ಕೆಲವು ಸೂತ್ರಗಳು ಮತ್ತು ಉತ್ತರಗಳು

 

೧. ಒಬ್ಬ ಅವಮಾನಿತ ವ್ಯಕ್ತಿ, ಸ್ವಾಭಿಮಾನಿಯೂ ಆದಾಗ ಹುಟ್ಟುವ ಸಾಹಿತ್ಯಕ್ಕೆ ಒಂದು ಗುಣವಿರುತ್ತದೆ. ಅದನ್ನು ನಾವು ಈ ಗುಣದಿಂದಾಗಿ, ಪ್ರತಿಭಟನಾ ಸಾಹಿತ್ಯವೆಂದು ಕರೆಯುತ್ತೇವೆ. ಧೋರಣೆ ಮತ್ತು ವಸ್ತುವಿನಲ್ಲಿ (ರೂಪದಲ್ಲಿ ಕೂಡ) ಈ ಬಗೆಯ ಸಾಹಿತ್ಯ ಓದುಗರಿಗೆ ನೆಮ್ಮದಿಯನ್ನು ಕೊಡಲು ನಿರಾಕರಿಸುತ್ತದೆ. ಕ್ಯಥಾರ‍್ಸಿಸ್‌ನಲ್ಲಿ ಅನುಕಂಪಿಸುವ ಓದುಗನ ಭಾವನಾಲೋಕ ಮೃದುವಾಗಿ ಶಮನಗೊಳ್ಳುವುದರತ್ತ ಈ ಬಗೆಯ ಕೃತಿಗಳು ಓದಿಸಿಕೊಳ್ಳುವುದಿಲ್ಲ. ನಮ್ಮ ಇರುವಿಕೆ, ಆಗುವಿಕೆಯ ಹಿಂದಿರುವ ಮೌಲ್ಯಗಳನ್ನೇ ಪ್ರಶ್ನಿಸುವಂತೆ ಈ ಕೃತಿಗಳು ಕೆಲಸ ಮಾಡುತ್ತವೆ.

೨. ಅವಮಾನಿತ ಸ್ವಾಭಿಮಾನಿಯಾದವನು ಅಸ್ಪೃಶ್ಯನೂ ಆಗಿದ್ದಲ್ಲಿ ನಮ್ಮ ದಲಿತ ಸಾಹಿತ್ಯ ಹುಟ್ಟಿ ಬರುತ್ತದೆ. ಆದ್ದರಿಂದ ಅವಮಾನಿತರ ಜಾಗತಿಕ ಸಾಹಿತ್ಯದ ನಡುವೆ ಈ ಸಾಹಿತ್ಯಕ್ಕೊಂದು ವಿಶಿಷ್ಟ ರೂಪವಿರುತ್ತದೆ.

