ನನ್ನನ್ನು ಆಳವಾಗಿ ಕಲಕಿದ ಘಟನೆಯೊಂದನ್ನು ಮೊದಲು ಹೇಳುತ್ತೇನೆ. ಕರ್ನಾಟಕದ ಜನತಾ ಪಾರ್ಟಿಯ ಕರ್ತಾರರೂ ಸೋಶಿಯಲಿಸ್ಟ್ ಟ್ರೇಡ್ ಯೂನಿಯನ್ನಿನ ನಾಯಕರೂ ಆದ ದಿವಂಗತ ಶ್ರೀ ವೆಂಕಟರಾಮ್‌ರವರ ಪುಸ್ತಕವೊಂದರ ಬಿಡುಗಡೆಯಾಗಿ ಕೆಲವು ದಿನಗಳ ಹಿಂದೆ ನಾವು ನೆರೆದಿದ್ದಾಗ ಇದು ನಡೆಯಿತು. ಸಮಾಜವಾದಿ ಚಳವಳಿಯ ಪ್ರಮುಖ ನೆಲೆಯಾಗಿದ್ದ ನನ್ನ ತವರು ಜಿಲ್ಲೆ ಶಿವಮೊಗ್ಗದಿಂದ ಒಬ್ಬ ಯುವಕ ನನ್ನನ್ನು ನೋಡಲೆಂದು ಬಂದಿದ್ದ. ಆತ ಹಿಂದೆ ವಿದ್ಯಾರ್ಥಿ ಮುಖಂಡ; ತುರ್ತು ಪರಿಸ್ಥಿತಿಯ ಕಾಲದಲ್ಲಿ ನಿರ್ಭಯವಾಗಿ ಕೆಲಸ ಮಾಡಿದ. ಗಂಜಿ ಹಾಕಿ ಇಸ್ತ್ರಿ ಮಾಡಿದ ಖಾದಿ ಬಟ್ಟೆಯ ಆ ಉಡುಪಿನಲ್ಲಿ ಆತನನ್ನು ಯಾರು ಮೊದಲೆಂದೂ ಕಂಡಿರಲಿಲ್ಲ. ಈ ಉಡುಪಿಂದಾಗಿ ಅವನು ನನಗೆ ಆಶ್ಚರ್ಯವಾಗಿತ್ತು. ಆತ ಈಗ ಎಲ್ಲಿದ್ದಾನೆ? ಎನ್ನುವ ಅನಿವಾರ್ಯ ಪ್ರಶ್ನೆಯನ್ನು ನಾನು ಕೇಳಬೇಕೆಂದೂ, ತನನ್ ಉತ್ತರ ಒಪ್ಪಿಸಿ ಪಾರಾಗಬೇಕೆಂದೂ ತವಕದಿಂದ ಅವನು ಕಾಯುತ್ತಿದ್ದ. ತಪ್ಪಿತಸ್ಥನ ಹಾಗೆ ಹೇಳಿದ: “ಬೇರೆಲ್ಲಿಗೆ ಹೋಗಲಿ? ನಮ್ಮ ನಾಯಕ ಈಗೆಲ್ಲಿದ್ದಾನೋ ಅಲ್ಲೇ ನಾನು ಇದ್ದೇನೆ”. ಸರಿ, ಆತ ಹೊಸದಾಗಿ ಸಂಪಾದಿಸಿದ್ದ ಈ ಗಂಜಿ ಹಾಕಿ ಇಸ್ತ್ರಿ ಮಾಡಿದ ಉಡುಪನ್ನು ನೋಡಿ ನಾನು ಅರ್ಧ ಸಂಶಯಿಸಿದ್ದ ಹಾಗೆ, ಆತನ ನಾಯಕ-ಒಂದು ಕಾಲಕ್ಕೆ ನಮ್ಮ ಜಿಲ್ಲೆಯ ರೈತ ಚಳುಳವಿಯಲ್ಲಿ ಯುವಸಮಾಜವಾದಿ ನಾಯಕನಾಗಿ ಬಿರುಸಿನ ಹೋರಾಟಗಾರನಾಗಿದ್ದವ-ಕೂಡ ಕಾಂಗ್ರೆಸ್ (ಐ) ಸೇರಿ ಮಂತ್ರಿಯಾದುದರಿಂದ, ಇವನೂ ಕಾಂಗ್ರೆಸ್ (ಐ) ನಲ್ಲಿದ್ದ. ಹಾಗಿದ್ದರೂ, ಒಂದು ಕಾಲಕ್ಕೆ ತನ್ನ ಸ್ಫೂರ್ತಿಯ ಸೆಲೆಯಾಗಿದ್ದ ವೆಂಕಟರಾಮ್‌ರವರ ಬಗ್ಗೆ ದುಃಖ ಸೂಚಿಸಲು ಅಷ್ಟು ದೂರದಿಂದ ಬೆಂಗಳೂರಿಗೆ ಬಂದಿದ್ದನಲ್ಲ ಎಂಬುದು ನನ್ನನ್ನು ಕಲಕಿತ್ತು.

ಈ ಯುವಕನ ಈ ಕಥೆ, ನನಗನ್ನಿಸುವ ಹಾಗೆ, ಪ್ರಜಾಪ್ರಭುತ್ವವಾದೀ ರಾಜಕೀಯ ಪಕ್ಷಗಳ ಯುವ ಚಳುವಳಿಗಳಿಗೆ ಸೇರಿದ ಅನೇಕ ಯುವಜನರ ಕಥೆಯೂ ಕೂಡ. ತಮ್ಮ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸಿ, ಈ ಸ್ಪರ್ಧಾ ಪ್ರಪಂಚದಲ್ಲಿ ಯಶಸ್ಸು ಪಡೆಯುವ ಆಕಾಂಕ್ಷೆಗಳನ್ನು, ಆದರ್ಶಗಳಿಗೆ ಕನಸುವ ತಮ್ಮ ಎಳೆಯ ಪ್ರಾಯದಲ್ಲಿ ತ್ಯಜಿಸಿ, ಎಡಪಂಥೀಯರಾದವರು ಇವರು. ಸಂಸಾರದಿಂದ ಹಿರಿಯರಿಗೆ ಇವರ ಬಗ್ಗೆ ಚಿಂತೆ ಹತ್ತಿಕೊಂಡಿರುತ್ತದೆ. ತಮ್ಮ ಅಗತ್ಯದ ಖರ್ಚಿಗಾಗಿ ಸಹಾ ಮನೆಯಿಂದ ಹಣವನ್ನು ಇವರು ಕೇಳುವಂತಿಲ್ಲ. ಮನೆಯಿಂದ ದೂರಾಗುತ್ತ ಹೋದ ಹಾಗೆ ಅವರು ತಮ್ಮ ದೈನಂದಿನ ಅಗತ್ಯಗಳಿಗೆ ಯಾರಾದರೊಬ್ಬ ರಾಜಕೀಯ ಪಕ್ಷದ ಸ್ಥಳೀಯ ಮುಖಂಡನ ಮೇಲೇ ಹೆಚ್ಚು ಹೆಚ್ಚು ಆತುಕೊಳ್ಳಲಿಕ್ಕೆ ಪ್ರಾರಂಭಿಸುತ್ತಾರೆ. ಆತ ವಿರೋಧ ಪಕ್ಷದ ನಾಯಕನೇನಾದರೂ ಆಗಿದ್ದರೆ, ತನ್ನ ಸುತ್ತಲಿರುವ ಯುವ ಜನರಿಗೆ ತಾವೆಲ್ಲರೂ ಮೂಲಭೂತವಾದ ಹಾಗೂ ಪ್ರಮುಖವಾದ ಸಾಮಾಜಿಕ ಬದಲಾವಣೆಗಳಿಗಾಗಿ ಹೋರಾಡುತ್ತಿದ್ದೇವೆಂಬ ಭ್ರಮೆಯಲ್ಲಿರುವಂತೆ ಮಾಡುತ್ತಾನೆ. ಹೆಚ್ಚಿನ ಸಾರಿ, ರಾಜಕೀಯ ಸಂಘಟನೆಗಳಲ್ಲಿ ಕೆಲಸ ಮಾಡುವ ಈ ಯುಕವರಿಗೆ ಅವರ ನಾಯಕರ ಸೂಕ್ಷ್ಮವಾದ ಮತ್ತು ಗೊಂದಲಮಯವಾದ ಮನಸ್ಸಿನ ವ್ಯಾಪಾರಗಳ ಸುಳಿವು ತಿಳಿಯುವುದೇ ಇಲ್ಲ. ಅವರ ನಾಯಕರು ಆಡಳಿತದಲ್ಲಿರುವ ಪಕ್ಷದ ಜತೆಗೆ ನಿರತರಾಗಿರುವುದು ಕೇವಲ ಹುಸಿಯುದ್ಧದಲ್ಲಿ ಎಂಬುದು ಅವರಿಗೆ ಗೊತ್ತಿರುವುದಿಲ್ಲ. ತಮ್ಮ ನಾಯಕರ ಉದ್ರೇಕಕಾರಿ ಭಾಷಣಗಳನ್ನು, ಮಾತುಗಳನ್ನು ತುಂಬ ಪ್ರಾಮಾಣಿಕವಾದದ್ದೆಂದು ಅವರು ಸ್ವೀಕರಿಸಿ ಬಿಡುತ್ತಾರೆ. ಹೆಚ್ಚೆಚ್ಚು ಉದ್ರೇಕಕಾರಿಯಾಗಿರುವ ಭಾಷಣಗಳು, ಪ್ರಾಯಶಃ ಆಳುವ ಪಕ್ಷಕ್ಕೆ ಅವರು ತೀರ ಸಮೀಪವಾಗುತ್ತಿರುವುದನ್ನು ಮುಚ್ಚಿಡುವ ಉಪಾಯಗಳು ಇರಬಹುದೆಂಬ ಅನುಮಾನ ಅವರನ್ನು ಕಾಡುವುದಿಲ್ಲ. ತನ್ನ ತಪ್ಪನ್ನು ಆತ ಗುರುತಿಸಿಕೊಳ್ಳುವಷ್ಟರೊಳಗೇ ತನ್ನ ದೈನಂದಿನ ಅಗತ್ಯಗಳಿಗೆ ಆತ ಎಂದಿಗಿಂತ ಹೆಚ್ಚಾಗಿ ತನ್ನ ನಾಯಕನ ಮೇಲೆ ಅವಲಂಬಿತ ನಾಗಿರುತ್ತಾನೆ; ಹಾಗಾಗಿ ಅವನ ಆದರ್ಶವಾದ ನಿಧಾನವಾಗಿ ಲಡ್ಡಾಗುತ್ತಿರುತ್ತದೆ. ತನ್ನ ನಾಯಕ ಪಕ್ಷಾಂತರ ಮಾಡಿ, ಅದಕ್ಕೆ ಕಾರಣಗಳನ್ನು ನೀಟಾಗಿ ತರ್ಕಸಮ್ಮತವಾಗುವ ಹಾಗೆ ವಿವರಿಸಿದ ಮೇಲೆ, ತನ್ನ ದಿನನಿತ್ಯ ಪೂರೈಕೆಗಳ ಅಗತ್ಯಗಳೂ ಅದರಲ್ಲಿ ಬೆರೆತುಕೊಂಡಿರುವುದರಿಂದ ಆತ ಅದನ್ನು ಒಪ್ಪಿಕೊಂಡುಬಿಡುತ್ತಾನೆ. ಈಗ ಇವನು ಮಧ್ಯವರ್ತಿಯಾಗಿಬಿಟ್ಟು, ತನ್ನ ನಾಯಕನ ಏಜೆಂಟನಾಗುತ್ತಾನೆ. ಜನರು, ಆ ನಾಯಕನಿಂದ ತಮಗೆ ಆಗಬೇಕಾದ ಕೆಲಸಗಳಿಗಾಗಿ ಇವನನ್ನು ಓಲೈಸಲು ಬರುತ್ತಾರೆ. ಇವನಿಗೆ ಶೇಕಡಾವಾರು ಲಾಭ.ಆದರೆ ಪ್ರಾಯಶಃ ಈಗಲೂ, ತನ್ನ ಅತ್ಯಂತ ಒಳ ಪ್ರಜ್ಞೆಯಲ್ಲಿ ಅವನಿಗೆ ತಾನು ತಪ್ಪಿತಸ್ಥನೆಂದು ಅನ್ನಿಸುತ್ತಲೇ ಇರುತ್ತದೆ.

ಎಲ್ಲರಿಗೂ ಹೀಗಾಗುತ್ತದೆಂದು ನಾನೇನು ಹೇಳುತ್ತಿಲ್ಲ. ಸತ್ವವುಳ್ಳವರು ಈ ಸೆಳವುಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ಉಳಿದ ಅಧಿಕ ಸಂಖ್ಯಾತರಿಗೆ ಇದು ಸಾಧ್ಯವಾಗುವುದಿಲ್ಲ.

ಇದನ್ನು ಹೇಗೆ ತಡೆಗಟ್ಟಬಹುದು? ನನಗೆ ತಿಳಿದ ಹಾಗೆ, ಒಂದೇ ಒಂದು ದಾರಿಯೆಂದರೆ-ಪಕ್ಷಕ್ಕೆ ಸಂಬಂಧಿಸಿ ಕೆಲಸ ಮಾಡುತ್ತಿರುವ ಕ್ರಿಯಾಶೀಲ ಯುವಕರಿಗೆ ಬದುಕನ್ನು ನಿರ್ವಹಿಸಲಿಕ್ಕೆ ಬೇಕಾದ ಅಗತ್ಯಗಳನ್ನು ಪೂರೈಸುವುದು. ಇದು ವ್ಯಕ್ತಿ ನಿರಪೇಕ್ಷವಾಗಿ ನಡೆಯಬೇಕು. ಒಂದು ರಾಜಕೀಯ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಯುವಕರು ಯಾವನೇ ಒಬ್ಬ ವ್ಯಕ್ತಿಯ ನೇರ ಆಶ್ರಯದಲ್ಲಿ ಸಿಕ್ಕಿಕೊಳ್ಳಬಾರದು. ಹೊಸನಾಯಕತ್ವದ ಉದ್ಭವಕ್ಕೆ ಮತ್ತು ರಾಜಕೀಯ ಸಂಘಟನೆಯ ಸತತವಾಗಿ ಜೀವಂತವಾಗಿಡುವುದಕ್ಕೆ ಸಾಧ್ಯವಾಗಬಲ್ಲ ಕ್ರಿಯಾತ್ಮಕ ಯುವಪಡೆಯೊಂದನ್ನು ಬೆಳೆಸಬೇಕಾಗಿದ್ದರೆ, ಇದು ಬಹಳ ಪ್ರಮುಖ ಹಾಗೂ ಅಗತ್ಯ.

ಒಂದು ಆರೋಗ್ಯಕಾರಿ ಯುವ ಚಳವಳಿಗಾಗಿ ನಾನು ಮುಂದಿಡುವ ಎರಡನೆಯ ಷರತ್ತೆಂದರೆ ಇದು: ನಮ್ಮ ರಾಜಕೀಯ ಭಾಷಣಗಳ ಹಾಗೂ ಚರ್ಚೆಗಳ ಸ್ವರೂಪದಲ್ಲಿ ಸಂಪೂರ್ಣವಾದ ಬದಲಾವಣೆಯಾಗಬೇಕು. ನಾವು ಸಾರ್ವಜನಿಕವಾಗಿ ಆಡುವ ಎಲ್ಲ ಮಾತುಗಳೂ ಸ್ಪಷ್ಟವಾದ ತಾತ್ವ್ತಿಕ ಮತ್ತು ವ್ಯಾವಹಾರಿಕ ತಿಳಿವಿನ ಮೇಲೆ ಭದ್ರವಾಗಿ ನೆಲೆಗೊಂಡಿರಬೇಕು. ಇಲ್ಲವಾದರೆ ಜನಸಾಮಾನ್ಯರು ದಿಗ್ಭ್ರಮೆಗೊಂಡು ಎಲ್ಲ ಚತುರ ರಾಜಕೀಯ ಭಾಷಣಗಳ ಬಗ್ಗೆಯೂ ಸಂಶಯಗ್ರಸ್ತರಾಗುತ್ತ ಹೋಗುತ್ತಾರೆ. ಯಾಕೆ ಒಬ್ಬ ರಾಜಕಾರಣಿ ಆಡಳಿತ ಪಕ್ಷದಲ್ಲಿದ್ದಾಗ ಒಂದು ರೀತಿ ಮಾತಾಡಿ, ವಿರೋಧಪಕ್ಷದಲ್ಲಿದ್ದಾಗ ಸಂಪೂರ್ಣ ಬೇರೆಯೇ ರೀತಿಯಲ್ಲಿ ಮಾತಾಡುತ್ತಾನೆ? ಒಂದು ದಿನ, ಕ್ರಿಯಾಶೀಲ ದಲಿತ ಯುವ ಬರಹಗಾರ ದೇವನೂರ ಮಹಾದೇವ ನನಗೆ ಹೇಳಿದರು: ‘ಇದು ಬರೇ ನಾಟಕವೇ? ಅವರು ಅವಸರದಲ್ಲಿ ವೇಷ ಬದಲಾಯಿಸಬಲ್ಲ ನಟರು ಮಾತ್ರರೆ?” ಈಗ ವಿರೋಧ ಪಕ್ಷದಲ್ಲಿರುವ ಈ ಯುವ ಸಮಾಜವಾದಿ ನಾಯಕನಿಗೆ ತಾನು ಮಂತ್ರಿಯಾಗಿದ್ದಾಗ ಈ ಸಾಮಾಜಿಕ-ಆರ್ಥಿಕ ಸಮಸ್ಯೆಗಳ ಬಗ್ಗೆ ತಿಳಿವೇ ಇರಲಿಲ್ಲವೇ? ಅಷ್ಟು ಬೇಗ ಇವ ಮಾನವೀಯನೂ ಪ್ರಜ್ಞಾವಂತನೂ ಆಗಬಲ್ಲನೇ? ವಾಸ್ತವವನ್ನು ಗುರುತಿಸುವ ನಮ್ಮ ಸಂವೇದನೆಗಳು ಅಷ್ಟು ಮೂಲಭೂತವಾಗಿ ಮತ್ತು ಥಟ್ಟನೆ ಬದಲಾಗಬಲ್ಲವೇ? ಇವರೆಲ್ಲರೂ ತಾವು ಸದ್ಯ ಹಾಕಿಕೊಂಡ ವೇಷದ ಅಗತ್ಯಗಳನ್ನು ಮಾತ್ರ ಪೂರೈಸುತ್ತಿದ್ದಾರೆಯೇ? ನಮ್ಮ ರಾಜಕೀಯದ ಸ್ವರೂಪ ಈ ನಿಟ್ಟಿನಿಂದ ಬದಲಾಗದೇ ಉಳಿದರೆ ಜನರು ಇನ್ನಷ್ಟು ಅನುಮಾನಿಗಳಾಗಿ ರಾಜಕೀಯದ ನೈತಿಕತೆಯನ್ನೇ ಪ್ರಶ್ನಿಸುವುದು ಖಂಡಿತ. ಆದುದರಿಂದ ಈ ಕೆಳಗಿನ ವಿಷಯಗಳ ಬಗ್ಗೆ ನಿಮಗೆ ಸ್ಪಷ್ಟವಾದ ಅರಿವಿರಬೇಕೆಂಬುದು ನನ್ನ ಕಳಕಳಿಯ ಸೂಚನೆ:

ಅ) ನಮ್ಮ ದೇಶ ಎದುರಿಸುತ್ತಿರುವ ಕಡು ಕಷ್ಟಗಳಲ್ಲಿ ಯಾವುದೇ ರಾಜಕೀಯಪಕ್ಷ ಅಧಿಕಾರಕ್ಕೆ ಬಂದರೂ ಮಾಯವಾಗದೇ ಉಳಿದುಬಿಡುವ ಕಷ್ಟಗಳು ಯಾವುವು?

ಆ) ಸದ್ಯದ ಸಾಮಾಜಿಕ, ಆರ್ಥಿಕ ಹಾಗೂ ಬ್ಯೂರೋಕ್ರಟಿಕ್ ವ್ಯವಸ್ಥೆಯಲ್ಲಿ ಯಾವುದೇ ಸರಕಾರವಾದರೂ-ಅದು ಶ್ರೀಮತಿ ಇಂದಿರಾಗಾಂಧಿಯವರ ನಾಯಕತ್ವದ್ದಿರಲಿ ಅಥವಾ ಶ್ರೀ ಚಂದ್ರಶೇಖರ್‌ರವರ ನಾಯಕತ್ವದ್ದೇ ಇರಲಿ-ಕಾನೂನಿನ ಮೂಲಕ ಮಾಡಬಹುದಾದ್ದು ಮತ್ತು ಕೇವಲ ಶಾಸನದ ಮೂಲಕ ಮಾಡಲಿಕ್ಕೆ ಸಾಧ್ಯವಾಗದೇ ಇರಬಹುದಾದ್ದು ಏನು?

ಇ) ಹಾಗಿದ್ದಲ್ಲಿ ಇದನ್ನು ಮೀರಲಿಕ್ಕೆ ಜನರಿಂದ ಯಾವ ರೀತಿಯ ತ್ಯಾಗಗಳು ಮತ್ತು ಸಹಭಾಗಿತ್ವಗಳು ಅಗತ್ಯ?

“ಅನುಕೂಲ ರಾಜಕಾರಣ”ದ ಹೆಸರಲ್ಲಿ ನಾವು ಜನರನ್ನು ಮೋಸ ಮಾಡಬಾರದು. ಪ್ರತೀ ಸಾರಿ ಇಂದಿರಾಗಾಂಧಿಯನ್ನು ಅಥವಾ ಜನತಾಪಕ್ಷವನ್ನು ಅಧಿಕಾರಕ್ಕೇರಿಸಿದಾಗಲೂ ನಮ್ಮ ಜನ, ಏನೋ ಪವಾಡ ಸಂಭವಿಸುತ್ತದೆಯೆಂಬ ಭ್ರಮೆಯಲ್ಲಿದ್ದರು. ಆದರೆ ಹಾಗಾಗಲಿಲ್ಲ. ಅದರಿಂದಾಗಿ ಅವರು ವಂಚಿತರಾಗಿದ್ದಾರೆ. ನಾವು ಅವೇ ತಪ್ಪುಗಳನ್ನು ಪುನಃ ಮಾಡುವ ಹಾಗಾಗಬಾರದು. ನಮ್ಮ ಇವತ್ತಿನ ಕಷ್ಟಗಳೇನು ಅನ್ನುವುದರ ಬಗ್ಗೆ ನಮಗೆ ಸ್ಪಷ್ಟವಾದ ಗ್ರಹಿಕೆಯಿರಬೇಕು. ಇದರಲ್ಲಿ ಎಷ್ಟು ಇಂದಿರಾ ಸರಕಾರದ ತಪ್ಪುಗಳಿಂದ ಫಲಿಸಿದ್ದು ಮತ್ತು ಎಷ್ಟು, ಒಂದು ವೇಳೆ ಜನತಾಪಕ್ಷವೇ ಅಧಿಕಾರದಲ್ಲಿದ್ದರೂ, ಇದ್ದೇ ಇರುವಂಥವು? ಈ ಬಗ್ಗೆ ನಾವು ಪ್ರಾಮಾಣಿಕವಾಗಿದ್ದರೆ, ರಾಜಕೀಯ ಪಕ್ಷಗಳನ್ನು ಚಾಲನೆಯಲ್ಲಿಡುತ್ತಾ ಬಂದಿರುವ ಮೆಲೋಡ್ರಾಮವನ್ನು, ಜನರಂಜಕ ಚತುರ ಜೆಶ್ಚರ್‌ಗಳನ್ನು ಬಿಟ್ಟುಕೊಡಬೇಕಾಗಿ ಬರುತ್ತದೆ. ಇದರಿಂದಾಗಿ, ಖಂಡಿತ ಜನರ ಜತೆ ನಮ್ಮ ವಿಶ್ವಾಸಾರ್ಹತೆಯ ಮಟ್ಟ ಅಧಿಕವಾಗಿರುತ್ತದೆ. ಉದಾಹರಣೆಗೆ-ಕಾಂಗ್ರೆಸ್ (ಐ)ಯನ್ನೇ ತೆಗೆದುಕೊಳ್ಳಿ. ತಾವುಅಧಿಕಾರದಲ್ಲಿರುವಲ್ಲಿ ಯಾವುದೇ ಮುಷ್ಕರಗಳಾಗಲೀ, ಚಳವಳಿಗಳಾಗಲೀ ಅವರಿಗೆ ಬೇಡ. ಅಲ್ಲೆಲ್ಲ ದೇಶ ಕಟ್ಟುವ ಪವಿತ್ರ ಕಾರ್ಯದಲ್ಲಿ ಎಲ್ಲ ಜನರೂಒಟ್ಟು ಸೇರಬೇಕೆಂಬ ಹಂಬಲ ಅವರಿಗೆ. ಆದರೆ ತಾವು ಅಧಿಕಾರದಲ್ಲಿಲ್ಲದ ಬಂಗಾಳ ಅಥವಾ ಕೇರಳದಂಥ ರಾಜ್ಯಗಳಲ್ಲಿ ಗೊಂದಲಬೇಕು ಅವರಿಗೆ. ಇಲ್ಲದಿದ್ದರೆ ಗೊಂದಲವನ್ನು ಅವರೇ ಸೃಷ್ಟಿಸುತ್ತಾರೆ. ಇದು ಅಪ್ಪಟ ಸಿನಿಕತನ. ಜೀವನದುದ್ದಕ್ಕೂ ಹಸಿವಿನಲ್ಲಿ ಬದುಕುತ್ತಿದ್ದರೂ, ಸ್ವಮರ್ಯದೆಯನ್ನೂ, ಆಪ್ತರ ಬಗ್ಗೆ ಪ್ರೀತಿಯನ್ನು ಉಳಿಸಿಕೊಂಡಿರುವ ನಮ್ಮ ದೇಶದ ದಟ್ಟ ದರಿದ್ರರಿಗೆ ಮತ್ತು ಅವಮಾನಿತ ಮಂದಿಗೆ, ಈ ದೇಶದ ಕಷ್ಟಗಳನ್ನು ಪರಿಹರಿಸುವ ಯಾವ ಸರ್ವಶಕ್ತ ಮಂತ್ರವೂ ಇಲ್ಲವೆಂಬುದನ್ನು ತಿಳಿಯ ಹೇಳಬೇಕು. ವಸ್ತುನಿಷ್ಠೆಯಿಲ್ಲದೇ, ನಮ್ಮ ಬದುಕಿನ ಕಟುವಾಸ್ತವಗಳನ್ನು ನಿಷ್ಠುರವಾಗಿ ಗುರುತಿಸಿಕೊಳ್ಳದೇ ಯಾವುದೇ ರೀತಿಯ ನಿಜವಾದ ಕನಿಕರವೂ ಸಾಧ್ಯವಿಲ್ಲ. ಇದು ತುಂಬಾ ಕಷ್ಟದ ಕೆಲಸ; ತಾತ್ತ್ವಿಕ ತಿಳಿವನ್ನೂ, ನೇರವಾದ ವ್ಯಾವಹಾರಿಕ ಕ್ರಿಯೆಯನ್ನೂ ಏಕಕಾಲಕ್ಕೆ ನಿರೀಕ್ಷಿಸುವ ಕಷ್ಟದ ಕೆಲಸ. ನಮ್ಮ ರಾಜಕಾರಣಿಗಳು ಎಲ್ಲ ಪಕ್ಷಗಳಲ್ಲೂ ಇವರಿದ್ದಾರೆ-ಈ ಅಗತ್ಯವನ್ನು ಮನಗಂಡಿಲ್ಲ. ಓಟಿನ ಪೆಟ್ಟಿಗೆ ಮೇಲೆ ಮಾತ್ರ ಅವರ ಕಣ್ಣು. ಆದರೆ ಯುವಕರು ತಮ್ಮ ಆದರ್ಶವಾದವನ್ನು ಗಾಳಿಗೆ ತೂರಿ ಸದ್ಯದ ಅನುಕೂಲ ಯಶಸ್ಸಿಗಾಗಿ ಹಾತೊರೆಯಬಾರದು.

