ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ನನಗೆ ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್ಯವೇ ಹೊರತು ಇಷ್ಟವಾದ ಸಂಗತಿಯಲ್ಲ. ನಾನು ಬರೆದ ‘ಸಂಸ್ಕಾರ’, ‘ಘಟಶ್ರಾದ್ಧ’, ‘ಭಾರತೀಪುರ’ ಕಥೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ. ನೋಯಿಸಿರುವುದು ಮಾತ್ರವಲ್ಲ. ಕೆಲವರಿಗೆ ಕೋಪವನ್ನೂ ಉಂಟು ಮಾಡಿವೆ. ಹಿಂದೊಮ್ಮೆ ದಾವಣಗೆರೆಯಲ್ಲಿ ನನಗೆ ಬಹುವಾಗಿ ಉಪಚರಿಸಿ ಊಟ ಬಡಿಸಿದ ಮೃದುವಾದ ಮಾತಿನ ಮಾಹಿಳೆಯೊಬ್ಬರು ನಾನು ಹೋಗುವ ಮುಂಚೆ ನನ್ನನ್ನು ಒಳಗೆ ಕರೆದು, ”ನಮ್ಮನ್ನು ಕಂಡರೆ ಈಗ ಯಾರಿಗೂ ಆಗುವುದಿಲ್ಲ. ನಮ್ಮನ್ನೇ ಯಾಕೆ ನೀವು ಹೀಗೆ ಹಾಸ್ಯ ಮಾಡಬೇಕು? ಬೇರೆ ಜಾತಿಗಳನ್ನು ಹೀಗೆ ಹಾಸ್ಯಮಾಡಿ ಬದುಕಿ ಉಳಿಯುವುದು ಸಾಧ್ಯವೇ? ಮೂದಲಿಸಿದರೂ ಸುಮ್ಮನಿರುತ್ತಾರೆಂದು ಎಲ್ಲರೂ ಬ್ರಾಹ್ಮಣರನ್ನು ಲೇವಡಿ ಮಾಡುತ್ತಾರಲ್ಲ ಇದು ಸರಿಯೇ?” ಎಂದರು. ಅವರ ಮಾತಿನಿಂದ ನಾನು ತಬ್ಬಿಬ್ಬಾದೆ, ”ನಾನು ಬರೆದವು ಸಾಹಿತ್ಯ ಕೃತಿಗಳು, ಅವುಗಳು ಸಂಕೇತಗಳು” ಇತ್ಯಾದಿ ಹೇಳಲು ಪ್ರಯತ್ನಿಸುತ್ತ ನನ್ನ ಮುಜುಗರವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದೆ. ನನ್ನ ಕಷ್ಟಕಂಡು ಊಟಕ್ಕೆ ಬಂದವನನ್ನು ಈ ಪೇಚಿಗೆ ಸಿಕ್ಕಿಸಿದೆನಲ್ಲ ಎಂದು ಆಕೆಯೇ ಮರುಗಿದರು. ನಾನು ಬರೆದದ್ದು ಬ್ರಾಹ್ಮಣರು ಎದುರಿಸಲೇಬೇಕಾದ ಅಗತ್ಯವಾದ ಸತ್ಯ ಎಂದು ಹೇಳಲು ನನಗೆ ಬಾಯಿ ಬರಲಿಲ್ಲ. ಇಂಥ ಸಂಕೋಚಗಳಿಂದಾಗಿಯೇ ನಾವು ಲೇಖಕರಾಗುವುದೆಂದು ಕಾಣಿಸುತ್ತದೆ. ಸಂಕೇತಗಳ ಮೊರೆ ಹೋಗುವುದೂ ಈ ಕಾರಣಕ್ಕಾಗಿಯೇ ಇರಬೇಕು.

ಬ್ರಾಹ್ಮಣರನ್ನು ಟೀಕಿಸಲು ನಾನು ಈಚೆಗೆ ಹಿಂಜರಿಯುವುದಕ್ಕೆ ಇನ್ನೊಂದು ಕಾರಣವಿದೆ. ಬ್ರಾಹ್ಮಣೇತರ ‘ಬುದ್ಧಿ ಜೀವಿಗಳು’ ಇದೂ ಒಂದು ಬ್ರಾಹ್ಮಣ ತಂತ್ರ ಎಂದು ತಿಳಿಯುವುದುಂಟು. ಬ್ರಾಹ್ಮಣೇತರರ ನಡುವೆ ಜನಪ್ರಿಯತೆ ಗಳಿಸಿಕೊಳ್ಳಲು ಜಾಣ ಬ್ರಾಹ್ಮಣರ ಉಪಾಯವಿದು ಎಂದೇ ಸಂದೇಹದಿಂದ ಅವರು ನೋಡುತ್ತಾರೆ. ನೋಡಲಿ ಏನಂತೆ? ಎಂದುಕೊಳ್ಳುವೆ. ಆದರೂ ಸಮೂಹದ ಅಭಿಪ್ರಾಯಗಳು ಕ್ರಮೇಣ ನಮ್ಮ ಮೇಲೆ ಪರಿಣಾಮ ಮಾಡುತ್ತವೆ. ಜಾತಿ ವಿಷಯದಲ್ಲಿಯೂ ನಮ್ಮಲ್ಲಿ ಬಹಳ ಜನರಿಗೆ ಪಾರದರ್ಶಕವಾಗಿ ಆಲೋಚಿಸುವುದು ಅತ್ಯಂತ ಕಷ್ಟದ ವಿಷಯವಾಗಿಬಿಟ್ಟಿದೆ. ಎಲ್ಲ ಜಾತಿಯ ಬುದ್ಧಿವಂತರನ್ನು ಕಾಡುವ ಸಮಸ್ಯೆಯಿದು. ಕಳ್ಳನ ಮನಸ್ಸು ಹುಳ್ಳಹುಳ್ಳಗೆ. ಹುಳಿ ಹೆಚ್ಚಾದಷ್ಟು ಮಾತಿನ ಸಕ್ಕರೆ ತಿನ್ನುತ್ತೇವೆ, ತಿನ್ನಿಸುತ್ತೇವೆ. ಹಳಬರೇ ವಾಸಿ; ಯಾವ ಜಾತಿಯವನು ನೀನು ಎಂದು ನೇರ ಕೇಳಿಬಿಡುತ್ತಿದ್ದರು. ಜಾತಿಸೂಚಕವಲ್ಲದ ಹೆಸರುಗಳನ್ನು ಇಟ್ಟುಕೊಂಡವರನ್ನು ನಾವಾದರೋ “ಯಾರು ಅಪ್ಪ?, ಯಾರು ಅಜ್ಜ?. ಯಾವ ಊರು?” ಇತ್ಯಾದಿ ಕೇಳಿ ಅಗತ್ಯ ಮಾಹಿತಿ ಸಂಪಾದಿಸಲು ಪ್ರಯತ್ನಿಸುತ್ತೇವೆ. ಇನ್ನೊಂದು ಜಾತಿಯಲ್ಲಿ ಯಾರಾದರೊಬ್ಬರನ್ನು ಬೈಯಬೇಕೆನ್ನಿಸಿದರೆ, ಅವರಲ್ಲಿ ಹೊಗಳಲೆಂದು ಒಬ್ಬನನ್ನು ಇಟ್ಟುಕೊಂಡಿರುತ್ತೇವೆ, ನಮ್ಮನ್ನು ಆ ಜಾತಿಯವರು ತಪ್ಪು ತಿಳಿಯಬಾರದಲ್ಲ ಅದಕ್ಕಾಗಿ. ಹೆಚ್ಚು ಜಾಣರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ತನ್ನ ಜಾತಿಯವನೇ ಆದ ಒಬ್ಬನನ್ನು ಸಮಾಬೈದು ನಂತರ ಪರಜಾತಿಯವನೊಬ್ಬನನ್ನು ಬೈಯ್ಯುವುದುಂಟು. ಇವೆಲ್ಲ ನಮ್ಮೆದುರು ಜರುಗುತ್ತಿರುವಾಗ ದಾಕ್ಷಿಣ್ಯಕ್ಕಾಗಿ ತಲೆತೂಗುತ್ತಾ ತೂಗುತ್ತಾ ನಾವೂ ಸೂಕ್ಷ್ಮಜಾತಿವಾದಿಗಳಾಗಿ ಬಿಡುತ್ತೇವೆ. ಜಾತಿಯನ್ನು ನಂಬಿಕೊಂಡು ಅದರೊಳಗೇ ಬದುಕುವ ಮುಗ್ಧನಿಂದ ಆಗುವುದು ಈ ಬಗೆಯ ಅಪಾಯವಲ್ಲ. ಜಾತಿ ಕೆಟ್ಟದೆಂದು ಹೇಳುತ್ತಲೇ ತನ್ನ ಜಾತಿಯವರಲ್ಲದ ಎಲ್ಲರನ್ನೂ ಅನುಮಾನದಿಂದ ಮಾತ್ರ ನೋಡಬಲ್ಲವನಿದ್ದಾನಲ್ಲ – ಅವನು ತನ್ನ ಮನಸ್ಸಲ್ಲಿರುವ ಜಾತಿಯಿಂದಾಗಿ ತನಗೇ ವಿಷಪೂರಿತನಾಗಿಬಿಡುತ್ತಾನೆ. ಅದನ್ನು ಮುಚ್ಚಿಕೊಂಡಷ್ಟೂ ಒಳ ಒಳಗೇ ಬುಸುಗುಟ್ಟುತ್ತಿರುತ್ತಾನೆ. ಪ್ರೀತಿಯೇ ಸಾಧ್ಯವಿಲ್ಲದ ಮನಸ್ತಿತಿ ಅದು. ಸಾಚಾ ಜಾತಿವಂತರ ಪ್ರಪಂಚ ಪರಿಮಿತವಾದ್ದು; ಆದರೆ ಅವರ ಮನಸ್ಸು ಪಾರದರ್ಶಕ; ಪಂಚಮರ ಬಗ್ಗೆ ಅವರ ಕ್ರೌರ್ಯ ಸ್ಪಷ್ಟ. ಎಲ್ಲೋ ಹಳ್ಳಿಯ ಬ್ರಾಹ್ಮಣರು, ಲಿಂಗಾಯತರು ಮತ್ತು ಗೌಡರು ಹಾಗಿರುತ್ತಾರೆ. ಆದರೆ ಈ ಜಾತಿಗಳಲ್ಲಿ ನಗರವಾಸಿಗಳಾಗಿ ಬುದ್ಧಿವಂತರಾದವರು ನಿತ್ಯ ಜೀವನದ ಧಾರ್ಮಿಕ ಆಚರಣೆಗಳಲ್ಲಿ ಜಾತಿಯ ನಡುವಳಿಯನ್ನು ಬಿಟ್ಟಿರುತ್ತಾರೆ; ಆದರೆ ಒಳಮನಸ್ಸಲ್ಲಿ ಜಾತೀಯವಾದಿಗಳಾಗಿರುತ್ತಾರೆ. ಜಾತಿಯ ವ್ಯಕ್ತಿಯನ್ನು ಬಿಟ್ಟ ಮೇಲೂ ಜಾತಿಗೆ ಮಾನಸಿಕವಾಗಿ ಅಂಟಿಕೊಂಡವರು ಹೆಚ್ಚು ಅಪಾಯಕಾರಿಯಾಗಿರುತ್ತಾರೆ. ಯಾಕೆಂದರೆ ಸಾಚಾ ಜಾತಿವಂತನ ಜೊತೆ ಹೋರಾಡಬಹುದು. ಇವರು ಮಾತ್ರ ಯಾವ ಪಟ್ಟಿಗೂ ಸಿಗಲಾರರು.

