ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಒಂದು ಚಿತ್ರಕಲಾ ಪ್ರದರ್ಶನ. ಅಲ್ಲಿ “ಆಕ್ಸಿಡೆಂಟ್” ಹೆಸರಿನಲ್ಲಿ ಹಲವು ಕಲಾಕೃತಿಗಳ ಸರಣಿ ಪ್ರದರ್ಶನ ನಡೆಯುತ್ತಿತ್ತು. ರಸ್ತೆಯೊಂದರಲ್ಲಿ ನಡೆದ ಆಕ್ಸಿಡೆಂಟ್‌ನ ಯಥಾವಥ್ ಚಿತ್ರಣದಂತಿದ್ದ ಅದು ರಕ್ತಸಿಕ್ತವಾಗಿ ನೋಡಲು ಭಯ ಹುಟಿಸುವಂತಿತ್ತು. ಅದನ್ನು ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಚೀರಿಕೊಳ್ಳುತ್ತಾ ಅಲ್ಲಿಂದ ದೂರ ಓಡಿಹೋದರು. ಆಕ್ರಮಣಕಾರಿ ನೆಲೆಯಲ್ಲಿ ರಚಿಸಿದ್ದ ಆ ಕಲಾಕೃತಿ ಬೀರಿದ ಪರಿಣಾಮ ಅದು! ಅಂದರೆ ಆ ಕಲಾಕೃತಿ ಸಹಜತೆಗೆ ಹತ್ತಿರವಾಗಿತ್ತು!.

ಅಲ್ಲಿ ನಡೆಯುತ್ತಿದ್ದುದು ‘ಪೇಪರ್ ಮೋಲ್ಡ್ ರಿಲೀಫ್’ ಅಥವಾ ‘ಪೇಪರ್ ರಿಲೀಫ್’ ಮಾಧ್ಯಮದ ಕಲಾಕೃತಿಗಳ ಪ್ರದರ್ಶನ. ಹಳೆಯ ಪತ್ರಿಕೆಗಳ ನಿರುಪಯೋಗಿ ಕಾಗದವೆ ಆ ಕಲಾಕೃತಿಗಳ ಜೀವಾಳ. ಹಳೆಯ ಕಾಗದವನ್ನೆ ಉಪಯೋಗಿಸಿಕೊಂಡು ತ್ರಿ ಆಯಾಮದ ಉಬ್ಬು ಆಕೃತಿಯನ್ನು ರೂಪಿಸಿ ಅದಕ್ಕೆ ಎನಾಮೆಲ್ ಬಣ್ಣ ಹಚ್ಚಿ ಒಣಗಿಸಿದರೆ ಅದನ್ನು ಕಾಗದದ ಕಲಾಕೃತಿ ಎನ್ನಲು ಸಾಧ್ಯವೇ ಇಲ್ಲ. ಲೋಹ ಮಾಧ್ಯಮದಲ್ಲಿ ತಯಾರಿಸಿದ ಉಬ್ಬುಚಿತ್ರದ ಕಲಾಕೃತಿಯಂತೆಯೇ ಕಂಗೊಳಿಸುತ್ತದೆ ಅದು. ಎನಾಮೆಲ್ ಪೈಂಟ್ ಬದಲಾಗಿ ಟೆರ್ರಾಕೋಟಾ ಬಣ್ಣ ಹಚ್ಚಿದರೆ ಮಣ್ಣಿನ ಕಲಾಕೃತಿಯಂತೆ ಕಾಣಿಸುತ್ತದೆ. ಕಲಾವಿದರ ಅಭಿರುಚಿ, ಆಸಕ್ತಿ ಮತ್ತು ಕೌಶಲ್ಯಕ್ಕೆ ತಕ್ಕಂತೆ ವೈವಿಧ್ಯಮಯವಾದ ಆಕೃತಿಗಳನ್ನು ತಯಾರಿಸುವ ಅವಕಾಶಗಳು ಈ ಮಾಧ್ಯಮದಲ್ಲಿದೆ.

