೧೯೮೩: ಕನ್ನಡಿಗರಿಗೆ ತಮ್ಮ ಬಗೆಗಿನ ತಿಳಿವನ್ನು ತುಸುವಾದರೂ ಹೆಚ್ಚಿಸಿರುವ ವರ್ಷವೆನ್ನಬಹುದು. ಕಾಂಗೈ ಆಡಳಿತ ಕೊನೆಗೊಂಡು ಜನತಾ ಅಧಿಕಾರಕ್ಕೆ ಬರಬಹುದೆಂದು ಎಷ್ಟು ಜನ ಊಹಿಸಿದ್ದಾರು? ಎನ್‌ಟಿಆರ್ ನಾಯಕತ್ವದಲ್ಲಿ ಆಂಧ್ರದಲ್ಲಾದ ಬದಲಾವಣೆಗಿಂತ ಕರ್ನಾಟಕದಲ್ಲಾದ್ದು ರಾಜಕೀಯ ಪ್ರಜ್ಞೆಯ ವಿಕಾಸದ ದೃಷ್ಟಿಯಿಂದ ಹೆಚ್ಚು ಮಹತ್ವದ್ದು. ಯಾವೊಬ್ಬ ವ್ಯಕ್ತಿಯ ವರ್ಚಸ್ಸೂ ಈ ಬದಲಾವಣೆಗೆ ಕಾರಣವಲ್ಲವಾದ್ದರಿಂದ ಜಾಣ ರಾಜಕಾರಣಿಯಾದ ಶ್ರೀಮತಿ ಇಂದಿರಾಗಾಂಧಿ ಕರ್ನಾಟಕದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಬಹುದು. ಇಲ್ಲಿ ಆದದ್ದು ಭಾರತದಲ್ಲಿ ಎಲ್ಲೂ ಆಗಬಹುದಾದ್ದು – ಜನರ ಒಳಗುದಿಯನ್ನು ಪ್ರಜಾತಂತ್ರ ವ್ಯವಸ್ಥೆ ಸದ್ದಿಲ್ಲದಂತೆ ಹೊರಹಾಕುವ ರೀತಿಯದು. ದೇವರಾಜ ಅರಸರಿಂದಾಗಿ ಬಾಯಿ ಪಡೆದ ಅಲ್ಪಸಂಖ್ಯಾತ ಜಾತಿಗಳ ಪ್ರಾಬಲ್ಯ ಕಡಿಮೆಯಾಗಿ ಒಕ್ಕಲಿಗ ಮತ್ತು ಲಿಂಗಾಯತರ ಕೈ ಮೇಲಾಯಿತು ಎಂದು ಚುನಾವಣೆಯ ಫಲಿತಾಂಶದ ಬಗ್ಗೆ ವ್ಯಾಖ್ಯಾನಿಸುವವರು ಇನ್ನೊಂದು ಮಹತ್ವದ ಸಂಗತಿ ಮರೆಯುತ್ತಾರೆ. ಕಾಂಗೈಯನ್ನು ಗೆಲ್ಲಿಸುತ್ತಿದ್ದ ಹರಿಜನರು ಕರ್ನಾಟಕದ ಮೀಸಲು ಕ್ಷೇತ್ರಗಳಲ್ಲಿ ವಿರೋಧಪಕ್ಷವನ್ನು ಬೆಂಬಲಿಸಿದ್ದು ಗಮನಾರ್ಹ. ಅಧಿಕಾರಕ್ಕೆ ಬಂದ ಮೇಲ್ಜಾತಿಯ ಜನ ಕೆಳಜಾತಿಯವರ ಈ ಆಶಯವನ್ನು ನಿರ್ಲಕ್ಷಿಸುವಂತಿಲ್ಲ. ಒಂದು ಕಾಲದಲ್ಲಿ ಕಮ್ಯುನಿಸ್ಟರು ತುಂಬ ಸದ್ದು ಮಾಡಿದ್ದ ಆಂಧ್ರದಲ್ಲಿ ಪೌರಾಣಿಕ ಚಿತ್ರಗಳ ಸಿನಿಮಾ ನಾಯಕನೊಬ್ಬ ಅಧಿಕಾರಕ್ಕೆ ಬರುವ ವಿಪರ್ಯಾಸ ಕಂಡರೆ, ರಾಜಕೀಯ ಪ್ರಜ್ಞೆಯ ಬೆಳವಣಿಗೆಯಲ್ಲಿ ಹೆಚ್ಚು ಗದ್ದಲವಿಲ್ಲದಂತೆ ಕರ್ನಾಟಕ ಮುಂದಿನ ಹೆಜ್ಜೆಯಿಟ್ಟಿದೆ. ಮಾರ್ಕ್ಸ್‌ವಾದದ ಸೂಕ್ಷ್ಮಾತಿಸೂಕ್ಷ್ಮಗಳನ್ನು ಚರ್ಚಿಸುವ, ಬಾಳುವ, ಹಲವು ಧೀರರನ್ನು ಪಡೆದ ಆಂಧ್ರಕ್ಕಿಂತ ವ್ಯವಹಾರಜ್ಞ ರಾಜಕಾರಣಿಗಳ ಕರ್ನಾಟಕ ಹೆಚ್ಚು ಪಕ್ವತೆಯಿಂದ ನಡೆದುಕೊಂಡಿದೆ.

ದೇವರಾರ ಅರಸರ ಕಾಲದಲ್ಲೂ ಕರ್ನಾಟಕ ತಾತ್ವಿಕ ರಾಜಕಾರಣದ ಕೇರಳಕ್ಕಿಂತ ಮುಂದಾಯಿತು ಎನ್ನಬಹುದು. ವರ್ಗಪ್ರಜ್ಞೆಯನ್ನು ಜನರಲ್ಲಿ ಕುದುರಿಸಲು ನಿಷ್ಠೆಯಿಂದ ಇಎಂಎಸ್ ಮತ್ತು ಏಕೆಜಿ ಪ್ರಯತ್ನಿಸಿದರೂ ಸಹ ಕೇರಳದಲ್ಲಿ ತಲೆಯೆತ್ತಿದ್ದು ಜಾತಿಗಳು. ಈಡಿಗರು, ನಾಯರ್‌ಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ತಮ್ಮ ತಮ್ಮ ಜಾತಿಯ ಪಕ್ಷಗಳನ್ನು ಕಟ್ಟಿಕೊಂಡು ಬೆಳೆದರು. ಆದರೆ ದೇವರಾಜ ಅರಸರು ಜಾತಿಯ ಬಗ್ಗೆ ಮಾತಾಡುತ್ತಲೇ ಒಟ್ಟಿನಲ್ಲಿ ವರ್ಗಪ್ರಜ್ಞೆ ಕರ್ನಾಟಕದಲ್ಲಿ ಅಂಕುರಿಸುವುದಕ್ಕೆ ಕಾರಣರಾದರು. ಅರಸರ ರಾಜಕೀಯ ಎಷ್ಟು ಆಳವಾದ ಬೇರು ಬಿಟ್ಟಿದೆಯೋ ಹೇಳಲಾರೆವಾದರೂ ಅಧಿಕರದಲ್ಲಿರುವ ಯಾರೂ ವರ್ಗಲಕ್ಷಣಗಳನ್ನು ಪಡೆದ ಸಣ್ಣ ಪುಟ್ಟ ಜಾತಿಗಳ ಆಶೋತ್ತರಗಳನ್ನು ಕಡೆಗಣಿಸುವಂತಿಲ್ಲ. ಪ್ರಜಾತಂತ್ರದ ಒತ್ತಡವೇ ತತ್ವದ ಹುಟ್ಟಿಗೆ ಕಾರಣವಾಗುವ ಕರ್ನಾಟಕದ ಕ್ರಮ, ತತ್ವದ ಸುತ್ತ ಕೇಡರ್ ನಿಷ್ಠೆಯಲ್ಲಿ ಬೆಳೆದುಕೊಳ್ಳುವ ರಾಜಕಾರಣಕ್ಕಿಂತ ಹೆಚ್ಚು ನೈಸರ್ಗಿಕವಾದ್ದರಿಂದ ಗಟ್ಟಿಯಾಗಿ ನಿಲ್ಲುವಂಥದೆನ್ನಬಹುದು.

