ಅಬ್ಬಲೂರಿನ ವೀರಗಲ್ಲು ಪೆಣ್ಬುಯ್ಯಲಿಗೆ ಸಂಬಂಧಪಟ್ಟಂತೆ ಒಂದು ಪುಟ್ಟ ಕಾವ್ಯದಂತಿದೆ. ಬೆಳಗವಟ್ಟಿಯ ಈಶ್ವರದೇವನು ಹಲವು ಅರಸರೊಡನೆ ಕೂಡಿಕೊಂಡು, ಸಾಂತಳಿಗೆ ನಾಡಿನ ನಾಯಕರೊಂದಿಗೆ ಹತ್ತು ಸಾವಿರ ಸೈನಿಕರು, ಒಂದು ಸಾವಿರ ಕುದುರೆಗಳ ಸಮೇತ ಅಬ್ಬಲೂರಿನ ಮೇಲೆ ದಾಳಿ ಮಾಡುತ್ತಾನೆ. ದಾಳಿ ಮಾಡಿ ‘ಹಿಂಡುಸೆರೆ’ ಮತ್ತು ‘ತುರುವಂ’ ಅಪಹರಿಸುತ್ತಾನೆ. ಇಲ್ಲಿ ಹಿಂಡುಸೆರೆ ಎಂಬುದು ‘ಹೆಂಣುಸೆರೆ’ ಯಾಗಿರಬಹುದು. ಅಥವಾ ಹೆಂಣು ಎಂಬುದನ್ನು ಶಾಸನ ಅಧ್ಯಯನಕಾರರು ಹಿಂಡು ಎಂದು ತಪ್ಪಾಗಿ ಓದಿರಬಹುದು. ಏಕೆಂದರೆ ಶಾಸನ ಶಿಲ್ಪದಲ್ಲಿ ನಗ್ನವಾಗಿ, ಹೆದರಿಕೊಂಡು, ಬಿಚ್ಚಿದ ಮುಡಿಯೊಂದಿಗೆ ನಿಂತಿರುವ ಸ್ತ್ರೀಯರನ್ನು ಚಿತ್ರಿಸಲಾಗಿದೆ. ‘ಇಲ್ಲಿ ನಡೆದಿರುವ ಸಂಗತಿಯ ಬಗ್ಗೆ ಆ ಸಂದರ್ಭದಲ್ಲೇ ಸೃಷ್ಟಿಯಾದ ಸ್ಪಷ್ಟವಾದ ಚಿತ್ರಗಳೇ ಇರುವುದರಿಂದ ಅವಕ್ಕೆ ಪ್ರತ್ಯೇಕವಾದ ವ್ಯಾಖ್ಯಾನದ ಅವಶ್ಯಕತೆಯೂ ಇರಲಾರದು’.[1] ಹೀಗೆ ದಾಳಿ ಮಾಡಿದಾಗ ಅಬ್ಬಲೂರಿನ ಬಡಗಿ ಕೇತೋಜನ ಮಕ್ಕಳಾದ ಮಾಚ ಮತ್ತು ಗೋಮ ಇಬ್ಬರೂ ಹೋರಾಡಿ ಹೆಣ್ಣುಗಳನ್ನು ಮತ್ತು ಗೋವುಗಳನ್ನು ರಕ್ಷಿಸಿ ಆ ಹೋರಾಟದಲ್ಲಿ ಮಡಿಯುತ್ತಾರೆ. ಶಾಸನ ಕವಿಯು ಇವರ ಹೋರಾಟವನ್ನು ಈ ಕೆಳಗಿನಂತೆ ವರ್ಣಿಸಿದ್ದಾನೆ.

ಘಟ್ಟಿಸಿ ನೂಂಕಿದ ವಾಜಿಯ
ಥಟ್ಟಂ ಕಟ್ಟಾಳು ಬಡಗಿ ಮಾಚಂ ತಾಗಲು
ನಿಟ್ಟಿಸಿ ಗೋಮನುಯಿಸೆ ಪಡ
ಲಿಟ್ಟುದು ತತುಕ್ಷಣದ ವೈರೀಬಲವೆನಿತನಿತುಂ

ಮಾತೇನೊ ಪೇಳಲಿಂತುಪ
ಮಾತೀತಂ ನೋಡಲತಿಭಯಂಕರಮೆನ
ಲಿಂತಾಂತರಿಬಲಮುಮನೋವದೆ
ಕೇತೋಜನ ಮಗ ಮಾಚ ಪೊಕ್ಕು ತಿವಿದಂ ಪಲರುಂ

ಸೋದರರಿಬ್ಬರ ವೀರಂ
ಮೇದಿನಿಗಚ್ಚರಿ ಇದೆನ್ನಿಸಿ ಧುರದೊಳು ಪಲರಂ
ಕಾದಿ ತವೆಕೊಂದು ಸ್ವರ್ಗ್ಗ
ಕ್ಕೋದರ್ಜಸವೆಸೆಯೆ ಮಾಚನುಂ ಗೋವನುಂ

ಎಂದು ಕಾವ್ಯಾತ್ಮಕವಾಗಿ ಸೋದರರ ವೀರತನವನ್ನು ಕವಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ.[2]

ಗಂಗಹರಿಟನ ಮಗ ಕಸವನು ಊರ ಮೇಲೆ ದಾಳಿ ಮಾಡಿದ ಶತ್ರುಗಳನ್ನು ಹೆಂಡಿರ ಉಡೆಉರ್ಚ್ಚಲು ಅವಕಾಶ ನೀಡದೆ ಹಲವರನ್ನು ಕೊಂದು ತಾನೂ ಸಾಯುತ್ತಾನೆ. ಬಹಳ ವೀರಗಲ್ಲುಗಳಲ್ಲಿ ಉಡೆಉರ್ಚ್ಚಿದ ವಿಷಯ ತಿಳಿದು ಅಥವಾ ಉರ್ಚ್ಚುವ ಸಮಯದಲ್ಲಿ ಹೋರಾಡಿ ರಕ್ಷಿಸಿದ ವಿಷಯವಿದ್ದರೆ, ಈ ಶಾಸನದಲ್ಲಿ ಉಡೆಉರ್ಚ್ಚಲು ಅವಕಾಶ ನೀಡದೆ ಮೊದಲೇ ಅವರನ್ನು ಸದೆಬಡಿದ ವಿಷಯವಿದೆ.[3] ಕ್ರಿಸ್ತ ಶಕ ೧೨೨೪ರ ಒಂದು ವೀರಗಲ್ಲಿನಲ್ಲಿ ಶತ್ರುಗಳೊಂದಿಗೆ ಹೋರಾಡಿದ ಜಂಗುಳಿಯ ಕೇತನು ಹೆಣ್ಣುಗಳ ಸೆರೆಯನ್ನು ಬಿಡಿಸಿ, ಗೋಮಹಿಷಿಗಳ ಹಿಂತಿರುಗಿಸಿದನೆಂದಿದೆ, ಇಲ್ಲಿ ಹೆಣ್ಣುಗಳೊಂದಿಗೆ ದನ – ಕರು ಮತ್ತು ಎಮ್ಮೆಗಳನ್ನೂ ಸೆರೆಯಿಂದ ಬಿಡಿಸುತ್ತಾನೆ.[4]