ಪೇಪರ್ ಕ್ರಾಫ್ಟ್ನಲ್ಲಿ ಅಭಿವ್ಯಕ್ತಿಗಾಗಿ ಹಲವು ವಿಧಾನಗಳಿವೆ. ಹರಿತವಾದ ಚಾಕು ಮತ್ತು ಕತ್ತರಿಯಿಂದ ಸೂಕ್ಷ್ಮ ಮತ್ತು ಸಂಕೀರ್ಣವಾದ ವಿನ್ಯಾಸಗಳನ್ನು ಕತ್ತರಿಸುವ “ಸಾಂಝಿ” ಮತ್ತು “ಕರಿಗಾಮಿ” ಕಲೆ, ಮುಖವಾಡಗಳನ್ನು ತಯಾರಿಸುವ “ಮಾಸ್ಕ್ ಕ್ರಾಫ್ಟ್”, ದಪ್ಪ ಕಾಗದವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಮಡಿಸುವ ಮೂಲಕ ರೂಪಿಸುವ “ಪಾಪ್-ಅಪ್”, ಜ್ಯಾಮಿತೀಯ ಆಕಾರಗಳ ರೇಖಾ ಚಿತ್ರವನ್ನು ತಯಾರಿಸಿಕೊಂಡು ಕತ್ತರಿಸಿದ ಕಾಗದಗಳನ್ನು ಅಂಟಿಸಿ ವಿನ್ಯಾಸಗಳನ್ನು ರಚಿಸುವ “ಹೈ ರಿಲೀಫ್ ಕ್ರಾಫ್ಟ್” ಮತ್ತು ಯಾವುದಾದರೂ ಆಕಾರದ ಮೇಲೆ ಅಥವಾ ನಮಗೆ ಬೇಕಾದ ಆಕಾರಗಳನ್ನು (ಮಣ್ಣಿನ ಮಾಧ್ಯಮದಲ್ಲಿ) ತಯಾರಿಸಿಕೊಂಡು ಅದರ ಮೇಲೆ ಕಾಗದದ ತುಂಡುಗಳನ್ನು ಹಲವು ಪದರಗಳಲ್ಲಿ ಅಂಟಿಸಿ ತ್ರಿ ಆಯಾಮದ ಆಕಾರ ಮೂಡಿಸುವ “ಪೇಪರ್ ರಿಲೀಫ್” ಹೀಗೆ ಹಲಾವಾರು ಕ್ರಮಗಳಿವೆ. ಪ್ರಸ್ತುತ ಇಲ್ಲಿ ವಿವರಿಸಿರುವ ಕಲಾಕೃತಿಗಳು ತುಂಡು ಕಾಗದಗಳನ್ನು ಪದರ ಪದರಗಳಲ್ಲಿ ಅಂಟಿಸಿ ಮಾಡುವ  ಪೇಪರ್ ರಿಲೀಫ್ ಮಾದರಿಯಲ್ಲಿವೆ.  ಈ ಪೇಪರ್ ರಿಲೀಫ್ ಕ್ರಾಫ್ಟ್ ವಿಧಾನವು ಹಲವಾರು ವೈವಿಧ್ಯತೆಯನ್ನೂ ಅಪಾರ ಹರಹನ್ನೂ ಹಾಗೂ ವಿಭಿನ್ನ ಸಾಧ್ಯತೆಗಳನ್ನೂ ಹೊಂದಿರುವ ಕಲಾಮಾಧ್ಯಮ. ಅದರಲ್ಲಿ ಯಾವರೀತಿಯ ವಿನ್ಯಾಸಗಳನ್ನು ಬೇಕಾದರೂ ಮೂಡಿಸಬಹುದು. ಯಾವುದೇ ಭಾವನೆಗಳನ್ನೂ ಬೇಕಾದರೂ ಹೊರಹೊಮ್ಮಿಸಬಹುದು. ಕಲಾವಿದರಿಂದ ಕಲಾವಿದರಿಗೆ ಹೋಗುವಾಗ ಅದು ಅವರವರ ಅಭಿರುಚಿಗನುಗುಣವಾಗಿ ಪರಿವರ್ತಿತವಾಗುತ್ತಲೇ ಇರುತ್ತದೆ. ಹಾಗಾಗೆ ಅದನ್ನು “ಪರಿವರ್ತನಶೀಲ ಕಲೆ” (Varsatile craft) ಎನ್ನುತ್ತಾರೆ.

