ಹದಿನೇಳನೇ ಶತಮಾನದ ಬನಾರಸಿ ಎಂಬ ಜೈನ ಮತಸ್ಥ ಕವಿಯ ಮುಖೇನ ನಮ್ಮ ಇಂದಿನ ಭಾರತದ ಮನಸ್ಸನ್ನು ಅರಿತುಕೊಳ್ಳುವ ಪ್ರಯತ್ನ ಇದು. ಮೊಗಲರ ಕಾಲದಲ್ಲಿ ಬದುಕಿದ್ದ ಬನಾರಸಿ ‘ಅರ್ಧಕಥಾನಕ’ ಎಂಬ ಪ್ರಸಿದ್ಧವಲ್ಲದ, ಆದರೆ ಅಮೂಲ್ಯವಾದ ಆತ್ಮ ಚರಿತ್ರೆಯೊಂದನ್ನು ಬರೆದಿದ್ದಾನೆ. ಜೈನ ಸಂಪ್ರದಾಯದ ಪ್ರಕಾರ ಮನುಷ್ಯನ ಆಯಸ್ಸು ೧೧೦ ವರ್ಷಗಳೆನ್ನಬಹುದಾದರೆ ತನ್ನ ೫೫ನೇ ವಯಸ್ಸಿನಲ್ಲಿ ಮುಗಿಸಿದ್ದರಿಂದ ತನ್ನ ಈ ಆತ್ಮಕಥೆಯನ್ನು ಬನಾರಸಿ ‘ಅರ್ಧಕಥಾನಕ’ ವೆಂದುಕೊಂಡಿದ್ದಾನೆ. ಮುಂದಿನದನ್ನು ಬರೆಯಲು ಅವನು ಉಳಿಯಲಿಲ್ಲ.

ಕಾಶಿಯಿಂದ ೭೦ ಮೈಲುಗಳ ದೂರದ ಗೋಮತಿ ನದೀತೀರದ ಜಾನ್‌ಪುರದಲ್ಲಿ ಬನಾರಸಿ ತನ್ನ ಬಾಲ್ಯವನ್ನೂ ತಾರುಣ್ಯವನ್ನೂ ಕಳೆದದ್ದು. ತಂದೆ ಬಂಗಾರದ ವ್ಯಾಪಾರಿ. ಬನಾರಸಿಗೆ ತಂದೆಯ ವ್ಯಾಪಾರದ ಜೊತೆ ಕಾವ್ಯದ ಹುಚ್ಚೂ ಅಂಟಿಕೊಂಡಿತು. ಹಸಿ ತಾರುಣ್ಯದ ಉನ್ಮಾದದಲ್ಲಿ ಬರೆದ ಪ್ರೇಮಕವನಗಳ ಬಗ್ಗೆ ಈತನಿಗೊಮ್ಮೆ ನೈತಿಕ ಜಿಗುಪ್ಸೆ ಹುಟ್ಟಿ ಅವನ್ನು ನದಿಗೆ ಎಸೆದನಂತೆ. ಅವನ ಜೀವನದ ಎರಡು ದೊಡ್ಡ ಆಸಕ್ತಿಗಳಲ್ಲಿ ಪ್ರೇಮ ಒಂದಾದರೆ ಇನ್ನೊಂದು ಧರ್ಮ. ಪ್ರೇಮಕ್ಕಾಗಿ ಅವನು ವೇಶ್ಯೆಯನ್ನು ಆಶ್ರಯಿಸಿದ್ದ. ಗಟ್ಟಿಯಾಗಿ ಕೊನೆತನಕ ಉಳಿದದ್ದು ಜ್ಞಾನದಾಹದಲ್ಲಿ ಅವನು ಮಾಡಿದ ಧರ್ಮದ ಪ್ರಯೋಗಗಳು.

ತನ್ನ ಹತ್ತೊಂಬತ್ತನೇ ವಯಸ್ಸಿನಲ್ಲೇ ಬನಾರಸಿ ಪ್ರೇಮದ ಕ್ಷಣಿಕತೆಯನ್ನು ಅನುಭವಿಸಿ ಧರ್ಮಕ್ಕೆ ಪರಿವರ್ತಿತನಾದ; ಜೈನಧರ್ಮದ ನಿಷ್ಠಾನುಸಾರಿಯಾದ. ಆದರೆ ತನ್ನ ೩೫ನೇ ವಯಸ್ಸಿನಲ್ಲಿ ಮತ್ತೊಂದು ಪರಿವರ್ತನೆಗೆ ಒಳಗಾದ, ಧರ್ಮದ ಬಾಹ್ಯಚರಣೆಗಳಲ್ಲಿ, ವಿಧಿ, ನಿಷೇಧಗಳಲ್ಲಿ ನಂಬಿಕೆಯನ್ನು ಕಳೆದುಕೊಂಡು ಹೆಚ್ಚು ಅಂತರ್ಮುಖಿಯಾದ. ಧಾರ್ಮಿಕ ಆಚರಣೆಗಳನ್ನು ಧಿಕ್ಕರಿಸಿ ಆಗಿನ ಕಾಲದಲ್ಲಿ ಜೈನರಲ್ಲಿ ತಲೆ ಎತ್ತಿದ್ದ ‘ಆಧ್ಯಾತ್ಮ’ ಎಂಬ ಬಂಡಾಯ ಪಂಥದ ಅನುಯಾಯಿಯಾದ. ಕೊನೆಗೆ ಅದರ ನಾಯಕನೂ ಆದ. ದಿಗಂಬರರಲ್ಲಿ ತೇರಾಪಂಥದ ಹಿಂಬಾಲಕರು ಇವತ್ತಿಗೂ ಬನಾರಸಿಯನ್ನು ಆದಿಗುರುವೆಂದು ಗೌರವಿಸುತ್ತಾರಂತೆ. ‘ಆಧ್ಯಾತ್ಮ’ ದ ಬೆಳವಣಿಗೆಯೇ ಈ ತೇರಾಪಂಥದ ಹುಟ್ಟಿಗೆ ಕಾರಣವಾದ್ದು.

ಅವನ ಈ ಒಳಚರಿತ್ರೆಯಷ್ಟೇ ಅವನ ಹೊರಚರಿತ್ರೆಯೂ ಕುತೂಹಲಕಾರಿಯಾಗಿದೆ. ಆಗ್ರಾದಲ್ಲಿ ಅವನು ವ್ಯಾಪಾರಿಯಾಗಿ ಕಳೆದ ಕಾಲದ ಏರುಪೇರುಗಳು ಬಗ್ಗೆ ಅವನು ಹೇಳಿಕೊಳ್ಳುವ ಕ್ರಮ ಭಾರತೀಯ ಮನಸ್ಸಿಗೆ ಇಣುಕು ನೋಟಗಳನ್ನು ಕೊಡುವಂತಿಗೆ.

‘ಅರ್ಧಕಥಾನಕ’ ಮಧ್ಯಮ ವರ್ಗದವನೊಬ್ಬನ ಕಥೆ. ಮೊಗಲರ ಕಾಲದ ಪಟ್ಟಣಗಳಲ್ಲಿ ಅಷ್ಟೇನೂ ಶ್ರೀಮಂತನಲ್ಲದ ವರ್ತಕನೊಬ್ಬನ ಬದುಕಿನ ಬಗೆಯನ್ನು ಸೂಕ್ಷ್ಮವಾಗಿ ಹೇಳುವ ಕಥೆ ಇದು. ಮೊಗಲ್ ಮಾರುಕಟ್ಟೆಗಳಲ್ಲಿ ನಡೆಯುತ್ತಿದ್ದ ಮಾರುವ ಕೊಳ್ಳುವ ಕ್ರಮಗಳು, ಮೊಗಲ್ ಹೆದ್ದಾರಿಗಳಲ್ಲಿ ಸಾಗುವಾಗಿನ ಸಾಹಸಮಯ ಅನುಭವಗಳು, ಭ್ರಷ್ಟಾಚಾರಿಗಳಾದ ಮೊಗಲ್ ಅಧಿಕಾರಿಗಳ ಮನಸ್ವೀ ವರ್ತನೆಯಿಂದ ಉಂಟಾಗುತ್ತಿದ್ದ ಹಠಾತ್ ಲಾಭ ನಷ್ಟಗಳು- ಇವೆಲ್ಲದರ ಬಗ್ಗೆಯೂ ನಮಗೆ ಬನಾರಸಿಯಿಂದ ಮಹತ್ವದ ವಿಷಯಗಳು ತಿಳಿಯುತ್ತವೆ. ರಾಜಕೀಯ ಸ್ಥಿತಿಯ ಬಗ್ಗೆ ಬನಾರಸಿಯ ನಿರ್ಲಿಪ್ತ ಧೋರಣೆ ನಮಗೆ ಅತ್ಯಂತ ಕುತೂಹಲಕಾರಿ ಸಂಗತಿಯಾಗಿದೆ.

