ಪ್ರವೇಶ

ಪ್ರಾಚೀನ ಕರ್ನಾಟಕದ ರಾಜಕೀಯ ಚರಿತ್ರೆ ಮತ್ತು ಸಂಸ್ಕೃತಿಯನ್ನು ನಾವು ಎಷ್ಟೇ ವೈಭವೀಕರಿಸಿದರೂ ಆ ವ್ಯವಸ್ಥೆಯ ಚೌಕಟ್ಟಿನಲ್ಲಿ ಅಮಾನವೀಯ ಘಟನೆಗಳೂ ಜರಗುತ್ತಿದ್ದುದು ಅಷ್ಟೇ ಸತ್ಯವೆಂಬುದನ್ನು ಮರೆಯಬಾರದು. ನಮ್ಮ ಪ್ರಾಚೀನ ರಾಜಕೀಯ ಚರಿತ್ರೆಯನ್ನು ಅವಲೋಕಿಸಿದಾಗ ರಾಜ್ಯ ದಾಹ, ಭೂ ಕಲಹಗಳ ಪರಿಣಾಮವಾಗಿ ಲಕ್ಷಾಂತರ ಜನ ಪ್ರಾಣ ತೆತ್ತ, ಅಮಾಯಕರು ಬಲಿಯಾದ ಪ್ರಸಂಗಗಳು ನಮ್ಮ ಕಣ್ಮುಂದೆ ಸುಳಿಯುತ್ತವೆ. ಇದಕ್ಕೆ ಸಾವಿರಾರು ಶಾಸನಗಳು ಮತ್ತು ನೂರಾರು ಪ್ರತ್ಯಕ್ಷ – ಅಪ್ರತ್ಯಕ್ಷ ಸಾಕ್ಷಿಗಳು ನಮ್ಮೆದುರು ಹರಡಿವೆ. ಎದುರಾಳಿಗಳೊಂದಿಗೆ, ಶತ್ರುಗಳೊಂದಿಗೆ ಹೋರಾಡುವುದು ನಮ್ಮ ಪ್ರಾಚೀನ ಸಾಮಾಜಿಕ ವ್ಯವಸ್ಥೆಯಲ್ಲಿ ಅನಿವಾರ್ಯ ಮೌಲ್ಯವಾಗಿ ಪರಿವರ್ತನೆಗೊಂಡಿದ್ದರೂ ಸಹ ಇದರ ಪರಿಣಾಮ ಭೀಕರವಾಗಿರುತ್ತಿತ್ತು. ಹೋರಾಟಗಳಲ್ಲಿ ಗೆದ್ದ ಸಂಭ್ರಮಕ್ಕಿಂತ ಸೋತು ಸತ್ತವರ ಕುಟುಂಬದ ರೋಧನ ಹೆಚ್ಚಾಗಿರುತ್ತಿತ್ತು. ಆದರೆ ಆಳುವವರ ಪರವಿದ್ದ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ರೋಧನವನ್ನು ಕೇಳಿ, ಸಾಂತ್ವನಗೊಳಿಸುವ ಕರುಣಾ ಹೃದಯವಿರಲಿಲ್ಲ. ಒಂದು ಯುದ್ಧ ನಡೆಯಿತೆಂದರೆ ಕೆಲವರಾದರೂ ವಿಧವೆಯರಾಗುತ್ತಿದ್ದರೆಂದೇ ಹೇಳಬೇಕಾಗುತ್ತದೆ.

ನಮ್ಮ ಪ್ರಾಚೀನ ಯುದ್ಧ ವ್ಯವಸ್ಥೆಯಲ್ಲಿ ವೀರತನದಿಂದ ಹೋರಾಡುವುದು ಮತ್ತು ಪ್ರಾಣವನ್ನು ಲೆಕ್ಕಿಸದೆ ತಮ್ಮವರನ್ನು ರಕ್ಷಿಸುವುದು ಒಂದು ಮೌಲ್ಯವೇ ಆಗಿತ್ತು. ಶತ್ರುಗಳು ದಾಳಿ ಮಾಡಿದಾಗ ಗ್ರಾಮಗಳನ್ನು ದೋಚುತ್ತಿದ್ದುದೇ ಅಲ್ಲದೆ ಕೆಲವು ವೇಳೆ ಸುಡುತ್ತಿದ್ದರು. ಇಷ್ಟೇ ಅಲ್ಲದೆ ಸ್ತ್ರೀಯರನ್ನು ಅಪಮಾನಿಸುವುದು, ದನ – ಕರುಗಳನ್ನು ಅಪಹರಿಸುವುದೂ ಮಾಡುತ್ತಿದ್ದರು. ಇಂತಹ ಸಮಯದಲ್ಲಿ ಅನೇಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಶತ್ರುಗಳೊಂದಿಗೆ ಹೋರಾಡಿ ಆಪತ್ತಿಗೆ ಒಳಗಾದ ಸ್ತ್ರೀಯರನ್ನು ಮತ್ತು ದನಕರುಗಳನ್ನು ರಕ್ಷಿಸುತ್ತಿದ್ದರು. ಹೀಗೆ ರಕ್ಷಣೆ ಮಾಡುವುದು ಅನೇಕರ ಬದುಕಿನ ಆದರ್ಶವಾಗಿತ್ತು. ಹೀಗೆ ರಕ್ಷಣೆ ಮಾಡಲು ಹೋಗಿ ಪ್ರಾಣವನ್ನು ತೆತ್ತರೆ ಸಮಾಜವು ಅವರ ಕುಟುಂಬಕ್ಕೆ ದಾನ – ಧರ್ಮಗಳನ್ನು ನೀಡಿ ಸಹಾಯಕ್ಕೆ ನಿಲ್ಲುತ್ತಿತ್ತು. ಮಡಿದವರನ್ನು ತ್ಯಾಗಿಗಳೆಂದು ಗೌರವಿಸಿ ಅವರ ನೆನಪಿಗೆ ಸ್ಮಾರಕ ಶಿಲೆಗಳನ್ನು ನಿಲ್ಲಿಸುತ್ತಿದ್ದರು. ಇಂತಹ ಸ್ಮಾರಕ ಶಿಲೆಗಳಲ್ಲಿ ಪಾಠ ಮತ್ತು ಶಿಲ್ಪ ಎರಡೂ ಮಾಧ್ಯಮಗಳಲ್ಲಿ ಮಡಿದವರ ಇತಿಹಾಸ, ಅವರ ತ್ಯಾಗ ಮತ್ತು ಆದರ್ಶವನ್ನು ಚಿತ್ರಿಸುತ್ತಿದ್ದರು. ಶಾಸನ ಪ್ರಕಾರಗಳಲ್ಲಿ ಇಂತಹ ಸ್ಮಾರಕ ಶಿಲೆಗಳನ್ನು ವೀರಗಲ್ಲುಗಳೆಂದು ವಿಂಗಡಿಸಿ ಮಡಿದವರ ವೀರತನಕ್ಕೆ ಮನ್ನಣೆಯನ್ನು ನೀಡಿದ್ದೇವೆ. ಈ ವೀರಗಲ್ಲುಗಳಲ್ಲಿ ದನ – ಕರುಗಳ ರಕ್ಷಣೆಗಾಗಿ ಮಡಿದವರ ನೆನಪಿನ ಸ್ಮಾರಕ ಶಿಲೆಗಳನ್ನು ತುಱುಗೊಳ್ ವೀರಗಲ್ಲುಗಳೆಂದು, ಗ್ರಾಮಗಳ ರಕ್ಷಣೆಗಾಗಿ ಹೋರಾಡಿ ಮಡಿದವರ ಸ್ಮಾರಕ ಶಿಲೆಗಳನ್ನು ಊರೞಿವು ವೀರಗಲ್ಲುಗಳೆಂದು, ಸ್ತ್ರೀಯರ ರಕ್ಷಣೆಗಾಗಿ ಹೋರಾಡಿ ಮಡಿದವರ ನೆನಪಿನ ಸ್ಮಾರಕ ಶಿಲೆಗಳನ್ನು ಪೆಣ್ಬುಯ್ಯಲ್ ವೀರಗಲ್ಲುಗಳೆಂದು ಅಧ್ಯಯನ ಕ್ರಮದಲ್ಲಿ ವಿಂಗಡಿಸಲಾಗಿದೆ.

ಕನ್ನಡದ ಪ್ರಸಿದ್ಧ ಕವಿ ರನ್ನನು ತನ್ನ ಕಾವ್ಯದ ಒಂದು ಪ್ರಸಂಗದಲ್ಲಿ ಈ ಕೆಳಗಿನಂತೆ ಹೇಳುತ್ತಾನೆ.

ತುಱೆಗೊಳೋಳ್ ಪೆಣ್ಬುಯ್ಯಲೊ
ಳೆೞಿವೆಸದೊಳ್ ನಂಟನೆಡಱೊಳೂರೞಿವಿನೊಳಂ
ತಱಿಸಂದು ಗಂಡುತನಮನೆ
ನೆಱುಪದವಂ ಗಂಡನಲ್ಲನೆಂತುಂ ಷಂಡಂ [1]

ಎಂದು ಹೇಳುತ್ತಾನೆ. ತುಱುಗೊಳ್, ಪೆಣ್ಬುಯ್ಯಲ್, ಎಱೆವೆಸ, ನೆಂಟನೆಡಱು, ಊರೞಿವು ಪ್ರಸಂಗಗಳಲ್ಲಿ ಹೋರಾಡದವನು ಷಂಡನೆಂಬ ಮಾತು ಆ ಕಾಲದಲ್ಲಿ ಮೇಲ್ಕಂಡ ಘಟನೆಗಳಿಗೆ ಸಮಾಜ ಹೇಗೆ ಸ್ಪಂದಿಸುತ್ತಿತ್ತೆಂದು ತಿಳಿದು ಬರುತ್ತದೆ. ಇಂತಹ ಪ್ರಸಂಗಗಳಲ್ಲಿ ಹೋರಾಡದೆ ಇರುವವನು ಗಂಡಸೇ ಅಲ್ಲವೆಂಬ ಕಟು ಭಾವನೆಯು ಆ ಪ್ರಸಂಗಗಳ ಪರಿಣಾಮ ಸಮಾಜದ ಮೇಲೆ ಭೀಕರವಾಗಿರುತ್ತಿತ್ತೆಂಬ ವಾಸ್ತವ ಸತ್ಯವನ್ನೂ ಎತ್ತಿ ತೋರಿಸುತ್ತದೆ.

