ನವ್ಯ ಚಳುವಳಿಯಲ್ಲೂ ಈ ಬಗೆಯ ರಾಜಕೀಯ ಕಾರಣಗಳಿಗಲ್ಲದಿದ್ದರೂ, ವಿಮರ್ಶಾವಿವೇಕ ಕಳಕೊಂಡ ಅತಿರೇಕಗಳಾಗಲಿಲ್ಲವೆಂದಲ್ಲ. ನವೋದಯ ಮಾರ್ಗ ತನ್ನ ಸತ್ವವನ್ನು ಕಳೆದುಕೊಂಡಿತೆಂಬ ನಿಲುವಿನಿಂದ ನವ್ಯ ಚಳುವಳಿ ಹುಟ್ಟಿಕೊಂಡಿತು. ನವೋದಯದ ಅತ್ಯಂತ ಮುಖ್ಯ ಲೇಖಕರಾದ, ಮಾಸ್ತಿ, ಬೇಂದ್ರೆ, ಕಾರಂತ, ಕುವೆಂಪು, ಪುತಿನ, ಶ್ರೀರಂಗದವರು – ಅನೇಕ ಸಾಮ್ಯಗಳು ಅವರಲ್ಲಿ ಇರಬಹುದಾದರೂ – ಪ್ರತಿಭೆಯಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನರು. ಇವರ ಮಾರ್ಗದಲ್ಲಿ ಬರೆಯುತ್ತಿದ್ದ ಹಲವರು ಸತ್ವಹೀನರಾದದ್ದು ನಿಜ. ಆದರೆ ಗಂಗಾದರ ಚಿತ್ತಾಲ, ಜಿ.ಎಸ್.ಶಿವರುದ್ರಪ್ಪ, ಚಿನ್ನವೀರ ಕಣವಿ, ನರಸಿಂಹಸ್ವಾಮಿಯಂಥ ಲೇಖಕರ ಈ ಕಾಲದ ಬೆಳವಣಿಗೆಯನ್ನು ಅಭ್ಯಾಸ ಮಾಡಿದಾಗ ನವೋದಯದ ಕೆಲವು ರೂಢಿಗತ ವಿಚಾರಗಳನ್ನೂ, ರಚನಾ ವಿಧಾನಗಳನ್ನೂ ಬಿಟ್ಟು ಬರೆಯಲು ಸಾಧ್ಯವಾದಷ್ಟು ಮಾತ್ರ ಇವರು ಜೀವಂತವೆನ್ನಿಸುವಂತೆಯೂ ಅನನ್ಯವೆನ್ನಿಸುವಂತೆಯೂ ಬರೆಯುವುದು ಸಾಧ್ಯವಾಯಿತೆಂಬುದನ್ನು ಕಾಣಬಹುದು. ಕಾದಂಬರಿಯಲ್ಲಿ ಮಾತ್ರ ಅದಕ್ಕೆ ಹಿನ್ನೆಲೆಯಲ್ಲಿದ್ದ ಐರೋಪ್ಯ ಮತ್ತು ಭಾರತೀಯ ಮಾದರಿಗಳು-ಟಾಲ್‌ಸ್ಟಾಯ್, ಹಾರ್ಡಿ, ಡಿಕನ್ಸ್‌, ಬಂಕಿಂ ಅಂಥವರು-ಮತ್ತು ಸಮಕಾಲೀನಕ್ಕೆ ಸ್ಪಂದಿಸಲೇಬೇಕಾದ ಅದರ ವಾಸ್ತವಮಾರ್ಗದ ಅಗತ್ಯಗಳು-ಇವುಗಳಿಂದಾಗಿ ನವೋದಯದಿಂದ ನವ್ಯದವರೆವಿಗೂ ಬಿರುಕಿಲ್ಲದ ಬೆಳವಣಿಗೆ ಕಾಣಬಹುದು.

ನವೋದಯದ ಮೊದಲ ಜನಾಂಗದ ಲೇಖಕರು ಮಾತ್ರ ನವ್ಯ ಚಳುವಳಿ ಪ್ರಾರಂಭವಾದ ನಂತರವೂ ತಮ್ಮ ತಮ್ಮ ಮಾರ್ಗದಲ್ಲೇ ಇನ್ನೂ ಸೃಜನಶೀಲರಾಗಿ ಉಳಿದಿದ್ದಾರೆ. ಈ ಲೇಖಕರ ಇತಿಮಿತಿಗಳ ಬಗ್ಗೆ ನಮ್ಮ ತೀರ್ಮಾನವೇನೇ ಇರಲಿ, ಇವರ ಅಸಾಧಾರಣ ಸೃಜನಶಕ್ತಿಯನ್ನು ಯಾರೂ ಕಡೆಗಣಿಸುವಂತಿಲ್ಲ. ಆದ್ದರಿಂದ ನವೋದಯ ಕಾಲದ ಎಲ್ಲರೂ ಸಮಕಾಲೀನ ಮಹತ್ವ ಕಳಕೊಂಡರು ಎಂಬಂತೆ ಕೆಲವು ನವ್ಯ ಲೇಖಕರು ಮಾತಾಡಿದ್ದರೆ ಅದು ಸತ್ಯದೂರವಾದದ್ದು ಹೇಗೋ ಹಾಗೆಯೇ ನವ್ಯದ ಯುಗ ಮುಗಿಯಿತೆನ್ನುವ ಒಕ್ಕೂಟ ಮತ್ತು ಬಂಡಾಯ ಸಾಹಿತಿಗಳ ಘೋಷಣೆಯೂ ಅವಸರದ ತೀರ್ಮಾನವಾಗಿದೆ. ನವ್ಯರೆಂದು ಕರೆಸಿಕೊಂಡಿದ್ದ ಮುಖ್ಯ ಲೇಖಕರು ಈಗಲೂ ಸತ್ವಶಾಲಿಗಳಾಗಿಯೇ ಉಳಿದಿದ್ದಾರೆ. ಅಡಿಗರ ಕಾವ್ಯ ಇವತ್ತೀಗೂ ಸಮಕಾಲೀನ ವಾಸ್ತವಗಳನ್ನು ‘ಭೂಮಿಗೀತ’, ‘ವರ್ಧಮಾನ’ ಸಂಕಲನಗಳ ಸಂಕೀರ್ಣ ತೀವ್ರತೆಯಲ್ಲಿ ಅಲ್ಲದಿದ್ದರೂ, ತನ್ನ ಒಗರು ಮೊನಚುಗಳನ್ನು ಕಳಕೊಳ್ಳದಂತೆ  ಜೀವಂತವಾಗಿ ನಿರ್ವಹಿಸುತ್ತಲೇ ಇದೆ. ತನ್ನ ಅಂತರ್ನೋಟಗಳನ್ನು ಕಳಕೊಳ್ಳದಂತೆ ಅವರು ಸಮಕಾಲೀನಕ್ಕೆ ಸ್ಪಂದಿಸಬಲ್ಲರು ಎಂಬುದಕ್ಕೆ ರೇಗಿದ ಧಾಟಿಯ ವೈಯಕ್ತಿಕ ಮಾತುಗಳು ‘ಮೂಲಕ ಮಹಾಶಯರು’ ಕವನದ ಅಂತ್ಯದಲ್ಲಿ ಸಮಾಧಾನದ ಆಳಚಿಂತನೆಯಾಗುವ ಬಗೆಯಲ್ಲಿ ಗುರುತಿಸಬಹುದು. ಆದರೆ ನವ್ಯದ ಮೇಲ್ಮೈಯನ್ನು ಮಾತ್ರ ಪಡಕೊಂಡವರು ಹುಸಿಯಾದ ಸಂಕೇತಗಳಲ್ಲಿ ಗಹನದ ಭ್ರಮೆ ಹುಟ್ಟಿಸಿದರೆಂಬುದೂ, ನವೋದಯದ ಹಲವು ಆದರ್ಶವಾದಿಗಳಾದ, ಭಾವಾತಿರೇಕಗಳಾದ ಹಿಂಬಾಲಕರು ಕೃತಕರಾದರೆಂಬುದಷ್ಟೇ ನಿಜ.

