ಸ್ವಲ್ಪ ಸಿಹಿ, ಸ್ವಲ್ಪ ಒಗರಿನ ಪೇರಲ ಹಣ್ಣು ಯಾರಿಗೆ ಗೊತ್ತಿಲ್ಲ. ಆದರೆ ಇದಕ್ಕೂ ನ್ಯಾನೋತಂತ್ರಜ್ಞಾನಕ್ಕು ಸಂಬಂಧವೇನೋ ಎಂದು ನೀವೂ ಚಕಿತರಾಗಿರಬೇಕಲ್ಲವೇ? ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ಸಂಶೋಧನಾ ಸಂಸ್ಥೆಯ ನ್ಯಾನೊತಂತ್ರಜ್ಞ ಬಸವರಾಜು ಸಾಲಿಮಠ ಹಾಗೂ ಗುಲ್ಬರ್ಗ ವಿಶ್ವವಿದ್ಯಾನಿಲಯದ ವಸ್ತು ರಸಾಯನ ವಿಜ್ಞಾನದ ಪ್ರೊಫೆಸರ್ ಎ. ವೆಂಕಟರಮಣರವರ ಕನಸು ನನಸಾದರೆ, ಪೇರಲದ ಎಲೆ ಬಳಸಿ ಚಿನ್ನದ ನ್ಯಾನೊಗುಂಡುಗಳನ್ನು ಅತಿ ಅಗ್ಗವಾಗಿ ತಯಾರಿಸಬಹುದು. ನ್ಯಾನೊಬಯೋಟೆಕ್ನಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅವರ ಸಂಶೋಧನಾ ಪ್ರಬಂಧ, ಪೇರಲದ ಎಲೆಯನ್ನು ಹಿಂಡಿ ತೆಗೆದ ರಸವನ್ನು ಬಳಸಿದರೆ ನ್ಯಾನೊಪ್ರಮಾಣದ ಚಿನ್ನದ ಗುಂಡುಗಳನ್ನು ಸುಲಭವಾಗಿ ತಯಾರಿಸಬಹುದು ಎಂದು ನಿರೂಪಿಸಿದೆ.

ನ್ಯಾನೊತಂತ್ರಜ್ಞಾನವನ್ನು ನಾಳೆಯ ತಂತ್ರಜ್ಞಾನ ಎನ್ನುತ್ತಾರೆ. ಮೀಟರಿನ ಕೋಟಿಯಲ್ಲೊಂದಂಶದಷ್ಟು ಪ್ರಮಾಣದ ವಸ್ತುಗಳ ತಯಾರಿಕೆ ಹಾಗೂ ಬಳಕೆಯೇ ನ್ಯಾನೋತಂತ್ರಜ್ಞಾನದ ಜೀವಾಳ. ಇಷ್ಟು ಸೂಕ್ಷ್ಮಪ್ರಮಾಣದಲ್ಲಿ ವಸ್ತುಗಳ ತಯಾರಿಕೆ ಎನ್ನುವುದು ವಿಶೇಷ ಕೌಶಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಇದೊಂದು ಬೆರಗಿನ ತಂತ್ರಜ್ಞಾನ. ನ್ಯಾನೋತಂತ್ರಜ್ಞಾನದಲ್ಲಿ ಇತ್ತೀಚೆಗೆ ಹೆಚ್ಚು ಸುದ್ದಿ ಮಾಡುತ್ತಿರುವುದು ನ್ಯಾನೊಕಾರ್ಬನ್ ಅಥವಾ ಕಾರ್ಬನ್ ಧಾತುವಿನ ನ್ಯಾನೊರೂಪಗಳು. ಕಾರ್ಬನ್ ಅಷ್ಟೇ ಅಲ್ಲ, ಇನ್ನೂ ಹಲವು ಧಾತುಗಳೂ ನ್ಯಾನೊ ಪ್ರಮಾಣದಲ್ಲಿ ಬೆರಗುಗೊಳಿಸುವಂತಹ ಫಲಗಳನ್ನು ನೀಡಬಲ್ಲವು. ಇವುಗಳಲ್ಲಿ ಚಿನ್ನದ ಗುಂಡುಗಳೂ ಇವೆ. ಹೇಳಿ, ಕೇಳಿ ಚಿನ್ನ ರಾಜಧಾತು. ಅಂದರೆ ರಾಜರಿಗೆ ಮಾತ್ರ ಕೈಗೆಟುಕುವ ವಸ್ತು ಅಂತಲ್ಲ, ಸುಲಭವಾಗಿ ರಾಸಾಯನಿಕ ಕ್ರಿಯೆಗಳಲ್ಲಿ ತೊಡಗದ ವಸ್ತು ಎಂದರ್ಥ ಅಷ್ಟೆ. ಗಾಳಿಯಲ್ಲಿನ ತೇವ, ಆಕ್ಸಿಜನ್ ಕೂಡ ಇದನ್ನು ಮಸುಕಾಗಿಸವು. ಹೀಗಾಗಿಯೇ ಇದಕ್ಕೆ ಕಚಿನ್ನದಕಿ ಬೆಲೆ.

