ಪಶ್ಚಿಮ ಜರ್ಮನಿಯ ಮೇನ್ ನದಿ ದಂಡೆಯ ಮೇಲಿನ ಫ್ರಾಂಕ್‌ಫರ್ಟ್ ಪಟ್ಟಣ ವೆಸ್ಟ್‌ಜರ್ಮನಿಗೆ ಇದು ಮಧ್ಯ ಪ್ರದೇಶ- ಹಲವು ಕಾರಣಗಳಿಗೆ ವಿಶಿಷ್ಠವಾದ್ದು. ನಮಗೆ ಅರಸೀಕೆರೆಯಿದ್ದಂತೆ – ಕೆಲಕಾಲ ತಂಗುವ, ಗಾಡಿಗಳು ಕೊಂಡಿಯಾಗುವ, ಯುರೋಪಿನ ಅತಿ ದೊಡ್ಡ ನಿಲ್ದಾಣ ಇಲ್ಲಿದೆ. ಬೃಹದಾಕಾರದ (ರಾಕ್ಷಸ? ದೈತ್ಯ?) ವಾಸ್ತುಶಿಲ್ಪ ಈ ನಿಲ್ದಾಣದ್ದು. ಕೈಗಾರಿಕಾ ಕ್ರಾಂತಿಯ ಕೆಥಿಡ್ರಲ್‌ಗಳೆಂದರೆ ಯುರೋಪಿನ ರೇಲ್ವೆ ನಿಲ್ದಾಣಗಳು. ಎಲ್ಲರಿಗೂ ಪರಸ್ಥಳ, ಅರೆ ನಿದ್ದೆಯಲ್ಲಿದ್ದಾಗ ಕಂಡಿರುವ ಸ್ಥಳ. ಆದರೆ ಈ ಬಾರಿ ನಾನು ಫ್ರಾಂಕ್‌ಫರ್ಟ್ ಮುಖೇನ ಹೋಗುತ್ತಿದ್ದುದಲ್ಲ-ಫ್ರಾಂಕ್‌ಫರ‍್ಟಿಗೇ ಹೋದದ್ದು. ಅಷ್ಟು ದೊಡ್ಡ ವಿಮಾನ ನಿಲ್ದಾಣ ನಾನು ಕಂಡಿಲ್ಲ. ಮೆತ್ತಿನ ರಬ್ಬರ್ ಹಾಸಿದ ನೆಲ, ಪ್ರಯಾಣಿಕರನ್ನು ನಿಲ್ಲಿಸಿಕೊಂಡು ಚಲಿಸುವ ರಸ್ತೆಗಳು, ಸ್ವಯಂಚಾಲಿತ ಇಳಿಯುವ ಮೆಟ್ಟಿಲುಗಳು ಎಲ್ಲ ವಿಮಾನ ನಿಲ್ದಾಣಗಳಿಗಿಂತ  ಇಲ್ಲಿ ಹೆಚ್ಚು. ಹೆಚ್ಚು ಮೆದು, ಹೆಚ್ಚು ಹೊಳಪು.

ಫ್ರಾಂಕ್‌ಫರ‍್ಟಿಗೇ ಈ ಬಾರಿ ಹೋಗಲು ಒಂದು ವಿಶೇಷ ಕಾರಣವಿತ್ತು. ಜಗತ್ತಿನ ಅತಿ ದೊಡ್ಡ ಪುಸ್ತಕದ ಉತ್ಸವ ನಡೆಯುವ ಫ್ರಾಂಕ್‌ಫರ‍್ಟಿನಲ್ಲಿ ಈ ವರ್ಷದ ವಿಶೇಷ ವಿಷಯ: ‘ಭಾರತ; ಸಾತತ್ಯದಲ್ಲಿ ಬದಲಾವಣೆ.’ ವಿಶೇಷ ಆಹ್ವಾನಿತ ಭಾರತೀಯ ಲೇಖಕರಲ್ಲಿ ನಾನೂ ಒಬ್ಬ.

ಪುಸ್ತಕ ಉತ್ಸವ ಫ್ರಾಂಕ್‌ಫರ‍್ಟಿನಲ್ಲೇ ನಡೆಯುವುದಕ್ಕೆ ಕಾರಣಗಳಿವೆ. ಕೆಲವೇ ಮೈಲುಗಳಾಚೆಯ ಊರೊಂದರಲ್ಲಿ ಮೊದಲ ಪುಸ್ತಕ ಅಚ್ಚಾದ್ದು. ಗಯಟೆ ಹುಟ್ಟಿ ಬೆಳೆದ ಊರು ಫ್ರಾಂಕ್‌ಫರ್ಟ್. ಅವನು ಇಪ್ಪತ್ತಾರು ವರ್ಷಗಳ ತನಕ ವಾಸವಾಗಿದ್ದ ಮನೆಯ ವಸ್ತುಗಳೆಲ್ಲ ಎರಡನೇ ಮಹಾಯುದ್ಧದ ಕಾಲದಲ್ಲಿ ನೆಲಮಾಳಿಗೆಯಲ್ಲಿ ಬಚ್ಚಿಟ್ಟು, ಮೊದಲು ಎಲ್ಲಿ ಯಾವುದು ಹೇಗಿತ್ತೋ ಹಾಗೆ ಕಾಣುವಂತೆ ಸೃಷ್ಟಿಸಿಬಿಟ್ಟಿದ್ದಾರೆ. ಅಡಿಗೆ ಮನೆ, ಊಟದ ಮನೆ, ಅವನು ಯುವಕನಾಗಿದ್ದಾಗ ಓದಿದ ಪುಸ್ತಕಗಳು ಎಲ್ಲ ಗಯಟೆ ಕಾಲದಲ್ಲಿ ಇದ್ದಂತೆ ಇದ್ದಲ್ಲೇ ಇವೆ.

ಸೆಪ್ಟೆಂಬರ್ ಇಪ್ಪತ್ತಾರನೇ ತಾರೀಖು ಶುಕ್ರವಾರ ನಾವು ಫ್ರಾಂಕ್‌ಫರ್ಟ್ ತಲ್ಪಿದೆವು. ರಾಮಾನುಜನ್ ಮತ್ತು ನಾನು ಚಿಕಾಗೋನಿಂದ ನೆರ ಫ್ರಾಂಕ್‌ಫರ‍್ಟಿಗೆ ಹಾರಿದ್ದು’ ಉಳಿದ ಭಾರತೀಯ ಲೇಖಕರು ಆಗಲೇ ತಲ್ಪಿದ್ದರು. ಪರಸ್ಥಳಗಳಲ್ಲಿ ನಡೆಯುವ ಸೆಮಿನಾರುಗಳ ಮುಖೇನ ಪರಿಚಿತರಾಗುವ ಎಲ್ಲ ಲೇಖರಿಗೂ ಒಣಗಿದ ಬಾಯಲ್ಲಿ ಹಲೋ ಹಲೋ ಎಂದು “ಅರ್‌ಕೇಡ್’ ಎಂಬ ಹೋಟೆಲಿಗೆ ಹೋದದ್ದಾಯಿತು. ಕೇರಳದ ಕಮಲಾದಾಸ್‌ಗೆ ಕಂಡಂತೆ ಗೇರುಬೀಜದ ಆಕೃತಿಯ ರೂಮುಗಳನ್ನು ಸೇರಿದ್ದಾಯಿತು. ಸುಮಾರು ಬೆಳಗಿನ ಹತ್ತು ಗಂಟೆ. ಫ್ರಾಂಕ್‌ಫರ‍್ಟಿನಲ್ಲಿ ಹಿತವಾದ ತಂಪು ಹವ, ಕೋಮಲವಾದ ಎಳೆ ಬಿಸಿಲು, ಮೇನ್ ನದಿ ಕಾಣುವಂತೆ ಜೊತೆಗೆ ಫ್ಯಾಕ್ಟರಿ ಕೊಳವೆಗಳೂ ಕಿಟಕಿಯುಳ್ಳ ಕೋಣೆಗಳು.

ಹೀಗೆ ಭೂಖಂಡಗಳನ್ನು ಹಾರಿ ದಾಟುವಾಗ ಕಾಲ ಹಿಂಜರಿದೋ ಮುಂಜರಿದೋ ದೇಹ ಮನಸ್ಸುಗಳು ಅಸ್ತವ್ಯಸ್ತವಾಗಿಬಿಡುತ್ತವೆ. ಕಾಲದಲ್ಲಿ ಮುಂದಾದೆನೊ ಹಿಂದಾದೆನೊ ಎಂಬುದು ಈಗಲೂ ನನಗೆ ಗೊಂದಲದ ವಿಷಯವೇ. ಫ್ರಾಂಕ್‌ಫರ್ಟ್ ನಾನು ಇರುವ ಆಯೋವಾ ಸಿಟಿಗಿಂತ ಆರೇಳು ಗಂಟೆ ಮುಂದಿದೆ(?) ಅಂದರೆ, ನನ್ನ ಯಾವತ್ತಿನ ದೇಹಕ್ಕೆ ಬೆಳಗಿನ ನಾಲ್ಕು ಗಂಟೆಯಾದರೆ ಇಲ್ಲಿ ಈಗ ಬೆಳಗಿನ ಹತ್ತು ಗಂಟೆ. ಬೆಳಗಿನ  ಉಪಾಹಾರ ತಿನ್ನಬೇಕಾದ ಕಾಲದಲ್ಲಿ ಮಧ್ಯಾಹ್ನದ ಊಟ; ನಿದ್ದೆ ಮಾಡಬೇಕಾದ ಕಾಲದಲ್ಲಿ ಕಣ್ಣು ಮನಸ್ಸು ತೆರೆದುಕೊಂಡಿದ್ದು ನಿಚ್ಚಳವಾಗಿ ಯೋಚಿಸಿ ಮಾಡಬೇಕಾದ ಕೆಲಸಗಳು. ಒಟ್ಟಿನಲ್ಲಿ ದೆಹವೂ ಕಾಲವೂ ಸಮಸ್ಥಿತಿ ತಲುಪಲು ದಿನಗಳೇ ಬೇಕಾಗುತ್ತವೆ. ಗುಂಗಿನಲ್ಲೇ ಸಂಜೆ ಹೋಟೆಲ್ ಫ್ರಾಂಕ್‌ಫರ್ಟ್ ಹಾಫ್‌ಗೆ ಇಲ್ಲಿನ ಒಂದು ದೈತ್ಯ ಹೊಟೇಲು ಹೋಗಿ ಸ್ವಾಗತಿಸಿಕೊಂಡಿದ್ದಾಯಿತು. ಮೇಲುಗಣ್ಣು, ಗೇಲುಗಣ್ಣು ಪರಸ್ಪರ ಪರಿಚಯ ಮಾಡಿಕೊಂಡದ್ದು ಯಾರು?ಹೇಗೆ?ಎಲ್ಲಿ? ಮತ್ತೆ ನೆನಪಿರುವುದು ಕಷ್ಟ. ವ್ಹಿಸ್ಕಿ ವೈನುಗಳ ಮತ್ತಿನಲ್ಲಿ ಮುಗುಳ್ನಗುವುದು, ಚುರುಕಾದ ಒಂದೆರಡು ಮಾತುಗಳನ್ನು ಆಡಿ ಆದಷ್ಟು ಹೆಚ್ಚು ಜನರನ್ನು ಆದಷ್ಟು ಕಡಿಮೆ ಕಾಲದಲ್ಲಿ ಭೇಟಿಯಾಗುವುದು, ಕಾಕ್‌ಟೇಲ್ ಪಾರ್ಟಿಗಳ ಕಲೆ.  ಎದುರು ಬದುರಾದರೂ ಕೊಟ್ಟುಕೊಳ್ಳುವ ಹಂಗಿಲ್ಲದ ಇಂಥ ಪಾರ್ಟಿಗಳಲ್ಲಿ ಅಂತರ ಪಿಶಾಚಿಗಳಂತೆ ಸುತ್ತಾಡುತ್ತಾ, ಯಾವುದಕ್ಕೂ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನೂ ಮಾತಾಡುತ್ತ, ಚುರುಕಾಗಿ ಹುರುಪಾಗಿ ಇದ್ದು ಬಿಡಬಹುದು. ಈ ಪಾರ್ಟಿ ಮುಗಿದ ಮೆಲೆ ಆರ್‌ಕೇಡ್‌ಗೆ ಮರಳಿ ಗಾಢನಿದ್ದೆಯಲ್ಲಿದ್ದ ಆ ರಾತ್ರಿ ನಡೆದದ್ದು ಮರೆಯಲಾರೆ.

ಟೆಲಿಫೋನ್ ಸದ್ದಾಯಿತು. ಹೆಸರು ಬೇಡ, ಘಟನೆ ಮಾತ್ರ ಹೇಳುವೆ. ಗೆಳೆಯ ‘ಅವನು’ ತನ್ನ ರೂಮಿಗೆ ಬರುವಂತೆ ಕರೆದ. ಗೆಳೆಯ ‘ಇವನೂ’ ಅಲ್ಲಿದ್ದ. ಇಬ್ಬರೂ ಕುಡಿಯುತ್ತ ಪರಸ್ಪರ ಕೆದುಕುವ ಬೆದಕುವ ಅವರ ಕೂಟಕ್ಕೆ ನನ್ನ ಸಾಕ್ಷಿತ್ವವನ್ನು ಭಾಗಿತ್ವವನನ್ನು ಬಯಸಿದ್ದರು. ‘ಅವನು’ ನನಗಿಂತ ಚಿಕ್ಕವನು; ತಲೆಯ ಬೋಳನ್ನು ಮುಚ್ಚುವಂತೆ ಬೆಳೆಸಿದ ಉದ್ದ ಕೂದಲಿನ, ಇಳಿ ಮೀಸೆಯ, ಗುಂಡಗಿನ ಹೊಟ್ಟೆಯ ತಿರುಚುವುದು, ದ್ವಂದ್ವಾರ್ಥಗಳಲ್ಲಿ ಗೇಲಿ ಮಾಡುವುದು, ಹೊಟ್ಟೆ ತುಂಬ ನಗುತ್ತ ಮುಖವೆತ್ತಿ ತನ್ನ ಮಾತುಗಳನ್ನು ಚಪ್ಪರಿಸುವುದು ಅವನ ಕ್ರಮ. ಒಂದು ಭರ್ಜಿ ಸಿಕ್ಕಿಸಿಕೊಂಡದರೆ ಅವನು ಸರದಾರ. ಮಾತು ಕಟು, ನಿಷ್ಠರು. ಮನಸ್ಸು ಸ್ವಾನುರಕ್ತ. ಲೇಖಕನಾಗಿ ತಾನು ಸರ್ವತಂತ್ರ ಸ್ವತಂತ್ರವೆಂಬ ಆಧುನಿಕ ಐರೋಪ್ಯ ಸಂವೇದನೆಯ ಬರಹಗಾರ. ಬದುಕು ಮತ್ತು ಹಣ-ಎರಡರಲ್ಲೂ ದುಂದುಗಾರನಾದ ಈ ಗೆಳೆಯ ಒಟ್ಟಿನಲ್ಲಿ ಜಂಬಗಾರ ಹುಂಜ, ಮುಗ್ಧ, ರೋಗ – ಇವನ ದೇಹದ ಸ್ಥಿತಿ ಮಾತ್ರವಲ್ಲ, ಬರವಣಿಗೆಯ ವಸ್ತು ಕೂಡ, ಥಾಮಸ್ ಮೆನ್, ಕಾಫ್ಯಾ, ಕಮೂರಿಗೆ ರೋಗ ಸಾಹಿತ್ಯ ಕೃತಿಯ ಕೇಂದ್ರ ಸಂಕೇತವಾದಂತೆ ನನ್ನ ಗೆಳೆಯ ಅವನಿಗೂ  ರೋಗದಲ್ಲಿ ವೆಸ್ಟೆಡ್ ಇಂಟರೆಸ್ಟ್‌. ಸಂಗೀತ, ಚಿತ್ರಕಲೆ, ಸಿನೆಮಾ, ಕಾವ್ಯ, ಪ್ರಬಂಧ- ಎಲ್ಲದರಲ್ಲೂ ಕೈಯಾಡಿಸಿದ ಈ ಗೆಳೆಯ ಮಂಕಾಗಿ ಒಂಟಿ ಕೂತಿರುವುದನ್ನೂ ಕಂಡಿದ್ದೇನೆ, ಅರಳಿನಂತೆ ಹೊಟ್ಟುವ ಮಾತುಗಳನ್ನು ಬೊಗಸೆ ಬೊಗಸೆ ಚೆಲ್ಲುತ್ತ ಗುಂಪಿನಲ್ಲಿ ತ್ರಿವಿಕ್ರಮನಾಗಿ ಬೆಳೆದು ಅಟ್ಟಹಾಸ ಪಡುವುದನ್ನೂ ನೋಡಿದ್ದೇನೆ.

ಡ್ಯೂಟಿ ಫ್ರೀ ವ್ಹಿಸ್ಕಿಯನ್ನು ಪ್ಲಾಸ್ಟಿಕ್ ಬಟ್ಟಲಲ್ಲಿ ಕುಡಿಯುತ್ತ ಅವನು ಮತ್ತು ಇವನು ಚರ್ಚಿಸುತ್ತಿದ್ದರು. ನನ್ನ ಕಂಡಿದ್ದೇ ನಾನು ಉಟ್ಟ ಸಿಲ್ಕಿನ ಜರಿಪಂಚೆಯನ್ನೂ ಜುಬ್ಬವನ್ನೂ ಇವನು ಮನಸಾರೆ ಮೆಚ್ಚಿ ನನ್ನ ಸೊಗಸುಗಾರಿಕೆಯನ್ನು ಹಾಸ್ಯ ಮಾಡಿದ. ಆಮೇಲೆ ಅಶೋಕಮಿತ್ರ-ತಮಿಳಿನ ಕಠಿಣವ್ರತಿಯಾದ ವಾಸ್ತವವಾದಿ ಕಥೆಗಾರ – ನಮ್ಮನ್ನು ಸೇರಿಕೊಂಡದ್ದು,, ಮಿತಭಾಷಿ, ಮಿತಾಹಾರಿಯಾಗಿ ಹುರಿಮಾಡಿದ ತಂತಿಯಂಥ ಸಣಕಲು ದೇಹದಲ್ಲಿ ಆರ್ತನಾಗಿ ಪ್ರಾಮಾಣಿಕವಾಗಿ ಬದುಕಿ ಬರೆಯುವ ಅಶೋಕ ಮಿತ್ರ ಮುಂದೆ ನಡೆದದ್ದಕ್ಕೆ ಸಾಕ್ಷಿಯಾದರು.

ಗೆಳೆಯ ಇವನು ಗೆಳೆಯ ಅವನಿಗಿಂತಲೂ ಹೆಚ್ಚು ಐರೋಪ್ಯ ಸಂವೇದನೆಯ ಬರಹಗಾರ. ಆದರೆ ತನ್ನ ಆರ್ತತೆಯಲ್ಲಿ ನೂರಕ್ಕೆ ನೂರು ಭಾರತೀಯನಾಗಬೇಕೆಂಬ ಹವಣಿಕೆಯ ಕಥೆಗಾರ. ಈ ಗೆಳೆಯನನ್ನು ಭಾರತದಲ್ಲಿ ದೇಶಭ್ರಷ್ಟವಾಗಿ ಬದುಕುವ ಪೂರ್ವ ಯೂರೋಪಿನ ಲೇಖಕನೆಂದು ನಾನು ಅವನು ಗೇಲಿ ಮಾಡಿದ್ದುಂಟು. ಇವನದು ಹಾಸ್ಯಾತೀತವಾದ ತೀವ್ರತೆ; ಹೃದಯ ಸುರಿಯುವಂತೆ ಇವನು ಮಾತನಾಡುವುದು. ಇವನ ಮಾತಿನ ತೀವ್ರತೆ, ವಾದಗಾರಿಕೆ ಯಾವತ್ತೂ ಉಳಿದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಇರುತ್ತದೆ. ಇವನು ನರಳುತ್ತಿರುವಂತೆ ನಾವೂ ನರಳಬೇಕು. ನರಳುವುದರಲ್ಲಿ ಸೂಕ್ಷ್ಮವಾಗಬೇಕು. ಹೀಗೆ ಪಾಪಪ್ರಜ್ಞೆಯಲ್ಲಿ ಅತಿಸೂಕ್ಷ್ಮರಾಗಿ ನೈಜ ಲೇಖಕರಾಗಬೇಕು ಎಂಬುದು ಇವನ ಗುರಿ. ಅವನು ಪ್ರಪಂಚ ಗೆಲ್ಲ ಹೊರಟ ಸರದಾರನಂತೆ ಕಂಡರೆ, ಅರಳುಗಣ್ಣಿನ ಇವನು ರೆಕ್ಕೆ ಕಳೆದುಕೊಂಡ ಏಂಜಲ್‌ನಂತೆಯೋ, ಕುಡಿಯುವುದರಲ್ಲೂ, ಧ್ಯಾನದಲ್ಲೂ ಮಗ್ನನಾದ ಮಧ್ಯಯುಗದ ಕ್ರೈಸ್ತ ಸಂತನಂತೆಯೂ ಕಾಣುತ್ತಾನೆ. ಪ್ರಪಂಚದ ನೋವೆಲ್ಲವನ್ನೂ ತಾನು ಅನುಭವಿಸಬೇಕೆಂಬ ವ್ರತದವನು ಇವನು. ಯೂರೋಪಿನ ಬಗ್ಗೆ ಇವನು ಮಾತನಾಡುವಾಗ ದೊಡ್ಡ ಸಂತರು, ಲೇಖಕರು, ಚಿತ್ರಕಾರರು ಇವನ ಎದುರಿಗಿರುತ್ತಾರೆ. ಹೀಗೆ ವ್ಯಕ್ತಿಗಳ ಮುಖೇನ ಯೂರೋಪನ್ನು ವಿವರಿಸುವ ಈ ಗೆಳೆಯ ನಮ್ಮ ದೇಶದ ಬಗ್ಗೆ ಮಾತಾಡುವುದು ಅಮೂರ್ತ ಸಂಸ್ಕೃತಿಯಾಗಿ, ಜೀವನಕ್ರಮವಾಗಿ, ಒಬ್ಬಾನೊಬ್ಬ ಭಾರತೀಯ ಲೇಖಕನ ಬಗ್ಗೆಯೂ- ಹಳೆಯವರಾಗಲಿ, ಹೊಸಬರಾಗಲಿ- ಈತ ಉತ್ಸಾಹದಿಂದ ಮಾತಾಡಿದ್ದು ನಾನು ಕಂಡಿಲ್ಲ. ಆದರೆ ಸರದಾರ ಅವನಿಗೆ ಭಾರತದಲ್ಲಿ ಹಿಂದೂ, ಇಂದೂ ಹಲವು ಹೀರೋಗಳಿದ್ದಾರೆ. ಆದರೆ ಭಾರತವೆಂಬ ಪುಣ್ಯಭಾವವಿಲ್ಲ. ಗಾಂಧೀಜಿ ಬಗ್ಗೆ ಅವನು ಮಾತಾಡುವುದು ಕೇಳಬೇಕು. ಗಾಂಧೀಜಿ ಸತ್ತಾಗ ಅವನ ಅಜ್ಜಿ ಹಣ್ಣು ಹಣ್ಣು ಮುದುಕಿಯಂತೆ. ಹಾಸಿಗೆ ಹಿಡಿದು ಮಲಗಿದ ಮುದುಕಿಗೆ ಕಣ್ಣು ಕಾಣದು, ಕಿವಿ ಕೇಳದು. ಗಾಂಧಿ ಸತ್ತರೆಂದು ಅವಳಿಗೆ ಕಿರುಚಿ ಹೇಳಿದರೆ ಅವಳು ನಿಟ್ಟುಸಿರಿಟ್ಟು ಹೇಳಿದಳಂತೆ: “ಅಂತೂ ಗಾಂಧಿ ಸತ್ತನ? ಇನ್ನು ಸಕ್ಕರೆ ಬೆಲೆ ಇಳಿಯುತ್ತದೆ.’ ತನ್ನ ಕಥೆಗೆ ಹಿಗ್ಗಿದ ಅವನ ಎತ್ತಿದ ಮುಖ, ನಗುವ ಕಣ್ಣು, ಚೂಪಾದ ಇಳಿ ಮೀಸೆ, ಹೆಗಲ ಮೇಲೆ ಚೆಲ್ಲಿದ ಗುಂಗುರು ಕೂದಲು- ಈ ಕಥೆಯ ಜೊತೆಯೇ ನನಗೆ ನೆನಪಾಗುತ್ತದೆ. ಗಾಂಧೀಜಿಯನ್ನು ಕುರಿತ ಪುಣ್ಯ ಭಾವದ ಭಾರವನ್ನು ನನ್ನ ಜೊತೆಯೇ ನನಗೆ ನೆನಪಾಗುತ್ತದೆ. ಗಾಂಧೀಜಿಯನ್ನು ಕುರಿತ ಪುಣ್ಯಭಾವದ ಭಾರವನ್ನು ನನ್ನ ಈ ಸರ್ವತಂತ್ರ ಸ್ವತಂತ್ರ ಸಂವೇದನೆಯ ಗೆಳೆಯ ಮೀರುವುದು ಹೇಗೆ. ಅಗೌರವದಲ್ಲಿ ಅವನಿಗೆ ಹಿಗ್ಗಿ ಹಗುರಾಗುವುದು ಎಷ್ಟು ಅವಶ್ಯವೆಂದರೆ ಅಕ್ಟೋಬರ್ ಎರಡನೇ ತಾರೀಖು ಅವನು ಟೊಮಾಟೋ ರಸದಲ್ಲಿ ವೋಡ್ಕ ಬೆರೆಸಿ “ಬ್ಲಡಿಮೇರಿ’ ಕುಡಿಯಬೇಕು.  ಕ್ರೈಸ್ತರ ಈ “ಬ್ಲಡಿಮೇರಿ” ಪಾನೀಯವನ್ನು ನನ್ನ ಗೆಳೆಯ ಅಟ್ಟಹಾಸದಲ್ಲಿ ಕರೆಯುವುದು “ಬ್ಲಡಿ ಮಹಾತ್ಮ” ಎಂದು.

ತನ್ನ ಅಜ್ಜಿಗೆ ಗಾಂಧಿ ಎಂದರೆ ಯಾವನೋ ಗುಜರಾತಿ ಬನಿಯ – ಸಕ್ಕರೆಯನ್ನು ದುಬಾರಿ ಮಾಡಿದವ. ಅವಳು ತನ್ನ ಮುಪ್ಪಿನ ಮಂಕಿನಲ್ಲಿ ಮಾಡಿಕೊಂಡ ಅಪಾರವಾದ ಅಪಾರ್ಥದಲ್ಲಿ ಸುರ್ರಿಯಲ್ ಸಾಂಕೇತಿಕತೆ ನನ್ನ ಗೆಳಯನಿಗೆ ಕಂಡಿತ್ತು.

ವ್ಹಿಸ್ಕಿ ಇಬ್ಬರನ್ನೂ ಸಡಿಲಿಸಿತ್ತು. ಮಾತಿಗೆ ಮಾತು ಬೆಳೆದಿತ್ತು ನಾನು ಪ್ರಾಸಂಗಿಕವಾಗಿ ಅವನನ್ನು ಕೇಳಿದೆ. ಸರ್ಕಾರದ ಪ್ರಚಾರದಂತಿದ್ದ ಸಿನಿಮಾವೊಂದಕ್ಕೆ ಅವನು ಸ್ಕ್ರಿಪ್ಟ್ ಬರೆದಿದ್ದ- ಬರೆದು ಬಹುಮಾನಿತನಾಗಿದ್ದ. ಅವನ ಇಡೀ ಒಗರಾದ ಶೈಲಿಗೆ ಈ ಚಿತ್ರ ವಿರೋಧವಾಗಿತ್ತು. ಹಣದ ಅಗತ್ಯಕ್ಕಾಗಿ ಆತ ಕಾಂಪ್ರೊಮೈಸ್ ಮಾಡಿಕೊಂಡಿರಬೇಕೆಂದು ನಾನು ಸೂಚಿಸಿದ್ದು ಅಶೋಕಮಿತ್ರರಿಗೆ ಸಹಜವೆನ್ನಿಸಿತು. ಆದರೆ ನೀತಿವಂತೆ ‘ಇವನ’ ಮುಖ ಕ್ರಿಸ್ತನದರಂತೆ ನೋವಿನ, ಅನುಕಂಪದ, ದುಃಖದ ಮಡುವಾಯಿತು. ‘ಅವನ’ ಹೃದಯ ಗುಟ್ಟುಗಳನ್ನು ಕೆದಕಿ ಕೆದಕೀ ಕೇಳತೊಡಗಿತು. ತನ್ನ ಉದ್ದೇಶವನ್ನು ಸಿನಿಮಾ ಮಾಡಿದಾತ ಮೋಸದಲ್ಲಿ ತಿರುಚಿದ ಎಂಬ ಅವನ ವಿವರಣೆ ಇವನಿಗೆ ಸಾಲದಾಯಿತು. ಅವನ ಗುಪ್ತ ಪಾಪಪ್ರಜ್ಞೆಯ ಮೊಟ್ಟೆಯನ್ನು ತನ್ನ ಆರ್ತ ಹೊಟ್ಟೆಗೆ ಒತ್ತಿಕೊಳ್ಳುತ್ತ ಇವನು ಕಾವು ಕೂತ. ಒಡೆದು ಹೊರಬಂದದ್ದು ಕತ್ತಿನ ಮೇಲೆ ಕೂದಲು ಚೆಲ್ಲಿಕೊಂಡು ನುಗ್ಗಿದ ಸರದಾರ. ಅವನ ಎದುರು ಇವನು ನಿಂತು ದಿಟ್ಟಿಸಿದ. ಅವನೂ ಕಣ್ಣುಗಳನ್ನು ಅಗಲಗಲ ತೆರೆದು ಇವನ ಕಣ್ಣುಗಳಲ್ಲಿ ಪಾಪ ಭಾವವನ್ನೂ ಕ್ರೌರ್ಯವನ್ನೂ ಹುಡುಕುತ್ತ ನೋಡಿದ. “ಬುಲ್‌ಫ್ರಾಗ್‌ನಂತೆ ನನ್ನನ್ನೇನು ದುರುಗುಟ್ಟಿ ನೋಡುತ್ತಿದ್ದೀಯ?” ಎಂದು ಅವನು ಕಿರಿಚಿದ. ಇನ್ನಷ್ಟು ಕರುಣೆಯಿಂದ ಇವನು ದುರುಗುಟ್ಟಿದ. ತಾನು ಬರೆಯುವ ಕಥೆಗಳ ನಾಯಕರಂತೆಯೇ ಹಿಂಸೆಗಾಗಿ ಕಾತರನಾಗಿ ಕಾದ. ಕಾಕ್‌ಟೇಲ್ ಭೇಟಿಯಾಗಿ ಶರುವಾದದ್ದು ಅಂತೂ ನೈಜ ಘಟನೆಯಾಯಿತು. ಇವನು ಬೇಡಿದ್ದು ಸಿಕ್ಕಿತು. ‘ಅವನು’, ‘ಇವನ’ ಕನ್ನೆಗಳಿಗೆ ಬಿಗಿದ, ನಿಂತ, ದಿಟ್ಟಿಸಿದ. ಅವರಿಬ್ಬರ ಪಾಶ್ಚಾತ್ಯ ಸಾಹಿತಿ ಹೀರೋಗಳೂ, ಹೀಗೆ ಹೊಡೆದಾಡಿದರೆಂಬುದನ್ನು ಲೆಕ್ಕಿಸದ ಅಶೋಕಮಿತ್ರ ಶೋಕಿಸಿದ. ನಾವೆಲ್ಲ ರೂಮಿನಿಂದ ಹೊರಬಂದವು. ಇವನೂ ಹೊರಬಂದ. ಮತ್ತೆ ತನ್ನ ಕೋಟನ್ನು ಮರೆತಿದ್ದೇನೆಂದು ಒಳಹೋದ. ಅವನ ಜೊತೆ ಇನ್ನಷ್ಟು ಕಾಲ ಇರುವುದು ಇವನಿಗೆ ಅಗತ್ಯವಾಗಿತ್ತು. ನಾನು ರೂಮಿಗೆ ಮರಳಿದ ಮೇಲೆ, ಅರೆನಿದ್ದೆಯಲ್ಲಿ ಈಸುತ್ತಿದ್ದು ಎಷ್ಟೋ ಕಾಲವಾದ ನಂತರ ಇವನು ಫೋನು ಮಾಡಿದ,  ರೂಮಿಗೆ ಪ್ರವೇಶಿಸಿದಾಗ ನನ್ನ ರೇಷ್ಮೆಯ ಪಂಚೆಯನ್ನು ಅಕ್ಕರೆಯಿಂದ ಕೊಂಡಾಡಿದ್ದ ಇವನು, ಈಗ ನನ್ನನ್ನು ಹಳಿಯಲು ಶುರುಮಾಡಿದ. ‘ನನ್ನನ್ನು ಅವನು ಹೊಡೆದಾಗ ನೀನು ಸುಮ್ಮನೆ ಇದೆಯಲ್ಲ? ಅವನ ಅಪ್ರಮಾಣಿಕ ಬರವಣಿಗೆಯನ್ನು ನೀನು ಖಂಡಿಸಲಿಲ್ಲವಲ್ಲ? ನೀನು ಯಾಕೆ ಈಚೆಗೆ ಹೀಗೆ ಭ್ರಷ್ಟನಾಗುತ್ತಿದ್ದೀಯ?’ ಇತ್ಯಾದಿ. ನಾನು ಫೋನನ್ನು ಕೆಳಗಿಟ್ಟು ನಿದ್ದೆ ಮಾಡಲು ಪ್ರಯತ್ನಿಸಿದೆ. ಮಾರನೇ ದಿನ ಅವನು ಮತ್ತು ಇವನು ಯಥಾಪ್ರಕಾರ ಇದ್ದಂತೇ ಇರುತ್ತಾರೆಂದು ನನಗೆ ಗೊತ್ತಿತ್ತು. ಮನಸ್ಸಿನ ಲೀಲಾಮಯವಾದ ಲವಲವಿಕೆಗಾಗಿ ಎಲ್ಲ ಬಗೆಯ ಆರ್ತತೆಯನ್ನೂ ಅನುಮಾನಿಸುವ ಅವನ ನೆಲೆಯಿಲ್ಲದ ಬೊಹಿಮಿಯನ್ ವ್ಯಕ್ತಿತ್ವ, ಬರವಣಿಗೆಯ ಸೂಕ್ಷ್ಮಕ್ಕಾಗಿ ಸಂತತ್ವವನ್ನು ಹಂಬಲಿಸುವ ಇವನ ಆರ್ತತೆ- ಎರಡೂ ಒಂದು ಕ್ಷಣ ಪೊಳ್ಳೆನಿಸಿದರೂ ನನಗೆ ಈ ಇಬ್ಬರು ನೈಜ ಶಕ್ತಿಗಳೇ. ಅವನು ಸಂಸಾರ ಹಚ್ಚಿಕೊಂಡು ತನ್ನ ಸರ್ವತಂತ್ರ ಪ್ರಜ್ಞೆಯನ್ನು ಪರೀಕ್ಷೆಗೆ ಒಡ್ಡಿಕೊಂಡರೆ, ಇವನು ಸಂಸಾರ ತೊರೆದು ಜಗಳಗಂಟನಾಗಿ ಒಣಗುವುದರಲ್ಲಿ ತನ್ನನ್ನು ನಿಜ ಮಾಡಿಕೊಳ್ಳಲು ಹೊರಟವನು.

* * *

ಮೇನ್ ನದಿ ದಂಡೆಯ ನಮ್ಮ ಆರ್‌ಕೇಡ್‌ನಿಂದ ಬೆಳಿಗ್ಗೆಯ ಮೃದು ಬಿಸಿಲಲ್ಲಿ ಹೊರಗೆ ನಡೆದಾಡಲು ಹೋದೆ. ಸಾಲಾಗಿ ಪಾರ್ಕ್ ಮಾಡಿದ ಕಾರುಗಳ ಮೇಲೆ ಶೇವಿಂಗ್ ಕ್ರೀಮ್‌ನಲ್ಲಿ ಬರೆದ ಚಿತ್ರಗಳು. ಹೃದಯ, ಬಾಣ, ಪ್ರೇಮ ಇತ್ಯಾದಿಗಳ ನಂತರ ಒಂದು ಹಳೆಕಾರಿನ ಮೇಲೆ ಸ್ವಾಸ್ತಿಕದ ಚಿತ್ರವಿತ್ತು. ಕಾರಿನ ಮಾಲೀಕನಿಗೆ ಇದು ಎಚ್ಚರಿಕೆಯಿರಬೇಕು.  ಹಿಟ್ಲರನ  ಕಾಲದ ಈ ಸ್ವಾಸ್ತಿಕ ನನ್ನನ್ನು ಕಾಡಿತು. ಹಿಂದಿನಷ್ಟು ಯಹೂದ್ಯರು ಖಂಡಿತ ಪ್ರಾಂಕ್‌ಫರ್ಟಿನಲ್ಲಿ ಈಗಿಲ್ಲ. ಮಧ್ಯಯುಗದಲ್ಲೇ ಯಹೂದ್ಯರ ಬೇಟೆ ಫ್ರಾಂಕ್‌ಫರ್ಟಿನಲ್ಲಿ ಶುರುವಾಯಿತು. ೧೯೨೬ನೇ ಇಸವಿಯಲ್ಲಿ ೨೯,೩೮೫ ಯಹೂದ್ಯರು ವಾಸಿಸಿದ್ದ ಈ ಪಟ್ಟಣದಲ್ಲಿ ೧೯೪೨ನೇ ಇಸವಿಯಲ್ಲಿ ೮೧೭ ಯಹೂದ್ಯರು ಮಾತ್ರ ಉಳಿದರು. ಆದರೆ ಈಗಿನವರ ಕೋಪವೆಲ್ಲ ಅರಬ್ಬರ ಮೇಲೆ – ಕೆಲಸ ಹುಡುಕಿಕೊಂಡು ಬಂದ ಇರಾಕರ ಮೇಲೆ. ಅವರು ಈ ಪೇಟೆಯಲ್ಲಿ ಕಾಣಲು ನನ್ನಂತೆಯೇ ಇರುತ್ತಾರೆ. ಅವರು ಈ ಪೇಟೆಯಲ್ಲಿ ಕಾಣಲು ನನ್ನಂತೆಯೇ ಇರುತ್ತಾರೆ. ದಾರಿಹೋಕರಿಗೆ ನಾನೊಬ್ಬ ಆಹ್ವಾನಿತ ಬರಹಗಾರನಲ್ಲ; ಕೆಲಸ ಹುಡುಕಿಕೊಂಡು ಬಂದವ ಅಥವಾ ರಾಜಕೀಯ ನಿರಾಶ್ರಿತ. ಓಡಿ ಬಂದ ಯಾವ ರಾಜಕೀಯ ನಿರಾಶ್ರಿತನಿಗಾಗಲಿ ಜರ್ಮನಿಯಲ್ಲಿ ರಕ್ಷಣೆ ಸಿಗುತ್ತದೆ. ಆದರೆ ಸರ್ಕಾರದ ದಯೆಯ ಮೇಲೆ ಅವನು ಬದುಕಬೇಕು, ಕೆಲಸ ಮಾಡುವಂತಿಲ್ಲ. ಪರಿಣಾಮ -ಎದುರಾಗುವ ಮುಖಗಳು ಸ್ನೇಹದಲ್ಲಿ ನಗುವುದಿಲ, ಗಂಟಾಗಿರುತ್ತವೆ. ನಾವು ಭಾರತೀಯರೆಂದು ಏನಾದರೂ ತಿಳಿದರೆ, ಅಷ್ಟೊಂದು ಬಡತನ ರೋಗ ರುಜಿನದ ನಾಡಿನಿಂದ ಬಂದ ಈತ ಹೇಗೆ ಮೈ ಕೈ ತುಂಬಿಕೊಂಡಿದ್ದಾನೆಂದು ಆಶ್ಚರ್ಯಪಟ್ಟಾರು ಇವರು. ಪ್ರತಿಮುಖದ ಹಿಂದೆಯೂ ಏನು ಭಾವನೆಯಿದ್ದೀತು ಎಂದು ಹೀಗೆ ಕಲ್ಪಿಸಿಕೊಳ್ಳುತ್ತ ನಾನು ನಡೆದೆ, ಜೋಕೆಯಾಗಿ ಪೇವ್‌ಮೆಂಟಿನ ಮೇಲೆ ನಾಯಿಗಳ ಕಕ್ಕಸು.  ನಾಯ್‌ಪಾಲನ ಭಾರತದ ವರ್ಣನೆ ನೆನೆದೆ. ಎಲ್ಲ ದೇಶದಲ್ಲೂ ನಾವು ಹುಡುಕಿದ್ದು ಕಂಡೇ ಕಾಣುತ್ತದೆ. ಆದರೆ ನನ್ನನ್ನು ಕಂಡು ಮುಖ ಸಿಂಡರಿಸುವ ಈ ಬಿಳಿಯ ಹಾಗೆ ನನಗೆ ಈಗ ಕಾಣುವವ ತನ್ನ ಮಗುವನ್ನು ಖಂಡಿತ ಪ್ರೀತಿಸುತ್ತಾನೆ. ಸಾವೆಂದರೆ ಭಯಪಡುತ್ತಾನೆ. ದ್ವೇಷಿಸುವುದು ತಪ್ಪೆಂದು ಒಪ್ಪುತ್ತಾನೆ. ಆದರೆ ನನಗೆ ಕಾಣುವುದು ಮಾತ್ರ ಸಿಡುಕುವ ಮುಖ ಅಥವಾ ನನ್ನ ದೇಶದ ಚರಿತ್ರೆಯಿಂದಾಗಿ ನನಗೆ ದೊರೆಯಬಹುದಾದ್ದು ಸಿಡುಕಿನ ಮೋರೆಗಳು ಮಾತ್ರ.

