ಭಾರತದ ಹಲವು ರಾಜ್ಯಗಳಂತೆ ಕರ್ನಾಟಕವು ಒಂದು ಪುಟ್ಟ ವಿಶ್ವವೇ. ಹಲವು ಭಾಷೆ, ಹಲವು ಸಂಸ್ಕೃತಿಗಳ ಸಹಬಾಳ್ವೆಗೆ ಈ ನಾಡಿನಲ್ಲಿ ಅವಕಾಶವಿದೆ ಎಂಬ ದೃಷ್ಟಿಯಿಂದ. ಇದೊಂದು ಅನಿಷ್ಟ ತೊಡಕು ಎಂದು ಕಾಣುವ ಧೋರಣೆ ಸಾಮ್ರಾಜ್ಯವಾದಿಯದು. ಆದರೆ ಈ ಹಲವು ಭಾಷೆ, ಸಂಸ್ಕೃತಿಗಳ ಸಹಜೀವನವನ್ನು ಸಮೃದ್ಧಿಯ ವರವೆಂದು ಕಾಣುವ ದೃಷ್ಟಿ ಪ್ರಜಾಸತ್ತಾತ್ಮಕವಾದಿಯದು. ವೈವಿಧ್ಯವೆಂದರೆ ಸಾಮ್ರಾಜ್ಯವಾದಿ ಅಸಹನೆ ಪಡುತ್ತಾನೆ; ಒಂದರ ಅಧೀನದಲ್ಲಿ ಎಲ್ಲವೂ ಇರಬೇಕೆಂದು ಆಸೆಪಡುತ್ತಾನೆ. ಆದರೆ ಪ್ರಜಾಸತ್ತೆಯಲ್ಲಿ ನಂಬುವವನು ವಿಕೇಂದ್ರೀಕರಣವಾದಿಯಾಗಿರುತ್ತಾನೆ; ಜನಸಮುದಾಯದಲ್ಲಿ ವಿಶಿಷ್ಟವಾದ್ದೆಲ್ಲವೂ ವಿಕಸನಗೊಳ್ಳುತ್ತ ಹೋಗುವುದನ್ನು ಸ್ವಾಗತಿಸುತ್ತಾನೆ.

ಹಲವು ಭಾಷೆ ಮತ್ತು ಸಂಸ್ಕೃತಿಗಳು ಇರುವ  ಕರ್ನಾಟಕದಲ್ಲೂ ಯಾವ ಒತ್ತಾಯವಿಲ್ಲದೆಯೂ ಕನ್ನಡ ಭಾಷೆ ಬಹು ಹೆಚ್ಚು ಪಾಲು ಎಲ್ಲರೂ ಮಾತಾಡುವ ಭಾಷೆಯಾಗಿದೆ. ಕನ್ನಡ ಬಲ್ಲವ ಕೂರ್ಗಿ, ತುಳು, ಕೊಂಕಣಿ, ಉರ್ದುಗಳನ್ನು ಮಾತಾಡದಿದ್ದರೂ, ಈ ಭಾಷೆಗಳನ್ನು ಮಾತಾಡುವ ಎಲ್ಲರೂ ಸಾಮಾನ್ಯವಾಗಿ ಕನ್ನಡವನ್ನು ಮಾತಾಡುತ್ತಾರೆ. ಇದಕ್ಕೆ ಕಾರಣ ಈ ನಾಡಿನಲ್ಲಿ ಈ ಎಲ್ಲ ಜನರ ಬದುಕಿನ ಅಗತ್ಯಗಳ ಪೂರೈಕೆಗೆ ಕನ್ನಡ ಅಗತ್ಯವೆಂಬುದೇ ಆಗಿದೆ. ಬಲತ್ಕಾರವಾಗಿ ಹೇರದಿದ್ದರೂ ಸಹಾ ಕನ್ನಡವನ್ನು ಸಹಜವಾಗಿಯೇ ಮಾತಾಡುವ ಈ ಜನರನ್ನು ಈಚೆಗೆ ಜರೆಯಲಾಗುತ್ತಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸುವ ಲೇಖಕರಲ್ಲಿ ಒಬ್ಬನಾದ ನನಗೆ ಈ ರೀತಿಯಲ್ಲಿ ಅನ್ಯಭಾಷೆಯವರನ್ನು ಹಂಗಿಸಿ ಕೆಣಕಿ ಮಾತಾಡುವುದು ಹೇಸಿಗೆ ಹುಟ್ಟಿಸುವ ವರ್ತನೆಯೆನ್ನಿಸಿದೆ.

