾಯಕ. ವಿಲ್ಸನ್ ಲೇಬರ್ ಪಕ್ಷದವನಾದರೆ, ಹೀತ್ ಕನ್ಸರ‍್ವೇಟಿವ್. ಆರೋಗ್ಯಕರ ಗೇಲಿಯಿಂದ ಪ್ರಜಾತಂತ್ರವನ್ನು ಕಾಯುವ ಇಂಗ್ಲೆಂಡಿನ ಬಿಬಿಸಿ ಟೆಲಿವಿಷನ್ ಈ ಇಬ್ಬರನ್ನು ಒಂದು ಫೀಚರ್‌ನಲ್ಲಿ ತೋರಿಸಿದ್ದ ಕ್ರಮವನ್ನು ನಾನು ಮರೆಯಲಾರೆ, ಅರವತ್ತರ ದಶಕದ ಪೂರ್ವಾರ್ಧದ ದಿನಗಳ ಮಾತಿದು. ರೋಡೇಶಿಯಾದಲ್ಲಿ ದೇಶಿಯ ಕರಿಯರ ಆಳ್ವಿಕೆಗಾಗಿ, ಇಂಗ್ಲೆಂಡಿಗೆ ವಲಸೆ ಬರುತ್ತಿದ್ದ ಏಷ್ಯನ್ನರ ನಾಗರಿಕ ಹಕ್ಕುಗಳಿಗಾಗಿ ಎಲ್ಲ ಬಡಜನರ ಹಿತಕ್ಕಾಗಿ ಅತ್ಯಂತ ಕಳಕಳಿಯ ಮಾತುಗಳನ್ನಾಡಿ ಅಧಿಕಾರಕ್ಕೆ ಬಂದಿದ್ದ ಲೇಬರ್ ಪಕ್ಷ, ಅಧಿಕಾರ ಪಡೆದ ಮೇಲೆ ತನ್ನ ಕೃತಿಯಲ್ಲಿ ಹಿಂದೆಗೆದದ್ದು ಮಾತ್ರವಲ್ಲ, ಕನ್ಸ್‌ರ‍್ವೆಟಿವ್ ಜನರು ಅಧಿಕಾರದಲ್ಲಿದ್ದರೆ ಆಚರಿಸಬಹುದಾಗಿದ್ದ ನೀತಿಗಿಂತಲೂ ಹೆಚ್ಚು ಕಠಿಣ ಬಲಪಂಥೀಯರಾಗಿ ಬಿಟ್ಟರು. ಕನ್ಸ್‌ರ‍್ವೆಟಿವ್ ಪಕ್ಷ ಇಮಿಗ್ರಂಟ್ಸ್ ಬಗ್ಗೆ ಕಟುವಾದ ನೀತಿ ಹೊಂದಿದ್ದರಿಂದಲೇ, ಅವರು ಒಂದು ವೇಳೆ ಅಧಿಕಾರಕ್ಕೆ ಬಂದಿದ್ದಲ್ಲಿ ಆಚರಣೆಯಲ್ಲಿ ಹೆಚ್ಚು ಉದಾರಿಗಳಾಗಬೇಕಾದ ಒತ್ತಾಯ ಅವರ ಮೇಲಿರುತ್ತಿತ್ತು. ಯಾಕೆಂದರೆ ಇಡೀ ಜಗತ್ತಿನ ಒತ್ತಡ ಅವರ ಮೇಲೆ ಉದಾರಿಗಳಾಗುವಂತೆ ಪ್ರೇರೇಪಿಸುತ್ತಿತ್ತು. ಆದರೆ ಲೇಬರ್ ಪಕ್ಷ ಧಾರಾಳವಾಗಿ ಬಡವರ ಪರ ಮಾತಾಡುತ್ತಿದ್ದುದರಿಂದಾಗಿ ಪೌಂಡಿನ ಮೌಲ್ಯ ವಿಶ್ವ ಮಾರುಕಟ್ಟೆಯಲ್ಲಿ ಧೀಡಿರನೆ ಇಳಿದುಬಿಡದಂತೆ ತಡೆಯಲೋಸುವ ಮಾತಿನ ಧಾರಾಳವನ್ನು ಸರಿದೂಗಿಸಲೆಂದೇ ಕೃತಿಯಲ್ಲಿ ಅತಿ ಜಿಪುಣರಾಗುವುದು ಅನಿವಾರ್ಯವಾಗಿತ್ತು.

ಈ ಸಂದರ್ಭದಲ್ಲಿ ಬಿಬಿಸಿ ಟೆಲಿವಿಷನ್ ತೆರೆಯ ಮೇಲೆ ವಿಲ್ಸನ್ನರು ಮಾತಾಡುತ್ತಿರುವುದನ್ನು ತೋರಿಸಿತು. ಹೇಗೆಂದರೆ, ವಿಲ್ಸನ್ನರು ಹಾವಭಾವಯುಕ್ತವಾಗಿ ಬಾಯಿ ತೆರೆದು ಮುಚ್ಚುತ್ತಿದ್ದಾರೆ. ಆದರೆ ಹೊರ ಬರುವ ಮಾತುಗಳೆಲ್ಲವೂ ಹೀತ್‌ರದು. ಅಂತೆಯೇ ನಂತರ ಹೀತ್ ಮುಚ್ಚಿ ತೆರೆಯುವ ಬಾಯಿಯಿಂದ ಹೊರಡುತ್ತಿದ್ದ ಮಾತುಗಳು ವಿಲ್ಸನ್‌ರವು. ಒಂದು ಕ್ಷಣ ಈ ಅದರು ಬದಲಿಂದ ಪ್ರೇಕ್ಷಕರಲ್ಲಿ ಹುಟ್ಟಿದ ಭಾವನೆ- ಹೀಗೂ ಈ ಇಬ್ಬರೂ ಮಾತಾಡಿರಬಹುದಿತ್ತು ಎಂದು. ಅಲ್ಲಿದ್ದಾಗ ಹಾಗೇ ಮಾತಡಬೇಕು, ಇಲ್ಲಿದ್ದಾಗ ಹೀಗೆ ಮಾತಾಡಬೇಕು- ಪಾರ್ಲಿಮೆಂಟರಿ ಡೆಮಾಕ್ರಸಿಯ ಟಕ್ಕಾ ಟಕ್ಕಿ ನಡೆಯಬೇಕಾದ್ದೇ ಹೀಗೆ- ಅಲ್ಲವೆ? ಪ್ರೇಕ್ಷಕರಲ್ಲಿ ಹುಟ್ಟಿದ ನಗುವಿನಲ್ಲಿ ಭ್ರಮನಿರಸದ ನೋವಿಗೂ ಅವಕಾಶವಿರಲಿಲ್ಲ.

ಇಂಥ ಪಾರ್ಲಿಮೆಂಟರಿ ಪ್ರಜಾತಂತ್ರವನ್ನೂ ಜನರ ಆಶೋತ್ತರಗಳಿಗೆ ಸ್ಪಂದಿಸಲೇ ಬೇಕಾದಂತೆ ಮಾಡುವುದು ಹೇಗೆ? ಅಧಿಕಾರದಲ್ಲಿರುವ ಟಕ್ಕ, ವಿರೋಧದಲ್ಲಿರುವ ಟೆಕ್ಕಿ ಕೇವಲ ವೇಷಾಂತರಿಗಳಾಗಿದ್ದರೂ ಸಹ, ಬದಲಿಸಿ ವೇಷಕ್ಕನುಗುಣವಾಗಿ ಅವರ ಮಾತು ಕೃತಿಗಳು ನಿಯಂತ್ರಿತವಾಗುತ್ತವೆ ಎನ್ನಿಸುವಾಗಲೂ ಕೂಡ, ಆಗುವ ತೋರಿಕೆಯ ಬದಲಾವಣೆಯಿಂದ ಕಿಂಚಿತ್ತಾದರೂ ನೈಜ ಬದಲಾವಣೆಯಾಗುವಂತೆ ಮಾಡುವುದು ಹೇಗೆ?

