‘ಬಿಚ್ಚು’ (ಲಾರೆನ್ಸ್)

‘ಜೀವನದಲ್ಲಿ ಅಂತರ್ಗತವಾದ ವಿನಾಶಕಾರಕ ದ್ರವ್ಯದಲ್ಲಿ ಮುಳುಗು’ (ಕಾನ್ರಾಡ್)
‘ವೈಪರೀತ್ಯಗಳು ಸ್ವರ್ಗದ ಬಾಗಿಲನ್ನು ತೆರೆಯುತ್ತವೆ’ (ಬ್ಲೇಕ್)

ಆದರೆ:

ಲಾರೆನ್ಸ್‌ಗೆ ಬದುಕಿನ ಮೂಲವಾದ ಕಾಮದ ನಾಶಕ್ಕಿಂತ ವ್ಯಕ್ತಿಯ ಸಮುದಾಯ ಪ್ರಜ್ಞೆಯ ನಾಶವೇ ಆಧುನಿಕ ಯಂತ್ರ ನಾಗರಿಕತೆಯ ಘೋರ ಅಪರಾಧವೆನ್ನಿಸಿತ್ತು.

ವಿನಾಶಕಾರಕ ಪ್ರವೃತ್ತಿಗಳನ್ನು, ಪರವಶನೆಂಬಂತೆ ನೋಡಿದ್ದ ಕಾನ್ರಾಡ್‌ಆ ದಿಗಿಲಿನಲ್ಲಿ ಎತ್ತಿ ಹಿಡಿದಿದ್ದು ವ್ಯವಸ್ಥೆಯನ್ನು, ನಾಗರಿಕತೆಯನ್ನು, ದಿನನಿತ್ಯದ ಅಚ್ಚುಕಟ್ಟುಗಳನ್ನು;

ಹೊಂದಾಣಿಕೆಗಳನ್ನು ತಿರಸ್ಕರಿಸಿದ ಬ್ಲೇಕ್ ಕೇವಲ ಮುಗ್ಧತೆಯೂ ಅಲ್ಲದ, ಕೇವಲ ವಿವೇಕವೂ ಅಲ್ಲದ ಸಮಗ್ರತೆಯನ್ನು ಮನುಷ್ಯ ತನ್ನ ಕಲ್ಪಕ ಶಕ್ತಿಯಲ್ಲಿ ಮರಳಿ ಹೊಂದುವುದರ ದ್ರಷ್ಟಾರನಾದ.

* * *

ಫಿಲೋಕ್ಟಿಕಸ್ ಒಬ್ಬ ಗ್ರೀಕ್ ಯೋಧ. ಅವನು ಗಾಯಗೊಂಡ. ಗಾಯ ಹುಣ್ಣಾಗಿ ಅಸಹ್ಯ ನಾರಲು ಶುರುವಾಯಿತು. ಎಷ್ಟೆಂದರೆ, ಅವನು ಜನರಿಂದ ದೂರವಾಗಿ ಒಬ್ಬಂಟಿ ಬದುಕ ಬೇಕಾಯ್ತು. ಆದರೆ ಅವನ ಬಳಿ ಎಂದೂ ಗುರಿ ತಪ್ಪದ ಮಾಂತ್ರಿಕ ಶಕ್ತಿಯ ಒಂದು ಬಿಲ್ಲಿತ್ತು. ಅದರಿಂದಾಗಿ, ಆಪತ್ತಿನಲ್ಲಿ ಅವನ ದೇಶದ ಜನ ಅವನ ಮೊರೆಹಯೋಗಬೇಕಾಗುತ್ತಿತ್ತು.

