ಜಗತ್ತಿನ ಅರಿವು ನಮ್ಮ ಸಾಹಿತ್ಯಕ್ಕೆ ಬಂದಿರುವುದು ಸಾಮ್ರಾಜ್ಯಶಾಹಿಯ ಮೂಲಕ, ಹೀಗೆ ಸಾಮ್ರಾಜ್ಯಶಾಹಿ ವ್ಯವಸ್ಥೆ ತರುವ ಜಾಗತಿಕ ಅರಿವನ್ನು ನಮ್ಮ ಸಾಹಿತ್ಯ ಕೇವಲ ವಿರೋಧಿಸದೆ ದಕ್ಕಿಸಿಕೊಂಡಿರುವ ಕ್ರಮ ಕುತೂಹಲಕಾರಿಯಾದದ್ದು. ಇಂಗ್ಲಿಷರ ಆಳ್ವಿಕೆಯ ಮುಖಾಂತರ ಇಂಗ್ಲಿಷ್‌ಸಾಹಿತ್ಯದ ಅರಿವು ನಮಗೆ ಬಂದಿತು, ಇಂಗ್ಲೆಂಡಿನ ಹತ್ತೊಂಬತ್ತನೆಯ ಶತಮಾನದ ರೊಮಾಂಟಿಕ್ ಲೇಖಕರನ್ನು ನಾವು ದಕ್ಕಿಸಿಕೊಂಡ ಕ್ರಮ, ಹಾಗೂ ೧೯೪೭ರ ನಂತರ ಐರೋಪ್ಯ ಸಾಹಿತ್ಯ ಚಳುವಳಿಗಳಿಗೆ ನಾವು ಪ್ರತಿಕ್ರಿಯಿಸಿದ ಕ್ರಮ ನಾನು ಮೇಲೆ ಹೇಳಿದ್ದಕ್ಕೆ ಉದಾಹರಣೆಯಾಗಬಹುದು.

ಈ ಜಾಗತಿಕ ಅರಿವು ಎನ್ನುವುದು ನಮಗಂತೂ ಕೇವಲ ಸುಖ ಸಂತೋಷಗಳಲ್ಲಿ ಪ್ರಾಪ್ತವಾದದ್ದಲ್ಲ ಎಂಬುದನ್ನೂ ಹೇಳಲು ನಾನು ಪ್ರಯತ್ನಿಸುತ್ತಿದ್ದೇನೆ. ಜೊಳ್ಳಾದ ಜಾಗತಿಕ ಅರಿವು ಕೂಡ ನಮ್ಮಂತಹ ದೇಶಗಳಲ್ಲಿ ಇರುವುದು ಸಾಧ್ಯವೆಂಬುದನ್ನು ಮರೆಯಬಾರದು. ನೆಹರು ಯುಗದ ಅಂತರಾಷ್ಟ್ರೀಯತೆ ಈ ಬಗೆಯ ಜೊಳ್ಳಾದ ಜಾಗತಿಕ ಅರಿವನ್ನು ನಮಗೆ ರೂಢಿ ಮಾಡಿಸಿತು. ಇದನ್ನು ಅಡಿಗರು ತಮ್ಮ ಕಾವ್ಯದ ಶಕ್ತಿಯುತವಾಗಿ ವರ್ಣಿಸಿದ್ದಾರೆ. ‘ಸ್ವಾತಂತ್ಯ್ರ-೧೯೫೮’ರ ಪಾಠದ ಈ ಭಾಗವನ್ನು ನೋಡಿ:

