ಪೃಥ್ವೀರಾಜ್ ಕಪೂರ್

ಮುಂಬಯಿಯ ಆರ್.ಕೆ.ಸ್ಟುಡಿಯೋದಲ್ಲಿ ಅಂದು ಚಿತ್ರ ವೊಂದರ ಮುಹೂರ್ತ. ಹೊಸ ಚಿತ್ರ ಆರಂಭವಾಗುವ ಸಂಭ್ರಮ.

ನಾವೆಲ್ಲ ಸಮಾನರು ಸಕಾಲಕ್ಕೆ ಪೃಥ್ವೀರಾಜ್ ಕಪೂರ್ ಬಂದೊಡನೆಯೇ ಅಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಹಿರಿಯ-ಕಿರಿಯರೆಲ್ಲರೂ ಎದ್ದುನಿಂತು, ಸುತ್ತುಗಟ್ಟಿ ಅವರಿಗೆ ಗೌರವ ಸೂಚಿಸಿದರು. ಸಮಾನ ವಯಸ್ಸಿನವರು ಅವರನ್ನು ಆದರದಿಂದ ಆಲಂಗಿಸಿದರು. ಅನೇಕರು ಅವರ ಕಾಲಿಗೆರಗಿದರು.

ಆ ಬಳಿಕ ಮುಹೂರ್ತ. ಅದಕ್ಕೆ ಸರಿಯಾಗಿ ಆ ಚಿತ್ರದಲ್ಲಿ ನಟಿಸಲಿರುವ ತಾರಾಗಣ, ಛಾಯಾಗ್ರಾಹಕರು, ದಿಗ್ದರ್ಶಕರು, ನಿರ್ಮಾಪಕರು, ಬಣ್ಣ ಹಾಕುವವರು, ಉಡುಪಿನವರು, ದೀಪದವರು, ಸ್ಟುಡಿಯೋದ ಚಿಕ್ಕಪುಟ್ಟ ನೌಕರರೆಲ್ಲರೂ ಸಿದ್ಧರಾದರು. ಅಲ್ಲಿ ನೆರೆದವರಲ್ಲಿ ಬಹುಶಃ ಪೃಥ್ವೀರಾಜರಷ್ಟು ವಯಸ್ಸಾದವರು ಯಾರೂ ಇದ್ದಿರಲಾರರು. ಪೃಥ್ವೀರಾಜರು ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದರು; ಅವರಿಗೆ ತಿಲಕವಿಟ್ಟು, ಬಾಯಲ್ಲಿ ‘ಫೇಡಾ’ ಇಟ್ಟು, ಅವರ ಕೈಯಲ್ಲಿ ಸಾಂಕೇತಿಕವಾಗಿ ಒಂದೊಂದು ರೂಪಾಯಿ ನಾಣ್ಯಗಳನ್ನಿಟ್ಟು, ಕಾಲುಮುಟ್ಟಿ ನಮಸ್ಕರಿಸಿದರು. ಅಷ್ಟು ದೊಡ್ಡ ಮಹಾನಟ ವಯಸ್ಸಿನಲ್ಲಿ, ಅನುಭವದಲ್ಲಿ, ಕೀರ್ತಿಯಲ್ಲಿ ದೊಡ್ಡವರು. ಅವರು ತಮ್ಮ ನೌಕರರ ಕಾಲಿಗೆರಗಿದಾಗ ಅವರಿಗೆಲ್ಲ ಏನೋ ಪೇಚಾಟ.

“ಚಿತ್ರದ ಸಾಮೂಹಿಕ ಮಹಾಕಾರ್ಯದಲ್ಲಿ ನಾವೆಲ್ಲ ಒಟ್ಟಾಗಿ, ಒಂದಾಗಿ ಕೆಲಸ ಮಾಡುವವರು; ನಾವೆಲ್ಲ ಸಮಾನರು’ – ಇದು ಪೃಥ್ವೀರಾಜರ ತತ್ವ.

ಅವರ ಹಾಗೆ ತತ್ವನಿಷ್ಠರಾಗಿ, ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತಂದವರು ವಿರಳ.

ಜೀವನ ಕಲೆ

ಪ್ರತ್ಯಕ್ಷದರ್ಶಿ ಹಿರಿಯರೊಬ್ಬರು ಹೇಳಿದ ಇನ್ನೊಂದು ಅನುಭವ ಅಷ್ಟೇ ರೋಮಾಂಚಕಾರಿ. ಮುಂಬಯಿಯ ರಾಯಲ್ ಅಪೇರಾ ಹೌಸ್ ಥಿಯೇಟರ್ ಇಂದು ಚಲನಚಿತ್ರ ಮಂದಿರವಾಗಿ ಪರಿವರ್ತಿತಗೊಂಡರೂ ಮೂರು ದಶಕಗಳ ಹಿಂದೆ ನಾಟಕಗಳನ್ನಾಡುವ ಪ್ರಖ್ಯಾತ ರಂಗಮಂದಿರವಾಗಿತ್ತು. ಪೃಥ್ವೀ ರಾಜರ ‘ಪೃಥ್ವೀ ಥಿಯೇಟರ‍್ಸ್’ ಜಯಭೇರಿ ಹೊಡೆದುದು ಇಲ್ಲಿಯೆ. ಆ ನಾಟಕಗಳಲ್ಲೆಲ್ಲ ಅವರೇ ನಾಯಕ.

 

ಪೃಥ್ವೀರಾಜರು ಗೇಟ್ ಬಳಿ ಟೋಪಿಯೊಂದನ್ನು ಭಿಕ್ಷಾಪಾತ್ರೆಯಂತೆ ಹಿಡಿದು ನಿಲ್ಲುತ್ತಿದ್ದರು.

ತನ್ನ ಅದ್ಭುತ ನಟನೆಯಿಂದ ಮೂರು ಗಂಟೆ ಕಾಲ ಪ್ರೇಕ್ಷಕರನ್ನು ಮುಗ್ಧಗೊಳಿಸುತ್ತಿದ್ದ ಪೃಥ್ವೀರಾಜರು ಪ್ರದರ್ಶನ ಮುಗಿಯುತ್ತಿದ್ದಂತೆ, ಹೊರಗೆ ಗೇಟ್ ಬಳಿ ಜೋಳಿಗೆಯನ್ನು ಅಥವಾ ಟೋಪಿಯೊಂದನ್ನು ಭಿಕ್ಷಾಪಾತ್ರೆಯಂತೆ ಹಿಡಿದು ನಿಲ್ಲುತ್ತಿದ್ದರು. ನಾಟಕ ಮುಗಿದು, ಹೋಗುವ ಪ್ರೇಕ್ಷಕರು ಅವರನ್ನು ಗುರುತಿಸಿ ಬೆರಗಾಗುತ್ತಿದ್ದರು. ಪೃಥ್ವೀರಾಜರು ಹಾಗೆ ಯಾಚಕರಾಗಿ ನಿಲ್ಲುತ್ತಿದ್ದುದು ಒಳ್ಳೆಯ ಉದ್ದೇಶಗಳಿಗೆ ಧನಸಂಗ್ರಹ ಮಾಡಲಿಕ್ಕಾಗಿ. ಒಮ್ಮೆ ಬರಗಾಲ ಪೀಡಿತರಿಗೆ ಪರಿಹಾರ, ಇನ್ನೊಮ್ಮೆ ನೆರೆ ಹಾವಳಿ ಸಹಾಯ ನಿಧಿ, ಮತ್ತೊಮ್ಮೆ ವಿಧವೆಯರಿಗೆ ನೆರವು. ಹೀಗೆ ಜನರ ಕಲೆ ಜನತೆಗಾಗಿ, ಜನತೆಯಿಂದ ಸಹಾಯ ಪಡೆದು ಜನತೆಗಾಗಿ ಉಳಿಯಬೇಕು ಎಂಬ ತತ್ವವನ್ನು ಜೀವನದಲ್ಲಿ ಪೃಥ್ವೀರಾಜರು ಮೈಗೂಡಿಸಿ ಕೊಂಡಿದ್ದರು.

ಮಹಾನ್ ಕಲಾವಿದರಾಗಿದ್ದ ಪೃಥ್ವೀರಾಜರು ಅಷ್ಟೇ ಮಾನವೀಯ ಮೂರ್ತಿಯಾಗಿದ್ದರು. ಅವರ ಆ ಶ್ರೇಷ್ಠ ವ್ಯಕ್ತಿತ್ವದಿಂದಾಗಿಯೇ ರಂಗಭೂಮಿ ಹಾಗೂ ಚಲನಚಿತ್ರ ರಂಗಗಳ ಪಿತಾಮಹರೆನಿಸಿಕೊಂಡರು. ‘ಪಾಪಾಜಿ’ ಎಂದು ಎಲ್ಲರೂ ಅವರನ್ನು ಗೌರವಿಸಿದರು.

ಆರಡಿ ಎತ್ತರದ ಆಜಾನುಬಾಹು. ಕಟ್ಟುಮಸ್ತಾದ ಆಳು. ಆಕರ್ಷಕ ಕಂದು ಕಣ್ಣುಗಳು, ನಿಂಬೆವರ್ಣ, ಇವೆಲ್ಲ ಪೃಥ್ವೀ ರಾಜರನ್ನು ಅಭಿನಯಕ್ಕಾಗಿಯೇ ಮಾಡಿಸಿದಂತಿದ್ದವು.

ಪೇಷಾವರದ ಶ್ರೀಮಂತ ಪಠಾಣ ಕುಟುಂಬದಲ್ಲಿ ದಿವಾನ್ ಬಶೇಶರ್‌ನಾಥ ಹಾಗೂ ವೈಷ್ಣೋದೇವಿಯ ಹಿರಿಯ ಮಗನಾಗಿ ಪೃಥ್ವೀರಾಜರು ೧೯೦೬ರ ನವೆಂಬರ್ ೩ರಂದು ಹುಟ್ಟಿದರು. ಅವರಿಗೆ ತೊಟ್ಟಿಲಲ್ಲಿಟ್ಟ ಹೆಸರು ಪೃಥ್ವೀನಾಥ್ ಎಂದು. ತಂದೆ ಪೋಲೀಸ್ ಸಬ್ ಇನ್ಸ್‌ಪೆಕ್ಟರ್. ಪೇಷಾವರದ ಬಳಿ ಲೈಲಪುರದ ಸಮುಂದರಿ ಅವರ ಹಳ್ಳಿ. ಪೃಥ್ವಿಗೆ ಮೂರು ವರ್ಷವೆನ್ನುವಾಗ ತಾಯಿ ತೀರಿಕೊಂಡರು. ಬಶೇಶರ್‌ನಾಥರು ಮರುಮದುವೆ ಯಾದರು. ಅವರಲ್ಲಿ ಮತ್ತೆ ನಾಲ್ಕು ಗಂಡು, ಮೂರು ಹೆಣ್ಣುಮಕ್ಕಳು. ಪೃಥ್ವಿಯ ಈ ತಮ್ಮಂದಿರೆಲ್ಲ ಒಂದಲ್ಲ ಒಂದು ಬಗೆಯಲ್ಲಿ ರಂಗಭೂಮಿ-ಚಲನಚಿತ್ರಗಳಲ್ಲಿ ಕೆಲಸ ಮಾಡಿದವರೇ. ಅವರು ತ್ರಿಲೋಕ್, ಅಮರ್, ರಾಮ್ ಮತ್ತು ವಿಶಿ.

ಬಶೇಶರ್‌ನಾಥರ ಮನೆಯೆಂದರೆ ಒಂದು ಚಿಕ್ಕ ಆಶ್ರಮವೇ ಆಗಿತ್ತು. ಸಾಧು-ಸಂತರು, ಬಡವರು, ಅತಿಥಿಗಳೆಂದು ಅನೇಕ ಮಂದಿ ಬಂದು ಹೋಗುತ್ತಲೇ ಇದ್ದರು. ಹುಟ್ಟು ನಟನಾಗಿದ್ದ ಪೃಥ್ವಿ ಅವರ ನಡೆನುಡಿಗಳನ್ನು ಗಮನವಿಟ್ಟು ನೋಡುವನು.