ಪಾರ್ಲಿಮೆಂಟರಿ ಪ್ರಜಾತಂತ್ರದಲ್ಲಿ ಸ್ಪರ್ಧಿಸಿ ಗೆಲ್ಲಬಲ್ಲ ಪಕ್ಷಗಳು ಸಮೂಹ ಪಕ್ಷಗಳಾಗಿರುತ್ತವೆ, ಅಂದರೆ ಎಲ್ಲ ಬಗೆಯ ಧೋರಣೆಗಳುಳ್ಳ ಜನರಿಂದ ಒಳಗೊಂಡಿರುತ್ತವೆ ಎಂಬುದೀಗ ನಮಗೆ ಮನದಟ್ಟಾಗತೊಡಗಿದೆ. ಕೇಡರ್ ಪಕ್ಷಗಳು ಐಡಿಯಾಲಜಿಗೆ ಬದ್ದವಾಗಿರುವಂತೆ, ಸಮೂಹ ಪಕ್ಷಗಳು ಆಗಿರಲಾರವು. ಕಾಂಗ್ರೆಸ್ ಈ ದೃಷ್ಟಿಯಿಂದ ಸಮೂಹ ಪಕ್ಷ-ಮಾಸ್ ಪಾರ್ಟಿ. ಕರ್ನಾಟಕದ ಜನತಾ ಪಕ್ಷವೂ ಸಮೂಹ ಪಕ್ಷವೇ. ಸಿಪಿಎಂ, ಬಿಜೆಪಿ, ಡಿಎಂಕೆ- ಇವು ಕೇಡರ್ ಪಕ್ಷಗಳು. ಅರಾಜಕ ಸ್ಥಿತಿಯಲ್ಲಿ ಮಾತ್ರ ಈ ಕೇಡರ್ ಪಕ್ಷಗಳು ಅಧಿಕಾರವನ್ನು ಹಿಡಿಯಬಲ್ಲವು. ಆರೆಸ್ಸೆಸ್‌ಗೆ ಒಂದು ಲಕ್ಷ ಅನುಯಾಯಿಗಳಿದ್ದಾರೆ ಎನ್ನಿ, ಈ ಒಂದು ಲಕ್ಷ ಯಾವತ್ತೂ ಅವರೊಡನಿರುತ್ತಾರೆ. ಯಾವಾಗಲೇ ಆಗಲಿ, ಅವರು ಮಾಡಬಹುದಾದ ಶಕ್ತಿ ಪ್ರದರ್ಶನದ ಬಹಿರಂಗ ಸಭೆಗಳು, ರೂಟ್‌ಮಾರ್ಟ್‌ಗಳು ಕಣ್ಣಿಗೆ ಕಟ್ಟುವಂತಿರುತ್ತವೆ. ಅರಾಜಕ ಸ್ಥಿತಿಯಲ್ಲಿ ಅವರು ಬೀದಿಗೊಬ್ಬನಿದ್ದರೂ ಸುಸಂಘಟಿತರಾದ್ದರಿಂದ ಬಹು ಬಲಶಾಲಿಗಳಂತೆ ವರ್ತಿಸಬಲ್ಲರು. ಆದರೆ ಉಳಿದ ಸಮಯದಲ್ಲಿ ಅವರು ಇರುವುದು, ಕೊನೆಗೂ ಇದ್ದೇ ಬಿಡುವುದು ಕೇವಲ ಒಂದು ಲಕ್ಷ. ಆದರೆ ಜನತಾ ಪಕ್ಷ ಒಂದು ಸಮಯದಲ್ಲಿ ಬಡಪಾಯಿ, ಆದರೆ ಇದ್ದಕ್ಕಿದ್ದಂತೆ ಬಹುಸಂಖ್ಯಾತ ಪಕ್ಷ-ಬೆಳೆಯಬೇಕೆಂಬ ತನ್ನ ಕಾತರದಲ್ಲಿ ಸೂಕ್ಷ್ಮಜ್ಞರೂ ಸ್ಪಂದನಶೀಲರೂ ಆದವರನ್ನು ಮುಂದಿಟ್ಟುಕೊಳ್ಳಬಲ್ಲ ಪಕ್ಷ. ಕಾಂಗ್ರೆಸ್ಸೂ ಹೀಗೆ. ಯಾಕೆಂದರೆ ಇವು ಸಮೂಹ ಪಕ್ಷಗಳು; ಇನ್ನೊಂದರ್ಥದಲ್ಲಿ ಏಕೋದ್ದೇಶಕ್ಕೆ ಗಂಟುಬೀಳದ, ಸಮಯಪ್ರಜ್ಷೆಯುಳ್ಳ, ವ್ಯಾವಹಾರಿಕ ಜ್ಞಾನ ಪಡೆದ ಹಲವು ವ್ಯಕ್ತಿಗಳ, ಆಸಕ್ತಿಗಳ ಸಡಿಲವಾದ ಸಂಘಟನೆಗಳು, ಪಾರ್ಲಿಮೆಂಟ್ ಪ್ರಜಾಪ್ರಭುತ್ವದಲ್ಲಿ ಇಂಥವು ಬೆಳೆಯುತ್ತವೆ; ಆದರೆ ಸರ್ವಾಧಿಕಾರಿಯ ಆಳ್ವಿಕೆಯಲ್ಲಿ ಗುಪ್ತವಾಗಿ ಬೆಳೆದು ಅಧಿಕಾರಕ್ಕೆ ಬರಬಲ್ಲವು ಕೇಡರ್ ಪಕ್ಷಗಳು ಮಾತ್ರ. ಸಮೂಹ ಪಕ್ಷಗಳು ನಿರ್ನಾಮವಾಗಿಬಿಡುತ್ತವೆ.

ವಿಶಾಲವಾದ ದೃಷ್ಟಿಯಲ್ಲಿ ಯಾವುದಾದರೊಂದು ಐಡಿಯಾಲಜಿಯ ಹೊರಲೇಪ ಈ ಸಮೂಹ ಪಕ್ಷಗಳಿಗೂ ಇರುವುದಿಲ್ಲವೆಂದಲ್ಲ. ಆದರೆ ವಿಲ್ಸನ್ ಬಾಯಲ್ಲಿ ಹೀತ್‌ನ ಮಾತೂ, ಹೀತ್ ಬಾಯಲ್ಲಿ ವಿಲ್ಸನ್ ಮಾತೂ ಕೇಳುವುದು ಅಸಂಭವವಲ್ಲ.

ಟಕ್ಕಗೂ ಟಿಕ್ಕಿಗೂ ಅಂಥ ವ್ಯತ್ಯಾಸವಿಲ್ಲವೆನ್ನಿಸಿದರೂ, ಅದಕ್ಕೆ ಒಂದು ಮುಖ್ಯ ಕಾರಣ ಅಂಥವರನ್ನು ಮಾತ್ರ ಅಧಿಕಾರಕ್ಕೆ ತರುವ ಪಾರ‍್ಲಿಮೆಂಟರಿ ಪ್ರಜಾತಂತ್ರವೆನ್ನಿಸಿದರೂ ನಮ್ಮಲ್ಲಿ ಹಲವರಿಗೆ ಈ ಬಗೆಯ ಪ್ರಜಾತಂತ್ರಕ್ಕೆ ಪರ‍್ಯಾಯವಾದ, ಇಷ್ಟೇ ಹಿತಕಾರಿಯಾದ, ಮನಸ್ವೀವರ್ತನೆಯಿಂದ ಪ್ರಜಾಕಂಟಕವಾಗದೇ ಇರುವಂಥ ವ್ಯವಸ್ಥೆ ಇಲ್ಲವೆನ್ನಿಸುತ್ತದೆ. ಆದರೂ ಅಧಿಕಾರಕ್ಕೆ ಬಂದವರನ್ನು ಸಾಮಾಜಿಕ ನ್ಯಾಯ, ಸಮತೆ ಇತ್ಯಾದಿ ಗುರಿಗಳಿಗೆ ದುಡಿಯಬೇಕಾಗಿ ಬರುವಂತೆ ಒತ್ತಾಯಿಸದೇ ಹೋದಲ್ಲಿ ಪಾರ್ಲಿಮೆಂಟರಿ ಪ್ರಜಾತಂತ್ರ ಅಂತಸ್ಸತ್ವವಿಲ್ಲದೆ ದುರ್ಬಲವಾಗಿಬಿಡುತ್ತದೆ.

