ಪ್ರಪಂಚವನ್ನು ಅದರ ಮೂರ್ತ ಸ್ವರೂಪದಲ್ಲಿ ಕಾಣಲು ದೂರ ಅಗತ್ಯವಿದೆ. ಆದರೆ ಅದಕ್ಕಾಗಿ ಕವಿ ಮೇಲಿನಿಂದ ನೋಡಿದಾಗ ಭೂಮಿ ಯಾವುದೋ ಪಾತಾಳದಿಂದ ಆಕ್ರಂದಿಸುತ್ತ ತನ್ನನ್ನು ದೂರದಿಂದ ನೋಡದಂತೆ ಆತನನ್ನು ವಾಪಸು ಕರೆಯುತ್ತದೆ. ಇಂತು ನಮ್ಮನ್ನು ಹಗಲಿರುಳೂ ಮನಸ್ಸಿಗೆ ಶಾಂತಿ ಸಿಗದಂತೆ ಬಾಧಿಸುವ ಒಂದು ಭಯಂಕರವಾದ ಬಗೆಹರಿಯಲಾರದ ವೈರುದ್ಯ, ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ; ಇದು ಇರುವಿಕೆಗೂ ಕ್ರಿಯೆಗೂ ನಡುವಿನದು; ಇನ್ನೊಂದು ನೆಲೆಯಲ್ಲಿ ಕಲೆಗೂ ನಮ್ಮ ಜನರ ಜೊತೆ ನಮಗಿರಬೇಕಾದ ನಂಟಿಗೂ ನಡುವಿನದು. ಕ್ರೂರವಾಸ್ತವತೆ ಬೇಡುವ ಮಾತು ಅಸಹನೀಯ. ಅದನ್ನು ಮುಟ್ಟಿದ ಕವಿಯ ಬಾಯಿಂದ ಜೋಬ್ ದಾರುಣ ದೂರು ಕೂಡ ಹೊರಬೀಳಲಾರದು. ಕ್ರಿಯೆಗೆ ಹೋಲಿಸಿದಲ್ಲಿ ಎಲ್ಲ ಕಲೆಯೂ ಕ್ಷುಲ್ಲಕವೆನಿಸಿಬಿಡುತ್ತದೆ. ಆದರೂ ದೂರದಲ್ಲಿ ನಿಲ್ಲದೇ, ‘ಮೇಲಿನಿಂದ ನೋಡದೇ, ವಾಸ್ತವತಗೆಯನ್ನು ಗೋಜಲಾದ ಅದರ ಎಲ್ಲ ಒಳಿತು ಕೆಡುಕುಗಳಲ್ಲೂ, ಭರವಸೆ ಮತ್ತು ನಿಸ್ಸಹಾಯಕತೆಗಳಲ್ಲೂ ಅರಿಯುವುದು ಅಸಾಧ್ಯ. ನಿಜಆದರೆ ಹೀಗೆ ದೂರ ನಿಂತು ನೋಡುವುದು ಒಂದು ನೈತಿಕ ದ್ರೋಹವೆಂದೂ ಅನ್ನಿಸುತ್ತದೆ. ಜನಾಂಗ ಹತ್ಯೆಯ ಪಾಪದಿಂದ ಮಲಿನವಾದ ನಮ್ಮ ಪೃಥಿವಿಯ ಇಪ್ಪತ್ತನೆಯ ಶತಮಾನದ ಕವಿಗಳನ್ನು ಕಾಡುವ ಒಳತೋಟಿಯ ಮೂಲದಲ್ಲಿರುವುದು ಧರ್ಮ ಸಂಕಟವೇ.

– ಜೆಸ್ಲಾ ಮೀಲೋಜ್: ನೊಬೆಲ್ ಭಾಷಣ ೧೯೮೦ರಿಂದ.

ಭಾರತದ ಪ್ರಧಾನಿಯವರು ದೆಹಲಿಯ ಕೆಲವು ಪ್ರಸಿದ್ಧ ಲೇಖರನ್ನು, ನಾಟಕ ನಿರ್ದೇಶಕರನ್ನು ಚಹಾಕ್ಕೆ ಆಹ್ವಾನಿಸಿದಾಗ ನಮ್ಮ ಗಣ್ಯ ಕಲಾವಿದರು ಈ ದೇಶದ ಪ್ರಜಾತಂತ್ರ ವ್ಯವಸ್ಥೆಯ ಅತ್ಯಂತ ಮುಖ್ಯ ವ್ಯಕ್ತಿಯ ಜೊತೆಗೆ ಏನು ಮಾತಾಡಿದರು?