ಬರಹಗಾರರ ಒಕ್ಕೂಟ ಕೂಡ ಹಲವು ದಿಕ್ಕುಗಳಲ್ಲಿ ಹರಿಯಲು ಪ್ರಯತ್ನಿಸಿ ತನ್ನ ನಿಲುವನ್ನು ಗಟ್ಟಿಯಾಗಿಸಿಕೊಳ್ಳಲು ಪ್ರಯತ್ನಿಸಿದ್ದಿಲ್ಲವೆಂದಲ್ಲ. ಇದರಲ್ಲಿ ಮುಖ್ಯರಾಗಿದ್ದವರು ಅದರ ಪ್ರಾರಂಭದ ದೆಸೆಯಲ್ಲಾದರೂ ಜಯಪ್ರಕಾಶನ ಆಂದೋಳನದಲ್ಲಿ ಭಾಗಿಗಳಾದರು; ವಿಚಾರವಾದಿಗಳಾಗಿ ಮೂಢನಂಬಿಕೆಗಳನ್ನು ಪ್ರತಿಭಟಿಸಿದರು. ಎಮರ್ಜೆನ್ಸಿ ಕಾಲದಲ್ಲಿ ಸರ್ಕಾರದ ಗುಮಾನಿಗೊಳಗಾಗಿ ಶ್ರೀ ಚಂದ್ರಶೇಕರ ಪಾಟೀಲರು ಕೆಲದಿನಗಳ ಕಾಲ ಸೆರೆಮನೆಯಲ್ಲಿರಬೇಕಾಯಿತು. ಇದೇ ಕಾಲದಲ್ಲಿ ತಮ್ಮ ಪದ್ಮಭೂಷಣವನ್ನು ಹಿಂದಕ್ಕೆ ಕೊಟ್ಟ ಶ್ರಿ ಶಿವರಾಮಕಾರಂತರೂ, ಮೊದಲಿನಿಂದಲೂ ಕಾಂಗ್ರೆಸ್ ಸಂಸ್ಕೃತಿಯ ಭ್ರಷ್ಟಾಚಾರಕ್ಕೆ ವಿರೋಧಿಗಳಾಗಿದ್ದ ಶ್ರೀ ಗೋಪಾಲಕೃಷ್ಣ ಅಡಿಗರೂ ತಮ್ಮ ಅನೇಕ ಭಾಷಣಗಳಲ್ಲಿ ಸೆನ್ಸರ್ ನೀತಿಯನ್ನು ಧಿಕ್ಕರಿಸಿ ನಿರ್ಭಯವಾಗಿ ಸರ್ಕಾರದ ನೀತಿಯನ್ನು ಖಂಡಿಸಿ ಮಾತಾಡಿದರು. ನವ್ಯ ಸಾಹಿತ್ಯಮಾರ್ಗ ವ್ಯಕ್ತಿಯ ಸ್ವಾನುಭವಕ್ಕೆ ಆದ್ಯತೆ ಕೊಟ್ಟು, ಗಂಭೀರವಾದ ರೀತಿಯಲ್ಲಿ ರಾಜಕೀಯ ಪ್ರಜ್ಞೆಯನ್ನು ಹೊಂದಿದ್ದರೂ ತಕ್ಷಣದ ಪ್ರತಿಕ್ರಿಯೆಗೆ ಅಗತ್ಯವಾದ ಕ್ರಮದಿಂದ ಈ ಮಾರ್ಗ ದೂರವಾಗಿಬಿಟ್ಟಿದ್ದರಿಂದ ಧುತ್ತನೆ ಎದುರಾದ ಎಮರ್ಜನ್ಸಿಗೆ ಸಾಹಿತ್ಯಿಕವಾಗಿ ಇದು ಕೂಡಲೇ ಪರಿಣಾಮಕಾರಿಯಾಗುವಂತ ಎಪ್ರತಿಕ್ರಿಯಿಸಲಾಗಲಿಲ್ಲ. ಜಿ.ಎಸ್. ಸದಾಶಿವರು ಆ ಸಮಯದಲ್ಲಿ ಬರೆದ ಒಂದು ಸಾಂಕೇತಿಕ ಕಥೆ, ಅಡಿಗರು ಬರೆದ ಕವನಗಳು ನಮಗೇ ನಮ್ಮ ಪಾಡನ್ನು ತಿಳಿಸಿಕೊಳ್ಳುವ ರೀತಿಯವು. ಹೀಗಾಗಿ ಸಂಕೀರ್ಣ ಸಾಹಿತ್ಯ ಅಭಿವ್ಯಕ್ತಿ ಅಪ್ರಸ್ತುತವೆಂಬ ಭಾವನೆ ತಲೆದೋರಿ ದೇಶದ ಪ್ರಜೆಗಳಾಗಿ ತಮ್ಮ ಕರ್ತವ್ಯ ನಿರ್ವಹಿಸುವುದೊಂದೇ ಮಾರ್ಗವೆಂದು ಇವರಲ್ಲಿ ಅನೇಕರಿಗೆ ಅನ್ನಿಸಿದ್ದು ಸಹಜ. ವ್ಯಂಗ್ಯ, ವ್ಯಕ್ತಿನಿಂದೆ, ಅಪಹಾಸ್ಯಗಳನ್ನೇ ತಮ್ಮ ವಿಧಾನ ಮಾಡಿಕೊಂಡ ಚುರುಕುಮತಿ ಚಂದ್ರಶೇಖರ ಪಾಟೀಲರ ಬೆಳವಣಿಗೆ ಈ ಸಮಯದಲ್ಲಿ ಕುತೂಹಲಕಾರಿಯಾದ್ದು. ಎಮರ್ಜನ್ಸಿಗೆ ಅವರು ತೋರಿಸಿದ ಕಾವ್ಯ ಪ್ರತಿಕ್ರಿಯೆ ‘ಗಾಂಧಿಸ್ಮರಣೆ’ಯೆಂದು ೧೯೭೬ರಲ್ಲಿ ಪ್ರಕಟವಾಯಿತು. ಇಲ್ಲಿನ ಕೆಲವು ಕವನಗಳು ಕನ್ನಡ ಸಾಹಿತ್ಯದ ಒಳಜಗಳಗಳು ಸಾರ್ವಜನಿಕರಿಗೂ ಮಹತ್ವದವು ಎಂಬ ಭ್ರಮೆಯಿಂದ ಬರೆದಂತಿವೆ. ಒಳಗಿನವರಿಗೆ ಮಾತ್ರ ಖುಷಿ ಕೊಡುವ ಅಪಹಾಸ್ಯ ಅಲ್ಪಾಯುವಾದ್ದು; ಅಡಿಗರ ‘ನೆಹರೂ ನಿವೃತ್ತರಾಗುವುದಿಲ್ಲ’ವೆಂಬ ಕವನದ ವ್ಯಂಗ್ಯದ ಜೊತೆ ಅದನ್ನು ಹೋಲಿಸಿದಾಗ ನಮಗೆ ಅವುಗಳ ಮಿತಿ ತಿಳಿಯುತ್ತದೆ. ಆದರೆ ‘ಗಾಂಧಿ ಸ್ಮರಣೆ’ ಎಂಬ ಅವರ ಕವನದಲ್ಲಿ ಮಾತ್ರ-ಇದು ಕೂಡ ನಮ್ಮ ಪಾಡನ್ನು ನಮಗೇ ತಿಳಿಸುವ ಪದ್ಯವೆಂಬುದು ಮುಖ್ಯ-ಇಡೀ ದೇಶದ ಸಂದರ್ಭ ಕೊಡುವ ಆಯಾಮದಿಂದಾಗಿ ಸುಲಭವಾಗಿ ಆಡಿದಂತೆ ಕಾಣುವ ಮಾತೂವಿರೋಧಾಭಾಸದ ಇಂದಿರಾ ರಾಜಕೀಯದ ಚುರುಕು ಟೀಕೆಯಾಗುತ್ತದೆ. ಆದ್ದರಿಂದಲೇ ಒಕ್ಕೂಟದಿಂದ ಪ್ರಾರಂಭವಾದ ಚಳವಳಿಯಲ್ಲಿ ಬೆಳೆಸಿಕೊಂಡ ತಮ್ಮ ಕುಹಕದ ಶಕ್ತಿಯನ್ನು ಛೂಬಾಣದ ಮಾದರಿಯಲ್ಲೂ ಹೊರಗಿನ ವಿದ್ಯಮಾನಗಳನ್ನು ಟೀಕಿಸುವಂತೆಯೂ ಬಳಸುವುದು ಸಾಧ್ಯವಾದ್ದು ಅದರ ಗುಂಪಲ್ಲಿ ಪಾಟೀಲರೊಬ್ಬರಿಗೇ ಅನ್ನಿಸುತ್ತದೆ. ಕೇವಲ ಸ್ವಪ್ರದರ್ಶನವೋ, ಮಾತಿನ ಚಕಮಕಿಯೋ, ಕುಹಕದ ಬಯ್ಗಳವೋ, ಪಬ್ಲಿಕ್ ಸ್ಕೂಲಿನ ಹುಡುಗರ ರ‍್ಯಾಗಿಂಗೋ ಆಗುವ ರೀತಿಯ ಪಾಟೀಲರ ಬರವಣಿಗೆಯ ಕ್ರಮ ‘ಗಾಂಧೀಸ್ಮರಣೆ’ಯಂಥ ಪದ್ಯದಲ್ಲಿ ಕವಿಯ ಮಾತುಗಾರಿಕೆಯ ಖುಷಿಗೆ ಮಾತ್ರ ಸೀಮಿತವಾಗದೆ ನಮಗೆ ಅರ್ಥಪೂರ್ಣವಾದ್ದನ್ನು ಹೇಳುತ್ತದೆ. ಪಾಟೀಲರ ಕೊಂಕಿನ ಅಟ್ಟಹಾಸದ ನಡುವೆ ಈ ಪದ್ಯದ ವಿಷಾದಭಾವ ಗಮನಾರ್ಹವೆನ್ನಬಹುದು.