ಈಗಲೂ ನೆನಪುಂಟು: ಪಡುಗಡಲ ಮೊರೆಬಾರು
ಗೋಲ ಬೀಸಿಗೆ ಸಿಕ್ಕ ನಮ್ಮ ಮನೆಗೆ
ಇತ್ತಿದಿರು ತೇರು ಹನೆಮರ ಹಳಬ. ತನ್ನ ಗರಿಛತ್ರಿಯೊಳ
ಗಿಟ್ಟುಕಾಯಿಯ ಜೊಂಪೆ ಹೊರೆಯುತ್ತಿದ್ದ!
ಕಡ್ಡಿಗೊಂದೊಂದು ಗುಬ್ಬಚ್ಚಿಗೂಡನು ತೂಗಿ
ಹೊರೆಯ ಹೆಚ್ಚಳಕೆ ತಲೆದೂಗುತ್ತಿದ್ದ.
ಅಸಾಡಿ ಮಳೆಯ ಬಿಳಿಕಂಬಿ ಸಂದುಗಳಲ್ಲಿ
ಅರಳುತ್ತಿದ್ದುವು ಗುಬ್ಬಿ-ಅರಿಸಿನದ, ಹಾಲಿನ ಕೆನೆಯ
ಸಾಲಭಂಜಿಕೆ-ಪಾಚಿಗಟ್ಟಿ ಜಾರುವ ನೆಲದ
ನಮ್ಮ ಬಳುಮಾಡಿಗೂ ಬಂದ ವಿಶ್ವ.
ಇದು ಗಂಡು, ಇದು ಹೆಣ್ಣು, ಇದು ಪುಟ್ಟಮರಿ ಪಾಪ!
ತಿಂಡಿ ತಿನ್ನುತ್ತಿದ್ದ ನಾವು ಹುಡುಗರು ಬೆರಗು
ಗಣ್ಣ ನಲವಿಗೆ ಬಾಯಿಬಿಟ್ಟು ನಿಂತು
ಮರುನಿಮಿಷವೇ ಒಳಕ್ಕೋಡುತ್ತಿದ್ದೇವು ತಂದು
ಚೆಲ್ಲುತ್ತಿದ್ದೆವು ಅಕ್ಕಿ ಬೆಳ್ಳಿ ಬೊಗಸೆ,
ಕುಟುಕು ಕುಟುಕಿನ ಸಫಲ ನಟ್ಯ, ಭೋರ್ಮಳೆ ಮೊರೆತ,
ಮರಿಯ ಕೆಂಬಾಯಿಯಲ್ಲಿ ತಾಯ ಕೊಕ್ಕು
ಕುಟುಕಿಟ್ಟ ಬೆಳತಿಗೆಯ ಕರುಳ ತುಡಿತ.
ನಮಗೂ ಗುಬ್ಬಚ್ಚಿದೋಚುವ ಕಾಳ ಕಾಗೆಗಳ
ಸೋವಿ ಅಟ್ಟುವ ನಿಷ್ಠ ಬೆಂಗಾವಲಾಟ.
ಮಳೆಯ, ಗುಡುಗಿನ, ಸಿಡಲಿನಟ್ಟಹಾಸದ ಜೈಲು:
ಅಲ್ಲಿ ಸಣ್ಣಗೆ ಅರಳಿ ಹೊಳದೆ ಬಯಲು!

ಜಾಗತಿಕ ಅರಿವಿನಲ್ಲಿ ಇರುವ ಜಳ್ಳುಗಟ್ಟಿಗಳ ವ್ಯತ್ಯಾಸವನ್ನು ಲೋಹಿಯಾ ತಮಗೆ ವಿಶಿಷ್ಟವಾದ ರೀತಿಯಲ್ಲಿ ಗುರುತಿಸಿದ್ದಾನೆ. ನೆಹರೂ ಮಾರ್ಗವನ್ನು ‘ಕಾಸ್ಮೋಪೊಲೈಟ್’ ಎಂದೂ, ಗಾಂಧಿ ಮಾರ್ಗವನ್ನು ‘ಯೂನಿವರ್ಸಲಿಸ್ಟ್’ ಎಂದೂ ಅವರು ಕರೆಯುತ್ತಾರೆ. ಕಾಸ್ಮೋಪೊಲೈಟರ ಅಂತರರಾಷ್ಟ್ರೀಯತೆ ಅಂದರೆ ಜಗತ್ತಿನ ಮುಖ್ಯ ಪಟ್ಟಣಗಳಲ್ಲಿ ಆಧುನಿಕತೆಯ ಕೆಲವು ಬಹಿರಂಗ ಲಕ್ಷಣಗಳನ್ನು ಪಡೆಯುವುದು. ಉದಾಹರಣೆಗೆ: ನಮ್ಮಲ್ಲಿ ಒಂದು ಅಟೋಮಿಕ್ ರಿಯಾಕ್ಟರ್, ಕೆಲವು ಗಗನಚುಂಬೀ ಕಟ್ಟಡಗಳು ಇದ್ದುಬಿಟ್ಟರೆ ನವೂ ನ್ಯೂಯಾರ್ಕಿಗೆ ಸರಿಸಮವೆಂದು ಭಾವಿಸುವುದು ಈ ಕಾಸ್ಮೋಪೊಲೈಟ್ ಮಾರ್ಗದ ಲಕ್ಷಣ. ಇದಕ್ಕೆ ಬದಲಾಗಿ, ಪ್ರಪಂಚದಲ್ಲಿ ಅತ್ಯಂತ ದೀನರಾಗಿರುವವರು ಒಂದು ಹೆಜ್ಜೆಯನ್ನಾದರೂ ಮುಂದಿಡುವುದನ್ನು ಪ್ರಗತಿ ಎಂದು ಭಾವಿಸುವುದು ‘ಯೂನಿವರ್ಸಲಿಸ್ಟ್’ ಮಾರ್ಗ-ಇದು ಗಾಂಧಿಯ ಮಾರ್ಗ. ಗಾಂಧೀಝಿಯವರು ೧೯೦೮ನೆಯ ಇಸವಿಯಲ್ಲಿ ‘ಹಿಂದ್ ಸ್ವರಾಜ್’ನ್ನು ಬರೆದಾಗಲೇ ಅವರ ತತ್ವ ಈ ದಿಕ್ಕಿನಲ್ಲಿ ನೈಜ ಕ್ರಾಂತಿಕಾರಕತೆಯನ್ನು ಪಡೆದಿತ್ತು. ಗಾಂಧೀಜಿ ಭಾರತವನ್ನಲದೆ ಇಡೀ ಜಗತ್ತನ್ನೇ ಆಧುನಿಕ ನಾಗರಿಕತೆಯಿಂದ ಬಿಡುಗಡೆ ಮಾಡುವ ಯೋಜನೆಯನ್ನು ಈ ಪುಸ್ತಕದಲ್ಲಿ ಹಾಕಿಕೊಂಡಿದ್ದರು.

