ನಿರಂಜನರನ್ನು ಅಭಿನಂದಿಸಲು ಬೆಂಗಳೂರಿಗೆ ಬರಬೇಕೆಂದಿದ್ದ ನನಗೆ ಇದ್ದಕ್ಕಿದ್ದಂತೆ ಅನಾರೋಗ್ಯವಾಗಿ ಮಲಗಿಕೊಂಡಿರಬೇಕಾಗಿ ಬಂದಿದೆ. ನನಗೆ ಆಗಿರುವುದು ಖಾಯಿಲೆಯೂ ಅಲ್ಲ; ಕೂತು ಕೆಲಸ ಮಾಡುವವರನ್ನೆಲ್ಲ ಸಾಮಾನ್ಯವಾಗಿ ಕಾಡುವ ಸ್ಪಾಂಡಿಲೈಟೀಸ್. ಇದು ಬೆನ್ನು ಮುರಿಯುವಂತೆ ಕೆಲಸ ಮಾಡುವ ಕೂಲಿಗಾರರಿಗೆ ಬರುವುದಿಲ್ಲವಂತೆ. ಬುದ್ಧಿಯ ಕೆಲಸವನ್ನು ಮಾಡುತ್ತಾ, ನಾವು ಮಾಡಿದ್ದಕ್ಕಿಂತ ಹೆಚ್ಚಿನ ಕೀರ್ತಿಯನ್ನು ಪಡೆಯುವ ನಮ್ಮಂತಹವರನ್ನು ಕಾಡುವ ಉಪದ್ವ್ಯಾಪ ಇದು. ಈ ಮಾತುಗಳಿಂದ ಪ್ರಾರಂಭಿಸಿ ನಿರಂಜನರ ಬಗ್ಗೆ ನನಗಿರುವ ಪ್ರೀತಿ, ಅಭಿಮಾನಗಳನ್ನು ಹೇಳಿಕೊಳ್ಳುವುದರಲ್ಲೂ ಅರ್ಥವಿರಬಹುದು. ದುಡಿಯುವ ಜನರ ಪರವಾಗಿ ನನ್ನ ಮನಸ್ಸನ್ನು ತಿರುಗಿಸಿದ ಹಲವು ಮುಖ್ಯ ಹಿರಿಯರಲ್ಲಿ ನಿರಂಜನರೂ ಒಬ್ಬರು.

ಸುಮಾರು ೩೦ ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರಂಜನರ ಪರಿಚಯವಾದದ್ದು ನನಗೆ. ಶಿವಮೊಗ್ಗದಲ್ಲಿ ಸಮಾಜವಾದಿಗಳ ಜೊತೆ ಬೆಳೆಯುತ್ತಿದ್ದ ನನ್ನಲ್ಲಿ ಮಾರ್ಕ್ಸ್‌ವಾದದ ಬಗ್ಗೆ ಕುತೂಹಲವನ್ನು ಹುಟ್ಟಿಸಿದ ಭದ್ರಾವತಿಯ ಟ್ರೇಡ್ ಯೂನಿಯನಿಸ್ಟ್ ಒಬ್ಬರು ನಿರಂಜನರ ವಿಚಾರಗಳನ್ನು ನನಗೆ ಹೇಳಿದ್ದರು. ಈ ಕಮ್ಯೂನಿಸ್ಟ್ ವಿಚಾರದ ಜೊತೆಯಲ್ಲೇ ಅದಕ್ಕೆ ವಿರೋಧವಾದ ರಾಯ್ ವಿಚಾರವನ್ನು