ಬರೆಯುತ್ತಿರುವ ಎಲ್ಲರಿಗೆ ಎಲ್ಲರೂ ಗೊತ್ತಿರುವ, ಸ್ವತಃ ಬರೆಯುವವರೇ ಉಳಿದವರು ಬರೆದಿದ್ದನ್ನೂ ಓದುವ ಕನ್ನಡ ಸಾಹಿತ್ಯಲೋಕದಲ್ಲಿ ಕುಹಕ ಅಪಹಾಸ್ಯಗಳ ಮೂಲಕ ಪ್ರಚಾರ ಪಡೆಯುವುದು ಅತಿ ಸುಲಭ. ಟೆನಿಸ್ ಆಡಲು ಕಲಿಯುವವರು ಮೊದಲು ವಾಲ್ ಪ್ರಾಕ್ಟೀಸ್ ಮಾಡುವಂತೆ ತಮಗೆ ಉಪದ್ರನ ಕೊಡಲಾರದಂಥ ಪ್ರಸಿದ್ಧರನ್ನು ಹೀನಾಮಾನ ವಿಮರ್ಶೆಯಲ್ಲಿ ಜರಿಯುವುದನ್ನು ಈಗಿನ ಕೆಲ ಎಳೆಯರು ಪ್ರಾರಂಭಿಸಿದ್ದಾರೆ. ಆದ್ದರಿಂದ ಈ ಬಗೆಯ ಚುರುಕುಮಾತು ಕಟಕಿಗಳ ಮೋಹ ಕನ್ನಡ ಸಾಹಿತ್ಯಲೋಕದಲ್ಲಿ ವ್ಯಕ್ತಿ ನಿರಪೇಕ್ಷವಾದ ಗಂಭೀರವಾದ ಸಾಂಸ್ಕೃತಿಕ ವಾತಾವರಣ ನಿರ್ಮಿಸುವ ಯತ್ನದಲ್ಲಿ ಕಂಟಕಗಳಾಗುತ್ತಿವೆ. ಕಾವ್ಯವನ್ನು ಕುರಿತು ಏಟ್ಸ್ ಒಂದು ಕಡೆ ಹೀಗೆ ಬರೆಯುತ್ತಾನೆ:

ಇದೇ ನಮ್ಮ ಅತ್ಯಂತ ಮುಖ್ಯ ಆಯ್ಕೆಹಕ್ಕಿಯ ಹಾಗೆ ಮೇಲೇರುತ್ತಾ ಸಾಮಾನ್ಯರ ದೃಷ್ಟಿಯಿಂದ ಕಳೆದುಹೋಗಬೇಕೊ ಅಥವಾ ಬೀದಿಗುಂಟ ಚಲಿಸುವ ಬಂಡಿಯಾಗಬೇಕೊ ಎಂಬುದುಹಕ್ಕಿಯಂತೆ ಹಾರುತ್ತ ಅತಿಸೂಕ್ಷ್ಮವಾಗುವುದರಲ್ಲಿ ಕಾವ್ಯ ಆಧ್ಯಾತ್ಮಿಕವಾಗಿ ಬಿಡುತ್ತದೆನಮಗೆ ಬಂಡಿ ಪ್ರಿಯವೆನ್ನಿಸಿದರೆ ದೇಹದೊಳಗೆ ಆತ್ಮವನ್ನು ಬಿಗಿಯಾಗಿ ಹಿಡಿದುಕೊಂಡಿರಬೇಕುಯಾಕೆಂದರೆ ನಮ್ಮ ಆತ್ಮ ಹಲವು ಸೂಕ್ಷ್ಮ ಜನಾಂಗಗಳ ಸಹವಾಸದಲ್ಲಿ ಪರಿಶುದ್ಧವಾದ ಸೌಂದರ್ಯವನ್ನು ಪ್ರೀತಿಸುವುದು ಕಲಿತು ಬಿಟ್ಟಿರುವುದರಿಂದ ರಕ್ತದ ತುಮುಲವನ್ನೂಕೇವಲ ಶಕ್ತಿಪ್ರದರ್ಶನವನ್ನೂವ್ಯಕ್ತಿತ್ವದ ಸೌಷ್ಠವವನ್ನೂ ಅಸಹನೆಯಿಂದ ಕಾಣುತ್ತದೆ.”

ಪಾಟೀಲರಂಥವರ ಬರವಣಿಗೆ ಜೀವನ ಸಂಪರ್ಕದ ಮಾರುಕಟ್ಟೆಯ ಬಂಡಿಯಾದಾಗ ಅದರಿಂದ ಕುಲುಕಿಸಿಕೊಳ್ಳುವ ಖುಷಿಯಲ್ಲಿ ತಮ್ಮ ಆತ್ಮದ ಒಳದನಿಗಳನ್ನು ಕೇಳಿಸಿಕೊಳ್ಳದವರಂತೆ ಅವರು ತಮ್ಮ ಮಾತಿಗೆ ತಾವೇ ಹಿಗ್ಗುತ್ತಾರೆ. ಆದ್ದರಿಂದ ಅವರ ಪ್ರತಿಭೆ ಜಾಣತನವಾಗಿ ‘ಗಾಂಧಿ ಸ್ಮರಣೆ’, ಮತ್ತು ಮಾವೋ ಮೇಲಿನ ಅವರದೇ ಪದ್ಯಗಳಲ್ಲಿ ಪಡೆಯುವ ಕಾವ್ಯಗುಣವನ್ನು ಬೇರೆ ಕಡೆಗಳಲ್ಲಿ ಪಡೆಯಲಾರದೆ ಹೋಗುತ್ತದೆ.

ಕಳೆದ ದಶಕದಲ್ಲಿ ಆದ ತಪ್ಪು ಇದು; ಸಾಹಿತ್ಯೇತರವಾದ ಗಂಭೀರವಲ್ಲದ ಕಾರಣಗಳಿಗಾಗಿ ಕ್ಷುಲ್ಲಕವಾದ್ದೂ ನಮ್ಮ ಗಮನ ಸೆಳೆಯಿತು. ಆದರೆ ಈ ಸಮಯದಲ್ಲೇ ಮೌನವಾಗಿ ಮೌಲಿಕವಾದ್ದನ್ನು ಬರೆಯುತ್ತಿದ್ದ ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಟಿ.ಜಿ. ರಾಘವ, ಜಿ.ಬಿ.ಜೋಷಿ, ತಿರುಮಲೇಶ, ಚನ್ನವೀರಕಣವಿ, ಕೆ.ಎಸ್.ನರಸಿಂಹಸ್ವಾಮಿಯಂಥವರು ಕಡೆಗಣಿಸಲ್ಪಟ್ಟರು. ನಾನು ಹಿಂದೆ ಸೂಚಿಸಿದಂತೆ ನಮ್ಮ ಅನೇಕ ವಿಮರ್ಶಕರು ಭಯಗ್ರಸ್ತರಾಗಿಯೋ ಸರ್ವಸಮ್ಮತರಾಗಬೇಕೆಂದೋ ದೊಡ್ಡದಾಗಿ ಕೂಗುವ ಎಲ್ಲ ಭೂತಗಳಿಗೂ ಬಲಿಕೊಡುತ್ತಾ ಮುಂದೆ ಸಾಗುವ ಪೂಜಾ ಕ್ರಮದಲ್ಲಿ ತೊಡಗಿದರು. ಜನರಿಗೆ ಪ್ರಿಯರಾದ ಬರಹಗಾರರಾದ ನಿಸಾರ್ ಅಹ್ಮದ್, ಬೈರಪ್ಪರಂಥವರಿಗೆ ವೈಯಕ್ತಿವಾಗಿ ಈ ವಾತಾವರಣದಿಂದ ಅನ್ಯಾಯವಾಗದೇ ಇರಬಹುದು; ಆದರೆ ಅಂಥವರ ಬರವಣಿಗೆ ಕೃತಿನಿಷ್ಠೆ ವಿಮರ್ಶೆಗೆ ಒಳಗಾಗದೇ ಹೋಗಿದ್ದರಿಂದ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಜನರು ಇಷ್ಟಪಡುವುದಕ್ಕೂ, ನಾವು ಸಾಹಿತ್ಯವೆಂದು ತಿಳಿದು ವಿಮರ್ಶಿಸುವುದಕ್ಕೂ ನಡುವಿನ ಅನಂತರ ಅನಾರೋಗ್ಯವೆನ್ನಿಸುವಷ್ಟು ಬೆಳೆಯಿತು. ಕಥೆ, ಕವನ, ಕಾದಂಬರಿಗಳಿಗಾಗಿ ಜನರಿಗಿರುವ ಹಸಿವನ್ನು ತಣಿಸುವ ಎಲ್ಲ ಕೃತಿಗಳೂ ಗಂಭೀರವಾದ ಪರಿಶೀಲನೆಗೆ ಯೋಗ್ಯವೆಂಬುದನ್ನು ನಾವು ಮರೆತದ್ದು ನಮ್ಮ ಸಾಹಿತ್ಯಲೋಕದ ದೊಡ್ಡ ಕೊರತೆಯನ್ನಬಹುದು. ಡಿಕನ್ಸ್ ಅಂಥವರಲ್ಲಿ ಮನೋರಂಜನೆಯೂ ಗಾಢ ಸಾಹಿತ್ಯಾನುಭವವೂ ಒಟ್ಟಿಗೇ ಸಿಗುವಂತೆ ನಮ್ಮ ಜನಪ್ರಿಯ ಕೃತಿಗಳಲ್ಲೂ ಸಿಗುತ್ತವೆಯೋ ಎಂಬುದನ್ನೀಗ ನಾವು ವಿಮರ್ಶಿಸಬೇಕಾಗಿದೆ.

