ಕುವೆಂಪು ೧೯೪೬ರಲ್ಲಿ ಪ್ರಕಟಿಸಿದ ‘ನನ್ನ ಮನೆ’ ಎಂಬ ಮಕ್ಕಳ ಕವನ ಸಂಗ್ರಹದಲ್ಲಿ ‘ಪೊದೆಯ ಹಕ್ಕಿ, ಎದೆಯ ಹಕ್ಕಿ’ ಎನ್ನುವ ಕವಿತೆಯೊಂದಿದೆ. ‘ಟುವ್ವಿ! ಟುವ್ವಿ! ಟುವ್ವಿ! ಟುವ್ವಿ ಎಂದು ಹಕ್ಕಿ ಕೂಗಿತು. ಅದರ ಹಾಡು ಬಂದು ಎನ್ನ ಎದೆಯ ಗೂಡ ತಾಗಿತು’ ಎಂದು ಪ್ರಾರಂಭವಾಗುವ ಈ ಕವಿತೆ, ಕವಿಗೂ ಲೋಕಕ್ಕೂ ನಡೆಯುವ ಸಂವಾದದ ಸ್ವರೂಪದ ಸೊಗಸಾದ ಪ್ರತೀಕವಾಗಿದೆ. ಇದೊಂದು ಮಕ್ಕಳ ಪದ್ಯವಷ್ಟೆ ಎಂಬ ಗ್ರಹಿಕೆಯಿಂದಲೋ ಏನೊ ಗಂಭೀರವಾದ ಚರ್ಚೆಗೆ ಗುರಿಯಾಗದೆ ಹೋಗಿರುವ ಈ ಕವಿತೆಯಲ್ಲಿ ಎರಡು ಪಾತ್ರಗಳಿವೆ. ಒಂದು ‘ಪೊದೆಯ ಹಕ್ಕಿ’ ಮತ್ತೊಂದು ‘ಎದೆಯ ಹಕ್ಕಿ’. ಮೊದಲನೆಯದು ಲೋಕವ್ಯಾಪಾರಕ್ಕೂ, ಎರಡನೆಯದು ಲೋಕವ್ಯಾಪಾರಗಳಿಗೆ ಸ್ಪಂದಿಸುವ ಕವಿ ಮನಸ್ಸಿಗೂ  ಸಂಕೇತಗಳಾಗಿವೆ. ಟುವ್ವಿ ಟುವ್ವಿ ಎಂದು ಕೂಗಿದ ಹಕ್ಕಿಯ ದನಿಗೆ ಸ್ಪಂದಿಸಿದ ಕವಿಯ ಅನುಭವದ ಸ್ವರೂಪವನ್ನು ಕುರಿತ ನಿರೂಪಣೆಯಲ್ಲಿ ಕವಿತೆಯ ರಚನೆ ರೂಪುಗೊಂಡಿದೆ. ಮೊದಲಪದ್ಯ, ಆ ಹಕ್ಕಿಯ ಕೂಗು ತನ್ನ ಎದೆಯ ಗೂಡನ್ನು ತಟ್ಟಿದ ಪರಿಯನ್ನು ಪ್ರಸ್ತಾಪಿಸುತ್ತದೆ. ಈ ಅನುಭವ ಸರ್ವ ಸಾಮಾನ್ಯವಾದದ್ದು. ಹಕ್ಕಿಯೊಂದು ಕೂಗಿದಾಗ, ಆ ದನಿಯನ್ನು ಕೇಳಿಸಿಕೊಂಡವರು ಇರುವಂತೆ, ಅಂಥ ದನಿಯನ್ನು ಕೇಳಿಯೂ ಅದೊಂದು ದೈನಂದಿನ ಸರಳ ಸಾಧಾರಣವಾದ ಸಂಗತಿಯೆಂದು ನಿರ್ಲಕ್ಷಿಸುವವರೂ ಇರಬಹುದು. ಆದರೆ ಸೂಕ್ಷ ಸಂವೇದನಾಶೀಲನಾದ ಕವಿಯ ಪ್ರತಿಕ್ರಿಯೆ ಇಂಥ ಸಂದರ್ಭದಲ್ಲಿ ಬೇರೆಯೇ ಆಗಿ ಇರುತ್ತದೆ. ಆದ ಕಾರಣ ಟುವ್ವಿ ಟುವ್ವಿ ಎಂದು ಕೂಗಿದ ಆ ಹಕ್ಕಿಯ ದನಿ ಈತನ ಎದೆಯ ಗೂಡನ್ನು ತಟ್ಟುವಷ್ಟರಲ್ಲಿಯೆ ಪರ‍್ಯವಸಾನಗೊಳ್ಳದೆ, ಅದು ಆತನ ಅಂತರಂಗದೊಳಗಿನ ‘ಹಕ್ಕಿ’ಯನ್ನು ಎಚ್ಚರಗೊಳಿಸುತ್ತದೆ. ಆಗ

ಟುವ್ವಿ ಟುವ್ವಿ ಟುವ್ವಿ ಎಂದು
ಎನ್ನ ಎದೆಯೊಳೊಂದು
ಹಕ್ಕಿ ಕೂಗತೊಡಗಿತು (ಸ.ಕಾ. ಸಂ.೨. ಪು.೭೫೫)