ಇಲ್ಲಿ ನಾವು ಬೇರೆ ದೇಶಗಳ ಪ್ರಜಾತಂತ್ರ ವ್ಯವಸ್ಥೆಯಿಂದ ಕಲಿಯಬೇಕಾದ ಪಾಠಗಳಿವೆ. ಉದಾಹರಣೆಗೆ ಅಮೆರಿಕಾ ದೇಶದ ಕರಿಯರ ಸಮಸ್ಯೆ ತೆಗೆದುಕೊಳ್ಳೋಣ. ರಿಪಬ್ಲಿಕನ್ ಪಕ್ಷಕ್ಕೂ, ಡೆಮಾಕ್ರೆಟ್ ಪಕ್ಷಕ್ಕೂ ಬಿಳಿಯರ ಬೆಂಬಲಬೇಕು, ಕರಿಯರ ಓಟು ಬೇಕು. ಬಿಳಿಯರ ಬೆಂಬಲ ಮುಖ್ಯವಾದರೆ, ಹಾಗೆಂದು ತಿಳಿದು ವರ್ತಿಸುವ ಪಾರ್ಟಿಗೆ ಕರಿಯರ ಓಟು ಸಿಗುವುದು ಕಷ್ಟ. ಕರಿಯರ ಬೆಂಬಲ ಮುಖ್ಯವಾದರೆ, ಹಾಗೆಂದು ತಿಳಿದು ವರ್ತಿಸುವ ಪಾರ್ಟಿಗೆ ಬಿಳಿಯರ ಓಟು ಸಿಗುವುದು ಕಷ್ಟ. ಆದರೆ ಎರಡು ಪಕ್ಷಗಳೂ ಅಧಿಕಾರಕ್ಕೆ ಬರಲು ಮತ್ತು ಬಂದಾಗ, ಕರಿಯರಿಗೆ ಹಿತಕಾರಿಯಾದ ಕೆಲವು ಕೆಲಸಗಳನ್ನಾದರೂ ಮಾಡಲೇಬೇಕಾದ ಒತ್ತಡ ಅಮೆರಿಕಾದಲ್ಲಿ ಏರ್ಪಟ್ಟಿದೆ. ಸರ್ವಾಧಿಕಾರಿ ವ್ಯವಸ್ಥೆ ಅಲ್ಲಿದ್ದಿದ್ದರೆ ಈ ಅಗತ್ಯವೇ ಇರುತ್ತಿರಲಿಲ್ಲ- ಯಾಕೆಂದರೆ ಅಲ್ಪಸಂಖ್ಯಾತ ಕರಿಯರ ಓಟಿನ ಅಗತ್ಯವೇ ಇರುತ್ತಿರಲಿಲ್ಲ.

ಇದು ಸಾಧ್ಯವಾದ್ದು ಆಂದೋಳನದಿಂದ- ಗಾಂಧಿವಾದಿಯಾಗಿದ್ದ ಮಾರ್ಟಿನ್ ಲೂಥರ್ ಕಿಂಗ್ ನಡೆಸಿದ ಆಂದೋಳನದಿಂದ. ಬಿಳಿಯರ ಕಣ್ಣಿನಲ್ಲಿ ದೃಢ ಬಲಪಂಥೀಯನಂತೆ ಕಾಣುತ್ತಿದ್ದ ಜಾನ್‌ಸನ್ ಪ್ರೆಸಿಡೆಂಟಾಗಿದ್ದಾಗ ಮಾರ್ಟಿನ ಲೂಥರ್ ಕಿಂಗ್‌ಗೆ ಗುಟ್ಟಾಗಿ ಹೀಗೆ ಹೇಳಿದನಂತೆ: “Martin, Push me” ಮಾರ್ಟಿನ್ ನನ್ನ ಮೇಲೆ ಒತ್ತಡ ತಾ. ಒತ್ತಡವಿಲ್ಲದ ಹೊರತು ಅಧಿಕಾರದಲ್ಲಿರುವಾತ ಬಹು ಸಂಖ್ಯಾತರಿಗೆ ಸದ್ಯ ಅಪ್ರಿಯವಾದ್ದನ್ನು ಮಾಡಲಾರ. ಸ್ವಯಂ ಸ್ಫೂರ್ತಿಯಿಂದ ಹಾಗೆ ಮಾಡಿದವರು ಚರಿತ್ರೆಯಲ್ಲಿ ಇದ್ದಾರೆ – ಆದರೆ ಕಡಿಮೆ. ಜಾನ್‌ಸನ್‌ಗೆ ನೆವಬೇಕು – ‘ನೋಡಿ ನಾನೇನು ಮಾಡಲಿ, ಅಂಥ ಒತ್ತಡ ನನ್ನ ಮೇಲಿದೆ’ ಎಂದು ಹೇಳುವುದು ಸಾಧ್ಯವಾಗಬೇಕು. ಆಗ ಓಟಿನ ಶಕ್ತಿ ಪಡೆದ ಕರಿಯರು ಅಷ್ಟಿಷ್ಟು ಗಿಟ್ಟಿಸಿಕೊಂಡಾರು. ಅಂದರೆ, ವ್ಯವಸ್ಥೆಯ ಸಮತೋಲ ಕಾಯಲೋಸುಗ ‘ಅಷ್ಟು’ ಒತ್ತಡವಿದ್ದರೆ ‘ಇಷ್ಟು’ – ಎಲ್ಲ ವ್ಯವಸ್ಥೆಯ ಪಾಡೇ ಹಾಗೆ.

ಕರಿಯರ ಪ್ರಶ್ನೆ ಮಾತ್ರವಲ್ಲ- ಅಣ್ವಸ್ತ್ರ ನಿಷೇಧದ ಪ್ರಶ್ನೆ, ಮೂರನೇ ಜಗತ್ತಿನ ನ್ಯಾಯ ಒದಗಿಸುವ ಸಮಸ್ಯೆ ಇತ್ಯಾದಿ ಆಳುವವರಿಗೆ ಅಪ್ರಿಯವಾದ ಸಂಗತಿಗಳು ಇವತ್ತು ಅಷ್ಟಿಷ್ಟು ಗೆದ್ದಿರುವುದು ಪಕ್ಷಾತೀತ ಆಂದೋಳನಗಳಿಂದಾಗಿ; ಅಧಿಕಾರಕ್ಕೆ ಬರುವ ಟಕ್ಕ ಟಿಕ್ಕರ ಪಕ್ಷಗಳ ಐಡಿಯಾಲಜಿಯಿಂದಾಗಿ ಅಲ್ಲ. ಪಕ್ಷಾತೀತ ಆಂದೋಳನಗಳು ಹೊರಗಿಂದ ತರುವ ಒತ್ತಡದಿಂದಾಗಿ ಅಧಿಕಾರ ಹಿಡಿಯುವ ಎಲ್ಲ ಪಕ್ಷಗಳೂ ಘನೋದ್ದೇಶಗಳನ್ನು, ಬಹುಸಂಖ್ಯಾತರಿಗೆ ಅಪ್ರಿಯವಾದ್ದನ್ನು ಕಿಂಚಿತ್ತಾದರೂ ಮೈಗೂಡಿಸಿಕೊಳ್ಳಲೇಬೇಕಾಗುತ್ತದೆ.

