ವಾದಗ್ರಸ್ತವಾಗದಂತೆ ಚಿಂತಿಸುವುದಿರಲಿ ಸಾಯುವುದೂ ಈ ಕಾಲದಲ್ಲಿ ಸಾಧ್ಯವಿಲ್ಲ ವೆನ್ನುವುದಕ್ಕೆ ಶ್ರೀ ವಿನೋಬಾ ಭಾವೆ ನಿದರ್ಶನ. ಸರ್ವಹಿತ ದೃಷ್ಟಿಯಿಂದ ಚಿಂತಿಸುವುದು ಮತ್ತು ವರ್ತಿಸುವುದು ಸಾಧ್ಯವಾಗಬೇಕೆಂಬ ಹಠ ವಿನೋಬಾರದು. ಆದರೆ, ಉಳುವವನಿಗಾಗಿ ಭೂಮಿಯನ್ನು ದಾನವಾಗಿ ಪಡೆಯಲೆಂದು ದಾಪುಕಾಲು ಹಾಕುತ್ತ ದೇಶಾದ್ಯಂತ ಸಂಚರಿಸಿದ ವಿನೋಬಾರನ್ನು ಧಾರ್ಮಿಕ ಗುಂಗಿನಲ್ಲಿ ಕ್ರಾಂತಿಯ ಕೆಚ್ಚನ್ನು ಮೆದುಗೊಳಿಸಿದ ಪ್ರತಿಗಾಮಿಯೆಂದು ಕಮ್ಯುನಿಸ್ಟರು ದೂರಿದರು. ತುರ್ತು ಪರಿಸ್ಥಿತಿಯನ್ನು ‘ಅನುಶಾಸನ ಪರ್ವ’ವೆಂದು ಹರಸಿದ ಪವನಾರಿನ ಯೋಗಿ ನಮ್ಮಂಥವರಿಗೆ ‘ಸರ್ಕಾರಿ ಸಂತ’ರಂತೆ ಕಂಡರು. ಸವರ್ಣೀಯರು ಇಕ್ಕುವ ಬೆಂಕಿಯಲ್ಲಿ ಹರಿಜನರು ಬೇಯುವಾಗ ಗೋರಕ್ಷಣೆಗಾಗಿ ಅಮರಣಾಂತ ಉಪವಾಸ ಮಾಡಬೇಕೆಂದಿದ್ದ ಇವರ ಹಠಮಾರಿತನ ಅರೆಹುಚ್ಚಿನಂತೆ ತೋರಿತು.

ಭೂದಾನ ಯಜ್ಞ ಘೋಷಿತ ಉದ್ದೇಶದ ದೃಷ್ಟಿಯಿಂದ ಅಯಶಸ್ವಿಯಾಯಿತು, ನಿಜ. ಆದರೆ ಸರ್ಕಾರ ನೇಮಿಸಿದ ಲ್ಯಾಂಡ್ ಟ್ರಿಬ್ಯೂನಲ್‌ಗಳಿಗೆ ಹಂಚಲು ಭೂಮಿ ಸಿಗದಿದ್ದಾಗ, ವಿನೋಬಾರಿಗೆ ಪಾಳುಭೂಮಿಯಾದರೂ ಅಷ್ಟಿಷ್ಟು ಸಿಕ್ಕಿತೆನ್ನಬಹುದು. ತುರ್ತುಪರಿಸ್ಥಿತಿಯನ್ನು ಅನುಶಾಸನ ಪರ್ವವೆಂದು ಕರೆದಿದ್ದ ವಿನೋಬಾರೇ ತಮ್ಮ ಆಶ್ರಯದಲ್ಲಿ ‘ಆಚಾರ್ಯಕುಲ’ವನ್ನು ಸೇರಿಸಿ ಇನ್ನು ತುರ್ತುಪರಿಸ್ಥಿತಿ ಮುಗಿಯಬೇಕು ಎಂಬ ಸರ್ವಾನುಮತದ ನಿರ್ಣಯಕ್ಕೆ ಕಾರಣರಾದರು. ಅವರು ಕಿವುಡಾದದ್ದು ಹರಿಜನರನ್ನು ದೇವಾಲಯ ಪ್ರವೇಶಕ್ಕೆ ಕರೆದೊಯ್ಯುವಾಗ ಕಪಾಳಕ್ಕೆ ಬಿದ್ದ ಏಟಿನಿಂದ.

ವಕ್ರೋಕ್ತಿ ಸಂತನಿಗೆ ಪ್ರಿಯವಾದೀತೆಂದು ನಾವು ಊಹಿಸುವುದಿಲ್ಲ. ವಾರಣಾಸಿಯಲ್ಲಿ ವಿನೋಬಾ ಸಂಸ್ಕೃತ ಕಲಿಯುತ್ತಿದ್ದ ಪ್ರಾಯಕಾಲದಲ್ಲಿ ಕಾಳಿದಾಸನ ‘ಶಾಕುಂತಲ’ದ ಬಗ್ಗೆ ಅವರ ಅಭಿಪ್ರಾಯವೇನೆಂದು ಯಾರೋ ಕೇಳಿದಾಗ ವಿನೋಬಾ ಕುಪಿತರಾಗಿ ತಾನು ದೇವಭಾಷೆಯನ್ನು ಕಲಿತದ್ದು ರಮ್ಯಕೃತಿಗಳನ್ನು ಓದಲೆಂದು ಅಲ್ಲಾ ಎಂದಿದ್ದರಂತೆ. ಆದರೆ ಎಲ್ಲದರಲ್ಲೂ ಋಜುವಾದ್ದನ್ನು ಅರಸುತ್ತಿದ್ದ ಇವರಿಗೆ ಮಾತಿನ ಚಮತ್ಕಾರದಲ್ಲಿ ಖುಷಿಯಿತ್ತೆಂಬುದು ಸೋಜಿಗ. ಅಮೆರಿಕಾದಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಗೆಳೆಯ ಮಾರ್ಟಿನ್ ಗ್ರೀನರು ಗಾಂಧಿ ತತ್ವದಿಂದ ಆಕರ್ಷಿತರಾಗಿ ಭಾರತಕ್ಕೆ ಬಂದು ಕ್ಷೇತ್ರಸನ್ಯಾಸ ಸ್ವೀಕರಿಸಿದ್ದ ವಿನೋಬಾರನ್ನು ಪವನಾರ್ ಆಶ್ರಮದಲ್ಲಿ ಸಂಧಿಸಿದರು. ಮಂಚದ ಮೇಲೆ ಮಲಗಿದ್ದ ವಿನೋಬಾರಿಗೆ ತನ್ನ ವೈಯಕ್ತಿಕ ಸಮಸ್ಯೆಗಳನ್ನು ಕಾಗದದ ಮೇಲೆ ಬರೆದು ತೋರಿಸಿದರು. ಕಿವಿ ಕೇಳಿಸದ ವಿನೋಬಾ ಅದನ್ನು ಕಣ್ಣಿನ ಹತ್ತಿರ ಹಿಡಿದು ಓದಿ ಈ ಮಾತುಗಳನ್ನು ದೇವನಾಗರಿ ಅಕ್ಷರದಲ್ಲಿ ನೋಟ್ ಬುಕ್ ಮೇಲೆ ಬರೆದುಕೊಟ್ಟರು : “ಓಂ ಹರಿ | ನೋ ಹರಿ| ನೋ ವರಿ.” ತನ್ನ ಅನುಮಾನಗಳನ್ನು ಬಿಟ್ಟು ಕೊಡದಂತೆ ಗೌರವದಿಂದ, ಆದರೆ ಮುಜುಗರ ಪಡುತ್ತ, ನಿಂತ ಪಾಶ್ಚಾತ್ಯನೊಬ್ಬನಿಗೆ ಈ ಮಾತಿನ ಚಮತ್ಕಾರದ ಹಿಂದಿದ್ದ ಆಂಗ್ಲ ಸಂಸ್ಕೃಗಳ ಬೆರಕೆಯಲ್ಲಿದ್ದ ಜಾಣಹಾಸ್ಯ ಪರಿಸ್ಥಿತಿಗೆ ಸಮಂಜಸವೆನ್ನಿಸಿತು. ವಿನೋಬಾರಿಂದ ಸಿಡಿದು ಬೇರೆಯಾಗಿದ್ದ ಜಯಪ್ರಕಾಶರು ತುರ್ತುಪರಿಸ್ಥಿತಿ ಮುಗಿದ ಮೇಲೆ ತನ್ನ ಮಾರ್ಗದಲ್ಲಿ ಪವನಾರಿನಲ್ಲಿ ಇಳಿದು ವಿನೋಬಾರನ್ನು ಸಂಧಿಸಿದಾಗ ”ಬಾಬಾನೂ ಜಯಪ್ರಕಾಶರ ದಾರಿಯಲ್ಲಿದ್ದಾನೆ” ಎಂದು ದ್ವಂದ್ವಾರ್ಥದ ಮಾತನ್ನು ಆಡಿದ್ದರೆಂದು ಸರ್ವೋದಯದ ಗೆಳೆಯರೊಬ್ಬರು ನನಗೆ ಹೇಳಿದರು. ಆಗ ವಿನೋಬಾ ಗೋಹತ್ಯದ ವಿರೋಧವಾಗಿ ಸಾತ್ವಿಕ ಸತ್ಯಾಗ್ರಹ ಯೋಚನೆಯಲ್ಲಿದ್ದರು.

ವಿನೋಬಾ ಗಾಂಧೀಜಿಯವರ ಅಣಕವೆ? ಹಾಗೆನ್ನುವವರು ಇದ್ದಾರೆ. ನಾಯಪಾಲ್ ಅಂಥವರಲ್ಲಿ ಒಬ್ಬರು. ಗಾಂಧಿಯನ್ನು ವಿನೋಬಾ, ತಮ್ಮ ಕ್ರಿಯೆಯಲ್ಲೂ ಚಿಂತನೆಯಲ್ಲೂ ಅತಿಗೆ ಕೊಂಡೊಯ್ದರು. ಹಲವು ಮಕ್ಕಳಾದ ಮೇಲೆ ತಮ್ಮ ಕಾಮುಕತೆಯ ವಿರುದ್ಧ ಹೋರಾಡುತ್ತ ಗಾಂಧೀಜಿ ಬ್ರಹ್ಮಚರ್ಯ ವ್ರತ ಹಿಡಿದರು. ವಿನೋಬಾ ಬಾಲ್ಯದಿಂದಲೇ ಬ್ರಹ್ಮಚಾರಿ: ‘ಶಾಕುಂತಲ’ ವನ್ನು ನಿಕೃಷ್ಟವಾಗಿ ಕಂಡ ಬ್ರಹ್ಮಚಾರಿ. ಗಾಂಧೀಜಿ ದಂಡಿಯ ಉಪ್ಪಿನ ಸತ್ಯಾಗ್ರಹದ ಮತ್ತು ನವಾಖಲಿಯ ಹತ್ಯಾಖಾಂಡದ ಸಂದರ್ಭದಲ್ಲಿ ನಡೆದರೆ ವಿನೋಬಾ ದೇಶಾದ್ಯಂತ ವರ್ಷಗಟ್ಟಲೆ ನಡೆದರು. ಗಾಂಧೀಜಿ ಆಗೀಗ ಮೌನ ಆಚರಿಸಿದರೆ ವಿನೋಬಾ ವರ್ಷಗಟ್ಟಲೆ ಮೌನ ಆಚರಿಸಿದರು. ಗಾಂಧೀಜಿ ತನ್ನ ದೇಶದ ಸರ್ಕಾರದ ಕಪಟ ನೀತಿ ಮತ್ತು ಮತೀಯ ಹಿಂಸೆಯ ಬಗ್ಗೆ ತಮ್ಮ ಕೊನೆಯ ಉಪವಾಸ ಮಾಡಿದರೆ ವಿನೋಬಾ ಗೋಹತ್ಯೆಯ ವಿರುದ್ಧ ಉಪವಾಸ ಮಾಡುವ ಸಂಕಲ್ಪ ಕೈಗೊಂಡಿದ್ದರು. ಭಾರತದ ಒಳಗಿನ ಹೊಲಸು ಮತ್ತು ರಾಜಕೀಯ ದಾಸ್ಯ – ಈ ಎರಡನ್ನೂ ತೊಡೆದು ಹಾಕಲೆಂದು ತನ್ನನ್ನು ತೊಡಗಿಸಿಕೊಂಡು, ಈ ತೊಡಗುವಿಕೆಯ ಸಂದರ್ಭದಲ್ಲೇ ತನ್ನನ್ನು ಶೋಧಿಸಿಕೊಳ್ಳುತ್ತಾ ರಾಜಕೀಯವನ್ನೂ ಧರ್ಮವನ್ನೂ ಬೆಸೆಯಲು ಗಾಂಧೀಜಿ ಹೆಣಗಿದರು. ತನ್ನನ್ನು ನೋಡಲು ಬರುತ್ತಿದ್ದ ಆಡಳಿತ ಪಕ್ಷದ ರಾಜಕಾರಣಿಗಳ ಕಪಟವನ್ನು ಕಾಣಲಾರದಷ್ಟು ವಿನೋಬಾ ಪೂರ್ಣ ಶುದ್ಧಿಯ ಹುಡುಕಾಟದಲ್ಲಿ ಮಂಕಾದರು. ಕಾಮ, ಹಿಂಸೆ, ಸಂಬಂಧದ ಬಿಕ್ಕಟ್ಟುಗಳು, ಕ್ರೌರ್ಯ- ಇತ್ಯಾದಿಯಾಗಿ ಸಾಂಸಾರಿಕನಾದವನು ಅನುಭವಿಸುವ, ಇತರರಲ್ಲಿ ತಾನು ದ್ವೇಷಿಸುವಂಥದೂ ತನ್ನ ಸಾಧ್ಯತೆಯೆಂದೂ ಗುರುತಿಸಿಕೊಳ್ಳುವ, ಈ ನಮ್ಮ ಮೋಹದ ಪ್ರಪಂಚದ ಹಂಗಿಲ್ಲದಂತೆ ಬದುಕುವಾತ ಅರಿಯಬಲ್ಲ ಸತ್ಯಗಳು ಕೇವಲ ಅಮೂರ್ತವಾಗುತ್ತವೆಯೇ? ಕಾವಿಲ್ಲದೆ ಸತ್ವಹೀನವಾಗುತ್ತವೆಯೆ? ಇಂಥ ಪ್ರಶ್ನೆಗಳು ವಿನೋಬಾರ ಸೋಲಿನಲ್ಲೂ ಗೆಲುವಿನಲ್ಲೂ ನಮಗೆ ಎದುರಾಗುತ್ತವೆ.

ಇಷ್ಟಿದ್ದೂ ಗಾಂಧೀಯುಗದ ಈ ಕೊನೆಯ ದೊಡ್ಡ ಮನುಷ್ಯನಿಗೆ ಕೆಲವು ಸ್ಪಷ್ಟ ಕಲ್ಪನೆಗಳಿದ್ದವು. ಸಾಕಷ್ಟು ನಿದ್ದೆಯಿಲ್ಲದಂತೆ ದೇಶದ ರಗಳೆ ಹಚ್ಚಿಕೊಂಡಿದ್ದ ಪಂಡಿತ ಜವಹರಲಾಲರು ಅಧಿಕಾರವನ್ನು ಯಾಕೆ ವಿಕೇಂದ್ರಿಕರಿಸಬೇಕು ಎನ್ನುವುದಕ್ಕೆ ವಿನೋಬಾ ಕೊಟ್ಟ ಉಪಮೆ ಸ್ವಾರಸ್ಯಕರವಾಗಿದೆ. ಭಗವಾನ್ ವಿಷ್ಣು ಇಡೀ ವಿಶ್ವದ ಪಾಲಕನಾಗಿದ್ದೂ ಲಕ್ಷ್ಮಿಯ ಜೊತೆ ಶೇಷಶಾಯಿಯಾಗಿ ನಿಶ್ಚಿಂತೆಯಿಂದ ಪವಡಿಸಿಲ್ಲವೆ? ಇದಕ್ಕೆ ಕಾರಣ? ಜಗತ್ತಿನ ಜೀವಿಗಳೆಲ್ಲರಿಗೂ ಅವರವರ ಕರ್ಮದ ಫಲವನ್ನು ಅನುಭವಿಸುತ್ತಾರೆ ಎಂದು ವಿಷ್ಣು ತನ್ನ ಅಧಿಕಾರವನ್ನು ವಿಕೇಂದ್ರಿಕರಿಸಿದ್ದರಿಂದ.

ವಿನೋಬಾ ಗಾಂಧಿಯುಗದ ಕೊನೆಯ ಅನಾರ್ಕಿಸ್ಟರು; ಮನುಷ್ಯ ತನ್ನ ಒಳ್ಳೆಯತನದ ಸಹಜ ವಿಕಾಸದಿಂದ ಸರ್ಕಾರದ ಪ್ರಭುತ್ವವನ್ನು ಕ್ರಮೇಣ ಅನವಶ್ಯಕಗೊಳಿಸುತ್ತಾನೆಂದು ತಿಳಿದಿದ್ದ ಆದರ್ಶವಾದಿಗಳು. ಈ ಆದರ್ಶದ ಸಾಧನೆಗಾಗಿ ಗ್ರಾಮರಾಜ್ಯದ ಕಲ್ಪನೆಗೆ ರೂಪ ಕೊಟ್ಟವರು. ಅದಕ್ಕೆ ಭಾರತ ಹಿಡಿದಿರುವ ದಿಕ್ಕೇ ಪಾಶ್ಚಾತ್ಯ ಮಾದರಿಯ ಆಧುನಿಕತೆಯಾದ್ದರಿಂದ ವಿನೋಬಾರ ಕನಸುಗಾರಿಕೆ ನಮಗೆ ಕಿಂಚಿತ್ತೂ ಕ್ರಿಯಾಶೀಲವೆಂದು ಅನ್ನಿಸಲಿಲ್ಲ. ಅವರ ವಿಷ್ಣು ಸಹಸ್ರನಾಮದ ಪಠನ ಅವರ ‘ಜೈಜಗತ್’ ಘೋಷ, ಅವರ ಮೌನ, ಮನುಷ್ಯ ಸ್ವಭಾವದ ಅರಿವಿಲ್ಲದ ಅವರ ನಿಷ್ಠುರ ವ್ರತಾಚರಣೆ – ಈ ಎಲ್ಲವೂ ನಂಬಿದವರಿಗೆ ಹಿತವೆನ್ನಿಸುವ, ನಂಬದವರಿಗೆ ಅಸಂಬದ್ಧವೆನ್ನಿಸುವ ವ್ಯಕ್ತಿಗತ ಮಾಂತ್ರಿಕತೆಯಾಗಿಬಿಟ್ಟಿತ್ತು. ಕೇವಲ ತಂತ್ರವನ್ನು ಕಲಿತುಕೊಂಡು, ಆದರೆ ಮಂತ್ರವನ್ನು ಮರೆತು ಆಡಿಸಿದ ಮಂತ್ರದಂಡದಂತೆ ಕಂಡಿತು. ಗಾಂಧೀವಾದಕ್ಕೆ ಕ್ರಿಯಾಶೀಲತೆಯ ಹಲ್ಲು ಉಗುರುಗಳನ್ನು ಕೊಡಲು ಇನ್ನಿಬ್ಬರು ಶ್ರಮಿಸಿದರು – ಜಯಪ್ರಕಾಶ್ ಮತ್ತು ಲೋಹಿಯಾ. ಜಯಪ್ರಕಾಶರ ಆಂದೋಳನ ಬರಡು ನೈತಿಕತೆಯ ಅಹಂಕಾರದ, ಸ್ವಪ್ರತಿಷ್ಠೆಯ ಮೊರಾರ‍್ಜಿಯವರನ್ನು ಅಧಿಕಾರಕ್ಕೆ ತಂದಿತು. ಲೋಹಿಯಾವಾದ ಸ್ವಪ್ರದರ್ಶನ ರತಿಯ ಹುಂಬರನ್ನು ಬೆಳೆಸಿತು. ಗಾಂಧೀಜಿ, ಜಯಪ್ರಕಾಶ್, ಲೋಹಿಯಾ – ಇವರು ನಿರೀಕ್ಷಿಸದೇ ಇದ್ದ ಅಣಕಗಳು ಇವು ಎಂದು ಹೇಳಿಬಿಡುವುದು ಸುಲಭ. ಈ ದೊಡ್ಡವರ ಚಿಂತನಾಕ್ರಮ ಮತ್ತು ಕಾರ್ಯವಿಧಾನಗಳಲ್ಲೆ ಈ ಅಣುಕು ಸಾಧ್ಯತೆ ಅಡಗಿದೆಯೆ, ಅದನ್ನು ನಿವಾರಿಸುವುದು ಸಾಧ್ಯವೇ- ಈ ವಿಮರ್ಶೆಯ ಎಚ್ಚರದಲ್ಲಿ ಕಂಗೆಟ್ಟ ನಮ್ಮ ಕಾಲಕ್ಕೆ ಗಾಂಧಿಯ ಅನ್ವಯದ ಸಾಧ್ಯತೆಯನ್ನು ಹುಡುಕಿಕೊಳ್ಳಬೇಕಾಗಿದೆ.

ರುಜುವಾತು : , ಅಕ್ಟೋಬರ್ಡಿಸೆಂಬರ್, ೮೨.

* * *