ಕಾವ್ಯ ಅಮೃತಕ್ಕೆ ಹಾರುವ ಗರುಡ; ಅವನ ಗರಡಿಯಲ್ಲಿ
ನಾವೋನವ ಗಾರುಡ ಮಂತ್ರ ಒಡಮೂಡಬೇಕು. ಅವನ
ಗರಿಯಲ್ಲಿಯೂ ಶರಣಾಗುವ ಶರ-ಭಾವ ಇರುವುದು…
ಕಾವ್ಯವೂ ಕರ್ಮ; ಅದು ಪುರುಷಾರ್ಥಪೂರ್ಣವಾಗಲಿ, ಬರಿ
ಪ್ರಕೃತಿ ವಿಲಾಸವಾಗದಿರಲಿ – ಎಂಬುದೇ ಕಾವ್ಯೋದ್ಯೋಗ.
                        – ‘ಸಾಹಿತ್ಯದ ವಿರಾಟ್ ಸ್ವರೂಪ

ಇದು ಮಂತ್ರ, ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ
                        – ‘ಗಾರುಡಿಗ

ಶರವತ್ ತನ್ಮಯೋ ಭವೇತ್
                                        – ‘ಮುಂಡಕೋಪನಿಷತ್

ಇವು ನೆನಪುಗಳು. ಅರವತ್ತರ ದಶಕದ ಕೊನೆಯ ವರ್ಷದಲ್ಲಿ ಧಾರವಾಡದಲ್ಲಿ ಜಿ.ಬಿ. ಜೋಷಿಯವರ ಮನೋಹರ ಗ್ರಂಥಮಾಲೆಯ ಮಹಡಿ ಮೇಲೆ ನಾವೆಲ್ಲ ಚರ್ಚೆಗೆಂದು ಕೂಡುತ್ತಿದ್ದೆವು – ವರ್ಷಕ್ಕೊಂದು ಬಾರಿ. ನಾನು ಇಂಗ್ಲೆಂಡಿನಿಂದ ನನ್ನ ವ್ಯಾಸಂಗ ಮುಗಿಸಿ ಬಂದಿದ್ದೆ. ನವ್ಯ ಚಳವಳಿಯ ಮತ್ತಿನಲ್ಲಿದ್ದೆ. ಜೋಷಿಯ ಮನೆಯಲ್ಲಿ ಮಾವಿನಹಣ್ಣಿನ ರಸಾಯನ ಮತ್ತು ರೊಟ್ಟಿಯ ಉಪಚಾರ; ಬೇಂದ್ರೆಯ ಪರಿಪೂರ್ಣ ಓದುಗರಲ್ಲೊಬ್ಬರಾದ – ಪ್ರಾಯಶಃ ಪ್ರಮುಖರಾದ – ಗೆಳೆಯ ಕೀರ್ತಿನಾಥ ಕುರ್ತಕೋಟಿಯಿಂದ ಬೇಂದ್ರೆ ಕಾವ್ಯದ ನಿರಂತರ ವ್ಯಾಖ್ಯಾನ – ಇಡೀ ಹಗಲು, ಇಡೀ ರಾತ್ರೆ. ನಾನೇನಾದರೂ ನಿದ್ದೆ ಹೋದರೆ ಎಬ್ಬಿಸಿ ಕೀರ್ತಿ ಕವಳ ಉಗಿದು ಬಂದು ಮಾತಾಡುತ್ತಿದ್ದರು. ಎಚ್ಚರಕ್ಕಿಂತ ಕನಸಲ್ಲೆ ಹೆಚ್ಚು ಪ್ರಾಜ್ಞರೆಂದು ಬೇಂದ್ರೆಯಿಂದ ಕರೆಸಿಕೊಂಡ ಜೆ.ಬಿ. ಜೋಷಿ ತೂಕಡಿಸುತ್ತಾ ಈ ರಸಯಜ್ಞಕ್ಕೆ ಸಾಕ್ಷಿಯಾದರೆ, ಗೆಳೆಯ ರಾಜೀವ ತಾರಾನಾಥರು ಮತ್ತು ನಾನು ನಮ್ಮ ನವ್ಯಪ್ರಜ್ಞೆಯ ‘ಐರನಿ’ಯನ್ನು ಕೀರ್ತಿಯ ಕವಳ ತುಂಬಿ ಉತ್ಕಂಠ ಉತ್ಕಟತೆಯಿಂದ ಅಂತೂ ಇಂತೂ ಉಳಿಸಿಕೊಳ್ಳಬೇಕಾಗುತ್ತಿತ್ತು. ಜೋಷಿ ತಮ್ಮ ಆಗಿನೊಂದು ವ್ರತದ ಪಾಲನೆಗಾಗಿ ಚಪ್ಪಲಿ ಹಾಕದ ಪಾದಗಳನ್ನು ಉಜ್ಜುತ್ತ, ತಮ್ಮ ತೇಲುಗಣ್ಣಲ್ಲೆ ತಾವಾಡಿಸುತ್ತಿದ್ದ ಈ ಆಟವನ್ನು ಮುಗುಳ್ನಗೆಯಲ್ಲಿ ಸುಖಿಸುತ್ತಿದ್ದುದನ್ನು ಮರೆಯಲಾರೆ. ಮಧ್ಯಾಹ್ನ ಮನೋಹರ ಗ್ರಂಥಮಾಲಾ ಮಹಡಿಯ ಮೇಲೆ ನವ್ಯರ ಇಡೀ ಸೆಟ್ ಸೇರುತ್ತಿತ್ತು; ಶಾಂತಿನಾಥ ದೇಸಾಯಿ, ಗಿರೀಶ ಕಾರ್ನಾಡ, ಜಿ.ಎಸ್. ಆಮೂರ – ಹೀಗೆ ಹಲವು ಹಿರಿಯ ಕಿರಿಯರು. ಇವು ನನಗೆ ಅಕ್ಷರಶಃ ರಸದೌತಣದ ದಿನಗಳು.

ಮಾರ್ಕ್ಸ್‌ನ ಐತಿಹಾಸಿಕ ದೃಷ್ಟಿಯಿಂದ ಸಾಹಿತ್ಯವನ್ನು ನೋಡಲು ನಾನು ಕಲಿತಿದ್ದ ಆ ದಿನಗಳಲ್ಲಿ ಬೇಂದ್ರೆಯಂಥ ಕವಿ “ಈಗಿನ ಯುರೋಪಿನಲ್ಲಿ ಇಲ್ಲ” ಎಂದು ನಾನು ಅಂದದ್ದು, “ಯುರೋಪಿನಲ್ಲೂ ಇಲ್ಲ” ಎಂಬ ಅರ್ಥಕ್ಕೆ ಎಡೆಕೊಟ್ಟಿತ್ತು. ಆಗ ನಾನು ಇದು ಮೌಲ್ಯ ನಿರ್ಣದ ಮಾತಲ್ಲ ಎಂದು ನನ್ನ ನಿಲುವಿಗೆ ಭಾರತ ಮತ್ತು ಯುರೋಪ್‌ಗಳ ನಡುವಿನ ವಿಭಿನ್ನ ಸಾಮಾಜಿಕ ಬೆಳವಣಿಗೆಗಳೇನು, ಅವುಗಳಿಂದ ಹುಟ್ಟಿಬರುವ ಕಾವ್ಯದ ಪರಿಯೇನು ಎಂಬ ವಿವರಣೆ ಕೊಟ್ಟಿದ್ದೆ. ಕೆಲವರಿಗೆ ಗೊಂದಲದಂತೆ ಕಾಣುವ ನಾನು ಭಾವಿಸುವ ರೀತಿಯಲ್ಲಿ ಆಗಲೂ ನನಗೆ ಅನುಭಾವ ಪಂಥದ ಬೇಂದ್ರೆಯೂ, ಆರ್ಷದೃಷ್ಟಿಯ ಅಡಿಗರೂ ಪ್ರಿಯರೇ ಆಗಿದ್ದರು, ಉತ್ಪಾದನಾ ವಿಧಾನಗಳಲ್ಲೂ ತನ್ಮೂಲಕ ಸಾಮಾಜಿಕ ಸಂಬಂಧಗಳಲ್ಲೂ ಒಂದು ದೇಶ ಪಡೆಯುವ ಉನ್ನತಿಯಿಂದಾಗಿ ಮಾತ್ರ ಅದರಲ್ಲಿ ಹುಟ್ಟಿಬರುವ ಸಾಹಿತ್ಯ ಹಿಂದುಳಿದ ಇನ್ನೊಂದು ದೇಶದ ಸಾಹಿತ್ಯಕ್ಕಿಂತ ಮೇಲಿರುತ್ತದೆ ಎಂದೇನೂ ನಾನು ಆಗಲೂ ತಿಳಿದಿರಲಿಲ್ಲ; ಈಗಲೂ ತಿಳಿದಿಲ್ಲ. ಬದಲಾಗಿ ‘ಪ್ರಗತಿಶೀಲ’ರಿಗೆ ಇನ್ನಷ್ಟು ಹೆಚ್ಚು ಹಾಸ್ಯಾಸ್ಪದ ಗೊಂದಲಿಗನಾಗಿ ಕಾಣುವ ಅಪಾಯ ಲೆಕ್ಕಿಸದೆ ಹೇಳುವೆ; ಬೇಂದ್ರೆಯಂಥ ಕವಿ ಯುರೋಪಿನಲ್ಲಿ ಇಲ್ಲ; ಮಾತ್ರವಲ್ಲ ಯುರೋಪಿನಲ್ಲೂ ಇಲ್ಲ, ಮತ್ತು ಹಾಗೆ ಕನ್ನಡದ ಒಬ್ಬ ಕವಿಯನ್ನು ಹೊಗಳುತ್ತೇವೆಂದು ತಿಳಿಯುವುದೂ ಹಾಸ್ಯಾಸ್ಪದ. ನನ್ನಲ್ಲಾದ ಈ ಬದಲಾವಣೆಗೆ ಕಾರಣ ಬೇಂದ್ರೆಯ ಕಾವ್ಯ ನನ್ನನ್ನು ಇನ್ನೂ ಹೆಚ್ಚು ಗಾಢವಾಗಿ ಈಗ ಕಲಕುತ್ತಿದೆ ಎಂಬುದು; ಜೊತೆಗೇ, ಪುರುಷಾರ್ಥಗಳ ದೃಷ್ಟಿಯಿಂದ ಐರೋಪ್ಯರ ‘ಉನ್ನತಿ’ಯು ನಾವಿಡಬೇಕಾದ ಅನಿವಾರ್ಯ ಮುಂದಿನ ಹೆಜ್ಜೆ ಎಂದು ಅನ್ನಿಸದೇ ಇರುವುದು. ಕಾಲದಲ್ಲಿ ಕಾಲಾತೀತವಾದ್ದನ್ನು ಗರ್ಭಿಸಿಕೊಳ್ಳಬಲ್ಲ ತೇಜಸ್ಸಿನ ಕಾವ್ಯ ಯಾವ ದೇಶದ್ದೇ ಆಗಿರಲಿ, ಆಯಾ ದೇಶದ ಹಿಂದನ್ನು ಇಂದೆಂಬಂತೆ ಸ್ವೀಕರಿಸುವ, ತನ್ಮೂಲಕ ಭಾಷೆಯನ್ನು ಸ್ಮೃತಿಸಾತತ್ಯದ ಜೀವಂತ ದಾಖಲೆಯನ್ನಾಗಿ ಮಾಡುವ ಶಕ್ತಿಯುಳ್ಳದ್ದಾಗಿರುತ್ತದೆ. ಬೇಂದ್ರೆ ಕಾವ್ಯದ ಭೂಮಿಕೆಯಾದ ಧಾರವಾಡದ ಪರಿಮಿತ ನೆಲ ಇಡೀ ಆಕಾಶವನ್ನೇ ನುಂಗಿದೆ; ಶೂದ್ರ ಜಾನಪದವನ್ನೂ, ಆರ್ಷ ವೇದವನ್ನೂ, ಐರೋಪ್ಯ ತತ್ವಜ್ಞನವನ್ನೂ, ಕನ್ನಡ ಕಾವ್ಯದ ಹಿಂದನ್ನೂ ಈ ಭೂಪ್ರದೇಶದ ಪಚನಾಗ್ನಿಯಾಗಿದ್ದ ಬೇಂದ್ರೆಯ ಸಂವೇದನೆ ಜೀರ್ಣಿಸಿಕೊಂಡಿದೆ. ಈ ಪ್ರಕ್ರಿಯೆ ಜಗತ್ತಿನಲ್ಲಿ ಈಗ ಎಷ್ಟು ಅಪರೂಪವಾಗಿದೆಯೆಂದರೆ ಐರ್‌ಲ್ಯಾಂಡಿನ ಕವಿ ಏಟ್ಸ್‌ಬಯಸಿದ್ದನ್ನು ಬೇಂದ್ರೆ ಆಗಿದ್ದರು.