ಅನುಭವದ ಸಾರವಾಗಿ ಬರುವ ತಾತ್ವಿಕತೆಗೆ ವ್ಯಾವಹಾರಿಕ ಯಶಸ್ಸುಇರುತ್ತದೆಯೆಂಬ ಮೇಲಿನ ಮಾತನ್ನು ಹೇಳುವಾಗ ಕರ್ನಾಟಕದ ನಾವು ಅಷ್ಟೇನು ಸಂತೋಷಪಡಬೇಕಾದ್ದಿಲ್ಲ. ತತ್ವಕ್ಕಾಗಿ ನಾವು ಯಾವತ್ತೂ ಹೊರರಾಜ್ಯಗಳಿಗೆ ಕೈಯೊಡ್ಡಿದವರೇ. ನಮ್ಮ ಸಮಕಾಲೀನ ಆಧ್ಯಾತ್ಮ ಬಂಗಾಳದಿಂದ ಬಂದದ್ದು. ತಾತ್ವಿಕ ಚಿಂತನೆಯ ರಾಜಕಾರಣಿಗಳಲ್ಲಿ ಹಲವು ಜನ ಮಹಾರಾಷ್ಟ್ರದವರು – ಅಂಬೇಡ್ಕರ್, ತಿಲಕ್, ಗೋಖಲೆ, ಬಿಟ್ಟರೆ ಉತ್ತರದ ಲೋಹಿಯಾ, ತಮಿಳುನಾಡಿನ ಪೆರಿಯಾರ್. ಕರ್ನಾಟಕದಲ್ಲಿ ತಾತ್ವಿಕ ರಾಜಕಾರಣಕ್ಕೆ ಹೆಸರಾದವರು ಬಹು ಕಡಿಮೆ ಜನ. ಶಾಂತವೇರಿ ಗೋಪಾಲಗೌಡರು ತತ್ವದ ಆಧಾರದ ಮೇಲೆ ರಾಜಕಾರಣ ಮಾಡಿ ಬಳಲಿ ಸತ್ತರು. ತಾತ್ವಿಕ ನಿಷ್ಠೆಯ ಕಮ್ಯುನಿಸ್ಟರು ಕರ್ನಾಟಕದ ಹೃದಯ ಗೆಲ್ಲಲಾರದೆ ಹೋದರು. ಇಂಗ್ಲಿಷ್ ಕವಿ ವಿಮರ್ಶಕ ಮ್ಯಾಥ್ಯೂ ಆರ್ನಾಲ್ಡ್ ವ್ಯವಹಾರ ನೈಪುಣ್ಯದ ಇಂಗ್ಲೆಂಡನ್ನೂ ತಾತ್ವಿಕ ಪರವಶತೆಯ ಫ್ರಾನ್ಸ್‌ನ್ನೂ ಹೋಲಿಸುತ್ತ ಆಡುವ ಮಾತು ನಮಗೂ ಅನ್ವಯಿಸುವಂಥದ್ದು. ಇಂಗ್ಲೆಂಡಿನಲ್ಲಿ ಕ್ರಾಂತಿಯಾಯಿತು – ಆದರೆ ಆ ಕ್ರಾಂತಿ ಕೇಳಿದ ಪ್ರಶ್ನೆ : “ಇದು ಕಾನೂನು ಬದ್ಧವೆ?” ಎಂದು. ಫ್ರಾನ್ಸ್‌ನಲ್ಲೂ ಕ್ರಾಂತಿಯಾಯಿತು. ಆದರೆ ಫ್ರಾನ್ಸ್‌ನ ಕ್ರಾಂತಿ ಮೂಲಭೂತ ಪ್ರಶ್ನೆ ಕೇಳಿತು : ದೇಶದ ವ್ಯವಸ್ಥೆ ವೈಚಾರಿಕವಾಗಿ ಸಮರ್ಪಕವೇ ಎಂದು. ಹೀಗೆ ಕೇಳುವುದರ ಮೂಲಕ ಎಲ್ಲ ದೇಶಗಳಿಗೂ ಕಾಲಗಳಿಗೂ ಮಾದರಿಯಾಗುವ ಬದಲಾವಣೆಗೆ ಕಾರಣವಾಯಿತು. ಅಂದಿನ ಕ್ರಾಂತಿಯ ಫಲವಾಗಿ ಇಂದಿಗೂ ಫ್ರಾನ್ಸ್ ಇಂಗ್ಲೆಂಡಿಗಿಂತ ಹೆಚ್ಚು ಜೀವಂತ ರಾಷ್ಟ್ರವಾಗಿ ಉಳಿದಿದೆ.

ಆಯಾ ಕಾಲಕ್ಕೆ ಸಾಧ್ಯವಾದದ್ದನ್ನು ಸಾಧಿಸಬಲ್ಲ ಕೌಶಲವೇ ರಾಜಕೀಯವೆನ್ನಬಹುದು. ಆದರೆ ಏನನ್ನು ಎಷ್ಟನ್ನು ನಾವು ಸಾಧಿಸಬಲ್ಲೆವು ಎನ್ನುವಾಗ ವ್ಯವಹಾರಜ್ಞ – ನೈಪುಣ್ಯವೂ, ಕ್ರಾಂತಿಕಾರಕ ತಾತ್ವಿಕ ನಿಷ್ಠೆಯೂ ಒಂದಕ್ಕೊಂದು ಹೆಣೆದುಕೊಂಡ ಪ್ರಜ್ಞಾವಂತಿಕೆ ರಾಜಕೀಯ ಆಂದೋಳನಗಳಿಗೆ ಇರಬೇಕಾಗುತ್ತದೆ. ಕೇವಲ ವ್ಯಾವಹಾರಿಕ ಜಾಣತನ ಸಮಯಸಾಧಕ ರಾಜಕೀಯವಾಗಿಬಿಡಬಹುದು. ಅಂತೆಯೇ ಕೇವಲ ಕ್ರಾಂತಿಕಾರಕ ತಾತ್ವಿಕ ನಿಷ್ಠೆ ಮೂರ್ಖ ಉತ್ಸಾಹದಲ್ಲಿ ಮುಗ್ಗರಿಸಬಹುದು. ಪ್ರತಿಕಾಲವೂ ತಾನು ಇಡಬಹುದಾದ ಮುಂದಿನ ಹೆಜ್ಜೆಯನ್ನು ಇಡುವಂತೆ ಮಾಡಬಲ್ಲವನು ಮೇಲಿನ ಎರಡು ಅತಿರೇಕಗಳಲ್ಲಿ ವಿಫಲವಾಗದಂತೆ ಕಾರ್ಯೋನ್ಮುಖನಾಗುತ್ತಾನೆ.