“ಇವರೆಲ್ಲ ಕನ್ನಡದ ಅನ್ನ ತಿಂದು ಕನ್ನಡಕ್ಕೆ ದ್ರೋಹ ಬಗೆಯುತ್ತಿದ್ದಾರೆ” ಎಂಬ ಮಾತಿನ ಧೋರಣೆಯ ಹಿಂದೆ ಅಸತ್ಯವಷ್ಟೇ ಅಲ್ಲ, ಕ್ರೂರ ಯಜಮಾನಿಕೆಯ ದರ್ಪವಿದೆ. ವ್ಯವಹಾರದಲ್ಲಿ ನಿತ್ಯ ಕನ್ನಡ ಬಳಸುವ ಬಡವರಾದ ಮುಸ್ಲಿಮರು, ಕೂಲಿಗಾರರಾದ ತಮಿಳರು ಕನ್ನಡವನ್ನು ಓದಲಾರರು, ಬರೆಯಲಾರರು – ನಿಜ. ಆದರೆ ಕನ್ನಡವನ್ನೇ ತಾಯ್ನುಡಿಯಾಗಿ ಉಳ್ಳ ಶೇಕಡ ಎಪ್ಪತ್ತು ಜನರೂ ಕನ್ನಡವನ್ನು ಓದಲಾರರು, ಬರೆಯಲಾರರು – ಅಲ್ಲವೇ? ಅಂದರೆ ಇದನ್ನು ಒಟ್ಟಾರೆ ದೇಶವಿಡೀ ನರಳುತ್ತಿರುವ ನಿರಕ್ಷರತೆಯ ಸಮಸ್ಯೆಯೆಂದು ಕಾಣಬೇಕೇ ವಿನಾ ಇಲ್ಲಿ ಬದುಕುವ ಪರಭಾಷಾ ಜನರನ್ನು ಅಸಹನೆಯಿಂದ ನಡೆಸಿಕೊಳ್ಳುವುದಕ್ಕಲ್ಲ.

ದಿನನಿತ್ಯದ ವ್ಯವಹಾರದಲ್ಲಿ ಹೇಗೂ ಅತಿ ಮುಖ್ಯ ಭಾಷೆಯಾದ ಕನ್ನಡ ನಮ್ಮ ರಾಜ್ಯಭಾಷೆಯೂ ಆಗಿದೆ. ಮೊದಲು ಸರ್ಕಾರವು ಕನ್ನಡವನ್ನು ಪ್ರಾಮಾಣಿಕವಾಗಿ ರಾಜ್ಯಭಾಷೆಯೆಂದು ಸ್ವೀಕರಿಸಲಿ. ಆಗ ಎಲ್ಲರೂ ಕನ್ನಡವನ್ನು ಮಾತಾಡುವುದಕ್ಕೆ ಮಾತ್ರವಲ್ಲದೆ, ಓದಿ ಬರೆಯಲೂ ಖಂಡಿತ ಕಲಿಯುತ್ತಾರೆ ಎಂಬುದನ್ನು ನಾವು ನಂಬಬೇಕು. ಯಾಕೆಂದರೆ ಹೇಗೂ ಅವರೆಲ್ಲರೂ ಈಗ ಕನ್ನಡವನ್ನು ಮಾತಾಡಬಲ್ಲವರೇ ಆಗಿದ್ದಾರಲ್ಲವೇ? ಅವರನ್ನು ಸ್ವಾಭಿಮಾನಕ್ಕೆ ಕುಂದೆಂಬುವಂಥ ಒರಟಾದ ನಿಲುವಿಗೆ ನಾವು ಅವರನ್ನು ತಳ್ಳಿದಂತಾಗುತ್ತದೆ.