ಸಾಚಾ ಜಾತಿವಂತನಿಗೂ, ಛದ್ಮವೇಶದ ಜಾತೀಯವಾದಿಗೂ ಇರುವ ಅಂತರ ನೈತಿಕ ದೃಷ್ಟಿಯಿಂದಲೂ ಮುಖ್ಯವಾದ್ದು. ಸಾಚಾ ಜಾತಿವಂತ ಇವತ್ತನ ಆಧುನಿಕ ಪ್ರಪಂಚದಲ್ಲಿ ಗೊಡ್ಡಾಗಿರುತ್ತಾನೆ. ಆದರೆ ಅವನ ನೈತಿಕ ಪ್ರಜ್ಞೆ ಎಷ್ಟೇ ದೋಷಪೂರಿತವೆನ್ನಿಸಿದರೂ ಸ್ಪಷ್ಟವಾಗಿ ದಿಟ್ಟವಾಗಿ ಅವನ ಜಾತಿಯಿಂದ ಅವನಿಗೆ ಅದು ಬಂದಿರುತ್ತದೆ. “ಊರ ಗೌಡನಾಗಿ ಅವನು ಹೀಗೆ ಮಾಡಿರುವುದು ಸರಿಯೇ?” “ಅವನು ಬ್ರಾಹ್ಮಣನಾಗಿ ಹುಟ್ಟಿ ಇಂಥ ಕೆಲಸ ಮಾಡುವುದೇ?” – ಇತ್ಯಾದಿ ಮಾತುಗಳಲ್ಲಿ ಈ ನೈತಿಕಪ್ರಜ್ಞೆ ಹೊರಹೊಮ್ಮುತ್ತದೆ. ”ಬಸವಣ್ಣನ ಅನುಯಾಯಿಗಳಾಗಿ ನೀವು ಲಿಂಗಾಯತರು ಹೀಗೆ ನಡೆದುಕೊಳ್ಳುವುದೇ?” ಎಂದು ಕೇಳಿದರೆ ಜಾತಿವಂತ ವೀರಶೈವ ನಾಚಿಕೆಪಟ್ಟುಕೊಂಡಾನು. ಆದರೆ ಈ ಭಾವನೆಗಳು ಹಿಂದಿನಷ್ಟು ಈಗ ಗಟ್ಟಿಯಾಗಿ ಉಳಿದಿಲ್ಲದಿರಬಹುದು. ಹಿಂದೊಂದು ಕಾಲದಲ್ಲಿ, ಖಂಡಿತ ಗ್ರಾಮಪರಿಸರದಲ್ಲಾದರೂ, ನಾನು ಬ್ರಾಹ್ಮಣನಾಗಿರುವುದು, ಗೌಡನಾಗಿರುವುದು, ಕುರುಬನಾಗಿರುವುದು, ಕ್ಷೌರಿಕನಾಗಿರುವುದು ತನಗಾಗಿ ಮಾತ್ರವಲ್ಲ ಇಡೀ ಸಮುದಾಯಕ್ಕಗಿ ಎಂಬ ಭಾವನೆಯಿತ್ತು. ಇದಕ್ಕೆ ಕಾರಣ ಜಾತಿವೃತ್ತಿಯನ್ನು ನಿರ್ಧರಿಸುತ್ತಿದ್ದುದು ಎಂಬುದೂ ಇರಬಹುದು. ಈ ಬಗೆಯ ವೃತ್ತಿಗೂ, ಜಾತಿಗೂ ಇದ್ದ ಸಂಬಂಧ ಸಾಮಾಜಿಕ ನೆಮ್ಮದಿಗೂ, ಸ್ಥಿರತೆಗೂ ಕಾರಣವಾಗಿದ್ದುದರಿಂದಲೇ, ಜಾತಿಗಳ ನಡುವೆ ಇದ್ದ ಸಾಮರಸ್ಯ ಅನ್ಯೋನ್ಯತೆಗಳೇ ನಮ್ಮ ಸಮಾಜ ಪಾಚಿಗಟ್ಟುವುದಕ್ಕೂ ಕಾರಣವಾಯಿತು. ಹಳ್ಳಿಗಳಲ್ಲಿ ದಲಿತರನ್ನು ನಿರ್ದಯವಾಗಿ ಶೋಷಿಸುವವರೂ ಇವರೇ.

ಜಾತಿವೃತ್ತಿಗಳ ಸಂಬಂಧ ಆಧುನಿಕ ಸಮಾಜದಲ್ಲಿ – ಅಂದರೆ ನಗರಗಳಲ್ಲಿ – ಕಡಿದು ಹೋಗುತ್ತಿದೆ. ಇದು ಅನಿವಾರ್ಯ ಮಾತ್ರವಲ್ಲ, ಒಳ್ಳೆಯದು. ಇದು ಹೋಗದೆ ಈ ದೇಶಕ್ಕೆ ಚಲನಶೀಲತೆಯಿಲ್ಲ. ಆದರೆ ಪಾಶ್ಚಾತ್ಯ ಮಾದರಿಯ ಆಧುನೀಕರಣದಿಂದ ಮಾತ್ರ ಸಾಧ್ಯವಾಗಿರುವ ಈ ಚಲನಶೀಲತೆಯೂ ಆರೋಗ್ಯಕರವಾದ್ದಲ್ಲ. ಆದರೆ ನಗರೀಕರಣದ ಈ ಬಗೆಯ ಬದಲಾವಣೆಯೊಂದೇ ಈಗ ನಾಡಿನಲ್ಲಿ ಜರಗುತ್ತಿರುವುದು. ಇದನ್ನು ತಾತ್ವಿಕವಾಗಿ ವಿರೋಧಿಸುವ ನಮ್ಮಂಥವರೂ ಆಧುನೀಕರಣದ ಫಲಗಳು ಎಂಬುದೊಂದು ವಿಪರ್ಯಾಸ. ಇರಲಿ, ಆದರೆ ವ್ಯವಹಾರ ಪ್ರಪಂಚದಲ್ಲಿ ಹೋದದ್ದು ಮನಸ್ಸಿನ ಪ್ರಪಂಚದಿಂದ ಅಷ್ಟು ಸುಲಭವಾಗಿ ಹೋಗಲಾರದು. ಆದ್ದರಿಂದಲೇ ಇಂದಿನ ಬಿಕ್ಕಟ್ಟು ಹುಟ್ಟಿಕೊಂಡಿರುವುದು.

