ರುಜುವಾತು ಓದುಗರಿಗೆ ಎ ಬಿ ಶಾ ಪರಿಚಿತರು. ನಮ್ಮ ಮೊದಲನೇ ಮತ್ತು ಎರಡನೇ ಸಂಚಿಕೆಗಳಲ್ಲಿ ಅವರ ಲೇಖನಗಳಿವೆ. ಅವರ ಸಾವಿನಿಂದಾಗಿ ನಮ್ಮ ದೇಶ ದೊಡ್ಡ ಧೀಮಂತನೊಬ್ಬನನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ನಾನೊಬ್ಬ ಹಿರಿಯ ಗೆಳೆಯನನ್ನೂ ಪ್ರೀತಿಯ ಹಿತೈಷಿಯನ್ನೂ ಕಳಕೊಂಡಿದ್ದೇನೆ.

ಅವರು ಬೊಂಬಾಯಿನ ಕಾಲೇಜೊಂದರ ಪ್ರಿನ್ಸಿಪಾಲರಾಗಿದ್ದಾಗ ಮೊದಲು ನನವರ ಪರಿಚಯವಾದ್ದು-ಸುಮಾರು ೨೦ ವರ್ಷಗಳ ಹಿಂದೆ. ಗೆಳೆಯ ಪಿ. ಶ್ರೀನಿವಾಸರಾವ್ ಮತ್ತು ಸುಮತೀಂದ್ರ ನಾಡಿಗ ಆ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಎ.ಬಿ.ಶಾ ತನ್ನ ಕಾಲೇಜನ್ನು ಪ್ರತಿಭಾನ್ವಿತ ವ್ಯಕ್ತಿಗಳಿಂದ ತುಂಬಿದ್ದರು. ಬಂಗಾಳದ ಶ್ರೇಷ್ಠ ಚಿಂತಕ ಶಿಬ್ ನಾರಾಯಣ್‌ರೇ, ಮಹಾರಾಷ್ಟ್ರದ ಬಹುಮುಖ್ಯ ಕವಿ ವೃಂದಾ ಕರಂದೀಕರ್ ಅಧ್ಯಾಪಕರಾಗಿ ಈ ಕಾಲೇಜಿನಲ್ಲಿದ್ದರು. ಪ್ರೊಫೆಸರ್ ಎ.ಬಿ.ಶಾ ವೃತ್ತಿಯಲ್ಲಿ ಗಣಿತಶಾಸ್ತ್ರಜ್ಞರು. ಎಂ.ಎನ್. ರಾಯ್‌ ಗುಂಪಿನಲ್ಲಿದ್ದ ಪ್ರಮುಖರು. ಈ ಅಪರೂಪದ ಕಾಲೇಜ್‌ ವಾತಾವರಣದಿಂದ ಮೈಸೂರಿಗೆ ರಜೆಗೆಂದು ಬರುತ್ತಿದ್ದ ಶ್ರೀನಿವಾಸರಾವ್ ನನ್ನಲ್ಲಿ ಹೊಸ ಆಸ್ಥೆಗಳನ್ನು ಬೆಳೆಸಿದರು. ಶಾ ಏನು ಹೇಳುತ್ತಾರೆ, ರೇ ಹೇಗೆ ವಿಚಾರ ಮಾಡುತ್ತಾರೆ. ಮರಾಠಿಯಲ್ಲಿ ಹೊಸದೇನೂ ಆಗುತ್ತಿದೆ. ಬೆಕೆಟ್ ಯಾಕೆ ಮುಖ್ಯ-ಹೀಗೆ. ಇಂಗ್ಲಿಷ್‌ಮತ್ತು ಕನ್ನಡ ಸಾಹಿತ್ಯಗಳಾಚಿನ ಬೊಹಿಮಿಯಾವನ್ನು ಪ್ರೊ. ಶಾ ಮತ್ತು ಪ್ರೊ. ರೇ ರಿಂದ ಶ್ರೀನಿವಾಸರಾವ್ ಪಡೆದು ಹೊಸ ಪ್ರೇರಣೆಗಳಿಗಾಗಿ ಹಾತೊರೆಯುತ್ತಿದ್ದ ಆಗಿನ ನನ್ನಲ್ಲಿ ಉತ್ತಿ ಬಿತ್ತಿ ಬೆಳೆದರು. ಶ್ರೀನಿವಾಸರಾವ್ ಇಲ್ಲಿ ಆ ಮಾತುಗಳನ್ನಾಡಿದರೆ, ಅಲ್ಲಿ ಅಡಿಗರ ಮತ್ತು ನನ್ನ ಮಾತನಾಡಿದರು. ಪ್ರೊ. ಶಾ ಮತ್ತು ಪ್ರೊ. ರೇ Quest ಪತ್ರಿಕೆಯಲ್ಲಿ ನನ್ನದೊಂದು ಕಥೆಯನ್ನು ಭಾಷಾಂತರಿಸಿ ಪ್ರಕಟಿಸಿದರು. ಪ್ರೊ. ಶಾ ನಮಗೆಲ್ಲರಿಗೂ-ಅವರು ಸ್ವತಃ ಸಾಹಿತಿಯಲ್ಲದಿದ್ದರೂ ಭಾರತೀಯ ನವ್ಯ ಸಾಹಿತ್ಯದ ಕೇಂದ್ರವಾಗಿ ಕಂಡರು. ಅವರ ಮೂಲಕ ನನಗೆ ಪರಿಚಯವಾದವರು ಹಲವರು.