ಇದನ್ನು ತುಂಬ ದುಃಖದಿಂದ ನನಗೆ ತಿಳಿಸಿದವರು ದೆಹಲಿಯ ಒಬ್ಬ ಲೇಖಕ ಮಿತ್ರರು. ಪ್ರಧಾನಿಯನ್ನು ನೋಡುವ ಮುಂಚೆ ಕಲಾವಿದರು ಸಭೆ ಸೇರಿ ತಾವು ‘ರಾಜಕೀಯ’ವನ್ನು ಅವರ ಜೊತೆ ಚರ್ಚಿಸಕೂಡದೆಂದು ತೀರ್ಮಾನಿಸಿದರಂತೆ. ಇದನ್ನು ಕೇಳಿದಾಗ ನನಗೆ ದುಂಡುಮೇಜಿನ ಸಮ್ಮೇಳನಕ್ಕೆಂದು ಇಂಗ್ಲೆಂಡಿಗೆ ಹೋಗಿದ್ದ ಗಾಂಧೀಜಿ ಅರೆಬೆತ್ತಲೆಯಾಗಿ ಬ್ರಿಟಿಷ್ ಚಕ್ರವರ್ತಿಯನ್ನು ಭೇಟಿಯಾದ ಘಟನೆ ನೆನಪಾಯಿತು. ಗಾಂಧೀಜಿ ಈ ಭೇಟಿ ಮುಗಿದ ನಂತರ ತಮಾಷೆ ಮಾಡಿದಂತೆ ‘ತಮ್ಮಿಬ್ಬರಿಗೂ ಸಾಕಾಗುವಷ್ಟು ಬಟ್ಟೆ ತೊಟ್ಟಿದ್ದ’ ಚಕ್ರವರ್ತಿ ತನ್ನ ‘ಪ್ರಜೆ’ಯಾದ ಗಾಂಧೀಜಿಯನ್ನು ‘ನ್ಯಾಯಬಾಹಿರ’ ಚಟುವಟಿಕೆಗಳಿಗಾಗಿ ಛೇಡಿಸಿದರಂತೆ. ಆಗ ಗಾಂಧೀಜಿ ಕೊಟ್ಟ ಉತ್ತರ ಸ್ಮರಣೀಯವಾದ್ದು: “ನಿಮ್ಮ ಅತಿಥಿಯಾಗಿ ನಿಮ್ಮ ಮನೆಗೆ ಬಂದು ಮರು ಉತ್ತರದಿಂದ ನಿಮ್ಮನ್ನು ನೋಯಿಸುವುದು ಸಭ್ಯ ವರ್ತನೆಯಲ್ಲ. “ಚಹಾಕ್ಕೆ ಕರೆದ ಪ್ರಧಾನಿಯನ್ನು ರಾಜಕೀಯವಾಗಿ ಟೀಕಿಸಕೂಡದೆಂಬ ಲೇಖಕರ ತೀರ್ಮಾನದ ಹಿಂದೆ ಇಂಥ ಕೇವಲ ಸೌಜನ್ಯವಿದ್ದಲ್ಲಿ ನಮ್ಮ ಆಕ್ಷೇಪವಿಲ್ಲ. ಆದರೆ ನಮ್ಮ ರಾಷ್ಟ್ರಜೀವನದಲ್ಲಿ ನಿತ್ಯಸಂಗತಿಗಳಾಗಿಬಿಟ್ಟ ‘ಖಾನ್’, ‘ಕಾಂತಿ ದೇಸಾಯಿ’, ‘ಇಬ್ರಾಹಿಂ’, ‘ಮಾರುತಿ’, ‘ಸುರೇಶ್‌ರಾಮ್’, ಇತ್ಯಾದಿ ಪ್ರಕರಣಗಳು ಸಾರ್ವಜನಿಕ ಜೀವನದಲ್ಲಿ ಸದ್ಯದ ಕಿರಿಕಿರಿಗೆ ಮಾತ್ರ ಕಾರಣವಾಗುವ ‘ರಾಜಕೀಯ’ವೆಂದು