* * *

ಅತೀಂದ್ರಿಯ ಅನುಭವಕ್ಕೆ ಗ್ರಾಮದ ಘಾಟು ತರಬಲ್ಲ, ರಸಿಕ ಸಂವಾದದ ನೆಲೆಯಲ್ಲೇ ಪ್ರೌಢ ಚಿಂತನೆಯನ್ನು ಊರಬಲ್ಲ ಬೇಂದ್ರೆಯನ್ನು ಜೆ.ಬಿ. ಜೋಷಿ ತಮ್ಮ ಮಹಡಿಯಲ್ಲಿ ಮಗೆ ಸಾಕ್ಷಾತ್ಕರಿಸಿಕೊಟ್ಟ ಒಂದು ದಿನವನ್ನು ನಾನು ಮರೆಯಲಾರೆ. ನಾನು ತೀರ್ಥಹಳ್ಳಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ತುಂಗೆಯ ದಡದ ಮೇಲಿಂದ, ಸಿದ್ಧೇಶ್ವರ ಗುಡ್ಡದಿಂದ ಕಂಡಿದ್ದ ಎಷ್ಟೋ ಬೆಳಗುಗಳ ನೆನಪನ್ನು ಥಟ್ಟನೇ ಒಂದು ಬೆರಗಿನ ಅನುಭವವನ್ನಾಗಿ ತಮ್ಮ ವಾಚನದಿಂದ ಪರಿವರ್ತಿಸಿದರು ಬೇಂದ್ರೆ. ಅನಮತರ ಅಡಿಗರ ಕಾವ್ಯ ಉತ್ತೇಜಿಸಿದ ಹೊಸ ಪ್ರಜ್ಞೆಯಲ್ಲಿ ಬೇಂದ್ರೆಯನ್ನು ನಾನು ಮತ್ತೆ ಓದಿದ್ದು. ನನ್ನಲ್ಲಿ ಹೀಗೆ ಕನ್ನಡ ಕಾವ್ಯದ ರುಚಿಯನ್ನು ಹುಟ್ಟಿಸಿದ ಬೇಂದ್ರೆಯನ್ನು ನಾನು ಹಿಂದಿನ ಹುಡುಗನ ಆರಾಧನಾಭಾವದಿಂದಲೂ ನವ್ಯವಿಮಶೆಯ ಅನುಮಾನದಿಂದಲೂ ಒಟ್ಟಿಗೇ ಗಮನಿಸುವುದು ಅನಿವಾರ್ಯವಾಗಿತ್ತು.

ಆವತ್ತು ವಿನಾಕಾರಣ ಬೇಂದ್ರೆ ಸಿಟ್ಟಿಗೆದ್ದರು. ವಯಸ್ಸಾದ ವರ್ತಕರೊಬ್ಬರು ಬೇಂದ್ರೆಯನ್ನು ಕುಶಲಪ್ರಶ್ನೆ ಮಾಡಲೆಂದು ಹೇಳಿದ ಒಂದು ಮಾತಷ್ಟೇ ಬೇಂದ್ರೆಯ ಈ ಸಿಟ್ಟಿಗೆ ಕಾರಣವಾಗಿತ್ತು. ‘ನೀವು ಗದಗಿನಲ್ಲಿ ಮಾಡಿದ ಭಾಷಣದ ವರದಿಯನ್ನು ಪೇಪರಲ್ಲಿ ಓದಿದೆ’ ಎಂದಷ್ಟೇ ಆ ವರ್ತಕರು – ಹಿಂದೆ ಗೆಳೆಯರ ಗುಂಪಲ್ಲಿ ಇದ್ದವರಂತೆ – ಹೇಳಿದ್ದು. ಮರುಮಾತಿಗೆ ಅವಕಾಶವಿಲ್ಲದಂತೆ ಬೇಂದ್ರೆ ರೇಗಾಡತೊಡಗಿದರು. ತಾನೇನು ಗದಗಿಗೆ ಕೇಳಿ ಕರೆಸಿಕೊಂಡಿದ್ದ? ಪೇಪರಲ್ಲಿ ವರದಿಯಾಗಲೆಂದೇ ತಾನೇನು ಮಾತಾಡಿದ್ದ? ತನ್ನನ್ನು ಕರೆಯದ ಈ ವರ್ತಕನನ್ನೇನು ಅವರು ಕರೆಯುತ್ತಾರೆ? – ಇತ್ಯಾದಿ ಇತ್ಯಾದಿ. ವರ್ತಕರು ತುಟಿಪಿಟಕ್ಕನ್ನದೆ ‘ಮಾಸ್ತರ’ರ ಬೈಗಳವನ್ನು ನುಂಗಿಕೊಂಡು ನನ್ನ ಮೆಚ್ಚಿಗೆಗೆ ಪಾತ್ರರಾದರು. ಯುರೋಪಿಗೆ ಹೋಗಲೆಂದು ಆಮಂತ್ರಣ ಬಂದಾಗ, ಧಾರವಾಡದಲ್ಲೆ ತನ್ನ ಜಗಳ ಇನ್ನೂ ಮುಗಿಯದಿರುವಾಗ ಯುರೋಪಿನಲ್ಲಿ ತನಗಿರುವ ಕೆಲಸವೇನು ಎಂದು ಬೇಂದ್ರೆ ಅಂದದ್ದರ ಅರ್ಥ ಆಗ ನನಗೆ ಹೊಳೆಯಿತು. ನನಗೆ ಆಗ ಮುಖ್ಯವೆನಿಸಿದ್ದು; ಬೇಂದ್ರೆಯನ್ನು ಬಲ್ಲ ಧಾರವಾಡದ ಮಂದಿ ಹೇಗೆ ಆ ಕವಿಯನ್ನು ಆತನ ಎಲ್ಲ ಗುಣ-ದೋಷಗಳಲ್ಲೂ ಒಪ್ಪಿಕೊಂಡು ಮನ್ನಿಸುತ್ತಾರೆ ಎಂಬುದು. ಬೇಂದ್ರೆಗೆ ಮುಖವಾಡದ ಅವಶ್ಯಕತೆ ಧಾರವಾಡದಲ್ಲಿ ಇರಲಿಲ್ಲ; ಕರ್ನಾಟಕದಲ್ಲಿ ಎಲ್ಲೂ ಅದು ಬೇಕಿರಲಿಲ್ಲ. ತನ್ನ ಸ್ವಭಾವದ ಎಲ್ಲ ಅಂಕುಡೊಂಕುಗಳನ್ನು ಮುಚ್ಚಿಡದೆ ಹೊಗೆಯಲ್ಲೂ ಪ್ರಜ್ವಲಿಸುವ ಕೆಂಡದಂತೆ ಅವರಿದ್ದರು. ಸ್ವ-ಭಾವದ ಎಲ್ಲ ಅಂಶಗಳನ್ನು ಒಳಗೊಳ್ಳಬಲ್ಲಂತೆ ಕನ್ನಡ-ಸಂಸ್ಕೃತ, ಜಾನಪದ-ಆರ್ಷೇಯಗಳ ಬೆಸುಗೆಯಾದ ಅವರ ಶೈಲಿಯ ಒಳಗುಟ್ಟು, ಛತ್ರಿ ಚೀಲಗಳನ್ನು ಹಿಡಿದುಕೊಂಡು ಧಾರವಾಡದ ಬೀದಿಗಳಲ್ಲಿ ಓಡಾಡುತ್ತಿದ್ದ ಅವರ ಕೋಪತಾಪ ಸಂಭ್ರಮಗಳ ವ್ಯಕ್ತಿತ್ವದಲ್ಲೇ ಅಡಗಿದೆ ಎನ್ನಿಸುತ್ತದೆ. ನೊಬೆಲ್ ಪಾರಿತೋಷಕ ಪಡೆದನಂತರ ಗೌರವಾನ್ವಿತ ಋಷಿಯಂತೆ ಬದುಕಬೇಕಾಗಿ ಬಂದ ಠಾಕೂರರು ತಮ್ಮ ಚಿತ್ರಗಳಲ್ಲಿ ತಮ್ಮ ಗುಪ್ತ ವ್ಯಕ್ತಿತ್ವದ ಅಂಕುಡೊಂಕುಗಳನ್ನು ಬರೆದುಕೊಳ್ಳಬೇಕಾಯಿತು. ಮಾತು ಸರಳರೇಖೆಯ ‘ಗಂಭೀರ ವಾಣಿ’ಯಾಗಿ ಬಿಟ್ಟಿದ್ದರ ಅಪಾಯ ಇದು. ತಾನು ಆಗಬೇಕೆಂಬ ಆದರ್ಶವನ್ನು ‘ಮುಖವಾಡ’ ಮಾಡಿಕೊಂಡು, ಕಲ್ಪಕ ಶಕ್ತಿಯಲ್ಲದನ್ನು ನಿಜ ಮಾಡಿಕೊಳ್ಳಲು ಹೊರಟ ಏಟ್ಸ್‌ಕೊನ ಕವನಗಳಲ್ಲಿ ತನ್ನ ಅದಮ್ಯ ಹಸಿತನವನ್ನು ಚೀರಿ ಹೇಳಬೇಕಾಯಿತು. ದುರಂತದ ಐರೋಪ್ಯ ಹೋರಾಟದಲ್ಲಿ ನಮಗೆ ಆತ್ಮೀಯನಾಗುವ ಏಟ್ಸ್‌ನನ್ನು ಕುಗ್ಗಿಸುವುದಕ್ಕಾಗಿ ಆಡಿದ ಮಾತು ಇದಲ್ಲ. ತನ್ನ ಆಧುನಿಕ ಆವರಣ ದುಸ್ಸಾಧ್ಯವಾಗಿಸಿದ ಕಾವ್ಯದ ಮಂತ್ರಶಕ್ತಿಗೆ ಪರ್ಯಾಯವಾಗುವಂತೆ, ಏಟ್ಸ್‌ತನ್ನ ಎಲ್ಲ ತೊಡಕುಗಳನ್ನು ನಿರ್ಮಮದಲ್ಲಿ, ಟ್ರಾಜಿಕ್ ಹರ್ಷದಲ್ಲಿ ಸಾಂತ್ವನಕ್ಕೆ ಹಾತೊರೆಯದಂತೆ ಬಿಚ್ಚಿಡುತ್ತ ಹೋಗುವ ಕ್ರಮ ಬೇಂದ್ರೆಯವರದಕ್ಕಿಂತ ಬೇರೆಯಾದದ್ದು. ಆದರೆ ಬೇಂದ್ರೆ ತನ್ನೆಲ್ಲ ಇಹಪರಗಳ ಪರದಾಟಗಳನ್ನು ಒಟ್ಟಾಗಿ ಬದುಕಲು ಸಾಧ್ಯವಾದದ್ದು – ಕೇವಲ ಅವರ ವ್ಯಕ್ತಿತ್ವದ ವಿಶಿಷ್ಟತೆಯಿಂದಲ್ಲ, ಅವರನ್ನು ಬೆಳೆಸಿದ ವಾತಾವರಣದಿಂದ ಕೂಡ ಎನ್ನದೇ ವಿಧಿಯಿಲ್ಲ.