ಪ್ರೊಫೆಸರ್ ಶಾರವರು ಪ್ರಿನ್ಸಿಪಾಲ್ ಹುದ್ದೆಗೆ ರಾಜಿನಾಮೆ ಕೊಡಬೇಕಾಯಿತು ನನಗೆ ತಿಳಿದಂತೆ ಬಹು ಸಣ್ಣ ವಿಷಯಕ್ಕಾಗಿ. ಆದರೆ ಅದರ ಹಿಂದೆ ಇನ್ನೇನು ಇತ್ತೋ ನನಗೆ ತಿಳಿಯದು. ತಮಿಳುಣಾಡಿನ ಅಧ್ಯಾಪಕರೊಬ್ಬರು ಮುಂಡು ಪಂಚೆಯುಟ್ಟು ಕಾಲೇಜಿಗೆ ಬಂದರು. ಪ್ರೊ. ಶಾರವರು ಅವರನ್ನು ಒಂದೋ ರಾಷ್ಟ್ರೀಯ ಉಡುಪಿನಲ್ಲಿ ಅಥವಾ ಪ್ಯಾಂಟು ಶರಟುಗಳಲ್ಲಿ ಬರುವಂತೆ ಕೇಳಿದರು. ತಮಿಳುನಾಡಿನ ಅಧ್ಯಾಪಕರು ಮುಂಡು ಪಂಚೆಯೇ ತಮಿಳರ ರಾಷ್ಟ್ರೀಯ ಉಡುಪು ಎಂದು ವಾದಿಸಿದರು. ಕಾಲೇಜು ನಡೆಸುತ್ತಿದ್ದ ದಕ್ಷಿಣ ಭಾರತ ಸಂಸ್ಥೆ ಪ್ರೊ. ಶಾರನ್ನು ಬೆಂಬಲಿಸಲಿಲ್ಲ. ಪ್ರೊ. ಶಾ ಮೊಂಡು ಹಠ ಹಿಡಿದು ರಾಜಿನಾಮೆ ಕೊಟ್ಟರು. ಪ್ರೊ ಶಿಬ್ ನಾರಾರಯಣ್ ರೇ ಮತ್ತು ಶ್ರೀನಿವಾಸರಾವ್‌ರಿಗೂ ಪ್ರೊ. ಶಾರ ನಿಲುವಲ್ಲಿ ಭಿನ್ನಾಭಿಪ್ರಾಯವಿತ್ತೆಂದು ನನಗೆ ನೆನಪು. ಆದರೆ ಪ್ರೊ. ಶಾ ಅಂದರೆ ಅವರಿಗೆಷ್ಟು ಪ್ರೀತಿ, ಗೌರವಗಳೆಂದರೆ, ಅವರ ಜೊತೆ ಇವರೂ ಕೆಲಸಕ್ಕೆ ರಾಜಿನಾಮೆ ಕೊಟ್ಟರು. ಅನಂತರದ ದಿನಗಳಲ್ಲಿ ನನಗೆ ತುಂಬ ಆಪ್ತರಾಗಿದ್ದ ಶಾ ಮುಂಡು ಪಂಚೆಯನ್ನು ಖಂಡಿತ ಸಹಿಸುವಂಥವರಾಗಿದ್ದರೆಂದು ನನ್ನ ಭಾವನೆ. ಈ ಹಿರಿಯರ ಬಗ್ಗೆ ಎಷ್ಟು ಪ್ರೀತಿಯಿದ್ದರೂ ಗೌರವದಿಂದ ಹುಟ್ಟಿದ ದಾಕ್ಷಿಣ್ಯ ಅಡ್ಡಬರದಿದ್ದಲ್ಲಿ ನಾನು ಖಂಡಿತ ಅವರನ್ನು ಕೇಳುತ್ತಿದ್ದೆ; “ಮುಂಡಿನ ಬಗ್ಗೆ ಅದೇಕೆ ನೀವಷ್ಟು ಹಠ ಮಾಡಿದ್ದು ಎ ಬಿ?”

