ನಾನು ಪಾಠ ಮಾಡುವ ವಿಶ್ವವಿದ್ಯಾನಿಲಯದ ಕಟ್ಟಡಗಳ ಬಿಳಿಗೋಡೆಗಳ ಮೇಲೆಲ್ಲ ಕೆಂಪಕ್ಷರದಲ್ಲಿ ಯುವಕರು ತಮ್ಮ ಹೃದಯ ತೋಡಿಕೊಂಡ ಒಂದು ಮಾತನ್ನು ನಿತ್ಯ ಓದುತ್ತಿದ್ದೇನೆ. ‘ನಮಗೆ ಬೇಕಾದ್ದು ಸುಧಾರಣೆಯಲ್ಲ, ಬದಲಾವಣೆ’, ಎನ್ನುತ್ತಾರೆ ಈ ಯುವಕರು. ಇವರು ನಿತ್ಯಜೀವನದ ಪರದಾಟಗಳಿಂದ ಇನ್ನೂ ಜಡ್ಡಾಗದ ಕನಸುಗಾರರು. ಹುಮ್ಮಸುಳ್ಳವರು. ಪ್ರಾಯಶಃ ಕೆಲವರು ತಮ್ಮ ನಿರನುಭವದಿಂದಾಗಿಯೇ ಯಾವ ತ್ಯಾಗಕ್ಕಾದರೂ ಸಿದ್ಧರಾದವರು. ಇವರಲ್ಲಿ ಕೆಲವು ಜನ ಆತ್ಮರತರೂ ಹುಂಬರೂ ಇರಬಹುದು. ಆದರೆ ಪ್ರತಿ ಜನಾಂಗದಲ್ಲೂ ಇಂತಹ ಮಾತುಗಳನ್ನು ಆಡಬೇಕೆಂದು ಅನ್ನಿಸುವವರು ಇರುವತನಕ ವ್ಯಕ್ತಿ ಮತ್ತು ಸಮುದಾಯದ ನಡುವಿನ ಸಂಬಂಧದಲ್ಲಿ ಪರಹಿತ ಚಿಂತನೆ ತರುವ ಹಂಬಲ ಉಳಿದಿರುತ್ತದೆ. ಹೀಗೆ ಬರೆಯುವ ತವಕದವರಿಗೆ ಗಾಂಧೀಜಿ ಪ್ರಾಯಶಃ ಆದರಣೀಯರಲ್ಲ. ಆದರೂ ಗಾಂಧಿಜಿ ಇಂಥ ಕನಸುಗಾರ ಹುಡುಗರಿಗೆ ಪ್ರಸ್ತುತವಾಗಬೇಕೆಂಬ ಆಸೆಯಿಂದ ನಾನೀಗ ಮಾತಾಡುತ್ತಿರುವುದು.

ನಿಜವೇ-ಸುಧಾರಣೆ ಎಂದರೆ ತೇಪೆ ಹಾಕುವ ಕೆಲಸ. ನಮ್ಮ ವ್ಯವಸ್ಥೆ ಕುಸಿಯದಂತೆ, ಅದಕ್ಕೆ ಅಷ್ಟಿಷ್ಟು ಜೀವದಾನ ಮಾಡುವ ಸುಧಾರಣೆ-ಬಂಡವಾಳಶಾಹೀ ವ್ಯವಸ್ಥೆಗೆ ಅರ್ಥ ಶಾಸ್ತ್ರಜ್ಞ ಕೇನ್ಸ್ ಕೊಟ್ಟಂಥ ಚಿಕಿತ್ಸೆ-ತರುವ ಅತೃಪ್ತಿ ನನಗೆ ಅರ್ಥವಾಗುತ್ತದೆ. ಮೂರನೇ ಜಗತ್ತಿನ ಸಮಸ್ಯೆಗಳಿಗೆ ಈ ಬಗೆಯ ಸುಧಾರಣೆಗಳಲ್ಲಿ ದೀರ್ಘಾವಧಿಯ ಪರಿಹಾರ ಕೂಡ ಇಲ್ಲವೆನ್ನಿಸುತ್ತದೆ. ಆದರೆ ಈ ಯುವಕರು ಬದಲಾವಣೆ ಬೇಕು ಅಂದಾಗ ಅವರು ಕಾಣುವುದು ಈಗಾಗಲೇ ನಮಗೆ ಪರಿಚಿತವಾದ ಸಾಮಾಜಿಕ ಕ್ರಾಂತಿಗಳು ಎಂದು ನನ್ನ ಭಾವನೆ. ಚೈನಾದಲ್ಲಾಗಲಿ, ರಷ್ಯಾದಲ್ಲಾಗಲಿ ನಡೆದಿರುವ ಕ್ರಾಂತಿ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕ ಬದಲಾವಣೆಗಳನ್ನು ಖಂಡಿತವಾಗಿಯೂ ತಂದಿದೆ. ನಾವು ಇರುವ ದೈನ್ಯದ ಸ್ಥಿತಿಯಲ್ಲಿ ಈ ಬಗೆಯ ಬದಲಾವಣೆ ಬೇಡ ಎನ್ನುವುದು ಹೃದಯಹೀನ ವಿತಂಡವಾದವಾಗುತ್ತದೆ. ಏನಿಲ್ಲದಿದ್ದರೂ ಚೈನಾದಲ್ಲಿ ಭಾರತದಲ್ಲಿರುವಷ್ಟು ದಾರಿದ್ಯ್ರ ಮತ್ತು ಹಸಿವು ಇರಲಾರದು. ಅಕ್ಷರಸ್ಥರ ಸಂಖ್ಯೆ ಇಲ್ಲಿಗಿಂತ ಅಲ್ಲಿ ಹೆಚ್ಚಿದೆ. ಆದ್ದರಿಂದ ನಮ್ಮ ಕ್ರಾಂತಿಕಾರಿ ಯುವಕರು ಹೇಳುವ ಬದಲಾವಣೆ ತೇಪೆ ಹಾಕುವ ಸುಧಾರಣೆಗಿಂತ ಹೆಚ್ಚು ಮೌಲಿಕವಾದದು. ಯಾಕೆಂದರೆ ಈ ಬದಲಾವಣೆಯಲ್ಲಿ ಕೆಲವರಿಗೆ ಎಷ್ಟು ಹಿಸೆಯಾದರೂ, ಹಲವರಿಗೆ ಹೆಚ್ಚು ನೆಮ್ಮದಿ ತರಬಲ್ಲ ಉತ್ಪಾತಗಳ ಫಲವಾಗಿ ಇಡೀ ಸಮಾಜ ಸ್ವಲ್ಪ ಕಾಲವಾದರೂ ಮೈಕೊಡವಿ ನಿಲ್ಲಬಲ್ಲ ಚೈತನ್ಯ ಪಡೆಯುತ್ತದೆ. ಬಡಜನರ ರೊಚ್ಚು ಕೊಳಕನ್ನು ಸುಡಬಲ್ಲ ಅಗ್ನಿಯಾಗುತ್ತದೆ; ಅವರ ಅಸೂಯೆ, ಹೊಟ್ಟೆಯುರಿ, ಸೇಡು-ಇಂಥ ಭಾವನೆಗಳೂ ಮೊತ್ತದಲ್ಲಿ, ಅಲ್ಪಾವಧಿಯಲ್ಲಿ, ಗುಣಾತ್ಮಕ ಅಂಶಗಳನ್ನು ಪಡೆದುಕೊಂಡು ಬಿಡುತ್ತವೆ.