ನಮ್ಮ ಈ ಕಲಾವಿದ ಧೀಮಂತರು ತಿಳಿದಂತೆ ಅನಿಸುತ್ತದೆ. ಈ ಬಗೆಯ ಅಧಿಖಾರದ ದುರುಪಯೋಗ ಅನಾಚಾರಗಳು ಆಗ ಅಧಿಕಾರದಲ್ಲಿರುವ ಪಕ್ಷಕ್ಕೆ ಮಾತ್ರ ಸೀಮಿತವಲ್ಲ; ನಮ್ಮ ಎಲ್ಲ ಪಕ್ಷಗಳೂ ‘ಕಾಂಗ್ರೆಸ್ ಸಂಸ್ಕೃತಿ’ಯಿಂದ ಪ್ರಭಾವಿತ ವಾದವುಗಳೇ. ಸಾರ್ವಜನಿಕ ಜೀವನವನ್ನು ಭ್ರಷ್ಟವೂ ಕ್ಷುಲ್ಲಕವೂ ಆಗುವಂತೆ ಮಾಡುತ್ತಿರುವ ಇಂಥ ಪ್ರಸಂಗಗಳನ್ನು ಕಲಾವಿದರಿಗಾದರೂ ಪಕ್ಷಾತೀತವಾಗಿ ಕಾಣಲು ಸಾಧ್ಯವಾಗಬೇಕು. ಯಾಕೆಂದರೆ ದಾರಿದ್ಯ್ರದಿಂದ ನರಳುತ್ತಿರುವ ಈ ದೇಶದಲ್ಲೂ ಅಧಿಕಾರದಲ್ಲಿರುವವರ ಅಟ್ಟಹಾಸ ಮತ್ತು ಸಿನಿಕತನಗಳ ಮೂಲವೆಲ್ಲಿದೆ ಎಂಬುದನ್ನು ಪಕ್ಷಾತೀತ ದೃಷ್ಟಿಯಿಂದ ಯೋಚಿಸಬಲ್ಲವರು ಮಾತ್ರ ತಿಳಿಯಬಲ್ಲರು. ಸಾರ್ವಜನಿಕ ಜೀವನದ ಇಂಥ ಹೊಲಸಿನ ಬಗ್ಗೆ ನಮ್ಮ ಪ್ರಧಾನಿ ಕಿಂಚಿತ್ತೂ ವಿಚಲಿತರಾಗದವರು ಎಂದು ಅನ್ನಿಸಿದಲ್ಲಿ ಅವರನ್ನು ಸೌಜನ್ಯಕ್ಕಾಗಿಯೂ ಭೇಟಿಯಾಗ ಕೂಡದು; ಅಥವಾ ಇಂಥ ಸಮಸ್ಯೆಗಳು ಅವರನ್ನೂ ಬಾಧಿಸುತ್ತಿಬಹುದು ಎಂದು ನಮಗೆ ಅನ್ನಿಸಿದಲ್ಲಿ-ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಾಗೆ ಅನ್ನಿಸಬೇಕು-ಇಡೀ ರಾಷ್ಟ್ರಜೀವನವನ್ನು ವ್ಯಾಪಿಸಿರುವ ಈ ವ್ಯಾಧಿಯ ನಿವಾರಣೆಯ ಬಗ್ಗೆ ಪ್ರಧಾನಿ ಜೊತೆ ಅಭಿಪ್ರಾಯ ವಿನಿಮಯ ಸಾಧ್ಯವಾಗಬೇಕು; ಪ್ರಧಾನಿಗೂ ಕಲಾವಿದರ ಜೊತೆ ಇಂಥ ನೈತಿಕ ಸಮಸ್ಯೆಗಳ ಬಗ್ಗೆ ಮಾತಾಡಬೇಕೆನ್ನಿಸಬೇಕು.

