ಹೆಸರು: ಮಂಜುನಾಥ್
ಊರು: ಬನ್ನೂರು.

ಪ್ರಶ್ನೆ: ನನಗೊಂದು ಸವಸ್ಯೆಯಿದೆ. ಏನೆಂದರೆ ನನ್ನ ಗುದದ್ವಾರದಲ್ಲಿ ಒಂದು ಸಣ್ಣದಾದ ಮಾಂಸದ ತುಣುಕು ಇದೆ. ಇದು ಮುಟ್ಟಿದರೆ ಮೃದುವಾಗಿದೆ. ಹಾಗೂ ಚುಚ್ಚಿದ ಅನುಭವವಾಗುತ್ತದೆ ಮತ್ತು ನೋವಿನಿಂದ ಕೂಡಿದೆ. ಎಲ್ಲಿಯೂ ತೋರಿಸಿಲ್ಲ. ನಾನು ವೃತ್ತಿಯಲ್ಲಿ ಡ್ರೈವರ್ ಆಗಿರುತ್ತೇನೆ. ದಯವಿಟ್ಟು ಪರಿಹಾರ ತಿಳಿಸಿ. ಪೈಲ್ಸ್ ಎಂದರೇನು? ನನಗೆ ಪೈಲ್ಸ್ ಇರಬಹುದೇ ತಿಳಿಸಿ.

ಉತ್ತರ: ನಿಮಗೆ ಮೂಲವ್ಯಾಧಿ (ಪೈಲ್ಸ್) ತೊಂದರೆ ಇದೆ.

ಮೂಲವ್ಯಾಧಿಯ ನಿಜವಾದ ಅರ್ಥ ಗುದದ್ವಾರ ಅಥವಾ ಮಲದ್ವಾರದಿಂದ “ನೋವು ರಹಿತ ಊತದಿಂದ ಕೂಡಿದ ಮೊಳಕೆಯು ದೇಹದ ಹೊರಕ್ಕೆ ಚಾಚಿರುವುದು” ಎಂದು. ಈ ಊತದ ಮೊಳಕೆಯ ಒಳಗೆ ರಕ್ತನಾಳಗಳು ಉಬ್ಬಿಕೊಂಡಿರುತ್ತವೆ.

ಮೂಲವ್ಯಾಧಿ ಬರಲು ಅನೇಕ ಕಾರಣಗಳಿವೆ: ದೇಹದಲ್ಲಿ ವಾಯುಸಂಚಾರ ಕ್ರಮವಾಗಿ ಆಗದೇ ಈ ಸಮಸ್ಯೆ ಕಂಡುಬರುತ್ತದೆ. ಮೂಲವ್ಯಾಧಿಗೆ ಮುಖ್ಯ ಕಾರಣ ಆಹಾರ. ಆಹಾರದಲ್ಲಿ ನಿಯಂತ್ರಣವಿಲ್ಲದೇ ಇರುವುದು, ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರಲ್ಲಿ ಹಾಗೂ ನೀರನ್ನು ಹೆಚ್ಚಾಗಿ ಕುಡಿಯದೇ ಇದ್ದರೆ, ತರಕಾರಿಗಳ ಸೇವನೆಯ ಬದಲು ಹೆಚ್ಚು ಮಾಂಸಾಹಾರವನ್ನು ಬಳಸುವವರಲ್ಲಿ. ಶ್ರಮದಾಯಕ ಕೆಲಸವಿಲ್ಲದೇ ಇರುವವರಲ್ಲಿ, ಆಲಸಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಮೂಲವ್ಯಾಧಿ ರೋಗಕ್ಕೆ ಚಿಕಿತ್ಸೆಗಳು: ೧. ಮನೆ ಮದ್ದು: ಮನೆಯಲ್ಲಿಯೇ ಪ್ರಾಥಮಿಕ ಹಂತದ ಮೂಲ ಮೂಲವ್ಯಾಧಿ ರೋಗಕ್ಕೆ ಚಿಕಿತ್ಸೆಯನ್ನು ಪಡೆಯಬಹುದು. ಆಹಾರದಲ್ಲಿ ಪಥ್ಯವಿರುವುದು ಮತ್ತು ಬಿಸಿ ನೀರಿನ ತೊಟ್ಟಿಯಲ್ಲಿ ಕುಳಿತುಕೊಳ್ಳುವುದು ಇದರಿಂದ ನೋವು ಕಡಿಮೆಯಾಗುತ್ತದೆ.

೨. ವಿರೇಚಕಗಳನ್ನು ತೆಗೆದುಕೊಳ್ಳುವುದರಿಂದ ಮಲಬದ್ಧತೆ ಕಡಿಮೆಯಾಗಿ ಮಲವಿಸರ್ಜನೆ ಸರಾಗವಾಗುತ್ತದೆ.

೩. ಸಂಕುಚಿತಗೊಳಿಸುವ (Sclerosing agents) ಚುಚ್ಚುಮದ್ದನ್ನು ತೆಗೆದುಕೊಳ್ಳುವುದು.

೪. ನೀರ್ಗಲ್ಲು ಶಸ್ತ್ರಚಿಕಿತ್ಸೆ (Cryosurgery)

೫. ರಬ್ಬರ್ ನಿಂದ ನಾಳಗಟ್ಟುವಿಕೆ (Rubberband ligation)

೬. ಇನ್‌ಫ್ರಾರೆಡ್ ಹೆಪ್ಪುಗಟ್ಟುವಿಕಾ ಚಿಕಿತ್ಸೆ (Infrared coagulation)

೭. ಪೈಲ್ಸ್ ಮನಿಕಟ್ಟುವಿಕೆ (Hemorrhoidal arterial ligation)

೮. ವಿದ್ಯುತ್ ಕಿರಣ ಹಾಯಿಸುವಿಕೆ (Direct Current)

೯. ಗುದದ್ವಾರ ಹಿಗ್ಗಿಸುವಿಕೆ (Anal Stretch)

೧೦. ಶಸ್ತ್ರಕ್ರಿಯೆ.

ಈ ಮೇಲಿನ ಚಿಕಿತ್ಸೆಗಳಿಂದ ಪೈಲ್ಸ್ ರೋಗವನ್ನು ನಿರ್ಮೂಲನೆ ಮಾಡಬಹುದು. ಆದರೆ ತೊಂದರೆಯಿಲ್ಲದ ಚರ್ಮದ ಗಂಟುಗಳಿದ್ದರೆ ಈ ಚಿಕಿತ್ಸೆಗಳ ಅವಶ್ಯಕತೆ ಇರುವುದಿಲ್ಲ. ಆದರೆ ತಜ್ಞ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಂಡ ನಂತರವೇ ಚಿಕಿತ್ಸೆಯನ್ನು ಪಡೆಯಬೇಕು.