೩. ಅಸ್ಪೃಶ್ಯನೊಬ್ಬ ತನ್ನ ಬಾಲ್ಯದಲ್ಲಿ  ಕೇವಲ ತನ್ನ ಮಾತೃಭಾಷೆಯ ಆವರಣದಲ್ಲಿ ಬೆಳೆದು, ತನ್ನ ಭಾವನೆಗಳನ್ನು ವಿಶ್ಲೇಷಣಾತ್ಮಕವಾಗಿ ತೋಡಿಕೊಳ್ಳದ, ತೋಡಿಕೊಳ್ಳಲಾಗದ ಕೌಟುಂಬಿಕ ಪರಿಸರದವನೂ ಆಗಿದ್ದಲ್ಲಿ ಒಂದು ವಿಶೇಷ ರೀತಿಯ ಸಂವೇದನೆ ಅವನದಾಗಿರುತ್ತದೆ. ಅಂದರೆ ಅದುಮಿಟ್ಟುಕೊಂಡ ನೋವು ರೂಪಕವಾಗಿ ಮಾತ್ರ ಹೊರಹೊಮ್ಮಬಹುದಾದ ಆತಂಕಪೂರ್ಣ ಮನಸ್ತಿತಿ ಅವನದಾಗಿರುತ್ತದೆ. ಹೀಗೆ ಅವಮಾನಿತ + ಸ್ವಾಭಿಮಾನಿ + ಅಸ್ಪೃಶ್ಯ + ಕೇವಲ ಒಂದು ಭಾಷೆಯಲ್ಲಿ ಬೆಳೆದವ + ವಿಶ್ಲೇಷಣಾತ್ಮಕವಾಗಿ ತನ್ನ ಬಗ್ಗೆಯೇ ಮಾತಾಡಿಕೊಳ್ಳಲಾರದ ಗುಣದ ಮನಸ್ಸಿನವ – ಈ ಎಲ್ಲ ಕಾರಣಗಳು ಒಟ್ಟಾಗಿ ಹುಟ್ಟು ಹಾಕುವ ಪ್ರತಿಭೆ ಅಸಾಮಾನ್ಯ ರೂಪಕ ಶಕ್ತಿಯೊಂದನ್ನು ಪಡೆದುಕೊಂಡಿರಲೇ ಬೇಕಾಗಿರುತ್ತದೆ. ರೂಪಕ ಅಲಂಕಾರವಾಗದೆ ಜೀವನದ ಮಾತಾಗಬೇಕಾದ ಅಗತ್ಯ ಬ್ಲೇಕ್, ಬೇಂದ್ರೆ ಅಂತವರಿಗೆ ತಮ್ಮ ವೈಯಕ್ತಿಕ ಪ್ರತಿಭೆಯಿಂದ ಬಂದದ್ದು ಎನ್ನಿಸುವುದಾದರೆ, ಈ ದಲಿತ ಜನರಲ್ಲಿ ಮಾತ್ರ ಅದು ಅವರು ಉಸಿರಾಡುವ ಸಾಂಸ್ಕೃತಿಕ ಸಂದರ್ಭವೇ ಎನ್ನಿಸುವಷ್ಟು ಸಹಜವಾಗಿರುತ್ತದೆ. ಅಂದರೆ ಎಲ್ಲಾ ದಲಿತರೂ ಸಾಹಿತಿಗಳೆಂದೂ ಇಲ್ಲಿ ಹೇಳುತ್ತಿಲ್ಲ. ಒಂದು ಸಾಮಾನ್ಯ ಸ್ಥಿತಿಯ ಅಸಮಾನ್ಯ ಅಭಿವ್ಯಕ್ತಿ ಸಾಧ್ಯವಾಗುವುದು ಈ ಜನಾಂಗದಲ್ಲಿ ಸಂವೇದನಾಶೀಲರಿಗೆ ಮಾತ್ರ ಎಂಬುದನ್ನು ಪ್ರತ್ಯೇಕವಾಗಿ ಹೇಳುವುದು ಅನಗತ್ಯ.

೪. ಅಸ್ಪೃಶ್ಯ ದಲಿತನ ಅವಮಾನ ಸ್ಥಿತಿ ವೈಯಕ್ತಿಕ ಮಾತ್ರ ಅಲ್ಲ; ಅದು ತನ್ನೆಲ್ಲ ಜನರ ಪಾಡು ಎಂಬ ಭಾವನೆ ಅವನಿಗಿರುವುದರಿಂದ ಈ ಮನಸ್ಥಿತಿ ರೂಪಿಸುವ ರೂಪಕ ಏಕಕಾಲದಲ್ಲಿ ವೈಯಕ್ತಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಅವಿಭಾಜ್ಯ ಅನ್ನಿಸುವಂತೆ ಪಡೆದುಕೊಂಡಿರುತ್ತದೆ.

