ಕನ್ನಡ ಸಾಹಿತ್ಯದ ಮೇಲೆ ಪಾಶ್ಚಾತ್ಯ ಸಾಹಿತ್ಯ ಮಾಡುತ್ತಿರುವ ಪ್ರಭಾವವನ್ನು ಕೇವಲ ಆಂಗ್ಲ ಅಧ್ಯಾಪಕರ ಒಳಸಂಚು ಎಂಬಂತೆ ಖಂಡಿಸುತ್ತಿರುವವರು ಸಾಹಿತ್ಯದಲ್ಲಿನ ಕೊಡುಕೊಳ್ಳುವ ಸ್ವರೂಪವನ್ನಾಗಲೀ, ಈ ಪ್ರಭಾವವನ್ನು ಅನಿವಾರ್ಯವಾಗಿಸಿದ ವಸಾಹತುಶಾಹಿ ಇತಿಹಾಸವನ್ನಾಗಲೀ ಅರಿತವರಂತೆ ಮಾತಾಡುತ್ತಿಲ್ಲ. (ನೋಡಿ: ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಡಾ| ಭೈರಪ್ಪನವರ ಭಾಷಣ) ಇಂಥ ಮಾದಕ್ರಮ ನಮ್ಮಿಂದ ಬಯಸುವ ಪ್ರತಿವಾದವೂ ಕ್ಷುಲ್ಲಕವಾಗುವುದು ಅನಿವರ್ಯ. ಆದರೂ ನಮ್ಮ ಮೇಲಿನ ಪಾಶ್ಚಾತ್ಯ ಪ್ರಭಾವದಂಥ ಗಾಢ ಚಿಂತನೆಗೆ ಯೋಗ್ಯವಾದ ವಿಷಯವನ್ನು, ಅದಕ್ಕೆ ಬೇಕಾದ ಸಿದ್ಧತೆಯಿಂದ ಚರ್ಚಿಸಲು ಯತ್ನಿಸುವುದು ಅಗತ್ಯವಾದ್ದರಿಂದ ಈ ದಿಕ್ಕಿನಲ್ಲಿ ಕೆಲವು ಸೂಚನೆಗಳನ್ನು – ನಾನು ಈ ಬಗ್ಗೆ ಈಗಗಾಲೇ ಪ್ರಕಟಿಸಿರುವ ಲೇಕನಗಳಲ್ಲಿರುವ ವಿಚಾರಗಳನ್ನು ಬೆಳೆಸದಂತೆ -ಮಂಡಿಸಲು ಇಚ್ಛಿಸುವೆ:

೧) ಮೊದಲನೆಯದಾಗಿ, ಯಾವ ಪ್ರಶ್ನೆಯನ್ನಾಗಲೀ ಚರ್ಚಿಸುವಾಗ ನಾವೇ ಈಗ ಬಗ್ಗೆ ಮೊದಲು ಮಾತಾಡುತ್ತಿರುವವರೆಂದು ಭಾವಿಸಿದಲ್ಲಿ ನಮ್ಮ ವಿಚಾರ ಕೇವಲ ಪ್ರಾಥಮಿಕ ಮಟ್ಟದ ಮಾತುಗಳನ್ನು ಪದೇ ಪದೇ ಆಡುವುದರಲ್ಲಿ ಕೊನೆಯಾಗಿ ಬಿಡುತ್ತದೆ. ನಮ್ಮ ಎಷ್ಟೋ ವಿಮರ್ಶಕ ಬರಹಗಳು ಹೀಗೆ ಹಿಂದು ಮುಂದಿಲ್ಲದಂತೆ ಹುಟ್ಟಿ ಬರುತ್ತಿರುವುದರಿಂದ ಕನ್ನಡದಲ್ಲಿ ವಿಮರ್ಶೆಯ ಪರಂಪರೆಯೊಂದು ಬೆಳೆಯದೇ ಹೋಗಿದೆ. ಒಂದು ಆಲೋಚನಾ ಕ್ರಮವನ್ನು ಇನ್ನೊಂದು ಆಲೋಚನಾಕ್ರಮ ಮೊದಲು ಗ್ರಹಿಸಿ, ಆಮೇಲೆ ಒಪ್ಪಿಗೆಯಲ್ಲೊ, ವಿರೋಧದಲ್ಲೊ ಬೆಳೆಸಿ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಯ ಹೆಚ್ಚು ಬರವಣಿಗೆಗಳು ಈಗಿನಂತೆಯೇ ಸ್ನಾತಕಪೂರ್ವ ವಿದ್ಯಾರ್ಥಿ ಹುರುಪಿನಿಂದ ಬರೆದ ಪ್ರಬಂಧಗಳಂತೆ ಇದ್ದುಬಿಡುತ್ತವೆ. ಆದ್ದರಿಂದ ಪಾಶ್ಚಾತ್ಯ ನಾಗರೀಕತೆ ಭಾರತದ ನಾಗರೀಕತೆ ಮೇಲೆ ಮಾಡಿರುವ ಪ್ರಭಾವದ ಸ್ವರೂಪವನ್ನು ಮೊದಲು ಅರಿಯಬೇಕು. ಈ ದೃಷ್ಟಿಯಿಂದ ಗಾಂಧೀಜಿಯವರು ಬರೆದ ‘ಹಿಂದ್ ಸ್ವರಾಜ್’ (೧೯೦೮), ಈ ಸಂಚಿಕೆಯಲ್ಲಿರುವ ನಿರ್ಮಲವರ್ಮರ ಮಹತ್ವಪೂರ್ಣ ಲೇಖನ ಮತ್ತು ಗಿರಿದೇಶಿಂಕರ್ ಅವರ ಲೇಖನಗಳು ನಮ್ಮ ಚಿಂತನೆಗೆ ಅವಶ್ಯ ಹಿನ್ನೆಲೆಯನ್ನೊದಗಿಸಬಲ್ಲವು. ವ್ಯಾವಹಾರಿಕವಾಗಿ ಐರೋಪ್ಯ ಟೆಕ್ನಾಲಜಿಯನ್ನು ಮೋಹಿಸುವುದು, ಜೊತೆಗೇ ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಐರೋಪ್ಯವಾದ್ದೆಲ್ಲವನ್ನೂ ದ್ವೇಷಿಸುವುದು ಕೂಡ ವಸಾಹತುಶಾಹೀ ಕಾಂಪ್ಲೆಕ್ಸ್‌ಗೆ ತುತ್ತಾದ ಮನಸ್ಸಿನ ರೋಗ ಲಕ್ಷ್ಣಗಳಲ್ಲೊಂದು. ಆದ್ದರಿಂದ ಬ್ರಿಟಿಷರ ಆಳ್ವಿಕೆಯಲ್ಲಿ, ನಮ್ಮ ಸಮಷ್ಟಿ ಪ್ರಜ್ಞೆಯ ಮೇಲಾದ ಆಘಾತದ ಪೂರ್ಣ ಸ್ವರೂಪವನ್ನು ವಸ್ತುನಿಷ್ಠ ದೃಷ್ಟಿಯಿಂದ ಅರಿತಾಗ ಮಾತ್ರ ನಮ್ಮ ಸ್ವಂತಿಕತೆಯನ್ನು ಇನ್ನಷ್ಟು ಗಟ್ಟಿಯಾಗಿ, ದಿಟ್ಟವಾಗಿ ಈ ನೆಲದಲ್ಲಿ ಊರಲು ಸಹಾಯಕವಾಗಬಹುದು. ಎಲಿಯೆಟ್ ಮತ್ತು ಏಟ್ಸ್‌ರು ಭಾರತೀಯ ವೇದಾಂತದಿಂದ ಪ್ರಭಾವಿತರಾದಂತೆಯೇ, ಗಾಂಧೀಜಿಯವರು ಥೋರೋ, ರಸ್ಕಿನ್, ಟಾಲ್‌ಸ್ಟಾಯರಿಂದ ಪಡೆದ ಪ್ರೇರಣೆಗಳಂತೆಯೇ, ಭಾರತೀಯ ಲೇಖಕನೊಬ್ಬ ತನ್ನ ಪರಂಪರೆಗೆ ಅನ್ಯನಾದ ಸಾರ್ತ್ರನಿಂದಲೋ, ಕಾಫ್ಕಾನಿಂದಲೋ, ಆಫ್ರಿಕಾದ ಆಚಿಬೆಇಂದಲೋ ನಿಸ್ಸಂಕೋಚವಾಗಿ ಪ್ರೇರಿತವಾಗುವುದು ಸಾಹಿತ್ಯದಲ್ಲಿ ಆರೋಗ್ಯವಾದ್ದು. ಆದರೆ ವಸಾಹುತಶಾಹಿ ಅನುಭವ ಈ ಕೊಡುಕೊಳ್ಳುವಿಕೆಯನ್ನು-ನಾವು ಕೊಡುವುದಕ್ಕಿಂತ ಕೊಳ್ಳುವುದೇ ಹೆಚ್ಚಾಯಿತೆಂಬ ಕಾರಣದಿಂದ, ಪ್ರಾಯಶಃ-ಮುಜುಗರದ ಅನುಭವವಾಗಿ ಮಾಡಿದೆ. ಇದನ್ನು ಮೀರುವುದು ಹೇಗೆಂಬುದನ್ನು ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ನಾವು ವಸಾಹತುಶಾಹಿ ಕಾಂಪ್ಲೆಕ್ಸ್‌ನಿಂದ ಮುಕ್ತರಾದಾಗ, ಸತ್ಯಪಕ್ಷಪಾತಿಗಳಾಗಿ ಯಾವ ಸಂಕೋಚವಿಲ್ಲದೆ ಕಾಳಿದಾಸನಿಗಿಂತ ಶೇಕ್ಸ್‌ಪಿಯರ್ ದೊಡ್ಡ ಲೇಖಕನೆಂದೋ, ಯಾವ ಕನ್ನಡ ಬರಹಗಾರನಿಗಿಂತಲೂ ಸಾರ್ತ್ರ ಮತ್ತು ಕಮೂ ಒಬ್ಬ ಸಮಕಾಲೀನ ಕನ್ನಡ ಲೇಖಕನಿಗೆ ಹೆಚ್ಚು ಮುಖ್ಯವಾಗಿ ಕಾಣಬಹುದೆಂದೋ, ಒಬ್ಬ ಸಣ್ಣ ಲೇಖಕನಿಂದಲೂ ದೊಡ್ಡಲೇಖಕ ಕಲಿಯಬಲ್ಲನೆಂದೂ ಹೇಳಬಲ್ಲವರಾಗುತ್ತೇವೆ. ಫರಂಗಿಯವನನ್ನು ಮುಟ್ಟಿಬಿಟ್ಟೆನೆಂದು ಹಿಗ್ಗುತ್ತ, ಮತ್ತೆ ಕುಗ್ಗುತ್ತ ಪಂಚಗವ್ಯ ತೆಗೆದುಕೊಳ್ಳುವ ಈಗಿನ ಸ್ಥಿತಿಯಿಂದ ಪಾರಾಗುತ್ತೇವೆ. ಅಂತೆಯೇ, ಯೂರೋಪಿನ ದ್ವಿತೀಯ ದರ್ಜೆಯ ಸಾಧನೆಯೂ ನಮ್ಮ ಮಹತ್ವದ ಸಾಧನೆಗಳಿಗಿಂತ ದೊಡ್ಡದೆಂದು ತಿಳಿಯುವ ಪರಾವಲಂಬಿಗಳೂ ನಾವಾಗಿರುವುದಿಲ್ಲ.