ಮೊಟ್ಟ ಮೊದಲು ತನ್ನ ಜಾತಿಯ ವೃತ್ತಿಯನ್ನು ಬಿಟ್ಟವನು ಬ್ರಾಹ್ಮಣ. ವೈದಿಕ ಬ್ರಾಹ್ಮಣ ಲೌಕಿಕನಾದ. ವೈದಿಕ ವೃತ್ತಿಗೇ ಅಂಟಿಕೊಂಡ ಬ್ರಾಹ್ಮಣ ಇವತ್ತು ಹಿಂದುಳಿದವನಾಗಿದ್ದಾನೆ. ಅವನು ತನ್ನ ಮಕ್ಕಳನ್ನು ವೈದಿಕರಾಗಿ ಬೆಳೆಸಲು ಖಂಡಿತ ಇಷ್ಟಪಡಲಾರ. ಕ್ರೈಸ್ತರಲ್ಲಿ ತಮ್ಮ ಮಕ್ಕಳು ‘ಪ್ರೀಸ್ಟ್‌’ಗಳಾಗುವುದು ಹೆಮ್ಮೆಯ ವಿಷಯವಾದಂತೆ ಬ್ರಾಹ್ಮಣರಲ್ಲಿ ತಮ್ಮ ಮಕ್ಕಳು ಪುರೋಹಿತನಾಗುವುದು ಸಂತೋಷ ತರುವ ವಿಷಯವೂ ಅಲ್ಲ; ಲಾಭದಾಯಕವೂ ಅಲ್ಲ. ಪುರೋಹಿತನಾದವನು ಇಡೀ ಸಮುದಾಯದ ವಿಶ್ವಾಸಕ್ಕೆ ಅನಿವಾರ್ಯವಾಗಿ ಪಾತ್ರನಾಗಿರಬೇಕಾಗುತ್ತಿತ್ತು. ಅವನು ಹೇಳುವ ಮಂತ್ರ ಕುಂಬಾರನ ಮಡಕೆಯಂತೆ ಒಂದು ಅಗತ್ಯ ನೈಜ ಪದಾರ್ಥವಲ್ಲ. ಅವನಿಗಿರುವ ಬೆಲೆ ಕೇವಲ ಉಳಿದವರ ನಂಬಿಕೆಯ ಮೇಲೆ ನಿಂತಿರುವಂಥದ್ದು. ಉಳಿದ ಜನರಲ್ಲಿ ಆ ನಂಬಿಕೆ ಹೋದದ್ದೇ ನಿರುಪಯೋಗಿಯಾದ ಪುರೋಹಿತ ನಿರುದ್ಯೋಗಿಯಾಗುತ್ತಾನೆ. ಇವತ್ತು ನನ್ನ ವಿದ್ಯಾರ್ಥಿಗಳಲ್ಲಿ ಯಾರಾದರೂ ಜುಟ್ಟು ಬಿಟ್ಟು ನಾಮವನ್ನೋ ವಿಭೂತಿಯನ್ನೋ ಧರಿಸಿದವನಿದ್ದರೆ, ಆತ ಧೀರನೇ ಇರಬೇಕು ಎನ್ನಿಸುತ್ತದೆ. ಆದರೆ ನಾನು ಬಾಲಕನಿದ್ದಾಗ ಅಗ್ರಹಾರದ ಪರಿಸರದಲ್ಲಿ ಕ್ರಾಪು ಬಿಡಲು ಧೀರನಾಗಿರಬೇಕಿತ್ತು. ಇಷ್ಟರಮಟ್ಟಿಗಾದರೂ ಬ್ರಾಹ್ಮಣ ಪ್ರಪಂಚ ಬದಲಗಿದೆ. ಪರಂಪರಾನುಗತ ಹಿಂದೂ ಸಮುದಾಯದಲ್ಲಿ ಬ್ರಾಹ್ಮಣ ವೈದಿಕವೃತ್ತಿಯವನಾಗಿದ್ದಾಗ ಧಾರ್ಮಿಕ ಆಚರಣೆಯಲ್ಲಿ ಅವನ ಅಗತ್ಯವಿತ್ತು. ಅದರೂ ಸವರ್ಣೀಯರಿಗೆ ಮಾತ್ರ, ಪಂಚಮರಿಗಲ್ಲ. ಆದರೆ ಅವನು ತನ್ನ ವೃತ್ತಿಯನ್ನು ಬಿಟ್ಟು ಲೌಕಿಕನಾದ ನಂತರ ಆ ಬಗೆಯ ಸಂಬಂಧ ಅವನಿಗೆ ಸಮಾಜದ ಜೊತೆಗಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಮುಂದಿನ ಮಾತುಗಳನ್ನು ನೋಡಬೇಕು.

ಉದಾಹರಣೆಗೆ ಕುವೆಂಪುರವರು ಬ್ರಾಹ್ಮಣ ಜಾತಿಯನ್ನು ‘ಅನಿಷ್ಟ’ವೆಂದೂ ಕನಿಷ್ಟವೆಂದೊ ಅಂದಾಗ ಅದರಿಂದ ಕ್ರುದ್ಧರಾದ ಬ್ರಾಹ್ಮಣರು ಅಪ್ಪಟ ವೈದಿಕರೇನೂ ಅಲ್ಲ. ಆದರೆ ಕುವೆಂಪು ದೃಷ್ಟಿಯಲ್ಲಿದ್ದವರು ಮಾತ್ರ ವರ್ಣಪದ್ಧತಿಯನ್ನು ತಾತ್ವಿಕವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಈಗ ಬಾಯಿ ಸೋತಿರುವ ವೈದಿಕರು ಎನ್ನಿಸುತ್ತದೆ. ನಮ್ಮ ದೇಶದಲ್ಲಿ ಈ ಕಾಲದ ಅತ್ಯಂತ ಸತ್ವಪೂರ್ಣ ವೈಚಾರಿಕತೆ ಹುಟ್ಟಿಕೊಂಡದ್ದು ಬ್ರಾಹ್ಮಣ್ಯದ ಶ್ರೇಷ್ಠತೆಯ ಕಲ್ಪನೆಯನ್ನೇ ಪ್ರಶ್ನಿಸಿದಾಗ. ವಿವೇಕಾನಂದ, ಮಹಾತ್ಮಗಾಂಧಿ, ಅಂಬೇಡ್ಕರ್ ಈ ಬಗೆಯ ವಿರೋಧದ ಮಹಾನುಭಾವರು. ಈ ದೇಶ ಮತ್ತೆ ಚಿಗುರೊಡೆಯಲು ಕಾರಣರಾದವರು ಇವರು. ಇವರಿಗಿಂತ ಹಿಂದೆ ಭಕ್ತಿಪಂಥದ ಬಸವಣ್ಣ, ಕಬೀರ್, ತುಕಾರಾಂ, ಚೈತನ್ಯರಂಥವರು ಜಾತಿಪದ್ಧತಿಯನ್ನು ತೊಡೆದು ಹಾಕಲು ಅಸಮರ್ಥರಾದರು. ಆದರೆ ಹಿಂದುಳಿದ ಜನರಲ್ಲಿ ಆತ್ಮಗೌರವವನ್ನೂ, ಮುಂದುವರಿದವರಲ್ಲಿ ತಮ್ಮ ವಿಚಾರಗಳ ಬಗ್ಗೆ ಕೊಂಚವಾದರೂ ಅನುಮಾನವನ್ನೂ ಹುಟ್ಟಿಸಬಲ್ಲವರಾದರು. ಈ ದೇಶದಲ್ಲಿ ಈ ಒಂದು ಸಾವಿರ ವರ್ಷಗಳ  ಇತಿಹಾಸ ಬಂಜೆಯಾಗದಂತೆ ಮಾಡಿದವರೆಲ್ಲರೂ ಬ್ರಾಹ್ಮಣ ಸನಾತನಿಗಳಿಗೆ ವಿರೋಧಿಗಳಾಗಿದ್ದವರು ಎಂಬುದಂತೂ ಅತ್ಯಂತ ಮುಖ್ಯ ವಿಷಯ. ಈ ದ್ವಿಜ – ಶೂದ್ರ ವಿರೋಧ ಒಂದನ್ನೊಂದು ಒಳಗೊಳ್ಳುತ್ತ ಹೋಗುವ ಡಯಲೆಕ್ಟಿಕ್ ರೀತಿಯದು. ಪ್ರಾಚೀನ ಕಾಲದಿಂದ ವೈದಿಕರಿಗೂ, ಒಳದಲಿತರಾದ (Internal Proletariates) ಶ್ರಮಣರಿಗೂ ನಡೆದಿರುವ ಹೊಯ್ದಾಟ ಹೇಗೆ ಬೌದ್ಧ, ಜೈನ, ವೀರಶೈವ ಆಂದೋಳನಗಳಾಗಿ ಕಾಣಿಸಿಕೊಂಡವು ಎಂಬ ಬಗ್ಗೆ ನಾನು ಬರೆದಿದ್ದನ್ನು ನೋಡಬಹುದು. ( ಈ ನಮ್ಮ ಸಂಸ್ಕೃತಿ)