ರಾಜಕೀಯವೆಂಬುದು ಇನ್ನೂ ಗಹನವಾದ್ದು; ಕೆಲವು ವ್ಯಕ್ತಿಗಳ ದುರಾಚಾರವಾಗಿ ಹೊರಗೆ ಕಾಣಿಸಿಕೊಳ್ಳುವ ಇದು ಆಳವಾದ ಗುಪ್ತವ್ಯಾಧಿಯಾಗಿರಬಹುದು. ಅಥವಾ ಹಾಗಿಲ್ಲದ ಆರೋಗ್ಯದ ಸ್ಥಿತಿಯಲ್ಲಿ ಮನುಷ್ಯನಿಗೆ ಮೂಲಭೂತವಾಗಿರುವ ಪ್ರೇಮ ಮತ್ತು ಸ್ವಾತಂತ್ಯ್ರಗಳ ಅಪೇಕ್ಷೆಯನ್ನು ಸಂಘಜೀವಿಯಾದ ವ್ಯಕ್ತಿ ಸಫಲಗೊಳಿಸಿಕೊಳ್ಳಲು ಸಮುದಾಯದ ಜೊತೆಗೆ ತೊಡಗುವ ಎಲ್ಲ ವ್ಯಾಪಾರಗಳೂ, ಅವುಗಳ ಹಿಂದಿರುವ ಎಲ್ಲ ಕಟ್ಟು ಕಟ್ಟಳೆಗಳೂ, ವಿಶಾಲವಾದ ಅರ್ಥದಲ್ಲಿ ವಾಗ್ವಾದಕ್ಕೆ ಅರ್ಹವಾದ ರಾಜಕೀಯವಾಗಬಹುದು. ಅಂಥ ಆಳದ ರಾಜಕೀಯದಲ್ಲಿ ಮಾನಸಿಕವಾಗಿಯೂ ತೊಡಗಲಾರದಷ್ಟು ನಮ್ಮನ್ನು ಕೆಲವು ರಾಜಕಾರಣಿಗಳ ವೈಯಕ್ತಿಕ ದುರ್ನಡತೆ ಆಕ್ರಮಿಸಿಬಿಡುತ್ತಿದೆ ಎಂಬುದು ಒಂದು ದುರಂತ. ಆದರೆ ರಾಜಕೀಯವನ್ನು ಅದರ ಮೂಳಭೂತ ಸಂಕೀರ್ಣತೆಯಲ್ಲಿ ಗ್ರಹಿಸಲಾರದವನು ಪ್ರತಿನಿತ್ಯ ನಮ್ಮನ್ನು ಕಾಡುತ್ತಿರುವ ಕೊಳಕುಗಳನ್ನೂ ನಿರ್ಮೂಲನ ಮಾಡಲಾರ ಎಂಬುದೂ ನಿಜವೇ.

ಅಮೂರ್ತವಾದ್ದನ್ನು ತನ್ನ ಮೂರ್ತ ಕಾಣುವಿಕೆಯಲ್ಲಿ ನೈಜವಾಗಿಸುವ ಸಾಹಿತ್ಯ ಈ ಬಗೆಯ ಶೋಧವನ್ನು ಅನನ್ಯವಾಗಿ ಮಾಡಬಲ್ಲುದೆಂಬುದಕ್ಕೆ ಈ ಸಂಚಿಕೆಯಲ್ಲಿ ಚರ್ಚಿತವಾದ ಮಾಸ್ತಿಯವರ ಚಿಕವೀರ ರಾಜೇಂದ್ರ ಕಾದಂಬರಿ ಒಳ್ಳೆಯ ನಿದರ್ಶನ. ನಾಡಿಪರೀಕ್ಷೆಯಿಂದ ಇಡೀ ದೇಹದ ಸ್ಥಿತಿ ತಿಳಿಯಬಲ್ಲಂಥ ಮಾಸ್ತಿಯವರ ಸೂಕ್ಷ್ಮಕಲೆ ವಿಶ್ವಾಸಾಹಿತ್ಯದಲ್ಲಿ ಒಂದು ಒಳ್ಳೆಯ ಕೃತಿಯೆನ್ನಿಸುವ ಚಿಕವೀರ ರಾಜೇಂದ್ರವನ್ನು ನಮಗೆ ಕೊಟ್ಟಿದೆ ಎನ್ನಬಹುದು. ವ್ಯಕ್ತಿಯ ದುರಾಚಾರವನ್ನು ಇಷ್ಟೊಂದು ವ್ಯಾಪ್ತಿ, ಆಳಗಳಲ್ಲಿ ಕಾಣಬಲ್ಲ ಸಾಹಿತ್ಯಕೃತಿ ರಾಜಕೀಯ ಶಾಸ್ತ್ರ ವ್ಯಕ್ತಪಡಿಸಲಾರದ ಸಂಕೀರ್ಣತೆಯನ್ನು ಒಳಗೊಂಡಿರುತ್ತದೆ.