ನಮಗೆ ಈಗ ಗತಿಸಿದ ರಂಗನಾಥರಾವ್ ಎಂಬ ಚಿಂತಕರು ಪಾಠ ಮಾಡಿದ್ದರು. ಈ ತಿಕ್ಕಾಟದ ನಡುವೆ ಗೋಪಾಲಗೌಡರ ಭಾವುಕತೆಯಲ್ಲಿ ಸಮಾಜವಾದಿ ವಿಚಾರವನ್ನು ನಾವು ಗಟ್ಟಿ ಮಾಡಿಕೊಳ್ಳಲು ಚಿಂತನೆಯಲ್ಲೂ, ಕ್ರಿಯೆಯಲ್ಲೂ ಹೆಣಗಿದ್ದೆವು. ಹೀಗೆ ಸಮಾಜವಾದೀ ವಿಚಾರ ಮತ್ತು ಕ್ರಿಯೆಯಿಂದ ಪ್ರಚೋದಿತನಾಗಿ ಮೈಸೂರಿಗೆ ಬಂದ ಕನಸುಗಾರನಾದ ನನಗೆ ನಿರಂಜನರ ಪರಿಚಯವಾಯ್ತು. ಆಗ ನಾನು ಸುಣ್ಣದಕೇರಿಯಲ್ಲಿ ಒಂದು ರೂಮಿನಲ್ಲಿದ್ದುಕೊಂಡು, ಸ್ವತಃ ಅಡಿಗೆಮಾಡಿ ಊಟಮಾಡಿ ಸಿಗರೇಟು ಸೇದುತ್ತ ಷೆಲ್ಲಿಯ ಕನಸುಗಾರಿಕೆಯಲ್ಲಿ ಮೈಮರೆತು ಓಡಾಡುತ್ತಿದ್ದೆ. ಆಗ ನನಗೆ ನನ್ನ ಹಾಗೆ ಹಸಿದಿದ್ದ ಇನ್ನೊಬ್ಬ ಕಮ್ಯೂನಿಸ್ಟ್ ಗೆಳೆಯ ಗೋಪಾಲಕೃಷ್ಣ ಎಂಬುವವನಿದ್ದ. (ಈಗವನು ಮಾಸ್ಕೋದಲ್ಲಿದ್ದಾನೆ. GOPSKI ಎಂದು ನಾನವನನ್ನು ಪ್ರೀತಿಯಲ್ಲಿ ಕರೆಯೋದು). ಹಾಗೆಯೇ ಗಾರ್ಕಿಯ ಕಥೆಗಳಿಂದ ಹುಚ್ಚನಾಗಿದ್ದ ಕೆ.ವಿ. ಸುಬ್ಬಣ್ಣ ಇನ್ನೊಬ್ಬ ನನ್ನ ಗೆಳೆಯ. ಈ ನಮ್ಮ ಲೋಕಕ್ಕೆ ಪ್ರಿಯ ಸ್ನೇಹಿತನಂತೆ ಪ್ರವೇಶಿಸಿದ ನಿರಂಜನರು ಆಗಲೇ ತುಂಬ ಪ್ರಸಿದ್ಧರು.

ಹೊಸದೊಂದು ಪ್ರಪಂಚವನ್ನು ತಮ್ಮೊಡನೆ ನಿರಂಜನರು ತಂದರು. ಹಳ್ಳಿಯ ಮುಕ್ಕನಾಗಿದ್ದ ನನ್ನನ್ನು ಎತ್ತೆತ್ತಲೋ ಚಿಗುರೊಡೆದು ಬೆಳೆಯುವಂತೆ ಮಾಡಿದ್ದ ಶಿವಮೊಗ್ಗದ ಸಮಾಜವಾದಿ ಆಂದೋಲನದ ಪ್ರಭಾವದ ನಂತರ, ಅಂತರ್‌ರಾಷ್ಟ್ರೀಯ ವಿದ್ಯಮಾನಗಳ ಕಣ್ಣಿಂದ ನಮ್ಮ ಅನುಭವಗಳನ್ನು ನೋಡಿಕೊಳ್ಳುವಂತೆ ಪ್ರೇರೇಪಿಸಿದವರು ನಿರಂಜನರು. ನಾವು ಚಿಕ್ಕವರೆಂದು ಕಾಣದೆ ನಮ್ಮನ್ನು ಸಮಾನರಂತೆ ನಿರಂಜನರು ಕಂಡು ನಮ್ಮ ಆತ್ಮಪ್ರತ್ಯಯವನ್ನು ಬೆಳೆಸಿದರು. ನಿರಂಜನರು ತಾವೊಬ್ಬರೇ ನಮ್ಮ ಲೋಕಕ್ಕೆ ಬರಲಿಲ್ಲ. ತಮ್ಮ ಜೊತೆಯಲ್ಲಿ ಆರ್‌ಎಸ್‌ಎನ್ ಎಂಬ ಒಬ್ಬ ಅದ್ಭುತ ಕಲಾವಿದನನ್ನು ತಂದರು. ಕೆಲವೊಮ್ಮೆ ಅರೆಹುಚ್ಚನೆಂದು ನಮಗೆ ಅನ್ನಿಸುತ್ತಿದ್ದ ಆರ್‌ಎಸ್‌ಎನ್ ತಮ್ಮ ವಿಚಿತ್ರ ಉಡುಪಿನಲ್ಲಿ, ಅತ್ಯಂತ ಸುಂದರವಾದ ಗಡ್ಡದ ಮುಖದಲ್ಲಿ, ಹೊಳೆಯುವ ಕಣ್ಣುಗಳಲ್ಲಿ ನಮ್ಮ ಲೋಕವನ್ನೇ ಬದಲಿಸಿಬಿಟ್ಟರು. ಅವರ ಅಸ್ಖಲಿತ ಇಂಗ್ಲಿಷ್ ಮಾತಿನ ಧಾರೆಯಲ್ಲಿ ಷಾ, ಷೇಕ್ಸ್‌ಪಿಯರ್, ಫ್ರಾಯ್ಡ್, ಮಾರ್ಕ್ಸ್, ಗಾಂಧಿ – ಹೀಗೆ ಹಲವು ವಿಚಾರಗಳು ನಮ್ಮ ಎಳೆ ಮನಸ್ಸನ್ನು ಮುತ್ತಿಗೆ ಹಾಕಿದವು. ನನ್ನ ಬದುಕಿನಲ್ಲಿ ಬಂದ ಮೊದಲನೆಯ ದೊಡ್ಡ ಬೊಹಿಮಿಯನ್ ಮನುಷ್ಯ ಈ ಆರ್‌ಎಸ್‌ಎನ್. ಹಾಗೆಯೇ ನಿರಂಜನರ ಮುಖೇನ ಫ್ರಾನ್ಸ್‌ನಿಂದ ಬಂದಿದ್ದ ಚಿಂತಕರೊಬ್ಬರ ವಿಚಾರಗಳು ನಮಗೆ ಪರಿಚಯವಾದವು. ಅವರ ಹೆಸರು ಥಟ್ಟನೆ ಜ್ಞಾಪಕವಾಗುತ್ತಿಲ್ಲ…. ಶ್ರೀನಿವಾಸನ್ ಇರಬೇಕು. ಎಲಿಯಟ್‌ನ ನವ್ಯ ಕಾವ್ಯದ ವಿರುದ್ಧದ ಅವರ ಲೇಖನಗಳು ‘ಜನಪ್ರಗತಿ’ಯಲ್ಲಿ ಪ್ರಕಟವಾಗಿವೆ.