೫. ಇಂಡಿಯಾದಲ್ಲಿ ವಸಾಹತುಶಾಹಿಯಿಂದಾಗಿ ಎಲ್ಲ ಜನರು ಅವಮಾನಿತರೇ. ಬಾರ್‌ಅಟ್‌ಲಾ ಪಾಸ್ ಮಾಡಿ ವಿದೇಶಿ ಉಡುಪು ತೊಟ್ಟುಕೊಂಡಿದ್ದರೂ ಸೌತ್ ಆಫ್ರಿಕಾದಲ್ಲಿ ಮೊದಲನೆ ದರ್ಜೆಯ ಗಾಡಿಯಿಂದ ನೂಕಲ್ಪಟ್ಟ ಗಾಂಧಿ ಈ ಒಟ್ಟು ಅವಮಾನದ ಪ್ರತೀಕ. ಆಧರೆ ಹೀಗೆ ಬಾರ್‌ಟ್‌ಲಾ ಮಾಡಿ ಮೊದಲನೇ ದರ್ಜೆಯ ಡಬ್ಬಿಯಿಂದ ಹೊರಗೆ ನೂಕಲ್ಪಟ್ಟ ಮನುಷ್ಯನೇ (ಗಾಂಧಿ ಆ ಕಾಲದ ಅಪೂರ್ವ ವಿನಾಯಿತಿ) ತನ್ನ ನಾಡಿನ ಅಸ್ಪೃಶ್ಯ ನೀರು ಸೇದುವ ಬಾವಿಯಿಂದ ತಾನು ನೀರು ಕುಡಿಯುವುದಿಲ್ಲ ಎನ್ನಬಹುದಾದ ಸಂದರ್ಭ ಭಾರತದ್ದು. ಹೀಗೆ ಅಸ್ಪೃಶ್ಯನಿಗೆ ಆಳುವ ವಿದೇಶಿಯರಿಂದಲೂ ಅವಮಾನ, ಆಳಲ್ಪಟ್ಟ ಸ್ವದೇಶಿಯರಿಂದಲೂ ಅವಮಾನ ಆಗುವ ಸ್ಥಿತಿ ಇತ್ತು, ಇದೆ. ಈ ಎರಡೂ ಒಟ್ಟಾಗಿ ತನ್ನನ್ನು ಅವಮಾನಿಸುತ್ತಿದೆ ಎಂದು ತಿಳಿಯುವ ದಲಿತನ ಪ್ರಜ್ಞೆ ವಿಶೇಷ ಬಗೆಯದು. ಆದರೆ ಬ್ರಾಹ್ಮಣನನ್ನು ಅವಮಾನಿಸುವ ವಸಾಹತುಶಾಹಿ ತನ್ನ ಬಿಡುಗಡೆಗೆ ಅನುಕೂಲವಾಗಬಹುದು ಎಂದು ಒಬ್ಬ ದಲಿತ ತಿಳಿಯುವುದೂ ಸಾಧ್ಯವಿತ್ತು. ಅಂಬೇಡ್ಕರ್‌ಹಾಗೆ ತಿಳಿದದ್ದರಿಂದ ಗಾಂಧಿಗೆ ಎದುರಾದರು.

೬. ತಲೆಯಲ್ಲಿ ಜುಟ್ಟು ಬಿಟ್ಟುಕೊಂಡು, ತಲೆಬೋಳಿಸಿಕೊಂಡ ವಿಧವೆಯೊಬ್ಬಳನ್ನು ತಾಯಾಗಿ ಪಡೆದು, ಹೊಟ್ಟೆಪಾಡಿಗಾಗಿ ವಿದ್ಯಾವಂತನಾದ ಮಡಿವಂತ ಕುಟುಂಬದ ಬ್ರಾಹ್ಮಣನೊಬ್ಬ ನಮ್ಮ ಎಲೆಕ್ಟ್ರಾನಿಕ್ ಯುಗದ ಸಂದರ್ಭದಲ್ಲಿ ಅವಮಾನಿತನಂತೆಯೇ ಬದುಕುತ್ತಿರುತ್ತಾನೆ. ಇವನ ಪಾಡಿನಲ್ಲೂ ತನ್ನದೊಂದು ಅಂಶ ಇರಬಹುದೆಂದು ತಿಳಿಯುವ ದಲಿತನ ರೂಪಕಶಕ್ತಿ ನಾನು ಮೊದಲು ವಿವರಿಸಿದ ರೂಪಕ ಶಕ್ತಿಗಿಂತಲೂ ಹೆಚ್ಚು ಸಂಕೀರ್ಣದ್ದಾಗಿರುತ್ತದೆ. ಫಾಸ್ಟರನು ‘Only connect’ ಎಂದು ಹೇಳುತ್ತಾನೆ. ಹೀಗೆ ಸ್ವದೇಶಿಯರ ನಡುವೆ ತನ್ನ ಅಸ್ಪೃಶ್ಯತೆ, ಒಟ್ಟು ದೇಶವಾಗಿ ತನ್ನ ಅವಲಂಬನೆ, ಜೊತೆಗೆ ತನ್ನನ್ನು ಕಾಡುವ ಸುತ್ತಣ ಜನರ ಮೂರ್ಖತನ ಮತ್ತು ನಿಸ್ಸಾಹಯಕತೆ, ಚರಿತ್ರೆಯ ಎಲ್ಲಾ ಕಾಲದಲ್ಲೂ ಯಾವ ದೇಶದಲ್ಲೂ ಹೀಗಾಗಿಬಿಡಬಹುದೆಂಬ ಪ್ರಜ್ಞೆ – ಇವೆಲ್ಲವನ್ನೂ ಅದುಮಿಕೊಂಡ ನೋವನ್ನು ವಿಶ್ಲೇಷಣಾತೀತ ಸ್ಥಿತಿಯಲ್ಲಿ ಅರಿತವನಾದ ದಲಿತ ಸಾಹಿತಿ ತನ್ನ ತುರ್ತಿಗಾಗಿಯೇ ಎಷ್ಟೊಂದರ ಜೊತೆ ‘connect’ ಮಾಡಬೇಕಾಗುತ್ತದೆ! ಇದು ದಲಿತ ಸಾಹಿತ್ಯದ ನಿಜವಾದ ಸಂದರ್ಭ.