ಈ ದೃಷ್ಟಿಯಿಂದ, ಅಸಾಮಾನ್ಯ ಪ್ರತಿಭಾಶಾಲಿಗಳಾದ ಲಂಕೇಶರು ಸಂಪಾದಿಸುತ್ತಿರುವ ‘ಲಂಕೇಶ್ ಪತ್ರಿಕೆ’ಯ ಒಟ್ಟು ಧಾಟಿಧೋರಣೆಗಳು ಜನರಿಗೆ ಮುಟ್ಟುತ್ತಿರುವ ಬಗೆಯಲ್ಲಿ ಸಾಂಸ್ಕೃತಿಕವಾಗಿ ಒಟ್ಟು ಎಂಥ ಪರಿಣಾಮ ಮಾಡುತ್ತಿವೆ ಎಂಬುದನ್ನು ವಿವೇಚಿಸಬೇಕಾಗಿದೆ.

ಈ ಗದ್ದಲದ ನಡುವೆ ಎಷ್ಟೋ ಹೊಸ ಲೇಖಕರು ಕನ್ನಡದಲ್ಲಿ ಬರೆಯತೊಡಗಿದ್ದಾರೆ. ಸದ್ಯ ಚಾಲ್ತಿಯಲ್ಲಿರುವ ಯಾವುದಾದರೊಂದು ಪಂಥಕ್ಕೆ ಸೇರದ ಹೊರತು ತಮ್ಮ ಕೃತಿಗಳು ಗಮನಕ್ಕೆ ಬರದೇ ಹೋದೀತೆಂಬ ಆತಂಕಕ್ಕೆ ಇವರು ಒಳಗಾಗುವುದು ಸಹಜ. ರಾಜಕೀಯದ ದೃಷ್ಟಿಯಿಂದ ಸರಿಯಾದ ಧೋರಣೆ ಇದೊಂದೇ ಎಂಬ ನಿಶ್ಚಯದಿಂದಲೇ ಹೊರಟ ಪಂಥವಾದ ಬಂಡಾಯಸಾಹಿತ್ಯ ಆಂದೋಲನದಲ್ಲಿ ಭಾಗಿಗಳಾಗುತ್ತಿರುವ ಯುವಕರು ತಮ್ಮ ಕೃತಿಗಳನ್ನು ಆಳವಾಗಿಯೂ ವಿಶಿಷ್ಟವೆಂಬಂತೆಯೂ ರಚಿಸದಿದ್ದರೂ ಈ ಕಾಲದಲ್ಲಿ ಸಲ್ಲಬಹುದೆಂಬ ಧೋರಣೆಯಿಟ್ಟುಕೊಂಡಲ್ಲಿ ಕೃತಿ ಸಫಲತೆಯ ಕಷ್ಟದ ದಾರಿಯಿಂದ ಅವರು ವಂಚಿತರಾದಂತಾಗುತ್ತದೆ. ಇದರಿಂದ ಹೊರಗುಳಿದವರು ಯಾರ ಗಮನಕ್ಕೂ ಬರದೆ ಹೋಗಬಹುದು. ಆದರೆ ಸಾಹಿತ್ಯದ ಚರಿತ್ರೆಯಲ್ಲಿ ಹೀಗೆ ಚಾಲ್ತಿಯಲ್ಲಿರುವುದರಿಂದ ಹೊರಗುಳಿದು ತಮ್ಮ ಕಾಲದ ನಂತರ ಪ್ರಸಿದ್ಧರಾದ ಬ್ಲೇಕ್ ಮತ್ತು ಹಾಪ್‌ಕಿನ್ಸ್‌ರಂಥವರೂ ಇದ್ದಾರೆಂಬುದನ್ನು ಪ್ರಬುದ್ಧವೆಂದು ನಾವು ತಿಳಿದ ಆಂಗ್ಲ ಸಾಹಿತ್ಯ ಪರಂಪರೆಯಲ್ಲೂ ಕಾಣಬಹುದು. ಇದರಿಂದ ಆಗುವ ನಷ್ಟ ಲೇಖಕರಿಗೆ ಮಾತ್ರವಲ್ಲ; ಆಯಾಯ ಕಾಲದ ಸಂಸ್ಕೃತಿಗಳಿಗೆ ಮತ್ತು ಜನಾಂಗಕ್ಕೆ. ಆದ್ದರಿಂದ ನಮ್ಮ ಪತ್ರಿಕೆ ತೆರೆದ ಮನಸ್ಸಿನದಾಗಿರುವುದಕ್ಕೆ ಪ್ರಯತ್ನಿಸುತ್ತದೆ. ಜೊತೆಗೇ ಸದ್ಯ ಸಲ್ಲುವ ಪಂಥಗಳ ಧೋರಣೆಗಳನ್ನು ಅವುಗಳ ಎಲ್ಲ ಸಂಕೀರ್ಣತೆಯಲ್ಲೂ ಅರಿಯುವಂತೆ ಒತ್ತಾಯಿಸಲು ಅಗತ್ಯವಾದ ಸಾಹಿತ್ಯಿಕ ಸಂವಾದದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಮೌನಕಣಿವೆಯ ಜೀವಮಂಡಲದ ಅರಣ್ಯ ಪವಿತ್ರವಾದ್ದು, ಗಹನವಾದ್ದು, ಅಲ್ಲಿ ವಿಕಸಿಸುವ ಹೊಸ ಜೀವಕ್ಕೆ ಹೊಸರೂಪವಿರುವಂತೆಯೇ ಸ್ಮೃತಿಯ ಸಾತತ್ಯ ಕಳಕೊಳ್ಳದ ಭಾಷೆಯಲ್ಲೂ ಹೊಸತಾದ್ದರ ನಿರ್ಮಾನವಾಗುತ್ತದೆ. ಇಡೀ ನಮ್ಮ ಸಂಸ್ಕೃತಿಯಲ್ಲಿ ಅದರ ಸನ್ನಾಹ ನಡೆಯುತ್ತಲೇ ಇರಬೇಕು. ಅದು ಎದುರಾದಾಗ ಅದನ್ನು ಕಾಣಬಲ್ಲ ವಿನಯವನ್ನು ಕಲಿತುಕೊಳ್ಳುವುದೂ ಸಾಹಿತ್ಯ ವಿಮರ್ಶೆಯ ಬಹು ಮುಖ್ಯ ಜವಾಬ್ದಾರಿ.