ಎಂದು, ‘ಪೊದೆಯ ಹಕ್ಕಿ’ಯ ದನಿ ಕವಿಯ ಮನಸ್ಸಿನಲ್ಲಿ ಅನುರಣನಗೊಳ್ಳುವ ಪರಿಯನ್ನು ರೂಪಕ ಮಾರ್ಗದಲ್ಲಿ ಗುರುತಿಸುತ್ತದೆ. ಇದು ಲೋಕವ್ಯಾಪಾರಗಳಿಗೆ ಕವಿಯ ಮನಸ್ಸು ಸ್ಪಂದಿಸುವ ಬಗೆ. ಹೀಗೆ ಹಕ್ಕಿಯ ದನಿಗೆ ಸ್ಪಂದಿಸುವ ಮನಸ್ಸು ಮತ್ತೊಂದು ‘ಸತ್ಯ’ವನ್ನು ಕಂಡುಕೊಳ್ಳುತ್ತದೆ. ಅದೆಂದರೆ:

ಆಗ ನನ್ನ ಎದೆಯೊಳೊಂದು
ಹಕ್ಕಿ ಇರುವುದೆಂಬುದನ್ನು
ನಾನು ಗೊತ್ತುಹಿಡಿದೆನು (ಅಲ್ಲೇ)

ಅಂದರೆ, ಪೊದೆಯ ಹಕ್ಕಿ ಅಥವಾ ಬಹಿರಂಗದ ಲೋಕವ್ಯಾಪಾರ ಕವಿಯ ಮನಸ್ಸನ್ನು ತಟ್ಟುವುದಷ್ಟೆ ಅಲ್ಲ, ಹಾಗೆ ತಟ್ಟಿದ ಅನುಭವಗಳಿಗೆ ಸ್ಪಂದಿಸುವ ಒಂದು ಸೂಕ್ಷ  ಸಂವೇದನಾಶೀಲವಾದ ಸಾಮರ್ಥ್ಯ ತನ್ನಲ್ಲಿ ಇದೆ ಎಂಬ ಹೊಸ ಅರಿವನ್ನೂ ಅವನಲ್ಲಿ ಉಂಟುಮಾಡುತ್ತದೆ. ಈ ಅರಿವಿನ ಪ್ರತೀಕವೆ ತನ್ನ ‘ಎದೆಯೊಳಗೊಂದು ಹಕ್ಕಿ ಇರುವುದನ್ನು ತಾನು ಗೊತ್ತು ಹಿಡಿದೆನು’ ಎಂಬ ಉಕ್ತಿ. ಒಂದು ಹಕ್ಕಿಗೆ ಮತ್ತೊಂದು ಹಕ್ಕಿ ಎಷ್ಟು ಸಹಜವಾಗಿ ಎಷ್ಟು ಆತ್ಮೀಯವಾಗಿ ಸ್ಪಂದಿಸಬಹುದೋ ಅಷ್ಟರಮಟ್ಟಿಗೆ ಟುವ್ವಿ ಟುವ್ವಿ ಟುವ್ವಿ ಎಂದು ಕೂಗಿದ ಪೊದೆಯ ಹಕ್ಕಿಗೆ, ಕವಿಯ ಎದೆಯ ಹಕ್ಕಿ ಸ್ಪಂದಿಸಿದೆ. ಆದುದರಿಂದ ಕವಿಗೂ ತಮ್ಮ ಒಳಗೆ ‘ಒಂದು ಹಕ್ಕಿ’ ಇರುವುದೆಂಬುದನ್ನು ಗುರುತಿಸಲು ಸಾಧ್ಯವಾದದ್ದು. ಯಾಕೆಂದರೆ ತಾನೇ ಒಂದು ಹಕ್ಕಿಯಾದರೆ ಮಾತ್ರ, ಬೇರೊಂದು (ಹೊರಗಿನ) ಹಕ್ಕಿಗೆ ಸ್ಪಂದಿಸಬಹುದು–ಒಂದು ವೀಣೆಯ ತಂತಿಯ ಮಿಡಿತಕ್ಕೆ ಅದರ ಬದಿಯಲ್ಲಿರುವ ಮತ್ತೊಂದು ವೀಣೆಯ ತಂತಿ ಅನುರಣಿಸುವಂತೆ. ಅಂದರೆ ಕವಿ ಹಕ್ಕಿಯ ಕೂಗಿಗೆ ಸ್ಪಂದಿಸುವಾಗ ಹಕ್ಕಿಯಾಗಿ, ಸೂರ್ಯೋದಯಕ್ಕೆ ಸ್ಪಂದಿಸುವಾಗ ತಾನೇ ಸೂರ್ಯನಾಗಿ, ಮಲೆನಾಡಿನ ಕಾಡಿಗೆ ಸ್ಪಂದಿಸುವಾಗ ತಾನೇ ಕಾಡಾಗಿ ಒಂದು ಬಗೆಯ ತಾದಾತ್ಮ ವನ್ನು ಪಡೆದಲ್ಲದೆ, ನಿಜವಾದ ರಸಾನುಭೂತಿ ಸಾಧ್ಯವಿಲ್ಲ. ಹೀಗೆ ಲೋಕವನ್ನು ತಾದಾತ್ಮ ಭಾವದಿಂದ ಒಲಿಯಲು ಸಾಧ್ಯವಾಯಿತೆಂಬ ಕಾರಣದಿಂದ ಈ ಲೋಕವೂ ಕವಿಯ ಪಾಲಿಗೆ ಪ್ರಿಯವಾಗುತ್ತದೆ. ಈ ಸಂಗತಿಯನ್ನೆ, ಈ ಕವಿತೆಯ

ಎದೆಯ ಹಕ್ಕಿಗಾಗಿ ನಾನು
ಪೊದೆಯ ಹಕ್ಕಿಯನ್ನು ಒಲಿದೆನು (ಅಲ್ಲೇ)

ಎನ್ನುವ ಮುಕ್ತಾಯದ ಪಂಕ್ತಿಗಳು ಸಮರ್ಥಿಸುತ್ತವೆ. ಮೂಲತಃ ಕವಿಗೂ ಲೋಕಕ್ಕೂ ಇರುವುದು ಈ ಒಲುಮೆಯ ಅಥವಾ ಪ್ರೀತಿಯ ಸಂಬಂಧ. ಜಗತ್ತನ್ನು ಉತ್ಕಟವಾಗಿ ಪ್ರೀತಿಸದವನು ಕವಿಯಾಗಲಾರ. ಕುವೆಂಪು ಅವರು, ನಿಸರ್ಗಕ್ಕೂ ತಮಗೂ ಇರುವ ಸಂಬಂಧವನ್ನು ವರ್ಣಿಸುವುದು ಇಂಥ ಪ್ರೀತಿಯ ಪರಿಭಾಷೆಯ ಮೂಲಕವೇ. ಶರತ್ ಕಾಲದ ಸೂರ್ಯೋದಯದ ಸಂದರ್ಭದಲ್ಲಿ ಹಸಿರು ಹುಲ್ಲಿನ ಮೇಲೆ ಮಿರುಗುವ ಅಸಂಖ್ಯ ಇಬ್ಬನಿಗಳಿಗೆ ಸ್ಪಂದಿಸುತ್ತಾ

ಪ್ರೀತಿಸು ಮುದ್ದಿಸು ಒಲಿ ಆಲಂಗಿಸು
ಬರಿ ನೀರಿನ ಹನಿ ಎನಬೇಡ (ಸ.ಕಾ. ಸಂ.೨. ಪು.೧೮೩)

ಎನ್ನುವ ಕುವೆಂಪು, ಎಂತಹ ಉತ್ಕಟವಾದ ಪ್ರಣಯದ ಪರಿಭಾಷೆಯಲ್ಲಿ ಕವಿಗೂ ನಿಸರ್ಗಕ್ಕೂ ಇರುವ ಸಂಬಂಧವನ್ನು ವರ್ಣಿಸುತ್ತಾರೆನ್ನುವುದನ್ನು ಗಮನಿಸಬಹುದು. ಅಷ್ಟೆ ಅಲ್ಲ

ಹನಿಯನು ನಾನನುಭವಿಸುವ ಪ್ರೀತಿ
ಹನಿ ನನ್ನನು ರಮಿಸುವ ರೀತಿ (ಸ.ಕಾ. ಸಂ.೧. ಪು.೬೩೩)