ಹೀಗೆ ಹೇಳಿದ ಮೇಲೂ ನಮ್ಮ ಯುವಕರು ಬಯಸುವ ಬದಲಾವಣೆ ಕೂಡ ಆತ್ಮಹೀನವಾಗಿರುತ್ತದೆ; ಯಾಕೆಂದರೆ ಅದನ್ನು ತರುವ ನಾಯಕವರ್ಗ ಹೃದಯಹೀನವಾಗಿರಬೇಕಾಗುತ್ತದೆ-ಅನಿವಾರ್ಯವಾಗಿ, ಎಂದು ತುಮಬ ಸಂಕೋಚದಿಂದಲೇ ನಾನು ಹೇಳುವೆ. ಸಂಕೋಚ ಯಾಕೆಂದರೆ, ಆಗಬಹುದಾದ ಒಳ್ಳೆಯದಕ್ಕೆ ಟಾಂಗುಕೊಡುವ ಆದರ್ಶಪರತೆ ಕ್ರಿಯೆಯ ಪರೀಕ್ಷೆಗೆ ಒಳಗಾಗದಿದ್ದಲ್ಲಿ, ಕೇವಲ ಬಾಐಚಪಲವಾದಲ್ಲಿ ಅನೈತಿಕ ಆಗಬಹುದಾದ್ದನ್ನು ತಡೆಯುವುದಕ್ಕೋಸ್ಕರ, ಆಗಲಾರದ್ದನ್ನು ಎತ್ತಿ ಹಿಡಯುವುದು ರಾಜಕೀಯವಾಗಿ ಜಾಣತನದ ವಂಚನೆಯಾಗಿಬಿಡಬಹುದು. ಆದರೂ ಚರಿತ್ರೆಯ ಸತ್ಯವನ್ನು ಮುಚ್ಚಿಟ್ಟು ಮಾತಾಡಬಾರದು. ಈಗಿನ ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ವ್ಯವಸ್ಥೆಗಳಿಗೆ ಪರ್ಯಾಯವಾದ ಇನ್ನೊಂದು ನಾಗರಿಕತೆಯ ಸೃಷ್ಟಿಗೆ ಅಗತ್ಯವಾದ ವಿಚಾರಗಳನ್ನು-ಅವರು ಸದ್ಯ ಯಾರಿಗೂ ಬೇಕಿಲ್ಲದ ವಿಚಾರಗಳೆಂದು-ಹೇಳಲು ಹಿಂಜರಿಯಬಾರದು. ಈ ಸಂದಿಗ್ಧದಲ್ಲಿ ನಾನೀಗ ಮಾತಾಡುತ್ತಿರುವುದು.

ಚೈನಾದಲ್ಲೂ ರಷ್ಯಾದಲ್ಲೂ ಮಹತ್ತರವಾದ ಸಾಮಾಜಿಕ ಬದಲಾವಣೆಗಳಾದುವು. ಆದರೆ ಮನುಷ್ಯ ಯಾಕೆ ಬದಲಾಗಲಿಲ್ಲ? ಪಾಶ್ಚಾತ್ಯ ಮಾದರಿಯ ಬಹ್ಯುತ್ಪನ್ನದ ಲೋಭದ ಜೀವನದ ಕ್ರಮಕ್ಕಾಗಿ ಚೈನಾವು ಯಾಕೆ ಹಾತೊರೆಯುತ್ತಿದೆ? ಕಾರಣ ಹೀಗಿರಬಹುದೇನೊ: ಬದಲಾವಣೆ ಆಗಿದೆ ನಿಜ: ಆದರೆ ಈ ಬದಲಾವಣೆ ತಂದ ಚೈತನ್ಯ ಇಡೀ ದೇಶವನ್ನು ಪಾಶ್ಚಾತ್ಯ ಮಾದರಿಯ ಕೈಗಾರಿಕೀರಣಕ್ಕೆ ಸನ್ನದ್ಧಗೊಳಿಸುವಲ್ಲಿ ತೃಪ್ತವಾದಂತೆ ತೋರುತ್ತದೆ. ಮತ್ತು ಯುದ್ಧ ಸನ್ನದ್ಧತೆಗಾಗಿ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಈ ದೇಶಗಳು ಮುಂದು ಹಾಕಿದಂತೆಯೂ ತೋರುತ್ತದೆ. ಆದ್ದರಿಂದ ನಮಗೆ ಕೊನೆಯಲ್ಲಿ ದೊರೆಯುವ ಮಾನವ ತನ್ನ ಸ್ವಭಾವದಲ್ಲಿ ಮತ್ತು ವರ್ತನೆಯಲ್ಲಿ ಹೊಸಬನೆಂದೇನೂ ಅನ್ನಿಸುವುದಿಲ್ಲ. ಮಾನ ತನ್ನ ಸ್ವಭಾವದಲ್ಲಿ ಮತ್ತು ವರ್ತನೆಯಲ್ಲಿ ಹೊಸಬನೆಂದೇನೂ ಅನ್ನಿಸುವುದಿಲ್ಲ. ಮೂಲತಃ ಎಲ್ಲರೂ ಅಮೆರಿಕನ್ನರಂತಾಗಲು ಬಯಸುತ್ತಾರೆ; ಭಾರತೀಯರಾದ ನಾವು ಕೂಡ. ಸುಧಾರಣೆಯಲ್ಲಿ ಈಗಿರುವುದೇ ಶಾಶ್ವತವಾಗಿ ಬಿಡುವಂತೆ, ಕ್ರಾಂತಿಕಾರಕ ಬದಲಾವಣೆಯಲ್ಲೂ ಮಾನವನಿಗೆ ಈಗಾಗಲೇ ರುಚಿ ಹತ್ತಿದ ಜೀವನಕ್ರಮ ಗುಣಾತ್ಮಕವಾಗಿ ಭಿನ್ನವಾಗಬೇಕಾದ ಒತ್ತಡ ಹೆಚ್ಚು ಕಾಲ ಉಳಿಯುವಂತೆ ಕಾಣುವುದಿಲ್ಲ.

ಆದ್ದರಿಂದಲೇ ಗಾಂಧೀಯನ್ನು ಹೆಚ್ಚುವವರು ಕೇಳುವುದು ಸೂಧಾರಣೆಯನ್ನೂ ಅಲ್ಲ, ವ್ಯವಸ್ಥೆಯ ಬದಲಾವಣೆಯನ್ನೂ ಅಲ್ಲ. ಪ್ರಾಯಶಃ ಗಾಂಧೀಯನ್ನು ಕುರಿತು ಚಿಂತಿಸುವ ನಾವು ಬಳಸಬಹುದಾದ ಶಬ್ದ, ಪರಿವರ್ತನೆ. ಪರಿವರ್ತನೆ ಎಂದರೆ, ಅಮೂಲಾಗ್ರವಾಗಿ ಹೊಸ ನಾಗರಿಕತೆಯಲ್ಲಿ ಹೊಸ ಮನುಷ್ಯನನ್ನು ಕಾಣುವ ಛಲ. ಇದು ಕೇವಲ ಭವಿಷ್ಯದಲ್ಲಿ ಮಾತ್ರ ಸಾಧ್ಯವಾಗುವ ಕಾಲ್ಪನಿಕ ಸ್ಥಿತಿಯಲ್ಲ. ನಿಸರ್ಗದ ಚೆಲುವಿಗೆ ಮನುಷ್ಯ ಪುಳಕಿತನಾದಾಗ, ಬಯಕೆಯ ವ್ಯಗ್ರತೆರ ಕಳೆದು ಮನಸ್ಸು ಸಮಾಧಾನದ ಸ್ಥಿತಯಲ್ಲಿದ್ದಾಗ, ಹುರುಪಿನ ಪ್ರೇಮದಲ್ಲೂ, ಪಕ್ವವಾದ ಅಕ್ಕರೆಯಲ್ಲೂ ನಾವು ಕಾಣುವ ಪ್ರಪಂಚ ಎಷ್ಟು ಸುಂದರವಾಗಿದೆ ಎನ್ನಿಸುವಾಗ ಈ ಪರಿವರ್ತನೆಯ ಸಾಧ್ಯತೆ ಕೇವಲ ಭವಿಷ್ಯದ ಸಂಗತಿ ಅಲ್ಲ-ಈ ಇಲ್ಲೇ ನಮಗೆ ಸಾಧ್ಯವಾಗುವಂಥದ್ದು. ಕವಿಗಳು, ದೈವಿಕ ಹುಚ್ಚರು, ಪ್ರೇಮಿಗಳು, ಮೈಮರೆಯಬಲ್ಲ ಎಲ್ಲರೂ, ಕೆಲವು ಕ್ಷಣವಾದರೂ, ಈ ಸ್ಥಿತಿಯನ್ನು ಅನುಭವಿಸಿರುತ್ತಾರೆ.

ನಾನು ಮೆಚ್ಚುವ ಗಾಂಧಿಯ ಚಿತ್ರ ಒಂದಿದೆ. ಅದರಲ್ಲಿ ಅವರ ಬೋಳು ತಲೆ ಸ್ವಲ್ಪ ಬಲಕ್ಕೆ ಓರೆಯಾಗಿ ಬಾಗಿದೆ; ಕನ್ನಡಕದ ಹಿಂದಿನ ಕಣ್ಣುಗಳು ಶಾಂತವಾಗಿ ಮುಚ್ಚಿಕೊಂಡಿವೆ; ಮೈ ಬರಿದಾಗಿದೆ. ಅಗತ್ಯಕ್ಕಿಂತ ಒಂದು ತೊಲ ಹೆಚ್ಚು ಕೊಬ್ಬೂ ಅವರ ಮೈಮೇಲೆ ಕಾಣಿಸುವುದಿಲ್ಲ. ಬೊಚ್ಚುಬಾಯಿ ಮುಚ್ಚಿಕೊಂಡ ಅವರ ಮುಖದ ಮುದ್ರೆ ಶಾಂತಿ ಸಮಾಧಾನವನ್ನೂ ಹೊಮ್ಮಿಸುವಂತಿದೆ. ನನಗೂ ನಿಮಗೂ ಈಗಿಂದೀಗಲೇ ಏಕಾಗ್ರತೆಯಲ್ಲಿ ಸಾಧ್ಯವಾಗಬಹುದಾದ ಅಪಾರವಾದ ಸಮಾಧಾನದ ಸಂತೋಷದ ಸ್ಥಿತಿ ಇದು ಎನ್ನಿಸುತ್ತದೆ. ಆದರೂ ಇದಕ್ಕಿಂತ ಹೆಚ್ಚು ಕಷ್ಟವಾದ್ದು ಕೂಡ ಇಲ್ಲವೇನೋ!

ಗಾಂಧೀಜಿ ಬಯಸಿದ ಪರಿವರ್ತನೆ, ವ್ಯಕ್ತಿಯ ಒಳಗಿನದು ಮತ್ತು ಸಮಾಜದ್ದು; ಯಾಕೆಂದರೆ ಒಳಗಿಗೂ ಹೊರಗಿಗೂ ವ್ಯತ್ಯಾಸವಿಲ್ಲ ಎಂಬ ಕಾಣ್ಕೆಯದು. ಸಮಾಜದ ಬೇನೆಯನ್ನು ಕೂಡ ಗಾಂಧೀಜಿ ವ್ಯಕ್ತಿಯಲ್ಲೇ ಅಂತರ್ಗತವಾದ ವೇದನೆಯಾಗಿ ಕಂಡರು. ಆದ್ದರಿಂದಲೇ ಅವರು ಬ್ರಿಟಿಷರ ಸಾಮ್ರಾಜ್ಯ ಪ್ರವೃತ್ತಿಯನ್ನು ವಿರೋಧೀಸುವಾಗ ಅದರ ಬೀಜ ಒಬ್ಬ ಭಾರತೀಯನಲ್ಲೂ ಇರುವುದೂ ಸಾಧ್ಯವೆಂದು ತಿಳಿದರು. ಆಳುವ ಬ್ರಿಟಿಷರು ನಮ್ಮನ್ನು ನಿಕೃಷ್ಟವಾಗಿ ಕಂಡರೆ, ನಾವು ಕೂಡ ಹರಿಜನರನ್ನು ನಿಕೃಷ್ಟವಾಗಿ ಕಾಣುತ್ತಿಲ್ಲವೆ? ಈ ಸಾಂರಾಜ್ಯಶಾಹಿ ಪ್ರವೃತ್ತಿ ಎನ್ನುವುದು ಎಲ್ಲ ಮನುಷ್ಯರಿಗೂ ಇರುವ, ಬೇರೆಯವರನ್ನು ಹಿಡಿತದಲ್ಲಿಟ್ಟು ಆಳಬೇಕೆಂಬ ಆಸೆಯಲ್ಲೇ ಅಂತರ್ಗತವಾಗಿದೆ ಎಂದು ಗಾಂಧೀಜಿ ಕಂಡರು.

ಅಲ್ಲದೆ ಈ ಆಸೆ ಯಜಮಾನನ್ನೂ ಗುಲಾಮನನ್ನೂ ಒಟ್ಟಾಗಿ ಕುಗ್ಗಿಸುವ ಪ್ರವೃತ್ತಿಯೆಂದೂ ತಿಳಿದರು. ತುಳಿತಕ್ಕೆ ಒಳಗಾದವನಾದರೋ, ‘ಒಲ್ಲೆ’ ಎಂದು ಸಿಡಿದೆದ್ದಾಗ, ಆ ಒಂದು ಕ್ಷಣದಲ್ಲೇ, ತನ್ನ ಇಡೀ ಮನುಷ್ಯತ್ವವನ್ನು ಗಿಟ್ಟಿಸಿಕೊಂಡು ಬಿಡುತ್ತಾನೆ. ಆದರೆ ತುಳಿಯುವವನಿಗೆ ಬದಲಾಗುವುದು ಅಷ್ಟು ಸುಲಭವಲ್ಲ.ಬಗ್ಗಲಾರದ ಈ ಬೊಜ್ಜ ದುರ್ದೈವಿಯೇ ಎನ್ನಬೇಕು. ಆದ್ದರಿಂದಲೇ ಗಾಂಧೀಜಿಗೆ ಐಹಿಕವಾದ ಬಲದಲ್ಲಿ ಕೊಬ್ಬಿದವರನ್ನು ಕಂಡರೆ ಅಪಾರವಾದ ಕರುಣೆ. ವೈದ್ಯ ರೋಗಿಗೆ ಹಿತ ನುಡಿದಂತೆ ವೈಸ್‌ರಾಯರ್‌ಗಳ ಜೊತೆ ಅವರು ಮಾತನಾಡುತ್ತಿದ್ದರು. ಲಾರ್ಡ್ ಮೌಂಟ್ ಬ್ಯಾಟನ್‌ಗೆ ಮೇಕೆಯ ಹಾಲನ್ನು ಕುಡಿಸಿದ್ದರು.

ಸಾಯುವ ಹೆದರಿಕೆಯೊಂದನ್ನು ಗೆದ್ದು ಬಿಟ್ಟವನನ್ನು ಯಾರು ತಾನೆ ಅವಮಾನ ಗೊಳಿಸಬಲ್ಲರು? ಇದನ್ನು ಮನಗಂಡ ಗಾಂಧೀಜಿ ಸತ್ಯಕ್ಕಾಗಿ ಪ್ರಾಣಾರ್ಪಣೆಯನ್ನು ಮಾಡುವ ನಿರ್ಧಾರದಲ್ಲೇ ಯಾವತ್ತೂ ಕಾರ್ಯೋನ್ಮುಖರಾಗುತ್ತಿದ್ದರು. ಇದರಿಂದ ಹುಟ್ಟುವ ಹರ್ಷ ಮತ್ತು ಯಾವ ದುಷ್ಟತನದಿಂದಲೂ ಎದೆಗುಂದದೆ ಮುನ್ನಡೆಯುವ ಧೈರ್ಯ ಎರಡೂ ಕೂಡಿದಾಗ ಮನುಷ್ಯ ಎಷ್ಟು ಸುಂದರನಾಗುತ್ತಾನೆಂಬುದನ್ನು ನಾವು ಗಾಂಧೀಜಿಯಲ್ಲಿಯೇ ಕಾಣುತ್ತೇವೆ. ಮಕ್ಕಳನ್ನು ಬಿಟ್ಟರೆ ಹಾಸ್ಯನಟ ಚಾಪ್ಲಿನ್ ಮಾತ್ರ ಅವರಂತೆ ನಗಬಲ್ಲವನಾಗಿದ್ದ ಎನ್ನುತ್ತಾರೆ. ಆದ್ದರಿಂದಲೇ ಹೋರಾಟವೆಂದರೆ ಗಾಂಧೀಜಿಗೆ ಗಂಟುಮೋರೆಯ ಸಿಡಿಮಿಡಿಯಿಲ್ಲ-ದಾಪುಗಾಲಿನಲ್ಲಿ ಗೆಲುವಿನ ಬುಗ್ಗೆಯಾಗಿ ಬಿಡುವ ದಂಡೀಯಾತ್ರೆ; ಹಿಡಿಯುಪ್ಪಿನಲ್ಲಿ ಸಾಮ್ರಾಜ್ಯಶಾಹಿಯ ದರ್ಪವನ್ನು ಇಳಿಸಬಲ್ಲ ಮಾಂತ್ರಿಕತೆ. ಇದರ ಸರ್ವಸಾಧಾರಣ ಗುಣ ಮತ್ತು ಸರ್ವ ಸಾಧ್ಯತೆ ಬೆರಗು ಹುಟ್ಟಿಸುವಂಥದ್ದು. ಸಾವಿನ ಹೆದರಿಕೆಯೊಂದು ಹೋಗಿಬಿಟ್ಟರೆ, ಮನುಷ್ಯ ಎಷ್ಟು ಗೆಲುವಾಗಿ ಇರಲು ಸಾಧ್ಯ ಮತ್ತು ಎಷ್ಟು ಸಹಜವಾಗಿ ಅವನು ದ್ವೇಷವಿಲ್ಲದ, ಅನ್ಯಾಐದ ವಿರುದ್ಧ ಪ್ರತಿಭಟಿಸಬಲ್ಲ ಎಂಬುದನ್ನು ಗಾಂಧಿಜಿ ನಮಗೆ ಕಾಣಿಸಿದ್ದಾರೆ. ತನ್ನನ್ನು ಜೈಲಿಗೆ ಹಾಕಿದ ಜನರಲ್ ಸ್ಮಟ್ಸಿಗೆ ಚಪ್ಪಲಿ ಹೊಲಿದುಕೊಟ್ಟ ಗಾಂಧೀಜಿ ತಾವು ಪ್ರೀತಿಸಿದವರನ್ನು ಅಳಿಸಬಲ್ಲಷ್ಟೂ ನಿಷ್ಠುರರು. ‘ಮಂಡಿ ಮೇಲೆ ಪಂಚೆಯುಟ್ಟೇ ಬ್ರಿಟಿಷ್ ದೊರೆಯನ್ನು ನೋಡಿದೆಯಾ’ ಎಂದು ಕೇಳಿದರೆ, ಚಕ್ರವರ್ತಿ ತಮ್ಮಿಬ್ಬರಿಗೂ ಸಾಕಾಗುವಷ್ಟು ಬಟ್ಟೆ ತೊಟ್ಟಿದ್ದ ಎಂದು, ಅವನು ಹೇರಿಕೊಂಡ ಅನಗತ್ಯ ಭೂಷಣದ ಬಗ್ಗೆ ಕನಿಕರ ಹುಟ್ಟಿಸಿದವರು.

ರಾಜಕೀಯವಾಗಿ ಗಾಂಧೀಜಿ ಸಾಮ್ರಾಜ್ಯಶಾಹಿಯನ್ನ ಬದುಕಿನ ದೊಡ್ಡ ಶತ್ರುವಾಗಿ ಕಂಡರು. ಈ ಭಾವನೆ ಅವರಲ್ಲಿ ಎಷ್ಟು ಆಳವಾಗಿತ್ತೆಂದರೆ, ಸಾಮ್ರಾಜ್ಯಶಾಹಿಯ ಪ್ರವೃತ್ತಿಯನ್ನೇ ಮನುಷ್ಯನ ಮನಸ್ಸಿಂದ ಕಿತ್ತು ಹಾಕಲು ಹಿಂದೆ ಯಾರೂ ಹೊಕ್ಕು ನೋಡದ ಮನಸ್ಸಿನ ಆಳಗಳಲ್ಲೆಲ್ಲ ತಡಕಾಡಿದರು. ನಿಸರ್ಗದ ಮೇಲೆ ತನ್ನ ಪೂರ್ಣ ಪ್ರಭುತ್ವವನ್ನು ಸ್ಥಾಪಿಸಬೇಕೆನ್ನುವ ಮನುಷ್ಯನ ಬೌದ್ಧೀಕ ಅಹಂಕಾರದಲ್ಲೇ ಅವರು ಸಾಮ್ರಾಜ್ಯ ಕಟ್ಟುವ ಆಸೆಯನ್ನು ಕಂಡರು. ಮನುಷ್ಯನ ಅದಮ್ಯ ಕಾಮುಕತೆಯಲ್ಲಿ, ಮತ್ತು ಈ ಕಾಮುಕತೆಯನ್ನು ಪೋಷಿಸಬಲ್ಲ ಭೋಗ ಸಾಮಗ್ರಿಗಳನ್ನು ಸೃಷ್ಟಿಸುವ ಇಡೀ ನಾಗರಿಕತೆಯಲ್ಲಿ ಅವರು ಅದರ ಪ್ರೇರಣೆಯನ್ನು ಕಂಡರು. ಮನುಷ್ಯನ ಅಳವಿಗೆ ಸಿಕ್ಕದಂತೆ, ಸ್ವಯಂ ಚಾಲಿತವಾಗಿ ಸಂಕೀರ್ಣ ರಾಕ್ಷಸನಾಗುವ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಗಾಂಧಿಜಿ ಸಾಮ್ರಾಜ್ಯದಾಹ ಕಂಡರು. ಹೀಗೆ ಕಾಣುತ್ತಲೇ-ಮನುಷ್ಯ ಪೆಡಂಭೂತನಾಗುವುದು ಮನುಷ್ಯನ ನಿಜವಾದ ಸುಖಕ್ಕೆ ಅಡ್ಡಿಯಾಗಿ ಬಿಡುತ್ತದೆ; ಮತ್ತು ಸುಖದ ಆಸೆಯಲ್ಲೇ ಅವನು ಪೆಡಂಭೂತನಾಗಿಯೂ ಬಿಡುತ್ತಾನೆ-ಎಂಬ ಅತ್ಯಂತ ಸರಳವಾದ ಸತ್ಯವನ್ನು ಅವರು ಕಂಡುಬಿಟ್ಟರು. ನಾವೆಲ್ಲರೂ ಸಾಯುವಾಗ ನಮಗೇನಾದರೂ ಯೋಚಿಸುವ ಶಕ್ತಿ ಉಳಿದಿದ್ದರೆ, ಇಂಥ ಸತ್ಯ ಸ್ಪಷ್ಟವಾಗಿ ಕಂಡುಬಿಡುತ್ತಿತ್ತು. ಸಾವು ಎಂಬ ಸತ್ಯವನ್ನು ಮರೆಯುವುದರಿಂದಲೇ ಹೀಗೆ ಎಲ್ಲವನ್ನೂ ಪೆಡಂಭೂತವಾಗಿ ಬೆಳೆಸಿಕೊಳ್ಳಬೇಕೆಂಬ ಮೋಹ ಮನಸ್ಸಿನಲ್ಲಿ ಹುಟ್ಟುವುದು. ಈ ಸತ್ಯ ಕಂಡ ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಎಲ್ಲಿಯವರೆಗೆ ತಿರಸ್ಕರಿಸಬೇಕಾಯಿತೆಂದರೆ-ಮಂಡಿಯ ಮೇಲೆ ಒಂದು ತುಂಡು ಪಂಚೆಯನ್ನು ಮಾತ್ರ ಉಡುವಷ್ಟು. ಅವರು ಸ್ವಂತ ಎಷ್ಟು ಕಡಿಮೆ ತಿನ್ನುತ್ತಿದ್ದರೋ, ಎಷ್ಟು ಕಡಿಮೆ ತೊಡುತ್ತಿದ್ದರೋ, ಎಷ್ಟು ಹೆಚ್ಚು ಕೆಲಸ ಮಾಡುತ್ತಿದ್ದರೋ-ಆ ನಿಗ್ರಹದ ಬಿಗಿಗೆ ವ್ಯವಸ್ಥೆಯ ಆಗ್ರಹದ ಹಂಗಿಲ್ಲ; ಕಣ್ಣಿಟ್ಟು ಕಾಯುವ ಪ್ರಭು ಬೇಡ, ಪ್ರಭುತ್ವವೇ ಕ್ವಚಿತ್ತಾಗುತ್ತ ಹೋದಂತೆ ಒಂದು ರಾಜ್ಯ ಸಾಮ್ರಾಜ್ಯ ಶಾಹಿಯಾಗುವ ಪ್ರಲೋಭನೆಯೇ ಇಲ್ಲವಾಗಿ ಬಿಡುತ್ತದೆ. ಅಂದರೆ ಆಕ್ರಮಣಶೀಲವಾದ ಇಂದ್ರಿಯಲಾಲಸೆ ಕಡಿಮೆಯಗುತ್ತ ಹೋದಂತೆ ನಮ್ಮೆಲ್ಲರನ್ನೂ ಒಂದು ಹದ್ದಿನಲ್ಲಿ ಇಡಲೆಂದೇ ನಾವು ಕಟ್ಟಿಕೊಳ್ಳುವ ಸರ್ಕಾರವೆಂಬ ವ್ಯವಸ್ಥೆ ಕೂಡ ಅತ್ಯಂತ ಸರಳವಾಗಿ ಬಿಡುತ್ತದೆ. ಹೀಗೆ ಬದುಕುವುದು ಸುಖದ ನಿರಾಕರಣೆಯಲ್ಲ; ಸಾಯುವ ಗಳಿಗೆಯ ತನಕ ಸುಖಿಯಾಗಿಯೇ ಬದುಕುವ ವಿಧಾನ ಎಂಬುದನ್ನು ಗಾಂಧೀಜಿ ನಮಗೆ ಮನದಟ್ಟು ಮಾಡಿದರು.

ಅವರು ಕಂಡಿದ್ದು ಎಷ್ಟು ನಿಜವೆಂಬುದು ನಮ್ಮೆಲ್ಲರಿಗೂ ನಮ್ಮ ಅನುಭವದಲ್ಲೇ ತಿಳಿದಿರುತ್ತದೆ. ಕಾಮುಕತೆ ಅತಿಯಾದರೆ ಆರೋಗ್ಯಕರವಾದ ಕಾಮವೇ ನಾಶವಾಗುತ್ತದೆ. ಲಂಪನಾದವನು ಅಕ್ಕರೆಯಿಂದ ಹುಟ್ಟುವ ಪ್ರಣಯದ ಶಾಂತರಸವನ್ನು ಸವಿಯಲಾರ. ಅತಿಯಾಗಿ ಉಂಡರೆ ಜೀರ್ಣಶಕ್ತಿಯೇ ನಾಶವಾಗುತ್ತದೆ. ಅತಿ ಬೆಡಗಿನ ಉಡುಗೆ ತೊಡುಗೆಯಲ್ಲಿ ಮನುಷ್ಯನ ಸುಂದರವಾದ ಮೈಕಟ್ಟು ಕೃತಕವೂ ನಿಸ್ತೇಜವೂ ಆಗಿಬಿಡುತ್ತದೆ. ವಿರಹವಿಲ್ಲದೆ ಪ್ರೀತಿ ಇಲ್ಲ; ಹಸಿವಿಲ್ಲದೆ ರುಚಿ ಇಲ್ಲ. ಪಡುವಷ್ಟಕ್ಕೇ ಆತುರಗೊಳ್ಳುವ ಕಾಮದ ದಾಹ, ಸಫಲವಾದ ಕೂಡಲೇ ಓಕರಿಕೆ ತರುತ್ತದೆ. ಕಾಮಜೀವನದ ಬಗ್ಗೆ ಗಾಂಧೀಜಿಯ ವಿಚಾರವನ್ನು ನಾವು ಒಪ್ಪಬೇಕಾಗಿಲ್ಲ. ಆದರೆ ಅದು ತರುವ ಆಕ್ರಮಣಶೀಲತೆಯ ಬಗ್ಗೆ, ಪಿಶಾಚಿಯಂತೆ ಅದು ನಮ್ಮನ್ನು ಕಾಡಬಹುದಾದ್ದರ ಬಗ್ಗೆ ಗಾಂಧೀಜಿಗೆ ಆಪ್ತವಾದ ಅನುಭವವಿತ್ತು. ಅವರೆಷ್ಟು ಅದರಿಂದ ದಿಗಿಲುಪಟ್ಟಿದ್ದರೆಂದರೆ ಸುಖವನ್ನು ಕೊಳ್ಳುವಷ್ಟೇ ಕೊಡುವ, ಗಂಡು ಹೆಣ್ಣಿನ ಅನ್ಯೋನ್ಯದ ಮೈಥೂನವನ್ನೂ ಅವರು ನಿರಾಕರಿಸಿದರು. ತಾನೇ ಹೆಣ್ಣು ಕೂಡ ಆಗಿಬಿಡಬೇಕೆಂಬ ಹಠದ ಸಾಧನೆಯಲ್ಲಿ ಈ ನಿರಾಕರಣೆ ಅವರಿಗೆ ಅಗತ್ಯ ವಾಯಿತೇನೋ? ಲೋಕಹಿತಕ್ಕಾಗಿ ಎಲ್ಲ ಇಚ್ಛೆಗಳನ್ನು ಒಂದೇ ಗುರಿಗೆ ಏಕಾಗ್ರಗೊಳಿಸಬೇಕೆಂಬುದೇ ಗಾಂಧೀಜಿಯ ಬ್ರಹ್ಮಚರ್ಯದ ಕಲ್ಪನೆಯಿದ್ದಿರಬಹುದು, ಯಾಕೆಂದರೆ ಅವರು ತಿಳಿದಿದ್ದಂತೆ ಒಳ್ಳೆತನದ ಆಸೆ ಮಾತ್ರ ಎಷ್ಟು ಸಫಲವಾದರೂ ಇನ್ನಷ್ಟು ಉಳಿದಿರುತ್ತದೆ. ಈ ಆಸೆಗೆ ವಿಸರ್ಜನೆಯ ತಣಿವೆಂಬುದೇ ಇಲ್ಲ. ಬಂಗಾರಕ್ಕಾಗಿ ಪಡುವ ಆಸೆಯೇ ಬಂಗಾರವಲ್ಲ; ಆದರೆ ಒಳ್ಳೆಯತನಕ್ಕಾಗಿ ಪಡುವ ಆಸೆಯೇ ಒಳ್ಳೆಯದು. ಇದನ್ನು ಕಂಡುಕೊಂಡ ಗಾಂಧೀಜಿ ತಮ್ಮ ಎಲ್ಲ ದುಗುಡದಲ್ಲೂ ಮಗುವಿನಂತೆ ನಗಬಲ್ಲ ಶಕ್ತಿಯನ್ನು ಕಳೆದುಕೊಳ್ಳದ ಸುಖದ ಬುಗ್ಗೆಯಾಗಿಯೇ ಉಳಿದರು. ವಿಪರ್ಯಾಸವೆಂದರೆ ಅವರ ಮುದಿ ದೇಹ ಯಾವ ಪ್ರೇಮಿಯೂ ಅಸೂಯೆಪಡುವಷ್ಟು ಪಟುತ್ವವನ್ನು ಉಳಿಸಿಕೊಂಡಿತ್ತು.

ಏನನ್ನಾದರೂ ನಾವು ಅದರ ಅತಿಯಲ್ಲಿ ಕಾಣುವ ಕೆಚ್ಚನ್ನು ಹೊಂದಿದ್ದಾಗ ಮಾತ್ರ ಸತ್ಯದ ಬಾಗಿಲು ತೆರೆಯುತ್ತದೆ ಎಂಬುದು ಗಾಂಧೀಜಿಗೆ ಗೊತ್ತಿತ್ತು. ಆದ್ದರಿಂದಲೇ ಅಭಿಪ್ರಾಯಗಳ ಅಹಂಕಾರದಲ್ಲಿ, ಅಥವಾ ದ್ವಂದ್ವಾತ್ಮಕ ಆಸೆಗಳಲ್ಲಿ ಅವರು ಎಂದೂ ಸಿಕ್ಕಿಬೀಳದೆ ತುಂಬ ಸರಳವಾದ ಮುಕ್ತ ಮನಸ್ಸಿನ ನೋಟದಲ್ಲಿ ಇಡೀ ಮಾನವೀಯತೆಯ ಜೊತೆ ಮಾತನಾಡಿಬಿಟ್ಟರು. ಈ ಶತಮಾನದ ಅತ್ಯಂತ ಮುಖ್ಯ ಪುಸ್ತಕವಾದ ‘ಹಿಂದ್‌ಸ್ವರಾಜ್’ ಅನ್ನು ಅವರು ಬರೆದದ್ದು ೧೯೦೮ರಲ್ಲಿ, ದಕ್ಷಿಣ ಆಫ್ರೀಕಾದಲ್ಲಿ ಇದ್ದಾಗ. ಈ ಪುಸ್ತಕದಲ್ಲೆ ಅವರು ತಾನು ಬಯಸುವ ಮನುಷ್ಯನನ್ನೂ, ಅವನನ್ನು ಸಾಧ್ಯಗೊಳಿಸುವ ನಾಗರಿಕತೆಯನ್ನೂ ಸ್ಪಷ್ಟವಾಗಿ ದಿಟ್ಟವಗಿ ಕಂಡಿದ್ದರು. ಬಹ್ಯುತ್ಪನ್ನದ ಆಧುನಿಕ ನಾಗರಿಕತೆ ಆಕರ್ಷಕವಾದ್ದು, ಆದರೆ ದುಷ್ಟವಾದ್ದು ಎಂಬುದರಿಂದಲೇ ಅವರ ವಿಚಾರ ಶುರುವಾಗುತ್ತದೆ. ಹೀಗೆ ನೋಡಿದಾಗ ಬ್ರಿಟಿಷರು ನಮ್ಮನ್ನು ಆಳುವುದು ಸಾಧ್ಯವಾದಕ್ಕೆ ಕಾರಣ ಸ್ಪಷ್ಟ: ಭಾರತೀಯರು ಈ ಆಧುನಿಕ ನಾಗರಿಕತೆಯಿಂದ ಆಕರ್ಷಿತರಾಗಿರುವುದರಿಂದಲೇ ಬ್ರಿಟಿಷರು ನಮ್ಮನ್ನು ಆಳುವುದು ಸುಲಭವಾಯಿತು. ಆಧುನಿಕ ನಾಗರಿಕತೆಗೆ ನಾವು ಅಂಟಿಕೊಳ್ಳುವುದಾದರೆ, ಬ್ರಿಟಿಷರನ್ನು ನಾವು ಓಡಿಸಿ ಏನು ಪ್ರಯೋಜನ ಎಂದು ಅವರು ಕೇಳುತ್ತಾರೆ. ಅಲ್ಲದೆ ಈ ಬಗೆಯ ನಾಗರಿಕತೆ ಕೆಟ್ಟದ್ದು ಎನ್ನುವುದಾದರೆ, ಅದು ಬ್ರಿಟಿಷರಿಗೂ ಕೆಟ್ಟದ್ದು ಎಂದು ಅರ್ಥ. ಆದ್ದರಿಂದ ತನ್ನ ಹೋರಾಟ ಬ್ರಿಟಿಷರನ್ನೂ ಈ ಪ್ರಲೋಭನೆಯಿಂದ ಪಾರುಮಾಡುವ ಹೋರಾಟವೆಂದು ಅವರು ಬಗೆಯುತ್ತಾರೆ. ಈ ಹೊಸ ನಾಗರಿಕತೆಯ ಹುಡುಕಾಟದಲ್ಲಿ ಅವರು ಅದಕ್ಕೆ ಅಗತ್ಯವಾದ ಯಂತ್ರವನ್ನೂ ಹುಡುಕಾಡಿದರು. ಅವರು ಹುಡುಕಿದ ಚರಕ ಸಾಂಕೇತಿಕ-ಮನುಷ್ಯನಿಗೆ ಅಧೀನವಾಗಿರಬಲ್ಲ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಒದಗಿಬರುವಂಥ ಯಂತ್ರ ಅದು, ಚರಕದ ನಂತರ ಅವರು ಹೊಲಿಗೆ ಯಂತ್ರವನ್ನೂ ಒಪ್ಪಿಕೊಂಡಿದ್ದರಂತೆ. ಅಂದರೆ ಅವರೇನು ಯಂತ್ರದ ವಿರೋಧಿಯಾಗಿರಲಿಲ್ಲ. ಹೀಗೆ ಹೊಸ ಬಗೆಯ ಯಂತ್ರ ವ್ಯವಸ್ಥೆಯನ್ನುಹುಡುಕಿದ ಗಾಂಧೀಜಿ ಇವತ್ತಿಗೂ ಪ್ರಸ್ತುತರಾಗಿ ಉಳಿದಿದ್ದಾರೆ. ಜಗತ್ತಿನ ಅತ್ಯಂತ ಶ್ರೇಷ್ಠ ಚಿಂತಕರನ್ನು ಆಕರ್ಷಿಸಿದ ಇ.ಎಫ್. ಷುಮ್ಯಾಕರ್ ಬರೆದ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಎಂಬ ಪುಸ್ತಕದ ಹಿಂದಿರುವ ಪ್ರೇರಣೆ ಗಾಂಧೀಜಿಯ ಈ ಹುಡುಕಾಟ. ಈ ಪ್ರಪಂಚದಲ್ಲಿ ಇರಲು ಮನುಷ್ಯನಿಗೆ ಮಾತ್ರ ಹಕ್ಕಿರುವುದಲ್ಲ. ಕಾಡುಮೃಗ ಪಕ್ಷಿಗಳಿಗೂ ಆ ಹಕ್ಕಿದೆ ಎಂದು ತಿಳಿಯುವ ಪರಿಸರದ ಬಗ್ಗೆ ಕಾಳಜಿ ಉಳ್ಳವರೆಲ್ಲರೂ ಗಾಂಧೀಜಿಯವರನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪರಮಾಣು ಸ್ಥಾವರಗಳು ನಮಗೆ ಬೇಡ ಎಂದು ಹೋರಾಡುತ್ತಿರುವ ಇಂದಿನ ದಾರ್ಶನಿಕರಿಗೆ ಅಗತ್ಯವಾದ ವಿಚಾರಗಳೆಲ್ಲವೂ ಗಾಂಧೀಜಿ ಯವರಲ್ಲಿವೆ.

ಅಪ್ರತಿಮ ಬುದ್ಧಿಶಾಲಿಯಾದ ಐನ್‌ಸ್ಟೈನ್‌ನಂಥವನನ್ನು ನಾವು ಮೆಚ್ಚಿದಾಗ ನಮಗವನು ಅತೀತ ಎನ್ನಿಸುತ್ತದೆ. ಆದರೆ ನಂಬಿದ ವಿಷಯದಲ್ಲಿ ನಿಷ್ಠೆ, ನಿತ್ಯ ಜೀವನದಲ್ಲಿ ಸರಳತೆಯ ಆಸೆ, ಪಶುಪಕ್ಷಿ ಗಿಡಮರಗಳೂ ಈ ಲೋಕಕ್ಕೆ ಹಕ್ಕುದಾರರು ಎಂಬ ಭಾವನೆ, ನನ್ನ ಸುತ್ತಲಿನ ಜನ ಕಷ್ಟದಲ್ಲಿದ್ದಾಗ ನಾನು ಸುಖಿಯಾಗಿರಲಾರೆ ಎಂಬ ಮೃದುವಾದ ಅಂತಃಕರಣ, ಕನಿಷ್ಠ ಇಷ್ಟನ್ನು ಹೊಂದಿ ಎಲ್ಲರಿಗೂ-ಇವರೇ ಭಾರತದಲ್ಲಂತೂ ಬಹುಸಂಖ್ಯಾತರು-ಗಾಂಧೀಜಿಯಂತಾಗುವುದು ಆದರ್ಶದ ಅತೀತವಲ್ಲ. ಈ ಪ್ರಪಂಚದ ಅಮರಾವತಿಯಾದ ಅಮೆರಿಕದಲ್ಲೂ ಮಾರ್ಟಿನ್ ಲ್ಯೂಥರ್ ಕಿಂಗ್‌ಗೆ ಪ್ರಸ್ತುತವಾದ್ದು ಗಾಂಧಿಜಿಯ ಜೀವನವಲ್ಲವೆ? ಸಾಯುವ ಭಯವನ್ನು ಗೆದ್ದವರು, ಜೀವನವನ್ನು ಅದರ ಎಲ್ಲ ರೂಪದಲ್ಲೂ ಪ್ರೀತಿಸುವವರು ಗಾಂಧೀಜಿಗೆ ಬಲು ಹತ್ತಿರ, ಸಂಭೋಗ, ಆರ್ಜನ, ವಿಸರ್ಜನ, ಪಚನ, ಧ್ಯಾನ, ರಾಜಕೀಯ ಇವೆಲ್ಲವನ್ನೂ ಏಕತ್ರ ಸಂಘಟಿಸಿ ಅನ್ಯೋನ್ಯಗೊಳಿಸುವಂತೆ ನೋಡಿ ಬದುಕಿದ ಗಾಂಧೀಜಿ ಮಾತ್ರ ಸಾಮ್ರಾಜ್ಯದಾಹವಾಗಿ ಬಿಡುವ ನಮ್ಮ ಕಾಲದ ಎಲ್ಲ ವ್ಯವಸ್ಥೆಗಳಿಗೂ ತಮ್ಮ ಅರೆ ಬೆತ್ತಲೆ ದೇಹದಲ್ಲೇ, ಇಂದೇ, ಇಲ್ಲೇ ಪರ್ಯಾಯವಾಗಿ ಬೆಳಗಿದರು-ಕುಸುಮಕ್ಕೂ ಕೋಮಲವಾಗಿ, ವಜ್ರಕ್ಕೂ ಕಠಿಣವಾಗಿ.

(ಕೃಪೆ: ಆಕಾಶವಾಣಿ)

* * *