ಗೋಕಾಕ್ ವರದಿಯಿಂದ ವಿವಾದ ಎದ್ದಿರುವುದಕ್ಕೆ ಮುಖ್ಯ ಕಾರಣವೆಂದರೆ ಭಾಷಾ ಅಲ್ಪಸಂಖ್ಯಾತರಿಗೆ ತಾವು ಇಂಗ್ಲಿಷ್ ಕಲಿಕೆಯಿಂದ ವಂಚಿತರಾಗಿ ಬಿಡಬಹುದೆಂಬ ಆತಂಕ. ಇದು ಸಹಜವಾದ ಆತಂಕವೇ. ಯಾಕೆಂದರೆ ಈ ನಮ್ಮ ದುಷ್ಟ ವಸಾಹತುಶಾಹಿ ಕೀಳರಿಮೆಯ ಕಾಲದಲ್ಲಿ ಇಂಗ್ಲಿಷ್ ಗೊತ್ತಿಲ್ಲದವನಿಗೆ ತಿಂಗಳಿಗೆ ೫೦೦ ರೂ. ಗಳಿಗಿಂತ ಹೆಚ್ಚು ಸಂಬಳದ ನೌಕರಿ ಖಂಡಿತ ಸಿಗಲಾರದು. ಒಬ್ಬ ಮುಸ್ಲಿಂ ಹುಡುಗ ಪ್ರಥಮ ಭಾಷೆಯಾಗಿ ೧೫೦ ಅಂಕಗಳ ಕನ್ನಡ ಕಲಿಯಲು ಕನ್ನಡ ಸಂಸ್ಕೃತಿಯಲ್ಲಿ ಬೆಳೆದ ಹುಡುಗನಿಗಿಂತ ಹೆಚ್ಚು ಶ್ರಮಿಸಬೇಕಾಗುತ್ತದೆ. ಇನ್ನು ೧೦೦ ಅಂಕಗಳ ದ್ವಿತೀಯ ಭಾಷೆಯಾಗಿ ತನ್ನ ಸಂಸ್ಕೃತಿಯ ಭಾಷೆಯಾದ ಉರ್ದುವನ್ನು ಆತ ಕಲಿತಲ್ಲಿ ಇಂಗ್ಲಿಷ್ ಕಲಿಯಲು ಅವನಿಗೆ ಉಳಿದಿರುವುದು ಕೇವಲ ೫೦ ಅಂಕಗಳು. ದಯವಿಟ್ಟು ಎಲ್ಲರೂ ಗಮನಿಸಬೇಕಾದ್ದು ಇದು: ಅಂಕಗಳು ಎಂದರೆ ಆ ವಿಷಯಗಳನ್ನು ಕಲಿಸಲು ಶಾಲೆಯಲ್ಲಿ ಬಳಸುವ ಸಮಯ. ಉರ್ದು ಮಾತಾಡುವ ಜನ ಕ್ರಮೇಣ ಉರ್ದುವನ್ನು ಕಳೆದುಕೊಳ್ಳಬೇಕೆಂದೋ ಅಥವಾ ನಮಗಿಂತ ಇಂಗ್ಲಿಷ್ ಕಲಿಕೆಯಲ್ಲಿ ಹಿಂದುಳಿಯಬೇಕೆಂದೋ ಹೇಳಲು ನಮಗೆ ಅಧಿಕಾರವಿಲ್ಲ. ಹಾಗೆ ಒತ್ತಾಯಿಸುವುದು ಪ್ರಜಾಸತ್ತೆಯಲ್ಲಿ ಅಕ್ಷಮ್ಯ ಅಪರಾಧ.