ಆ ದಿನಗಳಲ್ಲಿ ನಿರಂಜನರಿಗೆ ಒಂದು ಮಿಷನ್ ಇತ್ತು: ಅದೆಂದರೆ ಅ.ನ.ಕೃ.ರಲ್ಲಿ ಲಂಪಟತನವಾಗಿ ಬಿಟ್ಟಿದ್ದ ಪ್ರಗತಿಶೀಲತೆಯನ್ನು ರಕ್ಷಿಸಿ, ಬೂರ್ಜ್ವ ವ್ಯಕ್ತಿವಾದಕ್ಕೆ ಇಂಬು ಕೊಡುವ ಪ್ರೇರಣೆಯ ಅಡಿಗರ ನವ್ಯತೆಗೆ ವಿರೋಧವಾದ ದೃಢವಾದ ಒಂದು ಪ್ರಗತಿಶೀಲ ಜನಪರ ನೆಲೆಯನ್ನು ಸ್ಥಾಪಿಸುವುದು. ಷೆಲ್ಲಿ ಮತ್ತು ಗಾರ್ಕಿಯರನ್ನು ಬಹುವಾಗಿ ಇಷ್ಟಪಡುತ್ತಿದ್ದ ನನಗೆ ನಿರಂಜನರ ಮಿಷನ್ ತುಂಬ ಪ್ರಿಯವೆನ್ನಿಸಿತ್ತು. ಶಿವಮೊಗ್ಗದಲ್ಲಿ ಅಡಿಗರ ‘ಕಟ್ಟುವೆವು ನಾವು’ ಕವನಗಳಿಂದ ಪ್ರಭಾವಿತನಾಗಿ ಅದರ ಅನುಕರಣೆಯ ಹಲವು ಪದ್ಯಗಳನ್ನು ಬರೆದಿದ್ದ ನನಗೆ ಅಡಿಗರು ತಮ್ಮ ಭ್ರಮನಿರಸನೆಯಲ್ಲಿ ಅಡ್ಡಹಾಡಿ ಹಿಡಿಯುತ್ತಿದ್ದಾರೆಂಬ ನಿರಂಜನರ ವಾದ ಒಪ್ಪಿಗೆಯಾಗಿತ್ತು.

ನಿರಂಜನರು ನಮ್ಮ ವಿಚಾರಗಳನ್ನು ಮಾತ್ರವಲ್ಲ, ನಮ್ಮ ಜೀವನವನ್ನೂ ಹೊಕ್ಕಿದ್ದರು. ಆ ದಿನಗಳಲ್ಲಿ ಶ್ರೀಮತಿ ಅನುಪಮಾ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ, ನಾನು ಮತ್ತು ಗೋಪಾಲಕೃಷ್ಣ – ನಿರಂಜನ ಮತ್ತು ಅನುಪಮಾರ ನಡುವೆ ಪೋಸ್ಟ್‌ಮನ್ ಕೆಲಸವನ್ನು ಮಾಡಿದ್ದೂ ಉಂಟು. ಕೆಲವು ಸಾರಿ ನಿರಂಜನರು ನನ್ನ ರೂಮಿನಲ್ಲಿ ಚಾಪೆಯ ಮೇಲೆ ಮಲಗುತ್ತಿದ್ದುದುಂಟು. ಒನ್‌ಬೈ-ಟೂ ಕಾಫಿ, ಒನ್‌ಬೈ-ಟೂ ತಿಂಡಿ ತಿಂದು ನಾನು ಗಂಟೆಗಟ್ಟಲೆ ಮರಗಳ ಕೆಳಗೆ ಕೂತು ಮಾತಾಡಿದ್ದುಂಟು. ಹೀಗಾಗಿ ಆ ದಿನಗಳಲ್ಲಿನ ನನ್ನ ಬಡತನ ನನ್ನನ್ನೆಂದೂ ಬಾಧಿಸಿದ್ದಿಲ್ಲ. ಒಮ್ಮೆ ನಾನು ರಜೆಗೆಂದು ತೀರ್ಥಹಳ್ಳಿಗೆ ಹೋಗಿದ್ದಾಗ ಪೊಲೀಸರು ಬಂದು ನನ್ನ ರೂಮನ್ನು ತಪಾಸಣೆ ಮಾಡಿದ್ದರು – ನಿರಂಜನ ನನಗೆ ಪರಿಚಯದವರೆಂದು. ಆದರೆ ಆಗಾಗಲೇ ಸ್ಟ್ಯಾಲಿನ್ನಿನ ಘೋರ ಪಾಪಗಳು ಬಯಲಾದ್ದರಿಂದ ನಾನು ಕಮ್ಯೂನಿಸ್ಟ್ ಪಕ್ಷದ ವಿರೋಧಿಯಾಗಿಬಿಟ್ಟಿದ್ದೆ.