೨) ಮೇಲಿನದನ್ನು ಮನಗಂಡವನು ತೌಲನಿಕ ವಿಮರ್ಶೆಯ ಸಮಸ್ಯೆಯನ್ನು ಕೃತಿಚೌರ್ಯವೆಂದು ಭಾವಿಸುವುದಿಲ್ಲ. ಯೂರೋಪಿನಿಂದ ಪ್ರೇರಣೆ ಪಡೆದ ೧೯ನೇ ಶತಮಾನದ ರಷ್ಯನ್ ಸಾಹಿತ್ಯ ಯೂರೋಪಿನ ಸಾಹಿತ್ಯವನ್ನು ಮೀರಿಸಿ ಬೆಳೆದಂತೆಯೇ, ಈಚಿನ ಕೆಲವು ಲ್ಯಾಟಿನ್ ಅಮೆರಿಕನ್ ಸಾಹಿತಿಗಳು ಯೂರೋಪಿಗೂ ಉತ್ತರ ಅಮೆರಿಕಕ್ಕೂ ಮಾದರಿಯಾಗಿರುವಂತೆಯೇ ನಮ್ಮ ಭಾರತೀಯ ಸಾಹಿತ್ಯವು ಬೆಳೆಯಬಲ್ಲದು, ಬೆಳೆಯುತ್ತಿದೆ ಎಂದು ಅವನು ತಿಳಿಯಬಲ್ಲವನಾಗುತ್ತಾನೆ. ಟಿಟೋ ಮತ್ತು ಸಾತ್ರ‍ಕಳೆದ ವರ್ಷ ಸತ್ತರು: ರಾಜಕೀಯದಲ್ಲೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಐರೋಪ್ಯ ಮನುಷ್ಯನನ್ನು ಗಾಢವಾಗಿ ಕಲಕಿದ ಯುಗದ ಈ ಇಬ್ಬರ ನಿಧನದ ನಂತರ ಸಾಹಿತ್ಯದಲ್ಲಂತೂ ಇರುವ ದೊಡ್ಡ ಹೆಸರುಗಳು ಲ್ಯಾಟಿನ್ ಅಮೆರಿಕಾದವು. ಆದ್ದರಿಂದ ಸಾಹಿತ್ಯದಲ್ಲಿ ಕೀಳರಿಮೆ ಸಲ್ಲದು; ಹಾಗೆಯೇ ಒಣ ಜಂಬ ಸಹ.

೩) ಸೃಜನಕ್ರಿಯೆ ಗಹನವಾದ್ದು, ಓದಿದ್ದು, ಕಂಡದ್ದು, ಕೇಳಿದ್ದು, ಅಕಸ್ಮಾತ್ ಒದಗಿ ಬಂದದ್ದು-ಎಲ್ಲವೂ ಒಂದಕ್ಕೊಂದು ಹೆಣೆದು ಸ್ವಂತದ ಅನುಭವವೇ ಆಗಿ ಹುಟ್ಟಿಬರುವ ಕ್ರಿಯೆ ಅದು. ಈ ಸಂಚಿಕೆಯಲ್ಲಿರುವ ಗಿರೀಶ ಕಾರ್ನಾಡರ ‘ಹಿಟ್ಟಿನ ಕೋಳಿ’ ಇದನ್ನು ಸಾಬೀತುಪಡಿಸುತ್ತದೆ.

೪) ‘ಕನ್ನಡ ಸಾಹಿತ್ಯದ ಮೇಲೆ ಹಿಂದೆ ಸಂಸ್ಕೃತ ಸಾಹಿತ್ಯ ಪ್ರಭಾವ ಮಾಡಿದ್ದಿದೆ; ಆದರೆ ಪ್ರಭಾವ ನಮ್ಮ ನೆಲದ್ದೇ ಆಗಿತ್ತು. ಆದರೆ ಐರೋಪ್ಯ ಸಾಹಿತ್ಯ ಈ ನೆಲದ್ದಲ್ಲವಾದ್ದರಿಂದ ಅದರ ಪ್ರಭಾವ ಕೃತಕವಾದ್ದು’-ಹೀಗೊಂದು ವಾದವಿದೆ. (ಕೆಲವು ದಿನಗಳ ಹಿಂದೆ ಡಾ. ಹಾ.