ಸಂಸ್ಕೃತ ಸಾಹಿತ್ಯದಲ್ಲಿ ಗಾಢವಾದ ಪಾಂಡಿತ್ಯವನ್ನೂ ವಿಚಾರಶೀಲವಾದ ಆಧುನಿಕ ಮನಸ್ಸನ್ನೂ ಒಟ್ಟಾಗಿ ಪಡೆದಿದ್ದ ವಿರಳರಲ್ಲಿ ನಮ್ಮ ಶ್ರೀರಂಗರು ಮುಖ್ಯರೆನ್ನಬಹುದು. ಅವರು ಹಿಂದಿನದನ್ನು ಹೊಗಳಿಕೊಂಡು ಬದುಕಿದವರಲ್ಲ; ಅಂತೆಯೇ ಪಾಶ್ಚಾತ್ಯ ವಿಚಾರ ಕ್ರಮಕ್ಕೆ ಮರುಳಾದವರೂ ಅಲ್ಲ. ನಮ್ಮ ಸಂದರ್ಭದಲ್ಲಿ ಇಂಥದೊಂದು ಮನಸ್ಸನ್ನು ಪಡೆದಿರುವುದು ಕಷ್ಟಸಾಧ್ಯವಾದ್ದು.

ಪಾಶ್ಚಾತ್ಯ ಸಂಸ್ಕೃತಿಯ ಸಾಮ್ರಾಜ್ಯಶಾಹೀ ಅಧಿಪತ್ಯಕ್ಕೆ ಒಳಗಾದ ಭಾರತೀಯ ಮನಸ್ಸು ಎಷ್ಟು ಕಂಗೆಟ್ಟಿದೆಯೆಂದರೆ ಒಂದೋ ಹಿನ್ನೋಟದಲ್ಲಿ ಅದು ಮಡಿವಂತ ಗೊಡ್ಡಾಗಿರುತ್ತದೆ. ಅಥವಾ ಪುರೋಗಾಮಿಯಾಗುವ ಅವಸರದಲ್ಲಿ ಅನುಕರಣಶೀಲವಾಗಿರುತ್ತದೆ. ದಿಟ್ಟ ಚಿಂತಕರಾಗಿದ್ದ ಶ್ರೀರಂಗರು ಭರತ ಮತ್ತು ಕಾಳಿದಾಸರನ್ನು ತನ್ನ ಸಮಕಾಲೀನರೆನ್ನುವಂತೆ ಅನುಭವಿಸಿ ಬರೆಯಬಲ್ಲವರಾಗಿದ್ದರು. ಆದ್ದರಿಂದಲೇ ತನ್ನ ಸದ್ಯದ ಕಾಲಕ್ಕೆ ಸ್ಪಂದಿಸಬಲ್ಲವನಲ್ಲಿ ಮಾತ್ರ ನಮ್ಮ ಪುರಾತನರು ಸಜೀವರಾಗಿ ಉಳಿದಿರುತ್ತಾರೆ ಎಂಬುದನ್ನು ಕೃತಿಗಳಲ್ಲಿ ಸಾಬೀತುಪಡಿಸಿದವರು ಶ್ರೀರಂಗರು.

ಕಾದಂಬರಿಕಾರರಾಗಿ, ನಾಟಕಕಾರರಾಗಿ, ವಿಮರ್ಶಕರಾಗಿ, ಸಮಕಾಲೀನ ಸ್ಥಿತಿಗೆ ರಾಜಕೀಯವಾಗಿಯೂ ಸ್ಪಂದಿಸಿದವರಾಗಿ ಶ್ರೀರಂಗರು ನಮ್ಮ ಕಾಲದ ದೊಡ್ಡ ಸಾಹಿತ್ಯ ಪುರುಷರಲ್ಲಿ ಒಬ್ಬರಾಗಿದ್ದರು. ಇವರ ಕೃತಿಗಳು ಕಾವ್ಯದ ಒಳದನಿಗಳನ್ನಾಗಲೀ ಅನುರಣನ ಶಕ್ತಿಯನ್ನಾಗಲೀ ಪಡೆದಿರಲಿಲ್ಲವೆಂಬ ಕೊರತೆಯನ್ನು ಗಮನಿಸಿದಾಗಲೂ ಶ್ರೀರಂಗರ ಸಾಧನೆ ಮಹತ್ವದ್ದೆಂದು ಹೇಳಲೇಬೇಕಾಗುತ್ತದೆ.

ಸಮಕಾಲೀನ ಕನ್ನಡ ಸಾಹಿತ್ಯದ ಪರಂಪರೆ ಈ ಕೆಲವು ಬಗೆಗಳಲ್ಲಿ ತನ್ನ ಶ್ರೇಷ್ಠ ಕೃತಿಕಾರರನ್ನು ಪಡೆದಿದೆ ಎನ್ನಬಹುದೇನೊ; ಬೇಂದ್ರೆ, ಪುತಿನ, ಮಧುರಚೆನ್ನ ಅನುಭಾವಪರರು; ಕಾರಂತ, ಶ್ರೀರಂಗ ವಿಚಾರಪರರು. ಅನುಭಾವ ಪರತೆಯನ್ನೂ ವಿಚಾರ ಪರತೆಯನ್ನೂ ಒಟ್ಟಂದದಲ್ಲಿ ಹೆಣೆಯಲು ಶ್ರಮಿಸುವವರು ಕುವೆಂಪು. ನಿತ್ಯದ ಆಚಾರದಲ್ಲಿ ಮನುಷ್ಯನ ಶೀಲ ಸೃಷ್ಟಿಯಾಗುವ ಕಣಿವೆಯೇ ಈ ಬದುಕೆಂದು ತಿಳಿಯುವ ಮಾಸ್ತಿ ಪರಲೌಕಿಕ ಸತ್ಯಗಳನ್ನು ಸದ್ಯಾನುಭವದ ನಿಕಷಕ್ಕೆ ಒಡ್ಡುವರು. ಈ ಹಿರಿಯವರ ನಂತರ ಬರೆಯುತ್ತಿರುವ ನಾವೆಲ್ಲರೂ ಮೇಲಿನವುಗಳಲ್ಲಿ ಒಂದಿಲ್ಲೊಂದಕ್ಕೆ ಒಲಿದವರು?

‘ರುಜುವಾತು’ ಪತ್ರಿಕೆ ಶ್ರೀರಂಗರಿಗೆ ಪ್ರಿಯವಾಗಿತ್ತೆಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರ ಮೂರು ಲೇಖನಗಳು ‘ರುಜುಮಾತು’ವಿನಲ್ಲಿ ಪ್ರಕಟವಾಗಿವೆ; ಕೊನೆಯ ಲೇಖನ ಕಳಿಸುವಾಗ ೧೧-೩-೮೪ರಂದು ಅವರು ನನಗೆ ಬರೆದ ಪತ್ರವನ್ನು ಪ್ರಕಟಿಸುತ್ತಿದ್ದೇವೆ.

ಶ್ರೀರಂಗ
(ಆದ್ಯರಂಗಾಚಾರ್ಯ)
೨೮ನೇ ಮುಖ್ಯರಸ್ತೆ
ಮಲ್ಲೇಶ್ವರಮ್
ಬೆಂಗಳೂರು-೫೬೦ ೦೦೩
೧೧-೩-೮೪

ಡಾ. ಅನಂತಮೂರ್ತಿಯವರಿಗೆ,

ಇದರ ಜೊತೆ ಕೆಲವು ಪುಟಗಳನ್ನು ಕಳುಹಿಸುತ್ತಲಿದ್ದೇನೆ. ಅವನ್ನು ಪ್ರಕಟಿಸಲೇಬೆಂಬ ಹಟವಿಲ್ಲ, ಆ ಬಗ್ಗೆ ಅವಸರವೂ ಇಲ್ಲ. ಕಾರಣ ಹೀಗೆ.

ಇಂಗ್ಲಿಷಿನಲ್ಲಿ ಹೇಳುವರಲ್ಲವೆ, ‘an idle mind is a devil’s playground’ ಅಂತ? ನನ್ನ ಮಿದುಳು idle ಇಲ್ಲ, ಆದರೆ ವಿಚಾರ ಮಾಡಲು ಬೇಕಾದಷ್ಟು ಪುರುಸೊತ್ತಿದೆ. ಒಮ್ಮೊಮ್ಮೆ ಯಾವ್ಯಾವ ವಿಚಾರಗಳೊ ಕೆಣಕುವುವು, ಅವನ್ನು ಹೊರಗೆ ಹಾಕಲೇಬೇಕಾಗುವುದು. ಆದರೆ ಈ ಪುಟಗಳಲ್ಲಿ ವ್ಯಕ್ತಮಾಡಿದ ವಿಚಾರಗಳು ನನಗೆಯೆ ಸ್ಪಷ್ಟವಾಗಿವೆಯೇ-ಎಂದು ನನಗೆ ಸಂದೇಹ. ಆದುದರಿಂದ, ಅವನ್ನು ಒಂದು ತರ್ಕದೃಷ್ಟಿಯಲ್ಲಿ ಹೊಂದಿಸಿ ತಿಳಿದುಕೊಳ್ಳಲು ಯತ್ನಿಸುತ್ತಿದ್ದೇನೆ.

ನಿಮಗೆ ಬಿಡುವಿದ್ದಾಗ, ಇಷ್ಟವೆನಿಸಿದಾಗ ನೀವು ದಯವಿಟ್ಟು ಓದಬೇಕು, ಓದಿದ ಮೇಲೆಯೇ ಪ್ರಕಟಣೆಗಾಗಿ ಅರ್ಹತೆಯ ವಿಚಾರ. ವಯಸ್ಸಾದ ನನಗೆ ಮುದಿಹುಚ್ಚು ಹಿಡಿದಿದೆ ಎಂದು ರುಜುವಾತಿನ ವಾಚಕರು ತಿಳಿದರೆ ನಮ್ಮಿಬ್ಬರಿಗೂ ಅದೊಂದು ಸೋಲು.

ಓದಿ ಪ್ರಕಟನೆಗೆ ಅನರ್ಹ ಎನ್ನಿಸಿದರೆ ಪುಟಗಳನ್ನು ಕಾಯ್ದಿಡಿರಿ. ಯಾವಾಗಲಾದರೂ ನಿಮ್ಮಿಂದ ತೆಗೆದುಕೊಂಡು ಅವಕ್ಕೆ future ಇದೆಯೆ ಇಲ್ಲವೆ-ನೋಡುವೆ.

ತೊಂದರೆಗಾಗಿ ಕ್ಷಮೆ ಇರಲಿ.

ನಿಮ್ಮ
ಶ್ರೀರಂಗ

ರುಜುವಾತು೧೫,ಜುಲೈಸೆಪ್ಟೆಂಬರ್, ೮೪.

* * *