ಕರ್ನಾಟಕದಲ್ಲಿ ಜನಮನವನ್ನು ಪ್ರಗತಿ ಪರವಾಗಿ ಕಟ್ಟಬಲ್ಲ ಶಕ್ತಿಯಿರುವ ಮೂರು ಮುಖ್ಯ ಆಂದೋಳನಗಳೆಂದರೆ; ರೈತ ಆಂದೋಳನ, ದಲಿತ ಆಂದೋಳನ ಮತ್ತು ಭಾಷಾ ಆಂದೋಳನ. ಈ ಮೂರು ಆಂದೋಳನಗಳ ಯಶಸ್ಸೂ ಯಾವ ಹದದಲ್ಲಿ ಇವು ತಾತ್ವಿಕ ನಿಷ್ಠೆಯನ್ನೂ ವ್ಯಾವಹಾರಿಕವಾದ ವಸ್ತುನಿಷ್ಠ ವಿವೇಕವನ್ನೂ ಮೈಗೂಡಿಸಿಕೊಳ್ಳಬಲ್ಲವು ಎಂಬುದರ ಮೇಲೆ ನಿಂತಿದೆ.

ಕರ್ನಾಟಕ ಸಮಾಜವಾದಿಗಳು ಐವತ್ತರ ದಶಕದಲ್ಲಿ ಪ್ರಾರಂಭಿಸಿದ ರೈತ ಆಂದೋಳನದ ಗುರಿ “ಉಳುವವನೇ ಹೊಲದೊಡೆಯ” ನಾಗಬೇಕೆಂಬುವುದು. ಈ ಆಂದೋಳನದ ಫಲ ಅಷ್ಟಿಷ್ಟು ದೊರೆತದ್ದು ಗೇಣಿದಾರ ಹೊಲದೊಡೆಯನಾಗಿ. ನಾನು ಮೊದಲು ಹೇಳಿದ ಕಾಲದ ಮಿತಿಯಲ್ಲಿ ಆಗಬಹುದಾಗಿದ್ದ ಸಾಧನೆಯಿದು. ಆದರೆ ಯಾವ ರೈತ ಚಳವಳಿಯೇ ಆಗಲಿ ತನ್ನ ಮೂಲಭೂತ ಉದ್ದೇಶವಾದ ಉಳುವವನೇ ನೆಲದ ಸ್ವಾಮಿಯಾಗಬೇಕೆಂಬ ಆದರ್ಶವನ್ನು ಕೈಬಿಟ್ಟಲ್ಲಿ ಅದು ಬಹುತೇಕ ಸಂಬಳಸಾರಿಗೆಗಳನ್ನು ಅಷ್ಟಿಷ್ಟು ಹೆಚ್ಚಿಸಿಕೊಳ್ಳುತ್ತ ಹೋಗುವ ಆರ್ತಿಕ ಹಿತಸಾಧನೆಗಷ್ಟೆ ಪರಿಮಿತವಾದ ಟ್ರೇಡ್ ಯೂನಿಯನ್ ವ್ಯವಹಾರದಂತಾಗುತ್ತದೆ. ರೈತಸಂಘ ಛೇಂಬರ್ ಆಫ್ ಕಾಮರ್ಸ್‌ನ ಬಗೆಯ ಇನ್ನೊಂದು ಸಂಸ್ಥೆಯಾಗಿ ಬಿಡುತ್ತದೆ. ಕ್ರಾಂತಿಯ ಘನೋದ್ದೇಶ ಕೇವಲ ಘೋಷಣೆಯ ಮುಖವಾಡವಾಗುತ್ತದೆ.

ಶ್ರೀಮಂತ ರೈತರ ಒಕ್ಕೂಟ ಭಾಷಣದಲ್ಲಿ ಎಷ್ಟೇ ನಗರ ಮತ್ತು ಹಳ್ಳಿಯ ವೈರುಧ್ಯಗಳ ಬಗ್ಗೆ ಮಾತಾಡಲಿ, ಇವರುಗಳು ಬದುಕುತ್ತಿರುವ ಸ್ಥಳಗಳು ನಗರಗಳಿಂದ ಮೂರು ನಾಲ್ಕು ಗಂಟೆ ದೂರದವು. ಇವರ ಕುಲಬಾಂಧವರು ವ್ಯಾಪಾರದಲ್ಲೂ ಅಧಿಕಾರಿಶಾಹಿಯಲ್ಲೂ ಈಗಾಗಲೇ ನಗರ ನಿವಾಸಿಗಳಾದ ಪಾಲುದಾರರು. ಸ್ವಹಿತ ಸಾಧನೆಯ ಇವರ ಆಂದೋಳನಕ್ಕೆ ಮಹಾರಾಷ್ಟ್ರದ ಶರದ್ ಜೋಷಿಯಂಥವರ ನಾಯಕತ್ವ ಸಮಂಜಸವಾದ್ದು, ಪ್ರಾಮಾಣಿಕವಾದ್ದು. ಸಮಾಜವಾದೀ ತತ್ವಗಳಲ್ಲಿ ತಮಗೆ ಶ್ರದ್ಧೆಯಿದೆಯೆಂದು ಹೇಳುವ ಪ್ರೊಫೆಸರ್ ನಂಜುಂಡಸ್ವಾಮಿಯವರಂಥ ಕರ್ನಾಟಕದ ರೈತ ನಾಯಕರು ಶರದ್ ಜೋಷಿಗಿಂತ ಭಿನ್ನರಾಗಲು ಪ್ರಯತ್ನಿಸುತ್ತಿದ್ದಾರೆ – ಆದರೆ ಸಫಲರಾದಂತೆ ಕಾಣುವುದಿಲ್ಲ. ಹಳ್ಳಿಯ ಭೂಹೀನ ಕಾರ್ಮಿಕರಲ್ಲಿ ಬಹುಮಂದಿ ಅಸ್ಪೃಶ್ಯ ದಲಿತರು. ಈ ಜನರ ಹಿತಕ್ಕೂ ರೈತ ಚಳುವಳಿಯ ಸದಸ್ಯರ ಹಿತಕ್ಕೂ ನಡುವೆ ಘರ್ಷಣೆಗಳು ಇವೆ. ಈ ಘರ್ಷಣೆಗಳನ್ನು ಕಡೆಗಾಣಿಸುವಂತಿಲ್ಲ. ಜೊತೆಗೇ ನಗರಜೀವಿಗಳಾದ ಅಧಿಕಾರಿಗಳ ಸೊಕ್ಕನ್ನು ಅಡಗಿಸುವಲ್ಲಿ ರೈತಸಂಘ ಮಾಡಿರುವ ಸಾಧನೆಯನ್ನು ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ರೈತ ಚಳವಳಿಯವರು ದಲಿತರನ್ನೂ ತಮ್ಮ ಜೊತೆಯಲ್ಲಿಟ್ಟುಕೊಳ್ಳಬಲ್ಲರು ಎಂಬುದರ ಮೇಲೆ ರೈತ ಚಳವಳಿಯ ಎಡಪಂಥೀಯ ನಿಲುವುಗಳ ನೈಜತೆ ಸಾಬೀತಾಗುತ್ತದೆ. ಸ್ವಾತಂತ್ರ‍್ಯ ಸಂಗ್ರಾಮದ ಕಾಲದಲ್ಲಿ ಸುಧಾರಣಾವಾದಿಗಳಿಗೂ, ಸ್ವಾತಂತ್ರ‍್ಯವಾದಿಗಳಿಗೂ ವಿರೋಧವಿದ್ದಾಗ ಗಾಂಧೀಜಿ ಒಂದನ್ನು ಇನ್ನೊಂದರ ಜೊತೆ ಬೆಸೆಯುತ್ತ ಹೋದ ಮಾರ್ಗ ಇವತ್ತಿಗೂ ಅನುಸರಣೀಯವಾಗಿ ಉಳಿದಿದೆ. ಸ್ವಾತಂತ್ರ‍್ಯ ಚಳವಳಿಯ ಉಬ್ಬರದ ಕಾಲದಲ್ಲೇ ಗಾಂಧೀಜಿ ಜನರ ಉತ್ಸಾಹವನ್ನು ಹರಿಜನರ ವಿಮೋಚನೆಯ ದಿಕ್ಕಲ್ಲಿ ಹರಿಸುತ್ತಿದ್ದರು – ನೆಹರೂ ಅಂಥವರ ಭಿನ್ನಮತವನ್ನು ನಿರ್ಲಕ್ಷಿಸಿ ಗಾಂಧೀಜಿ ಇಂಡಿಯಾದ ಜನತೆಯ ಬ್ರಿಟಿಷ್ ವಿರೋಧವನ್ನು ತನ್ನ ಅನುಯಾಯಿಗಳೇ ಆದ ಮೇಲ್ಜಾತಿಗಳ ಮೇಲೆ ತಿರುಗಿಸಿ ಹರಿಸಿದ್ದಿದೆ.