ಮಾ. ನಾಯಕರು ಒಟ್ಟಿನಲ್ಲಿ ಈ ಅರ್ಥ ಹುಟ್ಟುವಂತೆ ಆಕಾಶವಾಣಿಯಿಂದ ಭಾಷಣ ಮಾಡಿದ್ದರು). ನಮ್ಮಲ್ಲಿ ಅನೇಕರಿಗೆ ಹೀಗೆ ಅನ್ನಿಸುವುದುಂಟು; ಮತ್ತು ಅಂಥ ಅನ್ನಿಸಿಕೆಯ ಸರಳತೆಯಿಂದ ಆಕರ್ಷಿತರಾಗಿ ಐರೋಪ್ಯ ಪ್ರಭಾವದಲ್ಲಿ ಬಹುಮುಖ್ಯವಾದ ಎರಡಂಶಗಳನ್ನು ನಾವು ಮರೆಯುತ್ತೇವೆ. ಒಂದು, ಭಾರತದ ದೊಡ್ಡ ನರಗಳಲ್ಲಿ ವಾಸಿಸುವವರ ಜಾಗೃತ ಪ್ರಜ್ಞಾವಲಯ, ಔದ್ಯಮೀಕರಣದಿಂದಾಗಿ, ಪ್ರಾಚೀನ ಭಾರತದ ಯೋಚನಾ ಕ್ರಮಗಳಿಂದ ದೂರವಾಗುತ್ತಿದೆ-ಆದರೆ ಯೂರೋಪಿಗೆ ಹತ್ತಿರವಾಗುತ್ತಿದೆ ಎಂಬುದು. ಇದು ಸರಿಯೆಂದು ನಾನು ಹೇಳುತ್ತಿಲ್ಲ; ಆದರೆ ವಾಸ್ತವ ಎನ್ನುತ್ತಿದ್ದೇನೆ. (ಇಂಥ ಮನಸ್ಸಲ್ಲೂ ಭಾರತೀಯ ಶ್ರದ್ಧೆ ನಂಬಿಕೆಗಳು ತುಮಬ ತೆಳುವಾಗಿಯಾದರೂ ಕೆಲಸ ಮಾಡುತ್ತಿರುತ್ತವೆ ಎಂಬುದೂ ನಿಜವೇ.) ಎರಡನೆಯ ಅಂಶ ಮೊದಲಿನದಕ್ಕಿಂತಲೂ ಮುಖ್ಯವಾದ್ದು; ನಮ್ಮ ಮೇಲೆ ಪ್ರಭಾವ ಮಾಡಿದ, ಮಾಡುತ್ತಿರುವ ಎಲ್ಲ ಐರೋಪ್ಯ ಲೇಖಕರೂ ಯೂರೋಪಿನ ಈ ಕಾಲದ ಜೀವನ ಕ್ರಮಕ್ಕೂ, ಮೌಲ್ಯಗಳಿಗೂ ವಿರೋಧಿಗಳು. ಅಂದರೆ, ಅವರ ಸಮಾಜದ ನಿಜಗತಿಗೆ ಪ್ರತಿರೋಧವಾದ ಸಂಸ್ಕೃತಿಯನ್ನು ಈ ಲೇಖಕರು ತಮ್ಮ ಕೃತಿಗಳಲ್ಲಿ ಎತ್ತಿ ಹಿಡಿದಿದ್ದಾರೆ. ವಸಾಹತುಶಾಹಿಯ ಚರಿತ್ರೆಯಲ್ಲಿ ನಮ್ಮ ಮೇಲೆ ಪ್ರಭಾವ ಮಾಡಿದ ಯೂರೋಪಿನ ಲೇಖಕರೆಲ್ಲರೂ ಸಾಮ್ರಾಜ್ಯಶಾಹಿಯ ವಿರೋಧಿಗಳಾಗಿದ್ದವರು ಮತ್ತು ಔದ್ಯಮೀಕರಣ ನಾಶ ಮಾಡುವ ಮಾನವೀಯ ಮೌಲ್ಯಗಳ ವಿಷಯದಲ್ಲಿ ಕಾಳಜಿಯಿದ್ದವರು. ನವೋದಯ ಕಾಲದವರ ಮೇಲೆ ಪ್ರಭಾವ ಮಾಡಿದ ವರ್ಡ್ಸ್‌ವರ್ತ್, ಶೆಲ್ಲಿ, ಬ್ಲೇಕ್, ಬೈರನ್, ಹಾರ್ಡಿ, ಡಿಕನ್ಸ್, ಟಾಲ್‌ಸ್ಟಾಯ್‌ರ ಬಗ್ಗೆ ಇದು ಹೇಗೆ ನಿಜವೋ, ನಮ್ಮ ಕಾಲದ ಅಸ್ತಿತ್ವವಾದೀ ಐರೋಪ್ಯ ಲೇಖಕರ ಬಗ್ಗೆಯೂ ಇದು ನಿಜ. ಸಾರ್ತ್ರ್, ಕಮೂ, ಕಾಫ್ಕಾ-ಈ ಯಾರೂ ಐರೋಪ್ಯ ರಾಷ್ಟ್ರೀಯವಾದಿಗಳಲ್ಲ; ಬದಲಾಗಿ ತಮ್ಮ ದೇಶದ ಹುಂಬ ರಾಷ್ಟ್ರೀಯತೆಗೆ ವಿರೋಧಿಗಳು.