ಹೃದಯದ ದೀಪದ ಬೆಳಕು

ಪೃಥ್ವಿಯ ಅಜ್ಜ ದಿವಾನ್ ಕೇಶೂಮಲ್ ಊರಿನ ತಹಸಿಲ್ ದಾರರು. ಅವರ ವ್ಯಕ್ತಿತ್ವ ಬಾಲಕ ಪೃಥ್ವಿಯ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡಿತ್ತು. ಅಜ್ಜನಾದರೂ ಮೊಮ್ಮಗನನ್ನು ಪೃಥ್ವಿ ಎಂಬುದರ ಬದಲಾಗಿ ಮುದ್ದಿನಿಂದ ’ಪ್ರೀತೀ’ ಎಂದೇ ಕರೆಯುತ್ತಿದ್ದರು. ಆದರೆ ಅಜ್ಜ ಅಷ್ಟೇ ಕಟ್ಟುನಿಟ್ಟಿನ ಶಿಸ್ತುಗಾರ. ಮನೆಯಲ್ಲಿ ಪ್ರತಿಯೊಬ್ಬರೂ ತಮ್ಮತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕು ಎಂದು ಬಯಸುತ್ತಿದ್ದರು. ಆಳಾಗಿ ದುಡಿದು, ಅಧಿಕಾರ ಚಲಾಯಿಸಬೇಕು ಎನ್ನುತ್ತಿದ್ದರು.

ಸಂಜೆ ಮನೆಯಲ್ಲಿ ಎಣ್ಣೆ ದೀಪ ಹಚ್ಚುವ ಕೆಲಸ ಪೃಥ್ವಿಯ ಪಾಲಿಗೆ. ಅಜ್ಜನ ಕ್ರಮ ಗೊತ್ತಿದ್ದ ಪೃಥ್ವಿ ತುಂಬ ಎಚ್ಚರಿಕೆಯಿಂದ ಸಂಜೆ ಆಟವಾದೊಡನೆ ಬೇಗನೆ ಮನೆಗೆ ಬಂದು, ಕೈಕಾಲು ತೊಳೆದು ದೀಪ ಹಚ್ಚುತ್ತಿದ್ದನು. ಅದೊಂದು ಸಂಜೆ ಶಾಲೆಯಲ್ಲಿ ಪೃಥ್ವಿಗೆ ಸ್ವಲ್ಪ ತಡವಾಯಿತು. ದೀಪ ಹಚ್ಚುವ ವೆಳೆಯಾಯಿತೆಂದು ಪೃಥ್ವಿ ಮನೆ ಕಡೆಗೆ ಓಡುತ್ತಿದ್ದಾಗ ಉಪಾಧ್ಯಾಯರೊಬ್ಬರು ಕಾರಣ ಕೇಳಿದರು. “ಮನೆಗೆ ಹೋಗಿ ದೀಪ ಹಚ್ಚಬೇಕು” ಎಂದು ಹುಡುಗ. ಆಗಿನ ಕಾಲದಲ್ಲಿ ತಹಸಿಲ್‌ದಾರರು ಎಂದರೆ ಬೇಕಾದಷ್ಟು ಅಧಿಕಾರವುಳ್ಳ ವ್ಯಕ್ತಿ. ಅವರ ಮನೆಯಲ್ಲಿ ದೀಪಗಳನ್ನು ಹಚ್ಚಲಿಕ್ಕೂ ಆಳುಗಳಿಲ್ಲವೆ? ಅದಕ್ಕೆ ಈ ಬಾಲಕನು ಹೋಗಬೇಕೆ? ಆಶ್ಚರ್ಯವಾಯಿತು ಆ ಉಪಾಧ್ಯಾಯರಿಗೆ. ಒಂದು ದಿನ ತಹಸಿಲ್‌ದಾರರು ಭೇಟಿಯಾದಾಗ ಶಿಕ್ಷಕರು ಅವರೊಡನೆ ಆ ಮಾತು ಕೇಳಿಯೇ ಬಿಟ್ಟರು. ಅದಕ್ಕೆ ಅವರು ಉತ್ತರ ಕೊಟ್ಟರು:

“ನಮ್ಮಲ್ಲಿ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಿಕೊಳ್ಳುವುದು ಕ್ರಮ. ಸ್ವಂತದ ಚಿಕ್ಕ ಪುಟ್ಟ ಕೆಲಸಗಳಿಗೂ ಪರತಂತ್ರವೆ? ಎರಡನೆಯದಾಗಿ, ಯಾವ ಕೆಲಸವಾದರೂ ಸರಿ, ಜೀವನದಲ್ಲಿ ಕಡಿಮೆ ದರ್ಜೆಯದು ಎಂದಿಲ್ಲ ಎಂಬ ಪಾಠವನ್ನು ಮಕ್ಕಳು ಈಗಿನಿಂದಲೇ ಕಲಿಯಬೇಕು. ಅಷ್ಟೇ ಅಲ್ಲ, ಚಿಮಿಣಿ ಎಣ್ಣೆ ದೀಪ ಹಚ್ಚುವ ಕೆಲಸದ ಈ ಶ್ರದ್ಧೆ, ಸಮಯನಿಷ್ಠೆಗಳು ಪೃಥ್ವಿಯ ಜೀವನದಲ್ಲೂ ರೂಢಿಯಾಗಿ, ಅವನ ಹೃದಯದ ದೀಪ ಯಾವಾಗಲೂ ಬೆಳಕು ಕೊಡುತ್ತ ಇರಲಿ ಎಂಬುದೇ ನನ್ನಾಸೆ.” ದಿವಾನರ ಈ ಮಾತುಗಳನ್ನು ಕೇಳಿದ ಉಪಾಧ್ಯಾಯರು ಅವರ ಕಾಲು ಮುಟ್ಟಿದರು.

ಬೆಳೆಯ ಗುಣ ಮೊಳಕೆಯಲ್ಲಿ

ಸಮುಂದರಿ ಶಾಲೆಯಲ್ಲಿ ಪೃಥ್ವಿಯ ಅಭಿನಯದ ಪ್ರತಿಭೆಯನ್ನು ಮೊದಲಾಗಿ ಗುರುತಿಸಿದವರು ಲಾಲಾ ನಾರಾಯಣದಾಸ ಆದ ಎಂಬ ಶಿಕ್ಷಕರು. ಅವರು ಪೃಥ್ವಿಯ ಮೊದಲ ‘ನಾಟ್ಯಗುರು’. ಮಾಸ್ಟರ್ ತಾರಾಸಿಂಗ್ ಆಗ ಪೃಥ್ವಿಗೆ ಮುಖ್ಯ ಉಪಾಧ್ಯಾಯರಾಗಿದ್ದರು. ಮುಂದೆ ಅವರು ಸಿಖ್ಖರ ಪ್ರಸಿದ್ಧ ಮುಖಂಡರಲ್ಲಿ ಒಬ್ಬರಾದರು. ಇಂಗ್ಲಿಷ್ ಭಾಷೆ ಹಾಗೂ ವಾಲಿಬಾಲ್ ಆಟದ ಪ್ರೇಮವನ್ನು ಮೊದಲಾಗಿ ಪೃಥ್ವಿಯಲ್ಲಿ ಬಿತ್ತಿದವರು ಅವರೆ.

ಒಮ್ಮೆ ಬಾಲಕ ಪೃಥ್ವಿಗೆ ಲಕ್ಷ್ಮಣನ ಪಾತ್ರ ವಹಿಸಿದುದಕ್ಕೆ ಒಂದು ರೂಪಾಯಿ ಬಹುಮಾನ ಬಂತು. ಎಂಟನೆಯ ವಯಸ್ಸಿಗೇ ‘ಹರಿಶ್ಚಂದ್ರ’ ನಾಟಕ ದಿಗ್ದರ್ಶನ ಮಾಡಿದುದಕ್ಕೆ ಊರಿಡೀ ಪೃಥ್ವಿಯನ್ನು ಹೊಗಳಿತು. ಆಟ-ನಾಟಕಗಳ ಅಭಿ ರುಚಿಯಿದ್ದರೂ ಪಾಠಗಳಲ್ಲಿ ಪೃಥ್ವಿ ಹಿಂದೆ ಬೀಳಲಿಲ್ಲ. ಮೆಟ್ರಿಕ್ ಪರೀಕ್ಷೆಯಲ್ಲಿ ಶಾಲೆಗೇ ಮೊದಲನೆಯವನಾಗಿ ತೇರ್ಗಡೆಯಾದನು.

ಪೇಷಾವರಿನ ಎಡ್ವರ್ಡ್ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಪೃಥ್ವಿಯ ವಿವಾಹ ರಮಾ ಸರನಿಯೊಂದಿಗೆ ನಡೆಯಿತು. ಆಗ ಪೃಥ್ವಿಗೆ ಹದಿನೇಳು, ಪತ್ನಿಗೆ ಹದಿನೈದು ವರ್ಷ ವಯಸ್ಸು. ಹಿರಿಯ ಮಗ ರಾಜ್ ಕಪೂರ್ ಹುಟ್ಟಿದಾಗ (೧೯೨೪ ರ ಡಿಸೆಂಬರ್ ೧೪ ರಂದು) ಪೃಥ್ವಿಯಿನ್ನೂ ಬಿ.ಎ. ಮುಗಿಸಿರಲಿಲ್ಲ. ಇಂದು ರಾಜ್ ಕಪೂರ್ ಎಂದು ಜನಪ್ರಿಯನಾಗಿರುವ ಅವರ ಮಗನ ಮೊದಲ ಹೆಸರು ರಣಬೀರ್ ರಾಜ. ರಾಜ್ ಕಪೂರ್ ಎಂಬುದು ಚಲನಚಿತ್ರ ರಂಗದ ಹೆಸರು.

ಕಾಲೇಜಿನಲ್ಲೂ ಪೃಥ್ವಿಯ ಅಭಿನಯ ಕಲೆಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಕಾಲೇಜು ನಾಟ್ಯಸಂಘಕ್ಕೆ ಕಾರ್ಯದರ್ಶಿಯಾದರು. ಪ್ರೊಫೆಸರ್ ಜೈದಯಾಲ್ ಎಂಬ ಪ್ರಾಧ್ಯಾಪಕರು ಪೃಥ್ವಿಯಲ್ಲಿ ಷೇಕ್ಸ್‌ಪಿಯರ್‌ನ ನಾಟಕಗಳ ಬಗೆಗೆ ತುಂಬ ಆಸಕ್ತಿ ಹುಟ್ಟಿಸಿದರು. ಆಗ ಅನೇಕ ಬಾರಿ ಪೃಥ್ವಿ ಸ್ತ್ರೀ ಪಾತ್ರ ಮಾಡಿದ್ದರು. ‘ಪೃಥ್ವಿ ಹೆಣ್ಣಾಗಿದ್ದರೆ ಇನ್ನೂ ಸುಂದರವಾಗಿ ಕಾಣುತ್ತಿದ್ದರು’ ಎಂದು ಜೈದಯಾಲ್ ಹೇಳುತ್ತಿದ್ದರು. ಮುಂದೆಯೂ ನಟನಾಗಬೇಕೆಂದು ಪೃಥ್ವಿಗೆ ಆಸೆ. ಮನೆಯಲ್ಲಿ ಮಾತ್ರ ಅದಕ್ಕೆ ಪ್ರೋತ್ಸಾಹ ಕಡಿಮೆ. ಆಗ ಪೂರ್ಣ ಸಹಕಾರ, ಸಹಾನುಭೂತಿ ನೀಡಿದವರು ಪತ್ನಿ ರಮಾ. ಪ್ರೀತಿಯ ಹೆಸರು ‘ಝೂಯಿಜಿ’.

ಎರಡನೆಯ ದರ್ಜೆಯಲ್ಲಿ ಬಿ.ಎ. ಮುಗಿಸಿದ ಮಗ ಮುಂದೆ ವಕೀಲನಾಗಬೇಕೆಂಬುದು ತಂದೆಯ ಒತ್ತಾಸೆ. ಆದರೆ ವಕೀಲಿ ಪರೀಕ್ಷೆಯಲ್ಲಿ ಪೃಥ್ವಿ ತೇರ್ಗಡೆಯಾಗಲಿಲ್ಲ. ಮನಸ್ಸೆಲ್ಲ ಅಭಿನಯದ ಕಡೆಗಿತ್ತು.

ಬದಲಾದ ದಿಕ್ಕು

ಚಲನಚಿತ್ರಗಳು ಆಗ ಭಾರತದಲ್ಲಿ ಆರಂಭವಾಗಿದ್ದುವಷ್ಟೆ. ಆದರೆ ಅವೆಲ್ಲ ಮೂಕಚಿತ್ರಗಳು. ಲಾಹೋರ್ ಆಗ ಪಂಜಾಬಿನ ದೊಡ್ಡ ಸಾಂಸ್ಕೃತಿಕ ಕೇಂದ್ರ. ಇನ್ನೂರು ರೂಪಾಯಿ ಸಾಲ ಮಾಡಿ ಪೃಥ್ವಿ ಅಲ್ಲಿಗೆ ಅದೃಷ್ಟ ಹುಡುಕಿಕೊಂಡು ಹೋದರು.

ಏನೂ ಸಿಕ್ಕಲಿಲ್ಲ.