ಸಂಪ್ರದಾಯವಾದಿಗಳ ಬಗ್ಗೆ ಶಾ ರವರಿಗಿದ್ದ ಅಸಹನೆ ಈ ತಮಿಳು ಮುಂಡುಧಾರಿಗೂ ಅವರಿಗೂ ನಡುವಿನ ಭಿನ್ನಾಭಿಪ್ರಾಯವನ್ನು ಬೆಳೆಸಿರಬಹುದೆಂಬುದು ಕೇವಲ ನನ್ನ ಊಹೆಯಿರಲಾರದು. ಶಾ ರವರು ತಾತ್ತ್ವಿಕವಾಗಿ ಭಾರತದ ರಾಷ್ಟ್ರೀಯ ಆಂಧೋಳನದ ಸುಧಾರಕ ಚಳುವಳಿಗಳಿಂದಲೂ ಪಾಶ್ಚಾತ್ಯ ವೈಜ್ಞಾನಿಕ ಚಿಂತನೆಯಿಂದಲೂ ಒಟ್ಟಾಗಿ ಪ್ರೇರಣೆ ಪಡೆದಿದ್ದ ಚಿಂತಕರು. ಅಪಾರವಾದ ವೇನೆಗಳಿಗೂ, ಹಾಗೆಯೇ ಉತ್ಕರ್ಷದ ಆನಂದಕ್ಕೂ ಕಾರಣವಾಗಬಲ್ಲ, ಮನುಷ್ಯ ಸಂಕಲ್ಪ ಮೀರಿದ, ತರ್ಕಾತೀತವಾದ ಸತ್ಯಗಳಿಗೆ ಒಡ್ಡಿಕೊಂಡ ಆಧ್ಯಾತ್ಮದಲ್ಲಿ ಮಾನವ ಗ್ರಹಿಸುವ ಒಳನೋಟಗಳ ಉಪಯುಕ್ತತೆ ಬಗ್ಗೆ ಅವರಿಗೆ ಅನುಮಾನವಿತ್ತು. ಅವರ ಚಿಂತನೆಯ ನೆಲೆಯಿದ್ದದ್ದು ವೈಜ್ಞಾನಿಕ ದೃಷ್ಟಿಯಲ್ಲಿ. ಈ ದೃಷ್ಟಿಗೆ ಅತೀತವಾದ ಸತ್ಯಗಳಿವೆ ಎಂಬುದನ್ನು ಅಲ್ಲಗಳೆಯುವ ಗೊಡ್ಡು ವಿಚಾರವಾದಿ ಅವರಲ್ಲದಿದ್ದರೂ ಈ ಅತೀತವಾದ್ದೂ ಮಾನವನ ವೈಜ್ಞಾನಿಕ ಮುನ್ನಡೆಯಲ್ಲಿ ಜ್ಞಾನಕ್ಕೆ ದಕ್ಕುವಂಥದ್ದಂಬ ನಂಬಿಕೆಯಿದ್ದವರು ಅವರು. ಅದರೆ ಈ ಬಗೆಯ ನಿಲುವಲ್ಲಿ ಕೊರತೆ ಕಂಡು ಆಧ್ಯಾತ್ಮಿಕತೆಯಲ್ಲಿ ಉತ್ತರ ಹುಡುಕುವ ಮನೋವೃತ್ತಿಯಲ್ಲಿ ಅವರಿಗೆ ಅನುಮಾನವಿದ್ದದ್ದರಿಂದಲೇ ಈಚೆಗೆ ಆಶೀಸ್ ನಂದಿಯವರ ಜೊತೆ ಅವರ ಬಿರುಸಿನ ವಾಗ್ವಾದ ನಡೆದದ್ದು. ಆದರೆ ಶಾರವರನ್ನು ಕೇವಲ ಐರೋಪ್ಯ ವಾದಿಯೆಂದು (ಅಂಥೊಂದು ವಾದಕ್ಕೆ ಅವರ ವಿಚಾರ ಜಾರಬಹುದಾದರೂ) ಸರಳಗೊಳಿಸಬರದು; ಗಾಂಧಿಜಿಯನ್ನು ಅವರು ಬಹುವಾಗಿ ಮೆಚ್ಚಿಕೊಂಡಿದ್ದರು. ಈಚೆಗೆ ಪ್ರಕಟವಾದ Religion and Society in India (೧೯೮೧) ಎಂಬ ಅವರ ಪುಸ್ತಕದಲ್ಲಿ ತನ್ನ ಬಗ್ಗೆ ಅವರು ಹೇಳಿಕೊಂಡಿರುವ ಮಾತುಗಳು ಅವರ ಮತ ವಿರೋಧದ ಕಾರಣವನ್ನು ಸ್ಪಷ್ಟಪಡಿಸುತ್ತದೆ.