೫) ಅಲ್ಲದೆ ಮಾನವನ ಒಟ್ಟು ಸ್ವರೂಪ ಮತ್ತು ಅದೃಷ್ಟಗಳ ಬಗ್ಗೆ ಚಿಂತಿಸುವ ಅಸ್ತಿತ್ವವಾದವಾಗಲೀ, ಮಾರ್ಕ್ಸ್‌‌ವಾದವಾಗಲೀ ಕೇವಲ ಕಾಲ ಮತ್ತು ದೇಶಗಳಿಂದ ಬದ್ಧವಾದ ವಿಚಾರಗಳಲ್ಲ. ಉಪನಿಷತ್ತಿನ ವಿಚಾರಗಳು ನಮ್ಮ ಸ್ವತ್ತು ಮಾತ್ರವಲ್ಲವೆಂಬುದು ಹೇಗೆ ನಿಜವೋ, ಈ ತತ್ವಗಳು ಹಾಗೆಯೇ ಇಡೀ ಲೋಕಕ್ಕೆ ಸೇರಿದ ವಿಚಾರಗಳು. ಎಲ್ಲ ವಿಚಾರಗಳಲ್ಲೂ ತನ್ನ ಕಾಲ ದೇಶಗಳ ಮುದ್ರೆಗಳು ಬಿದ್ದಿರುವಷ್ಟು ಈ ವಿಚಾರಗಳ ಮೇಲೂ ಬಿದ್ದಿರುತ್ತವೆ. ಆದರೆ ಈ ವಿಚಾರಗಳಿಂದ ಪ್ರಭಾವಿತರಾಗದಂತೆ ನಾವು ಮಡಿಯುಟ್ಟುಕೊಂಡು ದೂರದಲ್ಲಿರಬೇಕೆಂಬುದು ಅಪ್ರಬುದ್ಧತೆ. ಯಾವ ದೇಶವೂ ಸ್ವಯಂಪೂರ್ಣವಲ್ಲ; ಭಾರತವೂ ಅಲ್ಲ. ಹೊರಜಗತ್ತಿನ ಒಂದು ಸಣ್ಣ ದೇಶದ ಲೇಖಕನೂ ಯಾವ ಭಾರತೀಯ ಲೇಖಕನಿಗಿಂತಲೂ ಶ್ರೇಷ್ಠ ಲೇಖಕನೆಂದು ನಮಗೆ ಅನ್ನಿಸಿದರೆ ಅವನಿಂದ ಕಲಿತುಕೊಳ್ಳಬಲ್ಲ ವಿನಯ ನಮಗಿರಬೇಕು.

೬) ಈ ಸಂದರ್ಭದಲ್ಲೇ ಐರೋಪ್ಯ ನಾಗರೀಕತೆಯಿಂದಲೂ ಜೀವನಕ್ರಮದಿಂದಲೂ ನೇರವಾಗಿ ಪ್ರಭಾವಿತರಾಗುತ್ತಿರುವ ಅದೃಷ್ಟವಂತ ಭಾರತೀಯರು ಮೆಚ್ಚುವುದು ಯಾವ ಬಗೆಯ ಸಾಹಿತ್ಯ ಸಾಂಸ್ಕೃತಿಕ ಕೃತಿಗಳೆಂಬುದನ್ನೂ ನಾವು ಗಮನಿಸಬೇಕು. ಈ ಜನರು ಯೂರೋಪಿನ ಅಲ್ಪಸಂಖ್ಯಾತರ ಸಂಸ್ಕೃತಿಯಿಂದ ಉತ್ಪನ್ನವಾದ ಎಲಿಯಟ್, ಏಟ್ಸ್, ಕಾನ್ರಾಡ್, ಜೇಮ್ಸ್ ಅಥವಾ ಸಾರ್ತ್ರ್‌ರನ್ನು ಓದುವುದಿಲ್ಲ; ಬದಲಾಗಿ ಇವರ ಮನಸ್ಸನ್ನು ಆಕರ್ಷಿಸುವುದು, ಯೂರೋಪಿನ ಬಹ್ಯುತ್ಪನ್ನದ ನಾಗರೀಕತೆಯನ್ನು ವಿಜೃಂಭಿಸುವ ಜೇಮ್ಸ್‌ಬಾಂಡ್ ಕಥೆಗಳು, ಹಾಲಿವುಡ್ ಸಿನಿಮಾಗಳು-ಇಂಥವು. ಪಾಶ್ಚಾತ್ಯ ದೇಶಗಳಲ್ಲೂ ತಮ್ಮ ನಾಗರೀಕತೆಯ ಬಗ್ಗೆ ಹೆಮ್ಮೆ ಪಡುವ ಸ್ವಸಂತೃಪ್ತ ಮನಸ್ಕರು ಮೆಚ್ಚುವುದು ಸಹ ಟೆಲಿವಿಷನ್ ಹೀರೋಗಳನ್ನು ಮತ್ತು ಇಂಥ ಜನಪ್ರಿಯ ಲೇಖಕರನ್ನು, ಜನಪ್ರಿಯ ಲೇಖಕರೆಲ್ಲರೂ ಸಂಕೋಚ ದೃಷ್ಟಿಯ ಉಗ್ರ ರಾಷ್ಟ್ರೀಯವಾದಿಗಳೂ ಆಗಿರುತ್ತಾರೆ ಎಂಬುದನ್ನು ಮರೆಯಕೂಡದು. ತಾವಿರುವ ದೇಶ, ತಾವು ಬಾಳುತ್ತಿರುವ ಸ್ಥಿತಿ, ತಮ್ಮನ್ನು ಆಳುವ ಮೌಲ್ಯಗಳು ಶಂಕಾತೀತವಾಗಿ ಸರ್ವೋತ್ತಮ ಎಂದು ನಂಬುವುದು ಹಲವರಿಗೆ ತಮ್ಮ ಮನಸ್ಸಿನ ನೆಮ್ಮದಿಗಾಗಿ ಅಗತ್ಯ. ಅಂಥ ನಂಬಿಕೆಯನ್ನು ಪೋಷಿಸುವುದು ಜನರ ಮರ್ಜಿ ಹಿಡಿದೇ ಬರೆಯುವ ಜನಪ್ರಿಯ ಸಾಹಿತಿಗೆ ಅಗತ್ಯ. ಜೊತೆಗೇ, ತಾನೊಬ್ಬ ಉತ್ಕೃಷ್ಟ ಸಾಹಿತಿಯೆಂದು ನಂಬುವುದಕ್ಕಾಗಿಯಾದರೂ ಸೃಜನಶೀಲರಾದವರನ್ನು ದ್ವೇಷಿಸುವುದು ಆತನಿಗೆ ಅಗತ್ಯ. ಈ ಮೂರೂ ಪರಸ್ಪರ ಸಂಬಂಧವಿರುವ ಅಗತ್ಯಗಳು. ಲಾರೆನ್ಸ್ ಬರೆಯುತ್ತಿದ್ದಾಗ ಜನಪ್ರಿಯನಾಗಿದ್ದವನು ಆರ್ನಾಲ್ಡ್ ಬೆನಟ್. ನಮ್ಮ ನಾಡಲ್ಲೇ ಶಿವರಾಮಕಾರಂತರಿಗಿಂತ ಹೆಚ್ಚು ಜನಪ್ರಿಯ ಕಾದಂಬರಿಕಾರರಾಗಿದ್ದವರು ಅ.ನ. ಕೃಷ್ಣರಾಯರು. ಈ ಸಂಚಿಕೆಯಲ್ಲಿ ಕೆ.ಸತ್ಯನಾರಾಯಣ ಮತ್ತು ಕೆ.ಪಿ. ವಾಸುದೇವನ್‌ರ ಲೇಖನಗಳು, ಸೃಜನಶೀಲತೆಯನ್ನು ಹೀಗೆ ದ್ವೇಷಿಸುವ ನಮ್ಮ ನಾಗರೀಕತೆಗಳ ಹಿಂದೆ ಎಂಥ ಮನಸ್ಸು ಕೆಲಸ ಮಾಡುತ್ತಿದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತವೆ.

ರುಜುವಾತು ,೧೯೮೧

* * *