ನಾರುವ ಹುಣ್ಣನ್ನೂ ಮಾಂತ್ರಿಕ ಬಿಲ್ಲನ್ನೂ ಒಟ್ಟಿಗೇ ಪಡೆದಿದ್ದ ಫಿಲೋಕ್ಟಿಕಸ್ಸನ್ನು ಅಮೆರಿಕನ್ ಚಿಂತಕನೊಬ್ಬ ನಮ್ಮ ಕಾಳದ ರೋಗಗ್ರಸ್ತ ಕಲಾವಿದನಿಗೆ ಸಂಕೇತ ಮಾಡುತ್ತಾನೆ. ಅವನ ಹುಣ್ಣು ನಾರುವುದಕ್ಕೂ, ಸರ್ವಹಿತ ಕಾಯಬಲ್ಲ ಮಾಂತ್ರಿಕ ಬಿಲ್ಲು ಅವನ ಬಳಿಯಿರುವುದಕ್ಕೂ ಸಂಬಂಧವಿದೆಯೆಂದು ತಿಳಿದಾಗ, ತಮ್ಮ ವೇದನೆ ಮತ್ತು ವ್ಯಾಧಿಯಿಂದಲೇ ಲೋಕ ಕಲ್ಯಾಣ ಸಾಧಿಸಬಲ್ಲಂಥ ಸೃಜನಶೀಲರಾದ ದಾಸ್ತೋವಸ್ಕಿ, ಬಾದಿಲೇರ್ ರವರ ವ್ಯಕ್ತಿವ ಒಗಟಾಗುತ್ತದೆ.

ಎಲ್ಲ ಮನೋರೋಗಿಗಳೂ ಸಾಹಿತಿಗಳಾಗುವುದಿಲ್ಲ. ಸಾಹಿತಿ ಗಟ್ಟಿಗ; ಹಿಸ್ಟೀರಿಯಾವನ್ನು ಅದುಮಿಕೊಳ್ಳಬಲ್ಲವ. ಬಿಚ್ಚುವುದು ಮಾತ್ರವಲ್ಲ, ಕಟ್ಟುವುದೂ ಅವನು ಅನುಭವಿಸುವ ಅನಿವಾರ್ಯ ಒತ್ತಡ.

ತನ್ನ ಹುಣ್ಣನ್ನು ಸಾರಿಕೊಳ್ಳುವ ಸ್ವಪ್ರದರ್ಶನರತಿಯಲ್ಲಿ ಸುಖ ಕಾಣಲು ತೊಡಗಿದವನು ತನ್ನ ಸೃಜನಶೀಲತೆಯನ್ನು ಬತ್ತಿಸಿಕೊಂಡಿದ್ದಾನೆ ಎಂದರ್ಥ. ನಾಗರಿಕತೆ ಮುಚ್ಚಿಡುವ ಘೋರ ಸತ್ಯಗಳನ್ನು ತೀವ್ರವಾಗಿ ಅನುಭವಿಸಲೆಂದು ತನ್ನನ್ನೇ ಗಿನಿಪಿಗ್ ಮಾಡಿಕೊಂಡ ಫ್ರೆಂಚ್ ಕವಿ ಬಾದಿಲೇರ್ ಪಾಪದ ರುಚಿಯನ್ನು ಕಾಣಿಸಿದ ರೀತಿಯೇ ಎಲಿಯಟ್‌ನಂಥ ಕವಿಯ ಧರ್ಮಶ್ರದ್ಧೆಗೆ ಆಳವನ್ನು ತಂದಿತು. ಕೇವಲ ಸ್ವಪ್ರದರ್ಶನರತಿ ಇದನ್ನು ಸಾಧಿಸಲಾರದು.

* * *

‘ರಸಪ್ರಜ್ಞೆ ಸ್ವಕೇಂದ್ರ ಮುಕ್ತಿಯಿಂದ ಮಾತ್ರ ಲಭಿಸತಕ್ಕ ಪ್ರಜ್ಞೆ’ ಎನ್ನುತ್ತಾರೆ ಕನ್ನಡದ ಹಿರಿಯ ಕವಿ ಪುತಿನ. ಅವರ ರಸಪ್ರಜ್ಞೆಯಲ್ಲಿ ಬರುವ ಈ ಮಾತುಗಳನ್ನು ಮೇಲಿನದರ ಹಿನ್ನೆಲೆಯಲ್ಲಿ ಚಿಂತಿಸಬೇಕು:

ಭವಸಾಗರದಲ್ಲಿ ಪುರುಷ ಸ್ವಭಾವಬದ್ಧ, ಜೀವಕಾಮ ನಿಯುಕ್ತ, ಯೋಗಕ್ಷೇಮ ಚಿಂತಾಮಗ್ನ, ರಾಗದ್ವೇಷಾದಿಗಳಿಂದ ಛಿದ್ರಿತ, ಅಹಂಕಾರ ಮಮಕಾರಗಳಿಂದ ಸೀಮಿತರಸಸ್ತರದಲ್ಲಿ ಆತ ಸ್ವಭಾವ ಮುಕ್ತ, ಯೋಗಕ್ಷೇಮ ಕಾತರವಳಿದವನು. ಅರಿಷಡ್ವರ್ಗವನ್ನು ನಿಯಂತ್ರಿಸಬಲ್ಲ ಊರ್ಜಾವಂತಭವಸ್ತರದಲ್ಲಿ ಆತ ಪಕ್ಷವರ್ತಿ, ಪ್ರತಿಷ್ಠಾಕಾಮಿ; ರಸಸ್ತರದಲ್ಲಿ ಸಾಕ್ಷಿ, ಧರ್ಮದೃಕ್, ಪಕ್ಷಪಾತರಹಿತ, ನ್ಯಾಯಪರ, ವಿನಯಶೀಲ, ಭವಸ್ತರದಲ್ಲಿ ಶೀಘ್ರದುಃಖಿ, ರಸಸ್ತರದಲ್ಲಿ ಅಶುತೋಷಿ

ತಮ್ಮ ತಮ್ಮ ಸ್ವಭಾವವನ್ನು ಬಿಟ್ಟುಕೊಡುವುದು ಯಾರಿಗೂ ಸುಲಭವಾಗಿ ಕಾಣುತ್ತಿಲ್ಲ; ಏಕೆಂದರೆ ಅದು ಅವರವರ ದೇಹಪ್ರಕೃತಿ, ಹುಟ್ಟುಗುಣಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರಗಳಿಂದ ನಿಯತವೂ ನಿಯಂತ್ರಿತವೂ ಆದದ್ದು. ಎಲ್ಲ ಜೀವಿಗಳಿಗೂ ಸಾಧಾರಣವಾಗಿರುವ ಜೀವಕಾಮ ತುಂಬ ಪ್ರಬಲವಾದ ಶಕ್ತಿ, ಅದನ್ನು ದಮಿಸಿ ನಿಯಂತ್ರಿಸಬಲ್ಲ ರಸೋರ್ಜೆ ಪ್ರೌಢಮಾನವರಲ್ಲಿ ಮಾತ್ರ ಹುಟ್ಟೀತು. ಊರ್ಜೆ ಹರಡಿರುವೆಡೆಯಲ್ಲಿ ಅವ್ಯವಸ್ಥೆಯಿರದು. ಅಂದಗೇಡಿತನವಿರದು. (ಪುಟ, ೧೦೧೧)

ನಮ್ಮ ಕಾಲದಲ್ಲಿ ಲೇಖಕ ನಮಗೆ ಅಧಿಕೃತವೆನ್ನಿಸಲು ನರಕದ ಜ್ಞಾನವಿದ್ದೂ ಅವನು ಕಲ್ಯಾಣದ ಕಲ್ಪನೆಯುಳ್ಳವನೆನ್ನಿಸಬೇಕು; ಬೇಂದ್ರೆಯಂತೆ ತೀವ್ರ ಜೀವಕಾಮಿಯಾಗಿದ್ದೂ ಆತ್ಮಕಾಮಿಯೆನ್ನಿಸಬೇಕು. ಹೆದೆಯೇರಿಸಿದ ಬಿಲ್ಲು ಸುಲಭವಾಗಿ ಬಾಗುವಂಥದು ಎನ್ನಿಸಬಾರದು. ‘ಸ್ವಕೇಂದ್ರ ಮುಕ್ತಿ’ ತರಬಲ್ಲಂಥ ಸಾಹಿತ್ಯ, ಅಥವಾ ಅಂಥ ಮುಕ್ತಿ ಬೆಲೆಯುಳ್ಳದ್ದು ಎಂದು ನಮಗೆ ಅನ್ನಿಸುವಂಥ ಸಾಹಿತ್ಯ, ವಿನಾಶಕಾರಕ ಶಕ್ತಿಗಳ ಜೊತೆ, ವ್ಯಾಧಿಯ ಜೊತೆ ವ್ಯವಹರಿಸಿ ಗೆದ್ದಿರುತ್ತದೆ; ನರಕ ದರ್ಶನ ಮಾಡಿಸಬಲ್ಲುದಾಗಿರುತ್ತದೆ. ಅಂದರೆ ಅದು ಜೀವನಾನುಭವದ ವಿವರಗಳಲ್ಲಿ, ಹಾದಿ ಬೀದಿಗಳಲ್ಲಿ ಒಡನಾಡುವ ಭಾಷೆಯಲ್ಲಿ ಮೈಚಳಿಬಿಟ್ಟು ವ್ಯವಹರಿಸ ಬಲ್ಲುದಾಗಿರುತ್ತದೆ.

ಐರೋಪ್ಯ ಸಂಸ್ಕೃತಿಯ ಧಾಳಿಯಲ್ಲಿ ಭಾರತೀಯ ಪಿತೃಪರಂಪರೆಯ ಜ್ಞಾನವನ್ನು ನಮ್ಮೆಲ್ಲರಿಗಾಗಿ ಉಳಿಯುವಂತೆ ಉರಿಸುತ್ತಿರುವ ಕವಿ ಪುತಿನರಿಗೆ ನಮಸ್ಕಾರ. ಅವರಿಗೆ ನಮಸ್ಕರಿಸಿ, ಪಿತೃಪರಂಪರೆ ನಮಗೆ ಹೇಗೆ ನಿತ್ಯ ಬಳಕೆಯ ವಸ್ತುವಾಗಬಲ್ಲುದೆಂದೂ, ಪಿತೃ ಋಣವನ್ನು ಸಲ್ಲಿಸುವುದರ ಜೊತೆಗೇ, ಹೇಗೆ ನಮ್ಮ ನಾಡಿನ ದಲಿತ ಸ್ವಾಭಿಮಾನಿಯಾದ ಜೀವಿಯಾಗಬಲ್ಲನೆಂದೂ ನಮ್ಮ ಜನಾಂಗ ಹುಡುಕಿಕೊಳ್ಳಬೇಕಾಗಿದೆ. ಸಾಂಸ್ಕೃತಿಕವಾಗಿಯೂ ಇದು ಅನಿವಾರ್ಯ. ಸಂಸ್ಕೃತದ ರಾಜಮಾರ್ಗ ಭವ್ಯವಾಗಿದೆ. ಆದರೆ ಅಲ್ಲಿ ಓಡಾಡುವವರು ವಿರಳ. ದೇಸಿಯ ಒಳಮಾರ್ಗಗಳು ದುಡಿಯುವ ಜನರಿಂದ ಹಲವು ಭಾಷೆಗಳ ಗಿಜಿಬಿಜಿಯಲ್ಲಿ ಕಿಕ್ಕಿರಿದಿದೆ; ಅದರಲ್ಲಿ ಅನುಭವದ ಸಂಪತ್ತಿದೆ; ಮಣ್ಣು ಬೆವರುಗಳ ಗಂಧವಿದೆ.