ಡಾ. ಕೆ.ವಿ. ನಾರಾಯಣ್ ಕೇಳಿದ ಪ್ರಶ್ನೆಗಳಿಗೆ ಈ ಹಿನ್ನೆಲೆಯನ್ನಿಟ್ಟುಕೊಂಡು ನನ್ನ ಉತ್ತರಗಳು ಹೀಗಿವೆ :

(i) ದಲಿತ ಚಳುವಳಿಗೂ ಕನ್ನಡ ಸಾಹಿತ್ಯಗಳ ನಡುವೆ ನಡೆದಿರುವ ಪರಸ್ಪರ ಪ್ರಭಾವದ ಸ್ವರೂಪವನ್ನು ನೀವು ಹೇಗೆ ಗ್ರಹಿಸುವಿರೆಂಬುದನ್ನು ವಿವರಿಸುತ್ತೀರಾ?

ನಮ್ಮಲ್ಲಿ ನಡೆದಿರುವ ದಲಿತ ಚಳುವಳಿ ನಾನು ಮೇಲೆ ಧಾವಿಸಿರುವ ರೀತಿಯ ಪ್ರಜ್ಞೆಯನ್ನು ಪಡೆಯುವ ಸಾಧ್ಯತೆ ಕಂಡಿರುವುದು ದೇವನೂರು ಮಹಾದೇವರಲ್ಲಿ ಮಾತ್ರ. ಆದ್ದರಿಂದಲೇ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಪಡೆದಿದ್ದಾರೆ. ಜೊತೆಗೆ ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಅದನ್ನು ಯಾವ ಜಾತಿಯವನೆ ಬರೆದಿರಲಿ ಅದು ಅತ್ಯುತ್ತಮವಾಗಿದ್ದಾಗ, ಅದರಲ್ಲಿ ಸ್ವಾಭಿಮಾನ ಮತ್ತು ಬಡತನಗಳ ಕೂಡಿಕೆಯಿಂದ ಹುಟ್ಟಿರುವ ಪ್ರಜ್ಞೆ ಇರುವುದರಿಂದ ದಲಿತ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ನಿರಾಕರಿಸುವಂತಿಲ್ಲ. ವಚನ ಸಾಹಿತ್ಯದಿಂದ ಹಿಡಿದು ಇಲ್ಲಿಯ ತನಕ ಬಂದ ಅನೇಕ ಕೃತಿಗಳು ದಲಿತ ಚಳುವಳಿಗೆ ಪ್ರೇರಕ ಶಕ್ತಿಯಾಗಿ ಬಂದಿವೆ ಎಂದೇ ನಾನು ತಿಳಿದಿದ್ದೇನೆ.

