ಛತ್ರಪತಿ ಶಾಹುವಿನ ಆಸ್ಥಾನದಲ್ಲಿ ಮಹಾರಾಷ್ಟ್ರದ ಯುದ್ಧ ನೀತಿಯನ್ನು ಕುರಿತು ಚರ್ಚೆ ನಡೆದಿತ್ತು. ರೂಪವಂತ ತರುಣನೊಬ್ಬ ಎದ್ದುನಿಂತು ವೀರಾವೇಶದಿಂದ ನುಡಿದ. “ಹಿಂದೂಸ್ಥಾನದಿಂದ ಪರಕೀಯರನ್ನು ಓಡಿಸಿ ಅಮರ ಕೀರ್ತಿಗಳಿಸಲು ಇದೇ ಸರಿಯಾದ ಸಮಯ. ಉತ್ತರದ ಕಡೆ ನಮ್ಮ ಗಮನ ಹರಿಸೋಣ. ಕೃಷ್ಣಾ ನದಿಯಿಂದ ಅಟಕ್‌(ತಕ್ಷಶಿಲೆ)ವರೆಗೂ ಮರಾಠ ಧ್ವಜವು ಹಾರಾಡುವಂತೆ ಮಾಡೋಣ. ಕೊಳೆತ ಮರದ ಬುಡಕ್ಕೆ ಪೆಟ್ಟು ಕೊಡೋಣ. ಕೊಂಬೆಗಳು ತಾವಾಗಿಯೇ ಬೀಳುತ್ತವೆ.”

ಈ ಧೀರವಾಣಿಯನ್ನು ಕೇಳೆ ಛತ್ರಪತಿ ಶಾಹುವಿಗೆ ಬಹಳ ಸಂತೋಷವಾಯಿತು. “ನಿಜ, ನೀನು ನಮ್ಮ ಧ್ವಜವನ್ನು ಹಿಮಾಲಯದವರೆಗೂ ಕೊಂಡೊಯ್ಯುವೆ. ಅಂತಹ ಸಮರ್ಥನಾದ ತಂದೆಯ ಸಮರ್ಥ ಮಗನೇ ನೀನು” ಎಂದು ಉತ್ಸಾಹದಿಂದ ಹೇಳಿದ.

ಆ ತರುಣನೇ ಮಹರಾಷ್ಟ್ರದ ಎರಡನೆಯ ಪೇಷ್ವೆ ಬಾಜೀರಾಯ.

ಮಹಾರಾಷ್ಟ್ರ ಭಾರತಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಭಕ್ತಿಗಂಗೆಯನ್ನು ಹರಿಸಿ ಜನರಲ್ಲಿ ಧರ್ಮವು ಜಾಗೃತವಾಗುವಂತೆ ಮಾಡಿದ ಸಾಧುಸಂತರೊಂದು ಕಡೆ. ಸ್ವಧರ್ಮವನ್ನು ರಕ್ಷಿಸಿ ಪೋಷಿಸಿದ ವೀರನಾಯಕರು ಇನ್ನೊಂದು ಕಡೆ. ಇವರೆಡೂ ಮಹಾರಾಷ್ಟ್ರದ ಕೊಡುಗೆಗಳಲ್ಲಿ ಪ್ರಮುಖವಾದವು.

ಮರಾಠಾ ನಾಯಕರಲ್ಲಿ ಇಬ್ಬರು ಜಗತ್ಪ್ರಸಿದ್ಧರಾಗಿದ್ದಾರೆ. ಮಹಾರಾಷ್ಟ್ರದ ನಿರ್ಮಾಪಕ ಶಿವಾಜಿ, ಮಹಾರಾಷ್ಟ್ರ ಸಾಮ್ರಾಜ್ಯದ ಸ್ಥಾಪಕ ಪೇಷ್ವೆ ಬಾಜೀರಾಯ. ಇವರಿಬ್ಬರೂ ನಾಡಿನಲ್ಲಿ ಅಪ್ರತಿಮರೆನಿಸಿ ದೇಶದ ಇತಿಹಾಸ, ಜನಜೀವನದ ಮೇಲೆ ಪ್ರಭಾವ ಬೀರಿದ್ದಾರೆ.

ಮಹಾರಾಷ್ಟ್ರಕ್ಕೆ ವಿಪತ್ತು

ಶಿವಾಜಿ ಛತ್ರಪತಿಯು ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಉದ್ದೇಶದಿಂದ ಒಂದು ರಾಜ್ಯವನ್ನು ಕಟ್ಟಿದನು. ಇದಕ್ಕಾಗಿ ಅವನು ಬಹಳ ಕಾಲ ಹೋರಾಡಬೇಕಾಯಿತು. ದಕ್ಷವಾದ ಆಡಳಿತ ವ್ಯವಸ್ಥೆಯನ್ನು ಏರ್ಪಡಿಸಿದನು. ಶಿವಾಜಿಯು ಅಪ್ರತಿಮ ಶೂರನೂ ಜನ ನಾಯಕನೂ ಆಗಿದ್ದುದರಿಂದ ಅವನ ಆಡಳಿತವು ಯಶಸ್ವಿಯಾಗಿ ಮುಂದುವರಿಯಿತು. ಆದರೆ ಅವನ ನಂತರ ಮಹಾರಾಷ್ಟ್ರವು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು. ಮೊಘಲರು ಮಹಾರಾಷ್ಟ್ರವನ್ನು ಪೂರ್ಣವಾಗಿ ನಾಶಮಾಡಬೇಕೆಂದು ನಿರ್ಧರಿಸಿದ್ದರು. ಔರಂಗಜೇಬನು ದಖನ್ನಿಗೆ ದಂಡೆತ್ತಿ ಬಂದು ಇಪ್ಪತ್ತೈದು ವರ್ಷಗಳ ಕಾಲ ಯುದ್ಧ ನಡೆಸಿದನು. ಮರಾಠರ ಸೈನ್ಯ, ಸಂಪನ್ಮೂಲಗಳು ಸ್ವಲ್ಪವಿದ್ದರೂ ಅವರು ಬಹಳ ಶೌರ್ಯದಿಂದ ಕಾದಾಡಿದರು. ಔರಂಗಜೇಬನು ಶಿವಾಜಿಯ ಮಗ ಸಾಂಬಾಜಿಯನ್ನು ಕೊಲ್ಲಿಸಿ ಅವನ ಕುಟುಂಬದವರನ್ನು ಸೆರೆ ಹಿಡಿದುಕೊಂಡು ಹೋದನು.

"ಸಮರ್ಥ ತಂದೆಯ ಸಮರ್ಥ ಮಗನೇ ನೀನು"

ಮರಾಠರು ಎಲ್ಲ ವಿಪತ್ತುಗಳನ್ನೂ ಧೈರ್ಯದಿಂದ ಎದುರಿಸಿ ಹೋರಾಡುತ್ತಲೇ ಬಂದರು. ಅವರನ್ನು ದಮನ ಮಾಡಲು ವಿಫಲರಾದ ಮೊಘಲರು ಅವರಲ್ಲಿ ಒಳ ಜಗಳವನ್ನುಂಟು ಮಾಡಲು ಪ್ರಯತ್ನಿಸಿದರು. ಈ ಉದ್ದೇಶದಿಂದ ದೆಹಲಿಯಲ್ಲಿದ್ದ ಸಾಂಬಾಜಿಯ ಮಗ ಶಾಹುವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರು.

ಪೇಷ್ವೆ

ಶಾಹು ಮಹಾರಾಷ್ಟ್ರಕ್ಕೆ ಹಿಂದಿರುಗಿದಾಗ ಅಲ್ಲಿನ ಸ್ಥಿತಿ ಚಿಂತಾಜನಕವಾಗಿತ್ತು. ಸತತವಾದ ಯುದ್ಧಗಳಿಂದ ಅಪಾರ ಹಾನಿಯಾಗಿದ್ದಿತು. ಶಿವಾಜಿಯ ಸೊಸೆ ತಾರಾಬಾಯಿಯ ಮಗ ತಾನೇ ಛತ್ರಪತಿಯೆಂದು ಘೋಷಿಸಿಕೊಂಡಿದ್ದನು. ಇದರಿಂದ ಮರಾಠರಲ್ಲಿ ಒಳ ಜಗಳ ಪ್ರಾರಂಭವಾಯಿತು. ಶಾಹುವು ದೊರೆಯಾಗಲು ತಕ್ಕವನಾಗಿರಲಿಲ್ಲ. ಮೊಘಲರ ಆಶ್ರಯದಲ್ಲಿ ಬೆಳೆದಿದ್ದ ಅವನಿಗೆ ಆಡಳಿತದ ಅನುಭವವೂ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ದಕ್ಷರೂ ಸಮರ್ಥರೂ ಆದ ಅಧಿಕಾರಿಗಳ ಅಗತ್ಯವಿದ್ದಿತು. ಈ ಸಮಯದಲ್ಲಿಯೇ ಪೇಷ್ವೆಗಳು ಪ್ರಾಬಲ್ಯಕ್ಕೆ ಬಂದರು. ಛತ್ರಪತಿ ಶಾಹು ಅಧಿಕಾರಕ್ಕೆ ಬೆಂಬಲ ನೀಡಿ ಶ್ರಮಿಸಿದ ಪೇಷ್ವೆ ಬಾಲಾಜಿ ವಿಶ್ವನಾಥನ ಮಗನೇ ಪೇಷ್ವೆ ಬಾಜೀರಾಯ.

ಬಾಲಾಜಿ ವಿಶ್ವನಾಥ

ಬಾಜೀರಾಯನ ವಂಶಸ್ಥರು ಮಹಾರಾಷ್ಟ್ರದಲ್ಲಿ ಬಹಳ ಕಾಲದಿಂದಲೂ ಅಧಿಕಾರಿಗಳಾಗಿ ಕೆಲಸ ಮಾಡಿಕೊಂಡು ಬಂದಿದ್ದರು. ಬಾಜೀರಾಯನ ತಂದೆಯಾದ ಬಾಲಾಜಿ ವಿಶ್ವನಾಥ ದಕ್ಷನೂ ಪ್ರಾಮಾಣಿಕನೂ ಆದ ಅಧಿಕಾರಿಯೆಂದು ಹೆಸರು ಗಳಿಸಿದ್ದನು. ಛತ್ರಪತಿ ಶಾಹುವು ಅವನನ್ನು ತನ್ನ ಪೇಷ್ವೆಯನ್ನಾಗಿ ನೇಮಿಸಿಕೊಂಡನು. ಈ ಪೇಷ್ವೆಯು ತನ್ನ ಒಡೆಯನಿಗೆ ಮರಾಠ ಸರದಾರರ ಬೆಂಬಲ ಸಿಗುವಂತೆ ಮಾಡಿದನು. ಮೊಘಲರಿಂದ ಶಾಹುವಿನ ಆಡಳಿತಕ್ಕೆ ಮನ್ನಣೆ ಸಿಗುವಂತೆ ಮಾಡಿದನು. ಒಟ್ಟಿನಲ್ಲಿ ಬಾಲಾಜಿ ವಿಶ್ವನಾಥನ ಸಮಾರ್ಥ್ಯ, ಮುತ್ಸದ್ದಿತನ ಇವುಗಳಿಂದಾಗಿ ಶಾಹು ಛತ್ರಪತಿ ತನ್ನ ವಿರೋಧಿಗಳನ್ನು ಸೋಲಿಸಿ ನಿರಾತಂಕವಾಗಿ ಛತ್ರಪತಿಯಾಗಿ ಆಳ್ವಿಕೆ ನಡೆಸಲು ಸಾಧ್ಯವಾಯಿತು.