ರಿಲೀಫ್ ಕಲಾಕೃತಿ ಎಂದರೆ ‘ಸಮತಲದ ಹಿನ್ನೆಲೆಯ ಮೇಲೆ ರಚಿಸಿದ ಉಬ್ಬುಚಿತ್ರ’ ಎಂದರ್ಥ. ದಪ್ಪನಾದ ಶಿಲೆಯನ್ನು ಚೂಪಾದ ಸಾಧನಗಳಿಂದ ಕೊರೆಯುತ್ತಾ ನಿರ್ಮಿಸಿದ ಸಾವಿರಾರು ಕಲ್ಲಿನ ಕಲಾಕೃತಿಗಳನ್ನು ನಮ್ಮ ಪ್ರಾಚೀನ ದೇವಾಲಯಗಳಲ್ಲಿ ನಾವು ನೋಡಬಹುದು. ಚಪ್ಪಟೆಯಾದ ಹಿನ್ನೆಲೆಯ ಮೇಲೆದ್ದು ನಿಂತಂತೆ ಭಾಸವಾಗುವ ಅಂತಹ ಆಕೃತಿಗಳು ನೋಡುಗರಿಗೆ ತ್ರಿ ಆಯಾಮದ ದೃಶ್ಯವನ್ನು ಒದಗಿಸುತ್ತವೆ. ಆಧುನಿಕ ಕಲಾವಿದರು ಈ ರೀತಿಯ ಕಲಾಕೃತಿಗಳಿಗೆ ಶಿಲೆಯ ಬದಲಾಗಿ ಲೋಹವನ್ನು ಉಪಯೋಗಿಸುತ್ತಾರೆ. ಬೇಕಾದ ಆಕಾರದ ಮೋಲ್ಡ್‌ನ್ನು ತಯಾರಿಸಿಕೊಂಡು ಕರಗಿಸಿದ ಲೋಹದಿಂದ ಅಚ್ಚು ತೆಗೆಯುವುದು ಅಥವಾ ಲೋಹದ ಹಾಳೆಯ ಮೇಲೆ ಉಬ್ಬುಚಿತ್ರ ರಚಿಸುವುದು ರೂಢಿಯಲ್ಲಿದೆ. ಈ ರೀತಿಯ ಉಬ್ಬುಚಿತ್ರಗಳಲ್ಲಿ ಮಾನವ, ಪಶು-ಪಕ್ಷಿ, ಗಿಡಮರ ಹೀಗೆ ಯಾವುದಾದರೂ ವಿಷಯದ ಮೇಲೆ ಪರಿಣಾಮಕಾರಿ ಚಿತ್ರಗಳನ್ನು ತಯಾರಿಸಬಹುದು. ಪೇಪರ್ ರಿಲೀಫ್ ಸಹಾ ಅಂತಹುದೇ ಒಂದು ಉಬ್ಬುಶಿಲ್ಪದ ಮಾದರಿ. ಕೆಲವು ಕಲಾವಿದರು ಸಿದ್ಧಗೊಳಿಸಿದ ಮೋಲ್ಡ್ ಮೇಲೆ ಪೇಪರ್ ಪಲ್ಪ್ ಲೇಪಿಸುವ ಸುಲಭವಾದ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಹಳೆಯ ಪೇಪರ್‌ಗಳ ತುಂಡುಗಳಿಂದ ತಯಾರಿಸುವ ರಿಲೀಫ್ ಕಲಾಕೃತಿಗಳು ಹೆಚ್ಚು ಹೆಚ್ಚು ಸೃಜನಶೀಲವಾಗಿದ್ದು ಕ್ರಿಯಾಶೀಲತೆಯನ್ನು ಉದ್ದೀಪನಗೊಳಿಸುವಂತಿರುತ್ತವೆ.