ಈ ದೃಷ್ಟಿಯಿಂದ ನೆಹರೂರ ಅಂತರರಾಷ್ಟ್ರೀಯ ಮಾದರಿಯ ಜಾಗತಿಕ ಅರಿವಿಗೆ ಅಡಿಗರ ಕಾವ್ಯ ತೋರಿಸಿದ ವಿರೋಧ ನನಗೆ ತುಂಬ ಮುಖ್ಯವೆಂದು ಅನ್ನಿಸುತ್ತದೆ…

ಜಗತ್ತಿನಲ್ಲಿ ವಿಚಾರಗಳು ರಾಜಕೀಯ ಶಕ್ತಿಯ ಬೆನ್ನುಹತ್ತಿಯೇ ಸಂಚರಿಸುತ್ತವೆಯೇ ಎಂದು ಒಮ್ಮೊಮ್ಮೆ ಅನುಮಾನವಾಗುತ್ತದೆ. ಇಂಗ್ಲೆಂಡು ಕಲ್ಲಿದ್ದಲಿಂದಾಗಿ ದೊಡ್ಡ ರಾಷ್ಟ್ರವಾಗಲಿಲ್ಲ, ಅದರ ಸಾಹಿತ್ಯದಿಂದ ಆಯಿತು ಎನ್ನುವ ಮಾಥ್ಯೂ ಆರ್ನಾಲ್ಡ್‌ನ ವಿಚಾರವನ್ನು ಕ್ಲಾಸಿನಲ್ಲಿ ಪಾಠಮಾಡುವಾಗಲೆಲ್ಲ ನಾನು ಒಂದು ಪ್ರಶ್ನೆಯನ್ನು ಕೇಳುತ್ತೇನೆ; ತನ್ನ ಕಲ್ಲಿದ್ದಲು ಮತ್ತು ನೇವಿಯ ಬಲವಿಲ್ಲದಿದ್ದಲ್ಲಿ ನಾವು ಮಾಥ್ಯೂ ಆರ್ನಾಲ್ಡನನ್ನು ಪಾಠ ಮಾಡುವ ಅನಿವಾರ್ಯ ಬರುತ್ತಿತ್ತೇ? ಶ್ರೀ ಉಮಾಶಂಕರ ಜೋಶಿಯವರು ಕನ್ನಡ ಅಧ್ಯಯನ ಸಂಸ್ಥೆ ನಡೆಸಿದ ಮಹಾಕಾವ್ಯದ ಸಂಕಿರಣದಲ್ಲಿ ಹೇಳಿದ ಒಂದು ಮಾತು ನೆನಪಾಗುತ್ತದೆ: ಸ್ಕೈಲ್ಯಾಬು ನಮ್ಮ ಮೇಲೆ ಬೀಲಬಹುದೆಂಬ ಭಯ ನಮ್ಮೆಲ್ಲರಲ್ಲೂ ಜಾಗತಿಕ ಅರಿವನ್ನು ಮೂಡಿಸಿತು. ಮೊದಲನೆಯ ಮಹಾಯುದ್ಧದಲ್ಲಿ ಜರ್ಮನರ ‘ಎಮ್‌ಡೆಂ’ಎಂಬ ಹಡಗು ಮದ್ರಾಸಿನ ಕರಾವಳಿಯಲ್ಲಿ ಗುಂಡು ಹಾರಿಸಿದ್ದರಿಂದ ಅಲ್ಲಿ ವ್ಯಾಪಾರಕ್ಕೆ ಹೋಗುತ್ತಿದ್ದ ಅಡಕೆಯ ಬೆಲೆ ತಕ್ಷಣವೇ ಇಳಿದು ಮಲೆನಾಡಿನ ಗ್ರಾಮಗಳ ಬೆಳೆಗಾರೆಲ್ಲರೂ ತೀವ್ರ ನಷ್ಟಕ್ಕೆ ಗುರಿಯಾಗಿ ಜಾಗತಿಕ ಅರಿವನ್ನು ಪಡೆದುಕೊಂಡರು. ಇದನ್ನು ನಾನು ಕೇಳಿಸಿ ಕೊಂಡಿದ್ದು ಕುವೆಂಪು ಅವರಿಂದ. ಜಾಗತಿಕ ಅರಿವು ಹೀಗೂ ನಮ್ಮಲ್ಲಿ ಮೂಡುತ್ತದೆಂಬುದನ್ನು ನಾವು ಮರೆಯಕೂಡದು.