ಚಿಕ್ಕವಯಸ್ಸಿಗೆ ದೊಡ್ಡ ಪದವಿ

ಪೇಷ್ವೆ ಬಾಲಾಜಿ ವಿಶ್ವನಾಥ 1720ರಲ್ಲಿ ಮರಣ ಹೊಂದಿದನು. ಆಗ ಶಾಹು ಆ ಸ್ಥಾನಕ್ಕೆ ವಿಶ್ವನಾಥನ ಹಿರಿಯ ಮಗ ಬಾಜೀರಾಯನನ್ನು ತಂದು ತನ್ನಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಪೇಷ್ವೆಗೆ ಕೃತಜ್ಞತೆಯನ್ನು ತೋರಿಸಿದನು. ಬಾಜೀರಾಯ ಆಗ ಇನ್ನೂ ಇಪ್ಪತ್ತರ ಹರೆಯದ ಯುವಕ. ವಯಸ್ಸು ಚಿಕ್ಕದಿದ್ದರೂ ಅವನಿಗೆ ಅನುಭವ ಸಾಕಷ್ಟಿದ್ದಿತು. ಅವನು ತಂದೆಯಂತೆ ಯುದ್ಧ ವಿದ್ಯೆಯಲ್ಲೂ ರಾಜ್ಯಾಡಳಿತದಲ್ಲೂ ತರಬೇತಿಯನ್ನು ಹೊಂದಿದ್ದನು. ಬಾಲ್ಯದಲ್ಲಿಯೇ ವಿದ್ಯಾಭ್ಯಾಸ ಸ್ವಲ್ಪ ಮಟ್ಟಿಗೆ ಸಾಗಿದ್ದಾಗಲೇ ತನ್ನ ತಂದೆಯ ಸಾಹಸ ಕಾರ್ಯಗಳಲ್ಲಿ ಜೊತೆಗೂಡಿ ಹೆಚ್ಚಿನ ವಿದ್ಯಾಭ್ಯಾಸ ಸಾಧ್ಯವಾಗದೇ ಹೋಯಿತು. ಎಳೆಯ ವಯಸ್ಸಿನಲ್ಲೇ ತನ್ನ ತಂದೆಯೊಡನೆ ಹಲವಾರು ಯುದ್ಧಗಳಲ್ಲಿ ಭಾಗವಹಿಸಿದ್ದನು. ಹದಿನೇಳು ವರ್ಷದವನಿದ್ದಾಗ ಒಮ್ಮೆ ಸೈನ್ಯದ ನಾಯಕತ್ವವನ್ನು ವಹಿಸಿದ್ದನು. ಈ ವೇಳೆಗಾಗಲೇ ಮರಾಠಾ ರಾಜಕೀಯದ ಪರಿಚಯವಾಗಿತ್ತು. ತಂದೆ ಬಾಲಾಜಿ ವಿಶ್ವನಾಥನೊಂದಿಗೆ ಮೊಘಲರ ಆಸ್ಥಾನಕ್ಕೆ ಹೋಗಿ ಮೊಘಲ್‌ಸಾಮ್ರಾಜ್ಯದ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಂಡಿದ್ದನು. ಈ ರೀತಿ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಅನುಭವವನ್ನು ಸಂಪಾದಿಸಿಕೊಂಡು ಬಾಜೀರಾಯ ದೊಡ್ಡ ಹುದ್ದೆಗೇರಿದ್ದನು. ಇನ್ನೂ ಇಪ್ಪತ್ತು ವರ್ಷ ತುಂಬದ ಈ ಹುಡುಗ ಮರಾಠಾ ಸಾಮ್ರಾಜ್ಯದ ಪೇಷ್ವೆಯಾಗಿ ಆರಿಸಲ್ಪಟ್ಟಾಗ ಅನೇಕ ಸರದಾರರು ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಅಂದಿನ ಕಠಿಣ ಪರಿಸ್ಥಿತಿಯಲ್ಲಿ ಈ ತರುಣ ಹೇಗೆ ಆಡಳಿತವನ್ನು ನಿರ್ವಹಿಸಬಲ್ಲ ಎಂಬ ಅನುಮಾನ ಹಲವರಿಗೆ. ಕೆಲವರಂತೂ ಬಾಜೀರಾಯನ ನೇಮಕವನ್ನೇ ವಿರೋಧಿಸಿದರು. ಛತ್ರಪತಿ ಶಾಹು ಮಾತ್ರ ತನ್ನ ಆಯ್ಕೆ ಸರಿಯಾದುದೆಂದೇ ನಂಬಿದ್ದ.

ಹಿಂದೂಸ್ಥಾನದ ಪರಿಸ್ಥಿತಿ ಆಗ ಸಂದಿಗ್ಧವಾಗಿತ್ತು. ಮೊಘಲರು ಮರಾಠರ ಪ್ರಬಲ ವೈರಿಗಳಾಗಿದ್ದರು. ಪಶ್ಚಿಮ ತೀರದಲ್ಲಿ ನೆಲೆಸಿದ್ದ ಪೋರ್ಚುಗೀಸರೂ ಮರಾಠರ ಸ್ಪರ್ಧಿಗಳಾಗಿದ್ದರು. ಹೀಗೆ ಮರಾಠ ರಾಜ್ಯ ಅನೇಕ ಅಪಾಯಗಳನ್ನು ಎದುರಿಸಬೇಕಾಗಿದ್ದಿತು.

ಹೈದರಾಬಾದಿನ ನಿಜಾಮ

ಹೊಸ ಪೇಷ್ವೆ ಎದುರಿಸಬೇಕಾಗಿದ್ದ ಅತ್ಯಂತ ಪ್ರಬಲ ಶತ್ರುವೆಂದರೆ ಹೈದರಾಬಾದಿನ ನಿಜಾಮ. ಮೊಘಲರ ಅಧಿಕಾರಿಯಾಗಿ ದೆಹಲಿಯಲ್ಲಿದ್ದ ನಿಜಾಮುಲ್‌ಉಲ್‌ಮಲ್ಕ್‌ದಖನ್ನಿನಲ್ಲಿ ಬಂದು ತಳವೊರಲು ಪ್ರಯತ್ನಿಸುತ್ತಿದ್ದ. ಮರಾಠರನ್ನು ನಾಶಗೊಳಿಸಬೇಕೆಂದು ಅವನು ಪಣ ತೊಟ್ಟಿದ್ದ. ಬಾಜೀರಾಯ ಪೇಷ್ವೆಯಾಗಿ ಅಧಿಕಾರಕ್ಕೆ ಬಂದ ಕೆಲವು ವರ್ಷಗಳಲ್ಲೇ ಅವನು ಮಹಾರಾಷ್ಟ್ರದ ಮೇಲೆ ದಂಡೆತ್ತಿ ಬಂದ. ಬಾಜೀರಾಯ ಅವನನ್ನು ಸುಲಭವಾಗಿ ಸೋಲಿಸಿದ. ಶಾಹುವಿನ ಸ್ಪರ್ಧಿಯಾದ ಸಾಂಬಾಜಿಯು ಶಾಹುವಿನ ವಿರುದ್ಧ ಯುದ್ಧಕ್ಕೆ ಹೋಗುವಂತೆ ನಿಜಾಮ ಪ್ರೇರೇಪಿಸಿದ. ಆದರೆ ಬಾಜೀರಾಯನಂತಹ ಸಾಹಸಿಯ ಮುಂದೆ ಅವನ ಆಟ ಸಾಗಲಿಲ್ಲ. ಸಾಂಬಾಜಿಯು ಸೋತು ಶಾಹುವಿನೊಂದಿಗೆ ಒಪ್ಪಂದವನ್ನು ಮಾಡಿಕೊಂಡ. ಈ ರೀತಿ ಹೊಸ ಪೇಷ್ವೆ ತನ್ನ ಶೌರ್ಯ ಸಾಮರ್ಥ್ಯಗಳನ್ನು ಪ್ರದರ್ಶಿಸಿ ಎಲ್ಲರ ಗಮನವನ್ನು ಸೆಳೆದ.

ಸಿದ್ದಿ ಸಾತನ ಸಂಹಾರ

ಬಾಜೀರಾಯನು ಸಾಹಸಿಯಾದ ಯೋಧನಷ್ಟೆ ಅಲ್ಲ, ರಾಜನೀತಿಯನ್ನು ಚೆನ್ನಾಗಿ ತಿಳಿದ ಆಡಳಿತಗಾರನಾಗಿದ್ದ. ಸಾಧು ಸಂತರನ್ನು ಗೌರವದಿಂದ ನೋಡುತ್ತಿದ್ದ. ಬ್ರಹ್ಮೇಂದ್ರಸ್ವಾಮಿ ಎಂಬ ಸಂತರು ಆಗ ಮಹಾರಾಷ್ಟ್ರದಲ್ಲಿ ಬಹಳ ಹೆಸರುವಾಸಿಯಾಗಿದ್ದರು. ಅವರು ಪೇಷ್ವೆ ಬಾಜೀರಾಯನಿಗೆ ಗುರುಗಳಾಗಿದ್ದರು. ಶಿವಾಜಿಗೆ ಸಮರ್ಥ ರಾಮದಾಸರಿದ್ದಂತೆ ಬಾಜೀರಾಯನಿಗೆ ಬ್ರಹ್ಮೇಂದ್ರಸ್ವಾಮಿಗಳು ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುವವರಾಗಿದ್ದರು.

ಬ್ರಹ್ಮೇಂದ್ರಸ್ವಾಮಿಗಳು ಕೊಂಕಣದಲ್ಲಿನ ಚಿಪ್ಲೂನ್‌ಎಂಬ ಸ್ಥಳದಲ್ಲಿ ಒಂದು ಪರಶುರಾಮ ಮಂದಿರವನ್ನು ನಿರ್ಮಿಸಿದ್ದರು. ಅದೊಂದು ದೊಡ್ಡ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ದಿ ಪಡೆದಿದ್ದಿತು. ಸಿದ್ದಿಸಾತನೆಂಬ ಅಧಿಕಾರಿಯು ಚಿಪ್ಲೂನ್‌ಮೇಲೆ ದಾಳಿ ನಡೆಸಿ ಅಲ್ಲಿನ ದೇವಾಲಯವನ್ನು ನಾಶ ಮಾಡಿದನು. ಪವಿತ್ರ ಕ್ಷೇತ್ರವನ್ನು ಧ್ವಂಸ ಮಾಡಿದ್ದರಿಂದ ಎಲ್ಲರಿಗೂ ದುಃಖವುಂಟಾಯಿತು. ಬ್ರಹ್ಮೇಂದ್ರಸ್ವಾಮಿಗಳ ಮನಸ್ಸಿಗೆ ಬಹಳ ನೋವುಂಟು ಮಾಡಿತು. ಅವರು ಇಂಥ ಪಾಪ ಕಾರ್ಯವನ್ನು ಮಾಡಿದ ಸಿದ್ದಿಸಾತನನ್ನು ಶಿಕ್ಷಿಸುವಂತೆ ಬಾಜೀರಾಯನನ್ನು ಕೇಳಿಕೊಂಡರು. ಬಾಜೀರಾಯ ಕೊಂಕಣಕ್ಕೆ ದಂಡೆತ್ತಿ ಹೋದ. ಸಿದ್ದಿಸಾತ ಗೋವಲ ಕೋಟ್‌ಎಂಬ ದುರ್ಗಮವಾದ ಕೋಟೆಯೊಳಗೆ ಹೋಗಿ ಸೇರಿಕೊಂಡನು. ಬಾಜೀರಾಯ ಸಿದ್ದಿಸಾತನ ಮೇಲೆ ಯುದ್ಧವನ್ನು ಹೂಡಿದರೂ ಮಳೆಯ ಕಾರಣ ಹೋರಾಟವನ್ನು ಸ್ವಲ್ಪ ಕಾಲ ನಿಲ್ಲಿಸಬೇಕಾಯಿತು. ಸ್ವಲ್ಪ ದಿನಗಳಾದ ನಂತರ ಬಾಜೀರಾಯನ ತಮ್ಮ ಚಿಮ್ಣಾಜಿಯ ನಾಯಕತ್ವದಲ್ಲಿ ಮರಾಠ ಸೈನ್ಯವು ಸಿದ್ದಿಸಾತನ ಸೈನ್ಯವನ್ನು ನಾಶಗೊಳಿಸಿತು. ಸಿದ್ದಿಸಾತನೂ ಅವನ ಅಧಿಕಾರಿಗಳೂ ಕೊಲ್ಲಲ್ಪಟ್ಟರು.