ಹೆಚ್ಚು ಹಣವನ್ನೇನೂ ಕೇಳದ, ಆದರೆ ಅಪಾರವಾದ ತಾಳ್ಮೆಯನ್ನೂ ಹಾಗೂ ಹೊಸಹೊಸ ಕಲ್ಪನೆಗಳನ್ನೂ ಬೇಡುವ ಈ ಕಲೆಗೆ ಇಂತಹುದೇ ವಿಷಯವಾಗಿರಬೇಕೆಂಬ ಕಡ್ಡಾಯವೇನೂ ಇಲ್ಲ. ಯಾವುದೇ ವಿಷಯದ ಮೇಲೆ ಸಹಾ ಕಲಾವಿದರು ತಮ್ಮ ಕಲ್ಪನೆಯನ್ನು ಹರಿಯಬಿಡಬಹುದು. ಮುಖ್ಯವಾಗಿ ಬೇಕಾಗಿರುವುದು ಒಂದು ಒಳ್ಳೆಯ ಭಾವಪೂರ್ಣವಾದ ಕಲ್ಪನೆ. ಅದಕ್ಕಾಗಿ ನಮ್ಮ ಕೈಯಳತೆಯಲ್ಲಿ ಸಿಕ್ಕುವ ಯಾವುದೇ ಆಕಾರವಾದರೂ ಆಗಬಹುದು. ಅಥವಾ ಕಲಾವಿದನ ಕಲ್ಪನೆಗೆ ತಕ್ಕಂತಹ ಒಂದು ಆಕಾರವನ್ನು ತಯಾರಿಸಿಕೊಳ್ಳಬಹುದು. ಈ ರೀತಿಯ ಕಲಾಕೃತಿ ರಚಿಸುವ ಕಲಾವಿದರು ತಮ್ಮ ಕಲ್ಪನೆಗನುಗುಣವಾಗಿ ಆವೆಮಣ್ಣಿನಿಂದ ಆಕಾರವನ್ನು ತಯಾರಿಸಿಕೊಂಡು ಅದರಮೇಲೆ ಕಾಗದದ ತುಂಡುಗಳನ್ನು ಹಚ್ಚಿ ಉಬ್ಬುತಗ್ಗುಗಳ ರಿಲೀಫ್ ರಚಿಸುತ್ತಾರೆ. ಈ ರೀತಿಯಲ್ಲಿ ಸಿದ್ಧಗೊಂಡ ಕಲಾಕೃತಿಗಳು ಗೋಡೆಯ ಮೇಲೆ ಅಲಂಕರಣಕ್ಕೆ ತೂಗುಹಾಕುವ ಭಿತ್ತಿಚಿತ್ರಗಳಾಗಿ ಉಪಯುಕ್ತವಾಗುವುದರಿಂದ ಉತ್ತಮ ಅಭಿವ್ಯಕ್ತಿಯುಳ್ಳ ಕಲಾಕೃತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸಹಾ ಇದೆ.

ವಿಧಾನ

ಬೇಕಾಗುವ ವಸ್ತುಗಳು. ಒಂದಷ್ಟು ಹಳೆಯ ನ್ಯೂಸ್‌ಪೇಪರ್, ಮೈದಾಹಿಟ್ಟಿನಿಂದ ಮಾಡಿದ ಅಂಟು, ಮೆಟಲ್ ಪೇಸ್ಟ್, ಬಣ್ಣ, ಒಂದಷ್ಟು ತಾಳ್ಮೆ, ಶ್ರದ್ಧೆ ಮತ್ತು ಕಲ್ಪನೆ.

ರಿಲೀಫ್ ಕಲಾಕೃತಿ ರಚಿಸುವ ಕಲಾವಿದರು ಅನುಸರಿಸುವ ಮಾರ್ಗ ಹೀಗಿದೆ.