ಇಂದಿರಾಗಾಂಧಿಯ ಜತೆಗೆ ನಮ್ಮ ದೇಶ, ರೋಚಕವಾದ ಭ್ರಮಾ ರಾಜಕೀಯವೆಂದು ನಾನುಕರೆಯಲಿಚ್ಛಿಸುವ ಯುಗಕ್ಕೆ ಕಾಲಿಟ್ಟಿತು. ಈ ರೀತಿ ರಾಜಕೀಯವೇ-ರಷ್ಯಾ ಕೂಡ ಮೂರನೆಯ ಜಗತ್ತಿನಲ್ಲಿ ಪ್ರೋತ್ಸಾಹಿಸುತ್ತಿರುವಂತೆ ಕಾಣುವ ರಾಜಕೀಯವೇ-ನಮ್ಮ ನಾಶಕ್ಕೆ ಕಾರಣವಾಗಿದೆ. ಬಡವರನ್ನು ಭ್ರಮೆಯ ಮತ್ತಿಗೆ ತಳ್ಳುವುದಕ್ಕಿಂತ ಹೆಚ್ಚಿನ ಕ್ರೌರ್ಯ ಬೇರೆಇಲ್ಲ. ಮತ್ತೆ ಈ ಆಟದಲ್ಲಿ ಶ್ರೀಮತಿ ಇಂದಿರಾಗಾಂಧಿಗಿಂತ ಹೆಚ್ಚು ಪಳಗಿರುವವರು ಬೇರೆ ಯಾರೂ ಇಲ್ಲದಿರುವುದರಿಂದ, ನಟನೆಯಲ್ಲಿ, ಬರೀ ಜೆಶ್ಚರುಗಳಲ್ಲಿ, ನಯವಾದ ಸುಳ್ಳುಗಳಲ್ಲಿ ನೀವು ನಿಮ್ಮ ಸಮಯವನ್ನು ದುಂದು ಮಾಡಬಾರದೆಂದು ನನ್ನ ವಿನಂತಿ.

ನನ್ನ ಮೂರನೆಯ ಪಾಯಿಂಟು, ರಾಜಕೀಯ ಪಕ್ಷದ ಯುಪಡೆಯು ಜನರ ದೃಷ್ಟಿಯಲ್ಲಿ ನಂಬಿಕೆ ಗಳಿಸುವ ಮತ್ತು ಅಥೆಂಟಿಕ್ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯಕ ವಾಗುವ ವಿಷಯವನ್ನು ಕುರಿತದ್ದು. ಮುಷ್ಕರಗಳ ಒಟ್ಟೊಟ್ಟಿಗೇ ಸೃಜನಶೀಲ ಸ್ವಯಂಸೇವೆಯನ್ನು ನಡೆಸುವ ಮಾರ್ಗಗಳನ್ನು ನಾವು ಕಲಿಯಬೇಕು. ಲೋಹಿಯಾ ಒಮ್ಮೆ ಹೇಳಿರುವಂತೆ ಯಾವುದೇ ನಿಜವಾದ ಕ್ರಾಂತಿಯೂ ಕೇವಲ ಶುದ್ಧ ದ್ವೇಷದಿಂದ, ಕೇವಲ ಶುದ್ಧ ಪ್ರೇಮದಿಂದ ಸಫಲವಾಗಲಾರದು. ಹೃದಯ ಪರಿವರ್ತನೆಯು ಬರೀ ಪ್ರೇಮದ ಮಾತುಗಳನ್ನಾಡುವುದರಿಂದಗಲೀ ಅಥವಾ ಬರೀ ದ್ವೇಷದ ಘೋಷಣೆಗಳಿಂದಾಗಲೀ ಸಾಧಿತವಾಗುವುದಿಲ್ಲ. ಗಾಂಧಿಜಿಯವರನ್ನು ಉದಾಹರಿಸುತ್ತ ಲೋಹಿಯಾ ಹೇಳುತ್ತಾರೆ: “ಕರುಣೆಯಿಂದ ಹನಿಯಾಗುವ ಕಣ್ಣು ಸಿಟ್ಟಿನಲ್ಲಿ ಕೆಂಪೂ ಆಗಬೇಕು. ಕ್ರಾಂತಿಯು ಪ್ರೇಮದಿಂದ ಮಾತ್ರವಲ್ಲದೇ ಕೋಪದಿಂದಲೂ ತನ್ನ ಜೀವಸತ್ವವನ್ನು ಪಡೆಯುತ್ತದೆ. ಯಾವ ಕ್ರಾಂತಿಗಾಗಲೀ ಇದು ಮೂಲಭೂತ ಅವಶ್ಯಕತೆ. ಕೋಪ ತುಂಬ ಮುಖ್ಯ ಮಾತ್ರವಲ್ಲ-ಅದು ಆಳವೂ, ವ್ಯಕ್ತಿನಿರಪೇಕ್ಷವೂ ಆಗಿರಬೇಕು” ಮನುಷ್ಯನ ಆತ್ಮಗೌರವವನ್ನು ಕಾಪಾಡುವ ಅವನ ಮೂಲಭೂತ ಹಕ್ಕುಗಳಿಗಾಗಿ ಸ್ವಯಂಸೇವೆ ಮತ್ತು ಚಳವಳಿಗಳ ಮೂಲಕ ಜನರ ದೈನಂದಿನ ಬದುಕಿನಲ್ಲಿ ತೊಡಗಿಕೊಂಡಿದ್ದವರು ಮಾತ್ರ ಪ್ರೇಮದ ಜತೆ ಕೋಪವನ್ನೂ ಒಡಗೂಡಿಸಿಕೊಳ್ಳುವುದನ್ನು ಕಲಿಯುತ್ತಾರೆ.

ಒಂದು ರಾಜಕೀಯ ಪಕ್ಷವನ್ನು ಎತ್ತಿಕಟ್ಟುವುದಕ್ಕಾಗಿ ಮಾತ್ರ ಉದ್ದೇಶಿತವಾದಂಥ, ಅಥವಾ ಅಧಿಕಾರದಿಂದ ತಾತ್ಕಾಲಿಕವಾಗಿ ಹೊರಗಿರುವ ಕೆಲವೇ ವ್ಯಕ್ತಿಗಳ ಸ್ವಾರ್ಥಪರ ಆಶಯಗಳ ಈಡೇರಿಕೆಗೆ ಮಾತ್ರ ಸಹಾಯಕವಾಗುವಂಥ, ಬರೇ ಮುಷ್ಕರಕ್ಕಾಗಿ ನಡೆಯುವ ಮುಷ್ಕರಗಳು ಯುವಜನರು ಚೇತನದ ಸೆಲೆಯನ್ನೇ ಬತ್ತಿಸುತ್ತವೆ. ಹೆಚ್ಚೂ ಕಡಿಮೆ ಭಾರತದ ಎಲ್ಲಾ ರಾಜಕೀಯ ಗುಂಪುಗಳು ತಮ್ಮ ಚಿಂತನೆಯಲ್ಲಾಗಲೀ ಕ್ರಿಯೆಯಲ್ಲಾಗಲೀ ತಮಗೆ ನಿಜವಾಗಿ ಅನ್ನಿಸದಿರುವ, ಅನ್ನಿಸಿದ್ದರೂ ಸಾಕಷ್ಟು ಕಾಲ ತಮ್ಮಿಂದ ಉಳಿಸಿಕೊಂಡು ಬರಲಾಗದ ಕೋಪದ ಭಂಗಿಗಳಲ್ಲಿ ನಿರತವಾಗಿರುತ್ತವೆ. ಹಾಗಾಗಿ, ಹೆಚ್ಚಿನ ಬಾರಿ ಮುಷ್ಕರಗಳ ನಂತರ ದೀರ್ಘಾವಧಿಯ ನಿರ್ವಿಕಾರ ಮೌನ ಕವಿದಿರುತ್ತದೆ. ಇದು ದೇಶದಲ್ಲಿ ಹತಾಶೆಯ ಮನೋಭಾವಕ್ಕಷ್ಟೇ ಇಂಬುಕೊಡಬಲ್ಲುದು. ಆದುದರಿಂದ ಯುವಕರು ಸ್ವಯಂ ಸೇವೆಯಲ್ಲಿ ತೊಡಗಿಕೊಳ್ಳಬಹುದಾದ ಹೊಸ ಮಜಲುಗಳನ್ನು ನಾವು ಶೋಧಿಸಬೇಕು.

ಚಳವಳಿ ಮತ್ತು ಸ್ವಯಂಸೇವೆಗಳು ಪರ್ಯಾಯವಾಗಿ ಬರಬಹುದು, ಜತೆಜತೆಯಾಗಿ ಬರಬಹುದು. ಮತ್ತು ಒಂದಕ್ಕೊಂದು ಪೂರಕವಾಗಿ ಬರಬಹುದು, ಯುವಕರು ಒಂದು ಸೇನೆಯಂತೆ ಕೆಲಸ ಮಾಡಬಲ್ಲ ಹಲವು ಮಜಲುಗಳು ಇಲ್ಲಿವೆ. ಸದ್ಯ ನನ್ನ ಮನಸ್ಸಿಗೆ ಹೊಳೆಯುತ್ತಿರುವ ಅಂಥ ಒಂದು ಮಜಲೆಂದರೆ ನಿರಕ್ಷರತೆಯದು. ಅಕ್ಷರ ಜ್ಞಾನವೇ ಜನರಿಗೆ ಅಧಿಕಾರ. ರೇಡಿಯೋ ಮತ್ತು ಟೆಲಿವಿಷನ್ನುಗಳಂಥ ಬಿಸಿ ಮಾಧ್ಯಮಗಳ ಮೂಲಕ ಸಿನಿಕತನದ ಮತ್ತು ಸರ್ವಾಧಿಕಾರೀ ಮನೋಭಾವದ ಒಂದು ಸರಕಾರ, ನಿರಕ್ಷರಿ ಜನರ ಗುಂಪಿಗೆ ಕಣ್ಣಿಗೆ ಮಣ್ಣೆರಚಬಲ್ಲದು. ಜನರಿಗೆ ಕೊನೆಯ ಪಕ್ಷ ಓದಲಿಕ್ಕಾದರೂ ಬರುವ ಹಾಗಿದ್ದರೆ ಅವರ ಬೌದ್ಧಿಕ ಯೋಚನಾಕ್ರಮಗಳನ್ನು ಮುಟ್ಟುವ ಕೆಲವಾದರೂ ಮಾರ್ಗಗಳು ಪ್ರಭುತ್ವಶಕ್ತಿಯಿಂದ ಹೊರಗಿರುವ ನಮಗೆ ಸಿಕ್ಕಂತಾಗುತ್ತದೆ. ಅಕ್ಷರ ಜ್ಞಾನವಷ್ಟೇ ಸಾಕಾಗುವುದಿಲ್ಲ ಎಂಬುದು ನನಗೆ ಗೊತ್ತು; ನಿರಕ್ಷತೆಯನ್ನು ನಮ್ಮಲ್ಲಿ ಹಲವರು ಇನ್ನೂ ಅಪಾಐವೆಂದು ಗುರುತಿಸಿಲ್ಲ-ಯಾಕೆಂದರೆ ನಮ್ಮಲ್ಲಿ ಆರೋಗ್ಯಕರವಾದ ಮೌಖಿಕ ಪರಂಪರೆಯೊಂದು ಇದೆಯೆಂದು ನಾವು ನಂಬುವುದರಿಂದ. ನಾವು ಹಾಗೆ ನಂಬುವುದರಲ್ಲಿ ಸತ್ಯವೂ ಇಲ್ಲವೆಂದಲ್ಲ. ಆದರೆ ಈ ಬಿಸಿಮಾಧ್ಯಮಗಳು ಕೂಡಲೇ ಮೌಖಿಕ ಪರಂಪರೆಗಳನ್ನು ಜಳ್ಳುಗೊಳಿಸಿ ನಾಶಮಾಡುತ್ತವೆ. ಆದುದರಿಂದ ಜನರು ಓದು-ಬರಹವನ್ನು ಕಲಿಯುವಂತಾಗಬೇಕು. ಜನತಾಪಕ್ಷದ ಯುವಪಡೆಯು ಈ ಕೆಲಸವನ್ನು ದೊಡ್ಡ ರೀತಿಯಲ್ಲಿ ವಹಿಸಿಕೊಳ್ಳಬಹುದು. ಇದರ ಜತೆಗೇ ಈ ಸಮಸ್ಯೆಗೆ ಸಂಬಂಧಿತವಾಗಿರುವ ಅಸ್ಪೃಶ್ಯತೆಯ ವಿರುದ್ಧವೂ ಹೋರಾಟ ನಡೆಯಬೇಕು. ಯಾಕೆಂದರೆ, ನಮ್ಮಲ್ಲಿ ಹೆಚ್ಚಿನವರ ಪ್ರಜ್ಞಾಪೂರ್ವಕ ಮನಸ್ಸಿನಿಂದ ಗಾಂಧಿಜಿಯವರ ಚಳವಳಿಯಿಂದಾಗಿ ಇದು ಹೊಡೆದೋಡಿಸಲ್ಪಟ್ಟಿದ್ದರೂ ನಮ್ಮ ಸುಪ್ತ ಮನಸ್ಸಿನ ಮೂಲೆಗಳಲ್ಲಿ ಇನ್ನೂ ಹೊಂಚುತ್ತಿದೆ.

ಜನತಾಪಕ್ಷದ ಯುವಪಡೆಯ ಆರೋಗ್ಯಕಾರಿ ಬೆಳವಣಿಗೆಗೆ ಪೂರ್ವ ಷರತ್ತುಗಳಾಗಿ ನಾನು ಈ ತನಕ ಹೇಳಿರುವ ಅಂಶಗಳನ್ನು ಇಲ್ಲಿ ಒಟ್ಟಿನಲ್ಲಿ ಹೇಳುತ್ತೇನೆ. ಅವು:

ಅ) ಕ್ರಿಯಾಶೀಲ ಕೆಲಸಗಾರರಿಗೆ ವೇತನ ಕೊಡುವ ಅಗತ್ಯ;

ಆ) ಮತದಾರರನ್ನು ಗೆಲ್ಲಲೆಂದು ಆಡುವ ಟೀಕೆಯ ನಾಟಕದ ಬದಲಾಗಿ ಭಾರತದ ಸಾಮಾಜಿಕ ಆರ್ಥಿಕ ವಾಸ್ತವದ ವಸ್ತುನಿಷ್ಠ ತಿಳುವಳಿಕೆ ಅಗತ್ಯ; ಮತ್ತು

ಇ) ಚಳವಳಿ ಪ್ರವೃತ್ತಿಯನ್ನು ಸ್ವಯಂಸೇವೆಯೊಂದಿಗೆ ಬೆಸೆಯುವ ಅಗತ್ಯ.