ಛತ್ರಸಾಲನ ರಕ್ಷಣೆ

ಮಹಾಶೂರನಾಗಿದ್ದ ಬಾಜೀರಾಯ ಮಹಾರಾಷ್ಟ್ರವನ್ನು ಶತ್ರುಗಳಿಂದ ರಕ್ಷಿಸಿದ್ದು ಮಾತ್ರವಲ್ಲ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧನಾಗಿದ್ದನು. ಉತ್ತರ ಹಿಂದೂಸ್ಥಾನದ ಬುಂದೇಲ್‌ಖಂಡದ ದೊರೆ ಛತ್ರಸಾಲ್‌ಇಂತಹ ಒಂದು ವಿಪತ್ತಿಗೆ ಸಿಕ್ಕಿದನು. ಮೊಘಲ್‌ಸುಭಾಂದಾರ್ ಆಗಿದ್ದ ಮಹಮದ್‌ಖಾನ್ ಬಂಗಾಷ್‌ಛತ್ರಸಾಲನ ರಾಜ್ಯದ ಮೇಲೆ ದಾಳಿ ನಡೆಸಿ ಅದನ್ನು ಗೆದ್ದು ತನ್ನ ವಶಕ್ಕೆ ತೆಗೆದುಕೊಂಡನು. ಆಗ ಛತ್ರಸಾಲನು ಭಾರತದಲ್ಲೆಲ್ಲಾ ಪ್ರಬಲನಾಗಿದ್ದ ಪೇಷ್ವೆ ಬಾಜೀರಾಯನಿಗೆ ಮೊರೆಯಿಟ್ಟನು. ಬಾಜೀರಾಯ ಕೂಡಲೇ ಸೈನ್ಯ ಸಮೇತವಾಗಿ ಹೋಗಿ ಬಂಗಾಷನನ್ನು ಸೋಲಿಸಿದನು. ಛತ್ರಸಾಲನು ಬಾಜೀರಾಯನ ಸಹಾಯದಿಂದ ತನ್ನ ರಾಜ್ಯವನ್ನು ಮರಳಿ ಪಡೆದನು. ತನ್ನ ಕೃತಜ್ಞತೆಯನ್ನು ಸೂಚಿಸಲು ಬಾಜೀರಾಯನಿಗೆ ದೊಡ್ಡ ಜಾಗೀರನ್ನು ಕೊಟ್ಟನು. ಹಿಂದೂಸ್ಥಾನದಲ್ಲಿ ಮೊಘಲರು ಕ್ಷೀಣಿಸಿದ್ದರು. ಬಾಜೀರಾಯ ಇಡೀ ರಾಷ್ಟ್ರದಲ್ಲಿಯೇ ಪ್ರಬಲ ಶಕ್ತಿಯಾಗಿದ್ದ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ಮೊಘಲ್‌ಸಾಮ್ರಾಜ್ಯದ ವೈಭವ, ಪ್ರಾಬಲ್ಯ, ಘನತೆ ಇವೆಲ್ಲ ಕಣ್ಮರೆಯಾಗಿದ್ದವು. ಮೊಘಲ್‌ಆ ಸ್ಥಾನವು ಒಳಸಂಚು, ಪಿತೂರಿ, ರಾಜದ್ರೋಹಗಳ ಕೇಂದ್ರವಾಗಿದ್ದಿತು. ಇಂತಹ ಸಮಯದಲ್ಲಿ ಬಾಜೀರಾಯ ಅವರನ್ನು ಸುಲಭವಾಗಿ ಸೋಲಿಸಬಹುದಾಗಿತ್ತು. ಆದರೆ ಛತ್ರಪತಿ ಶಾಹುವಿನ ಸಲಹೆಯಂತೆ ಅವರ ಮೇಲೆ ಅವನು ಯುದ್ಧಕ್ಕೆ ಹೋಗಿರಲಿಲ್ಲ.

ಮೊಘಲರಿಗೆ ಪಾಠ ಕಲಿಸಿದ್ದು

ಒಮ್ಮೆ ಬಾಜೀರಾಯನು ಉತ್ತರ ಭಾರತದ ಮೇಲೆ ಯುದ್ಧವನ್ನು ಕೈಗೊಂಡಿದ್ದಾಗ ಅವನ ಸೈನ್ಯದ ತುಕಡಿಯೊಂದು ಮೊಘಲರ ಕೈಯಲ್ಲಿ ಸೋತುಹೋಗಿದ್ದಿತು. ಇದರಿಂದ ಬಾಜೀರಾಯನನ್ನೇ ಸೋಲಿಸಿದವೆಂದು ಮೊಘಲರು ಭಾವಿಸಿದರು. ಮೊಘಲ್‌ದಳಪತಿ ಸಾದತ್‌ಖಾನನಿಗೆ ಮರಾಠರನ್ನು ಸೋಲಿಸಿದ್ದಕ್ಕಾಗಿ ಬಹುಮಾನಗಳು ದೊರೆತವು. ಈ ಸುಳ್ಳು ಸುದ್ದಿಯನ್ನು ಕೇಳಿ ಬಾಜೀರಾಯನಿಗೆ ಕೋಪ ಬಂದಿತು. ಈ ಸಮಯದಲ್ಲಿ ಬಾಜೀರಾಯನ ಸ್ಥಿತಿ ಕಷ್ಟವಾಗಿಯೂ ಇತ್ತು. ಅವನು ಕಳುಹಿಸಿದ್ದ ಸೈನ್ಯದ ತುಕಡಿ ಹಿಂದಕ್ಕೆ ಸರಿದಿತ್ತು. ಹಿಂದಕ್ಕೆ ಬರುವಾಗ ಗೊಂದಲದಲ್ಲಿ ತನ್ನ ಸಾಮಾನು ಸರಂಜಾಮನ್ನೆಲ್ಲ ಬಿಟ್ಟು ಬಂದಿತ್ತು. ಅದೆಲ್ಲ ಶತ್ರುಗಳ ವಶವಾಗಿತ್ತು. ಶತ್ರುಗಳ ಮೂರು ಸೈನ್ಯಗಳು ಬಾಜೀರಾಯ ಆಗ್ರಾದತ್ತ ಹೋಗದಂತೆ ತಡೆಯಲು ಸಿದ್ಧವಾಗಿದ್ದವು. ಬೇರೆ ಯಾವ ದಳಪತಿಯಾಗಿದ್ದರೂ ಪ್ರಾಯಶಃ ಹೊಸ ಅಪಾಯಕ್ಕೆ ಆಹ್ವಾನ ಕೊಡದೆ, ಸುರಕ್ಷಿತವಾಗಿ ಹಿಂದಿರುಗುವ ಪ್ರಯತ್ನ ಮಾಡಿರುತ್ತಿದ್ದ. ಆದರೆ ಬಾಜೀರಾಯ ಮೊಘಲ್‌ಚಕ್ರವರ್ತಿಗೆ ಒಂದು ಪಾಠವನ್ನು ಕಲಿಸಬೇಕೆಂದು ಹಠಾತ್ತನೆ ದೆಹಲಿಯ ಮೇಲೆ ಎರಗಿದನು. ಮೊಘಲ್‌ದೊರೆಗೆ ದಿಗ್ಭ್ರಾಂತಿಯಾಯಿತು. ಸೋತು ಹೋಗಿರುವ ಬಾಜೀರಾಯ ಹೇಗೆ ಬಂದು ರಾಜಧಾನಿಯನ್ನು ಮುತ್ತಿದ, ಈಗ ಹೇಗೆ ತಪ್ಪಿಸಿಕೊಳ್ಳುವುದು ಎಂದು ಯೋಚಿಸುತ್ತಿರುವಾಗಲೇ ಬಾಜೀರಾಯ ಸೈನ್ಯವನ್ನು ಹಿಂತೆಗೆದುಕೊಂಡನು. ಅವನು ಮನಸ್ಸು ಮಾಡಿದ್ದರೆ ಮೊಘಲ್‌ದೊರೆಯನ್ನು ನಿರ್ನಾಮ ಮಾಡಿ ಅವನ ರಾಜ್ಯವನ್ನು ಗೆದ್ದುಬಿಡಬಹುದಾಗಿತ್ತು. ಆದರೆ ತನ್ನ ಒಡೆಯನ ಅಪ್ಪಣೆಯಂತೆ ಅವನು ಮೊಘಲರ ತಂಟೆಗೆ ಹೋಗುತ್ತಿರಲಿಲ್ಲ.

ನಿಜಾಮನ ಸೋಲು

ಬಾಜೀರಾಯನು ದಿನದಿನವೂ ಪ್ರಬಲವಾಗಿ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ. ಇದರಿಂದ ಹಿಂದೂಸ್ಥಾನದ ಅನೇಕ ಅರಸರಿಗೆ ಅಸೂಯೆ ಉಂಟಾಯಿತು. ಅದರಲ್ಲಿಯೂ ಹೈದರಾಬಾದಿನ ನಿಜಾಮನಿಗೆ ಬಾಜೀರಾಯ ಏಳ್ಗೆ ಹೊಂದುತ್ತಿರುವುದನ್ನು ನೋಡಿ ಸಹಿಸಲಾಗಲಿಲ್ಲ. ನಿಜಾಮನು ದಖನ್ನಿನಲ್ಲಿ ಆಗ ತಾನೇ ತನ್ನ ಸ್ಥಾನ ಭದ್ರಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ದಖನ್ನಿನಲ್ಲೆಲ್ಲ ತನ್ನಷ್ಟು ಸಮರ್ಥರು ಯಾರೂ ಇಲ್ಲವೆಂದು ತೋರಿಸುವುದು ಅವನ ಉದ್ದೇಶವಾಗಿದ್ದಿತು. ಮರಾಠರು ಹಿಂದೂಸ್ಥಾನದಲ್ಲೆಲ್ಲಾ ತಮ್ಮ ಪ್ರಭಾವ ಬೀರುತ್ತಾ ಹೊರಟಿದ್ದರಿಂದ ಅವನ ಘನತೆಗೆ ಅಡ್ಡಿಯಾಯಿತು. ಮತ್ತೊಮ್ಮೆ ಏನಾದರೂ ಮಾಡಿ ಬಾಜೀರಾಯನನ್ನು ಸಂಪೂರ್ಣವಾಗಿ ಸೋಲಿಸಿ ಅವನನ್ನು ನಿರ್ನಾಮ ಮಾಡಲು ಪ್ರಯತ್ನಿಸಿದ.

1737ರಲ್ಲಿ ನಿಜಾಮನು ದೆಹಲಿಗೆ ಹೋಗಿ ಮೊಘಲ್‌ಚಕ್ರವರ್ತಿಯಿಂದ ಒಂದು ಕೋಟಿ ರೂಪಾಯಿಗಳನ್ನು ಒಂದು ನುರಿತ ಸೈನ್ಯ ತುಕಡಿಯನ್ನು ತೆಗೆದುಕೊಂಡು ಬಂದ. ಮರಾಠ ಹುಳುವನ್ನು ಹೊಸಕಿ ಹಾಕುತ್ತೇನೆಂದು ಹೇಳಿ ಬಾಜೀರಾಯನನ್ನು ಎದುರಿಸಲು ನಡೆದ. ಆದರೆ ಯುದ್ಧನಿಪುಣನೂ, ಶೂರನೂ ಆದ ಬಾಜೀರಾಯನ ಕೈಗೆ ನಿಜಾಮ್‌ಸಿಕ್ಕಿಬಿದ್ದನು. ಮರಾಠದಿಂದ ಸುತ್ತುಗಟ್ಟಲ್ಪಟ್ಟಾಗ ನಿಜಾಮನು ಹೆದರಿ ಸಂಧಿ ಮಾಡಿಕೊಂಡನು. ಯುದ್ಧದ ವೆಚ್ಚವನ್ನು ಕಟ್ಟಿಕೊಡಲು ನರ್ಮದಾ ಮತ್ತು ಜಮುನಾ ನದಿಗಳ ನಡುವಿನ ಪ್ರದೇಶ ಮತ್ತು ಮಾಳವ ಇವುಗಳನ್ನು ಕೊಡಲು ಒಪ್ಪಿಕೊಂಡು ಬಾಜೀರಾಯನೊಡನೆ ಸಂಧಿಯನ್ನು ಮಾಡಿಕೊಂಡನು.