ಪೆಣ್ಬುಯ್ಯಲ್ ಶಬ್ದದ ಅರ್ಥ

ಪೆಣ್ಬುಯ್ಯಲ್ ಎಂಬ ಪದವು ಪೆಣ್ + ಪುಯ್ಯಲ್ ಎಂಬ ಎರಡು ಶಬ್ದಗಳಿಂದ ಕೂಡಿದ್ದಾಗಿದ್ದು ಹೆಣ್ಣಿನ ಕೂಗು, ಹೆಣ್ಣಿನ ಆಕ್ರಂದನ ಎಂಬುದನ್ನು ಹೇಳುತ್ತದೆ. ಆದರೆ ಯಾವ ಶಾಸನಗಳಲ್ಲೂ ಪೆಣ್ಬುಯ್ಯಲ್ ಎಂಬ ಪದ ಬಳಕೆಯಾಗಿಲ್ಲ. ಇದರ ಬದಲಿಗೆ ಪೆಣ್ಡಿರುಡೆಯುರ್ಚಿ, ಪೆಣ್ಡಿರ ಉಡೆ ಉರ್ಚ್ಚಲು, ಉಡೆ ಉರ್ಚ್ಚಿ, ಪೆಣ್ಡಿರ ಪೆರಗಿಕ್ಕಿ, ಹೆಂಡಿರುಡೆಯುರ್ಚ್ಚಿ ಎಂಬ ಶಬ್ದಗಳು ಬಳಕೆಯಾಗಿವೆ. ಕೆಲವು ಶಾಸನಗಳಲ್ಲಿ ಹೆಣ್ಣು ಸೆರೆಯನ್ನು ಬಿಡಿಸಿದನು ಎಂಬ ಶಬ್ದವೂ ಬಳಕೆಯಾಗಿದೆ. ಉಡೆ ಉರ್ಚ್ಚು ಎಂದರೆ ಉಟ್ಟ ಬಟ್ಟೆಯನ್ನು ಸೆಳೆ, ನಗ್ನ ಮಾಡು ಎಂದು ಅರ್ಥ. ವಿದ್ವಾಂಸರೊಬ್ಬರು ಈ ಶಬ್ದಕ್ಕೆ ವಿಧವೆಯನ್ನಾಗಿ ಮಾಡುವುದೆಂದೂ ಅಥೈಸಿದ್ದಾರೆ.[2] ಆದರೆ ಕೆಲವು ಪೆಣ್ಬುಯ್ಯಲ್ ವೀರಗಲ್ಲುಗಳ ಶಿಲ್ಪಗಳಲ್ಲಿ ಸ್ತ್ರೀಯರು ತಮ್ಮ ಮಕ್ಕಳೊಂದಿಗೆ ನಗ್ನರಾಗಿ, ಕೆದರಿದ ಕೇಶದೊಂದಿಗೆ ನಿಂತಿರುವುದನ್ನು ಮತ್ತು ನಾಚಿಕೆ – ಅವಮಾನದಿಂದ ತಮ್ಮ ಮರ್ಮಾಂಗವನ್ನು ಕೈಗಳಿಂದ ಮುಚ್ಚಿಕೊಂಡು ನಿಂತಿರುವ ದೃಶ್ಯಗಳನ್ನು ಗಮನಿಸಿದರೆ ಶತ್ರುಗಳು ಅವರನ್ನು ಕೇವಲ ವಿಧವೆಯರನ್ನಾಗಿಸುತ್ತಿದ್ದುದೇ ಅಲ್ಲದೆ ಅವರ ಮೇಲೆ ಅತ್ಯಾಚಾರ ಮಾಡುವುದು ಮತ್ತು ಲೈಂಗಿಕ ಕಿರುಕುಳಗಳನ್ನೂ ನೀಡುತ್ತಿದ್ದರೆಂಬ ಕಠೋರ ಸತ್ಯ ಅರಿವಾಗುತ್ತದೆ. ತುರುಗಳನ್ನು ಕದಿಯಲು ಅಥವಾ ಊರನ್ನು ಕೊಳ್ಳೆ ಹೊಡೆಯಲು ಬಂದವರು ಆ ಊರಿನ ಹೆಂಗಸರ ವಸ್ತ್ರಗಳಿಗೆ ಕೈ ಹಾಕುತ್ತಿದ್ದರು. ಹೆಂಗಸರ ವಸ್ತ್ರಗಳಿಗೆ ಕೈ ಹಾಕುವುದು ಒಂದು ಬಗೆಯ ಸವಾಲು ಇದ್ದಂತೆ. ತಾವು ನಿರ್ಣಾಯಕವಾಗಿ ಸೋಲಿಸಿದ್ದಕ್ಕೆ ಅದು ಸ್ಪಷ್ಟವಾದ ಸಂಕೇತವೂ ಹೌದು.[3] ಅಥವಾ ಸೀರೆ ಸೆಳೆಯುವುದರ ಮೂಲಕ ಯುದ್ಧವನ್ನು ಸಾರುತ್ತಿದ್ದರು. ಇಂಥ ಪ್ರಸಂಗಗಳಲ್ಲಿ ಅಲಿಪ್ತನಾಗಿರಕೂಡದು ಎಂಬ ಮೌಲ್ಯಕ್ಕೆ ಕಟ್ಟು ಬಿದ್ದು ಪ್ರಾಚೀನರು ಸ್ತ್ರೀ ವಿಮೋಚನೆಗೆ ಹೋರಾಡುತ್ತಿದ್ದರು.[4]

ಕಾವ್ಯಗಳಲ್ಲಿ ಪೆಣ್ಬುಯ್ಯಲ್

ಅನೇಕ ಕನ್ನಡ ಕಾವ್ಯಗಳಲ್ಲೂ ಪೆಣ್ಬುಯ್ಯಲಿನ ಪ್ರಸಂಗಗಳಿವೆ. ರಾವಣನು ಸೀತೆಯನ್ನು ಅಪಹರಿಸಿದಾಗ ‘ಸತಿ ಪುಯ್ಯಲ್ಚಿದಪಳ್ ರಘೂದ್ವಹ ಕುಲಸ್ತ್ರೀ ಸೀತೆ ಪೆಣ್ಬುಯ್ಯಲಂ ಶ್ರುತಿ ಕಯ್ಕೊಂಡುದು ಕೇಳ್ದಿದಂ ತೆವಳೆಗಂಡಂದೆನ್ನ ವಿಖ್ಯಾತಿ ದೂಷಿತಮಕ್ಕುಂ ಸೆಱಗೊಂಡನಂ ಕದನದೊಳ್ ಬೆಂಕೊಂಡು ಬಾಹಾಬಲೋನ್ನತಿಯಂ ಬೀಱುವೆನೆಂದು ಘೂರ್ಮಿಸಿದನೇಂ ಗಂಡಂ ಪರಿಚ್ಚೇದಿಯೋ ಅಂತು ಪರಿಚ್ಛೇದಿಸಿ ರತ್ನಜಟಿ ಬದ್ಧ ಭ್ರುಕುಟಿ ದಶಾನನ ವಿಮಾಕ್ಕಡ್ಡಂ ಬಂದು …. ಎಂದು ರಾಮಚಂದ್ರ ಚರಿತ ಪುರಾಣದಲ್ಲಿ ಕವಿ ವರ್ಣಿಸಿರುವನು. ಶಾಸನಗಳಲ್ಲಿ ಅಂತರ್ಗತವಾದ ಪೆಣ್ಬುಯ್ಯಲ್‌ನ ಅರ್ಥ ಇಲ್ಲಿಯೂ ಮೂಡಿದೆ. [5]

ಅಗ್ಗಳದೇವನು ತನ್ನ ಕಾವ್ಯದಲ್ಲಿ ಪೆಣ್ಬುಯ್ಯಲಿನ ಪ್ರಸಂಗಗಳನ್ನು ಈ ಕೆಳಗಿನಂತೆ ಚಿತ್ರಿಸಿದ್ದಾನೆ.