ಬೇಲೂರು ತಾಲೂಕಿನ ಹಾಲ್ತೊರೆಯ ಶಾಸನವೊಂದು ಬಹಳ ಕುತೂಹಲದ ವಿಷಯ ತಿಳಿಸುತ್ತಿದೆ. ಹೊಯ್ಸಳ ಇಮ್ಮಡಿ ನರಸಿಂಹನು ರಾಜ್ಯವಾಳುತ್ತಿದ್ದಾಗ ಹಾಲುತೊರೆ ಗ್ರಾಮವನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ ರಾಜಾಜ್ಞೆ ಹೊರಡಿಸುತ್ತಾನೆ. ಇದನ್ನು ಸಂತೋಷದಿಂದ ಒಪ್ಪಿದ ಗ್ರಾಮದ ಗಾವುಂಡರು ಗ್ರಾಮದ ಮಹಾಜನಂಗಳನ್ನು ಕರೆದುಕೊಂಡು ಬಂದು ಒಪ್ಪಂದವನ್ನು ಮಾಡಿಕೊಳ್ಳಿರಿ ಅಂದಾಗ ಅದಕ್ಕೆ ಮಹಾಜನರು ಒಪ್ಪದೆ ಆಕ್ಷೇಪಣೆ ಮಾಡುವರು. ಇದರಿಂದ ಸಿಟ್ಟಿಗೆದ್ದ ಗಾವುಂಡರು ಗ್ರಾಮದ ಮೇಲೆ ಧಾಳಿಯನ್ನು ಮಾಡಿ ಊರೆಲ್ಲವನ್ನೂ ಸೂರೆಗೊಂಡು ಹೆಣ್ಣುಗಳ ಉಡೆಯನ್ನು ಉರ್ಚ್ಚುವರು. ಆಗ ಗ್ರಾಮದ ಹರಿಮಾರಗೌಡನ ಮಗ ಮಾರಯ್ಯನು ಉಗ್ರವಾಗಿ ಹೋರಾಡಿ ಹೆಣ್ಣು ಸೆರೆ ಮತ್ತು ತುಱು ಸೆರೆಯನ್ನು ಬಿಡಿಸುತ್ತಾನೆ.[5] ಆದರೆ ಈ ಶಾಸನದಲ್ಲಿ ಗ್ರಾಮವನ್ನು ಅಗ್ರಹಾರ ಮಾಡಿದ್ದನ್ನು ಆ ಗ್ರಾಮದ ಮಹಾಜನಗಳು ಏಕೆ ಒಪ್ಪಲಿಲ್ಲವೆಂಬುದು ತಿಳಿದು ಬರುವುದಿಲ್ಲ. ಮಹಾಜನಗಳಿಗೆ ಹಾಲ್ತೊರೆಯನ್ನು ಅಗ್ರಹಾರವನ್ನಾಗಿ ಪರಿವರ್ತಿಸುವುದು ಇಷ್ಟವಿರಲಿಲ್ಲವೆನಿಸುತ್ತದೆ. ಇದಕ್ಕೆ ಗ್ರಾಮದ ಒಳಜಗಳಗಳೂ ಕಾರಣವಾಗಿರಬಹುದು. ಇವರು ಒಪ್ಪದಿದ್ದಕ್ಕೆ ಸಿಟ್ಟುಗೊಂಡ ಗಾವುಂಡರು ಆ ಗ್ರಾಮವನ್ನೇ ಹಾಳು ಮಾಡಿ, ಸ್ತ್ರೀಯರ ಮಾನಭಂಗಕ್ಕೆ ಯತ್ನಿಸುವ ಕ್ರಮ ವಿಷಾದನೀಯ. ತಮ್ಮ ಮಾತು ನಡೆಯಲಿಲ್ಲವೆಂಬ ಕಾರಣಕ್ಕೆ ಗ್ರಾಮವನ್ನು ಮತ್ತು ಮುಗ್ಧ ಮಹಿಳೆಯರನ್ನು ಹಾಳು ಮಾಡುವ ಕ್ರೂರತನ ಗಾವುಂಡರಿಗಿದ್ದುದು ಆಶ್ಚರ್ಯವಾಗಿದೆ. ಈ ಘಟನೆ ಶಾಸನ ಪ್ರಪಂಚದಲ್ಲಿ ಅಪರೂಪದ ಘಟನೆಯಾಗಿದೆ. ಇದಕ್ಕೆ ಅರಸನು ಹೇಗೆ ಪ್ರತಿಕ್ರಿಯಿಸಿದನೆಂಬ ಮಾಹಿತಿಯಿಲ್ಲ. ಯಾರದೋ ತಪ್ಪಿಗೆ ಯಾರೋ ಬಲಿಯಾಗುವ ರಾಜಕೀಯ ವ್ಯವಸ್ಥೆ ನಮ್ಮದಾಗಿತ್ತೆಂಬುದು ಕಟು ಸತ್ಯ.

ಹೋರಾಡಿದವರಿಗೆ ಸ್ಮಾರಕ ಸ್ಥಾಪನೆ ಮತ್ತು ದಾನ

ವೀರರ ಕುಟುಂಬಗಳಿಗೆ ಕೊಟ್ಟ ದಾನವನ್ನು ಜತನದಿಂದ ಕಾಪಾಡಬೇಕೆಂದು ಪ್ರಾಚೀನರ ನಂಬಿಕೆಯಾಗಿತ್ತು. ಆದರೂ ಅಂತಹ ದಾನಗಳನ್ನೂ ಸ್ವಾರ್ಥ ಜನ ಅಪಹರಿಸುತ್ತಿದ್ದರು ಅಥವಾ ಭೂಮಿಯನ್ನು ಅತಿಕ್ರಮಿಸುತ್ತಿದ್ದರು. ಹಿಂದೂಪುರ ತಾಲೂಕಿನ ಪೈದೇಟಿ ಗ್ರಾಮದ ವೀರಗಲ್ಲಿನಲ್ಲಿ ಈ ಕೆಳಗಿನ ವಿವರವಿದೆ. ದಾನ ನೀಡಿದ್ದನ್ನು ‘….ಆಚಂದ್ರ ತಾರಮಾಗೆ ಇದನಾವನಾನುನ್ಡತ್ತಂಗೆಯ್ದೊಂ ಪೆಣ್ಣಿರ ಪಸು ಪಾರ್ವರ ಊರೞಿವಿನ ಮೊಱೆಯಱಿದ ಕೃತಘ್ನ, ಎಱೆಯನ ಕಲಹದೊಳೋಡಿದ ಪಞ್ಚಮಹಾಪಾತಕನೆ ಸನ್ದ ಲೋಕಕ್ಕೆ ಸನ್ಹೋನಕ್ಕು ಬಾರಣಾಸಿಯನೞಿದು ಸಾಸಿರ ಕವಿಲೆಯ ಕೊನ್ದೋನಕ್ಕು….’ ಎಂದು ಹೇಳಿದೆ.[6] ತಮ್ಮ ಗ್ರಾಮದ, ಕುಟುಂಬದ ಮಾನ ರಕ್ಷಣೆಗೆ ಹೋರಾಡಿದವನಿಗೆ ಎಲ್ಲರೂ ಕೂಡಿ ಗೌರವ ಸಲ್ಲಿಸುತ್ತಿದ್ದರು. ಅನೇಕ ವೇಳೆ ಗ್ರಾಮಸ್ಥರೆಲ್ಲರೂ ಸೇರಿ ಸ್ಮಾರಕ ನಿರ್ಮಿಸಿದರೆ, ಕೆಲವು ವೇಳೆ ಆ ಕುಟುಂಬದ ಸದಸ್ಯರೆ, ಅಂದರೆ ಹೆಂಡತಿ, ಅಣ್ಣ, ತಮ್ಮ, ಮಗ, ತಂದೆ ಅಥವಾ ಅಳಿಯರೇ ಸ್ಮಾರಕ ನಿಲ್ಲಿಸಿ ದಾನ ನೀಡುತ್ತಿದ್ದರು. ಮಡಿದವರ ಕುಟುಂಬದ ಜೀವನಕ್ಕೆ ಇದು ಅನಿವಾರ್ಯವೂ ಆಗಿತ್ತು. ಹಣಕ್ಕಿಂತಲೂ ಭೂಮಿ ದಾನ ನೀಡುತ್ತಿದ್ದುದೇ ಹೆಚ್ಚು. ಏಕೆಂದರೆ ಹಣ ಶಾಶ್ವತವಲ್ಲ. ಭೂಮಿಯಾದರೆ ತಲೆತಲಾಂತರದವರೆಗೂ ಅನ್ನ ನೀಡುತ್ತಿತ್ತು. ಆ ಕುಟುಂಬವನ್ನು ಪೋಷಿಸುತ್ತಿತ್ತು. ಇದರ ಜೊತೆಗೆ ಆಶ್ರಯ ತಪ್ಪಿದ ಕುಟುಂಬ ವಲಸೆ ಹೋಗದೆ  ಅದೇ ಗ್ರಾಮದಲ್ಲಿದ್ದುಕೊಂಡು ಸಹಬಾಳ್ವೆ ನಡೆಸಲು ಈ ಭೂಮಿದಾನ ಸಹಕಾರಿಯಾಗುತ್ತಿತ್ತು. ಭೂಮಿ ದಾನದಿಂದ ಒಂದು ಕುಟುಂಬವನ್ನು ನೆಮ್ಮದಿಯಾಗಿ ಒಂದು ಕಡೆ ನೆಲೆ ನಿಲ್ಲುವಂತೆ ಮಾಡುವ ಶಕ್ತಿಯಿತ್ತು. ಅನ್ನ ನೀಡುವ ಶಕ್ತಿಯಿರುವ ನೆಲಕ್ಕೆ ಇದು ನಮ್ಮ ಮಣ್ಣು ಎಂಬ ಅಭಿಮಾನ ಹುಟ್ಟಿಸುವ ಗುಣವಿದೆ. ಇದನ್ನು ನಮ್ಮ ಪ್ರಾಚೀನರು ಮನಗಂಡಿದ್ದರು.

ಮನೆಮನೆಯನ್ನು ಮುತ್ತಿದ ಶತ್ರುಗಳ ವಿರುದ್ಧ ಹೋರಾಡಿದ ಅಙ್ಗರನೆಂಬ ವೀರನಿಗೆ ಪೊಲಿಯನೆಂಬುವನು ಸ್ಮಾರಕ ಶಿಲೆಯನ್ನು (ವೀರಗಲ್ಲನ್ನು) ಮಾಡಿದನು. ಮಲಗಾರರ ಕುನ್ದವಾಸಿಯ ಮಗನಾದ ಮರಮ್ಮನೆಂಬುವನು ಈ ಶಾಸನವನ್ನು ಬರೆದನು. ಇವನನ್ನು ಶಾಸನದಲ್ಲಿ ‘ಲಿಖಿತನ್’ ಎಂದರೆ ವೀರನ ಕುಟುಂಬಕ್ಕೆ ಕುನ್ದಮ್ಮಶರಾಭಿಪೂಲಿಯೂ ಕಾಲಿಯಮ್ಮನೂ ಸೇರಿ ಗದ್ದೆಯನ್ನು ಕೊಡುಗೆಯಾಗಿ ದಾನ ನೀಡಿದರೆಂದು ಶಾಸನ ತಿಳಿಸುತ್ತದೆ.[7] ಬಟ್ಟೆಕೆರೆಯ ಕಾಳಗದಲ್ಲಿ ಹೋರಾಡಿ ಮಡಿದ ಕಲಿಗಳ್ಳನೆಂಬ ವೀರನಿಗೆ ಆತನ ಹೆಂಡತಿಯೇ ವೀರಗಲ್ಲು ನಿಲ್ಲಿಸುವಳು.[8] ಮಹೇಶ್ವರ ಸಾಹಣಿಯ ಮಗನಿಗೆ ತುಱುಗೊಳ್ ಕಾಳಗದಲ್ಲಿ ಹೋರಾಡಿದ್ದಕ್ಕೆ ಇಪ್ಪತ್ತ ನಾಲ್ಕು ಖಂಡುಗ ಭೂಮಿಯನ್ನು ದಾನವಾಗಿ ನೀಡಲಾಗಿದೆ.[9] ಮಗರಯ್ಯ ಪಣ್ನಿಯು ಮಡಿದಾಗ ಅವನ ವೀರಗಲ್ಲನ್ನು ನಿರ್ಮಿಸಿದವನು ಕೊಯತೂರಿನ ವಿಕ್ರಮಾದಿತ್ಯನ್. ಇವನಿಗೆ ಬಹುಗುಣ ತೇಜನ್ ಎಂಬ ಬಿರುದಿತ್ತು. ಇವನು ನಿರ್ಮಿಸಿದ ಮತ್ತೊಂದು ವೀರಗಲ್ಲು ಇದೇ ಸ್ಥಳದಲ್ಲಿದೆ.[10] ತಾಳಗುಂದದ ಹೋರಾಟದಲ್ಲಿ ಮಡಿದ ವೀರನಿಗೆ ಮತ್ತು ಆತನ ಹೆಂಡತಿ ಹುಕ್ಕಬ್ಬೆಗೆ ಇವರ ಮಗ ಜಿಯಸನು ವೀರಗಲ್ಲನ್ನು ನೆಡಿಸುತ್ತಾನೆ. ಶಾಸನವನ್ನು ಬರೆದವನು ಸಲುಗಯ್ಯನೆಂಬುವನು. ಮಡಿದ ವೀರನ ಹೆಂಡತಿಯು ಸಹಗಮನದಿಂದ ಸತ್ತಿರಬೇಕು. ಈ ಕಾರಣಕ್ಕೆ ಇಬ್ಬರಿಗೂ ವೀರಗಲ್ಲು ಮಾಡಿಸಿದ ಮಗನ ಉಲ್ಲೇಖ ಈ ಶಾಸನದಲ್ಲಿದೆ.[11]  ಇದೇ ರೀತಿ ತುಱುಗೊಳ್ ಮತ್ತು ಪೆಂಡಿರುಡೆ ಉರ್ಚ್ಚುವಾಗ ಹೋರಾಡಿ ಮಡಿದ ತಂದೆಗೆ ಅವನ ಮಗನಾದ ಪಾಲೆಯ ಗಾವುಂಡ ವೀರಗಲ್ಲನ್ನು ಮಾಡಿಸುತ್ತಾನೆ.[12] ಸಂಡದ ಹೋರಾಟದಲ್ಲಿ ಕಮ್ಮಾರ ಬಂಮ್ಮನು ಹೋರಾಡಿ ಮಡಿದಾಗ ಇವನ ಮಗ ಚಿಕ್ಕನು ವೀರಗಲ್ಲು ನಿಲ್ಲಿಸುತ್ತಾನೆ. ವೀರಗಲ್ಲು ಕೆತ್ತಿದವನು ಕಟ್ಟಕರ್ಜ್ಜನನು. ಈ ಶಾಸನದ ಕವಿ ಮಾರಮಯ್ಯನೆಂಬುವನಾಗಿದ್ದಾನೆ.[13] ಬಾಗ್ಗುಳಿ ಸಿರಿಯಂಣ್ನನೆಂಬುವನು ದನಗಳನ್ನು ಮತ್ತು ಹೆಣ್ಣುಗಳನ್ನು ರಕ್ಷಿಸಿ ಸತ್ತಾಗ ಇವನ ತಮ್ಮನು ಪರೋಕ್ಷ ವಿನಯದಿಂದ ಅಣ್ಣನಿಗಾಗಿ ವೀರಗಲ್ಲನ್ನು ನಿಲ್ಲಿಸುತ್ತಾನೆ.[14]

ಜಿತೇನಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿನ್ತಾ ಮರಣೇ ರಣೇ ಎಂಬ ಶ್ಲೋಕದ ಅರ್ಥವನ್ನು ತಿಳಿದವನಾದ ಮಾಚಗಾವುಂಡನು ಶತ್ರುಗಳೊಡನೆ ಹೋರಾಡಿ ಮಡಿಯುತ್ತಾನೆ. ಆಗ ಇವನ ಅಣ್ಣ ಚಿಟ್ಟಗಾವುಂಡ, ಸತ್ತ ಮಾಚನ ಹೆಂಡತಿ ಚಾಗಿಯಬ್ಬೆ, ಇವಳ ಮಗ ನಾಲಯ್ಯ ಮೂವರೂ ಕೂಡಿ ಮತ್ತಿಗಟ್ಟದ ಭೂಮಿಯಲ್ಲಿ ಬ್ರಾಹ್ಮಣನಾದ ಮಧುವಯ್ಯನ ಕಾಲನ್ನು ತೊಳೆದು ೩೦ ಕಮ್ಮ ಗದ್ದೆಯನ್ನು ದಾನವಾಗಿ ನೀಡುವರು. ಅಣ್ಣ, ಹೆಂಡತಿ, ಮಗ ಮೂವರೂ ಸೇರಿ ಮಡಿದವನಿಗೆ ಪುಣ್ಯವಾಗಲಿಯೆಂದು ಈ ಭೂಮಿದಾನ ಮಾಡಿರುವರು.[15]

ಗಂಡರದೇವನೆಂಬುವನು ತುಱುಗಳನ್ನು, ಸ್ತ್ರೀಯರನ್ನು ರಕ್ಷಿಸಿ ಮಡಿದಾಗ “…. ದೇವಾಂಗನೆಯ ….ವಿಮಾನವನೇಱೆ ದೇವ ದುಂದುಭಿಗಳೆಸೆಯೆ ದೇವಲೋಕಕ್ಕೆ ಸಲ್ಲುತ್ತಾನೆ. ಸುರವನಿತೆಯರು ಪ್ರೀತಿಯಿಂದ ಅವನ ಮೇಲೆ ಹೂಮಳೆಗರೆದರಂತೆ. ಶಾಸನವನ್ನು ಬರೆದವನ ಹೆಸರು ‘. . . ಕಿಲವ’ ಎಂದಿದ್ದು ಕೆತ್ತಿದವನು ಚಾವುಂಡೋಜನ ಮಗ ಬಮ್ಮೋಜನಾಗಿದ್ದಾನೆ.[16]

ಜೋರಡಿಯ ವೀರಗಲ್ಲು ಶಾಸನವನ್ನು ಕೆತ್ತಿದವನು ಮಾಲೋಜನೆಂಬುವನಾಗಿದ್ದು ಈ ವೀರಗಲ್ಲನ್ನು ನಿಲ್ಲಿಸಿದವನು ಚಿಲದಳಾಱನೆಂಬುವನು.[17] ಬರ್ಮ್ಮಸಾಂತನು ಶತ್ರುಗಳೊಂದಿಗೆ ಹೋರಾಡಿದ ರೀತಿಯನ್ನು ಕವಿಯು ಈ ಕೆಳಗಿನಂತೆ ಚಿತ್ರಿಸಿದ್ದಾನೆ.

ಕಡುಮುಳಿದು ಬಮ್ಮು ಸಾಂತಂ
ಕಡಿತಲೆಪಲಗೆಯುಮಕೊಂಡು ಸಾನ್ತರನಾಳಂ
ಕಡಿಖಂಡಮಾಡಿ ಪೊಯ್ದಡೆ
ಕೆಡೆದುದು ಧಾರಿಣಿಯ ಮೇಲೆ ವೈರಿಸಮೂಹಂ

ಹೀಗೆ ಹೋರಾಡಿ ತಱುಗಳನ್ನು ಮತ್ತು ಸ್ತ್ರೀಯರನ್ನು ಮುಕ್ತಿಗೊಳಿಸಿ ಮಡಿದವನಿಗೆ ಸಾನ್ತಲೆ ಶಾಸನವನ್ನು ನಿಲ್ಲಿಸುತ್ತಾಳೆ. ಶಾಸನವನ್ನು ಕೆತ್ತಿದವನು ಕಾಳೋಜನೆಂಬ ಶಿಲ್ಪಿ.[18]