ಆದರೆ ಹೀಗೆ ಒಳಗೊಳ್ಳಬಲ್ಲ ಸೃಜನಶೀಲನಾದ ಕಲಾವಿದನಿಗೂ ರಾಜಕಾರಣಕ್ಕೂ ನಡುವಿರುವ ಸಂಬಂಧ ಕೂಡ ತೊಡಕಿನದ್ದೆ. ನೀರಿನಲ್ಲಿ ಮೀನಿರುವಂತೆ ನಿತ್ಯ ರಾಜಕಾರಣದಲ್ಲಿ ಕಲಾವಿದ ಬಾಳಲು ಇಚ್ಛಿಸುವವನಲ್ಲ. ಅಧಿಕಾರದ ಕ್ಷಣಿಕ ಆಕರ್ಷನೆ ರಂಪಾಟಗಳ ಬಗ್ಗೆ ದಿವ್ಯನಿರ್ಲಕ್ಷ್ಯವನ್ನು ತನ್ನ ಸೃಜನಶೀಲತೆಯನ್ನು ಪೊರೆಯಲೆಂದೇ ಕಲಾವಿದ ತಾಳಬೇಕಾಗುತ್ತದೆ. ಪ್ರಕೃತಿ ಮತ್ತು ಮಾನವ ಜೀವನದಲ್ಲಿ ಶಾಶ್ವತವಾದದ್ದರ ಜೊತೆ ಆಳವಾಗಿ ತೊಡಗಲು ಬಯಸುವ ಕಲಾವಿದನಿಗೆ ತನ್ನ ಕಸಬುಗಾರಿಕೆಯ ದೃಷ್ಟಿಯಿಂದಲಾರದರೂ ಈ ದಿವ್ಯನಿರ್ಲಕ್ಷ್ಯ ತರುವ ವ್ಯವಧಾನ ಅಗತ್ಯವೆನ್ನಬಹುದು. ಆದರೆ ಈ ನಿರ್ಲಕ್ಷ್ಯ ಅಸಾಧ್ಯವೆನ್ನಿಸುವಂತಹ ಆಕ್ರಮಣಕ್ಕೆ ಕೆಲವು ಐತಿಹಾಸಿಕ ಸಂದರ್ಭಗಳಲ್ಲಿ ಕಲಾವಿದ ಒಳಗಾಗುವುದೂ ಉಂಟು. ಮೂವತ್ತರ ದಶಕದ ಐರೋಪ್ಯ ರಾಜಕೀಯದಲ್ಲಿ ತಲೆಎತ್ತಿದ ಫ್ಯಾಸಿಸಂ ಕಲಾವಿದನನ್ನು ಅಂಥ ಪಾಡಿಗೆ ಒಳಪಡಿಸಿತ್ತು. ಆಗಲೂ ಶಾಶ್ವತವಾದದ್ದರ ತನ್ನ ಬಯಕೆಗೆ ಆತಂಕಗಳನ್ನೊಡ್ಡಿದ್ದ ರಾಜಕೀಯದ ವಿರುದ್ಧ ಇಷ್ಟವಿಲ್ಲದೆ ಅನಿವಾರ್ಯವಾಗಿ ಹೋರಾಡಬೇಕಾಗಿ ಬಂದ ಕಲಾವಿದರೇ ರಾಜಕಾರಣವನ್ನು ಸೂಕ್ಷ್ಮ ಒಳದೃಷ್ಟಿಯಿಂದ ಕಾಣಬಲ್ಲವರಾದರು. ‘ರಾಜಕಾರಣವನ್ನು ಸಂಗೀತ ಕಚೇರಿಯ ನಡುವೆ ಸಿಡಿಯುವ ಗುಂಡಿನೇಟು’ ಎಂದು ತಿಳಿದ ಸ್ಟಾಂಡಾಲ್‌ನಂಥವರೇ ಅತ್ಯುತ್ತಮ ರಾಜಕೀಯ ಕಾದಂಬರಿಗಳನ್ನು ಬರೆದವರು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬ್ರೆಕ್ಟ್, ಥಾಮಸ್ ಮನ್, ಕಾಫ್ಕಾ, ಕಮೂ, ಬಸವ, ಅರ್ವೆಲ್, ಯೇಟ್ಸ್ ಎಲ್ಲರೂ ಈ ಕುಲದವರೆ. ಯಾವ ವ್ಯಕ್ತಿಯೂ ಸಮುದಾಯಕ್ಕೆ ಸಂಪೂರ್ಣ ಹೊರತಾಗಿ ನಿಂತು ಅಧ್ಯಾತ್ಮದಲ್ಲಿ ಕೂಡ-ತನ್ನ ನೆಲೆ ಕಾಣಲಾರ.