* * *

ಎಂಭತ್ತರ ದಶಕಕ್ಕೆ ಕಾಲಿಡುತ್ತಿದ್ದಂತೆ ಜಗತ್ತಿನಾದ್ಯಂತದ ಎಲ್ಲ ಯುವಕರೂ ಎದುರಿಸುತ್ತಿರುವ ಸಂಕ್ರಮಣಾವಸ್ಥೆಯ ವಿಚಿತ್ರ ಸ್ವಭಾವವನ್ನು ಕುರಿತು ಸ್ವಲ್ಪ ವಿಶದವಾಗಿ ಈಗ ಚರ್ಚಿಸಬಹುದು. ಒಂದು ಅಥವಾ ಇನ್ನೊಂದು ದೇಶವನ್ನು ನಮ್ಮ ಆದರ್ಶದ ಮಾದರಿಯಾಗಿ ಆಯ್ಕೆ ಮಾಡುವಂಥ ಈ ಶತಕದ ಕೆಲವು ಗುಣಸ್ವಭಾಗಳನ್ನು ಹಿಂದಿನ ಯಾವ ಕಾಲದಲ್ಲೂ ಕಾಣಲಾರೆವು. ಹಿಂದೆ, ಭಾರತ ಮತ್ತು ಚೀನಾದಂಥ ದೇಶಗಳು ಪಾಶ್ಚಾತ್ಯ ದಾರ್ಶನಿಕರಿಗೆ ಮತ್ತು ಬುದ್ಧಿಜೀವಿಗಳಿಗೆ ಸ್ಫೂರ್ತಿಯ ಸೆಲೆಯಾದದ್ದುಂಟು. ಆದರೆ ಅದು ಇಪ್ಪತ್ತನೆಯ ಶತಮಾನದಲ್ಲಾಗಿರುವಂತೆ, ಯಾವುದಾದರೊಂದು ದೇಶವನ್ನು ತನ್ನ ಏಕಮಾತ್ರ ಮಾಡೆಲ್ಲೆಂದು ತಿಳಿಯುವ ರೀತಿಯದಾಗಿರಲಿಲ್ಲ. ಈ ಶತಮಾನದ ಪ್ರಾರಂಭದ ವರ್ಷಗಳಲ್ಲಿ ರಷ್ಯಾ ಅಂಥ ಮಾಡೆಲ್ಲಾಗಿತ್ತು. ಆದರೆ ಸ್ಟಾಲಿನ್ನನ ಕ್ರೂರ ಮತ್ತು ಅಮಾನವೀಯ ರಾಜ್ಯಭಾರದಿಂದಾಗಿ ರಷ್ಯಾದ ಪರಮ ಬಂಟರಾಗಿದ್ದ ಹಲವರಿಗೆ ಭ್ರಮನಿರಸನವಾಯಿತು. ಅನಂತರ ಕ್ಯೂಬಾ ಅಥವಾ ವಿಯೆಟ್ನಾಂ, ಅಥವಾ ಇನ್ನೂ ಹೆಚ್ಚಿನ ಮಟ್ಟಿಗೆ ಮಾವೋನ ಚೈನಾ, ಮಾಡೆಲ್ಲಾಯಿತು. ಆದರೆ ಈ ಯಾವ ದೇಶಗಳೂ ಪಾಶ್ಚಾತ್ಯ ಯೂರೋಪಿನ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವಾದ ಇನ್ನೊಂದು ನಾಗರಿಕತೆಯನ್ನು ಮತ್ತು ಸಂಸ್ಕೃತಿಯನ್ನುಕೊಡುವ ಭರವಸೆ ಕಾಣುತ್ತಿಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳೂ -ಅದು ಬಂಡವಾಳಶಾಹಿ ವ್ಯವಸ್ಥೆಯೇ ಇರಲಿ ಕಮ್ಯೂನಿಸ್ಟ್ ವ್ಯವಸ್ಥೆಯೇ ಇರಲಿ-ಒಂದೇ ಗುರಿಯ ಬೆನ್ನು ಬಿದ್ದಿರುವಂತೆ ತೋರುತ್ತದೆ. ಅದೇ “ಆಧುನಿಕ ನಾಗರಿಕತೆ” ಯ ಗುರಿ (ಗಾಂಧೀಜಿ ೧೯೦೮ರಲ್ಲಿ ಬರೆದ ಹಿಂದ್ ಸ್ವರಾಜ್‌ನಲ್ಲಿ “ಆಧುನಿಕ” ಎಂಬ ಮಾತನ್ನು ಬಳಸಿದ್ದರು.)

ಆದರೆ ಪ್ರಶ್ನೆ ಇದು: ಆಧುನಿಕ ನಾಗರಿಕತೆಗಳನ್ನು ಕಟ್ಟುವ ಉದ್ದೇಶ ಹೊಂದಿರುವ ಸಾಮ್ರಾಜ್ಯಶಾಹಿ ದೇಶಗಳಿಂದ ಶೋಷಣೆಗಳಗಾಗಿರುವ ತೃತೀಯ ಜಗತ್ತಿನ ನಮ್ಮ ದಟ್ಟದರಿದ್ರ ದೇಶಗಳು, ಯಾವತ್ತಾದರೂ ಪಾಶ್ಚಾತ್ಯರಂತೆ ಆಗುವುದು ಸಾಧ್ಯವೇ? ಸಾಧ್ಯವಾದರೂ ಸಾಧುವೆ? ರಷ್ಯಾವು ಯೂರೋಪಿನ ಒಬ್ಬ ಬಡಬಂಧುವಾಗಿತ್ತೆಂಬುದನ್ನು ಮತ್ತು ಚೀನಾವು ಕ್ರಾಂತಿಯ ಮುಂಚೆ ಅಂತರರಾಷ್ಟ್ರೀಯವಾಗಿ ಪ್ರಮುಖಸ್ಥಾನ ಹೊಂದಿತ್ತು ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಹಾಗಿದ್ದರೂ ಈ ದೇಶಗಳಿಎ ಕೂಡಾ ಜನರ ಜೀವನ ಮಟ್ಟ ಮತ್ತು ಅನುಭೋಗಗಳಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವನ್ನು ಅನುಸರಿಸುವುದು ಇನ್ನೂ ಅಶಕ್ಯವಾಗಿಯೇ ಉಳಿದಿದೆ. ಅಮೇರಿಕಾದ ಜೀವನಮಟ್ಟ ರಷ್ಯಾದಲ್ಲಿಲ್ಲ; ರಷ್ಯಾದ್ದು ಚೀನದಲ್ಲಿಲ್ಲ. ಒಂದು ಮುಮದುವರಿಯುತ್ತಿದ್ದಂತೆಯೇ ಬಲಿಷ್ಠದೇಶ ಇನ್ನಷ್ಟು ಮುಂದೆ ಹೋಗಿರುತ್ತದೆ. ಹೀಗಿರುವಾಗ ಭಾರತ ಯಾವತ್ತಿಗಾದರೂ ಪಾಶ್ಚಾತ್ಯರನ್ನು ಅನುಕರಿಸುವುದು ಸಾಧ್ಯವೇ? ಹಾಗೂ ಅದು ಅಪೇಕ್ಷಣೀಯವೇ? ಹೇಗಾದರೂ ಮಾಡಿ ಪಾಶ್ಚಾತ್ಯರ ಬೆನ್ನುಬೀಳುವುದೇ ನಮ್ಮ ಗುರಿಯಾದರೆ, ಈ ಅಗಮ್ಯ ಗುರಿ ಹುಟ್ಟಿಸುವ ಅಸಹನೆಯ ಕಾರಣದಿಂದಾಗಿ ಎಷ್ಟು ಜರನ್ನು ಕೊಲ್ಲಬೇಕಾಗಿ ಬರಬಹುದು ಮತ್ತು ಎಷ್ಟೊಂದು ಜನರನ್ನು ಹಿಂಸಿಸಬೇಕಾಗಿಬರಬಹುದು? ಸ್ಟಾಲಿನ್ನನ ರಷ್ಯಾ, ‘ಸಂಸ್ಕೃತಿ ಕ್ರಾಂತಿ’ಯ ಚೀನಾ, ತುರ್ತುಕಾಲದ ಭಾರತ ನಾವೀಗಾಗಲೇ ಕಂಡಿರುವ ವಾಸ್ತವಗಳು.

ನಾವು ಆಟಂಬಾಂಬನ್ನು ಹೊಂದಬೇಕೇಕೆ ಅಥವಾ ಗಾಂಧಿಜಿ ಕನಸು ಕಂಡಂತೆ ಪ್ರತಿಕಣ್ಣಿಂದ ಪ್ರತಿ ಹನಿ ಕಣ್ಣಿರನ್ನು ತೊಡೆದ ಸ್ವತಂತ್ರ ಭಾರತವನ್ನು ಹೊಂದುವುದು ನಮ್ಮ ಪ್ರಯತ್ನವಾಗಬೇಕೆ? ಭಾರತದ ಮಿಲಿಯಾಂತರ ಜನರಿಗೆ ಶೀಘ್ರವಾಗಿ ನ್ಯಾಯ ಮತ್ತು ಸಮಾನತೆ ಹಾಗೂ ಆತ್ಮಗೌರವಗಳನ್ನು ದೊರಕಿಸಿಕೊಡುವ ಗುರಿಗಳು, ಪಾಶ್ಚಾತ್ಯ ದೇಶಗಳ ರೀತಿಯಲ್ಲಿ ಭಾರತ ಬಲಿಷ್ಠವಾಗಬೇಕೆಂದು ಆಶೀಸುವ ಗುರಿಗೆ ತದ್ವಿರುದ್ಧವಾದವು ಎಂಬುದನ್ನು ನಾವೇಕೆ ಇನ್ನೂ ಮನಗಂಡಿಲ್ಲ? ಭಾರತ ಹಾಗೆ ಬಲಿಷ್ಠವಾಗುವುದರಲ್ಲಿ ಯಶಸ್ವಿಯಾದರೂ ಪ್ರಾಯಶಃ ಚೀನಾದಷ್ಟಲ್ಲದಿದ್ದರೂ ಹೆಚ್ಚು ಕಡಿಮೆ ಅಷ್ಟು ಆಗ ಅದು ಎಂಥ ಭಾರತವಾಗಿರುತ್ತದೆ? ಮಿಲಿಯಾಂತರ ಜನರದ್ದೇ ಅಥವಾ ಪಂಚತಾರಾ ಸಂಸ್ಕೃತಿಯ ಲಕ್ಷುರಿಯಲ್ಲಿ ಲೋಲುಪರಾದ ಕೆಲವೇ ಜನ ಎಲೀಟೇಸ್ಟ್‌ರದ್ದೇ? ದೇಶ ಕಟ್ಟುವ ನಮ್ಮ ಪ್ರಯತ್ನದ ಪ್ರಕ್ರಿಯೆಯಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವು. ಮಾನವತಾವಾದಿ ಮೌಲ್ಯಗಳ ಅನುಸಾರ ನಾವು ಬದುಕತಕ್ಕದ್ದೇ? ಅಥವಾ ದುರ್ಭೇದ್ಯವೂ ಬಲಿಷ್ಠವೂ ಆದ ರಾಷ್ಟ್ರವನ್ನು ನಾವು ಕಟ್ಟಬೇಕೆ? ಈ ಎರಡನ್ನೂ ನಾವು ಒಟ್‌ಆಗಿ ಆಯುವಂತಿಲ್ಲ. ಎರಡರಲ್ಲೊಂದನ್ನು ಆಯಬೇಕಾಗುತ್ತದೆ.

ಪ್ರಬುದ್ಧವಾದ ಎಲ್ಲ ರಾಜಕೀಯ ಪಕ್ಷಗಳಿಗೂ ವಿವೇಕಯುತವಾದ ವ್ಯವಹಾರ ಜ್ಞಾನ ಬೇಕಾಗುತ್ತದೆ. ದೇಶದ ಪಾಲನೆ, ಪೋಷಣೆ, ರಕ್ಷಣೆಗಳಿಗೆ ಸಂಬಂಧಪಟ್ಟ ವಿಷಯ ಇದು. ಆದ್ದರಿಂದ ಅಗತ್ಯಬಿದ್ದಾಗ ದೇಶವನ್ನು ಶತ್ರುಗಳ ಆಕ್ರಮಣದಿಂದ ರಕ್ಷಿಬಲ್ಲ ಸಿದ್ಧತೆ ಶಕ್ತಿಗಳು ಅತ್ಯಂತ ಅಗತ್ಯ. ಆದರೆ ಅದನ್ನೇ ರಾಷ್ಟ್ರದ ಏಕೋದ್ದೇಶ ಮಾಡಿಕೊಂಡು, ಜನರನ್ನು ತಮ್ಮ ಮುಗ್ಧವಾದ ದೈನಂದಿನ ಖುಷಿ ಸಂತೋಷಗಳಿಂದ, ತಮಗೆ ಸಲ್ಲಬೇಕಾದ ಘನತೆಯಿಂದ ವಂಚಿತರನ್ನಾಗಿ ಮಾಡುವಂಥ ಅಬ್‌ಸಶನ್ ಅದು ಆಗಬಾರದು. ಪಾಶ್ಚಾತ್ಯ ದೇಶಗಳಲ್ಲಿ ಆಕ್ರಮಣಶೀಲ ಆಧುನಿಕ ಯಂತ್ರ ನಾಗರಿಕತೆ ಹುಟ್ಟುಹಾಕಿದ ಆಧ್ಯಾತ್ಮಿಕ ಹಾಗೂ ಮಾನವೀಯ ಸಮಸ್ಯೆಗಳೇನೆಂದು ಗೊತ್ತಿರುವ ನಾವು ಖಂಡಿತವಾಗಿಯೂ ಪಾಶ್ಚಾತ್ಯರ ಮಟ್ಟದ ಸಂಪತ್ತಿಗಾಗಿ ಹಾತೊರೆಯಬೇಕಾಗಿಲ್ಲ.