ಬನಾರಸಿ ಬಾಲಕನಾಗಿದ್ದಾಗ ಅವನಿಗೆ ಮೊದಲನೇ ರಾಜಕೀಯ ಘಟನೆಯೊಂದರ ಅನುಭವವಾದದ್ದು. ಜಾನ್‌ಪುರದ ಗವರ‍್ನರನು ಹಠಾತ್ತನೆ ವ್ಯಾಪಾರಿಗಳ ಮೇಲೆ ಎಗರಿ ಬೀಳುತ್ತಾನೆ. ಬನಾರಸಿಯ ತಂದೆಯನ್ನು ಜೈಲಿಗೆ ಹಾಕುತ್ತಾನೆ- ಅವನ ಸಂಗಡಿಗ ವ್ಯಾಪಾರಿಗಳ ಜೊತೆಗೆ. ಜೈಲಿನಲ್ಲಿ ಅವರನ್ನು ಅರೆಜೀವವಾಗುವಂತೆ ಥಳಿಸಲಾಗುತ್ತದೆ. ಈ ಕ್ರೌರ‍್ಯಕ್ಕೆ ಕಾರಣವೇನೆಂದು ಬನಾರಸಿ ಕೇಳುವುದೂ ಇಲ್ಲ; ಹೇಳುವುದೂ ಇಲ್ಲ. ಹೀಗೆ ಹೀಗೆ ನಡೆಯಿತು ಎಂದಿಷ್ಟೇ ಅವನು ಬರೆಯುವುದು, ಎರಗಿ ಬಿದ್ದಷ್ಟೇ ಹಠಾತ್ತನೇ ಅವರ ಬಿಡುಗಡೆಯೂ ಆಗುತ್ತದೆ. ಬಂಧನ ಬಿಡುಗಡೆ ಎರಡೂ ನಿಷ್ಕಾರಣವೆನ್ನುವಂತೆ ಬನಾರಸಿ ಈ ರಾಜಕೀಯ ಘಟನೆಯನ್ನು ವರ್ಣಿಸುವುದು. ವ್ಯಾಪಾರಿಗಳು ಇದರಿಂದ ಎಷ್ಟು ಭಯಗ್ರಸ್ತರಾಗುತ್ತಾರೆಂದರೆ ಜಾನ್‌ಪುರದಿಂದ ಅವರು ಕಾಲುಕೀಳುತ್ತಾರೆ. ಬನಾರಸಿಯ ತಂದೆ ದೂರದ ಒಂದು ಊರಲ್ಲಿ ಮತ್ತೆ ವ್ಯಾಪಾರ ಪ್ರಾರಂಭಿಸುತ್ತಾನೆ. ಅಂತೂ ಚೇತರಿಸಿಕೊಳ್ಳುತ್ತಾನೆ – ಹುಟ್ಟಿದ ಜಾತಿಯಿಂದಲೇ ಅವನು ಪಡೆದ ಕೌಶಲದಿಂದಾಗಿ, ಇದನ್ನು ಬರೆಯುವಾಗ ಬನಾರಸಿ ರಾಜಕೀಯ ಕ್ರೌರ್ಯದ ಸರಿತಪ್ಪುಗಳ ಬಗ್ಗೆ ಒಂದು ಮಾತನ್ನೂ ಆಡುವುದಿಲ್ಲ. ರಾಜಕೀಯದಲ್ಲಿ ನ್ಯಾಯವನ್ನಾಗಲೀ, ಧರ್ಮವನ್ನಾಗಲೀ ನಿರೀಕ್ಷಿಸುವುದೇ ಸಲ್ಲ ಎನ್ನುವಂತಿದೆ ಬನಾರಸಿಯ ಧೋರಣೆ. ತಾಳಿಕೊಳ್ಳಬೇಕು; ತಾಳಿದವನು ಬಾಳಿಯಾನು; ಹಣೆಯಲ್ಲಿ ಬರೆದದ್ದನ್ನು ಅಳಿಸುವಂತಿಲ್ಲ- ಬನಾರಸಿ ರಾಜಕೀಯವನ್ನು ಎದುರಿಸುವುದು ಈ ಬಗೆಯ ನಿರ್ಲಿಪ್ತ ಸಮಾಧಾನದಲ್ಲಿ.

ಎರಡನೇ ದಬ್ಬಾಳಿಕೆ ನಡೆದದ್ದು ಕ್ರಿ.ಶ.೧೬೧೭ರಲ್ಲಿ – ಜಹಾಂಘೀರನ ಕಾಲದಲ್ಲಿ ಮೊಗಲ್ ಅಧಿಕಾರಿಗಳು ಇದ್ದಕ್ಕಿದ್ದಂತೆ ಶ್ರೀಮಲ್  ಜನಾಂಗದ ವ್ಯಾಪಾರಿಗಳನ್ನು ಹಿಂಸಿಸಲು ಪ್ರಾರಂಭಿಸುತ್ತಾರೆ. ಬನಾರಸಿ ಊರಿಂದ ಕಾಲುಕಿತ್ತು ಕಾಡು ಸೇರುತ್ತಾನೆ. ನಲವತ್ತು ದಿನಗಳ ಕಾಲ ಕಾಡಿನಲ್ಲಿ ತಲೆಮರೆಸಿಕೊಂಡಿರುತ್ತಾನೆ. ತನ್ನ ಮತ್ತು ತನ್ನ ಮತಸ್ಥರ ಪಾಡನ್ನು ಧಾರುಣವಾಗಿ ಬನಾರಸಿ ತೋಡಿಕೊಳ್ಳುವಾಗಲೂ ಅಮಾನುಷ ರಾಜಕೀಯ ಕ್ರೌರ್ಯದ ಹಿಂದಿನ ಕಾರಣಗಳನ್ನು ಕುರಿತು ಅವನು ಏನೂ ಹೇಳುವುದಿಲ್ಲ, ಶುರುವಾದಷ್ಟೇ ವೇಗವಾಗಿ  ಕ್ರೌರ್ಯ ಕೊನೆಯಾಗುತ್ತದೆ. ಸಂತೋಷದಿಂದ ಬನಾರಸಿ ಊರಿಗೆ ಹಿಂದಿರುಗುತ್ತಾನೆ. ಈ ಹಿಂಸೆ ನ್ಯಾಯವೇ ಅಲ್ಲವೆ ಎಂಬುದು ದೇವರಿಗೆ ಬಿಟ್ಟದೆಂದು ಬನಾರಸಿ ಅಂದುಕೊಳ್ಳುತ್ತಾನೆ. ತನ್ನ ಕೈ ಮೀರಿದ್ದರ ಬಗ್ಗೆ ತಾನು ಹೇಳುವುದಾದರೂ ಏನಿದೆ ಎಂಬುದು ಬನಾರಸಿಯ ನಿಲುವು. ಈ ಬಗೆಯ ರಾಜಕೀಯ ಘಟನೆಗಳು ಅವನ ಪಾಲಿಗೆ ಪ್ರವಾಹ ಚಂಡಮಾರುತಗಳಿದ್ದಂತೆ- ಅಳವಿಗೆ ಮೀರಿದ ನೈಸರ್ಗಿಕ ಉತ್ಪಾತಗಳು, ‘ಈತಿ ಭಾದೆ’ ಗಳು – ಈ ಪೈಕಿ ರಾಜಭೀತಿಯೂ ಒಂದು ‘ಈತಿ’ .

ಬನಾರಸಿಯ ನೈತಿಕವಾದ ಆಸಕ್ತಿಗಳು ರಾಜಕೀಯಕ್ಕೆ ಸಂಬಂಧಿಸಿದವಲ್ಲವೇ ಅಲ್ಲ; ಅವನ ಅತ್ಯಂತ ಆಳದ ಕಾತರಗಳು ಅವನ ಮತಕ್ಕೂ ಜಾತಿಗೂ ಸಂಬಂಧಿಸಿದುವು. ಅವನ ಜಾತಿಯೇ ಅವನ ಪ್ರಪಂಚ. ಅವನ ಪ್ರೀತಿ, ಅವನ ಜಗಳ ಎಲ್ಲವೂ ಅದರ ಜೊತೆ ಮಾತ್ರ. ಅವನ ಆತ್ಮದ ಉತ್ಪಾತಗಳ ಆವರಣವೂ ಅವನ ಜಾತಿ, ಅವನ ಮತ ಮತ್ತು ಅವುಗಳನ್ನು ಕಟ್ಟುವ ವಿಧಿ ನಿಷೇಗಳು, ಅವನ ಗೆಳೆಯರು, ಅವನ ವೈರಿಗಳು, ಅವನ ವೃತ್ತಿ ಸಂಗಾಂತಿಗಳು ಎಲ್ಲ ಜಾತಿಯ ಜನರೇ. ಅವನು ಸೂಕ್ಷ್ಮವಾಗಿ, ಅರ್ಥಪೂರ್ಣವಾಗಿ, ಮೃದುವಾಗಿ, ಕಠಿಣವಾಗಿ ಮಾತಾಡುವುದು ಈ ಜನರ ಬಗ್ಗೆ ಮಾತ್ರ. ಅವನೂ ಅವನ ಕುಟುಂಬದವರೂ ಯಾವ ಹೊಸ ಊರಿಗೇ ಹೋಗಲಿ ಅವರು ಮೊದಲು ಪ್ರಶ್ನಿಸುವುದು ತಮ್ಮ ಜಾತಿಯ ಜನರು ಇರುವುದು ಎಲ್ಲಿ ಎಂದು. ತಮ್ಮವರು ಬದುಕುತ್ತಿರುವ ಕೇರಿಯಲ್ಲಿ- ಅದು ಯಾವ ಊರೇ ಆಗಿರಲಿ – ತಮಗೆ ಪರಿಚಿತವಾದ ಪ್ರಪಂಚವನ್ನು ಅವರು ಪ್ರವೇಶಿಸುತ್ತಾರೆ. ಕಷ್ಟನಷ್ಟಗಳಲ್ಲಿ, ಹುಟ್ಟು ಸಾವುಗಳಲ್ಲಿ ತಮಗಾಗುವ ಜನ ಈ ಕೇರಿಗಳಲ್ಲಿ ಇರುತ್ತಾರೆಂಬ ಗ್ಯಾರಂಟಿಯಲ್ಲಿ ಅವರು ಭಾರತವಿಡೀ ಎಲ್ಲಿಂದೆಲ್ಲಿಗೂ ಓಡಾಡುವುದು. ರಾಜಕೀಯ ಉತ್ಪಾತಗಳಲ್ಲಿ ಜಾತಿಯೇ ಶಾಕ್ ಅಬ್ಸಾರ್ಬರ್.

ಮಹಾತ್ಮ ಗಾಂಧೀಜಿಯವರು ಭಾರತೀಯ ರಾಜಕಾರಣವನ್ನು ಪ್ರವೇಶಿಸುವ ತನಕ ರಾಜಕೀಯವೆಂಬುದು ಮನುಷ್ಯನ ನೈತಿಕ ಆಸಕ್ತಿಗಳ ಕಣವೇ ಆಗಿರಲಿಲ್ಲವೇನೋ ಅನ್ನಿಸುತ್ತದೆ. ನಮ್ಮ ಒಳನಾಳಿನ ನೈತಿಕ ಸೂಕ್ಷ್ಮಗಳೆಲ್ಲವೂ ನಮ್ಮ ಹೊರಬಾಳಿನ – ನಮಗೆ ಕೈಮೀರಿದ್ದೆನಿಸುವ-ಘಟನೆಗಳಿಂದ ಪ್ರಭಾವಿತವಾಗಬಲ್ಲವು ಎಂಬ ಅರಿವಿನಿಂದ ಹುಟ್ಟುವ ನೈತಿಕತೆ ಗಾಂಧೀಜಿಯದು. ಯಾವ ವ್ಯಕ್ತಿಯೂ ದ್ವೀಪವಲ್ಲ. ‘ಅಲ್ಲಿ’ ಇರುವ ಹಿಂಸೆ, ದುಷ್ಟತನಗಳು ನನ್ನ ಚಿತ್ತ ವಿಕಾರದ ಫಲವಾಗಿರಬಹುದು; ಅಥವಾ ‘ಅಲ್ಲಿ’ ನ ಹಿಂಸೆಯನ್ನು ಕಡೆಗಣಿಸಿ ನಾನು ನನ್ನ ಚಿತ್ತಸ್ವಾಸ್ಥವನ್ನು ಪಡೆಯಲಾರೆ ಎಂಬ ಅರಿವಿನಿಂದ ಹುಟ್ಟುವ ರಾಜಕಾರಣ ಗಾಂಧೀಜಿಯವರದು. ವ್ಯಕ್ತಿಯಲ್ಲಿ ಹುಟ್ಟಿಕೊಳ್ಲುವ ಪರಿಪೂರ್ಣತೆಯ ಆಕಾಂಕ್ಷೆ ಸಮಷ್ಟಿಯನ್ನು ಒಳಗೊಳ್ಳದ ಹೊರತು ಮುಕ್ಕಾಗಿಯೇ ಉಳಿಯುತ್ತದೆ ಎಂಬುದೇ ಗಾಂಧೀಜಿಯಲ್ಲಿ ಕೊನೆತನಕ ಇದ್ದ ‘ದುಃಖಕ್ಕೆ’ ಕಾರಣ. ಯಾಕೆಂದರೆ ಪಡೆಯಬಹುದೆನ್ನಿಸುವ, ಆದರೆ ಪಡೆಯಲಾರದ ಪರಿಪೂರ್ಣತೆಯ ಆಕಾಂಕ್ಷೆ ಹುಟ್ಟಬಹುದಾದ್ದು ವ್ಯಕ್ತಿಯಲ್ಲಿ ಮಾತ್ರ; ಸಮಷ್ಟಿಯಲ್ಲಿ ಅಲ್ಲ. ಆದರೆ ಗಾಂಧೀಜಿಯ ನಂತರದ ಭಾರತದಲ್ಲಿ ರಾಜಕಾರಣವೆಂದರೆ  ಆಯಾ ವರ್ಗಗಳ, ಜಾತಿಗಳ ಪ್ರತ್ಯೇಕ ಆಸಕ್ತಿಗಳನ್ನು ಹೇಗೋ ಗಿಟ್ಟಿಸಿಕೊಳ್ಳುವ ಪೈಪೋಟಿಯಲ್ಲಿ ಕ್ಷಣಿಕ ಹೊಂದಾಣಿಕೆಯನ್ನು ಸಾಧಿಸಿಕೊಳ್ಳುವ ತಂತ್ರಗಾರಿಕೆಯಾಗಿಬಿಟ್ಟಿದೆ. ಬಾಯಿಯಿಲ್ಲದ ಅಸಂಖ್ಯ ಜನರಿಗೆ ಈ ಬಡಿದಾಟದಲ್ಲಿ ಅಂತೂ ತಮ್ಮ ಅಹನ್ಯಹನಿ ದೈನಿಕದ ಪಾಡಿಗೆ ಭಂಗತರುವಂತಹ ಅರಾಜಕತೆ ತಲೆದೊರದಿದ್ದರೆ ಸಾಕಪ್ಪ ಎಂಬುದೇ ಮುಖ್ಯ ಕಾಳಜಿಯಾಗಿಬಿಟ್ಟಿದೆ. ಮೊದಲು ಸರ್ಕಾರ ಬೇಕು. ಸರ್ಕಾರ ಇರುವುದು ಗ್ಯಾರೆಂಟಿಯಾದರೆ ಮಾತ್ರ ಜನ ಒಳ್ಳೆ ಸರ್ಕಾರ ಬೇಕೆಂದು ಕೇಳಿಯಾರು.

ನಾಗರಿಕ ಜೀವನದ ಕನಿಷ್ಠ ದೈನಿಕ ಅಗತ್ಯಗಳಿಗೆ ಭಂಗವಾಗದಂತೆ ಕಾಯುವ ಸರ್ಕಾರ ಇದ್ದೇ ಇರುತ್ತದೆ ಎಂಬುದು ನಿಶ್ಚಯವಾದಲ್ಲಿ ಎಂಥ ಸರ್ಕಾರ ನಮ್ಮ ಒಳಜೀವನದ ಪೂರ್ಣತೆಯ ಆಕಾಂಕ್ಷೆಗೆ ಪೂರಕವಾಗುವ ಆವರಣವನ್ನು ಒದಗಿಸಬಲ್ಲದು ಎಂಬ ಸೃಜನಶೀಲವಾದ ಹುಡುಕಾಟಕ್ಕೆ ಜನ ಸನ್ನದ್ಧರಾಗುತ್ತಾರೆ. ಇಲ್ಲವಾದಲ್ಲಿ ಭದ್ರತೆಗಾಗಿ ಮಾತ್ರ ಹಂಬಲಿಸುವ ಮನಸ್ಸು ಶೈಶವಾವಸ್ಥೇಯಲ್ಲೇ ಉಳಿದಿರುತ್ತದೆ. ತನ್ನ ಮತದ ಸೂಕ್ಷ್ಮಾತಿಸೂಕ್ಷ್ಮಗಳನ್ನು ಕಟುನಿಷ್ಠುರ ತಾರ್ಕಿಕತೆಗೂ ಸ್ವಾನುಭವದ ಸ್ಪಂದನಕ್ಕೂ ಒಳಪಡಿಸುತ್ತಿದ್ದ ಬನಾರಸಿ ರಾಜಕೀಯ ಭದ್ರತೆಯ ವಿಷಯದಲ್ಲಿ ಹೇಗೆ ಮಗುವಿನಂತೆ ಬೆಚ್ಚುತ್ತಿದ್ದ ಎಂಬುದಕ್ಕೆ ಉದಾಹರಣೆಯಾಗಿ ಒಂದು ಘಟನೆ ‘ಅರ್ಧಕಥಾನಕ’ ದಲ್ಲಿದೆ.

ರಾಜಭೀತಿಗೂ ಮಿಗಿಲಾದ್ದು ರಾಜನಿಲ್ಲದ ಭೀತಿ-ಅರಾಜಕತೆಯ ಭೀತಿ. ಸಣ್ಣಪುಟ್ಟ ಪ್ರದೇಶಗಳ ಮೇಲೆ ತಮ್ಮ ಒಡೆತನ ಸ್ಥಾಪಿಸಿ ಮನಸ್ಸಿಗೆ ಬಂದಂತೆ ವರ್ತಿಸುವ ಹಲವು ದರೋಡೆಕೋರರ ನವಾಬರ ಮಧ್ಯೆ ಬಳಲುವುದಕ್ಕಿಂತ, ಇವರನ್ನೆಲ್ಲ ಹತ್ತಿಕ್ಕಿ ಅಳಬಲ್ಲ ಒಬ್ಬ ಭೂಪತಿ ಇದ್ದರೆ ವಾಸಿಯೆಂದು ಜನಸಾಮಾನ್ಯರಿಗೆ ಅನ್ನಿಸುವುದು ಸಹಜವೇ ಆಗಿದೆ. ಅಧಿಪತಿ ಒಬ್ಬನಾಧರೆ ಅವನನ್ನು ಹೇಗೋ ತಾಳಿಕೊಳ್ಳುವುದನ್ನು ಕಲಿಯಬಹುದಲ್ಲವೇ? ಅವನ ಕಣ್ಣಿಗೆ ಬೀಳದಂತೆ ಬದುಕಿದರೆ ಆಯಿತು. ನಮ್ಮ ಇಹಪರಗಳ ಮುಖ್ಯ ಸಂಗತಿಗಳನ್ನು ಹೇಗೂ ನಿರ್ಣಯಿಸುವುದು ನಮ್ಮ ಜಾತಿ ಮತ್ತು ನಮ್ಮ ಮತಗಳು. ಇವುಗಳ ಗೋಜಿಗೆ ಹೋಗದಂತಹ ಭೂಪಾಲನೊಬ್ಬನಿದ್ದರೆ ಸೈ- ನಮ್ಮ ಕರ್ಮವನ್ನಿಲ್ಲಿ ಸವೆಸಿಬಿಡಬಹುದು. ಹಲವು ದರೋಡೆಕಾರರನ್ನು ಅಂಕೆಯಲ್ಲಿಡಬಲ್ಲ ಈ ಭೂಪತಿ ಒಳ್ಳೆಯವನಿದ್ದರೆ ನಮ್ಮ ಪುಣ್ಯ, ಕೆಡುಕನಿದ್ದರೆ ನಮ್ಮ ದುರದೃಷ್ಟ.

ಇರಲಿ- ನಿಷ್ಪಾಪಿಯಾಗಿ ಲೋಕವನ್ನು ಆಳುವುದಾದರೂ ಸಾಧ್ಯವೇ? ಕಪಟ, ವಂಚನೆ, ಚತುರೋಪಾಯ, ಕ್ರೂರದಂಡನೆ- ಇವೆಲ್ಲವೂ ರಾಜನೀತಿಗೆ ಅವಶ್ಯವಾದ ತಂತ್ರಗಳೇ. ರಾಜ ಧರ್ಮವೇ ಬೇರೆ. ಆದ್ದರಿಂದ ಸಾಧುವಾದವನೊಬ್ಬ ರಾಜನಾಗಲಾರ. ಯಜಮಾನನಿರುವುದು ಯಜಮಾನಿಕೆ ಮಾಡಲು; ತನ್ನವರನ್ನು ರಕ್ಷಿಸಲು. ದುಷ್ಟಶಿಕ್ಷಣ, ಶಿಷ್ಟರಕ್ಷಣ ಮಾಡದ ರಾಜರನ್ನು ಋಷಿಗಳು ದಂಡಿಸಿದ ಕಥೆಗಳು ನಮ್ಮ ಪೂರ್ವೇತಿಹಾಸಲ್ಲಿದೆ; ಆದರೆ ಪೂರ್ವೇತಿಹಾಸದಲ್ಲಿ ಮಾತ್ರ ಇದೆ. ಒಟ್ಟಿನಲ್ಲಿ ರಾಜ ದೃಢಚಿತ್ತದವನಾಗಿರಬೇಕು. ಯಜಮಾನಿಕೆಯ ಪೌರುಷವನ್ನೂ ತಂತ್ರಗಾರಿಕೆಯನ್ನೂ ಪಡೆದವನಾಗಿರಬೇಕು.

ಅಂದರೆ ರಾಜಕೀಯದ ಬಗ್ಗೆ ನಮ್ಮ ಚಿಂತನಾಕ್ರಮ ಎಷ್ಟೆಷ್ಟು ಹೆಚ್ಚು ಶೈಶವವಾಗುತ್ತ ಹೋಗುತ್ತದೋ ಅಷ್ಟಷ್ಟು ಹೆಚ್ಚಾಗಿ ನಾವು ರಾಜನಿಂದ ಪೌರುಷ ಪರಾಕ್ರಮಗಳನ್ನು ಅಪೇಕ್ಷಿಸುತ್ತ ಹೋಗುತ್ತೇವೆ. ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ನಿಯಮಬದ್ಧವಾದ ಮೃದು ಸ್ವಭಾವದ ವ್ಯಕ್ತಿತ್ವವನ್ನು ಒಪ್ಪಿಕೊಳ್ಳುವ ವ್ಯವಸ್ಥೆಯೆಂದರೆ ಸರ್ವರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅಭಯದಲ್ಲಿ ನಿರ್ವಹಿಸಲು ತಯಾರಾಗಿರುವ ಪ್ರಜಾತಂತ್ರ ಮಾತ್ರ. ಭಾರತದ ಮನಸ್ಸು ಈಗ ಅಂತಹ ಸ್ಥಿತಿಯಲ್ಲಿಲ್ಲ. ಇದ್ದ ಕಾಲವೊಂದಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕಾಲವದು. ರಾಜಕೀಯವನ್ನೇ ನೈತಿಕ ಕ್ಷೇತ್ರವಾಗಿ ಹಲವರು ಆರಿಸಿಕೊಂಡಿದ್ದ ಕಾಲ. ಆದರೆ ಅದರ ನಾಯಕರಾಗಿದ್ದ  ಮಹಾತ್ಮಾ ಗಾಂಧಿಯನ್ನು ನಾವು ಮರೆತಿದ್ದೇವೆ. ಪಂಜಾಬಿನಲ್ಲಿ ನಡೆದ ಹತ್ಯಾಕಾಂಡಕ್ಕೆ ಉತ್ತರವಾಗಿ ಯಾರೂ ಗಾಂಧೀಜಿಯ ಅಹಿಂಸಾತ್ಮಕ ಸತ್ಯಾಗ್ರಹದ ಆಂದೋಳನವನ್ನು ಪ್ರಯೋಗಿಸಲಿಲ್ಲ. ಅಸ್ಸಾಮಿನಲ್ಲಿ ನಡೆದ ಅಂಥ ಪ್ರಯೋಗ ಫಲ ಕೊಡಲಿಲ್ಲ. ಹಿಂಸೆಗೆ ವಿರುದ್ಧವಾಗಿ ದೇಶ ಬಳಸಿದ್ದು ಪ್ರಭುತ್ವದ ಬಲವನ್ನು ಮಾತ್ರ.

ಹಿಂಸೆಯ ಎದುರು ಗಾಂಧೀಜಿ ಎಂದೂ ನಮ್ಮಂತೆ ಹೀಗೆ ಅವಕ್ಕಾಗಿ ನಿಂತದ್ದಿಲ್ಲ. ರಾಜಕೀಯ ಮತ್ತೆ ನಮ್ಮ ಅಭೀಪ್ಸೆಗಳನ್ನು ಅಪ್ರಸ್ತುತಗೊಳಿಸುವ ಬಲಿಷ್ಠರ ನಡುವಿನ ಹೋರಾಟವಗಿ ಜನರಿಗೆ ಕಾಣಿಸುತ್ತಿದೆ. ನಿತ್ಯದ ತರಲೆ ತಪ್ಪಿಸುವಂತಹ ಒಂದು ಸುಭದ್ರ ವ್ಯವಸ್ಥೆ, ಈ ವ್ಯವಸ್ಥೇಗೆ ಅಧಿಪತಿಯಾದ ಒಬ್ಬ ರಾಜ-ಇವುಗಳಿಗಾಗಿ ಇಡೀ ದೇಶ ಹಂಬಲಿಸುತ್ತಿರುವಂತಿದೆ. ಶ್ರೀಮತಿ ಇಂದಿರಾಗಾಂಧಿಯವರ ಭೀಕರ ಕಗ್ಗೊಲೆಯ ವಾರ್ತೆಯಿಂದ ದೇಶ ಹೇಗೆ ತತ್ತರಿಸಿರಬಹುದೆಂಬುದನ್ನು ಬನಾರಸಿಯ ಮುಖೇನ ನಾವು ಅರಿಯಬಹುದು. ಅಕ್ಬರ್ ಸತ್ತ ವಾರ್ತೆಯನ್ನು ಕೇಳೊದೊಡನೆ ಏನಾಯಿತೆಂಬುದನ್ನು ಬನಾರಸಿ ವರ್ಣಿಸುವುದು ಹೀಗೆ:

“ಮಳೆಗಾಲ ಮುಗಿದ ಮೇಲೆ ಕಾರ್ತಿಕ ಮಾಸದಲ್ಲಿ (ವಿಕ್ರಮ ಶಕ ೧೬೬೨ರಲ್ಲಿ) ಚಕ್ರವರ್ತಿ ಅಕ್ಬರ್ ಆಗ್ರಾದಲ್ಲಿ ತನ್ನ ಕೊನೆಯುಸಿರೆಳೆದ. ಭಯೋತ್ಪಾದಕವಾದ ಅವನ ಸಾವಿನ ಸುದ್ದಿ ವೇಗವಾಗಿ ಹರಡಿ ಜಾನ್‌ಪುರವನ್ನು ತಲ್ಪಿತು. ತಮ್ಮ ಒಡೆಯನಿಲ್ಲದೆ ಜನ ಹಠಾತ್ತನೆ ಪರದೇಶಿಗಳಂತಾಗಿ ಆಭದ್ರ ಭಾವನೆಗೊಳಗಾದರು. ಎಲ್ಲೆಲ್ಲೂ ಭಯ ಆವರಿಸಿಕೊಂಡಿತು. ಕಾತರದ ಉದ್ವೇಗದಲ್ಲಿ ಜನ ತತ್ತರಿಸಿದರು; ಅವರ ಮುಖಗಳು ಬಿಳುಚಿಕೊಂಡವು.

ಈ ಭಯಾನಕ ಸುದ್ದಿ ನನ್ನ ಮೇಲೆ ಸಿಡಿಲಿನಂತೆ ಎಗರಿದಾಗ ನಾನು ಮನೆಯ ಉಪ್ಪರಿಗೆ ಮೆಟ್ಟಿಲ ಮೇಲೆ ಕೂತಿದ್ದೆ. ಈ ಕ್ರೂರ ಅಸಹನೀಯ ಸುದ್ದಿಯಿಂದ ನಾನು ವಿಹ್ವಲನಾದೆ. ನನ್ನ ತಲೆ ಸುತ್ತಿದ್ದರಿಂದ ಆಯತಪ್ಪಿ ನಾನು ಮೂರ್ಛೆಯಲ್ಲಿ ಮೆಟ್ಟಿಲಿಂದ ಉರುಳಿಬಿದ್ದೆ. ನನ್ನ ತಲೆ ನೆಲದ ಕಲ್ಲಿಗೆ ಬಡಿದ ಪರಿಣಾಮವಾಗಿ ರಕ್ತಸ್ರಾವವಾಗಿ ಇಡೀ ಒಳಾಂಗಣ ರಕ್ತಮಯವಾಯಿತು….

ಇಡೀ ಪಟ್ಟಣ ತತ್ತರಿಸಿತ್ತು. ದಿಗಿಲಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಬಾಗಿಲನ್ನು ಮುಚ್ಚಿದರು. ವರ್ತಕರು ಅಂಗಡಿಗಳನ್ನು ಮುಚ್ಚಿದರು. ಶ್ರೀಮಂತರು ಅವಸರವಸರವಾಗಿ ತಮ್ಮ ವಸ್ತ್ರವೈಡೂರ‍್ಯಗಳನ್ನು ಹೂಳಿಟ್ಟರು. ಹಲವು ಬಂಡಿಗಳಲ್ಲಿ ತಮ್ಮ ನಗನಾಣ್ಯಗಳನ್ನು ತುಂಬಿ ಕ್ಷೇಮವಾದ ಗುಪ್ತಸ್ಥಳಗಳಿಗೆ ಸಾಗಿಸಿದರು. ಗೃಹಸ್ಥರೆಲ್ಲ ತಮ್ಮ ಮನೆಗಳಲ್ಲಿ ಆಯುಧಗಳನ್ನು ಕೂಡಿಡಲು ಪ್ರಾರಂಭಿಸಿದರು. ಶ್ರೀಮಂತರು ದಪ್ಪನೆಯ ಒರಟು ಬಟ್ಟೆಗಳನ್ನು ತೊಡುವುದರ ಮೂಲಕ ತಮ್ಮ ಸ್ಥಾನಮಾನಗಳನ್ನು ಮರೆಸಿಕೊಂಡು ಬಡವರಂತೆ ಕಂಬಳಿ ಹೊದ್ದು ಬೀದಿಗಳಲ್ಲಿ ಅಡ್ಡಾಡತೊಡಗಿದರು. ಹೆಂಗಸರು ಆಭರಣಗಳನ್ನು ಬಿಚ್ಚಿಟ್ಟು ಕಳಾಹೀನ ಉಡಿಗೆ ತೊಡಿಗೆಗಳಲ್ಲಿ ಕಾಣಿಸಿಕೊಂಡರು. ಬಡವ ಬಲ್ಲಿದರ ನಡುವಿನ ವ್ಯತ್ಯಾಸವನ್ನು ಹೇಳುವುದೇ ಈ ಸಮಯದಲ್ಲಿ ಅಸಾಧ್ಯವಾಗಿಬಿಟ್ಟಿತು. ಎಲ್ಲೂ ಕಳ್ಳರಾಗಲೀ ದರೋಡೆಕೋರರಾಗಲೀ ಇಲ್ಲದಿದ್ದರೂ ಸಹ, ನಿಷ್ಕಾರಣವಾಗಿಯೆಂಬಂತೆ ಭಯದ ಚಿಹ್ನೆಗಳು ಸರ್ವತ್ರ ಗೋಚರವಾದವು.