ನಮ್ಮನ್ನು ಒಯ್ಯಲು ಬಂದ ಬಸ್ಸಿನಲ್ಲಿ ನಮ್ಮೊಡನೆ ಯಶಸ್ವಿ ಸಂಬಂಧಕ್ಕಾಗಿ ಕಾತರರಾದ ಜರ್ಮನ್ ಸ್ಕೌಟ್ ಹುಡುಗರು ಹುಡುಗಿಯರು ಇದ್ದರು. ಪರಿಚಯ ಮಾಡಿಕೊಂಡರು. ಇಂಗ್ಲೀಷ್ ಕಲಿಯುತ್ತಿದ್ದ ನನ್ನ ‘ಸ್ಕೌಟ್ (ಸಹಾಯ ಸಿಬ್ಬಂದಿಯನ್ನು ಅವರು ಕರೆಯುವುದು ಹೀಗೆ) ಹೋಲ್ಗಾ ಸ್ವಾಸ್ತಿಕವನ್ನು ವಿಷಾದದಿಂದ ವಿವರಿಸಿದ. ಫ್ರಾಂಕ್‌ಫರ‍್ಟಿನ ಸುಂದರವಾದ ಚೌಕದಲ್ಲಿದ್ದ ಸಿಟಿ ಹಾಲಿನಲ್ಲಿ ಪುಸ್ತಕದ ಉತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಎರಡು ದಿನಗಳ ಸೆಮಿನಾರಿಗೆಂದು ನಾವು ಹೋದೆವು. ನಮ್ಮ ಹೆಸರುಗಳನ್ನು ಬರೆದಿಟ್ಟ ಎತ್ತರವಾದ ಜಾಗದಲ್ಲಿ ಸಭಿಕರಿಗೆ ಎದುರಾಗಿ ಕೂತೆವು.

ಮೊದಲ ಸಭೆ ಪ್ರಾರಂಭವಾದ್ದು ಹಿಂದಿಯ ಹಿರಿಯ ಲೇಖಕ ವಾತ್ಸ್ಯಾಯನರ ಮಾತಿನಿಂದ, ಪರಂಪರೆಯ ಸಾತತ್ಯವನ್ನು- ಬದಲಾವಣೆಯಲ್ಲೂ ನಾವು ಕಾಣುವ ಸಾತತ್ಯವನ್ನು- ಹುಕ್ಕದ ನಿದರ್ಶನದಿಂದ ಅವರು ವಿವರಿಸಿದರು. ವಿವರ ಸ್ವಲ್ಪ ಹೆಚ್ಚಿನ್ನಿಸಿದರೂ ನಿದರ್ಶನ ಸೊಗಸಾಗಿತ್ತು. ತಂಬಾಕನ್ನು ಸುಡುವ ಕರಟ ಬದಲಾಗುತ್ತದೆ; ಕೊಳವೆ ಬದಲಾಗುತ್ತದೆ; ನೀರು ಬದಲಾಗುತ್ತದೆ ಹೀಗೆ ಹುಕ್ಕದ ಪ್ರತಿ ಅಂಗವೂ ಅನಿವಾರ್ಯವಾಗಿ ಬದಲಾಗುತ್ತಿದ್ದರೂ ಸೇದುವ ಹುಕ್ಕ ಮಾತ್ರ ಅದೇ, ಮುತ್ತಜ್ಜನ ಕಾಲದ್ದೇ ಹಳ್ಳಿಯ ಈ ಮುದುಕನಿಗೆ. ವಾತ್ಸಾಯನರ ಮಾತಿನ ನಂತರ ನಾವೆಲ್ಲ ನಮ್ಮ ನಮ್ಮ ಭಾಷೆಗಳಲ್ಲಿ ಓದಿದ ಚೂರುಗಳು ವಿಸ್ತೃತ ಭಾಗಗಳನ್ನು ಜರ್ಮನ್ ನಟಿಯೊಬ್ಬಳು ಭಾವಯುಕ್ತವಾಗಿ ಓದಿದಳು. ಈ ಭಾಷಾಂತರಗಳನ್ನು ಏರ್ಪಡಿಸಿದ್ದು ಹೈಡಲ್ ಬರ್ಗ್‌ನಲ್ಲಿ ಭಾರತದ ವಿಷಯ ಕಲಿಸುವ ಲೋಥಾರ್ ಲೂಟ್ಸೆ ಸುಮಾರು ಹದಿನೈದು ವರ್ಷಗಳ ಹಿಂದೆ ಮೈಸೂರಲ್ಲಿ ಹಲವರಿಗೆ ಗೆಳೆಯನಾದವನು. ಯೂನಿವರ್ಸಿಟಿಗೆ ಗೆಸ್ಟ್ ಹೌಸ್‌ನಲ್ಲಿದ್ದುಕೊಂಡು  ಬೈಸಿಕನಲ್ಲಿ ಓಡಾಡುತ್ತ ತನ್ನ ಸುತ್ತ ಹಲವು ಹುಡುಗರನ್ನು ಕೂಡಿಕೊಂಡಿದ್ದ ಲೂಟ್ಸೆ ಆ ದಿನಗಳಲ್ಲಿ ಪ್ರಾಯೋಗಿಕ ವಿಮರ್ಶೆಯಲ್ಲಿ ಸಂಶೋಧನೆ ನಡೆಸಿದ್ದ. ಬೇಂದ್ರೆಯೂ ಸೇರಿದಂತೆ ಹಲವು ಲೇಖಕರನ್ನು ಸಂದರ್ಶಿಸಿದ್ದ. ಶ್ರೀಕೃಷ್ಣ ಆಲನಹಳ್ಳಿ, ವಾಸುದೇವನ್ ಇನ್ನೂ ಲೂಟ್ಸೆಗೆ ಕಣ್ಣಿಗೆ ಕಟ್ಟುವಂತೆ ಉಳಿದಿದ್ದಾರೆ. ಈಚೆಗೆ ಲೂಟ್ಸೆ ಸ್ವಲ್ಪ ತೋರವಾಗಿದ್ದಾನೆ ಸ್ಪಷ್ಟವಾಗಿ, ನಾಟಕೀಯವಾಗಿ ಸ್ವಲ್ಪ ತೋರವೆನ್ನಿಸುವಂತೆಯೇ ಮಾತಾಡುತ್ತಾನೆ. ಈಗಲೂ ಹಿಂದಿನಂತೆಯೇ ಹೃದಯವಂತನಾಗಿ, ನಮಗದು ಗೊತ್ತಾಗುವಂತೆಯೂ, ಉಳಿದಿದ್ದಾನೆ. ತನ್ನ ಜನರ ಜೊತೆ ಅವನ ವರ್ತನೆ ಹೆಚ್ಚು ಸಹಜವಿದ್ದೀತು. ಇನ್ನೊಬ್ಬ ಗೆಳೆಯ, ಪ್ರೊಫೆಸರ್ ಸಾಂಥೈಮರ್ ಮೃದುಮಾತಿನ, ನಾಚಿಕೆಯಲ್ಲಿ ಮುಚ್ಚಿ ಕೂರುವಾತ, ಮರಾಠಿ ಪಂಡಿತ ಹರಡಿಕೊಳ್ಳುವ ಲೂಟ್ಸೆಯ ಸೊಗಸಿಗೆ ವಿರುದ್ಧವಾದ ಪ್ರಕೃತಿಯವ. ಆದರೂ ಲೂಟ್ಸೆಯ ಅಚ್ಚುಮೆಚ್ಚಿನ ಸ್ನೇಹಿತ. ಇಬ್ಬರೂ ಸೇರಿ ಹೈಡಲ್‌ಬರ್ಗ್‌ನ್ನು ಭಾರತದ ದೇಶೀಯ ಲೇಖಕರಿಗೆ ಆತ್ಮೀಯವಾಗುವಂತೆ ಮಾಡಿದ್ದಾರೆ. ಲೂಟ್ಸೆ ನನಗೆ ಕಿವಿಯಲ್ಲಿ ಹೇಳಿದ್ದ: ನಿಮ್ಮ ನಿಮ್ಮ ಭಾಷೆಗಳಲ್ಲೇ ಓದಿಸುವುದರ ಉದ್ದೇಶ- ಭಾರತವೆಂದರೆ ಇಂಗ್ಲೀಷ್ ಮಾತ್ರವಲ್ಲೆಂದು ಜರ್ಮನರಿಗೆ ತಿಳಿಯಲಿ ಎಂದು. ಲೂಟ್ಸೆ ಉದ್ದೇಶ ಸಫಲವಾಯಿತು. ಆದರೆ ಇಂಗ್ಲೀಷ್ ಭಾಷಾಂತರವಿಲ್ಲದ್ದರಿಂದ ಭಾರತೀಯ ಲೇಖಕರು ಓದಿದ್ದು ಉಳಿದ ಭಾರತೀಯ ಲೇಖಕರಿಗೇ ಅರ್ಥವಾಗಲಿಲ್ಲ ಎಂಬುದೊಂದು ವಿಪರ್ಯಾಸ.  ಅಲ್ಲದೆ ಸಭೆಯಲ್ಲಿ ಇಂಗ್ಲಿಷ್ ಅರಿಯದ ಜರ್ಮನ್ ಮಾತ್ರ ಗೊತ್ತಿದ್ದವರು ಎಲ್ಲೋ ಕೆಲವರು ಮಾತ್ರ ಇದ್ದಿರಬೇಕು. ಜರ್ಮನ್‌ನಲ್ಲೇ ಆಡಿದ ಮಾತುಗಳ ಇಂಗ್ಲಿಷ್ ಭಾಷಾಂತರ ಒದಗಿಸುವ ಕರಡಿಕೆಗಳನ್ನು ನಮಗೆ ಕೊಟ್ಟಿದ್ದರು ಎನ್ನಿ – ಆದರೆ ಇದು ಜರ್ಮನ್‌ರ ಭಾಷಣಗಳಿಗೆ ಮಾತ್ರ.

ಎರಡನೇ ಸಭೆಯ ವಿಷಯ ಎಷ್ಟು ಚರ್ವಿತಚರ್ವಣವೆಂದರೆ ಇಂಗ್ಲಿಷನಲ್ಲೇ ಅದನ್ನು ಹೇಳಬೇಕು – ಹೈಸ್ಕೂಲ್ ಬಾಲಕರಿಗೂ ಗೊತ್ತಾಗುತ್ತದೆ. ನೆಹರೂನಿಂದ ಜಗಜ್ಜನಿತವಾದ Unity in Diversityಯನ್ನು ರಾಮಾನಜನ್‌ರಿಗೆ ಮೊದಲ ಮಾತಿನ ವಿಷಯವಾಗಿ ಕೊಟ್ಟಿದ್ದರು. ಚಿಕಾಗೋನಿಂದ ಬರುವಾಗ ವಿಮಾನದಲ್ಲಿ ರಾಮಾನುಜನ್ ನನ್ನ ಪಕ್ಕವೇ ಕೂತು ಆತಂಕದಲ್ಲಿ ನನ್ನ ಜೊತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದರು. ಯಾವ ವಿಷಯವಾದರೂ ಸರಿಯೆ -ತನ್ನ ನಿಲುವು ನಿತ್ಯದ ಅನುಭವಕ್ಕೆ ಹತ್ತಿರವಾಗುವಂತೆ, ಆಮೂರ್ತಕ್ಕೂ ಮೂರ್ತವಾದ್ದಕ್ಕೂ ಸರಿದೂಗುವಂತೆ ಚಿಂತಿಸುವುದು, ಮಾನವಶಾಸ್ತ್ರಿಯಾಗಿ ಯೋಚಿಸುವುದರ ಜೊತೆ ಜೊತೆಯಲ್ಲೇ ಕವಿಯಾಗಿಯೂ ಕಾಣುವುದು ರಾಮಾನುಜನ್‌ರ ವಿಶೇಷ. ತಾತ್ವಿಕ ಚಿಂತನೆ ಹೀಗೆ ಅವರಲ್ಲಿ ಅನುಭವದ ಮಂಥನವಾಗಿಬಿಡುತ್ತದೆ. ಇಡೀ ಕಾನ್‌ಫರೆನ್ಸಿನಲ್ಲಿ ನಾನು ಕೇಳಿಸಿಕೊಂಡ ಅತ್ಯಮೂಲ್ಯ ವಿಚಾರಗಳು ರಾಮಾನುಜನ್ನರವು. ಭಾರತದಲ್ಲಿ ಏಕತೆಗಾಗಿ ಪ್ರಾಣ ಕೊಟ್ಟವರೂ ಇದ್ದಾರೆ, ಅನೇಕತೆಗಾಗಿ ಪ್ರಾಣ ಕೊಟ್ಟವರೂ ಇದ್ದಾರೆ. ಹೇಳುವಷ್ಟು, ಹೇಳುವಂಥ ಏಕತೆಯೂ ಭಾರತದಲ್ಲಿ ಇಲ್ಲ; ಹಾಗೆಯೇ ಕಾಣುವಷ್ಟು ಅನೇಕತೆಯೂ ಇಲ್ಲ. ಎಷ್ಟೊಂದು ಭಾಷೆಗಳಿವೆ ನಿಜ – ಆದರೆ ಭಾರತದ ಮುಖ್ಯ ಭಾಷೆಗಳನ್ನು ಆಡಲಾರದವರು ಎಷ್ಟು ಜನರಿದ್ದಾರು? ಭಾರತೀಯತೆಯ ಸಾರವನ್ನು ಅದರ ಬಹುರೂಪ ಕೆಡದಂತೆ ರಾಮಾನುಜನ್ ಸೊಗಸಾದ ಪದ್ಯಗಳನ್ನು ಓದಿ ಅನುಭವಕ್ಕೆ ತಂದರು. ಸಂಸ್ಕೃತ, ತಮಿಳು, ಕನ್ನಡ, ವೇದ ಕಾಲದಿಂದ ಹಿಡಿದು ನಿತ್ಯನೂತನವಾದ ಜಾನಪದ-ಎಲ್ಲೆಲ್ಲೂ ಓಡಾಡುತ್ತ ಇಗೋ ಏಕತೆ ಹೇಳುತ್ತಿದ್ದಾರೆ ಎನ್ನಿಸುವಾಗ ಅನೇಕತೆ ಹೇಳಿದರು. ಅನೇಕತೆ ಮೇಲೆ ಒತ್ತುಕೊಡುತ್ತಿದ್ದಾರೆ ಎನ್ನಿಸುವಾಗ ಏಕಸೂತ್ರವನ್ನು ತೋರಿಸಿದರು.

ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಲೋಕ ರಂಜನ್ ಮಾತ್ರ ಚರ್ಚೆಯನ್ನು ಎಲ್ಲರ ಬಾಯಿ ತೆರೆಸುವಂಥ ಬೀದಿಗೆ  ತಂದು ನಿಲ್ಲಿಸಿದರು. ಭಾರತೀಯರಾಗಿ ಇಂಗ್ಲಿಷಲ್ಲಿ ಬರೆಯುವುದು ಸಹಜವೆ?ಸರಿಯೇ? ರಾಮಾನುಜನ್ ಯಾವ ಓದುಗರಿಗಾಗಿ ಇಂಗ್ಲಿಷಲ್ಲಿ ಬರೆಯುತ್ತಾರೆ? ಕನ್ನಡದಲ್ಲಿ ಬರೆಯುವಾಗ ಯಾವ ಓದುಗ ಇವರ ದೃಷ್ಟಿಯಲ್ಲಿದ್ದಾನೆ? ಹೀಗೆ. ಮುಂದೆ ಚರ್ಚೆ ಹೇಗೆ ನಡೆದಿರಬಹುದೆಂದು ಹೇಳಬೇಕಿಲ್ಲ. ಮೈಸೂರಿನ ಧ್ವನ್ಯಾಲೋಕ ಇಂಗ್ಲಿಷ್ ಇಲಾಖೆ ಇವುಗಳಲ್ಲಿ ಮೈಲುಗಳ ಉದ್ದದ ಚರ್ಚೆ ಈಗಾಗಲೇ ನಡೆದುಬಿಟ್ಟಿದೆಯಾದ್ದರಿಂದ ಆ ಬಗ್ಗೆ ಬರೆಯದಿರುವುದೇ ಮೇಲು. ಭಾರತೀಯ ಲೇಖಕರ ಪಿತಾಮಹನಂತಿದ್ದೂ ಬೊಹಿಮಿಯನ್ ಯೌವನದ ಉಡುಪು ತೊಡುವ ಮುಲ್ಕ್‌ರಾಜ್ ಆನಂದ್ ಈ ಚರ್ಚೆಯಲ್ಲಿ ಬಾಯಿ ಹಾಕಿದರೆಂದು ಹೇಳಿದರೆಂದು ಹೇಳಿದರೆ ಸಾಕು – ಎಲ್ಲ ಹೇಳಿದಂತಾಗುತ್ತದೆ. ದೇಶೀಯ ಭಾಷೆಯಲ್ಲಿ ಬರೆಯುವುದಕ್ಕೂ ಇಂಗ್ಲೀಷ್‌ನಲ್ಲಿ ಬರೆಯುವುದಕ್ಕೂ ವ್ಯತ್ಯಾಸವಿಲ್ಲೆಂದೂ, ತನ್ನದು ಪಂಜಾಬಿ ಇಂಗ್ಲಿಷ್ ಆದ್ದರಿಂದ ಇಂಗ್ಲಿಷ್ ಇಂಗ್ಲಿಷ್ ಅಲ್ಲವೆಂದು ತನ್ನ ಪ್ರಗತಿಶೀಲತ್ವವನ್ನು ಆಳುವವರ ಭಾಷೆಯಲ್ಲಿ ಸಾಧಿಸಿಕೊಂಡ ಮುಲ್ಕ್‌ರಾಜ್ ಆನಂದ್‌ರ ವಾದ – ಅವರು ಗಾಂಧೀಜಿಯನ್ನು ಕಂಡು ಮಾತಾಡಿದ್ದನ್ನು ಒಳಗೊಂಡಂತೆ- ಸಭೆಯಲ್ಲಿ ಮಂಡಿತವಾಯಿತು. ನಮ್ಮೆಲ್ಲರ ಮಾತಿನ ಹಿಂದೆ, ವರ್ತನೆಯ ಹಿಂದೆ ವಸಾಹತುಶಾಯಿಯ ಪರಿಣಾಮ ಅಪ್ರತ್ಯಕ್ಷವಾಗಿಯಾದರೂ ಇದ್ದೇ ಇರುತ್ತದೆ. ವಸಾಹತು ವಿರೋಥಿಯಾದ ಐರೋಪ್ಯ ಬೊಹಿಮಿಯನ್ ಪ್ರಪಂಚದಲ್ಲಿ ಬೆಳೆದು, ಭಾರತೀಯ ಲೇಖಕರ ವಕ್ತರನಾಗಲು ಸತತ ಪ್ರಯತ್ನಿಸುತ್ತ ಪಂಜಾಬಿ ರುಚಿಯ ಇಂಗ್ಲಿಷನ್ನು ಕೃತಕ ದಂತಪಂಕ್ತಿಯ ಸದ್ದುಗಳ ಜೊತೆ ಉರುಳಿಸುತ್ತ ಓಡಾಡುವ ಮುಲ್ಕ್‌ರಾಜ್ ಆನಂದ್ ಚಿರಯುವಕ- ನೆಹರೂ ರೊಮ್ಯಾಂಟಿಕ್ ಯುಗದ ಚಿರಯುವಕ, ಹೃದಯವಂತ, ಎಲ್ಲರೊಡನೆ ಸಹಜ ಪ್ರೀತಿಯಲ್ಲಿ ಬೆರೆಯುವಾತ. ನನ್ನ ಕೃತಿಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿ ಪ್ರಕಟಿಸುವಂತೆ  ಪ್ರಕಾಶಕನೊಬ್ಬನಿಗೆ ಹೇಳಿ, ನನ್ನನ್ನು ಅವನಿಗೆ ಪರಿಚಯಿಸಿದ ಮುಲ್ಕ್‌ರಾಜ್ ಆನಂದ್‌ರನ್ನು ಕೊಂಚಹಾಸ್ಯದಿಂದ ನೋಡದೇ ಗೌರವಿಸುವಂತಿಲ್ಲ. ವಸಾಹತುಶಾಹಿಯನ್ನು ಐರೋಪ್ಯ ದೃಷ್ಟಿಯ ಮಾರ್ಕ್ಸ್‌ವಾದಿಯೊಬ್ಬ ಗೆಲ್ಲುವ ಕ್ರಮದ ಪ್ರತೀಕವಾಗಿ ಮುಲ್ಕ್‌ರಾಜ್ ಆನಂದ್ ಇದ್ದಾರೆ. ಈಗ ಆತ ಇತಿಹಾಸ. ನಮ್ಮ ನಿಮ್ಮ ಹಿಂದಿನ ಚರಿತ್ರೆ. ಒಮ್ಮೆ ಪ್ರತಿಭಾವಂತನಾಗಿದ್ದು, ನಂತರ ಮೂಲೆ ಸೇರಿದ ಇಂಗ್ಲಿಷ್ ವಿಮರ್ಶಕ ಎಡ್ಜೆಲ್ ರಿಕ್‌ವರ್ಡ್‌ಗೆ ಇಂಗ್ಲೆಂಡಿನ ಮುವತ್ತರ ದಶಕದ ಪ್ರಗತಿಶೀಲ ಆಂದೋಲನದ ಏಕಮಾತ್ರ ಫಲ – ಆನಂದ್.

ನಮ್ಮ ಸೆಮಿನಾರ್ ನಡೆಯುತ್ತಿದ್ದ ಚೌಕದಿಂದ ಲಂಚ್‌ಗೆಂದು ಹೊರಬಿದ್ದಾಗ ಪ್ರದರ್ಶನವೊಂದು ನಡೆಯುತ್ತಿತ್ತು. ಪೊಲೀಸ್ ವ್ಯಾನ್‌ಗಳು ದುರುಗುಡುತ್ತ ನಿಂತಿದ್ದವು. ಹುಡುಗಿಯೊಬ್ಬಳು ಕ್ರೋಧದಲ್ಲಿ ಮುಖದ ಮೇಲೆ ಕೂದಲು ಚೆಲ್ಲಿಕೊಂಡು ಕೈ ಬೀಸುತ್ತ ಮಾತಾಡುತ್ತಿದ್ದಳು. ಹಿಪ್ಪಿಯಂತೆ ಬಟ್ಟೆತೊಟ್ಟ ಮಾರಿಯಾನಾಳನ್ನು ಇದು ಏನೆಂದು ಕೇಳಿದೆ. ಹೋದವರ್ಷ ಅದೇ ದಿನ ಅದೇ ಜಾಗದಲ್ಲಿ ಯುವಕನಬ್ಬ ಸತ್ತಿದ್ದ -ಎರಡು ಕಡೆಯಿಂದಲೂ ಅಗ್ನಿಶಾಮಕ ದಳದ ನೀರಿನ ಜೆಟ್‌ಗಳನ್ನು ಬಿಟ್ಟು ಅವನು ಓಡಾಡದಂತೆ ಕೆಡವಿದ್ದರಿಂದ ಕಾರೊಂದು ಅವನ ಮೇಲೆ ಹರಿದಿತ್ತು. ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣವನ್ನು ಅಮೆರಿಕನ್ ಮಿಲಿಟರಿಗಾಗಿ ದೊಡ್ಡ ಮಾಡಲು ಹೊರಟ್ಟಿದ್ದನ್ನು ಈ ಯುವಕ ತನ್ನ ಸಂಗಡಿಗರ ಜೊತೆ ಪ್ರತಿಭಟಿಸುತ್ತಿದ್ದಾಗ ನಡೆದದ್ದು ಈ ಘಟನೆ. ಶಾಂತಿಪ್ರಿಯರು, ಹಸಿರು ಪ್ರಿಯರು ಜರ್ಮನಿಯಲ್ಲಿ ಪರಿಸರ ನೈರ್ಮಲ್ಯಕ್ಕಾಗಿ ಹೋರಾಡುವ ‘ಗ್ರೀನ್ ಪಕ್ಷ’ ಒಂದಿದೆ – ಈ ದೇಶದ ಕ್ರಾಂತಿಕಾರರು. ಚರಿತ್ರೆಯ ಕ್ರೌರ್ಯದ ಮಡುವಾದ ಜರ್ಮನಿಯಲ್ಲಿ ಮೃದುವಾದ ಹೊಸ ಚಿಗುರೆಂದರೆ ಈ ಜನರೇ ಎಂದು ನನಗೆ ಅನ್ನಿಸುತ್ತದೆ. ಎಲ್ಲ ವ್ಯವಸ್ಥೆಯ ಪಾತಾಳ ಕಾಣಬಲ್ಲ ಶ್ರಮಣರು ಇವರು.

ನಾವು ಊಟ ಮಾಡಲು ಹೋದದ್ದು ಗಮ್ಮೆಂದು ಮಸಾಲೆ ವಾಸನೆ  ಹೊಡೆಯುತ್ತಿದ್ದ ಭಾರತೀಯ ಹೋಟೆಲಿಗೆ, ಇಕ್ಕಟ್ಟಾದ ಹೋಟೆಲು. ನಾವು ಹಲವು ಜನ. ಗೊಂದಲವೋ ಗೊಂದಲ. ಎಲ್ಲ ಸುಸೂತ್ರವಾದ ಜರ್ಮನಿಯಲ್ಲಿ ಜರ್ಮನ್ನರ ಜೊತೆ ಈ ಭಾರತೀಯ ಗೊಂದಲದಲ್ಲಿ ಭಾಗಿಯಾಗುವುದು  ನನಗೊಂದು ಹಿತವಾದ ಸುಖವನ್ನು ತಂದಿತು. ಮಾರಿಯಾನಾ ಖುಷಿಯಾಗಿ ನಮ್ಮಂತೆ ಕೈಯಲ್ಲೇ ಊಟ ಮಾಡಿದಳು. ಊಟದಲ್ಲಿ ಅವರಿಗೆ ಅದಿದ್ದರೆ ಇವರಿಗೆ ಇದಿಲ್ಲ. ಹೊಟೇಲ್ ನಡೆಸುವಾತ ತನ್ನ ದೈನ್ಯದ ನಗು ಮುಖವನ್ನು ಹಲವರಿಗೆ ಉಣ್ಣಿಸಿ ತೃಪ್ತಿಪಡಿಸಿದ.

* * *

ಆಕೆಯ ಬಗ್ಗೆ ಬರೆಯಬೇಕು. ಭಾರತದಲ್ಲಿ ಹೊಸ ಮಾತನ್ನು ಆಡಿದ ಹೆಣ್ಣು. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಅದನ್ನು ಧಿಕ್ಕರಿಸಿ, ಮೀಡಿಯಾಗಳಿಗೆ ಸುದ್ದಿಯಾದ ಹೆಣ್ಣು. ಹುಡುಗಿಯಾಗಿದ್ದಾಗ ಎಷ್ಟು ಚಿಲುಮೆಯಾಗಿದ್ದೀರಬೇಕು ಎಂಬುದನ್ನು ಅವಳ ಕಣ್ಣುಗಳು ಈಗಲೂ ಉಳಿಸಿಕೊಂಡಿದೆ. ಕಣ್ಣುಗಳು ಮಾತ್ರವಲ್ಲ, ಅವಳ ಧ್ವನಿ ಕೂಡ. ಮುದ್ದೆನ್ನಿಸುವಂತೆ ಈಗಲೂ ಮಾತಾಡುತ್ತಾಳೆ ತಾನು ಜವಾಬ್ದಾರಿಯಲ್ಲದ, ಉಳಿದವರ ಅಕ್ಕರೆಯಿಂದಾಗಿ ಏನನ್ನು ಬೇಕಾದರೂ ಹೇಳಬಲ್ಲ ಸ್ವಾತಂತ್ರ್ಯ ಪಡೆದ ಷೋಡಷಿ ಎನ್ನುವಂತೆ, ನೋಡಲು ಈಗ ತೋರವಾದರೂ ಹಾವಭಾವದಲ್ಲಿ ಮಾತ್ರ ಅತಿ ಕೋಮಲೆ.

ಫ್ರಾಂಕ್‌ಫರ‍್ಟಿನ ಸುಂದರವಾದ ಬಿಸಲಲ್ಲಿ ಕೆಂಪು ಓವರ್‌ಕೋಟ್ ಹಾಕಿಕೊಂಡು ಏದುಸಿರು ಬಿಡುತ್ತ ಮೆಟ್ಟಲು ಹತ್ತಿಬಂದು ನನ್ನ ಜೊತೆ ಸಭೆಯಲ್ಲಿ ಕೂತವಳು ಸೆಖೆಯೆಂದು ಚಡಪಡಿಸತೊಡಗಿದಳು. ಫೋಟೋ ಹಿಡಿಯುವವರ ತಂಡ ಅವಳ ಎದುರಿತ್ತು. ಎಲ್ಲರೂ ಹಗುರಾದ ವೇಷಭೂಷಣದಲ್ಲಿದ್ದಾಗ ತಾನು ಬಟ್ಟೆಯ ಕುಕ್ಕೆಯಂತೆ ಕಾಣಬಾರದೆಂದು ಆಕೆಗೆ ಅನ್ನಿಸಿರಬೇಕು. ನಾನು ಅವಳ ಕೋಟನ್ನು ಹಿಂದಿನಿಂದ ಬಿಚ್ಚಿದೆ. ಷೋಡಷಿಯಂತೆ ಮುದ್ದಾಗಿ ಗೊಣಗುತ್ತ ಕೂತಳು. ಯಾರಿಗೆ ಬೇಕು ಈ ಫೋಟೋ ತೆಗೆಸಿಕೊಳ್ಳುವುದು? ಬೆಳಿಗ್ಗೆ ಗೊತ್ತಾ? – ನನ್ನ ಪ್ರಕಾಶಕ ಬಂದು ಮುಖಕ್ಕೆ ಬಣ್ಣ ಹಚ್ಚಿಕೊ ಎಂದ. ಎಷ್ಟು ರೂಡ್ ಅವನು! ನಿನ್ನ ಮುಖ ಫೋಟೋದಲ್ಲಿ ಹೀಗೆ ಕಂಡರೆ ಚೆನ್ನಾಗಿರಲ್ಲ ಎಂದ. ಪೋರ್ಕ್ ಪೈಗೆ ಟೊಮಾಟೋ ಕಿಚಪ್ ಸುರಿದಂತೆ ನಾನೇನು ಮುಖಕ್ಕೆ ಬಣ್ಣ ಹಚ್ಚಿಕೊಳ್ಳಬೇಕೆ? ಎಷ್ಟು ರೂಡ್ ಅವನು! ಎಷ್ಟು ಕ್ರೂಡ್ ಅವನು! ಎಷ್ಟು ಕ್ರೂಡ್ ಅವನ ರುಚಿಗಳು ನನಗೆ ಹಿಂದಕ್ಕೆ ಹೋಗಬೇಕನ್ನಿಸುತ್ತದೆ.

ಈ ಮಾತುಗಳ ಹಿಂದೆ ಅವಳ ಮುದಿ ಪ್ರಕಾಶಕನ ಒಟ್ಟು ವರ್ತನೆಯ ಬಗ್ಗೆಯೇ ಅವಳಲ್ಲಿ ಆತಂಕವಿದ್ದುದನ್ನು ಕಂಡೆ. ಅವಳ ರೂಮಿಗೆ ಹೊತ್ತಲ್ಲದ ಹೊತ್ತಲ್ಲಿ ಅವನು ಹೋದನಂತೆ, ತಬ್ಬಿ ಹಿಸುಕಿದನಂತೆ. ಎಲ್ಲ ಲೇಖಕರ ಕಿವಿಗೂ ಅದು ಬಿದ್ದಿತ್ತು. ಕೆಂಪು ರಸಪುರಿ ಮಾವಿನಹಣ್ಣಿನ ಮುಖದ ಅವಳ ಪ್ರಕಾಶಕ ತನ್ನ ಇಳಿವಯಸ್ಸನ್ನು ಡ್ಯಾಂಡಿಯ ಥರಹದ ಬಣ್ಣ ಬಣ್ಣದ ನಾಜೂಕಾದ ಬಟ್ಟೆಗಳಲ್ಲಿ ಅಲಂಕರಿಸಿಕೊಂಡು ಅವಳನ್ನೆ ದಿಟ್ಟಿಸುತ್ತಾ ಕೂತಿದ್ದ. ನನಗನ್ನಿಸಿತು – ಅವಳ ಆತ್ಮಚರಿತ್ರೆಯನ್ನು ಈ ಮುದಿ ಹುಡುಗ ಅಕ್ಷರಶಃ ನಂಬಿಬಿಟ್ಟಿದ್ದಾನೆ. ಕಾಮಾತುರದ ಹೆಣ್ಣೆಂದು ಅವಳನ್ನು ತಿಳಿದಿದ್ದಾನೆ. ಅವಳ ಹೆಣ್ಣಿನ ಆಸೆಗಳು, ದುಃಖಗಳು, ಸಿಟ್ಟುಗಳು ಎಲ್ಲವೂ ಅವನಿಗೆ ಅಪ್ಯಾಯಮಾನವಾಗಿವೆ. ಅವಳ ಆತ್ಮಕಥೆಯ ಮುಂದಿನ ಚಾಪ್ಪರಿನ ನಾಯಕನಾಗಲು ಅವನು ಬಯಸಿದ್ದಾನೆ. ಅದಕ್ಕಾಗಿ ತಕ್ಕ ವೇಷ ಭೂಷಣ ತೊಟ್ಟು ಬಂದಿದ್ದಾನೆ.

ಈಕೆ ಎಲ್ಲ ಸಂದರ್ಶಕರಿಗೂ ಸಾರಿ ಸಾರಿ ಹೇಳುತ್ತಿದ್ದಳು: ‘ನಾನು ನನ್ನ ಗಂಡಮಕ್ಕಳನ್ನು ಪ್ರೀತಿಸುತ್ತೇನೆ, ನನ್ನ ಗಂಡನನ್ನು ಪ್ರೀತಿಸುತ್ತೇನೆ. ನನ್ನ ಸೊಸೆ ರಾಜಕೂಮಾರಿ, ಇವತ್ತು ಬೆಳಿಗ್ಗೆ ನಾನು ದುರ್ಗಿಯನ್ನು ಸ್ತೋತ್ರ ಮಾಡಿದೆ. ನನ್ನದು ಸುಂದರವಾದ ದೇಶ. ಪ್ರೀತಿ ತುಂಬಿದ ಮನೆಯಲ್ಲಿ ನಾನು ರಕ್ಷಿತೆ.’

ಎಲ್ಲ ಲೇಖಕರೂ ಅನುಭವವನ್ನು ಪಡೆಯುವುದು ಖಾಸಗಿಯಾಗಿ. ಆದರೆ ಬರೆಯುವುದೆಂದರೆ ಈ ಖಾಸಗಿತನವನ್ನು ಕಳೆದುಕೊಳ್ಳುವುದು. ಓದುಗರ ಕುತೂಹಲದ ಸ್ವತ್ತಾಗುವುದು. ಓರಲ್ ಸಂಪ್ರದಾಯದಲ್ಲಿ ಲೇಖಕ ಬಾಯಿಂದ ಬಾಯಿಗೆ ದಾಟುವ ಅನಾಮಧೇಯನಾದರೆ, ಅಚ್ಚಾಗುವ ಪುಸ್ತಕದಲ್ಲಿ ಅವನು ಬರೆದದ್ದರ ಮಾಲೀಕ -ದುಡ್ಡಿಗೆ ದೊರೆಯುವುದನ್ನು ಕೊಡುವಾತ, ಇನ್ನೂ ಮುಂದೆ, ಸಮೂಹ-ಮಾಧ್ಯಮದಲ್ಲಿ ಲೇಖಕ ಬರೆಯುವುದೆಂದರೆ ಸಂತೆಯಲ್ಲಿ ಸೀರೆ ಬಿಚ್ಚಿದಂತೆ. ಖಂಡಿತ ಹೆಣ್ಣಿನ ಬಗ್ಗೆ ಇದು ಗಂಡಸಿಗಿಂತ ಹೆಚ್ಚು ನಿಜ. ಇಲ್ಲಿ ಎಲ್ಲವನ್ನೂ ಬೊಬ್ಬೆ ಮಾಡುವ ಮಾಧ್ಯಮಗಳಲ್ಲಿ ಏನೂ ಬಚ್ಚಿಟ್ಟುಕೊಳ್ಳುವಂತಿಲ್ಲ. ಮುಚ್ಚಿ ಬೀಜದಂತೆ ಮೊಳಕೆಯೊಡೆಯುವಂತಿಲ್ಲ. ತನ್ನನ್ನು ಕಾಣುವ ಕಣ್ಣಗಳಂತೆಯೇ ತಾನಾಗಿಬಿಡಬೇಕು….

ಆಕೆಗೊಬ್ಬ ಮು‌ದಿ ಅಜ್ಜಿ ದೃಷ್ಟಿ ಸುಳಿದು ಹಾಕಬೇಕಿತ್ತು.