ಕಾಗಿನೆಲ್ಲಿ ಗ್ರಾಮದ ವೀರಗಲ್ಲೊಂದರಲ್ಲಿ ಈ ಕೆಳಗಿನಂತೆ ವರ್ಣನೆಯಿದೆ.
‘…. ಬಿಟ್ಟಿಯರಸಂ ಹಾಹನೂರ ಸುತ್ತಿಕೊಂಡ ಕೋಟೆ ಹೋಗಿ ಪೆಂಡಿರುಡೆಯುರ್ಚ್ಚುವಲ್ಲಿ ಹೆಱಗೆ ಹಳಿವರ ಗಂಡಂ ಬಂಟರ ಬಾವಂ…ರ ತೊತ್ತು ಜಿಡುಗೂರ ಮಲ್ಲೆಯ ನಾಯಕನ ತಮ್ಮ ನೆಕ್ಕಟಿಗ ರಾಜಣಂ ಕಂಡು ಬಪ್ಪ… ಕುದುರೆಯಂ ಕರದು ಮೂದಲಿಸಿ ಪರಿದು ತಾಗಿಯರ್ಮ್ಮಿದರಂ ಕೊಂದು ಅಂಜಿದರಂ ಕಾಯ್ದು ಕಳಿಪಿ ಪಗೆಯ ಬೀಡು ಸಂಗಡಮಂ ಪೊಗಳೆ ತಮ್ಮಣ್ಣನ ಪೆಸರುಮಂ ತನ್ನ ಗಂಡುಮ ನಿಲಿಸಿ ಮುಂದಣಡಿಯಂ ಪೆಱಗಿಡದೆ ಸುರಲೋಕ ಪ್ರಾಪ್ತನಾದ ಎಂದು ವಿವರಿಸಿದೆ. ಜಿಡುಗೂರ ಮಲ್ಲೆಯನಾಯಕನ ತಮ್ಮನಾದ ಎಕ್ಕಟಿಗನಾದ ರಾಜಣ್ಣನು ಶತ್ರುಗಳ ಕುದುರೆಗಳನ್ನು ತಡೆದು, ಅವನ್ನು ಬೆದರಿಸಿ, ಬಡಿದು ಶತ್ರುಗಳನ್ನು ಕೊಲ್ಲುತ್ತಾನೆ. ಹೆದರಿಕೊಂಡು ಶರಣಾಗತರಾದವರನ್ನು ರಕ್ಷಿಸಿ, ಅವರನ್ನು ಹಿಂದಕ್ಕೆ ಕಳುಹಿಸಿ, ಶತ್ರುಗಳ ಗುಂಪೂ ಹೊಗಳುವ ಹಾಗೆ ತನ್ನ ಅಣ್ಣನ ಹೆಸರನ್ನು ಮತ್ತು ತನ್ನ ಗಂಡಸುತನ (ಶೌರ್ಯ್ಯ) ವನ್ನು ಶಾಶ್ವತವಾಗಿ ಭೂಮಿಯಲ್ಲಿ ನಿಲ್ಲುವಂತೆ ಮಾಡಿದ. ಎಲ್ಲರ ಜೊತೆ ‘ಪಗೆಯ ಬೀಡು ಪೊಗಳೆ’ ಎಂಬ ಮಾತು ಶಾಸನ ಕವಿಯ ಪ್ರತಿಭೆಯನ್ನು ತೋರಿಸುತ್ತದೆ. ಆದರೆ ಶಾಸನದಲ್ಲಿ ಶಾಸನ ಕವಿಯ ಉಲ್ಲೇಖವಿಲ್ಲ.[19] ಮುತ್ತೂರಿನ ಊರೞಿವಿನಲ್ಲಿ ಮತ್ತು ಪೆಂಡಿರುಡೆಯುರ್ಚ್ಚುವ ಸಮಯದಲ್ಲಿ ಕಮ್ಮಾರ ಕುಲದ ಮಾಚನೆಂಬುವನು ಹೋರಾಡಿ ಮಡಿಯುತ್ತಾನೆ. ಆಗ ಈತನ ಅಣ್ಣನಾದ ಹಳ್ಳಿಗನಿಗೆ ಗೊಟ್ಟಗಡಿಯ ಜಕ್ಕಿಗಾವುಂಡ, ಕಂಕಗಾವುಂಡ ಮತ್ತು ಸಮಸ್ತ ಪ್ರಜೆಗಳೆಲ್ಲರೂ ಸೇರಿ ಒಟ್ಟು ೬೨ ಕಮ್ಮ ಭೂಮಿಯನ್ನು ದಾನವಾಗಿ ನೀಡುತ್ತಾರೆ. ದೇವರದಾನದ ಭೂಮಿಯ ಸಮೀಪವೇ ವೀರನಿಗೂ ದಾನ ನೀಡಿರುವುದು ಅವನ ಶೌರ್ಯ್ಯವನ್ನು ಗೌರವಿಸುತ್ತಿದ್ದ ಪರಿ ತಿಳಿಯುತ್ತದೆ.[20] ಹಿರೇಮಾಗಡಿಯ ವೀರಗಲ್ಲೊಂದರಲ್ಲಿ ಕೊನೆಯ ಭಾಗದಲ್ಲಿ ಶಿಲ್ಪಿ ಅಥವಾ ಕವಿಯ ಹೆಸರಿಲ್ಲದೆ ಕೇವಲ ‘ಸರಸ್ವತ್ಯಾಯ ನಮಃ’ ಎಂದು ಸರಸ್ವತಿಯನ್ನು ನೆನೆಯಲಾಗಿದೆ.[21] ಮಡಿದ ಇಬ್ಬರು ಅಣ್ಣಂದಿರ ಹೆಣಗಳನ್ನು ಕಂಡು ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಕೈಗೊಂಡು ಶತ್ರುಗಳ ಮೇಲೆ ಮರು ಧಾಳಿಯನ್ನು ಕೈಗೊಂಡು  ಕದ್ದ ದನ – ಕರುಗಳನ್ನು ಹಿಂದಕ್ಕೆ ತರುತ್ತಾನೆ. ಮತ್ತು ಮಡಿದ ಇಬ್ಬರು ಅಣ್ಣಂದಿರಿಗೆ ಅಂತ್ಯಸಂಸ್ಕಾರವನ್ನು ಕೈಗೊಂಡು ಅವರ ನೆನಪಿಗೆ ವೀರಗಲ್ಲನ್ನು ನಿಲ್ಲಿಸುತ್ತಾನೆ. ಅಣ್ಣ ತಮ್ಮಂದಿರ ತ್ಯಾಗ, ಪ್ರೀತಿ ಇಲ್ಲಿ ಮಡುಗಟ್ಟಿದೆ. ಶಾಸನ ಕವಿಯು ದೇವಗಾವುಂಡ ಮತ್ತು ಮಲ್ಲಗಾವುಂಡರ ಹೋರಾಟವನ್ನು ಬಹಳ ಕಾವ್ಯಾತ್ಮಕವಾಗಿ ವರ್ಣಿಸಿದ್ದು ಆ ಭಾಗದ ಚಂಪಕಮಾಲಾ ವೃತ್ತವು ಈ ಕೆಳಗಿನಂತಿದೆ.

ಮಲೆದಿದಿರಾಂತ ಮಾರ್ವ್ವಲವನಳ್ಳುಱೆತಾಗಿ ಭುಜಪ್ರತಾಪದಿಂ
ದಲಗನೆಕಿರ್ತ್ತು ಪೊಯ್ಯೆ ನಿರತಂ ಕಣಕಾಲ್ಮೊಳಕಾಲ್ಮುಖಂ ಭುಜಂ
ತಲೆಬಳೆಯಾಗೆ ಸಂಬಳಿತಯೋಪಿನದೊಂದೆರ ಡಟ್ಟಿಯೋಡಲುಂ
ತೊಲಗದೆ ನಿಂದು ತಳ್ತಿಱೆದರಿರ್ಬ್ಬರುಮಾಹವರಂಗಭೂಮಿಯೊಳ್

ಎಂದು ವರ್ಣಿಸಿದ್ದಾನೆ. ಒಟ್ಟು ೨೨ ಸಾಲುಗಳಿರುವ ಈ ಶಾಸನವು ವೀರಗಲ್ಲು ಸಾಹಿತ್ಯದಲ್ಲೇ ಶ್ರೇಷ್ಠವಾದ ಪಾಠವಾಗಿದೆ.[22]  ಆದರೆ ಈ ವೀರಗಲ್ಲಿನ ಶಿಲ್ಪದಲ್ಲಿ ಪೆಣ್ಬುಯ್ಯಲ್ ದೃಶ್ಯವಿಲ್ಲ. ಸಾಧಾರಣ ತುಱುಗಾಳಗದ ಶಿಲ್ಪವಿದೆ. ಸಾಹಿತ್ಯಕ್ಕೆ ಪೂರಕವಾಗಿ ಶಿಲ್ಪಿಯೂ ದೃಶ್ಯವನ್ನು ಕಂಡರಿಸಿದ್ದರೆ ಶಾಸನ ಪ್ರಪಂಚಕ್ಕೆ ಈ ವೀರಗಲ್ಲು ಅಮೋಘ ಕೊಡುಗೆಯಾಗುತ್ತಿತ್ತು.

ಕೂಳಗ ಗ್ರಾಮದ ಮುತ್ತಿಗೆಯ ವೇಳೆ ವೀರತನದಿಂದ ಕಾದು ಮಡಿದ ಕಿಳ್ಳ ಮತ್ತು ಹಳ್ಳಿಗನೆಂಬ ಇಬ್ಬರು ವೀರರಿಗೆ ಗ್ರಾಮದ ಗೌಡನಾದ ಕಿತ್ತಿಗೌಡನು ಅರುವತ್ತೊಕ್ಕಲು ಭೂಮಿಯನ್ನು ದಾನವಾಗಿ ನೀಡುವನು. ಈ ಉಂಬಳಿಯನ್ನು ಅಳಿದವನಿಗೆ ಶಾಪವನ್ನು ನೀಡಲಾಗಿದೆ. ಕುಪ್ಪಟೂರಿನ ಚಿಂಮ್ಮರ ಬಾಚಿಮಯ್ಯನ ಪುತ್ರ ಚಟ್ಟಮಯ್ಯ ಈ ಶಾಸನವನ್ನು ಬರೆದಿರುವನು.[23] ಕಾಳೆಯನಾಯಕನು ಮಡಿದಾಗ ಅವನ ಮಗನಾದ ಸೊಮೆಯ ಬಮ್ಮಯ್ಯಂಗಳು, ಬೇಡರ ಜಕ್ಕನೆಂಬುವನು ಮಡಿದಾಗ ಅವನ ಮಕ್ಕಳು ದೇವಣ ಮತ್ತು ಮಾರೆಯ್ಯರು ವೀರಗಲ್ಲುಗಳನ್ನು ನಿಲ್ಲಿಸಿ ತಂದೆಯ ಶೌರ್ಯಕ್ಕೆ ಗೌರವವನ್ನು ತೋರಿಸಿದ್ದಾರೆ.[24] ಮಾರಿಯ ದವಡೆಯಲ್ಲಿ ಸಿಲುಕಿದಂತೆ ಶತ್ರುಗಳನ್ನು ಹೊಸೆದು ಹಾಕಿದ ವೀರನಿಗೆ ಗ್ರಾಮದ ಮಹಾಜನಂಗಳು ಮೆಚ್ಚಿಕೊಂಡು ಅವನಿಗೆ ನೆತ್ತರುಗೊಡುಗೆಯಾಗಿ ವೀರನ ಮಗನಾದ ಮಾಕೆಯನಾಯಕನಿಗೆ ಹತ್ತು ಕೆಯ್ಯಿ ಮನೆಯನ್ನು ಸರ್ವ್ವಬಾಧಾಪರಿಹಾರವಾಗಿ ದಾನವನ್ನು ನೀಡಿ ಗೌರವಿಸುವರು.[25]