ಹತ್ತು ದಿವಸಗಳ ನಂತರ ಈ ಉತ್ಪಾತ ಶಾಂತವಾದ್ದು ರಾಜಧಾನಿಯಾದ ಆಗ್ರಾದಲ್ಲಿ ಎಲ್ಲವೂ ಸುಗಮವಾಗಿದೆಯೆಂಬ ಒಂದು ಕಾಗದ ಬಂದ ನಂತರ. ಈ ಕಾಗದದ ಸಾರಾಂಶ ನಿಮಗೆ ಹೇಳುವೆ; ವಿಕ್ರಮ ಶಕೆ ೧೬೬೨ರ ಕಾರ್ತಿಕ ಮಾಸದಲ್ಲಿ ೫೨ ವರ್ಷಗಳ ಆಳ್ವಿಕೆಯ ನಂತರ ಅಕ್ಬರನು ಸತ್ತದ್ದು; ಈಗ ಅಕ್ಬರನ ಹಿರಿಯಮಗ ಸಲೀಮ್ ಎಂಬ ರಾಜಕುಮಾರ ತಂದೆಯ ಜಾಗದಲ್ಲಿ ರಾಜ್ಯವಾಳಲೆಂದು ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾನೆ. ಸುಲ್ತಾನ್ ನೂರುದ್ದೀನ್ ಜಹಾಂಘೀರ್ ಎಂಬ ಬಿರುದನ್ನವನು ಪಡೆದಿದ್ದಾನೆ. ಅವನ ಪ್ರಭುತ್ವ ಅಪಾರವಾದ್ದು; ಅವನ ಶಕ್ತಿಗೆ ಎಣೆಯಿಲ್ಲ, ಎದುರಿಲ್ಲ- ಇಡೀ ದೇಶದಲ್ಲಿ.

ಈ ಸುದ್ದಿಯಿಂದ ನಮ್ಮ ಹೃದಯ ಹಗುರಾಯಿತು. ಹೊಸ ದೊರೆಯನ್ನು ಜನ ಹೃತ್ಪೂರ್ವಕ ಕೊಂಡಾಡಿದರು (‘ಅರ್ಧಕಥಾನಕ’ ೨೫೦-೨೬೦)

* * *

ನಿಸ್ಸಾಹಾಯಕ ಪ್ರಧಾನಿಯನ್ನು ಅವರ ಕಾವಲು ಪಡೆಯವರೇ ಆದ ಇಬ್ಬರು ಗುಂಡಿಟ್ಟು ಕೊಂದ ಮೇಲೆ ದೆಹಲಿಯಲ್ಲೂ, ಹಲವು ನಗರಗಳಲ್ಲೂ ನಿರಪರಾಧಿ ಮಕ್ಕಳನ್ನೂ ಹೆಂಗಸರನ್ನೂ- ಅವರ ಕೊಲೆಗಡುಕರ ಜನಾಂಗಕ್ಕೆ ಸೇರಿದವರೆಂಬ ಕಾರಣಕ್ಕಾಗಿ-ನಿರ್ದಯವಾಗಿ ಕೊಲ್ಲಲಾಯಿತು. ಜನರಿಗೆ ರಕ್ಷಣೆ ಕೊಡಬೇಕಿದ್ದ ಪೊಲೀಸರು ಮತ್ತು ಆಡಳಿತ ಪಕ್ಷದ ರಾಜಕಾರಣಿಗಳಲ್ಲಿ ಕೆಲವರು (?) ಈ ಹತ್ಯಾಕಾಂಡದ ಹೊತ್ತಿನಲ್ಲಿ ಸುಮ್ಮನಿದ್ದರು. ಕೊಲೆಯಾದ ಪ್ರಧಾನಿಯಾದ ಮಗ ಶ್ರೀ ರಾಜೀವಗಾಂಧಿ ಸುದ್ದಿ ತಿಳಿದಿದ್ದೇ ಕಲ್ಕತ್ತದಿಂದ ಹಿಂದಿರುಗಿ ಪ್ರಧಾನಿಯಾಗಿ ಪ್ರಮಾಣವಾಚನ ಸ್ವೀಕರಿಸಿ ಅರಾಜಕ ಸ್ಥಿತಿಯನ್ನು ಹತ್ತಿಕ್ಕಿದರು. ಚುನಾವಣೆ ಘೋಷಿಸಿದರು. ಅರಾಜಕತೆಯ ಅನುಭವದಿಂದ ತತ್ತರಿಸಿದ್ದ ಭಾರತದ ಜನಕೋಟಿ ಭಾರತದ ಸುಭದ್ರತೆಗೂ ಅಖಂಡತೆಗೂ ಶ್ರಮಿಸುವ ಭರವಸೆಯಿತ್ತ ಶ್ರೀ ರಾಜೀವಗಾಂಧಿಯವರ ನೇತೃತ್ವದ ಇಂದಿರಾ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿತು. ಕೇವಲ ಎರಡು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆರಿಸಿ ಬಂದಿದ್ದ ಶ್ರೀ ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಸರ್ಕಾರ ನೈತಿಕ ಮೌಲ್ಯಗಳನ್ನು ಮತ್ತೆ ರಾಜಕೀಯದಲ್ಲಿ ಸ್ಥಾಪಿಸುವ ಭರವಸೆಯನ್ನು ಜನತೆಯಲ್ಲಿ ಹುಟ್ಟಿಸಲು ಶ್ರಮಿಸಿದ್ದರೂ ಸಹ-ವೈಯಕ್ತಿಕವಾಗಿ ಶ್ರೀ ಹೆಗಡೆಯವರು ಜನರ ಅಪಾರ ಪ್ರೀತಿಯನ್ನು ಗಳಿಸಿದ್ದರೂ ಕೂಡ ಕನ್ನಡದ ಜನ ಒಟ್ಟಿನಲ್ಲಿ ಲೋಕಸಭೆಗೆ ಶ್ರೀ ರಾಜೀವಗಾಂಧಿಯವರ ನೇತೃತ್ವದ ಇಂದಿರಾ ಕಾಂಗ್ರೆಸ್ಸನ್ನೇ ಆರಿಸಿತು. ಆಂಧ್ರದಲ್ಲಿ ರಾಜದರ್ಪದ ಶ್ರೀ ಎನ್.ಟಿ.ಆರ್. ಮಾತ್ರ ಚುನಾವಣೆಯೆಂಬ ಅಶ್ವಮೇಧದ ಕುದುರೆಯನ್ನು ತಮ್ಮ ಸಂಸ್ಥಾನದಲ್ಲಿ ಕಟ್ಟಿ ಹಾಕಿದರು. ಕಾಶ್ಮೀರದಲ್ಲಿ ಮಗ ಮತ್ತು ಅಳಿಯರ ನಡುವಿನ ಕಾಳಗದಲ್ಲಿ ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಜನ ದಿವಂಗತ ಶೇಕ್ ಅಬ್ದುಲ್ಲಾರ ಮಗನನ್ನೇ ಬೆಂಬಲಿಸಿತು. ಹೀಗೆ ಅರಾಜಕತೆಯ ಭಯದಲ್ಲಿ ನಾವು ಮತ್ತೆ ಮಕ್ಕಳಾದೆವು.

ಪ್ರಜಾತಂತ್ರದ ಯಶಸ್ಸಿಗೆ ಅಗತ್ಯವಾದ ರಾಜಕೀಯ ಸ್ಪರ್ಧೆ ವಿರೋಧ ಪಕ್ಷಗಳಲ್ಲಿ ಅರ್ಥಹೀನವೂ, ಶೈಶವೂ ಆದ ವೈಯಕ್ತಿಕ ಅಸೆಬುರುಕುತನದ ಪೈಪೋಟಿಯಾಗಿಬಿಟ್ಟಿತು. ಸ್ಪರ್ಧೆಯೇ ಪ್ರಜಾತಂತ್ರದ ಯಶಸ್ಸಿಗೆ ಕಾರಣವಾಗುವ ಮೂಲ ಸೂಕ್ತ. ಯಾಕೆಂದರೆ ಈ ಪೈಪೋಟಿಯಲ್ಲಿ ಪ್ರಭುತ್ವದ ಪಾಲುದಾರಿಕೆ ಜನತೆಯ ನಡುವೆ ಹಿಗ್ಗುತ್ತ ಹೋಗುತ್ತದೆ. ಆದರೆ. ವಿಪರ‍್ಯಾಸವೆಂದರೆ, ಪ್ರಭುತ್ವವನ್ನು ಹಂಚಿಕೊಳ್ಳುವ ಆರೋಗ್ಯಕರ ಪೈಪೋಟಿಗೆ ಬದಲಾಗಿ ಬಾಲಿಶ ಬಡಿದಾಟವನ್ನು ವಿರೋಧ ಪಕ್ಷಗಳಲ್ಲಿ ಕಂಡ ಜನತೆ ಅರಾಜಕತೆಗೆ ಬೆದರಿ ‘ಒಂದು ಪಕ್ಷ’ ‘ಒಬ್ಬ ನಾಯಕ’ ನಿಗಾಗಿ ಹಂಬಲಿಸಿತು. ಸಾರಾಂಶವಾಗಿ ಹೇಳುವುದಾದರೆ, ಮೂಲತಃ ನಾವು ಇವತ್ತಿಗೂ ೧೭ನೇ ಶತಮಾನದ ಬನಾರಸಿಯಂತೆಯೇ ಪರಿಭಾವಿಸುತ್ತಿರಬಹುದು.