ಜೈನರಾಗಿ, ಅದರಲ್ಲೂ ದಿಗಂಬರ ಪಂಥದಲ್ಲಿ, ಹುಟ್ಟಿದ ನಾನು ಬಾಲ್ಯದಿಂದಲೂ ನಾಸ್ತಿಕ. ಆದರೆ ನಾನು ಕಾಲೇಜಿನ ವಿದ್ಯಾರ್ಥಿಯಾಗಿ ಹೇಗಲ್ಲನ The Riddle of the Universe  ಮತ್ತು ಹೈಮನ್ ಲೆವಿಯ The Universe of Science ಓದುವ ತನಕ ಅಡಚಣೆಯಲ್ಲೂ ನಂಬಿಕೆಯಲ್ಲೂ ಜೈನವಾಗಿದ್ದೆ. ಆದರೆ ದೇವರು ಮಾತ್ರವಲ್ಲ, ಜೈನಧರ್ಮ ನಂಬುವ ಆತ್ಮಕೂಡ ಇಲ್ಲ, ಇರುವುದು ಮನುಷ್ಯನ ಮನಸ್ಸು ಮಾತ್ರ ಎಂಬುದನ್ನು ಎರಡು ಪುಸ್ತಕಗಳೂ ಮನದಟ್ಟು ಮಾಡಿದವುಅನಂತರ ಎಂ.ಎನ್. ರಾಯ್ Man and Nature, Science and Superstition, The Ideal of Indian Womanhood Memoir of a Cat ಗಳನ್ನು ನನ್ನ ಸ್ನೇಹಿತನೊಬ್ಬ ಓದಿಸಿದ. ಆಲೋಚನೆಯ ಹೊಸ ದಿಗಂತಗಳನ್ನೂ ಬೌದ್ಧಿಕ ಸ್ವಾತಂತ್ಯ್ರವನ್ನೂ ನನ್ನಲ್ಲಿ ತೆರೆಯಿಸಿದ ರಾಯ್ ನನ್ನ ನಕಾರಾತ್ಮಕವಾದ ನಾಸ್ತಿಕತೆಗೆ ಧನಾತ್ಮಕವಾದ ತಿರುಳನ್ನು ತಂದರು. ರಸ್ಸೆಲ್ಲಿನ ಪುಸ್ತಕಗಳು, ಮಾರ್ಕ್ಸ್, ಎಂಗಲ್ಸ್ ಮತ್ತು ಲೆನಿನ್ನನ ವಿಚಾರಗಳು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವು.

೧೯೩೭ರಿಂದೀಚೆಗೆ ನಾನು ಅಂತಃಸಾಕ್ಷಿ ಪ್ರೇರಿತನಾದ ನಾಸ್ತಿಕನಾಗಿಯೇ ಉಳಿದಿದ್ದೇನೆ. ನನ್ನ ಜೀವನದ ಅತ್ಯಂತ ಕಷ್ಟದ ಗಂಡಾಂತರಗಳಲ್ಲೂ ಮತಧರ್ಮದ ಸಾಂತ್ವನ ನನಗೆ ಬೇಕೆನ್ನಿಸಿಲ್ಲ. ಬದಲಾಗಿ, ಮನುಷ್ಯ ಸಂಪೂರ್ಣ ಮಾನವೀಯರಾಗುವುದು ಸಾಂಪ್ರದಾಯಿಕ ಧರ್ಮಗಳಿಗೆ ಆತುಕೊಳ್ಳದೇ ತನ್ನ ಕಾಲಮೇಲೆ ತಾನೇ ನಿಂತಾಗ ಎಂಬ ದೃಢವಿಶ್ವಾಸ ನನ್ನಲ್ಲಿ ಬೆಳೆದಿದೆ. ಧಾರ್ಮಿಕ ಅನುಭಾವದ ಆಫೀಮಿನಲ್ಲಿ ಒಳಿತು ಕೆಡಕುಗಳು ಬೆರೆತ ಬದುಕಿನ ಮಾಯೆಯನ್ನು ಮೀರುವುದು ನನಗೆಂದೂ ಬೇಕೆನ್ನಿಸಿಲ್ಲ. (ಪುಟ. )

ಭಾರತದ ವೈಜ್ಞಾನಿಕ ಬೆಳವಣಿಗೆಗೆ ಕಟ್ಟುಬಿದ್ದ ಮನಸ್ಸಿನ ಶಾರವರು ಹಿಂದೂ ಧರ್ಮದ ನಾರ್ಸಿಸಸ್ ಸ್ವಪ್ರೇಮ ನಾಗರಿಕ ಜೀವನಕ್ಕೆ ಅಗತ್ಯವಾದ ಜವಾಬ್ದಾರಿತನದ ಗುಣಗಳನ್ನು ಹಿಂದೂನಲ್ಲಿ ಬೆಳೆಸುವುದಿಲ್ಲೆಂದು ತಿಳಿದಿದ್ದರು. ಭಾರತ ಅಭಿವೃದ್ಧಿಶೀಲವಾಗಬೇಕೆಂಬ ಉತ್ಕಟ ಅಪೇಕ್ಷೆಯ ಜೊತೆಗೆ, ಪ್ರಜಾತಂತ್ರಕ್ಕೂ ಕಟ್ಟುಬಿದ್ದ ಶಾರವರಿಗೆ ಧರ್ಮಗಳು ಸಾಮಾಜಿಕವಾಗಿ ನಮ್ಮಲ್ಲಿ ಬೆಳೆಸುವ ಶೀಲದಲ್ಲಿ ವಿಮರ್ಶಾತ್ಮಕವಾದ ಆಸಕ್ತಿಯೂ ಇತ್ತು. ಆದರೆ ಅವರಿಗೆ ಧರ್ಮದ ನೆರವಿಲ್ಲದೆ ಬೆಳೆದ ಶೀಲ ಹೆಚ್ಚು ಗಾಢವಾದ್ದೆಂಬ ಶ್ರದ್ಧೆಯಿತ್ತು. ಅಂದರೆ ಅವರ ಧರ್ಮಾಸಕ್ತಿ ಸಾಮಾಜಿಕವಾದ್ದು, ಪಾರಮಾರ್ಥಿಕವಾದ್ದಲ್ಲ. ಪ್ರಾಯಶಃ ಈ ಕಾರಣದಿಂದಲೇ ಪೂರ್ಣ ಸಮಾಜಬದ್ಧವಾಗಿದ್ದ ಗಾಂಧೀಜಿಯ ಧಾರ್ಮಿಕತೆ, ತಿಲಕ್‌ರ ರಾಷ್ಟ್ರೀಯತೆಗಳನ್ನು ತನ್ನ ನಾಸ್ತಿಕ ನೆಲೆಯನ್ನು ಕಳಕೊಳ್ಳದಂತೆ ಮೆಚ್ಚುವುದು ಶಾರವರಿಗೆ ಸಾಧ್ಯವಾಗಿತ್ತು. ಶಾರ ಬಗೆಯ ನಾಸ್ತಿಕತೆ ಧೀರನೂ ಸಹಿಷ್ಣುವೂ ಆದ ವ್ಯಕ್ತಿಯನ್ನು ನಿರ್ಮಿಸಬಲ್ಲದು; ತರ್ಕಾತೀತ ವಾದಕ್ಕೆ ಮಿಡಿಯುವಾತ ಕೂಡ ವಂಚಕ ಪಾರಮಾರ್ಥಿಗಳಿಗಿಂತ ಶಾರ ಬಗೆಯ ಧೀರ ಪ್ರಾಮಾಣಿಕರನ್ನು ಮೆಚ್ಚಲೇಬೇಕಾಗುತ್ತದೆ. ಶಾರವಾರ ಅನುಭವ ನಿಷ್ಠತೆಯನ್ನೂ, ತರ್ಕನಿಷ್ಠತೆಯನ್ನೂ, ಸಾಮಾಜಿಕ ಒಳಿತಿನ ಅಪೇಕ್ಷೆಯನ್ನೂ ಹೊಂದಿರ ಪಾರಮಾರ್ಥಿಕ ಕೇವಲ ಮಂಕುಬೂದಿಯಾಗುತ್ತದೆಂಬುದನ್ನಂತೂ ಭಾವುಕ ಜೀವನದಲ್ಲಿ ಆಧ್ಯಾತ್ಮಕ್ಕೆ ಆಕರ್ಷಿತರಾಗುವ ನಮ್ಮಂಥ ಲೇಖಕರು ಮರೆಯಬಾರದು. ಶಾರವರ ಸಹವಾಸವನ್ನು  ನನ್ನಂಥ ಹಲವರು ಅಪೇಕ್ಷಿಸುತ್ತಿದ್ದುದೂ ಮುಖ್ಯವಾಗಿ ಈ ಕಾರಣದಿಂದಲೇ.

ಅಲ್ಲದೆ ಇನ್ನೊಂದು ಕಾರಣಕ್ಕಾಗಿ ಅವರು ನಮಗೆಲ್ಲ ಮುಖ್ಯರಾದರು. ವಿರೋಧಾಭಿಪ್ರಾಯದಲ್ಲಿ ಸಹನೆಯೇ ಶಾರವರ ಇಡೀ ಜೀವನದ ಮುಖ್ಯ ಮಂತ್ರವಾಗಿತ್ತು. ಅವರು ಎಷ್ಟು ದಿಟ್ಟವ್ಯಕ್ತಿಯೆಂದರೆ ತುರ್ತುಪರಿಸ್ಥಿತಿ ಕಾಲದಲ್ಲಿ ಅವರು ಸಂಪಾದಿಸುತ್ತಿದ್ದ Quest ನ್ನು ನಿಲ್ಲಿಸಬೇಕಾಯಿತು. (ನಂತರ ಅದನ್ನೇ New Quest ಎಂದು ಅವರು ಪ್ರಾರಂಭಿಸಿದರು.) ತುರ್ತು ಪರಿಸ್ಥಿತಿಯನ್ನು ಉಗ್ರವಾಗಿ ಪ್ರತಿಭಟಿಸಿದ್ದ ಶಾರನ್ನು ಜೆ.ಪಿ.ಯವರು ತಮ್ಮ ಜೈಲು ದಿನಚರಿಗೆ ಮುನ್ನುಡಿ ಬರೆಯುವಂತೆ ಕೇಳಿದರು. ‘ನನ್ನ ಬರವಣಿಗೆ ಚೆನ್ನಾಗಿದೆಯೆನಿಸಿದರೆ ಮುನ್ನುಡಿ ಬರೆಯುತ್ತೀರಾ?’ ಎಂದು ಜೆ.ಪಿ. ಕೇಳಿದಾಗ, ಲೋಕನಾಯಕನ ವಿನಯದಿಂದ ಶಾ ತನ್ನ ಅಂತಃಕರಣ ಕಲಕಿತ ಎನ್ನುತ್ತಾರೆ. ಜೆ.ಪಿಗೆ. ಅಷ್ಟು ಪ್ರಿಯರಾಗಿದ್ದ ಶಾ, ಜೆ.ಪಿ. ಹುಟ್ಟಿದ ದಿನವೇ ಹೃದಯಾಘಾತದಿಂದ ಸತ್ತರು. ಇದರಲ್ಲೊಂದು ವಿಶೇಷ ಕಂಡರೆ, ನಕ್ಕುಬಿಡುತ್ತಿದ್ದಂತಹ ರ‍್ಯಾಷನಲಿಸ್ಟ್ ಎ.ಬಿ.ಶಾ.