* * *

ಕರ್ನಾಟಕದಲ್ಲಿ ಅಂಥ ಶಕ್ತಿ ಪಡೆದಿರುವ ಆಂದೋಳನಗಳೆಂದರೆ ರೈತರದು ಮತ್ತು ದಲಿತರದು. ರೈತ ಸಂಘ ಹಳ್ಳಿಯ ಜನರಲ್ಲಿ ಹೊಸ ಜಾಗೃತಿ ಮೂಡಿಸಿತು. ಆದರೆ ವರ್ಗಹಿತ ಸಾಧನೆಯ ಕಾರ್ಯಕ್ರಮಗಳ ಬಗ್ಗೆ ಏನೇ ಭಿನ್ನಾಭಿಪ್ರಾಯವಿರಲಿ, ಸರ್ಕಾರದ ಅಧಿಕಾರಿಗಳ ಧಿಮಾಕು ಭ್ರಷ್ಟಾಚಾರಗಳನ್ನು ಹತ್ತಿಕ್ಕುವಲ್ಲಿ ಅದರ ಸಾಧನೆ ಮಹತ್ವದ್ದು. ಪಟ್ಟಣದಲ್ಲಿ ಬದುಕುವ ಒಬ್ಬ ನೌಕರನಿಗೆ ಹೋಲಿಸಿದರೂ ಹಳ್ಳಿಯಲ್ಲಿ ಅನುಕೂಲವಂತ ಎನ್ನಿಸಿಕೊಳ್ಳುವವನು ಹೆಚ್ಚು ಕಷ್ಟದಲ್ಲೂ, ಆತಂಕದಲ್ಲೂ, ಪ್ರಕೃತಿಯ ಕೃಪೆಗೂ ವಿಕೋಪಕ್ಕೂ ಅಧೀನನಾಗಿಯೂ ಬದುಕುತ್ತಿರುತ್ತಾನೆ ಎಂಬುದು ಸತ್ಯ. ತನ್ನ ಆವರಣದಲ್ಲಿ ಅವರು ಕ್ರೂರಿಯೇ; ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆಯಿಂದ ಕ್ರಮೇಣ ತನ್ನ ಅಧಿಕಾರ ಸಡಿಲಗೊಳ್ಳುತ್ತಿರುವುದರಿಂದಾಗಿ ಮಾನಸಿಕವಾಗಿ ಪ್ರಕ್ಷುಬ್ದ ಕೂಡ ಅವನು. ಆದರೆ ದೇಶದ ಪ್ರಸ್ತುತ ಚಲನೆಯ ಹಿಂದಿರುವ ಪ್ರೇರಣೆ ಅನುಕೂಲವಂತ ಪಟ್ಟಣಿಗರದು. ಅದರ ಹಿಂದಿರುವ ಶಕ್ತಿ ಬಂಡವಾಳ ಶಾಹಿಯದು, ಅಂತರ್ ರಾಷ್ಟ್ರೀಯ ಸಂಬಂಧ ಪಡೆದ ಮಾಲೀಕರ ಕೆಲವು ಕುಟುಂಬಗಳದು. ಹಳ್ಳಿಯ ಶ್ರೀಮಂತನ ಪ್ರತ್ಯಕ್ಷ ಕ್ರೌರ್ಯವನ್ನು ನಮ್ಮ ಪ್ರಗತಿಶೀಲರು ತಿಳಿದು ವಿರೋಧಿಸುವಷ್ಟು, ತಂತ್ರಕೌಶಲ ಪಡೆದ ಆಧುನೀಕರಣದ ವಾದಿಗಳಿಂದ ಉಂಟಾಗುವ ಕ್ರೌರ್ಯವನ್ನು ಅರ್ಥ ಕೂಡ ಮಾಡಿಕೊಂಡಿಲ್ಲ. ಒಂದು ಮೂರ್ಖ, ಇನ್ನೊಂದು ಜಾಣ. ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವಾಗ ಗಾಂಧೀಜಿ ಏಕಕಾಲದಲ್ಲಿ ಇಡೀ ದೇಶದ ವೈರಿಯಾದ ಬ್ರಿಟಿಷರನ್ನೂ, ದೇಶದೊಳಗೇ ದಲಿತರ ಏಳಿಗೆಗೆ ಕಂಟಕ ಪ್ರಾಯವಾದ ಸವರ್ಣೀಯನ ಮೂರ್ಖತನವನ್ನೂ ಒಟ್ಟಾಗಿ ವಿರೋಧಿಸಿದರು. ದೇಶದ ಒಗ್ಗಟ್ಟಿಗೆ ಇದು ಭಂಗ ತಂದೀತೆಂಬ ಹಲವರು ಆತಂಕವನ್ನು ನಿರ್ಲಕ್ಷಿಸಿ ಎರಡು ಹೋರಾಟಗಳನ್ನೂ ನಡೆಸಿದರು. ರೈತ ಸಂಘ ಇಂಥ ಕೆಲಸ ಮಾಡಬಹುದಿತ್ತು; ಆದರೆ ಮಾಡಲಿಲ್ಲ, ಹೀಗೆಂದು ಕೊಳ್ಳುವಾಗಲೂ, ನಾವು ಒಟ್ಟು ಭ್ರಷ್ಟಾಚಾರದ ವಿರುದ್ಧ ಅದು ಹಳ್ಳಿಯನ್ನು ಸಂಘಟಿಸಿದ ಮಹತ್ವದ ಸಾಧನೆಗೆ ಭಂಗ ಬರದಂತೆ ಟೀಕಿಸಬೇಕು.

ಅಧಿಕಾರದಲ್ಲಿರುವ ಯಾವ ಪಕ್ಷವನ್ನೇ ಆಗಲಿ ಹತೋಟಿಯಲ್ಲಿಡುವ ಶಕ್ತಿಯನ್ನು ಬೆಳೆಸಿಕೊಂಡು ಹೋಗುತ್ತಿದ್ದ ಈ ಸಂಘಟನೆ ಇದ್ದಕ್ಕಿದ್ದಂತೆ ದುರ್ಬಲವಾದದ್ದು ಈ ಕಾಲದ ದೊಡ್ಡ ದುರಂತ. ಇದಕ್ಕೆ ಕಾರಣ; ರೈತ ಸಂಘವೂ ಚುನಾವಣೆಯ ಕಣಕ್ಕೆ ಇಳಿದದ್ದು; ಸಮೂಹ ಪಕ್ಷದ ಜೊತೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ್ದು. ತನ್ನ ಕೆಲವು ನಾಯಕರ ಈ ತಪ್ಪಿನಿಂದಾಗಿ ರೈತ ಸಂಘಟನೆ ಸದ್ಯ ದುರ್ಬಲವಾಗಿದೆ. ಆದರೆ ದಲಿತ ಸಂಘಟನೆ ನೇರವಾಗಿ ಚುನಾವಣೆಗೆ ಇಳಿಯದೆ ಇದ್ದುದ್ದರಿಂದ, ಹೊರಗಿದ್ದು ಜನತಾವನ್ನು ಬೆಂಭಲಿಸಿದ್ದರಿಂದ ಆಳ್ವಿಕೆಯ ಮೇಲೆ ಒತ್ತಡ ತರುವ ತನ್ನ ಶಕ್ತಿಯನ್ನು ಉಳಿಸಿಕೊಂಡಿದೆ.

ರೈತ ಸಂಘವೂ, ದಲಿತ ಸಂಘರ್ಷ ಸಮಿತಿಯೂ ಪರಸ್ಪರ ವಿರೋಧಿಗಳಾಗಿಯೇ ಉಳಿಯಬೇಕಿಲ್ಲ. ಅಧಿಕಾರಶಾಹಿಯ ಭ್ರಷ್ಟಾಚಾರ, ಪರಿಸರ ಸಂರಕ್ಷಣೆ, ಕಂಪ್ಯೂಟರ್ ಮೋಹದ ಆಧುನಿಕತೆ- ಇವುಗಳ ವಿರುದ್ಧ ಈ ಎರಡು ಸಂಘಟನೆಗಳೂ ಒಟ್ಟಾಗಿ ಕೆಲಸ ಮಾಡಬಹುದು. ಪ್ರಜಾತಂತ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೇ ಬರಲಿ ಈ ಸಂಘಟನೆಗಳು ಬೆಳೆಸುವ ಜಾಗೃತಿ ಆಳುವವರನ್ನು ಎಚ್ಚರವಾಗಿ ಇಡಬಲ್ಲವು.