ನಿಜಾಮನಂತಹ ಅನುಭವಿಯಾದ ದಳಪತಿ ಯುದ್ಧದಲ್ಲಿ ಸೋತು ಸಂಧಿಯನ್ನು ಮಾಡಿಕೊಂಡಿದ್ದು ಬಾಜೀರಾಯನಿಗೆ ಆಶ್ಚರ್ಯವನ್ನುಂಟುಮಾಡಿದ್ದಿತು. ತನಗಿಂತ 40 ವರ್ಷ ದೊಡ್ಡವನು, ನೂರಾರು ಯುದ್ಧಗಳಲ್ಲಿ ಭಾಗವಹಿಸಿ ನುರಿತವನಾದ ನಿಜಾಮನು ದೊಡ್ಡ ಸೈನ್ಯ ಒಳ್ಳೆಯ ಶಸ್ತ್ರಾಸ್ತ್ರಗಳಿದ್ದು ತನಗೆ ಸೋತನಲ್ಲ ಎಂದು ಪೇಷ್ವೆ ಬಾಜೀರಾಯ ಆಶ್ಚರ್ಯಪಟ್ಟನು. ಇದು ಬಾಜೀರಾಯನ ಯುದ್ಧಕೌಶಲ್ಯ ಎಷ್ಟರ ಮಟ್ಟಿಗಿತ್ತೆಂಬುದನ್ನು ಸೂಚಿಸುವ ಒಂದು ಒಳ್ಳೆಯ ಉದಾಹರಣೆಯಾಗಿದೆ.

ಜನರ ಮೊರೆ

ಈ ಸಮಯದಲ್ಲೇ ಹಿಂದೂಸ್ಥಾನದಲ್ಲಿ ವಿದೇಶಿಯರು ಬಂದು ನೆಲೆಸಲಾರಂಭಿಸಿದ್ದರು. ಪೋರ್ಚುಗೀಸರು ನಮ್ಮ ದೇಶದ ಪಶ್ಚಿಮ ತೀರದಲ್ಲಿ ನೆಲೆನಿಂತು ಅನೇಕ ಪ್ರದೇಶಗಳನ್ನು ತಮ್ಮ ವಶಪಡಿಸಿಕೊಂಡಿದ್ದರು. ಅವರ ಸ್ವಾಧೀನ ಪ್ರದೇಶದಲ್ಲಿದ್ದ ಹಿಂದೂಗಳಿಗೆ ಬಹಳ ಕಿರುಕುಳ ಕೊಡುತ್ತಿದ್ದರು. ಕ್ರೈಸ್ತ ಧರ್ಮವನ್ನು ಬಲವಂತವಾಗಿ ಎಲ್ಲರ ಮೇಲೂ ಹೇರಲು ಪ್ರಯತ್ನಿಸುತ್ತಿದ್ದರು. ಅವರ ಆಳ್ವಿಕೆಯಲ್ಲಿ ಜನರು ಬಹಳ ತೊಂದರೆಗಳನ್ನು ಅನುಭವಿಸುತ್ತಿದ್ದರು. ಮಹಾರಾಷ್ಟ್ರದ ಪೇಷ್ವೆ ವಿದೇಶಿಯರ ದೌರ್ಜನ್ಯವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದ ವಿಷಯ ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿದ್ದ ಜನರಿಗೆ ಗೊತ್ತಾಯಿತು. ಅವರು ಪೋರ್ಚುಗೀಸರನ್ನು ಸೋಲಿಸಿ ತಮ್ಮನ್ನು ಅವರ ದಬ್ಬಾಳಿಕೆಯಿಂದ ಬಿಡುಗಡೆ ಮಾಡಬೇಕೆಂದು ಪೇಷ್ವೆ ಬಾಜೀರಾಯನನ್ನು ಕೇಳಿಕೊಂಡರು.

ಬೇಸಿನ್‌ಪ್ರದೇಶವನ್ನು ಪೋರ್ಚುಗೀಸರ ಇಡಿತದಿಂದ ತಪ್ಪಿಸಲು ಬಾಜೀರಾಯನು ತನ್ನ ತಮ್ಮನಾದ ಜಿಮ್ಣಾಜಿಯನ್ನು ಕಳುಹಿಸಿದನು. ಜಿಮ್ಣಾಜಿಯು ಮಹಾ ಸಾಹಸಿಯೂ ಧೀರನೂ ಆಗಿದ್ದ. ಅವನು ಪೋರ್ಚುಗೀಸರ ಮೇಲೆ ನಡೆಸಿದ್ದ ಯುದ್ಧ ನಮ್ಮ ನಾಡಿನ ಇತಿಹಾಸದಲ್ಲೇ ರೋಮಾಂಚಕರವಾದುದು.

ಪೋರ್ಚುಗೀಸರ ಸೋಲು

ಬೇಸಿನ್‌ಕೋಟಿಯು ಬಹಳ ಪ್ರಬಲವಾಗಿತ್ತು. ಮರಾಠರು ಅದನ್ನು ಪ್ರವೇಶಿಸುವುದು ಬಹಳ ಕಷ್ಟವಾಯಿತು. ತನ್ನ ಸೈನ್ಯವು ಈ ರೀತಿ ಶತ್ರುವಿನ ಕೋಟೆಯನ್ನು ಪ್ರವೇಶಿಸಲು ಸಾಧ್ಯವಾಗದೆ ಹೋದಾಗ ಜಿಮ್ಣಾಜಿಯು “ನಾಳೆಯೊಳಗೆ ನಾವು ಶತ್ರುಗಳ ಕೋಟೆಯನ್ನು ಪ್ರವೇಶಿಸದಿದ್ದರೆ ಫಿರಂಗಿಯಲ್ಲಿ ನನ್ನನ್ನಿಟ್ಟು ಗುಂಡು ಹಾರಿಸಿ. ನನ್ನ ದೇಹವಾದರೂ ಆ ಕೋಟೆಯೊಳಗೆ ಪ್ರವೇಶಿಸಲಿ” ಎಂದು ಹೇಳಿದನು. ಮರಾಠರು ಪ್ರಾಣದ ಆಸೆ ಬಿಟ್ಟು ಹೋರಾಡಿದರು. ಪೋರ್ಚುಗೀಸರು ಗುಂಡಿನ ಮಳೆಗೆರೆದರು. ಅದನ್ನು ಲೆಕ್ಕಿಸದೆ ಮರಾಠಾ ಸೈನಿಕರು ಮುನ್ನುಗಿದರು. ಸಾಹಸದಿಂದ ಕಾದಾಡಿ ಉತ್ತರದ ಗೋಪುರವನ್ನು ಹಾರಿಸಿ ಕೋಟೆಯನ್ನು ಒಡೆದರು. “ಹರ ಹರ ಮಹಾದೇವ್‌” ಎಂದು ಜಯಘೋಷದೊಡನೆ ಸಹಸ್ರಾರು ಸೈನಿಕರು ಕೋಟೆಯೊಳಕ್ಕೆ ನುಗ್ಗಿದರು. ಕಡೆಗೆ ಪೋರ್ಚುಗೀಸರು ಸೋತು ಶರಣಾದರು.

"ಶರಣಾಗತರಾದವರನ್ನು ಹಿಂದೂಗಳು ಹಿಂಸಿಸುವುದಿಲ್ಲ".

ಘನವಾದ ನಡತೆ

 

ಪೋರ್ಚುಗೀಸರ ಸೈನ್ಯಾಧಿಕಾರಿ, ಜಿಮ್ಣಾಜಿಯ ಬಳಿಗೆ ಬಂದು “ನಮ್ಮ ಸಂಪತ್ತನ್ನೆಲ್ಲಾ ಕೊಟ್ಟು ಬಿಡುತ್ತೇವೆ. ನಾವು ನಮ್ಮ ಕುಟುಂಬದವರೊಡನೆ ಸುರಕ್ಷಿತವಾಗಿ ಹೊರಗೆ ಹೋಗಲು ಅವಕಾಶಕೊಡಿ” ಎಂದು ಕೇಳಿದ ಜಿಮ್ಣಾಜಿ ನಕ್ಕು ಹೇಳಿದ, “ಶರಣಾಗತರಾದವರನ್ನು ಹಿಂದೂಗಳು ಎಂದಿಗೂ ಹಿಂಸಿಸುವುದಿಲ್ಲ. ನೀವು ನಿಮ್ಮ ಒಡವೆ ವಸ್ತುಗಳನ್ನು ತೆಗೆದುಕೊಂಡು ಹೊರಟು ಹೋಗಬಹುದು.”

ಇದನ್ನು ಕೇಳಿದ ಪೋರ್ಚುಗೀಸ್‌ಅಧಿಕಾರಿಗೆ ಆಶ್ಚರ್ಯವಾಯಿತು. ಯುದ್ಧದಲ್ಲಿ ಸೋತವರನ್ನು ಸೆರೆ ಸಿಕ್ಕವರನ್ನು ಪೋರ್ಚುಗೀಸರು ಬಲಾತ್ಕಾರದಿಂದ ತಮ್ಮ ಮತಕ್ಕೆ ಸೇರಿಸುತ್ತಿದ್ದರು; ಹಿಂಸೆ ಕೊಡುತ್ತಿದ್ದರು. ಮರಾಠರ ಔದಾರ್ಯವನ್ನು ಕಂಡು ಅವನಿಗೆ ನಾಚಿಕೆಯಾಯಿತು.

ಬೇಸಿನ್‌ನಿವಾಸಿಗಳಿಗೂ ಮರಾಠರು ನಡೆದುಕೊಂಡ ರೀತಿಯಿಂದ ಸಂತೋಷವಾಗಿದ್ದಿತು. “ಮರಾಠರು ಜನರ ಧಾರ್ಮಿಕ ಜೀವನದಲ್ಲಿ ಕೈಹಾಕುವುದಿಲ್ಲ. ಜನರು ತಮ್ಮ ತಮ್ಮ ಧರ್ಮವನ್ನು ನಿರಾತಂಕವಾಗಿ ಅನುಸರಿಸಿಕೊಂಡು ಹೋಗಬಹುದು” ಎಂದು ಮರಾಠ ನಾಯಕ ಹೇಳಿದ ಮೇಲೆ ಅವರ ಭಯ ದೂರವಾಯಿತು. ಮರಾಠರ ಬಗ್ಗೆ ತಪ್ಪುಕಲ್ಪನೆ ಹೊಂದಿದ್ದ ಜನ ಬಂದು, ವೀರ ಸೇನಾನಿ ಜಿಮ್ಣಾಜಿಯನ್ನು ಅಭಿನಂದಿಸಿದರು.

ಮರಾಠರು ವಿಜಯಗಳಿಸಿದರೂ ಪೋರ್ಚುಗೀಸರಂತೆ ನಗರವನ್ನು ಲೂಟಿ ಮಾಡದೆ ಚರ್ಚುಗಳಿಗೆ ಹಾನಿ ಮಾಡದೆ ಬಿಟ್ಟಿದ್ದು ಪೋರ್ಚುಗೀಸರಿಗೂ ಆಶ್ಚರ್ಯವನ್ನುಂಟು ಮಾಡಿದ್ದಿತು.

ಯೂರೋಪಿಯನ್ನರನ್ನು ಯಾರೂ ಸೋಲಿಸಲಾಗುವುದಿಲ್ಲ ಎಂದು ಅನೇಕ ಭಾರತೀಯರು ಭಾವಿಸಿದ್ದರು. ಪೋರ್ಚುಗೀಸರನ್ನು ಸೋಲಿಸಿ ಭಾಜೀರಾಯ ತಾನು ದೇಶದಲ್ಲಿಯೇ ಅತ್ಯಂತ ಪರಾಕ್ರಮಶಾಲಿ ಎಂಬುದನ್ನು ತೋರಿಸಿಕೊಟ್ಟಿದ್ದ. ಈಗ ಇಂಗ್ಲಿಷರನ್ನು ಬಿಟ್ಟು ಮರಾಠರಿಂದ ಸೋಲನ್ನನುಭವಿಸದೆ ಇದ್ದವರೇ ಇರಲಿಲ್ಲ.