ಲೋಕಹಿತಕ್ಕೆ ಅಗತ್ಯವಾದ ಮೌಲ್ಯಗಳನ್ನು ವ್ರತಶೀಲನಾಗಿ ತಾನು ಒಳಗೊಂಡಿರುತ್ತೇನೆಂದೂ, ಆದ್ದರಿಂದ ತಾನು ಶ್ರೇಷ್ಠನೆಂದೂ, ಅನುಸರಣೀಯನೆಂದೂ ಒಂದು ಭಾವನೆ  ವೈದಿಕ ಪರಂಪರೆಯ ಬ್ರಾಹ್ಮಣರಲ್ಲಿ ಇರುತ್ತದೆ. ಈ ಭಾವನೆ ಹಿಂದಿನ ಕಾಲದಲ್ಲಿ ಭಕ್ತನಾದ ಶೂದ್ರನಿಂದ, ಈ ಕಾಲದಲ್ಲಿ ಜ್ಞಾನಿಗಳೂ, ವಿದ್ಯಾವಂತರೂ ಆದ ಬ್ರಾಹ್ಮಣೇತರರಿಂದ ಸವಾಲುಗಳನ್ನು ಎದುರಿಸುತ್ತ ಬಂದಿದೆ. ಗಾಂಧಿಯವರ ನಂತರ ಈ ದೇಶದ ಮೌಲ್ಯಕಲ್ಪನೆ ಎಷ್ಟು ಬದಲಾಗಬೇಕಾಗಿ ಬಂತೆಂದರೆ, ಮಡಿವಂತನಾದ ಬ್ರಾಹ್ಮಣ ಹಾಸ್ಯಾಸ್ಪದನಾಗಿ ಕಾಣುತ್ತಿದ್ದಾನೆ. ಅವನ ಸ್ಪಷ್ಟ ಉಚ್ಛಾರಣೆಯ ಜಂಬ, ಸಂಸ್ಕೃತದ ಪ್ರಭುತ್ವ – ಎಲ್ಲವೂ ಸೃಜನತೆಯ ದೃಷ್ಠಿಯಿಂದ ನೋಡಿದಾಗ ಪೊಳ್ಳೆನ್ನಿಸುತ್ತಿವೆ. ಅವನಿಗಿರುವ ಶ್ರೇಷ್ಠತೆಯ ಕಲ್ಪನೆ ಅಮಾನವೀಯವೆನ್ನಿಸಲು ಶುರುವಾಗಿದೆ. ಬ್ರಾಹ್ಮಣನ ಹೆಮ್ಮೆಯ ಗ್ರಂಥಗಳಾದ ಉಪನಿಷತ್ತುಗಳು, ಗೀತೆ, ವೇದಗಳು ಜೀವಂತ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ವಿವೇಕಾನಂದ, ಗಾಂಧೀಜಿಯಂತ ಅಬ್ರಾಹ್ಮಣರೇ ಹೊರತು ಮಡಿವಂತ ಬ್ರಾಹ್ಮಣರಲ್ಲವೆಂಬುದು ಸ್ಪಷ್ಟವಾಗಿದೆ. ಕರ್ನಾಟಕದಲ್ಲಂತೂ ಯಾವ ಮಡಿವಂತ ಬ್ರಾಹ್ಮಣನೂ ಕುವೆಂಪು ತನ್ನ ಕೃತಿಗಳಲ್ಲಿ ಮೈಗೂಡಿಸಿಕೊಂಡಷ್ಟು ವೇದೋಪನಿಷತ್ತುಗಳ ಸಾರವನ್ನು ಸೃಜನಶೀಲವಾಗಿ ಅರಿತುಕೊಂಡಿಲ್ಲವೆಂದರೆ ಏನೂ ಅಂದಂತಲ್ಲ; ಕುವೆಂಪು ಹೆಚ್ಚುಗಾರಿಕೆ ಹೇಳಿದಂತಲ್ಲ. ಆದ್ದರಿಂದ ಬ್ರಾಹ್ಮಣರು ಕುವೆಂಪು ತಮ್ಮನ್ನು ಜರಿದಾಗ ಆತ್ಮಶೋಧ ಮಾಡಿಕೊಳ್ಳಬೇಕೇ ಹೊರತು ಕುಪಿತರಾಗಕೂಡದು. ಅಲ್ಲದೇ ಯಾಕೆ ತಾವು ಇಡೀ ಸಮುದಾಯಕ್ಕೆ ಅಗತ್ಯವೆಂದು ಅನ್ನಿಸುತ್ತಿಲ್ಲವೆಂಬುದು ಅವರನ್ನು ಬಾಧಿಸಬೇಕು.

ಆದರೆ ಕುಪಿತರಾದ  ಬ್ರಾಹ್ಮಣರೇ ಸ್ವತಃ ವೈದಿಕರಲ್ಲ – ಅವರು ಲೌಕಿಕರು. ಹಿಂದಿನ ಆಚಾರದಂತೆ ತಮ್ಮ ಜೀವನಕ್ರಮವಿಲ್ಲದಿದ್ದರೂ ತಮ್ಮ ಶ್ರೇಷ್ಠತೆಯನ್ನು ಒಳಗೊಳಗೇ ಸುಖಿಸುವವರು. ತಮ್ಮ ಈ ಧೋರಣೆಯನ್ನು ಬದಲಿಸಿಕೊಳ್ಳದ ಬ್ರಾಹ್ಮಣರು ರಾಜಕೀಯದಲ್ಲಾಗಲೀ, ಸಾಂಸ್ಕೃತಿಕವಾಗಿಯಾಗಲೀ ಸೃಜನಶೀಲರಾಗಲಾರರೆಂಬುದಂತೂ ನಿರ್ವಿವಾದ. ಸೃಜನತೆಯ ಮಾತಿರಲಿ, ಕಣ್ಣೆದುರು ನಿಚ್ಚಳವಾಗಿರುವ ಸತ್ಯವನ್ನೂ ಕಾಣದಷ್ಟು ಅವರು ಮಂಕಾಗಿ ಬಿಟ್ಟಿರಬಹುದು. ಕುವೆಂಪುರವರನ್ನು ಹಳದಿ ಕೆಲವು ಬ್ರಾಹ್ಮಣರು ಆಡಿರುವ ಮಾತುಗಳು ಎಷ್ಟು ಹಾಸ್ಯಾಸ್ಪದವಾಗಿವೆ ಎಂಬುದನ್ನು ಕಂಡಾಗ ಸಿಟ್ಟಿನ ಬದಲು ಮರುಕ ಹುಟ್ಟುತ್ತದೆ. ನನಗಂತೂ ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ.

ಗಾಂಧೀಜಿ ಸತ್ತಾಗ ನನಗೆ ಇನ್ನೂ ಹದಿನೈದು ವರ್ಷ. ನಾಲ್ಕು ಮೈಲುಗಳ ದೂರದ ಹೈಸ್ಕೂಲಿಗೆ ಅಗ್ರಹಾರದಿಂದ ಓಡಾಡುತ್ತಿದ್ದೆ. ನನ್ನ ಅಜ್ಜ ವೈದಿಕರು; ಅಪ್ಪ ಅರ್ಧ ವೈದಿಕರು, ಅರ್ಧ ಲೌಕಿಕರು. ಮಠದ ಪರಿಸರದಲ್ಲಿ ಬೆಳೆದವನು ನಾನು. ಗಾಂಧೀಜಿಯೆಂದರೆ ಕಲಿಯ ಅವತಾರ ಎಂದು ನನ್ನ ಸುತ್ತಮುತ್ತಲಿನ ಹಲವು ಬ್ರಾಹ್ಮಣರು ತಿಳಿದಿದ್ದರು. ನನ್ನ ತಂದೆ ಮಾತ್ರ ಗಾಂಧೀಜಿಯ ‘ಹರಿಜನ’ ಪತ್ರಿಕೆಯನ್ನು ತರಿಸಿಕೊಂಡು ಓದುತ್ತಿದ್ದವರು. ತಾನೇ ಸ್ವತಃ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಭಾಗವಹಿಸದಿದ್ದರೂ, ಅದರಲ್ಲಿ ಸಕ್ರಿಯರಾಗಿದ್ದ ತೀರ್ಥಹಳ್ಳಿಯ ಸಮಾಜವಾದೀ ಹಿರಿಯರಾದ ಶ್ಯಾಮ ಐತಾಳರು, ಸದಾಶಿವರಾಯರು – ಇಂಥವರ ಗೆಳೆಯರಾಗಿದ್ದವರು. ನಮ್ಮೂರಿನ ಮಡಿವಂತರಿಗೂ, ಇಂಗ್ಲಿಷ್ ಬಲ್ಲ ನನ್ನ ತಂದೆಗೂ ಆಗುತ್ತಿದ್ದ ವಾಗ್ಯುದ್ಧಗಳನ್ನು ಕೇಳಿ ನಾನು ಬೆಳೆದೆ. ಗಾಂಧಿ ಸತ್ತದ್ದನ್ನು ಕಾಲ್ನಡಿಗೆಯಲ್ಲಿ ಸ್ಕೂಲಿಗೆ ಹೋಗುತ್ತಿದ್ದ ನಾವು ಹುಡುಗರು ಕೇಳಿಸಿಕೊಂಡು ತಬ್ಬಿಬ್ಬಾಗಿ ಅಗ್ರಹಾರಕ್ಕೆ ಹಿಂದಿರುಗಿದೆವು. ನಾನು ಅಳುತ್ತಳುತ್ತ ಗಾಂಧಿ ಸತ್ತರೆಂದು ಹೇಳಿದರೆ, ಉಳಿದೆಷ್ಟೋ ವಿಷಯಗಳಲ್ಲಿ ಸಂಪನ್ನರೂ, ಮುಗ್ಧರೂ ಆದ ಹಿರಿಯರು ಕಲಿಯ ಅವಸಾನವಾಯಿತೆಂದು ಹಿಗ್ಗಿದ್ದು ಕಂಡು ೧೫ ವರ್ಷ ಪ್ರಾಯದ ನನ್ನ ಗಾಂಧಿಪ್ರೇಮ ವಿರೋಧದಲ್ಲಿ ಇನ್ನಷ್ಟು ಹೆಚ್ಚಿತ್ತು. ಎಲ್ಲರ ಅವಹೇಳನ ಧಿಕ್ಕರಿಸಿ ನಾನು ದೂರ್ವಾಸಾಶ್ರಮ ಎಂದು ನಾವು ಕರೆಯುತ್ತಿದ್ದ ತುಂಗಾನದಿಯ ನಡುಗುಡ್ಡೆಯಲ್ಲಿ ಕೂತು ಉಪವಾಸ ಮಾಡಿದ್ದೆ. ಬ್ರಾಹ್ಮಣರ ಈ ಕಡುವಿರೋಧಕ್ಕೆ ಕಾರಣ ಗಾಂಧೀಜಿ ಹರಿಜನರನ್ನು ದೇವಸ್ಥಾನಗಳ ಒಳಗೆ ಕರೆದುಕೊಂಡು ಹೋದದ್ದು. ನಮ್ಮ ಹಳ್ಳಿಯಲ್ಲಿದ್ದ ಜಗದ್ಗುರು ಒಬ್ಬರು ಆಗಲೇ ಅಖಿಲ ಭಾರತ ಖ್ಯಾತಿಯತ್ತ ಸಾಗಿದವರಾಗಿದ್ದರಿಂದ ಗಾಂಧಿಯನ್ನು ಕಲಿಯ ಅವತಾರವೆಂದು ಅವರು ಜರಿಯುತ್ತಿದ್ದರೂ ಗಾಂಧಿಯ ಮಗನಾದ ದೇವದಾಸ ಗಾಂಧಿಗೆ ಮಹಾತ್ಮರ ಸಾವಿಗೆ ವಿಷಾದ ವ್ಯಕ್ತಪಡಿಸುವ ತಂತಿಯನ್ನು ಕಳಿಸಿದ್ದರು. ಮಠದ ಸ್ವಾಮಿಗಳ ಈ ಧೂರ್ತತೆಯೇ ಆ ದಿನಗಳಲ್ಲಿ ನನ್ನನ್ನು ತುಂಬ ಹೇಸುವಂತೆ ಮಾಡಿದ್ದ ಕೃತ್ಯವಾಗಿತ್ತು.