ರಷ್ಯನ್ನರು ಆಫ್ಘಾನಿಸ್ಥಾನದಲ್ಲಿದ್ದಾರೆ; ಅಮೆರಿಕನ್ನರು ಪಾಕಿಸ್ತಾನದಲ್ಲಿದ್ದಾರೆ. ಇನ್ನು ಮುಂದೆ ನಮ್ಮ ಆಂತರಿಕ ಸಮಸ್ಯೆಗಳು ಆಂತರಿಕವಾಗಿ ಪರಿಹರಿಸಲ್ಪಡುತ್ತವೆಯೇ ಎಂಬುದೂ ಅನುಂಆನ. ಅಂದರೆ ಸಾಮ್ರಾಜ್ಯಶಾಹಿಯೇ ನಮ್ಮಂತವರಿಗೆ ಎಲ್ಲ ವಿಚಾರಗಳ ವಾಹಕವೇ ಎಂಬ ನನ್ನ ಮೊದಲನೆಯ ಪ್ರಶ್ನೆಯನ್ನು ಮತ್ತೆ ಕೇಳುತ್ತೇನೆ. ಲಿಬರಲ್ ಡೆಮಾಕ್ರಸಿ, ಬೌದ್ಧ ಧರ್ಮ, ಇಸ್ಲಾಂ, ಕ್ರಿಶ್ಚಿಯಾನಿಟಿ, ನಮ್ಮ ಕಾಲದಲ್ಲಿ ಮಾಕ್ಸಿಸಂ ಕೂಡ-ಸಾಮ್ರಾಜ್ಯಗಳನ್ನು ಕಟ್ಟಲು ನೆರವಾದ ತತ್ವಗಳೆಂಬುದನ್ನು ಮರೆಯಕೂಡದು. ವಿಪರ್ಯಾಸವೆಂದರೆ ಈ ಎಲ್ಲ ತತ್ತ್ವಗಳೂ ಜಗತ್ತನ್ನೂ ಉದ್ಧಾರ ಮಾಡಲೆಂದು ಹೊರಟವು ಕೂಡ ಎಂಬುದು. ಈ ಬಗೆಯ ವಿಚಾರಗಳ ‘ಒನ್‌ವೇ’ ಮಾರ್ಗದಲ್ಲಿ ನಾವು ಪಡೆದುಕೊಳ್ಳುವ ತುದಿಯಲ್ಲಿದ್ದೇವೆ; ಕೊಡುವ ಜಾಗದಲ್ಲಿ ಇಲ್ಲ.