ಅವಧೂತರ ಹುಚ್ಚು ವಕ್ರತೆಗಳನ್ನು ಅಂಥ ಅಸಾಮಾನ್ಯರ ಅಭಿವ್ಯಕ್ತಿಗೆ ಅಗತ್ಯವಾದ ಜೀವನಶೈಲಿಯೆಂದು ತಿಳಿಯಬಲ್ಲ ನಮ್ಮ ಜನ ಯಾವತ್ತೂ ಬೇಂದ್ರೆಯಂಥವರಿಂದ ಮುಜುಗರ ಪಡುವುದಿಲ್ಲ. ಜಾನಪದ-ಆರ್ಷೇಯಗಳು ಬೆರತಲ್ಲಿ ಮಡಿವಂತಿಕೆಯಿಲ್ಲ; ಕೊಲ್ಲುವ ಗಾಂಭೀರ್ಯವಿಲ್ಲ; ಮುಚ್ಚು ಮರೆಯಿಲ್ಲ; ವ್ಯಕ್ತಿ ವಿಶಿಷ್ಟಕ್ಕೂ, ಸರ್ವಸಮ್ಮತ ಸಾಮಾನ್ಯಕ್ಕೂ ನಡುವೆ ಗೆರೆಗಳಿಲ್ಲ; ಅಲ್ಲಿ ದೈನಿಕವೇ ಸಾರ್ವಕಾಲಿಕ; ಮಾತೇ ಮಂತ್ರ; ನೀರಿಗೆಂದು ಹೊರಟ ವೈಯಾರಿ ರಾಧೆ, ಮೋಹಿತನಾದ ಹುಡುಗ ಕೃಷ್ಣ; ಜೋಳದ ರೊಟ್ಟಿ ತಿನ್ನು ಪ್ರತಿತಾಯಿಯೂ ಮೊಲೆಯನ್ನುಣ್ಣಿಸುವುದು ಕೃಷ್ಣನಿಗೆ; ಭಿಕ್ಷೆಯೆತ್ತುವ ಜೋಗಿ ಶಿವನ ಗಣ. ತುಕಾರಾಮ್, ಕಬೀರ್, ಅಕ್ಕ, ಚೈತನ್ಯ, ಶಿಶುನಾಳ ಷರೀಫ್ – ಹೀಗೆ, ಇಹಪರಗಳನ್ನು ಒಡಲಲ್ಲಿ ಕಟ್ಟಿಕೊಂಡು ಸಂತೆಯಲ್ಲಿ ಒಡನಾಡಿದವರು. ಧಾರವಾಡದ ಬೇಂದ್ರೆ ಅಂಥವರಲ್ಲಿ ಒಬ್ಬ – ಆದರೆ ಅವರೆಲ್ಲರಿಗಿಂತ ಇನ್ನಷ್ಟು ಹೆಚ್ಚು ರಸಿಕ, ಹೆಚ್ಚು ಲೌಕಿಕ, ಮೈಮರೆತಾಗಲೂ ಮೈಯ ಪರಿವೆ ಕಳಕೊಳ್ಳಲಾರದವ.

ಇದು ಊನವೆಂದು ತಿಳಿದವನು ನಾನಲ್ಲ. ಸಂಖ್ಯಾಶಾಸ್ತ್ರದ ಹುಚ್ಚಲ್ಲಿ ಬೇಂದ್ರೆಯ ರಸಿಕ ಸಂವಾದ ಕೇವಲ ವಿವಾದವೋ, ಅಥವಾ ಆತ್ಮಗತವೋ ಆಗಿ ನಮಗವರು ನಿಲುಕದೇ ಹೋದದ್ದು ನಮ್ಮ ದುರ್ದೈವವೆನ್ನಬಹುದು. ಇದಕ್ಕೆ ಕಾರಣವಿದೆ ಎನ್ನಿಸುತ್ತದೆ. ಹಾಡಿನಲ್ಲಿ ಸುಲಭಗ್ರಾಹ್ಯವಾದ ಬೇಂದ್ರೆ ಮಾತ್ರ ಅತ್ಯಂತ ಜನಪ್ರಿಯರಾದರು. ಕೆಲವರಿಗವರು ‘ಹುಬ್ಬಳ್ಳಿಯಾಂವ’ದ ಬೇಂದ್ರೆ; ಇನ್ನು ಕೆಲವರಿಗೆ ‘ಗಂಗಾವತರಣ’ದ ಬೇಂದ್ರೆ; ‘ಪಕ್ಷ’ಪಾತಿಗಳಿಗೆ ‘ಕುರುಡು ಕಾಂಚಾಣ’ದಂಥದನ್ನು ಮಾತ್ರ ಬರೆಯಬೇಕಿದ್ದ ಬೇಂದ್ರೆ. ಭಕ್ತರಿಗೆ ‘ಸಚ್ಚಿದಾನಂದ’ದಲ್ಲಿ ಮಾತ್ರ ಅವರ ಉತ್ಕೃಷ್ಟತೆ. ಹೀಗಾಗಿ, ಅವರ ಕಠಿಣ ರಚನೆಗಳು ವಿಮರ್ಶಕರ ವ್ಯಾಖ್ಯೆಯಿಲ್ಲದ ಅನಾದರಕ್ಕೆ ತುತ್ತಾದವು. ಬೇಂದ್ರೆಯನ್ನು ಕೇವಲ ಜಾನಪದ ಕವಿಯೆಂದು ಮನ್ನಿಸಿ ಅವರಿಂದ ರಂಜನೆ ಮಾತ್ರ ಬಯಸುತ್ತಿದ್ದ ಜನರಿಂದ ಬೇಂದ್ರೆ ಹೀಗೆ ದೂರವಾಗಿ, ಎಲ್ಲರಿಗೂ ಅಗಮ್ಯರಾದದ್ದಕ್ಕೆ ಕನ್ನಡ ವಿಮರ್ಶೆ ತನ್ನ ಜವಾಬ್ದಾರಿಯನ್ನು ನಿರ್ವಹಿಸದಿದ್ದುದೂ ಕಾರಣವಾಗಿರಬಹುದು.

ಆವತ್ತು ಬೇಂದ್ರೆ ತರಕಾರಿ ತುಂಬಿದ್ದ ಚೀಲವನ್ನು ಕುರ್ಚಿಯ ಮೇಲಿಟ್ಟು ಇನ್ನೊಂದು ಚೀಲದಿಂದ ಪ್ಲಾಸ್ಟಿಕ್‌ನ ಕೆಲವು ಬಾಲುಗಳನ್ನು ಚೌಕಗಳನ್ನು ತೆಗೆದು ಇದು ಭೂಮಿ, ಇದು ಸೂರ್ಯ, ಇದು ಪ್ರಾಣ, ಇದು ಇಂಥ ಸಂಖ್ಯೆ ಎಂದೇನೇನೋ ಹೇಳತೊಡಗಿದಾಗ ನನ್ನ ಕಣ್ಣಿಗೆ ಕಾಣುತ್ತಿದ್ದುದು ಆಟದ ಸಾಮಾನುಗಳಂತಿದ್ದ ಅವರ ಟೀಚಿಂಗ್ ಏಡ್‌ಗಳು ಮಾತ್ರ. ಯಾವನೋ ಮೆಡಿಕಲ್ ರೆಪ್ರಸೆಂಟೆಟಿವ್‌ನಿಂದ ಪಡೆದಿದ್ದ ಈ ವಸ್ತುಗಳ ಮೂಲಕ ಸಂಖ್ಯಾಶಾಸ್ತ್ರದ ಅದ್ಭುತಗಳನ್ನು ಪ್ರದರ್ಶಿಸಿಲು ಅವರು ಪ್ರಯತ್ನಿಸುತ್ತಿದ್ದರು. ಚೀಲದಿಂದ ಹಾವುಗಳನ್ನು ತೆರೆದು ಆಡಿಸುವ ಹಾವಾಡಿಗನಂತೆ ಅವರು ಕಂಡರೂ ಸಹ ಅವರ ಉದ್ದೇಶದಲ್ಲಿ ಆರ್ತತೆಯಿತ್ತು. ಆದರೆ ಸಂಖ್ಯಾಶಾಸ್ತ್ರ ತಿಳಿಯದ ನನ್ನ ಮೌಢ್ಯ ಅಥವಾ ಇದು ಅಮುಖ್ಯವೆಂಬ ನನ್ನ ಹಠಗಳಿಂದಾಗಿ ನಾನು ಹೊರಗುಳಿದೆ. ಅವರ ಹಾವಭಾವಗಳು, ಕೈಯಾಟ, ಕಣ್ಣಾಟಗಳು, ಮಾತಿನ ಮೋಡಿ ವಿಲಾಸಗಳು ನನಗರ್ಥವಾಗದ ಕಣ್ಕಟ್ಟಾದುವು. ದೂರದೂರ ಹೋಗಿ ಮಾಯವಾಗುತ್ತಿದ್ದ ಬೇಂದ್ರೆಯನ್ನು ಅವರ ಗಾರುಡಿಗ ಐಹಿಕ ವ್ಯಕ್ತಿತ್ವಕ್ಕೆ ಮತ್ತೆ ಮರಳಿಸುವ ಉಪಾಯ ನಮಗೆ ಹೊಳೆದಿರಲಿಲ್ಲ.

* * *

ಕೊನೆತನಕ ಆತ್ಮಕಾಮಿಯಾಗಿದ್ದುದರ ಜೊತೆಯಲ್ಲೇ ಜೀವಕಾಮಿಯೂ ಆಗಿದ್ದ ಬೇಂದ್ರೆ ಅಲ್ಲಿಂದ ಕೆಳಗಿಳಿದೂ ಬರಬಲ್ಲವರಾಗಿದ್ದರು. ನಮ್ಮ ಜೊತೆ ನಿಂತು ಗೆಲುವಿನಿಂದ ಫೋಟೋ ತೆಗೆಸಿಕೊಂಡರು. ಮಾವಿನ ಹಣ್ಣನ್ನು ಹಸಿದ ಹುಡುಗನಂತೆ ತಿಂದರು. ತೂಕಡಿಕೆಯಲ್ಲಿ ಸಂಕೇತಗಳ ಜೋಕಾಲಿಯಾಡುವ ಜೋಷಿಯನ್ನು ಗೇಲಿ ಮಾಡಿದರು. ಟೇಬಲ್ಲಿನ ಸುತ್ತ ಕೂತಾಗ ತಾನು ಹಿಂದೊಮ್ಮೆ ಬರೆಯಲು ಹೊರಟ ಕಾದಂಬರಿಯ ಮೊದಲ ಅಧ್ಯಾಯದ ಕಥೆ ಹೇಳಿದರು. ಇದು ನನಗೆ ಮಹತ್ವದ್ದೆನ್ನಿಸುವುದರಿಂದ ವಿವರಿಸುವೆ :

ಬೇಂದ್ರೆ ಬರೆಯಲು ಶುರುಮಾಡಿದ್ದ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಒಂದು ಗಂಡು ಒಂದು ಹೆಣ್ಣು ಪರಸ್ಪರ ಪ್ರೇಮಿಸುತ್ತಾರೆ. ಮೈ ಬೆಸೆಯದ, ಪ್ಲೆಟಾನಿಕ್ ಪ್ರಣಯ ಅದು. ಅಧ್ಯಾಯದ ಕೊನೆಯಲ್ಲಿ ಅವರಿಗೊಬ್ಬ ಪುತ್ರ ಜನಿಸುತ್ತಾನೆ – ಅಂದರೆ ಮಾನಸಪುತ್ರ.

ಈ ಅಧ್ಯಾಯವನ್ನು ಬೇಂದ್ರೆ ‘ಅಣ್ಣ ಮಾಸ್ತಿಗೆ’ ಓದಲು ಕೊಡುತ್ತಾರೆ. ಮಾಸ್ತಿ ಹೇಳುತ್ತಾರೆ: ಸರಿ, ಮಾನಸಪುತ್ರ ಬೇಕಾದರೆ ಹುಟ್ಟಲಿ, ಆದರೆ ಇದು ಕಾದಂಬರಿಯಾದ್ದರಿಂದ ಗಂಡು ಹೆಣ್ಣುಗಳಿಗೆ ತಿಳಿಯದಂತೆಯಾದರೂ ಅವರ ಮೈಗಳು ಕೂಡಿದವು ಎಂದು ಸೂಚಿಸಬೇಕಾಗುತ್ತದೆ.