ಮೊದಲಿಗೆ ಏನು ಮಾಡಬೇಕೆಂಬ ನಿರ್ಧಾರಕ್ಕೆ ಬಂದನಂತರ ಅದನ್ನು ಲೈನ್ ಸ್ಕೆಚ್ ಮೂಲಕ ಕಾಗದದ ಮೇಲೆ ಬಿಡಿಸಿಕೊಳ್ಳಬೇಕು. ಅದೇ ಆಕಾರವನ್ನು ಆವೆ ಮಣ್ಣಿನಲ್ಲಿ ರಚಿಸಿಕೊಳ್ಳಬೇಕು. ಈ ರೀತಿಯ ರಿಲೀಫ್ ಕಲಾಕೃತಿಗಳು ಗೋಡೆಯ ಮೇಲೆ ತೂಗುಹಾಕುವ ಭಿತ್ತಿಚಿತ್ರ (ಮ್ಯೂರಲ್)ಗಳಾಗಿ ಉಪಯೋಗಿಸಲ್ಪಡುವುದರಿಂದ ಸಾಮಾನ್ಯವಾಗಿ 1.5X2ಅಡಿ ಅಥವಾ 2X3.5 ಅಡಿ ಅಳತೆಯಲ್ಲಿ (ಕೆಲವೊಮ್ಮೆ ಅದಕ್ಕೂ ವಿಶಾಲವಾಗಿ) ತಯಾರಿಸುತ್ತಾರೆ. ಬೇಕಾದ ಅಳತೆಯಲ್ಲಿ ತಯಾರಿಸಿದ ಮಣ್ಣಿನ ಆಕಾರದ ಮೇಲೆ ಅದು ಹಸಿಯಾಗಿದ್ದಾಗಲೇ ಮೊದಲ ಪದರದ ಕಾಗದದ ಚೂರುಗಳನ್ನು ಅಂಟಿಸಬೇಕು. ಎರಡನೆ ಪದರದಿಂದ ಮುಂದಕ್ಕೆ ಮೈದಾಹಿಟ್ಟಿನ ಅಂಟನ್ನು ಕಾಗದದ ತುಂಡಿಗೆ ಲೇಪಿಸಿ ಅಂಟಿಸಬೇಕು. ಹೀಗೆ ಕಾಗದದ ಚೂರುಗಳನ್ನು ಹಲವು ಪದರಗಳಾಗಿ ಅಂಟಿಸಿ ಸಾಕಷ್ಟು ದಪ್ಪನಾದ ಪದರವನ್ನು ರಚಿಸಿಕೊಂಡ ಮೇಲೆ ಕೊನೆಯದಾಗಿ ಬಿಳೀಕಾಗದದ ಪದರವನ್ನು ಅಂಟಿಸಬೇಕು. ನಂತರ ಅದನ್ನು ಮಣ್ಣಿನಿಂದ ಬಿಡಿಸಿಕೊಳ್ಳಬೇಕು. ಅದನ್ನು ಎರಡೂ ಬದಿಗಳಲ್ಲಿ ಒಣಗಿಸಿ ನಂತರ ಬೇಕಾದ ಬಣ್ಣವನ್ನು ಸ್ಪ್ರೇಯರ್ ಮೂಲಕ ಹಚ್ಚಿದರೆ ಆಕೃತಿ ಸಿದ್ಧವಾದಂತೆ.