ಪ್ರಭುತ್ವದ ಶಕ್ತಿ ರಾಕ್ಷಸೀಯವಾಗಬಲ್ಲುದೆಂಬುದನ್ನು ಶಾ ಯಾವತ್ತೂ ಮರೆತವರಲ್ಲ. ಧರ್ಮಗಳಲ್ಲಿನ ಸರ್ವಾಧಿಕಾರಿ ಮನೋಭಾವವನ್ನು ಅವರು ಕಟುವಾಗಿ ವಿರೋಧಿಸುತ್ತಿದ್ದರು. ಸ್ವಂತದ ಬದುಕಿನಲ್ಲಿ ಜಾತ್ಯಾತೀತರಾಗಿದ್ದ ಅವರು ಯಾವುದೇ ಅಂಜಿಕೆಯಿಲ್ಲದೆ ಇಸ್ಲಾಂನ ಧರ್ಮಗುರುಗಳ ಪ್ರಭುತ್ವವನ್ನು ಟೀಕಿಸುತ್ತಿದ್ದರು. ಇವರ ಗರಡಿಯಲ್ಲಿ ಪಳಗಿದ ತರುಣ ಮುಸ್ಲಿಂ ಸಮಾಜವಾದಿ ಹಮೀದ್ ದಲ್ವಾಯ್ ತನ್ನ ಅಕಾಲ ಸಾವಿನ ತನಕ ಮುಸ್ಲಿಂ ಸಮಾಜದ ಸುಧಾರಣೆಗಾಗಿ, ಹಿಂದು ಮುಸ್ಲಿಂ ಸಖ್ಯಕ್ಕಾಗಿ ದುಡಿದರು. ಶಾರ ಗರಡಿಯಲ್ಲಿ ಪಳಗಿದ ಇನ್ನೊಬ್ಬ ಧೀಮಂತ ಲೇಖಕರೆಂದರೆ ನನ್ನ ಗೆಳೆಯ ಮಹಾರಾಷ್ಟ್ರದ ಯುವಕವಿ ದಿಲೀಪ್ ಚಿತ್ರೆ. ಯಶವಂತ ಚಿತ್ತಾಲ ಅವರನ್ನು ಹತ್ತಿರದಿಂದ ಬಲ್ಲ ಇನ್ನೊಬ್ಬ ಗೆಳೆಯ. ಶಾರ ಸಾವಿನಿಂದ ಅವರ ಹಲವು ಚಿಂತನಶೀಲ ಗೆಳೆಯರಲ್ಲದೆ, ಅವರು ಪೋಷಿಸಿ ಬೆಳೆಸಿದ ಸಂಸ್ಥೆ, Secular Society, ಅವರು ಸಂಪಾದಿಸುತ್ತಿದ್ದ New Quest ಮತ್ತು Secularist ಅನಾಥವಾಗಿವೆ.