ಬ್ರಿಟಿಷರ ಭೀತಿ

ಪೋರ್ಚುಗೀಸರ ಸೋಲಿನಿಂದ ಇಂಗ್ಲಿಷರಿಗೆ ಕಳವಳವುಂಟಾಯಿತು. ತಾವೂ ಆಕ್ರಮಣಕಾರರಾದ್ದರಿಂದ ಪೋರ್ಚುಗೀಸರ ಗತಿ ತಮಗೆಲ್ಲಿ ಒದಗುವುದೊ ಎಂದು ಅವರು ಹೆದರಿದರು. ಮರಾಠರೊಡನೆ ಸಂಧಾನ ಮಾಡಿಕೊಳ್ಳಲು ಇಂಗ್ಲಿಷ್‌ಅಧಿಕಾರಿಗಳು ಮಹಾರಾಷ್ಟ್ರಕ್ಕೆ ಬಂದರು. ಗೋರ್ಡನ್‌ಎಂಬ ಬ್ರಿಟಿಷ್‌ಅಧಿಕಾರಿ ಮಹಾರಾಷ್ಟ್ರದ ರಾಜಕೀಯ ಸ್ಥಿತಿಯನ್ನು ಗಮನಿಸಿ ತನ್ನ ಮೇಲಧಿಕಾರಿಗಳಿಗೆ ಈ ರೀತಿ ವರದಿ ಮಾಡಿದ; “ಮರಾಠ ರಾಜ್ಯದ ಅತ್ಯಂತ ಬಲಿಷ್ಠ ಅಧಿಕಾರಿ ಪೇಷ್ವೆ ಬಾಜೀರಾಯ. ಆಡಳಿತದ ಪೂರ್ಣ ಜವಾಬ್ದಾರಿಯನ್ನು ಅವನೇ ಹೊತ್ತಿದ್ದಾನೆ. ಸದ್ಯಕ್ಕೆ ಅವನನ್ನು ವಿರೋಧಿಸುವವರು ಯಾರೂ ಇಲ್ಲ”. ಇನ್ನೊಬ್ಬ ಬ್ರಿಟಿಷ್‌ಅಧಿಕಾರಿ, “ಪೇಷ್ವೆ ಬಾಜೀರಾಯ ಮಹಾರಾಷ್ಟ್ರವನ್ನು ಆಳುತ್ತಿರುವ ವ್ಯಕ್ತಿ. ಇನ್ನು ಸ್ವಲ್ಪ ದಿನಗಳಲ್ಲಿ ಅವನು ಶಾಹುವನ್ನು ಕೆಳಗೆ ತಳ್ಳಿ ಸಿಂಹಾಸನವನ್ನು ಏರುತ್ತಾನೆ” ಎಂದು ವರದಿ ಮಾಡಿದ್ದ. ಬಾಜೀರಾಯ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿದದ್ದುದು ನಿಜ. ಆದರೆ ಅವನು ಎಷ್ಟೇ ಬಲಿಷ್ಠನಾಗಿದ್ದರೂ ತನ್ನ ಚಕ್ರವರ್ತಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದ. ಚಕ್ರವರ್ತಿಯನ್ನು ಕೆಳಗಿಳಿಸಿ ಸಿಂಹಾಸನವನ್ನೇರುವುದು ಅವನಿಗೆ ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಬಾಜೀರಾಯ ಎಂದೂ ಅದಕ್ಕೆ ಆಸೆಪಡಲಿಲ್ಲ.

ನಾದಿರ್ ಷಾನ ದಾಳಿ

ಈ ಸಮಯದಲ್ಲಿ ಹಿಂದೂಸ್ಥಾನವು ಒಂದು ದೊಡ್ಡ ಅಪಾಯವನ್ನು ಎದುರಿಸಬೇಕಾಯಿತು. ಪರ್ಷಿಯಾದ ದೊರೆ ನಾದಿರ್ ಷಾ ಹಿಂದೂಸ್ಥಾನದ ಮೇಲೆ ದಾಳಿಯಿಟ್ಟನು. ಮೊಘಲ್‌ಸೈನ್ಯವನ್ನು ಸುಲಭವಾಗಿ ಸೋಲಿಸಿ ದೆಹಲಿಗೆ ಮುತ್ತಿಗೆ ಹಾಕಿದನು. ರಾಜಧಾನಿಯಲ್ಲಿ ಸುಮಾರು ಇಪ್ಪತ್ತೈದು ಸಾವಿರ ಜನರನ್ನು ಕೊಲೆ ಮಾಡಿದನು. ಅಪಾರವಾದ ಹಣ, ಒಡವೆ, ಸಂಪತ್ತನ್ನು ಲೂಟಿ ಮಾಡಿದನು. ಅವನು ಹೋದ ಕಡೆಯಲ್ಲೆಲ್ಲಾ ಕೊಳ್ಳೆ, ಸುಲಿಗೆ, ರಕ್ತಪಾತ ನಡೆಯುತ್ತಿತ್ತು. ಕೈಗೆ ಸಿಕ್ಕಿದ್ದನ್ನೆಲ್ಲಾ ದೋಚಿಕೊಂಡು ಕಂಡದ್ದನ್ನೆಲ್ಲಾ ನಾಶಮಾಡುತ್ತಿದ್ದನು. ಅವನನ್ನು ತಡೆದು ದೇಶವನ್ನು ರಕ್ಷಿಸಲು ಮೊಘಲರು ಸಮರ್ಥರಾಗಿರಲಿಲ್ಲ. ತಾನು ಭಾರತದ ಸಾಮ್ರಾಟನಾಗುತ್ತೇನೆ ಎಂದು ಅವನು ಘೋಷಿಸುತ್ತಿದ್ದನು.

ಏಕೆ ಭಾರತದ ದೃಷ್ಟಿ

ತನ್ನ ದೇಶಕ್ಕೆ ಒದಗಿದ ದುಃಸ್ಥಿತಿಯನ್ನು ಕಂಡು ಬಾಜೀರಾಯನ ರಕ್ತ ಕುದಿಯಿತು. ಮೊಘಲರು ಅವನ ಶತ್ರುಗಳಾಗಿದ್ದರು. ಅವರಿಗೆ ತೊಂದರೆಯಾಗುತ್ತಿದ್ದಾಗ ಬಾಜೀರಾಯ ಸುಮ್ಮನೆ ಇರಬಹುದಾಗಿತ್ತು. ಆದರೆ ಅವನೊಬ್ಬ ರಾಷ್ಟ್ರೀಯನಾಯಕನಾಗಿದ್ದ. “ಹಿಂದೂಸ್ಥಾನದಲ್ಲಿ ಈಗ ಇರುವುದು ಒಬ್ಬನೇ ಶತ್ರು. ಎಲ್ಲರೂ ತಮ್ಮ ಸೈನ್ಯಶಕ್ತಿಯನ್ನು ಈ ಶತ್ರುವಿನ ವಿನಾಶಕ್ಕೆ ಉಪಯೋಗಿಸಬೇಕು” ಎಂಬ ಬಾಜೀರಾಯನ ಕರೆ ದೇಶದಲ್ಲೆಲ್ಲಾ ಮೊಳಗಿತು. “ಹಿಂದೂಗಳು, ಮುಸ್ಲಿಮರು ಎಲ್ಲರೂ ತಮ್ಮ ಸಂಕುಚಿತ ಸ್ವಭಾವವನ್ನು ಬಿಟ್ಟು ಒಂದಾಗಬೇಕು” ಎಂದು ಪೇಷ್ವೆ ಕರೆಕೊಟ್ಟನು. ಶತ್ರುವನ್ನು ಸೋಲಿಸಲು ಹೈದರಾಬಾದಿನ ನಾಜಿರ‍್ಜಂಗ್ ಮೊದಲಾದವರನ್ನು ತನ್ನೊಂದಿಗೆ ಬಂದು ಸೇರಿಕೊಳ್ಳಬೇಕೆಂದು ಕೇಳಿಕೊಂಡನು.

ರಜಪೂತ ದೊರೆಗಳಿಗೂ ಭಾರತದ ಮುಖ್ಯ ಅರಸರಿಗೂ ಸಂದೇಶವನ್ನು ಕಳುಹಿಸಿ ಹೊರಗಿನ ಶತ್ರುವಿನ ವಿರುದ್ಧ ಎಲ್ಲರೂ ಒಂದಾಗಬೆಕೆಂಬುದನ್ನು ಸಾರಿ ಹೇಳಿದನು. “ಮರಾಠರನ್ನು ನರ್ಮದಾ ನದಿಯಿಂದ ಹಿಡಿದು ಚಂಬಲ್‌ನದಿಯವರೆಗೂ ಹರಡುತ್ತೇನೆ. ಶತ್ರುವಿನ ದಾಳಿಯನ್ನು ತಡೆಯುತ್ತೇನೆ” ಎಂದು ಘೋಷಿಸಿದನು.

ಈ ರೀತಿಯಲ್ಲಿ ಬಾಜೀರಾಯ ನದಿರ್ ಷಾನ ದಾಳಿಯನ್ನು ತಡೆಯಲು ಪ್ರಯತ್ನಗಳನ್ನು ಕೈಗೊಳ್ಳುತ್ತಿರುವಾಗ ನಾದಿರ್ ಷಾ ದಾಳಿಯನ್ನು ಮುಂದುವರಿಸದೆ ಪರ್ಷಿಯಾಕ್ಕೆ ಹಿಂತಿರುಗಿದನು.

ಬಾಜೀರಾಯನನ್ನು ಹಿಂದೂಸ್ಥಾನದ ಅನೇಕ ಅರಸರು ಶತ್ರುವೆಂದು ಬಗೆದರು. ಅವನಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿರಲಿಲ್ಲ. ಬಾಜೀರಾಯ ರಾಷ್ಟ್ರದ ಹಿತವನ್ನೇ ದೃಷ್ಟಿಯಲ್ಲಿಟ್ಟುಕೊಂಡಿದ್ದ. ತನ್ನ ದೇಶವನ್ನು ರಕ್ಷಿಸುವುದಕ್ಕಾಗಿ ಅವನು ಪ್ರಾಣವನ್ನು ಅರ್ಪಿಸುವುದಕ್ಕೂ ಸಿದ್ಧವಾಗಿದ್ದ.

ಚಿಕ್ಕವಯಸ್ಸಿನಲ್ಲಿ ಮರಣ

ಈ ರೀತಿಯಾಗಿ ತನ್ನ ದೇಶವನ್ನು ಅನೇಕ ಅಪಾಯಗಳಿಂದ ಪಾರುಮಾಡಿ ಹಲವು ರೀತಿಯಲ್ಲಿ ದೇಶಕ್ಕೆ ಮತ್ತು ತನ್ನ ರಾಜ್ಯಕ್ಕೆ ಸೇವೆ ಸಲ್ಲಿಸಿದ ಬಾಜೀರಾಯ 1740ರಲ್ಲಿ ಸತ್ತುಹೋದನು. ಆಗ ಅವನಿಗೆ 42 ವರ್ಷ. ಅವನ ಮರಣದಿಂದ ಮಹಾರಾಷ್ಟ್ರದ ಜನರೆಲ್ಲಾ ಮಮ್ಮಲ ಮರುಗಿದರು. ಛತ್ರಪತಿ ಶಾಹು ದಿಕ್ಕು ತಪ್ಪಿದವನಂತಾದನು. ಬಾಜೀರಾಯನ ಹಿರಿಯ ಮಗ ಬಾಲಾಜೀ ಬಾಜೀರಾಯನಿಗೆ ಪೇಷ್ವೆ ಪದವಿಯನ್ನು ಕೊಟ್ಟನು.