ಒಟ್ಟಿನಲ್ಲಿ ಹೀಗೆನ್ನಬಹುದು : ಉಳುವವನೇ ಭೂಮಾಲೀಕನಾಗಬೇಕೆಂಬ ತತ್ವಕ್ಕಿರುವ ಸಂಕೀರ್ಣ ವ್ಯಾವಹಾರಿಕ ತೊಡಕುಗಳನ್ನು ಬದಿಗೊತ್ತಿ ಮುನ್ನುಗ್ಗುವ ನಕ್ಸಲೀಯರ ಛಲ ಅನಗತ್ಯವಾದ ಹಠಮಾರೀ ಹಿಂಸೆಯಲ್ಲಿ ಕೊನೆಗಾಣುತ್ತದೆ; ಅಂತೆಯೇ ಶ್ರೀಮಂತರ ರೈತರ ಹಿತ ಸಾಧನೆಗೆ ಬದ್ಧವಾದ ರೈತಚಳವಳಿ ಇನ್ನೊಂದು ಮೇಲ್ವರ್ಗಗಳ ಹಿತಸಾಧನೆಯ ಲಾಬಿಯಾಗುತ್ತದೆ. ಸಾಮಾಜಿಕ ಬದಲಾವಣೆಯ ಆಂದೋಳನವಾಗಬಲ್ಲ ಶಕ್ತಿ ಪಡೆದ ರೈತ ಚಳವಳಿ ಪ್ರಸ್ತುತದಲ್ಲಿ ಯಾವುದು ಸಾಧ್ಯ, ಹೀಗೆ ಸಾಧ್ಯವಾಗುವಂಥದು ಯಾವ ಸಾಮಾಜಿಕ ಗುರಿಯನ್ನು ಹೊಂದಿರಬೇಕು ಎಂಬುದನ್ನು ತನ್ನ ಕ್ರಿಯಾಶೀಲತೆಯಲ್ಲೆ ಸ್ಪಷ್ಟಪಡಿಸಿಕೊಳ್ಳಬೇಕು. ಅಂದರೆ ವ್ಯಾವಹಾರಿಕ ವಿವೇಕ ಮತ್ತು ತಾತ್ವಿಕ ಬದ್ಧತೆಗಳನ್ನ ಹೆಣೆಯುತ್ತ ಮುನ್ನಡೆಯಬೇಕು.

ಜಾತಿ ವ್ಯವಸ್ಥೆಯ ಎಲ್ಲ ದುಷ್ಫಲಗಳನ್ನೂ ಉಣ್ಣುವ ದಲಿತರ ಚಳವಳಿಯೂ ಇನ್ನೊಂದು ಬಗೆಯ ಸಂದಿಗ್ಧವನ್ನು ಎದುರಿಸಬೇಕಾಗಿದೆ – ಎದುರಿಸುತ್ತಲೂ ಇದೆ. ದಲಿತ ಸಂಘರ್ಷ ಸಮಿತಿ ಎಷ್ಟರಮಟ್ಟಿಗೆ ವ್ಯಾವಹಾರಿಕ ವಿವೇಕವನ್ನೂ ಕ್ರಾಂತಿಕಾರಕ ತಾತ್ವಿಕ ಹಠವನ್ನೂ ಬೆಸೆಯಬಲ್ಲದು ಎಂಬುದು ಮುಖ್ಯವಾದ ಪ್ರಶ್ನೆ, ಎಚ್ಚೆತ್ತ ದಲಿತರ ಸಾಧನೆ ಕೇವಲ ಸರ್ಕಾರೀ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಮಾತ್ರ ಸಫಲವಾಗದೆ, ಭಾರತದ ಇಡೀ ಸಮಾಜದ ಪರಿವರ್ತನೆಯ ತಾತ್ವಿಕತೆಯನ್ನು ತನ್ನ ಆಂದೋಲನದಲ್ಲಿ ಹೇಗೆ ಮೈಗೂಡಿಸಿಕೊಳ್ಳಬಲ್ಲುದು ಎನ್ನುವುದು ಅದರ ಕ್ರಿಯಾ ವಿಧಾನದಲ್ಲೆ ಸ್ಪಷ್ಟವಾಗುತ್ತ ಹೋಗಬೇಕಾಗಿದೆ. ಹಳ್ಳಿಗಳಲ್ಲಿ ಅಸ್ಪೃಶ್ಯ ದಲಿತರಿಗೆ ವಿರೋಧಿಗಳಾಗಿರುವುದು ಶ್ರೀಮಂತರು ಮಾತ್ರವಲ್ಲ; ಎಲ್ಲ ಜಾತಿಯ ಜಾತ್ಯಂಧರಾದ ಬಡವರೂ ಅವರಿಗೆ ವಿರೋಧಿಗಳಾಗಿರುವುದುಂಟು. ಆದ್ದರಿಂದ ಹಳ್ಳಿ ಹಳ್ಳಿಯಲ್ಲೂ ದಲಿತ ಅಸ್ಪೃಶ್ಯರೇನಾದರೂ ಸಂಘರ್ಷಕ್ಕೆ ನಿಂತಲ್ಲಿ ಬಡಜನರ ನಡುವಿನ ಅರ್ಥಹೀನವಾದ ಹೋರಾಟವಾಗಿ ಅದು ಪರಿಣಮಿಸಿಬಿಡಬಹುದು. ಅಸ್ಪೃಶ್ಯರಲ್ಲದ ಬಡವರನ್ನೂ ತಮ್ಮ ಜೊತೆ ಇಟ್ಟುಕೊಳ್ಲದಿದ್ದಲ್ಲಿ ದಲಿತ ಸಂಘರ್ಷ ಸಮಿತಿ ಸಂಪೂರ್ಣ ಪೊಲೀಸ್ ರಕ್ಷಣೆಯಲ್ಲಿ ತಮ್ಮ ಜನರ ಪ್ರಾಣವನ್ನು ಕಾಯಬೇಕಾಗಿ ಬರುತ್ತದೆ. ಹತ್ತಿರವಾಗಲು ಸಾಧ್ಯವಿರುವ ಉಳಿದ ಬಡಜನತೆಯಿಂದ ದೂರವಾಗಿ, ಯಾವತ್ತೂ ನಂಬಲನರ್ಹರಾದ ಅಧಿಕಾರಶಾಹಿಗೆ ಪ್ರಾಣ ರಕ್ಷಣೆಗಾಗಿ ಶರಣಾಗುವುದು ತಿಳಿಗೇಡಿತನವಾಗುತ್ತದೆ.