ಚಿನ್ನದ ಈ ಗುಣವೇ ನ್ಯಾನೊತಂತ್ರಜ್ಞಾನದಲ್ಲಿ ಅದಕ್ಕೊಂದು ವಿಶೇಷ ಸ್ಥಾನ ನೀಡಿದೆ. ನ್ಯಾನೊ ಪ್ರಮಾಣದ ಚಿನ್ನದ ಗುಂಡುಗಳನ್ನು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಂಡುಗಳನ್ನಾಗಿ ಪರಿವರ್ತಿಸುವ ಆಲೋಚನೆ ಇದೆ. ಏಕೆಂದರೆ, ಚಿನ್ನ ಇನ್ಯಾವುದೇ ರಾಸಾಯನಿಕಗಳಂತೆ ಪ್ರತಿಕ್ರಯಿಸುವುದಿಲ್ಲ. ಆದರೆ ಚಿನ್ನದ ಈ ಕ್ರಿಯಾರೋಧಕ ಗುಣವೇ ಅದರ ನ್ಯಾನೊರೂಪದ ಬಳಕೆಗೂ ಅಡ್ಡಿಯೊಡಿದೆ. ಚಿನ್ನವನ್ನು ಸುಲಭವಾಗಿ ಕರಗಿಸುವ ಸರಳ ದ್ರಾವಕವಿಲ್ಲ. ಉಪ್ಪಿನಂತೆ ಚಿನ್ನದ ಲವಣವೂ ಲಭ್ಯವಿಲ್ಲ. ಚಿನ್ನವನ್ನು ಕರಗಿಸಿ ಗುಂಡುಗಳನ್ನಾಗಿ ಹನಿಸುವುದು ಒಂದು ಉಪಾಯ. ಆದರೆ ಇದರಿಂದ ಅತಿ ಸೂಕ್ಷ್ಮವಾದ ನ್ಯಾನೊಪ್ರಮಾಣದ ಗುಂಡುಗಳನ್ನು ತಯಾರಿಸುವುದು ಸುಲಭವಲ್ಲ.  ಚಿನ್ನದ ಅಪರೂಪದ ರಾಸಾಯನಿಕ ಲವಣಗಳನ್ನು ತಯಾರಿಸಿ, ದ್ರಾವಣವನ್ನಾಗಿ ಮಾಡುವುದು ಮತ್ತೊಂದು ಉಪಾಯ. ಆದರೆ ಇಲ್ಲಿಯೂ ಸುಲಭವಾಗಿ ದೊರಕದ ಹಾಗೂ ವಿಷಕಾರಿ ಎನ್ನಬಹುದಾದ ರಾಸಾಯನಿಕಗಳನ್ನೇ ಬಳಸಬೇಕು. ಈ ಕಠಿಣ ಉಪಾಯಗಳಿಂದ ಚಿನ್ನದ ನ್ಯಾನೊಗುಂಡುಗಳನ್ನು ತಯಾರಿಸಿದರೂ, ಅವು ಹಾಗೆಯೇ ಉಳಿಯುವಂತೆ ಕಾಪಾಡುವುದು ಇನ್ನೂ ಕಷ್ಟ.  