* * *

ಈ ತಿಂಗಳು ನಡೆದ ಮೈಸೂರಿನ ದಸರಾ ಕವಿ ಸಮ್ಮೇಳನದಲ್ಲಿ ನಾನು ಕಂಡದ್ದು; ಬಂಡಾಯ ಆಂದೋಲನದಿಂದ ಪ್ರಭಾವಿತರಾದವರ ನಿರ್ಭಿಡೆಯಾದ ಸ್ವಭಾವೋಕ್ತಿಯ ಪ್ರದರ್ಶನ; ಸ್ವಭಾವೋಕ್ತಿ ಮತ್ತು ಮಾತಿನ ಲಯಗಳನ್ನು ಸಾಂಕೇತಿಕ ಅರ್ಥಗಳಿಗೆ ತಿರುಗಿಸುವ ನವ್ಯರ ಪ್ರಯತ್ನ; ಸ್ವಂತದ ಚಹರೆ ಛಾಪುಗಳಿಗೆ ಅವಕಾಶವೇ ಇಲ್ಲದಂತಿದ್ದರೂ ಮರುಳುಗೊಳಿಸಬಲ್ಲಂಥ (ದೇವೇಂದ್ರಕುಮಾರ ಹಕಾರಿಯವರ) ಅನುಭಾವ ಪದ; ನಿಯಮಬದ್ಧ ಶಿಲ್ಪದ ಇಬ್ಬರು ಹಿರಿಯ ಕವಿಗಳ ಪದ್ಯಗಳು. ಶಿವರುದ್ರಪ್ಪನವರು ಛಂದೋಬದ್ಧವಾಗಿಯೇ ಬರೆಯಬೇಕಾದವರು ಎನ್ನಿಸಿತು. ನಿತ್ಯದ ಮಾತಿನಂತೆಯೇ ಆಕಾರಹೀನವಾದ ಸಪ್ಪೆ ಪದ್ಯಗಳ ನಡುವೆ, ಬಂಡಾಯದ ಉಬ್ಬರಗಳ ನಡುವೆ ಯುವಕವಿ ಪ್ರತಿಭಾರ ಪದ್ಯ ತನ್ನ ಚೆಲ್ಲು, ಚುರುಕು, ಉಲ್ಲಾಸಗಳಲ್ಲಿ ಮದುವೆ ಮನೆಗೆ ಕೆಂಪು ರೇಷ್ಮೆ ಸೀರೆಯುಟ್ಟುಹೋದ ಹೆಣ್ಣೋಬ್ಬಳನ್ನು ಒಳಗಣ್ಣಿಂದ ಕಂಡಿತು. ಆದರೆ ಉಳಿದವರ ಸಲೀಸು ಮಾತಿನ ಪದ್ಯಗಳು ಕೇವಲ ಸಲೀಸು ಮಾತಿನಂತಿದ್ದವು; ಬೀದಿಯ ಬೈಗುಳವನ್ನು ವೇದಿಕೆಯ ಮೇಲಿಂದ ತಟಸ್ಥರಾಗಿ ಮತ್ತೆ ಕುರ್ಚಿಯಲ್ಲಿ ನಾವು ಕೇಳಿಸಿಕೊಂಡೆವೆಂಬುದಷ್ಟೇ ಅವುಗಳಲ್ಲಿದ್ದ ಹೊಸದು. ನವ್ಯರ ಮೂರ್ತತೆ ನೆಲಕ್ಕಂಟಿಕೊಂಡು, ಮಾತುಗಳಲ್ಲಿ ಉರುಳುತ್ತ, ಮೇಲೇರುವುದರಲ್ಲಿ ಸೋತಿತು. ಲಕ್ಷ್ಮೀನಾರಾಯಣ ಭಟ್ರ ಪದ್ಯ ವಾಸ್ತವದ ನೆಲೆಯಲ್ಲೇ ಅರ್ಥಬಿಚ್ಚಿಕೊಳ್ಳುವಂತೆ ಕಾಣಿಸಿ, ಕೊನೆಯಲ್ಲಿ ದಿಕ್ಕು ತಪ್ಪಿಸಿತು. ರಮಜಾನ ದರ್ಗಾ, ಅಬ್ದುಲ್ ಮಜೀದ್ ಖಾನ್, ಜಯಂತ ಕಾಯ್ಕಿಣಿ ಚುರುಕಾಗಿ ಮಾತಾಡಿದರು. ವೆಂಕಟೇಶಮೂರ್ತಿ, ತಿರುಮಲೇಶರು ಪದ್ಯರಚನೆಯ ಕಲೆಗಾರಿಕೆಯನ್ನು ಕಡೆಗಣಿಸಲಿಲ್ಲೆಂದು ಖುಷಿಯಾಯಿತು. ಇನ್ನೊಂದು ಸಂದರ್ಭದಲ್ಲಾದರೆ ನನಗೆ ಅತೃಪ್ತಿಯಾಗುವಂತಿದ್ದ ಪುತಿನ ಮತ್ತು ಗೋಕಾಕರ ಪದ್ಯಗಳು ಚೊಕ್ಕವಾದ ಬಂಧದಲ್ಲಿ ಈ ಹಲವು ಮಾತುಗಾರರ ವೇದಿಕೆಯ ಮೇಲಿಂದ ಉಸಿರಾಡುತ್ತ ಹೊಳೆದವು.