ಕೂಡಾ ಹೌದು. ಕವಿಯಲ್ಲಿ ಸುತ್ತಣ ನಿಸರ್ಗವನ್ನು ಪ್ರೀತಿಸುವ ಗಾಢವಾದ ಒಂದು ಅಭಿರುಚಿ ಜಾಗ್ರತವಾಗಿರುವುದು ಎಷ್ಟು ನಿಜವೋ, ಈ ಜಗತ್ತು ತನ್ನ ಅಸಂಖ್ಯ ವೈವಿಧ್ಯಗಳಿಂದ ಕವಿಯನ್ನು ರಮಿಸು(ಆಕರ್ಷಿಸು)ತ್ತದೆ ಎನ್ನುವುದು ಅಷ್ಟೇ ನಿಜ. ‘ಮಲೆಯ ನಾಡೆನಗೆ ತಾಯಿಮನೆ, ಕಾಡು ದೇವರು ಬೀಡು’ (ಶ್ರೀರಾ.ದ. ಅಯೋಧ್ಯಾ ಸಂಪುಟ, ಸಂ.೭. ಪಂ.೭-೯ ಪು.೧೨೭) ಎನ್ನುವ ಕುವೆಂಪು ಮೊಟ್ಟಮೊದಲ ಬಾರಿಗೆ ಸಹ್ಯಾದ್ರಿಯ ಪರಿಸರದ ನಿಸರ್ಗ ವೈಭವವನ್ನು, ಅದರ ಸಮಸ್ತ ವೈವಿಧ್ಯಗಳೊಡನೆ ತೆರೆದು ತೋರಿದವರು. ಅಷ್ಟೆ ಅಲ್ಲ ತಮ್ಮ ಕವಿತೆಗಳಲ್ಲಿ ತಾವು ನಿಸರ್ಗದೊಂದಿಗೆ ನಡೆಯಿಸಿದ ಸಂವಾದವನ್ನೂ, ಪಡೆದ ತಾದಾತ್ಮ ವನ್ನೂ ತತ್ಪರಿಣಾಮವಾದ ರಸಾನುಭೂತಿಯ ವಿಶಿಷ್ಟತೆಯನ್ನೂ ಸಾಕಷ್ಟು ವಿಸ್ತಾರವಾಗಿಯೇ ನಿರೂಪಿಸಿದ್ದಾರೆ. ಅವುಗಳು ಸ್ಥೂಲವಾಗಿ ಎರಡು ಬಗೆ ಎನ್ನಬಹುದು: ಒಂದು, ಕವಿಯ ವ್ಯಕ್ತಿತ್ವದ ಪ್ರಾಧಾನ್ಯತೆ ಕನಿಷ್ಠಮಿತಿಗೆ ಇಳಿದು ಆ ವ್ಯಕ್ತಿತ್ವವು ಪಡೆದ ಅನುಭವವಷ್ಟೆ ಕವಿತೆಯಾಗಿ ರೂಪುಗೊಳ್ಳುವ ಕ್ರಮ; ಮತ್ತೊಂದು, ಕವಿತೆಯೊಳಗೆ ಕವಿಯ ವ್ಯಕ್ತಿತ್ವವೂ ಮತ್ತು ಆ ವ್ಯಕ್ತಿ ನಿರ್ದಿಷ್ಟ ಸಂದರ್ಭವೊಂದರಲ್ಲಿ ಪಡೆದ ಅನುಭವದ ವಿವರಗಳೂ ಕವಿತೆಯ ಒಂದು ಭಾಗವಾಗಿರುವ ಕ್ರಮ. ಕುವೆಂಪು ಅವರ ‘ಶರತ್ ಕಾಲದ ಸೂರ್ಯೋದಯದಲಿ’ ಎನ್ನುವ ಕವಿತೆಯನ್ನು ಈ ಎರಡನೆಯ ಕ್ರಮಕ್ಕೆ ಒಂದು ಒಳ್ಳೆಯ ನಿದರ್ಶನವೆಂದು ಭಾವಿಸಬಹುದು. ಈ ಕವಿತೆ ಪ್ರಧಾನವಾಗಿ ‘ಸೂರ್ಯೋದಯ’ದಂಥ ಒಂದು ಶ್ರೀಮಂತ ಘಟನೆಯ ಅನುಭವವನ್ನು ಒಟ್ಟಾರೆಯಾಗಿ ಕಟ್ಟಿಕೊಡುವುದಾದರೂ, ಆ ಕವಿತೆಯೊಳಗೆ ಕವಿ ಒಂದು ಬೆಳಗು ಹೊರಟ ಸಂಚಾರವೂ, ಆ ಸಂಚಾರದಲ್ಲಿ ಆತ ಕಂಡದ್ದು, ಅನುಭವಿಸಿದ್ದು,  ಆಲೋಚಿಸಿದ್ದೂ, ಈ ಎಲ್ಲ ವಿವರಗಳೂ ಒಂದು ಅನುಕ್ರಮದಲ್ಲಿ ವರ್ಣಿತವಾಗಿವೆ. ಅಂದರೆ ಕುವೆಂಪು ಅವರ ಕವಿತೆಯಲ್ಲಿ ಕವಿ ಪಡೆದ ಅನುಭವ ಮಾತ್ರವಲ್ಲ, ಅನುಭವವನ್ನು ಪಡೆಯುವ ಕವಿ ಮತ್ತು ಅನುಭವಗಳನ್ನು ಪಡೆದ ಕ್ರಮ ಈ ಎಲ್ಲವೂ ಕವಿತೆಯ ಚೌಕಟ್ಟಿನೊಳಗೆ ಸ್ಥಾನ ಪಡೆದುಕೊಂಡಿವೆ. ಬಹುಶಃ ಇದರರ್ಥ, ಕವಿತೆಯನ್ನು ಬರೆಯುವ ಮುನ್ನ ಕವಿಗೊದಗಿದ ಲೋಕಸಂವಾದ ರೂಪದ ಅನುಭವ ಕೂಡಾ ಕವಿಯ ಸೃಜನಪ್ರಕ್ರಿಯೆಯ ಒಂದು ಭಾಗವೇ ಎಂಬ ಗ್ರಹಿಕೆಯಿರಬಹುದು. ಈ ಸ್ಥಿತಿಯೂ ಕವಿಯ ಸೌಂದರ್ಯಾನುಭವದ ಹಂತವೇ, ಅಥವಾ ರಸಾನುಭೂತಿಯ ಹಂತವೇ. ಎಂದರೆ ಕವಿ ಲೋಕದಲ್ಲಿ ಯಾವುದೇ ವಸ್ತುಕೇಂದ್ರದಲ್ಲಿ, ಅನುಭವಗಳನ್ನು ತನ್ನ ಪ್ರಜ್ಞೆಯೊಳಕ್ಕೆ ತಂದುಕೊಳ್ಳುವ ಕ್ರಮವೆ ರಸಾನುಭೂತಿ ಎನ್ನಬಹುದು. ಇದು ಒಂದು ರೀತಿಯಲ್ಲಿ ಲೋಕವಸ್ತುವಿನೊಂದಿಗೆ ಕವಿಗೊದಗುವ ತಾದಾತ್ಮಾ ನುಭವ. ಈ ಬಗೆಯ ತಾದಾತ್ಮ ದ ಮೂಲಕವೇ ಆತ ‘ಸತ್ಯ’ವನ್ನು ಗ್ರಹಿಸುವುದು. ‘ರಸಾನುಭೂತಿಯ ರಸಪಥವಲ್ಲದೆ ಸತ್ಯಕೆ ಗತಿ ಇಲ್ಲ!’ ‘ಸಕಲಾರಾಧನ ಸಾಧನ ಬೋಧನದನುಭವ ರಸ ತಾನಿಹುದಲ್ಲಿ, ‘ವೈಕುಂಠವಿದೆ ನಿಸರ್ಗದಲಿ’ ‘ತೆಗೆ ಜಡವೆಂಬುದೆ ಬರಿಸುಳ್ಳು, ‘ಚೈತನ್ಯವಲ್ಲದಿನ್ನಿಲ್ಲ ವಿಶ್ವದಲಿ’ ‘ಆವ ಗುಡಿಮಿಗಿಲು ಈ ಭುವನದೇವಾಲಯಕೆ?’ ‘ಉಪನಿಷತ್ತಿನ ಮಹಾಮಂತ್ರಾನುಭವಗಳುಂ ಹೃದ್ಗಮ್ಯವಿಲ್ಲಿ’ –ಈ ಕೆಲವು ನಿಸರ್ಗ ಸಂವಾದದ ಮೂಲಕ ಗೋಚರವಾಗುವ ಸತ್ಯಗಳು. ಕವಿ ನಿಸರ್ಗದೊಂದಿಗೆ ಪಡೆಯುವ ತಾದಾತ್ಮಾ ನುಭವದ ಬಗೆಯನ್ನು ಕುರಿತು ಕುವೆಂಪು ಕೊಡುವಷ್ಟು ವಿವರಗಳನ್ನು ಬಹುಶಃ ಕನ್ನಡದ ಬೇರಾವ ಕವಿಯೂ ಕೊಡುವುದಿಲ್ಲ. ಕೆಲವನ್ನು ಉಲ್ಲೇಖಿಸುವುದಾದರೆ:

ಉರಿಕಿಡಿದೆನು ಹಿಮಮಣಿಯಂತೆ (ಸಂ.ಕಾ. ಸಂ.೧ ಪು.೬೩೩)
ಹಸುರ್ಗಟ್ಟಿತು ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ (ಸಂ.ಕಾ. ಸಂ.೧ ಪು.೬೫೯)
ಕಣ್ ತುಳುಕಿತು ಎದೆ ನಲಿದುದು
ಅಸು ಹಿಗ್ಗಿತುಲ್ಲಸದಿ; ಮಿಂಚು ಹರಿದಂತೆ ನೆತ್ತರು ಚಿಮ್ಮಿ
ದೇಹದಲಿ, ತೇಜಸ್ವಿಯಾದೆ ನಾಂ ಸೂರ್ಯನಂತೆ (ಸಂ.ಕಾ. ಸಂ.೧ ಪು.೬೪೬)
ಹೃದಯ ಪ್ರಪಾತಕ್ಕೆ ಧುಮುಕುತಿದೆ ರಸದ ಧುನಿ
ಭಾವ ಜಲಪಾತದಿಂ! ಮೌನದ ಮಹಾಸ್ತೋತ್ರಂ
ಭೂಮ ಭವ್ಯ ಸೌಂದರ್ಯದಾರಾಧನೆಗೆ (ಸಂ.ಕಾ. ಸಂ.೧ ಪು.೭೦೬)
……………..
ಧ್ಯಾನಪ್ರಲಯಿತ ಕವಿ ತಾನಾದನ್
ಬೈಗಿನ ಬಾನ್ (ಸಂ.ಕಾ. ಸಂ.೧ ಪು.೬೮೭)

ಈ ಬಗೆಯ ಅನುಭವಗಳ ಹಿನ್ನಲೆಯಲ್ಲಿ ಕವಿಗೆ ಅನ್ನಿಸುತ್ತದೆ.

ಶಿವ ಶಿವಾ, ಕಣ್ದೆರೆದು
ಪಕೃತಿ ಸೌಂದರ್ಯಮಂ ಭಾವನೋಜ್ವಲವಾಗಿ
ನೋಡದಿಹ ಬಾಳೊಂದು ಬಾಳಲ್ಲ….
…….
ಭುವನ ಕವಿವರನ ಕವನವೀ ಸೃಷ್ಟಿ
ಭುವನ ಶಿಲ್ಪಿಯ ಚಿತ್ರಕೃತಿ; ಭುವನ ಗಾಯಕನ
ಸುಮಧುರ ಮಹಾಗಾನ! ಸವಿಯದಿರೆ, ನೋಡದಿರೆ,
ಕೇಳದಿರೆ, ಬದುಕಿದ್ದರೂ ನಾವು ಸತ್ತಂತೆ.
(ಸಂ.ಕಾ. ಸಂ.೧ ಪು.೬೪೭, ೬೪೮)

ಇದು ಕುವೆಂಪು ಪ್ರತಿಪಾದಿಸುವ ಸೌಂದರ್ಯಧರ್ಮ. ಸಾಂಸ್ಥಿಕ ಧರ್ಮದ ಸಂಕೇತಗಳನ್ನು ನಿರಾಕರಿಸಿ ಅದಕ್ಕೆ ಪರ್ಯಾಯವಾಗಿ, ಸೂಚಿಸುವ ನಿಸರ್ಗಪ್ರೀತಿಯ ಸೌಂದರ್ಯಧರ್ಮ. ಈ ಧರ್ಮದ ಹಾದಿಗೆ ಈ ಜಗತ್ತು ಬರಬೇಕು ಎನ್ನುವುದು ಕುವೆಂಪು ಅವರ ಕಾಳಜಿ. ಆದ್ದರಿಂದಲೇ

ಪೃಥ್ವಿಯಲಿ ಕ್ಲೇಶ ಕಷ್ಟಗಳೆಲ್ಲ ಕೊನೆಮುಟ್ಟಿ
ಸರ್ವರೂ ರಸದೃಷ್ಟರಾಗಿ, ದರ್ಶನ ಪಡೆದು
ಕಾವ್ಯದಾಸ್ವಾದನೆಗೆ, ಸೌಂದರ್ಯ ಸಾಧನೆಗೆ
ಕಲೆಯ ಆರಾಧನೆಗೆ ಮನಮೀಯುವಾ ಪುಣ್ಯ
ಸ್ವರ್ಗವೆಂದೈತರುವುದೋ ಕಾಣೆ! ಅದು
ಬರಿಯ ಕನಸೆಂದು ತೋರುತಿದೆ…. (ಸಂ.ಕಾ. ಸಂ.೧ ಪು.೬೪೯)

ಎಂದು ಕವಿ ಹಂಬಲಿಸುತ್ತಾರೆ. ಅದು ಕನಸೆಂದು ತೋರುತ್ತದೆ ಎಂದು ತಮ್ಮ ಕೊರಗನ್ನು ತೋಡಿಕೊಳ್ಳುತ್ತಾರೆ.