ಕಲಾವಿದನಿಗೆ ‘ಅಬ್‌ಸ್ಟ್ರಾಕ್ಟ್’ (ಅಮೂರ್ತ) ಮಾದರಿಯಲ್ಲಿ ಆಕೃತಿ ರಚಿಸಬೇಕಿದ್ದರೆ ಕಾಗದದ ಮೇಲೆ ನೇರವಾಗಿ ಬಣ್ಣ ಹಚ್ಚಬಹುದು. ಆದರೆ ‘ರಿಯಲಿಸ್ಟಿಕ್’ ಕಲಾಕೃತಿಗಳನ್ನು ರಚಿಸುವುದಿದ್ದರೆ ಕಾಗದದಿಂದ ತಯಾರಿಸಿದ ಆಕೃತಿಯ ಮೇಲೆ ಒಂದು ಪದರ ದಪ್ಪನಾಗಿ ಮೆಟಲ್ ಪೇಸ್ಟ್ ಹಚ್ಚಬೇಕಾಗುತ್ತದೆ. ಮೆಟಲ್‌ಪೇಸ್ಟ್ ಹಚ್ಚುವುದರಿಂದ ಕಣ್ಣು, ರೆಪ್ಪೆ, ತುಟಿ ಮೊದಲಾದ ಸೂಕ್ಷ್ಮ ಭಾಗವನ್ನು ಬೇಕಾದಂತೆ ತಿದ್ದಿ ತೀಡಿ ಮುಖದ ಭಾವನೆಗಳನ್ನು ನಿಖರಗೊಳಿಸಬಹುದು. ಬೇಕಾದ ರೀತಿಯಲ್ಲಿ ಕುಸುರಿಕೆಲಸ ಮಾಡಿ ಅಂದವನ್ನು ಹೆಚ್ಚಿಸಬಹುದು. ಮೆಟಲ್ ಪೇಸ್ಟ್ ಒಣಗಿದ ನಂತರ ನೆರಳು-ಬೆಳಕಿನ ಸಂಯೋಜನೆಯ ಮೂಲಕ ವಿಶಿಷ್ಟ ಅರ್ಥವನ್ನು ಹೊಮ್ಮಿಸುವಂತಹ ಎನಾಮೆಲ್ ಬಣ್ಣವನ್ನು ಸ್ಪ್ರೇ ಮಾಡಿದರೆ ಸುಂದರವಾದೊಂದು ಭಿತ್ತಿಚಿತ್ರ ತಯಾರಾಗುತ್ತದೆ. ಪೇಪರ್ ಪಲ್ಪ್‌ನಿಂದ ಕಲಾಕೃತಿ ಮಾಡುವುದಕ್ಕಿಂತ ಈ ವಿಧಾನದಲ್ಲಿ ಸ್ವಲ್ಪ ಶ್ರಮ ಹೆಚ್ಚು. ಆದರೂ ಈ ವಿಧಾನದಲ್ಲಿ ಮುಕ್ತಾಯದ ಮೆರುಗು ಕೊಡುವಲ್ಲಿ ಅಪಾರವಾದ ಸಾಧ್ಯತೆಗಳಿವೆ. ಪೇಪರ್ ಪಲ್ಪ್ ಅಗಲೀ ಕಾಗದದ ತುಂಡುಗಳಿಂದಾಗಲಿ ತಯಾರಿಸಿದ ಕಲಾಕೃತಿಯು ನಿರೀಕ್ಷೆಯ ಸುಮಾರು ಶೇ.70ರಷ್ಟು ಮಾತ್ರ ಸಿದ್ಧವಾಗಿರುತ್ತದೆ. ಉಳಿದುದನ್ನು ನಂತರದ ಕುಸುರಿಕೆಲಸಗಳಿಂದಲೂ ಮತ್ತು ವರ್ಣಸಂಯೋಜನೆಯಿಂದಲೂ ಪೂರ್ಣಗೊಳಿಸಬೇಕಾಗುತ್ತದೆ.