“….ಮತ್ತೊಂದು ಸುರತಕರಣ ಚಿತ್ರ ಸಂದರ್ಭವಪ್ಪ ಗರ್ಭಗೃಹದೊಳಗೆ ನಿರ್ಭರ ಪ್ರಣಯ ಪರವಶತೆಯಿಂ ನೆರೆವ ಕಾದಲರ ಕಾಮಕೇಳೀ ಕೂಜಿತದೊಳ್ ಕೂಡಿ ಕಿವಿಯಿಂ ಪಳಂಚಲೆವ ಮಂಚದ ಶಕುನಿಯಂಚೆಯ ಗಿಳಿಯ ಪುರುಳಿಯ ಪಾರಿವದ ಕೊರಲುಲಿಯ ದಳವುಳವನಾಲಿಸಿ ಪೆಣ್ಬುಯ್ಯಲನಾರಯ್ಯ ದೋಸರಿಪುದೆನ್ನ ಗಂಡುಗೂಸುತನಕ್ಕೆ ಪಸುಗೆಯಲ್ತೆಂದು ಪೀಠಮರ್ದಕಂ ಬೆರಸು ಪರಿದು ಗವಾಕ್ಷೆ ನಿಕ್ಷಿಪ್ತಾಕ್ಷನಾಗಿ ನೋೞ್ಪನ್ನೆಗಂ…. ‘ ಎಂದಿರುವನು.[6] ಗಿಳಿಯಂತೆ, ಸಾರಿಕೆಯಂತೆ, ಪಾರಿವಾಳದಂತೆ ಚೀತ್ಕಾರ ಮಾಡುವ ಹೆಣ್ಣಿನ ಕೊರಳುಲಿಯ ಹುಯಿಲನ್ನು ಕೇಳಿ ‘ಹೆಣ್ಣಿನ ಹುಯಿಲನ್ನು ಕೇಳಿ ವಿಚಾರಿಸದೆ ಹೋಗುವುದು ನನ್ನ ಗಂಡಸುತನಕ್ಕೆ ಭೂಷಣವಲ್ಲ ಎಂದು ಸಹಾಯಕನಾದ ಪೀಠಮರ್ದಕನೊಡನೆ ಹೋಗಿ ಗವಾಕ್ಷಿಯಲ್ಲಿ ನೋಡುವಾಗ… ‘ ಎಂದು ಇದರ ಅರ್ಥ. ಆದರೆ ಈ ಪೆಣ್ಬುಯ್ಯಲ್ ಸುರತದ ಆನಂದದ ಚೀತ್ಕಾರ. ವೀರಗಲ್ಲುಗಳಲ್ಲಿ ಕಾಣುವ ಅಸಹಾಯಕ ಹೆಣ್ಣುಗಳ ಪ್ರಾಣಾಂತಕ ಆಕ್ರಂದನವಲ್ಲ.

ಅನಂತನಾಥ ಪುರಾಣದಲ್ಲಿ ಪೆಣ್ಬುಯ್ಯಲು ಪ್ರಸಂಗ ಹೀಗಿದೆ.

ಇವನಂ ವಂಚಿಸಿ ಚಂಡಶಾಸನನಿವಂ ಕಳ್ದೊಯ್ದಪಂ ನಾಥನಂ
ಗನೆಯಿಂದೆನ್ನ ಸುನಂದೆಯಂ ಸುಭಟರಣ್ಮಿಂ ವೀರರಡ್ಡೈಸಿ ಮೆ
ನ್ನಿನೆಯಂಗೆಯ್ದಿಸಿ ಮೂರನಾಡಜನಮೀ ಪೆಣ್ಬುಯ್ಯಲಂ ಹಾಸುಷೇ
ಣನೃಪ ಹಾನೃಪ ನೀರನೆಂದಬಲೆ ಬಾಯ್ವಿಟ್ಟೞ್ತು ಪುಯ್ಯಲ್ಚಿದಳ್ [7]

ಇದೇ ಪ್ರಸಂಗವನ್ನು ಅನಂತನಾಥ ಚರಿತೆಯಲ್ಲಿ ಹೀಗೆ ವರ್ಣಿಸಿದೆ.

ಗಂಡನ ವಂಚಿಸಿ ಚಂಡಶಾಸನನನಿವ ಕೊಂಡೊಯ್ದಪನೆಂದು ಕನಲಿ
ಮಂಡೆಗೆ ಕೈಯಿಕ್ಕಿ ಪುಯ್ಯಲ್ಚಿದಳದ ಮಂಡಲದೊಳು ನೋಡೆಚೋದ್ಯಂ
ವಸುಷೇಣ ನಂಗನೆಯೆನಿಪ ಸುನಂದೆಯನಸಹಾಯ ಚಂಡಶಾಸನನು
ವಸುಧೆಯೊಳ್ ಕದ್ದು ಕೊಂಡೊಯ್ದಪನೆಂದಾಗ ಶಶಿಮುಖಿ ಪುಯ್ಯಲ್ಚಿದಳ್
ದೆಸೆಯಾಳ್ವರು ದಿವಿಜರು ನಾಗವೆಂತರರೆಸೆವ ಜ್ಯೋತಿಷ್ಕ ಮಾನವರು
ಅಸುವ ಕಾಯ್ದೆನ್ನ ರಕ್ಷಿಸುವುದೆಂದಾ ದೇವಿಯುಸುರಿ ಪುಯ್ಯಲ ಮಾಡಿದಳು
ವೀರರಡ್ಡೈಸಿ ಭಟರು ಮಾರ್ಕೊಳ್ಳಿರೆಂದೋರಣದಿಂದಾ ದೇವಿ
ಊರೂರ ನಾಡಜನಕೆ ಪುಯ್ಯಲಿಟ್ಟಳು ಕಾರುಣ್ಯವತಿ ಶೋಕದೊಳು [8]

ಎಂದು ವರ್ಣಿಸಲಾಗಿದೆ.

ಮಲ್ಲಿನಾಥ ಪುರಾಣದ ಒಂದು ಪ್ರಸಂಗದಲ್ಲಿ ರಾಜನು ವೇಶ್ಯಾವಾಟಿಕೆಗೆ ಬಂದಾಗ ಪೆಣ್ಬುಯ್ಯಲನ್ನು ಕೇಳುತ್ತಾನೆ. ಆಗ ಸಹಚರ ವಿದೂಷಕನು ‘ದೇವ, ನಿಜ ಕ್ಷತ್ರಿಯ ಪವಿತ್ರನೆಂಬ ಪೆರ್ಮೆಗೆ ಪೆಣ್ಬುಯ್ಯಲನುಪೇಕ್ಷಿಸುವುದು ಉಚಿತಮಲ್ತೆಂದು ಹೇಳುತ್ತಾನೆ.[9] ಚಂದ್ರ ಪ್ರಭ ಚರಿತ್ರೆಯಲ್ಲಿಯೂ ಕವಿ ಇದೇ ಭಾವವನ್ನು ಸ್ಫುರಿಸುವ ಚಿತ್ರಣ ನೀಡಿದ್ದಾನೆ.[10] ಸ್ತ್ರೀಯರು ಪುಯ್ಯಲಿಡುತ್ತಿದ್ದರು ಎಂಬ ಮಾತನ್ನು ನೇಮಿನಾಥ ಪುರಾಣದಲ್ಲಿ ಎರಡು ಪ್ರಸಂಗಗಳಲ್ಲಿ ವರ್ಣಿಸಲಾಗಿದೆ.[11]

ಮೇಲ್ಕಂಡ ಎಲ್ಲ ಕಾವ್ಯ ಪ್ರಸಂಗಗಳನ್ನು ಗಮನಿಸಿದರೆ ಶಾಸನಗಳಲ್ಲಿನ ಪೆಣ್ಬುಯ್ಯಲ್‌ಗೂ, ಕಾವ್ಯಗಳಲ್ಲಿನ ಪೆಣ್ಬುಯ್ಯಲ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಎರಡೂ ಹೆಣ್ಣಿನ ಕೂಗೇ ಆದರೂ ಸಂದರ್ಭಗಳು ಬೇರೆ ಬೇರೆಯಾಗಿವೆ. ಕಾವ್ಯಗಳಲ್ಲಿ ಸುಖದ ಪರಾಕಾಷ್ಠೆ ಮತ್ತು ಭಯದ ಕೂಗುಗಳಾದರೆ ಶಾಸನಗಳಲ್ಲಿ ಮಾನ ರಕ್ಷಣೆಯ ಮತ್ತು ಪ್ರಾಣ ರಕ್ಷಣೆಯ ಕೂಗಾಗಿದೆ. ಉಗ್ರತೆ ಮತ್ತು ಭೀಕರತೆಯ ಪರಿಣಾಮಗಳಿಂದ ಶಾಸನಗಳಲ್ಲಿನ ಪೆಣ್ಬುಯ್ಯಲ್ ಪದವು ಹೆಚ್ಚು ಗಂಭೀರವಾಗುತ್ತದೆ.