ಅನುಭವಕ್ಕೆ ಸದಾ ತೆರೆದಿರುವುದು ಲೇಖಕನಿಗೆ ಅಗತ್ಯವೆಂದು ನಾವೆಲ್ಲ ತಿಳಿದಿದ್ದೇವೆ. ಈ ಸ್ಥಿತಿಯ ಪಾತಾಳ ಎಷ್ಟು ದಿಗಿಲಿನದು ಎಂಬುದನ್ನು ನಾವು ನಿರ್ಲಕ್ಷಿಸುತ್ತೇವೆ. ಸದಾ ಚಂಚಲವಾಗಿರದೆ ಉದ್ದೀಪನದ ಸಾಧ್ಯತೆಯಲ್ಲಿ ಮನಸ್ಸು ಇರಲಾರದು. ಅವಾಹಿತನಾಗಲು ಬರಿದಾಗಿರಬೇಕು. ತುಂಬುವುದಕ್ಕಾಗಿ ಠೊಳ್ಳಾಗಿರಬೇಕು. ಯೌವನದಲ್ಲಿ ಮುದಿತನದ ನೀರಸತೆ ಕಾಣುವಂತಿರಬೇಕು. ಮುದಿನತದಲ್ಲಿ ಯೌವನದ ಆಕರ್ಷಣೆಗಳು ತನ್ಮಯತೆಗಳು ತಿಳಿಯಬೇಕು. ಲೇಖಕ ಸದಾ ಪರತಂತ್ರ, ಪರಾವಲಂಬಿ , ಪರವೇ ಅವನ ಸ್ವಂತ. ದೇವರಿಗೆ ಬಿಟ್ಟ ಬಸವಿಯಂತೆ ಅವನು. ಏನಾದರೂ ತನ್ನನ್ನು ಹೊಕ್ಕು ಹೊರಡುವಂತೆ ತಾನಿರಲೆಂದು ಅವನು ಎಲ್ಲ ಬಗೆಯ ಸಾಮಾಜಿಕ ಮರ್ಯಾದೆಗಳನ್ನು ತ್ಯಜಿಸಲು ಇಚ್ಛಿಸುತ್ತಾನೆ. ಅವರು ತೊಡುವ ಉಡುಪುಗಳೂ ಅವನ ಸಾಮಾಜಿಕ ಅನ್ಯತೆಯನ್ನು ಸಾರುವಂತಿರುತ್ತದೆ. ಉದ್ದೇಶಪೂರ್ವಕವಾಗಿ ಅವನು ಎಕ್‌ಸೆಂಟ್ರಿಕ್ ಅಷ್ಟಾವಕ್ರನಾಗುತ್ತಾನೆ. ಆದರೆ ಎಷ್ಟು ದಿನ ಹೀಗೆ ಪಡುತ್ತಾ, ತುಂಬತ್ತಾ, ಹಡೆಯುತ್ತಾ ಇದ್ದಾನು ಅವನು? ಅವನೂ ಒಬ್ಬ ಮನುಷ್ಯ ಎಷ್ಟು ಕ್ವಚಿತ್ತಾಗಲು ಪ್ರಯತ್ನಿಸಿದರೂ ಪಡಲಾರದೆ ತುಂಬಲಾರದೆ ಹಡೆಯಲಾರದೆ ಇರುವ ಹಗಲು ರಾತ್ರಿಗಳಿರುತ್ತವೆ. ಅವನೂ ಮನೆ ಕಟ್ಟಬೇಕು. ಮೊಮ್ಮಕ್ಕಳಿಗೆ ಆಟದ ಸಾಮಾನುಕೊಳ್ಳಬೇಕು. ಪದ್ಮಶ್ರೀ ಸಿಕ್ಕರೆ ಬೇಕಾಬಿಟ್ಟಿ ಬದುಕುವ ಗಂಡನ ಜೀವನಕ್ರಮದಲ್ಲಿ ಹೆಂಡತಿಗೆ ನಂಬಿಕೆ ಹುಟ್ಟೀತು. ಅವರೆಗಿನ ಗೋಳುಗಳು ಸಹ್ಯವೆನ್ನಿಸಿಯಾವು. ಈ ಪ್ರಾಪಂಚಿಕ ಯಶಸ್ಸುಗಳು ಯಃಕಶ್ಚಿತ ಎಂದು ಒಂದು ಕಣ್ಣಿಂದ ನೋಡುತ್ತ, ಇನ್ನೊಂದು ಕಣ್ಣಿಂದ ಅವುಗಳು ತರುವ ನೆಮ್ಮದಿಯನ್ನೂ ಕಾಣಬೇಕು. ಅನುಭವಕ್ಕಾಗಿ ಹಾತೊರೆಯುತ್ತ, ತೆರೆದುಕೊಂಡು ಚಂಚಲವಾಗಿರುವುದೇ ವಯೋಧರ್ಮಕ್ಕೆ ಸಹಜವಾಗಿರುವ ಅವನಿಗಿಂತ ಚಿಕ್ಕವರಾದ ಲೇಖಕರ ಕಣ್ಣಲ್ಲಿ ಅಥವಾ ಆ ವಯಸ್ಸಿನಲ್ಲಿದ್ದಾಗಿನ ತನ್ನ ನೆನಪಿನಲ್ಲಿ, ಅವನು ಕರುಣಾಜನಕವಾದ ಕಳಪೆಯಾಗಬೇಕು.

ಬರವಣಿಗೆಯಲ್ಲಿ ಪ್ರಬುದ್ಧವಾಗಲೆಂದೇ ಸ್ವಂತ ಜೀವನದಲ್ಲಿ ಅಪಕ್ವವಾಗಿ ಉಳಿದಿರಬೇಕಾದ ಸ್ಥಿತಿ ಲೇಖಕನದು. ಸದಾ ನಾರುವ ಹುಣ್ಣಿನ ಲೇಖಕನ ಹತ್ತಿರ ಮಾತ್ರ ಮಂತ್ರಶಕ್ತಿಯ ಬಿಲ್ಲಿರುವುದು ಎಂದು ಗ್ರೀಕ್ ಪುರಾಣವೊಂದು ಹೇಳುತ್ತದೆ. ಹುಣ್ಣು ನಾರುವುದೆಂದು ಇವನು ಊರ ಹೊರಗೆ ವಾಸಿಸುತ್ತಾನೆ. ಆದರೆ ಊರಿಗೆ ಆಪತ್ತು ಒದಗಿ ಬಂದರೆ ಈ ನಾರುವ ಹುಣ್ಣಿನ ಅನ್ಯನೇ ಊರ ಜನರನ್ನು ಕಾಪಾಡಿಯಾನು ಯಾಕೆಂದರೆ ಅವನ ಬಳಿ ಮಾತ್ರ ಮಂತ್ರಶಕ್ತಿಯ ಬಿಲ್ಲಿರುವುದು. ಏಕಕಾಲದಲ್ಲಿ ವೈರಾಗ್ಯದ ಮುದುಕನೂ ಅನುರಾಗದ ಯುವಕನೂ ಆಗಿರಬೇಕಾದ ಲೇಖಕ ಮಾತ್ರ ಎಂಥ ಬೆಲೆಕೊಟ್ಟು? ಈ ಸ್ಥಿತಿಯನ್ನು ಉಳಿಸಿಕೊಳ್ಳಬಲ್ಲ! ಅದರಲ್ಲಿ ಟಾಲ್‌ಸ್ಟಾಯ್‌ನಂಥವರ ದುರಂತವೂ ಅಡಗಿರಬಹುದು; ಆಸ್ಕರ್ ವೈಲ್ಡ್‌ನಂಥವರ ಆಕರ್ಷಕ ಬೇಜವಾಬದ್ದಾರಿಯೂ ಇದ್ದೀತು.

* * *

ಬರವಣಿಗೆಯ ಹೊತ್ತಿನಲ್ಲಿ ಅಪ್ರಸ್ತುತವೆನ್ನಿಸುವುದಲ್ಲವೂ ಸಮಿನಾರುಗಳಲ್ಲಿ ಭರ್ಜರಿ ಚರ್ಚೆಯ ವಿಷಯಗಳಾಗಿಬಿಡುತ್ತವೆ. ಭಾರತೀಯ ಸಾಹಿತ್ಯದ ಸ್ವೀಕಾರ ಚರ್ಚೆಯ ವಿಷಯವಾಗಿತ್ತು. ನಾನೂ ಬಾಯಿ ಹಾಕಿದೆ: ನಿಮಗೆ-ಐರೋಪ್ಯರಿಗೆ- ನಾವು ಬರೆಯುವುದು ಸಾಹಿತ್ಯ ಕೃತಿಗಳಾಗಬೇಕಿಲ್ಲ ನಮ್ಮನ್ನು ನೀವು ಓದುವುದು ಆಂಥ್ರೋಪಾಲಜಿಯ ಆಸಕ್ತಿಯಿಂದ ಜಾತಿಪದ್ಧತಿ, ಮದುವೆ, ಮುಂಜಿ, ಸಗಣಿಯನ್ನು ಸುಡುವ ಗ್ರಾಮೀಣ ವ್ಯವಸ್ಥೆ ಇತ್ಯಾದಿ ಕುತೂಹಲಗಳನ್ನು ತಣಿಸುವ ಕೃತಿಗಳೆಂದು ಭಾರತೀಯ ಸಾಹಿತ್ಯವನ್ನು ನೀವು ಓದುತ್ತೀರಿ. ನಾವು ಐರೋಪ್ಯ ಸಾಹಿತ್ಯವನ್ನು ಈ ಬಗೆಯಲ್ಲೇ ಓದಬಹುದು. ಗಂಡು ಹೆಣ್ಣುಗಳ ಲೈಂಗಿಕ ಸಂಬಂಧ ಯುರೋಪಿನ ಸಮಾಜದಲ್ಲಿ ಹೇಗಿರುತ್ತದೆ ಎಂಬ ಕುತೂಹಲಕ್ಕಾಗಿ ಸಾಲ್ ಬೆಲ್ಲೋನನ್ನೊ ಗುಂಟರ್ ಗ್ರಾಸ್‌ನನ್ನೊ ಓದಿದರೆ ಹೇಗಿರುತ್ತದೆ ನೋಡಿ. ಆದರೆ ಭಾರತೀಯ ವಸಾಹತುಶಾಹಿಯ ಅನುಭವದಿಂದಾಗಿ ಯುರೋಪಿನ ದ್ವಿತೀಯ ದರ್ಜೆಯ ಲೇಖಕನನ್ನೂ ಒಬ್ಬ ದಾರ್ಶನಿಕ ಎನ್ನುವಂತೆ ಓದುತ್ತಾರೆ.

ಅದೇ ಆಧ್ಯಾತ್ಮಿಕ ಪ್ರಪಂಚದಲ್ಲಿ ನಮ್ಮ ನಡುವಿನ ಕೊಡುಕೊಳ್ಳುವಿಕೆ ಗಮನಿಸಿ. ಭಾರತದ ಯಾವ ಕಪಟ ಸನ್ಯಾಸಿಯಾಗಲಿ ನಿಮ್ಮಲ್ಲಿ ಪುರಸ್ಕೃತವಾಗುತ್ತಾನೆ. ನೂರಾರು ರೋಲ್ಸ್‌ರಾಯ್ಸ್‌ಗಳ ಮಾಲೀಕನಾಗಿ ವಿಜೃಂಭಿಸುತ್ತಾನೆ. ಬೌದ್ಧಿಕ ವಿಷಯಗಳಲ್ಲಿ ನಾವು ಎಷ್ಟು ಅಪಕ್ವರೋ, ಆಧ್ಯಾತ್ಮಿಕ ವಿಷಯದಲ್ಲಿ ನೀವೂ ಅಷ್ಟೇ ಅಪಕ್ವರಂತೆ ವರ್ತಿಸುತ್ತೀರಿ.

ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ಕೆಲಸ ಮಾಡಿದ್ದ ಜರ್ಮನ್ ಹೆಂಗಸೊಬ್ಬಳು ಸುಂದರವಾಗಿ ಮುಗುಳ್ನಗುತ್ತ ನನ್ನ ಮಾತುಗಳನ್ನು ಮೆಚ್ಚಿದಳು. ತನ್ನಂಥವರ ನಿಸ್ಸಹಾಯಕತೆ ಹೇಳಿಕೊಂಡಳು…

* * *

ಪುಸ್ತಕದ ಉತ್ಸವ ಪ್ರಾರಂಭವಾಯಿತು. ಈ ಹಿಂದೆ ಲ್ಯಾಟಿನ್ ಅಮೆರಿಕಾ, ಮತ್ತೆ ಆಫ್ರಿಕಾ ಗಮನೀಯ ವಿಷಯವಾಗಿ ನಡೆದಿದ್ದ ಫ್ರಾಂಕ್‌ಫರ್ಟ್ನ ಪುಸ್ತಕದ ಉತ್ಸವಗಳು ಈ ಸಾಹಿತ್ಯಗಳ ಬಗ್ಗೆ ಜರ್ಮನರಲ್ಲಿ ವಿಶೇಷ ಆಸಕ್ತಿ ಕುದುರಿಸಿದ್ದವಂತೆ. ಈ ಬಾರಿ ಭಾರತ ಇಡೀ ಉತ್ಸವದ  ಕೇಂದ್ರ ವಿಷಯವಾಗಿತ್ತು. ಕೆದರಿದ ಕೂದಲು ಚೆಲ್ಲಿಕೊಂಡ ಹಣೆಯ ಮೇಲೆ ದೇವರು ಅವಸರದಲ್ಲಿ ಒದ್ದು ಹೋದಂತಿದ್ದ ಮೂರು ನಾಮಗಳ ಕೆಳಗೆ, ಕಂತಿದ ಕಣ್ಣುಗಳ ಹರಕಲು ಗಡ್ಡದ, ತನ್ನ ಪಾಡಿಗೆ ತಾನು ಓಡಾಡುವ ಯಾವನೋ ಬೈರಾಗಿಯ ಪೋಸ್ಟರುಗಳು  ಫ್ರಾಂಕ್‌ಫರ್ಟ್ನ ಗೋಡೆಗಳ ಮೇಲೆಲ್ಲ ಇದ್ದವು. ಈ ದಾಸಯ್ಯನೇನಾದರೂ ಫ್ರಾಂಕ್‌ಫರ್ಟ್ ಪಟ್ಟಣಕ್ಕೆ ನಿಜಕ್ಕೂ ಬಂದಿದ್ದಲ್ಲಿ ಬೀದಿಗಳನ್ನು ದಾಟುವುದು ಹೇಗೆಂದು ತಿಳಿಯಲಾರದೆ  ಜಾಗಟೆಯನ್ನು ಕಮಂಡಲವನ್ನೂ ಹಿಡಿದು ತನ್ನೆದುರು ಭರ್ರೆಂದು ಹುಚ್ಚು ವೇಗದಲ್ಲಿ ಹರಿದಾಡುವ ಕಾರುಗಳನ್ನು ನೋಡುತ್ತ ಕಂಗಾಲಾಗುತ್ತಿದ್ದ. ಯಾರೋ ಪೊಲೀಸರ ವಶವಾಗಿರುತ್ತಿದ್ದ. (ಅಯೋವಾಖ್ಕೆ ನಾನು ತಂದ ಈ ಪೋಸ್ಟರನ್ನು ನೋಡಿ ನನ್ನ ಮಗ ಶರತ್ ಲಿಪಿತವಾದ ತಮ್ಮ  ಪಾಡಿಗೆ ತಾನಿರುವ ಈ ದಾಸಯ್ಯನನ್ನು ಫೋಟೋದಲ್ಲಿ ಹಿಡಿದು ಹೀಗೆ ಜಗತ್ತಿಗೆ ಭಾರತದ ಸಂಕೇತವೆಂದು ಸಾರುವುದು ಭ್ರಷ್ಟತನ ಎಂದ. ವಿಚಿತ್ರವಾಗಿ ಕೂದಲು ಕತ್ತರಿಸಿಕೊಂಡು ಅಡ್ಡಾದಿಡ್ಡಿ ಬಟ್ಟೆ ತೊಟ್ಟು ತಮ್ಮ ಅನ್ಯತೆಯನ್ನು ಸ್ಥಾಪಿಸಿಕೊಳ್ಳಲು ಯತ್ನಿಸುವ ಈಗಿನ ಅಮೆರಿಕಾದ ಯುವಕ ಯುವತಿಯರು ‘ಪಂಕ್’ ಎಂದು ಅವರ ವೇಷವನ್ನು ಕರೆಯುತ್ತಾರೆ ಈ ದಾಸಯ್ಯನ ನಿರಂಬಳತೆಯನ್ನು ಎಷ್ಟು ಪ್ರಯತ್ನಿಸಿದರೂ ಪ್ರಯತ್ನಿಸುವುದರಿಂದಲೇ ಪಡೆಯಲಾರರು.)

ಉತ್ಸವ ಪ್ರಾರಂಭವಾಗುವ ಬೆಳಿಗ್ಗೆ ರಾಮಾನುಜನ್ ಮತ್ತು ನಾನು ಮೇನ್ ನದಿಯ ದಂಡೆಯ ಮೇಲೆ ತಿರುಗಾಡಿ ಬರಲು ಹೋದೆವು. ರಾಮಾನುಜನ್ ಏನಾದರೂ ಕುತೂಹಲದ ಸಂಗತಿಯನ್ನು ಹೇಳುತ್ತಲೇ ಇರುತ್ತಾರೆ. ಹಿತವಾದ ಸ್ವರದ ಅವರ ಮಾತುಗಳು ಒಳಗಿನಿಂದ ಗಹನವಾಗಿ ಅವರೇ ಮಾತಾಡಿಕೊಳ್ಳುವುದನ್ನು ನಾವು ಕೇಳಿಸಿಕೊಂಡ ವಿಚಾರಗಳಂತಿರುತ್ತವೆ. ನಿತ್ಯ ಎದುರಾದ ಮುಖವನ್ನು ಕೊಂಚ ತಿರುಸಿ ವಿಶೇಷವಾಗಿ ಕಂಡಂತಿರುತ್ತದೆ ಅವರು ಕಾಣುವ ಕ್ರಮ. ಪೂರ್ವಕಾಲದ ಜರ್ಮನಿಯ ಚರ್ಚುಗಳು, ಸೇತುವೆಗಳು, ಯುದ್ಧವಾದ ನಂತರ ಕಟ್ಟಿದ ಹೊಸದರ ಜೊತೆ ಜೊತೆಯಲ್ಲೇ ಮಾಸಿದ ಬಣ್ಣದಲ್ಲಿ ನಿಂತ ಈ ಬೃಹದಾಕಾರದ ಕಟ್ಟಡಗಳು ಇವುಗಳನ್ನು ಮನಸ್ಸಲ್ಲಿ ಪೋಣಿಸುವಂತೆ ಯಾವುದೋ ಕಾಲದ, ಯಾವನೋ ಭಾರತೀಯ ಸಂತನ ಮಾತುಗಳನ್ನು ನೆಪಿಸಿಕೊಳ್ಳುತ್ತ, ಮೇನ್ ನದಿಯ ದಂಡೆಯೇ ತುಂಗಾ ತೀರವೋ ಕಾವೇರಿಯೋ ಆಯಿತು ನಮಗೆ ಆಗ. ಈಗ ‘ಇಹ’ದಲ್ಲಿ ಮಂಉಕವಿದ ಯಾವುದೋ ಚರ್ಚನ್ನು ಕಂಡು ಆಹಾ ಎಂದುಅ ಚ್ಚರಿಪಡುತ್ತ, ಭೂತಕಾಲವನ್ನು ವರ್ತಮಾನದಲ್ಲಿ ತನ್ನ ಕರ್ಕಶ ಅವಸರದಲ್ಲೂ ಅವಚಿಕೊಂಡಿರುವ ನಗರದ ನದಿ ದಂಡೆಯ ಮೇಲೆ ಒಂದು ತಆಸು ನಡೆದೆವು. ಇಳಿದುಕೊಂಡ ಹೋಟೆಲ್ ಹತ್ತಿರವಾಗುತ್ತಿದ್ದಂತೆ ನಿರ್ಜನ ಬೀದಿಯಲ್ಲಿ ಇಬ್ಬರೂ ಗಕ್ಕೆಂದು ನಿಂತು ನಾಲ್ಕು ಹೆಜ್ಜೆ ಮುಂದೆ ಹೋದೆವು.