* * *

ಭಾರತದ ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಿನಲ್ಲಿ – ತಾವು ಗಾಂಧಿವಾದಿಗಳೆಂದು ಘೋಷಿಸಿಕೊಳ್ಳುವವರೂ ಕೂಡ- ಆಧುನೀಕರಣದ ವಾದಿಗಳೇ. ಬಹ್ಯುತ್ಪನ್ನವನ್ನು ಸಾಧ್ಯಗೊಳಿಸುವ, ತಂತ್ರಜ್ಞಾನದಲ್ಲಿ ಭಾರತ ಯುರೋಪಿಗೆ ಸರಿದೊರೆಯಾಗುವ ಕನಸನ್ನು ನೈಜಗೊಳಿಸಲು ಹಾಕಿಕೊಳ್ಳುವ ಕಾರ್ಯಕ್ರಮಗಳಲ್ಲಿ ವ್ಯತ್ಯಾಸಗಳಿದ್ದವು ಅಷ್ಟೇ. ರಾಜಕೀಯ ಪಕ್ಷಗಳಷ್ಟೇ ಅಲ್ಲ, ಪೇಟೆಯ ರುಚಿಕಂಡ ಎಲ್ಲ ಜನರ ಆಶೋತ್ತರಗಳು ಹರಿಯುವುದು ಕೂಡ ಈ ದಿಕ್ಕಿನಲ್ಲೇ. ಲೂಟಿ ಮಾಡಲು ವಸಾಹತುಗಳಿಲ್ಲದ, ಒಣಗಿದ ಕೈಕಾಲುಗಳನ್ನಷ್ಟೇ ಆಸ್ತಿಯಾಗಿ ಪಡೆದ ಅಪಾರ ಜನಸಂಖ್ಯೆಯಿರುವ ರಾಷ್ಟ್ರದಲ್ಲಿ ಈ ಆಸೆ ಆತ್ಮಹತ್ಯೆಗೆ ದಾರಿಯಾದೀತೆಂಬ ಆತಂಕ ಕೂಡ ಕೇವಲ ಮಾತಿನಲ್ಲಿ ವ್ಯಕ್ತವಾಗುವಂಥದು- ಕೃತಿಯಲ್ಲಿ ಆಗುತ್ತಿಲ್ಲ. ಮಹಾತ್ಮ ಗಾಂಧಿಯ ಪರ‍್ಯಾಯ ನಾಗರಿಕತೆಯ ತಪಸ್ಸು ಕೂಡ ಅಸ್ತಿತ್ವಕ್ಕೆ ತಂದದ್ದು ನೆಹರೂ ರಾಜ್ಯವನ್ನು.

ಸಮಾಜವಾದದ ಮೂಲಕ ಆಧುನೀಕರಣ ಮಾಡಬೇಕೆನ್ನುವ ರಷ್ಯನ್ ಬಗೆಯ ಅಥವಾ ಚೀನೀ ಮಾದರಿಯ ಮಾರ್ಕ್ಸಿಸ್ಟರಾಗಲೀ, ಸಂಪತ್ತಿನ ಸಂಗ್ರಹ ತಾನಾಗಿಯೇ ಸಾಮಾಜಿಕ ನ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನಂಬುವ (ನಟಿಸುವ?) ಬಂಡವಾಳ ಶಾಹಿವಾದಿಗಳಾಗಲಿ ತಲುಪಲು ಇಚ್ಛಿಸುವ ಗುರಿ ಒಂದೇ; ಮಾನವನ ಅಹಂಕಾರವನ್ನು ಅವಿಚ್ಛಿನ್ನವಾಗಿ ಬೆಳೆಸಬಲ್ಲ ತಂತ್ರಜ್ಞಾನ ಸಾಧ್ಯಗೊಳಿಸುವ ಆಧುನೀಕರಣದ ವ್ಯವಸ್ಥೇಯನ್ನು. ಈಗ, ಇಲ್ಲೇ ಬದುಕಿ ಸಾಯುವ ಪ್ರಾಣಿಗೆ ಈಗ ಇಲ್ಲೇ, ಸಫಲತೆ ದೊರೆಯಬೇಕೆಂಬ ಹಂಬಲ ಇನ್ನೆಂದೋ ಮುಟ್ಟುವ ಗುರಿಯಲ್ಲೇ ಸಾರ್ಥಕತೆ ಹುಡುಕುವ ಮನೋಭಾವದವರಿಗೆ ನೈಜವಾಗಿ ಇರುವುದು ಸಾಧ್ಯವಿಲ್ಲ. ನಾವೆಲ್ಲರೂ ಯಾವ ಕ್ಷಣವಾದರೂ ಸಾಯಬಹುದು ಎಂಬ ಅರಿವಿನ ಕೇಂದ್ರದಿಂದಲೇ ಹುಟ್ಟಬಹುದಾದ ಜೀವನ ಪ್ರೀತಿ, ಪ್ರಕೃತಿಯ ಬಗ್ಗೆ ಬೆರಗು, ಸರ್ವ ಭೂತದಯೆ – ಇವುಗಳನ್ನು ಪೋಷಿಸಬಲ್ಲ ಆವರಣದಲ್ಲಿ ನಾವು ಬೆಳೆಯುತ್ತಿಲ್ಲ. ಈ ಭಾವನೆಗಳನ್ನು ಜಾಗೃತಗೊಳಿಸಬಲ್ಲ ಭಾರತದ ಮತ ಧರ್ಮಗಳು ತಮ್ಮ ಅಂತಃಸ್ಸತ್ವ ಕಳೆದುಕೊಂಡಿದೆ. ಶಿವಬಾಲಯೋಗಿಗಳು ಬರಬಹುದಾದ ಮಳೆಗಾಗಿ ಕ್ಯಾಮರಾದೆದುರು ತಪಸ್ಸು ಮಾಡುತ್ತಾರೆ; ಭಯೋತ್ಪಾದಕ ಚಟುವಟಿಕೆಯಲ್ಲಿ ತಮ್ಮ ಮಾನವತ್ವ ಕಳೆದುಕೊಳ್ಳುತ್ತಿರುವ ಸಿಖ್ಖರ ಹೃದಯ ಪರಿವರ್ತನೆಗಾಗಿ ಪ್ರಾರ್ಥನೆ ಮಾಡುವವರಿಲ್ಲ. ದೆಹಲಿಯಲ್ಲಿ ಸಿಖ್ ಜನಾಂಗದ ಹತ್ಯೆಗೆ ಕಾರಣರಾದ ಮೂರ್ಖರನ್ನು ಯಾವ ಮತಧರ್ಮಗಳ ಮುಖಂಡರೂ ತಡೆಯಲಿಲ್ಲ. ಗುಜರಾತ್‌ನಲ್ಲಿ ಹಿಂದುಳಿದವರ ವಿರುದ್ಧ, ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ಎದುರಿಸಲು ಗಾಂಧೀಜಿ ಪಾದಯಾತ್ರೆ ಹೋದಂತೆ, ಸ್ವರ್ಣಮಂದಿರಲ್ಲಿ ಬುಸುಗುಡುತ್ತಿದ್ದ ಹಿಂಸೆಯನ್ನು ಅಹಿಂಸಾತ್ಮಕ ಸತ್ಯಾಗ್ರಹದಿಂದ ಶಮನಗೊಳಿಸಲು ಯಾವ ಪ್ರಯತ್ನವೂ ನಡೆಯಲಿಲ್ಲ. ಮತ್ತು ಈ ವಿಷಯದಲ್ಲಿ ನಾವು ಹೀಗೆ ಬರಿದೇ ಮಾತಾಡುವುದೂ ಸರಿಯಲ್ಲ. ಯಾಕೆಂದರೆ, ನಾನಾಗಲೀ ನೀವಾಗಲೀ ಇಂಥ ಕೆಲಸಕ್ಕೆ ಮುಂದಾಗಲಿಲ್ಲ. ನಮ್ಮೆಲ್ಲರನ್ನೂ ಗಾಂಧೀಜಿ ಹೊತ್ತಿಸಿದ್ದ ದೀಪವೊಂದು ಈಗ ನಂದಿ ಹೋಗಿದೆ. ನಮ್ಮ ಪಾರಮಾರ್ಥಿಕತೆ ಪೊಳ್ಳಾಗಿದೆ. ನಾನು ನೀವು ನಿಜವಾಗಿ ಬಯಸುವುದು ಆಧುನೀಕರಣ ತರುವ ಸವಲತ್ತುಗಳನ್ನು ಮತ್ತು ನಾವೆಲ್ಲರೂ ಯಾವತ್ತಾದರೂ ಸಾಯಬಹುದೆಂಬ ಮೃತ್ಯುಪ್ರಜ್ಞೆಯನ್ನು ಹಿತಕರವಾಗಿ ಮರೆಸಬಲ್ಲ ಉಪಕರಣಗಳ ನಡುವೆ ಭ್ರಮಿತರಾಗಿ ಬದುಕುವುದನ್ನು.