ಪೆಣ್ಬುಯ್ಯಲ್ ಶಾಸನಗಳು

ಕನ್ನಡದಲ್ಲಿ ಈವರೆಗೆ ಪೆಣ್ಬುಯ್ಯಲ್‌ಗೆ ಸಂಬಂಧಿಸಿದ ೪೬ ಶಾಸನಗಳು ಲಭ್ಯವಾಗಿವೆ. ಕಾಲದ ದೃಷ್ಟಿಯಿಂದ ಪ್ರಾಚೀನವಾದ ಶಾಸನವೆಂದರೆ ಸೊರಬ ತಾಲೂಕಿನ ಮನೆ ಮನೆ ಗ್ರಾಮದ ಶಾಸನವಾಗಿದೆ. ರಾಷ್ಟ್ರಕೂಟರ ಅವಧಿಯ ಈ ಶಾಸನವು ಸುಮಾರು ಕ್ರಿ. ಶ. ೮೦೦ಕ್ಕೆ ಸೇರಿದ್ದು, ಅಙ್ಗರನೆಂಬ ವೀರನು ಊರಳಿವಿನ ಸಮಯದಲ್ಲಿ ಸ್ತ್ರೀಯರ ಮಾನಭಂಗಕ್ಕೆ ಪ್ರಯತ್ನಿಸಿದ ಶತ್ರುಗಳ ವಿರುದ್ಧ ಹೋರಾಡಿ ಮಡಿಯುತ್ತಾನೆ. ಗ್ರಾಮಸ್ಥರು ಅವನ ನೆನಪಿಗೆ ಶಿಲಾಶಾಸನವನ್ನು ನೆಡಿಸುವರು. ಇದನ್ನು ಬರೆದವನು ಮಲಗಾಱರ ಕುನ್ದವಾಸಿಯ ಮಗ ಮರಮ್ಮನೆಂದು ಶಾಸನದಲ್ಲಿದ್ದು ಈ ದಾನವನ್ನು ಕೆಡಿಸಿದವನು ಪಂಚಮಹಾಪಾತಕನೆಂದು ಹೇಳುತ್ತದೆ. ಶಾಸನದ ಭಾಷೆ ಅಶುದ್ಧವಾಗಿದ್ದು ಅಲ್ಲಲ್ಲಿ ತ್ರುಟಿತವಾಗಿರುವುದರಿಂದ ಹೆಚ್ಚಿನ ವಿವರ ಸ್ಪಷ್ಟವಿಲ್ಲ.[12] ಶತ್ರುಗಳು ‘…. ಪೆಣ್ದಿಕ್ಕಿಱು ಮಂಕ್ಕಾಳಾ ಉದುಗುಱೆಯನುೞ್ಚುಕೊಳ್ವ… ಸಮಯದಲ್ಲಿ ಅಙ್ಗರನು ಹೋರಾಡಿ ಮಡಿದನೆಂದಿದೆ. ಹೆಣ್ಣುಮಕ್ಕಳ ಬಟ್ಟೆಯನ್ನು ಸೆಳೆಯುವಾಗ ಎಂದರೆ ಮಾನಭಂಗಕ್ಕೆ ಪ್ರಯತ್ನಿಸುವಾಗ ಎಂದು ಅರ್ಥೈಸಬೇಕಾಗುತ್ತದೆ. ಮಾನಭಂಗಕ್ಕೆ ಒಳಗಾಗುತ್ತಿದ್ದವರು ಯಾವ ವಯಸ್ಸಿನವರಾದರೂ ಆಗಿದ್ದಿರಬಹುದು. ಕೋಗೋಡಿನ ವೀರಗಲ್ಲಿನಲ್ಲಿ ಕೋಗೋಡಿನ ಸಿವರಗಾವುಂಡನ ತಮ್ಮನಾದ ರಾಜಯ್ಯನ ಮಗನಾದ ಮಾಚನು ತಾಯಿಯ ಉಡೆ ಉರ್ಚ್ಚುವ ಸಮಯದಲ್ಲಿ ಹೋರಾಡಿ ಸಾಯುತ್ತಾನೆ. ಇಲ್ಲಿಯ ತಾಯಿ ಎಂಬ ಶಬ್ದ ಸ್ವಂತ ತಾಯಿಯನ್ನು ಸೂಚಿಸುತ್ತದೆಯೊ ಅಥವಾ ಇತರ ಸ್ತ್ರೀಯರನ್ನೂ ಸೂಚಿಸುತ್ತದೆಯೋ ಹೇಳುವುದು ಕಷ್ಟ. ಈ ವೀರಗಲ್ಲಿನಲ್ಲಿ ಊರೞಿವು ಮತ್ತು ತುಱುಗೊಳ್ ಎರಡೂ ಕ್ರಿಯೆಗಳು ನಡೆದ ವಿಷಯವಿದೆ. ಇದು ದಾಳಿಯ ಬಹು ಪರಿಣಾಮಗಳನ್ನು ಸೂಚಿಸುತ್ತದೆ.[13]

ಊರೞಿವಿನ ಸಮಯದಲ್ಲೇ ಹೆಚ್ಚು ಉಡೆಉರ್ಚ್ಚುವ ಪ್ರಸಂಗಗಳಾಗುತ್ತಿದ್ದವು. ಕಾರಣ ಗ್ರಾಮ – ಗ್ರಾಮಗಳ ನಡುವಿನ, ಕುಟುಂಬ – ಕುಟುಂಬಗಳ ನಡುವಿನ ದ್ವೇಷದಲ್ಲಿ ವ್ಯಕ್ತಿಗತ ದ್ವೇಷ ಹೆಚ್ಚಾಗಿರುತ್ತಿತ್ತು. ಇದು ತೀರ ವೈಯಕ್ತಿಕ ನೆಲೆಗೂ ತಲುಪಿ ಶತ್ರುಗಳ ಹೆಂಡತಿಯರ ಮಾನಭಂಗ ಮತ್ತು ಉಡೆಉರ್ಚ್ಚುವ ಪ್ರಸಂಗಗಳು ನಡೆಯುತ್ತಿದ್ದವು.