ಪೃಥ್ವಿ ನಿರಾಶರಾಗಿ ಊರಿಗೆ ಮರಳಿದರು. ಈ ಘಟನೆ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು.

ಮುಂದೆ ಎರಡು ವರ್ಷ (೧೯೨೭-೨೯) ಪೃಥ್ವಿ ಅವಕಾಶಗಳಿಗಾಗಿ ಪ್ರಯತ್ನಿಸಿದರು. ನಾಟಕಗಳತ್ತ ಒಲವು ದಿನೇದಿನೇ ಹೆಚ್ಚಾಗುತ್ತ ಹೋಯಿತು. ಒಮ್ಮೆ ಕೊರಿಂಥಿಯನ್ ನಾಟಕ ಕಂಪೆನಿಯ ಒಂದು ಉರ್ದು ನಾಟಕವನ್ನು ಪೃಥ್ವಿ ನೋಡಿದರು. ಆ ಕಂಪನಿಯವರ ನಾಟಕಗಳು ತುಂಬ ಜನಪ್ರಿಯವಾಗಿದ್ದವು. ಆದರೆ ನಾಟಕ ನೋಡಿದ ಬಳಿಕ ಕೃತಕ ಅಭಿನಯ, ಅಸಹಜ ಸನ್ನಿವೇಶಗಳನ್ನು ಕಂಡ ಪೃಥ್ವಿಗೆ ತುಂಬ ಬೇಸರವಾಯಿತು. ಆ ನಾಟಕಗಳು ಎಷ್ಟೊಂದು ವಿಚಿತ್ರವಾಗಿದ್ದುವೆಂದರೆ ಸತ್ತ ನಾಯಕ ನಟ ಮರಳಿ ಎದ್ದು, ದೀರ್ಘ ಪದ್ಯವನ್ನು ಹಾಡಿ ಪುನಃ ಸಾಯುತ್ತಿದ್ದ! ಜನರ ಬೇಡಿಕೆ ಇದ್ದರೆ ಮತ್ತೆ ಎದ್ದು ಹಾಡುತ್ತಿದ್ದ!

ಧರ್ಮಶಾಲಾ ಎಂಬ ಊರಲ್ಲಿ ಇಂಥ ಒಂದು ಅಸಂಬದ್ಧ ನಾಟಕ ನೋಡಿದ ಪೃಥ್ವಿ ತಾನು ಒಂದಲ್ಲ ಒಂದು ದಿನ ಒಳ್ಳೆಯ ನಾಟಕ ಕಂಪೆನಿಯೊಂದನ್ನು ಮಾಡಬೇಕು ಎಂದು ಮನಸ್ಸಿನಲ್ಲೇ ನಿರ್ಧರಿಸಿದರು.

ಇದೇ ಕಾಲಕ್ಕೆ ಒಮ್ಮೆ ಪೃಥ್ವಿ ಭಾರತದಲ್ಲಿ ಪ್ರದರ್ಶಿಸಿದ ಮೊತ್ತಮೊದಲ ಪಾಶ್ಚಾತ್ಯ ವಾಕ್ಚಿತ್ರ ‘ಮೆಲಡಿ ಆಫ್ ಲವ್’ನ್ನು ಕಲ್ಕತ್ತದಲ್ಲಿ ನೋಡಿದರು. ಇಂಥ ಚಿತ್ರಗಳಲ್ಲಿ ತಾನು ನಟಿಸ ಬೇಕೆಂದು ಪೃಥ್ವಿ ನಿಶ್ಚಿಯಿಸಿದರು.

ಮುಂಬಯಿಯಲ್ಲಿ

ಕಲಾವಿದರ ಯೋಗ್ಯತೆ ಮತ್ತು ಅದೃಷ್ಟಗಳ ಪರೀಕ್ಷೆ ಆಗುವುದು ಮುಂಬಯಿಯಲ್ಲಿ. ಹಲವು ಆಸೆಗಳನ್ನು ಹೊತ್ತು ೧೯೨೯ ಸೆಪ್ಟೆಂಬರ್ ೨೯ರಂದು ಪೃಥ್ವಿ ಮುಂಬಯಿಗೆ ಬಂದರು. ಅಪರಿಚಿತ ನಗರ. ಹಾಸಿಗೆ, ಟೆನಿಸ್ ರ‍್ಯಾಕೆಟ್, ಪಿಟೀಲು, ಗೋಲ್ಫ್ ಕೋಲುಗಳು ಮತ್ತು ಉತ್ಸಾಹ ಇವಿಷ್ಟೆ ಆಗ ಅವರಲ್ಲಿದ್ದವು. ಮುಂಬಯಿಯಲ್ಲಿ ಇಳಿದವರೇ ಕುದುರೆ ಗಾಡಿ (ವಿಕ್ಟೋರಿಯಾ ಸಾರೋಟು)ಯಲ್ಲಿ ಕುಳಿತು ಪೃಥ್ವಿ ಊರು ನೋಡಲು ಹೊರಟರು. ಗಾಡಿ ಚೌಪಾಟಿ ಸಮುದ್ರ ದಂಡೆಯ ಬಳಿ ಬಂತು. ಸಮುದ್ರದ ಉಕ್ಕುವ ತೆರೆಗಳನ್ನು ಕಂಡು ಪೃಥ್ವಿಗೆ ಉತ್ಸಾಹ ಉಕ್ಕಿಬಂದಿತು. ಗಾಡಿಯಿಂದ ಕೂಡಲೆ ಇಳಿದು ಸಮುದ್ರಸ್ನಾನ ಮಾಡಿದರು. ಹುಟ್ಟೂರಿನಲ್ಲಿ ನದಿ, ಪರ್ವತಗಳನ್ನು ಕಂಡು ಮೈಮರೆಯುತ್ತಿದ್ದ ಪೃಥ್ವಿಗೆ ಸಮುದ್ರ ಅದೇನೋ ಭರವಸೆ ಕೊಟ್ಟಂತೆ ಕಂಡಿತು. ಪೃಥ್ವಿಗೆ ಮುಂಬಯಿಯಲ್ಲಿ ಪರಿಚಯದವರು ಯಾರೂ ಇರಲಿಲ್ಲ. ಸ್ಟುಡಿಯೋಗಳಿಗೆ ಹೋದರೆ ‘ನೌಕರಿ ಇಲ್ಲ’ ಎಂಬ ಬೋರ್ಡನ್ನು ತೋರಿಸುತ್ತಿದ್ದರು.

ಬ್ರಿಟಿಷರ ರಾಜ್ಯಭಾರದ ಆ ಕಾಲದಲ್ಲಿ ಭಾರತೀಯ ಮೂಕ ಚಲನಚಿತ್ರಗಳಿಗೆ ಇಂಗ್ಲಿಷ್ ಹೆಸರುಗಳನ್ನು ಇಡುತ್ತಿದ್ದರು; ಗಂಡಸರೇ ಹೆಂಗಸಿನ ಪಾತ್ರ ವಹಿಸುತ್ತಿದ್ದರು.

ಚಲನಚಿತ್ರ ನಟರಾದರು

ಅಕ್ಟೋಬರ್ ೨, ಅದೃಷ್ಟದ ದಿನವಾಯಿತು ಪೃಥ್ವಿಗೆ. ಅವರು ಕೆಲಸ ಹುಡುಕಿಕೊಂಡು ಆಗ ಹೆಸರುವಾಸಿಯಾಗಿದ್ದ ನಿರ್ಮಾಪಕ-ನಿರ್ದೇಶಕ ಅರ್ದೇಶಿರ್ ಇರಾಣಿ ಅವರ ಇಂಪೀರಿಯಲ್ಲ ಕಂಪೆನಿಗೆ ಹೋದರು. ಬೆಳ್ಳಗಿದ್ದು, ತುಂಬ ಆಕರ್ಷಕವಾಗಿದ್ದ ಈ ಯುವಕನನ್ನು ಅವರು ಕೆಲಸಕ್ಕೆ ಸೇರಿಸಿಕೊಂಡರು. ಪೃಥ್ವಿಯ ಹರ್ಷಕ್ಕೆ ಪಾರವಿಲ್ಲ. ಆದರೆ ಸಂಬಳವಿಲ್ಲದೆ ಅವರು ಮೂರು ಚಿತ್ರಗಳಲ್ಲಿ ‘ಎಕ್ಸ್ ಟ್ರಾ’ (ಸಾಮಾನ್ಯ) ನಟನಾಗಿ ಕೆಲಸ ಮಾಡಬೇಕಾಯಿತು. ಈ ಚಿತ್ರಗಳು ‘ಛಾಲೆಂಜ್’, ‘ವೆಡ್ಡಿಂಗ್ ನೈಟ್’ ಮತ್ತು ’ದಾವ್ ಫೇಕ್’.

ಈ ಮಧ್ಯೆ ನಿರ್ಮಾಪಕ-ನಿರ್ದೇಶಕ ಡಿ.ಪಿ. ಮಿಶ್ರಾರವರು ಪೃಥ್ವಿಯ ಎತ್ತರದ ಮೈಕಟ್ಟು, ಗೌರವರ್ಣ, ಆಕರ್ಷಕ ವ್ಯಕ್ತಿತ್ವ ಕಂಡು ತಮ್ಮ ಮೂಕ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಕೇಳಿದರು. ಸಂಬಳ ತಿಂಗಳಿಗೆ ಎಪ್ಪತ್ತು ರೂಪಾಯಿ. ನಾಯಕ ನಾಗಿ ನಟಿಸಿದ ಮೊದಲ ಚಿತ್ರ ‘ಸಿನಿಮಾ ಗರ್ಲ್’. ಪೃಥ್ವೀನಾಥರು ಪೃಥ್ವೀರಾಜನೆಂಬ ಚಲನಚಿತ್ರದ ಹೆಸರನ್ನು

ಇಟ್ಟುಕೊಂಡುದು ಆಗಲೆ. ಅವರೊಂದಿಗೆ ನಾಯಕಿಯಾಗಿ ನಟಿಸಿದವಳು ಗೋವಾ ಸುಂದರಿ ಎರ್ಮಿಲನ್. ಮುಂದೆ ಆಕೆ ಪೃಥ್ವೀರಾಜರೊಂದಿಗೆ ಹಲವು ಮೂಕಿ ಚಿತ್ರಗಳಲ್ಲಿ ನಟಿಸಿದಳು. ಅವರ ನಾಟಕಗಳಲ್ಲೂ ಭಾಗವಹಿಸಿದಳು.

ಇದೇ ಕಾಲದಲ್ಲಿ ಅವರು ನಟಿಸಿದ ಇತರ ಕೆಲವು ಚಿತ್ರಗಳು ’ಅರಬ್-ಕಾ-ಚಾಂದ್’, ’ವಿಜಯಕುಮಾರ’, ’ಚಿಲ್ಡ್ರನ್ ಆಫ್ ಸ್ಟಾರ್ಮ್’ ಮತ್ತು ’ಅವೆಂಜಿಂಗ್ ಏಂಜೆಲ್’.

ಆರಂಭದಲ್ಲಿ ಇರಾಣಿಯವರಿಗೆ ಪೃಥ್ವಿಯ ನಟನಾ ಸಾಮರ್ಥ್ಯದಲ್ಲಿ ನಂಬಿಕೆ ಇರಲಿಲ್ಲವಂತೆ. ವಾಕ್ಚಿತ್ರಕ್ಕೆ ಅವರು ಚೆನ್ನಾಗಿಲ್ಲವೆಂದೂ ಒಮ್ಮೆ ಹೇಳಿದ್ದರಂತೆ. ಆದರೆ ಮೂಕ ಚಿತ್ರಗಳಲ್ಲಿ ಅವರ ಅಭಿನಯ ಕಂಡು ಭಾರತದ ಮೊತ್ತಮೊದಲ ವಾಕ್ಚಿತ್ರ ‘ಅಲಂ ಆರಾ’ (೧೯೩೧)ದಲ್ಲಿ ನಟಿಸಲು ಅವರನ್ನು ಕೇಳಿಕೊಂಡರು. ತಿಂಗಳಿಗೆ ಇನ್ನೂರು ರೂಪಾಯಿ ಸಂಬಳದ ಕರಾರು ಕೂಡ ಆಯಿತು.

ಅಂದಿನ ದಿನಗಳಲ್ಲಿ ಇನ್ನೂರು ರೂಪಾಯಿಗಳಲ್ಲಿ ನೆಮ್ಮದಿಯ ಜೀವನ ನಡೆಸಬಹುದಾಗಿತ್ತು. ಪೃಥ್ವೀರಾಜರು ತಾರ್ ದೇವ್‌ನಲ್ಲಿ ೧೨ ಅಡಿ ಉದ್ದ, ೮ ಅಡಿ ಅಗಲ ಇದ್ದ ಪುಟ್ಟ ಕೋಣೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಹೆಂಡತಿ ಮತ್ತು ಮಗ ರಾಜ್‌ನನ್ನು ಮುಂಬಯಿಗೆ ಕರೆಸಿಕೊಂಡರು.