ಪೇವ್‌ಮೆಂಟಿನ ಕಲ್ಲುಗಳನ್ನು ಎರಡಡಿ ಚೌಕವಾಗಿ ಅಗೆದು ತೆಗೆದು ಅದರೊಳಗೆ ಪುಸ್ತಕಗಳನ್ನು ಬೆನ್ನು ಕಾಣುವಂತೆ ನೀಟಾಗಿ ಜೋಡಿಸಿ ಮೇಲೆ ದಪ್ಪ ಗಾಜನ್ನಿಟ್ಟು ಚೊಕ್ಕವಾಗಿ ಪ್ಲಾಸ್ಟರ್ ಮಾಡಿದ್ದರು. ನಮ್ಮ ಕಲ್ಪನೆ ಚಿಗುರಿತು. ಸದ್ಯ ನಾವು ಪುಸ್ತಕಗಳ ಮೇಲೆ ಕಾಲಿಡಲಿಲ್ಲವಲ್ಲ! ಯಾರಾದರೂ ತುಳಿಯುವಂತೆ ಪುಸ್ತಕಗಳನ್ನು ಹುಗಿಯುತ್ತಾರೆಯೇ? ಹಿಟ್ಲರನ ಕಾಲದಲ್ಲಿ ಯಹೂದ್ಯರಾದ ಥಾಮಸ್‌ಮನ್, ಫ್ರಾಯ್ಡ್, ಐನ್‌ಸ್ಟೈನ್‌ರ ಪುಸ್ತಕಗಳನ್ನು ಶೈಥಿಲ್ಯದ ಮನೋರೋಗದವೆಂದು ಸುಟ್ಟದ್ದು ನೆನಪಾಯಿತು. ಮಂದವಾದ ಬೆಳಕಿನಲ್ಲಿ ಬಗ್ಗಿ ಪುಸ್ತಕಗಳನ್ನು ನೋಡಿದೆವು. ಹೆಮಿಂಗ್ವೆ, ಜೇಮ್ಸ್ ಚಾಯಜ್ಸ್, ಪ್ರೂಸ್ಟ್ ಇಂಥವರ ಪುಸ್ತಕಗಳೇ! ಅಂದರೆ, ರ‍್ಯಾಡಿಕಲ್ ಮನೋಭಾವದವರು ಬರೆದೆ ಪುಸ್ತಕಗಳೇ ಆದರೆ ಇದು ಜರ್ಮನ್ ರಾಷ್ಟ್ರೀಯತೆಯ ಪ್ರತಿಭಟನೆ ಇರಬೇಕು! ಪರಕೀಯರನ್ನು ಕೊಂಡಾಉವ ಪುಸ್ತಕದ ಉತ್ಸವಕ್ಕಿದು ಸ್ವಾತಿಕದವರ ಧಿಕ್ಕಾರವಿರಬೇಕು. ಬಂದ ದಿನ ಬೆಳಿಗ್ಗೆ ಕಾರಿನ ಮೇಲೆ ನಾನು ಕಂಡ ಸ್ವಾಸ್ತಿಕದ ನೆನಪಾಯಿತು. ಪ್ರತಿಭಟನೆಯಲ್ಲಿ ಸತ್ತ ಯುವಕನ ನೆನಪಾಯಿತು. ಬ್ರೇಕ್‌ಫಾಸ್ಟ್ ಮಾಡುವಾಗ ಗೆಳೆಯ ನಿರ್ಮಲನಿಗೆ ಹೇಳಿದೆ. ಅವನೂ ಆತಂಕದಲ್ಲಿ ಬಂದು ನೋಡಿದ. ನಮ್ಮ ಕಲ್ಪನೆ ಕೆಂಪು ಕೆಂಪಾಗಿ ಕೆದರಿಕೊಂಡಿತು.

ಇನ್ನೂ ಹಲವು ಕಡೆ ಬೀದಿಗಳು ಕೂಡುವಲ್ಲಿ ಹುಗಿದ ಪುಸ್ತಕಗಳನ್ನು ಕಂಡಾಗ ತಿಳಿಯಿತು- ಇದು ಉತ್ಸವದ ಜಾಹೀರಾತು. ನನಗಂತೂ ಪೆಚ್ಚಿನ್ನಿಸಿತು. ನಾವು ಹಲವು ಸಾರಿ ಕಾಣುವುದು ಪೂರ್ವನಿಶ್ಚಿತ ಮನಸ್ಸು ಹುಡುಕುವುದನ್ನೇ ಅಲ್ಲವೆ?

* * *

ನನ್ನ ಕೋಪಗಳನ್ನೂ, ದಿಗಿಲುಗಳನ್ನೂ, ಅನುಮಾನಗಳನ್ನೂ, ಜಿಗುಪ್ಸೆಯನ್ನೂ ಇವತ್ತಿಗೂ ನೀರ್ಧರಿಸುವುದು ನನ್ನ ಮನಸ್ಸನ್ನು ಬಹುಕಾಲದಿಂದ ಕಟ್ಟುತ್ತ ಬಂದ ಎಡುಪಂಥೀಯ ರಾಜಕೀಯ ಧೋರಣೆಗಳು. ಈ ಧೋರಣೆಗಳನ್ನು ಈಚೆಗೆ ಬೇರೆಯವರಲ್ಲಿ ಕಂಡು ಕೇಳಿಸಿಕೊಂಡಾಗ ನನ್ನ ಅಪಕ್ವತೆ ನನಗೆ ಎದುರಾಗುತ್ತದೆ. ಎಡಪಂಥೀಯರು ಯಾಕಿಷ್ಟು ತೋರುಗಾಣಿಕೆಯ ಜನರಾಗಿರುತ್ತಾರೆ ಎಂದುಕೊಳ್ಳುತ್ತೇವೆ. ಹೀಗೆನ್ನಿಸುವಾಗಲೂ ನನಗೆ ತುಂಬ ಇಷ್ಟವಾದ ಲೇಖಕಿ ಬಂಗಾಲದ ಮಹಾಶ್ವೇತೆ ದೇವಿ. ಆಳುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟರಿಗೂ ತೊಡಕಿನ ವ್ಯಕ್ತಿಯಾದ ಮಹಾಶ್ವೇತೆ ಮಾತಿನಲ್ಲಿ ಮಾತ್ರವಲ್ಲ, ತನ್ನ ದೈನಂದಿನ ಬದುಕಿನಲ್ಲೂ, ತಾನು ಗಿರಿಜನರ ಜೊತೆ ಆದಿವಾಸಿಗಳ ಜೊತೆ ಮಾಡುತ್ತಿದ್ದ ಕೆಲಸದಲ್ಲೂ ಬೆಂಕಿಯಂತಿದ್ದಳು. ಸೀದಾ ಸಾದಾ ಉಡುಪಿನ ಮಹಾಶ್ವೇತೆ ತನ್ನ ಸೀದಾ ಕೆಲಸದಲ್ಲೂ ಬೆಂಕಿಯಂತಿದ್ದಳು. ಸೀದಾ ಸಾದಾ ಉಡುಪಿನ ಮಹಾಶ್ವೇತೆ ತನ್ನ ಸೀದಾ ಸಾದಾವನ್ನು-ನಗುತ್ತ ಸಾರುತ್ತಲೂ ಇದ್ದಳು. ಪ್ರಾಯಶಃ ಅವಳ ಬದುಕಿನ ಕ್ರಮಕ್ಕೆ ಅನ್ಯವಾದ ನಮ್ಮ ಸಂದರ್ಭದಲ್ಲಿ ಹಾಗೆ ಹೇಳಿಕೊಳ್ಳುವುದು ಅವಳಿಗೆ ಅಗತ್ಯವಾಗಿರಬೇಕು. ತೋರುಗಾಣಿಕೆಯೆಂದು ಅವಳ ಮಾತಿಂದ ಅನ್ನಿಸುವುದು ನಿಜವೂ ಆಗಿತ್ತು. ಕನ್ನಡದ ಮಾಸ್ತಿಯ ಸೌಜನ್ಯದಂತೆ. ಮುಖವಾಡ ಮುಖವೇ ಆಗಿಬಿಡುತ್ತದೆ. ಇರುವ ಸತ್ಯಕ್ಕಿಂತ ಭಿನ್ನವಾಗಿ ಬದುಕುವ ಛಲದ ಎಲ್ಲರೂ ಹೀಗೆ ಮುಖವಾಡವನ್ನು ಮುಖವೇ ಮಾಡಿಕೊಳ್ಳುವ ದಿವ್ಯದಲ್ಲಿ ಬದುಕುತ್ತಿರುತ್ತಾರೆ.

ಮಹಾಶ್ವೇತೆ ನನ್ನ ಅಕ್ಕನಾಗಿಬಿಟ್ಟಳು ಅವಳ ಕೆದರಿದ ಕೂದಲು, ನಿಷ್ಠರ ಮಾತು, ಎಡಪಂಥೀಯ ಒಲವು ಆದರೆ ರಾಜಕೀಯವಾಗಿ ಕಮ್ಯುನಿಸ್ಟ್ ವಿರೋಧ ಎಲ್ಲವೂ ಆಕೆಯನ್ನು ಮೀಡಿಯಾದ ಮುದ್ದಿನ ಗೊಂಬೆಯಾಗಿ ಮಾಡಿತು. ಅದರಲ್ಲಿ ಹಿಗ್ಗಿದರೂ ಮಹಾಶ್ವೇತೆ ತನ್ನ ಭಾವುಕತೆಯ ಸಾಚಾತನವನ್ನು ಕಳೆದುಕೊಳ್ಳಲಿಲ್ಲ. ಕ್ರಾಂತಿಕಾರಿ ಕೆಲಸದಲ್ಲಿ ನಿರತನಾದವನಿಗೆ ಇರಬೇಕಾದ ನಿರ್ಭಾವದ ದೃಢ ಸಂಕಲ್ಪ, ಪ್ರದರ್ಶನಕ್ಕೆ ಆಸೆಪಡದ ಸನ್ಯಾಸಿಯ ಒಣಕಲುತನ ಇವು ಕ್ರಾಂತಿ ಬಯಸುವ ಲೇಖಕನಿಗೆ ಇರಲಾರದು ಎಂಬುದು ಮಹಾಶ್ವೇತೆಯ ಭಾವುಕತೆಯಲ್ಲಿ ಕಂಡೆ. ತನ್ನ ಭಾವ ಪ್ರಪಂಚದಲ್ಲಿ ಹಿಗ್ಗದೇ ಲೇಖಕ ಕ್ರಾಂತಿಕಾರನಾಗಲಾರನೇನೊ! ಗಾಂಧಿಯನ್ನು ನೋಡಿ, ಲೆನಿನ್‌ನನ್ನು ನೋಡಿ ಇಬ್ಬರು ನಿಷ್ಠುರ ಸನ್ಯಾಸಿಗಳೇ, ನಿರ್ಭಾವದ ವ್ರತಿಗಳೇ ಹುತ್ತುಗಟ್ಟಿದ ತಪಸ್ವಿಗಳು ಇವರು. ಆವೇಶದಲ್ಲಿ ಮಾತ್ರ ನೈಜವಾಗುವ ಮಯಕೊವಸ್ಕಿಯಂಥವರು ಉರುಳಿಸುವ ಕ್ರಾಂತಿ ಮುಗಿದದ್ದೇ ಕಟ್ಟುವ ಕಾಲ ಪ್ರಾರಂಭವಾದಾಗ ರಾಜಕೀಯ ಕ್ರಾಂತಿಯ ಬಯಸುವ ಉಬ್ಬರ ಕ್ಷಣಿಕವಾದ್ದೆಂದು ಕಂಡು ಸಪ್ಪೆಯಾಗಿಬಿಡುತ್ತಾರೆ. ಬದ್ಧ ಲೇಖಕರ ಹಲವು ದುರಂತಗಳಲ್ಲಿ ಇದೇ ಅತ್ಯಂತ ನೋವಿನದು. ಕಟ್ಟುವ ಕೆಲಸ ಒಡೆಯುವ ಕೆಲಸದಷ್ಟು ಅಪ್ಯಾಯಮಾನವಲ್ಲ ರಾಜಕೀಯದಲ್ಲಿ. ಹಾಗೆಯೇ ಸಾಂಸಾರಿಕತೆ ಪ್ರಣಯದಷ್ಟು ರೋಮಾಂಚಕವಲ್ಲವೇ ಅಲ್ಲ.

ಪ್ರದರ್ಶನಕ್ಕೆಂದು ಬಂದ ಭಾರತೀಯ ಪ್ರಣಯದಷ್ಟು ರೋಮಾಂಚಕವಲ್ಲವೇ ಅಲ್ಲ. ತೀವ್ರ ನಿರಾಸೆಯಾಯಿತು. ಕನ್ನಡದ ಮಾಸ್ತಿ, ಕುವೆಂಪು, ಕಾರಂತ, ಶ್ರೀರಂಗ ಇತ್ಯಾದಿ ಹಿರಿಯ ಲೇಖಕರಿರಲಿ, ನನ್ನ ಕಾಲದ ತೇಜಸ್ವಿ, ಲಂಕೇಶ, ದೇವನೂರು ಮಹದೇವ ಈ ಯಾರ ಪುಸ್ತಕಗಳೂ ಇರಲಿಲ್ಲ. ವಿಶ್ವವಿದ್ಯಾಲಯದ ಪ್ರಕಟಣೆಗಳಲ್ಲಿ ಕೆಲವು ಪ್ಲಸ್ ಒಂದೆರಡು ಪತ್ತೇದಾರಿ ಕಾದಂಬರಿಗಳು ಕನ್ನಡವನ್ನು ಪ್ರತಿನಿಧಿಸಿದ್ದವು. ಮಾಶ್ವೇತೆ ಪ್ರಕಾರ ಬಂಗಾಳಿಗೂ ಇದೇ ಗತಿಯಾಗಿತ್ತು. ನನ್ನ ಕಾದಂಬರಿಯ ಫ್ರೆಂಚ್, ರಷ್ಯನ್ ಭಾಷಾಂತರಗಳದ್ದುವು ಕನ್ನಡದ ಪ್ರತಿ ಇರಲಿಲ್ಲ. ನ್ಯಾಷನಲ್ ಬಿಲ್ ಟ್ರಸ್ಟಿನ ಈ ಬೇಜವಾಬ್ದಾರಿತನವನ್ನು ನಾನು ಕೋಪದಿಂದ ಪ್ರತಿಭಟಿಸಿದೆ. ಅದನ್ನು ಕೇಳಿಸಿಕೊಂಡವನು ನನ್ನ ಕೋಪದಿಂದ ಕಿಂಚಿತ್ತೂ ತನ್ನ ವ್ಯವಧಾನ ಕಳೆದುಕೊಳ್ಳಲಿಲ್ಲ! ಅದೇ ಹಿಂದಿನ ದಿನ ಹಿಂದಿ ಕವಿ ವಿಷ್ಣುಖರೆ ಸಭೆಯಲ್ಲಿ ಭಾರತದ ಸಾಹಿತ್ಯ ಅಕಾಡಮಿಯನ್ನು ಜಾಲಾಡಿದ್ದ. ಅವನು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಂಸ್ಥೆಯದು ಖರೆಯ ಉದ್ವಿಗ್ನ ಖಂಡನೆಯಲ್ಲಿ ಎಷ್ಟು ಅವನ ಸ್ವಂತದ ಸಿಟ್ಟಿತ್ತು, ಎಷ್ಟು ವಸ್ತುನಿಷ್ಠ ಟೀಕೆಯಿತ್ತು ಎನ್ನುವುದನ್ನು ತಿಳಿಯುವುದು ಕಷ್ಟವಾಗಿ ನಮಗೆಲ್ಲರಿಗೂ ತುಂಬ ಮುಜುಗರವಾಗಿತ್ತು. ಆದರೆ ಅವನ ಮಾತು ಅಂಟಿದಂತೆ, ಪುಸ್ತಕ ಪ್ರದರ್ಶನದ ಆಯ್ಕೆ ಬಗ್ಗೆ ನನ್ನಂಥವರ ಟೀಕೆ ಯಾರ ಶಾಂತಿಗೂ ಭಂಗತರಲಿಲ್ಲ.

ನಡೆದದ್ದನ್ನೆಲ್ಲ ಹೇಳ ಹೋದರೆ ಸ್ವಾರಸ್ಯ ಉಳಿಯುವುದಿಲ್ಲ. ಕೊನೆಗಾದ್ದನ್ನು ಹೇಳಿ ಮುಗಿಸುತ್ತೇನೆ. ಹೇಳದೇ ಉಳಿದಿದ್ದು ಊಹೆಗೆ ಹೊಳೆಯಬಹುದು. ಪೂರ್ವ ಮತ್ತು ಪಶ್ಚಿಮ ಎಂದೂ ಸಂಧಿಸಲಾರದೆ? ಹಾಗೆ ಹಲವು ಸಾರಿ ಅನ್ನಿಸುತ್ತದೆ. ಪೂರ್ವ ಪೂರ್ವವೇ, ಪಶ್ಚಿಮ ಪಶ್ಚಿಮವೇ – ಒಂದು ಡಾಲರ್‌ನ ಬೆಲೆ ಒಂದು ರೂಪಾಯಿಯಾಗು ತನಕವಾದರೂ ಇದು ಸತ್ಯ.