ರಾಜಕೀಯ ತಮ್ಮ ನೈತಿಕ ಹೋರಾಟದ ಅಂಕಣವೆಂಬುದನ್ನು ಭಾರತದ ಜನ ಯಾವತ್ತೂ ಪರಿಗಣಿಸಿಲ್ಲವೆಂದು ಹೇಳುವುದೂ ಉತ್ಪ್ರೇಕ್ಷೆಯಾದೀತು. ಹಿಂದೊಮ್ಮೆ ಅವರು ಈಗಿನ ಚುನಾವಣೆಯ ರೀತಿಯಲ್ಲೇ ಇಂದಿರಾ ಕಾಂಗ್ರೆಸನ್ನು ಕಿತ್ತೊಗೆದು ಜನತಾ ಪಕ್ಷವನ್ನು ಆಯ್ದಿದ್ದರು. ಆಗ ಜನತೆಗೆ ತಂದೆಯಂತೆ ಕಂಡಿದ್ದ ಲೋಕನಾಯಕ ಜಯಪ್ರಕಾಶ ನಾರಾಯಣರು ಆಂದೋಳನದ ಮಂಚೂಣಿಯಲ್ಲಿದ್ದರು. ಮಹಾತ್ಮ ಗಾಂಧೀಯವರ ಪರಂಪರೆ ಸಜೀವ ಉಳಿದಂತೆ ಕಂಡಿತ್ತು. ಆಮೇಲೆ ಏನಾಯಿತೆಂಬುದು ಈಗ ಇತಿಹಾಸ. ಆರೋಗ್ಯಕರ ಪೈಪೋಟಿ ಬಾಲಿಶ ಕಚ್ಚಾಟವಾಯಿತು. ನಿನ್ನೆ ತುರ್ತುಪರಿಸ್ಥಿತಿಯನ್ನು ಬೆಂಬಲಿಸಿದ್ದ ಜಗಜೀವನರಾಂ, ಚವಾನ್‌ರಂತಹ ದೊಡ್ಡ ದೊಡ್ಡ ನಾಯಕರು ಇದ್ದಕ್ಕಿದಂತೆ ಇವತ್ತು ಬದಲಾದರು. ಇಂದಿರಾಗಾಂಧಿಯನ್ನು ಸರ್ವಾಧಿಕಾರಿಯೆಂದು ಜರೆದರು. ಕರ್ನಾಟಕದಲ್ಲಿ ಅವರ ಬಲಗೈಯಂತಿದ್ದ ದೇವರಾಜ ಅರಸರು ಅವರಿಂದ ದೂರವಾದರು. ಇವತ್ತು ನೈತಿಕವಾಗಿ ತಿರಸ್ಕೃತವಾದವರು ನಾಳೆ ರಾಜಕೀಯವಾಗಿ ಪುರಸ್ಕೃತರಾದರು. ರಾಜಕಾರಣಿಗಳು ವೇಷ ಬದಲಾಯಿಸುವ ಪಾತ್ರಧಾರಿಗಳಾದರು. ನಾಳೆ ಹೊಗಳಬೇಕಾದೀತೆಂಬ ಎಚ್ಚರಿಕೆಯಿಲ್ಲದೆ ಇವತ್ತು ಬಯ್ಯುತ್ತಿದ್ದವರು ನಾಚಿಕೆಯಿಲ್ಲದೆ ಹೊಗಳಿದರು. ಜರಿದರು, ಬೈದರು, ಹೊಗಳಿದರು, ಯಾವ ದಿನ, ಯಾರು, ಎಲ್ಲಿ ಇದ್ದು ಏನು ಹೇಳುತ್ತಿದ್ದರು ಎಂಬುದು ಅವರಿಗೇ ಮರೆಯುವಷ್ಟು ಗೊಂದಲವಾಯಿತು. ಮೃದು ಹೃದಯದ ಲೋಕನಾಯಕ ಜಯಪ್ರಕಾಶ ನಾರಾಯಣರೂ ಕೂಡ ಎಮರ್ಜನ್ಸಿ ಜೈಲಿನಲ್ಲಿ ತಮ್ಮ ಆರೋಗ್ಯ ಹದಗೆಟ್ಟಿದ್ದಕ್ಕೆ ರಾಜಕೀಯ ಪಿತೂರಿಯೂ ಕಾರಣವಿರಬಹುದೆಂಬ ಸಂಶಯ ಬರುವಂತೆ ಮಾತನಾಡಿದವರೇ. ಚುನಾವಣೆಯಲ್ಲಿ ಸೋತ ಇಂದಿರಾಗಾಂಧಿಯವರ ಪರಮವೈರಿಗಳಾಗಿದ್ದ ಚರಣಸಿಂಗ್ ಮತ್ತು ರಾಜನಾರಾಯಣರು ಮೊರಾರ‍್ಜಿ ನೇತೃತ್ವದ ಸರ್ಕಾರದ ವಿರುದ್ಧ ಇಂದಿರಾಗಾಂಧಿಯವರ ಬೆಂಬಲ ಕೋರಿದರು. ಇಂದಿರಾಗಾಂಧಿಯವರು ನೈತಿಕವಾಗಿ ಅಪರಾಧಿಗಳೆಂಬುದು ನಿಜವೆ, ಸುಳ್ಳೆ ಎಂಬ ಪ್ರಶ್ನೆ ಗೊಂದಲಮಯವಾಯಿತು.

ಭಾರತದ ಸಮಸ್ಯೆಗಳಿಗೆ ತಕ್ಕ ಪರಿಹಾರ ಹುಡುಕುವ ಪ್ರಶ್ನೆಯಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಅದಕ್ಕಾಗಿಯೇ ಪರ‍್ಯಾಯಕ್ರಮಗಳನ್ನು ಆಲೋಚಿಸಲು ರಾಜಕೀಯ ಪಕ್ಷಗಳು ಇರುವುದು. ಇವುಗಳ ನಡುವಿನ ಬಡಿದಾಟ ವಿರೋಧಿಗಳ ನಡುವಿನ ಹೊಯ್ದಾಟ; ವೈರಿಗಳ ನಡುವಿನ ದ್ವೇಷಸಾಧನೆಯಲ್ಲ ಯಾವುದು ಸರಿ, ಯಾವುದು ತಪ್ಪು ಎಂಬ ಅಭಿಪ್ರಾಯಕ್ಕೆ ಸಂಬಂಧಿಸಿದ ಜಗಳ ಇದು; ಯಾವುದು ನೀತಿ ಯಾವುದು ಅನೀತಿ ಎಂಬ ನೈತಿಕ ಪ್ರಶ್ನೆಯಲ್ಲ, ಹಿಂಸೆ, ಭ್ರಷ್ಟಾಚಾರ, ದಮನಗಳು ನೈತಿಕ ಪ್ರಶ್ನೆಗಳು- ಇವನ್ನು ಕುರಿತು ರಾಜಕೀಯ ಲಾಭದಿಂದ ಚಿಂತಿಸುವುದು ಅತ್ಯಂತ ಹೇಯವಾದ ವರ್ತನೆ. ಭಾತರದ ರಾಜಕೀಯದಲ್ಲಿ ಈ ಬಗೆಯ ತಾರತಮ್ಯ ಜ್ಞಾನವಿಲ್ಲದೇ ಹೋದದ್ದರಿಂದ ನೈತಿಕ ಆರೋಪ ಪ್ರತ್ಯಾರೋಪಗಳೆಲ್ಲವೂ ಪಾತ್ರಧಾರಿಗಳು ಉರುಹಚ್ಚಿದ ಮಾತುಗಳಾಗಿಬಿಟ್ಟವು. ಗೆಲ್ಲುವುದೊಂದೇ ನೀತಿಯಾಗಿಬಿಟ್ಟಿತು. ಈ ಗೊಂದಲದಲ್ಲಿ ಜನಸಾಮಾನ್ಯರು ಅರಾಜಕತೆಯೊಂದು ತಪ್ಪಿದರೆ ಸಾಕಪ್ಪ ಎಂಬ ಹಂಬಲದಲ್ಲಿ ವಿಷಣ್ಣರಾದರು. ದೇವರಾಜ ಅರಸರು ಭಷ್ಟಾಚಾರಕ್ಕೆ ಹೇಸದವರಾಗಿ ಇದ್ದರೆ? ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿಯಲ್ಲಿ ಅನೈತಿಕವಾಗಿ ನಡೆದುಕೊಂಡರೆ? ಸಂಜಯಗಾಂಧಿಯಿಂದಾಗಿ ಅನಗತ್ಯ ಹಿಂಸಾಚಾರವಾಯಿತೆ? ಚರಣಸಿಂಗ್, ರಾಜನಾರಾಯಣ್, ಚಾರ್ಜ್‌ಫನಾಂಡೀಸ್-ಇವರೆಲ್ಲರೂ ಇಂದಿರಾ ಕಾಂಗ್ರೆಸ್ ಬೆಂಬಲ ಪಡೆದು ಪಕ್ಷ ಒಡೆದಾಗ ವಚನಭ್ರಷ್ಟರಾದರೆ? ಈ ಎಲ್ಲ ಪ್ರಶ್ನೆಗಳೂ ಕೇವಲ ರಾಜಕೀಯ ತಂತ್ರದ ಪ್ರಶ್ನೆಗಳಾಗಿಬಿಟ್ಟವು. ರಾಜಕೀಯ ಕ್ಷೇತ್ರದಿಂದ ನೈತಿಕತೆ ಮಾಯವಾಗಿಬಿಟ್ಟಿತು. ‘ಸರ್ಕಾರ’ವೆಂಬುದು ಇರುವುದು ಗ್ಯಾರೆಂಟಿಯಾದರೆ ತಾನೆ, ಜನ ‘ಒಳ್ಳೆಯ ಸರ್ಕಾರ’ ಬೇಕೆಂದು ಕೇಳುವುದು?

ಆಗ ಇಂದಿರಾಗಾಂಧಿ ಮತ್ತು ಈಗ ರಾಜೀವ್‌ಗಾಂಧಿ ಭಾರತದ ಜನಕೋಟಿಗೆ ತಮ್ಮ ದೈನಿಕ ಜೀವನದ ನೀರಸ ಸಾತತ್ಯವನ್ನಾದರೂ ಕಾಯಬಲ್ಲ ‘ಸರ್ಕಾರ’ದ ಆಶ್ವಾಸನೆ ಕೊಟ್ಟರು. ಎಂದೇ ಗೆದ್ದರು.