ಇದೇ ಮಾತುಗಳಲ್ಲಿ ಮಾಸ್ತಿಯವರು ಹೇಳಿದರೆಂದು ಅಲ್ಲ – ನಾನು ನೆನಪಿಂದ ಬೇಂದ್ರೆ ಹೇಳಿದ್ದನ್ನು ವರದಿ ಮಾಡುತ್ತೇನೆ. ಅಂತೂ ಆ ಕತೆ ಕನ್ನಡದ ಈ ಎರಡು ದೊಡ್ಡ ಲೇಖಕರ ಬಗ್ಗೆಯಲ್ಲದೇ, ಭಾವಗೀತೆ ಮತ್ತು ಕಾದಂಬರಿಗಳ ಹಿಂದೆ ಕೆಲಸ ಮಾಡುವ ಸೃಜನಶೀಲ ಪ್ರಜ್ಞೆಯ ಭಿನ್ನ ಮಾರ್ಗಗಳ ಬಗ್ಗೆಯೂ ನನಗೆ ತುಂಬ ಅರ್ಥಪೂರ್ಣವೆನ್ನಿಸಿತ್ತು.

ಈಗ ಹೀಗೂ ಅನ್ನಿಸುತ್ತೆ: ಬೇಂದ್ರೆ ಕಾದಂಬರಿ ಬರೆದಿದ್ದರೆ, ಅದೂ ಕೂಡ ವಿಲಕ್ಷಣವಾಗಿರುತ್ತಿತ್ತು. ಅವರ ನಾಟಕ ಕನ್ನಡದ ಮೊದಲನೇ ಅಬ್ಸರ್ಡ್ ನಾಟಕವಾಗಿಲ್ಲವೇ? – ಹಾಗೆ. ಪ್ರಕೃತಿಯ ಹದ ಮತ್ತು ಋತುಗಳನ್ನು ಮೀರದ ವಾಸ್ತವತೆ ಕಾದಂಬರಿಯ ಜೀವಾಳವೆನ್ನಬಹುದಾದರೂ ಕಾದಂಬರಿ ಕೇವಲ ವರದಿಯಾಗದೆ ಕಲಾಕೃತಿಯೆನ್ನಿಸುವುದು ರೂಢಿಜಡರಾಗಿ ನಾವು ಏನನ್ನು ವಾಸ್ತವವೆಂದು ತಿಳಿಯುತ್ತೇವೋ ಅದರಾಚೆಗಿನದನ್ನು, ಅನೂಹ್ಯವನ್ನು ಅದು ಮೂಡಿಸಿದಾಗ, ಬೇಂದ್ರೆ ಬರೆಯಬಹುದಾದ ಕಾದಂಬರಿ ಗಾರ್ಶಿಯಲ್ ಮಾರ್‌ಕ್ವಿಸ್‌ನ One Hundred Years of Solitude ನಂತೆ ಇದ್ದಿದ್ದರೆ ಆಶ್ಚರ್ಯಪಡಬೇಕಿಲ್ಲ.

ಅಕ್ಷಯ ಬತ್ತಳಿಕೆಯಂಥ ಕಲ್ಪಕತೆ, ಎಲ್ಲೆಲ್ಲಿಂದಲೋ ಓದಿ ಪಡೆದ ವಿಲಕ್ಷಣ ವಿಚಾರಗಳು, ಪ್ರಜ್ಞಾಪ್ರವಾಹದ ಮುಕ್ತ ಚಲನಶಕ್ತಿ, ಯಾವುದಕ್ಕೆ ಯಾವುದನ್ನಾದರೂ ಕೂಡಿಸಬಲ್ಲ ಚಾತುರ್ಯ, ಮಾತಿನ ರಭಸದಲ್ಲೆ ಮೌನದ ಮಡುವಿಗೆ ಸೆಳೆಯಬಲ್ಲ ಒಳಸುಳಿಗಳು – ಇವು ಲ್ಯಾಟಿನ್ ಅಮೆರಿಕಾದ ಬೋರ‍್ಹೆಸ್‌ನಲ್ಲಿ, ಐರ್‌ಲ್ಯಾಂಡಿನ ಜಾಯ್ಸ್‌ನಲ್ಲೂ ನಾವು ಕಾಣುವ ಗುಣಗಳು. ಆಶ್ಚರ್ಯವೆಂದರೆ ‘ಹಿಂದುಳಿದ’ ದೇಶಗಳ ಈ ಇಬ್ಬರು ಲೇಖಕರಲ್ಲಿದ್ದ ಶಕ್ತಿ ಬೇಂದ್ರೆಯಲ್ಲೂ ಇತ್ತ. ಆದರೆ ಬೇಂದ್ರೆಗಿದ್ದಂತಹ ಕಲ್ಪಕ ಶಕ್ತಿ ನವೋದಯ ಕಾಲದಲ್ಲಿ ನಮ್ಮ ಅತ್ಯುತ್ತಮ ಕಾದಂಬರಿಗಳಲ್ಲೂ ವ್ಯಕ್ತವಾಗಲಿಲ್ಲ. ನೈತಿಕ ಪ್ರಜ್ಞೆ, ದಟ್ಟವಾದ ವಾಸ್ತವತೆ, ಸಾಮಾಜಿಕ ಅರಿವು – ಇವೆಲ್ಲವೂ ಕಾದಂಬರಿಯ ಅತ್ಯಗತ್ಯ ದ್ರವ್ಯಗಳು, ಕನ್ನಡದಲ್ಲಿ ಅವು ಹೇರಳವಾಗಿವೆ. ಆದರೆ ಕಾದಂಬರಿ ಕೂಡ ನಮ್ಮಲ್ಲಿ ಹೊಸ ರಸಪ್ರಜ್ಞೆಯನ್ನುಂಟು ಮಾಡಲು ಬೇಂದ್ರೆಗಿದ್ದಂಥ ರೂಪಕ ಶಕ್ತಿಯ ಪ್ರತಿಭೆ ಅದರಲ್ಲಿ ಕೆಲಸ ಮಾಡಬೇಕು.

* * *

ಮನೋಹರ ಗ್ರಂಥಮಾಲೆಯ ಮಹಡಿಯಲ್ಲಿ ಪುಣ್ಯಕ್ಕೆ ಬೇಂದ್ರೆ ನನ್ನ ಉದ್ಧಟ ಪ್ರಶ್ನೆಗಳಿಂದ ರೇಗಿರಲಿಲ್ಲ. ಭಾವಗೀತೆ ಪ್ರಕಾರವೇ ಸಾಹಿತ್ಯದ ಅತ್ಯುತ್ತಮ ಪ್ರಕಾರವೆಂದು ಅವರು ತಿಳಿದರಬಹುದಲ್ಲವೆ ಎಂಬ ನನ್ನ ಪ್ರಶ್ನೆಯೊಂದಕ್ಕೆ ಅವರು ಹೌದೆಂದರು. ಅನಂತರ, ಕೀರ್ತಿಯವರ ಜೊತೆ ನಾನು ನಡೆಸಬೇಕೆಂದಿದ್ದ ವಾಗ್ವಾದಕ್ಕೆ ಬೇಂದ್ರೆಯಿಂದ ಈ ಉತ್ತರ ಪಡೆಯುವುದು ನನಗೆ ಅಗತ್ಯವಾಗಿತ್ತು. ನವ್ಯಮಾರ್ಗದ ಸಂರ್ಕೀಣತೆಯಿಂದ ಬೇಂದ್ರೆ ಹೊರಗುಳಿಯುತ್ತಾರೆ ಎಂಬ ವಾದಕ್ಕೆ ನಾನು ಸಮರ್ಥನೆ ಹುಡುಕುತ್ತಿದ್ದೆನೆಂದು ನೆನಪು.

ಮೇಲಿನ ವಾದಕ್ಕೆ ಸಂಬಂಧಿಸಿದಂತೆಯೇ ಒಂದು ವಿಚಾರವನ್ನು ಬೇಂದ್ರೆಯ ಗಮನಕ್ಕೆ ತರಲು ನಾನು ಪ್ರಯತ್ನಿಸಿದ್ದೆ. ನನ್ನ ವಿಚಾರ ಹೀಗಿತ್ತು : ಬೇಂದ್ರೆಗೆ ಅವರ ಮಾಂತ್ರಿಕತೆ ಸಾಧ್ಯವಾಗಿರುವುದು ಈಗಿನ ಬದಲಾಗುತ್ತಿರುವ ಧಾರವಾಡ ಕುರಿತು ಅವರು ಬರೆಯದೇ ಇರುವುದರಿಂದ, ಬಾಲ್ಯದ ನೆನಪು ಅವರ ಸಾಮಗ್ರಿ. ನಾದದ ಉಪಾಸಕರಾದ ಅವರ ತೆಕ್ಕೆಗೆ ನಮ್ಮ ಕಾಲದ ಕ್ರೂರ ಸತ್ಯಗಳು ದಕ್ಕುವುದಿಲ್ಲ – ಅವು ಅವರಿಗೆ ಬೇಕೂ ಇಲ್ಲ. ತಮ್ಮ ಮನಸ್ಸಿನ ಪರಿಪೂರ್ಣ ಪ್ರಪಂಚದಲ್ಲವರು ನಾದದ ಗುಮ್ಮಟದಲ್ಲಡಗಿ ಮತ್ತರಾಗಿ ಜೀವಿಸುತ್ತಾರೆ. ಈಗಿನ ವಿಘಟನೆಗಳು ಅವರಿಗೆ ಕ್ಷುಲ್ಲಕವೆನಿಸುತ್ತವೆ. ‘ಮೊದಲಗಿತ್ತಿ’, ‘ಕುರುಡು ಕಾಂಚಾಣ’, ದಾಂಪತ್ಯ ವಿರಸದ ಅವರ ಹಲವು ಕವನಗಳು, ತನ್ನ ಕಥೆಯಲ್ಲೇ ನಾಡಿನ ಕಥೆಯನ್ನು ಹೇಳುವ ‘ಸಖೀಗೀತ’ – ಇಂಥ ಹಲವು ಕೃತಿಗಳು ನನ್ನ ಗಮನದಲ್ಲಿದ್ದೂ ಬೇಂದ್ರೆ ನಶಿಸುತ್ತಿರುವ ಗ್ರಾಮೀಣ ಬದುಕಿನ ಕೊನೆಯ ದೊಡ್ಡ ಕವಿ ಎಂದು ನನಗೆ ಅನ್ನಿಸಿತ್ತು. ಈ ಅನ್ನಿಕೆಯನ್ನೇನೂ ನಾನು ಈಗ ತೊರೆದಿಲ್ಲ; ಆದರೆ ಇಂಥ ಸಾಮಾಜಿಕ ಅರಿವು ನಮ್ಮ ಕಾವ್ಯಾನುಭವದ ಸತ್ಯವನ್ನು ಬದಲಿಸಬಲ್ಲುದೆಂದಾಗಲೀ ಅಥವಾ ಬೇಂದ್ರೆಯಂಥ ಕವಿ ತನ್ನ ಲೋಕದಲ್ಲಿ ಕಂಡದ್ದು, ಹಾಗದನ್ನು ಕಾಣಲಾರದ ನಮಗೆ, ಅಪ್ರಸ್ತುತವೆಂದಾಗಲೀ ನಾನೀಗ ತಿಳಿದಿಲ್ಲ.

ನನ್ನ ಪ್ರಶ್ನೆ ಬೇಂದ್ರೆ ಓದಿದ ‘ಸಣ್ಣ-ಸೋಮವಾರ’ ಪದ್ಯದ ಬಗ್ಗೆಯಾಗಿತ್ತು. ಅದು ಅವರು ತಮ್ಮ ಇಳಿವಯಸ್ಸಿನಲ್ಲಿ ಬರೆದದ್ದು. ಬೇಂದ್ರೆಯ ಮಾಂತ್ರಿಕತೆ ಈ ಪದ್ಯದಲ್ಲೂ ಇದೆ. ಈ ಸಾಲುಗಳನ್ನು ನೋಡಿ :

ಭಜನೀಯ ಮ್ಯಾಳದ ದನಿ
ಅಲ್ಲಾ ದೂರಾ ಅಲ್ಲಾ ಸನಿ
ತುಳುಕ್ಯಾಡತಾವ ದಿಕ್ಕು ದಿಕ್ಕು
ತಪ್ಪಿ ಉಳಿದ ಕೋಗಿಲಾ
ನಡುವೇನ ಕೂಗ್ತದ
ಶ್ರಾವಣದ ಝಡಿಯೊಳಗೆ ಸಿಕ್ಕು.
ಹರಹರ ಮಹಾದೇವ
ಈಸಾಡತಾವ ಜೀವಾ
ಮಾನಸ – ಸರೋವರ ಹೊಕ್ಕು.