ಬಾಲಾಜಿಯೂ ಸಹ ತಂದೆಯಂತೆ ಪರಾಕ್ರಮಿಯೂ ಸಾಹಸಿಯೂ ಆಗಿದ್ದನು. ಅವನೂ ಕೂಡ ಚಿಕ್ಕ ವಯಸ್ಸಿನಲ್ಲೇ ಪೇಷ್ವೆಯಾಗಿ ಅಸಾಧಾರಣವಾದ ಬುದ್ಧಿವಂತಿಕೆಯನ್ನು ಹೊಂದಿದ್ದು ಒಳ್ಳೆಯ ಆಡಳಿತಗಾರನೆನಿಸಿಕೊಂಡನು. ಇವನ ಕಾಲದಲ್ಲಿ ಮರಾಠ ಸಾಮ್ರಾಜ್ಯ ಮತ್ತಷ್ಟು ವಿಸ್ತರಿಸಿತು. ಮರಾಠರು ಪಂಜಾಬನ್ನು, ವಾಯುವ್ಯ ಪ್ರಾಂತಗಳ ಪ್ರದೇಶವನ್ನು ಗೆದ್ದು ವಶಪಡಿಸಿಕೊಂಡರು. ಪೇಷ್ವೆ ಬಾಜೀರಾಯನ ಗುರಿ ತಕ್ಷಶಿಲೆಯವರೆಗೂ ಮರಾಠ ಸಾಮ್ರಾಜ್ಯವನ್ನು ವಿಸ್ತರಿಸುವುದು. ಇದು ಅವನ ಮಗನ ಕಾಲದಲ್ಲಿ ಪೂರ್ಣಗೊಂಡಿತು.

ಆದರ್ಶ ಯೋಧ

ಪೇಷ್ವೆ ಬಾಜೀರಾಯ ನಮ್ಮ ಇತಿಹಾಸದಲ್ಲಿ ಪ್ರಸಿದ್ಧನಾಗಿರುವುದು ಒಬ್ಬ ಮಹಾಯೋಧನಾಗಿ. ಅವನು ತನ್ನ 20 ವರ್ಷಗಳ ಅವಧಿಯಲ್ಲಿ ಸದಾ ಒಂದಲ್ಲ ಒಂದು ಯುದ್ಧದಲ್ಲಿ ಹೋರಾಡುತ್ತಲೇ ಇದ್ದನು. “ಸದಾ ಸಂಚಿರಿಸುತ್ತಿದ್ದ ಪೇಷ್ವೆ” ಎಂದು ಅವನು ಪ್ರಸಿದ್ಧನಾಗಿದ್ದನು. ಸಾಮಾನ್ಯ ಸೈನಿಕರೊಂದಿಗೆ ಸೇರಿ ಯುದ್ಧ ಮಾಡುತ್ತಿದ್ದ ಅವರ ಕಷ್ಟ, ನಷ್ಟಗಳಲ್ಲಿ ಭಾಗಿಯಾಗುತ್ತಿದ್ದನು. ಶಿಸ್ತು, ಶೌರ್ಯ, ಸಾಹಸಗಳಿಂದ ಎಲ್ಲಾ ಸೈನಿಕರ ಪ್ರೀತಿ ಗೌರವಗಳಿಗೆ ಪಾತ್ರನಾಗಿದ್ದನು. ಎಷ್ಟೋ ದಿನ ಸರಿಯಾದ ಊಟ, ನಿದ್ದೆ ಇಲ್ಲದಿದ್ದರೂ ಸಿಕ್ಕಿದುದನ್ನೇ ತಿಂದುಕೊಂಡು ಸಾಹಸದಿಂದ ತನ್ನ ಕೆಲಸವನ್ನು ಸಾಧಿಸುತ್ತಿದ್ದನು.

ಯುದ್ಧತಂತ್ರ

ಪೇಷ್ವೆ ಬಾಜೀರಾಯ ಸೇನಾಧಿಪತಿಯಾಗಿ ಅದ್ವಿತೀಯನಾಗಿದ್ದನು. ಈ ವೀರನ ಯುದ್ಧ ಕೌಶಲ ಆಶ್ಚರ್ಯಕರವಾದುದಾಗಿತ್ತು. ಇವನು ದೊಡ್ಡ ಸೈನ್ಯವನ್ನಾಗಲಿ, ಹೆಚ್ಚಿನ ಶಸ್ತ್ರಾಸ್ತ್ರಗಳನ್ನಾಗಲಿ ಹೊಂದಿರಲಿಲ್ಲ. ಆದೂ ಅಂದು ಭಾರತದಲ್ಲೇ ಬಲಿಷ್ಠರಾಗಿದ್ದ ಮೊಘಲರನ್ನು ಹೈದರಾಬಾದ್‌ನಿಜಾಮನನ್ನು ಸುಲಭವಾಗಿ ಸೋಲಿಸಿದ. ಅವನ ಯುದ್ದತಂತ್ರ ಅಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಒಮ್ಮೊಮ್ಮೆ ಶತ್ರುಗಳ ಮಧ್ಯೆ ಧೈರ್ಯದಿಂದ ನುಗ್ಗಿ ಅವರನ್ನು ಹಿಮ್ಮೆಟ್ಟಿಸುತ್ತಿದ್ದ. ರಭಸದಿಂದ ಅಶ್ವದಳವನ್ನು ತೆಗೆದುಕೊಂಡು ಹೋಗಿ ಹಠಾತ್ತನೆ ಶತ್ರುಗಳ ಮೇಲೆ ಎರಗಿ ಅವರನ್ನು ಸೋಲಿಸುತ್ತಿದ್ದ. ಶತ್ರುವಿನ ಬಲಾಬಲಗಳನ್ನು ತಿಳಿದಿದ್ದು ಅವನು ದೌರ್ಬಲ್ಯವನ್ನು ಗುರುತಿಸಿ ಅದಕ್ಕೆ ಸರಿಯಾದ ರೀತಿ ತನ್ನ ಯುದ್ಧತಂತ್ರವನ್ನು ರೂಪಿಸಿಕೊಳ್ಳುತ್ತಿದ್ದ. ಅನಿರೀಕ್ಷಿತವಾದ ಸಮಯದಲ್ಲಿ ವೈರಿಯ ಮೇಲೆ ದಾಳಿ ನಡೆಸಿ ಅವನಿಗೆ ಆಶ್ಚರ್ಯವನ್ನುಂಟು ಮಾಡಿ ಯುದ್ಧದಲ್ಲಿ ಜಯಶಾಲಿಯಾಗುತ್ತಿದ್ದ. ಕೆಲವು ವೇಳೆ ಶತ್ರು ಸೈನ್ಯಕ್ಕೆ ಆಹಾರ ಮತ್ತಿತರ ಸಾಮಗ್ರಿಗಳು ಸಿಗದಂತೆ ಮಾಡಿ ಅದು ನಿರ್ವಾಹವಿಲ್ಲದೆ ಶರಣಾಗುವಂತೆ ಮಾಡುತ್ತಿದ್ದ. ಅನೇಕ ವೇಳೆ ಶತ್ರು ಸೈನ್ಯವನ್ನು ಅಪಾಯಕಾರವಾದ ಸ್ಥಳಗಳಿಗೆ ಎಳೆದುಕೊಂಡು ಹೋಗಿ ಅಲ್ಲಿ ಅದನ್ನು ಸೋಲಿಸುತ್ತಿದ್ದ. ಗೆರಿಲ್ಲಾ ಯುದ್ದದಲ್ಲಿ ಅವನಿಗೆ ಸಮಾನರೇ ಇರಲಿಲ್ಲ ಎನ್ನಬಹುದು.

ಚಿತ್ರದಲ್ಲಿ ಕಂಡೇ….

ಬಾಜೀರಾಯ ಒಬ್ಬ ಆದರ್ಶ ಯೋಧನಾಗಿದ್ದ. ಮೊಘಲರ ಚಕ್ರವರ್ತಿ ಮಹಮದ್‌ಷಾಗೆ ಒಮ್ಮೆ ತನ್ನ ಸಾಮ್ರಾಜ್ಯವನ್ನು ಧೂಳೀಪಟ ಮಾಡುತ್ತಿದ್ದ ಈ ಮರಾಠ ಶೂರ ಹೇಗಿದ್ದಾನೋ ಎಂದು ನೋಡುವ ಕುತೂಹಲ ಉಂಟಾಯಿತು. ಅವನು ಒಬ್ಬ ಚಿತ್ರಕಾರನನ್ನು ಕರೆದು ಬಾಜೀರಾಯನ ಚಿತ್ರವನ್ನು ಬರದು ತರಲು ಆಜ್ಞಾಪಿಸಿದ. ಚಿತ್ರಕಾರನು ಪೇಷ್ವೆಯ ಚಿತ್ರವನ್ನು ಬರೆದುಕೊಂಡು ಬಂದ. ಅದರಲ್ಲಿ ಬಾಜೀರಾಯ ಕುದುರೆಯ ಮೇಲೆ ಕುಳಿತು ವೇಗದಿಂದ ಸಾಗುತ್ತಿದ್ದಂತೆ ಚಿತ್ರಿಸಲಾಗುತ್ತಿತ್ತು. ಚಿತ್ರವನ್ನು ನೋಡಿಯೇ, ಅದರಲ್ಲಿನ ಮುಖದ ತೇಜಸ್ಸು ದೃಢನಿರ್ಧಾರಗಳನ್ನು ಕಂಡೇ ಮೊಘಲ್‌ಚಕ್ರವರ್ತಿಗೆ ಇವನು ಅಸಾಧಾರಣ ವೀರ ಎಂದು ಮನವರಿಕೆಯಾಯಿತು. “ಇವನು ಸಾಮಾನ್ಯ ಮನುಷ್ಯನಲ್ಲ ಭೂತವೋ, ಭೇತಾಳವೋ ಇರಬೇಕು. ಅವನಿಗೆ ಬೇಕಾದ್ದನ್ನೆಲ್ಲ ಕೊಟ್ಟು ಅವನೊಡನೆ ಸಂಧಿಮಾಡಿಕೊಳ್ಳಿ” ಎಂದು ತನ್ನ ಅಧಿಕಾರಿಗಳಿಗೆ ಆಜ್ಞಾಪಿಸಿದ.

ಉದಾರಿ

ಪೇಷ್ವೆ ಬಾಜೀರಾಯ ಶೂರನಾದರೂ ಉದಾರಿಯಾಗಿದ್ದ. ಅವನು ಸೋತವರನ್ನು ಎಂದೂ ಹಿಂಸಿಸುತ್ತಿರಲಿಲ್ಲ. ಹೀಗೆ ದ್ರೋಹಮಾಡಿದವರ ಮೇಲೂ ಅವನು ಸೇಡುತೀರಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಹೈದರಾಬಾದಿನ ನಿಜಾಮ, ಮೊಘಲ್ ದಳಪತಿಗಳು ಇವರನ್ನು ಸೋಲಿಸಿದರೂ ಅವರಿಗೆ ಅವಮಾನ ಮಾಡಲು ಪ್ರಯತ್ನಿಸದೆ ಸಂಧಿ ಮಾಡಿಕೊಂಡಿದ್ದ. ಯುದ್ಧಗಳಲ್ಲಿ ಗೆದ್ದಾಗಲೂ ಅವನ ಸೈನಿಕರಿಗೆ ಕೊಳ್ಳೆಹೊಡೆಯುವುದು, ಕೊಲೆ ಮಾಡುವುದು ಇವುಗಳಿಗೆ ಅವಕಾಶ ಕೊಡುತ್ತಿರಲಿಲ್ಲ.

"ಅವನಿಗೆ ಬೇಕಾದದ್ದನ್ನೆಲ್ಲ ಕೊಟ್ಟು ಸಂಧಿ ಮಾಡಿಕೊಳ್ಳಿ"

ಮಹಾರಾಷ್ಟ್ರದಲ್ಲಿ ಅನೇಕ ಸರದಾರರಿದ್ದರೂ ಮರಾಠಾ ವೀರರು ಬಾಜೀರಾಯನ ಆಶ್ರಯವನ್ನು ಅನುಸರಿಸಿದರು. ಅವನು ಸಮರ್ಥರನ್ನು ಗುರುತಿಸಿ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದ. ದಕ್ಷಸೇವೆ ಸಲ್ಲಿಸಿದವರಿಗೆ ಬಹುಮಾನ ಕೊಡುತ್ತಿದ್ದ. ಅದರಂತೆ ಹೇಡಿಗಳನ್ನು ಸೋಮಾರಿಗಳನ್ನು ಶಿಕ್ಷಿಸುತ್ತಿದ್ದ. ಯುದ್ಧದಲ್ಲಿ ಮಡಿದವರ ಕುಟುಂಬದವರಿಗೆ ಜಹಗೀರು, ಜಮೀನು ಇವುಗಳನ್ನು ಕೊಡಲಾಗುತ್ತಿತ್ತು.