ಆದರೆ ನಮ್ಮ ಪ್ರಧಾನಿಯವರನ್ನು ಭೇಟಿಮಾಡಲು ಹೋದ ಕಲಾವಿದರು ಏನನ್ನು ಕೇಳಿದರೆಂದು ಹೇಳಲು ನನ್ನ ಸ್ನೇಹಿತರು ನಾಚಿಕೊಂಡರು: ತಾವು ಒಟ್ಟು ಸೇರುವಂಥ ಕಾಫಿ ಕ್ಲಬ್ಬುಗಳು ಬೇಕೆಂದು ಕೆಲವರು ಕೇಳಿದರೆ, ಇನ್ನೊಬ್ಬ ದೊಡ್ಡ ನಿರ್ದೇಶಕರು ಥಿಯೇಟರುಗಳು ಬೇಕೆಂದು ಕೇಳಿಕೊಂಡರಂತೆ. ಮೌನವಾಗಿ ಈ ಕೋರಿಕೆಗಳನ್ನು ಆಲಿಸಿದ ಪ್ರಧಾನಿ ‘ನಿಮ್ಮ ಅಹವಾಲುಗಳನ್ನು ಬರೆದು ಕೊಡಿ’ ಎಂದು ಹೇಳಿದರಂತೆ. ಇಂಥವನ್ನು ಕೇಳಬೇಕಾದ್ದು ಸಾಹಿತ್ಯ ನಾಟಕ ಅಕಾಡೆಮಿಗಳ ಅಧ್ಯಕ್ಷರಲ್ಲಿ ಎಂಬುದು ಕೂಡ ನಮ್ಮ ಕಲಾವಿದರಿಗೆ ಹೊಳೆಯದೆ ಹೋಯಿತೆಂದು ನಾನು ನಂಬಲಾರೆ. ಇದಕ್ಕೆ ಮುಖ್ಯ ಕಾರಣ; ಪ್ರಾಯಶಃ ಸಾರ್ವತ್ರಿಕವಾಗಿ ನಮ್ಮೆಲ್ಲರನ್ನೂ ಆವರಿಸುತ್ತಿರುವ ಮಂಕು.

‘ಕಲೆ’ ಸರ್ವಸ್ವವೆಂದು ತಿಳಿದ ಕಲಾವಿದರು ಕೇವಲ ಕ್ಲಬ್ಬು, ಥಿಯೇಟರು, ಪ್ರಶಸ್ತಿಗಳ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಆಸಕ್ತರಾದ ಸಾಹಿತಿಗಳು ಮತ್ತು ಪತ್ರಿಕೋದ್ಯಮಿಗಳು ಸಂಕೀರ್ಣ ವೈಚಾರಿಕತೆಯನ್ನೇ ದ್ವೇಷಿಸುವುದರಿಂದ ಸಧ್ಯದ ರಾಜಕೀಯ ಕಿರುಚಾಟಗಳ ಮೇಲ್ಮೈಯನ್ನು ಕೆದಕುವುದರಲ್ಲೆ ಖುಷಿ ಪಡುತ್ತಿದ್ದಾರೆ ಅಥವಾ ಇಣುಕಿ ನೋಡುವ ಕಿಲಾಡಿಸುಖದಲ್ಲಿ ತನ್ಮಯರಾಗಿದ್ದಾರೆ-ಹೀಗೆ ‘ಭ್ರಮರ ಕೀಟ ನ್ಯಾಯ’ದಂತೆ ತಾವು ದ್ವೇಷಿಸುತ್ತೇವೆಂದು ತಿಳಿಯುವುದರ ತದ್ವತ್ ಪ್ರತಿಯಾಗಿ ಬಿಡುತ್ತಿದ್ದಾರೆ. ಇಂಥ ಎರಡು ಬಗೆಗಳಿಗೂ ಹೊರತಾಗಿ ನಿಂತು ಕ್ರೌರ್ಯ, ದುರಾಚಾರ, ವಿಕೃತಕಾಮ, ಭ್ರಷ್ಟತೆಗಳನ್ನು ಎದುರಿಸಲು ಅಂಜದೆ, ಆದರೆ ಅಂಥದರ ವರ್ಣನೆಯಲ್ಲೇ ಮುದಗೊಳ್ಳದೆ ಆರೋಗ್ಯದ ನೆಲೆಗಳನ್ನು ಸೂಚಿಸಬಲ್ಲ ಮಾಸ್ತಿಯವರ ಚಿಕವೀರ ರಾಜೇಂದ್ರದ ಕಲೆ ನಮ್ಮ ಈ ಕಾಲದ ಹಿನ್ನೆಲೆಯಲ್ಲಿ ಎಷ್ಟು ಪ್ರಸ್ತುತವೆಂಬುದು ಸ್ಪಷ್ಟ.