ಕೀರ್ತಿ ವಿವರಿಸುತ್ತಾರೆ : “ದೂರವೂ ಅಲ್ಲ, ಹತ್ತಿರವೂ ಅಲ್ಲದ ಭಜನೆಯ ಧ್ವನಿ, ಕಣ್ಣಿಗೆ ಕಾಣದಂತೆ ಕೂತು ಕೂಗುವ ಕೋಗಿಲೆ, ನೀರಿನಾಳದಲ್ಲಿ ಈಸಡುವ ಮೀನು ಇವು ಲೌಕಿಕ ಹಾಗೂ ಪಾರಲೌಕಿಕದ ಎಳೆತದಲ್ಲಿ ಸಿಕ್ಕ ಜೀವದ ಒದ್ದಾಟವನ್ನು ಪ್ರತಿಫಲಿಸುವ ಪ್ರತೀಕಗಳಾಗುತ್ತವೆ.” (‘ಭೃಂಗದ ಬೆನ್ನೇರಿ’, ಪುಟ, ೧೧೩.)

‘ಸಣ್ಣ-ಸೋಮವಾರ’ವನ್ನು ಬಾಲಕನ ಕಣ್ಣಿಂದ ನೋಡಿ ಬೇಂದ್ರೆ ಬರೆದಿದ್ದಾರೆ. ಕವಿತೆ ಹೀಗೆ ಪ್ರಾರಂಭವಾಗುತ್ತದೆ: ‘ಬಂತಣ್ಣ ಸಣ್ಣ -ಸೋಮವಾರ/ಕಾಣ ಬೇಕಣ್ಣ ಸೋಮೇಶ್ವರ.’ ಅಂದರೆ ಪದ್ಯ ಕೊನೆಯಾಗುವುದು ಹೀಗೆ:

ಎಣಿಸಿದರ ಏನೋ ಕನಸ
ಕಂಡಾಂಗ ಅನಸ್ತದ
ಕಣ್ಣು ! ಆಗ್ತಾವ ಹ್ಯಾಂಗೊ ತೇಲುಮೇಲಾ

ನೆನಪಿನ ಓರಿಯೊಳಗ
ಮಿಣುಕ್ತಾವ ಏಣ್ಣೀದೀಪ
ಎಲ್ಲ | ಹೋದಾವೋ ಗೆಳೆಯ ಆಕಾಲಾ?

ಅಂದರೆ, ಈ ಪದ್ಯದ ಅನುಭವ ಕೇವಲ ಹಳಹಳಿಕೆಯದು ಅಲ್ಲವೆ? ನೆನಪಲ್ಲಿ ಮರುಕಳಿಸುವ ಈ ಅನುಭವ ಈಗಲೂ ಧಾರವಾಡದ ಹುಡುಗನೊಬ್ಬನಿಗೆ ಸಹಜವಾಗಿ ಉಳಿದಿದೆಯೆ? ‘ತಗ್ಗಿನ್ಯಾಗ ಗಿಡದ ಗುಂಪು/ಹೊಂಡ್ಯದ ನೀರ ತಂಪು’ – ಬಾಲಕನ ಹಿಂದಿನ ಧಾರವಾಡದಲ್ಲಿ ಕಂಡ ಇವು ಈಗಲೂ ಹಾಗೆಯೇ ಇವೆಯೇ? ನನ್ನ ಪ್ರಶ್ನೆಗೆ, ‘ಆ ಹೊಂಡಗಳು ಈಗ ಇಲ್ಲ’ ಎಂದು ಬೇಂದ್ರೆ ಉತ್ತರ ಕೊಟ್ಟ ನೆನಪು. ಪದ್ಯದ ಭಾವ ನೊಸ್ಟಲ್ಜಿಯಾದ ವ್ಯಾಕುಲದ್ದು ಎಂದು ಆಗ ನನಗನ್ನಿಸಿತ್ತು. ಅಲ್ಲವೆಂದು ಆಗ ವಾದಿಸಿದ್ದ ಕೀರ್ತಿಯವರು ತಮ್ಮ ಪುಸ್ತಕದಲ್ಲಿ ಅದೇ ನಿಲುವು ತಳೆದಿದ್ದಾರೆ. ಹೊಂಡಗಳು ಈಗ ಇರಲಿ, ಇಲ್ಲದಿರಲಿ – ಅದು ಅಪ್ರಸ್ತತವೆಂದು ಆಗಲೂ ನಾನು ತಿಳಿಯದಿದ್ದವನಲ್ಲ. ಬೇಂದ್ರೆಗೆ ತಮ್ಮ ಸುತ್ತಲೂ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹೇಗೆನ್ನಿಸುತ್ತದೆಂಬುದು ನನಗೆ ಬೇಕಿತ್ತು. ಆದರೆ ಅವರ ಪದ್ಯದಲ್ಲಿ ಹಳಹಳಿಕೆಯ ಅಳುಬುರುಕು ಧಾಟಿಯಿಲ್ಲವೆಂಬುದನ್ನಂತೂ ಪದ್ಯಕ್ಕೆ ಮನಸೋತ ಯಾರಾದರೂ ಒಪ್ಪುತ್ತಾರೆ. ಬಾಲಕನ ಈ ಅನುಭವ ಕೇವಲ ನೆನಪಲ್ಲ; ಈಗಲೂ ನಿಜವೆಂಬಂತೆ ತನ್ನ ಎಲ್ಲ ಸೂಕ್ಷ್ಮತೆಗಳಲ್ಲೂ ಮೈ ಪಡೆದಿದೆ :

ಗರ್ಭ ಗುಡಿಯೊಳಗೆ ಲಿಂಗ
ನಿದ್ದಿಯೊಳಗs ನೋಡಿಧಾಂಗ
ಕಣ್ಣು ಮುಚ್ಚತಾವ ನಮೋ ಎಂದು
ಗವೀಯೊಳಗಿನ ದಾರಿ
ಹರದಾರಿ ಹರದಾರಿ
ಮಿಂಚಿತ್ತು ಚಂದ್ರಕ್ವಾರಿ ಒಂದು
ನಿಂತs ಮೈಯಾಗಿ ಖಂಬ
ಸೋರ‍್ಯಾವ ಜಂಬ-ಗಿಂಬ
ಹಿಡಿದಾನ ಕೈಯ ಶಿವನೆ ಬಂದು,
ಎಚ್ಚರsದಾಗ ಇದು
ಹುಚ್ಚುಚ್ಚಾರ ಅನಿಸಿ
ಎಲ್ಲಾರ ಕೂಡ ಕೈಮುಗಿದು
ಬೆಂಡೂ ಬತ್ತಾಸ ಅಂತ
ತಿಂತsನ ನುರಿಸಿಕೊಂಡ
ಹೋಗತಿದ್ವಿ ಜಾತ್ರಿಗೆ ಜಿಗಿದು

[1]

ಪದ್ಯದ ಮೈಯಲ್ಲಿರುವ ಸಾಮಾಜಿಕ ವಾಸ್ತವದ ವಿವರಗಳು, ನಾನು ಕಾಣುವ ವಿವರಗಳೇ ಆಗಿರಬೇಕೆಂಬ ಹಠ ತೊಟ್ಟ ವಿಮರ್ಸಕ ಶುಂಠನಾಗುತ್ತಾನೆಂಬುದನ್ನು ಬೇಂದ್ರೆಯಂಥ ಓಜಸ್ಸಿನ ಕವಿ ಬಹುಬೇಗ ನನಗೆ ಕಲಿಸಿದರು. ‘ಸಣ್ಣ ಸೋಮವಾರ’ದಲ್ಲಿ ಮರುಕಳಿಕೆ ಇದೆ; ಆದರೆ, ಧಾರಣ ಶಕ್ತಿ ಸಾಲದ ಶೆಲ್ಲಿ ಕಾವ್ಯದ ಬಗೆಯ ಮರುಕಳಿಕೆ ಇದಲ್ಲ; ಗೋಳಾಡುವ ಹಳಹಳಿಕೆಯಿಲ್ಲ, ಬಾಲ್ಯದಲ್ಲಿ ಕಂಡದ್ದನ್ನು ಈಗಲೂ ಬೇಂದ್ರೆ ಕಾಣಿಸುತ್ತಾರೆ; ಇದು ಬಾಲ್ಯದ ಅನುಭವವೆಂಬುದು ಪದ್ಯಕ್ಕೊಂದು ಆರ್ದ್ರಭಾವವನ್ನು ತರುತ್ತದೆ – ಅಷ್ಟೆ. ಬೇಂದ್ರೆ ಪದ್ಯದಲ್ಲಿ ಕಡೆದು ನಿಲ್ಲಿಸುವ ಭಾವ ನಮ್ಮನ್ನು ಹಗುರಗೊಳಿಸಿ ತಲೆದೂಗಿಸುವ ನಿಷಾ ಅಲ್ಲ; ‘ಮಂಕು ಬೂದಿಯಲ್ಲ. ಓದುಗನ ಅರ್ಧಂಬರ್ಧ ಗಮನಕ್ಕೆ ದಕ್ಕುವ ಪದ್ಯ ಇದಲ್ಲ; ಏಕಾಗ್ರತೆಯಲ್ಲಿ ನಮ್ಮನ್ನು ಪೂರ್ಣ ಒಡ್ಡಿಕೊಳ್ಳುವಂತೆ ಪದ್ಯ ಆಹ್ವಾನಿಸುತ್ತೆ. ಸೋಮೇಶ್ವರದ ಸಣ್ಣ ಹೊಂಡದಲ್ಲಿ ಹುಟ್ಟಿ ಗೋಕರ್ಣದ ಹತ್ತಿರ ಸಮುದ್ರ ಸೇರುವ ಶಾಲ್ಮಲಾ ನದಿಯ ವರ್ಣನೆ ಹೇಗಿದೆಯೆಂದರೆ – ಅದರ ಬಹಿರಂಗದ ಚಿತ್ರಣವೆಲ್ಲವೂ ನಮ್ಮ ಅಂತರಂಗದ ಅವಸ್ಥೆಗಳಾಗಿ ಬಿಡುವ ಹಾಗೆ. ಹೀಗಾಗುವುದು ಕವನ ಒತ್ತಾಯಿಸುವ ತನ್ಮಯತೆಯನ್ನು ನಾವು ಪಡೆದಾಗ. ಆಗ ಮಾತ್ರ “ಉಸಿರ ಹೆದೆಗೆ ಹೂಡಿದ ಗರಿಯೊಲು ಗುರಿಯ ನಿರಿಯಿಟ್ಟು” ಅನುಭವ “ಅನಾಯಾಸ” ತೇಲಿ ಬರುತ್ತದೆ:

ಶಾಲ್ಮಲಿ ಸಣ್ಣ ಬಾಲಿ
ಕಿವಿಯಲ್ಲಿ ತಾಳೆ – ವಾಲಿ
ಗರಿಗರಿ ಬನದಾಗ ಅಡಗಿ
ಗಂಗಾ ಹೊಳಿಯಾಗಿ
ಸಾಗರ ಬಿದ್ದು ಸಾಗರಕಾಗಿ
ಹೊರಟಾಳ ಗೋಕರ್ಣಕಡಿಗಿ
ಬೂರಲ ದೀಪಮಾಲಿ
ನಂದಿಸಿ ಸೆಜ್ಜಿಸಾಲಿ
ಗತ್ತಿನ ಸಪ್ಪಳಿಲ್ಲದ ನಡಿಗಿ[2]

ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ. ಹೀಗೆ ಈ ಅವಸ್ಥೆಗಳನ್ನವರು ಅವುಗಳ ತೀವ್ರತೆ ಮತ್ತು ಸಂಕೀರ್ಣತೆಗಳಲ್ಲಿ ಸೃಷ್ಟಿಸಿರುತ್ತಾರೆ ಎಂದರೆ ಪದ್ಯಕ್ಕೆ ಪೂರ್ವದಲ್ಲಿ ಈ ಅವಸ್ಥೆಗಳನ್ನವರು ಬೇರೆ ಮಾತುಗಳಲ್ಲಿ ಭಾವಿಸಿರಲಿಲ್ಲ ಎನ್ನಿಸುವಷ್ಟು. ಈ ದೃಷ್ಟಿಯಿಂದ ಅವರ ಪದ್ಯಗಳಲ್ಲಿ ‘ಸದ್ಯೋಜಾತ’ದ ತೇಜಸ್ಸಿರುತ್ತದೆ. ಗ್ರಹಿಕೆಗೊ, ಶಬ್ದಕ್ಕೂ ನಡುವೆ ಕಂದಕವಿರುವುದಿಲ್ಲ. ಬೇಂದ್ರೆಗೆ ಅನ್ನಿಸಿದ್ದನ್ನೆಲ್ಲ ಅಂತಂತೆಯೇ ಮೂಡಿಸಿಬಿಡುವ ಶಕ್ತಿ ಇದೆ. ಆದ್ದರಿಂದಲೇ ಮೇಲಿನ ಪದ್ಯದ ಶಾಲ್ಮಲಿ ನದಿ ಆಸ್ತಿಕತೆಯ ವಿಕಾಸಕ್ಕೆ ಸಂಕೇತವಲ್ಲ. ಅಂದರೆ, ಬುದ್ಧಿಪೂರ್ವಕವಾಗಿ ನಾವು ಹಾಗದವನ್ನು ಸ್ವೀಕರಿಸುವುದಿಲ್ಲ. ಕವಿಯ ಭಾಷೆ ಅಂಥ ಭಾವವೊಂದನ್ನು ನಮಗೆ ಥಟ್ಟನೇ ಹೊಳೆಯಿಸುತ್ತದೆ. ಕವಿ ಜ್ಞಾನಿಯಾಗಿದ್ದೂ ಸಾಮಾನ್ಯನಂತೆ ಮಾತನಾಡಬೇಕು ಎಂಬ ಏಟ್ಸ್‌ನ ಆಶಯ ಸಾಮಾನ್ಯರ ಭಾಷೆಯಲ್ಲೇ ಈ ಶಕ್ತಿ ಇನ್ನೂ ಉಳಿದ ನಾಗರಿಕತೆಯಲ್ಲಿ, ಬೇಂದ್ರೆಯಲ್ಲಿ ಆದಂತೆ, ಸಫಲವಾಗುತ್ತದೆ. ಆದ್ದರಿಂದ ಬೇಂದ್ರೆ ಕಂಡ ಶಾಲ್ಮಲಿ ಶಾಲ್ಮಲಿಯಾಗಿದ್ದೇ ಹೇಗೆ ಹಲವು ಭಾವಗಳ ಸ್ಫುರಣೆಯನ್ನು ಕವಿಯಲ್ಲುಂಟುಮಾಡಿದಳೋ, ಹಾಗೆಯೇ ನಮ್ಮಲ್ಲೂ ಅವಳು ಅವೇ ಭಾವಗಳನ್ನು ಉತ್ತೇಜಿಸಬಲ್ಲಳು. ನಮ್ಮ ಏಕಾಗ್ರತೆಯನ್ನು ಹುರಿಗೊಳಿಸುವುದರ ಮೂಲಕ ಬೇಂದ್ರೆಯ ಭಾಷೆ ನಮ್ಮ ಅಂತರಂಗದಲ್ಲಿ ಭಾವದ ತರಂಗಗಳನ್ನು ಸೃಷ್ಟಿಸುತ್ತದೆ. ಅತ್ತಿತ್ತ ಚಲಿಸದಂತೆ ಚಿತ್ತವನ್ನು ಪದ್ಯದ ನಾದ ಶರೀರ ಹಿಡಿದಿಟ್ಟಿರುತ್ತದೆ.

ಪ್ರಜ್ಞೆಯ ‘ಸ್ಥಿತಿ’ಗಳೇ ಬೇಂದ್ರೆಯ ಮುಖ್ಯ ಆಸಕ್ತಿಯಾಗಿರುವುದರಿಂದ ಅವರಿಗೆ ಆಧ್ಯಾತ್ಮದಂತೆಯೇ, ಕವನ ಹುಟ್ಟುವ ಬಗೆ, ಕಾಮ ಮತ್ತು ಭಕ್ತಿಗಳೂ ಅದಮ್ಯ ಕುತೂಹಲದ ಸಂಗತಿಗಳು. ‘ಏಳು ಕನ್ನಿಕೆಯರು’, ‘ಕಲ್ಪವೃಕ್ಷ ವೃಂದಾವನಂಗಳಲಿ’, ‘ಜೋಗಿ’ – ಇವು ನಮ್ಮ ಏಕಾಗ್ರತೆಯನ್ನು ಬೇಡುವ, ಈ ಏಕ್ರಾಗತೆಯನ್ನು ಹುಟ್ಟಿಸಲು ಅಗತ್ಯವಾದ ನಾದದಿಂದ ನಮ್ಮನ್ನು ಪ್ರವೇಶಿಸಿ ಹಿಡಿದಿಡುವ ಪದ್ಯಗಳು. ನಮ್ಮನ್ನು ಉಲ್ಲಾಸಗೊಳಿಸಿ, ಆ ಮೂಲಕ ಕವನಕ್ಕೆ ನಾವು ಹೆಚ್ಚು ಒದಗುವಂತೆ ಮಾಡಲು ಬೇಂದ್ರೆ ಬಳಸುವ ಸಾಧನಗಳು ಹೀಗೆ ಅನೇಕ.

* * *

ಬೇಂದ್ರೆ, ತಮ್ಮ ಸಮಕಾಲೀನರಲ್ಲೆಲ್ಲ ಅತ್ಯಂತ ವಿಶಿಷ್ಟ ಪ್ರತಿಭೆಯ ಕವಿ ಎಂಬುದು ನನಗೆ ಮನದಟ್ಟಾಗಿದ್ದು ಬಿಎಂಶ್ರೀಯವರ ಕನ್ನಡ ಪ್ರೇಮದ ಪದ್ಯ ಒಂದನ್ನು ಬೇಂದ್ರೆಯವರ ಪದ್ಯ ಎಂದು ಜೊತೆ ಹೋಲಿಸಿ ನೋಡಿದಾಗ. ಏಕಕಾಲದಲ್ಲಿ ಕನ್ನಡದಲ್ಲಿ ಶ್ರೀಯವರ ‘ಮಾರ್ಗ’ ಮತ್ತು ಬೇಂದ್ರೆಯವರ ‘ದೇಸಿ’ ಪ್ರಧಾನವಾದ ರಚನಾ ರೀತಿಗಳು ಹುಟ್ಟಿಕೊಂಡದ್ದು ಕನ್ನಡದ ಮುಂದಿನ ಇತಿಹಾಸಕ್ಕೆ ಮಹತ್ವದ ಸಂಗತಿ. ಬಿಎಂಶ್ರೀಯವರ ‘ಲೌಕಿಕ’ ಪ್ರಧಾನವಾದ ‘ಮಾರ್ಗ’ ದುರ್ಬಲವಾದಾಗ ಏನಾಗುತ್ತದೆಂಬುದನ್ನು ಈ ಹೋಲಿಕೆಯಿಂದ ತಿಳಿಯಬಹುದು. ಬಿಎಂಶ್ರೀ ಪದ್ಯದಲ್ಲಿ ಕನ್ನಡ ತಾಯಿ, ಹಿರಿಯ ಮುತ್ತೈದೆ, ತನ್ನ ಮಕ್ಕಳು ಹಿಂದುಳಿದಿದ್ದಾರೆಂದು ದುಃಖಿಸುತ್ತಾಳೆ. ಅಕ್ಕಪಕ್ಕದ ಮನೆಯವರಂತೆ ತನ್ನ ಮಕ್ಕಳಿಲ್ಲವಲ್ಲ ಎಂಬ ಕೊರಗು ಇವಳಿಗೆ. ಬೇಂದ್ರೆಯ ಪದ್ಯ ‘ಯಾರು ನಿಂದವರಲ್ಲಿ ತಾಯಿ? ಎಂದೆ’ ಎಂದು ಪ್ರಾರಂಭವಾಗುತ್ತದೆ. ಬಿಎಂಶ್ರೀ ಪದ್ಯದಲ್ಲಿ ತಾಯಿ ಸಂಸಾರಿ; ಬೇಂದ್ರೆಯಲ್ಲಿ ಅವಳು ಶಕ್ತಿದೇವತೆ. ಬಿಎಂಶ್ರೀ ಪದ್ಯದ ತಾಯಿ ಕನ್ನಡಿಗರಿಗೆ ಮೆಚ್ಚಿಗೆಯಾಗಬಲ್ಲಳು. ಅದು ರಾಜಕೀಯ ಪದ್ಯ; ಕನ್ನಡ ಚಳುವಳಿಗಾರರನ್ನು ಉದ್ರೇಕಗೊಳಿಸಬಲ್ಲಂಥದ್ದು. ಆದರೆ ಬೇಂದ್ರೆಯದು ಸಾರ್ವಕಾಲಿಕವಾದ ಭಾವವನ್ನು ಸೃಷ್ಟಿಸುತ್ತದೆ. ಜಾನಪದ ಮತ್ತು ಆರ್ಷೇಯ ಪರಂಪರೆಗಳ ಸಂಗಮವಾಗಿ, ಶಕ್ತಿದೇವತೆಯಾಗಿ ಬೇಂದ್ರೆಯಲ್ಲಿ ಬರುವ ತಾಯಿ ಪದ್ಯದ ಪ್ರಾರಂಭದಲ್ಲಿ ಕೇವಲ ಒಂದು ಹೆಣ್ಣು. ಅವಳನ್ನು ಮಾತನಾಡಿಸುವವನ ದೃಷ್ಟಿ ಬೆಳೆದಂತೆ ಅವಳೂ ಬೆಳೆಯುತ್ತಾ ಹೋಗುತ್ತಾಳೆ. ಕೊನೆಯಲ್ಲಿ “ಗಂಡುಸಾದರೆ ನಿನ್ನ ಬಲಿ ಕೊಡುವೆಯೇನು?’’ ಎಂದು ಕೇಳಬಲ್ಲ ಅವಳು ಕಾಳಿಯಾಗುತ್ತಾಳೆ. ಪ್ರಶ್ನೆ ಕೇಳಿದವನು ಕೊನೆಯಲ್ಲಿ ಸಮರ್ಪಣ ಭಾವದಲ್ಲಿ ದೀನನಾಗಿ ತನ್ನ ಯೋಗ್ಯತೆಯನ್ನು ಪ್ರಶ್ನಿಸಿಕೊಳ್ಳುವ ಸ್ಥಿತಿ ತಲುಪುತ್ತಾನೆ – ಪ್ರಾರಂಭದ ಅಸಡ್ಡೆ ಅವನಲ್ಲಿಲ್ಲ. ತಾಯಿ ಮೊಗದಲ್ಲಿ ದಿವ್ಯವನ್ನು ಕಂಡಿದ್ದಾನೆ ಅವನು. ಆದರೆ ಅವಳೆನ್ನುವಂತೆ ”ಸಾಜಮಾದವರು ಪಕ್ಷ ವಧ್ಯಮಹುದು”. ಇಲ್ಲಿ ಚಕ್ರಾನುಸಾರಿಯಾದ ಚರಿತ್ರೆಯ ಕಲ್ಪನೆಯಿದೆ. ಅವಳಲ್ಲಿ ರಾಜಕಳೆ ಸಹಜವಾಗಿದ್ದರೂ ಈಗಿನದು ಅವಳಿಗೆ ಕೃಷ್ಣಪಕ್ಷ. ಅಂದರೆ, ಕಾಲ ಬದಲಾಗಲೂಬಹುದು. ಪದ್ಯದ ತಾಯಿ ಮತ್ತು ಪ್ರಶ್ನೆ ಕೇಳುವ ಕನ್ನಡಿಗ ಒಬ್ಬರನ್ನೊಬ್ಬರು ‘ಬಗೆ’ಯುವ ಈ ನಾಟಕ, ಅಂತಗರ್ತವಾದ ಶಕ್ತಿ ಹೇಗೆ ಅನಾವರಣಗೊಳ್ಳುತ್ತದೆ ಎಂಬುದರ ಡಯಲೆಕ್ಟಿಕ್ ಆಗಿದೆ. ಬಿಎಂಶ್ರೀ ಪದ್ಯ ತಮಿಳರಿಗೂ ತೆಲುಗರಿಗೂ ಇಷ್ಟವಾಗುವಂಥದಲ್ಲ. ಬೇಂದ್ರೆಯದು ಐರ್‌ಲ್ಯಾಂಡಿನ ರಾಷ್ಟ್ರಗೀತೆಯೂ ಆಗಬಹುದು.