ಶತ್ರುಗಳು ಬಯಲು ನಾಡಿಗೆ ಬಂದು ಆಲತೂರು ಗ್ರಾಮವನ್ನು ಸೂರೆ ಮಾಡಿ, ಹೆಣ್ಣುಗಳ ಉಡೆಉರ್ಚ್ಚಿದಾಗ ಇದನ್ನು ಸಹಿಸದ ಅಳಗೆಯರ ಲಕ್ಷಣಯ್ಯನು ಹೋರಾಡಿ ಮಡಿಯುತ್ತಾನೆ.[14] ಬೀರತೂರ ಮಹಾರಾಜ ಗಾಮುಣ್ಡನು ಭರ್ತೂರನ್ನು ಸೂರೆ ಮಾಡಿ, ಹೆಣ್ಣುಗಳ ಉಡೆಉರ್ಚ್ಚುವಾಗ ನಿಭೞ್ಕ ಮತ್ತು ಇತರ ಹದಿನೈದು ಜನರು ಹೋರಾಡಿ ಮಡಿದರೆಂದು ಒಂದು ಶಾಸನ ಉಲ್ಲೇಖಿಸುತ್ತದೆ. ‘ಒಡನೆ ಸತ್ತರು ಪದಿನಯಿದು ಮಾನಿಸರು’ ಎಂದು ಶಾಸನ ಹೇಳುತ್ತದೆ. [15] ಅಂದರೆ ಹೋರಾಟದ ಸ್ಥಳದಲ್ಲೇ ಸತ್ತರೆಂದು ಇದರ ಅರ್ಥ. ಬೀರೇದೇವರಗುಡ್ಲದ ಪಲ್ಲವರ ಕಾಲದ ಶಾಸನದಲ್ಲೂ ಊರೞಿವಿನ ಸಮಯದಲ್ಲಿ ಹೆಂಗಸರ ಉಡೆಉರ್ಚ್ಚಲಾಯಿತೆಂಬ ವಿಷಯವಿದೆ.[16] ತಾವರೆಕೆರೆ ಗ್ರಾಮದ ನೊಳಂಬರ ಕಾಲದ ವೀರಗಲ್ಲಿನಲ್ಲಿ ಸ್ತ್ರೀಯರ ಮಾನಭಂಗ ಮತ್ತು ತುರುಗಳ ಅಪಹರಣದ ಸಮಯದಲ್ಲಿ ಮಾಗರಯ್ಯ ಪಣ್ನಿ ಎಂಬುವನು ಹೋರಾಡಿ ಮಡಿಯುತ್ತಾನೆ.[17] ಇದೇ ವಿಷಯವನ್ನೊಳಗೊಂಡ ಮತ್ತೊಂದು ವೀರಗಲ್ಲು ಇದೇ ಸ್ಥಳದಲ್ಲಿದೆ. ಆದರೆ ಹೋರಾಡಿ ಮಡಿದವನು ಮಲ್ಲಿಯೂರ ಭಾಮಯ್ಯನಾಗಿದ್ದಾನೆ.[18] ಎಡವಯ್ಯನೆಂಬುವನು ಶತ್ರುಗಳು ಪೆಣ್ಡೆರುಡೆಯುರ್ಚ್ಚುವಾಗ ಮತ್ತು ತುಱುಗಳನ್ನು ಅಪಹರಿಸುವಾಗ ಹೋರಾಡಿ ಸಾಯುತ್ತಾನೆ. ಇದೇ ಸಮಯದಲ್ಲಿ ಇವರ ಮಗನೂ ಹೋರಾಡಿ ಸಾಯುತ್ತಾನೆ. ಪೆಣ್ಡಿರುಡೆಯುರ್ಚ್ಚುವ ಗಲಾಟೆಯನ್ನು ಮತ್ತು ಸ್ತ್ರೀಯರ ಆಕ್ರಂದನವನ್ನು ಕೇಳಿ ಇವನು ಹೋರಾಡಿದನೆಂದಿದೆ.[19] ಚೋಳರ ಒಂದು ಶಾಸನದಲ್ಲಿ ಶತ್ರುಗಳು ಬೆಳಗಟ್ಟೂರು ಗ್ರಾಮವನ್ನು ಸೂರೆ ಮಾಡಿ ದನಗಳನ್ನು ಅಪಹರಿಸಿ, ಹೆಣ್ಣು ಮಕ್ಕಳ ಮಾನಭಂಗ ಮಾಡುವಾಗ ಎಱುಯಗಾವುಣ್ಡನೆಂಬುವನು ಹೋರಾಡಿ ಮಡಿಯುತ್ತಾನೆ.[20] ಜೋಳರಾಜನ ಅವಧಿಯ ಒಂದು ವೀರಗಲ್ಲಿನಲ್ಲಿ ಆಷಾಡ ಮಾಸದ ಅಮಾವಾಸ್ಯೆ ಕತ್ತಲಿನಲ್ಲಿ ತಿಲುಗರ ಮಾರಿ ಚಂಗಾಳ್ವನು ತನ್ನ ತಮ್ಮಂದಿರೊಡನೆ ಕೂಡಿ ತುಱುಗಳನ್ನು, ಹೆಣ್ಣುಗಳನ್ನು ಸೆರೆ ಹಿಡಿಯುತ್ತಾನೆ. ಆಗ ಒಳಿಗಾಗಯ್ಯ ರಾಮಗಂ ಬಾಗ್ಗುಳಿ ಸಿರಿಯಣ್ಣನು ಆ ಚಂಗಾಳ್ವನೊಡನೆ ಹೋರಾಡಿ ದನಗಳನ್ನು ಮತ್ತು ಸ್ತ್ರೀಯರನ್ನು ಹಿಂದಿರುಗಿಸಿ ಸಾವನ್ನಪ್ಪುತ್ತಾನೆ. ಇದೇ ಹೋರಾಟದಲ್ಲಿ ಸಿರಿಯಮ್ಮನ ಮಗ ಮುದ್ದಯ್ಯನೆಂಬುವನೂ ಹೋರಾಡಿ ಸಾಯುತ್ತಾನೆ. ಇವರಿಗೂ ಪ್ರತ್ಯೇಕ ವೀರಗಲ್ಲನ್ನು ನಿಲ್ಲಿಸಲಾಗಿದೆ.[21] ಕಲ್ಯಾಣ ಚಾಲುಕ್ಯ ಅರಸ ಆಹವಮಲ್ಲದೇವನ ಅವಧಿಯಲ್ಲಿ ಬನವಾಸಿ ಹನ್ನೆರಡು ಸಾವಿರವನ್ನು ಬಳ್ಳಿಗಾವಿಯಿಂದ ಗಂಗ ಪೆರ್ಮಾನಡಿಯು ಆಳುತ್ತಿರುತ್ತಾನೆ. ಕ್ರಿ. ಶ. ೧೦೫೮ರಲ್ಲಿ ಇವನ ಮಹಾಮಂತ್ರಿಯಾದ ಪೆರ್ಗ್ಗಡೆ ನಾರಣಯ್ಯನ ಕೈಕೆಳಗೆ ಅಡಿಗಟ್ಟೆಯ ಗೊಗ್ಗಿಸೆಟ್ಟಿಯ ಮಗನಾದ ಮಾಚಯ್ಯನು ಊರ ಗೌಡಿಕೆಯನ್ನು ಮಾಡುತ್ತಿರುತ್ತಾನೆ. ಒಂದು ದಿನ ಬೇಡರ ಗುಂಪು ಮಡಿಯಂಗೇರಿಯನ್ನು ಇಱಿದು, ತುಱುಗಳನ್ನು ಕೊಂಡು ಹೆಂಗಸರ ಉಡೆ ಉರ್ಚ್ಚಿದರೆಂಬ ಕೂಗನ್ನು ಕೇಳಿ ತಕ್ಷಣ ಅಲ್ಲಿಗೆ ಹೋಗಿ ಬೆಳಗವತ್ತಿಯ ಸಮೀಪ ಶತ್ರುಗಳನ್ನು ತಡೆದು, ತುಱುಗಳನ್ನು ಹಿಂದಿರುಗಿಸಿ, ಅನೇಕರನ್ನು ಕೊಂದು ತಾನೂ ಸಾಯುತ್ತಾನೆ. ಆಗ ಇವನ ಅಣ್ಣ ಚಿಟ್ಟಗಾವುಂಡ, ಸತ್ತ ಮಾಚಗಾವುಂಡನ ಹೆಂಡತಿ ಚಾಗಿಯಬ್ಬೆ, ಇವಳ ಮಗ ನಾಲಯ್ಯರು ಕೂಡಿ ಸತ್ತವನ ನೆನಪಿಗಾಗಿ ಬ್ರಾಹ್ಮಣರಿಗೆ ಭೂಮಿಯನ್ನು ದಾನ ನೀಡುತ್ತಾರೆ.[22] ಸತ್ತವನ ಹೆಂಡತಿ ಮಹಾಸತಿಯಾಗದೆ ತನ್ನ ಕುಟುಂಬದವರೊಡನೆ ಕೂಡಿ ಮಡಿದ ಗಂಡನ ನೆನಪಿಗಾಗಿ ಬ್ರಾಹ್ಮಣರಿಗೆ ಭೂಮಿ ದಾನ ನೀಡಿದ ವಿಷಯ ಈ ಶಾಸನದಿಂದ ತಿಳಿಯುತ್ತದೆ. ಇದರಿಂದ ಕರ್ನಾಟಕದಲ್ಲಿ ಮಹಾಸತಿ ಆಚರಣೆ ಐಚ್ಛಿಕವಾಗಿತ್ತೆಂಬ ಮಾತಿಗೆ ಬಲವುಂಟಾಗುತ್ತದೆ. ಕ್ರಿ. ಶ. ೧೦೬೪ರ ಶಾಸನವೊಂದರಲ್ಲಿ ಹೊನ್ನಾಳಿಯನ್ನು ಇಱಿದು, ತುಱುಗಳನ್ನು ಕೊಂಡು, ಪೆಣ್ಡಿರುಡೆಯನುರ್ಚುವಾಗ ನಾಗಿಲ ಮಾಳಯ್ಯನು ಅಡ್ಡ ಹೋಗಿ ಹೋರಾಡಿ ಸಾಯುತ್ತಾನೆ.[23] ಕ್ರಿ. ಶ. ೧೧೧೬ರಲ್ಲಿ ಶತ್ರುಗಳು ನಾಗರಖಂಡ ಎಪ್ಪತ್ತರೊಳಗಣ ಹರುವ ತೆಪ್ಪವನ್ನು ಇಱಿದು, ಪೆಣ್ಣಿರ ಉಡೆಉರ್ಚ್ಛಿದಾಗ ಈ ನಾಡಿನ ಅರಸ ಕುಳಿಯತೆಪ್ಪದ ಮಲ್ಲಗಾವುಂಡನ ಅಳಿಯನಾದ ಮಕ್ಕಳಮಣಿಗನು ಹೋರಾಡಿ ಸಾಯುತ್ತಾನೆ.[24] ಕಿರುವತ್ತಿಯ ವೀರನೊಬ್ಬನು ಘಳಿಯೂರ ಅಳಿವಿನಲ್ಲಿ ತುರುಗಳನ್ನು ರಕ್ಷಿಸಿ, ಮಹಿಳೆಯರ ಮಾನವನ್ನು ಉಳಿಸಿ, ಅನೇಕ ಶತ್ರುಗಳನ್ನು ಕೊಂದು ತಾನೂ ಅಸುನೀಗುತ್ತಾನೆ.[25] ಕ್ರಿ. ಶ. ೧೧೨೮ರಲ್ಲಿ ತೈಲಪ ದೇವನ ಮಹಾಪ್ರಧಾನಿ ಮಸಣೈಯ್ಯನು ತನ್ನ ಸಮಸ್ತ ಸೈನ್ಯವನ್ನು ಈಸಾಪುರದ ಮೇಲೆ ಧಾಳಿ ಇಡಲು ಸೂಚಿಸುತ್ತಾನೆ. ಪೆರ್ಮ್ಮಾಡಿ ಸಾನ್ತರು ಕೋಟೆಯನ್ನು ಮುತ್ತಿ, ಪೆಂಡಿರುಡೆಯುರ್ಚ್ಚವಾಗ ಇದನ್ನು ಕಂಡ ಕಾಳಿಗನಾಯಕನ ಗಂಧವಾರಣನಾದ ಬಮ್ಮ ಸಾನ್ತನು ಕೋಪದಿಂದ ಕಡಿತಲೆ, ಪಲಗೆ ಮುಂತಾದ ಆಯುಧಗಳನ್ನು ಬಳಸಿ ಶತ್ರುಗಳನ್ನು ‘ಕಡಿಖಂಡವಾಗಿ ಪೊಯ್ದಡೆ ಕೆಡೆದುದು ಧಾರಿಣಿಯ ಮೇಲೆ ವೈರಿ ಸಮೂಹಂ’. ತಕ್ಷಣವೆ ‘ಪೆಣಮಯಮೂಯ್ತನಿತು ನೂಂಕಿದರಿಬಲಮನಿತು’. ಆದರೆ ಶತ್ರುಗಳು ಪ್ರಯೋಗಿಸಿದ ಬಾಣಗಳು ಮೈಯನ್ನು ಚುಚ್ಚಲು ಬಸವಳಿದ ಬಮ್ಮ ಸಾಂತನು ರಣರಂಗದಲ್ಲೇ ಬಿದ್ದು ಪ್ರಾಣಬಿಟ್ಟನು. ಆಗ ಇವನ ಶೌರ್ಯಕ್ಕೆ ಮೆಚ್ಚಿದ ದೇವರುಗಳು ದುಂದುಭಿಯನ್ನು ಮೊಳಗಿಸಿದರಂತೆ![26] ಇಡೀ ಶಾಸನವು ಒಂದು ಪುಟ್ಟ ಕಾವ್ಯದ ರೂಪದಲ್ಲಿದೆ. ಮುತ್ತೂರಿನ ಕಮ್ಮನವಳ್ಳಿಯ ಜಕ್ಕಿಸೆಟ್ಟಿ ಊರನ್ನು ಸೂರೆ ಮಾಡಿ, ಪೆಂಡಿರ ಉಡೆಉರ್ಚ್ಚುವಾಗ ಕಮ್ಮಾರ ಮಾಚನು ಅವನೊಡನೆ ಹೋರಾಡಿ ಅವನನ್ನು ಕೊಂದು ತಾನೂ ಸಾಯುತ್ತಾನೆ.[27] ಬನವಾಸಿಯ ಮಂಡಳೇಶ್ವರನಾದ ಮಧುಕರಸನ ಆಜ್ಞೆಯಂತೆ ಜಕ್ಕಿಸೆಟ್ಟಿಯು ಹಿರಿಯಮಾಗುಂಡಿಯ ಮೇಲೆ ಧಾಳಿಯಿಟ್ಟು ಸೂರೆ ಮಾಡಿ, ತುಱುಗಳನ್ನು ಅಪಹರಿಸಿ, ಹೆಣ್ಣುಗಳ ಮಾನಭಂಗ ಮಾಡುತ್ತಾನೆ. ಇದನ್ನು ಕಂಡ ಬಬ್ಬಿಸೆಟ್ಟಿಯ ಮಗನಾದ ಬೊಮ್ಮಣನು ಅವನನ್ನು ಕೊಂದು ತಾನೂ ಅಸುನೀಗುವನು.[28]

ಕ್ರಿ. ಶ. ೧೧೫೬ರ ಅವಧಿಯ ಕೊರಕೋಡ ವೀರಗಲ್ಲಿನ ಪಾಠ ಪುಟ್ಟ ಕಾವ್ಯದಂತಿದ್ದು ಬಾವಗಾವುಂಡನ ಮಕ್ಕಳಾದ ದೇವಗಾವುಂಡ ಮತ್ತು ಮಲ್ಲಗಾವುಂಡ ಇಬ್ಬರೂ ಬಿಲ್ಲನ್ನು ಬಾಣಗಳನ್ನು ಹಿಡಿದು ಊರಿನ ಹೆಬ್ಬಾಗಿಲಲ್ಲಿ ಶತ್ರುಗಳಿಗೆ ಅಡ್ಡ ನಿಂತು ಹೋರಾಡಿದರಂತೆ. ಅವರು ನಿಂತ ರೀತಿಯನ್ನು ಶಾಸನ ಕವಿಯು ‘ಗುಹೆಯ ಬಾಗಿಲೊಳು ಸಿಂಹ ನಿರ್ಪಂತೆ’ ನಿಂತರಂತೆ. ಅವರು ಶತ್ರುಗಳ ಮೇಲೆ ಪ್ರಯೋಗಿಸಿದ ಬಾಣಗಳು ಜೋರುಮಳೆಯಂತೆ ಬಿದ್ದವಂತೆ. ಕಡಜಹುಳುಗಳ ಗೂಡನ್ನು ಕೆಣಕಿದಂತೆ, ಸರ್ಪದ ಬಾಯಿಯಲ್ಲಿ ಯಮನು ಕುಳಿತಂತೆ, ಕುರಿಯ ಹಿಂಡನ್ನು ತೋಳಗಳು ಹೊಕ್ಕಿದಂತೆ, ಕಬ್ಬಿನ ತೋಟವನ್ನು ಆನೆಯು ಹೊಕ್ಕಂತೆ, ಶತ್ರುಗಳ ಮೇಲೆ ಆಕ್ರಮಿಸಿ ಅವರನ್ನು ನಾಶ ಮಾಡಿದರಂತೆ. ಆದರೂ ಕಣಕಾಲು, ಮೊಳಕಾಲು, ಭುಜ, ತಲೆ ಮೊದಲಾದೆಡೆ ಶತ್ರುಗಳು ಪ್ರಯೋಗಿಸಿದ ಬಾಣಗಳು ನೆಟ್ಟು ಪ್ರಾಣ ನೀಗುತ್ತಾರೆ. ಇವರ ಹೆಣಗಳನ್ನು ತುಳಿದುಕೊಂಡು ದನಗಳು ಹೋಗಲು ಇದನ್ನು ತಿಳಿದ ಇವರ ಚಿಕ್ಕ ತಮ್ಮನಾದ ಬೊಪ್ಪಗಾವುಂಡನು ಅಣ್ಣಂದಿರ ಹೆಣಗಳನ್ನು ಕಂಡು, ಕೋಪ ತಡೆಯಲಾರದೆ ಇದರ ಸೇಡನ್ನು ತೀರಿಸಿಕೊಳ್ಳುವೆನೆಂದು ಹಲವರೊಂದಿಗೆ ಶತ್ರುಗಳ ಮೇಲೆ ದಾಳಿ ಮಾಡಿ ಹಾಲ್ಗಟ್ಟದ ಬಯಲಿನಲ್ಲಿ ಹೋರಾಡಿ ಶತ್ರುಗಳನ್ನು ಕೊಂದು ದನಗಳನ್ನು ಹಿಂತಿರುಗಿಸುತ್ತಾನೆ. ಹಿಂತಿರುಗಿ ಬಂದು ಅಣ್ಣಂದಿರಿಗೆ ಅಂತ್ಯಸಂಸ್ಕಾರವನ್ನು ಮಾಡಿ, ಜಲದಾನ ಕ್ರಿಯೆಯನ್ನು ಪೂರೈಸಿ ಇಬ್ಬರಿಗೂ ವೀರಗಲ್ಲನ್ನು ನೆಡಿಸುತ್ತಾನೆ. ವೀರಗಲ್ಲು ಸಾಹಿತ್ಯದಲ್ಲಿ ಇಂತಹ ಮತ್ತೊಂದು ಪಾಠವಿಲ್ಲ. ಇದನ್ನು ಬರೆದ ಕವಿಯ ಉಲ್ಲೇಖವಿಲ್ಲದಿದ್ದರೂ ಅವನು ಪ್ರತಿಭಾವಂತನೆನ್ನಲು ಶಾಸನ ಪಾಠವೇ ಸಾಕ್ಷಿಯಾಗಿದೆ.[29]