ನಾನು ಎತ್ತಿರುವ ಈ ಅಂಶಗಳನ್ನು ಸ್ಪಷ್ಟಗೊಳಿಸಿಕೊಳ್ಳಲು ನಮ್ಮ ದೇಸೀ ಚಿಂತಕರನ್ನು ಆಳವಾಗಿ ಅಭ್ಯಾಸಮಾಡಬೇಕು. ನೆಹರೂ ಮಾರ್ಗದಲ್ಲಿ ನಡೆದಿರುವ ನಾವು ನಮ್ಮ ದೇಶದ ಶ್ರೇಷ್ಠ ಚಿಂತಕರಾದ ಮಹಾತ್ಮಾ ಗಾಂಧೀಜಿಯವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ. ನಾವು ಅಗತ್ಯವಾಗಿ ಗಾಂಧೀಜಿಯವರನ್ನು ಡಾ. ಲೋಹಿಯಾ, ಆಚಾರ್ಯ ನರೇಂದ್ರದೇವ್, ಮಹಾತ್ಮ ಪೂಲೆ, ನಾರಾಯಣಗುರು, ಡಾ. ಅಂಬೇಡ್ಕರ್, ಮತ್ತು ಜಯಪ್ರಕಾಶ ನಾರಾಯಣರನ್ನು, ಅಂತೆಯೇ ಬಸವ, ತುಕಾರಾಂ, ಕಬೀರ್, ನಾನಕ್‌ರಂಥ ಅನುಭಾವಿಗಳನ್ನು ಓದಬೇಕು. ನಮ್ಮ ದೇಶಕ್ಕೆ ಒಂದು ಪರ್ಯಾಯ ನಾಗರಿಕತೆಯ ಸ್ವರೂಪವನ್ನು ಒದಗಿಸಬಲ್ಲ ಕ್ರಿಯಾಶೀಲ ಚಿಂತಕರು ಇವರು.

ಇಂಥ ಒಂದು ಪರ್ಯಾಯ ವ್ಯವಸ್ಥೆಯನ್ನು ಆಶಿಸುವ ಯಾರೇ ಆದರೂ ಒಂದು ಪರ್ಯಾಯವಾದ ಯಂತ್ರಪದ್ಧತಿಗೆ ಆದ್ಯಸ್ಥಾನ ಕೊಡಬೇಕಾದ್ದು ಅಗತ್ಯ. ಒಂದು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವುದಷ್ಟೇ ಸಾಕಾಗುವುದಲ್ಲವೆಂಬುದನ್ನು ಕಮ್ಯೂನಿಸ್ಟ್ ದೇಶಗಳು ನಮಗೆ ಕಲಿಸಿಕೊಟ್ಟಿವೆ. ಬಂಡವಾಳಶಾಹಿ ಯಂತ್ರಪದ್ಧತಿಯನ್ನು ನಾವೂ ಬಳಸಿದ್ದಾದರೆ, ಅದೇ ರೀತಿಯ ಪ್ರಜ್ಞೆಯನ್ನು ಕಮ್ಯೂನಿಸ್ಟ್ ರಾಜ್ಯ ವ್ಯವಸ್ಥೆಯಲ್ಲೂ ನಾವೂ ಸೃಷ್ಟಿಸಬೇಕಾಗಿ ಬರುವುದು ಕೇವಲ ಸಹಜ. ಭಾರತದಲ್ಲಿ ಅಂಥ ಯಂತ್ರ ಪದ್ಧತಿಯ ಬಳಕೆಯು, ಈಗಾಗಲೇ ಇರುವ ಅಸಮಾನತೆಗಳನ್ನು ಹೆಚ್ಚಿಸುವುದಷ್ಟೇ ಅಲ್ಲದೇ ಹಿಂದುಳಿದಿರುವ ಜನಾಂಗದವರು ನಮಗೆ ಹೊರೆಯಾಗಿಯೂ, ಅಭಿವೃದ್ಧಿಯ ಪಥದಲ್ಲಿ ಒಡ್ಡಿದ ತೊಡಕುಗಳಾಗಿಯೂ ಕಾಣುತ್ತಾರೆ. ಅದು ಕ್ರೂರ ಸರ್ವಾಧಿಕಾರವನ್ನೂ ನಿರಂಕುಶತೆಯನ್ನೂ ಸೃಷ್ಟಿಸುತ್ತದೆ. ಸಂಜಯಗಾಂಧಿಯ ಕಾರ್ಯ ವಿಧಾನವನ್ನು ಈ ಸಂದರ್ಭದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.

ನಮ್ಮೆದುರಿಗಿರುವ ಕೆಲವೇನೆಂಬುದನ್ನು ಡಾ. ಲೋಹಿಯಾರ ಈ ಸಮರ್ಥ ಮಾತುಗಳಲ್ಲಿ ಗಮನಿಸಬಹುದು.

ಮಾರ್ಕ್ಸಿಸಂ ಮತ್ತು ಕಮ್ಯೂನಿಸಂಗಳು ಬಂಡವಾಳಶಾಹಿ ಉತ್ಪಾದನೆಯ ಸಂಬಂಧಗಳನ್ನು ನಿರ್ನಾಮ ಮಾಡುವ ಬಗ್ಗೆ ಮಾತ್ರ ಆಲೋಚಿಸುತ್ತೇವೆ. ಆದರೆ ತಾಜಾ ಸಮಾಜವಾದವು ಬಂಡವಾಳಶಾಹಿ ಉತ್ಪಾದನಾ ಸಂಬಂಧಗಳ ನಿರ್ನಾಮದ ಜೊತೆಗೇ ಬಂಡವಾಳಶಾಹಿ ಉತ್ಪನ್ನದ ವಿಧಾನಗಳನ್ನೂ ನಿರ್ನಾಮ ಮಾಡಬೇಕಾಗುತ್ತದೆ. ಅಥವಾ ಕೊನೆಯ ಪಕ್ಷ ಅದನ್ನು ಹೊಸ ರೀತಿಯಲ್ಲಿ ಮಾರ್ಪಡಿಸಿಕೊಳ್ಳಬೇಕಾಗುತ್ತದೆ.

ಇಂಥ ಹೊಸ ಸಮಾಜವಾದೀ ವ್ಯವಸ್ಥೆಯಲ್ಲಿ ಕಾರ್ಮಿಕರು, ರೈತರು ಮತ್ತು ಇತರ ಉದ್ಯಮಿಗಳು ಹೆಚ್ಚು ಸಂಪತ್ತನ್ನು ಸೃಷ್ಟಿಸಬಲ್ಲ ಉಪಕರಣಗಳನ್ನು ಹೊಂದಿರುತ್ತಾರೆ; ಆದರೆ ನಿರಂತರವಾಗಿ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿರಬೇಕೆಂಬ ವ್ಯಕ್ತಿಗತ ಆಮಿಷಕ್ಕಾಗಲೀ, ಅಥವಾ ಅಂಥ ಲೋಲುಪ್ತಜೀವನ ವಾಸ್ತವಿಕವಾಗಿಯೂ ಸಾಧ್ಯವಾಗುವಂತೆ ಮಾಡಬಲ್ಲ ವ್ಯವಸ್ಥೆಯ ನಿರ್ಮಾಣಕ್ಕಾಗಲೀ ಅವರು ಬಲಿಯಾಗುವುದಿಲ್ಲ.

ಅಂದರೆ ಒಬ್ಬ ಕಮ್ಯೂನಿಸ್ಟ್ ಇದರಲ್ಲಿ ಒಂದನ್ನು ಮಾತ್ರ ನಿರ್ವಹಿಸುತ್ತಾನೆ; ಆತ ಬಂಡವಾಳಶಾಹಿ ವರ್ಗವನ್ನು ನಾಶಮಾಡುತ್ತಾನೆ. ಅಲ್ಲಿಗೆ ಅವನ ಕೆಲಸ ಮುಗಿಯಿತು. ಬದಲು, ಒಬ್ಬ ಸಮಾಜವಾದಿಯು ಬಂಡವಾಳಶಾಹಿ ವರ್ಗವನ್ನು ನಿರ್ಮೂಲಗೊಳಿಸುವುದರ ಜತೆಗೇ ಬಂಡವಾಳಶಾಹಿ ವ್ಯವಸ್ಥೆಯು ಪ್ರಪಂಚಕ್ಕೆ ಕೊಟ್ಟಿರುವ ಉತ್ಪಾದನಾ ವಿಧಾನಗಳನ್ನುಕೂಡ ನಿರ್ಮೂಲಗೊಳಿಸಬೇಕಾಗುತ್ತದೆ. ಇದು ಇಮ್ಮುಖವಾದ ಕಾರ್ಯ…..

-Marx, Gandhi and Socialism

* * *

ನಮ್ಮ ದೇಶದ ಯುವ ರಾಜಕೀಯ ಕಾರ್ಯಕರ್ತರು ಸ್ವಲ್ಪ ಆತ್ಮವಿಮರ್ಶೆಯನ್ನು ಮಾಡಿಕೊಳ್ಳಬೇಕಾಗಿದೆ. ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಚಳುವಳಿಯೊಂದರಲ್ಲಿ ಭಾಗವಹಿಸಿದ ಗುಜರಾತಿನ ಕಾದಂಬರಿಕಾರರೂ ಅಧ್ಯಾಪಕರೂ ಆಗಿರುವವರೊಬ್ಬರು, ಆ ಚಳವಳಿ ಹೇಗೆ ಕೊನೆಯಲ್ಲಿ ಧಾರಾಳ ಮೌಲ್ಯಮಾಪನ ಮತ್ತು ಗ್ರೇಸ್ ಅಂಕಗಳ ಬೇಡಿಕೆಯ ದುಃಸ್ಥಿತಿಗೆ ಇಳಿಯಿತೆಂದು ಬಹು ದುಃಖದಿಂದ ನನಗೆ ಹೇಳಿದರು. ಹಾಗೆಯೇ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ರಾಜಕೀಯದಲ್ಲಿನ ಮೋಸಗಳ ವಿರುದ್ಧ ದಂಗೆಯೆದ್ದ ಬಿಹಾರದ ಯುಜನ ಹಿಂದುಳಿದವರಿಗೆ ಇದ್ದ ಮೀಸಲಾತಿಯ ವಿರುದ್ಧವೂ ಮುಷ್ಕರವನ್ನು ಹೂಡಿತು. ಉತ್ತಮ ಕುಟುಂಬಗಳಿಂದ ಬರುವ ಭಾರತದ ಅದೃಷ್ಟವಂತ ಯುವಕರು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿ ಅರ್ಹತೆ ಅಥವಾ ಡೊನೇಶನ್ನುಗಳ ಮೂಲಕ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಸೇರುತ್ತಾರೆ. ಅವರ ಏಕೈಕ ಕನಸು ಇಂಡಿಯಾ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಸೇರುತ್ತಾರೆ. ಅವರ ಏಕೈಕ ಕನಸು ಇಂಡಿಯಾ ಬಿಟ್ಟು ಪಾಶ್ಚಾತ್ಯ ದೇಶಗಳಿಗೆ ಹೋಗುವುದಾಗಿರುತ್ತದೆ. ಅದೇ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳಿಗಿರುವ ಮೀಸಲಾತಿಯ ವಿರುದ್ಧ ದಕ್ಷತೆ ಹಾಗೂ ಉನ್ನತ ಮಟ್ಟಗಳ ಹೆಸರಿನಲ್ಲಿ ಗಲಾಟೆ ಮಾಡುತ್ತಾರೆ. ಮೀಸಲಾತಿ ವಿರೋಧಿಗಳ ಈ ಆಷಾಢಭೂತಿತನ ದಂಗುಬಡಿಸುವಂಥದ್ದು. ಸರಕಾರ ಅವರ ಯಾವುದಾದರೂ ಬೇಡಿಕೆಗಳನ್ನು ಈಡೇರಿಸಿದ್ದೇ ಆದರೆ, ಆಗ ಅವರು ಹಿಂದುಳಿದ ಪ್ರದೇಶಗಳಲ್ಲಿ ಸೇವೆ ಮಾಡುವುದನ್ನು ಕಡ್ಡಾಯ ಮಾಡಬೇಕು. ಭಾರತದಂಥ ಬಡದೇಶ ಕಷ್ಟಪಟ್ಟು ಕೊಟ್ಟ ದುಬಾರಿ ಐ.ಐ.ಟಿ ಮತ್ತು ಮೆಡಿಕಲ್ ವಿದ್ಯಾಭ್ಯಾಸಗಳನ್ನು ಪಡೆದ ಮೇಲೆ ತಮ್ಮ ಸ್ವಾರ್ಥದ ಹಾಗೂ ಚಿಲ್ಲರೆ ಆಸಕ್ತಿಗಲ ಹುಚ್ಚಿನಲ್ಲಿ ದೇಶ ಬಿಟ್ಟು ಪಾಶ್ಚಾತ್ಯ ದೇಶಗಳಿಗೆ ಓಡಿಹೋಗಲು ಅವರಿಗೆ ಅವಕಾಶ ಮಾಡಿಕೊಡಬಾರದು. ನಮ್ಮ ದೇಶದ ಯುವಜನರಿಗೆ ಮನವರಿಕೆಯಾಗಬೇಕಾದದ್ದು ಇದು: ಹಿಂದುಳಿದ ವರ್ಗ ಮತ್ತು ಬುಡಕಟ್ಟುಗಳವರಿಗೆ ಸಮಾಜದಲ್ಲಿ ಮುಂದುವರಿಯಲು ಮೀಸಲಾತಿಯು ಎಷ್ಟು ಅವಶ್ಯಕವೋ ಹಾಗೆಯೇ, ಅದಕ್ಕಿಂತ ಹೆಚ್ಚು ನಮ್ಮ ಹಿತದೃಷ್ಟಿಯಿಂದಲೂ ಮೀಸಲಾತಿಯು ಅಗತ್ಯ. ನಮ್ಮ ದೇಶ ಯಾಕೆ ಹಿಂದುಳಿದಿದೆಯೆಂದರೆ ನಮ್ಮ ದೇಶದ ಬಹುಸಂಖ್ಯಾತ ಮಂದಿ ಹಿಂದುಳಿದವರಾದ್ದರಿಂದ. ಆದುದರಿಂದ ನಮ್ಮ ದೇಶ ಪ್ರಪಂಚದ ಇತರ ದೇಶಗಳ ಸಮುದಾಯದಲ್ಲಿ ಒಂದು ಶೂದ್ರದೇಶವಾಗಿ ಬಿಟ್ಟಿದೆ. ಮೀಸಲಾತಿಯ ಬಗ್ಗೆ ಏನಾದರೂ ಟೀಕೆಗಳಿದ್ದರೆ ಅದು, ಸದ್ಯ ಇರುವ ಮೀಸಲಾತಿಯು ಏನೇನೂ ಸಾಲದು, ಸದ್ಯದ ಮೀಸಲಾತಿಯು ಹರಿಜನರಲ್ಲಿ ಒಂದು ಸ್ವಹಿತಾಸಕ್ತ ಗುಂಪನ್ನು ಸೃಷ್ಟಿಸಬಹುದು, ಎಂಬುದಷ್ಟೇ. ಹೀಗಿದ್ದರೂ, ಸದ್ಯದ ಮೀಸಲಾತಿಗಿಂತ ಹೆಚ್ಚು ಕ್ರಾಂತಿಕಾರಕವಾದ ಮತ್ತು ಉತ್ತಮವಾದ ಪರ್ಯಾಯವೊಂದನ್ನು ನಾನು ಕಂಡುಕೊಳ್ಳುವ ತನಕ, ಮೀಸಲಾತಿಯ ಮುಂದುವರಿಯಬೇಕು. ಯಾಕೆಂದರೆ ಆ ಮೂಲಕ ಜಾತಿಯ ಕಟ್ಟುಗಳು ಕೊನೆಯ ಪಕ್ಷ ಸ್ವಲ್ಪವಾದರೂ ಸಡಿಲಗೊಳ್ಳುತ್ತವೆ; ವಿಭಿನ್ನ ಜಾತಿಯ ಕಟ್ಟುಗಳು ಕೊನೆಯ ಪಕ್ಷ ಸ್ವಲ್ಪವಾದರೂ ಸಡಿಲಗೊಳ್ಳುತ್ತವೆ; ವಿಭಿನ್ನ ಜಾತಿಗಳು ಆಫೀಸುಗಳಲ್ಲಿ, ಕಾರ್ಖಾನೆಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಒಡನಾಡಬಲ್ಲ ಸಾಧ್ಯತೆಗಳು ಸೃಷ್ಟಿಯಾಗುತ್ತವೆ.

ಭಾರತದಲ್ಲಿ ಬಹುತೇಕ ಬಡಜನರ ಬಾಲ್ಯ ಅವರ ಹತ್ತು ಅಥವಾ ಹನ್ನೆರಡನೆಯ ವಯಸ್ಸಿಗೇ ಮುಗಿದುಹೋಗುತ್ತದೆ. ಒಂದು ಬಡಕುಟುಂಬದ ಹುಡುಗಿಯೊಬ್ಬಳು ತನ್ನ ಹತ್ತನೇ ವಯಸ್ಸಿನಲ್ಲೇ ಸೇವಕಿಯಾಗಿ ಕೆಲಸ ಮಾಡಲಾರಂಭಿಸುತ್ತಾಳೆ; ಮತ್ತು ಆ ಮೂಲಕ ಅವಳು ತನ್ನ ಮಾತ್ರವಲ್ಲದೇ ತನ್ನ ಕುಟುಂಬಕ್ಕೂ ಆಹಾರ ಸಂಪಾದಿಸುತ್ತಾಳೆ. ಹನ್ನೆರಡರ ವಯಸ್ಸಿನ ಹುಡುಗನೊಬ್ಬ ದನಕುರಿಗಳನ್ನು ಮೇಯಿಸಲು ತೆಗೆದುಕೊಂಡು ಹೋಗುತ್ತಾನೆ; ಅತಿ ಬೇಗನೆ ಆತ ನಾಯಕತ್ವದ ಹಾಗೂ ಹೊಣೆಗಾರಿಕೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ. ಆಟೋ ಶಾಪುಗಳಲ್ಲಿ ನಾನು ಕಂಡಿರುವ ಹಾಗೆ, ಹದಿನೈದು ಹದಿನಾರರ ವಯಸ್ಸಿನ ಹುಡುಗರು, ಅವರು ಅವಿದ್ಯಾವಂತರಾಗಿದ್ದಾಗಲೂ, ತೀಕ್ಷ್ಣಬುದ್ಧಿಯಿಂದ ಒಂದು ಸಂಕೀರ್ಣ ಯಂತ್ರದ ಭಾಗಗಳನ್ನು ಜೋಡಿಸಬಲ್ಲವರಾಗಿರುತ್ತಾರೆ. ಆದರೆ ಅದೇ ಆತ, ಆ ಯಂತ್ರದ ಬಗ್ಗೆ ವ್ಯಾಖ್ಯನ ಕೊಡಲಾರದವನಾಗರುತ್ತಾನೆ. ಆದರೂ, ಆತ ಬುದ್ಧಿವಂತನಲ್ಲವೇ? ಬುದ್ಧಿಮತ್ತೆಯ ಬಗ್ಗೆಯೇ ನಮಗಿರುವ ದೃಷ್ಟಿಕೋನವು ಬದಲಾಗಬೇಕಾದ ಅವಶ್ಯಕತೆಯಿದೆ. ನಮ್ಮಲ್ಲಿ ಹಲವರಿಗೆ ಬುದ್ಧಿಮತ್ತೆಯೆಂದರೆ-ಒಳ್ಳೆಯ ಇಂಗ್ಲಿಷನ್ನು ಸರಿಯಾದ ಉಚ್ಚಾರಗಳ ಮೂಲಕ ಮಾತಾಡುವ ಶಕ್ತಿ, ಅಥವಾ ಬಹಳ ನಯವಾಗಿ ತರಬೇತಾಗಿ ಗಿಳಿಪಾಠಹೊಡೆದು ಎಲ್ಲ ಪರೀಕ್ಷೆಗಳನ್ನು ಪಾಸುಮಾಡಬಲ್ಲ ಮನಸ್ಸು-ಇವು. ಬುದ್ಧಿಮತ್ತೆಯನ್ನು ಬೇರೆ ರೀತಿಯಲ್ಲಿ ಗ್ರಹಿಸುವುದು ನಮಗೆ ಸಾಧ್ಯವಾದರೆ, ಹಿಂದುಳಿದವರೆಂದು ನಾವು ತಿಳಿಯುವ ಬಹುಸಂಖ್ಯಾತ ಮಂದಿಗೆ ಗ್ರಹಣಶಕ್ತಿ ಸ್ವಯಂ ಸಹಜವಾಗಿದ್ದು, ಅವರುಅಸಾಧಾರಣ ವಿವೇಕಿಗಳೂ, ಮತ್ತು ಧಾರಳ ದೃಷ್ಟಿಯ ಹೃದಯವಂತರೂ ಆಗಿರುತ್ತಾರೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಒಂದು ಪ್ರತ್ಯೇಕವಾದ ಎಲೀಟಿಸ್ಟರ್ ವರ್ಗಕ್ಕೇರಬೇಕಾದ ಅಗತ್ಯವಿಲ್ಲದೇ ಪರ್ಯಾಯ ಯಂತ್ರ ಪದ್ಧತಿಯೊಂದನ್ನು ಯಶಸ್ವಿಗೊಳಿಸಬಲ್ಲ ಜನರು ಇವರೇ ಆಗಿರುತ್ತಾರೆ. ಆಗ, “ರಾಶಿ ಉತ್ಪನ್ನವಲ್ಲ, ಬದಲು ಸಮೂಹದಿಂದ ಉತ್ಪಾದನೆ” ಎಂಬ ಗಾಂಧೀಜಿಯವರ ಹೇಳಿಕೆಯೂ ಒಂದು ವಾಸ್ತವವಾಗುತ್ತದೆ.

ಈ ದೇಶದಲ್ಲಿ ಯುವ ಚಳವಳಿಯು, ವಿಭಿನ್ನ ಜಾತಿಗಳಲ್ಲಿ ಹಂಚಿಹೋಗಿರುವ ಯುವಕರನ್ನು ಒಟ್ಟಿಗೆ ತರಬೇಕು; ಮತ್ತು ಆ ಮೂಲಕ, ದ್ವಿಜರ ಬುದ್ಧಿಮತ್ತೆಯನ್ನೂ ಶೂದ್ರರ ಚೈತನ್ಯವನ್ನೂ ಜೊತೆಗೂಡಿಸಿ ನಿಂತನೀರಿನಂತಿರುವ ಈ ಸಮಾಜವನ್ನು ಪುನಃ ಸೃಜನಶೀಲ ಗೊಳಿಸಬೇಕು. ಅಂತರಜಾತೀಯ ವಿವಾಹದ ದಂಪತಿಗಳಿಗೆ ಕೆಲಸಗಳನ್ನು ಮೀಸಲಿಡುವುದರ ಮೂಲಕ ನಾವು ಇದನ್ನು ಉತ್ತೇಜಿಸಬೇಕು. ಚೈತನ್ಯದಿಂದ ಕುದಿಯುತ್ತಿರುವ ಆದರ್ಶವಾದಿ ದಲಿತ ಹುಡುಗರು ನಮ್ಮ ಇಡೀ ಸಮಾಜದ ಸಾವಯವ ಅಂಗಗಳಾಗುವ ಸಮಯವನ್ನು ನಾವು ಸಂತೋಷದಿಂದ ನಿರೀಕ್ಷಿಸಬೇಕು. ಅದು ಸಾಧ್ಯವಾಗುವುದು ಮದುವೆಗಳ ಮೂಲಕ, ಸಹಕಾರೀ ಸೇವೆಗಳ ಮೂಲಕ, ಜೊತೆಯಲ್ಲಿ ಊಟಮಾಡುವ ಮೂಲಕ, ಆಫೀಸುಗಳಲ್ಲಿ ಕಾರ್ಖಾನೆಗಳಲ್ಲಿ ಜತೆಗೂಡಿ ಕೆಲಸ ಮಾಡುವುದರ ಮೂಲಕ.

ಸಾಮಾಜಿಕ ಬದಲಾವಣೆಗಾಗಿ ಯುವಜನರನ್ನು ಸಂಘಟಿಸುವುದರ ಮೂಲಭೂತ ಅರ್ಥ ಇದು; ತುಳಿತಕ್ಕೊಳಗಾದ ಮತ್ತು ಅವಮಾನಕ್ಕೊಳಗಾದ ಭಾರತದ ಜನರಲ್ಲಿ ಚೈತನ್ಯವನ್ನು ತುಂಬುವುದು; ಹಾಗೂ ಅವರು ಇಡೀ ದೇಶದೊಡನೆ ಸಾವಯವ ಸಂಬಂಧವುಳ್ಳ ಅಂಗಗಳೆಂದು ಪರಿಗಣಿಸುವುದು. ಧಾರ್ಮಿಕ ವ್ಯವಸ್ಥೆಯೊಂದರ ಮುಖ್ಯಸ್ಥರಾದ ಉಡುಪಿಯ ಶ್ರೀ ಪೇಜಾವರ ಸ್ವಾಮಿಯವರು ತಾವು ಮೀಸಲಾತಿಯ ಪರ ಇದ್ದೇವೆಂದ ಮತ್ತು ಅಗತ್ಯ ಬಿದ್ದರೆ ಅದಕ್ಕಾಗಿ ಹೋರಾಡಲು ತಾವು ತಯಾರೆಂದೂ ಇತ್ತೀಚೆಗಷ್ಟೇ ಕೊಟ್ಟ ಹೇಳಿಕೆಯನ್ನು ನೋಡಿ ನನಗೆ ತುಂಬ ಹರ್ಷವಾಯಿತು. ಮಡುಗಟ್ಟಿರುವ ನಮ್ಮ ಸಂಪ್ರದಾಯಶೀಲ ವ್ಯವಸ್ಥೆಯಿಂದ ಶ್ರೀ ಪೇಜಾವರ ಸ್ವಾಮಿಯವರಂಥ ಇನ್ನಷ್ಟು ಜನ ಸಂತರು ಹೊರಬಂದು ನಮ್ಮ ದೇಶದ ಜನರಲ್ಲಿ ಪುನಃ ಚೇಯನ್ಯವನ್ನು ತುಂಬುವಂತಾಗಬೇಕು. ಭಾರತೀಯ ಸಂಸ್ಖೃತಿಯ ಉತ್ಕೃಷ್ಟ ಪರಂಪರೆಯು ಸದ್ಯದ ವಾಸ್ತವದಲ್ಲಿ ಸಾಬೀತಾಗಲು ತಾವು ಅಸ್ಪೃಶ್ಯತೆಯ ಅವಮಾನಕರ ಪದ್ಧತಿಯಿಂದ ಮುಕ್ತರಾಗಬೇಕಿದೆ. ಮತೀಯ ಭಾವನೆಯಿಂದಲೇ ಮುಕ್ತರಾಗುವುದರ ಮೂಲಕ ಇಡೀ ದೇಶ ಅಸ್ಪೃಶ್ಯತೆಯ ಶಾಪದಿಂದ ಹೊರಬರುವುದು ಸದ್ಯಕ್ಕಂತೂ ಸಾಧ್ಯವೆಂದು ನನಗೆ ಅನ್ನಿಸುತ್ತಿಲ್ಲ. ಮತಧರ್ಮಗಳ ಅನುಯಾಯಿಗಳಾಗಿರುವವರೂ ತಮ್ಮ ಧರ್ಮಗಳ ತಿರುಳಿನಿಂದಲೇ ಉತ್ತೇಜಿತರಾಗಿ ತಮ್ಮಂತಲೇ ಇರುವ ಕೆಲವರನ್ನು ಅಸ್ಪೃಶ್ಯರೆಂದು ಕಾಣುವ ಹೇಸಿಗೆ ಹುಟ್ಟಿಸುವ ಆಚರಣೆಗಳಿಂದ ಈಗಿಂದೀಗಲೇ ಹೊರಬರಬೇಕು. ವಿಚಾರವಾದಿಗಳಾಬಲ್ಲಷ್ಟು ಮುಂದುವರಿದ ಅಲ್ಪಸಂಖ್ಯಾತರಿಗಿಂತ ಜನಮನಕ್ಕೆ ಹತ್ತಿರವಿರುವ ಸಂತರು ಹೆಚ್ಚು ಯಶಸ್ವಿಯಾಗಿ ಜನಮನವನ್ನು ಬದಲಾಯಿಸಬಲ್ಲರೆಂಬ ಆಶ್ವಾಸನೆಯಿಂದ ನಾನು ಈ ದಿಕ್ಕಿನಲ್ಲಿ ಹೀಗೆ ಮಾತಾಡುತ್ತಿದ್ದೇನೆ. ‘ಭಾರತಿಪುರ’ ವೆಂಬ ನನ್ನ ಕಾದಂಬರಿಯಲ್ಲಿ ವಿಚಾರವಾದದ ಇತಿಮಿತಿಗಳನ್ನು ಕಾಲ್ಪನಿಕವಾಗಿ ಶೋದಿಸಲು ಪ್ರಯತ್ನಿಸಿದ ನನಗೆ, ಈಚೆಗೆ ಈ ಸತ್ಯ ಇನ್ನಷ್ಟು ಮನದಟ್ಟಾಗಿದೆ. ಆದ್ದರಿಂದಲೇ ಮತಧರ್ಮಗಳು ಆಳವಾಗಿ ಬೇರುಬಿಟ್ಟ ಈ ನಮ್ಮ ಭಾರತದಲ್ಲಿ ಅವುಗಳನ್ನು ಬಳಸಿಕೊಂಡೇ ನಮ್ಮನ್ನು ಹೊಲಸಿನಿಂದ ಮೇಲೇತ್ತಬಲ್ಲ ಸಾಧು ಸಂತರನ್ನು ನಿರ್ಲಕ್ಷಿಸುವುದು ತಪ್ಪೆಂದು ನನಗೆ ಈಚೆಗೆ ಅನ್ನಿಸುತ್ತಿದೆ.

ಪ್ರತಿಯೊಬ್ಬನೂ ಸಾರ್ವಜನಿಕವಾಗಿ ಆಡಿ, ಖಾಸಗಿಯಾಗಿ ಮರೆಯುವ ಈ ಮೇಲೆ ಹೇಳಿದ ಅಭಿಪ್ರಾಯಗಳನ್ನು ನಿಜಗೊಳಿಸಲು ಒಂದು ಸ್ಪಷ್ಟ ಹೆಜ್ಜೆಯನ್ನೂ ಸೂಚಿಸುತ್ತೇನೆ. ನಮ್ಮ ದೇಶದ ಯುವಜನರನ್ನು ಪ್ರತ್ಯೇಕಿಸಿ, ಅಸಮಾನತೆಯನ್ನು ಇನ್ನಷ್ಟು ಉತ್ಕರ್ಷಕ್ಕೆ ತಳ್ಳುವ ಭಾರತದ ಒಂದು ಪ್ರಮುಖ ಸಂಸ್ಥೆಯೆಂದರೆ ನಮ್ಮ ಶಾಲಾ ವ್ಯವಸ್ಥೆ. ಎಲ್ಲ ಎಲೀಟಿಸ್ಟ್‌ಖಾಸಗಿ ಶಾಲೆಗಳನ್ನು ನಿರ್ಮೂಲನಗೊಳಸುವಂತೆ, ಹಾಗೂ ಎಲ್ಲ ಹುಡುಗರೂ ಒಂದೇ ರೀತಿಯ ಶಾಲೆಗಳಿಗೆ ಹೋಗುವುದು  ಸಾಧ್ಯವಾಗುವಂತೆ ನಾವು ಚಳವಳಿ ನಡೆಸಬೇಕು. ನಾವು ಪ್ರಜಾಪ್ರಭುತ್ವವಾದೀ ಹಾಗೂ ಸಮಾನಾವಕಾಶವಾದೀ ಆದರ್ಶಗಳನ್ನು ಹೊಂದಿರುವವರಾಗಿದ್ದಾಗ ಇದು ಒಂದು ಅನಿವಾರ್ಯ ಅಗತ್ಯವಾಗುತ್ತದೆ. ಶಾಲೆಯು ಆಯ್ಕೆಯ ಪ್ರಶ್ನೆಯಾಗಿರುವವರೆಗೆ ಪ್ರತಿ ತಂದೆಯೂ ತನ್ನ ಮಕ್ಕಳು ಒಂದು ಪ್ರತ್ಯೇಕ ಶಾಲೆಗೆ ಹೋಗುವಂತಾಗಬೇಕೆಂದು ಕಾತರಿಸುವುದು ಸಹಜ. ಅದನ್ನು ವೈಯಕ್ತಿಕ ಮಟ್ಟದಲ್ಲಿ ಮಾತ್ರ ತಪ್ಪಿಸುವಂತಿಲ್ಲ-ನಾವೆಲ್ಲರೂ ನಮ್ಮ ಸೋಲಿನಿಂದ ಕಂಡುಕೊಂಡಿರುವ ಸತ್ಯ ಇದು.

ಹರಿಜನರ ನಂತರ ತುಂಬ ತುಳಿತಕ್ಕೊಳಗಾದವರೆಂದರೆ ಭಾರತದ ಸ್ತ್ರೀಯರು. ಆದರೆ ಈ ತುಳಿತದ ಪ್ರಜ್ಞೆ, ನಾವದನ್ನು ಗುರುತಿಸಿಲಾಗದಷ್ಟು ಮಟ್ಟಿಗೆ ನಮ್ಮಲ್ಲಿ ಅಂರ್ಗತವಾಗಿಬಿಟ್ಟಿದೆ. ಡಾ. ಲೋಹಿಯಾರವರು ಸ್ತ್ರೀಯರು ಸ್ಥಿತಿಯ ಬಗ್ಗೆ ಹೃದಯಸ್ಪರ್ಶಿಯಾದ ಈ ಮಾತುಗಳನ್ನಾಡುತ್ತಾರೆ.

ಭಾರತದ ಬಹಸಂಖ್ಯಾತ ಸ್ತ್ರೀಯರ ಪ್ರಮುಖ ಸಮಸ್ಯೆಯೆಂದರೆ, ನಲ್ಲಿ ನೀರು ಮತ್ತು ಪಾಯಿಖಾನೆಗಳ ಕೊರತೆ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ದೂರದ ಕೊಳ್ಳ ಅಥವಾ ಬಾವಿಗಳಿಂದ ಹೆಚ್ಚಿನ ಸಾರಿ ಕೊಳಕಾದ ಹಾಗೂ ಕೆಸರು ತುಂಬಿದ ನೀರನ್ನು ಮನೆಗೆ ಹೊತ್ತು ಸಾಗಿಸುವುದು ಭಾರತೀಯ ಸ್ತ್ರೀಯ ಹಣೆಬರಹ. ತನ್ನ ಮಾರ್ಯಾದೆಯನ್ನುಳಿಸಿಕೊಳ್ಳಲು ಆಕೆ, ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತದ ನಂತರ ಬಯಲುಗಳಲ್ಲಿ ಮಲವಿಸರ್ಜನೆ ಮಾಡಬೇಕಾಗುತ್ತದೆ.
– The Caste System (
ಪುಟ. ೫೯)

ಇದು ಭಾರತದ ಬಡಸ್ತ್ರೀಯರ ಕಥೆಯಾದರೆ, ಮಧ್ಯಮ ವರ್ಗದ ಮಹಿಳೆಯರ ಸ್ಥಿತಿ ಇದಕ್ಕಿಂತ ಉತ್ತಮವೇನೂ ಅಲ್ಲ. ಅವಳ ಗಂಡನಿಗೆ ಆಕೆ ಬುದ್ಧಿವಂತೆಯೂ ಚೂಟಿಯೂ, ಚಂದದವಳೊ ಆಗಿರಬೇಕೆಂದಿರುತ್ತೆ. ಜೊತೆಗೇ ಅವನಿಗೆ, ಅವಳು ಸಂಪೂರ್ಣವಾಗಿ ತನ್ನವಳು ಮಾತ್ರವೇ ಆಗಬೇಕೆಂದೂ ಇರುತ್ತದೆ. ಡಾ. ಲೋಹಿಯಾ ಗುರುತಿಸುವಂತೆ ಇವೆರಡೂ ಪರಸ್ಪರ ಹೊಂದಾಣಿಕೆಯಾಗಲಾರದ ಆಶಯಗಳು ಮತ್ತು ಆದರಿಂದಾಗಿ ದುಃಖಕರವಾದ ಘರ್ಷಣೆಗಳೂ ಉದಿಸುತ್ತದೆ.

ಮತ್ತೆ ವರದಕ್ಷಿಣೆ ಕೂಡಾ ಹೆಂಗಸನ್ನು ಇನ್ನಷ್ಟು ಅವಮಾನಕ್ಕೆ ಸಿಕ್ಕಿಸಿ ಆಕೆಯನ್ನು ಒಂದು ವಸ್ತುವಾಗಿ ಪರಿಗಣಿಸುವಂತೆ ಮಾಡಿದೆ. ಈ ಕಾರಣದಿಂದಾಗಿಯೇ ಹೆಂಗಸರ ಕೊಲೆಯಾಗುವುದನ್ನು, ಆತ್ಮಹತ್ಯೆಗಳಾಗುವುದನ್ನು ನಾವು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ. ಹಾಗಾಗಿ, ಯುವಜನತಾದ ಕ್ರಿಯಾಶೀಲ ಕಾರ್ಯಕರ್ತರು ತಾವು ವರದಕ್ಷಿಣೆಯನ್ನು ಮುಟ್ಟುವುದಿಲ್ಲವೆಂಬ ಪ್ರತಿಜ್ಞೆ ಮಾಡಬೇಕೆಂದು ನಾನು ಸೂಚಿಸುತ್ತೇನೆ. ಇದು ಸ್ತ್ರೀ ಸ್ವಾತಂತ್ಯ್ರದ ದಿಕ್ಕಿನಲ್ಲಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೊಡೆದಾಡುವ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗುತ್ತದೆ. ಇಲ್ಲವಾದರೆ ಯಾವ ತಂದೆ ತಾನೇ ಭ್ರಷ್ಟಾಚಾರಿಯಾಗದೇ ತನ್ನ ಮಗಳನ್ನು ಮದುವೆ ಮಾಡಿಕೊಡಬಲ್ಲ? ಇಂಥ ಸಾಮಾಜಿಕ ಅನ್ಯಾಯಗಳು ಅದಕ್ಕೆ ಕೊಂಡಿಗಳಾಗಿರುವ ಇನ್ನಷ್ಟು ದುರಾಚಾರಗಳನ್ನು ಚಾಲ್ತಿಗೆ ತರುತ್ತವೆ. ಕೊನೆಯಪಕ್ಷ ನಾವು ನಮ್ಮ ವೈಯಕ್ತಿಕ ಜೀವನದಲ್ಲಾದರು ಇಂಥದನ್ನು ತೊಡೆದುಹಾಕಬೇಕು. ಇಡೀ ಸಾಮಾಜಿಕ ವ್ಯವಸ್ಥೆ ಬದಲಾಗದ ಹೊರತು ತಾನು ಬರೇ ಅಸಹಾಯಕನೆಂದು ಹೇಳಿಕೊಳ್ಳುವ ಯುವಕನನ್ನು ಯಾರೂ ನಮಬರಲಾರರು. ಅಂದರೆ, ನಮ್ಮೆಲ್ಲ ಮಿತಿಗಳಲ್ಲೂ ಆಚರಿಸಬಹುದಾದಂಥವನ್ನು ಕೂಡ ಆಚರಿಸದೇ ಇರುವುದು ಸಿನಿಕತನವಾಗುತ್ತದೆ.

* * *

ಈ ದೇಶದಲ್ಲಿ ನಾವು ಈಗಾಗಲೇ ಜಡತೆಯ ಸ್ಥಿತಿಯನ್ನು ಪ್ರವೇಶಿಸಿದ್ದೇವೆ. ನಮ್ಮ ಈ ಜಡತೆಗೆ, ನಮ್ಮ ಬಡ ಜನತೆ ಈಗಾಗಲೇ ಈ ಅಗಾಧವಾದ ದಾರಿದ್ಯ್ರಕ್ಕೆ ಸಾಕಷ್ಟು ಒಗ್ಗಿಕೊಂಡಿರುವುದು ಮಾತ್ರವಲ್ಲದೇ ಇನ್ನೂ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವೆಂದು ನನಗನ್ನಿಸುವ ಒಂದು ಕಾರಣವೆಂದರೆ ನಮ್ಮ ರಾಜಕಾರಣಿಗಳ ಎಗ್ಗಿಲ್ಲದ ನಡವಳಿಕೆ. ಜನತಾ ಪಕ್ಷದ ಸೋಲನ್ನೇ ನೋಡಿ: ನೈತಿಕ ಅವನತಿ ಮತ್ತು ಅನುಕೂಲಸಿಂಧು ರಾಜಕೀಯದ ದಶಕದಲ್ಲಿ, ನಿಸ್ವಾರ್ಥಿಗಳಾಗಿ ಮೌಲ್ಯಗಳಿಗೆ ನಮ್ಮನ್ನು ನಾವು ಸಮರ್ಪಿಸಿ ಕೊಳ್ಳುವುದು ಸಾಧ್ಯವೆಂಬುದನ್ನು, ತನ್ನ ನೈತಿಕ ಪ್ರಜ್ಞೆಗೆ ಕೊಟ್ಟ ಕರೆಗೆ ನಮ್ಮ ಅವಿದ್ಯಾವಂತ ಜನಸಮೂಹ ಸೂಕ್ತ ಪ್ರತಿಕ್ರಿಯೆ ತೋರಿಸುತ್ತದೆಂಬುದನ್ನು, ಲೋಕನಾಯಕ ಜಯಪ್ರಕಾಶನಾರಾಯಣರು ಸಾಧಿಸಿ ತೋರಿಸಿದರು. ಒಬ್ಬ ತುಂಬ ಧೀರ ಗಂಭೀರ ನಿಲುವಿನ ಅನಾರೋಗ್ಯದಲ್ಲಿದ್ದು ಹೊರಳಲೂ ಕಷ್ಟಪಡುತ್ತಿದ್ದ, ಮರಣಶಯ್ಯೆಯಲ್ಲಿರುವಾಗ ಡಯಾಲಿಸಸ್ ಯಂತ್ರಕ್ಕೆ ಅಂಟಿಕೊಂಡಿದ್ದ ಮನುಷ್ಯನೊಬ್ಬ ಭಾರತದ ಜನತೆಯ ನಿಸ್ಪೃಹ ನೈತಿಕ ಪ್ರಜ್ಞೆಗೆ ಪ್ರೇರಕವಾದದ್ದು, ಅಂಥ ಸ್ವಾರ್ಥದ ಮತ್ತು ಅಪ್ರಾಮಾಣಿಕತೆಯ ದಶಕದಲ್ಲಿ ಸಂಭವಿಸಿದ ಪರಾರ್ಥಪರತೆಯ ದೊಡ್ಡ ಗೆಲವು. ಆದರೂ ಅಧಿಕಾರದಲ್ಲಿ ಉಳಿಯಲು ಆ ಹಲವು ಮಂದಿ ರಾಜಕಾರಣಿಗಳೇ, ತಾವು ಕ್ರಿಮಿನಲ್ ಕೇಸು ಹಾಕಿದ್ದ ಸಂಜಯಗಾಂಧಿಯ ಮುಖಾಂತರವೇ ಅವಮಾನಕರವಾದ ಗುಪ್ತಕಾರ್ಯಗಳಲ್ಲಿ ತೊಡಗಿದ್ದು ಹೇಗೆ? ತುರ್ತು ಪರಿಸ್ಥಿತಿ ಕಾಲದಲ್ಲಿ ತೋರಿದ ಶೌರ್ಯಕ್ಕಾಗಿ ನಾನು ಇನ್ನೂ ಅಪಾರವಾಗಿ ಗೌರವಿಸುವ ಜಾರ್ಜ್ ಫರ್ನಾಂಡೀಸರಂಥ ವ್ಯ್ಕತಿ, ಪಾರ್ಲಿಮೆಂಟಿನಲ್ಲಿ ಜನತಾ ಪಕ್ಷವನ್ನು ಸಮರ್ಥಿಸಿ, ಆ ಮಾತುಗಳೆಲ್ಲ ಇನ್ನೂ ನಮ್ಮ ಕಿವಿಗಳಲ್ಲಿ ಅನುರಣೀಸುತ್ತಿದ್ದಾಗಲೇ ಹೇಗೆ ರಾಜೀನಾಮೆ ಕೊಟ್ಟರು?-ಇವೆಲ್ಲ ಇಡೀ ದೇಶವನ್ನೇ ದಿಗ್ಭ್ರಾಂತಗೊಳಿಸಿವೆ. ಆದುದರಿಂದ ಸಹಜವಾಗಿಯೇ ಹೆಚ್ಚಿನ ಜನ ಒಂದೋ ಸಿನಿಕರೋ ಇಲ್ಲ ನಿರುತ್ಸಾಹಿಗಳೋ ಆಗಿದ್ದಾರೆ. ಇಂಥವರನ್ನು ಕಂಡಾಗ ಜನಸಾಮಾನ್ಯರು ಏನು ಹೇಳುತ್ತಾರೆಂಬುದು ನಮಗೆಲ್ಲ ಗೊತ್ತು; “ಅವರೆಲ್ಲ ಒಂದೇ.” ಈ ‘ಅವರೆಲ್ಲ ಒಂದೇ’ ಅನ್ನುವ ಮಾತು ಇಡೀ ದೇಶದ ನಿರುತ್ಸಾಹವನ್ನು ಒಗ್ಗೂಡಿಸಿ ಹೇಳುತ್ತದೆ.

ಇಂಥ ಮಾನಸಿಕ ಸ್ಥಿತಿಯಲ್ಲಿದ್ದಾಗ ಕೆಲವರು ಈ ಸಾಮಾಜಿಕ ಕೆಡುಕುಗಳಿಗೆ ಕಾಸಗಿ ಪರಿಹಾರಗಳನ್ನು ಕಂಡುಕೊಳ್ಳುವುದು ಸ್ವಾಭಾವಿಕ. ಅವರು ಅನುಭಾವಿಗಳಾದ ಧಾರ್ಮಿಕರು. ಇನ್ನುಳಿದವರು, ಅವರಷ್ಟೇ ಪ್ರಾಮಾಣಿಕರಾಗಿದ್ದು ಯುವಕರಾಗಿರುವಂಥವರು ಹತಾಶರಾಗಿ ಉಗ್ರಗಾಮಿ ರಾಜಕೀಯಕ್ಕೆ ಧುಮುಕುತ್ತಾರೆ. ಆದುದರಿಂದ ನಮ್ಮಲ್ಲಿನ ಕೆಲವು ಅತ್ಯುತ್ತಮ ಯುವಕರು ನಕ್ಸಲಿಸಂನಿಂದ ಆಕರ್ಷಿತರಾಗುತ್ತಾರೆಂಬುದು ನನ್ನ ಅನಿಸಿಕೆ. ಅವರು, ನಮ್ಮ ಪಾರ್ಲಿಮೆಂಟರಿ ಪ್ರಜಾಪ್ರಭುತ್ವು ಮೂಲಭೂತವಾದ ಸಾಮಾಜಿಕ ಬದಲಾವಣೆಗಳ ಬಗ್ಗೆ ನಮಗಿರುವ ಶ್ರದ್ಧೆಯನ್ನು ನಿಧಾನವಾಗಿ ತಿಂದುಹಾಖುತ್ತದೆಯೆಂದೂ, ಹಾಗೂ ಅದರಲ್ಲಿ ಭಾಗಿಗಳಾದವರು ಯಶಸ್ಸಿನ ಮೆಟ್ಟಲಲ್ಲಿ ಎಷ್ಟೇ ಮೇಲೇರಿದ್ದರೂ ಕೊನೆಯಲ್ಲಿ ಭ್ರಷ್ಟರೂ, ನಿರ್ಬೀಜರೂ ಆಗುತ್ತಾರೆ ಎಂದೂ ಅಂದುಕೊಂಡಿರುತ್ತಾರೆ.

ಚುನಾವಣೆಗಳು ಎಷ್ಟು ದುಬಾರಿಯಾಗಿವೆ ನೋಡಿ. ಕಳ್ಳಸಾಗಣಿಕೆದಾರರ ಮತ್ತು ಅಕ್ರಮ ದಾಸ್ತಾನುಗಾರರ ಹಣಸಹಾಯವಿಲ್ಲದೆ ಯಾರಾದರೂ ಚುನಾವಣೆಯಲ್ಲಿ ಕಾದಾಡುವುದುಸಾಧ್ಯವೇ? ನಕ್ಸಲೀಯರ ಮೂರ್ಖತನದ ಮತ್ತು ಅಪ್ರಬುದ್ಧ ಸಾಹಸಿಗತನದ ಪ್ರವೃತ್ತಿ ತಪ್ಪಾದದ್ದು. ಆದರೆ ಉಳಿದ ಯುವ ರಾಜಕಾರಣಿಗಳು ಪರ್ಯಾಯವಾಗಿ ಏನನ್ನು ಕೊಡಬಲ್ಲರು? ಯಾಕೆಂದರೆ ಅವರು ಯಾವನೋ ಒಬ್ಬ ಅಧ್ಯಕ್ಷ ರಾಜಕಾರಣಿಯ ಕೃಪಾಕಟಾಕ್ಷ ದಿಂದ ಹರುಕು ಮುರುಕಾಗಿ ಸಂಘಟಿತರಾಗಿ ಆತನ ಬಾಲಬಡುಕರಾಗಿರುತ್ತಾರೆ. ಯುವ ಜನತಾದ ಮುಂದಿರುವ ಪ್ರಶ್ನೆ ಇದು: ಚುನಾವಣೆಯ ಸಮಯದಲ್ಲಿ ಕಾರ್ಯಶೀಲವಾಗುವ ಇತರ ರಾಜಕೀಯ ಪಕ್ಷಗಳ ಯುವಕರಿಗಿಂತ ಭಿನ್ನರಾಗಲು ನಿಮ್ಮಲ್ಲಿರುವ ಇತರ ಹಾದಿಗಳ್ಯಾವುವು?

ಯುವಕರಿಗೆ ಹುದ್ದೆಗಳನ್ನು ತಿರಸ್ಕರಿಸಿ ಅಧಿಕಾರಕ್ಕಾಗಿ-ಜನರ ಅಧಿಕಾರಕ್ಕಾಗಿ ಹುಡುಕುವ ಕಾತರ ಮತ್ತು ಆದರ್ಶಗಳಿರಬೇಕು. ಆ ಮೂಲಕ ಅವರು ನಿರ್ಬೀಜವೂ, ನಿಂತ ನೀರಿನದೂ ಆದ ಈ ಭಾರತೀಯ ಸಮಾಜವನ್ನು ಸೃಜನಶೀಲ ಸಮೂಹವನ್ನಾಗಿಸಬೇಕು. ತಮ್ಮ ಚೈತ್ನಯಪೂರ್ಣ ಶೀಲದ ಜೊತೆಜೊತೆಗೇ ನಾಚಿಕೆಯ ಗುಣವನ್ನೂ ಯುವಕರು ಉಳಿಸಿಕೊಂಡಾಗ ಅದು ಆಧ್ಯ. ನಾಚಿಕೆಯ ಸ್ವಭಾವ ಯಾಕೆ ಅಗತ್ಯವೆಂದರೆ, ಅವಮಾನಕರವಾದ ಚಟುವಟಿಕೆಗಳಿಂದ ದೂರವಿರಲು ಮತ್ತು ರಾಜಕಾರಣಿಗಳ ಬಾಯಿಬಡಕುತನಕ್ಕೆ ಬೀಳದಿರಲು ಇರುವ ಏಕೈಕ ಉತ್ತಮ ಮಾರ್ಗವೆಂದರೆ ಅದು. ನಮ್ಮ ಒಳ ಬದುಕು ಸಾಹಿತ್ಯ, ಸಂಗೀತ, ಕಲೆ ಮತ್ತು ವಿಜ್ಞಾನದ ಚಿಂತನಶೀಲತೆಗಳೊಂದಿಗೆ ಬೆಸೆಯುವುದು ನಮಗೆ ಶಕ್ಯವಿರಬೇಕು. ನಾವು ಏಕಾಂತವನ್ನು ಪ್ರೀತಿಸುವಂಥವರಾಗಿರಬೇಕು; ಯಾಕೆಂದರೆ ಆಗ ಮಾತ್ರ ನಮ್ಮ ಒಳಗಿನ ಬದುಕು ಪುನಃ ಚೈತನ್ಯ ಶೀಲವಾಗಬಲ್ಲುದಾಗುತ್ತದೆ. ಇದು ಯಾಕೆ ಮುಖ್ಯವೆಂದರೆ, ರಾಜಕಾರಣಕ್ಕಿಳಿದವರು ಯಾವಾಗಲೂ ಸಾರ್ವಜನಿಕರಿಗೆ ಮುಖ ತೋರಿಸುವವರಾಗಿ ಬಿಡುವುದರಿಂದ ಸದಾಕಾಲ ಮುಖದ ಮೇಲೆ ಮುಗಳ್ನಗೆಯನ್ನಂಟಿಸಿಕೊಂಡು ನಡೆದಾಡುವವರಾಗುತ್ತಾರೆ. ಇಂಥ ಆಷಾಢಭೂತಿಗಳನ್ನು ಯಾರೂ ನಂಬುವುದಿಲ್ಲ. ಈ ದೇಶಕ್ಕೆ ಪ್ರಜ್ಞಾವಂತರೂ, ಧೈರ್ಯಶಾಲಿಗಳೂ ಹೃದಯವಂತರೂ ಆದ, ನಾಚಿಕೆಯನ್ನು ಕಳೆದುಕೊಳ್ಳದಂಥ ಯುವಜನರ ಸೇವೆಯ ಅಗತ್ಯವಿದೆ. ಯಾಕೆಂದರೆ ಅಂಥವರಿಗೆ ರಾಜಕೀಯವು, ತಮ್ಮ ವೈಯಕ್ತಿಕ ಬದುಕಿನ ಹಿತಾಸಕ್ತಿಯನ್ನು ಸಮೂಹದ ಉತ್ತಮಿಕೆಗಾಗಿ ಧಾರೆಯೆರೆಯುವ ಮಾರ್ಗವಾಗಿರುತ್ತದೆ. ರಾಜಕೀಯವು ಪುನಃ, ಗಾಂಧೀಜಿ ಮತ್ತು ಲೋಹಿಯಾರಿಗಿದ್ದಂತೆ. ನಮ್ಮ ಆಳವಾದ ನಂಬಿಕೆಗಳನ್ನು ಪಣಕ್ಕಿಡುವ ಕಣವಾಗಬೇಕು. ನಮಗೆ ಇನ್ನೂ ರಾಜಕೀಯವೇ ನಮ್ಮ ಜೀವನದ ಎಲ್ಲ ಮೌಲಿಕ ಕಾಳಜಿಗಳ ಕೇಂದ್ರವಾಗುವುದು-‘ಕಂಬನಿ ತುಳುಕುವಾಗಲೂ ಸಿಟ್ಟಿನಿಂದ ಕೆಂಪಾಗುವ ಕಣ್ಣಿದ್ದಾಗ’ ಸಾಧ್ಯವಿದೆ.

(೧೯೮೧ರ ಆರಂಭದಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಯುವಜನತಾ ಮೇಳವನ್ನುದ್ದೇಶಿಸಿ ಮಾಡಿದ ಕೀ ನೋಟ್ ಭಾಷಣ. ‘ಸಾಕ್ಷಿ೪೪ರಲ್ಲಿ ಪ್ರಕಟವಾಯಿತುಕನ್ನಡಕ್ಕೆ ಭಾಷಾಂತರ: ಎಚ್.ಪಟ್ಟಾಭಿರಾಮ ಸೋಮಯಾಜಿ.)

* * *