ಬಲಿಷ್ಟ ದೇಶ ಸುಭದ್ರ ಸರ್ಕಾರ, ಎಕತೆ, ಅಖಂಡತೆ- ಇವು ಜನತೆಗೆ ಅಪ್ಯಾಯಮಾನವಾಗಿ ಕಂಡಿವೆ. ಈ ತತ್ವಗಳನ್ನು ಪರಿಣಾಮದಲ್ಲಿ ಅವು ಏನಾಗುತ್ತವೆಂದು ಪ್ರಶ್ನಿಸುವ ಎದೆಗಾರಿಕೆ ಸೋತ ವಿರೋಧಪಕ್ಷದ ನಾಯಕರುಗಳಿಗೆ ಇದ್ದಂತೆ ಇಲ್ಲ. ಕರ್ನಾಟಕದ ಶ್ರೀ ರಾಮಕೃಷ್ಣ ಹೆಗಡೆ ಎತ್ತಿದ ಕೇಂದ್ರ ಮತ್ತು ರಾಜ್ಯದ ನಡುವಿನ ವಿಕೇಂದ್ರಿಕೃತವಾಗಬೇಕಾದ ಸಂಬಂಧದ ಪ್ರಶ್ನೆ ಈಗಿನ ಏಕಪಕ್ಷೀಯ ಆಳ್ವಿಕೆಯಲ್ಲಿ ಇನ್ನಷ್ಟು ಮುಖ್ಯ ಸಮಸ್ಯೆಯಾಗಿದೆ. ಯಾಕೆಂದರೆ ಪ್ರಪಂಚದ ಎಲ್ಲ ರಾಷ್ಟ್ರಗಳೂ ತಾವು ಬಲಿಷ್ಠವಾಗಬೇಕೆಂಬ ಹಂಬಲದಲ್ಲಿ, ಕೇಂದ್ರೀಕೃತ ಅಧಿಕಾರದ ಉನ್ಮತ್ತತೆಯಲ್ಲಿ, ಸದ್ಯದ ಸಾಮಾಜಿಕ ನ್ಯಾಯದ ಸಮಸ್ಯೆಯನ್ನು ಕಡೆಗಾಣಿಸಿದ್ದಿದೆ. ನಾವು ಬಲಿಷ್ಠರಾಗಬೇಕೆಂಬ ಯಂತ್ರಯುಗದ ಆಕರ್ಷಣೆಯಲ್ಲಿ ದೈಹಿಕ ದುಡಿಮೆಗಾಗಿ, ಕೇವಲ ಅಂಬಲಿಗಾಗಿ ಹಾತೊರೆವ ಅಸಂಖ್ಯ ಬಡಜನರು ಕಾಲ್ತೊಡಕಾಗಿ ಕಾಣಬಹುದಾದ ಅಪಾಯವಿದೆ.

‘ಬಹುತ್ಪನ್ನವಲ್ಲ; ಬಹುಜನರಿಂದ ಉತ್ಪನ್ನ’ (Not mass production but productin by the masses) ಎಂಬ ಗಾಂಧಿ ಸೂತ್ರ ಕಂಪ್ಯೂಟರ್ ಟೆಕ್ನಾಲಜಿಯ ಸುಸೂತ್ರದ ಭಮ್ರೆಯಲ್ಲಿ ಮರೆತುಹೋಗುವ ಚಿಹ್ನೆಗಳು ಈಗಾಗಲೇ ಕಾಣಿಸಿಕೊಂಡಿದೆ. ಯಂತ್ರಯುಗದ ಆಕರ್ಷಣೆ ಈಗಾಗಲೇ ಭೋಪಾಲಿನಲ್ಲಿ ತನ್ನ ವಿಷವನ್ನು ಕಾರಿದೆ. ಆಳುವ ಜನ ಅಮೆರಿಕಾದಂತೆ ಇಂಡಿಯಾ ಆಗಬೇಕೆನ್ನುವ, ಕೊನೆಯ ಪಕ್ಷ ಅಲ್ಲಿಗೆ ತಮ್ಮ ಮಕ್ಕಳನ್ನು ಕಳಿಸಬೇಕೆನ್ನುವ ಕನಸಿನಲ್ಲಿ ಬಲಿಷ್ಠ ರಾಷ್ಟ್ರಕ್ಕಾಗಿ ಎಲ್ಲ ನೈತಿಕತೆಯನ್ನೂ ಭಾರತದ ಸಾಂಸ್ಕೃತಿಕವಾದ ಹಲವು ವೈಶಿಷ್ಟ್ಯಗಳನ್ನೂ ಬಲಿಗೊಡಲು ತಯಾರಾಗಿದ್ದಾರೆ. ಹಲವು ಭಾಷೆಗಳು, ವೈವಿಧ್ಯಮಯ ಸಂಸ್ಕೃತಿಗಳು, ಬಡಜನರು, ಅವರ ಆಚಾರ ವಿಚಾರಗಳು ಇವೆಲ್ಲವೂ ಕಂಪ್ಯೂಟರ್ ಯುಗಕ್ಕೆ ಅಡ್ಡಿಯಾಗುತ್ತವೆಂಬ ಅಸಹನೆ ಈಗಾಗಲೇ ಮೇಲಿನವರಲ್ಲಿ ಕಾಣಿಸಿಕೊಂಡಿದೆ. ಸುಭದ್ರತೆಗಾಗಿ ಹಾತೊರೆವ ಕೆಳಗಿನ ವರ್ಗದ ಜನರೆಲ್ಲರೂ ಮುಂದೇನು ಆಗಬಹುದೆಂಬುದನ್ನು ಇಂದಿನ ಅರಾಜಕತೆಯ ದಿಗಿಲಿನಲ್ಲಿ ಕಾಣದವರಾಗಿದ್ದಾರೆ. ವಿರೋಧಪಕ್ಷಗಳು ತಮ್ಮ ಕಚ್ಚಾಟದಲ್ಲಿ ಇದನ್ನು ಕಾಣಿಸದವರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ರಾಜೀವಗಾಂಧಿ ಅಪ್ರೇರಿತರಾಗಿ ಇದನ್ನು ಸ್ವಯಂ ಕಂಡಾರೆಂಬ ಭರವಸೆಯ ಕನಸಿನಲ್ಲಿ ದೇಶ ಇರುವಂತಾಗಿದೆ!

ಪ್ರಭುತ್ವದಲ್ಲಿ ತಾವು ಹೆಚ್ಚಿನ ಪಾಲುದಾರರಾಗಬೇಕೆಂದು ಕೆಲವು ವೇಳೆ ಜನಾಂಗಗಳು, ವಿವಿಧ ಜಾತಿಯರವರು, ಕೆಳಗಿನ ವರ್ಗದವರು ಸ್ಪರ್ಧಾತ್ಮಕವಾಗಿ ಮುನ್ನುಗ್ಗಿದಾಗ ಉಂಟಾಗುವ ತಾತ್ಕಾಲಿಕ ಗೊಂದಲವೂ ಅರಾಜಕತೆಯ ಚಿಹ್ನೆಗಳಾಗಿ ಕಂಡಾವು. ಆದರೆ ಈ ಬಗೆಯ  ಸ್ಪರ್ಧೆ ಮತ್ತು ತಿಕ್ಕಾಟಗಳೇ ಪ್ರಜಾತಂತ್ರದ ರಾಜಕೀಯದ ಜೀವಾಳ. ೧೯ನೇ ಶತಮಾನದ ಇಂಗ್ಲೀಷ್ ಕವಿ-ವಿಮರ್ಶಕ ಮ್ಯಾಥ್ಯೂ ಅರ್ನಾಲ್ಡನಿಗೆ ಕಾರ್ಮಿಕರು ಹೈಡ್ ಪಾರ್ಕಿಗೆ ನುಗ್ಗಿ ಬೇಲಿಯನ್ನು ಕಿತ್ತೆಸೆದದ್ದು, ಇದಕ್ಕೆ ವಿರೋಧವಾಗಿ ಕನ್ಸರ‍್ವೇಟಿವ್ ಜನ ಕಿರುಚಾಡಿದ್ದು, ಕಾರ್ಮಿಕರಿಗೂ ಮತದಾನದ ಹಕ್ಕಿರಬೇಕೆಂದು ಉದಾರವಾದಿಗಳು ಹೋರಾಡಿದ್ದು, ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುವ ಸ್ವಚ್ಚಂದತೆಯೇ ಸ್ವಾತಂತ್ರ್ಯವೆಂದು ಕೆಲವರು ತಿಳಿದದ್ದು-ಎಲ್ಲವು ಅರಾಜಕತೆಯ ಚಿಹ್ನೆಗಳಾಗಿ ಕಂಡವು.