ಇಂಥದೇ ಐತಿಹಾಸಿಕ ಪ್ರಜ್ಞೆಯಿಂದ – ಆವರ್ತನಶೀಲ ಬದುಕಿನ ಪ್ರಜ್ಞೆಯಿಂದ – ಹುಟ್ಟುವ ಬೇಂದ್ರೆಯ ‘ಮೊದಲಗಿತ್ತಿ’, ‘ನೃತ್ಯಯಜ್ಞ’ ಮೊದಲಾದ ಪದ್ಯಗಳೂ ಪುರಾಣ, ಜಾನಪದ, ವಿದ್ಯುಕ್ತ ಕ್ರಿಯೆಗಳ ಸಮ್ಮಿಳನದಿಂದಾಗಿ ಭಾಷಾ ವಿಗ್ರಹಗಳಾಗುತ್ತವೆ.

* * *

ಬೇಂದ್ರೆಯ ಕಠಿಣ ರಚನೆಗಳ ಬಗ್ಗೆ ಬರೆಯಬಲ್ಲ ಸಮರ್ಥ ಸಮಕಾಲೀನ ವಿಮರ್ಶಕರೆಂದರೆ ಕೀರ್ತಿನಾಥ ಕುರ್ತಕೋಟಿ ಮತ್ತು ಶಂಕರ ಮೊಕಾಶಿ ಪುಣೇಕರ. ಆದರೆ ಇವರಿಗೆ ಬೇಂದ್ರೆ ನಂತರದ ಮುಖ್ಯ ಕವಿಯಾದ ಅಡಿಗರ ಕಾವ್ಯದ ಅನುಭವವನ್ನು ಮೆಚ್ಚುವುದ – ಬೇಂದ್ರೆಯ ಜೊತೆಯಲ್ಲೇ ಮೆಚ್ಚುವುದು – ಸಾಧ್ಯವಾಗಿಲ್ಲವೆಂಬ ಅನುಮಾನ ನನಗಿದೆ. ಈ ನನ್ನ ಅನುಮಾನ ತಪ್ಪಾಗಿದ್ದರೆ ಸಂತೋಷದಿಂದ ನಾನದನ್ನು ತಿದ್ದಿಕೊಳ್ಳುತ್ತೇನೆ. ನಾನು ಮೆಚ್ಚುವ ಈ ಧೀಮಂತ ರಸಿಕರ ಬಗ್ಗೆ ಇಂಥ ಒಂದು ಮಾತನ್ನು ಹೇಳಬೇಕೆಂದು ನನಗೆ ಅನ್ನಿಸಲು ಕಾರಣ: ಸಾವಯವ ಸಂಬಂಧ ಪಡೆದ ಸಂಸ್ಕೃತಿ ಬೇಂದ್ರೆಯ ಹುಟ್ಟಿಗೆ ಕಾರಣವಾದಂತೆಯೇ, ಪ್ರಸ್ತುತದ ವಿಘಟನೆ ಅಡಿಗರನ್ನೂ, ನವ್ಯ ಸಾಹಿತ್ಯವನ್ನೂ ನಮಗೆ ಕೊಟ್ಟಿದೆ. ಪ್ರಸ್ತುತವನ್ನೂ ದಟ್ಟ ಕಾವ್ಯಾನುಭವವನ್ನಾಗಿ ಮಾಡಿದ ಅಡಿಗರನ್ನು ತಿರಸ್ಕರಿಸಿ ಬೇಂದ್ರೆಯನ್ನು ಮೆಚ್ಚುವುದು, ಬೇಂದ್ರೆಯ ಕಾವ್ಯದಲ್ಲೇ ಇಲ್ಲದ ಹಿನ್ನೋಟದ ಹಳಹಳಿಕೆಯಿಂದ ಬೇಂದ್ರೆಯನ್ನು ಹೊಗಳಿದಂತಾಗುತ್ತದೆಂಬ ದಿಗಿಲು ನನಗಿದೆ.

ಕನ್ನಡ ವಿಮರ್ಶೆಯಲ್ಲಿ ನನಗೆ ಅತ್ಯಂತ ಮೆಚ್ಚುಗೆ ಲೇಖನವೆಂದರೆ ಮಾಸ್ತಿಯವರು ಬೇಂದ್ರೆ ‘ನಾದಲೀಲೆ’ಗೆ ಬರೆದ ಮುನ್ನುಡಿ. ತನ್ನ ಸಮಕಾಲೀನನೊಬ್ಬನನ್ನು ಹೀಗೆ ಅಳೆದು ತೂಗಿ ನಿರ್ಣಾಯಕ ಮಾತುಗಳನ್ನಾಡಿದ ವಿಮರ್ಶೆ ಯಾವ ಭಾಷೆಯಲ್ಲೂ ದುರ್ಲಭವ. ನಮಗೆ ಸಂತೋಷ ಕೊಟ್ಟ ನಮ್ಮ ವಿಮರ್ಶಾ ಬರಹಗಳಲ್ಲೂ ಸ್ವಲ್ಪ ಕಾಲ ಕಳೆದ ಮೇಲೆ ನಮಗೆ ನಾಚಿಕೆಯಾಗುವ ಮಾತುಗಳನ್ನು ನಾವು ಬರೆದಿರಬಹುದು – ‘ಅರಳು ಮರಳು’ ಸಂಗ್ರಹಕ್ಕಿಂತ ಹಿಂದಿನ ಬೇಂದ್ರೆ ಮಾತ್ರ ಕನ್ನಡದ ಶ್ರೇಷ್ಠ ಕವಿ ಎಂದು ನಾನು ಬರೆದ ಮಾತು ಈ ಬಗೆಯ ಅವಿವೇಕದ್ದು. ಬೇಂದ್ರೆ ಬಗ್ಗೆ ಮಾಸ್ತಿ ಬರೆದದ್ದು ಒಂದು ಕ್ಲಾಸಿಕ್ ಎನ್ನಬಹುದು. ಆ ಲೇಖನದಿಂದಲೇ ಎಲ್ಲ ಬೇಂದ್ರೆ ವಿಮರ್ಶೆಯೂ ಪ್ರಾರಂಭವಾಗಬೇಕು – ಅಷ್ಟು ದಿಟ್ಟವಾಗಿ ಸ್ಪಷ್ಟವಾಗಿ ಇದೆ ಲೇಖನ.

* * *

ಬೇಂದ್ರೆ ತಮ್ಮ ಹಲವು ಆಸಕ್ತಿಗಳನ್ನು, ತಮ್ಮ ಅದಮ್ಯ ಬೌದ್ಧಿಕ ಕುತೂಹಲದಿಂದ ಹುಟ್ಟಿದ ಹಲವು ವಿಚಾರಗಳನ್ನು, ಅನ್ನಿಸಿದ್ದನ್ನೆಲ್ಲ ಆಗಿಸಬಲ್ಲ ತಮ್ಮ ಮಾತಿನ ಮಾಂತ್ರಿಕತೆಯನ್ನು,  ಏಕತ್ರ ಸಂಘಟಿಸಿ ದುಡಿಸಬಲ್ಲಂಥ ಕವನ ಬರೆದರೆ? ಬರೆಯಲಿಲ್ಲವೆ? ಬರೆಯಬೇಕಿತ್ತೆ? – ಇಂಥ ಪ್ರಶ್ನೆಗಳು ಅಪ್ರಕೃತವಲ್ಲ. ಆದರೆ ಅವರ ಅಪಾಯ ಸಿದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಳಬೇಕಾದ ಪ್ರಶ್ನೆಗಳು ಇವು. ಬೇಂದ್ರೆಯಲ್ಲಿ ಸಂಕಲ್ಪಕ್ಕೂ ಸೃಷ್ಟಿಗೂ ನಡುವೆ ಕಂದಕವಿಲ್ಲ ಎಂಬುದು ನಿಜ. ಬೇಂದ್ರೆ ಅಂಬಿಕಾತನಯದತ್ತನಾಗಿ ತಾನು ನಂಬಿದ ದೈವದ ಜೊತೆ ಕವನಗಳ ಮುಖೇನ ಸಂಪರ್ಕ ಪಡೆಯುತ್ತಾರೆ ಎಂಬುದು, ಒಬ್ಬ ವಿಶಿಷ್ಟ ವ್ಯಕ್ತಿಯ ನುಡಿ ಒಂದು ಭಾಷೆಯ ಅತ್ಯುನ್ನತ ಸಾಧನೆಯಾಗಿ ಕಾಣುವ ಪವಾಡದಲ್ಲಿ ನಿಜವೆನ್ನಿಸುತ್ತದೆ. ಬೇಂದ್ರೆ ಚೆಲ್ಲುವ ಕವಿಯೆಂಬುದು ನಿಜವೆ; ಅವರ ಹಾಗೆ ಚೆಲ್ಲಿ, ಅವರಷ್ಟು ಫಲ ಪಡೆದ ಕವಿ ಜಗತ್ತಿನಲ್ಲಿ ದುರ್ಲಭನೆಂಬುದೂ ನಿಜವೆ.

ನಮ್ಮಲ್ಲಿ ಕೆಲವರಿಗೆ ಜನಮನದಲ್ಲಿ ಬೇರಿಲ್ಲದ ಅರವಿಂದ ತತ್ತ್ವದ ಮೂಲಕ ಬೇಂದ್ರೆ ತಮ್ಮ ಬಿಗಿತಗಳನ್ನು ಸಡಿಲಮಾಡಿಕೊಂಡರೇನೊ, ಪ್ರಜ್ಞೆಯ ವಿಲಕ್ಷಣ ಸ್ಥಿತಿಗಳನ್ನು ಕಡೆದಿಡುವ ಅವರ ಮಾತಿನ ಕಲೆ ದರ್ಶನದ ಶಾಸ್ತ್ರ ಭಾಷೆಯನ್ನು ಉಪಯೋಗಿಸುವುದರಲ್ಲೆ ತೃಪ್ತನಾಗಿ ಬಿಡುತ್ತಿದೆಯೇನೊ ಎಂದು ಅನ್ನಿಸಿದ್ದಿದೆ. ಬೇಂದ್ರೆಯ ಜೀರ್ಣಾಗ್ನಿಯಲ್ಲಿ ಅರವಿಂದರ ಅಮೂರ್ತ ತತ್ತ್ವಗಳು ಜನರ ಆಚರಣೆಯಲ್ಲಿ ಜೀವಂತ ಸ್ಪಂದನ ಪಡೆದ ವೀರಶೈವ ತತ್ತ್ವಗಳಂತೆ, ಭಕ್ತಿಯ ಅನುಭಾವದಂತೆ, ಪುರಾಣಗಳಂತೆ ಭಾಷೆಯಾಗಿ ನುರಿಯುವುದಿಲ್ಲ. ಅರವಿಂದರ ಕವನದ ಭಾಷಾಂತರವಾದ ಈ ಕೆಳಗಿನ ಸಾಲುಗಳು ನಮ್ಮಿಂದ ಬೇಡುವ ಸ್ಪಂದನದಲ್ಲಿ ಭಾಷೆಯೇ ಸ್ವಯಂ ಉತ್ತೇಜಿಸುವದೆಷ್ಟು, ಆರೋಪಿತ ಸಂಕೇತದಿಂದ ಬುದ್ಧಿಪೂರ್ವಕವಾಗಿ ನಾವು ಪಡೆಯುವುದೆಷ್ಟು – ಮತ್ತು – ಈ ಎರಡನ್ನೂ ಚಲನೆಗೆ ಹಚ್ಚುವ ನಾದದ ಅರ್ಥಾವಧಾರಣ ಶಕ್ತಿ ಎಂಥದು ಎಂಬುದು ಚರ್ಚೆಗೆ ಅರ್ಹ.