ಚಿನ್ನ ಬಿಟ್ಟಿ ಸಿಕ್ಕಿದರೂ ಇಂತಹ ತಂತ್ರಗಳನ್ನು ಬಳಸಿ ತಯಾರಿಸುವ ನ್ಯಾನೊಕಣಗಳು ದುಬಾರಿಯಾಗುವುದು ಖಂಡಿತ. ಹೀಗಾಗಿ ಚಿನ್ನದ ಗುಂಡುಗಳನ್ನು ತಯಾರಿಸಲು ಸರಳವಾದ ತಂತ್ರಗಳತ್ತ ವಿಜ್ಞಾನಿಗಳ ಗಮನ ಹರಿದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಸಾಲಿಮಠ-ರಮಣರ ತಂಡ ಇದಕ್ಕಾಗಿ ಹಲವು ಉಪಾಯಗಳನ್ನು ಹುಡುಕುತ್ತಿದೆ. ಚಿನ್ನದಂತೆಯೇ ಬೆಳ್ಳಿ ಮುಂತಾದ ಲೋಹಗಳ ನ್ಯಾನೊಕಣಗಳನ್ನು ಸುಲಭವಾಗಿ ತಯಾರಿಸಲು ಈ ತಂಡ ಪ್ರಯತ್ನಿಸುತ್ತಿದೆ. ಇದಕ್ಕಾಗಿ ತಂಡ ಆಲೋಚಿಸಿರುವ ಉಪಾಯ: ಸಸ್ಯಗಳು ಹಾಗೂ ಬೂಸುಗಳನ್ನು ಬಳಸುವುದು. ನ್ಯಾನೊಕಣಗಳನ್ನು ಬಳಸಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಆಲೋಚನೆ ಇದೆಯಷ್ಟೆ. ಪರಂಪರಾನುಗತವಾಗಿ ಕ್ಯಾನ್ಸರ್ ಮತ್ತು ಗೆಡ್ಡೆಗಳ ಚಿಕಿತ್ಸೆಗೆ ಬಳಸುವ ಸಸ್ಯಗಳ ಸಾರವನ್ನು ನ್ಯಾನೊಗುಂಡುಗಳ ಮೇಲೆ ಲೇಪಿಸಿದರೆ, ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದಂತಾದೀತು ಎನ್ನುವ ಆಲೋಚನೆಯಿಂದ ಈ ತಂಡ ವಿವಿಧ ಸಸ್ಯಗಳು ಹಾಗೂ ಬೂಸುಗಳನ್ನು ಪ್ರಯೋಗಿಸಿ ನ್ಯಾನೊಕಣಗಳ ತಯಾರಿಗೆ ಎಳಸಿದೆ. ಈ ತಂಡ ಬಳಸಿದ ಸಸ್ಯಗಳಲ್ಲಿ ನಮ್ಮ, ನಿಮ್ಮೆಲ್ಲರ ಮೆಚ್ಚಿನ ಸೀಬೆಹಣ್ಣು, ಪೇರಲವೂ ಒಂದು. ಆಯುರ್ವೇದ ಪದ್ಧತಿಯಲ್ಲಿ ಪೇರಲದ ಎಲೆಗಳ ರಸವನ್ನು ಕ್ಯಾನ್ಸರ್ ಹಾಗೂ ಗೆಡ್ಡೆಗಳ ಚಿಕಿತ್ಸೆಗೆ ಬಳಸುವುದು ವಾಡಿಕೆ. ಹೀಗಾಗಿ ಇದಕ್ಕೂ ನ್ಯಾನೊ ರಂಗಕ್ಕೆ ಪ್ರವೇಶ ನೀಡಲಾಗಿದೆ.