* * *

ಆದರೆ ಅದೃಷ್ಟವಶಾತ್ ನಮ್ಮ ಆಸೆಗೆ ಕೆಲವು ತೊಡಕುಗಳಿವೆ. ಮಿತಾಪೇಕ್ಷೆಯ ಬಡಜನರು; ತಮ್ಮ ತಮ್ಮ ಭಾಷೆಗಳಿಗೆ ಅಂಟಿಕೊಂಡವರು; ಇನ್ನು ಹೆಚ್ಚು ಬೆಳೆಯಲಾರದ ನಗರಗಳು; ತುಟ್ಟಿಯಾಗುತ್ತ ಬತ್ತುತ್ತ ಹೋಗುವ ಇಂಧನಗಳು; ಕಾಡು ಕಡಿಯದೆ ಅಣೆಕಟ್ಟುಗಳನ್ನು ಕಟ್ಟಲಾರದ, ಕಾಡು ಕಡಿದರೆ ಅಣೆಕಟ್ಟು ತುಂಬಲಾರದ ವಿರೋಧಾಭಾಸಗಳು – ತೊಡಕುಗಳಲ್ಲಿಯೇ ನಮ್ಮನ್ನು ಸರ್ವನಾಶದಿಂದ ಕಾಪಾಡಬಲ್ಲ ಸುಳಿವು ಹೊಳಹುಗಳು ಇರಬಹುದೇನೋ, ನಮಗೆ ಅಣ್ವಸ್ತ್ರಬೇಡ, ನಾವು ಪಾಕಿಸ್ತಾನದ ಜೊತೆ ಮೈತ್ರಿಯಿಂದಿರುತ್ತೇವೆ; ನಮಗೆ ಅಣುಶಕ್ತಿಯಿಂದ ಉತ್ಪಾದಿಸುವ ವಿದ್ಯುಚ್ಛಕ್ತಿ ಬೇಡ, ರಾಗಿ ಬೆಳೆಯುವಲ್ಲಿ ನೀಲಗಿರಿ ಬೇಡ, ಕಾಡು ಕಡಿಯುವುದು ಬೇಡ, ಈ ಜಗತ್ತು ಮನುಷ್ಯನಿಗೆ ಮಾತ್ರವಲ್ಲ, ಪಶುಪಕ್ಷಿ ವೃಕ್ಷಗಳಿಗೂ ಇಲ್ಲಿರುವ ಹಕ್ಕಿದೆ. ಮಾತ್ರವಲ್ಲ ಅವಿದ್ದರೆ ನಾವಿರುತ್ತೇವೆ- ಇತ್ಯಾದಿ ಅನ್ನಿಸಿಕೆಗಳಲ್ಲೇ ಈ ಕಾಲದ ಅತ್ಯಂತ ಧಾರ್ಮಿಕವಾದ ಭಾವನೆಗಳು ವ್ಯಕ್ತವಾಗುತ್ತಿರುವುದು, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳನ್ನೆಲ್ಲ ವ್ಯಾಪಿಸಬಲ್ಲ ಈ ಕಾಲದ ನೈಜ ಧಾರ್ಮಿಕ ಭಾವನೆಯ ಉಗಮ ಈ ದಿಕ್ಕಿನಲ್ಲಿದೆ. ಇಲ್ಲಿ ಬೆಳೆಯುವ ಒತ್ತಡ ಮಾತ್ರ ದರ್ಪ ಮತ್ತು ದಮನಗಳನ್ನು ತನ್ನ ಸ್ವಭಾವಕ್ಕೆ ಸಹಜವೆನ್ನಿಸುವಂತೆ ಬೆಳೆಸಿಕೊಳ್ಳುತ್ತ ಹೋಗುವ ಪ್ರಭುತ್ವಕ್ಕೆ ಕಡಿವಾಣವಾಗಬಲ್ಲದು.

ಮನುಷ್ಯನ ಆತ್ಮವನ್ನು ಕುಬ್ಜಗೊಳಿಸುವ ದಾರಿದ್ರ್ಯ ದೈನ್ಯಗಳಿಂದ ನಮ್ಮ ಜನ ಮುಕ್ತರಾದರೆ ಸಾಕು; ಐರೋಪ್ಯರ ರೀತಿಯ ಸಮೃದ್ಧಿ ನಮಗೆ ಬೇಕಿಲ್ಲ – ಅದು ಮನುಷ್ಯನ ಸುಖಕ್ಕೆ ಅಗತ್ಯವೂ ಅಲ್ಲ ಎಂಬ ದೃಢಚಿತ್ತದ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳನ್ನು ಒತ್ತಾಯಿಸುವುದು ಸಾಧ್ಯವೇ? ಕನ್ನಡ ಜನ ತಮ್ಮ ಜನತಾ ಸರ್ಕಾರವನ್ನು ಹೀಗೆ ಒತ್ತಾಯಿಸಬಲ್ಲರೇ?….