ಇರಾಣಿಯ ಇಂಪೀರಿಯಲ್ ಕಂಪೆನಿಗಾಗಿ ಪೃಥ್ವಿಯವರು ನಟಿಸಿದ ಇತರ ಚಿತ್ರಗಳು ‘ದ್ರೌಪದಿ ಚೀರ್ ಹರಣ್’ (೧೯೩೧) ಮತ್ತು ‘ದಗಾಬಾಝ್ ಆಶಿಕ್’ (೧೯೩೨).’

ಕಲ್ಕತ್ತೆಯಲ್ಲಿ

ಚಲನಚಿತ್ರ ಪ್ರಪಂಚದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುತ್ತಿರು ವಂತೆಯೆ ಪೃಥ್ವಿಯವರಿಗೆ ಮತ್ತೆ ನಾಟಕದತ್ತ ಗಮನ ಸೆಳೆ ಯಿತು. ಅದಕ್ಕೆ ಸರಿಯಾಗಿ ಗಾಂಟ್ ಆಂಡರ್ಸನ್ ಥಿಯೆಟ್ರಿಕಲ್ ಕಂಪೆನಿ ಸೇರಿ ಊರೂರು ತಿರುಗಾಡಿದರು. ಷೇಕ್ಷ್‌ಪಿಯರನ ನಾಟಕಗಳು, ಶೂದ್ರಕನ ‘ಮೃಚ್ಛಕಟಿಕ’ ವನ್ನಾಧರಿಸಿದ ‘ಟಾಯ್ ಕಾರ್ಟ್’ ಮೊದಲಾಗಿ ಹದಿನಾಲ್ಕು ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಾಕಷ್ಟು ಅನುಭವ ದೊರೆಯಿತು. ಆದರೆ ೧೯೩೨ರಲ್ಲಿ ನಾಟಕ ಕಂಪನಿಯೇ ದಿವಾಳಿಯಾಯಿತು. ಪೃಥ್ವಿ ಕಲ್ಕತ್ತೆಗೆ ಬಂದರು.

ಕಲ್ಕತ್ತ ಕಲೆಯ ಆಗರ. ತನ್ನ ಪ್ರತಿಭೆಗೆ ಅಲ್ಲಿ ಬೆಲೆ ಸಿಕ್ಕೀತು ಎಂದು ಪೃಥ್ವಿಗೂ ಆಸೆ. ನಿಜ, ಅವರ ಯೋಗ್ಯತೆ ಅಲ್ಲಿ ಗುರುತಿಸಲ್ಪಟ್ಟಿತು. ದೇವಕೀ ಬೋಸರ ‘ಇಂಡಿಯನ್ ಫಿಲ್ಮ್ ಕಂಪೆನಿ’ಯಲ್ಲಿ ಪೃಥ್ವಿ ಅಗ್ರಗಣ್ಯರಾದರು. ನಿತೀನ್ ಬೋಸ್, ಪಿ.ಸಿ. ಬರುವ, ಹೇಮಚಂದ್ರ, ಏ.ಆರ್.ಕರ್ದಾರ್ ಮೊದಲಾದ ಹಿರಿಯ ದಿಗ್ದರ್ಶಕರ ಚಿತ್ರಗಳಲ್ಲಿ ನಟಿಸಿದರು. ದೇವಕೀ ಬೋಸರ ‘ಸೀತಾ’ದಲ್ಲಿ ಪೃಥ್ವಿ ಮಾಡಿದ ರಾಮನ ಪಾತ್ರ ಅದ್ವಿತೀಯವಾಯಿತು. ಈ ಖ್ಯಾತ ಚಿತ್ರದ ಛಾಯಾಗ್ರಹಣ

ಮಾಡಿದವರು ಹೆಸರಾಂತ ದಿಗ್ದರ್ಶಕ ಬಿಮಲ್ ರಾಯ್ ಎಂಬುದು ಗಮನಾರ್ಹ.

ಕಲ್ಕತ್ತೆಯ ’ನ್ಯೂ ಥಿಯೇಟರ‍್ಸ್’ನಲ್ಲಿಯೂ ಪೃಥ್ವಿಯ ಅಭಿನಯ ಸಾಮರ್ಥ್ಯಕ್ಕೆ ಪ್ರೋತ್ಸಾಹ, ಪೋಷಣೆ ದೊರೆಯಿತು. ಸುಮಾರು ಐದು ವರ್ಷಕಾಲ (೧೯೩೪-೩೯) ಅವರು ಖ್ಯಾತ ನಟ-ನಟಿಯರಾದ ಗಾಯಕ ಕುಂದನ್‌ಲಾಲ್ ಸೈಗಲ್, ದುರ್ಗಾ ಖೋಟೆ ಮೊದಲಾದವರೊಂದಿಗೆ ದುಡಿದರು. ‘ರಾಜಾರಾಣಿ ಮೀರಾ’, ‘ವಿದ್ಯಾಪತಿ’, ‘ಜೀವನ ನಾಟಕ’, ‘ದುಷ್ಮನ್’, ‘ಪ್ರೆಸಿಡೆಂಟ್’, ‘ಮಂಝಿಲ್’, ‘ಸಪೇರಾ’, ‘ಡಾಕೂ ಮನ್ಸೂರ್’, ‘ಮಿಲಾಪ್’, ‘ಅನಂತ ಆಶ್ರಮ’, ’ಅಭಾಗಿನ್’ ಅವರ ಅಂದಿನ ಕೆಲವು ಯಶಸ್ವೀ ಕೃತಿಗಳು.

ಸ್ವತಂತ್ರ ನಟ

ಮುಂಬಯಿಗೆ ೧೯೩೯ ರಲ್ಲಿ ಮರಳಿದಾಗ ಪೃಥ್ವೀರಾಜರು ಪ್ರಸಿದ್ಧರಾಗಿದ್ದರು. ರಣಜೀತ್ ಮೂವೀಟೋನ್ ಆಗ ಖ್ಯಾತ ಚಲನಚಿತ್ರ ಸಂಸ್ಥೆ. ಅದರ ಮಾಲಿಕ-ನಿರ್ಮಾಪಕ ಚಂದುಲಾಲ್ ಷಹಾ ಪೃಥ್ವೀರಾಜರ ಹಳೆಯ ಗೆಳೆಯ. ರಣಜೀತ್‌ನಲ್ಲಿ ಪೃಥ್ವೀ ರಾಜರಿಗೆ ಹಾರ್ದಿಕ ಸ್ವಾಗತ ದೊರೆಯಿತು. ಅಲ್ಲಿ ಒಂದೇ ವರ್ಷದಲ್ಲಿ ಐದು ಚಿತ್ರಗಳಲ್ಲಿ ಪಾತ್ರ ವಹಿಸಿದರು. ‘ಪಾಗಲ್’, ‘ಆಜ್ ಕಾ ಹಿಂದುಸ್ಥಾನ್’, ‘ಅಧೂರಿ ಕಹಾನಿ’, ‘ಸಜನ್ನಿ’ ಮತ್ತು ‘ಚಿಂಗಾರಿ’. ಪೃಥ್ವೀರಾಜರು ಇನ್ನೂ ಜನಪ್ರಿಯರಾದರು.

 

ಮೊಗಲ್ ಎ.ಆಜಮ್‌ನಲ್ಲಿ ಅಕ್ಬರನಾಗಿ.

ಕಲೆಯೊಂದಿಗೆ ಸಾಹಸ ಮೈಗೂಡಿದ ಪೃಥ್ವೀರಾಜರು ೧೯೪೦ ರಿಂದ ಸ್ವತಂತ್ರ ನಟರಾಗಿಬಿಟ್ಟರು. ಯಾವ ಚಲನ ಚಿತ್ರ ಸಂಸ್ಥೆಯ ನೌಕರಿಯನ್ನೂ ಮಾಡಲಿಲ್ಲ. ಯಾವ ಸಂಸ್ಥೆಗೂ ಸೇರದೆ ಸ್ವತಂತ್ರ ನಟರಾಗುವ ಧೈರ್ಯಮಾಡಿದ ಮೊದಲನೆಯ ನಟರು ಪೃಥ್ವೀರಾಜರು. ಆದರೆ ಚಲನಚಿತ್ರ ಕಂಪೆನಿಗಳು ಕಲಾವಿದರನ್ನು ಪೀಡಿಸಬಾರದೆಂದು ಕರಾರು ಮಾಡಿಕೊಳ್ಳುವ ಪದ್ಧತಿಯನ್ನೂ ಅವರೇ ಆರಂಭಿಸಿದರು. ಇಂದು ಕಲಾವಿದರಿಗೆ ಅದೇ ಭದ್ರ ರಕ್ಷಣೆ.

ನಟರಾಗಿ ಅವರ ಜೀವನದ ಮೊದಲ ಹದಿನಾರು ವರ್ಷಗಳಲ್ಲಿ ಪೃಥ್ವೀರಾಜರು ಒಂಬತ್ತು ಮೂಕ ಚಿತ್ರ ಹಾಗೂ ಹನ್ನೆರಡು ವಾಕ್ಚಿತ್ರಗಳಲ್ಲಿ ನಟಿಸಿದರೆ, ಅದೇ ಕಾಲಕ್ಕೆ ವರ್ಷದಲ್ಲಿ ೧೮೦ ನಾಟಕಗಳಲ್ಲಿ ಪಾತ್ರ ವಹಿಸಿದರು. ಆಗಿನ ಅವರ ದಾಖಲೆ ಒಟ್ಟು ೨೬೮೦ ನಾಟಕ ಪ್ರಯೋಗಗಳು. ಅಭಿನಯ ಎಂಬುದು ಅಷ್ಟರಮಟ್ಟಿಗೆ ಅವರ ಜೀವನದ ಉಸಿರಾಗಿಬಿಟ್ಟಿತ್ತು.

ಪೃಥ್ವೀ ಥಿಯೇಟರ್ಸ್

ಭಾರತೀಯ ರಂಗಭೂಮಿ ಇತಿಹಾಸದಲ್ಲೇ ರಾಷ್ಟ್ರಮಟ್ಟದ ನಾಟಕ ಮಂಡಳಿ ರೂಪಿಸಿದ ಶ್ರೇಯಸ್ಸು ಪೃಥ್ವೀರಾಜರದು. ಚಲನಚಿತ್ರ ವ್ಯವಸಾಯದಲ್ಲಿ ಭಾರಿ ಜನಪ್ರಿಯರಾಗಿರುವಾಗ ಅದನ್ನು ಬದಿಗಿರಿಸಿ ನಾಟಕ ಕಂಪೆನಿ ಆರಂಭಿಸಿದುದು ಅವರ ರಂಗಭೂಮಿ ಪ್ರೇಮಕ್ಕೆ ಸಾಕ್ಷಿ. ಚಲನಚಿತ್ರಗಳಲ್ಲಿ ಗಳಿಸಿದ ಹಣವನ್ನು ಸುರಿದು ೧೯೪೪ ರ ಜನವರಿ ೧೪ರಂದು ‘ಪೃಥ್ವೀ ಥಿಯೇಟರ್ಸ್’ ಆರಂಭಿಸಿದರು. ಸುಮಾರು ಒಂದು ನೂರು ಮಂದಿ ನಾಟ್ಯಪ್ರೇಮಿ ನಟನಟಿಯರು, ಕವಿಗಳು, ತಂತ್ರಜ್ಞರು ಒಂದುಗೂಡಿದರು. ನಾಟಕದಲ್ಲಿ ಅಭಿನಯಿಸಿದರೆ ಚಲನ ಚಿತ್ರದಲ್ಲಿ ಅಭಿನಯಿಸುದದಕ್ಕಿಂತ ಆದಾಯ ಕಡಿಮೆ; ಆದರೂ ರಂಗಭೂಮಿಯ ಒಲುಮೆ.