ಈ ಸಮಸ್ಯೆ ನಿವಾರಣೆಗೆ ನನಗೆ ಎರಡು ಮಾರ್ಗಗಳಿರುವಂತೆ ತೋರುತ್ತದೆ. ಮೊದಲನೆಯದು ಎರಡನೆಯದಕ್ಕಿಂತ ಉತ್ಕೃಷ್ಟವಾದದ್ದು. ಅವು ಹೀಗಿವೆ:

ಮೊದಲನೆಯದು : ೧೦ನೇ ತರಗತಿ ಮುಗಿಯುವ ತನಕ ಯಾವ ಶಾಲೆಯಲ್ಲೂ ಇಂಗ್ಲಿಷನ್ನು ಹೇಳಿಕೊಡಕೂಡದು. ಇದಕ್ಕೆ ಕಾರಣ ಇಂಗ್ಲಿಷ್ ದ್ವೇಷವಲ್ಲ. ಇಂಗ್ಲಿಷನ್ನು ಮಾಧ್ಯಮಿಕ ಶಾಲೆಗಳಲ್ಲಾಗಲೀ, ಹೈಸ್ಕೂಲುಗಳಲ್ಲಾಗಲೀ, ಮೈಸೂರು ಬೆಂಗಳೂರು ನಗರಗಳಂಥ ಪ್ರದೇಶಗಳ ಅತ್ಯುತ್ತಮ ಖಾಸಗಿ ಶಾಲೆಗಳಲ್ಲಿ ಬಿಟ್ಟರೆ ಚೆನ್ನಾಗಿ ಹೇಳಿಕೊಡಬಲ್ಲ ಅಧ್ಯಾಪಕರು ನಮಗೆ ಸಿಗುವುದೇ ಸಾಧ್ಯವಿಲ್ಲ. ಜೂನಿಯರ್ ಕಾಲೇಜುಗಳಲ್ಲೇ ತಪ್ಪಿಲ್ಲದಂತೆ ಇಂಗ್ಲಿಷ್ ಭಾಷೆ ಹೇಳಿಕೊಡಬಲ್ಲವರು ಸಿಗುವುದಿಲ್ಲವೆಂಬುದು ಇಂಗ್ಲಿಷ್ ಪ್ರಾಧ್ಯಾಪಕನಾಗಿರುವ ನನಗೆ ಖುದ್ದಾಗಿ ಗೊತ್ತಿರುವ ವಿಷಯ. ಶಾಲೆಯಲ್ಲಿ ತಪ್ಪು ತಪ್ಪಾಗಿ ಇಂಗ್ಲಿಷನ್ನು ಹೇಳಿಕೊಟ್ಟಲ್ಲಿ ಕಾಲೇಜಿಗೆ ಬಂದನಂತರ ಈ ತಪ್ಪುಗಳನ್ನು ತಿದ್ದುವುದು ದುಸ್ಸಾಧ್ಯ. ತಪ್ಪನ್ನು ತಿದ್ದಿದ ಮೇಲೆ ಸರಿಯಾದ ಭಾಷೆಯನ್ನು ಮತ್ತೆ ಕಲಿಸುವುದು ವೃಥಾ ಸಮಯದ ಅಪವ್ಯಯ. ಆದ್ದರಿಂದ ಯಾವ ಇಯತ್ತೆಯಿಂದ ಇಂಗ್ಲಿಷನ್ನು ಸಮರ್ಪಕವಾಗಿ ಕಲಿಸಲು ಸಾಧ್ಯವೋ ಆ ಇಯತ್ತೆಯಿಂದಲೇ ಇಂಗ್ಲಿಷನ್ನು ಪ್ರಾರಂಭಿಸುವುದು ಶೈಕ್ಷಣಿಕ ದೃಷ್ಟಿಯಿಂದ ಸಾಧುವಾದ್ದು. ಅಲ್ಲದೆ ವೈಜ್ಞಾನಿಕವಾದ ಬೋಧನಾಕ್ರಮದಲ್ಲಿ ಯಾವ ಬಾಷೆಯನ್ನಾದರೂ ಒಂದು ವರ್ಷದೊಳಗೆ ಕಲಿಸಲು ಸಾಧ್ಯ. ಮಕ್ಕಳು ತಪ್ಪು ತಪ್ಪಾಗಿ ಐದು ವರ್ಷ ಕಲಿತದ್ದನ್ನೆಲ್ಲ ಇನ್ನೂ ಚೆನ್ನಾಗಿ ಐದು ತಿಂಗಳಲ್ಲಿ ಕಲಿಯಲು ಸಾಧ್ಯ, ಆದರಿಂದ ವಿದ್ಯಾರ್ಥಿ ಕಾಲೇಜು ಸೇರುವ ಮುಂಚೆ ಒಂದು ಬಿಗಿಯಾದ ಇಂಗ್ಲಿಷ್ ಕೋರ್ಸನ್ನು ಕಡ್ಡಾಯವಾಗಿ ಪಡೆಯುವಂತೆ ಏರ್ಪಾಡಾಗಬೇಕು.