ಓ ಸ್ವಪ್ನಾಗ್ನಿ ಸೃಷ್ಟಾ ಸೌಕಾರೂಢಾ ಗೂಢಾ
ಯಾರವನೋ ಚಿರತರುಣಾ ಬಂದಾ
ಹುಬ್ಬೋ – ಅನಂಗನು ಚಿತೆಯಲಿ ಮಣಿಸಿದ ಕಬ್ಬೋ
ಆಹಾ ಈ ಕಾಯಾ ಹಿರಣ್ಯಾ ಗರ್ಭಚ್ಛಾಯಾ
– ಆಕೃತಿ ಬಂಧಾ… (ಸ್ವಪ್ನನೌಕೆ)

ಕೀರ್ತಿ ಹೇಳುವಂತೆ ಅರವಿಂದರ ಈ ಪದ್ಯ ಕನ್ನಡದಲ್ಲಿ ಮರುಹುಟ್ಟು ಪಡೆದಿರಬಹುದು. ಆದರೂ, ಇಲ್ಲಿ ಸಂಕೇತವೇ ಮುಂದೆ, ಭಾಷೆ ಹಿಂದೆ. ಆದರೆ ಕೀರ್ತಿಯೇ ಇನ್ನೊಂದು ಕಡೆ ಉದ್ಧರಿಸುವ ಬಸವಣ್ಣನ ವಚನದಲ್ಲಿ ಭಾಷೆಯಿಂದಲೂ, ಪುರಾಣ ಸಂಕೇತಗಳಿಂದಲೂ ಒಟ್ಟಿಗೇ ಅನ್ಯೋನ್ಯವೆಂಬಂತೆ ಅರ್ಥ ಉತ್ತೇಜಿತವಾಗುತ್ತದೆ; ವಚನದ ಲಯ ಈ ಅರ್ಥವನ್ನು ಒಳಪಡಿಸುವ ಶ್ರುತಿಯಂತಿದೆ:

ಕಾಳಿಕಂಕಣದಿಂದ ಮುನ್ನ
ತ್ರಿಪುರ ಸಂಹಾರದಿಂದ  ಮುನ್ನ
ಹರಿವಿರಂಚಿಗಳಿಲ್ಲದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ, ಮುನ್ನ, ಮುನ್ನ
ಆದಿ ಉಳಿವಿನ
ಕಳೆಯ ನೀನು, ಹಳೆಯ ನಾನು ಮಹಾದಾನಿ ಕೂಡಲಸಂಗಮದೇವ.

ಅರವಿಂದರಲ್ಲಿ ಅರ್ಥದ ತಿಳುವಳಿಕೆ ಮಾತ್ರ ಹುಟ್ಟಿದರೆ, ಬಸವಣ್ಣನಲ್ಲಿ ಅರ್ಥಪ್ರತೀತಿಯಾಗುತ್ತದೆ. ಜೀವಸ್ಪರ್ಶವಾಗದ ಕಾವ್ಯದ ಸಂಕೇತಗಳನ್ನು ಸರ್ಕಸ್ ಪ್ರಾಣಿಗಳೆಂದೂ, ತನ್ನ ಅಣತಿಯಂತೆ ಆಡುತ್ತಿದ್ದ ಅವು ಈಗ ತನ್ನನ್ನು ತೊರೆದದ್ದರಿಂದ ಎಲ್ಲ ಸಂಕೇತಗಳಿಗೂ ಪ್ರಾಣ ಕೊಡುವ ಕಚ್ಚಾ ಬದುಕಿಗೇ ತಾನಿನ್ನು ಮರಳಬೇಕೆಂದೂ ಏಟ್ಸ್‌ತನ್ನ ಕೊನೆಗಾಲದ ಪದ್ಯವೊಂದರಲ್ಲಿ ಹೇಳುತ್ತಾನೆ. ದಿವ್ಯದ ಧಾರಣಾಶಕ್ತಿ ಇರುವುದು ಕಚ್ಚಾ ಬದುಕಿಗೇ ಎಂಬುದನ್ನು ಬೇಂದ್ರೆಗಿಂತಲೂ ಚೆನ್ನಾಗಿ ತಿಳಿದ ಕವಿ ಇಲ್ಲವೇನೋ. ತಾಯಿ ಮಗುವಿಗೆ ಹೇಳುವ ಈ ಮಾತುಗಳಿಗಿಂತ ಹೆಚ್ಚು ಅಲೌಕಿಕವಾದ್ದು ಏನಿದೆ?:

ನನ್ನ ಪಂಕದಲ್ಲಿ ಹುಟ್ಟಿ ಲೇಪವಿಲ್ಲದಿರುವೆ
ನನ್ನ ಪಂಕಜವೆ!
ನನ್ನ ನೀರಲ್ಲಿ ಬೆಳೆದು ನಿರಾಳದಲ್ಲಿರುವೆ

ನನ್ನ ನೀರಜವೇ!
ಒಡೆಯಲು ಬಾರದ ಒಡಪಿನಂತಿರುವೆ
ಬಿಡಿಸಲು ಬಾರದ ತೊಡಕಿನಂತಿರುವೆ
………………………
ಯಕ್ಷಾಂಗುಲಿಕೆಯಂತೆ ನಿನ್ನ ತೊಟ್ಟು ನಿನ್ನೆಲ್ಲ ಗುಟ್ಟರಿಯೆ ನಾನು
ನವೋನವ ಚಮತ್ಕಾರವೆ ನೀನಾವ ಲೋಕದ ಜೀವಿ?

* * *

ಕವಿಯಾಗಿ ತಾನು ಯಾರು, ಏನು ಎಂಬುದು ಬೇಂದ್ರೆಗೆ ಚೆನ್ನಾಗಿ ತಿಳಿದಿತ್ತು. ಇಲ್ಲಿ ಕೊಲ್ಹಾಪುರದಲ್ಲಿ ನಾನು ನಿನ್ನೆ ಭೆಟ್ಟಿಯಾಗಿದ್ದ ಡಾ. ಥೊರೋ – ಬೇಂದ್ರೆಯ ಅಭಿಮಾನಿ ಶಿಷ್ಯರಲ್ಲೊಬ್ಬರು – ಒಂದು ಘಟನೆ ಹೇಳಿದರು. ಸಾಹಿತ್ಯ ಅಕಾಡೆಮಿ ಸಭೆಯೊಂದರಲ್ಲಿ ಪ್ರಧಾನಿ ನೆಹರೂರವರು ಕವಿಗಳು ಸಮಾಜ ಪರಿವರ್ತನೆಗೆ ದುಡಿಯಬೇಕೆಂದು ಕರೆಕೊಟ್ಟಾಗ ಸಭೆಯಲ್ಲಿದ್ದ ಬೇಂದ್ರೆ ನೆಹರೂಗೆ ಹೇಳಿದರಂತೆ: ‘ನಿಮ್ಮಂಥವರ ಸಮಾಜಸೇವೆಯಲ್ಲಿ ನಾವು ಕಾವ್ಯವನ್ನು ನೋಡುತ್ತೇವೆ. ನೀವೇಕೆ ನಮ್ಮ ಕಾವ್ಯದಲ್ಲಿ ಸಮಾಜಸೇವೆ ಕಾಣಲಾರಿರಿ?’ ಕಮ್ಯೂನಿಸ್ಟರು ಆಳುತ್ತಿರುವ ಪೋಲೆಂಡ್‌ನಲ್ಲಿ ಇನ್ನೂ ಕಾಮಿರ್ಕರು, ರೈತರು ಅಧಿಕಾರದ ಗದ್ದುಗೆಯನ್ನು ಏರಲು ಸಾಧ್ಯವಾಗಿಲ್ಲ. ಆದರೆ ಬೇಂದ್ರೆಯ ಕಾವ್ಯದಲ್ಲ ದುಡಿಯುವ ಜನ ಪ್ರಭುತ್ವದ ಗದ್ದುಗೆಯೇರುವ ಮೊದಲೇ, ಅದಕ್ಕೂ ಎತ್ತರವಾದುದನ್ನು ಏರಿದ್ದಾರೆ. ಬೇಂದ್ರೆಯಿಂದಾಗಿ ಜನರ ಭಾಷೆ ಏನನ್ನಾದರೂ ಅಭಿವ್ಯಕ್ತಿಸಬಲ್ಲ ಶಕ್ತಿ ಪಡೆದುಕೊಂಡು ಕನ್ನಡದ ವ್ಯಾಸಪೀಠವನ್ನೇರಿದೆ.

ಕವಿಯಾಗಿ ಅರವಿಂದರು ದೊಡ್ಡವರೊ, ಬೇಂದ್ರೆಯೋ? ಈ ಪ್ರಶ್ನೆಯ ಬಗ್ಗೆನನ್ನ ತುಂಟತನದ ಫಲವಾದ ಒಂದು ಕಥೆ ಹೇಳಿ ಮುಗಿಸುವೆ : ಜರ್ಮನಿಯ ಹೈಡಲ್‌ಬರ್ಗ್ ವಿಶ್ವವಿದ್ಯಾಲಯದಿಂದ ಸಂಶೋಧನೆಗೆಂದು ಪ್ರೊ. ಲೂಟ್ಸೆ ಮೈಸೂರಿಗೆ ಬಂದಿದ್ದರು. ಬೇಂದ್ರೆಯನ್ನು ಸಂದರ್ಶಿಸಲೆಂದು ಧಾರವಾಡಕ್ಕೆ ಹೋಗಲಿದ್ದ ಅವರಿಗೆ ನಾನು ಮೇಲಿನ ಪ್ರಶ್ನೆಯನ್ನು ಬೇಂದ್ರೆಗೇ ಹಾಕುವಂತೆ ಹೇಳಿದೆ. ನಾನು ಅನುಮಾನಿಸಿದಂತೆಯೇ ಬೇಂದ್ರೆ ತಮ್ಮ ಸಂದರ್ಶನದಲ್ಲಿ ಅರವಿಂದರನ್ನು ಅವತಾರ ಪುರುಷರೆಂದರು : ದೇವಾಂಶ ಸಂಭೂತರೆಂದರು. ಆದರೆ ಕಾವ್ಯವಾಗಿ ಇಬ್ಬರದರಲ್ಲಿ ಯಾರದು ದೊಡ್ಡದು ಎಂಬ ಮೇಲಿನ ಪ್ರಶ್ನೆ ಕೇಳಿದೊಡನೆಯೇ ” of course, mine” ಎಂದು ಬಿಟ್ಟರು.

ಕಾವ್ಯದ ಸೃಜನಶೀಲತೆಯ ಸ್ವರೂಪ, ಅದರ ಬಿಗಿ, ಅದರ ಕಷ್ಟ, ಅದು ತರುವ ಏಕಾಗ್ರತೆ ಸುಖ, ಪ್ರೇಮಕ್ಕೂ ಅದಕ್ಕೂ ಇರುವ ನಂಟು, ಅದರ ಮಣ್ಣು ಮಾತ್ರ ಗರ್ಭಿಸಿಕೊಳ್ಳಬಲ್ಲ ಆಕಾಶ, ಈ ಮಣ್ಣನ್ನು ಹದದಲ್ಲಿಡುವ ಸಮೃದ್ಧ ಅನುಭವದ ಜನಜೀವನ- ಇವೆಲ್ಲವನ್ನೂ ತೀವ್ರವಾಗಿ ಅನುಭವಿಸಿದ್ದ ನಮ್ಮ ಕಾಲದ ದೊಡ್ಡ ಕವಿಯೆಂದರೆ ಬೇಂದ್ರೆ.

ರುಜುವಾತು – ೫.೧.೧೯೮೨

* * *[1] ಈ ಪದ್ಯದ ಬಗ್ಗೆ ಈಚೆಗೆ ಶ್ರೀ ರಾಜಶೇಖರ ಅವರು ‘ಅಮ್ಮನಗುಡ್ಡ’ ವ್ಯಾಖ್ಯಾನಿಸುತ್ತ ಹೇಳುವ ಮಾತುಗಳು (‘ಸಂವಾದ’, ಸಂ.೧೧. ೧೯೮೮) ನನ್ನ ಅನಿಸಿಕೆಗಿಂತ ತುಸು ಭಿನ್ನವಾಗಿವೆ, ಚರ್ಚಾರ್ಹವಾಗಿವೆ.)

[2] ಹೆಚ್ಚಿನ ವಿವರಕ್ಕೆ ನೋಡಿ: ‘ಭೃಂಗದ ಬೆನ್ನೇರಿ, ಪುಟ -೧೧೫