ಉತ್ಸವ ಮುಗಿದ ರಾತ್ರಿ ಟೆಲಿವಿಷನ್‌ನಲ್ಲಿ ಒಂದು ವರದಿ ಬಂತು. ದೀರ್ಘವಾದ ವರದಿ, ಅದು ಉತ್ಸವವನ್ನು ತೋರಿಸಿದ ಕ್ರಮ ಹೀಗಿತ್ತು

ಫ್ರಾಂಕ್‌ಫರ‍್ಟಿನ ದೈತ್ಯ ಏರ್‌ಪೋರ್ಟ್, ಚಲಿಸುವ ರಸ್ತೆಯ ಮೇಲೆ ನಿಂತು ತಮ್ಮ ಸಾಮಾನು ಸರಂಜಾಮುಗಳ ಸಹಿತ ಸುಸ್ತಾದ ಭಾರತೀಯ  ಲೇಖಕರು ಬರುತ್ತಿದ್ದಾರೆ.  ಆಮೇಲೆ ಅವರು ಕಫೆಟೆರಿಯಾದಲ್ಲಿ ಊಟ ಮಾಡುತ್ತಿದ್ದಾರೆ. ಬಂಗಾಳದ ಮಹಾರ್ಶವೇತೆ ನಿರ್ವಿಣ್ಣಳಾಗಿ ಕನ್ನಡಕದ ಮೂಕ ನೋಡುತ್ತಾ ಊಟ ಮಾಡುತ್ತಿದ್ದಾಳೆ. ಮತ್ತೆ ಒಂದು ಶ್ರೀಮಂತ ಕ್ಲಬ್ಬಿನಲ್ಲಿ ಸಿಟ್ಟಾಗಿ ಮಾತಾಡುತ್ತಿದ್ದಾಳೆ. ರಾಜಸ್ತಾನದ ಕಚ್ಚಿಪಂಚೆಯುಟ್ಟ ಲೇಖಕ ಕಫೆಟೇರಯಾದ  ಗಾಜಿನ ಕಪಾಟುಗಳಲ್ಲಿಟ್ಟ ಬಗೆಬಗೆಯ ಊಟಗಳನ್ನು ದಿಟ್ಟಿಸಿ ನೋಡುತ್ತಿದ್ದಾನೆ. ಏನನ್ನು ತೆಗೆದುಕೊಳ್ಳಬೇಕೆಂದು ಅವನಿಗೆ ತಿಳಿಯದು. ಅವನು ಸಸಸ್ಯಹಾರಿಯಿರಬೇಕು. ಒಂದು ತಟ್ಟೆಯನ್ನು ಎಳೆದು ನೋಡುತ್ತಾನೆ, ಚಿಂತಿಸುತ್ತಾನೆ. ಅದನ್ನು ಹಿಂದಕ್ಕೆ ಇಟ್ಟು ಇನ್ನೊಂದು ತಟ್ಟೆ ತೆಗೆದುಕೊಳ್ಳುತ್ತಾ. ಆರ್.ಕೆ. ನಾರಾಯಣ್‌ರನ್ನು ಕ್ಯಾಮರಾ ಮೈಸೂರಲ್ಲೇ ಭೇಟಿ ಮಾಡಿ ಫ್ರಾಂಕ್‌ಫರ್ಟ್ನಲ್ಲಿ ಏನು ನಿರೀಕ್ಷಿಸುತ್ತೀರಿ ಎಂದು ಕೇಳುತ್ತದೆ. ಆರ್.ಕೆ. ನಾರಾಯಣ್ ತಮ್ಮ ಸಹಜ ಗಂಭೀರ ಹಾಸ್ಯದಲ್ಲಿ ತನಗೊಂದು ಹಗುರಾದ ಫ್ರೇಮಿನ ಕನ್ನಡಕ ಕೊಳ್ಳಬೇಕಾಗಿದೆ ಎನ್ನುತ್ತಾರೆ. ಕ್ಯಾಮರಾ ಮತ್ತೆ ಅವರನ್ನು ಫ್ರಾಂಕ್‌ಫರ‍್ಟಿನ ಕನ್ನಡಕದ ಅಂಗಡಿಯಲ್ಲಿ ಕನ್ನಡಕವನ್ನು ಏರಿಸಿಕೊಂಡು ಮೆಚ್ಚುವುದನ್ನು ತೋರಿಸುತ್ತದೆ. ಎಷ್ಟು ಹಗುರಾದ ಫ್ರೇಮಿನ ಕನ್ನಡಕ ಸಿಕ್ಕಿತೆಂದು ನಾರಾಯಣ್ ಹಿಗ್ಗುತ್ತಿದ್ದಾರೆ. ಮರಾಠಿ ಲೇಖಕ ದಿಲೀಪ್ ಚಿತ್ರ ತೆರೆಯ ಮೇಲೆ ಬರುತ್ತಾನೆ. ಇಲ್ಲಿ ನಮಗೆ ಸಿಗುತ್ತಿರುವ ಸಂಭಾವನೆ ಏನೇನೂ ಸಾಳದೆಂದು ಅವನು ಸಿಟ್ಟಿನಲ್ಲಿ ಹೇಳುತ್ತಾನೆ. ನಿಮಗೆ ಸಿಗುತ್ತಿರುವ ಸಂಭಾವನೆ ಸಾಕೊ? ಎಂಬ ಪ್ರಶ್ನೆಗೆ ಅವನ ಉತ್ತರ ಅದು. ಸಆಕು ಎಂದವನ ಉತ್ತರವಾಗಿದ್ದರೆ ಬಡ ಭಾರತೀಯರು ಎಷ್ಟು ಅಲ್ಪತೃಪ್ತರು ಎಂಬುದಾಗಿ ಟೆಲಿವಿಷನ್ ಸಂದರ್ಶನದ ಒಟ್ಟು ಸಂದರ್ಭದಲ್ಲಿ ಅರ್ಥವಾಗುತ್ತಿತ್ತು. ಸಾಲದು ಎಂದು ದಿಲೀಪ್ ಹೇಳಿದ್ದು ಭಾರತೀಯ ಆಸೆಬುರುಕುತನವನ್ನು ಸಾರುವಂತಿತ್ತು. ಹಾಗೂ ಇಕ್ಕಳ, ಹೀಗೂ ಇಕ್ಕಳ, ದಿಲೀಪ್ ಚಿತ್ರ ತನ್ನ ಎಂದಿನ ಉತ್ಸಾಹದಲ್ಲಿ ‘ಇಷ್ಟು ಕಡಿಮೆ ಖರ್ಚಿಗೆ ನಿಮಗೆ ಯಾವ ಐರೋಪ್ಯ ಲೇಖಕ ಸಿಗುತ್ತಿದ್ದ ಹೇಳಿ?’ ಎಂದೆ. ನಮ್ಮಲ್ಲಿ ಐದಾರು ಜನವಾದರೂ ನೊಬೆಲ್ ಬಹುಮಾನಕ್ಕೆ ಯೋಗ್ಯರಾದ ಲೇಖಕರಿದ್ದೇವೆ ಎಂದ. (ಹಿಂದಿನ ದಿನ ಕಮಲದಾಸ್ ಒಂದು ಸಾರ್ವಜನಿಕ ಕೂಟದಲ್ಲಿ ರೇಗಿದ್ದಳು. ‘ಇದು ಎಂಥ ದೇ! ಒಂದೇ ಒಂದು ನಗುಮುಖ ಎದುರಾಗುವುದಿಲ್ಲ. ನಮ್ಮಿಂದ ಸಭೆಗಳಲ್ಲಿ ಮಾತಾಡಿಸಿ ಕವರ್‌ನಲ್ಲಿ ಒಂದಿಷ್ಟು ಹಣವಿಟ್ಟು ಕಳಿಸುತ್ತೀರಲ್ಲ ನಾವು ಹಣಕ್ಕಾಗಿ ಹಾತೊರೆದಿದ್ದೀವಿ ಎಂಬ ಅರ್ಥ ಬರುವ ಥರ ವರ್ತಿಸುತ್ತೀರಲ್ಲ ಗಯಟೆ ಮ್ಯಾಕ್ಸ್‌ಮುಲ್ಲರರ ದೇಶವೇ ಇದು?’ ಇತ್ಯಾದಿ. ಸಭೆಯಲ್ಲಿದ್ದವರಿಗೆಲ್ಲರಿಗೂ ಅವಳ ಮಾತು ಅನಗತ್ಯವೆನ್ನಿಸಿತ್ತು. ಹೀಗಾಗಿ ದಿಲೀಪನ ಟೀಕೆ ಗಾಯದ ಮೇಲೆ ಬರೆ ಎಳೆದಂತಿತ್ತು. ಉತ್ಸವದ ನಿರ್ವಹಣೆಗಾಇಗ ಹಗಲು ರಾತ್ರಿ ದುಡಿದವರಿಗೆ, ಮಾತಾಡಿದ ನಂತರ ತನ್ನಿಂದ ಆ ಬಗೆಯ ಟೀಕೆಯನ್ನು ಉಪಾಯವಾಗಿ ಪಡೆದುಕಂಡ ಸಂದರ್ಶಕನ ಮೇಲೆ ದಿಲೀಪ್‌ಗೆ ಕಡುಕೋಪ ಹುಟ್ಟಿತ್ತು. ನನಗೂ ಸಂದರ್ಶಕ ಈ ಪ್ರಶ್ನೆಯನ್ನು ಕೇಳಿದ್ದ. ಸಂಭಾವನ ವಿಷಯ ನಾನು ಮಾತಾಡುವುದಿಲ್ಲ ಎಂದಿದ್ದೆ. ಆದರೆ ಭಾರತದ ನ್ಯಾಷನಲ್ ಬುಕ್ ಟ್ರಸ್ಟ್‌ನ ಬೇಜವಾಬ್ದಾರಿತನವನ್ನು ಕಟುವಾಗಿ ಟೀಕಿಸಿದ್ದೆ. ಅಂದರೆ ಒಟ್ಟು ಸಂದರ್ಭದಲ್ಲಿ ನನ್ನದೂ ಉತ್ಸವದ ಇನ್ನೊಂದು  ಟೀಕೆಯಾಗಿ ಪರಿಣಮಿಸಿಬಿಟ್ಟಿತು. ದೂರದರ್ಶನದ ಒಟ್ಟು ಮಸೇಜೇ ಸೂಕ್ಷ್ಮಗಳನ್ನು ಧ್ವಂಸ ಮಾಡುವಂತಿರುತ್ತದೆ ಅಲ್ಲವೆ?)

ನಂತರ ಉತ್ಸವಕ್ಕೆ ಐರೋಪ್ಯ ಲೇಖಕರು ಬಂದಿಳಿಯುವುದನ್ನು ತೋರಿಸಿದರು. ಇಗೋ ಇವನು ಸೊಗಸಾದ ಕಾರಿನಿಂದಿಳಿದ. ತನ್ನಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಶಾಂಪೇನ್ ಗ್ಲಾಸ್‌ಗಳನ್ನು ಕ್ಲಿಕ್ ಮಾಡಿದ, ಅಸ್ತಿತ್ವವಾದದ ಬಗ್ಗೆ ಮಾತಾಡಿದ. ಇವಳು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ತನ್ನ ಭಾವನೆಯನ್ನು ಬಿತ್ತರಿಸಿದಳು. ಐರೋಪ್ಯ ಲೇಖಕರೆಲ್ಲರೂ ವಿಚಾರಗಳಲ್ಲಿ ಮಗ್ನರಾಗಿದ್ದರು. ಹಗುರಾಗಿ ಬಂದರು. ಮತ್ತೊಂದು ಉತ್ಸವ ಮುಗಿಯಿತೆಂದು ಹಗರುರಾಗಿ ಹೋದರು. ಅವರೂ ಕನ್ನಡಕ ಕೊಂಡಿರಬಹುದಿತ್ತು. ಸೂಪರ್ ಮಾರ್ಕೆಟ್‌ನಲ್ಲ ಒಳ್ಳೆಯ ಜರ್ಮನ್ ಕಾಚ ಖರೀದಿಸಿರಬಹುದಿತ್ತು. ಆದರೆ ಅವೇನನ್ನೂ ನಾವು ನೋಡಲಿಲ್ಲ. ಅಥಾ ಅವರೇನಾದರೂ ಭಾರತಕ್ಕೆ ಬಂದಿದ್ದರೆ ಬಾಳೆಲೆ ಎದುರು ಕೂತು ಸಾರು ಮತ್ತು ಅನ್ನವನ್ನು ಕಲಸಿ ಅವರು ಊಟ ಮಾಡುವ ಪೇಚನ್ನೇನೂ ನಾವು ಚಿತ್ರಿಸುತ್ತಿರಲಿಲ್ಲ.

ಒಟ್ಟಿನಲ್ಲಿ ಭಾರತದ ಲೇಖಕರನ್ನು ಟೆಲಿವಿಷನ್ ವರದಿ ಕ್ಲುಲ್ಲಕ್ಕಗೊಳಿಸಿತ್ತು. ಬೇಕೆಂದು ಅಲ್ಲದಿರಬಹುದು. ಒಟ್ಟು ಪರಿಣಾಮ ಹಾಗಾಗಿತ್ತು. ಇದು ಯಾಕೆ ಯಾವಾಗಲೂ ಹೀಗಾಗುತ್ತದೆ ಎಂದು ನಾನು ಫ್ರಾಂಕ್‌ಫರ್ಟ್ ಬಿಡುವ ಮುನ್ನ ಒಂದು ಕಾಗದವನ್ನು ನಿರ್ವಾಹಕರಿಗೆ ಬರೆದೆ. ರಾಮಾನುಜನ್ ಎಷ್ಟು ಘನವಾಗಿ ಮಾತಾಡಿದರು. ವಾತ್ಸ್ಯಾಯನ್ ಎಷ್ಟು ಅಮೂಲ್ಯ ವಿಷಯಗಳನ್ನು ಹೇಳಿದರು. ನಾರಾಯಣ್, ಆನಂದ್, ಮಹಾಶ್ವೇತೆ ಎಲ್ಲರೂ ಭಾರತದ ಎಷ್ಟೊಂದು ಮುಖಗಳು ತೋರುವಂತೆ ಮಾತಾಡಿದರು. ಟೆಲಿವಿಷನ್ ಕಾಣಿಸಿದ್ದು ಮಾತ್ರ ಅತಿ ಪರಿಚಿತವಾದ ಸ್ಪೀರಿಯೋ ಟೈಪನ್ನೇ.

* * *

ದೇವರು ಒದ್ದು ಹೋದ ಪಾದದ ಅಚ್ಚನ್ನು ಹಣೆಯ ಮೇಲೆ ಹೊತ್ತುಕೊಂಡ, ಕೆದರಿದ ಕೂದಲಿನ ಬೈರಾಗಿಯ ಪೋಸ್ಟರ್‌ಗಳನ್ನು ಜೋಕೆಯಿಂದ ಗೋಡೆಗಳಿಂದ ಕಳಚಿ, ಸುತ್ತಿಕೊಂಡು, ನಮ್ಮ ಜರ್ಮನ್ ಸ್ಕೌಟ್‌ಗಳು ತಮ್ಮ ತಮ್ಮ ಮನೆಗೆ ಹೊರಟುಹೋದರು.

ಅರೆಬರೆ ಆಧುನಿಕವಾದ ಹಾಸನದಲ್ಲೊ. ಶಿವಮೊಗ್ಗದಲ್ಲೊ, ದಾವಣಗೆರೆಯಲ್ಲೊ  ಯಾವನೋ ಮಧ್ಯಮ ವರ್ಗದ ಪಿ.ಡಬ್ಲ್ಯೂ.ಡಿ ಇಂಜಿನಿಯರ್ ಮನೆಯ ಕಾಂಪೌಂಡಿನ ಎದುರು ಈ ಬೈರಾಗಿ ತನ್ನ ಶಂಖವೂದಿ, ಜಾಗಟೆ ಬಾರಿಸಿ, ನಿರ್ವಿಣ್ಣನಾಗಿ ಭಿಕ್ಷೆಗಾಗಿ ಕಾದಿದ್ದಾನೆ. ಮನೆಯ ಯಜಮಾನ ಈ ಬೈರಾಗಿ ಕಳ್ಳನಿರಬಹುದೇ ಎಂಬ ಅನುಮಾನದಿಂದ ಹೊರಗೆ ಬಂದು ನೋಡಿ ‘ಮುಂದೆ ನಡಿ’ ಎನ್ನುತ್ತಾರೆ. ಸೆಖೆಯಲ್ಲೂ ಟೈ ತೊಟ್ಟುಕೊಂಡ ಯಜಮಾನನ ಹುಬ್ಬಿನ ಮಧ್ಯೆ ಪ್ರಾತಃಕಾಲದ ಕುಂಕುಮದ ಚಿಹ್ನೆ ಕಂಡ ಬೈರಾಗಿ ಭರವಸೆಯಲ್ಲಿ ನಿಂತೇ ಇರುತ್ತಾನೆ. ಮತ್ತೆ ಜಾಗಟೆ ಸದ್ದು ಮಾಡುತ್ತ ಅಂಜಿಕೆಯಲ್ಲಿ ಶಂಖವನ್ನು ಬಾಯಿಗಿಡುತ್ತಾನೆ. ಮತ್ತೊಮ್ಮೆ ‘ ಮುಂದೆ ನಡಿ’ ಎಂದು, ತನ್ನ ಕೋಪ ನಿಷ್ಪ್ರಯೋಜಕವೆಂದು ಅರಿತ ಯಜಮಾನ ಗೇಟಿನ ಬಾಗಿಲು ತೆರೆದು, ಚಿಲಕ ಹಾಕಿ, ಸ್ಕೂಟರ್ ಸ್ಟಾರ್ಟ್ ಮಾಡುತ್ತಾನೆ. ಹಣೆಯ ಮೇಲೆ ದೊಡ್ಡ ಕುಂಕುಮವಿಟ್ಟ ಯಜಮಾಣಿತಿ ಒಂದು ಹಿಡಿ ಅಕ್ಕಿಯನ್ನು ತಂದು ಬೈರಾಗಿಯ ಜೋಳಿಗೆಗೆ ಹಾಕುತ್ತಾಳೆ. ಗಂಟೆ  ಬಾರಿಸುತ್ತ ಬೈರಾಗಿ ಮುಂದೆ ಹೋಗುತ್ತಾನೆ. ಅಲ್ಲದೆ, ಜರ್ಮನಿಯ ಎಷ್ಟೋ ಸುಶಿಕ್ಷಿತ ಮನೆಗಳ ಡ್ರಾಯಿಂಗ್ ರೂಮಿನಲ್ಲಿ  ಮಾಸುತ್ತ ಇರುತ್ತಾನೆ….

ಎಂದೇ ಈ ಎಲ್ಲ ಕೇವಲ ಸಂಕೇತಗಳಿಗೂ ಧಿಕ್ಕಾರ.