(ii) ಸಾಹಿತ್ಯ ಸೃಷ್ಟಿ ಹಾಗೂ ಸಂವಹನ ಪ್ರಕ್ರಿಯೆಯಲ್ಲಿ ಈಚಿನ ವರ್ಷಗಳಲ್ಲಿ ಬೆಳೆದಿರುವ ಸಮೂಹ ಸಂಸ್ಕೃತಿಯ ಲಕ್ಷಣಗಳು ದಲಿತ ಸಾಹಿತ್ಯದೊಡನೆ ಪಡೆದುಕೊಳ್ಳುತ್ತಿರುವ ಸಂಬಂಧ ಎಂಥದೆಂದು ತಿಳಿಯುತ್ತೀರಿ?

ದಲಿತ ಸಾಹಿತ್ಯ ಅತ್ಯುತ್ತಮವಾಗಿದ್ದಾಗ ಅದರಲ್ಲಿನ ರೂಪಕ ಪ್ರತಿಭೆ ಎಷ್ಟು ಗಾಢವಾಗಿದೆ ಎಂದರೆ ನಮ್ಮ ತೆಳುವಾದ ಲಂಪಟತನದ ಸಮೂಹ ಸಂಸ್ಕೃತಿ ಅದನ್ನು ಅರ್ಥಮಾಡಿಕೊಳ್ಳಲಾರದು. ‘ಸುದ್ದಿಸಂಗಾತಿ’ ಮಹಾದೇವರ ಕಾದಂಬರಿಯನ್ನು ಸೀರಿಯಲ್ ಮಾಡುವಾಗ ಓದುಗರನ್ನು ಕಳೆದುಕೊಂಡಿತು ಎನ್ನುವುದು ಮತ್ತು ಈಗ ಅದು ಸೀರಿಯಲ್ ಮಾಡುತ್ತಿರುವ ಕೃತಿಗಳು ಎಂಥವು ಎಂಬುದು ನನ್ನ ಮಾತಿಗೆ ನಿದರ್ಶನ.

(iii) ಒಟ್ಟು ಕನ್ನಡ ಸಂಸ್ಕೃತಿಯ ಸಮಕಾಲೀನ ಆಕೃತಿಗಳಿಗೆ ದಲಿತ ಚಳುವಳಿ ಹೇಗೆ ಪ್ರತಿಕ್ರಿಯಿಸುತ್ತಿದೆ?