ಇದು ವಿರೋಧಾಭಾಸವೆನ್ನಿಸಬಹುದು; ಆದರೆ ಸಾತ್ವಿಕ ಭಾವದಿಂದ ರಾಜಕೀಯದಲ್ಲಿ ಆಸಕ್ತರಾದವರೆಲ್ಲ ನಿಜವಾಗಿಯೂ ಶ್ರಮಿಸುವುದು ರಾಜಕೀಯ ಪ್ರಭುತ್ವದ ಶಕ್ತಿಯನ್ನು ಕಡಿಮೆ ಮಾಡುವುದಕ್ಕಾಗಿ; ಏಕಾಂತಕ್ಕೆ ಎಡೆಯಿಲ್ಲದಂತೆ ರಾಜಕೀಯ ಮನುಷ್ಯನನ್ನು ಆಕ್ರಮಣ ಮಾಡದಂತೆ ತಡೆಯುವುದಕ್ಕಾಗಿ ಮನುಷ್ಯನ ಇಹ-ಪರ ಆಕಾಂಕ್ಷೆಗಳು, ಅಗತ್ಯಗಳು-ಎಲ್ಲವೂ ತಮಗೆ ಸೈದ್ದಾಂತಿಕವಾಗಿ ಅರ್ಥವಾಗುವುದರಿಂದ ಅವುಗಳನ್ನು ನಿಶ್ಚಿತ ದಿಕ್ಕಿನಲ್ಲಿ, ರೈತಕಾರ್ಮಿಕ ಹಿತದ ಮಂಚೂಣಿಯಲ್ಲಿರುವ ಪಕ್ಷವಾಗಿ ಕಟ್ಟುವುದು ಸಾಧ್ಯವೆಂಬ ಭ್ರಮೆಯ ‘ಸೈಂಟಿಪಿಕ್ ಕಮ್ಯುನಿಸ್ಟರು’, ಮನುಷ್ಯನ ಆಸೆಬುರುಕತನವನ್ನು ಎಷ್ಟೆಂದರಷ್ಟು ಹೆಚ್ಚಿಸಲೆಂದೇ ಸಂಪತ್ತನ್ನು ಬೆಳೆಸಲು ಹೊಂಚುವ ಕ್ಯಾಪಿಟಲಿಸ್ಟರು- ಈ ಎರಡು ಮನೋಧರ್ಮದವರೂ ಮನುಷ್ಯನ ಏಕಾಂತದ ಬಯಕೆಯನ್ನು ಸಂಶಯದಿಂದ ನೋಡುವವರೇ. ಸಮಾಜ ವ್ಯವಸ್ಥೆ ಸಂಕೀರ್ಣಗೊಂಡಂತೆ ಅದನ್ನು ನಿಯಮದಲ್ಲಿಡುವ ಅಗತ್ಯ ಹೆಚ್ಚುತ್ತಾ ಹೋದಂತೆ ವ್ಯಕ್ತಿಯ ಖಾಸಗಿತನದ ಮೇಲಿನ ಅಕ್ರಮಣ ಅಸಹನೀಯವಾಗಿ ಬೆಳೆಯುತ್ತದೆ. ಆದರೆ ಜೀವನದ ಕೊಡುಕೊಳ್ಳುವ ವ್ಯಾಪಾರದಲ್ಲಿ ಗ್ರಹಿಸಿದ್ದನ್ನು ಏಕಾಂತದಲ್ಲಿ ಗಾಢಗೊಳಿಸಿಕೊಂಡು, ತನ್ನ ಶಕ್ತಿಗನುಗುಣವಾಗಿ ಸತ್ಯದರ್ಶನ ಮಾಡುವ ಕಲಾವಿದ, ತತ್ವಜ್ಞಾನಿ, ವಿಜ್ಞಾನಿ, ಸಂತ – ಈ ಎಲ್ಲರೂ ಪೆಡಂಭೂತದಂತೆ ಜೀವನದ ಸರ್ವ ವ್ಯಾಪಾರಗಳನ್ನೂ ಆವರಿಸಿಕೊಳ್ಳುತ್ತ ಹೋಗುವ ರಾಜಕೀಯವನ್ನು ಸಂಶಯದಿಂದ ನೋಡುವವರೇ…

* * *

ಅಬ್ದುಲ್ ಹಲೀಮ್ ಶರರ್ ಬರೆದ ಪುರಾತನ ಲಖನೌ (ನ್ಯಾಷನಲ್ ಬುಕ್ ಟ್ರಸ್ಟ್) ನಲ್ಲಿರುವ ಈ ವೃತ್ತಾಂತ ಕೇಳಿ; ೧೮ನೇ ಶತಮಾನದಲ್ಲಿ ನಡೆದ ಸಂಗತಿ ಇದು.

ಗಾಜೀ ಉದ್ದೀನ ಹೈದರನ ಕಾಲದಲ್ಲಿ ಈ ಕಲೆಯ ಬಹುದೊಡ್ಡ ವಿದ್ವಾಂಸ ಹೈದರೀ ಲಖನೌದಲ್ಲಿದ್ದ. ಈತ ಗೋಲಾಗಂಜದಲ್ಲಿರುತ್ತಿದ್ದ. ಗಾಜೀ ಉದ್ದೀನ ಹೈದರನ ಇವನ ಸಂಗೀತವೆಂದರೆ ಅಪಾರ ಪ್ರೀತಿ. ಆದರೆ ಎಂದೂ ಅವನ ಸಂಗೀತ ಕೇಳುವ ಅವಕಾಶವೇ ಸಿಕ್ಕಿರಲಿಲ್ಲ. ಒಂದು ದಿನ ಸಾಯಂಕಾಲದಲ್ಲಿ ಗಾಜೀ ಉದ್ದಿನ ಹೈದರ ನದಿಯ ತೀರದ ಮೇಲೆ ವಾಯುಸೇವನೆಗೆ ಹೊರಟಿದ್ದ. ರೋಮಿ ಕಮಾನಿನ ಹತ್ತಿರ ಗವಾಯಿ ಹೈದರೀ ಹೋಗುವುದನ್ನು ಜನ ನೋಡಿ ಬಾದಶಾಹರಲ್ಲಿ ‘ಪ್ರಭು, ಹೈದರೀ ಖಾನ್ ಗವಾಯಿ ಇವನೇ’ ಎಂದು ಬಿನ್ನವಿಸಿಕೊಂಡನು. ಅವನ ಸಂಗೀತ ಕೇಳುವ ಉತ್ಸುಕತೆ ಬಾದಶಾಹನಿಗೆ ಎಂದಿನಿಂದಲೂ ಇದ್ದೇ ಇತ್ತು. ಕೂಡಲೇ ಕರೆತರಿಸಿದ. ಜನ ಹಿಡಿದು ತಂದು ನಿಲ್ಲಿಸಿದರು. ಆಗ ಬಾದಶಹ ‘ಮಿಯ್ಯಾ ಹೈದರೀ, ನೀನು ನಿನ್ನ ಸಂಗೀತ ನಮಗೆ ಕೇಳಿಸುವುದಿಲ್ಲವೆ?, ಎಂದ. ಅದಕ್ಕೆ ಅವನು ‘ಅದಕ್ಕೇನಂತೆ, ಅವಶ್ಯ ಕೇಳಿಸುತ್ತೇನೆ; ಆದರೆ ನನಗೆ ನಿಮ್ಮ ಮನೆ ಗೊತ್ತಿಲ್ಲ’ ಎಂದ. ಈ ಮಾತು ಕೇಳಿದ ಬಾದಶಾಹ ಮುಗುಳ್ನಕ್ಕು, ‘ನೀನು ನನ್ನೊಂದಿಗೆ ಬಾ’ ನಾವು ಸ್ವತಃ ನಿನ್ನನ್ನು ನಮ್ಮ ಮನೆಗೆ ಕರೆದೊಯ್ಯುತ್ತೇವೆ ಎಂದ. ‘ಬಹಳ ಒಳ್ಳೇದು, ಎಂದು ಹೇಳುತ್ತ ಅವರೊಂದಿಗೆ ಹೈದರೀ ಹೊರಟ. ದಾರಿಯಲ್ಲಿ ಒಮ್ಮೆಲೆ ‘ನಿಮ್ಮೊಂದಿಗೆ ಬರುತ್ತೇನೆ. ಆದರೆ ನನಗೆ ಪೂರಿ ಹಾಗೂ ಬಾಸುಂದಿ ತಿನ್ನಿಸಿದರೆ ಹಾಡುವೆ’ ಎಂದ. ಬಾದಶಾಹ ಅದಕ್ಕೆ ಒಪ್ಪಿದ. ಅರಮನೆಗೆ ಬಂದು ಹೈದರೀ ಹಾಡುಗಾರಿಕೆ ಆರಂಭಿಸಿದ. ಬಾದಶಾಹ ತನ್ಮಯತೆಯಿಂದ ಕೇಳುತ್ತಲಿದ್ದ. ಕೇಳುತ್ತಿದ್ದಂತೆ ಬಾದಶಾಹ ಎಚ್ಚರ ತಪ್ಪಿದವನಂತೆ ಆಡತೊಡಗಿದ. ಇದನ್ನು ಕಂಡ ಹೈದರೀ ಹಾಡನ್ನು ನಿಲ್ಲಿಸಿದ. ಕೆಲಹೊತ್ತಿನ ನಂತರ ಎಚ್ಚೆತ್ತ ಬಾದಶಾಹ ಮತ್ತೆ ಹಾಡಲು ಹೇಳಿದ. ಆಗ ಹೈದರೀ ‘ನಿಮ್ಮ ಬಾಯಲ್ಲಿರುವ ತಂಬಾಕು ತುಂಬ ಚೆನ್ನಾಗಿದೆಯೆಂದು ತೋರುತ್ತದೆ. ಇದನ್ನು ಯಾರ ಅಂಗಡಿಯಿಂದ ತರಿಸುತ್ತೀರಿ?’ ಎಂದು ಕೇಳಿದ. ಅದಕ್ಕೆ ಬಾದಶಾಹ ಬಹಳ ಸಿಡಿಮಿಡಿಗೊಂಡ. ಆಗ ಅಧಿಕಾರಿಗಳು, ‘ಪಾಪ ತಾವು ಯಾರೆಂಬುದೇ ಅವನಿಗಿನ್ನೂ ಗೊತ್ತಾಗಿಲ್ಲವೆಂದು ತೋರುತ್ತದೆ, ಹುಜೂರು ಕ್ಷಮಿಸಿಬಿಡಿ’ ಎಂದು ಬಿನ್ನವಿಸಿಕೊಂಡರು.