ಉಳಿದ ಬ್ರಾಹ್ಮಣರ ದಡ್ಡತನ ಮರುಕ ಹುಟ್ಟಿಸುವಂತಿತ್ತು. ಗಾಂಧಿ ವರ್ಣಸಂಕರ ಮಾಡಿ ಕಾಲವನ್ನು ಕೆಡಿಸಿದ ಎಂದು ತಿಳಿದ ಇವರೇ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಕುವೆಂಪು ಎಂದಾದರೂ ವೇದಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವೆ ಎಂದು ಆಶ್ಚರ್ಯ ಪಡುತ್ತಿದ್ದರು. ನಾನು ‘ಸಂಸ್ಕಾರ’ವನ್ನಾಗಲೀ ‘ಭಾರತೀಪುರ’ವನ್ನಾಗಲೀ ಬರೆದಾಗ ನನ್ನೆದುರು ಇದ್ದವರು ಈ ಬಗೆಯ ಜನರು. ಭಾರತೀಪುರವನ್ನು ಟೀಕಿಸಿದ ಪ್ರಗತಿಶೀಲರು ಹರಿಜನರಿಗೆ ಅಗತ್ಯವಾದ್ದು ಪಾರ್ಲಿಮೆಂಟ್‌ಪ್ರವೇಶವೆಂದೂ, ದೇವಸ್ಥಾನಗಳ ಪ್ರವೇಶವಲ್ಲವೆಂದೂ ಹೇಳಿದ್ದಾರೆ. ಆದರೆ ನನಗೆ ಈಗಲೂ ಅನ್ನಿಸುತ್ತೆ; ಅಸ್ಪೃಶ್ಯತೆಯ ನೈಜ ನಾಶವಾಗುವುದು ಹರಿಜನರು ದೇವಾಲಯಗಳಿಗೆ ನಿರ್ಭೀಡೆಯಿಂದ ಹೋಗಿರುವುದು ಸಾಧ್ಯವಾದಾಗ ಮಾತ್ರ. ಇದು ಸಾಧ್ಯವಾದಾಗ ಒಂದೇ ಬಾವಿಯಿಂದ ಎಲ್ಲರೂ ನೀರು ಕುಡಿಯುವುದು, ಒಟ್ಟಾಗಿ ಊಟ ಮಾಡುವುದು ಕೂಡ ಸಾಧ್ಯವಾಗುತ್ತವೆ. ನಾನು ಸಾಚಾ ಜಾತಿವಂತರೆಂದು ಕರೆದವರ ಮನಸ್ಸನ್ನು ಪರಿವರ್ತಿಸುವ ಈ ಕೆಲಸ ಸಾಧ್ಯವಾಗುವುದು ಪ್ರೀತಿ ಮತ್ತು ಕೋಪ ಕೂಡಿಕೊಂಡ ಕ್ರಿಯೆಗಳಿಂದ, ಗಾಂಧೀಜಿಯ ಮಾರ್ಗ ಅಂಥದಾಗಿತ್ತು.

ಈಚೆಗೆ ಗೆಳೆಯರೊಬ್ಬರು ಒಂದು ಘಟನೆ ಹೇಳಿದರು. ಬ್ರಾಹ್ಮಣ ಮನಸ್ಸು ಗಾಂಧೀಜಿಗೆ ಹೇಗೆ ಪ್ರತಿಕ್ರಿಯಿಸಿತ್ತು, ಆ ಕಾಲದಲ್ಲಿ, ಎಂದು ತಿಳಿಯಲು ಈ ಘಟನೆ ಸಹಾಯ ಮಾಡುತ್ತದೆ. ಹೃದಯವಂತರಾದ ಮಠದ ಸ್ವಾಮಿಗಳೊಬ್ಬರಿದ್ದಾರೆ. ಗಾಂಧಿಯ ಸಾವಿನ ಸುದ್ದಿ ತಿಳಿದಾಗ ಅವರು ಊಟ ಮಾಡುತ್ತಾ ಕೂತಿದ್ದರು. ಅವರ ಜೊತೆ ಊಟ ಮಾಡುತ್ತಿದ್ದ ಬ್ರಾಹ್ಮಣರು ಸಾವಿನ ಸುದ್ದಿ ತಿಳಿದಿದ್ದೇ ಸಂತೋಷಪಟ್ಟರು. ಆದರೆ ಸ್ವಾಮೀಜಿಗೆ ತುತ್ತನ್ನು ನುಂಗಲಾರದಷ್ಟು ದುಃಖ ಉಕ್ಕಿತು. ಅವರು ಊಟ ಮಾಡುವುದನ್ನು ಬಿಟ್ಟು ಏಳಬೇಕೇ? ಎದ್ದರೆ, ಉಳಿದ ಬ್ರಾಹ್ಮಣರೂ ನಡುವೆ ಊಟ ಬಿಟ್ಟು ಏಳಬೇಕಾಗುತ್ತದೆ – ಯಾಕೆಂದರೆ ಗುರುಗಳು ಎದ್ದಿದ್ದರಿಂದ. ಅಲ್ಲದೆ ಅದು ದುಃಖದ ಪ್ರದರ್ಶನವೂ ಆಗಿಬಿಡುತ್ತದೆ. ಏನು ಮಾಡುವುದು ತಿಳಿಯದೆ ಗಾಂಧೀಜಿಯನ್ನು ಬಯ್ಯುತ್ತ ಕೂತ ಬ್ರಾಹ್ಮಣರ ನಡುವೆ ಗುರುಗಳು ತುತ್ತನ್ನು ಬಾಯಿಗೂ, ಎಲೆಗೂ ಬರಿದೇ ಒಯ್ಯುತ್ತ ಊತ ಮಾಡುತ್ತಿರುವಂತೆ ನಟಿಸುತ್ತ ಕೂತಿದ್ದರಂತೆ – ಎಲ್ಲರ ಊಟ ಮುಗಿಯುವತನಕ.