ಈ ನನ್ನ ಬದಲಾವಣೆ ನಾನೀಗ ಹೇಳುತ್ತಿರುವಷ್ಟು ಸರಳವಲ್ಲ. ನನಗಿನ್ನೂ ನೆನಪಿದೆ : ಶರ್ಮ ಮತ್ತು ಅಡಿಗರ ಹೊಸ ಪದ್ಯಗಳನ್ನು ವಿರೋಧಿಸುತ್ತಿದ್ದ ನಾನು ರೊಮ್ಯಾಂಟಿಕ್ ಕಾವ್ಯವನ್ನು ಸಮರ್ಥಿಸಿ ಆರು ಲೇಖನಗಳನ್ನು ‘ಜನಪ್ರಗತಿ’ಗೆಂದು ಬರೆದು ಮುಗಿಸಿದ್ದೆ. ಇದನ್ನು ಬರೆಯಲು ಪ್ರೇರೇಪಿಸಿದ್ದವರು ನಿರಂಜನರು. ಚಾಮುಂಡಿಪುರಂನ ಕತ್ತಲಿನ ಕೋಣೆಯೊಂದರಲ್ಲಿ ಗಂಟುಗಂಟಾದ ನನ್ನ ಹರಕು ಹಾಸಿಗೆಯ ಮೇಲೆ ಕೂತು, ಒಂದು ದಿನ ಸುಮ್ಮನೇ ಎಲಿಯಟ್‌ನ ‘ಪ್ರಿಲ್ಸೂಡ್ಸ್’ ಎಂಬ ಪದ್ಯವನ್ನು ಓದುತ್ತಿದ್ದಂತೆ ನನಗೆ ಪದ್ಯ ತುಂಬ ಚೆನ್ನಾಗಿದೆ ಅನ್ನಿಸಿಬಿಟ್ಟಿತು. ಇದರಿಂದ ಕಕ್ಕಾಬಿಕ್ಕಿಯಾದ ನಾನು ಅಡಿಗರ ಹೊಸ ಪದ್ಯಗಳನ್ನೂ, ಶರ್ಮರ ಹೊಸ ಪದ್ಯಗಳನ್ನೂ ಮತ್ತೆ ಓದಿದೆ. ನಾನು ಯೊಚಿಸದ್ದೆಲ್ಲವೂ ತಪ್ಪೆಂದು ನನಗೆ ಅನ್ನಿಸಿತು, ಆ ದಿನಗಳಲ್ಲಿ ನಾನೊಂದಿಷ್ಟು ಕಥೆಗಳನ್ನು ಬರೆದು ಚಾಮುಂಡಿಪುರಂನಲ್ಲೇ ಇದ್ದ ಆನಂದರಿಗೆ ಓದಲೆಂದು ಕೊಟ್ಟಿದ್ದೆ. ಅವರು ತಮ್ಮ ಕೆಂಪು ಪೆನ್ಸಿಲ್ಲನ್ನು ಉಪಯೋಗಿಸಿ ನನ್ನ ಕಥೆಗಳ ತುಂಬ ಕೋಪಾವೇಶದಿಂದ ಗೀಚಿದ್ದರು. ಇವು ‘ನವ್ಯ ಕಥೆಗಳು’ ಎಂದು ಸಿಟ್ಟಿನಲ್ಲಿ ನನ್ನ ಕಥೆಗಳನ್ನು ಮೊದಲು ಕರೆದವರೇ ಅವರು. ಇಂಗ್ಲಿಷ್‌ನಲ್ಲಿ ಅವರದ್ದೊಂದು ವ್ಯಾಖ್ಯಾನವಿತ್ತು : “ಈ ಕಥೆಗಳ ರಹಸ್ಯವನ್ನು ಬಿಚ್ಚಬಲ್ಲ ಬೀಗದ ಕೈ ಲೇಖಕನ ಹತ್ತಿರ ಮಾತ್ರ ಇರುವುದು” ಎಂದು. ಆನಂದರ ವ್ಯಾಖ್ಯೆಯಿಂದ ನವ್ಯ ಕಾವ್ಯವನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದ ನಾನು ತಬ್ಬಿಬ್ಬಾಗಿದ್ದೆ. ಅಂದರೆ ಎಲ್ಲೋ ಆಳದಲ್ಲಿ ನಾನು ಈ ಹೊಸ ಮಾರ್ಗಕ್ಕೆ ಪರಿವರ್ತಿನಾಗಿದ್ದೆ ಎಂದಿರಬಹುದು. ಆನಂದರು ಖಂಡಿಸಿದ ಕಥೆಗಳನ್ನು ಅಡಗರಿಗೆ ಕೊಟ್ಟೆ. ಅವರೂ ನನ್ನ ತೆಳುವಾದ ಗಹನತೆಯನ್ನು ಟೀಕಿಸಿದರು. ಆದರೆ ನನ್ನಲ್ಲೊಂದು ಹೊಸ ಧ್ವನಿಯನ್ನು ಗುರುತಿಸಿ ಮೆಚ್ಚಿದರು.

ಈ ಘಟನೆಗಳ ನಂತರ ನಾನು ವೈಚಾರಿಕವಾಗಿ ನಿರಂಜನದಿಂದ ದೂರವಾಗಬೇಕಾಗಿ ಅಡಿಗರಿಗೆ ಹತ್ತಿರವಾಗಬೇಕಾಗಿ ಬಂದಿತು. ಆದರೆ ಹೀಗೆ ದೂರವಾದಾಗಲೂ ನನ್ನ ಭಾವನಾಲೋಕವನ್ನು ನಿರಂಜನರು ಬಹಳ ಕಾಲದವರೆಗೆ ಆಳುತ್ತಲೇ ಇದ್ದರು. ನನ್ನ ಮೊದಲ ಕಥೆಯನ್ನು – ‘ಕೈ ತಪ್ಪಿತು’ ಎಂಬುದು ಅದರ ಹೆಸರು – ಪ್ರಕಟಿಸಿದವರು ನಿರಂಜನರು. ಚಿತ್ರಗುಪ್ತದಲ್ಲೋ, ಜನಪ್ರಗತಿಯಲ್ಲೋ ಮರೆತಿದ್ದೇನೆ. ಆ ದಿನಗಳ ನನ್ನ ಬರವಣಿಗೆಯಲ್ಲಿ ನನಗೆ ಮಾದರಿಯಾಗಿದ್ದುದು ನಿರಂಜನರ ‘ಕೊನೆಯ ಗಿರಾಕಿ’. ಒಬ್ಬ ಲೇಖಕನೆಂದರೆ ಹೇಗೆ ಬದುಕುತ್ತಾನೆ? ಹೇಗೆ ಕಾಣುತ್ತಾನೆ? ಎಂಬುದನ್ನು ನಮ್ಮ ಮನಸ್ಸಿನಲ್ಲಿ ಕೆಲವರು ನೆಡುತ್ತಾರೆ. ಮೊದಲು ಅಂತಹದೊಂದು ಚಿತ್ರವನ್ನು ನೆಟ್ಟವರು ಅ.ನ.ಕೃ. ಮತ್ತು ತ.ರಾ.