* * *

‘ರಸಪ್ರಜ್ಞೆ ಸ್ವಕೇಂದ್ರ ಮುಕ್ತಿಯಿಂದ ಮಾತ್ರ ಲಭಿಸತಕ್ಕ ಪ್ರಜ್ಞೆ’ ಎಂಬುದರ ಸತ್ಯವನ್ನು ಕವಿ ತನ್ನ ಸ್ವಭಾವನ್ನೂ ಜೀವನಾನುಭವವನ್ನೂ ಗಾಢವಾಗಿ ತೊಡಗಿಸಿಕೊಂಡೇ ಮತ್ತೆ ಹೊಸಬಗೆಯಲ್ಲಿ ಸಾಧಿಸಬೇಕಾಗಿದೆ ಎಂದು ಅನ್ನಿಸುತ್ತಿದೆ. ಇದಾಗದಿದ್ದಲ್ಲಿ ಕಾವ್ಯ ಅದೇ ಹಳೆಯ ಎರಕದಲ್ಲಿ ಹೊಯ್ದ ಸಾಲಭಂಜಿಕೆಗಳಂತಿರುತ್ತದೆ; ಅಥವಾ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತದೆ.

ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ‘ಕ್ರಾಂತಿ’ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು. ಅವನಿಗೆ ನಿಜವಾಗಿ ಕ್ರಾಂತಿ ಬೇಕಾಗಿಲ್ಲ; ಆದರೆ ತನ್ನ ರೋಷಾವೇಶಗಳನ್ನು ವ್ಯಕ್ತಪಡಿಸಲೊಂದು ನೆವ ಬೇಕು. ವ್ಯವಸ್ಥೆಯ ಅಗತ್ಯವನ್ನೂ ಬದಲಾವಣೆಯ ಅನಿವಾರ್ಯತೆಯನ್ನೂ ಏಕಕಾಲದಲ್ಲಿ ಅನುಭವಿಸುವಾತ ಮಾತ್ರ ಕ್ರಾಂತಿಕಾರಿಯಾಗಬಲ್ಲ. ಕ್ರಾಂತಿಯನ್ನು ಕುರಿತು ಚಿಂತಿಸಬಲ್ಲವರೆಲ್ಲರೂ ಕಾನ್ರಾಡ್‌ನ The Secret Agent ಓದಬೇಕು. ಅಲ್ಲೊಬ್ಬ ತನ್ನ ಮೈಯ ಮೇಲೆಲ್ಲ ಬಾಂಬುಗಳನ್ನು ಅಡಗಿಸಿಟ್ಟುಕೊಂಡು ತನ್ನನ್ನೂ ತನ್ನ ಸುತ್ತಲಿನವರನ್ನೂ ಏಕಕಾಲದಲ್ಲಿ ಕೊಲ್ಲಬಲ್ಲ ಅರಾಜಕತಾವಾದದ ಉಗ್ರ ತಪಸ್ವಿಯಿದ್ದಾನೆ. ಅರಾಜಕತಾವಾದಿಗಳ ಸಂಗಲಾಭದ ಮುಖೇನ ಜರ್ಮನರಿಗೆ ಗುಪ್ತಚಾರದವನೊಬ್ಬನೂ ಬರುತ್ತಾನೆ. ಅವನ ಹೆಂಡತಿ ತನ್ನ ಮೂರ್ಖ ತಮ್ಮನೊಬ್ಬನನ್ನು ಅಕ್ಕರೆಯಿಂದ ಸಾಕುತ್ತಿರುವ ಸಂಸಾರಿ ಹೆಣ್ಣು. ದುರ್ಬಲ ಮನಸ್ಸಿನ ಈ ತಮ್ಮನನ್ನು ಅವನ ಕರುಣೆ ಮೀಟಿ, ಉನ್ಮಾದಕ್ಕೆ ಒಳಪಡಿಸಿ, ಅವಳ ಖದೀಮ ಗಂಡ ಬಾಂಬ್‌ಸ್ಫೋಟ ಒಂದರಲ್ಲಿ ಅವನನ್ನು ಬಳಸಿಕೊಂಡು ಸಾಯಿಸುತ್ತಾನೆ. ಹೆಂಡತಿ ಪೆದ್ದಳಾದರೂ ಇದನ್ನು ತಿಳಿದೊಡನೆಯೇ ಮಾಂಸಕೊಯ್ಯುವ ಅಡಿಗೆಮನೆ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ, ಅಸ್ವಸ್ಥ ಪೋಲಂಡಿನ ಕಾನ್ರಾಡ್ ಅರಾಜಕ ಕ್ರಾಂತಿಕಾರಕತೆಯ ರುಚಿತಿಳಿದಿದ್ದ ಸಂಪ್ರದಾಯವಾದಿ. ಸುಖಜೀವಿಗಳಾದ ಉದಾರವಾದಿಗಳು ತಮ್ಮ ಪಾಪಪ್ರಜ್ಞೆಯಿಂದಾಗಿ ಕ್ರಾಂತಿಯ ಮಾತಾಡುವವರನ್ನು ಬೆಂಬಲಿಸುವುದು; ಮೊಡ್ಡು ಜನರ ಜೀವನಪ್ರೀತಿ ಸತ್ಯನಿಷ್ಠೆಗಳು; ಬಿರುಕುಗಳನ್ನು ಉಪೇಕ್ಷಿಸುವ ವ್ಯವಸ್ಥೆಯ ದಡ್ಡತನ; ವಿನಾಶವನ್ನು ಪ್ರೀತಿಸುವ ಮನೋವ್ಯಾಧಿ ಗ್ರಸ್ತರು ಸಾಮಾಜಿಕ ಅನ್ಯಾಯಗಳನ್ನು ದುರುಪಯೋಗಪಡಿಸಿಕೊಂಡು ಹೇಗೆ ಕಿಚ್ಚಿಬ್ಬಿಸುವುದರಲ್ಲೇ ಆಸಕ್ತರಾಗಿರುತ್ತಾರೆಂಬ ದಿಗಿಲು-ಇವೆಲ್ಲವನ್ನೂ ರಕ್ತಕ್ರಾಂತಿ, ಕೊಲೆ, ಉತ್ಪಾತಗಳ ನಮ್ಮ ಕಾಲಕ್ಕೆ ಅನನ್ಯವೆಂಬಂತೆ ಕಾನ್ರಾಡ್ ಕಾಣಿಸಿದವನು. ವ್ಯವಸ್ಥೆಯ ಪ್ರೀತಿಯನ್ನೂ, ವಿನಾಶದ ಆಕರ್ಷಣೆಯನ್ನೂ ತನ್ನೊಳಗೇ ಕಂಡುಕೊಂಡವನು ಕಾನ್ರಾಡ್. ಆದ್ದರಿಂದಲೇ ಅವನು ಕೂಡುವ ‘ಸ್ವಕೇಂದ್ರ ಮುಕ್ತಿ’ಯ ರಸಪಜ್ಞೆ ನಮಗೆ ಗಾಢವಾದ ಅನುಭವವಾಗುತ್ತದೆ.