ದಕ್ಷ ಆಡಳಿತ

ಯೋಧನಾಗಿ ಸದಾ ಕಾರ್ಯೋನ್ಮುಖನಾಗಿದ್ದರೂ, ಬಾಜೀರಾಯನು ಆಡಳಿತವನ್ನು ಕಡೆಗಣಿಸಲಿಲ್ಲ. ಮಹಾರಾಷ್ಟ್ರದ ಅತ್ಯಂತ ಸಮರ್ಥ ಅಧಿಕಾರಿ ಎಂದು ಅವನು ಹೆಸರುವಾಸಿಯಾಗಿದ್ದನು. ಅವನ ವಿದೇಶಾಂಗ ನೀತಿ ಬಹು ಉತ್ತಮವಾಗಿದ್ದಿತು. ಸಾಮ್ರಾಜ್ಯದಲ್ಲಿ ಜನಗಳು ಯಾವ ಭೀತಿ ಇಲ್ಲದೆ ಸುಖ, ಶಾಂತಿಯಿಂದ ಇದ್ದರು. ಜನರು ತಮ್ಮ ತಮ್ಮ ಧರ್ಮವನ್ನು, ಉದ್ಯೋಗವನ್ನು ನಿರ್ಬಂಧವಿಲ್ಲದೆ ಅನುಸರಿಸಬಹುದಾಗಿದ್ದಿತು. ಬಾಜೀರಾಯನು ಒಳ್ಳೆಯ ನ್ಯಾಯಪದ್ಧತಿಗೂ ಗಮನ ಕೊಟ್ಟಿದ್ದನು. ಅಪರಾಧ ಮಾಡಿದವರಿಗೆ ವಿಚಾರಣೆ ನಡೆದು ತಕ್ಕ ಶಿಕ್ಷೆಯಾಗುತ್ತಿತ್ತು.

ಸಾಮ್ರಾಜ್ಯ ಸ್ಥಾಪಕ

ಬಾಜೀರಾಯ ಕೇವಲ ಒಬ್ಬ ಮಂತ್ರಿಯಾಗಿರದೆ ಸಾಮ್ರಾಜ್ಯ ಸ್ಥಾಪಕನೆಂದು ಚರಿತ್ರೆಯಲ್ಲಿ ಪ್ರಸಿದ್ಧನಾಗಿದ್ದಾನೆ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಇವನು ಅಧಿಕಾರಕ್ಕೆ ಬಂದರೂ ರಾಜ್ಯದ ಬೆಳವಣಿಗೆಗೆ ಯೋಜನೆ ಹಾಕಿಕೊಂಡ. “ಮೊಘಲ್‌ಸಾಮ್ರಾಜ್ಯ ನಶಿಸಿದೆ, ಇಂದಲ್ಲ ನಾಳ ಅದರ ಚರಿತ್ರೆ ಮುಗಿಯುತ್ತದೆ. ಅದು ಬಿದ್ದನಂತರ ಅದರ ಜಾಗದಲ್ಲಿ ಮರಾಠಾ ಸಾಮ್ರಾಜ್ಯವೊಂದನ್ನು ಕಟ್ಟಬೇಕೆಂದು ಅವನು ನಿರ್ಧರಿಸಿದ. ಆ ಉದ್ದೇಶದಿಂದ ಒಂದು ದೊಡ್ಡ ಸೈನ್ಯವನ್ನು ಕಟ್ಟಿದ. ಅನೇಕ ಮರಾಠಾ ಸರದಾರರನ್ನು ತನ್ನ ಸೈನ್ಯದಲ್ಲಿ ಅಧಿಕಾರಿಗಳನ್ನಾಗಿ ನೇಮಿಸಿಕೊಂಡ. ತನ್ನ ಚಕ್ರವರ್ತಿಯ ಮುಂದೆ ತನ್ನ ಯೋಜನೆಯನ್ನು ವಿವರಿಸಿ ಅವನ ಒಪ್ಪಿಗೆ ಪಡೆದುಕೊಂಡ. ಮಹಾರಾಷ್ಟ್ರ ಬಹುಮಟ್ಟಿಗೆ ಬೆಟ್ಟ, ಗುಡ್ಡ, ಕಾಡು ಮೇಡುಗಳಿಂದ ಕೂಡಿದ ದೇಶ. ಫಲವತ್ತಾದ ಪ್ರದೇಶವನ್ನು ಗೆಲ್ಲಬೇಕೆಂದು ಬಾಜೀರಾಯ ಇಚ್ಛೆಪಟ್ಟ. ನರ್ಮದಾ ಬಯಲನ್ನು ಗೆದ್ದು ರಾಜ್ಯವನ್ನು ವಿಸ್ತರಿಸಿದ. ನರ್ಮದಾ ನದಿಯಿಂದ ಚಂಬಲ್‌ನದಿಯವರೆಗಿನ ಪ್ರದೇಶವನ್ನು ನಿಜಾಮನಿಂದ ಪಡೆದ. ಕೊಂಕಣದಲ್ಲಿದ್ದ ಶತ್ರುಗಳನ್ನೆಲ್ಲ ಸೋಲಿಸಿದ. ಅವನ ಕಾಲದಲ್ಲಿ ಮರಾಠರು ದಕ್ಷಿಣದಲ್ಲೇ ನಿಲ್ಲದೆ ಉತ್ತರ ಭಾರತವನ್ನು ಗೆಲ್ಲಲು ಹೊರಟರು. ನರ್ಮದಾ ನದಿಯನ್ನು ದಾಟಿ ಉತ್ತರ ಹಿಂದೂಸ್ಥಾನದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದರು. ಬಾಜೀರಾಯನ ಮರಾಠರು ತಂಜಾವೂರಿನಿಂದ ದೆಹಲಿಯವರೆಗೆ ಹರಡುವಂತೆ ಮಾಡಿ ಭಾರತದ ರಾಜಕೀಯದಲ್ಲಿ ಅವರಿಗೆ ಗೌರವದ ಸ್ಥಾನವನ್ನು ತಂದುಕೊಟ್ಟನು. ಶಿವಾಜಿ ಹದಿನೇಳನೆಯ ಶತಮಾನದಲ್ಲಿ ಮರಾಠ ರಾಜ್ಯವನ್ನು ಸ್ಥಾಪಿಸಿದ. ಪೇಷ್ವೆ ಬಾಜೀರಾಯ ಅದನ್ನು ದೇಶದಲ್ಲೆಲ್ಲಾ ಹರಡಿ ಉನ್ನತಿಗೆ ಕಾರಣನಾದನು.

ಹಿಂದೂ ಧರ್ಮದ ರಕ್ಷಣೆ

ಯುದ್ಧಮಾಡಿ ರಾಜ್ಯ ವಿಸ್ತರಿಸುವುದೇ ಬಾಜೀ ರಾಯನ ಗುರಿಯಾಗಿರಲಿಲ್ಲ. ಹಿಂದೂಧರ್ಮ, ಸಂಸ್ಕೃತಿಯನ್ನು ರಕ್ಷಿಸುವುದು ಅವನ ಮುಖ್ಯ ಧ್ಯೇಯವಾಗಿದ್ದಿತು. ಹಿಂದೂಗಳು ತಮ್ಮ ನಾಡಿನಲ್ಲಿ ಸ್ವತಂತ್ರವಾಗಿ ತಮ್ಮ ಧರ್ಮ ಸಂಸ್ಕೃತಿಗಳನ್ನು ಅನುಸರಿಸಲು ಅವಕಾಶ ಹೊಂದಿರಬೇಕು. ಭಾರತಕ್ಕೆ ಭವ್ಯ ಪರಂಪರೆಯಿದೆ. ಅದರ ಸಂಸ್ಕೃತಿ ಎಷ್ಟು ಪ್ರಾಚೀನವೋ ಅಷ್ಟು ಶ್ರೇಷ್ಠವಾದುದು. ಅದನ್ನು ರಕ್ಷಿಸಿ ಪೋಷಿಸಿಕೊಂಡು ಬರುವುದು ತನ್ನ ಕರ್ತವ್ಯ ಎಂದು ಬಾಜೀರಾಯ ಭಾವಿಸಿದ.

ಬಾಜೀರಾಯನ ಧಾರ್ಮಿಕ ನೀತಿ ಸಂಕುಚಿತವಾಗಿರಲಿಲ್ಲ. ಅವನು ಯಾವ ಮತವನ್ನೂ, ಜನಾಂಗವನ್ನೂ ದ್ವೇಷಿಸುತ್ತಿರಲಿಲ್ಲ. ಎಲ್ಲ ಧರ್ಮಗಳನ್ನು ಅವನು ಗೌರವಿಸುತ್ತಿದ್ದ.

ಹಬ್ಬಗಳು

ಅವನ ಕಾಲದಲ್ಲಿ ಹಿಂದೂ ಸಂಸ್ಕೃತಿ ವೃದ್ದಿ ಹೊಂದಿತು. ಮರಾಠರು ಅನೇಕ ಹಬ್ಬ ಹರಿದಿನಗಳನ್ನು ಅದ್ಧೂರಿಯಿಂದ ಆಚರಿಸುತ್ತಿದ್ದರು. ಅದರಲ್ಲಿಯೂ ವಿಜಯದಶಮಿ, ದೀಪಾವಳಿ, ಗಣಪತಿ ಹಬ್ಬ ಇವುಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದರು. ವಿಜಯದಶಮಿಯು ಪ್ರತಿಯೊಬ್ಬರಿಗೂ ಬಹು ಪ್ರಿಯವಾದ ಹಬ್ಬವಾಗಿದ್ದಿತು. ನವರಾತ್ರಿಯ ಒಂಬತ್ತು ದಿನಗಳಲ್ಲಿಯೂ ನಾಟಕ, ಸಂಗೀತ ಮೊದಲಾದ ಮನರಂಜನೆಯ ಕಾರ್ಯಕ್ರಮಗಳಿರುತ್ತಿದ್ದವು. ವಿಜಯದಶಮಿಯಂದು “ಸೀಮೋಲ್ಲಂಘನ” ಎಂಬ ಒಂದು ಸಮಾರಂಭವಿರುತ್ತಿತ್ತು. ಪೌರರೆಲ್ಲ ಅದರಲ್ಲಿ ಭಾಗವಹಿಸುತ್ತಿದ್ದರು. ಪೇಷ್ವೆ ಬಾಜೀರಾಯ ಸೇನೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಶಮೀವೃಕ್ಷವನ್ನು ಪೂಜಿಸಿ ಅದರ ರಂಬೆಯನ್ನು ಕತ್ತರಿಸುತ್ತಿದ್ದ. ಅನಂತರ ಪಕ್ಕದಲ್ಲಿದ್ದ ಒಂದು ಹೊಲಕ್ಕೆ ಹೋಗಿ ಒಂದು ಜೋಳದ ತೆನೆಯನ್ನು ಬಿಡಿಸುತ್ತಿದ್ದ. ವಿಜಯದಶಮಿಯಂದು ಪೇಷ್ವೆ ಒಂದು ದರ್ಬಾರನ್ನು ನಡೆಸುತ್ತಿದ್ದ. ಅದಕ್ಕೆ ಅನೇಕ ಅಧಿಕಾರಿಗಳು ಬಂಧು ಮಿತ್ರರೂ ಬರುತ್ತಿದ್ದರು. ಬಾಜೀರಾಯ ಎಲ್ಲರಿಗೂ ಪೋಷಾಕು ಕೊಡುತ್ತಿದ್ದ. ಸಂಗೀತ ಮೊದಲಾದ ಕಾರ್ಯಕ್ರಮಗಳೂ ಇರುತ್ತಿದ್ದವು. ಪುಣೆಯಲ್ಲಿಯೂ ಅಂದು ನೃತ್ಯ, ಕುಸ್ತಿ ಇರುತ್ತಿದ್ದವು. ಪುಣೆಯಲ್ಲಿಯೂ ಅಂದು ನೃತ್ಯ, ಕುಸ್ತಿ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು.

ಗಣಪತಿ ಹಬ್ಬವನ್ನೂ ಬಹಳ ಉತ್ಸಾಹದಿಂದ ಆಚರಿಸುತ್ತಿದ್ದರು. ಉತ್ಸವದೊಂದಿಗೆ ಸಂಗೀತ, ನೃತ್ಯ ಮತ್ತಿತರ ಮನರಂಜನೆಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತಿದ್ದರು.