ಸು; ಅದಾದ ಮೇಲೆ ಬೇಂದ್ರೆ ಮತ್ತು ಕುವೆಂಪು; ಹತ್ತಿರದಿಂದ ಅಂತಹದೊಂದು ಚಿತ್ರವನ್ನು ನನಗೆ ಕೊಟ್ಟವರು ನಿರಂಜನ. ಅವರು ಕೈ ಮುರಿದುಕೊಂಡು ನೋವಿನಲ್ಲಿ ನಮ್ಮ ಮೊದಲ ಕಾದಂಬರಿಯನ್ನು ಬರೆದದ್ದು, ಪತ್ರಿಕೆಗಳಿಗೆ ಕಾಲಂಗಳನ್ನು ಬರೆದು ಸ್ವತಂತ್ರವಾಗಿ ಜೀವಿಸುತ್ತಿದ್ದುದು, ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನೆಲ್ಲಾ ಯಾವ ವಿಶ್ವವಿದ್ಯಾನಿಲಯದ ಹಂಗಿಲ್ಲದೆ, ತನ್ನ ಕಿರುಕೋಣೆಯ ಮೈಮರೆವಿನಲ್ಲಿ ಸ್ವಾಧೀನಪಡಿಸಿಕೊಂಡದ್ದು – ಇವೆಲ್ಲವೂ ಅದ್ಭುತವಾದ ವಿಷಯಗಳೇ, ಕನ್ನಡ ಇವತ್ತು ಏನಾಗಿದೆಯೋ, ನನ್ನಂತಹ ಲೇಖಕರು ಏನಾಗಿದ್ದೇವೆಯೋ ಅದರ ಹಿಂದೆ ನಿರಂಜನರಂಥವರು ಇದ್ದಾರೆ. ಎಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ ಇದನ್ನು ನಾನು ಸಂಕೋಚವಿಲ್ಲದೆ ಹೇಳುವೆ. ಎಮರ್ಜನ್ಸಿಯ ದಿನಗಳಲ್ಲಿ ನಿರಂಜನರು ಕಟ್ಟಿದ ಪ್ರಗತಿ ಪಂಥ ನನಗಿಷ್ಟವಾಗಲಿಲ್ಲ. ಆ ಬಗ್ಗೆ ನಾನು ಏನೋ ಮಾತಾಡಿದೆ. ಅದರಿಂದ ನಿರಂಜನರಿಗೆ ಬೇಸರವೂ ಆಯಿತು. ಆದರೆ ಆ ಮಾತಾಡುವಾಗಲೂ ನಿರಂಜನರು ನನಗೆ ಅಣ್ಣನಿದ್ದಂತೆ ಎಂಬುದನ್ನೂ ನಾನು ಮರೆತಿರಲಿಲ್ಲ. ದುರದೃಷ್ಟವೆಂದರೆ ಒಳಗೆ ಅನ್ನಿಸುವ ಇಂಥ ಗೌರವದ ಭಾವನೆಗಳನ್ನು ಕಿತ್ತಾಟದ ಸಮಯದಲ್ಲಿ ಹೇಳಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಹಾಗೆ ಹೇಳುವುದು ಸಜ್ಜನಿಕೆಯ ನಾಟಕ ಎನಿಸಬಹುದು, ಉಪಾಯ ಎನಿಸಬಹುದು.