ಇಂಗ್ಲಿಷ್‌ಗೆ ಎರಡು ಮುಖಗಳಿವೆ : ಒಂದು, ಅದು ಜ್ಞಾನವಾಹಿನಿ, ಎರಡು, ಅದು ಪ್ರತಿಷ್ಠೆಯ ಭಾಷೆ – ಸಾಮ್ರಾಜ್ಯ ಶಾಹಿ ಆಳುವ ವರ್ಗದ ಭಾಷೆ. ಆದ್ದರಿಂದ ,ಮಕ್ಕಳು ಶಾಲೆಯಲ್ಲಿರುವಾಗಲೇ ಅವರ ನಡುವೆ ಅಸಮಾನತೆಗಳನ್ನು ಸೃಷ್ಟಿಸಬಲ್ಲ ಭಾಷೆ. ಹಳ್ಳಿಯಲ್ಲಿರುವ ತಣಿತದ ಅಧ್ಯಾಪಕನಿಗೂ ಪಟ್ಟಣದ ಒಳ್ಳೆಯ ಶಾಲೆಯ ಗಣಿತದ ಅಧ್ಯಾಪಕನಿಗೂ ವ್ಯತ್ಯಾಸಗಳಿರಬಹುದು. ಆದರೆ ಹಳ್ಳಿಯಲ್ಲಿ ಇಂಗ್ಲಿಷನ್ನು ಪಾಠ ಹೇಳುವ ಅಧ್ಯಾಪಕನಿಗೂ ಪಟ್ಟಣದಲ್ಲಿರುವವನಿಗೂ ಅದಕ್ಕೂ ಹೆಚ್ಚಿನ ಅಂತರಗಳಿರುತ್ತವೆ. ಗಣಿತ ಕಲಿಯುವಾಗ ೨ x ೨ = ೫ ಎಂದು ಹೇಳಿಕೊಟ್ಟರೆ ಅದು ತಪ್ಪೆಂಬುದು ವಿದ್ಯಾರ್ಥಿಗೆ ತಾರ್ಕಿಕವಾಗಿಯೇ ಹೊಳೆಯುತ್ತದೆ. ಆದರೆ I is a boy ಎಂಬ ವಾಕ್ಯ ಒಬ್ಬ ಅತ್ಯಂತ ಪ್ರತಿಭಾಶಾಲಿಗೂ ಅದು ತಪ್ಪೆಂದು ತಾರ್ಕಿಕವಾಗಿ ಹೊಳೆಯಲಾರದು. ಅಲ್ಲದೆ ಭಾಷೆ ಅಭ್ಯಾಸದಿಂದ ರೂಢವಾಗುವುದಾದ್ದರಿಂದ ಕಲಿತದ್ದು ಹಾಗೇ ಅಂಟಿಕೊಂಡು ವಿದ್ಯಾರ್ಥಿ ಕೀಳರಿಮೆಯಿಂದ ನರಳುವಂತೆ ಆಗುತ್ತದೆ. ಆದ್ದರಿಂದ ಎಲ್ಲ ವಿದ್ಯಾಥಿಗಳಿಗೂ ಒಂದೇ ಸಮನಾದ ಯೋಗ್ಯತೆಯ ಇಂಗ್ಲಿಷನ್ನು ಎಲ್ಲರಿಗೂ ಕಲಿಸಬಹುದಾದ ಇಯತ್ತೆಯಿಂದಲೇ ಕಲಿಸತಕ್ಕದ್ದು ಎಂಬುದು ಶೈಕ್ಷಣಿಕವಾಗಿ ಸರಿಯಾದ್ದು ಮತ್ತು ಸಮಾನತೆ ಸಾಧಿಸುವ ದೃಷ್ಟಿಯಿಂದ ನೈತಿಕವಾದ್ದು.