ಈ ಘಟನೆ ಮಾರ್ಮಿಕವಾಗಿ, ಸಾಂಕೇತಿಕವಾಗಿ ಸನಾತನಿಗಳ ನಡುವೆ ಹೊಸದೃಷ್ಟಿ ಪಡೆದವರೊಬ್ಬರ ಪಾಡನ್ನು ಚಿತ್ರಿಸುತ್ತದೆ. ಅಸ್ಪೃಶ್ಯತೆಯನ್ನು ನಂಬಿರುವ ಜನರ ಮನಸ್ಸನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆಂದು ತಿಳಿಯುವುದಿಲ್ಲ. ಹೀಗೆ ನಂಬಿದವರು ಉಳಿದೆಷ್ಟೋ ವಿಷಯಗಳಲ್ಲಿ ಕಟುಕರೆಂದು ಅನ್ನಿಸುವುದಿಲ್ಲ. ಅಂಥ ಮನುಷ್ಯರೆಲ್ಲರೂ ಜನ್ಮತಃ ದುಷ್ಟರು ಎಂದು ಬಿಡುವುದು ಸಾಧ್ಯವಿದ್ದರೆ ಸಮಸ್ಯೆಯಿರುತ್ತಿರಲಿಲ್ಲ. ಆದ್ದರಿಂದಲೇ ನಮ್ಮ ಪರಂಪರೆಯಲ್ಲೇ ಯಾವುದೋ ದೋಷವಿದೆಯೆಂದು ತಿಳಿಯಬೇಕಾಗುತ್ತದೆ. ಅಂಬೇಡ್ಕರ್ ಮತ್ತು ಈ.ವಿ.ಆರ್. ರವರು ಹಿಂದೂಧರ್ಮವನ್ನೇ ಈ ಕಾರಣಕ್ಕಾಗಿ ದ್ವೇಷಿಸಿದರು. ಗಾಂಧೀಜಿ ಈ ಕೆಡುಕನ್ನು ತೊಡೆದುಹಾಕಿ ಹಿಂದೂ ಧರ್ಮವನ್ನು ಸ್ವಚ್ಛಗೊಳಿಸಲು ಶ್ರಮಿಸಿದರು. ಅಸ್ಪೃಶ್ಯತಾ ಭಾವನೆ ಹಿಂದೂ ಧರ್ಮಕ್ಕೆ ಮೂಲಭೂತ ಅಗತ್ಯವೆ ಅಥವಾ ಅದೊಂದು ಕೇವಲ ಚಾರಿತ್ರಿಕ ಲೌಕಿಕ ಅಗತ್ಯವಾಗಿ ಬಂತೆ ಎಂಬುದರ ಮೇಲೆ ಈ ಪ್ರಶ್ನೆ ನಿರ್ಣಯವಾಗಬೇಕು. ಚಾರಿತ್ರಿಕ ಎಂದು ತಿಳಿದವನು ಗಾಂಧೀಜಿಯಂತೆ ಕೆಲಸ ಮಾಡಬೇಕಾಗುತ್ತದೆ. ಅಂದರೆ ಪ್ರೀತಿ ಮತ್ತು ಕೋಪಗಳನ್ನು ಒಳಗೊಂಡ ಕ್ರಿಯಾವಿಧಾನಗಳನ್ನು ಹುಡುಕಬೇಕಾಗುತ್ತದೆ. ಪ್ರೀತಿಯಿಂದಲೇ ಹುಟ್ಟುವ ಕೋಪ ಸುಡುವುದರ ಜೊತೆಗೆ ಬೆಳಕೂ ಆಗಿರುತ್ತದೆ.

ಒಂದು ಧರ್ಮದ ಪರಮಸತ್ಯಗಳಿಗೂ ಲೋಕರೂಢಿಗೂ ನಡುವೆ ಅಂತರಗಳು ಇದ್ದೇ ಇರುತ್ತವೆ. ಎಲ್ಲಾ ದೇಶಗಳಲ್ಲೂ, ಎಲ್ಲ ಕಾಲದಲ್ಲೂ. ಪರಮ ಮಾನವ ಪ್ರೇಮದ ಕ್ರಿಶ್ಚಿಯಾನಿಟಿಯ ಅಡಿಯಲ್ಲೇ ಗುಲಾಮಗಿರಿ ಅಮೆರಿಕಾದಲ್ಲಿ ಇರಲಿಲ್ಲವೆ? ಅರ್ಥವ್ಯವಸ್ಥೆ, ಸಾಮಾಜಿಕ ಕಟ್ಟುಪಾಡುಗಳು – ಮನುಷ್ಯನನ್ನು ಎಲ್ಲ ಕಾಲದಲ್ಲೂ ಮಿತಗೊಳಿಸುತ್ತವೆ. ಆದರೆ ಎಲ್ಲ ಕಾಲದಲ್ಲೂ ಹೃದಯವಂತರು ಜೀವನದ ಪರಮಸತ್ಯಗಳನ್ನರಿತು ಸದ್ಯದ ಅಗತ್ಯಗಳಿಂದ ಬಿಡುಗಡೆ ಪಡೆಯುವ ಮಾರ್ಗ ಹುಡುಕುತ್ತಾರೆ. ಹಿಂದೂ ಜನರ ಹೃದಯ ಪರಿವರ್ತನೆಗೆಂದೇ ಹೊರಟ ಗಾಂಧೀಜಿ ನಮ್ಮ ಧರ್ಮದಲ್ಲಿರುವ ಅಲ್ಪ ಸಂಗತಿಗಳನ್ನು ತೊರೆದು, ಅದರಲ್ಲಿನ ನಿತ್ಯಸತ್ಯಗಳ ಬೆಳಕಿನಲ್ಲಿ ಜನರು ತಮ್ಮ ವರ್ತನೆಗೆ ನಾಚುವಂತೆ ಮಾಡಲು ಶ್ರಮಿಸಿದರು.

ನನಗೆ ಗತಿಸಿದ ಪ್ರೊಫೆಸರ್ ಎ ಬಿ ಶಾ ಒಂದು ಸಂಗತಿ ತಿಳಿಸಿದ್ದರು. ಗಾಂಧೀಜಿ ಕೆಲವು ಮಹಾ ಪಂಡಿತರನ್ನು ಕರೆದು ಅಸ್ಪೃಶ್ಯತೆಯನ್ನು ಹಿಂದೂಧರ್ಮ ಸಮರ್ಥಿಸುತ್ತದೆಯೆ ಎಂದು ಕೇಳಿದರಂತೆ. ಅದಕ್ಕವರು ಮೂಲಭೂತವಾಗಿ ಹಿಂದೂ ಧರ್ಮ ಅಸ್ಪೃಶ್ಯತೆಯನ್ನು ಸಮರ್ಥಿಸುವುದಿಲ್ಲ ಎಂದರಂತೆ. ಗಾಂಧೀಜಿ ಇದರಿಂದ ತೃಪ್ತರಾಗದೆ ರಾಯ್‌ವಾದಿಗಳಾಗಿದ್ದ ಇನ್ನೊಬ್ಬ ಮಹಾರಾಷ್ಟ್ರದ ದೊಡ್ಡ ಸಂಸ್ಕೃತ ಪಂಡಿತರನ್ನು ಕೇಳಿದರಂತೆ. ಅದಕ್ಕವರು ಅಸ್ಪೃಶ್ಯತೆ ಹಿಂದೂ ಧರ್ಮದಲ್ಲಿ ಸಮರ್ಥನೀಯ ಎಂದರಂತೆ. ಇದನ್ನು ಕೇಳಿದ ಗಾಂಧೀಜಿ ಹಾಗಿದ್ದಲ್ಲಿ ನಾನು ಹಿಂದೂ ಧರ್ಮವನ್ನೇ ನಿರಾಕರಿಸಬೇಕಾಗುತ್ತದೆ ಎಂದರಂತೆ. ಹಿಂದೂ ಧರ್ಮದ ಬಗ್ಗೆ ವ್ಯಕ್ತವಾದ ಈ ಎರಡು ಅಭಿಪ್ರಾಯಗಳಲ್ಲಿ ಯಾವುದು ಸರಿ ಎಂಬುದನ್ನು ಹೇಳುವಷ್ಟು ಜ್ಞಾನ ನನಗಿಲ್ಲ. ಆಧರೆ ಗಾಂಧೀಜಿಯ ನಿಲುವು ನನಗೆ ತುಂಬ ಮುಖ್ಯವೆನ್ನಿಸುತ್ತದೆ. ಆಚರಣೆಯಲ್ಲಿರುವ ಧರ್ಮದ ಮೂಲತತ್ವಗಳ ನೆರವಿನಿಂದಲೇ ಸಮಾಜ ಪರಿವತ್ನೆ ಮಾಡುವ ಹಂಬಲ ಅವರದು. ಆಧರೆ ಅದು ಸಾಧ್ಯವಾಗದಿದ್ದರೆ ತಾನು ಕಂಡ ಪರಮ ಸತ್ಯಕ್ಕಾಗಿ ಆಚರಣೆಯಲ್ಲಿರುವ ಧರ್ಮವನ್ನೂ ನಿರಾಕರಿಸಲು ಅವರು ಹಿಂಜರಿಯುವುದಿಲ್ಲ. ಗಾಂಧೀಜಿ ಇಂಥ ಮಾರ್ಗಗಳನ್ನೇ ಯಾಕೆ ಹುಡುಕುತ್ತಿದ್ದರೆಂದರೆ, ಅವರ ಸತ್ಯಾಗ್ರಹದ ಕೋಪದಲ್ಲಿ ಪ್ರೀತಿಯನ್ನೂ ಒಳಪಡಿಸಿಕೊಳ್ಳುವುದು ಸಾಧ್ಯವಾಗಲಿ ಎಂದು. ಹಿಂದೂ ಧರ್ಮವನ್ನು ಅನುಸರಿಸುವವರು ಧರ್ಮದಿಂದ ಹಲವು ಮೌಲಿಕ ನಡವಳಿಕೆಗಳನ್ನು ಕಲಿಯುತ್ತಿರುವಾಗ, ಆ ಧರ್ಮದ ಆಶ್ರಯದಲ್ಲೇ ಜನರನ್ನು ತಿದ್ದುವುದು ಸುಲಭ ಮಾತ್ರವಲ್ಲ; ತಿದ್ದುವಾಗ ಜನರ ಬಗ್ಗೆ ಗೌರವವೂ ಪ್ರೀತಿಯೂ ಉಳಿದಿರುತ್ತದೆ. ತಾನು ಎಲ್ಲ ಜನರಿಗಿಂತ ದೊಡ್ಡವನು, ತಾನೊಬ್ಬನೇ ಸತ್ಯ ಕಂಡವನು ಎಂಬ ಸರ್ವಾಧಿಕಾರಿಯ ಅಹಂಕಾರದ ಪ್ರಲೋಭನೆ ಈ ಮಾರ್ಗದಲ್ಲಿ ಲ್ಲ.

ಆದ್ದರಿಂದಲೇ ಈ ಜಾತಿ ವ್ಯವಸ್ಥೆಯಲ್ಲಿ ಗಾಂಧೀಜಿ ಅತ್ಯಂತ ದೊಡ್ಡ ಒಳಗಿನ ವಿಮರ್ಶಕರು (Critical Insider) ಆದರು. ‘ಒಳಗಿನವರು’ ಎಲ್ಲವನ್ನೂ ಒಪ್ಪಿದವರಾಗಿ ಗೊಡ್ಡಾಗುತ್ತಾರೆ. ‘ಟೀಕಿಸುವವರು’ ಸಿನಿಕರಾಗಿ ಬಿಡಬಹುದು, ದ್ವೇಷಿಗಳಾಗಿ ಬಿಡಬಹುದು; ಅಥವ ತನ್ನ ಟೀಕಾಶಕ್ತಿಗೇ ಮರುಳಾದ ಆತ್ಮರತ ಕ್ರಾಂತಿಕಾರರಾಗಬಹುದು. ಆದರೆ ಗಾಂಧೀಜಿಯಂತಹ ‘ಒಳಗಿನ ವಿಮರ್ಶಕ’ ಒಳಗಿನವನಾಗಿದ್ದೂ ನಮ್ಮನ್ನು ಬದಲು ಮಾಡಬಲ್ಲವರು. ಜನಿವಾರ ಹಾಕಿಕೊಳ್ಳದೆ ಜುಟ್ಟನ್ನು ಮಾತ್ರ ಬಿಟ್ಟಿದ್ದ ಗಾಂಧೀಜಿ ಈ ಕಾರಣದಿಂದಲೇ ಬ್ರಾಹ್ಮಣರ ಧರ್ಮದ ಬುಡವನ್ನೇ ಕತ್ತರಿಸುವಂತೆ ನಡೆದುಕೊಂಡರು. ಬುದ್ಧಿಯ ಕೆಲಸಕ್ಕಿಂತ ಕಾಯಕಕ್ಕೆ ಅವರು ಕೊಟ್ಟ ಹೆಚ್ಚಿನ ಪ್ರಾಶಸ್ತ್ಯ, ತನ್ನ ಕಕ್ಕಸನ್ನು ತಾನೇ ಎತ್ತುವುದು, ಪ್ರತಿ ಹೆಣ್ಣೂ ಬಳಸುವ ಅಸ್ತ್ರವಾದ ಸತ್ಯಾಗ್ರಹದ ವ್ಯಾಪಕ ಉಪಯೋಗ, ಹಿಂಸಾತ್ಮಕ ಶೌರ್ಯಕ್ಕಿಂತ ಸಹನಶೀಲವಾದ ಅಹಿಂಸೆಗೆ ಅವರು ಕೊಟ್ಟ ಹೆಚ್ಚಿನ ಬೆಲೆ – ಇವುಗಳಿಂದಾಗಿ ಹಿಂದೂ ದೇಶದ ಎರಡು ಪ್ರಬಲ ಶಕ್ತಿಗಳಾದ ಬ್ರಾಹ್ಮಣ್ಯ ಮತ್ತು ಕ್ಷಾತ್ರಗಳಿಗಿದ್ದ ಬೆಲೆಯನ್ನೇ ಅವರು ಕಳೆದು ಶೂದ್ರನ ಮತ್ತು ಹೆಣ್ಣಿನ ಜೀವನಕ್ರಮವನ್ನು ಎತ್ತಿ ಹಿಡಿದರು, ಮೌಲ್ಯವಾಗಿ ಮಾಡಿದರು. ಬ್ರಾಹ್ಮಣ್ಯವನ್ನೂ, ಕ್ಷಾತ್ರವನ್ನೂ ಒಟ್ಟಾಗಿಸಿಕೊಂಡು ಅವುಗಳ ಮೂಲಕ ಭಾರತವನ್ನು ಐರೋಪ್ಯ ಜಗತ್ತಿಗೆ ಸರಿಸಮಗೊಳಿಸಬೇಕೆಂಬ ಹಂಬಲದ ಪೇಶ್ವೆಗಳ ಆಳ್ವಿಕೆಯ ನೆನಪುಳ್ಳ ಚಿತ್‌ಪಾವನ್ ಜನಾಂಗದದಿಂದ ಹುಟ್ಟಿದವನೊಬ್ಬ ಗಾಂಧೀಜಿಯನ್ನು ಕೊಲೆಮಾಡಿದ್ದು ಈ ಹಿನ್ನೆಲೆಯಲ್ಲಿ ಅರ್ಥಪೂರ್ಣ.

ಈ ಶತಮಾನದ ಅತ್ಯುತ್ತಮ ಮನಸ್ಸುಗಳು ರಾಜಕೀಯವಾಗಿಯೂ, ಸಾಂಸ್ಕೃತಿಕವಾಗಿಯೂ ಸಮತೆಗಾಗಿ ಹಂಬಲಿಸಿವೆ. ನಮ್ಮ ಕಾಲದ ನೈಜ ಧಾರ್ಮಿಕ ಉತ್ಕಟತೆ ವ್ಯಕ್ತವಾಗಿರುವುದೂ ಈ ಸಮತೆಗಾಗಿನ ಹೋರಾಟದಲ್ಲೇ. ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟದ ಹಿಂದಿರುವುದು ಈ ಸಮತೆಯ ಹಂಬಲವೇ. ಗಾಂಧೀಜಿ ಪ್ರಾರಂಭಿಸಿದ ಈ ಹೋರಾಟದ ಪರಿಣಾಮ ಐರೋಪ್ಯ ರಾಷ್ಟ್ರಗಳ ಹಿಡಿತದಲ್ಲಿದ್ದ ಏಷ್ಯನ್ ಆಫ್ರಿಕನ್ ವಸಾಹತುಗಳ ಬಿಡುಗಡೆ. ದೇಶಗಳ ಬಂಧನ ಮುಕ್ತಿಯ ಜೊತೆಗೇ, ಅಮೆರಿಕಾದ ಕರಿಯರ ಹಕ್ಕುಗಳ ಸತ್ಯಾಗ್ರಹವೂ, ಈಗ ದಕ್ಷಿಣ ಆಫ್ರಿಕಾದಲ್ಲಿ ಕರಿಯರು ಸಮಾನತೆಗಾಗಿ ನಡೆಸುತ್ತಿರುವ ಹೋರಾಟವೂ ಕೇವಲ ಸಾಮಾಜಿಕ ಸವಲತ್ತುಗಳ ಹೋರಾಟವಲ್ಲ. ಪ್ರತಿ ಜೀವಿಯೂ ಸಮಾನ ಗೌರವಕ್ಕೆ ಅರ್ಹನೆಂಬ ಭಾವನೆಯನ್ನು ಪ್ರಚೋದಿಸುವ ಈ ಸಮತೆಗಾಗಿ ಹೋರಾಟಗಳನ್ನು ಧರ್ಮಯುದ್ಧಗಳೆಂದೇ ನಾವು ತಿಳಿಯಬೇಕು.

ತಮ್ಮ ಜೀವವನ್ನೇ ಕಳೆದುಕೊಳ್ಳಲು ತಯಾರಾಗಿ ಮಾರ್ಟಿನ ಲ್ಯೂಥರ್ ಕಿಂಗ್‌ನಂಥವರು ಹೋರಾಡುವಾಗ ಅದು ಕೇವಲ ಐಹಿಕ ಸುಖಕ್ಕಾಗಿ ಅಲ್ಲ ”ನನಗೊಂದು ಕನಸಿದೆ” ಎಂಬ ಪಲ್ಲವಿಯ ಮಾರ್ಟಿನ್ ಲ್ಯೂಥರ್ ಕಿಂಗ್‌ನ ಭಾಷಣ, ”ನಾವು ಗೆದ್ದೇ ಗೆಲ್ಲುತ್ತೇವೆಂದು” ಅವನ ಅನುಯಾಯಿಗಳಾದ ಕರಿಯರೂ, ಬಿಳಿಯರೂ ಕೂಡಿ ಹಾಡುತ್ತಿದ್ದ ಗೀತೆ – ಇವು ಬಿಡುಗಡೆ ಮಾಡಿದಷ್ಟು ಉತ್ಕಟವಾದ ಧಾರ್ಮಿಕ ಭಾವನೆಯನ್ನು ಈ ಕಾಲದ ಯಾವ ಚರ್ಚ್‌, ಮಸೀದಿ, ದೇವಸ್ಥಾನಗಳ ಪೂಜೆಯಲ್ಲೂ ನಾವು ಕಾಣಲಾರೆವು. ಗಾಂಧೀಜಿಯ ದಂಡಿ ಪಾದಯಾತ್ರೆ ಮತ್ತು ನವಾಖಲಿ ಯಾತ್ರೆಗಳು ಮನುಷ್ಯರಲ್ಲಿ ಅಡಗಿರುವ ದೈವಿಕ ಆಕಾಂಕ್ಷೆಯ ದಿಟ್ಟ ಅಭಿವ್ಯಕ್ತಿಗಳು.