ಶನಿವಾರವಾಡಾ ಅರಮನೆ

ಪೇಷ್ವೆ ಬಾಜೀರಾಯನ ಶಾಶ್ವತವಾದ ಸಾಧನೆಗಳಲ್ಲಿ ಪುಣೆಯಲ್ಲಿ ಅವನು ಕಟ್ಟಿಸಿದ ಶನಿವಾರ ವಾಡ ಅರಮನೆ ಮುಖ್ಯವಾದುದು. ಪುಣೆಯಲ್ಲಿ ಮೂಸಾ ನದಿಯ ಪಕ್ಕದಲ್ಲಿ ಇದನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಬಗ್ಗೆ ಒಂದು ಕತೆಯಿದೆ. ಬಾಜೀರಾಯನು ಕುದುರೆಯನ್ನೇರಿ ಹೋಗುತ್ತಿದ್ದಾಗ ಮೊಲವೊಂದು ತನ್ನನ್ನು ಹಿಡಿಯಲು ಬಂದ ನಾಯಿಯನ್ನು ಅಟ್ಟಿಸಿಕೊಂಡು ಹೋದ ದೃಶ್ಯವನ್ನು ನೋಡಿದನಂತೆ. ಆ ಸ್ಥಳದಲ್ಲೇ ಈ ಅರಮನೆ ಕಟ್ಟಿಸಿದನು ಎಂದು ಹೇಳುತ್ತಾರೆ. ಆರು ಮಹಡಿಗಳಿದ್ದ ಈ ಅರಮನೆಯಲ್ಲಿ ಏಳು ದರ್ಬಾರ್ ಒಳಾಂಗಣಗಳೂ ದಿವಾನ್‌ಖಾನೆಗಳೂ ಇದ್ದವು. ಹೊರಗಡೆ ಹೂದೋಟ, ಕಾರಂಜಿ, ಸುತ್ತಲೂ ಬಲವಾದ ಕೋಟೆಯನ್ನು ರಚಿಸಲಾಗಿತ್ತು.

ರೂಪವಂತ, ವಿನಯವಂತ

ಬಾಜೀರಾಯನ ವೈಯಕ್ತಿಕ ಜೀವನ ಬಹಳ ಸ್ವಾರಸ್ಯಕರವಾದುದು. ಇವನು ಶೌರ್ಯವಂತನಂತೆ ರೂಪವಂತನೂ ಆಗಿದ್ದನು. ತನ್ನ ಕಾಲದ ಅತ್ಯಂತ ಸುಂದರ ಪುರುಷನೆಂದು ಬಾಜೀರಾಯ ಪ್ರಸಿದ್ಧನಾಗಿದ್ದನು. ಇಂಥ ರೂಪ ಅಧಿಕಾರ ಐಶ್ವರ್ಯಗಳಿದ್ದರೂ ಅವನು ಬಹಳ ಸರಳ ಜೀವನ ನಡೆಸಿದನು. ತನ್ನ ಜೀವನದ ಬಹು ಭಾಗದ ಸಮಯವನ್ನು ಯುದ್ಧಭೂಮಿಯಲ್ಲಿ ಕಳೆಯಬೇಕಾದುದರಿಂದ ಸೈನಿಕನಂತೆ ಶಿಸ್ತಿನ ಸರಳವಾದ ಜೀವನ ಅವನದಾಗಿತ್ತು. ಅನೇಕ ವೇಳೆ ಕುದುರೆ ಮೇಲೆ ಸವಾರಿ ಮಾಡುತ್ತಲೇ ಜೋಳ ಅಥವಾ ಹಣ್ಣುಗಳನ್ನು ತಿಂದು ಮುಂದೆ ಸಾಗುತ್ತಿದ್ದನು. ಮಹಾರಾಷ್ಟ್ರದ ಅತ್ಯಂತ ಬಲಿಷ್ಠ ಅಧಿಕಾರಿಯಾಗಿದ್ದರೂ ಬಾಜೀರಾಯನು ವಿನಯವಂತನಾಗಿದ್ದನು.

ಅವನ ಸ್ನೇಹಕ್ಕಾಗಿ ಹೈದರಾಬಾದಿನ ನಿಜಾಮ, ಮೊಘಲ್‌ಅಧಿಕಾರಿಗಳು, ರಜಪೂತ ದೊರೆಗಳು ಹಾತೊರೆಯುತ್ತಿದ್ದರು. ಪೇಷ್ವೆಯ ತಾಯಿ ರಾಧಾಬಾಯಿ ಉತ್ತರ ಭಾರತದ ಪುಣ್ಯಕ್ಷೇತ್ರಗಳ ಯಾತ್ರೆಗಾಗಿ ಹೊರಟಾಗ, ಹಿಂದೂಸ್ಥಾನದ ಅರಸರೆಲ್ಲಾ ಆಕೆಗೆ ರಾಜೋಚಿತವಾದ ಸ್ವಾಗತವನ್ನೂ ಸತ್ಕಾರವನ್ನೂ ನೀಡಿದರು. ಬ್ರಿಟಿಷರೂ ಬಾಜೀರಾಯನೊಡನೆ ಮೈತ್ರಿಯ ಒಪ್ಪಂದವನ್ನು ಮಾಡಿಕೊಂಡರು.

ಸ್ವಾಮಿ ಭಕ್ತಿ

ಇಷ್ಟು ಜನಪ್ರಿಯ ಹಾಗೂ ಶಕ್ತಿಶಾಲಿ ವ್ಯಕ್ತಿಯಾಗಿದ್ದರೂ ಪೇಷ್ವೆ ಬಾಜೀರಾಯ ಅಹಂಕಾರಿಯಾಗಿರಲಿಲ್ಲ. ಛತ್ರಪತಿ ಶಾಹುವಿನ ಮಾತನ್ನು ಅವನು ಎಂದೂ ಮೀರಲಿಲ್ಲ. ಅವನು ಇಷ್ಟಪಟ್ಟಿದ್ದರೆ ಶಾಹುವನ್ನು ತಳ್ಳಿ ತಾನೇ ಸಿಂಹಾಸವನ್ನೇರಬಹುದಾಗಿತ್ತು. ಅಧಿಕಾರ, ಸಂಪತ್ತುಗಳಿಗೆ ಕಿಂಚಿತ್ತೂ ಗಮನ ನೀಡಲಿಲ್ಲ. ಸ್ವಾರ್ಥ ಮನೋಭಾವವಂತೂ ಆತನಲ್ಲಿ ಕಡೆಯವರೆಗೂ ಕಾಣಬರಲಿಲ್ಲ. ಹಾಗೆಯೇ ಸ್ವಾಮಿನಿಷ್ಠನಾಗಿ, ಅವನು ಛತ್ರಪತಿಗೆ ಅಧೀನನಾಗಿದ್ದುಕೊಂಡೇ ತನ್ನ ಕಾರ್ಯವನ್ನು ನಿರ್ವಹಿಸಿಕೊಂಡು ಬಂದನು. ಭಾರತದ ಚರಿತ್ರೆಯಲ್ಲಿ ಒಬ್ಬ ಆದರ್ಶ ವ್ಯಕ್ತಿಯಾಗಿ ಶ್ರೇಷ್ಠ ಆಡಳಿತಗಾರ ಎನ್ನಿಸಿಕೊಂಡನು.

ಅದರಂತೆ ಗುರು ಹಿರಿಯರಲ್ಲೂ ಅವನು ಭಕ್ತಿ ಗೌರವಗಳನ್ನಿಟ್ಟುಕೊಂಡಿದ್ದನು. ಸಾಧು ಸಂತರನ್ನು ಗೌರವದಿಂದ ಕಾಣುತ್ತಿದ್ದನು. ಆಗ ಮಹಾರಾಷ್ಟ್ರದಲ್ಲಿ ಪ್ರಸಿದ್ಧರಾಗಿದ್ದ ಸಂತರು ಬ್ರಹ್ಮೇಂದ್ರ ಸ್ವಾಮಿಗಳು ಅವನಿಗೆ ಗುರುಗಳಾಗಿದ್ದರು. ಅವನ ಸಾಧನೆಗಳಿಗೆ ಅವರು ಪ್ರೇರಕ ಶಕ್ತಿಯಾಗಿದ್ದರು. ಬಾಜೀರಾಯರು ತನ್ನ ತಂದೆತಾಯಿಯರನ್ನು ಬಹು ಗೌರವ, ಪ್ರೀತಿಗಳಿಂದ ಕಾಣುತ್ತಿದ್ದರು.

ಬಾಜೀರಾಯನ ಮನೆಯವರೆಲ್ಲ ಅವನ ಬಗ್ಗೆ ಅಷ್ಟೇ ಪ್ರೀತಿ ವಿಶ್ವಾಸವನ್ನಿಟ್ಟುಕೊಂಡಿದ್ದರು. ಅವನ ತಮ್ಮ ಜಿಮ್ಣಾಜಿ ಅಣ್ಣನಂತೆ ಪರಾಕ್ರಮಿ. ತನ್ನ ಅಣ್ಣನಿಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಾಗಿದ್ದನು. ಬ್ರಹ್ಮೇಂದ್ರಸ್ವಾಮಿಗಳು ಇವರಿಬ್ಬರನ್ನೂ ರಾಮಲಕ್ಷ್ಮಣರೆಂದು ಕರೆಯುತ್ತಿದ್ದರು. ಬಾಜೀರಾಯನ ಮಕ್ಕಳೂ ಜಿಮ್ಣಾಜಿಯ ಮಗ ಸದಾಶಿವ ಭಾವುವೂ ಶೂರರಾಗಿದ್ದು ತಮ್ಮ ಸರ್ವಸ್ವವನ್ನೂ ನಾಡಿಗೆ ಅರ್ಪಿಸಿದರು.

ಇಪ್ಪತ್ತು ವರ್ಷ ಮೀರುವ ಮುನ್ನವೇ ಮಹಾರಾಷ್ಟ್ರದ ಅತ್ಯಂತ ಉನ್ನತ ಸ್ಥಾನಕ್ಕೇರಿದ ಪೇಷ್ವೆ ಬಾಜೀರಾಯ ತನ್ನ ಇಪ್ಪತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಮಹಾರಾಷ್ಟ್ರಕ್ಕೆ ಉತ್ತಮ ಸೇವೆ ಸಲ್ಲಿಸಿದ. ದಖನ್ನಿನಲ್ಲಿ ಮರಾಠರ ಪ್ರಾಬಲ್ಯವನ್ನು ಸ್ಥಾಪಿಸಿ ಭಾರತದಲ್ಲಿ ಅವರಿಗೆ ಮಹತ್ವದ ಸ್ಥಾನ ದೊರಕಿಸಿಕೊಟ್ಟ. ವಿದೇಶಿಯರ ಹಾವಳಿಯನ್ನು ನಿವಾರಿಸಿ ಭಾರತದಲ್ಲಿ ಧರ್ಮ, ಸಂಸ್ಕೃತಿಗಳನ್ನು ರಕ್ಷಿಸಲು ಕ್ರಮಕೈಗೊಂಡ. ಅವನ ನಂತರ ಐವತ್ತು ವರ್ಷ ಕಾಲ ಮಹಾರಾಷ್ಟ್ರ ಶಾಂತಿ ಮತ್ತು ಭದ್ರತೆಯನ್ನು ಹೊಂದಿದ್ದಿತು. ಭಾರತದ ಅತ್ಯಂತ ಪ್ರತಿಭಾವಂತ ಸೇನಾನಿ ಎನಿಸಿಕೊಂಡಿರುವ ಬಾಜೀರಾಯ ಇನ್ನೂ ಕೆಲವು ವರ್ಷ ಬದುಕಿದ್ದರೆ ಮರಾಠ ಸಾಮ್ರಾಜ್ಯ ಸುಭದ್ರವಾಗಿ ಬಹುಕಾಲ ಉಳಿಯುತ್ತಿತ್ತು. ನಮ್ಮ ನಾಡಿನ ಇತಿಹಾಸವೇ ಬೇರೆಯಾಗುತ್ತಿತ್ತು.