ಆದರೆ ದಲಿತ ಜನಾಂಗ ಅಸ್ಪೃಶ್ಯರಲ್ಲದ ಬಡವರ ಜೊತೆ ಒಟ್ಟಾಗುವುದು ಹೇಳುವಷ್ಟು ಸುಲಭವಲ್ಲ. ಯಾಕೆಂದರೆ ಮೇಲುಜಾತಿಯ ನಾಯಕರ ವಂಚಕ ರಾಜಕಾರಣಕ್ಕವರು ಬಲಿಪಶುಗಳಾಗಿರುತ್ತಾರೆ. ಆದರೂ ಕರ್ನಾಟಕದ ರೈತ ಚಳವಳಿಯಲ್ಲಿ ತೊಡಗಿರುವ ಕೆಲವು ಸಮಾಜವಾದಿಗಳೂ, ದಲಿತ ಸಂಘರ್ಷ ಸಮಿತಿಯ ಕ್ರಿಯಾಶೀಲರೂ ಈಚೆಗೆ ನಡೆಸುತ್ತಿರುವ ಸಂವಾದಗಳಿಂದ ಎರಡು ಚಳುವಳಿಗಳಲ್ಲೂ ಪುರೋಗಾಮಿ ಆಲೋಚನೆಗಳು ಅಂಕುರಿಸಬಲ್ಲ ಭರವಸೆ ಮೂಡಿದೆ. ೧೯೮೩ನೇ ವರ್ಷದಲ್ಲಿ ಮೊಳೆಯುತ್ತಿರುವ ಈ ಬೀಜ ಮುರುಟದಂತೆ ನೋಡಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆ ಇನ್ನೂ ಆಶಾದಾಯಕವೆನ್ನುವಂತೆ ಕೆಲಸ ಮಾಡುತ್ತಿರುವಾಗ ರೈತ ಚಳವಳಿಯಾಗಲೀ, ದಲಿತ ಚಳವಳಿಯಾಗಲೀ ಅತಿರೇಕಕ್ಕೆ ಹೋಗಿ ತಮ್ಮ ಆಶಯಗಳನ್ನು ಸಫಲಗೊಳಿಸಿಕೊಳ್ಳಲಾರವು. “ಎರಡು ಹೆಜ್ಜೆ ಮುಂದೆ, ಒಂದು ಹೆಜ್ಜೆ ಹಿಂದೆ” ಎನ್ನುವ ಕ್ರಾಂತಿಕಾರಕ ಕ್ರಿಯಾವಿಧಾನವನ್ನು ವ್ಯಾವಹಾರಿಕ ವಿವೇಕ ಮತ್ತು ಬದಲಾವಣೆಯ ಹಂಬಲವನ್ನು ಒಟ್ಟಾಗಿ ಪಡಕೊಂಡ ಚಳವಳಿಗಾರರು ಮಾತ್ರ ಕಲಿಯಬಲ್ಲರು. ಕರ್ನಾಟಕದ ರೈತರು ಮತ್ತು ದಲಿತರು ಎಷ್ಟರಮಟ್ಟಿಗೆ ಈ ವಿಧಾನದಲ್ಲಿ ಮುಂದುವರಿದಾರು ಎಂಬುದನ್ನು ನಾವು ಕಾದು ನೋಡಬೇಕು.

ಮೂರನೆಯದಾದ ಭಾಷಾ ಚಳವಳಿ ಕನ್ನಡ ಜನರ ಆತ್ಮಗೌರವವನ್ನು ಹೆಚ್ಚಿಸುವಂಥದ್ದು, ಬಡಜನರಿಗೆ ಬಾಯಿಕೊಡುವಂಥದ್ದು. ಈ ಚಳುವಳಿ ಅತಿರೇಕಕ್ಕೆ ಹೋದಲ್ಲಿ ಅದರ ನಾಯಕರಾದ ಡಾ. ಚಿದಾನಂದಮೂರ್ತಿಯಾಗಲೀ, ಚಂದ್ರಶೇಖರ ಪಾಟೀಲರಾಗಲೀ ಇರುವುದಿಲ್ಲ; ಡಾ. ರಾಜ್‌ಕುಮಾರ್ ಬಳಗದವರು ಅದರ ನೇತಾರರಾಗುತ್ತಾರೆ. ಜನರು ಆಡುವ ಭಾಷೆಗೆ ಪ್ರಾಮುಖ್ಯ ಇರಬೇಕೆಂಬ ಚಳುವಳಿ ಜನರ ಭಾಷೆಗಳೇ ಆದ ಉದು, ಮರಾಠಿ, ತಮಿಳುಗಳನ್ನು ಮಾತಾಡುವವರನ್ನು ಕಂಡು ಕೆಂಡ ಕಾರುವುದು ಅಷ್ಟೇನೂ ಸಂತೋಷದಾಯಕ ನೋಟವಲ್ಲ. ಆದರೆ ಬೆಂಗಳೂರಿನಂಥ ನಗರಗಳಲ್ಲಿ ಈ ಬಗೆಯ ಸ್ಲೋಗನ್ನುಗಳು ಸದ್ಯಕ್ಕೆ ರಂಜವಾಗಿರುತ್ತವೆ. ಸಮೂಹ ಸನ್ನಿಗೆ ಕಾರಣವಾಗದಂತೆ ಭಾಷಾ ಚಳುವಳಿಯನ್ನು ನಡೆಸಿಕೊಂಡು ಹೋದಲ್ಲಿ ಮಾತ್ರ ಅದು ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದೀತು. ಶ್ರೀಯುತರಾದ ವಾಟಾಳ್ ನಾಗರಾಜ್, ನಾರಾಯಣ ಕುಮಾರ್ ರಂಥವರು ಮಾತ್ರ ಪಡೆಯಬಲ್ಲ ಯಶಸ್ಸಿಗೆ ಗೋಕಾಕ್ ಚಳವಳಿಯ ನಾಯಕರು ಮನಸೋಲಬಾರದು. ಸದ್ಯದ ಲಾಭಕ್ಕಾಗಿ ಭಾಷಾ ಚಳುವಳಿಯ ಜನಭಾಷಾ ಪಾರಮ್ಯದ ಮೂಲತತ್ವದ ನೈತಿಕತೆಯನ್ನು ಕಳೆದುಕೊಳ್ಳಬಾರದು. ಉದಾಹರಣೆಗೆ ನಮ್ಮ ಸರ್ಕಾರ ಮೂರನೇ ಮತ್ತು ನಾಲ್ಕನೇ ದರ್ಜೆಯ ನೌಕರರಿಗೆ ಕನ್ನಡ ಬಾರದಿದ್ದರೂ ಸರ್ಕಾರಿ ಉದ್ಯೋಗಗಳನ್ನು ಕೊಡುವುದಾಗಿ ಪ್ರಕಟಿಸಿದ್ದಾರೆ. ಭಾಷಾ ಚಳುವಳಿಯ ಜನ ಇದನ್ನು ವಿರೋಧಿಸಿದ್ದಾರೆ. ಐಎಎಸ್ ದರ್ಜೆಯ ಅಧಿಕಾರಿಗಳಿಗೆ ಇರುವ ಸವಲತ್ತು ಬಡವರಾದ ಉದ್ಯೋಗಾರ್ಥಿಗಳಿಗೆ ಇರಬಾರದೆ ಎಂದು ಸರ್ಕಾರ ಹೇಳುತ್ತದೆ. ಕೆಲಸ ಸಿಕ್ಕಮೇಲೆ ಅವರಿಗೆ ಕನ್ನಡ ಕಲಿಯಲು ನಿಗದಿಯಾದ ಕಾಲಾವಕಾಶವಿರುತ್ತದೆ. ಕಲಿಯದಿದ್ದಲ್ಲಿ ಕೆಲಸವನ್ನು ಖಾಯಂ ಮಾಡುವುದಿಲ್ಲ ಎಂಬ ಸರ್ಕಾರದ ಆಶ್ವಾಸನೆಯನ್ನು ಚಳವಳಿಗಾರರು ನಂಬುತ್ತಿಲ್ಲ. ಶ್ರೀ ಅಜೀಜ್ ಸೇಠರು ನ್ಯಾಯವಾಗಿಯೇ ವಾದಿಸುತ್ತಾರೆ: ”ಉರ್ದು ಶಾಲೆಯಲ್ಲಿ ನಾವು ಹಿಂದಿನಿಂದ ಬೇಡುತ್ತಾ ಬಂದರೂ ನಿವು ನಮಗೆ ಕನ್ನಡ ಕಲಿಸಲಿಲ್ಲ, ಈಗ ಏಕ್‌ದಂ ನಮಗೆ ಕನ್ನಡ ತಿಳಿಯದೆಂದು ಯಾಕೆ ಹೊರಗಿಡುತ್ತಿದ್ದೀರಿ?”