‘ಪೃಥ್ವೀ ಥಿಯೇಟರ್ಸ್’ನಲ್ಲಿ ನಟಿಸಿದ್ದ ಕೆಲವರು-ಎರ್ಮಿಲನ್, ಜಗದೀಶ್ ಸೇಥಿ, ಬಲರಾಜ್ ಸಹಾನಿ ಅವರ ಮೊದಲ ಪತ್ನಿ ದಮಯಂತೆ ಸಹಾನಿ, ಮುಬಾರಕ್, ಸಜ್ಜನ್, ಪ್ರೇಮನಾಥ್, ತ್ರಿಲೋಕ್ ಕಪೂರ್, ಶೌಕತ್ (ಜನಪ್ರಿಯ ತಾರೆ ಶಬಾನಾ ಆಝ್ಮಿಯ ತಾಯಿ), ರಮಾ ಜೋಹರ್ (ಐ.ಎಸ್. ಜೋಹರ್ ರ ಮೊದಲನೇ ಪತ್ನಿ), ದಿಗ್ದರ್ಶಕ-ನಿರ್ಮಾಪಕ ಎಲ್.ವಿ. ಪ್ರಸಾದ್ ಮತ್ತು ಕೃಷ್ಣ ಧವನ್, ಪೃಥ್ವೀರಾಜರ ಮೂವರು ಮಕ್ಕಳಾದ ರಾಜ್, ಶಮ್ಮಿ ಮತ್ತು ಶಶಿ ಇವರಿಗೆ ರಂಗ ಭೂಮಿಯೇ ವಿಶ್ವವಿದ್ಯಾನಿಲಯವಾಯಿತು.

‘ಪೃಥ್ವೀ ಥಿಯೇಟರ್ಸ್’ ಪ್ರದರ್ಶಿಸಿದ್ದು ಎಂಟು ಮುಖ್ಯ ನಾಟಕಗಳನ್ನು. ಆ ಕಾಲದ ರಾಷ್ಟ್ರಸಮಸ್ಯೆಗಳನ್ನು ಅವು ವಿಶ್ಲೇಷಿಸಿದವು.

ಕವಿ ಬೇತಾಬ್‌ಜಿ ಬರೆದ ‘ಶಾಕುಂತಲ’ವೇ ಮೊದಲ ನಾಟಕ. ಇದು ರಂಗಭೂಮಿ ಪ್ರಯೋಗಕ್ಕೆ ಸರಿ ಹೊಂದುತ್ತಿರಲಿಲ್ಲ. ಆದರೆ ಸಂಸ್ಕೃತ ಸಾಹಿತ್ಯಪ್ರಿಯರಾದ ಪೃಥ್ವೀರಾಜರು ಪ್ರಯೋಗದ ದೃಷ್ಟಿಯಿಂದ ಇದನ್ನು ಆಡಿದರು. ಖ್ಯಾತ ಸಾಹಿತಿ, ಪತ್ರಕೋದ್ಯಮಿ, ಚಲನಚಿತ್ರ ದಿಗ್ಧರ್ಶಕ ಕೆ.ಎ.ಅಬ್ಬಾಸ್‌ರು ತಯಾರಿಸುತ್ತಿದ್ದ ‘ಝಬೇದಾ’ ಚಿತ್ರದಲ್ಲಿ ನಟಿಸಿದ್ದ ಝಬೇದಾ ಎಂಬ ಸುಂದರಿ ಶಕುಂತಲೆ ಯಾದಳು. ಪೃಥ್ವೀ ದುಷ್ಯಂತನ ಪಾತ್ರ ವಹಿಸಿದರು.

ಕಣ್ವ ಮುನಿಯ ಆಶ್ರಮವನ್ನು ಕಾಳಿದಾಸನ ವರ್ಣನೆ ಯಂತೆಯೇ ಸೃಜಿಸಲಾಯಿತು. ನಿಜವಾದ ಗಿಡ ಮರಗಳನ್ನೇ ರಂಗಭೂಮಿಗೆ ಹೊತ್ತುತರಲಾಗಿತ್ತು. ಹುಲ್ಲಿನಿಂದ ಆಶ್ರಮ ಸಿದ್ಧವಾಯಿತು. ರಂಗಸಜ್ಜಿಕೆ ಅದ್ಭುತವಾಗಿತು; ಭರ್ಜರಿಯಾಗಿತ್ತು. ಆದರೆ ಜನರಿಗೆ ನಾಟಕ ಮೆಚ್ಚಿಕೆ ಯಾಗಲಿಲ್ಲ. ಒಂದು ಲಕ್ಷ ರೂಪಾಯಿ ನಷ್ಟವಾಯಿತು. ಆದರೂ ಆರಂಭದ ಪ್ರಯತ್ನವೆಂದು ಎಲ್ಲರಿಗೂ ಎರಡು ತಿಂಗಳ ಸಂಬಳ, ಬೋನಸ್ ಕೊಡಲಾಯಿತು. ಆ ಬಳಿಕ ಪೌರಾಣಿಕ ನಾಟಕ ಆಡಲಿಲ್ಲ.

ಸಾಮಾಜಿಕ ಸಮಸ್ಯೆಗಳು

ಪೃಥ್ವೀರಾಜರ ಮುಂದಿನ ನಾಟಕಗಳೆಲ್ಲ ಸಾಮಾಜಿಕ ಅನ್ಯಾಯ, ರಾಜಕೀಯ ದ್ರೋಹದ ಮೇಲೆ ಟೀಕೆ ಮಾಡಿದವು. ಜನರಲ್ಲಿ ಈ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಿ, ಸ್ವಾತಂತ್ರ್ಯ ಆಂದೋಲನದಲ್ಲಿ ‘ಪೃಥ್ವೀ ಥಿಯೇಟರ‍್ಸ್’ ತನ್ನದೇ ಆದ ಮಹತ್ವದ ಪಾತ್ರವಹಿಸಿತು. ಈ ಎಲ್ಲ ನಾಟಕಗಳ ಕೇಂದ್ರಬಿಂದು ಪೃಥ್ವೀರಾಜರು.

‘ದೀವಾರ್’ (ಗೋಡೆ) ಅತಿ ಮಹತ್ವದ ಜನಪ್ರಿಯ ನಾಟಕವಾಯಿತು. ಅಖಂಡ ಭಾರತವನ್ನು ವಿಭಜಿಸುವ ತಂತ್ರ, ಒತ್ತಡಗಳ ದುಷ್ಪರಿಣಾಮಗಳನ್ನು ಈ ನಾಟಕ ವಿವೇಚಿಸಿತು. ಇದೊಂದೇ ನಾಟಕ ಭಾರತದ ಹಲವು ಕೇಂದ್ರಗಳಲ್ಲಿ ೭೧೫ ಪ್ರಯೋಗ ಮಾಡಿತು. ದೇಶ ವಿಭಜನೆಯಾದಾಗ ಭಾರತದಲ್ಲಿ ಉಳಿದ ಮುಸ್ಲಿಮರ ಪರಿಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಿದ ನಾಟಕ ‘ಘದ್ದರ್’ (ದ್ರೋಹಿ). ದೇಶ ವಿಭಜನೆಯ ಉರಿಯಲ್ಲಿ ಬಾಲಕಿಯೊಬ್ಬಳ ಬಲಿದಾನವಾದ ದಾರುಣ ಕಥಾವಸ್ತು ‘ಆಹುತಿ’ ನಾಟಕದ್ದು. ಹಳ್ಳಿಯ ಜಮೀನುದಾರರು ಬಡ ರೈತರನ್ನು ಶೋಷಿಸುವ ಹೃದಯ ವಿದ್ರಾವಕ ಚಿತ್ರವನ್ನು ‘ಕಿಸಾನ್’ನಲ್ಲಿ ಕೊಟ್ಟರು. ಹಿಂದು-ಮುಸ್ಲಿಂ ಐಕ್ಯ ಬೋಧಿಸುವ ‘ಪಠಾಣ’ದಲ್ಲಿ ಪೃಥ್ವೀರಾಜರ ನಟನೆ ಚಿರಸ್ಮರಣೀಯ. ಅದರಲ್ಲಿ ಪಠಾಣನ ಮಗನ ಪಾತ್ರವನ್ನು ಪೃಥ್ವೀರಾಜರ ಮಕ್ಕಳಲೊಬ್ಬರು ಮಾಡುತ್ತಿದ್ದರು. ‘ಕಲಾಕಾರ್’ ಕಲಾವಿದನ ಬದುಕಿನ ನೋಟವಾದರೆ, ‘ಪೈಸಾ’ ಧನಪಿಶಾಚಿಗಳಿಗೆ ಕನ್ನಡಿ ಹಿಡಿಯಿತು.

‘ಪೃಥ್ವೀ ಥಿಯೇಟರ್ಸ್’ ಹದಿನಾರು ವರ್ಷಗಳ ಕಾಲ ನಡೆಯಿತು. ಈ ಕಾಲದಲ್ಲಿ ಅಸ್ಸಾಂ ಬಿಟ್ಟು ಭಾರತವನ್ನೆಲ್ಲ ಸುತ್ತಿದ ರಾಷ್ಟ್ರೀಯ ನಾಟಕ ಮಂಡಳಿಯಾಯಿತು. ಕುಂಭ ಮೇಳ, ಪೂರಿ ಜಗನ್ನಾಥನ ಉತ್ಸವ, ರಾಮಲೀಲಾ ಕಾಲಕ್ಕೆ ನಾಟಕ ಪ್ರದರ್ಶಿಸಿ ಸಾಮೂಹಿಕ ಜನಜಾಗೃತಿ ಮಾಡಿದರು. ಒಟ್ಟಿಗೆ ೨೫೦೦ ಪ್ರಯೋಗಗಳಾದವು. ಮಂಡಳಿಯ ಆದಾಯ ೪೫ ಲಕ್ಷ ರೂಪಾಯಿಗಳನ್ನು ಮೀರಿತು. ಖರ್ಚಾಗಿ ಉಳಿದುದೆಲ್ಲ ನಿಧಿಗಳಿಗೆ ದಾನವಾಗಿ ಕೊಡಲ್ಪಟ್ಟಿತು. ಲಾಭದ ಆಸೆಯೂ ಇರಲಿಲ್ಲ; ಲಾಭವೂ ಆಗಲಿಲ್ಲ.

‘ಪೃಥ್ವೀ ಥಿಯೇಟರ್ಸ್’ಗಾಗಿ ನಾಟಕಗಳನ್ನು ಬರೆದವರಲ್ಲಿ ಇಂದು ಅನೇಕರು ಚಲನಚಿತ್ರರಂಗದಲ್ಲಿ ಜನಪ್ರಿಯರು. ರಾಮಾ ನಂದ್ ಸಾಗರ್, ಮೋಹನ್ ಸೆಗಾಲ್, ರಮೇಶ್ ಸೈಗಲ್, ಇಂದರ್ ರಾಜ್ ಆನಂದ್, ಲಾಲ್‌ಚಂದ್ ಬಿಸ್ಮಿಲ್ ಮೊದಲಾ ದವರು ಪೃಥ್ವೀರಾಜರ ಗರಡಿಯಲ್ಲಿ ತಯಾರಾದವರು. ಶಂಕರ್ -ಜೈಕಿಷನ್, ರಾಮ್ ಗಂಗೂಲಿ, ಸರ್‌ದಾರ್ ಮಲ್ಲಿಕ್ ಮೊದಲಾದ ಅನೇಕ ಸಂಗೀತ ದಿಗ್ದರ್ಶಕರು ‘ಪೃಥ್ವೀ ಥಿಯೇಟರ್ಸ್’ ಮೂಲಕ ಚಲನಚಿತ್ರರಂಗ ಹೊಕ್ಕರು.

ಮಹತ್ವದ ದೇಶಸೇವೆ

‘ಪೃಥ್ವೀ ಥಿಯೇಟರ್ಸ್’ ಚಟುವಟಿಕೆಯಿಂದಿದ್ದ ಕಾಲ ಭಾರತೀಯ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಜೀವನಗಳಲ್ಲಿ ಆಂದೋಲನ ನಡೆದ ಸಂಧಿಕಾಲ. ಪ್ರಚಲಿತವಾಗಿದ್ದ ಜೀವಂತ ಸಮಸ್ಯೆಗಳನ್ನು ವಾಸ್ತವಿಕವಾಗಿ, ನೇರವಾಗಿ, ಯಾವ ಭೀತಿ ಇಲ್ಲದೆ ಅಭಿವ್ಯಕ್ತಗೊಳಿಸಿದ ಪೃಥ್ವೀರಾಜರ ಎಂಟೆದೆಯ ಸಾಹಸ ಶ್ಲಾಘನೀಯ.

‘ಗಡಿನಾಡ ಗಾಂಧಿ’ ಖಾನ್ ಅಬ್ದುಲ್ ಗಫಾರ್ ಖಾನ್ ರವರು ಈ ನಾಟಕಗಳನ್ನು ಕಂಡು, ‘ಮಹತ್ವದ ದೇಶಸೇವೆ’ ಎಂದು ಉದ್ಗರಿಸಿದ್ದರು. ದೇಶ ವಿಭಜನೆಯೊಂದಿಗೆ ಹಿಂದು-ಮುಸ್ಲಿಂ ದ್ವೇಷಾಗ್ನಿ ಧಗಧಗಿಸುವಾಗ ಆ ಸಮಸ್ಯೆಯನ್ನೇ ಆಹ್ವಾನಿಸಿದಂತೆಯೆ. ಎಷ್ಟೋ ಬಾರಿ ‘ನಿಮ್ಮ ಪ್ರಾಣಕ್ಕೇ ಅಪಾಯ’ ಎಂಬ ಎಚ್ಚರಿಕೆ ಬಂದುದೂ ಉಂಟು. ಪ್ರಾಣವನ್ನೂ ಪಣವಾಗಿಟ್ಟು ಜನಜಾಗೃತಿ ಮಾಡಿದ ಪೃಥ್ವೀರಾಜರ ದೇಶಸೇವೆ ಯಾರಿಗೂ ಕಡಿಮೆಯಾದುದಲ್ಲ.

ನಾಟಕದ ಅತಿ ಹುಚ್ಚಿನಿಂದ ಪೃಥ್ವೀರಾಜರು ದೇಹಾರೋಗ್ಯ ವನ್ನೂ ಕಡೆಗಣಿಸಿದ್ದರು. ಬಣ್ಣದ ಕೋಣೆ ಹಾಗೂ ರಂಗ ಭೂಮಿಯಲ್ಲಿ ಅವರು ಪ್ರಜ್ಞಾಶೂನ್ಯರಾಗಿ ಬಿದ್ದುದುಂಟು. ವೈದ್ಯರ ಸಲಹೆ ಮೇರೆಗೆ ಕೊನೆಗೂ ೧೯೬೦ರ ಮೇ ತಿಂಗಳಲ್ಲಿ ‘ಪೃಥ್ವೀ ಥಿಯೇಟರ್ಸ್’ನ್ನು ನಿಲ್ಲಿಸಲಾಯಿತು. ಆದರೆ ಅವಸಾನವಾಗುವ ಕೆಲವು ತಿಂಗಳ ಮೊದಲು ಕೂಡ ‘ಪೃಥ್ವೀ ಥಿಯೇಟರ‍್ಸ’ನ್ನು ಮತ್ತೆ ಆರಂಭಿಸುವ ಉತ್ಸಾಹದ ಮಾತನ್ನು ಅವರಾಡಿದ್ದರು.

ಶಿಸ್ತು-ಶಾಂತಿ-ಶ್ರದ್ಧೆ

ಪೃಥ್ವೀರಾಜರ ಜೀವನದಲ್ಲಿ ಬಾಲ್ಯದಿಂದಲೂ ಅಭ್ಯಾಸ ವಾಗಿದ್ದ ಮೂರು ಮುಖ್ಯ ಸೂತ್ರಗಳಿವು: ಶಿಸ್ತು, ಶಾಂತಿ, ಶ್ರದ್ಧೆ. ಅವರ ಜೀವನದಲ್ಲಿ ಯಶಸ್ಸು ದೊರೆತದ್ದಕ್ಕೂ ಇವೇ ಮೂಲ.

ಅಭಿನಯಕ್ಕೆ ಹೋಗುವ ಮೊದಲು ಪೃಥ್ವೀರಾಜರು ತಂದೆಯ ಕಾಲುಮುಟ್ಟಿ ಹೊರಡುತ್ತಿದ್ದರು. ದೇವರನ್ನು ನಮಿಸಿ ಕಾರ್ಯಾರಂಭ ಮಾಡುತ್ತಿದ್ದರು. ಈ ಪರಂಪರೆಯನ್ನು ಮಕ್ಕಳು ಮುಂದುವರಿಸಿದ್ದಾರೆ. ರಾಜ್‌ಕಪೂರ್‌ನ (ಆರ್.ಕೆ) ಚಿತ್ರ ಲಾಂಛನದ ಮೊದಲು ಪೃಥ್ವೀರಾಜರು ಶಿವಲಿಂಗ ಪೂಜೆಗೆ ಕುಳಿತ ದೃಶ್ಯವೇ ಆರಂಭ.

ಪ್ರೇಕ್ಷಕ ಗೃಹದಲ್ಲಿ ಸಭ್ಯತೆ, ಶಾಂತಿಗಳನ್ನು ಪೃಥ್ವೀ ರಾಜರು ಬಯಸುತ್ತಿದ್ದರು. ಸಮಯಕ್ಕೆ ಸರಿಯಾಗಿ ನಾಟಕ ಆರಂಭವಾಗುತ್ತಿತ್ತು. ಪ್ರೇಕ್ಷಕರಲ್ಲಿ ಕೆಲವರು ಅನವಶ್ಯಕವಾಗಿ ಕೆಮ್ಮಿದರೆ, ನಕ್ಕರೆ, ಮಾತನಾಡಿದರೆ ಅವರು ಸಹಿಸುತ್ತಿರಲಿಲ್ಲ. ಪ್ರೇಕ್ಷಕರ ಮುಂದೆ ಬಂದು, ‘ಶಾಂತಿ-ಸಭ್ಯತೆಗಳಿಂದ ನಾಟಕ ನೋಡಬೇಕು’ ಎಂದು ವಿನಂತಿ ಮಾಡುತ್ತಿದ್ದರು. ಒಂದು ವೇಳೆ ಕಾನೂನು ರಚಿಸುವ ಅಧಿಕಾರ ತನಗಿದ್ದರೆ ಪ್ರೇಕ್ಷಕ ಗೃಹದಲ್ಲಿ ಅಂಥ ಶಿಸ್ತುಭಂಗ ಮಾಡುವ ಅರಸಿಕ ‘ಕಲಾದ್ರೋಹಿ’ಗಳನ್ನು ತಾನು ಗಲ್ಲಿಗೇರಿಸುತ್ತಿದ್ದೆ ಎಂದು ಪೃಥ್ವೀರಾಜರು ಕೋಪದಿಂದ  ಸಿಡಿದುದೂ ಇದೆ.

ಅವರ ಗುಡುಗಿನಂಥ ಸ್ವರ ರೋಮಾಂಚವಾಗುಷ್ಟು ಗಂಭೀರವಾಗಿತ್ತು. ಅವರೆದುರಿಗೆ ರಂಗಭೂಮಿಯಲ್ಲಿ ಉಳಿದ ವರು ವಾಮನರಂತೆ ಕಾಣುತ್ತಿದ್ದರು. ಪೃಥ್ವೀರಾಜರ ದೈತ್ಯಾಕಾರದ ಕಟ್ಟುಮಸ್ತಾದ ಸುಂದರ ಪಠಾಣ ದೇಹ ರಂಗಭೂಮಿಯಲ್ಲೆಲ್ಲ ಎದ್ದು ಕಾಣುತ್ತಿತ್ತು. ಅಸದೃಶ

ಅಭಿವ್ಯಕ್ತಿಯ ಜಾಜ್ವಲ್ಯಮಾನ ಕಣ್ಣುಗಳು, ಅರ್ಥಗರ್ಭಿತ ಮುಖ ಇವು ಪೃಥ್ವೀರಾಜರನ್ನು ಅದ್ವಿತೀಯ ನಟಸಾರ್ವಭೌಮ ನನ್ನಾಗಿಸಿದವು.

ಚಲನಚಿತ್ರಕ್ಕಿಂತ ಹೆಚ್ಚಾಗಿ ಅವರು ರಂಗಭೂಮಿಗೆ ಒಲಿದರು. “ರಂಗಭೂಮಿಯ ತನ್ಮಯ ಅನುಭವ, ಪ್ರೇಕ್ಷಕರೊಂದಿಗೆ ಆಗುವ ಸಮನ್ವಯತೆ ಚಲನಚಿತ್ರದಲ್ಲಿ ಎಲ್ಲಿಂದ ಬರಬೇಕು? ಇವೆರಡೂ ಪ್ರತ್ಯೇಕ ಅನುಭವಗಳು” ಎಂದು ಪೃಥ್ವೀರಾಜರು ಉದ್ಗರಿಸಿದ್ದರು.

ಪೃಥ್ವಿರಾಜರೊಂದಿಗೆ ರಂಗಭೂಮಿ – ಚಲನಚಿತ್ರ ಗಳೆರಡರಲ್ಲೂ ನಟಿಸಿದ್ದ ಝಬೇದಾ ಒಮ್ಮೆ ಹೇಳಿದ್ದಳು-“ಪೃಥ್ವೀರಾಜರೆಂದರೆ ರಂಗಭೂಮಿಯ ಮೇಲೆ ವನರಾಜ ಸಿಂಹನಂತೆ; ಚಲನಚಿತ್ರದಲ್ಲಿ ಅವರು ಪಳಗಿಸಿದ ಸರ್ಕಸ್ ಸಿಂಹದಂತೆ!”

ನಾಟಕಗಳನ್ನು ಓದಿ, ಅಭ್ಯಾಸ ಮಾಡಿ, ವಿಮರ್ಶಿಸುವ ಉತ್ಸಾಹ ಯಾವಾಗಲೂ ಅವರಲ್ಲಿ ತುಂಬಿರುತ್ತಿತ್ತು. ಹಳೆಯ ಸಂಸ್ಕೃತ ನಾಟಕಗಳೆಂದರೆ ಅವರಿಗೆ ಬಲು ಪ್ರೀತಿ. ಷೇಕ್ಸ್ ಪಿಯರ್ ಅವರ ಮೆಚ್ಚಿನ ನಾಟಕಕಾರ. ನಾಟಕ ಗ್ರಂಥಗಳ ಅವರ ಸಂಗ್ರಹ ಅದ್ಭುತವಾಗಿತ್ತು. ಶಶಿ ಕಪೂರ್‌ನ ನಾಟಕ ಪ್ರೇಮ ತಂದೆಯ ಬಳುವಳಿ.

ಚಲನಚಿತ್ರ ಚಕ್ರವರ್ತಿ

ಪೃಥ್ವೀರಾಜರು ತಮ್ಮ ೪೨ ವರ್ಷಗಳ (೧೯೨೯ ರಿಂದ ೧೯೩೧) ಚಲನಚಿತ್ರ ಜೀವನದಲ್ಲಿ ಒಟ್ಟಿಗೆ ಒಂಬತ್ತು ಮೂಕ ಹಾಗೂ ೭೨ ವಾಕ್ಚಿತ್ರಗಳಲ್ಲಿ ನಟಿಸಿದರು. ಅವರ ಕೊನೆಯ ಚಿತ್ರ ‘ಕಲ್ ಆಜ್ ಔರ್ ಕಲ್’ (ನಿನ್ನೆ ಇಂದು ಮತ್ತು ನಾಳೆ). ಇದರ ದಿಗ್ದರ್ಶಕ ಮೊಮ್ಮಗ ರಣಧೀರ್ (ಡಾಬೂ). ಪೃಥ್ವೀರಾಜರು ಭಾರತೀಯ ಚಲನಚಿತ್ರ ರಂಗಕ್ಕೆ ಕೊಟ್ಟ ಅವರ ಕುಟುಂಬದ ಮೂರು ತಲೆಮಾರುಗಳೂ ಈ ಚಿತ್ರದಲ್ಲಿ ಒಟ್ಟಾಗಿ ಬಂದವು.

ಅವರು ನಟಿಸಿದ ಪಾತ್ರಗಳು ವೈವಿಧ್ಯಮಯ. ಆದರೂ ತಾರೆಯಾಗಲು ಅವರೆಂದೂ ಬಯಸಲಿಲ್ಲ. ಚಿತ್ರಗಳಲ್ಲಿ ದೊಡ್ಡ ಪಾತ್ರಗಳನ್ನೇ ಮಾಡಿ ಖ್ಯಾತಿ ಗಳಿಸಲು ಅವರು ಆಸೆ ಪಡಲಿಲ್ಲ. ತಾನು ನಟ ಎನ್ನುವುದರಲ್ಲೇ ಅವರಿಗೆ ಅಭಿಮಾನವಿತ್ತು. ಎಂಥ ಚಿಕ್ಕಪುಟ್ಟ ಪಾತ್ರವಾದರೂ ಅತಿ ಶ್ರದ್ಧೆಯಿಂದ, ತನ್ಮಯತೆಯಿಂದ ಮಾಡುತ್ತಿದ್ದರು. ಅನೇಕ ಬಾರಿ ದಿಗ್ದರ್ಶಕರು ತನ್ನ ದೃಶ್ಯ ಸರಿ ಎಂದರೂ ತನಗೆ ಸಮಾಧಾನವಾಗಲಿಲ್ಲ ಎಂದು ಪುನಃ ಚಿತ್ರೀಕರಣ ಮಾಡಿಸುತ್ತಿದ್ದರು.