ರಿಲಿಜನ್ ಅನಂತಕಾಲದ ರಾಜಕೀಯವದರೆ, ಈಗ ರಾಜಕೀಯವೇ ತತ್ಕಾಲದ ಧಾರ್ಮಿಕತೆಯೆಂದು ಲೋಹಿಯಾ ಹೇಳಿದಾಗ ಸಮತೆಗಾಗಿ ಈ ದೈವಿಕ ಹಂಬಲ ವ್ಯಕ್ತವಾಗುವ ಕ್ರಮ ಲೋಹಿಯಾರ ದೃಷ್ಟಿಯಲ್ಲಿತ್ತು. ಒಂದು ವ್ಯವಸ್ಥೆಗೂ ಕಟ್ಟುಪಾಡಿಗೂ ಮನುಷ್ಯ ಹೊಂದಿಕೊಳ್ಳುವಂತೆ ಮಾಡುವುದು ರಿಲಿಜನ್‌ಗಳ ಕೆಲಸ – ಇದು ಕಾಲಾನುಕ್ರಮವಾಗಿ ಸಮುದಾಯ ಮೈಗೂಡಿಸಿಕೊಳ್ಳುತ್ತ ಹೋಗುವ ಹೊಂದಾಣಿಕೆ. ಇದರಲ್ಲಿ ಒಳ್ಳೆಯದೂ ಉಂಟು, ಕೆಡುಕೂ ಉಂಟು. ಈ ಹೊಂದಿಕೊಳ್ಳುವ ಅಗತ್ಯದಲ್ಲೇ ಮನುಷ್ಯನನ್ನು ಜಡಗೊಳಿಸುವ ಅಂಶವೂ ಇರುವುದರಿಂದ ಮನುಷ್ಯ ಮೈಕೊಡವಿಕೊಂಡು ಏಳುವಂತೆ ಮಾಡುವ ಹೋರಾಟ ಕಾಣುವುದು ರಾಜಕೀಯವಾಗಿ; ಆದರೆ ಮನುಷ್ಯನ ನೈಜಧಾರ್ಮಿಕ ಹಂಬಲ ವ್ಯಕ್ತವಾಗುವುದೂ ಅಲ್ಲೇ. ಆದ್ದರಿಂದಲೇ ಎಲ್ಲ ಅಸಮತೆಗಳೂ ಮನುಷ್ಯನ ಕರ್ಮಫಲವೆಂದೂ, ರಿಚುಯಲ್ಲುಗಳ ಯಾಂತ್ರಿಕ ಆಚರಣೆಯೇ ದೈವದ ಆರಾಧನೆಯೆಂದೂ, ಬದುಕುವ ಉಪಾಯವನ್ನು ಕಲಿಸಿಕೊಡುವ ಜಾಣತನವೇ ಪರಮ ಬೌದ್ಧಿಕತೆಯೆಂದೊ ತಿಳಿದು ಜೀವಿಸುವ ಬ್ರಾಹ್ಮಣನೊಬ್ಬನ ಬಿಡುಗಡೆಯಿರುವುದು ಈ ಬಗೆಯ ಸಮತೆಗಾಗಿನ ಹೋರಾಟಗಳಲ್ಲಿ ಅವನು ಭಾಗಿಯಾದಾಗ. ಇಲ್ಲವಾದಲ್ಲಿ ಅವನ ಧಾರ್ಮಿಕತೆ ಬರಿಯ ವ್ಯವಹಾರವಾಗಿ ಬಿಡುತ್ತದೆ; ಧನಸಂಚಯಕ್ಕಾಗಿ ಹಿಡಿದ ಕಸುಬಾಗುತ್ತದೆ. ಕನಕರಂಥವರ ಧಾರ್ಮಿಕತೆ ಒಳಗಿಂದ ಕೊಸರಾಡಿ ಹುಟ್ಟುವ ಉತ್ಕಟ ಭಾವನೆಯಾಗಿರುತ್ತದೆ.

‘ರಾಮ’ ಶಬ್ದಕ್ಕೆ ಮತ್ತೆ ಅರ್ಥ ಬಂದದ್ದು ಗುಂಡೇಟು ತಿಂದ ಗಾಂಧೀಜಿಯ ಬಾಯಿಂದ ಅದು ಹೊರಬಿದ್ದಾಗ. ಆಗ ಬರಿಯೊಂದು ಶಬ್ದವೇ ಹಲವು ಧ್ವನಿಗಳನ್ನು ಬಿತ್ತರಿಸುವ ಕವನವಾಗಿಬಿಟ್ಟಿತು. ಗಾಂಧೀಜಿಯ ಬಾಯಿಯಲ್ಲಿ ಜೀವಂತನಾದ ‘ರಾಮ’ ಪ್ರಾಣಕೊಡಬಲ್ಲಷ್ಟು ಕಾಲಮಾತ್ರ ಜಪದ ಸರದ ‘ರಾಮ’ ಅರ್ಥಪೂರ್ಣವಾಗಿರುತ್ತಾನೆ; ಮತ್ತೆ ‘ರಾಮ’ ಬರಿಯ ಶಬ್ದವಾಗುತ್ತಾನೆ. ಹಿಂಸೆಯ ನಡುವೆ ನಿಂತು ಮಾನವರೆಲ್ಲ ಒಳ್ಳೆಯವರಾಗಬೇಕೆಂಬ ಉತ್ಕಟ ಹಂಬಲದಲ್ಲಿ ಗುಂಡೇಟಿನ ನೋವಿನಲ್ಲಿ ಕುಸಿಯುತ್ತಿರುವಾಗ ಗಾಂಧೀಜಿಯ ಬಾಯಿಂದ ಹೊರಬಿದ್ದ ‘ರಾಮ’ ವಾಲ್ಮೀಕಿ ತುಳಸೀದಾಸರ ಪರಂಪರೆಯಲ್ಲಿ ಬೆಳೆದವನು; ಆದರೆ ಗಾಂಧೀಜಿಯಲ್ಲಿ ತತ್‌ಕ್ಷಣದವನಾದವನು. ಭಾರತೀಯ ಸನಾತನ ವ್ಯವಸ್ಥೆಗೆ ಐಡಿಯಾಜಿಯಾಗಿದ್ದ ರಾಜಕೀಯ ‘ರಾಮ’, ಗಾಂಧೀಜಿಯ ರಾಜಕೀಯದಲ್ಲಿಯೇ ಮತ್ತೆ ಧರ್ಮಪುರುಷನಾಗಿಬಿಟ್ಟ ಸೋಜಿಗವನ್ನು ಶುಷ್ಕ ತರ್ಕಕ್ಕೆ ಅಂಟಿಕೊಂಡು ಮಂತ್ರ ಹೇಳುವ ವೈದಿಕರೂ, ವ್ಯವಸ್ಥೆ ಕಾಯಲು ದೊಣ್ಣೆ ಹಿಡಿದು ನಿಂತ ಇಂದಿನ ಕ್ಷತ್ರಿಯರಾದ ಮೇಲ್ಜಾತಿಯ ಬ್ರಾಹ್ಮಣೇತರರೂ ಅರಿಯಬೇಕು. ಆಗಲೇ ಪ್ರಚಲಿತ ಧಾರ್ಮಿಕ ವ್ಯವಸ್ಥೆಯಲ್ಲಿ ಯಾವುದು ಜಡವಾದದ್ದು, ಯಾವುದು ಚೈತನ್ಯಪೂರ್ಣವಾದ್ದು ಅರ್ಥವಾಗುತ್ತದೆ.

ಇದನ್ನು ನಮ್ಮ ಕಾಲದಲ್ಲಿ ಅರ್ಥಮಾಡಿಕೊಳ್ಳುವವರು:

ಜಾತಿ ಪದ್ಧತಿಯಿಂದ ಹುಟ್ಟಿದ ಅಸ್ಪೃಶ್ಯ ಭಾವನೆಯನ್ನು ತೊಡೆದುಹಾಕುವ ಹೋರಾಟದಲ್ಲಿ ಭಾಗಿಯಾಗುವವರು;

ಪ್ರತಿ ಜೀವಿಯೂ ಸಮಾನ ಗೌರವಕ್ಕೆ ಅರ್ಹರೆಂಬ ಸಮಾನತೆಯ ಸಂಘರ್ಷದಲ್ಲಿ ತೊಡಗಿದವರು;

ದೇಶದ ದೇಶಗಳ ನಡುವಿನ ಸಮಾನತೆಗಾಗಿ ಹಂಬಲಿಸುವವರು;

ಮನುಷ್ಯನಂತೆಯೇ ಮೃಗ ಪಕ್ಷಿ ಗಿಡಮರಗಳಿಗೂ ವಿಶ್ವದಲ್ಲಿ ಬದುಕುಳಿನ ಅಧಿಕಾರವಿದೆಯೆಂದು ತಿಳಿದವರು ;

ಮತ್ತು ಇವೆಲ್ಲವೂ ಒಂದಕ್ಕೊಂದು ಸಂಬಂಧವಿರುವ ಹೋರಾಟಗಳೆಂಬ ಪ್ರಜ್ಞೆಯುಳ್ಳವರು.

ಕೃಪೆ : ಸುದ್ದಿ ಸಂಗಾತಿ, ೧೬ ಮಾರ್ಚ್ ೧೯೮೬. (ಕುವೆಂಪು ಬ್ರಾಹ್ಮರಣ್ನು ಜರೆದು ಮಾತಾಡಿದರೆಂಬ ಸುದ್ಧಿಯಿಂದಾಗಿ ಉಂಟಾದ ಗದ್ದಲ, ಎದ್ದ ವಿವಾದದ ಸಂದರ್ಭದಲ್ಲಿ ಬರೆದ ಲೇಖನ.)

* * *