ಅವಮಾನಿತ ಅಸ್ಪೃಶ್ಯರು ರಾಜಕೀಯ ಕ್ರಿಯೆಯಲ್ಲಿ ತೊಡಗಿದಾಗ ನಾನು ಮೇಲೆ ವಿವರಿಸಿದ ಪ್ರಜ್ಞಾಸ್ಥಿತಿಯಲ್ಲಿ ಪ್ರಾಯಶಃ ಇರುವುದು ದುಸ್ಸಾಧ್ಯ. ಎಲ್ಲಾ ಕ್ರಿಯೆಗಳು ನಮ್ಮ ಚಿಂತನೆಯನ್ನು ಸರಳಗೊಳಿಸಬೇಕಾದ್ದು ಅನಿವಾರ್ಯ. ಆದರೆ ಒಂದು ಅತಿಯಲ್ಲಿ ವ್ಯಕ್ತಿವಾಗುವ ವಿಷಯದ ಹಿಂದೆಯೂ ಸತ್ಯ ಇರುವುದರಿಂದ ಅದು ಎಲ್ಲರ ಜೀವನವನ್ನು ಹೊಗಬಲ್ಲ ರಜೋಗುಣ ಪ್ರಧಾನವಾದ ಶಕ್ತಿಯನ್ನು ಪಡೆಯುವುದು ಅನಿವಾರ್ಯ. ಆದರೆ ಇದು ಚಾರಿತ್ರಿಕವಾಗಿ ಕ್ರಮೇಣ ಮೃದುವಾಗುವಂತದ್ದು. ದಲಿತ ಚಳುವಳಿಯ ನಾಯಕರಲ್ಲಿ ಒಬ್ಬರಾದ ಶ್ರೀ ಕೃಷ್ಣಪ್ಪ ಕುವೆಂಪುರವರ ಕೃತಿಗಳನ್ನು ‘ರಿಯಾಕ್ಷನರಿ’ ಎಂದು ವಿವರಿಸಿದ್ದನ್ನು ನಾನು ಕೇಳಿದ್ದೇನೆ. ಹಾಗೆಯೇ ಬಸವಲಿಂಗಪ್ಪನವರು (ಅಂಬೇಡ್ಕರರಂತೆಯೇ) ಇಂಗ್ಲಿಷ್ ಇಲ್ಲದಿದ್ದಲ್ಲಿ ನಮ್ಮ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಕೇಳಿದ್ದೇನೆ. ಈಚೆಗೆ ಕುವೆಂಪುರವರು ವೈದಿಕರ ಮೇಲಿನ ಸಿಟ್ಟಿನಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸದ ಪ್ರಭಾವ ತನ್ನ ಮೇಲೆ ಆಗದಿದ್ದಲ್ಲಿ ಬ್ರಾಹ್ಮಣರ ಮನೆಯಲ್ಲಿ ಗೊಬ್ಬರ ಹೊರುವವನು ಆಗುತ್ತಿದ್ದೆ ಎಂದು ಹೇಳಿದರೆಂದೂ ಕೇಳಿದ್ದೇನೆ. ನಮ್ಮ ಸಂಸ್ಕೃತಿಯ ಸಂದರ್ಭದಲ್ಲಿ ಈ ಎಲ್ಲ ಮಾತುಗಳು ಸಹಜವಾದವು. ಆದರೆ ಇವೆಲ್ಲವೂ ಪ್ರತಿಕ್ರಿಯಾತ್ಮಕವಾದ ಮಾತುಗಳು. ಅಥವಾ ವಾಗ್ವಾದದ ಬಿಸಿಯಲ್ಲಿ ಹುಟ್ಟಿದವು. ನಮ್ಮನ್ನು ಒಂದು ಜನಸಮೂಹವಾಗಿಯೇ ದುರ್ಬಲಗೊಳಿಸಿದ ವಿದೇಶಿಯರ ಭಾಷೆಯಲ್ಲೂ ನಾವು ನಮ್ಮ ಬಿಡುಗಡೆಯ ವಿಚಾರಗಳನ್ನು ಕಂಡುಕೊಳ್ಳುತ್ತಿರುವುದನ್ನು ಚಾರಿತ್ರಿಕವಾಗಿ ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಅದರಲ್ಲಿ ಒಂದು ಅಂಶಿಕ ಸತ್ಯ ಇರುತ್ತದೆ. ಮನುಷ್ಯ ಸ್ವಭಾವವೇ ಎಲ್ಲೆಡೆಯಲ್ಲಿಯೂ ಸೃಷ್ಟಿಸುವ ಸಂಸ್ಕೃತಿ ಪರಸ್ಪರ ವಿರೋಧಿಯಾದ ಸತ್ಯಗಳನ್ನು ಒಳಗೊಂಡಿರುತ್ತದೆ ಎಂಬ ವಾದಕ್ಕೆ ಇದು ನಿದರ್ಶನ. ಷೆಲ್ಲಿಯ ‘ಪ್ರಮಿಥಿಯಸ್’ ನಾಟಕದಲ್ಲಿ ದುಷ್ಟ ನಾಯಕನ ಹೊಟ್ಟೆಯಲ್ಲಿಯೇ ಅವನನ್ನು ನಾಶಮಾಡುವ ಡೆಮಗಾರ್ಗನ್‌ನು ಹುಟ್ಟಿರುತ್ತಾನೆ = ಹಿರಣ್ಯಕಶಿಪುವಿನ ಹೊಟ್ಟೆಯಲ್ಲಿ ಪ್ರಹ್ಲಾದ ಹುಟ್ಟಿದಂತೆ. ಆದರೆ ನಾನು ಮೊದಲು ಹೇಳಿದ ಸೃಜನಶೀಲ ಪ್ರಜಾಸ್ಥಿತಿಯಲ್ಲಿ ಈ ಬಗೆಯ ಪ್ರತಿಕ್ರಿಯೆಗಳು ಅರ್ಧಸತ್ಯಗಳಾಗಿ ಗೋಚರಿಸುತ್ತವೆ. ಕನ್ನಡದ ಅತ್ಯುತ್ತಮ ದಲಿತ ಸಾಹಿತ್ಯ – ಮಹಾದೇವರದೂ ಸೇರಿದಂತೆ – ಅಂಥ ಪ್ರಜ್ಞೆಯನ್ನು ಸಮರ್ಥವಾಗಿ ಒಳಗೊಂಡಿದೆ ಎಂದು ನಾನು ಹೇಳಲಾರೆನಾದರೂ ಅದರ ಸಮೀಪದಲ್ಲಂತೂ ಇದೆ. ಆದ್ದರಿಂದ ನಮ್ಮ ದಲಿತ ಸಾಹಿತಿಗಳು ಬೇಂದ್ರೆ, ಕುವೆಂಪು, ಕಾರಂತ, ಅಡಿಗ, ಕುಮಾರವ್ಯಾಸ, ವಚನಕಾರರು ಈ ಎಲ್ಲರಿಂದಲೂ ಕಲಿತುಕೊಳ್ಳಬಲ್ಲರು. ಯಾಕೆ? ಮಾಸ್ತಿಯಿಂದ ಕಲಿತುಕೊಳ್ಳಬಲ್ಲರು, ಪುರಂದರದಾಸರಿಂದಲೂ ಕಲಿತುಕೊಳ್ಳಬಲ್ಲರು.

(iv) ಜಗತ್ತಿನ ಹಲವು ಸಾಹಿತ್ಯಗಳಲ್ಲಿ ಕಂಡುಬಂದ ಪ್ರತಿಭಟನೆಯ ಸಾಹಿತ್ಯದೊಡನೆ ದಲಿತ ಸಾಹಿತ್ಯದ  ಸ್ವರೂಪ ಸಾಧನೆಗಳನ್ನು ಪರಿಗಣಿಸಿದಾಗ ಏನನ್ನಿಸುತ್ತದೆ?

ಅಮೆರಿಕಾದ ಕಪ್ಪು ಜನರ ಪ್ರತಿಭಟನಾ ಸಾಹಿತ್ಯ, ಆಫ್ರಿಕಾದ ಪ್ರತಿಭಟನಾ ಸಾಹಿತ್ಯ, ಲ್ಯಾಟಿನ್ ಜನರ ಪ್ರತಿಭಟನಾ ಸಾಹಿತ್ಯ – ಈ ಎಲ್ಲವೂ ನಮ್ಮ ಕಣ್ಣೆದುರಿಗೆ ಇದ್ದರೆ ನಮ್ಮ ದಲಿತ ಸಾಹಿತ್ಯ ನಮಗೆ ಗಟ್ಟಿಯಾಗಿ ಕೊಟ್ಟಿರುವುದು ಕೆಲವೇ ಕೆಲವು ಕೃತಿಗಳು. ಅಂದರೆ, ಅದರ ಸಾಧನೆಯನ್ನು ಉತ್ಪ್ರೇಕ್ಷಿಸಬಾರದು. ಮೇಲುಜಾತಿಯಲ್ಲಿ ಹುಟ್ಟಿದ ವಿಮರ್ಶಕರು ಜನಪ್ರಿಯರಾಗಲೆಂದೋ, ತಮ್ಮಲ್ಲಿ ಉಳಿದವರಿಗೆ ಸದ್ಭಾವನೆ ಬರಲೆಂದೋ ಕನ್ನಡ ದಲಿತ ಸಾಹಿತ್ಯವನ್ನು ಮುಕ್ತಕಂಠದಿಂದ ಹೊಗಳುವುದು ಅಪ್ರಾಮಾಣಿಕವಾದದ್ದು. ಮಹಾದೇವರ ಕೃತಿಗಳನ್ನು ನಾನು ಮೆಚ್ಚಿಕೊಂಡಿದ್ದು ಈ ಮಾತನ್ನು ಹೇಳುತ್ತಿದ್ದೇನೆ. ಜಗತ್ತಿನ ಸಾಹಿತ್ಯವಿರಲಿ, ನಮ್ಮ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕೂಡ ದಲಿತರು ಈವರೆವಿಗೂ ಬರೆದಿದ್ದು ಮಹತ್ವದ ಹೆಜ್ಜೆಗಳೇ ವಿನಹ ದೊಡ್ಡ ಸಾಧನೆಗಳಲ್ಲ. ಇದನ್ನು ಅರಿಯುವುದು ದಲಿತ ಸಾಹಿತಿಗಳಿಗೆ ಬಹುಮುಖ್ಯವಾದದ್ದು.

ಶೂದ್ರ ೧೯೮೮.

* * *