ಕೆಲವು ವರ್ಷಗಳ ಕೆಳಗೆ ಬೆಂಗಳೂರಿನ ಎಕ್ಯೂಮಿನಿಕಲ್ ಸೆಂಟರ್‌ನಲ್ಲಿ ನಾನು ಶಾರೊಡನೆ ಕಳೆದ ನಾಲ್ಕೈದು ದಿನಗಳು ನನಗೆ ಯಾವತ್ತೂ ಸ್ಮರಣೀಯವಾದವು. ದೇಶೀಯ ಕ್ರಾಂತಿಕಾರಕ ಚಳವಳಿಗಳನ್ನು (Indigenous Radical Movements) ಕುರಿತು ನಾನಾಗ ಗಾಢವಾದ ಆಸಕ್ತಿ ತಳೆದಿದ್ದೆ. ಜೆ.ಪಿ. ಚಳವಳಿ ಬೆಳೆಯುವುದಕ್ಕೆ ಮುಂಚಿನ ದಿನಗಳು ಇವು. ಐರೋಪ್ಯ ವೈಚಾರಿಕತೆಯ ಫಲವಾದ ಮಾರ್ಕ್ಸ್‌ವಾದಕ್ಕಿಂತ ಹೆಚ್ಚಾಗಿ ಈ ನೆಲದಲ್ಲಿ ಹುಟ್ಟಿ ಬೆಳೆದ ಮಹಾತ್ಮಾ ಪುಲೆ, ಬಸವ, ನಾನಕ್, ಕಬೀರ್, ಅಂಬೇಡ್ಕರ್, ಮಹಾತ್ಮಾಗಾಂಧಿ ಇಂಥವರ ವಿಚಾರಗಳು ಹೆಚ್ಚು ಅರ್ಥಪೂರ್ಣವಾದವು. ಅವುಗಳನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ಅವುಗಳಿಂದ ಕಲಿತುಕೊಳ್ಳಬೇಕು ಎಂಬ ನನ್ನ ಅಸ್ಪಷ್ಟ ವಿಚಾರಗಳಿಗೆ ಶಾರವರು ಒಂದು ಮೂರ್ತರೂಪ ಕೊಟ್ಟರು. ಅವರ ಜೊತೆಗಿದ್ದಾಗ ಯಾವಾಗಲೂ ನಾನು ನನ್ನ ಮಿತಿಗಳನ್ನು ಮೀರಬಲ್ಲೆ ಎನ್ನಿಸುತ್ತಿತ್ತು. ಅವರ ಅಪಾರವಾದ ಜ್ಞಾನ ನನ್ನಂಥ ಕಿರಿಯರನ್ನು ಸಂಕೋಚಕ್ಕೆ ಒಳಪಡಿಸದಂತೆ ಪೋಷಿಸಬಲ್ಲುದಾಗಿತ್ತು.

ಕೆಲವು ತಿಂಗಳುಗಳ ಹಿಂದೆ ‘ದಲಿತ ಸಂಘರ್ಷ ಸಮಿತಿ’ ನಡೆಸಿದ ಮೀಸಲಾತಿ ಸಮ್ಮೇಳನಕ್ಕೆಂದು ಬೆಂಗಳೂರಿಗೆ ಪ್ರೊಫೆಸರ್ ಶಾ ಬಂದರು. ದಲಿತರ ಪ್ರಶ್ನೆ ಅವರಿಗೆ ಆಪ್ತವಾದ್ದೆಂದು ಗೊತ್ತಿದ್ದ ನಾನು ದೇವನೂರು ಮಹದೇವರ ಪರವಾಗಿ ಅವರನ್ನು ಒತ್ತಾಯಮಾಡಿ ಕರೆದಿದ್ದೆ. ಬೆಂಗಳೂರಿಗೆ ಬಂದ ಅವರು ಬಳಲಿದಂತೆ ಕಂಡರು. “ನೀನು ಕರೆದಾಗ ಬರದೆ ಇರಲು ಸಾಧ್ಯವೆ?” ಎಂದರು.

ಬಹಳ ನಿಷ್ಠರು ನಿಲುವಿನ ವ್ಯಕ್ತಿ ಅವರು. New Questನ್ನು ಜೆ.ಪಿಗೆ ಕೂಡ ಅವರು ಚಂದಾ ಇಲ್ಲದೇ ಕೊಟ್ಟಿರಲಿಲ್ಲ. ಇದನ್ನು ತಿಳಿದ ಜೆಪಿ ಅಜೀವ ಚಂದಾ ಕೊಡಲು ಮುಂದೆ ಬಂದಾಗ ಮರಣಶಯ್ಯೆಯಲ್ಲಿದ್ದ ಬಿಜೆಪಿಯಿಂದ ಆಜೀವ ಸದಸ್ಯತ್ವ ಪಡೆಯಲು ನಿರಾಕರಿಸಿ ಶಾ ವಾರ್ಷಿಕ ಚಂದಾ ಮಾತ್ರ ಪಡೆದಿದ್ದರು. ಆದರೆ ಅವರಿಗಿಂತ ಕಿರಿಯರ ಜೊತೆ ಅವರ ಆತ್ಮೀಯತೆ ಎಷ್ಟು ಗಾಢವಾದ್ದೆಂದರೆ ನನ್ನ ಜೇಬಿಂದ ಚೆಕ್ ಬುಕ್ ತೆಗೆಯಿಸಿ ನನ್ನಿಂದ Secular Society ಮತ್ತು New Quest ಗೆ ಅಜೀವ ಸದಸ್ಯತ್ವದ ಹಣ ಪಡೆದಿದ್ದರು.

ಪೈಪ್ ಸೇದುತ್ತ ನಿಧಾನವಾಗಿ ಮಾತಾಡುತ್ತಿದ್ದ ಶಾರ ಜೊತೆ ಹರಟುವುದೆಂದರೆ ಒಂದು ಅನುಭವವೇ; ಶಂಕರಾಚಾರ್ಯ, ಪ್ಲೇಟೊ, ಗಾಂಧಿ, ಮರಾಠಿಯ ಒಂದು ಹೊಸ ಪುಸ್ತಕ, ಸದ್ಯದ ರಾಜಕಾರಣ, ಗಣಿತಶಾಸ್ತ್ರ, ರಾಯ್, ಧರ್ಮ ಮತ್ತು ರಾಜಕೀಯ ವಿಚಾರಲೋಕದ ಅವಧೂತ ಅವರು. ಏಕಕಾಲದಲ್ಲಿ ಮುಸ್ಲಿಂ ಮೌಲ್ವಿಗಳನ್ನೂ ಗೋಮಾಂಸ ವಿರೋಧಿ ವಿನೋಬಾರನ್ನೂ ವಿರೋಧಿಸುತ್ತಿದ್ದ ಧೀಮಂತ ಇನ್ನಿಲ್ಲ. ಅವರ ರ‍್ಯಾಶನಲಿಸಮ್ಮನ್ನು ಪೂರ್ಣ ಒಪ್ಪಿಕೊಳ್ಳಲಾರದ ನನ್ನಂಥವರನ್ನು ಕಂಡಾಗ, ‘ಲೇಖಕರು ಎಲ್ಲೋ ಅತಾರ್ಕಿಕರು; ಮೆಚ್ಚಿದರೂ ನಾನವರನ್ನು ನಂಬುವುದಿಲ್ಲ’ ಎಂದು ನಗೆಯಾಡುತ್ತಿದ್ದರು. ಆದರೆ ಎಲ್ಲ ತರ್ಕವನ್ನೂ ತಲೆಕೆಳಗು ಮಾಡುವಂತೆ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದ ಒಬ್ಬ ಯುವಕನ ಹುಚ್ಚಿಗೆ ಅವರು ನೀರೆರೆದದ್ದು ನನಗೆ ಗೊತ್ತಿದೆ. ಆದರೆ ಆ ಮದುವೆ ದುರಂತವಾಯಿತಎಂದು ತಿಳಿದಾಗ ತರ್ಕಹೀನ ಹೃದಯದ ಬಗ್ಗೆ ಅವರು ನಂಬಿಕೆ ಕಳಕೊಳ್ಳಲಿಲ್ಲ. ವೈಜ್ಞಾನಿಕ ತರ್ಕಬದ್ಧತೆಗೆ ಗಂಟುಬಿದ್ದ ವಿಚಾರವಾದಿ ಸಾಹಿತ್ಯದಲ್ಲೂ ಮನುಷ್ಯ ಸಂಬಂಧಗಳಲ್ಲೂ ಮಾಂತ್ರಿಕತೆಯನ್ನು ಮರಳಿ ಪಡೆಯಲು ಇಚ್ಛಿಸುತ್ತಾನೆಂಬುದನ್ನು ಶಾರದಲ್ಲಿ ನಾನು ಯಾವತ್ತೂ ಕಾಣುತ್ತಿದ್ದೆ.

ಶ್ರೀಮತಿ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಂತಾಗ ಅವರ ವಿರುದ್ಧ ಪ್ರಚಾರ ಮಾಡಿದ್ದ ನನ್ನ ಮೇಲೆ ಮೈಸೂರು ವಿಶ್ವವಿದ್ಯಾಲಯ ಕ್ರಮ ತೆಗೆದುಕೊಳ್ಳಬೇಕೆಂಬ ಸನ್ನಾಹದಲ್ಲಿತ್ತು. ಅದನ್ನು ತಿಳಿದ ಶಾರದವರು ನನ್ನನ್ನು ಬೆಂಬಲಿಸಿ, ಒಂದು ದಿಟ್ಟ ಸಂಪಾದಕೀಯವನ್ನು New Questನಲ್ಲಿ ಬರೆದರು. ಅವರು ಕಣ್ಮರೆಯಾದ ಈ ಸಮಯದಲ್ಲಿ ಕೃತಜ್ಞತೆಯಿಂದ ಇಂಥ ಹಲವು ಕಾರಣಗಳಿಗಾಗಿ ಶಾರನ್ನು ನೆನೆಯುತ್ತೇನೆ. ಅವರ ವೈಚಾರಿಕತೆಯಿಂದ ‘ರುಜುವಾತು’ ಕಲಿಯುತ್ತಲೇ ಇರುತ್ತದೆ. ನಮ್ಮ ದೇಶದಲ್ಲಿ ಇಂಥ ದಿಟ್ಟ ನಿಲುವಿನ ಪ್ರಾಜ್ಞರು, ಹೃದಯವಂತರು ಅಪರೂಪ.

ರುಜುವಾತು – ೪, ೧೯೮೧

* * *