ಭಾಷಾ ಚಳವಳಿಯ ಜನ ಹೃದಯಹೀನರಂತೆ ವರ್ತಿಸಬಾರದು. ಬೇರೆ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾದ ಕನ್ನಡಿಗರು ಇಂಥದೇ ಅತಿರೇಕದ ಚಳವಳಿಗಳ ನಡುವೆ ಭಯಗ್ರಸ್ತರಾಗಿ ಬದುಕುತ್ತಿದ್ದಾರೆಂಬುದನ್ನು ಮರೆಯಬಾರದು. ವಿಚಿತ್ರವೆಂದರೆ ಡಾ. ಚಿದಾನಂದಮೂರ್ತಿಯವರಂಥ ಧೀಮಂತ ಸಂಶೋಧಕರೂ ಕೆಲವು ಸತ್ಯಗಳನ್ನು ಕಾಣಲಾರದೇ ಹೋಗಿದ್ದಾರೆ. ಮೂರು ಮತ್ತು ನಾಲ್ಕನೇ ದರ್ಜೆಯ ಸರ್ಕಾರಿ ಕೆಲಸಗಳನ್ನು ಅಪೇಕ್ಷಿಸುವ ಬಹುಮಂದಿ ಜನ ಬಡವರು. ತಾನು ಬದುಕುತ್ತಿರುವ ರಾಜ್ಯದ ಭಾಷೆ ಗೊತ್ತಿಲ್ಲದೆ ಯಾವ ಬಡವನೂ ಕಾಲ ಹಾಕಲಾರ. ನಮ್ಮ ಬೀದಿಗಳಲ್ಲಿ ಸಣ್ಣ ಅಂಗಡಿಗಳನ್ನಿಟ್ಟು ಬದುಕುವ ಯಾವ ಕೇರಳದವನೂ ಕನ್ನಡ ಮಾತನಾಡದೆ ತನ್ನ ವ್ಯಾಪಾರ ಕುದುರಿಸಿಕೊಳ್ಳಲಾರ. ಬೀದಿಯಲ್ಲಿ ಬದುಕಬೇಕಾದ ಎಲ್ಲರಿಗೂ ಕನ್ನಡ ಮಾತನಾಡಲು ಗೊತ್ತಿದ್ದೇ ಇರುತ್ತದೆ. ಇದಕ್ಕೆ ವಿನಾಯಿತಿಯಿದ್ದರೂ ಅದು ಅಷ್ಟು ದೊಡ್ಡ ಸಂಗತಿಯಲ್ಲ. ಆದರೆ ಕರ್ನಾಟಕಕ್ಕೆ ಉದ್ಯಮಶೀಲರಾಗಿ ಬಂದ ಶ್ರೀಮಂತರಾಗಲೀ, ದೊಡ್ಡ ಹುದ್ದೆಯ ಅಧಿಕಾರಿಗಳಾಗಲೀ ಕನ್ನಡ ಮಾತಾಡದೇ ಇಲ್ಲಿ ವರ್ಷಗಟ್ಟಲೇ ಬದುಕುವುದು ಸಾಧ್ಯ. ಆದ್ದರಿಂದ ಬಡವರಿಗೆ ಕನ್ನಡ ಭಾಷೆ ಗೊತ್ತಿರುತ್ತದೆ. ಕನ್ನಡ ಲಿಪಿ ಗೊತ್ತಿರುವುದಿಲ್ಲ. ಶ್ರೀಮಂತರಿಗೆ ಭಾಷೆಯೂ ಗೊತ್ತಿರುವುದಿಲ್ಲ, ಲಿಪಿಯೂ ಗೊತ್ತಿರುವುದಿಲ್ಲ. ಅಧಿಕಾರಿಗಳಿಗೆ ಕನ್ನಡ ಕಡ್ಡಾಯ ಮಾಡಿದರೆ ನಮ್ಮ ಕಣ್ಣೊರೆಸಲು ಅವರೆಲ್ಲರೂ ಕನ್ನಡ ಲಿಪಿ ಕಲಿತು ಬಿಡುತ್ತಾರೆ; ಭಾಷೆಯನ್ನು ಕಲಿತಿರುವುದಿಲ್ಲ. ಆದ್ದರಿಂದ ಕನ್ನಡ ಲಿಪಿ ಮಾತ್ರ ಗೊತ್ತಿಲ್ಲದ ಬಡ ಜನರಿಗೆ ಕನ್ನಡ ಗೊತ್ತಿಲ್ಲವೆನ್ನುವುದು ತಪ್ಪು ಮಾತ್ರವಲ್ಲ, ಅವೈಜ್ಞಾನಿಕ. ಹಾಗಾದಲ್ಲಿ ನಮ್ಮ ಎಲ್ಲ ಶೇಕಡಾ ಎಪ್ಪತ್ತು ಅನಕ್ಷರಸ್ಥರಿಗೂ ಕನ್ನಡ ಗೊತ್ತಿಲ್ಲವೆನ್ನಬೇಕಾಗುತ್ತದೆ. ಆದ್ದರಿಂದ ಕನ್ನಡ ಮಾತಾಡಬಲ್ಲ ಎಲ್ಲರಿಗೂ ಕೆಲಸದ ಅರ್ಹತೆಯಿದೆ ಎಂದೇ ಪರಿಗಣಿಸಬೇಕು. ಲಿಪಿಯನ್ನು ಕಲಿಯಲು ಸಮಯ ಕೊಡಬೇಕು. ಬೇರೆ ನಾಡುಗಳಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರಿಗೂ ಇದು ಅನ್ವಯವಾಗಬೇಕು. ಯಾಕೆಂದರೆ ಅವರಿಗೂ ಆಯಾ ಭಾಷೆಗಳ ಲಿಪಿ ಗೊತ್ತಿಲ್ಲದಿದ್ದರೂ ಮಾತನಾಡುವಷ್ಟು ತಾವಿರುವ ರಾಜ್ಯದ ಭಾಷೆಗೊತ್ತಿದ್ದೇ ಇರುತ್ತದೆ. ಧಾರವಾಡದ ಕನ್ನಡ, ಬೀದರಿನ ಕನ್ನಡ ಇರುವಂತೆಯೇ ಮುಸ್ಲಿಂ ಕನ್ನಡ, ತಮಿಳರ ಕನ್ನಡ ಇದೆಯೆಂದು ನಾವು ತಿಳಿಯಬೇಕು. ಕಡ್ಡಾಯವಾಗಿ ಸರ್ಕಾರದ ಎಲ್ಲ ಕೆಲಸವೂ ಕನ್ನಡದಲ್ಲಿ ನಡೆಯುವಂತೆ ನೋಡಿಕೊಂಡು ಈ ಎಲ್ಲರೂ ಕನ್ನಡ ಲಿಪಿಯನ್ನು ಕಲಿಯಲೇಬೇಕಾದ ವಾತಾವರಣವನ್ನು ಮೂಡಿಸಬೇಕು.