ಗುತ್ತಿಯ ಮಾಂಡಳಿಕನಾದ ಬಂಮ್ಮಣನು ಬಾಳೆಯೂರನ್ನು ಸೂರೆ ಮಾಡಿ, ಹೆಣ್ನುಡೆಯ ನುರ್ಚ್ಚಿದಾಗ ಅವರ ಆಕ್ರಂದನವನ್ನು ಕೇಳಿದ ಮಂಜಗಾವುಂಡನ ಮಗನಾದ ಬಂಮಗಾವುಂಡನ ತಮ್ಮನಾದ ರಾಮಯನು ಹೋರಾಡಿ ಸಾಯುತ್ತಾನೆ.[30] ಕಳಚುರಿಯ ಅಧಿಕಾರಿಯಾದ ಎಕ್ಕಲರಸರು ಕೂಳುಗನೂರನ್ನು ಮುತ್ತಿ ದನ – ಕರುಗಳನ್ನು ಅಪಹರಿಸಿ, ಸ್ತ್ರೀಯರ ಮಾನಭಂಗ ಮಾಡುವಾಗ ಹಳ್ಳಿಗನೆಂಬುವನು ಮತ್ತು ಇವನ ಮಗ ಕಿಳ್ಳನು ಎಂಬಿಬ್ಬರು ಎದುರುಬಂದ ಶತ್ರುಗಳನ್ನು ವೀರತನದಿಂದ ಎದುರಿಸಿ ಅನೇಕ ರಾಹುತರನ್ನು ಮತ್ತು ಇತರರನ್ನು ಕೊಂದು ತಾವೂ ಮಡಿಯುತ್ತಾರೆ. ಅಪ್ಪ – ಮಗ ಇಬ್ಬರೂ ಜೊತೆಯಾಗಿ ಹೋರಾಡಿ ಮಡಿದ ವಿಷಯ ತಿಳಿಸುವ ಅಪರೂಪದ ವೀರಗಲ್ಲು ಇದಾಗಿದೆ.[31] ಕಾದಂಬ ಶಿವಚಿತ್ತ ವೀರಪೆರ್ಮಾಡಿದೇವನ ಕಾಲದಲ್ಲಿ ತಂಬೂರ ಮಲ್ಲಯ್ಯ ಸಾವಂತನು ಹಂದಿನೀರ ಗ್ರಾಮದ ಮೇಲೆ ಧಾಳಿ ಮಾಡಿ, ಹೆಂಗಳೆಯರನ್ನೂ, ದನಗಳನ್ನೂ ಅಪಹರಿಸುವಾಗ ರಾಜನಹಳ್ಳಿಯ ಗಾವುಂಡನು ಶತ್ರುಗಳನ್ನು ತಡೆದು ಅವರ ಕುದುರೆಗಳನ್ನು ಕೊಂದು ಹೆಂಗಸರನ್ನು ಮತ್ತು ದನಗಳನ್ನು ಸೆರೆಯಿಂದ ಬಿಡಿಸುತ್ತಾನೆ.[32] ತಾಳಗುಂದದ ಒಂದು ಶಾಸನದ ಪ್ರಕಾರ ಬನವಾಸಿ ನಾಡಿನ ಮಾಂಡಳಿಕನಾದ ಚೊಳಿಕ್ಯ ಕೇಶಿಮಯ್ಯನು ಸಾಂತಳಿಗೆ ನಾಡಿನಲ್ಲಿನ ಅಳಹೂರನ್ನು ಸೂರೆ ಮಾಡಿ ಪೆಂಡಿರ ಉಡೆ ಉರ್ಚ್ಚಿಕೊಂಡು ಹೋಗುವಾಗ ಆ ನಾಡಿನ ಕುಳತಿಳಕನಾದ ಮುಕ್ಕಡರ ಸೋವಿಸೆಟ್ಟಿಯ ಮಗನಾದ ಕಾಳೆಯ ನಾಯಕನು ಶತ್ರುಗಳ ಕುದುರೆಯನ್ನು ಕೊಂದು, ಹಲವರನ್ನು ಸಾಯಿಸಿ, ತುಱುಗಳನ್ನು ಹಿಂತಿರುಗಿಸಿ ಮರಣವನ್ನಪ್ಪುತ್ತಾನೆ. ಇವನ ಮಗನಾದ ಸೋಮೆಯ ಬಂಮ್ಮಯ್ಯನು ಪರೋಕ್ಷ ವಿನಯವಾಗಿ ಈ ಶಾಸನವನ್ನು ನೆಡಿಸುತ್ತಾನೆ.[33] ಬಿಟ್ಟಿಯೂರ ಸಿಂಗದ ಮಂಚಗೌಡ ಊರನ್ನು ಸೂರೆ ಮಾಡಿ ಹೆಂಡಿರುಡೆಯುರ್ಚ್ಚಿ, ತುಱುವಂ ಕೊಂಡು ಹೋಗುವಾಗ ದೀವರ ಬಾಚೆಯನು ಹೋರಾಡಿ ಹಲವರನ್ನು ಕೊಂದು ತಾನೂ ಸಾಯುತ್ತಾನೆ.[34] ಬನವಾಸಿ ನಾಡಿನ ಕುಪ್ಪಟೂರಿನ ಸಾಸಿರ್ವ್ವಕ್ಕಳು ಸುಖದಿಂದ ಆಳುತ್ತಿರುವಾಗ ಇಂತಹ ಸುಖವಾದ ನಾಡನ್ನು ಕೆಡಿಸಲೆಂದು ರಾಕ್ಷಸನಂತೆ ಬಂದು ಎರಗಿದ ಗವುಡಸಾಮಿಯನ್ನು ಸೈನಿಕರ ಸಹಾಯದಿಂದ ಅಲ್ಲಿನ ಬ್ರಾಹ್ಮಣರು ಸೆರೆ ಹಿಡಿಯುತ್ತಾರೆ. ಆಗ ಇದರಿಂದ ಕೋಪಗೊಂಡ ಗವುಡಸ್ವಾಮಿಯ ದಂಡನಾಯಕನು ಅನ್ಯಾಯದಿಂದ ಉಚ್ಚಂಗಿಯ ಹಡುದೇವನ ಧಾಳಿಯನ್ನು ತಂದು ಮೂರು ದಿಕ್ಕಿನಿಂದ ಗ್ರಾಮವನ್ನು ಮುತ್ತಿ ಹಲವರನ್ನು ಕೊಂದು ಸೂರೆಯನ್ನು ಮಾಡಿ ಹೆಣ್ಣುಗಳ ಉಡೆಯುರ್ಚ್ಚಿ ಸೆರೆಯನ್ನು ಹಿಡಿಯುತ್ತಾರೆ. ಆಗ ಗ್ರಾಮದ ಇಡುಕೆಯ ನಾಯಕನು ತನ್ನ ಮಗನಾದ ಕಡುಗಲಿ ಕೇತಯನಾಯಕನನ್ನು ಕರೆದು ಸ್ತ್ರೀ – ಗೋವುಗಳನ್ನು ಬಿಡಿಸಿಕೊಂಡು ಬರಲು ಆದೇಶಿಸುತ್ತಾನೆ. ಆಗ ಕೇತಯನಾಯಕನು ತಕ್ಷಣ ಹೊರಟು ‘. . . ಅನ್ತು ಬೆಸಸುವುದುಂ ಮಾರಿಯ ಮಸಕದನ್ತೆ ಮಾಮಸಕಂ ಮಸಗಿ ಪಲವರಂ ತಳುತ್ತಿಱಿದು ಸೆಱೆಯಂ ಜೀವಧನಮುಮಂ ಮುಗುಳ್ಚಿ ಸುರಲೋಕ ಪ್ರಾಪ್ತ’ನಾಗುತ್ತಾನೆ.[35] ಶೀಲವಂತನಕೊಪ್ಪ ಗ್ರಾಮದ ಶಾಸನದ ಪ್ರಕಾರ ಪಾಂಡ್ಯದೇವರಸನು ಉದ್ದರೆಯನ್ನು ಸೂರೆ ಮಾಡಿ ಉದೆ ಉಬ್ಬೆಯೆಂಬ ಸೂಳೆಯನ್ನು ಸೆರೆ ಹಿಡಿದುಕೊಂಡು ಹೋಗುವಾಗ ಲೋವಳೋಜನು ಹೋರಾಡಿ ಮಡಿಯುತ್ತಾನೆ. ಇಲ್ಲಿ ಸೂಳೆಯನ್ನು ಸೆರೆ ಹಿಡಿಯಲು ಕಾರಣವೇನಿತ್ತೆಂಬ ಪ್ರಶ್ನೆ ಉದ್ಭವವಾಗುತ್ತದೆ. ಬಹುಶಃ ಅವಳು ಅಪರೂಪದ ಸೌಂದರ್ಯವತಿಯಾಗಿದ್ದಿರಬಹುದು. ಅಥವಾ ಶತ್ರುವಿನ ಆಪ್ತಳಿದ್ದಿರಬಹುದು. ಅಥವಾ ಸೂಳೆಯರನ್ನು ಅಪಹರಿಸಿದರೆ ಗ್ರಾಮದ ಮರ್ಯಾದೆಯನ್ನು ಅಪಹರಿಸಿದಂತೆ ಎಂಬ ಭಾವನೆ ಆ ಕಾಲಕ್ಕಿದ್ದಿರಬಹುದು. ಈ ಶಾಸನದಿಂದ ಗ್ರಾಮಗಳಿಗೆ ಧಾಳಿಯಿಟ್ಟಾಗ ದನಗಳ ಜೊತೆಯಲ್ಲಿ ಪ್ರಸಿದ್ಧ ಸೂಳೆಯರನ್ನೂ ಅಪಹರಿಸುತ್ತಿದ್ದರೆಂಬ ಅಂಶ ತಿಳಿದು ಬರುತ್ತದೆ.[36] ಕಿತ್ತನಕೆರೆಯ ಚಟ್ಟಗೌಂಡರ ಮಾಳಯ್ಯನ ಮಗ ಸೋಮೆಯನು ಮತ್ತು ಸ್ನೇಹಿತ ಬೆಚ್ಚೆಯ ಮಾವನುಂ ಪ್ರಯಾಣಿಸುವಾಗ ಹಾರುವನಹಳ್ಳಿಯ ದಾರಿಯಲ್ಲಿ ಕಳ್ಳರು ಹೆಣ್ಣು ಮಕ್ಕಳ ಮೇಲೆ ಧಾಳಿಯನ್ನು ಮಾಡಿ, ಉಡೆಉರ್ಚ್ಚಿ ಅಪಹರಿಸುವಾಗ ಅದನ್ನು ನೋಡಿ ಸಹಿಸದೆ ಇಬ್ಬರೂ ಕಳ್ಳರೊಂದಿಗೆ ಹೋರಾಡಿ ಅವರನ್ನು ಕೊಂದು ಅಪಹರಣಕ್ಕೊಳಗಾದ ಸ್ತ್ರೀಯರನ್ನು ರಕ್ಷಿಸಿ ಗ್ರಾಮಕ್ಕೆ ವಾಪಸ್ಸು ಕಳುಹಿಸಿ ಮಡಿಯುತ್ತಾರೆ.[37] ತಮ್ಮ ಗ್ರಾಮವನ್ನು ಸೂರೆ ಮಾಡಿದ ಸೇಡಿಗಾಗಿ ಅವರ ಗ್ರಾಮದ ಮೇಲೆ ಧಾಳಿ ಮಾಡಿ ಸೂರೆ ಮಾಡುವ ಸೇಡಿನ ಪ್ರಸಂಗಗಳೂ ನಡೆಯುತ್ತಿದ್ದವು. ನರೆಯಂಗಲ್ಲು ನಾಡನ್ನು ತೈಲಹದೇವರಸನು ಆಳುವಾಗ ಆ ನಾಡಿನ ಹುರಿಟಿಗಿಯನ್ನು ಶತ್ರುಗಳು ಸೂರೆ ಮಾಡುತ್ತಾರೆ. ಇದರಿಂದ ಕೋಪಗೊಂಡ ತೈಲಹದೇವ ಬಳ್ಳರಬೀಡು ಗ್ರಾಮವನ್ನು ಸೂರೆ ಮಾಡಿ, ಹೆಂಡಿರ ಉಡೆಉರ್ಚ್ಚಿ, ದನ – ಕರುಗಳನ್ನು ಅಪಹರಿಸುತ್ತಾನೆ. ಆಗ ಆ ಗ್ರಾಮದ ನಗರ ಬಸವನು ವೇಗವಾಗಿ ಬಂದು ಗ್ರಾಮದ ಹೆಬ್ಬಾಗಿಲಿನಲ್ಲಿ ಅಡ್ಡನಿಂದು ಶತ್ರುಗಳನ್ನು ತಡೆದು ಹಲವರನ್ನು ಕೊಂದು ತಾನೂ ಮಡಿಯುತ್ತಾನೆ.[38] ಹಳೇಬಿಡಿನ ಕೆರೆಕಟ್ಟೆಯ ಮೇಲಿರುವ ಶಾಸನದಲ್ಲಿ ಮುದ್ದನೆಂಬುವನು ತಾಗರ್ತಿಯ ಕೋಟೆಯನ್ನು ಹತ್ತಿ ‘ಹೆಂಗಳಿರ್ಕ್ಕೂಡೆ ಹೇಱಾಳವ ಮಾಡುತ್ತವಿರಲು’ ಇದನ್ನು ಕಂಡು ಹೊಯ್ಸಣ ದೇವನು ವರುಡೆ ಚಾಮಯನಾಯಕನನ್ನು ಕರೆದು ಅವನನ್ನು ನಿಗ್ರಹಿಸಲು ಆದೇಶಿಸುತ್ತಾನೆ. ಇಲ್ಲಿ ಉಲ್ಲೇಖವಾದ ಹೆಂಗಳೆಯರೊಡನೆ ಹೇಱಾಳವ ಮಾಡುತ್ತಿದ್ದನೆಂಬ ಪದವು ಅವರೊಡನೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಅಥವಾ ಅವರಿಗೆ ಕಾಟ ಕೊಡುತ್ತಿದ್ದನೆಂದು ಅರ್ಥವಾಗುತ್ತದೆ.[39] ಬೇಡರ ಜಕ್ಕನೆಂಬುವನು ಬಹಳ ವೀರನಾಗಿದ್ದು ಬಿಲ್ವಿದ್ಯೆಯಲ್ಲಿ ಪರಿಣತನಾಗಿದ್ದನು. ಇವನ ಶೌರ್ಯವನ್ನು ಭೂಮಿಯೆಲ್ಲ ಹೊಗುಳುತ್ತಿತ್ತು. ಶತ್ರುಗಳು ಹೆಂಡಿರುಡೆ ಉರ್ಚ್ಚುವಾಗ ಅಡ್ಡ ಹೋಗಿ ಹೋರಾಡುವಾಗ ಬಾಣವೊಂದು ತಾಗಿ ಬೇಡರ ಜಕ್ಕನು ಮಡಿಯುತ್ತಾನೆ. ಇವನ ಮಕ್ಕಳಾದ ದೇವಣ ಮತ್ತು ಮಾರೆಯ್ಯ ಇಬ್ಬರೂ ಕೂಡಿ ವೀರಗಲ್ಲನ್ನು ನೆಡಿಸುತ್ತಾರೆ.[40]