ಧಾರ್ಮಿಕ ಪರಂಪರೆಯ ಅವನತಿ

ನಮ್ಮ ಹಿಂದಿನ ಜನಾಂಗಕ್ಕೆ ಹಿಂದೂ ಧರ್ಮದ ಆಧ್ಯಾತ್ಮಿಕತೆಯನ್ನು ಅದರ ಸೃಜನಶೀಲ ಶಕ್ತಿವಂತಿಕೆಯಲ್ಲಿ ಪ್ರತಿನಿಧಿಸಬಲ್ಲ ವಿವೇಕಾನಮದ, ಪರಮಹಂಸ, ರಮಣ, ಅರವಿಂದರು ಇದ್ದರೆ, ಈಗಿನ ಕಾಲದಲ್ಲಿ ನಮಗೆ ಕಾಣುವವರು ಶ್ರೀ ಸತ್ಯಸಾಯಿ ಬಾಬಾರಂಥವರು. ಅಂದರೆ, ಭಾರತದ ಧಾರ್ಮಿಕ ಪರಂಪರೆ ಕೂಡ ಅವನತಿ ಹೊಂದಿದೆ ಎಂದರ್ಥ. ಶಂಕರ, ರಾಮಾನುಜ, ಆನಂದತೀರ್ಥರು ಒಬ್ಬರನ್ನು ಒಬ್ಬರು ಒಪ್ಪದೆ, ತಮ್ಮ ಕಾಣ್ಕೆಯನ್ನೂ ಶಾಸ್ತ್ರಗಳನ್ನೂ ಸುಸಂಬದ್ಧವೆನ್ನಿಸುವಂತೆ ಹೆಣೆಯಲು ಮಾಡಿದಂಥ ಬೌದ್ಧಿಕ ಪ್ರಯತ್ನವಾಗಲೀ, ವಿವೇಕಾನಂದ ಅರವಿಂದರಂಥವರು ವೈದಿಕ ಧರ್ಮವನ್ನು ಸಮಕಾಲೀನ ಜೀವನದ ಒತ್ತಡಗಳಿಗೆ ಅನ್ವಯಿಸಲು ತೋರಿಸಿದ ಕಾಳಜಿಯಾಗಲೀ ಈ ಕಾಲದ ಪವಾಡಪುರುಷರೆಂದು ಕರೆಸಿಕೊಳ್ಳುತ್ತಿರುವವರಲ್ಲಿ ಕಾಣುತ್ತಿಲ್ಲ. ಶಂಕರ, ರಾಮಕೃಷ್ಣ, ವಿವೇಕಾನಂದರಂಥವರ ದೃಷ್ಟಿಯಲ್ಲಿ ನೋಡಿದಾಗ ಬಹುಜನಪ್ರಿಯರಾದ ಶ್ರೀ ಸತ್ಯಸಾಯಿಬಾಬರು ನಮ್ಮ ಧರ್ಮವನ್ನು ಉಪಯೋಗಿಸಿಕೊಳ್ಳುವ ಬಗೆಗೂ, ಪತ್ತೇದಾರಿ ಕಾದಂಬರಿಗಳನ್ನೂ, ಚೀಪಾದ ರೋಮಾನ್ಸ್‌ಗಳನ್ನೂ ಬರೆಯುವ ಲೇಖಕನೊಬ್ಬ ಒಳ್ಳೆಯ ಸಾಹಿತ್ಯದ ಕೆಲವು ಗುಣಗಳನ್ನು ದುರುಪಯೋಗಪಡಿಸಿಕೊಳ್ಳುವ ಕ್ರಮಕ್ಕೂ ಅನೇಕ ಸಾಮ್ಯಗಳಿವೆ. ಆದರೆ ನಮ್ಮ ಧಾರ್ಮಿಕ ಪರಂಪರೆ ಈಗ ಎಷ್ಟು ಜಡವೂ, ಅವಿಮರ್ಶಾತ್ಮಕವೂ ಆಗಿದೆಯೆಂದರೆ ಧರ್ಮದ ಆಚರಣೆಯಲ್ಲಿ ಯಾವುದು ಸಾಚ ಯಾವುದು ಮೋಸ ಎಂದು ವಿವೇಚಿಸಬಲ್ಲ ಸೃಜನಶೀಲ ಚಿಂತಕರು ಅದರಲ್ಲಿ ಕಾಣುತ್ತಿಲ್ಲ.

ಸೃಷ್ಟಿಯ ರಹಸ್ಯಕ್ಕೆ ಕಿಂಡಿಯಾಗಿಯೂ, ಧ್ಯಾನದ ಶಿಸ್ತಾಗಿಯೂ, ನೈತಿಕ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ದಾಟಿಸುವ ವಾಹಕವಾಗಿಯೂ ಇರುವ ಧರ್ಮ ಹೀಗೆ ತನ್ನ ಸತ್ವ ಕಳಕೊಂಡಾಗ ಸಾಹಿತ್ಯ ಮತ್ತು ಕಲೆಗಳು ಆ ಕೆಲಸಗಳನ್ನು ನಿರ್ವಹಿಸಬೇಕಾಗುತ್ತವೆ. ಒಕ್ಕೂಟ, ವಿಚಾರವಾದಿ ಆಂದೋಳನಗಳ ಪ್ರಮುಖರಲ್ಲಿ ಒಬ್ಬರಾದ ತೇಜಸ್ವಿಯವರ ಈಚಿನ ಕಾದಂಬರಿ ‘ಕರ್ವಾಲೊ’ ಧರ್ಮಗಳ ಮೂಲಾಧಾರವಾದ ಈ ಸೃಷ್ಟಿ ರಹಸ್ಯದ ಅನುಭವವನ್ನೇ ವೈಜ್ಞಾನಿಕವಾಗಿ ಕೊಡಲು ಪ್ರಯತ್ನಿಸುವುದು ವಿಚಾರವಾದೀ ಆಂದೋಲನದ ಸಂದರ್ಭದಲ್ಲಿ ಗಮನಾರ್ಹವಾಗಿದೆ. ಸಾಯಿಬಾಬಾ ಮಂದಿರದಲ್ಲಿ ನಡೆಯುವ ಭಜನೆ ಅನೇಕರಿಗೆ ಮನಸ್ಸಿಗೆ ನೆಮ್ಮದಿ ಕೊಡಬಹುದು; ಆದರೆ ನೀಗ್ರೊ ನಾಯಕ ಮಾರ್ಟಿನ್‌ಲೂಥರ್ ಕಿಂಗ್ ಚಳುವಳಿಯಲ್ಲಿ ಭಾಗವಹಿಸಿದವರು ‘We Shall overcome’ ಎಂಬ ಹಾಡನ್ನು ಹಾಡುವುದು, ವಿಯಟ್ನಾಂ ಯುದ್ಧ ವಿರೊಧಿಗಳು ಅಮೇರಿಕನ್ ಸರ್ಕಾರದ ವಿರುದ್ಧ ದಂಗೆಯೆದ್ದುದು, ಜಯಪ್ರಕಾಶರು ಸರ್ವಾಧಿಕಾರದ ವಿರುದ್ಧ ನಡೆಸಿದ ಚಳುವಳಿ, ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಧೀಮಂತರು ತೋರಿಸುತ್ತಿರುವ ವಿರೋಧ-ಇಂಥವೇ ಈ ಕಾಲದ ಅತ್ಯಂತ ಆಳವಾದ ಧಾರ್ಮಿಕ ಭಾವನೆಯನ್ನು ಪ್ರಚೋದಿಸಬಲ್ಲ ಸಂಗತಿಗಳು. ನಮ್ಮ ದೇಶದಲ್ಲಿ ಎಚ್ಚೆತ್ತ ದಲಿತರಿಗೆ ಈ ಬಗೆಯ ಆಳವಾದ ಧಾರ್ಮಿಕ ಭಾವನೆಯನ್ನು ಜನತೆಯಲ್ಲಿ ಮೊಳೆಯಿಸಬಲ್ಲ ಶಕ್ತಿಯಿದೆ. ದಿನನಿತ್ಯದ ಬದುಕಿನಲ್ಲಿ ಹಿಂಸೆಗೆ ಒಳಗಾಗುತ್ತಿರುವ ಈ ಜನ ದೇಶದ ಮುಖ್ಯ ಸ್ರೋತವೆನ್ನಿಸುವ ಚಳವಳಿಗಳಲ್ಲಿ-ಉದಾಹರಣೆಗೆ ಈ ಹಿಂದೆ ನಡೆದ ಎಮರ್ಜನ್ಸಿ ವಿರುದ್ಧದ ಆಂದೋಲನ ಮತ್ತು ಈಗ ನಡೆಯುತ್ತಿರುವ ರೈತ ಚಳುವಳಿಗಳಲ್ಲಿ -ಭಾಗಿಯಾಗಲಾರದ ತಮ್ಮ ಹಿತರಕ್ಷಣೆಗಷ್ಟೇ ಅನಿವಾರ್ಯವಾಗಿ ಪರಿಮಿತವಾಗಿ ಬಿಡಬೇಕಾದ ಅಪಾಯವೂ ಇದೆ. ಹಿಂದೆ ಜಯಪ್ರಕಾಶರ ಸರ್ವಾಧಿಕಾರಿ ವಿರುದ್ಧದ ಚಳುವಳಿಯ ಮುಖ್ಯ ಅಂಗವಾಗಿದ್ದ ವಿದ್ಯಾರ್ಥಿ ಸಮೂಹ ನಂತರ ಬಿಹಾರದಲ್ಲಿ ದಲಿತ ವಿರೋಧಿ ಚಳುವಳಿಯಾಯಿತು-ರಿಸರ್ವೇಷನ್ ಪ್ರಶ್ನೆ ಎದ್ದಾಗ, ಹಾಗೆಯೇ ಈ ರೈತ ಚಳುವಳಿಯಲ್ಲಿರುವ ಹಲವರು ಹರಿಜನರ ಕಣ್ಣಿನಲ್ಲಿ ಹಿಂಸಕರೇ ಆಗಿದ್ದಾರೆ. ಆದರೆ ಇಂದಿನ ವ್ಯವಸ್ಥೆಗೆ ಸವಾಲಾಗುವ ಶಕ್ತಿ ಪಡೆದ ರೈತ ಚಳುವಳಿ ಅನೇಕ ಮಾನಸಿಕ ಮಿತಿಗಳನ್ನು ಮೀರಿ ದೇಶದ ಸಮಷ್ಟಿ ಪ್ರಜ್ಞೆಯನ್ನು ಗಾಡವಾದ ಮಾನವಿಕ ಮೌಲ್ಯಗಳ ತಳಹದಿ ಮೇಲೆ ಕಟ್ಟಲು ಸಮರ್ಥವಾಗುತ್ತದೆಯೊ ಕಾದು ನೋಡಬೇಕಾಗಿದೆ. ಮಹಾರಾಷ್ಟ್ರದ ದಲಿತ ಲೇಖಕರಲ್ಲಿ ಕೆಲವರು, ನಮ್ಮಲ್ಲಿ ದೇವನೂರು ಮಹಾದೇವರು, ನಮ್ಮ ಮತ್ತು ಸಮಷ್ಟಿ ಜೀವನಕ್ಕೆ ಬೆಲೆಯುಳ್ಳದ್ದನ್ನು ಸೇರಿಸಬಲ್ಲಂಥ ಸಮರ್ಥರೆಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಎಲ್ಲ ಜಾತಿಗಳ ಧೀಮಂತರಲ್ಲೂ ಮೂಡುತ್ತಿರುವ ಈ ಪ್ರಜ್ಞೆ ಎಷ್ಟರ ಮಟ್ಟಿಗೆ ಇಡೀ ಜನಾಂಗಕ್ಕೆ ಹರಡಬಲ್ಲುದೆಂಬ ಅನುಮಾನವಂತೂ ಇರಲೇಬೇಕಾದ್ದು. ಯಾಕೆಂದರೆ, ತನ್ನ ಕಾಲ, ತನ್ನ ಜನ ತಾನು ಬರೆದದ್ದನ್ನು ಸಂಪೂರ್ಣವಾಗಿ ನಿರಾಕರಿಸಬಹುದು ಎಂಬ ಅನುಮಾನದಲ್ಲೇ ಬರೆಯುವ ಲೇಖಕರು ಮಾತ್ರ ನೈಜವಾದ್ದನ್ನು ಸೃಷ್ಟಿಸಬಲ್ಲರು. ಲೋಹಿಯಾ ಹೇಳಿದಂತೆ ನಿರಾಶೆಯ ಕರ್ತವ್ಯದ ಪಣ ತೊಟ್ಟ ಮಂದಿಯ ಅಗತ್ಯ ಎಲ್ಲ ಕಾಲದಲ್ಲೂ ಉಳಿದಿರುತ್ತದೆ.