ಅತಿರೇಕದ ಭಾಷಾ ವ್ಯಾಮೋಹದಿಂದಾಗಿ ಮೇಲಿನ ಸತ್ಯ ನಮಗೆ ಕಾಣದೇ ಹೋಗುತ್ತದೆ. ದಲಿತ ಮತ್ತು ರೈತ ಚಳವಳಿಗಳು ಹೇಗೆ ಬಡವರನ್ನೇ ಬಡವರ ವಿರುದ್ಧ ನಿಲ್ಲಿಸುವ ದುಷ್ಪರಿಣಾಮಕ್ಕೆ ತಮ್ಮ ಅತಿರೇಕದಲ್ಲಿ ಕಾರಣವಾಗಬಹುದೋ ಅಂತೆಯೇ ಉಗ್ರರೂಪದ ಭಾಷಾ ಚಳವಳಿಯೂ ಶಿವಸೇನೆಯ ಫ್ಯಾಸಿಸ್ಟ್ ಸ್ವರೂಪ ಪಡೆದುಕೊಳ್ಳಬಹುದು; ನಿರ್ಗತಿಕರು ಪರಸ್ಪರ ಬಡಿದಾಡುವ ಅರ್ಥಹೀನ ಕಾರ್ಯಕ್ಕೆ ಕಾರಣವಾಗಬಹುದು. ಯಾವೊಂದು ಭಾರತೀಯ ಭಾಷೆಯಲ್ಲಿ ಅಕ್ಷರಸ್ಥನಾದವನೂ ತನ್ನ ಸುತ್ತಮುತ್ತಲಿನ ಉಳಿದ ಭಾಷೆಗಳನ್ನು ಮಾತಾಡಬಲ್ಲವನಾಗಿರುತ್ತಾನೆ. ಆಧರೆ ಇಂಗ್ಲಿಷಿನಲ್ಲಿ ಮಾತ್ರ ಅಕ್ಷರಸ್ಥರಾದವರು ತಮ್ಮಲ್ಲಿನ ಸುತ್ತುಮುತ್ತಿನ ಭಾಷೆಗಳನ್ನು ಕಡೆಗಣಿಸಿ ಬದುಕುವುದು ಸಾಧ್ಯ. ಈ ಸತ್ಯದ ಅರಿವು ಇರುವ ಯಾವ ಭಾಷಾಚಳವಳಿಯೂ ಭಾರತೀಯ ಭಾಷೆಗಳ ನಡುವೆ ಇರಬಹುದಾದ ಅಲ್ಪ ವೈಷಮ್ಯಗಳನ್ನು ದೊಡ್ಡದು ಮಾಡುವುದಿಲ್ಲ – ಗೋಕಾಕ್ ಚಳವಳಿ ವಿರೂಪಗೊಂಡದ್ದಕ್ಕೆ ಕಾರಣ ಈ ಸತ್ಯವನ್ನು ಮರೆತದ್ದು.

ರೈತ ಚಳವಳಿಯಾಗಲಿ, ಭಾಷಾ ಚಳವಳಿಯಾಗಲಿ, ದಲಿತ ಚಳವಳಿಯಾಗಲಿ ತಮ್ಮ ಗುರಿಯನ್ನು ಫಲಿಸಿಕೊಳ್ಳಬೇಕೆಂದರೆ ಅತ್ಯಂತ ಮುಖ್ಯವಾದ್ದು ವಿಕೇಂದ್ರೀಕರಣ. ಪ್ರತಿ ಸಣ್ಣ ಕೆಲಸಕ್ಕೂ ದಿಲ್ಲಿಗೆ ಓಡಬೇಕಗಿ ಬರುವಷ್ಟು ದಿನ ಕನ್ನಡ ಈ ನಾಡಿನಲ್ಲಿ ಕೂಡ ಮುಖ್ಯ ಭಾಷೆಯಾಗಲಾರದು. ನಮ್ಮ ಆರ್ಥಿಕ ವ್ಯವಸ್ಥೆ ಎಲ್ಲಿಯ ತನಕ ದೆಹಲಿಯ ಮರ್ಜಿಯ ಮೇಲೆ ನಿಂತಿರುತ್ತದೊ, ಅಲ್ಲಿಯವರೆಗೆ ರಾಜ್ಯ ತನ್ನ ಹಳ್ಳಿ ಮತ್ತು ನಗರಗಳ ನಡುವಿನ ಅಂತರ ಕೊನೆಗಾಣಿಸುವುದಕ್ಕೆ ಅಗತ್ಯವಾದ ಯೋಜನೆಗಳನ್ನು ಹಾಕಿಕೊಳ್ಳಲಾರದು. ಕೇಂದ್ರದಲ್ಲಿ ಎಲ್ಲ ಅಧಿಕಾರವನ್ನೂ ತನ್ನ ಅಧೀನದಲ್ಲಿಟ್ಟುಕೊಂಡ ಪಕ್ಷದ ಇಚ್ಛಾನುವರ್ತಿಗಳಾಗಿ ದಲಿತರು ಬದುಕಿರಬೇಕಾಗಿರುವ ತನಕ ಅವರು ತಮ್ಮ ಭವಿಷ್ಯಕ್ಕೆ ತಾವೇ ಹೊಣೆಯಾಗುವ ಪ್ರಬುದ್ಧತೆ ಪಡೆಯಲಾರರು. ಅಧಿಕವಾದ ವಿಕೇಂದ್ರಿಕರಣ ನಮ್ಮ ಮುಂದಿರುವ ಅತ್ಯಂತ ಮುಖ್ಯವಾದ ಪ್ರಶ್ನೆ ಎನ್ನಬಹುದು.

ಈ ದಿಕ್ಕಿನಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟು ನಮ್ಮ ಎಲ್ಲ ಆಂದೋಳನಗಳಿಗೂ ಹೆಚ್ಚಿನ ತಾತ್ವಿಕ ಅರಿವು ಮೂಡುವುದಕ್ಕೆ ಸಹಾಯಕವಾಗಿದೆ. ರಾಜ್ಯ ಮತ್ತು ಕೇಂದ್ರದ ಸಂಬಂಧದ ಬಗ್ಗೆ ಹೆಗಡೆಯವರು ಎತ್ತಿರುವ ಪ್ರಶ್ನೆಗಳು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾತ್ರವಲ್ಲದೆ ಕಾಂಗ್ರೆಸ್ ‘ಐ’ ಆಡಳಿತದ ರಾಜ್ಯಗಳಿಗೂ ಒಳಗೊಳಗೇ ಪ್ರಿಯವೆನ್ನಿಸಿರುವುದು ಸಾಧ್ಯ. ಕೇಂದ್ರ ಮತ್ತು ರಾಜ್ಯದ ನಡುವಿನ ಸಂಬಂಧದಲ್ಲಿ ವಿಕೇಂದ್ರಿಕರಣವನ್ನು ಇಚ್ಛಿಸುವ ಸರ್ಕಾರ ತನ್ನ ರಾಜ್ಯದಲ್ಲೂ ಅಧಿಕಾರದ ವಿಕೇಂದ್ರೀಕರಣಕ್ಕೆ ಹಿಂಜರಿಯಬಾರದು. ಲಂಡನ್ನಿನಿಂದ ದೆಹಲಿಗೆ ವರ್ಗಾಯಿಸಲ್ಪಟ್ಟ ಅಧಿಕಾರ ಬೆಂಗಳೂರಿಗೆ ಮಾತ್ರ ದಕ್ಕಿದರೆ ಸಾಲದು; ಪ್ರತಿ ಹಳ್ಳಿಗೂ ಅದರಲ್ಲಿ ಸಮಪಾಲಿರಬೇಕು.