ನಮ್ಮ ಕಲಾವಿದರು ಪ್ರಧಾನಿಯ ಜೊತೆ ಚರ್ಚಿಸಬಹುದಾಗಿದ್ದ ಒಂದು ಮುಖ್ಯ ವಿಷಯವಿತ್ತು. ಅದು ಎಷ್ಟು ಸದ್ಯದ್ದೋ ಅಷ್ಟೇ ಶಾಶ್ವತವಾದ್ದು; ನಮ್ಮ ಬರೆಯುವ ಉದ್ಯಮಕ್ಕೆ ಎಷ್ಟು ಸಂಬಂಧಿಸಿದ್ದೋ ಅಷ್ಟೇ ಸಮುದಾಯದ ಹಿತಕ್ಕೂ ಅನ್ವಯಿಸುವಂಥದ್ದು. ಅದು ನಮ್ಮ ಶೇಕಡ ಎಪ್ಪತ್ತು ಜನರ ನಿರಕ್ಷರತೆ. ಅಂದರೆ ನಾವು ಬರೆಯುವ ಯಾವುದೂ ಈ ಎಪ್ಪತ್ತು ಜನರನ್ನು ಮುಟ್ಟರಲಾರದಂತಹ ಸ್ಥಿತಿಗೆ ಕಾರಣ, ಯೂರೋಪಿನಲ್ಲಂತೆ ಸಾಮಾನ್ಯ ಜನರ ಕೀಳು ಅಭಿರುಚಿಯಲ್ಲ. ಅದು ಆಳುವ ನಮ್ಮ ವರ್ಗದ ಸ್ವಾರ್ಥದಿಂದ ಉಂಟಾದ ಕೃತಕ ಸನ್ನಿವೇಶ. ಕೋಟ್ಯಂತರ ಜನರ ಅನಕ್ಷರತೆಯಿಂದಾಗಿ ನಮ್ಮ ಕ್ಷುಲ್ಲಕ ರಾಜಕಾರಣಿಗಳಿಗೆ ಅಟ್ಟಹಾಸ ದುರ್ನಡತೆ ಎಲ್ಲ ಸಲೀಸಾಗಿದೆ. ಇನ್ನೂ ಅಪಾಯದ ಸಂಗತಿ ಎಂದರೆ, ನಾವು ಬರಹಗಾರರು ಮುಚ್ಚಲಾರದ ಜನರನ್ನು ಸರ್ವಾಧಿಕಾರಿ ರಾಜಕಾರಣಿ ಟೆಲಿವಿಷನ್ ರೇಡಿಯೋ ಇತ್ಯಾದಿಗಳ ಮುಖಾಂತರ ವಶಪಡಿಸಿಕೊಳ್ಳಬಲ್ಲ. ಇದರಿಂದ ಹುಟ್ಟಿಕೊಳ್ಳಬಲ್ಲ ಏಕಾಧಿಪತ್ಯ ಅತ್ಯಂತ ಕ್ರೂರವಾಗಿರುವುದು ಸಾಧ್ಯ. ಟೆಲಿವಿಷನ್, ರೇಡಿಯೋನಂಥ ‘ಹಾಟ್‌ಮೀಡಿಯಾ’ಗಳು ನಮ್ಮ ನಿರಕ್ಷರರಲ್ಲಿ ಇನ್ನೂ ಬೆಲೆಯುಳ್ಳ ಸ್ಮೃತಿಯ ಸಾತತ್ಯವನ್ನು ಕಾಪಾಡಿಕೊಂಡುಬಂದಿರುವ ಮೌಖಿಕ ಪರಂಪರೆಯನ್ನು ನಾಶಮಾಡಬಲ್ಲವು. ಓದುವ ಕ್ರಿಯೆಯಲ್ಲಿ ಕಿಂಚಿತ್ತಾದರೂ ವೈಚಾರಿಕತೆಯ ಅಗತ್ಯವಿದೆ. ಸರ್ವಾಧಿಕಾರಿ ಬಳಸುವ ಹಾಟ್ ಮೀಡಿಯಾಗಳಿಗೆ ಅದು ಕೂಡ ಇರುವುದಿಲ್ಲ. ಭೂಗತ ಬರಹಗಳ ಮೂಲಕವೂ ನಾವು ನಮ್ಮ ಜನರನ್ನು ಮುಟ್ಟಲಾರದ ಸ್ಥಿತಿಗೆ ಬಂದು ಬಿಡುವ ಅಪಾಯ ಸರ್ವಾಧಿಕಾರದಲ್ಲಿದೆ. ಆಧುನಿಕ ಜಗತ್ತಿನಲ್ಲಿ ಸರ್ವಾಧಿಕಾರದ ಅಪಾಯ ಸದಾ ಇರುವಂಥದೆ. ಮಿಲಿಟರಿ ಆಡಳಿತಗಳಿಂದ ಸುತ್ತುವರೆದ ನಾವು ಎಷ್ಟು ಕಾಲದವರೆಗೆ ಪ್ರಜಾತಂತ್ರವ್ಯವಸ್ಥೆ ಉಳಿಸಿಕೊಳ್ಳುವ ದ್ವೀಪವಾಗಿರಲು ಸಾಧ್ಯ ಎಂಬುದಂತೂ ನಮಗೆಲ್ಲರಿಗೂ ಭಯ ಹುಟ್ಟಿಸುವ ಆತಂಕವಾಗಬೇಕು.

ಈ ಪ್ರಶ್ನೆ ನಮ್ಮ ಬರೆಯುವ ಕಸುಬಿಗೆ ಮಾತ್ರ ಸಂಬಂಧಿಸಿದ್ದೇ ಅಥವಾ ರಾಜಕೀಯವೆ? ಇಂಥ ಪ್ರಶ್ನೆಗಳು ದೆಹಲಿಯ ನಮ್ಮ ಕೆಲವು ಪ್ರತಿಷ್ಠಿತ ಕಲಾವಿದರನ್ನು ಬಾಧಿಸಲಿಲ್ಲ ಎನ್ನುವುದು ದುರಂತಕ್ಕೆ ಪೂರ್ವಭಾವಿಯಾಗಿ ಆವರಿಸುವ ಮಂಕು ಎನ್ನಿಸುತ್ತದೆ.

ಮೂವತ್ತರ ದಶಕದ ಕ್ರೂರ ರಾಜಕೀಯ ಸನ್ನಿವೇಶದಲ್ಲಿ ಬ್ರೆಕ್ಟ್ ಬರೆದೊಂದು ಪದ್ಯವಿದೆ. ಮಗು ತಂದೆಯನ್ನು ಕೇಳುತ್ತದೆ: ತಾನು ಗಣಿತವನ್ನು ಕಲಿಯಬೇಕೇ? ಒಂದು ಚೂರು ರೊಟ್ಟಿಗಿಂತ ಎರಡು ಚೂರು ಹೆಚ್ಚು ಎಂದು ತಿಳಿಯುವ ಕಾಲದಲ್ಲಿ ಗಣಿತ ಯಾಕೆ ಬೇಕೆಂದು ಕವಿ ಚಿಂತಿಸುತ್ತಾನೆ. ಫ್ರೆಂಚ್ ಕಲಿಯಬೇಕೆ? ಎಂದು ಕೇಳಿದಾಗ ಹೊಟ್ಟೆ ಸವರಿಕೋತ ನರಳುವುದರಿಂದಲೇ ಹೇಳಬೇಕಿನ್ನಿಸುವುದನ್ನೆಲ್ಲ ಹೇಳಿಬಿಡಬಲ್ಲ ಕಾಲದಲ್ಲಿ ಸೂಕ್ಷ್ಮಭಾವಕೋಶದ ಫ್ರೆಂಚ್ ಯಾಕೆ ಬೇಕು ಎಂದು ಕವಿಗೆ ಅನ್ನಿಸುತ್ತದೆ. ಚರಿತ್ರೆ ಕಲಿಯಬೇಕೆ? ಎಂದು ಮಗು ಕೇಳಿದಾಗ ನೆಲಕ್ಕೆ ತಲೆ ಬಾಗುವುದರಿಂದ ಬಚಾವಾಗಬಹುದು ಎಂದು ತಿಳಿದರೆ ಸಾಕಾಗುವ ಕಾಲಕ್ಕೆ ಇತಿಹಾಸ ಯಾಕೆ ಅಗತ್ಯವೆನ್ನಿಸುತ್ತದೆ. ಆದರೂ ಕವಿ ಹೇಳುತ್ತಾನೆ: ನೀನು ಗಣಿತ ಕಲೀಬೇಕು, ಫ್ರೆಂಚ್ ಕಲೀಬೇಕು, ಚರಿತ್ರೆ ಓದಬೇಕು.

ರುಜುವಾತು , ೧೯೪೧

* * *