ಮಾಳಯ್ಯನ ಮಗ ಸೋಮಯ್ಯನು ಮತ್ತು ಜೊತೆಯಿದ್ದ ಬೆಚ್ಚೆಯ ಮಾವನುಂ ಇಬ್ಬರೂ ಕೂಡಿ ಕಳ್ಳರೊಂದಿಗೆ ಹೋರಾಡಿ ಸ್ತ್ರೀಯರನ್ನು ರಕ್ಷಿಸುವರು. ಆಗ ಮಡಿದ ಸೋಮೆಯನ ಹಿರಿಯ ಅಣ್ಣ ಕಲ್ಲೆಯ, ತಂಮ ಬೆನಚೆಯ, ಚಿಕ್ಕಪ್ಪ ಕಟ್ಟಿದ ಹಳ್ಳಿಯ ಮಾದಿಗೌಡ ಮೂವರೂ ಸೇರಿ ವೀರಗಲ್ಲನ್ನು ನಿಲ್ಲಿಸುವರು. ವೀರಗಲ್ಲಿನ ಪಾಠವನ್ನು ಈ ಶಾಸನದಲ್ಲಿ ವೀರವಸ್ತುವೆಂದು, ವೀರಗಲ್ಲನ್ನು ಶಿಲಾಲೇಖೆಯೆಂದೂ ವಿಶೇಷವಾಗಿ ಕರೆಯಲಾಗಿದೆ. ಚಟ್ಟಗೌಡರ ಕೆರೆಯ ಕೆಳಗೆ ಗದ್ದೆಯನ್ನು ದಾನ ಮಾಡಿದ ಮೇಲ್ಕಂಡವರು ಸೋಮಜೀಯನೆಂಬ ಪುರೋಹಿತನಿಗೆ ದಾನವನ್ನು ನೀಡಿ ಪ್ರತಿದಿನ ಈ ವೀರಗಲ್ಲಿಗೆ ನೈವೇದ್ಯವನ್ನು ಮಾಡಿ, ಹೂವು – ಪತ್ರೆಯಿಂದ ಪೂಜೆಯನ್ನು ಮಾಡಬೇಕೆಂದು ಕಟ್ಟಳೆ ವಿಧಿಸುವರು. ಈ ವೀರಗಲ್ಲನ್ನು ಪೂಜೆ ಮಾಡದೆ ಉದಾಸೀನ ಮಾಡಿ ದಾನವನ್ನು ಅನುಭವಿಸಿದರೆ ಕವಿಲೆಯ ಕೊಂದ ಪಾಪ ಬರುತ್ತದೆಂಬ ಶಾಪವನ್ನೂ ಹೇಳಲಾಗಿದೆ. ಈ ಶಾಸನದ ಮೇಲೆ ಪ್ರಸಿದ್ಧ ಆತಕೂರು ಶಾಸನದ ಪ್ರಭಾವವಿರುವುದನ್ನು ಕಾಣಬಹುದಾಗಿದೆ. ಈ ಶಾಸನವು ವೀರರಿಗೂ, ಅವರಿಗೆ ನೀಡಿದ ದಾನಕ್ಕೂ ಇರುವ ಗೌರವವನ್ನು ಎತ್ತಿ ಹಿಡಿಯುತ್ತದೆ.[26]  ಪರಿಸಗರ ಬಸವನು ಊರೞಿವಿನಲ್ಲಿ ಮಡಿದಾಗ ಅವನ ಮಗ ಕಳಿಗ, ಬಮ್ಮಗೌಡ ಮತ್ತು ಊರಿನ ಪ್ರಜೆಗಳೆಲ್ಲರೂ ಕೂಡಿ ಕಲಕೆಱೆಯ ಪೂರ್ವಕ್ಕೆ ಕೆರೆ ಏರಿಯ ಕೆಳಭಾಗದ ಫಲವತ್ತಾದ ೧೨ ಹಕ್ಕಲು ಭೂಮಿಯನ್ನು, ಗೌಡರು ತಮ್ಮ ಉಂಬಳಿಯಲ್ಲಿನ ೨೦ ಕಮ್ಮ ಭೂಮಿಯನ್ನು ದಾನವಾಗಿ ನೀಡುವರು.[27] ಚಿಟ್ಟೂರಿನ ವೀರಗಲ್ಲು ಪಾಠದ ಕೊನೆಯಲ್ಲಿ ಓಂ ನಮ ಶಿವಾಯ’ ವೆಂಬ ಮಾತಿದೆ. ಇದು ವೀರಗಲ್ಲು ಪ್ರಕ್ರಿಯೆಯನ್ನು ಧಾರ್ಮಿಕಗೊಳಿಸಿ ದೇವರ ಕಾರ್ಯಕ್ಕೆ ಸಮಾನವೆಂಬ ಭಾವನೆಯನ್ನೂ, ವೀರನು ಸತ್ತು ದೇವಲೋಕಕ್ಕೆ ಹೋದನೆಂಬ ಗೌರವವನ್ನೂ ಹುಟ್ಟಿಸುತ್ತದೆ.[28]

ಹೀಗೆ ಅನೇಕ ಬಗೆಯಲ್ಲಿ ಸ್ತ್ರೀ ಮಾನರಕ್ಷಣೆಗಾಗಿ ಹೋರಾಡಿ ಮಡಿದ ವೀರರಿಗೆ ಅವರ ತ್ಯಾಗಕ್ಕೆ ಉನ್ನತಿಯ ಭಾವನೆಯನ್ನು ನೀಡಿದ ಸಮಾಜವು ಭೂದಾನವನ್ನು ನೀಡುವುದರ ಮೂಲಕ ಅನಾಥವಾದ ಅವರ ಕುಟುಂಬಕ್ಕೆ ಆಶ್ರಯವನ್ನೂ, ಬದುಕಿನಲ್ಲಿ ಸ್ಥಿರತೆಯನ್ನೂ ಮೂಡಿಸುವ ಕೆಲಸ ಮಾಡುತ್ತಿದ್ದರು. ಗ್ರಾಮ ರಕ್ಷಣೆಗಾಗಿ, ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡಿ ಮಡಿದವರಿಗೆ ಗ್ರಾಮದವರಲ್ಲದೆ, ಅವರ ಕುಟುಂಬದ ತಂದೆ, ತಾಯಿ, ಚಿಕ್ಕಪ್ಪ, ಅಣ್ಣ, ತಮ್ಮ, ಅಳಿಯ, ಮಾವ, ಹೆಂಡತಿ, ಮಕ್ಕಳೂ ಕೂಡ ವೀರಗಲ್ಲನ್ನು ನಿಲ್ಲಿಸಿ ಗೌರವಿಸುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ.

ಪೆಣ್ಬುಯ್ಯಲ್ ಶಾಸನಶಿಲ್ಪ

ಪೆಣ್ಬುಯ್ಯಲ್ ಅಥವಾ ಪೆಂಡಿರುಡೆಯುರ್ಚ್ಚುವ ವಿಷಯ ತಿಳಿಸುವ ವೀರಗಲ್ಲುಗಳ ಅಧ್ಯಯನದಲ್ಲಿ ದೊಡ್ಡ ಕೊರತೆಯೆಂದರೆ ಆ ವೀರಗಲ್ಲುಗಳ ಶಿಲ್ಪ ಮತ್ತು ಪಾಠದ ಲಭ್ಯತೆ. ಅನೇಕ ವೀರಗಲ್ಲುಗಳಲ್ಲಿ ಕೇವಲ ಶಿಲ್ಪವಿರುತ್ತದೆ. ಇನ್ನೂ ಕೆಲವು ವೀರಗಲ್ಲುಗಳಲ್ಲಿ ಕೇವಲ ಪಾಠ ಮಾತ್ರವಿರುತ್ತದೆ. ಶಿಲ್ಪವು ದೊರೆಕಿದರೂ ಅದು ಸಾಧಾರಣ ವೀರಗಲ್ಲಿನಂತೆಯೇ ಇರುತ್ತದೆ. ಹೀಗಾಗಿ ಎರಡೂ ಪ್ರಕಾರದವುಗಳನ್ನು ಒಟ್ಟಿಗೆ ಸೇರಿಸಿ ಅಧ್ಯಯನ ಮಾಡಿದಾಗ ಅನೇಕ ಹೊಸ ವಿಷಯಗಳು ದೊರೆಯುತ್ತವೆ.

ಶಿಲ್ಪದ ದೃಷ್ಠಿಯಿಂದ ಗಮನ ಸೆಳೆಯುವ ಪೆಣ್ಬುಯ್ಯಲ್ ವೀರಗಲ್ಲು ಅಬ್ಬಲೂರಿನಲ್ಲಿದೆ. ಕ್ರಿ. ಶ. ೧೨೧೯ರ ಒಂದು ವೀರಗಲ್ಲು ಮೂರು ಹಂತಗಳನ್ನು ಹೊಂದಿದ್ದು ವೀರರಾದ ಮಾಚ ಮತ್ತು ಗೋಮರು ಶತ್ರುಗಳೊಂದಿಗೆ ಹೋರಾಡಿ ದನ ಕರುಗಳನ್ನು, ಸ್ತ್ರೀಯರನ್ನು ಸೆರೆಯಿಂದ ಬಿಡಿಸಿದ ದೃಶ್ಯವನ್ನು ಮನ ಮಿಡಿಯುವಂತೆ ಚಿತ್ರಿಸಲಾಗಿದೆ. ವೀರಗಲ್ಲಿನ ಕೆಳಹಂತ ವೀರಗಲ್ಲಿನ ಅರ್ಧ ಭಾಗಕ್ಕೂ ಹೆಚ್ಚಿನದನ್ನು ಆವರಿಸಿದೆ. ಈ ಭಾಗದಲ್ಲಿ ಮಾಚ ಮತ್ತು ಗೋಮರು ಬಿಲ್ಲುಗಳನ್ನು ಹಿಡಿದು ಹೋರಾಡುತ್ತಿರುವಂತೆ ಚಿತ್ರಿಸಲಾಗಿದೆ. ವೀರರ ಹಿಂಬದಿಯಲ್ಲಿ ಎರಡೆರಡು ಹಂತಗಳಲ್ಲಿ ನಗ್ನ ಸ್ತ್ರೀಯರನ್ನು ಮತ್ತು ಗೋವುಗಳನ್ನು ಚಿತ್ರಿಸಲಾಗಿದೆ. ನಗ್ನ ಸ್ತ್ರೀಯರಲ್ಲಿ ಇಬ್ಬರು ಸಣ್ಣ ಮಕ್ಕಳನ್ನು ಎತ್ತಿಕೊಂಡಿರುವರು. ಎಲ್ಲರ ಮುಡಿಯೂ ಬಿಚ್ಚಿಕೊಂಡಿದೆ. ಯುದ್ಧವು ಕೋಟೆಯ ಹೆಬ್ಬಾಗಿಲಲ್ಲಿ ನಡೆಯಿತೆಂಬುದನ್ನು ಸಾಂಕೇತಿಕವಾಗಿ ವೀರಗಲ್ಲಿನ ಬಲಭಾಗದ ಮೂಲೆಯಲ್ಲಿ ಕೋಟೆಯ ತೆನೆಗಳನ್ನು ಮತ್ತು ಪ್ರವೇಶ ದ್ವಾರವನ್ನು ಚಿತ್ರಿಸಲಾಗಿದೆ. ಶತ್ರುಗಳು ವೀರರ ಶೌರ್ಯವನ್ನು ಎದುರಿಸಲಾಗದೆ ಹಿಂತಿರುಗಿ ಓಡುತ್ತಿದ್ದಾರೆ. ಎರಡು ಭಾಗದಲ್ಲಿ ಒಟ್ಟು ಏಳು ಜನ ಸ್ತ್ರೀಯರನ್ನು ಚಿತ್ರಿಸಲಾಗಿದೆ. ಮಗುವನ್ನು ಎತ್ತಿಕೊಂಡ ಸ್ತ್ರೀಯರ ಶಿಲ್ಪವೂ ಇರುವುದರಿಂದ ಧಾಳಿಕೋರರು ಕೈಗೆ ಸಿಕ್ಕವರ ಮಾನಭಂಗ ಮಾಡುತ್ತಿದ್ದರೆಂದು ಹೇಳಬಹುದು. ಎರಡನೆ ಹಂತದಲ್ಲಿ ಎರಡು ಮಂಟಪಗಳಲ್ಲಿ (ವಿಮಾನ) ಇಬ್ಬರೂ ವೀರರನ್ನು ಪ್ರತ್ಯೇಕವಾಗಿ ನಾಲ್ಕು ಜನ ಅಪ್ಸರೆಯರು ಸ್ವರ್ಗ್ಗಕ್ಕೆ ಕರೆದೊಯ್ಯುತ್ತಿದ್ದಾರೆ. ವೀರರು ಕೈ ಮುಗಿದುಕೊಂಡು ಕುಳಿತಿದ್ದಾರೆ. ಇಡೀ ಹಂತವನ್ನು ಹೂವು ಮತ್ತು ತೋರಣಗಳ ಶಿಲ್ಪದಿಂದ ಅಲಂಕರಿಸಲಾಗಿದೆ. ಮೇಲಿನ ಹಂತದಲ್ಲಿ ಇಬ್ಬರು ವೀರರೂ ಶಿವಲಿಂಗದ ಮುಂದೆ ಕೈ ಮುಗಿಯುತ್ತ ಕುಳಿತಿರುವರು. ಇಬ್ಬರು ಅಪ್ಸರೆಯರು ಅವರಿಗೆ ಚಾಮರ ಬೀಸುತ್ತಿದ್ದು, ಶಿವಲಿಂಗವನ್ನು ಯತಿಯೊಬ್ಬನು ಪೂಜಿಸುವಂತೆ ಚಿತ್ರಿಸಲಾಗಿದೆ. ಶಿವಲಿಂಗದ ಮುಂದೆ ನಂದಿಯನ್ನು ಚಿತ್ರಿಸಲಾಗಿದೆ. ಇಡೀ ಶಿಲ್ಪವು ಪಾಠದಲ್ಲಿ ಹೇಗೆ ವೀರರನ್ನು ವೈಭವೀಕರಿಸಲಾಗಿದೆಯೋ ಅದೇ ರೀತಿ ವೈಭವದಿಂದ ಕೂಡಿದೆ. ಪಾಠಕ್ಕೆ ಅನುಗುಣವಾಗಿ ಶಿಲ್ಪವೂ ಪೂರಕವಾಗಿ ಚಿತ್ರಿತವಾಗಿರುವುದು ಶಿಲ್ಪಿಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.[29] ಇದೇ ಸ್ಥಳದಲ್ಲಿರುವ ಮತ್ತೊಂದು ವೀರಗಲ್ಲು ನಾಲ್ಕು ಹಂತಗಳಲ್ಲಿದ್ದು, ಕೆಳಹಂತದಲ್ಲಿ ವೀರನು ನಾಲ್ಕು ಜನ ಶತ್ರುಗಳೊಂದಿಗೆ ಹೋರಾಡುತ್ತಿದ್ದಾನೆ. ಒಂದು ಕೈಯಲ್ಲಿ ಗುರಾಣಿಯನ್ನು ಮತ್ತೊಂದು ಕೈಯಲ್ಲಿ ಕಿರುಗತ್ತಿಯನ್ನು ಹಿಡಿದು ಶತ್ರುಗಳನ್ನು ಇರಿಯುತ್ತಿದ್ದಾನೆ. ಶತ್ರುಗಳು ಭರ್ಜಿಗಳೊಂದಿಗೆ ಧಾಳಿ ಮಾಡುತ್ತಿದ್ದಾರೆ. ಒಂದಿಬ್ಬರು ಶತ್ರುಗಳು ಸತ್ತು ಬಿದ್ದಿರುವರು. ವೀರನ ಹಿಂದೆ ಮೂವರು ನಗ್ನ ಸ್ತ್ರೀಯರ ಚಿತ್ರಣವಿದ್ದು, ಅದರಲ್ಲಿ ಇಬ್ಬರು ಪೂರ್ಣ ನಗ್ನರಾಗಿದ್ದಾರೆ. ಒಬ್ಬಳು ಒಂದು ಕೈಯಲ್ಲಿ ಮಗುವನ್ನು ಹಿಡಿದು ನಿಂತಿದ್ದಾಳೆ. ಎಲ್ಲರ ಮುಡಿ ಬಿಚ್ಚಿಕೊಂಡಿದೆ. ಅವರು ನಗ್ನರಾಗಿರುವುದು, ಶತ್ರುಗಳತ್ತ ಕೈ ಮಾಡಿರುವುದು ಮತ್ತು ಅವರ ಮುಡಿ ಬಿಚ್ಚಿರುವುದು ಅವರ ಮೇಲೆ ನಡೆದ ಧಾಳಿಯನ್ನು ಬಿಂಬಿಸುತ್ತದೆ. ಇವರ ಮೇಲಿನ ಭಾಗದಲ್ಲಿ ನಾಲ್ಕು ದನಗಳನ್ನೂ ಚಿತ್ರಿಸಲಾಗಿದೆ. ಎರಡನೆಯ ಹಂತದಲ್ಲಿ ನಾಲ್ಕು ಜನ ಅಪ್ಸರೆಯರು ವೀರನನ್ನು ಸ್ವರ್ಗ್ಗಕ್ಕೆ ಕರೆದೊಯ್ಯುತ್ತಿರುವರು. ಮೂರನೇ ಹಂತದಲ್ಲಿ ವಾದ್ಯಕಾರರೊಡನೆ ವಿಮಾನದಲ್ಲಿ ಕುಳಿತು ವೀರನು ಸ್ವರ್ಗ್ಗಕ್ಕೆ ಹೊರಟಿದ್ದಾನೆ. ಮೇಲಿನ ಭಾಗದಲ್ಲಿ ವೀರನು ಶಿವಲಿಂಗದ ಮುಂದೆ ಕೈ ಮುಗಿಯುತ್ತ ಕುಳಿತಿದ್ದು, ಉದ್ದನೆಯ ಜಡೆಯಿರುವ ಮುನಿಯು ಶಿವಲಿಂಗವನ್ನು ಪೂಜಿಸುತ್ತಿದ್ದಾನೆ. ಲಿಂಗದ ಮುಂದೆ ನಂದಿಯನ್ನು ಚಿತ್ರಿಸಲಾಗಿದೆ. ಇದು ವೀರನು ಸ್ವರ್ಗ್ಗ ಸೇರಿದ್ದನ್ನು ಪ್ರತಿನಿಧಿಸುತ್ತದೆ.[30]