೧೯೪೦ ರಲ್ಲಿ ಪೃಥ್ವೀರಾಜರು ಯಾವ ಕಂಪೆನಿಗೂ ಸೇರದ ಸ್ವತಂತ್ರ ನಟರಾದರಲ್ಲವೆ? ಅನಂತರ ಅವರು ನಟಿಸಿದ ಚಲನ ಚಿತ್ರಗಳ ಪಟ್ಟಿಯೇ ದೀರ್ಘವಿದೆ. ‘ದ್ರೌಪದಿ’, ‘ಸಿಕಂದರ್’, ‘ವಿಷಕಾನ್ಯಾ’, ‘ವಿಕ್ರಮಾದಿತ್ಯ’, ‘ಪೃಥ್ವೀರಾಜ-ಸಂಯುಕ್ತೆ’, ‘ಪರಶುರಾಮ’, ‘ಶ್ರೀ ಕೃಷ್ಣಾರ್ಜುನ ಯುದ್ಧ’ ‘ಮಹಾರಥಿಕರ್ಣ’, ‘ಗೃಹದಾಹ’, ‘ವಾಲ್ಮೀಕಿ’, ‘ಡಾ.ದೀಪಕ್’, ‘ಫೂಲ್’, ‘ರಾಜ ನರ್ತಕಿ’ (ಇಂಗ್ಲಿಷಿನಲ್ಲಿ ’ಕೋರ್ಟ್ ಡಾನ್ಸರ್’), ‘ಉಜಾಲಾ’, ‘ಏಕ್ ರಾತ್’, ‘ಗೌರಿ’, ‘ಮಂಝಿಲ್’, ‘ಆಂಖ್ ಕಿ ಶರಮ್’, ‘ಇಶಾರಾ’, ‘ಅಝೂದೀ ಕಿ ರಾಹ್ ಪಾಕ್’, ‘ಭಲಾಯಿ’, ‘ದೇವದಾಸಿ’, ‘ಹಿಂದುಸ್ಥಾನ್ ಹಮಾರಾ, ದಹೇಜ್’, ‘ಆವಾರಾ’, ‘ಮೊಗಲ್-ಏ-ಅಜಮ್’, ‘ಆಸ್ಮಾನ್ ಮಹಲ್’, ‘ಕಲ್ ಆಜ್ ಔರ್ ಕಲ್’ ಮೊದಲಾದವು ಆ ಚಿತ್ರಗಳಲ್ಲಿ ಕೆಲವು.

 

ರಾಜ್ ಕಪೂರ್_ಪೃಥ್ವೀರಾಜ್ ಕಪೂರ್_ರಣಧೀರ್ ಕಪೂರ್.

ಅವರ ಜೀವಿತ ಕಾಲದ ಎಲ್ಲ ಹಿರಿಯ-ಕಿರಿಯ ನಟ ನಟಿಯರೂ ಅವರೊಂದಿಗೆ ನಟಿಸಿದ್ದಾರೆ ಎನ್ನಬಹದು. ಎರ್ಮಿಲನ್, ಸುಲೋಚನಾ, ಸಾಧನಾ ಬೋಸ್, ದುರ್ಗಾ ಖೋಟೆ, ವನಮಾಲಾ, ಝಬೇದಾ, ನಸೀಮ್ ಮೊದಲಾದ ಹಿಂದಿನ ಪೀಳಿಗೆಯ ತಾರೆಯರೂ ಮಧುಬಾಲಾ, ನರ್ಗಿಸ್, ಮೀನಾಕುಮಾರಿ, ಬೀನಾರಾಯ್ ಮೊದಲಾದ ತಾರೆಯರೂ ಅವರೊಂದಿಗೆ ನಟಿಸಿದರು. ಅವರಿಗೆಲ್ಲ ಪೃಥ್ವೀರಾಜರೊಂದಿಗೆ ನಟಿಸುವುದೇ ದೊಡ್ಡ ಗೌರವವೆನಿಸಿತ್ತು.

ಮೊಗಲ್-ಏ-ಅಜಮ್

ಪಾತ್ರವು ಚಿಕ್ಕದಿರಲಿ, ಮುಖ್ಯವಿರಲಿ ಪೃಥ್ವೀರಾಜರು ಅದರಲ್ಲಿ ಜೀವ ತುಂಬುತ್ತಿದ್ದರು. ಪಾತ್ರಕ್ಕೆ ಅವರು ಮಹತ್ವ ಕೊಡುತ್ತಿದ್ದರೇ ಹೊರತು ಪಾತ್ರದಿಂದಾಗಿ ಅವರಿಗೆ ಪ್ರಾಮುಖ್ಯತೆ ಬಂದುದಲ್ಲ. ಉದಾಹರಣೆಗೆ ಖ್ಯಾತ ನಿರ್ದೇಶಕ -ನಿರ್ಮಾಪಕ ಕೆ.ಅಸೀಫರ ‘ಮೊಗಲ್-ಏ-ಅಜಮ್’ (೧೯೬೦)ನಲ್ಲಿ ಅವರ ಅಕ್ಬರನ ಪಾತ್ರ. ರಾಜಪುತ್ರ ಸಲೀಮ್ ಹಾಗೂ ನರ್ತಕಿ ಅನಾರ್ಕಲಿಯ ಪ್ರಣಯ ಕತೆಯಲ್ಲಿ ಅಕ್ಬರನ ಪಾತ್ರಕ್ಕೆ ಪ್ರಾಧಾನ್ಯ ಕಡಿಮೆಯೆ. ಅದರೆ ಆ ಚಿತ್ರದ ತುಂಬೆಲ್ಲ ಎದ್ದು ತೋರಿದುದು ಪೃಥ್ವೀರಾಜರ ವ್ಯಕ್ತಿತ್ವ. ಚಲನಚಿತ್ರ ನೋಡಿದ ಬಳಿಕ ನೆನಪಿನಲ್ಲಿ ಉಳಿಯುವ ಪ್ರಮುಖ ಅಂಶಗಳಲ್ಲಿ ಅಕ್ಬರನ ಪಾತ್ರ ಒಂದು.

“ಹೊಸ ಪ್ರೇಕ್ಷಕರನ್ನು ಸೃಷ್ಟಿಸಿ, ಒಳ್ಳೆಯ ಅಭಿರುಚಿ ಬೆಳೆಸಿ”- ತರುಣ ತಾರೆಯರಿಗೆ ಅವರ ಸಂದೇಶ. ಆದರೆ ‘ನಮ್ಮ ಭಾರತೀಯ ಚಲನಚಿತ್ರಗಳು ಜೀವನಾನುಭವವನ್ನು ಕಡೆಗಣಿ ಸುತ್ತವೆ’ ಎಂಬುದು ಅವರ ದೂರು. “ಹಿಂದೆ ಚಿತ್ರರಂಗದಲ್ಲಿ ಸೌಲಭ್ಯ ಕಡಿಮೆ, ಶ್ರದ್ಧೆ ಹೆಚ್ಚು ಇತ್ತು. ಇಂದು ಪ್ರಯೋಗಗಳು ಮಾತ್ರ ನಡೆಯುತ್ತವೆ” ಎಂದ ಅವರ ಮಾತಿಯನಲ್ಲಿ ವ್ಯಂಗ್ಯ ತುಂಬಿದ ದುಃಖವಿತ್ತು.

ಜೀವನದಲ್ಲಿ ಬಂದ ಸೋಲು-ಗೆಲುವುಗಳನ್ನು ಪೃಥ್ವೀ ರಾಜರು ಶಾಂತಚಿತ್ತದಿಂದಲೇ ಎದುರಿಸಿದರು. ಈ ಸಮದೃಷ್ಟಿ ಅವರಿಗೆ ದೊರೆತುದು ಭಗವದ್ಗೀತೆಯಿಂದ ಎಂದು ಅವರೇ ಒಮ್ಮೆ ಹೇಳಿದ್ದರು. ಅವರು ಗೀತೆಯನ್ನು ತಪ್ಪದೆ ಪ್ರತಿದಿನ ಓದುತ್ತಿದ್ದರು. ಅದರಲ್ಲಿರುವ ತತ್ವಗಳನ್ನು ದಿನನಿತ್ಯದ ವ್ಯವಹಾರದಲ್ಲೂ ಬಳಸುತ್ತಿದ್ದರು.

ಬಾಳಿನ ಕೊನೆಯ ವರ್ಷಗಳಲ್ಲಿ ಸೋಲು-ಗೆಲುವುಗಳು ಒಟ್ಟಾಗಿ ಬಂದು ಅವರನ್ನು ಎದುರಿಸಿದುದುಂಟು. ಅವರ ಯಶಸ್ವೀ ನಾಟಕ ‘ಪೈಸಾ’ವನ್ನು ಚಲನಚಿತ್ರವಾಗಿ ಮಾಡಿದರು. ಅದು ಭಾರೀ ದೊಡ್ಡ ಸೋಲನ್ನು ಕಂಡಿತು. ವಿಶೇಷ ನಷ್ಟ ಮಾಡಿತು. ಆದರೆ ಪೃಥ್ವೀರಾಜರು ಜಗ್ಗಲಿಲ್ಲ. ಇಂಥ ಗಟ್ಟಿಗತನ ಅವರ ಮಕ್ಕಳಿಗೂ ಬಂದಿದೆ.

ಪೃಥ್ವೀರಾಜರಿಗೆ ಮುಪ್ಪಾದರೂ ಅವರ ಹುರುಪಿಗೆ ಮುಪ್ಪಾಗಲಿಲ್ಲ. ಸಾಹಸ, ಪ್ರಯೋಗಶೀಲತೆ ಅವರ ರಕ್ತದಲ್ಲಿ ಬೆರೆತಿತ್ತು. ತಮ್ಮ ಇಳಿವಯಸ್ಸಿನಲ್ಲೂ ಅವರು ಕನ್ನಡ ಕಲಿತರು; ಕನ್ನಡ ಚಲನಚಿತ್ರ ‘ಸಾಕ್ಷಾತ್ಕಾರ’ದಲ್ಲಿ ಪಾತ್ರ ವಹಿಸಿದರು.

ಪ್ರಶಸ್ತಿಗಳು

ಕೆ.ಎ.ಅಬ್ಬಾಸರ ‘ಆಸ್ಮಾನ್ ಮಹಲ್’ (೧೯೬೬)ನಲ್ಲಿ ಅವರು ಚೆನ್ನಾಗಿ ಅಭಿನಯಿಸಿದ್ದರು. ಆ ಚಿತ್ರ ಕಾರ್ಲೋವ್ ಅಂತರ ರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು. ಅವರ ಅಭಿನಯಕ್ಕೆ ಜಿಕೊಸ್ಲೊವಾಕಿಯಾ ಕಲಾ ಅಕಾಡೆಮಿ ಯಿಂದ ಪ್ರಶಸ್ತಿ ಬಂದಿತು.

ಚೀನಾಗೆ ೧೯೫೫ರಲ್ಲಿ ಹೋದ ಭಾರತೀಯ ಚಲನಚಿತ್ರ ನಿಯೋಗಕ್ಕೆ ಪೃಥ್ವೀರಾಜರು ನಾಯಕರಾಗಿದ್ದರು. ಮರುವರ್ಷ ಬರ್ಮಾ, ಸಿಂಗಾಪುರ, ಲಾವೋಸ್, ಕಾಂಬೊಡಿಯಾ, ಇಂಡೋನೇಷ್ಯಾ ದೇಶಗಳಿಗೆ ಹೋದ ಸಾಂಸ್ಕೃತಿಕ ಮಂಡಳಿಯಲ್ಲಿಯೂ ಅವರು ಪ್ರಮುಖ ಸದಸ್ಯರಾಗಿದ್ದರು. ೧೯೬೯ ರಲ್ಲಿ ಅವರಿಗೆ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿತು.

ಅವರ ಚಲನಚಿತ್ರ ಸಾಧನೆಗೆ ಸಂದ ಇನ್ನೊಂದು ಮಹತ್ವದ ಗೌರವ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ. ಅವರಿಗೆ ಅದನ್ನು ಕೊಡುವ ನಿಶ್ಚಯ ಮೊದಲೇ ಆಗಿದ್ದರೂ ಅದನ್ನು ಪ್ರಕಟಿಸುವ ಹೊತ್ತಿಗೆ ಅವರು ತೀರಿಕೊಂಡಿದ್ದರು.

ಅವರೇ ಹೇಳಿದ್ದರು: “ಕಲಾವಿದನಿಗೆ ದೊರೆಯುವ ಅತ್ಯಂತ ದೊಡ್ಡ ಪ್ರಶಸ್ತಿ ಎಂದರೆ ರಸಿಕರ ಪ್ರೋತ್ಸಾಹ.”  ಅದು ಅವರಿಗೆ ಯಥೇಚ್ಚವಾಗಿ ದೊರಕಿತ್ತು.