ಚಿನ್ನದ ನ್ಯಾನೊಕಣಗಳನ್ನು ತಯಾರಿಸಲು ರಾಸಾಯನಿಕ ತಂತ್ರದಿಂದ ಚಿನ್ನದ ಪರಮಾಣುಗಳನ್ನು ಅದರ ದ್ರಾವಣದಿಂದ ಬೇರ್ಪಡಿಸಲಾಗುತ್ತದೆ. ತಮ್ಮ ಅಯಾನುಗುಣ (ಅಯಾನು ಎಂದರೆ ವಿದ್ಯುದಾವೇಶ ಇರುವ ಅಣು) ಕ್ಕೆ ಅನುಗುಣವಾಗಿ ಚಿನ್ನದ ನ್ಯಾನೊಕಣಗಳು ಬೇರ್ಪಡೆಯಾಗುತ್ತವೆ. ನ್ಯಾನೊಕಣಗಳ ಚಟುವಟಿಕೆಗಳು ಪ್ರತಿಕಣದಲ್ಲಿರುವ ಪರಮಾಣುಗಳ ಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತವೆ. ಉದಾಹರಣೆಗೆ, ಪಾರದರ್ಶಕವಾಗಿರುವ ಚಿನ್ನದ ದ್ರಾವಣ ಕಣಗಳಲ್ಲಿನ ಪರಮಾಣುಗಳ ಸಂಖ್ಯೆ ಹೆಚ್ಚಾದ ಹಾಗೆ ಕೆಂಪು, ಹಸಿರು ಮತ್ತು ತಾಮ್ರದ ಬಣ್ಣಕ್ಕೆ ತಿರುಗಬಹುದು. ಅಪ್ಪಟ ಚಿನ್ನದ ದ್ರಾವಣವಾದರೂ, ಕಣಗಳಲ್ಲಿರುವ ಅಣುಗಳ ಸಂಖ್ಯೆಗೆ ತಕ್ಕ ಹಾಗೆ ದ್ರಾವಣದ ಬಣ್ಣವೂ ಬೇರೆಯಾಗಿರುತ್ತದೆ. ಜೀವಕೋಶಗಳನ್ನು ಅಂಟಿಕೊಳ್ಳುವ ಗುಣವೂ ಇದೇ ರೀತಿ ಬದಲಾಗುತ್ತದೆ.  ಇಂತಹ ಬಹುರೂಪಿ ಕಣಗಳನ್ನು ತಯಾರಿಸುವ ತಂತ್ರದಲ್ಲಿ ಇದೀಗ ಸಸ್ಯಗಳನ್ನೂ ಬಳಸಬಹುದೆನ್ನುವುದೆ ಸಾಲಿಮಠ ಮತ್ತು ವೆಂಕಟರಮಣ ಅವರ ಶೋಧ.

ಚಿನ್ನದ ನ್ಯಾನೊಕಣಗಳನ್ನು ತಯಾರಿಸಲು ಇವರು ಮಾಡಿದ ಉಪಾಯ ಇಷ್ಟೆ. ಪೇರಲದ ಎಲೆಗಳನ್ನು ಕೆಲವು ನಿಮಿಷ ಮೈಕ್ರೊವೇವ್ನಲ್ಲಿ ಒಣಗಿಸಿ ಅನಂತರ ಪರಿಶುದ್ಧ ನೀರಿನಲ್ಲಿ ಅರೆದು ಅದರ ರಸವನ್ನು ಹಿಂಡಿದರು. ಅದೇ ವೇಳೆ ಚಿನ್ನದ ಹೈಡ್ರೊಟೆಟ್ರಾಕ್ಲೋರೇಟ್ ಲವಣದಿಂದ ದ್ರಾವಣವನ್ನೂ ತಯಾರಿಸಲಾಯಿತು. ಕಾಲು ಲೀಟರು ಲವಣದ ಈ ದ್ರಾವಣದೊಳಗೆ ಐದು ಮಿಲಿ ಪೇರಲ ಎಲೆಯ ರಸ ಕೂಡಿಸಿದರು. ಆರಂಭದಲ್ಲಿ ಪಾರವಾಗಿದ್ದ ದ್ರಾವಣ ಚಿನ್ನದ ಕಣಗಳು ರೂಪುಗೊಂಡ ಫಲವಾಗಿ ಗಾಢ ತಾಮ್ರದ ಬಣ್ಣವನ್ನು ಪಡೆಯಿತು. ಈ ದ್ರಾವಣವನ್ನು ಸೋಸಿ, ಅಪ್ಪಟ ಚಿನ್ನದ ಕಣಗಳನ್ನು ಪ್ರತ್ಯೇಕಿಸಿದ ಬಸವರಾಜುರವರ ತಂಡ ಅದನ್ನು ಇಲೆಕ್ಟ್ರಾನಿಕ್ ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಿದೆ. ಹಾಗೆಯೇ ಅಲ್ಟ್ರಾವಯಲೆಟ್ ಕಿರಣಗಳಿಗೂ ಈ ದ್ರಾವಣವನ್ನು ಒಡ್ಡಿ, ಕಣಗಳು ನಿಜವಾಗಿಯೂ ಚಿನ್ನದ ಕಣಗಳೋ ಅಲ್ಲವೋ ಎನ್ನುವುದನ್ನೂ ಖಚಿತಪಡಿಸಿಕೊಂಡಿದೆ. ಅಲ್ಟ್ರಾವಯಲೆಟ್ ಕಿರಣಗಳಿಗೆ ಒಡ್ಡಿದಾಗ ಹೊಮ್ಮಿದ ಪ್ರತಿಫಲನ ದ್ರಾವಣದ ಬಣ್ಣ ಗಾಢವಾದಾಗ ಅತಿ ಹೆಚ್ಚಾಗಿತ್ತು.