ಇಂಗ್ಲಿಷ್ ಸಾಮ್ರಾಜ್ಯಶಾಹಿ ಭಾಷೆಯಾದ್ದರಿಂದ ಅದರಲ್ಲಿ ಇನ್ನೊಂದು ದೋಷವಿದೆ. ಇಂಗ್ಲಿಷ್‌ಕಲಿತ ಮಕ್ಕಳು ಬೇರಾವ ಭಾರತೀಯ ಭಾಷೆಗಳನ್ನೂ ಕಲಿಯಲು ಆಸೆಪಡುವುದಿಲ್ಲ. ಕಾಂಗ್ರೆಸ್‌ಹುಲ್ಲಿನಂತೆ ಎಲ್ಲ ಭಾಷೆಗಳನ್ನೂ ನಾಶಮಾಡಬಲ್ಲ ಶಕ್ತಿ ಇಂಗ್ಲಿಷಿಗಿದೆ – ಅದು ತರುವ ಭಾಗ್ಯ, ದೌಲತ್ತು, ಪ್ರತಿಷ್ಠೆ ಅಸಾಮಾನ್ಯವಾದದ್ದು. ಇಂಗ್ಲಿಷ್ ಕಲಿತ ಮಗುವಿಗೆ, ಅದರ ತಾಯಿ ತಂದೆಯರ ಪ್ರೋತ್ಸಾಹದಿಂದಾಗಿ, ಇಂಗ್ಲಿಷ್ ಬಂದರೆ ಸಾಕು, ಇನ್ನೇನು ಬಾರದಿದ್ದರೂ ಚಿಂತೆಯಿಲ್ಲ ಎಂಬ ಭಾವನೆ ಬೆಳೆಯುತ್ತದೆ. ಆದರೆ ಯಾವ ಭಾರತೀಯ ಭಾಷೆಯೂ ಇನ್ನೊಂದು ಭಾರತೀಯ ಭಾಷೆಯನ್ನು ಕೊಲ್ಲುವುದಿಲ್ಲ. ತಂತಮ್ಮ ಭಾಷೆಗಳನ್ನು ಮಾತಾಡುತ್ತಲೇ ರಾಜ್ಯದ ಭಾಷೆ ಮಾತಾಡುವ ನಮ್ಮ ಜನರೇ ಇದಕ್ಕೆ ಸಾಕ್ಷಿ. ಆದ್ದರಿಂದ ಕನ್ನಡ ವಾದಿಗಳ ನೇತಾರರಾದ ಕೆಲವರು ಉಳಿದ ಭಾರತೀಯ ಭಾಷೆಗಳನ್ನಾಡುವವರನ್ನು ಅನ್ನ ಉಪ್ಪುಗಳ ಮಾತಾಡಿ ಅವಮಾನಿಸುವುದು ಅಕ್ಷಮ್ಯವೆಂದು ಇನ್ನೊಮ್ಮೆ ಹೇಳಬೇಕೆನಿಸುತ್ತದೆ- ಇಂಗ್ಲಿಷ್ ಸಂದರ್ಭದಲ್ಲಿ ನಮ್ಮ ಎಲ್ಲ ಭಾಷೆಗಳು ಹೀಗೆ ಸಮಾನವಾಗಿ ನರಳುತ್ತಿವೆಯೆಂಬುದನ್ನು ಯೋಚಿಸದೇ ಕನ್ನಡ ಚಳುವಳಿ ನಾಯಕರೆಲ್ಲರೂ ಮಾತನಾಡುತ್ತಿರುವುದರಿಂದ.