ಗಗನವನು ನೋಡು ಮೈ ನೀಲಿಗಟ್ಟುವವರೆಗೆ
ಕಡಲನೀಕ್ಷಿಸು ವಾರಿ ರಾಶಿ ಧಮನಿಗಳಲ್ಲಿ
ಧುಮ್ಮಿಕ್ಕಿ ಮೊರೆವನ್ನೆಗಂ. ಕಟ್ಟಿರುಳಲ್ಲಿ
ನೀನೆ ಕತ್ತಲೆಯಾಗಿ, ನಿನ್ನೊಳಗೆ ಮಿರುಮಿರುಗೆ
ಕೋಟಿ ಸಂಖ್ಯೆಯ ತಾರೆಯನ್ನೆಗಂ ಧ್ಯಾನಗೈ
ಕೇಳು, ಸುಗ್ಗಿಯ ಹಕ್ಕಿ ಕರೆಯೆ ಸಗ್ಗವ ಕೂಗಿ
ಮೆಯ್ಯ ನೆತ್ತರುಮೆಲ್ಲಮಿಂಚರದ ಹೊನಲಾಗಿ
ಸರ್ವ ಸೃಷ್ಟಿಯನೊಂದೆ ಮುಕ್ಕುಳಲಿ ಪಾನಗೈ! (ಸಂ.ಕಾ. ಸಂ.೧ ಪು.೪೬೩)

ಇದು ಕುವೆಂಪು ರಸಸಿದ್ಧಿಯ ಸ್ವರೂಪವನ್ನು ಕುರಿತು ಬರೆದ ಸಾನೆಟ್ಟಿನ ಪೂರ್ವಾರ್ಧ. ಇದು ಮೂಲತಃ ಕವಿ ತಮಗೆ ತಾವೆ ಹೇಳಿಕೊಂಡದ್ದು ಅಥವಾ ಆಶಿಸಿದ್ದು ಮತ್ತು ಕವಿ ಜೀವನದಲ್ಲಿ ಸಾಧಿಸಿದ್ದು.

ಆದರೆ ಕುವೆಂಪು ಬೇರೊಂದೆಡೆ ಹೇಳುವಂತೆ ‘ಗಿರಿವನ ಪ್ರೀತಿ ತಾಂ ದೈವ ಕೃಪೆದಲ್’ (ಶ್ರೀರಾ.ದ. ಶಿಲಾತಪಸ್ವಿನಿ, ಪಂ.೧೧೬ ಪು.೩೪)–ಗಿರಿವನಗಳನ್ನು ಪ್ರೀತಿಸುವ ರುಚಿಯೂ ದೇವರ ಕೃಪೆಯಿಂದ ದತ್ತವಾದದ್ದಲ್ಲವೆ–ಎಂಬುದು ಕುವೆಂಪು ಅವರ ನಂಬಿಕೆಯಾದರೂ ಈ ಸೌಂದರ್ಯಪ್ರಜ್ಞೆ ಕವಿಯಲ್ಲಿ ಮಹತ್ ಪ್ರಮಾಣದಲ್ಲಿ ಅಭಿವ್ಯಕ್ತವಾಗುತ್ತದೆಂಬುದು ನಿಜವಾದರೂ, ಅದು ಶ್ರೀಸಾಮಾನ್ಯರಿಂದ ಮೊದಲುಗೊಂಡು ಅಸಾಮಾನ್ಯರವರೆಗೂ ವಿವಿಧ ಸ್ತರಗಳಲ್ಲಿ ಹೇಗೆ ಅಭಿವ್ಯಕ್ತವಾಗಬಲ್ಲುದೆನ್ನುವುದನ್ನೂ ಕುವೆಂಪು ಗುರುತಿಸಿರುವ, ಚಿತ್ರಿಸಿರುವ ಮತ್ತು ಚಿಂತಿಸಿರುವ ಕ್ರಮವು ಗಮನಾರ್ಹವಾಗಿದೆ.

ಮನುಷ್ಯನ ಸೌಂದರ್ಯಪ್ರಜ್ಞೆಯ ವಿಕಾಸಕ್ಕೆ ಸಹಸ್ರಾರು ವರ್ಷಗಳ ಚರಿತ್ರೆಯಿದೆ. ಲಾಲಿತ್ಯದಿಂದ ಹಿಡಿದು ಭವ್ಯತೆಯವರೆಗೂ ಈ ಸೌಂದರ್ಯಾನುಭವವನ್ನು ಪಡೆದವರು ಕವಿಯಂಥ ತೀವ್ರಸಂವೇದನಾಶೀಲವಾದ ವ್ಯಕ್ತಿತ್ವಗಳು ಮಾತ್ರವಲ್ಲ, ದೈನಂದಿನ ಸರಳ ಸಾಧಾರಣವಾದ ನೆಲೆಯ ಅತ್ಯಂತ ಸಾಮಾನ್ಯರು ಕೂಡಾ. ಕವಿಗಾದರೋ ಅಂಥ ಅನುಭವವನ್ನು ಪಡೆದದ್ದಕ್ಕೆ ಅಭಿವ್ಯಕ್ತಿಯ ಸಾಕ್ಷಿ ಇರುತ್ತದೆ, ಆದರೆ ಶ್ರೀಸಾಮಾನ್ಯರಿಗೆ ಅದಿರುವುದಿಲ್ಲ. ಅಷ್ಟೇ ವ್ಯತ್ಯಾಸ. ಕುವೆಂಪು ಅವರ ಕಾದಂಬರಿಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ಪರಿಶೀಲಿಸಬಹುದು:

ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಒಂದು ಸಂದರ್ಭ: ಮಳೆ ತೊಯ್ದ ಮಲೆನಾಡಿನ ಮೇಲೆ ಮೂಡಿದ ಎಳೆಬಿಸಿಲು, ಸುಬ್ಬಣ್ಣ ಹೆಗ್ಗಡೆಯವರ ಮೈಗೆ ತಾಗಿದಾಗ, ‘ಅವರ ಎಣ್ಣೆಗಪ್ಪಿನ ಒಡಲಿಗೆ ಬೆಚ್ಚನೆ ಬಿಸಿಲು ಮುತ್ತಿಟ್ಟೊಡನೆ ಸುಪ್ತಚಿತ್ತದ ಆಳದಲ್ಲಿ ಗುಪ್ತವಾಗಿದ್ದ ನೂರಾರು ಹೋದ ಕಾಲದ ಮುದ್ದಾಟಗಳ ನೆನಹಿನ ಸೊಗಸು ಜಾಗ್ರತ್ ಚಿತ್ತದ ಸರೋವರದಲ್ಲಿ ಪುಲಕಿಸಿತು. ಏಕೋ ಏನೊ ಅವರಿಗೆ ಗೊತ್ತಾಗಲಿಲ್ಲ. ಅಂತೂ ಮೈಗೆ ಹಿತವಾಯಿತು; ಮನಸ್ಸಿಗೂ ಸಂತೋಷವಾಯಿತು’ (ಮ.ಮ. ಪು.೪೫).

ಒಂದು ಮುಂಜಾನೆಯ ಹೊಂಬಿಸಿಲಿನ ಸ್ಪರ್ಶದಿಂದ, ಅನಕ್ಷರಸ್ಥರೂ ಸರಳ ಸಾಧಾರಣ ಜಮೀನುದಾರರೂ ಆದ ಸುಬ್ಬಣ್ಣ ಹೆಗ್ಗಡೆಯವರ ಮನಸ್ಸಿನಲ್ಲಿ ಉಂಟಾದ ಸಂತೋಷಾನುಭವಕ್ಕೆ ಕಾರಣವೇನಿರಬಹುದು ಎನ್ನುವುದನ್ನು ಕುರಿತು ನಿರೂಪಕರಾದ ಕುವೆಂಪು ಹೀಗೆ ಹೇಳುತ್ತಾರೆ:

ಮನುಷ್ಯನು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚಾಗಿಯೆ ಅವನ ಅಂತಃಪ್ರಕೃತಿ ಸೃಷ್ಟಿಯ ಬಹಿಃಪ್ರಕೃತಿಗೆ ಅನುಯಾಯಿಯಾಗಿರುತ್ತದೆ. ಆತನ ಆತ್ಮಕೋಶವು ಬಹುಜನ್ಮಗಳ ಸಂಸ್ಕಾರಗಳಿಂದ ತುಂಬಿರುವಂತೆ ಆತನ ಅನ್ನಮಯ ಕೋಶವೂ ಪೃಥ್ವಿಯಲ್ಲಿ ಪ್ರಾಣೋತ್ಪತ್ತಿಯಾದಂದಿನಿಂದ ಮೊದಲುಗೊಂಡು ಇಂದಿನವರೆಗೆ ಜೀವರು ಕೈಕೊಂಡ ನಾನಾ ಪ್ರಯೋಗದ ನಾನಾ ಕಷ್ಟ ಸಂಕಟಗಳ ನಾನಾ ಸುಖ ಸಂತೋಷಗಳ ಮಹಾ ಸಾಹಸ ಯಾತ್ರೆಯ ಸಮಗ್ರ ಪರಿಣಾಮ ಮುದ್ರೆಯನ್ನೂ ಅಸ್ಮ ತಿ ರೂಪದಲ್ಲಿ ಪಡೆದಿರುತ್ತದೆ. ಅಪಾರ್ಥಿವ ಮತ್ತು ಪಾರ್ಥಿವ ಸಂಸ್ಕಾರ ಕೋಶಗಳೆರಡೂ ನಮ್ಮ ಬಾಳ್ವೆಯ ಹೃದಯದ ಇಕ್ಕೆಲಗಳಲ್ಲಿ ಶ್ವಾಸಕೋಶಗಳಂತಿವೆ. ಅಪ್ರಜ್ಞಾಸೀಮೆಯಲ್ಲಿರುವ ಸಂಸ್ಕಾರಗಳಲ್ಲಿ ಯಾವುದನ್ನಾದರೂ ಮುಟ್ಟಿ ಎಚ್ಚರಿಸುವಂತಹ ಸನ್ನಿವೇಶ ಒದಗಿದರೆ ನಮಗೆ ಅಹೇತುಕ ಆನಂದವೊ ಅಕಾರಣ ಸಂಕಟವೊ ಸಂಭವಿಸಿದಂತಾಗುತ್ತದೆ. ಅಲ್ಪಕಾರಣದಿಂದ ಮಹತ್ತಾದ ಅನುಭವ ಉಂಟಾದಂತೆ ಭಾಸವಾಗಿ ಆಶ್ಚರ್ಯವಾಗುತ್ತದೆ. ಎಳೆ ಬಿಸಿಲಿನಲ್ಲಿ ಹಸುರು ಗರಿಕೆಯ ಕುಡಿಯಲ್ಲಿ ಮಿರುಗುವ ದುಂಡುಮುತ್ತಿನ ತೆರದ ಇಬ್ಬನಿ, ಪ್ರಾಣದ ಪ್ರಾಚೀನಾನುಭವದ ಮಹಾಸಾಗರದ ಅಸ್ಮ ತಿಯನ್ನು ಕೆರಳಿಸಿ, ಸಮುದ್ರದರ್ಶನದ ಭೂಮಾನುಭೂತಿಯನ್ನುಂಟು ಮಾಡಬಹುದು. ಕಾಡಿನಂಚಿನಲ್ಲಿ, ಬೈಗುಪ್ಪಿನ ಮಬ್ಬಿನಲ್ಲಿ, ಹೆಮ್ಮರದ ದಿಂಡಿನಲ್ಲಿರುವ ಮರಕುಟುಕನ ಗೂಡಿನ ಪೊಟ್ಟರೆ, ಅತ್ಯಂತ ಪೂರ್ವಕಾಲದ ಬಾಳಿನ ಯಾವುದೋ ಒಂದು ಕಗ್ಗವಿಯನ್ನೊ ಪೆಡಂಭೂತದ ಕಣ್ಣನ್ನೊ ಅಸ್ಮ ತಿಗೆ ತಂದು, ಅನಿರ್ವಚನೀಯವಾದ ಭೀತಿಯನ್ನುಂಟುಮಾಡಬಹುದು. ಪರ್ವತಾರಣ್ಯಗಳ ಭಯಂಕರ ಪ್ರಕೃತಿಯ ಮಧ್ಯೆ ವಾಸ ಮಾಡುವವರಿಗೆ ಅರ್ಥವಾಗದ, ಆದ್ದರಿಂದ ಅರ್ಥವಿಲ್ಲದ, ಅನುಭವಗಳು ಪಿಶಾಚಿಗಳಂತೆಯೊ ದೆಯ್ಯದ್ಯಾವರುಗಳಂತೆಯೊ ತೋರುತ್ತದೆ. ಕತ್ತಲೆಯಲ್ಲಿ ಆಕಾಶಕ್ಕೆದುರಾಗಿ ಚಾಚಿರುವ ಭೀಮಾಕಾರದ ಕೋಡುಗಲ್ಲಿನಲ್ಲಿ ಪ್ರಾಚೀನಾನುಭವ ಸಮಷ್ಟಿರೂಪದ ಅಸ್ಮ ತಿ ಆವಿರ್ಭಾವವಾಯಿ ತೆಂದರೆ ಬ್ರಹ್ಮರಾಕ್ಷಸ ದರ್ಶನವಾಗುವುದರಲ್ಲಿ ಆಶ್ಚರ್ಯವೇನಿದೆ? ಕಬ್ಬಿಣದ ಪೆಟ್ಟಿಗೆಯ ಖಜಾನೆಯನ್ನು ತೆರೆಯುವುದಕ್ಕೆ ಸಣ್ಣ ಬೀಗದ ಕೈ ಸಾಕಾಗುವಂತೆ, ಅಸ್ಮ ತಿ ಮಹದೈಶ್ವರ್ಯವನ್ನು ಕೆರಳಿಸಲು ಅತ್ಯಲ್ಪ ಕಾರಣಗಳೂ ಸಾಕಾಗುತ್ತವೆ.

ಮಳೆತೊಯ್ದ ಮಲೆನಾಡಿನ ಮೇಲೆ ಮೂಡಿದೆಳ ಬಿಸಿಲಿಗೆ ಮೈಯೊಡ್ಡಿದ ಸುಬ್ಬಣ್ಣ ಹೆಗ್ಗಡೆಯವರಿಗೆ ಸಂಭವಿಸಿದ ಸಂತೋಷಕ್ಕೆ ಬಹುಮಟ್ಟಿಗೆ ಕಾರಣವಾಗಿತ್ತು ಅಸ್ಮ ತಿ. ಯಾವ ಯಾವ ಕಾಲದಲ್ಲಿ ಯಾವ ಯಾವ ರೂಪದಲ್ಲಿ, ಯಾವ ಯಾವ ಸನ್ನಿವೇಶದಲ್ಲಿ, ಯಾವ ಸಾಗರತೀರದಲ್ಲಿ, ಯಾವ ಪರ್ವತ ಶಿಖರಗಳಲ್ಲಿ, ಯಾವ ಅರಣ್ಯಕುಂಜ ಸೀಮೆಯಲ್ಲಿ ಅಂತಹ ಸೂರ್ಯೋದಯದ ಸೊಂಪನ್ನು ಹಿಂದೆ ಎನಿತು ಸಾರಿ ಅನುಭವಿಸಿದ್ದರೋ ಏನೋ? ಸಂಸ್ಕಾರಕೋಶದ ಖಜಾನೆಗೆ ಬೀಗದ ಕೈ ಮಾತ್ರವಾಗಿತ್ತು ಆವೊತ್ತಿನ ಸೂರ್ಯೋದಯ!
(ಮ.ಮ. ಪು.೪೫-೪೬)

ನಿಸರ್ಗದ ಸಾನಿಧ್ಯ ಸಂಪರ್ಕಗಳ ಹೊತ್ತಿನಲ್ಲಿ, ವ್ಯಕ್ತಿಯಾದವನು ತನಗರಿಯದಿದ್ದರೂ ಒಂದು ಬಗೆಯ ಪುಲಕ ