ಅಂತರವಳ್ಳಿಯ ವೀರಗಲ್ಲೊಂದರಲ್ಲಿ ವೀರನು ಶತ್ರುಗಳೊಂದಿಗೆ ಹೋರಾಡುತ್ತಿದ್ದು, ಶತ್ರುಗಳು ಇವನ ಶೌರ್ಯಕ್ಕೆ ಹೆದರಿ ಕೈ ಮುಗಿದುಕೊಂಡು ಮಂಡಿಯೂರಿ ಕುಳಿತು ಶರಣಾಗಿದ್ದೇವೆಂದು ಸೂಚಿಸುತ್ತಿದ್ದಾರೆ. ವೀರನ ಹಿಂದೆ ಕೆಲವು ಸೈನಿಕರನ್ನು ಮುಡಿಬಿಚ್ಚಿ ಅರೆನಗ್ನರಾದ ಇಬ್ಬರು ಸ್ತ್ರೀಯರನ್ನು, ಕೆಳಭಾಗದಲ್ಲಿ ದನಗಳನ್ನು ಚಿತ್ರಿಸಲಾಗಿದೆ. ಈ ಸನ್ನಿವೇಶವು ತುಱುಗೊಳ್ ಮತ್ತು ಪೆಣ್ಬುಯ್ಯಲ್ ಎರಡೂ ಪ್ರಸಂಗವನ್ನು ಸೂಚಿಸುತ್ತಿದೆ.[1]

ಕೃಷ್ಣರಾಜಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಹುಣಸೇಶ್ವರ ದೇವಾಲಯದ ಬಳಿ ಇರುವ ಮೂರು ವೀರಗಲ್ಲುಗಳು ಪೆಣ್ಬುಯ್ಯಲ್ ದೃಶ್ಯವನ್ನು ಒಳಗೊಂಡಿದೆ. ಹೋರಾಡುತ್ತಿರುವ ವೀರನ ಹಿಂಬದಿಯಲ್ಲಿ ದನಗಳನ್ನು ಮತ್ತು ಸ್ತ್ರೀಯರನ್ನು ಚಿತ್ರಿಸಲಾಗಿದೆ. ಸ್ತ್ರೀಯರು ತಮ್ಮ ಮಕ್ಕಳನ್ನು ಎತ್ತಿಕೊಂಡು ಅಸಹಾಯಕರಾಗಿ ನಿಂತಿದ್ದಾರೆ. ಅವರು ಎತ್ತಿಕೊಂಡಿರುವ ಮಕ್ಕಳು ತಮ್ಮ ಕೈಯನ್ನು ಶತ್ರುಗಳತ್ತ ತೋರುತ್ತಿದ್ದಾರೆ. ಈ ಸ್ಥಳದಲ್ಲಿರುವ ಮೂರು ವೀರಗಲ್ಲುಗಳಲ್ಲಿ ಪೆಣ್ಬುಯ್ಯಲ್ ದೃಶ್ಯವಿದ್ದು, ಒಂದು ವೀರಗಲ್ಲಿನಲ್ಲಿ ಮಾತ್ರ ಪೆಣ್ಬುಯ್ಯಲ್ ಪಾಠವಿದೆ.

ಶಿಕಾರಿಪುರ ತಾಲೂಕಿನ ಸಂಡ ಗ್ರಾಮದಲ್ಲಿನ ವೀರಗಲ್ಲಿನಲ್ಲಿ ಮೂರು ಹಂತದ ಶಿಲ್ಪವಿದ್ದು, ಕೆಳಭಾಗದಲ್ಲಿ ವೀರನು ಶತ್ರುಗಳೊಂದಿಗೆ ಹೋರಾಡುತ್ತಿರುವಂತೆಯೂ, ಇವನ ಹಿಂಬಾಗದಲ್ಲಿ ಮೂವರು ಸ್ತ್ರೀಯರು ಬೆತ್ತಲೆಯಾಗಿ, ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿಕೊಂಡು ನಿಂತಿದ್ದಾರೆ. ಒಬ್ಬಳು ತನ್ನ ಮಗನನ್ನು ಹಿಡಿದುಕೊಂಡು ನಿಂತಿರುವಳು. ಮಗನು ಭಯಭೀತನಾಗಿ ಅವಳ ಕಾಲಸಂದಿಯಲ್ಲಿ ನಿಂತಿದ್ದಾನೆ. ಸ್ತ್ರೀಯರ ಮುಖದಲ್ಲಿ ಆತಂಕದ ಚಿತ್ರಣವಿದೆ. ಮಾನಭಂಗಕ್ಕೆ ಪ್ರಯತ್ನಿಸಿದವನು ವೀರನನ್ನು ಎದುರಿಸಲಾಗದೆ ಬಿಲ್ಲು – ಬಾಣಗಳನ್ನು ಹಿಡಿದು ಹಿಂದಕ್ಕೆ ಓಡುತ್ತಿದ್ದಾನೆ. ವೀರನು ಕೆಲವರನ್ನು ಹೊಡೆದು ನೆಲಕ್ಕೆ ಉರುಳಿಸಿದ್ದಾನೆ. ಎರಡನೆ ಹಂತದಲ್ಲಿ ವೀರನು ಅಪ್ಸರೆಯರ ಹೆಗಲ ಮೇಲೆ ಕೈ ಹಾಕಿಕೊಂಡು ಸ್ವರ್ಗಕ್ಕೆ ಹೋಗುತ್ತಿರುವನು. ಮೇಲಿನ ಹಂತದಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿದ್ದಾನೆ. ಶಾಸನ ಪಾಠದಲ್ಲಿ ವೀರನನ್ನು ಕಮ್ಮಾರ ಬಮ್ಮನೆಂದು ಹೇಳಿದೆ. ಇಡೀ ದೃಶ್ಯ ಪೆಂಡಿರುಡೆಯುರ್ಚ್ಚುವ ಘಟನೆಯನ್ನು ಮನಮುಟ್ಟುವಂತೆ ಚಿತ್ರಿಸಿದೆ. ಈ ವೀರಗಲ್ಲನ್ನು ನಿರ್ಮಿಸಿದ ಶಿಲ್ಪಿ ಕಟ್ಟಕರ್ಜನನೆಂದು ಶಾಸನ ಪಾಠ ತಿಳಿಸುತ್ತದೆ. ಸತ್ತ ವೀರನ ಮಗ ಚಿಕ್ಕನೆಂಬುವನು ಈ ಸ್ಮಾರಕವನ್ನು ನಿಲ್ಲಿಸಿದ್ದಾನೆ.[2]

ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದ ವೀರಗಲ್ಲು ಎರಡು ಹಂತಗಳಲ್ಲಿದ್ದು ಮೇಲಿನ ಹಂತ ಒಡೆದು ಹೋಗಿದೆ. ಕೆಳಹಂತದಲ್ಲಿ ವೀರನು ದೊಡ್ಡ ಗುರಾಣಿ ಹಿಡಿದು, ಶತ್ರುಗಳ ಕುದುರೆಗಳನ್ನು ಸದೆ ಬಡಿಯುತ್ತಿದ್ದಾನೆ. ಸತ್ತ ಶತ್ರುವಿನ ಹೆಣದ ಮೇಲೆ ನಿಂತು ವೀರನು ಹೋರಾಡುತ್ತಿದ್ದಾನೆ. ಶಾಸನಪಾಠದಲ್ಲಿ ಹೋರಾಡುತ್ತಿರುವವನನ್ನು ಬೋಪದಳಾರನೆಂದು ಹೇಳಿದೆ. ಶತ್ರುಗಳ ಕಡೆಯವರು ಮಂಡಿಯೂರಿ ಕುಳಿತು ವೀರನ ಮೇಲೆ ಬಾಣಗಳನ್ನು ಪ್ರಯೋಗಿಸುತ್ತಿದ್ದಾರೆ. ವೀರನ ಕೆಳಭಾಗದಲ್ಲಿ ಎರಡು ದನಗಳನ್ನು ಮತ್ತು ಹಿಂಬಾಗದಲ್ಲಿ ಮೂವರು ಸ್ತ್ರೀಯರನ್ನೂ ಚಿತ್ರಿಸಲಾಗಿದೆ. ಸ್ತ್ರೀಯರು ನಗ್ನರಾಗಿ ನಿಂತಿದ್ದು ಒಬ್ಬಳು ತನ್ನ ಮಗುವಿನ ಕೈ ಹಿಡಿದು ನಿಂತಿದ್ದಾಳೆ. ಈ ದೃಶ್ಯವು ತುರುಗೊಳ್ ಮತ್ತು ಪೆಣ್ಬುಯ್ಯಲ್ ಎರಡೂ ಘಟನೆಯನ್ನು ಸೂಚಿಸುತ್ತದೆ. ಮೇಲಿನ ಹಂತದಲ್ಲಿ ಮೋಡಗಳ ನಡುವೆ ನಾಲ್ಕು ಜನ ಅಪ್ಸರೆಯರೊಂದಿಗೆ ವೀರನು ಸ್ವರ್ಗಕ್ಕೆ ಪ್ರಯಾಣಿಸುತ್ತಿದ್ದಾನೆ.[3] ಹೀಗೆ ಶಾಸನಶಿಲ್ಪಗಳು ಶಾಸನ ಪಠ್ಯಕ್ಕಿಂತಲೂ ಮನನೀಯವಾಗಿ ಪೆಣ್ಬುಯ್ಯಲಿನ ದೃಶ್ಯವನ್ನು ಕಟ್ಟಿಕೊಡುತ್ತವೆ.

ವೀರಗಲ್ಲುಗಳ ಪಾಠದಲ್ಲಿ ಪೆಣ್ಬುಯ್ಯಲನ್ನಾಗಲೀ ಅಥವಾ ತುಱುಗೊಳನ್ನಾಗಲಿ ಕೇವಲ ಒಂದೇ ಶಬ್ದದಿಂದ ಸೂಚಿಸುತ್ತಾರೆ. ಆದರೆ ಶಿಲ್ಪದಲ್ಲಿ ಹೋರಾಡುವ ದೃಶ್ಯಗಳು, ಮಾನಭಂಗದ ದೃಶ್ಯಗಳು, ಸ್ತ್ರೀಯರ ಅಸಹಾಯಕ ಸ್ಥಿತಿ, ಗೃಹಣಿಯರ ಅಪಮಾನ ಮೊದಲಾದವನ್ನು ಮನಕುಲಕುವಂತೆ ಶಿಲ್ಪಿ ಚಿತ್ರಿಸಿರುತ್ತಾನೆ. ಶಾಸನಪಾಠ ಮತ್ತು ಶಾಸನ ಶಿಲ್ಪ ಎರಡನ್ನೂ ಒಟ್ಟಾಗಿ ಸೇರಿ ಅಧ್ಯಯನ ಮಾಡಿದಾಗ ಪೆಣ್ಬುಯ್ಯಲಿನ ಪ್ರಸಂಗಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬಹುದು. ಶಾಸನಪಾಠದಲ್ಲಿ ವರ್ಣಿಸಿರದ, ವರ್ಣಿಸಲಾಗದ ಅನೇಕ ಅಂಶಗಳು ಶಾಸನಶಿಲ್ಪದಲ್ಲಿ ಚಿತ್ರಿತವಾಗಿರುತ್ತವೆ.

ಬಹುತೇಕ ಪೆಣ್ಬುಯ್ಯಲ್ ಶಾಸನಶಿಲ್ಪಗಳಲ್ಲಿ ನಗ್ನ ಅಥವಾ ಅರೆನಗ್ನರಾದ ಸ್ತ್ರೀಯರು, ಮುಡಿ ಕೆದರಿದ ಸ್ತ್ರೀಯರು, ಮಕ್ಕಳನ್ನು ಎತ್ತಿಕೊಂಡ ಅಥವಾ ಕೈ ಹಿಡಿದು ನಿಂತ ಮಹಿಳೆಯರನ್ನು ವೀರನ ಹಿಂಬಾಗದಲ್ಲಿ ಚಿತ್ರಿಸಲಾಗಿರುತ್ತದೆ. ಶಾಸನಶಿಲ್ಪದಲ್ಲಿ ಸಾಂಕೇತಿಕ ನಿರೂಪಣೆಗೆ ಆದ್ಯತೆ ಹೆಚ್ಚು. ಏಕೆಂದರೆ ಯಾವ ಶಾಸನ ಶಿಲ್ಪದಲ್ಲೂ ಘಟನೆಯನ್ನು ವಿವರವಾಗಿ ಚಿತ್ರಿಸಲು ಸಾಧ್ಯವಿಲ್ಲ. ಸ್ಥಳದ ಅಭಾವ ಮತ್ತು ನಿರೂಪಣೆಯ ವಿಧಾನ ಇದಕ್ಕೆ ತಡೆ ಒಡ್ಡುತ್ತದೆ. ಆದರೂ ಕೆಲವು ಕ್ರಿಯಾಶೀಲ ಶಿಲ್ಪಿಗಳ ಕಾರಣದಿಂದ ಕೆಲವೊಂದು ವೀರಗಲ್ಲುಗಳು ಸೌಂದರ್ಯದ ಜೊತೆಗೆ ಘಟನೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಇಂತಹ ವೀರಗಲ್ಲುಗಳ ಸಂಖ್ಯೆ ಬಹಳ ಕಡಿಮೆ. ದೊಡ್ಡ ಉಳ್ಳರ್ತಿ ಮತ್ತು ಅಬ್ಬಲೂರಿನ ಕೆರೆಯ ಬಳಿಯಿರುವ ವೀರಗಲ್ಲುಗಳಲ್ಲಿ ಸ್ತ್ರೀಯರ ಬಟ್ಟೆಯನ್ನು ಸೆಳೆದು ಮಾನಭಂಗಕ್ಕೆ ಪ್ರಯತ್ನಿಸಿದ ಚಿತ್ರಣವಿದೆ. ಅಗ್ರಹಾರ ಬಾಚಹಳ್ಳಿ ಮತ್ತು ಅಬ್ಬಲೂರಿನ ವೀರಗಲ್ಲುಗಳು ಕಲಾತ್ಮಕತೆಯ ಕಾರಣದಿಂದ ಮನಸೆಳೆಯುತ್ತವೆ.

ಪೆಣ್ಬುಯ್ಯಲ್ : ವಿವೇಚನೆ

ಯಾವ ಶಾಸನ ಪಾಠದಲ್ಲೂ ಮಾನಭಂಗಕ್ಕೆ ಒಳಗಾದ ಮಹಿಳೆಯರ ವಿವರಗಳು ದೊರೆತಿಲ್ಲ. ಕನಿಷ್ಟ ಪಕ್ಷ ಅವರ ಹೆಸರುಗಳಾದರೂ ಒಂದೂ ದೊರಕಿಲ್ಲ. ಪುರುಷರ ಶೌರ್ಯ ಪ್ರದರ್ಶನಕ್ಕೆ ಮಹಿಳೆಯರು ಬಲಿಯಾಗುವ ಧಾರುಣ ಸಮಾಚಾರ ಪೆಣ್ಬುಯ್ಯಲ್ ವೀರಗಲ್ಲಿನಲ್ಲಿದೆ. ಯಾವುದೇ ಯುದ್ಧವಾಗಲಿ, ಹೋರಾಟವಾಗಲಿ, ಜಗಳವಾಗಲಿ ಅಥವಾ ವೈಯಕ್ತಿಕ ದ್ವೇಷವಾಗಲಿ ಅದಕ್ಕೆ ಮಹಿಳೆಯರು ಮತ್ತು ಮೂಕ ಪ್ರಾಣಿಗಳಾದ ದನ – ಕರುಗಳು ಸುಲಭವಾಗಿ ಬಲಿಯಾಗುತ್ತಿದ್ದವು. ಶತ್ರುಗಳು ಧಾಳಿಯಿಡುವುದು ಮುಂಚೆಯೆ ತಿಳಿಯುತ್ತಿರಲಿಲ್ಲ. ಇದರಿಂದ ಮಹಿಳೆಯರು ಯಾವ ಸ್ಥಿತಿಯಲ್ಲೇ ಇರಲಿ, ಮಲಗಿರಲಿ, ಸುರತದಲ್ಲಿರಲಿ, ಮಗುವಿಗೆ ಮೊಲೆಯೂಡಿಸುತ್ತಿರಲಿ, ಮಕ್ಕಳಿಗೆ ಕೈ ತುತ್ತು ತಿನ್ನಿಸುತ್ತಿರಲಿ, ಹೊಲದಲ್ಲಿ ದುಡಿಯುತ್ತಿರಲಿ ಅಥವಾ ಮನೆಗೆಲಸ ಮಾಡುತ್ತಿರಲಿ ಧಾಳಿಯಿಟ್ಟ ಶತ್ರುಗಳಿಗೆ ಸುಲಭವಾಗಿ ಕೈವಶವಾಗುತ್ತಿದ್ದರು. ಸೇಡಿನ, ದ್ವೇಷದ ಬೆಂಕಿಯನ್ನೇ ಹೊತ್ತವರಂತೆ ಊರುಗಳಿಗೆ ನುಗ್ಗುತ್ತಿದ್ದ ರಾಕ್ಷಸರ ಕೈಗೆ ಸಿಕ್ಕ ಅಬಲೆಯರ ಗತಿ ಏನಾಗುತ್ತಿತ್ತೊ?, ಎಷ್ಟು ಜನ ಮಾನ – ಶೀಲ ಕಳೆದುಕೊಂಡಿರುವರೊ?, ಎಷ್ಟು ಜನ ದೈಹಿಕವಾಗಿ ಊನಗೊಂಡಿರುವರೊ?, ಎಷ್ಟು ಜನ ಹತ್ಯೆಯಾಗಿರುವರೊ?, ಅವಮಾನ ತಾಳಲಾರದೆ ಅದೆಷ್ಟು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವರೊ ಆ ಭಗವಂತನೇ ಬಲ್ಲ!. ಇಂತಹ ದಾಳಿಯನ್ನು ತಡೆದು ಹಿಂದಕ್ಕಟ್ಟಿದ ಉದಾಹರಣೆಗಳು ಇಲ್ಲ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಎಂಬ ಗಾದೆ ಮಾತು ನೂರಕ್ಕೆ ನೂರು ಸತ್ಯವಾದುದು. ಮುನ್ಸೂಚನೆಯಿಲ್ಲದೆ ಹದ್ದುಗಳಂತೆ ಬಂದು ಎರಗಿದರೆ ಯಾರೇನು ತಾನೆ ಮಾಡಲು ಸಾಧ್ಯ?. ಎಚ್ಚೆತ್ತು ಹೋರಾಡುವಷ್ಟೊತ್ತಿಗೆ ಅಚಾತುರ್ಯಗಳು ನಡೆದು ಹೋಗುತ್ತಿದ್ದವು. ಮಹಿಳೆಯರನ್ನು ದೇವಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ನಮ್ಮ ಸಮಾಜ ಅದೇ ವೇಳೆ ಪ್ರತಿಕಾರ, ವಿಜಯದ ನೆಪದಲ್ಲಿ ಅಬಲೆಯರ ಕಗ್ಗೊಲೆಯನ್ನು ಮಾಡುತ್ತಿತ್ತು. ಇಂತಹವರ ವಿರುದ್ಧ ಹೋರಾಡುತ್ತಿದ್ದವರು ಸಾಮಾನ್ಯ ಜನರೇ ಹೊರತು ರಾಜ – ಮಹಾರಾಜರಾಗಲಿ, ಅಧಿಕಾರಿಗಳಾಗಲಿ ಅಲ್ಲ! ಆಯಾ ಗ್ರಾಮದ ಯುವಕರೇ ಇಂತಹ ದಾಳಿಗಳನ್ನು ಎದುರಿಸಿ ಸ್ತ್ರೀ ಸಮೂಹದ ಕಣ್ಣೀರನ್ನು ಒರೆಸಬೇಕಾಗುತ್ತಿತ್ತು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸ್ತ್ರೀಯರ, ದನ – ಕರುಗಳ ರಕ್ಷಣೆಗೆ ನಿಂತವರಿಗೆ ತೋರಿಸುವ ಒಂದು ಸಣ್ಣ ಗೌರವವೇ ವೀರಗಲ್ಲು ನಿರ್ಮಾಣ.

ಕ್ರಿಸ್ತ ಶಕ ೭ ಅಥವಾ ೮ನೇ ಶತಮಾನದಿಂದ ಆರಂಭಗೊಂಡ ಪೆಂಡಿರ ಉಡೆಉರ್ಚ್ಚುವ ವಿಧಾನವು ೧೩ನೇ ಶತಮಾನದ ಮಧ್ಯಭಾಗಕ್ಕೆ ನಿಂತುಹೋಗುತ್ತದೆ. ಪೆಣ್ಬುಯ್ಯಲಿನ ಕೊನೆಯ ವೀರಗಲ್ಲು ಕ್ರಿಸ್ತ ಶಕ ೧೨೫೮ಕ್ಕೆ ಸೇರಿದ ಚಿಟ್ಟೂರಿನ ವೀರಗಲ್ಲಾಗಿದೆ.[4] ನಂತರದ ಅವಧಿಯಲ್ಲಿ ಉಡೆಉರ್ಚ್ಚುವ ಪ್ರಸಂಗಗಳು ನಡೆದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ನಂತರವೂ ಸಾವಿರಾರು ಹೋರಾಟಗಳು ನಡೆದು ವೀರಗಲ್ಲುಗಳು ಸ್ಥಾಪನೆಗೊಂಡಿವೆ. ಅನೇಕ ಸ್ತ್ರೀಯರು ಮಹಾಸತಿಯರಾಗಿ ಮರಣಿಸಿದ್ದಾರೆ. ಆದರೆ ಶಾಸನಗಳಲ್ಲಿ ಉಡೆಉರ್ಚ್ಚಿದ ಉಲ್ಲೇಖ ದೊರಕುವುದಿಲ್ಲ. ಇದು ಕುತೂಹಲದ ಜೊತೆಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ಇದಕ್ಕೆ ಎರಡು ಕಾರಣಗಳನ್ನು ಊಹಿಸಬಹುದು. ಮೊದಲನೆಯದಾಗಿ ಧಾಳಿಯಿಡುವವರ ಶೈಲಿ ಬದಲಾಗಿರಬಹುದು. ಅಥವಾ ಗ್ರಾಮಗಳ ರಕ್ಷಣೆಗೆ ಪ್ರತ್ಯೇಕ ತಂಡಗಳೇ ರಚನೆಗಳಾಗಿ ಘಟನೆಗಳನ್ನು ತಡೆದಿರಬಹುದು. ಎರಡನೆಯದಾಗಿ ಉಡೆಉರ್ಚ್ಚುವ ಪ್ರಸಂಗಗಳು ತೀರ ಸಾಮಾನ್ಯವಾಗಿ ಅದನ್ನು ಶಾಸನಗಳಲ್ಲಿ ವಿಶೇಷವಾಗಿ ಉಲ್ಲೇಖಿಸುವ ಅವಶ್ಯಕತೆ ಕಾಣದಿರಬಹುದು. ಅಥವಾ ನಂತರದ ದಿನಗಳಲ್ಲಿ ಶಾಸನ ನಿರ್ಮಾಣವನ್ನು ಒಂದು ಕಲೆಯನ್ನಾಗಿ ಬಳಸದೆ ಕಾಟಾಚಾರದ ಪದ್ಧತಿಯಾಗಿ ಉಳಿಸಿಕೊಂಡಿದ್ದೂ ಇದಕ್ಕೆ ಕಾರಣವಿರಬಹುದು.

ಪೆಣ್ಬುಯ್ಯಲ್ ವೀರಗಲ್ಲುಗಳನ್ನು ಗಮನಿಸಿದರೆ ಮತ್ತೊಂದು ಅಂಶ ಕಂಡುಬರುತ್ತದೆ. ಅದೇನೆಂದರೆ ಹೋರಾಟದಲ್ಲಿ ಮಡಿದ ವೀರನ ಕುಟುಂಬಕ್ಕೆ ದಾನ – ಧರ್ಮ ನೀಡುವ ಪದ್ಧತಿಯಿತ್ತೇ ಹೊರತು ಅವಮಾನಕ್ಕೊಳಗಾದ ಅಥವಾ ಅತ್ಯಾಚಾರಕ್ಕೊಳಗಾದ ಯಾವ ಮಹಿಳೆಗೂ ಪರಿಹಾರ ಸಿಕ್ಕಿದ ಉದಾಹರಣೆಯಿಲ್ಲ. ವೀರರ ಶೌರ್ಯವನ್ನೇ ಚಿತ್ರಿಸುವ ಉಮೇದಿನಲ್ಲಿ ಹಾನಿಗೊಳಗಾದ ಮಹಿಳೆಯರ ನೋವನ್ನು ಹಿಡಿದಿಡಲು ಶಾಸನಗಳು ವಿಫಲವಾಗಿವೆಯೆಂದರೆ ತಪ್ಪಾಗುವುದಿಲ್ಲ.


ಅನುಬಂಧ ಮುಖ್ಯ ಪೆಣ್ಬುಯ್ಯಲ್ ಶಾಸನಪಾಠಗಳು

 

ತಾವರೆಕೆರೆ

ಮುಳಬಾಗಿಲು ತಾಲೂಕು, ಕೋಲಾರ ಜಿಲ್ಲೆ
ತಮ್ಮಣ್ಣನ ಹೊಲದಲ್ಲಿ ನಟ್ಟ ವೀರಗಲ್ಲು
(ಎ.ಕ.X – ಮುಳ – ೧೬೧)
ಕ್ರಿ.ಶ. ೯೫೦

೧ ಸ್ವಸ್ತಿಶ್ರೀ ದಿಲೀಪನೊಳಮ್ಬಂ ಪೃತಿವೀರಾಜ್ಯಂಗೆಯ್ಯುತಿರೆ ಮಾ

೨ ಗರಯ್ಯಪಣ್ನಿ ಪೆಣ್ಡಿರನುಡೆಯುಚ್ಚಿಲುಮೆಳ್ತಿನ ತುಱುಗೊಳ

೩ ಲುಮಳ್ಮಿ ಸತ್ತನ್ ಬೆಸಗೆಯ್ದೊಂ ಕೊಯತೂರ ವಿಕ್ರಮಾದಿತ್ಯನ್

೪ ಬಹುಗುಣ

೫ ತೇಜನ್

 

ಮದಲೂರು

ಶಿರಾ ತಾ. ತುಮಕೂರು ಜಿ.
ಕಲ್ಲೇಶ್ವರ ದೇವಾಲಯದ ಮುಂದೆ ಇರುವ ವೀರಗಲ್ಲು
(ಎ.ಕ.XII – ಶಿರಾ – ೪೩)
ಕ್ರಿ.ಶ. ೧೦೦೦

೧ ಸ್ವಸ್ತಿ ಎಡವಯ್ಯ ಪೆಣ್ಡಿರುಡೆ

೨ ಯುಳ್ಚುವಲ್ಲಿ ಕಾದು ಸತ್ತಂ ಅವರ ಮಗ

೩ ನ ಮಗಂ ಜಕ್ಕ ಪೆಣ್ಡಿರುಡೆಯುಳ್ಚುವ ಪುಯ್ಯಲುಂ ತುಱು

೪ ಯ್ಯಲುವ ಕೇಳ್ದು ತಾಗಿ ಕಾದಿ. ದತೆಯ. ತ್ತೊಲಗ. ಸಿನ್ದರಕುಲದಾ

೫ ನೆ ಸತ್ತಂ ಮಂಗಳಂ

 

ಅಡಗಂಟ

ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆ
ಬಸವಣ್ಣನ ದೇವಾಲಯದ ಮುಂದೆ
(ಎ.ಕ. VII ಶಿಕಾರಿ ೮೩)
ಕ್ರಿ.ಶ. ೧೦೫೮

೧ ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀ ಪೃಥ್ವೀವಲ್ಲಭ ಮಹಾರಾಜಾಧಿರಾಜ

೨ ಪರಮೇಶ್ವರ ಪರಮ ಭಟ್ಟಾರಕಂ ಸತ್ಯಾಶ್ರಯ ಕುಳತಿಳಕಂ ಶ್ರೀಮಚ್ಚಾಳು

೩ ಕ್ಯಾಭರಣಂ ಶ್ರೀಮದಾಹವಮಲ್ಲದೇವರರಾಜ್ಯಮುತ್ತರೋತ್ತರಾಭಿವೃದ್ಧಿ

೫ ವಾಕ್ಯಕೊಂಗುಣಿವರ್ಮ್ಮಧರ್ಮ್ಮ ಮಹಾರಾಜಾಧಿರಾಜಂ ಕೋಳಾಲ ಪುರವರೇಶ್ವರಂ ನನ್ದಗಿರಿನಾ

೬ ಥ ಮದಗಜೇಂದ್ರಲಾಂಚನಂ ಪದ್ಮಾವತೀಲಬ್ಧ ವರಪ್ರಸಾದಂ ನನ್ನಿಯಗಂಗ ಗಂಗಕುಸುಮಾ

೭ ಯುಧ ಮಣ್ಡಳಿಕಮಕುಟ ಚೂಡಾಮಣಿ ಶ್ರೀಮಚ್ಚಾಳುಕ್ಯ ಗಂಗಪೆರ್ಮ್ಮಾನಡಿ ವಿಕ್ರಮಾ

೮ ದಿತ್ಯದೇರ್ವ್ವನವಾಸಿಪನ್ನಿರ್ಚ್ಚಾಸಿರಮುಂ ಸಾನ್ತಳಿಗೆ ಸಾಸಿರಮುಂ ನೊಳಂಬವಾಡಿ ಮೂವತ್ತಿ.

೯ ಸಿ ಮೊಳಗಾಗಿ ಗಂಗಮಣ್ಡಳಂ ತೊಂಭತ್ತಱುಸಾಸಿರಮುಂ ದುಷ್ಟ್ಯನಿಗ್ರಹ ವಿಸಿಷ್ಟಪ್ರತಿ.

೧೦ ನದಿಂ ರಾಜಧಾನಿ ಬಳ್ಳಿಗಾವೆಯಲು ಸುಕಶಂಥಾವಿನೋಧದಿಂದ ರಾಜ್ಯಂಗೆಯ್ಯುತ್ತಮಿರೆ ಸಮಸ್ತರಾಜ್ಯಭಾರ

೧೧ ನಿರೂಪಿತ ಮಹಾಮಾತ್ಯ ಪದವೀವಿರಾಜಮಾನ ಮಾನೋನ್ನತ ಪ್ರಭುಮಂತ್ರೋತ್ಸಾಹ ಶಕ್ತಿ

೧೨ ತ್ರಯಸಂಪನ್ನರಪ್ಪ ಶ್ರೀಮತ್ಪೆರ್ಗ್ಗಡೆ ನಾರಣಯ್ಯಂ ಪ್ರಮುಖ ಕರಣಂ ಬನವಾಸೆಪಂ ನಿರ್ಚ್ಛಾಸಿರ

೧೩ ಮನನುಭವಿಸುತ್ತಮಿರೆ ಜಿಡ್ಡಳಿಗೆಯೆಳ್ಳತ್ತರ ಅರಸಿಮಯ್ಯಂ ನಾಳ್ಗಾವುಣ್ಡುಗೆಯ್ಯೆರ್ಚ್ಛಾಸಿರ

೧೪ ಯ ಗೊಗ್ಗಿಸೆಟ್ಟಿಯ ಮಗಂ ಮಾಚಯ್ಯನೂರ್ಗಾವುಣ್ಡುಗೆಯ್ಯೆ ಸಕವರ್ಷ ೯೭೯ ತ್ತೆನೆಯ ಹೇಮಳಂಬಿಸಂವತ್ಸ

೧೫ ರದ ಪಾಲ್ಗುಣ ಬಹುಳ ೧ ಆದಿವಾರದನ್ದು ಜೇಡರಘಟ್ಟಿಮಡಿಯಂಗೆರಿಯನಿಱಿದು ತುಱುವಂ ಕೊಣ್ಡು

೧೬ ಪೆಣ್ಡಿರುಡೆಯನುರ್ಚ್ಚಿದರೆಂಬ ಪುಯ್ಯಲಂ ಕೇಳ್ದು ಕಡಿಗಣಿಸದೆ ಮಾಚಗಾವುಣ್ಡನಟ್ಟಿ ಮುಟ್ಟಂ ಜಿತೇನ ಲಭ್ಯತೇ

೧೭ ಕ್ಷ್ಮೀಮೃತೇನಾಪಿಸುರಾಂಗನಾ ಕ್ಷಣವಿಧ್ವಂಸಿನಿ ಕಾಯೇ ಕಾ ಚಿನ್ತಾ ಮರಣೇ ರಣೇ|| ಯಂಬೀ ಶ್ಲೋಕಾರ್ಥಮನಾತ್ಮಗತಂ

೧೮ ಬಗೆದು ಸಂಗ್ರಾಮಮಂ ಪರಿಚ್ಛೇದಿಯಾಗಿ ಮಾರ್ಬ್ಬಲದಾಳಂ ಮೂದಲಿಸಿ ಬೆಳಗವತ್ತಿಯಲು

೧೯ ತುಱುವಂ ಮಗುಳ್ಚಿ ಪಲರನಿಱೆದು ಕಡಿಖಣ್ಡಮಾಗಿ ಸುರಲೋಕ ಪ್ರಾಪ್ತನಾದಡ ವರಣ್ನಂ ಚಿ

೨೦ ಟ್ಟಗಾವುಣ್ಡನುಂ ಮಾಚಗಾವುಣ್ಡನುಂ ಭಾರ್ಯ್ಯೆ ಚಾಗಿಯಬ್ಬೆಯುಮವರ ಮಗ ನಾಲಯ್ಯನು ಮಿಳ್ದುಮತ್ತಿಗಟ್ಟದ ಬ

೨೧ ಯಲೊಳ್ ಬ್ರಾಹ್ಮಣಂ ಮದುವಯ್ಯಂಗೆ ಕಾಲಂಕರ್ಚ್ಚಿ ಧಾರಾಪೂರ್ವ್ವಕಂ ಬಿಟ್ಟಗಳ್ದೆ ಕಮ್ಮ ೩೦ ಪೆಳ್ದಲೆಮತ್ತ ೧ ಇನ್ತೀ

೨೨ ಧರ್ಮ್ಮಮಂ ಪ್ರತಿಪಾಳಿಸಿದಂಗೆ ಬಾಣರಾಸಿಯಲು ಸಾಸಿರ್ಬ್ಬ ಬ್ರಾಹ್ಮಣರ್ಗ್ಗೆ ಸಾಸಿರ ಕವಿಲೆಯುಂ ಕೊಟ್ಟಪಲ ಇದನಳಿದಂಗೆ

೨೩ ಸಾಸಿರ

೨೪ ಕವಿಲೆ

೨೫ ಯುಂ ಸಾ

೨೬ ಸಿರ್ವ್ವಬ್ರಾ

೨೭ ಹ್ಮಣ

೨೮ ರುಮಂ

೨೯ ಕೊನ್ದ

೩೦ ಪಲ

 

ಉದ್ರಿ

ಸೊರಬ ತಾ. ಶಿವಮೊಗ್ಗ ಜಿಲ್ಲೆ
ಬನಶಂಕರಿ ದೇವಾಲಯದ ಸಮೀಪದ ಜಮೀನಿನಲ್ಲಿ
(ಎ.ಕ. VIII ಸೊರಬ ೧೪೧)
ಕ್ರಿ.ಶ. ೧೧೨೮

೧ ಸ್ವಸ್ತಿ ಸಮಸ್ತ ಭುವನಾಸ್ರಯಂ ಶ್ರೀಪ್ರಿಥ್ವೀವಲ್ಲಭ ಮಹಾರಾಜಾಧಿರಾಜಂ ಪರಮೇಸ್ವರಂ ಪರಮಭಟ್ಟಾರಕಂ ಸತ್ತ್ಯಾಸ್ರ

೨ ಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತುಭೂರ್ಲ್ಲೋಕಮಲ್ಲದೇವರ ವಿಜೆಯ ರಾಜ್ಯ ಮುತ್ತರೋತ್ತರಾಭಿವೃದ್ಧಿ

೩ ಪ್ರವರ್ದ್ಧಮಾನಮಾಚಂದ್ರಾರ್ಕ್ಕತಾರಂಬರಂ ಸಲುತ್ತಮಿರೆ || ಸ್ವಸ್ತಿ ಸಮಧಿಗತ ಪಂಚಮಹಾಸಬ್ದ ಮಹಾಮಂಡಳೇ

೪ ಸ್ವರಂ ಬನವಾಸೀಪುರವರಾಧೀಸ್ವರಂ ಕದಂಬ ಚಕ್ರೇಸ್ವರಂ ಶ್ರೀಮಜ್ಜಯಂತೀ ಮಧುಕೇಶ್ವರದೇವಲಬ್ಧ ವರಪ್ರಸಾಧಿ

೫ ತರುಮಪ್ಪ ಶ್ರೀಮತೈಲಪದೇವರು ಬನವಾಸಿಪನ್ನಿರ್ಚ್ಛಾಸಿರಮುಮಂ ಸಾಂತಳಿಗೆ ಸಾಯಿರಮುಮಂ ಸುಖಸಂಕತಾ

೬ ವಿನೋದದಿಂ ರಾಜ್ಯಂಗೆಯುತ್ತಮಿರೆ|| ತತ್ಪಾದಪದುಮೋಪಜೀವಿ|| ಸ್ವಸ್ತಿ ಶ್ರೀಮನು ಮಹಾ ಪ್ರಧಾನಂ ಮನೆವೆ

೭ ರ್ಗ್ಗಡೆ ದಂಡನಾಯಕಂ ಮಸಣೈಯಂ ಶ್ರೀಮಚ್ಚಾಳುಕ್ಯವಿಕ್ರಮವರ್ಷದ ೫೨ ನೆಯ ಪರಾಭವ ಸಂವತ್ಸರದ

೮ ಪಾಲ್ಗುಣ ಸುದ್ಧ ಚತುರ್ದ್ಧಸೀ ಸೋಮವಾರದಂದು ತನ್ನ ಸಮಸ್ತ ಸಾಧನಮುಂ ಮೈದುನ ಕಾಳಿಗೌ(ಡ)ನಾ

೯ ಯಕನ್ಮಂ ಈಸಾಪುರಕ್ಕೆ ಬೆಸಸೆ ಪೆರ್ಮ್ಮಾಡಿಸಾನ್ತರು ಕೋಟೆಯಂ ಪರಿಮುತ್ತ ಮುತ್ತಿ ಕೈವೀಸುವಾಗಳೆ ಸಾಸಿರ್ವ್ವರ್ಗ್ಗಳಿವಾಗೆಯುಂ

೧೦ ಪೆಂಡಿರುಡೆ ಉರ್ಚ್ಚುವಾಗಳು ಕಂಡುದಂಕಳಿ ಪಲಾಗದೆಂದು ಕಾಳಿಗನಾಯಕ ಗಂಧವಾರಣಂ ಬಂರ್ಮ್ಮುಸಾಂನ್ತನ ಪರಿಯೆ || ಎತ್ತಿದ ಸಾನ್ತರ

೧೧ ಭೂಪನಮೊತ್ತದ ನಾಯಕರು ಮುತ್ತಲಿಸಾರಪುರಮಂ ಸುತ್ತಿಕೈವೀಸಿಕಾದಲೆ ಚಿತ್ರವಿದಂಪರಿದುಬಮ್ಮುಸಾನ್ತರನಿಱಿದ ||

೧೨ ಕಡುಮುಳಿದು ಬಮ್ಮು ಸಾಂತಂ ಕಡಿತಲೆ ಪಲಗೆಯುಮ ಕೊಂಡು ಸಾನ್ತರನಾಳಂ ಕಡಿ ಖಂಡಮಾಡಿ ಪೋಯ್ದಡೆ ಕೆಡೆದು

೧೩ ದು ಧಾರಿಣಿಯ ಮೇಲೆ ವೈರಿ ಸಮೂಹಂ || ರಣರಂಗಸೂದ್ರುಕಂ ಬಲ್ಕಣಿ ಸುಭಟಂ ಸೆಣಸುವರಿಬಲಂಗಳ ಸಿರಮಂ

೧೪ ಖಣಿಲೆನೆ ಪೊಯ್ಪಾಳ್ದೀಗಳೆ ಪೆಣಮಯಮಾಯ್ತಸಿತುನೂಂಕಿದರಿಬಲಮನಿತು || ಅನ್ತಾಸಾಂತರ ಭೂಪನುಮುಂ

೧೫ ನ್ತಣನಾಯಕರಿದಿರ್ಚ್ಚಿದಾಹವದೆಡೆಯೊಳೆಮುನ್ತಾಗಿ ಬಮ್ಮುಸಾನ್ತಂ ಶಾಂತಳೆತಿಱು ದಮರಲೋ

೧೬ ಕಪ್ರಾಪ್ತನಾದ || ಅಸಮುಪಳ ಕಣೆಯಕೂನ್ತಂ ಮಸದ ಸರಲು ಮೆಯ್ಯನುಚ್ಚೆಬಮ್ಮು ಗಸಾಂತಂ ಬಸ

೧೭ ಮಳಿದು ಬೀಳೆ ಧುರದೊಳ್ ಎಸೆದುದು ರಣರಂಗದೊಳಗೆ ದೇವದುಂದುಭಿ ನಭದೊಳ್ ||

೧೮ . . . . . . . . . . . . . ಯಬೆ ಸಾನ್ತಲೆ ಕಲ್ಲನಿಲಿಸಿದಳ್ ಕಾಳೋಜನ ಬೆಸನ್

 

ಕಾಗಿನೆಲ್ಲಿ

ಹಿರೇಕೆರೂರು ತಾಲೂಕು, ಹಾವೇರಿ ಜಿಲ್ಲೆ
ಎಸ್.ಐ.ಐ. XVIII ೧೬೯
ಕ್ರಿ.ಶ. ೧೧೩೫

ಮೊದಲನೆ ಭಾಗ

೧ ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮ ಹಾಮಣ್ಡಳೇಶ್ವರಂ . . . . . ಮಲ್ಲಿಕಾರ್ಜ್ಜುನದೇವರ ಅಗ್ರಹಾರ

೨ ಹಾಹನೂರ ಕಾಪಿಗೆ ಪೇಳ್ದಲ್ಲಿ ಚಾಳುಕ್ಯವಿಕ್ರಮಕಾಲದ (೬) ೦ನೆಯ ರಾಕ್ಷ (ಸ*) ಸಂವತ್ಸ –

೩ ರದ ಚೈತ್ರ ಶುದ್ಧ ೨ ಸೋಮವಾರದಂದು ಮಹಾಮಣ್ಡಳೇಶ್ವರಂ ಬಿಟ್ಟಿಯರಸಂ ಹಾಹನೂರ

ಎರಡನೆ ಭಾಗ

೪ ಸುತ್ತಿಕೊಂಡಕೋ(ಟೆ) ಹೋಗಿ ಪೆಂಡಿರುಡೆಯುರ್ಚ್ಚುವಲ್ಲಿ ಹೆಱಗೆ ಹಳಿ(ವ)ರ ಗಂಡಂ ಬಂಟರ ಬಾವಂ . .

೫ ರತೊತ್ತು ಜಿಡುಗೂರ ಮಲ್ಲೆಯನಾಯಕನ ತಮ್ಮ ನೆಕ್ಕಟಿಗ ರಾಜಣಂ ಕಂಡು ಬಪ್ಪ . .

೬ ಕುದುರೆಯಂ ಕರದು ಮೂದಲಿಸಿ ಪರಿದು ತಾಗಿಯರ್ಮ್ಮಿದರಂ ಕೊಂದು ಅಂಜಿದರಂ (ಕಾ)ಯ್ದು

೭ ಕಳಿಪಿ ಪಗೆಯ ಬೀಡು ಸ(೦ಗ)ಡಮುಂ ಪೊಗಳೆ ತಮ್ಮಣ್ಣನ ಪೆಸರುಮಂ ತನ್ನ ಗಂಡುಮ ನಿ-

೮ (ಲಿಸಿ) ಮುಂದಣಡಿಯಂ ಪೆಱಗಿಡದೆ ಸುರಲೋಕ ಪ್ರಾಪ್ತನಾದ

 

ಮುತ್ತೂರು

ಹಿರೇಕೆರೂರು ತಾಲೂಕು, ಹಾವೇರಿ ಜಿಲ್ಲೆ
ಕ.ಇ. VI ೨೬
ಕ್ರಿ.ಶ.೧೧೩೮

ಮೊದಲ ಭಾಗ

೧ ಸ್ವಸ್ತಿ ಶ್ರೀಮತು ಚಾಳುಕ್ಯಭೂಲೋಕವರ್ಷದ ೬ಱೆನೆಯ ಕಾಳಯು –

೨ ಕ್ತ ಸಂವತ್ಸರದ ಪುಸ್ಯ ಸು ೫ ಆದಿವಾರದಂದು ಮುತ್ತೂ –

೩ ರ ಕಮ್ಮನವಳ್ಳಿಯ ಜಕಿಸೆಟ್ಟಿ ಊರನೞಿದು ಪೆಂಡಿರುಡೆ

೪ ಯುರ್ಚ್ಚಲು ಕಮ್ಮಾರ ಮಾಚ ತಳುತಿಱಿದು ಸುರಲೋಕ

೫ ಪ್ರಾಪ್ತನಾದ || ಆತನ ಅಣ್ನಂ ಹಳ್ಳಿಗಂಗೆಗೊಟ್ಟಗಡಿಯ ಜಕ್ಕಿ –

ಎರಡನೆ ಭಾಗ

೬ ಗಾವುಂಡಂ ಕಂಕಗಾವುಂಡಂ ಸಮಸ್ತ ಪ್ರಜೆಗಳುಂ ಬಿಟ್ಟ ಗದ್ದೆ ದೇವರ ಕೆಯ್ಯಿಂ ಬಡಗ

೭ ಬಿಟ್ಟ ಕಮ್ಮಂ ೧೨ ಹಕ್ಕಲ ಕಂಮ್ಮ ೫೦ ಯಿದನಾವನೋರ್ವ್ವನಳಿದವಂ

೮ ಗಂಗೆಯ ತಡಿಯಲು ಕವಿಲೆಯಂ ಕೊಂದ ಮಹಾಪಾತಕನ ಪೋದ ನ –

೯ ರಕಕೆ ಪೋಪರು ||

[1] ಅಂತರವಳ್ಳಿ, ರಾಣಿಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ

[2] ಸಂಡ,  ಎ.ಕ. VII, ಶಿಕಾರಿ – ೩೦೭, ಕ್ರಿ. ಶ. ೧೦೧೬

[3] ಚೋರಡಿಯ ವೀರಗಲ್ಲಿನ ಚಿತ್ರವನ್ನು ಒದಗಿಸಿದವರು ಮಿತ್ರ ಡಾ. ಜಗದೀಶ ಅಗಸೀಬಾಗಿಲವರ್ ಮತ್ತು ಸಂಡ ವೀರಗಲ್ಲಿನ ಚಿತ್ರ ಒದಗಿಸಿದವರು ಮಿತ್ರರಾದ ಡಾ. ಪ್ರಭಾಕರರಾವ್

[4] ಚಿಟ್ಟೂರು, ಎ.ಕ. VIII, ಸೊರಬ – ೫೧೭, ಕ್ರಿ. ಶ. ೧೨೫೮