ಅಲ್ಲದೆ ನಾವು ಹತ್ತಿರದವರೇ ದೂರವಾಗಿ ಬಿಡುತ್ತೇವೆ. ನಮ್ಮ ಅತ್ಯುತ್ತಮವಾದದ್ದನ್ನು ಬರೆಯುವ ಸಮಯದಲ್ಲಿ ನಾವು ನಮ್ಮ ಜೊತೆಯ ಲೇಖಕರ ಅತ್ಯುತ್ತಮವಾದದ್ದನ್ನು ಗ್ರಹಿಸಿ ಮೆಚ್ಚಲಾರದವರೂ ಆಗಿಬಿಡುತ್ತೇವೆ. ಅದೊಂದು ಬರೆಯುವ ಪ್ರಕ್ರಿಯೆಯಲ್ಲೇ – ಏಕಾಗ್ರತೆಯಲ್ಲೇ – ಅನಿವಾರ್ಯವಾಗುವ ಮನಃಸ್ಥಿತಿ ಇರಬಹುದು. ನಮ್ಮದಷ್ಟೇ ನಮಗೆ ಉಜ್ವಲವಾಗಿ ಕಾಣಿಸುತ್ತಿರುವ ಇಂಥ  ಒಂದು ಸ್ಥಿತಿಯಿಂದ ಒಳ್ಳೆಯ ಕೃತಿಗಳು ಬರುತ್ತವೆ ಎಂಬುದು ಮಾತ್ರ ಈ ಬಗೆಯ ಸ್ವಾರ್ಥಕ್ಕಿರುವ ಸಮರ್ಥನೆ. ಗರ್ಭಿಣಿಗೆ ತನ್ನ ಬಸುರೇ ಪ್ರಪಂಚವೆನ್ನಿಸುವಂತೆ ತಿಳಿದು ಬದುಕವ ಲೇಖಕರಿಗೆ ಅಂತಹ ದಿನಗಳು ಮುಗಿದ ನಂತರ – ದೆವ್ವ ಹಿಡಿದಂತಿರುವ ಆವೇಶದ ಕಾಲ ಮುಗಿದ ನಂತರ – ಹೊರಗಿನ ಪ್ರಪಂಚದಲ್ಲಿ ಬೆಲೆಯುಳ್ಳದ್ದನ್ನು ಬರೆದವರು ಹಲವರಿದ್ದಾರೆ ಎಂಬ ಎಚ್ಚರ ಮೂಡುತ್ತದೆ. ನಮ್ಮದಲ್ಲದ್ದು ಕೂಡ ಸಂಸ್ಕೃತಿಗೆ ಎಷ್ಟು ಅಗತ್ಯವೆಂಬ ಜ್ಞಾನೋದಯವಾಗುತ್ತದೆ.

ನಮ್ಮ ಸಮಕಾಲೀನರನ್ನು ಅರ್ಥಮಾಡಿಕೊಳ್ಳಲು ಇರುವ ಅಡ್ಡಿ ಆತಂಕಗಳು ಹೀಗೇ ಇನ್ನೂ ಹಲವು. ಪರಿಷತ್ತಿನ ಚುನಾವಣೆಯಲ್ಲಿ ನಿರಂಜನರು ನಮಗೆ ವಿರೋಧ ಪಕ್ಷದವರಾದರು. ನಾವು ಒಪ್ಪದ ನಿರಂಜನರ ಕ್ರಿಯೆಗಳನ್ನು, ವಿಚಾರಗಳನ್ನು ಬದಿಗೆ ಸರಿಸಿ ಅಪ್ಪಟ ನಿರಂಜನರನ್ನು ಕಾಣಲು ಶ್ರಮಿಸಬೇಕು. ಅದನ್ನು ಮಾಡಲು ನಾನೂ ಅಪ್ಪಟನಾದ ಅನಂತಮೂರ್ತಿಯಾಗಬೇಕು. ಇಂಥ ಸವಾಲುಗಳನ್ನು ಎದುರಿಸುವುದರಲ್ಲೇ ಒಂದು ಸಂಸ್ಕೃತಿಯ ಜೀವಂತಿಕೆ ಇದೆ.

ನಮ್ಮ ಈ ಅಭಿನಂದನೆಯಿಂದ ಹಿರಿಯ ಗೆಳೆಯ ನಿರಂಜನರಿಗೆ ಸಂತೋಷವಾಗಲಿ ಎಂದು ಆಶಿಸುತ್ತೇನೆ.

(೧೯೮೬, ಫೆಬ್ರವರಿ ೧೫ ರಂದು ಶನಿವಾರ ಬೆಂಗಳೂರಿನಲ್ಲಿ ನಿರಂಜನರವರ ಅಭಿನಂದನ ಸಂದರ್ಭದಲ್ಲಿ ಮಂಡಿಸಿದ ಲೇಖನ.)

* * *