ಸಾಹಿತ್ಯ ಮತ್ತು ಜನಪ್ರಿಯತೆ

ಜನಪ್ರಿಯತೆಯನ್ನೇ ಮುಖ್ಯಗುರಿಯಾಗಿಟ್ಟುಕೊಳ್ಳುವುದು ಸಾಹಿತಿಗೆ ಮಾತ್ರ ಮಾರಕವಲ್ಲ -ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲು ಮೌಲಿಕವಾದ್ದನ್ನು ಸಾಧಿಸಬೇಕೆಂಬುವವರಿಗೆ ಅದು ಮಾರಕವಾಗಬಹುದು. ನಾಡಿನ ಸಂಸ್ಕೃತಿಯಲ್ಲಿ ಪಾಲುದಾರರಾಗುತ್ತಿರುವ ದಲಿತರು, ಬ್ರಾಹ್ಮಣೇತರರು, ಬ್ರಾಹ್ಮಣರು-ಹೀಗೆ ಎಲ್ಲರೂ ಸುಲಭವಾದ ಯಶಸ್ಸಿನಿಂದ ವಂಚಿತರಾಗದಂತೆ ಈ ನಮ್ಮ ಸನ್ನಿವೇಶದಲ್ಲಿ ದುಡಿಯಬೇಕಾಗಿದೆ. ಅಪ್ರಿಯವಾದ್ದನ್ನು ತಮ್ಮ ತಮ್ಮ ಜನರಿಗೂ ಹೇಳುವ ಧೈರ್ಯವನ್ನು ಆಯಾ ವರ್ಗದ ಧೀಮಂತರು ಕಳೆದುಕೊಳ್ಳದಿದ್ದಲ್ಲಿ ಮಾತ್ರ, ಚುನಾವಣೆಗಾಗಿ ಆಡುವ ಮೆರಗು ಮಾತುಗಳಲ್ಲಿ ಕಳೆದುಹೋಗುತ್ತಿರುವ ಸತ್ಯಗಳನ್ನು ರಕ್ಷಿಸುವುದು ಸಾಧ್ಯ. ನಿಜವಾದ ಕಲೆಗೆ, ಈ ಕಾರಣದಿಂದಲೇ, ಮೇಲುಮನಸ್ಸಿಗೆ ಅಪ್ರಿಯವಾಗುವುದರ ಮೂಲಕವೂ ಒಳಮನಸ್ಸಿನಲ್ಲಿ ನಾಟುವಂತೆ ಅಭಿವ್ಯಕ್ತವಾಗುವುದು ಅಗತ್ಯವಾಗುತ್ತದೆ. ಇಂಥ ಅಗತ್ಯದಿಂದಲೇ ಕನ್ನಡದಲ್ಲಿ ಹುಟ್ಟಿದ್ದು ನವ್ಯ ಸಾಹಿತ್ಯ. ವಕ್ರವಾದ, ಒಗರಾದ, ಕಠಿಣವಾದ ಸಂವಹನ ಕ್ರಿಯೆಯ ಮೂಲಕ ಓದುಗನಿಗೆ ಆಳವಾದ ಅಂತರ್ಬೋಧೆಯಾಗುವಂತೆ ಮಾಡುವ ಈ ಕೆಲಸ ನಮ್ಮ ನಾಡಿನಲ್ಲಿ ಒಂದು ಹೊಸ ಮಾನವೀಯ ನಾಗರೀಕತೆಯನ್ನು ಸೃಷ್ಟಿಸುವುದಕ್ಕಾಗಿ ಅವಿರತವಾಗಿ ನಡೆಯಬೇಕಾಗಿದೆ. ಮನುಷ್ಯನನ್ನು ಅವನ ರಾಕ್ಷಸೀಯತೆಗೂ, ದೈವಿಕ ಕನಸುಗಳಿಗೂ ಎದುರಾಗಿ ನಿಲ್ಲಿಸುವ ಸಾಹಿತ್ಯ, ಈ ದೃಷ್ಟಿಯಿಂದ ನಿಜವಾಗಿಯೂ ಕ್ರಾಂತಿಕಾರಕವಾದ್ದು.

ಬಹುಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳೂ, ಮಾದರಿಯಾಗಿ ಈವರೆಗೆ ಕಂಡಿದ್ದ ರಾಜಕೀಯ ವ್ಯವಸ್ಥೆಗಳೂ ಮನುಷ್ಯರ ಆಳವಾದ ಅಗತ್ಯಗಳನ್ನು ಪೂರೈಸಲಾರವು ಎನ್ನಿಸಿದಾಗ, ರೂಢೀಯಲ್ಲಿದ್ದ ಧಾರ್ಮಿಕ ಆಚರಣೆಗಳು ಜಡ್ಡಾಗುತ್ತ ಹೊದಾಗ, ಪ್ರಪಂಚದ ಸಮತೋಲವನ್ನು ಕಾಪಾಡುತ್ತಿದ್ದ ಮೌನಕಣಿವೆಯಂಥ ಪ್ರದೇಶಗಳು ಯಾವ ರಾಜಕೀಯ ವ್ಯವಸ್ಥೆಯಲ್ಲಾಗಲೀ ನಿರ್ನಾಮವಾಗಬಹುದಾದ ಅಪಾಯ ಕಾಣಿಸಿಕೊಂಡಾಗ, ಆಧುನಿಕ ನಾಗರೀಕತೆಯ ಮುನ್ನುಗ್ಗುವ ಹಂಬಲದಿಂದಲೇ ಸ್ವಾತಂತ್ಯ್ರ, ಸಮಾನತೆ, ದಯಾವಂತಿಕೆಗಳು ನಾಶವಾಗಬಹುದು ಎನ್ನಿಸಿದಾಗ ಹಿಂದುಮುಂದನ್ನು ಕಾಣಬಲ್ಲ ಧೀಮಂತವರ್ಗ ತನ್ನ ಕಾಣ್ಕೆಯನ್ನು ವಿಮರ್ಶೆ ಸಂವಾದಗಳ ಮೂಲಕ ಹರಿತಗೊಳಿಸಿಕೊಳ್ಳುತ್ತ ಹೋಗಬೇಕಾಗುತ್ತದೆ. ಸಾಹಿತ್ಯದ ನೈಜವಾದ ಕ್ರಾಂತಿಕಾರಕತೆಯನ್ನು ಸ್ವೀಕರಿಸಬಲ್ಲ ಮನಸ್ಸುಗಳನ್ನು ಸೃಷ್ಟಿಸಲು ಶ್ರಮಿಸಬೇಕಾಗುತ್ತದೆ. ಹೀಗೆ ತನ್ನ ಅನುಭವಕ್ಕೆ, ಅಂತಃಸಾಕ್ಷಿಗೆ ಬದ್ಧವಾಗಿ ಲೇಖಕ ಬರೆದದ್ದು ಜನರಿಗೆ ಮುಟ್ಟುವಂತೆ ಮಾಡುವ ಕೆಲಸವನ್ನು ಅಧ್ಯಾಪಕರು, ವಿಮರ್ಶಕರು ಸತತವಾಗಿ ಮಾಡಬೇಕು. ಅಷ್ಟೇ ಸಾಲದೆಂದು ಈಚೆಗೆ ಅನೇಕರಿಗೆ ಅನ್ನಿಸುವುದರಿಂದಲೇ ಬೀದಿನಾಟಕಗಳು, ಸಮುದಾಯದ ಜಾಥಾಗಳು ಪ್ರಾರಂಭವಾಗಿವೆ. ಈ ಚಳವಳಿಗಳು ಸಾಹಿತಿಗಳನ್ನು ಜನಪ್ರಿಯವಾಗುವಂತೆಯೋ, ರಾಜಕೀಯ ಪಕ್ಷವೊಂದಕ್ಕೆ ನಿಷ್ಠವಾಗುವಂತೆ ಬರೆಯುವುದಕ್ಕೋ ಮಾತ್ರ ಪ್ರಚೋದಿಸಕೂಡದು. ಬದಲಾಗಿ, ಉತ್ತಮ ಸಾಹಿತ್ಯವನ್ನು ಜನ ಪುರಸ್ಕರಿಸುವಂತೆಯೂ ವ್ಯಾಪಾರೀ ಸಾಹಿತ್ಯದಿಂದ ಜನರು ರುಚಿ ಕೆಡದಂತೆಯೂ ಇಂಥ ಆಂದೋಲನಗಳು ಶ್ರಮಿಸಬೇಕು. (ಈ ದೃಷ್ಟಿಯಿಂದ ಪ್ರಾಯಶಃ ಇಡೀ ಭಾರತದಲ್ಲೇ ಮಹತ್ವದ ಸಾಧನೆಯೆಂದರೆ ಸುಬ್ಬಣ್ಣನವರದು. ಅವರ ಕನಸಿನ ಫಲವಾದ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ಹಳ್ಳಿ ಮತ್ತು ನಗರ, ಜಾನಪದ ಮತ್ತು ಅಭಿಜಾತ ಏಕತ್ರ ಕೂಡುತ್ತಿರುವ ಬಗೆ, ನಾನು ವ್ಯಕ್ತಪಡಿಸಲು ಶ್ರಮಿಸುತ್ತಿರುವ ಆದರ್ಶಕ್ಕೆ ಉದಾಹರಣೆಯಾಗಿದೆ). ಹಿಂದೆ ನಡೆದ ಕಮ್ಯುನಿಸ್ಟ್ ಪಕ್ಷ ಪ್ರೇರಿತ ಚಳುವಳಿಗಳು ಸ್ಟಾಲಿನ್ನನ ಕ್ರೌರ್ಯವನ್ನು ಮುಚ್ಚಿಟ್ಟಂತೆ ಈಗಿನ ಪ್ರಗತಿಶೀಲರು ವರ್ತಿಸಬಾರದು. ಲೇಖಕ ತನ್ನ ಅಂತಃಸಾಕ್ಷಿಗೆ ಸುಳ್ಳಾಗದಂತೆ ನಡೆಯುವುದು ಸಾಧ್ಯವಿದ್ದಲ್ಲಿ ಮಾತ್ರ ಇಂಥ ಆಂದೋಲನಗಳಲ್ಲಿ ಭಾಗಿಯಾದಾನು.

ಆದರೆ ಸಾಹಿತ್ಯ ವಿಮರ್ಶೆಯ ಸತತ ಶ್ರಮದಿಂದ ಕೆಲವೇ ಕೆಲವರಿಗೆ ಮಾತ್ರ ಅರ್ಥಪೂರ್ಣರಾದ ಅಡಿಗರಂಥ ಕವಿಗಳನ್ನು ಒಂದು ಲಕ್ಷ ಜನರಾದರೂ ಓದುವ ಲಂಕೇಶ್ ಪತ್ರಿಕೆಯಲ್ಲಿ ಅಸಭ್ಯವೆನ್ನಿಸುವಂತೆ ಗೇಲಿ ಮಾಡುವುದು, ಬಂಡಾಯ ಸಾಹಿತ್ಯದ ಆಂದೋಳನಕ್ಕೆ ಆಕರ್ಷಿತರಾದ ಹಲವು ಎಳೆಯರಿಗೆ ನವ್ಯ ಸಾಹಿತ್ಯದ ಉತ್ಕೃಷ್ಟ ಕೃತಿಗಳನ್ನು ಪ್ರತಿಗಾಮಿ ಧೋರಣೆಯವೆಂದು ಹೇಲಿ, ಅವುಗಳ ಅಭ್ಯಾಸ ಅನತ್ಯವೆಂಬ ಹುಂಬತನವನ್ನು ಅವರಲ್ಲಿ ಬೆಳೆಸುವುದು ಸೃಜನಶೀಲತೆಗೇ ವಿರೋಧವಾದ ನಿಲುವುಗಳಾಗುತ್ತವೆ. ಇದೇನೂ ಹೊಸತಲ್ಲ; ಇಂಥ ಅಸಹನೆಯನ್ನು ಹಿಟ್ಲರ್, ಸ್ಟಾಲಿನ್, ಮೆಕಾರ್ಥಿಗಳೂ ತೋರಿದ್ದರು.

ಬಿ.ಜಿ.ಎಲ್. ಸ್ವಾಮಿ

ನಾನು ಕೇರಳದ ಮೌನ ಕಣಿವೆಗೆ ಹೋದಾಗ ಒಂದು ದೊಡ್ಡ ಮರದ ಎದುರು ನಿಂತು ಶ್ರೀ ಬಿ.ಜಿ.ಎಲ್. ಸ್ವಾಮಿಗಳನ್ನು ನೆನೆದೆ. ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಕ್ಕೆ ಅವರೂ ಬಂದಿದ್ದರು. ನಮ್ಮನ್ನು ಕಾಡು ತೋರಿಸುತ್ತೇನೆಂದು ಕರೆದೊಯ್ದಿದ್ದರು. ಅವರ ಕೈಯಲ್ಲಿ ಪುಟ್ಟದೊಂದು ಲೆನ್ಸ್ ಜೋಡಿಸಿರುವ ಸೂಕ್ಷ್ಮ ದರ್ಶಕವಿತ್ತು. ಬಿಳಿಯ ದೊಗಳೆ ಪಾಯಜಾಮದಲ್ಲವರು ಪಾದರಸದಂತೆ ಅತ್ತಿಂದಿತ್ತ ಚಲಿಸುತ್ತ, ಪೊದೆಗಳಲ್ಲಿ ನುಗ್ಗುತ್ತ ನಾವು ನಿತ್ಯ ನೋಡುವ ಕ್ಷುದ್ರವಸ್ತುಗಳನ್ನು ತಂದು, ಸೂಕ್ಷ್ಮದರ್ಶಕದಲ್ಲಿ ತೋರಿಸಿ ನಮ್ಮನ್ನು ಮಕ್ಕಳಂತೆ ನಲಿಸಿದ್ದರು. ವಿಜ್ಞಾನಕ್ಕೂ ಕಾವ್ಯಕ್ಕೂ ನಡುವಿನ ಅಂತರವನ್ನು ನನ್ನ ಪಾಲಿಗೆ ಹೋಗಲಾಡಿಸಿದವರು ಬಿ.ಜಿ.ಎಲ್. ಸ್ವಾಮಿ. ಅವರದು ಕ್ರಾಂತಿಕಾರಕವಾದ ಅವಧೂತ ರೀತಿಯ ವ್ಯಕ್ತಿತ್ವ. ಅವತ್ತು ಧರ್ಮಸ್ಥಳದಲ್ಲಿ ಅವರು ನನ್ನನ್ನು ಒಂದು ಭವ್ಯವಾದ, ಆಗತಾನೇ ಚಿಗುರಿದ ಮರವೊಂದರ ಮುಂದೆ ನಿಲ್ಲಿಸಿ ‘ನೋಡಿ’ ಎಂದರು. ಸೂರ್ಯನ ಎಳೆ ಬಿಸಿಲನ್ನು ಹೊತ್ತು ಅದು ನಿಂತಿತ್ತು. ‘ಈ ಕ್ಷಣದಲ್ಲಿ ಈ ಮರ ಸೂರ್ಯನ ಬೆಳಕನ್ನು ಪಡೆದು ವಿಶಿಷ್ಟವಾದ ನೆರಳುಬೆಳಕಿನ ನ್ಯಾಸದಲ್ಲಿ ಕಾಣುತ್ತಿರುವಂತೆ ಅಪಾರ ಕಾಲದಲ್ಲಿ ಇನ್ನು ಎಂದೂ ಅದು ಕಾಣದು. ಈ ಅನುಭವ ನೋಡಿ, ಕವಿ ಮಾತ್ರ ತಿಳಿದಾನು. ವಿಜ್ಞಾನಿಯಾದ ನನಗೆ ಅದನ್ನು ಹೇಳಲು ಬೇಕಾದ ಭಾಷೆಯಿಲ್ಲ” ಎಂದು ಬೆರಗಿನಲ್ಲಿ ಅವರು ನನ್ನ ಜೊತೆ ನಿಂತಿದ್ದರು.