೧೦ನೇ ಇಯತ್ತೆ ತನಕ ಇಂಗ್ಲಿಷನ್ನು ಯಾರಿಗೂ ಕಲಿಸದಿದ್ದಲ್ಲಿ ಯಾವ ತಾಯಿ ತಂದೆಯರೂ ತಮ್ಮ ಮಕ್ಕಳು ಹಿಂದುಳಿಯುತ್ತಾರೆಂದು ಆತಂಕಪಡುವುದಿಲ್ಲ. ಈ ಆತಂಕ ಮಾಯವಾದಲ್ಲಿ ಕನ್ನಡ ನಾಡಿನ ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆಯನ್ನು, ಕನ್ನಡವನ್ನು, ಹಿಂದಿಯನ್ನೂ ಕಲಿಯುತ್ತಾರೆ – ಆತಂಕಪಡದೆ ಕಲಿಯುತ್ತಾರೆ – ಅದು ಮುಖ್ಯ.

ಎರಡನೆಯ ಮಾರ್ಗ : ಮೊದಲಿನಷ್ಟು ಶೈಕ್ಷಣಿಕವಾಗಿ ಸಮಪರ್ಕವಲ್ಲ; ಆದರೆ ಅಲ್ಪ ಸಂಖ್ಯಾತರಿಗೆ ಆತಂಕವಿಲ್ಲದಂತೆ ಜಾರಿಗೆ ಬರಬಹುದಾದ ಭಾಷಾನೀತಿ ಇದೆ. ಒಂದು ಸರಳ ಸೂತ್ರವಾಗಿ ಇದನ್ನು ಮಂಡಿಸಬಹುದು:

೧. ಎಲ್ಲ ಮಕ್ಕಳೂ ಮೂರು ಭಾಷೆಗಳನ್ನು ಕಲಿಯುತ್ತಾರೆ.

೨. ಮೂರರಲ್ಲಿ ಒಂದು ಭಾಷೆ ಕಡ್ಡಾಯವಾಗಿ ರಾಜ್ಯ ಭಾಷೆಯಾದ ಕನ್ನಡವಾಗಿರುತ್ತದೆ.

೩. ಮಕ್ಕಳು ಎರಡು ಭಾಷೆಗಳನ್ನು ವ್ಯಾವಹಾರಿಕವಾಗಿಯೂ ಒಂದನ್ನು ಸಾಂಸ್ಕೃತಿಕವಾಗಿಯೂ ಕಲಿಯುತ್ತಾರೆ.

೪. ಈ ಮೂರು ಭಾಷೆಗಳಿಗೂ ಒಂದೇ ರೀತಿಯ ಅಂಕಗಳಿರುತ್ತವೆ.

ಈ ಸೂತ್ರ ಅನ್ವಯಿಸಿದಲ್ಲಿ ಮುಸ್ಲಿಂ ಹುಡುಗ ಉರ್ದುವನ್ನು ಸಾಂಸ್ಕೃತಿಕವಾಗಿಯೂ ಕನ್ನಡ ಮತ್ತು ಇಂಗ್ಲಿಷನ್ನು ವ್ಯಾವಹಾರಿಕವಾಗಿಯೂ ಕಲಿಯಬಹುದು. ಹಾಗೆಯೇ ಇನ್ನೊಬ್ಬ ಕನ್ನಡವನ್ನು ಸಾಂಸ್ಕೃತಿಕವಾಗಿಯೂ ಇಂಗ್ಲಿಷ್ ಮತ್ತು ಹಿಂದಿಯನ್ನು ವ್ಯಾವಹಾರಿಕವಾಗಿಯೂ ಕಲಿಯಬಹುದು. ಒಬ್ಬ ಆಂಗ್ಲೋ ಇಂಡಿಯನ್ ಅಥವಾ ಇಂಗ್ಲಿಷ್ ವ್ಯಾಮೋಹಿಯಾದ ಯಾರಾದರೂ ಇಂಗ್ಲಿಷನ್ನು ಸಾಂಸ್ಕೃತಿಕವಾಗಿಯೂ ಕನ್ನಡ ಮತ್ತು ಇನ್ನೊಂದು ಭಾಷೆಯನ್ನು ವ್ಯಾವಹಾರಿಕವಾಗಿಯೂ ಕಲಿಯಬಹುದು. ವ್ಯಾವಹಾರಿಕವಾಗಿ ಕಲಿಯುವುದೆಂದರೆ ರಾಜ್ಯಭಾಷೆಯಾಗಿ ಅದನ್ನು ಬಳಸುವ ಸಾಮರ್ಥ್ಯ ಪಡೆಯುವುದು.