ಆದರೆ ಈ ಬಗೆಯ ವಿಚಾರವನ್ನು ಸರಳಗೊಳಿಸುವ ಇಷ್ಟ ನನಗಿಲ್ಲ. ನನ್ನ ದೇಶದ ಇತರ ಬರಹಗಾರರ ಜೊತೆ ನಾನು ಪಡೆಯುತ್ತಿರುವ ಸಂಪರ್ಕ ಕೂಡ ಸಾಮ್ರಾಜ್ಯಶಾಹಿ ಕೊಟ್ಟ ಇಂಗ್ಲಿಷಿನ ಮುಖಾಂತರ. ಈ ಇಂಗ್ಲಿಷ್‌ಭಾಷೆ ತಂದ ಅರಿವು ಸಾಮ್ರಾಜ್ಯಶಾಹಿಯನ್ನು ವಿರೋಧಿಸಲು ನೆರವಾಯಿತೆಂಬುದನ್ನೂ ಮರೆಯಕೂಡದು. ಶೇಕ್ಸ್‌ಪಿಯರನ ಪ್ರಾಸ್ಟೆರೋ ಕ್ಯಾಲಿಬಾನ್‌ನಿಗೆ ಕಲಿಸಿದ ಭಾಷೆಯನ್ನು ಉಪಯೋಗಿಸಿಯೇ ಕ್ಯಾಲಿಬಾನ್ ತನ್ನ ಯಜಮಾನನಾದ ಪ್ರಾಸ್ಪೆರೋನನ್ನು ಶಪಿಸುತ್ತಾನೆ. ಅಂದರೆ ಜಾಗತಿಕ ಅರಿವು ತಾಯಿಯ ಹಾಲಿನಂತೆ ನಾವು ಕುಡಿದದ್ದಲ್ಲ ಎಂಬುದೇ ನನ್ನ ವಿಚಾರವಾಗಿದೆ.

ನಾವು ಯಾವತ್ತೂ ಪಡೆದುಕೊಳ್ಳುವ ತುದಿಯಲ್ಲಿದ್ದೇವೆ ಎಂಬುದಕ್ಕೆ ಅಸ್ತಿತ್ವವಾದ, ಅಸಂಗತವಾದ ಮತ್ತು ಈಚೆಗೆ ನಮ್ಮ ಮೇಲೆ ಪ್ರಭಾವ ಬೀರುತ್ತಿರುವ ಮಾರ್ಕ್ಸಿಸಂನನ್ನೂ ಉದಾಹರಣೆಗೆ ತೆಗೆದುಕೊಳ್ಳಿ. ಮೆಕಾಲೆಯ ಕಾಲದ ‘ಲಿಬರಲ್ ಡೆಮಾಕ್ರಸಿ’ಯಂತೆಯೇ ಮಾರ್ಕ್ಸ್‌ವಾದ ಕೂಡ ನಮ್ಮಲ್ಲಿ ಜಾಗತಿಕ ಅರಿವನ್ನು ಹೇರುತ್ತಿದೆ. ಅಷ್ಟು ದೂರ ಕೂಡ ನಾವು ಹೋಗುವುದು ಬೇಡ. ನಮ್ಮ ಮುಖ್ಯಮಂತ್ರಿ ಶ್ರೀ ಗುಂಡೂರಾಯರು ತಮ್ಮ ಹೆಚ್ಚು ಕಾಳವನ್ನು ದೆಹಲಿಯಲ್ಲಿ ಕಳೆದು ತಮ್ಮ ಅಧಿಖಾರವನ್ನು ಉಳಿಸಿಕೊಳ್ಳುತ್ತಿರುವ ರಾಜಕಾರಣ ಕೂಡ ಸಾಮ್ರಾಜ್ಯಶಾಹಿಯ ಬಗೆಯದು. ಅಂದರೆ ನಮ್ಮ ರಾಷ್ಟ್ರೀಯತೆ ಕೂಡ ಹೀಗೆ ನಮ್ಮ ಮೇಲೆ ಹೇರಲ್ಪಡುವ ವಿಚಾರವಾಗಿದೆ.

ಸ್ವಾತಂತ್ಯ್ರಪೂರ್ವದ ಕಾಲದಲ್ಲಿ ರಾಷ್ಟ್ರೀಯಭಾವನೆ ಹೀಗೆ ನಮ್ಮ ಮೇಲ ಹೇರಲ್ಪಟ್ಟಿರಲಿಲ್ಲ. ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್‌ಟ್ರಸ್ಟ್‌ಗಳಿಲ್ಲದೇನೇ ಆಗ ನಮಗೆ ಬಂಗಾಳೀ ಸಾಹಿತ್ಯದ ಪರಿಚಯವಾಗಿತ್ತು. ಆದರೆ ನೆಹರೂ ಅಂತರರಾಷ್ಟ್ರೀಯತೆಯ ಫಲವಾಗಿ ಈಗ ನಮಗೆ ಇಂಡಿಯಾಕ್ಕಿಂತ ಯೂರೋಪೇ ಹೆಚ್ಚು ಗೊತ್ತಿರುವ ದೇಶವಾಗಿದೆ. ಭಾರತೀಯ ಭಾಷೆಗಳೆಲ್ಲವೂ ಯೂರೋಪಿನ ಕಡೆ ಮುಖಮಾಡಿಕೊಂಡಿರುವಾಗ ನಾವು ಪರಸ್ಪರ ಕಲಿಯಬಹುದಾದ್ದು ಕೂಡ ಇಲ್ಲವೋ ಏನೋ? ಆದರೆ ದೆಹಲಿಯ ರಾಜಕೀಯ ನಮ್ಮನ್ನು ನೇರವಾಗಿ ಆಳುವ ಈ ಕಾಲದಲ್ಲಿ ನಮ್ಮ ಭಾರತೀಯತೆ ನಷ್ಟವಾಗುತ್ತಿರುವ ಈ ವಿಪರ್ಯಾಸವನ್ನು ಕುರಿತು ನಾವು ಯೋಚಿಸಬೇಕು…

ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ನಮ್ಮಲ್ಲಿ ಅನೇಕರು ಹುಟ್ಟಿ ಬೆಳೆದದ್ದು ಹಳ್ಳಿಗಳಲ್ಲಿ. ನಮ್ಮ ರಾಷ್ಟ್ರ ಮತ್ತು ಜಗತ್ತಿನ ಪ್ರಜ್ಞೆ ನಮಗೆ ಮೂಡಿದ್ದು ಪುರಾಣಗಳ ಮೂಲಕ, ನಮ್ಮ ಪ್ರಾಂತ್ಯಗಳನ್ನಾಳುವ ಸುಲ್ತಾನರು ಪರಸ್ಪರ ಬಡಿದಾಡುತ್ತಿರುವಾಗಲೂ, ದುಷ್ಟರು ದೆಹಲಿಯಲ್ಲಿ ಆಳುತ್ತಿರುವಾಗಲೂ ಭಾರತದ ರಾಷ್ಟ್ರಪ್ರಜ್ಞೆ ನಷ್ಟವಾಗುವುದಿಲ್ಲವೆಂಬುದು ಸಮಾಧಾನದ ಸಂಗತಿ. ಇದಕ್ಕೆ ಬಹುಶಃ ಕಾರಣ ಈ ಪ್ರಜ್ಞೆ ಹುಟ್ಟುವುದು ಪುರಾಣಗಳಿಂದ ಎಂಬುದೇ ಇರಬಹುದು.

ನಾನು ಬೆಳೆದ ಹಳ್ಳಿಯಲ್ಲಿ ಹರಿಯುವ ತುಂಗೆಯಲ್ಲೊಂದು ದ್ವೀಪವಿದೆ. ಈ ದ್ವೀಪದಲ್ಲಿ ದೂರ್ವಾಸರು ತಪಸ್ಸು ಮಾಡುತ್ತಿದ್ದಾರಂತೆ. ದ್ವಾದಶಿಯ ದಿನ ಸೂರ್ಯೋದಕ್ಕಿಂತ ಮುಂಚೆಯೇ ಎದ್ದ ಪಕ್ಷದಲ್ಲಿ ಈ ಉಗ್ರಕೋಪದ ಮುನಿ ಶಂಖ ಊದುವುದು ಕೇಳುವುದಂತೆ. ಅಷ್ಟು ಬೇಗ ನಾವು ಎದ್ದಿದ್ದೇ ಇಲ್ಲ ಎನ್ನಿ! ಕೇವಲ ಒಂದು ಮೈಲಿಯಾಚೆ ಪುರಾತನ ಕಾಲದಲ್ಲಿ ಪಾಂಡವರು ಬದುಕಿದ್ದರು. ದ್ರೌಪದಿಯ ಮೇಲಿನ ಪ್ರೇಮದಲ್ಲಿ ಭೀಮಸೇನ ತುಂಗಾನದಿಗೊಂದು ಅಣೆಕಟ್ಟನ್ನು ಕಟ್ಟಿ ಅವಳಿಗೊಂದು ಈಜುವಕೊಳ ನಿರ್ಮಿಸಿದ. ಇದರಿಂದ ಬೆಳಗಿನ ಅಹ್ನಿಕಕ್ಕೆ ನೀರು ಸಾಲಾದಾಗ ದೂರ್ವಾಸರಿಗೆ ಸಿಟ್ಟುಬಂತು. ಭೀಮಸೇನ ಮುನಿಯ ಕೋಪಕ್ಕೆ ಬಎದರಿ ಮೂರು ಕಡೆಗಳಲ್ಲಿ ನೀರನ್ನು ಸೀಳಿದ. ಈಗಲೂ ತುಂಗೆ ಈ ಸೀಳುಗಳಲ್ಲಿ ಹರಿಯುತ್ತಾಳೆ; ದ್ರೌಪದಿಗೆಂದು ಭೀಮಸೇನ ಮಾಡಿದ ಕೊಳಗಳಲ್ಲಿ ಮಕ್ಕಳು ಈಜುವುದು ಕಲಿಯುತ್ತಾರೆ.