[1] ಸಾಹಭೀಮ ವಿಜಯಂ, ೨-೨೪, ರತ್ನ ಸಂಪುಟ, ಸಂ.ಹಂಪನಾ. ಕನ್ನಡ ವಿ.ವಿ., ೨೦೦೬

[2] ಎ ನೋಟ್ ಆನ್ ದಿ ಟರ್ಮ್ ‘ಉಡಿಯುರ್ಚ್ಚಿ’ ಆಫ್ ದ ಕನ್ನಡ ಇನ್ಸ್‌ಸ್ಕ್ರಿಪ್‌ಷನ್ಸ್, ಜೆ. ಆ. ಎ. ಸೊ. ಇ. ಸಂ. III, ಸಿ. ಟಿ. ಎಂ. ಕೊಟ್ರಯ್ಯ, ೧೯೭೦

[3] ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ಡಾ. ಎಂ. ಚಿದಾನಂದಮೂರ್ತಿ, ಎ. ಬಿ. ಎಚ್. ಪ್ರಕಾಶನ, ಬೆಂಗಳೂರು, ಪು.೪೭, ೧೯೮೪

[4] ಸಮಾಧಿ – ಬಲಿದಾನ – ವೀರಮರಣ ಸ್ಮಾರಕಗಳು, ಡಾ. ಎಂ. ಎಂ. ಕಲಬುರ್ಗಿ, ಐ. ಬಿ. ಎಚ್. ಪ್ರಕಾಶನ, ಬೆಂಗಳೂರು, ೧೯೮೦, ಪು.೭೮

[5] ರಾಮಚಂದ್ರ ಚರಿತ ಪುರಾಣಂ, ೯-೧೪೪, ಕ. ಸಾ. ಪ. ೧೯೭೬, ಪು.೨೪೮

[6] ಚಂದ್ರಪ್ರಭ ಪುರಾಣ, ೮-೬೬ (ಗದ್ಯ), ಕ. ಸಾ.ಪ. ೧೯೭೭

[7] ಅನಂತನಾಥ ಪುರಾಣಂ, ೧೧-೪೫, ಮೈ. ವಿ. ವಿ, ೧೯೭೨

[8] ಅನಂತನಾಥ ಚರಿತೆ, ೧೭-೩೩-೩೯,  ಮೈ. ವಿ. ವಿ, ೧೯೮೧

[9] ಮಲ್ಲಿನಾಥ ಪುರಾಣ, ೭-೬೩, ೬೪, ಕರ್ನಾಟಕ. ವಿ. ವಿ., ೧೯೭೪

[10] ಚಂದ್ರಪ್ರಭ ಚರಿತ್ರೆ, ಚಂದ್ರಿಕಾ ವಿಹಾರ – ೮೩, ಮೈ. ವಿ. ವಿ. ೧೯೮೫

[11] ನೇಮಿನಾಥ ಪುರಾಣಂ, ೨-೬೪, ೭-೮೫, ಕರ್ನಾಟಕ. ವಿ. ವಿ., ೧೯೬೮

[12] ಮನೆಮನೆ, ಎ. ಕ. VIII ಸೊರಬ – ೨೨, ಕ್ರಿ. ಶ. ೮೦೦

[13] ಕೋಗೋಡು, ಎ. ಕ.೯ (ಹೊ), ಬೇಲೂರ – ೫೨೪, ಕ್ರಿ. ಶ. ೯-೧೦ ಶತಮಾನ

[14] ಬೇರಂಬಾಡಿ, ಎ. ಕ.೩ (ಹೊ), ಗುಂಡ್ಲು ಪೇಟೆ – ೨೧೯, ಕ್ರಿ. ಶ. ೧೦ ಶತಮಾನ

[15] ಭರ್ತೂರು, ಎ. ಕ.೮ (ಹೊ), ಆಲೂರು ತಾ -೩೨, ಕ್ರಿ. ಶ. ೯-೧೦ ಶತಮಾನ

[16] ಬೀರದೇವರಗುಡ್ಡ, ಎ. ಕ. V, ಚಳ್ಳಕೆರೆ – ೫೬, ಕ್ರಿ. ಶ. ೯೨೫

[17] ತಾವರೆಕೆರೆ, ಎ. ಕ. X, ಮುಳ – ೧೬೧, ಕ್ರಿ. ಶ. ೯೫೦

[18] ತಾವರೆಕೆರೆ, ಎ. ಕ. X, ಮುಳ – ೧೬೩, ಕ್ರಿ. ಶ. ೬೫೦

[19] ಮದಲೂರು, ಎ. ಕ. XII, ಶಿರಾ – ೪೩, ಕ್ರಿ. ಶ. ೧೦೦೦

[20] ನಂಬಿಹಳ್ಳಿ, ಎ. ಕ. X, ಶ್ರೀನಿವಾಸ – ೧೪, ಕ್ರಿ. ಶ. ೧೦೧೫

[21] ಮಲ್ಲೇಗೌಡನ ಕೊಪ್ಪಲು, ಎ. ಕ. ೫ (ಹೊ) ಮೈ-೧೧೩-೧೧೪, ಕ್ರಿ. ಶ. ೧೦೩೬

[22] ಅಡಗಂಟ, ಎ. ಕ. VII, ಶಿಕಾರಿ ೮೩, ಕ್ರಿ. ಶ. ೧೦೫೮

[23] ಹೊನ್ನಾಳಿ, ಎ. ಕ. VII, ಹೊನ್ನಾಳಿ ೪, ಕ್ರಿ. ಶ. ೧೦೬೪

[24] ಕುಣಿತೆಪ್ಪ, ಎ. ಕ. VIII, ಸೊರಬ-೩೩೭, ಕ್ರಿ. ಶ. ೧೧೧೬

[25] ಕಾರವಾರ ಜಿಲ್ಲೆ ಶಾಸನಗಳು, ಡಾ. ಆರ್. ಎನ್. ಗುರುವ, ಪು.೫೮

[26] ಉದ್ರಿ, ಎ. ಕ. VIII, ಸೊರಬ-೧೪೧, ಕ್ರಿ. ಶ. ೧೧೨೮

[27] ಮುತ್ತೂರು, ಕ. ಇ. VI-೨೬, ಕ್ರಿ. ಶ. ೧೧೩೮

[28] ಹಿರೇಮಾಗಡಿ, ಎ. ಕ. VIII, ಸೊರಬ – ೪೧೫, ಕ್ರಿ. ಶ. ೧೧೩೯

[29] ಕೊರಕೋಡು, ಎ. ಕ. VIII, ಸೊರಬ – ೧೭೫, ಕ್ರಿ. ಶ. ೧೧೫೬

[30] ಬಾಳೂರ್, ಕ.ಇ. V-೩೬, ಕ್ರಿ. ಶ. ೧೧೬೩

[31] ಕೂಳಗ, ಎ. ಕ. VIII, ಸೊರಬ – ೧೯೩, ಕ್ರಿ. ಶ. ೧೧೬೩

[32] ಕಾರವಾರ ಜಿಲ್ಲೆ ಶಾಸನಗಳು, ಡಾ. ಆರ್. ಎನ್. ಗುರವ, ಪು.೬೩

[33] ತಾಳಗುಂದ, ಎ. ಕ. VII – ಶಿಕಾರಿ – ೧೮೧, ಕ್ರಿ. ಶ. ೧೧೭೦

[34] ಜಂಬೂರು, ಎ. ಕ. VII ಶಿಕಾರಿ – ೭೫, ಕ್ರಿ. ಶ. ೧೧೭೫

[35] ಕುಪ್ಪಟೂರು, ಎ. ಕ. VIII, ಸೊರಬ – ೨೫೧, ಕ್ರಿ. ಶ. ೧೧೭೭

[36] ಶಿಲವಂತನ ಕೊಪ್ಪ, ಎ. ಕ. VII ಶಿಕಾರಿ – ೩೦೦, ಕ್ರಿ. ಶ. ೧೧೮೦

[37] ಕಿತ್ತನಕೆರೆ, ಎ. ಕ. ೮ (ಹೊ) ಹಾಸನ-೧೦೫, ಕ್ರಿ. ಶ. ೧೧೯೬

[38] ಬಾಳಂಬೀಡು, ಎಸ್. ಐ. ಐ. XX – ೨೫೦, ಕ್ರಿ. ಶ. ೧೨

[39] ಹಳೇಬೀಡು, ಎ. ಕ. ೯ (ಹೊ) ಬೇಲೂರು-೩೪೮, ಕ್ರಿ. ಶ. ೧೨

[40] ನಿಟ್ಟೂರು, ಎ. ಕ. ೮ (ಹೊ) ಹಾಸನ – ೬೯, ಕ್ರಿ. ಶ. ೧೨೧೩