ಪಾಪಾಜಿ

ಕಪೂರ್ ಕುಟುಂಬ ಮಾತ್ರವಲ್ಲ, ನಾಟಕ-ಚಲನಚಿತ್ರ ರಂಗವೆಲ್ಲ ಪೃಥ್ವೀರಾಜರ ಸಂಸಾರವಾಗಿತ್ತು. ಎಲ್ಲರೂ ಅವರನ್ನು ‘ಪಾಪಾಜಿ’ ಎಂದೇ ಕರೆಯುತ್ತಿದ್ದರು. ಬಹುಶಃ ಭಾರತೀಯ ಚಿತ್ರರಂಗ, ನಾಟಕ ರಂಗಗಳೆರಡರಲ್ಲೂ ಅಜಾತಶತ್ರುವಾಗಿ, ಇಷ್ಟೊಂದು ಗೌರವಾದರ ಪಡೆದು ಮೆರೆದ ವ್ಯಕ್ತಿ ಇನ್ನೊಬ್ಬ ರಿರಲಾರರು.

ಪೃಥ್ವೀರಾಜರು ಒಳ್ಳೆಯ ರಸಿಕ ಮಾತುಗಾರರಾಗಿದ್ದರು. ಅವರು ರಾಜ್ಯಸಭೆಗೆ ಸದಸ್ಯರಾಗಿ ನೇಮಕವಾಗಿದ್ದಾಗ ಆಗಿನ ಉಪರಾಷ್ಟ್ರಪತಿ ಡಾ.ಸರ್ವೆಪಳ್ಳಿ ರಾಧಾಕೃಷ್ಣನ್ ರಾಜ್ಯಸಭಾಧ್ಯಕ್ಷ ರಾಗಿದ್ದರು. ಮಧ್ಯೆ ಬಿಡುವು ಸಿಕ್ಕಿದಾಗ ರಾಧಾಕೃಷ್ಣನ್‌ರವರು ಪೃಥ್ವೀರಾಜರಲ್ಲಿಗೆ ಬಂದು, “ಸ್ವಲ್ಪ ಮಾತನಾಡಿ, ನಮ್ಮ ತಲೆ ಬಿಸಿ ಕಡಿಮೆ ಮಾಡಿ” ಎನ್ನುತ್ತಿದ್ದರಂತೆ. ಉರ್ದು ಚುಟುಕ ಗಳನ್ನು ಉದ್ಧರಿಸಿ ಗಂಭೀರ ಸ್ವರದಲ್ಲಿ ಅವರು ಮಾತ ನಾಡುತ್ತಿದ್ದಾಗ ಕೇಳುವುದೇ ಒಂದು ಸಂತೋಷವಾಗುತ್ತಿತ್ತು.

ಇಂಥ ಜನಪ್ರಿಯ ವ್ಯಕ್ತಿ ಅಷ್ಟೇ ಸರಳ, ನಿರಾಡಂಬರ, ಯಾವತ್ತೂ ಖಾದಿಧಾರಿ. ಚೂಡಿದಾರ (ಸುರ್‌ವಾಲ್) ಮತ್ತು ಕುರ್ತಾ (ಜುಬ್ಬ) ಅವರ ಸಾದಾ ಉಡುಪು. ಕೊನೆಗಾಲದ ವರೆಗೂ ತನ್ನ ಹಳೆಯ, ಪ್ರಿಯ ಮಾರಿಸ್ ಮೈನರ್ ಕಾರನ್ನು ಸ್ವತಃ ನಡೆಸುತ್ತಿದ್ದರು. “ದೊಡ್ಡದಾದ, ಒಳ್ಳೆಯ ಹೊಸ ಕಾರು ತೆಗೆದುಕೊಳ್ಳಬಹುದಲ್ಲ” ಎಂದು ಮಿತ್ರರು ಸಲಹೆ ಮಾಡಿದರೆ, ಹತ್ತಿರವಿದ್ದ ಪತ್ನಿಯನ್ನು ತೋರಿಸಿ, “ಜೀವನದುದ್ದಕ್ಕೂ ತನ್ನ ಕಷ್ಟ-ಸುಖದಲ್ಲಿ ಸಹಾಯಕಳಾಗಿ ನನ್ನೊಂದಿಗೆ ನಿಂತ ಈಕೆಯನ್ನು ಈಗ ಮುದಿಯಾದಳೆಂದು ಬಿಟ್ಟುಬಿಡಲೇ?” ಎಂದು ಘೊಳ್ಳನೆ ನಗುತ್ತಿದ್ದರು.

ತನ್ನ ಅಜ್ಜ, ಮಹಾತ್ಮಾ ಗಾಂಧಿ, ವಲ್ಲಭಭಾಯಿ ಪಟೇಲ್ ಮತ್ತು ಮಾಸ್ಟರ್ ತಾರಾಸಿಂಗ್ ಇವರು ತನ್ನ ಜೀವನ ರೂಪಿಸುವುದರಲ್ಲಿ ಅಗಾಧ ಪ್ರಭಾವ ಬೀರಿದ್ದರೆಂದು ಅವರು ಹೇಳುತ್ತಿದ್ದರು. ಹಿಂದು-ಮುಸ್ಲಿಂ ಮೈತ್ರಿಯಲ್ಲಿ ಅವರಿಗೆ ಅಚಲ ವಿಶ್ವಾಸ. ಅವರೊಳಗೆ ಜಗಳ ವೆಂದರೆ ತನ್ನೆರಡೂ ಕಾಲುಗಳು ಕತ್ತರಿಸಿದಂತೆ ಆಗುತ್ತವೆಂದು ದುಃಖಿಸುತ್ತಿದ್ದರು.

ವ್ಯವಹಾರದಲ್ಲಿ ಪೃಥ್ವೀರಾಜರದು ಶಿಸ್ತು, ಸಂಯಮ. ತನ್ನ ಬೇಡಿಕೆ, ಮಹತ್ವ, ಜನಪ್ರಿಯತೆಗಳನ್ನು ಗಣಿಸದೆ ಮಿತ್ರರ ಚಲನಚಿತ್ರಗಳಲ್ಲಿ ಸಂಭಾವನೆಯ ಪರಿವೆಯಿಲ್ಲದೆ ನಟಿಸಿದು ದುಂಟು. ಚಿಕ್ಕಪುಟ್ಟ ಪಾತ್ರವಾದರೂ ಸರಿ.

ಪರಿಪೂರ್ಣ ಕಲಾವಿದ

ಅನೇಕರಿಗೆ ತಿಳಿಯದಿರುವ ಸಂಗತಿಯೆಂದರೆ ಪೃಥ್ವೀರಾಜರು ಒಳ್ಳೆಯ ಸಂಗೀತಕಾರ ಮತ್ತು ಕ್ರೀಡಾಪಟು ಆಗಿದ್ದರು ಎಂಬುದು. ಕ್ರಿಕೆಟ್, ಟೆನಿಸ್, ವಾಲಿಬಾಲ್, ಫುಟ್ ಬಾಲ್, ಯೋಗಾಸನಗಳಲ್ಲಿ ಅವರಿಗೆ ತುಂಬ ಆಸಕ್ತಿ. ಒಳ್ಳೆಯ ಕಬಡ್ಡಿ ಆಟಗಾರ, ಕುಸ್ತಿ ಪಟು. ಹಾರ್ಮೋನಿಯಂ, ಪಿಟೀಲು ಮತ್ತು ಸಿತಾರ್ ಅವರ ಮೆಚ್ಚಿನ ವಾದ್ಯ ಗಳಾಗಿದ್ದವು. ಅವರ ೬೨-೬೩ನೇ ವಯಸ್ಸಿನಲ್ಲಿ ಸಿತಾರ್ ನುಡಿಸಲು ಕಲಿಯುತ್ತಿದ್ದರು. ಅವರು ಸಂಗೀತ ನಾಟಕ ಅಕಾಡೆಮಿಯ ಫೆಲೊ ಆಗಿದ್ದುದು ಅನ್ವರ್ಥಕವಾಗಿತ್ತು.

ಜೀವನ ವೈವಿಧ್ಯಪೂರ್ಣವಾಗಿದ್ದರೆ ಪರ್ಣಕುಟಿಯೂ ಅರಮನೆಯಾಗುತ್ತದೆಯಂತೆ. ಪೃಥ್ವೀರಾಜರ ‘ಜಾನಕಿ ಕುಟೀರ’ ಹಲವು ವಿದ್ವಾಂಸರು, ಕಲಾವಿದರು, ನಾಯಕರಿಂದ ತುಂಬಿದ ಜ್ಞಾನಕೇಂದ್ರವಾಗಿತ್ತು. ಅವರ ಜೀವನ ಸಾಧನೆ ಎಷ್ಟು ವ್ಯಾಪಕ ವಾಗಿತ್ತೆಂದರೆ ಕಾರ್ಮಿಕರ ಮತ್ತು ಮಜೂರರ ಸರ್ವೋದಯದಲ್ಲೂ ಅವರಿಗೆ ಆಸಕ್ತಿ. ಕೇಂದ್ರ ರೈಲ್ವೆ ಕೆಲಸಗಾರರ ಯೂನಿಯನ್ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ವಿಯೆನ್ನಾದಲ್ಲಿ ೧೯೫೧ ರಲ್ಲಿ ನಡೆದ ಜಾಗತಿಕ ಮಜೂರರ ಶಾಂತಿ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಯಾರಿಗೂ ತಿಳಿಯದಂತೆ ಅವರು ಪ್ರತಿ ತಿಂಗಳು ಅನೇಕ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದರು.

ಕುಟುಂಬಕ್ಕೆ ಇಡೀ ಕುಟುಂಬವೇ ಕಲಾವಿದ ರಾಗಿರುವುದು, ಈ ಬೃಹತ್ ಕುಟುಂಬ ಮೂರು ತಲೆಮಾರು ಕಲಾವಿದರಾಗಿಯೇ ಮುಂದುವರಿದಿರುವುದು – ಇದು ಪೃಥ್ವೀರಾಜ ಕುಟುಂಬದ ವೈಶಿಷ್ಟ್ಯ. ಅಂಥ ಕುಟುಂಬ ಇನ್ನೊಂದಿರಲಾರದು. ಅದೇ ದೊಡ್ಡ ದಾಖಲೆ.

ಈ ರೀತಿ ಅವರದು ತುಂಬಿದ ಸಾರ್ಥಕ ಬಾಳು. ಎಲ್ಲೆಲ್ಲೂ ಗೌರವ, ಸನ್ಮಾನ. ತನ್ನ ಬಾಳಲ್ಲೇ ಇದನ್ನು ಅನುಭವಿಸಿದ ಕಲಾವಿದನಿಗಿಂತ ಮಿಗಿಲಾದ ಭಾಗ್ಯವಂತನಿಲ್ಲ.

ಅಭಿನಯಿಸುತ್ತಿರುವಾಗಲೇ ಪ್ರಾಣ ಹೋಗಬೇಕು ಎಂಬ ಅವರ ಕೊನೆಯಾಸೆ ಮಾತ್ರ ಈಡೇರಲಿಲ್ಲ. ರಕ್ತಿದ ಒತ್ತಡ, ಮೂತ್ರಕೋಶದ ತೊಂದರೆ, ಸಿಹಿಮೂತ್ರಗಳಿಂದ ಅವರು ಅತಿ ಶ್ರಮದಿಂದ ಬಳಲಿದರು. ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಮಾಡಿಸಿಕೊಂಡು ಬಂದರು.

ತಮ್ಮ ೬೬ನೆಯ ವಯಸ್ಸಿನಲ್ಲಿ ೧೯೭೨ ರ ಮೇ ೨೯ ರಂದು ಅವರು ತೀರಿಕೊಂಡರು. ಇದಾದ ಎರಡೇ ವಾರಗಳಲ್ಲಿ ಪತ್ನಿ ರಮಾ ಕಾಲವಾದರು. ಜೀವನ-ಮರಣಗಳಲ್ಲೂ ಒಂದಾದ ಅನ್ಯೋನ್ಯ ದಾಂಪತ್ಯ ಅವರದು.

ಕಲಾ ರಾಜ್ಯದಲ್ಲಿ ಹೆಸರಿಗೆ ಅನ್ವರ್ಥಕವಾಗಿ ರಾಜನಂತೆಯೆ ಬಾಳಿದ ಪೃಥ್ವೀರಾಜರ ನೆನಪು ನಮಗೆ ಹೃದಯದ ದೀಪದ ಬೆಳಕಿನಂತೆ ಸ್ಫೂರ್ತಿದಾಯಕ, ಮಾರ್ಗದರ್ಶಕ.