ಕಈ ತಂತ್ರದಿಂದ ಚಿನ್ನದಂತಹ ವಸ್ತುಗಳ ನ್ಯಾನೊಕಣಗಳನ್ನು ಸುಲಭವಾಗಿ ತಯಾರಿಸಬಹುದು,ಕಿ ಎನ್ನುತ್ತಾರೆ ಪ್ರೊ. ವೆಂಕಟರಮಣ.  ಇತರೆ ರಾಸಾಯನಿಕ ತಂತ್ರಗಳಲ್ಲಿ ಬಳಸುವ ಉಷ್ಣತೆ ಹಾಗೂ ರಾಸಾಯನಿಕಗಳ ಅವಶ್ಯಕತೆ ಈ ತಂತ್ರಗಳಿಗಿಲ್ಲ. ಖಸಾಧಾರಣ ಉಷ್ಣತೆಯಲ್ಲಿಯೇ ನ್ಯಾನೊಕಣಗಳು ರೂಪುಗೊಳ್ಳುತ್ತವೆ. ಐದೇ ನಿಮಿಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನ್ಯಾನೊಕಣಗಳು ರೂಪುಗೊಳ್ಳುತ್ತವೆ,ಖ ಎನ್ನುತ್ತಾರೆ ವೆಂಕಟರಮಣ. ಪೇರಲದ ಎಲೆಗಳಲ್ಲಿರುವ ಫ್ಲೇವನಾಯ್ಡ್ ರಾಸಾಯನಿಕಗಳು ಚಿನ್ನದ ಕಣಗಳ ಸುತ್ತಲೂ ಲೇಪಿಸಿಕೊಂಡು, ಅವು ಒಂದರೊಡನೊಂದು ಕೂಡಿಕೊಳ್ಳದಂತೆ ತಡೆಯುತ್ತಿರಬಹುದು ಎನ್ನುತ್ತಾರೆ ವೆಂಕಟರಮಣ. ಪೇರಲವನ್ನಲ್ಲದೆ ಬೇವಿನ ಎಲೆಯನ್ನೂ ಇವರು ಬಳಸಿದ್ದಾರೆ. ಆದರೆ ಪೇರಲದ ರಸದಿಂದ ನ್ಯಾನೊಕಣಗಳ ತಯಾರಿಕೆ ಶೀ್ರವಾಗಿ ಆಗುತ್ತದೆಯಂತೆ. ಹೀಗಾಗಿ ಈ ತಂತ್ರ ಸರಳ ಹಾಗೂ ಪರಿಸರಸ್ನೇಹಿ ತಂತ್ರವಾಗಬಲ್ಲುದು ಎನ್ನುವುದು ಅವರ ಆಶಯ. ಹಾಗಾಗಲಿ ಎಂದು ಆಶಿಸೋಣ.

1. D. Raghunandan et al., Biosynthesis of Stable Polyshaped Gold Nanoparticles from Microwave-Exposed Aqueous Extracellular Anti-malignant Guava (Psidium guajava) Leaf Extract, Nanobiotechnology, DOI10.1007/s12030-009-9030-8; Published online October 6, 2009