ಕ್ಲಾಸಿಕಲ್ ಕವಿಗಳು ಮಾತ್ರ ವ್ಯವಸ್ಥೆಯನ್ನೂ ಹೊಗಳಬಲ್ಲವರು. ಉದಾಹರಣೆಗೆ ಪಂಪ ಮತ್ತು ಕಾಳಿದಾಸ. ನಮ್ಮ ಕಾಲದ, ಪ್ರಾಯಶಃ ಅನಿವಾರ್ಯವಾದ, ದುರಂತವೆಂದರೆ ಈ ಬದಲಾವಣೆಯ ಯುಗದಲ್ಲಿ ಹುಟ್ಟಿದ ಅತ್ಯುತ್ತಮ ಲೇಖಕರು ಬಿಚ್ಚುವುದರಲ್ಲಿ, ಕೊಳಕನ್ನು ನಾಶಮಾಡುವುದರಲ್ಲಿ, ಹರಿಯುವುದರಲ್ಲಿ ಎಷ್ಟು ಆಸಕ್ತರಾಗಿರುತ್ತಾರೋ, ಅಷ್ಟೇ ಹೊಸ ವ್ಯವಸ್ಥೆಯ ನಿರ್ಮಾಣದಲ್ಲಿ ಆಸಕ್ತರಾಗಿರುವುದಿಲ್ಲ. ತಮ್ಮ ಬರವಣಿಗೆಯ ತೀವ್ರತೆಗಾಗಿ ಅವರು ಈ ಬೆಲೆ ತೆತ್ತಿರುತ್ತಾರೆ. ರಷ್ಯನ್ ಕವಿ ಮಯಾಕೊವಸ್ಕಿ ಕ್ರಾಂತಿಪೂರ್ವ ಮತ್ತು ಕ್ರಾಂತಿ ಸಮಯದಲ್ಲಿ ಎಷ್ಟು ಲವಲವಿಕೆಯಿಂದ ದೇಶವನ್ನು ಬಿಗಿದಿದ್ದ ಸರಪಳಿಗಳನ್ನು ಕಡಿದು ಹಾಕಿದನೋ, ಅಷ್ಟೇ ತೀವ್ರವಾಗಿ ಹೊಸ ಉಕ್ಕಿನ ಕಾರ್ಖಾನೆಗಳನ್ನು ತೆರೆಯುವುದರ ಬಗ್ಗೆ, ಸೇತುವೆಗಳನ್ನು ಕಟ್ಟುವುದರ ಬಗ್ಗೆ, ಉತ್ಪಾದನೆ ಹೆಚ್ಚಿಸುವುದರ ಬಗ್ಗೆ ಕ್ರಾಂತ್ಯುತ್ತರ ರಷ್ಯಾದಲ್ಲಿ ಹಾಡಲಾರದೇ ಹೋದ. ಕೇವಲ ಪ್ರಚಾರವನ್ನು ಬರೆಯಲಾರದ ಅವನು, ತನ್ನ ಸೃಜನಶಕ್ತಿ ಬತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಐಸಾಕ್ ಡಾಯ್ಸಚರ್ ಹೇಳುತ್ತಾನೆ. ಇದು ನಿಜವಾದರೆ ನಾವು ಕಲಿಯಬೇಕಾದೊಂದು ಪಾಠ ಅಲ್ಲಿದೆ. ಸ್ವಭಾವದಲ್ಲಿನ ಸಿಟ್ಟು ದುಗುಡಗಳನ್ನು ಬಳಸಿಕೊಳ್ಳಬಲ್ಲಷ್ಟು ಸುಲಭವಾಗಿ ಕಲ್ಯಾಣ ದೃಷ್ಟಿಯನ್ನು ಈ ಕಾಲದಲ್ಲಿ ಸಾಹಿತ್ಯ ಬಳಸಿಕೊಳ್ಳಲಾರದೇ ಹೋಗಿದೆ. ಆದರೆ ಮಾರ್ಕ್ಸ್‌ವಾದದ ಕ್ರಾಂತಿ ಎರಡನ್ನೂ ಬೇಡುತ್ತದೆ.

ರುಜುವಾತು , ೧೯೮೧

* * *