ನಮ್ಮ ಭಾರತದ ಪ್ರಭುತ್ವದ ಮೂರು ಅಡಿಪಾಯಗಳೆಂದರೆ; ಪ್ರಜಾತಂತ್ರ, ಸೆಕ್ಯುಲರ್ ನೀತಿ ಮತ್ತು ಫೆಡರಲ್ ವ್ಯವಸ್ಥೆ. ಎಮರ್ಜನ್ಸನಿಯಲ್ಲಿ ಪ್ರಜಾತಂತ್ರವನ್ನು ಕೆಣಕಿ ಇಂದಿರಾಗಾಂಧಿ ಸೋತರು. ಸೆಕ್ಯುಲರ್ ನೀತಿಗೆ ಧಕ್ಕೆಯಾದೀತೆಂದು ಜನತಾ ಸರ್ಕಾರ ಒಡೆಯಿತು. ಇಂದಿರಾ ಗಾಂಧಿಯವರ ಏಕಾಧಿಪತ್ಯದ ದುರಾಸೆಯಿಂದ ರಾಜ್ಯ ಮತ್ತು ಕೇಂದ್ರಗಳ ನಡುವಿನ ಫೆಡರಲ್ ಆಗಿರಬೇಕಿದ್ದ ಸಂಬಂಧದಲ್ಲಿ ಬಿರುಕುಗಳೆದ್ದಿವೆ. ಅಸ್ಸಾಂ, ಕಾಶ್ಮೀರ, ಬಂಗಾಳ, ಆಂಧ್ರ, ತಮಿಳುನಾಡು, ಕರ್ನಾಟಕ, ಪಂಜಾಬ್ – ಹೀಗೆ ಎಲ್ಲ ರಾಜ್ಯಗಳೂ ಆಕೆಗೆ ಸಮಸ್ಯೆಯಾಗಿವೆ. ಭಾರತದ ಭವಿಷ್ಯದ ರಾಜಕೀಯ ಸ್ವರೂಪಕ್ಕೆ ಈ ಪ್ರಶ್ನೆಯೇ ನಿರ್ಣಾಯಕವಾಗಬಹುದು.

ಕರ್ನಾಟಕ ಈ ದಿಸೆಯಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆಯೆಂದರೆ ಶ್ರೀ ನಜೀರ್ ಸಾಹೇಬರ ಜಿಲ್ಲಾ ಪರಿಷದ್ ಮಸೂದೆ. ಪ್ರಭುತ್ವ ದೆಹಲಿಯಿಂದ ಬೆಂಗಳೂರಿಗೆ ವರ್ಗವಾದರೆ ಸಾಲದು, ಹಳ್ಳಿಯನ್ನೂ ತಲುಪಬೇಕು ಎಂಬ ಆಶಯ ಪಡೆದ ಈ ಮಸೂದೆಯಲ್ಲಿ ಯಾವ ಮಿತಿಗಳೇ ಇರಲಿ ವಿಕೇಂದ್ರೀಕರಣದ ಆಂದೋಳನಕ್ಕೆ ಇದು ಮಹತ್ವದ ಕೊಡುಗೆಯಾಗುತ್ತದೆ.

ಜನರ ಆಶೋತ್ತರಗಳನ್ನು ನೈಜವಾಗಿ ಬಿಂಬಿಸಬಲ್ಲ ವ್ಯವಸ್ಥೆಯಾಗಿ ಪ್ರಜಾತಂತ್ರ ಉಳಿದಿರುತ್ತದೋ ಇಲ್ಲವೋ? ಎಂಬ ಒಂದೇ ಒಂದು ಪ್ರಶ್ನೆಯ ಮೇಲೆ ನನ್ನ ಮೇಲಿನ ಇಡೀ ವಿಶ್ಲೇಷಣೆ ನಿಂತಿದೆ. ಆದರೆ ಈ ಲೇಖನ ಅಚ್ಚಾಗುವುದರಲ್ಲಿ ಕರ್ನಾಟಕದ ಜನತಾ ಸರ್ಕಾರ ಉರುಳಬಹುದು ಎಂಬ ಅನುಮಾನದಲ್ಲೇ ನನ್ನ ಇಡೀ ಲೇಖನವನ್ನು ಬರೆದಿದ್ದೇನೆ. ಮೊಯ್ಲಿ ಟೇಪ್‌ನಿಂದ ಹೊರಬಿದ್ದ ಸತ್ಯಗಳು ಪ್ರಜಾತಂತ್ರಕ್ಕೆ ಕಂಟಕಪ್ರಾಯವಾದವು. ಅಸೆಂಬ್ಲಿಯ ಸದಸ್ಯನೊಬ್ಬ ಪಕ್ಷಾಂತರ ಮಾಡಿದಾಗ ಅವನನ್ನು ಆರಿಸಿದವರು ಕೊಟ್ಟ ಓಟುಗಳನ್ನೆಲ್ಲ ಅವರು ಅಸಿಂಧುಗೊಳಿಸಿಬಿಡುತ್ತಾನೆ. ನಮ್ಮ ಆಯ್ಕೆಯೇ ಹೀಗೆ ನಿರರ್ಥಕವಾಗಿ ಬಿಡುವುದಾದರೆ ಪ್ರಜಾತಂತ್ರದಲ್ಲೇ ನಮ್ಮ ನಂಬಿಕೆ ಸಡಿಲಾಗುತ್ತ ಹೋಗಿಬಿಡುತ್ತದೆ. ಜನರ ಆಂದೋಳನ ಮಾತ್ರ ಈ ಪಕ್ಷಾಂತರವನ್ನು ತಡೆಯಬಲ್ಲುದು. ಅಂಥ ಒಂದು ಆಂದೋಳನವನ್ನು ನಡೆಸಬಲ್ಲ ನೈತಿಕ ಶಕ್ತಿ ಪಡೆದ ಮುಂದಾಳುಗಳಿಗಾಗಿ ಜನ ಕಾದಿರಬಹುದು. ಇಲ್ಲವಾದಲ್ಲಿ ಹೇಗೋ ಅಂತೂ ತಮ್ಮ ಅಧಿಕಾರ ಉಳಿಸಿಕೊಳ್ಳುವ ಪರದಾಟದಲ್ಲಿ ಮಗ್ನವಾಗಿ ಜನತಾ ಸರ್ಕಾರ ಎಚ್ಚೆತ್ತ ಜನರನ್ನು ಮತ್ತೆ ನಿರಾಸೆಯಲ್ಲಿ ಕಂಗೆಡುವಂತೆ ಮಾಡಬಹುದು. ೧೯೮೪ ಎದುರಿಸುವ ಪ್ರಶ್ನೆ ಇದು.

ಕೃಪೆ : ಪ್ರಜಾವಾಣಿ : ೦೧.೦೧.೧೯೮೪.

* * *