ಮಹಾಭಾರತದ ಪಾಂಡವರು, ರಾಮಾಯಣದ ರಾಮ ಮತ್ತು ಸೀತೆ ಇವರು ಮಾತ್ರ ಏಕೆ ಭಾರತದ ಹಳ್ಳಿಗಳನ್ನು ಸುತ್ತುತ್ತ, ತಮ್ಮ ಕಷ್ಟಕಾಲದಲ್ಲಿ ಅಲ್ಲಲ್ಲಿ ತಂಗುತ್ತ, ಅಲ್ಲಿ ಇಲ್ಲಿ ಅಡಿಗೆ ಮಾಡಿ ಊಟಮಾಡುತ್ತ ಕಾಲಕಳೆಯುತ್ತಾರೆ? ಆದರೆ ಕೃಷ್ಣ ಹಾಗೆ ಯಾಕೆ ಕಳೆಯುವುದಿಲ್ಲ?-ಈ ಪ್ರಶ್ನೆ ನಮ್ಮನ್ನು ಚಕಿತಗೊಳಿಸುತ್ತದೆ. ಜನಸಂಘದವರು ದೊಡ್ಡ ರಾಜಕೀಯ ಶಕ್ತಿಯಾಗಿರುವ ಭೂಪ್ರದೇಶದಲ್ಲಿ ಪ್ರಾಯಶಃ ಕೃಷ್ಣ ಕೂಡ ಹೀಗೆ ಸುತ್ತಿರಬಹುದು. ಕಮ್ಯೂನಿಸ್ಟರು ಪ್ರಬಲರಾಗಿರುವ ಶಿವನಕ್ಷೇತ್ರ, ಸೋಷಿಯಲಿಸ್ಟರು ಬೇರೂರಿರುವ ರಾಮನಕ್ಷೇತ್ರ, ಜನಸಂಘದವರ ತತ್ವ್ತವನ್ನು ಒಪ್ಪುವ ಕೃಷ್ಣನ ಕ್ಷೇತ್ರ ಎಂದು ಇಂಡಿಯಾವನ್ನು ಲೋಹಿಯ ಒಮ್ಮೆ ಮೂರು ಭಾಗಗಳಾಗಿ ವಿಂಗಡಿಸಿದ್ದರು. ಪುರಾಣಗಳಿಗೂ ಸಮಕಾಲೀನ ವಾಸ್ತವಕ್ಕೂ ಇರುವ ಇಂಥ ಅನೇಕ ಸಂಬಂಧಗಳನ್ನು ನಾವಿನ್ನೂ ಆಳವಾಗಿ ಅಭ್ಯಾಸಮಾಡಿಲ್ಲ. ಏನೇ ಇರಲಿ, ಈ ರಾಮಚಂದ್ರ ಮತ್ತು ಪಾಂಡವರು ಪುರಾತನ ಕಾಲದ ಸಾಮ್ರಾಜ್ಯಶಾಹಿಯ ಪ್ರತಿನಿಧಿಗಳಾಗಿದ್ದರೂ ಕೂಡ ಅವರು ತಮ್ಮ ಊರಿನ ಊಟಮಾಡುತ್ತಾರೆ, ನಮ್ಮ ನಾಡಿನ ಬಟ್ಟೆ ಹಾಕಿಕೊಳ್ಳುತ್ತಾರೆ, ನಮ್ಮ ಭಾಷೆಗಳನ್ನು ಮಾತನಾಡುತ್ತಾರೆ. ನಾನು ಹುಟ್ಟಿ ಬೆಳೆದ ಸಹ್ಯಾದ್ರಿ ಪವರ್ತತ ಕಾಡುಗಳಲ್ಲಿ ಸಿಗುವ ಸೀತಾಳದಂಡ ಎಂದರೆ ಸೀತೆಗೆ ಪ್ರಿಯವಾದ ಹೂವು.