ಬಾದಶಾಹನ ಅಪ್ಪಣೆಯ ಮೇರೆಗೆ ಹೈದರಿಯನ್ನು ಬೇರೆ ಕೋಣೆಗೆ ಕರೆದೊಯ್ದರು. ಅಲ್ಲಿ ಅವನಿಗೆ ಸಾಕಷ್ಟು ಪೂರಿ ಬಾಸುಂದಿ ತಿನ್ನಿಸಿದರು. ಹುಕ್ಕಾ ಸೇದಿಸಿದರು. ಪೂರಿ ಬಾಸುಂದಿಯನ್ನು (ತಾನು ಮಾಡುತ್ತ ಬಂದಿದ್ದ ಪದ್ಧತಿಯಂತೆ) ತನ್ನ ಹೆಂಡತಿಗೂ ಕಳಿಸಿಕೊಟ್ಟ. ಅವನು ಪೂರಿ ಬಾಸುಂದಿ ತಿನ್ನುವಲ್ಲಿ ನಿರತನಾಗಿದ್ದರೆ ಇತ್ತ ಬಾದಶಾಹರು ಮಾದಕ ಪಜೀಯ ಕುಡಿಯುವಲ್ಲಿ ನಿರತರಾಗಿದ್ದರು. ನಿಷೆ ಹೆಚ್ಚಾದಾಗ ಹೈದರೀಯ ನೆನಪಾಗಿ ಮತ್ತೆ ಕರೆಯಿಸಿ ಹಾಡುವಂತೆ ಆಜ್ಞಾಪಿಸುತ್ತ ‘ಹೈದರೀಖಾನ್, ನನಗೆ ನಿನ್ನ ಸಂಗೀತ ಕೇವಲ ಆನಂದ ನೀಡಿದರೆ ಸಾಲದು, ನನ್ನನ್ನು ಅಳುವಂತೆ ಮಾಡಬೇಕು. ಹಾಗೆ ಹಾಡು. ಇಲ್ಲದಿದ್ದರೆ ನಿನ್ನನ್ನು ಗೋಮತಿ ನದಿಯಲ್ಲಿ ಮುಳುಗಿಸಿ ಬಿಡುತ್ತೇನೆ. ಎಂದು ಎಚ್ಚರಿಕೆ ನೀಡಿದ. ಈಗ ಹೈದರೀಖಾನ್‌ನಿಗೆ ತಾನು ಇರುವುದು ಎಲ್ಲಿ ಯಾರ ಎದುರಿಗೆ ಎಂಬ ಕಲ್ಪನೆ ಬಂದಿರಬೇಕು. ಅಂತೇ ತುಂಬ ಎಚ್ಚರಿಕೆಯಿಂದ, ‘ಹುಜೂರು, ಭಗವಂತನಿದ್ದಾನೆ’ ಎನ್ನುತ್ತಾ ಹಾಡತೊಡಗಿದ. ಅದ್ಭುತವಾಗಿ ಹಾಡಿದ. ದೇವರ ದಯೆಯೆನ್ನಿ ಅಥವಾ ಹೈದರೀಖಾನನ ಆಯುಷ್ಯ ಗಟ್ಟಿ ಎನ್ನಿ, ಕೆಲವೇ ಕಾಲದಲ್ಲಿ ಬಾದಶಾಹನ ಮೇಲೆ ಅವನ ಸಂಗೀತ ಪ್ರಭಾವ ಬೀರತೊಡಗಿತು. ಹಾಗೂ ಬಾದಶಾಹ ಅಳುವಂತೆ ಮಾಡಿತು. ಬಾದಶಾಹ ಅವನ ಮಧುರ ಸಂಗೀತಕ್ಕೆ ಮನಸೋತು ‘ಹೈದರೀಖಾನ್, ಕೇಳು, ನಿನಗೆ ಏನುಬೇಕು ಕೇಳು’ ಎಂದಪ್ಪಣೆ ಮಾಡಿದ. ಅದಕ್ಕವನು ‘ನಾನು ಕೇಳಿದ್ದನ್ನು ಕೊಡುವಿರಾ ಹುಜೂರ್’? ಎಂದ. ಅದಕ್ಕೆ ಬಾದಶಾಹ ‘ಅವಶ್ಯ ಕೇಳು, ನೀನು ಕೇಳಿದ್ದನ್ನು ಕೊಡುವೆ, ಕೇಳು, ನಿನ್ನ ಸಂಗೀತ ನಮ್ಮನ್ನು ಮಂತ್ರಮುಗ್ಧಗೊಳಿಸಿದೆ, ಕೇಳು. ಏನು ಬೇಕಾದರೂ ಕೇಳು ಕೊಡುವೆ’ ಎಂದ. ಆಗ ಹೈದರೀ, “ಹುಜೂರ, ಇನ್ನೆಂದೂ ನನ್ನನ್ನು ತಮ್ಮಲ್ಲಿಗೆ ಕರೆಯಿಸಬೇಡಿ, ಹಾಗೂ ನನ್ನ ಸಂಗೀತ ಕೇಳಬೇಡಿ” ಎಂದ. ಬಾದಶಾಹನಿಗೆ ಈ ಮಾತು ತುಂಬ ಅಚ್ಚರಿಯನ್ನುಂಟುಮಾಡಿತು. ಅದಕ್ಕೆ ‘ಏಕೆ?’ ಎಂದು ಕೇಳಿದ. ಹೈದರೀ ನಿರ್ಭಯದೊಂದಿಗೆ ಹೀಗೆ ಹೇಳಿದ; ‘ತಮಗೇನು? ನನ್ನನ್ನು ಕೊಲ್ಲಿಸಿಬಿಡುವಿರಿ. ನನ್ನಂಥ ಹೈದರೀಖಾನ ಮತ್ತೆ ಹುಟ್ಟಲಾರ, ಅದೇ ತಾವು ಸತ್ತರೆ ಆ ಕೂಡಲೇ ಮತ್ತೋರ್ವ ಬಾದಶಾಹನಾಗುತ್ತಾನೆ’. ಈ ಉತ್ತರ ಕೇಳಿದ ಗಾಜೀ ಉದ್ದೀನ ತಳಮಳಿಸಿ ಮುಖ ಹೊರಳಿಸಿಕೊಂಡ. ಅತ್ತ ಹೈದರೀಖಾನ್ ಅಲ್ಲಿಂದ ಓಡಿಹೋಗಿ ತನ್ನ ಮನೆ ಸೇರಿಕೊಂಡ.

ರುಜುವಾತು೨೫, ಜನವರಿಮಾರ್ಚ್, ೮೫

* * *