ಲಕ್ಕುಂಡಿ ವಸ್ತು ಸಂಗ್ರಹಾಲಯದಲ್ಲಿನ ತ್ರುಟಿತ ವೀರಗಲ್ಲಿನಲ್ಲಿ ಹೋರಾಡುತ್ತಿರುವ ವೀರನ ಹಿಂದೆ ದನಗಳನ್ನು ಮತ್ತು ಇಬ್ಬರು ಸ್ತ್ರೀಯರನ್ನು ಚಿತ್ರಿಸಲಾಗಿದೆ. ಶತ್ರುಗಳು ಬಿಟ್ಟ ಬಾಣಗಳು ವೀರನ ಕಾಲು, ಸೊಂಟ, ಹೊಟ್ಟೆ ಮತ್ತು ಮುಖಗಳಿಗೆ ಚುಚ್ಚಿಕೊಂಡಿವೆ. ಶತ್ರುವೊಬ್ಬನು ಸತ್ತು ಬಿದ್ದಿದ್ದಾನೆ. ಈ ಶಿಲ್ಪವೂ ಪೆಣ್ಬುಯ್ಯಲನ್ನು ಸೂಚಿಸುತ್ತದೆ.[31]

ಬಾದಾಮಿ ವಸ್ತು ಸಂಗ್ರಹಾಲಯದಲ್ಲಿನ ವೀರಗಲ್ಲಿನಲ್ಲಿ ಮೂರು ಹಂತಗಳಿದ್ದು, ಮೊದಲ ಹಂತದಲ್ಲಿ ವೀರನು ಅನೇಕ ಶತ್ರುಗಳೊಂದಿಗೆ ಹೋರಾಡುತ್ತಿರುವಂತೆಯೂ, ಅವನ ಹಿಂದೆ ಮೂವರು ನಗ್ನ ಸ್ತ್ರೀಯರನ್ನೂ ಚಿತ್ರಿಸಲಾಗಿದೆ. ಎರಡನೆ ಹಂತದಲ್ಲಿ ವೀರನು ಅಪ್ಸರೆಯರ ಹೆಗಲ ಮೇಲೆ ಕೈ ಹಾಕಿಕೊಂಡು ಸ್ವರ್ಗ್ಗಕ್ಕೆ ಹೋಗುತ್ತಿದ್ದಾನೆ. ಸುತ್ತಲೂ ಅನೇಕ ವಾದ್ಯಕಾರರು ವಾದ್ಯಗಳನ್ನು ನುಡಿಸುತ್ತಿದ್ದಾರೆ. ಮೂರನೇ ಹಂತದಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿರುವಂತೆಯೂ ಚಿತ್ರಿಸಲಾಗಿದೆ. ವೀರನನ್ನು ದೊಡ್ಡದಾಗಿ ಚಿತ್ರಿಸಲಾಗಿದ್ದು, ಕೊರಳಿಗೆ ದಪ್ಪ ದಪ್ಪ ಮಣಿಗಳ ಸರವನ್ನು, ಕಿವಿಗಳಿಗೆ ದೊಡ್ಡದಾಗಿ ರಿಂಗುಗಳನ್ನು ಹಾಕಿಕೊಂಡಿರುವನು. ತನ್ನ ಬೆನ್ನ ಹಿಂಬದಿಗೆ ಕಟ್ಟಿಕೊಂಡಿರುವ ಬತ್ತಳಿಕೆಯಿಂದ ಬಾಣವನ್ನು ಹೊರೆಗೆಳೆಯುತ್ತಿದ್ದಾನೆ. ಶತ್ರುವಿನ ತಲೆಗೆ ವೀರನು ಬಿಟ್ಟ ಬಾಣವು ನಾಟಿಕೊಂಡಿದೆ. ವೀರನ ಹಿಂದಿರುವ ನಗ್ನ ಸ್ತ್ರೀಯರಲ್ಲಿ ಒಬ್ಬಳು ಬಿಚ್ಚಿದ ಬಟ್ಟೆಯನ್ನು ಕೈಯಲ್ಲಿ ಹಿಡಿದಿದ್ದು ಇದು ಮಾನಭಂಗಕ್ಕೆ ಒಳಗಾಗುತ್ತಿದ್ದ ಸ್ತ್ರೀಯರು ಕಳಚಿದ ಬಟ್ಟೆಯನ್ನು ಧರಿಸಲೂ ಸಮಯವಿಲ್ಲದೆ ಭಯದಿಂದ ದಿಕ್ಕೆಟ್ಟು ಓಡಿ ಬಂದಿರುವುದನ್ನು ಸೂಚಿಸುತ್ತಿದೆ. ಇಡೀ ಶಿಲ್ಪ ಪೆಣ್ಬುಯ್ಯಲ್ ಸನ್ನಿವೇಶವನ್ನು ಸಮರ್ಥವಾಗಿ ಚಿತ್ರಿಸಿದೆ.[32]

ಪಟ್ಟದಕಲ್ಲಿನಲ್ಲಿರುವ ಒಂದು ವೀರಗಲ್ಲಿನಲ್ಲಿ ವೀರನು ಇಬ್ಬರು ಶತ್ರುಗಳೊಂದಿಗೆ ಹೋರಾಡುತ್ತಿದ್ದು, ಶತ್ರುಗಳು ವೀರನೆಡೆಗೆ ಬಾಣವನ್ನು ಪ್ರಯೋಗಿಸುತ್ತಿರುವರು, ಮತ್ತಿಬ್ಬರು ಶತ್ರುಗಳು ಕುದುರೆಗಳ ಮೇಲೆ ಕುಳಿತಿರುವರು. ವೀರನ ಹಿಂದೆ ಇಬ್ಬರು ಸ್ತ್ರೀಯರು ನಿಂತಿರುವರು. ಒಬ್ಬಳು ಸಣ್ಣ ಹುಡುಗನನ್ನು ಅಂದರೆ ಒಂದು ತನ್ನ ಮಗನನ್ನು ಹಿಡಿದು ನಿಂತಿದ್ದು ಸ್ತ್ರೀಯರು ವೀರನೆಡೆಗೆ ನೋಡುತ್ತಿದ್ದಾರೆ. ಇದು ಅವರ ಆತಂಕವನ್ನೂ ಮತ್ತು  ಅವರ ಮೇಲೆ ಆಕ್ರಮಣ ನಡೆದಾಗ ವೀರರು ಅವರನ್ನು ರಕ್ಷಿಸಲು ನಿಂತಿದ್ದನ್ನೂ ಸೂಚಿಸುತ್ತದೆ. ಎರಡನೆ ಹಂತದಲ್ಲಿ ವೀರನು ಅಪ್ಸರೆಯರೊಂದಿಗೆ ಸ್ವರ್ಗಕ್ಕೆ ಪ್ರಯಾಣಿಸುತ್ತಿದ್ದಾನೆ. ಇದು ಪೂರ್ಣವಾಗಿ ಚಾಲುಕ್ಯ ಶೈಲಿಯಲ್ಲಿದ್ದು ವೀರ ಅಪ್ಸರೆಯರು ಮತ್ತು ಆಗಸದಲ್ಲಿ ಹಾರುವ ಶೈಲಿಯಲ್ಲಿದ್ದಾರೆ. ಕಾಲದ ದೃಷ್ಠಿಯಿಂದ ಇದು ಕರ್ನಾಟಕದ ಪ್ರಾಚೀನ ಪೆಣ್ಬುಯ್ಯಲ್ ಸ್ಮಾರಕ ಶಿಲ್ಪವಾಗಿದೆ.[33]

ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳರ್ತಿಯಲ್ಲಿ ಕ್ರಿ. ಶ. ೧೦ನೇ ಶತಮಾನದ ವೀರಗಲ್ಲಿನ ಶಿಲ್ಪ ಬಹಳ ಮಹತ್ವದ್ದಾಗಿದೆ. ಬಲಮೂಲೆಯಲ್ಲಿ ಶತ್ರುವು ಹೆಂಗಸೊಬ್ಬಳ ವಸ್ತ್ರವನ್ನು ಸೆಳೆಯುತ್ತಿರುವಂತೆಯೂ, ಅವಳು ಅರೆ ನಗ್ನಳಾಗಿರುವಂತೆಯೂ ಚಿತ್ರಿಸಲಾಗಿದ್ದು, ಎಡಭಾಗದಲ್ಲಿ ವೀರನು ಅವನನ್ನು ಉದ್ದವಾದ ಭರ್ಜಿಯಿಂದ ತಿವಿಯುತ್ತಿರುವಂತೆಯೂ ಚಿತ್ರಿಸಲಾಗಿದೆ. ವೀರನ ಹಿಂದೆ ಸೈನಿಕರು ಕೈಯಲ್ಲಿ ಖಡ್ಗಗಳನ್ನು, ಕೊಂತಗಳನ್ನು ಹಿಡಿದು ಸಾಲಾಗಿ ಬರುತ್ತಿದ್ದಾರೆ. ಕೆಲವೀಹ ಶತ್ರುಗಳ ಹೆಣಗಳನ್ನು ತುಳಿಯುತ್ತ ಮುಂದುವರಿಯುತ್ತಿದ್ದಾರೆ. ಶತ್ರುವೊಬ್ಬನು ವೀರನೆಡೆಗೆ ಬಾಣವನ್ನು ಪ್ರಯೋಗಿಸುತ್ತಿದ್ದಾನೆ. ಮಾನಹಾನಿ ನಡೆಯುತ್ತಿದ್ದಾಗ ವೀರನು ಮತ್ತು ಸಂಗಡಿಗರು ಶತ್ರುಗಳ ಮೇಲೆ ದಾಳಿಯನ್ನು ಮಾಡಿ ಸ್ತ್ರೀಯರನ್ನು ರಕ್ಷಿಸುವ ಪ್ರಯತ್ನವನ್ನು ಶಿಲ್ಪಿಯು ಬಟ್ಟೆ ಸೆಳೆಯುತ್ತಿರುವ ಚಿತ್ರಣದ ಮೂಲಕ ಹೃದಯ ಕಲಕುವಂತೆ ಚಿತ್ರಿಸಿದ್ದಾನೆ.[34]

ಅಬ್ಬಲೂರಿನ ಕೆರೆಯ ಕೋಡಿಯ ಬಳಿ ಇರುವ ಶಾಸನ ಶಿಲ್ಪದಲ್ಲಿ ಕತ್ತಿಯನ್ನು ಹಿಡಿದವನೊಬ್ಬನು ಇಬ್ಬರು ಸ್ತ್ರೀಯರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾನೆ. ಆ ವ್ಯಕ್ತಿಯು ಕತ್ತಿಯನ್ನು ಸ್ತ್ರೀಯರ ಬೆನ್ನಿಗೆ ಚುಚ್ಚಿದ್ದು ಮತ್ತೊಂದು ಕೈಯಿಂದ ಅವಳ ತುರುಬನ್ನು ಹಿಡಿದಿದ್ದಾನೆ. ವೀರಗಲ್ಲಿನ ಬಲ ಮೂಲೆಯ ಮೇಲ್ಭಾಗದಲ್ಲಿ ವ್ಯಕ್ತಿಯೊಬ್ಬನು ಸ್ತ್ರೀಯ ಉಡುಪನ್ನು ಸೆಳೆಯುತ್ತಿರುವಂತೆ ಚಿತ್ರಿಸಲಾಗಿದೆ. ಇಡೀ ಶಿಲ್ಪವು ಸ್ತ್ರೀಯರ ಸೆರೆ ಅಥವಾ ಅಪಹರಣವನ್ನು ಮತ್ತು ಉಡೆಉರ್ಚ್ಚುವ ಪ್ರಸಂಗವನ್ನು ಒಳಗೊಂಡಿದೆ.

[1] ಪೆಣ್ಬುಯ್ಯಲ್ – ಒಂದು ವಿಶ್ಲೇಷಣೆ, ನಾ. ಗೀತಾಚಾರ್ಯ, ಸಾಧನೆ – ೯-೪

[2] ಅಬ್ಬಲೂರು, ಎ. ಇ. V, ಕ್ರಿ. ಶ. ೧೨೧೯

[3] ಕೊಂಡಿ, ಎ. ಕ. ೮ (ಹೊ), ಬೇಲೂರು – ೨೫೦, ಕ್ರಿ. ಶ. ೧೨೨೦

[4] ಅಗ್ರಹಾರಬಾಚಹಳ್ಳಿ, ಎ. ಕ. ೬ (ಹೊ), ಕೃ. ರಾ. ಪೇಟೆ – ೭೯, ಕ್ರಿ. ಶ. ೧೨೨೪

[5] ಹಾಲ್ತೊರೆ, ಎ. ಕ. ೯ (ಹೊ), ಬೇಳೂರು – ೫೦೫, ಕ್ರಿ. ಶ. ೧೨೩೦

[6] ಪೈದೇಟಿ, ಎಸ್.ಐ.ಐ. I – II – ೭೦೭, ೭೦೮, ಕ್ರಿ. ಶ. ೯ (ಆಂದ್ರಪ್ರದೇಶ).

[7] ಮನೆಮನೆ, ಎ.ಕ. VIII ಸೊರಬ – ೨೨, ಕ್ರಿ. ಶ. ೮೦೦

[8] ಬೆಟಗೇರಿ, ಎಸ್.ಐ.ಐ. X – I – ೨೧, ಕ್ರಿ. ಶ. ೮೯೩

[9] ಪೈದೇಟಿ, ಎಸ್.ಐ.ಐ. I – II – ೭೦೭, ೭೦೮, ಕ್ರಿ. ಶ. ೯

[10] ತಾವರೆಕೆರೆ, ಎ.ಕ.X, ಮಾಳ-೧೬೧, ೧೬೩, ಕ್ರಿ. ಶ. ೯೫೦

[11] ತಾಳಗುಂದ, ಎ. ಕ. VIII, ಶಿಕಾರಿ – ೧೯೫, ಕ್ರಿ.ಶ. ೧೦೦೮

[12] ನಂಬಿಹಳ್ಳಿ, ಎ.ಕ.X, ಶ್ರೀನಿವಾಸ – ೧೪, ಕ್ರಿ.ಶ. ೧೦೧೫

[13] ಸಂಡ, ಎ.ಕ. VIII, ಶಿಕಾರಿ – ೩೦೭, ಕ್ರಿ. ಶ. ೧೦೧೬

[14] ಮಲ್ಲೇಗೌಡನ ಕೊಪ್ಪಲು, ಎ.ಕ. ೫ (ಹೊ), ಮೈಸೂರು-೧೧೩, ಕ್ರಿ.ಶ. ೧೦೩೬

[15] ಅಡಗಂಟ,  ಎ.ಕ. VII, ಶಿಕಾರಿ – ೮೩, ಕ್ರಿ. ಶ. ೧೦೫೮

[16] ಲಕ್ಕುವಳ್ಳಿ,  ಎ.ಕ. VIII, ಸೊರಬ – ೩೧೪, ಕ್ರಿ. ಶ. ೧೦೭೫

[17] ಚೋರಡಿ, ಶಿವಮೊಗ್ಗ ಜಿಲ್ಲೆ, ಕ್ರಿ. ಶ. ೧೧೧೫

[18] ಉದ್ರಿ,  ಎ.ಕ. VIII, ಸೊರಬ – ೧೪೧, ಕ್ರಿ. ಶ. ೧೧೨೮

[19] ಕಾಗಿನೆಲ್ಲಿ, ಎಸ್.ಐ.ಐ. XVIII – ೧೬೯, ಕ್ರಿ. ಶ. ೧೧೩೫

[20] ಮುತ್ತೂರು, ಕ.ಇ. VI-೨೬, ಕ್ರಿ.ಶ. ೧೧೩೮

[21] ಹಿರೇಮಾಗಡಿ,  ಎ.ಕ. VIII, ಸೊರಬ – ೪೧೫, ಕ್ರಿ. ಶ. ೧೧೩೯

[22] ಕೊರಕೋಡು, ಎ.ಕ. VIII, ಸೊರಬ – ೧೭೫, ಕ್ರಿ. ಶ. ೧೧೫೬

[23] ಕೂಳಗ, ಎ.ಕ. VIII, ಸೊರಬ – ೧೯೩, ಕ್ರಿ. ಶ. ೧೧೬೩

[24] ತಾಳಗುಂದ, ಎ.ಕ. VII, ಶಿಕಾರಿ – ೧೮೧, ಕ್ರಿ. ಶ. ೧೧೭೦, ನಿಟ್ಟೂರು, ಎ.ಕ. ೮ (ಹೊ), ಹಾಸನ-೬೯, ಕ್ರಿ. ಶ. ೧೨೧೩

[25] ಕುಪ್ಪಟೂರು, ಎ.ಕ. VIII, ಸೊರಬ – ೨೫೧, ಕ್ರಿ. ಶ. ೧೧೭೭

[26] ಕಿತ್ತನಕೆರೆ, ಎ.ಕ. ೮ (ಹೊ), ಹಾಸನ – ೧೦೫, ಕ್ರಿ. ಶ. ೧೧೯೬

[27] ಬಾಳಂಬೀಡು, ಎಸ್.ಐ.ಐ. XX – ೨೫೦, ಕ್ರಿ. ಶ. ೧೨

[28] ಚಿಟ್ಟೂರು, ಎ.ಕ. VIII, ಸೊರಬ – ೫೧೭, ಕ್ರಿ. ಶ. ೧೨೫೮

[29] ಅಬ್ಬಲೂರು, ಹಿರೇಕೆರೂರು ತಾ., ಹಾವೇರಿ ಜಿಲ್ಲೆ

[30] ಅದೇ

[31] ಲಕ್ಕುಂಡಿ, ಗದಗ ತಾಲ್ಲೂಕು, ಗದಗ ಜಿಲ್ಲೆ

[32] ಬಾದಾಮಿ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ

[33] ಪಟ್ಟದಕಲ್ಲು, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ

[34] ದೊಡ್ಡ ಉಳ್ಳರ್ತಿ, ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