* * *

ಟೆಲಿವಿಷನ್ ವರದಿಯಾದ ನಂತರದ ಪ್ರಾತಃಕಾಲದಲ್ಲಿ ಆರ್ಕೇಡ್ ಹೋಟೆಲಲ್ಲಿ ಗಂಟು ಮೂಟೆ ಕಟ್ಟುತ್ತ ಕೂತ ನನಗೊಂದು ಫೋನ್‌ಕಾಲ್ ಬಂತು. ಭಾರವಾದ ಟ್ಯೂಟಾನಿಕ್ ಉಚ್ಛಾರಣೆಯಲ್ಲಿ ‘ಅನಂತಮೂರ್ತಿ ಹತ್ತಿರ ಮಾತಾಡಬಹುದೆ?’ ಎಂದದ್ದಕ್ಕೆ ‘ನಾನೇ ಅನಂತಮೂರ್ತಿ’ ಎಂದೆ. ‘ನಾನು ಜರ್ಮನ್ ಕಲ್ಚರ್ ಅಸೋಸಿಯೇಶನ್ನಿನ ಕಾರ್ಯದರ್ಶಿ, ನಿಮ್ಮನ್ನು ಬಂದು ನೋಡಬಹುದೇ?’ ಎಂಬ ಒತ್ತಾಯದ ಕೋರಿಕೆ ಕೇಳಿಸಿತು. ‘ನಾನು ಈ ಮಧ್ಯಾಹ್ನ ಊರು ಬಿಡುತ್ತಿದ್ದೆನಲ್ಲ’ ಎಂದೆ. ‘ಕೂಡಲೇ ಬರುತ್ತೇವೆ, ಅರ್ಧಗಂಟೆ ಸಿಕ್ಕರೂ ಸಾಕು. ನಾನಲ್ಲದ ನಮ್ಮ ಅಸೋಸಿಯೇಶನ್ನಿನ ಪ್ರೆಸಿಡೆಂಟ್, ವೈಸ್ ಪ್ರೆಸಿಡೆಂಟರೂ ಬರಲು ಇಚ್ಚಿಸುತ್ತಾರೆ. ಅರ್ಧ ಗಂಟೆ ಮಾತ್ರ ಟ್ಯೂಟಾನಿಕ್ ಉಚ್ಛಾರಣೆಯ ಇಂಗ್ಲಿಷ್ ಭಾಷೆ ಅತ್ಯಂತ ಒತ್ತಡ ಜರೂರುಗಳನ್ನು ಪಡೆದಿತ್ತು. ನಾನು ಒಲ್ಲದೆ, ಇಲ್ಲ ಎನ್ನಲೂ ಆರದೆ ‘ಎಲ್ಲಿ ನೋಡುವುದು? ನನ್ನ ರೂಮುಕ ತೀರಾ ಸಣ್ಣದು’ ಎಂದೆ. ‘ಆ ಬಗ್ಗೆ ಯೋಚಿಸಬೇಡಿ. ನಮ್ಮ ಮನೆಗಳಿಗೆ ಕರೆದುಕೊಂಡು ಹೋಗುತ್ತೇವೆ. ಹೊತ್ತಾಗುವುದಾದರೆ ಹೋಟೆಲ್‌ನಲ್ಲೆ ಕಾನಫರೆನ್ಸ್ ಕೋಣೆ ಪಡೆದಿರುತ್ತೇವೆ’ ಭಾರತೀಯ ಲೇಖಕರೆಲ್ಲರ ಬಗ್ಗೆ ಅಸಡ್ಡೆಯಿಂದ ವರ್ತಿಸುತ್ತಿದ್ದ ಹೋಟೆಲ್ ಸಿಬ್ಬಂದಿ ಕಾನಫರೆನ್ಸ್ ರೂಮನ್ನು ಅಷ್ಟು ಸುಲಭವಾಗಿ ಕೊಡಲಿಕ್ಕಿಲ್ಲವೆಂಬ ಭರವಸೆಯಂದ ‘ಆದೀತು’ ಎಂದೆ. ಆಶ್ಚರ್ಯವೆಂದರೆ ಅರ್ಧ ಗಂಟೆಯಲ್ಲಿ ಲಾಬಿಯಿಂದ ಫೋನ್ ಬಂತು. ಕೆಳಗಿಳಿದು ನೋಡಿದರೆ ಆರು ಜನರು. ಎಲ್ಲರೂಸೊಗಸಾದ ಕಂದು ಬಣ್ಣದ ಸೂಟ್ ತೊಟ್ಟು ಟೈ ಕಟ್ಟಿದವರು. ಕಟ್ಟುಮಸ್ತಾದ ಆಳುಗಳು. ಒಬ್ಬ ನನ್ನ ಕೈ ಕುಲುಕಿ, ‘ಈಗ ತಾನೇ ನಿಮ್ಮ ಜೊತೆ ಮಾತಾಡಿದವನು ನಾನು, ಸೆಕ್ರಟರಿ. ವರು ನಮ್ಮ ಪ್ರೆಸಿಎಂಟ್, ಇವರು ವೈಸ್ ಪ್ರೆಸಿಡೆಂಟ್, ಇವರು ಖಜಾಂಚಿ ಇವರಿಬ್ಬರು ನಮ್ಮ ಗೌರವಾನ್ವಿತ ಸದಸ್ಯರು. ಕಾನ್‌ಫರೆನ್ಸ್ ರೂಮಿಗೆ ಹೋಗೋಣವೆ?’ ಎಂದು ಸುಸಜ್ಜಿತವಾದ ಹೋಟೆಲ್ ಕೋಣೆಗೆ ಕೊಂಡೊಯ್ದು. ಏನು ತೆಗೆದುಕೊಳ್ಳುತ್ತೀರಿ? ಕಾಫಿ?ವೈನ್? ಜ್ಯೂಸ್?’ ಎಂದು ಕೇಳಿದ. ನಾನು ‘ಕಾಫಿ’ ಎಂದು, ‘ನನ್ನ ಗೆಳೆಯ ರಾಮಾಜನ್ ಎಂಬುವವರಿದ್ದಾರೆ. ಅವರನ್ನೂ ಬರಹೇಳಲೆ?’ ಎಂದೆ. ‘ಅಗತ್ಯವಾಗಿ’ ಎಂದು ಸೆಕ್ರಟರಿ ಕಾಫಿ ತರಿಸುವಷ್ಟರಲ್ಲಿ ನಾನು ರಾಮಾನುಜನ್‌ಗೆ ಬರುವಂತೆ ಫೋನಲ್ಲಿ ಕೇಳಿದೆ. ರಾಮಾನುಜನ್ನರೂ ಇಳಿದು ಬಂದರು.

ನಾವಿಬ್ಬರೂ ಕುತೂಹಲದಿಂದ ಆರು ಜನರ ಮುಖಗಳನ್ನು ನೋಡುತ್ತ ಕೂತೆವು. ನನಗೆ ಅವರ ಒಂದೇ ಥರದ ವೇಷಭೂಷಣ ಕಂಡು ಒಬ್ಬನ ಆರು ವರ್ಷನ್‌ಗಳಂತೆ ಅವರು ಎದುರು ಕೂತಿರುವುದಾಗಿ ಅನ್ನಿಸಿತು.

ಷಣ್ಮುಖರು ಒಂದೇ ಬಗೆಯ ಆರ್ತತೆಯಲ್ಲಿ ಸುತ್ತ ಕೂತು ಮಾತು ಪ್ರಾರಂಭಿಸಿದರು. ಪ್ರೆಸಿಡೆಂಟ್ ಚೂಪಾಗಿ ನೋಡಲೆಂದು ತನ್ನ ದಪ್ಪ ಕತ್ತನ್ನು ಕೊಂಚ ಬಗ್ಗಿಸಿ ಶುರುಮಾಡಿದ.

‘ನಿಮ್ಮನ್ನು ಇಲ್ಲಿಗೆ ಕರೆಸಿದವರು ಕ್ರೈಸ್ತ ಮಿಷನರಿಗಳು. ಭಾರತವನ್ನು ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸುವುದೇ ಅವರ ಉದ್ದೇಶ. ನೀವು ತಿಳಿಯದೆ ಈ ಹೊಂಚಿಗೆ ಒಳಗಾಗಿದ್ದೀರಿ.’

ನಾನು ಮೆತ್ತಗೆ ಹೇಳಿದೆ: ‘ಹಾಗೆ ನಮಗೆ ಅನ್ನಿಸಲಿಲ್ಲವಲ್ಲ! ಬದಲಾಗಿ ಈ ಉತ್ಸವದ ನಿರ್ವಾಹಕರಲ್ಲಿ ಕೆಲವರು ನಿರೀಶ್ವರವಾದಿಗಳೆಂದೇ ಅನ್ನಿಸಿತು.’

ಪ್ರೆಸಿಡೆಂಟ್ ಅರ್ಥಪೂರ್ಣವಾಗಿ ನಗುತ್ತ ಎಂದು; ‘ಅದು ಅವರ ಉಪಾಯ ಅಷ್ಟೆ. ನೋಡಿ, ಸಾವಿರಾರು ವರ್ಷಗಳ ಹಿಂದೆ ಜರ್ಮನಿಯಲ್ಲೂ ಋಷಿಗಳಿಗಿದ್ದರು. ನಮ್ಮದೂ ನಿಮ್ಮದೂ ಒಂದೇ ಸಂಸ್ಕೃತಿ. ವೇದಗಳನ್ನು ಸೃಷ್ಟಿಸಿದವರು ನಮ್ಮ ಪೂರ್ವಿಕರು. ಆದರೆ ಈ ನಾಡಿನ ಪೂರ್ವ ಸಂಸ್ಕೃತಿಯನ್ನು ಕ್ರೈಸ್ತರು ನಾಶ ಮಾಡಿದರು. ಇನ್ನೂ ಭಾರತದಲ್ಲಿ ಸಂಪೂರ್ಣ ನಾಶಮಾಡಲು ಅವರಿಗೆ ಸಾಧ್ಯವಾಗಿಲ್ಲ. ಆರ್ಯ ಸಂಸ್ಕೃತಿಯನ್ನು ಕಾಪಾಡಲೆಂದು ನಮ್ಮ ಅಸೋಸಿಯೇಶನ್ ಜನ್ಮ ತಾಳಿದೆ. ನಾವೆಲ್ಲರು ಶ್ರೀಮಂತರು. ನಿಮ್ಮ ಪುಸ್ತಕಗಳನ್ನು ಪ್ರಕಟಿಸುವ ಆಸೆ ತೋರಿಸಿ ನಿಮ್ಮನ್ನು ಈ ದುರುಳರು ವಂಚಿಸಲಿದ್ದಾರೆ. ನೀವು ಅವರಿಗೆ ಬಲಿಯಾಗಬೇಡಿ ನಮ್ಮ ಸಂಸ್ಥೆ ನಿಮಗೆ ಬೇಕಾದ್ದನ್ನು ಮಾಡುತ್ತದೆ.’ ಪ್ರೆಸಿಡೆಂಟ್ ತನ್ನ ಜನರನ್ನು ಒಪ್ಪಿಗೆಗಾಗಿ ನೋಡಿದ. ಐದುಮುಖಗಳೂ ಆರನೆಯದರಂತೆಯೇ ಹೊಂದುತ್ತಿದ್ದವು, ಒಪ್ಪಿಗೆಯಲ್ಲಿ ತೂಗುತ್ತಿದ್ದವು, ನಿರಾಕರಣೆಯಲ್ಲಿ ಅಲ್ಲಾಡುತ್ತಿದ್ವು.

ನಾನು ತಡವರಿಸುತ್ತ ಹೇಳಿದ್ದನ್ನು ರಾಮಾನುಜನ್ನರು ಪುಷ್ಟೀಕರಿಸಿದರು.

‘ಜರ್ಮನಿಯಲ್ಲಿ ‘ಆರ್ಯ’ ಎಂಬ ಪದವನ್ನು ಹೇಗಾದರೂ ನೀವು ಬಳಸಬಲ್ಲಿರಿ ಹೇಳಿ. ಹಿಟ್ಲರ್‌ನ ನೆನಪಾಗುತ್ತದಲ್ಲವೆ? ಅವನು ಈ ಪದ ಬಳಸಿ ಯಹೂದ್ಯದರನ್ನೆಲ್ಲ ಕೊಂದನಲ್ಲವೆ?’

ಆರು ಮುಖಗಳೂ ಒಂದಾಗಿ ನಕ್ಕವು.

‘ನಿಮಗೆ ತಿಳಿಯದು, ಹಿಟ್ಲರನೂ ಕ್ರೈಸ್ತನೇ, ನಾಜಿಗಳ ಕೃತ್ಯ ಕ್ರೈಸ್ತರ ಕಾರಾಸ್ತಾನವೆಂದೆ ತಿಳಿಯಿರಿ. ಅಲ್ಲದೆ’ ಗುಟ್ಟಾಗಿ ಸೆಕ್ರಟರಿ ಹೇಳಿದ: ‘ಆರ್ಯ ಶಬ್ದವನ್ನು ನಾವು ಸದ್ಯ ಉಪಯೋಗಿಸುತ್ತಿಲ್ಲ. ನಾವು ರಾಜಕೀಯಕ್ಕೆ ಇಳಿಯುತ್ತಿದ್ದೇವೆ. ತಪ್ಪರ್ಥ ಬರುವಂತ ಮಾತನ್ನು ಆಡುವುದಿಲ್ಲ. ನಿಮಗೆ ಹೇಳಿದೆವು ಅಷ್ಟೆ.’

ವೈಸ್‌ಪ್ರೆಸಿಡೆಂಟ್ ಕೋಪದಲ್ಲಿ ಹೇಳಿದ. ನಾವು ಎಷ್ಟು ಬಲಶಾಲಿಗಳೆಂಬುದು ಇಲ್ಲಿಯ ಕ್ರೈಸ್ತ ಮಠಗಳಿಗೆ ಗೊತ್ತು. ನಮಗೊಂದು ಉತ್ಸವದಲ್ಲಿ ಸ್ಟಾಲ್ ಬೇಕೆಂದು ಕೇಳಿದರೆ ಕೊಡಲೇ ಇಲ್ಲ. ಇವತ್ತಿನ ತನಕ ನಿಮ್ಮನ್ನು ಭೇಟಿ ಮಾಡದಂತೆ ತಡೆದಿದ್ದರು ಬೇರೆ. ಕ್ರೈಸ್ತರು ಇಡೀ ಜಗತ್ತನ್ನು ಆವರಿಸಲು ಹಲವು ವೇಷಗಳಲ್ಲಿ ಬರುತ್ತಾರೆ – ನೀವು ಬಲಿಯಾಗಬಾರದು. ಭಾರತ, ನಮಗೆ ಉಳಿದಿರುವ ಭರವಸೆ. ಆರ್ಯ ಸಂಸ್ಕೃತಿಯನ್ನು ಜಗತ್ತಿನಲ್ಲಿ ಪ್ರತಿಷ್ಠಾಪಿಸಲು ನಾವು ಹೊರಟಿದ್ದೇವೆ. ಈಗಾಗಲೇ ಮಹರ್ಷಿಗಳು ಮಾಡುತ್ತಿರುವ ಕೆಲಸಕ್ಕೆ ರಾಜಕೀಯ ಬೆಂಬಲ ಒದಗಿಸಲು ನಾವಿರುವುದು….’

ರಾಮಾನುಜನ್ನರು ಭಾಷಾಂತರಿಸಿದ ಭಕ್ತಿ ಸಾಹಿತ್ಯದ ಬಗ್ಗೆ ಅವರಿಗೆ ಹೇಳಲು ಪ್ರಯತ್ನಿಸಿದೆ. ಷಣ್ಮುಖರಿಗೆ ಅದರಲ್ಲಿ ಅಂತಹ ಆಸಕ್ತಿಯಿದ್ದಂತೆ ಕಾಣಲಿಲ್ಲ. ನಿಮ್ಮಿಬ್ಬರ ಪುಸ್ತಕಗಳನ್ನು ನಾವೇ ಪ್ರಕಟಿಸುತ್ತೇವೆ ಎಂಬ ಆಶ್ವಾಸನೆ ಕೊಡುತ್ತ ಪ್ರೆಸಿಡೆಂಟ್ ನನ್ನ ಮಾತಿಗೆ ತಲೆ ಹಾಕಿದ: ‘ಪ್ರಕಟಣೆಯ ಪ್ರಶ್ನೆಯೇ ಇಲ್ಲ – ನೋಡಿ. ಈಗಾಗಲೇ ನಮ್ಮ ಪುಸ್ತಕಗಳಿಗೆ ಪ್ರಕಾಶಕರಿದ್ದಾರೆ. ಈ ಪ್ರಕಾಶಕರು ಯಾವ ಧರ್ಮದ ಪ್ರಚಾರಕರೂ ಅಲ್ಲ…?’

ಮತ್ತೆ ಷಣ್ಮುಖ ನಗು ನಮಗೆ ಎದುರಾಯಿತು

‘ನಿಮಗೆ ಈ ದೇಶಗಳ ರಾಜಕೀಯ ತಿಳಿಯುವುದಿಲ್ಲ. ಮೂರು ಸಾವಿರ ವರ್ಷಗಳ ತನಕ ವೇದಗಳನ್ನು ನಮ್ಮಿಂದ ಮುಚ್ಚಿಟ್ಟರು. ಗಯಟೆ ಬಿಟ್ಟರೆ ಈ ದೇಶದಲ್ಲಿ ಒಬ್ಬನೇ ಒಬ್ಬ ದೊಡ್ಡ ಲೇಖಕ ಹುಟ್ಟಲಿಲ್ಲ. ನಾವು ಈಗ ಎಲ್ಲೆಲ್ಲೂ ಇದ್ದೇವೆ; ವ್ಯಾಪಾರದಲ್ಲಿ, ಸಂಸ್ಕೃತಿಯಲ್ಲಿ, ರಾಜಕೀಯದಲ್ಲಿ, ವ್ಯವಹಾರದಲ್ಲಿ, ಪತ್ರಿಕೆಗಳಲ್ಲಿ, ಇನ್ನು ಮುಂದೆ ಕ್ರೈಸ್ತ ಸಂಚು ನಡೆಯುವುದಿಲ್ಲ. ಮಹರ್ಷಿಗಳು ಧಾರ್ಮಿಕವಾಗಿ ಕೆಲಸ ಮಾಡಲಿ. ನಾವು ರಾಜಕೀಯ ಬೆಂಬಲವನ್ನು ಅವರಿಗೆ ಕೊಡಲಿದ್ದೇವೆ. ನೀವು ಒಂದು ತಿಂಗಳು ನಮ್ಮ ಅತಿಥಿಗಳಾಗಿ ಇರಿ. ಓಡಾಡಿಸಿ, ನಾವು ಮಾಡುತ್ತಿರುವ ಕೆಲಸ ತೋರಿಸಿಕಳಿಸುತ್ತೇವೆ…’

‘ಇಲ್ಲ – ಕ್ಷಮಿಸಿ ನಮಗೆ ಬೇರೆ ಕೆಲಸವಿದೆ’ ಎಂದು ಹೊರಟೆವು. ‘ಬೇರೆ ಲೇಖಕರು ಯಾರಿದ್ದಾರೆ?’ ಎಂದು ಕಾರ್ಯದರ್ಶಿ ಕೇಳಿದ. ರಾಮಾನುಜನ್ನರ ಟ್ಯಾಕ್ಸಿ ಆಗಲೇ ಕಾದಿತ್ತು. ನನ್ನ ಪ್ಯಾಕಿಂಗ್ ಉಳಿದಿತ್ತು. ನಾನು ‘ದಿಲೀಪ್, ಮಹಾಶ್ವೇತೆ, ಕಮಲಾದಾಸ್ ಇದ್ದಾರೆ’ ಎಂದೆ. ಈ ಎಲ್ಲವೂ ಅವರಿಗೆ ಕೇವಲ ಹೆಸರುಗಳಷ್ಟೇ ಯಾರ ಕೃತಿಯನ್ನೂ ಅವರು ಓದಿರುವಂತೆ ಕಾಣಲಿಲ್ಲ. ಸೆಕ್ರೆಟರಿ ಉತ್ಸಾಹದಿಂದ ಅವರನ್ನು ಕರೆಯಲು ಹೋದ.

ನಾನು ಆಶ್ಚರ್ಯಪಡುತ್ತ ನನ್ನ ರೂಮಿಗೆ ಹೋದೆ.

* * *

ಉತ್ಸವದಲ್ಲಿ ನಾಮ ಹಾಕಿ ಜುಟ್ಟು ಬಿಟ್ಟ. ಕೃಷ್ಣ ಪಂಥದ ಬಿಳಿಯರನ್ನು ಕಂಡಿದ್ದೆ. ನನಗೆ ಭಾಗವತವನ್ನು ಮಾರಲು ಪ್ರಸಾದ ತಿನ್ನಿಸಲು ಅವರು ಕಾತರರಾಗಿದ್ದರು. ಅವರ ವೇಷ, ಭೂಷಣ, ಸಸ್ಯಾಹಾರದ ವ್ರತ- ಇವಕ್ಕಿಂತ ಈ ಸೂಟು ತೊಟ್ಟವರ ಹುರುಪಿನ ನಿಷ್ಠೆ ಬೇರೆಯದೇ ಆದ, ರಾಜಕೀಯ ಎನ್ನಬಹುದಾದ, ಬಗೆಯದಾಗಿತ್ತು.

ಪೂರ್ವ ಮತ್ತು ಪಶ್ಚಿಮಗಳು ಸಂಧಿಸಿದಾಗ ಹುಟ್ಟಿಕೊಳ್ಳುವ ಈ ಬಗೆಯ ವಿಶೇಷ ಅದರ ಭೋಳೇತನದಲ್ಲಾಗಲಿ, ತೀವ್ರತೆಯಲ್ಲಾಗಲಿ, ಪೂರ್ವದ ನೈಜ ತೊಳಲಾಟಕ್ಕೂ ಉತ್ತರವಲ್ಲ

ಪಶ್ಚಿಮದ ನೈಜ ಹುಡುಕಾಟಕ್ಕೂ ಉತ್ತರವಲ್ಲ

ಎಂಬುದಷ್ಟು ನನಗೆ ಖಚಿತವಾಗಿತ್ತು. ದೂರದರ್ಶನದ ವರದಿಯಿಂದ ನನ್ನ ಭಾರತೀಯ ಸ್ವಾಭಿಮಾನಕ್ಕೆ ಭಂಗವಾಗಿದ್ದರೂ ಈ ಷಣ್ಮುಖರ ಆರ್ಷ ಬಾವುಟ ಬೀಸಲು ನಾನು ತಯಾರಿರಲಿಲ್ಲ.

ರುಜುವಾತು-೨೭, ಜನವರಿ-ಮಾರ್ಚ್, ೮೭

* * *