ಆದರೆ ಇತಿಹಾಸ ಹೇಳುವುದೇ ಬೇರೆ. ಈ ಹೋರಾಟಗಳೇ ಬ್ರಿಟಿಷ್ ಪ್ರಜಾತಂತ್ರಕ್ಕೆ ಚಲನಶೀಲತೆಯ ಜೀವದಾನ ಮಾಡಿದ ಘಟನೆಗಳಾದವು. ಅತೃಪ್ತ ಕಾರ್ಮಿಕರು ಇದಕ್ಕೂ ಹೆಚ್ಚಿನ ಹಿಂಸಾಚಾರದಲ್ಲಿ ಆಗ ತೊಡಗಲಿಲ್ಲವೆಂಬುದೇ ಹಿನ್ನೋಟದಲ್ಲಿ ಮಹತ್ವದ್ದಾಗಿ ಕಾಣಿಸುತ್ತದೆ. ಅರ್ನಾಲ್ಡಿನ ಭಯ ಉತ್ಪ್ರೇಕ್ಷೆಯೆನ್ನಿಸುತ್ತದೆ. ಆದರೆ ತಾತ್ಕಾಲೀನ ಘಟನೆಗಳಿಂದ ಪ್ರಚೋದಿತನಾದ ಅರ್ನಾಲ್ಡ್ ಧ್ಯಾನಪೂರ್ಣ ಚಿಂತನೆಯಲ್ಲಿ ತೊಡಗಿ ಶಾಶ್ವತವಾದ ವಿಚಾರಗಳನ್ನು ನಮ್ಮೆದುರು ಇಡುತ್ತಾನೆ. ಅರಾಜಕ ಪ್ರವೃತ್ತಿಗೆ ಇರುವ ಏಕಮಾತ್ರ ಪರ್ಯಾಯ, ಸಂಸ್ಕೃತಿ (Culture & Anarchy). ಸಂಸ್ಕೃತಿಯೆಂದರೆ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗಾಗಿ, ಪರಿಪೂರ್ಣತೆಗಾಗಿ ನಾವು ಪಡುವ ಹಂಬಲ. ಆದರೆ ಇಡೀ ಸಮಷ್ಟಿಜೀವನ ಈ ಪರಿಪೂರ್ಣತೆಗಾಗಿ ಹಂಬಲಿಸದ ಹೊರತು ಕೇವಲ ವ್ಯಕ್ತಿಯಲ್ಲಿನ ಹಂಬಲ ಮುಕ್ಕಾಗಿಯೇ ಉಳಿಯುತ್ತದೆ- ಇತ್ಯಾದಿ ವಿಷಯಗಳನ್ನು ಆಳವಾಗಿ ಚಿಂತಿಸಿ ಮೂಡಿಸುವ ಆರ್ನಾಲ್ಡ್ ರಾಜಕೀಯ ಪ್ರಭುತ್ವದ ವಿಷಯದಲ್ಲಿ ಮಾತ್ರ ಕೈ ಚೆಲ್ಲಿಬಿಡುತ್ತಾನೆ. ಸದ್ಯದ ಸ್ಥಿತಿಯಲ್ಲಿ ಅರಾಜಕತೆಯನ್ನು ಎದುರಿಸಬಲ್ಲುದು ಬಲಿಷ್ಠ ಸರ್ಕಾರ ಮಾತ್ರ; ಅಂದರೆ ಇರುವ ಪ್ರಭುತ್ವವನ್ನು ನಾವೆಲ್ಲರೂ ಬೆಂಬಲಿಸಬೇಕು- ಅರ್ಥಾತ್, ಅವನು ಹೇಳುವ ಸಂಸ್ಕೃತಿ ಜೀವಂತವಾದ ಪ್ರಜಾಶಕ್ತಿಯಾಗುವ ತನಕ! ಉದಾರವಾದಿ ಬುದ್ದಿಜೀವಿಗಳೆಲ್ಲ ಆಲೋಚಿಸುವುದು ಹೀಗೆ ಮ್ಯಾಥ್ಯೂ ಅರ್ನಾಲ್ಡ್‌ನಂತೆಯೇ. ರಾಜಕೀಯ ಹೋರಾಟವೇ ಈ ನೈತಿಕತೆಯನ್ನೂ, ಸುಸಂಸ್ಕೃತ ಮನಸ್ಸನ್ನೂ ವ್ಯಕ್ತಿಯಲ್ಲೂ ಸಮಷ್ಟಿಯಲ್ಲೂ ಪ್ರಚೋದಿಸುವ ಸಾಧನ ಎಂದು ತಿಳಿದಿದ್ದ ಮಹಾತ್ಮಗಾಂಧಿ ಬಗೆಯ ಚಿಂತನೆ ಸದಾ ಹಿಮ್ಮೆಟ್ಟುತ್ತಿರುತ್ತದೆ. ‘ಅಧಿಕಾರ ಚಲಾಯಿಸುವಾತ ನಿಷ್ಪಾಪಿಯಾಗಿರುವುದು ಸಾಧ್ಯವಿಲ್ಲ; ಆದರೆ ಅವನು ಕಡುಪಾಪಿಯೂ ಆಗಲಿಕ್ಕಿಲ್ಲ. ಒಟ್ಟಿನಲ್ಲಿ ರಾಜಕೀಯ ನಮ್ಮ ಅಳವಿಗೆ ಮೀರಿದ್ದು’ – ಎಂಬ ಗೊಂದಲಮಯ ನೈತಿಕ ನಿಲುವಿನಲ್ಲಿ ಬಹುಜನರು ವಿಷಣ್ಣರಾಗಿ ತಮ್ಮ ಪಾಲಿಗೆ ಬಂದದ್ದನ್ನು ಉಂಡಿರುತ್ತಾರೆ. ನಮ್ಮ ತೀವ್ರ ನೈತಿಕ ಆಸಕ್ತಿಗಳಿಗೆಂದು ಬನಾರಸಿಗೆ ಇದ್ದಂತೆಯೇ ನಮ್ಮೆಲ್ಲರಿಗೂ, ನಮ್ಮ ನಮ್ಮ ಆಯ್ದ ಕ್ಷೇತ್ರಗಳೋ, ಹುಟ್ಟಿದ ಜಾತಿಗಳೋ, ನಂಬಿದ ಮತಗಳೋ ಹೇಗೋ ಇರುತ್ತವಲ್ಲ?

ದೇಶ ಈ ಸ್ಥಿತಿಯಲ್ಲಿದೆ. ಇರಬಾರದು. ಈ ಬಗ್ಗೆ ನಾವೇನು ಮಾಡಬೇಕು? ಆತಂಕದಲ್ಲಿ ಧ್ಯಾನಪೂರ್ಣವಾಗಿ ನಾವದನ್ನು ಹುಡುಕಿಕೊಳ್ಳಬೇಕಾಗಿದೆ.

ಅಥವಾ ಪ್ರಲೋಭನೆಗಾಗಿ ಇನ್ನೊಂದು ಬಗೆಯಿದೆ- ಭಾರತೀಯ ಮನಸ್ಸಿಗೆ, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬ ಉದಾತ್ತ ಧಿಕ್ಕಾರದಲ್ಲಿ ಪುರಂದರದಾಸರು ನಮಗದನ್ನು ಸೂಚಿಸಿದ್ದಾರೆ. ಎಲ್ಲಿ, ಯಾವ ಪ್ರಭುತ್ವವಾಗಲೀ ಉತ್ತಮವಾಗಿರಬಹುದೆಂಬ ಕಲ್ಪನೆಯೇ ಲೊಳಲೊಟ್ಟೆ ಮತ್ತು ಅಥವಾ ಉತ್ತಮವಾದ ಪ್ರಭುತ್ವವೂ ಲೊಳಲೊಟ್ಟೆ-ದೈವದ ಹುಚ್ಚು ಹಿಡಿದ ಅನುಭಾವಿಗಳಿಗೆ. ಆದ್ದರಿಂದ ರಾಜಕೀಯ ಪ್ರಪಂಚದಲ್ಲಿ, ಇಹದಲ್ಲಿ-ಮತ್ತು ಇಹದಲ್ಲೇ-ಪವಿತ್ರವಾದ್ದನ್ನೂ ಪೂರ್ಣ ಶುದ್ಧಿಯನ್ನೂ ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಗಾಂಧೀಜಿಯಂಥವರು ಸೋಲುವುದು ಅನಿವಾರ್ಯ. ಎಂದೇ ತುಕಾರಾಂ, ಕಬೀರ್, ರಮಣ ಐಹಿಕ ಜಂಜಾಟದ ರಾಜಕೀಯದಿಂದ ಮುಖ ತಿರುಗಿಸಿದವರು. ಧಾರ್ಮಿಕ ಗೃಹಸ್ಥ ಬನಾರಸಿಯೂ ಅಂಥವನೇ. ರಾಜಕೀಯ ವಾಸ್ತವವನ್ನು ಕರ್ಮವೆಂದು ನುಂಗಿಕೊಂಡಿದ್ದು, ತನ್ನ ಜಾತಿಯ ಆವರಣದಲ್ಲಿ ಅಂತೂ ಯಶಸ್ವಿಯಾದ ವ್ಯಾಪಾರಿ ಅವನು. ವ್ಯಾಪಾರದಲ್ಲಿ ‘ದ್ರೋಹ ಚಿಂತನ’ ದ ಅಗತ್ಯದ ಬಗ್ಗೆ ಅವನು ತುಟಿಪಿಟಕ್ಕೆನ್ನುವುದಿಲ್ಲ. ರಾಜಕೀಯ ದಬ್ಬಾಳಿಕೆಯ ಮಧ್ಯೆಯೂ ತಾನು ಹೇಗೆ ನುಸುಳಿಕೊಂಡು ತನ್ನ ಗಂಟನ್ನು ಕಟ್ಟಿಕೊಂಡೆ ಎಂಬ ವಿಷಯ ಅವನ ಪಾಲಿಗೆ ಗುಪ್ತವಾಗಿಡಬೇಕಾದ ಜೀವನ ಸಂಗತಿಗಳಲ್ಲಿ ಒಂದು. ಧರ್ಮ, ಆಧ್ಯಾತ್ಮ – ಅದರ ವಿಷಯವೇ ಬೇರೆ.

ಪ್ರಭುತ್ವ ಸೀಮಿತವಾಗಿದ್ದ ಕಾಲದಲ್ಲಿ ಮೇಲಿನಂತೆ ಪರಿಭಾವಿಸಬಹುದಿತ್ತೇನೋ. ಅವತ್ತೂ ಕೂಡ ಹೊರಗಿನಿಂದ ಒಳಗಿದನ್ನು ರಕ್ಷಿಸಿಕೊಳ್ಳುವುದು ಸುಲಭದ ವಿಷಯವಾಗಿರಲಿಲ್ಲ. ಭಗವಂತ ಮಾತ್ರ ನನ್ನ ಒಡೆಯ ಎಂದು ತಿಳಿದವನ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬ ಉದ್ಗಾರ ಆಕರ್ಷಕವಾದ್ದು. ಆದರೆ ಆಧುನಿಕ ಟೆಕ್ನಾಲಜಿಯಿಂದಾಗಿ ಪ್ರಭುತ್ವದ ಶಕ್ತಿ ಸರ್ವವ್ಯಾಪ್ತಿಯಾಗಿರುವ ಈ ಕಾಲದಲ್ಲಿ ಜಾತಿ, ಧರ್ಮ, ಮತ, ಕಲೆ, ಅನುಭಾವ ಯಾವುದೂ ಬಚ್ಚಿಟ್ಟುಕೊಳ್ಳಬಲ್ಲ ಗೂಡಾಗಲಾರವು. ಪ್ರಜಾತಂತ್ರದ ಸವಾಲೆಂದರೆ ಈ ಪ್ರಭುತ್ವವನ್ನು ಹೇಗೆ ಪಳಗಿಸಬಹುದು ಎಂಬುದು. ಅದನ್ನು ಪಳಗಿಸಿದಲ್ಲಿ ಮಾತ್ರ ರಾಜಕೀಯ ನಮ್ಮ ನೈತಿಕ ಮೌಲ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ ಕ್ಷೇತ್ರವಾಗುತ್ತದೆ. ಹಾಗೆ ಮಾಡಿಕೊಳ್ಳದೇ ನಮಗೆ ಬೇರೆ ಮಾರ್ಗವಿಲ್ಲ.

ನಡುಮನೆಯಲ್ಲಿರುವುದು ಇಷ್ಟದೇವತೆಯಲ್ಲ – ಟೀವಿ.

ರುಜುವಾತು೨೪, ಅಕ್ಟೋಬರ್ಡಿಸೆಂಬರ್, ೮೪.

* * *