ಹಳ್ಳಿಗಳಲ್ಲಿ ನಮ್ಮದೇ ಆದ ಬಗೆಯ ರಾಷ್ಟ್ರ ಮತ್ತು ಜಾಗತಿಕ ಪ್ರಜ್ಞೆಗಳಿವೆ. ಅದರ ಭೂಗೋಳ ಅವೈಜ್ಞಾನಿಕವಿರಬಹುದು; ಆದರೆ ಪ್ರತಿಯೊಂದು ಜಾತಿಗೂ ಅದರದೇ ಆದ ಜಗತ್ತಿನ ಕಲ್ಪನೆಯಿದೆ. ಹುಡುಗನಾಗಿದ್ದಾಗ ನಾನು ತುಂಗಾನದಿಯ ದಡದಲ್ಲಿ ಜಪ ಮಾಡಲೆಂದು ಬೆಳಗಿನ ಸೂರ್ಯನಿಗೆ ಎದುರಾಗಿ ನಿಂತಾಗ ನಾನಿದ್ದ ಜಾಗ ಮತ್ತು ಕಾಲವನ್ನು ನಾನು ಪಡೆದ ವಿಶ್ವದ ಅರಿವಿನಲ್ಲಿ ಮೊದಲು ಸ್ಥಾಪಿಸಿಕೊಂಡು ಮುಂದುವರಿಯುತ್ತಿದ್ದೆ. ನಮ್ಮ ಬಾವಿಯಿಂದ ಸೇದಿದ ನೀರನ್ನು ಉದ್ಧರಣೆಯಲ್ಲಿ ಎತ್ತುವಾಗ ಸಪ್ತಪುಣ್ಯ ನದಿಗಳ ನೀರು ಅದಾಗಿರುತ್ತಿತ್ತು.

ಈ ಬಗೆಯ ಹಳಹಳಿಕೆಯಿಂದ ಪ್ರಯೋಜನವಿಲ್ಲವೆಂಬುದು ನನಗೆ ಗೊತ್ತು. ಬಹು ರಾಷ್ಟ್ರ ಸಂಸ್ಥೆಗಳು ಮತ್ತು ರಷ್ಯನ್ನರಂಥ ಆಧುನಿಕ ಸಾಮ್ರಾಜ್ಯಶಾಹಿಗಳು ನಮ್ಮ ಮೇಲೆ ಹೇರುತ್ತಿರುವ ಜಾಗತಿಕ ಅರಿವನ್ನು ನಮ್ಮ ಪಉರಾತನ ಪೌರಾಣಿಕ ಅರಿವಿನಿಂದ ಎದುರಿಸುವುದು ಸಾಧ್ಯವಿಲ್ಲವೆಂಬುದೂ ನನಗೆ ತಿಳಿದಿದೆ.

ಲ್ಯಾಟಿನ್ ಅಮೇರಿಕನ್ ಲೇಖಕರಿಗೆ ಏಕಕಾಲದಲ್ಲಿ ತಾವು ಹಿಂದುಳಿದ ದೇಶದವರೆಂದು ಜೊತೆಗೇ ಯೂರೋಪಿಯನ್ನರೆಂದೂ ಅನಿಸುತ್ತದೆ. ಹತ್ತೊಂಬತ್ತನೆಯ ಶತಮಾನದ ರಷ್ಯನ್ ಲೇಖಕರಿಗೂ ಹೀಗೆಯೇ ಅನ್ನಿಸಿತ್ತು. ಭಾರತೀಯ ಲೇಖಕರಾದ ನಮ್ಮ ಸ್ಥಿತಿಯೂ ಆ ತರಹದ್ದೇ. ವರ್ತಮಾನದಲ್ಲಿ ಅವಮಾನಿತರಾಗಿ, ಭೂತಕಾಲದಲ್ಲಿ ಸಾಮ್ರಾಜ್ಯ ಕಟ್ಟಿದ್ದ ಜಂಬ ಉಳ್ಳವರಾಗಿ ಬದುಕುತ್ತಿರುವ ನಮ್ಮಂಥವರು ಅರಿಯಬೇಕಾದ್ದು ಇದು: ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಮಾತ್ರ ರಾಷ್ಟ್ರಪ್ರಜ್ಞೆ ನೈಜವಾಗಬಲ್ಲುದು; ರಾಷ್ಟ್ರಗಳು ಸಮಾನವಾದಾಗ ಮಾತ್ರ ಜಾಗತಿಕ ಅರಿವು ನಿಜವಾಗಿಯೂ ಉದಾತ್ತವಾದ ಭಾವನೆಯಾಗಬಲ್ಲದು.

ದೆಹಲಿಯಲ್ಲಿ ಡಿಸೆಂಬರ್ ೧೯೭೯ರಲ್ಲಿ ನಡೆದ ಸಾಹಿತ್ಯ ಅಕಾಡೆಮಿ ಸೆಮಿನಾರ್ನಲ್ಲಿ ಓದಿದ ಲೇಖನದ ಕೆಲವು ಭಾಗಗಳು.

* * *