ಮಕ್ಕಳ ಮನರಂಜನೆ ಮತ್ತು ಮನೋವಿಕಾಸಕ್ಕಾಗಿ ಪಠ್ಯೇತರ ಚಟುವಟಿಕೆಯಾಗಿ ನಮ್ಮ ಶಾಲೆಗಳಲ್ಲಿ ಕ್ರಾಫ್ಟ್ ತರಗತಿಗಳೇನೋ ಇರುತ್ತವೆ. ಆದರೆ ಬಲೂನ್‌ಗಳ ಮೇಲೆ ಪೇಪರ್ ತುಂಡುಗಳನ್ನು ಹಚ್ಚಿ ಮಾಸ್ಕ್‌ಗಳನ್ನು ಮಾಡಿಸುವಷ್ಟಕ್ಕೆ ಕ್ರಾಫ್ಟ್ ತರಗತಿಗಳನ್ನು ಸೀಮಿತಗೊಳಿಸಲಾಗುತ್ತದೆ. ಅದರದ್ದೇ ಮುಂದುವರೆದ ಭಾಗವಾದ ಪೇಪರ್ ರಿಲೀಫ್ ವರ್ಕ್ ಅನ್ನು ಮಕ್ಕಳಿಂದ ಮಾಡಿಸುವುದರಿಂದ ಅವರಲ್ಲಿ ಕ್ರಿಯಾಶೀಲತೆಯನ್ನೂ ಸೃಜನಶೀಲತೆಯನ್ನೂ ಕುಶಲತೆಯನ್ನೂ ಉದ್ದೀಪನಗೊಳಿಸಬಹುದಾಗಿದೆ. ನಮ್ಮಲ್ಲಿನ ಕೆಲವು ಕಲಾವಿದರು ವೈಯುಕ್ತಿಕ ನೆಲೆಯಲ್ಲಿ ಶಾಲಾಮಕ್ಕಳಿಗೆ ಪೇಪರ್ ರಿಲೀಫ್ ಕಾರ್ಯಾಗಾರಗಳನ್ನು ನಡೆಸಿದಾಗ ಮಕ್ಕಳು ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಂತಸಪಟ್ಟಿರುವುದು ಕಂಡುಬಂದಿದೆ. ಮಕ್ಕಳಲ್ಲಿ ಹಲವು ವಿನ್ಯಾಸಗಳ ಬಗೆಗೆ ಆಸಕ್ತಿ ಕೆರಳಿಸಿ ಅವರ ಅರಿವನ್ನು ವಿಸ್ತರಿಸಿ ಮನೋವಿಕಾಸಕ್ಕೆ ಕಾರಣವಾಗುವುದರಿಂದ ವಿದೇಶಗಳಲ್ಲಿ ಹಲವಾರು ರೀತಿಯ ಪೇಪರ್ ರಿಲೀಫ್ ತರಗತಿಗಳನ್ನು ಮಕ್ಕಳಿಗಾಗಿ ನಡೆಸುತ್ತಾರೆ. ಪ್ರಾಥಮಿಕ ಹಂತದ, ಮಾಧ್ಯಮಿಕಹಂತದ ಮತ್ತು ಕಾಲೇಜ್ ಹಂತದ ಮಕ್ಕಳ ಮನೋಸ್ಥಿತಿಗೆ ಹೊಂದುವಂತಹ ಬೆರೆಬೇರೆ ಪಠ್ಯಕ್ರಮಗಳನ್ನು ತಯಾರಿಸಿರುತ್ತಾರೆ. (ಅದರ ಫೇಸು ಸಹಾ ನೂರಾರು ಡಾಲರ್‌ಗಳಲ್ಲಿರುತ್ತದೆ!) ಹಲವು ವಿನ್ಯಾಸಗಳ ಗುರುತಿಸುವಿಕೆ, ಸಂಯೋಜಿಸುವಿಕೆ, ಚರ್ಚೆ ಮತ್ತು ತಯಾರಿ ಇವುಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿರುತ್ತಾರೆ. ನಮ್ಮಲ್ಲೂ ಸಹಾ ಶಿಕ್ಷಣ ಕ್ಷೇತ್ರದ ತಜ್ಞರು ಈ ಬಗ್ಗೆ ಆಲೋಚಿಸಬೇಕಾಗಿದೆ.

 

(ಇಲ್ಲಿ ಉಪಯೋಗಿಸಿರುವುದು ಕಲಾವಿದ ಮೈಸೂರು ಹುಸೇನಿಅವರ ಕಲಾಕೃತಿಗಳು)