ಒಟ್ಟಿನಲ್ಲಿ ನಾವು ಸಾಧಿಸಬೇಕಾದ ಗುರಿ ಇದು : ಕರ್ನಾಟಕದ ಎಲ್ಲರಿಗೂ ರಾಜ್ಯ ಭಾಷೆಯದ ಕನ್ನಡವನ್ನು ಬಳಸುವುದು ಸಹಜವಾಗಿ ಸಾಧ್ಯವಾಗಬೇಕು. ಈ ಕಾರಣಕ್ಕಾಗಿ ಯಾವ ಕಾಲಕ್ಕೂ ತಂತಮ್ಮ ವಿಶಿಷ್ಟ ಸಂಸ್ಕೃತಿಗಳ ಜೀವಾಳವಾದ ಭಾಷೆಗಳು ಕ್ಷೀಣವಾಗದಂತೆ ಉಳಿಸಿಕೊಂಡಿರುವುದು ಕನ್ನಡನಾಡಿನ ಎಲ್ಲ ಅಲ್ಪಸಂಖ್ಯಾತರಿಗೂ ಮೊದಲಿನದರಷ್ಟೇ ಸಹಜವಾಗಿ  ಸಾಧ್ಯವಾಗಬೇಕು. ಜೊತೆಗೇ ಈ ಸಮೃದ್ಧ ನೆಲದಲ್ಲಿ ಬೇರೂರಿದ ಜನ ಪರಸ್ಪರ ಕೊಡುಕೊಳ್ಳುವ ಜೀವಂತ ವಿನಿಮಯದ ಪ್ರತಿಕ್ರಿಯೆಯಲ್ಲಿ ಹೊರ ದೇಶಗಳ ಜ್ಞಾನ ಸಂಪತ್ತನ್ನು ಆಮದು ಮಾಡಿಕೊಳ್ಳುವುದು ಸಾಧ್ಯವಾಗಬೇಕು. ನೈಸರ್ಗಿಕವಾಗಿಯೇ ಇರುವ ಅಸಮಾನತೆಯನ್ನು ಸಾಧ್ಯವಿದ್ದಷ್ಟೂ ಕಡಿಮೆ ಮಾಡುತ್ತಾ ಹೋಗುವುದೇ ಮಾನವೀಯ ಸಂಸ್ಕೃತಿಯ ಗುರಿಯಾದ್ದರಿಂದ ಇರುವ ಅಸಮಾನತೆಗೆ ಕೃತಕವಾದ ಅಸಮಾನತೆಯನ್ನು ಬೆಸೆದು ಬೆಳೆಸುವಂಥ ಶೈಕ್ಷಣಿಕ ಪದ್ಧತಿಯನ್ನಾಗಲೀ, ಭಾಷಾ ನೀತಿಯನ್ನಾಗಲೀ ನಾವೆಲ್ಲರೂ ವಿರೋಧಿಸಬೇಕು. ಹೀಗೆ ಮಾಡುವಾಗ ಭಾಷೆಯ ಹೆಸರಿನಲ್ಲಿ ಸಮೂಹಸನ್ನಿ (ಮಾಸ್ ಹಿಸ್ಟೀರಿಯಾ) ಬೆಳೆಯುವುದನ್ನು ನಾವು ತಡೆಯದಿದ್ದಲ್ಲಿ ಕನ್ನಡ ನಾಡಿನ ಸೂಕ್ಷ್ಮಜ್ಞರೆಲ್ಲರೂ ಅವಮಾನದಿಂದ ತಲೆ ತಗ್ಗಿಸಬೇಕಾಗುತ್ತದೆ.

ಕನ್ನಡಪ್ರಭ : ೧೩೮೨
ಪ್ರಜಾವಾಣಿ : ೧೪೮೨
ರುಜುವಾತು : , ಏಪ್ರಿಲ್ ಜೂನ್ ೮೨.

* * *