ಮೌನ ಕಣಿವೆಯಿಂದ ನಾನು ಮೈಸೂರಿಗೆ ಹಿಂದೆ ಬಂದು ಮನೆಯೊಳಗೆ ಬರುತ್ತಿದ್ದಂತೆಯೇ ಅವರು ಸತ್ತರು ಎಂಬ ಸುದ್ದಿ ಕೇಳಿದೆ; ಇನ್ನೊಮ್ಮೆ ಬೆರಗಾದೆ. ಅವರು ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದ್ದಾರೆ. ಅಷ್ಟೊಂದು ಜೀವಂತವಾದ್ದನ್ನು ತಮ್ಮ ಬರವಣಿಗೆಯಲ್ಲಿ ಸೃಷ್ಟಿಸಿ, ಕೆಲಸದ ನಡುವೆ ಸತ್ತ ಅವರು, ನಮಗೆ ಜೀವಂತವಾಗಿಯೇ ಉಳಿದಿದ್ದಾರೆ. ಲಿಯನಾರ್ಡೋ ಡವಿಂಚಿಗೆ ಕಲೆ, ವಿಜ್ಞಾನ, ಸಾಹಿತ್ಯ ಎಲ್ಲದರಲ್ಲೂ ಆಸಕ್ತಿಯಿತ್ತು ಎನ್ನುತ್ತಾರೆ. ಹೋಮಿಬಾಬಾರು ಸತ್ತಾಗ ಈ ತನ್ನ ಪ್ರಿಯ ಸ್ನೇಹಿತ ಲಿಯನಾರ್ಡೊ ಡವಿಂಚಿಯಂತೆ ಬಹುಮುಖವಾದ ವ್ಯಕ್ತಿತ್ವ ಪಡೆದಿದ್ದವರು ಎಂದು ಪ್ರಸಿದ್ಧ ವೈಣಿಕ ಯೆಹುದಿ ಮೆನುಹಿನ್ ಹೇಳಿದರು. ಕನ್ನಡ ನಾಡಿನ ನಮಗಂತೂ ಬಿ.ಜಿ.ಎಲ್.ಸ್ವಾಮಿ ಲಿಯನಾರ್ಡೋ ಡವಿಂಚಿಯಂಥ ವ್ಯಕ್ತಿತ್ವವೇ.

ನಮ್ಮ ಕೃತಜ್ಞತೆ

ಸೃಜನಶೀಲತೆಯನ್ನು ವಿನಯದಿಂದಲೂ, ಗಾಂಭೀರ್ಯದಿಂದಲೂ ವಿಮರ್ಶಾತ್ಮಕ ನಿಲುವಿನಿಂದ ಪೋಷಿಸುವ ಕೆಲಸವನ್ನು ಕನ್ನಡದ ಅನೇಕ ಕಿರು ಪತ್ರಿಕೆಗಳು ಮಾಡುತ್ತಿವೆ. ಅವರ ಜೊತೆ ನಾವೂ ಸೇರುತ್ತಿದ್ದೇವೆ. ನಮ್ಮ ಹಿಂದೆ ‘ಸಾಕ್ಷಿ’ ಮೌನವಾಗಿ ಬೆಳೆಸಿದ ಪರಂಪರೆಯಿದೆ; ನಮ್ಮಲ್ಲಿ ಹಲವರನ್ನು ಬೆಳೆಸಿದ ಕವಿ ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಮತ್ತೆ ಅದು ಪ್ರಕಟವಾಗುತ್ತಿದೆ. ‘ಸಾಕ್ಷಿ’ಗೆ ಕೃತಜ್ಞತೆ ಹೇಳುತ್ತಲೇ ಮತ್ತೆ ಪ್ರಕಟವಾಗುವ ಅದನ್ನು ಸ್ವಾಗತಿಸುತ್ತೇವೆ. ಈ ನಮ್ಮ ಪತ್ರಿಕೆಯ ಹುಟ್ಟಿನಲ್ಲಿ ‘ಅಂಕಣ’, ‘ಶೂದ್ರ’, ‘ಪುಸ್ತಕ ಪರುವಣಿ’ಯ ಸಂಪಾದಕರು ಮತ್ತು ವೈಯಕ್ತಿಕವಾಗಿ ನನ್ನನ್ನು ಆದರಿಸುವ ಹಲವು ಮಿತ್ರರು ನಿರ್ವ್ಯಾಜ್ಯ ಪ್ರೀತಿಯಿಂದ ಭಾಗಿಯಾಗಿದ್ದಾರೆ. ಗಂಭಿರ ಧೋರಣೆಯ ಈ ಎಲ್ಲ ಪತ್ರಿಕೆಗಳ ಜೊತೆಯಲ್ಲಿ ಅವರು ಮಾಡುತ್ತಿರುವ ಕೆಲಸಕ್ಕೆ ಪೂರಕವಾಗುವಂತೆ ‘ರುಜುವಾತು’ ದುಡಿಯಲು ಹವಣಿಸಿದೆ. ಯಾವ ಒಂದೇ ಒಂದು ಮತಕ್ಕಾಗಲೀ, ಸಾಹಿತ್ಯದ ಗುಂಪಿಗಾಗಲೀ ಬದ್ಧವಾಗಿ ‘ರುಜುವಾತು’ ಹೊರಡುತ್ತಿಲ್ಲ. ತೆರೆದ ಮನಸ್ಸಿನ ಹೊಸ ದಿಕ್ಕುಗಳ ಹುಡುಕಾಟವೇ ಇದರ ಗುರಿ. ಈ ಗುರಿಸಾಧನೆಗಾಗಿ ನಾವು ಸಾಹಿತ್ಯದಿಮದ ಮಾತ್ರವಲ್ಲದೆ ಉಳಿದ ಮಾನವಿಕ ಶಾಸ್ತ್ರಗಳಿಂದಲೂ ಲೇಖನಗಳನ್ನು ಪಡೆಯಲು ಶ್ರಮಿಸುತ್ತೇವೆ. ವಿಮರ್ಶೆಯಾಗಲೀ, ಚಿಂತನೆಯಾಗಲೀ ಕೂಡಿ ಮಾಡುವ ಕೆಲಸವೆಂಬ ಧೋರಣೆ ಈ ಪತ್ರಿಕೆಯ ಲೇಖಕರನ್ನು ಒಟ್ಟಿಗೆ ತಂದಿದೆ. ನಾವು ನಿಷ್ಠರುವಾಗಿ, ಅಗತ್ಯವಾದರೆ ಆಪ್ರಿಯವಾಗಿ ಬರೆಯಬಹುದು. ಆದರೆ ಈ ಪತ್ರಿಕೆಯಲ್ಲಿ ವ್ಯಕ್ತಿ ನಿಂದೆಗಾಗಲೀ, ಅಪಹಾಸ್ಯ ಕುಹಕಗಳಾಗಲೀ ಎಡೆಯಿಲ್ಲ. ನಮ್ಮ ನಮ್ಮ ವ್ಯಕ್ತಿತ್ವಗಳ ಪ್ರದರ್ಶನಕ್ಕಿಂತ ನಾಡಿನ ಸಂಸ್ಕೃತಿ ಮುಖ್ಯವಾದ್ದೆಂಬುದರಲ್ಲಿ ಅಚಲವಾದ ನಂಬಿಕೆ ‘ರುಜುವಾತಿ’ಗಿದೆ.

* * *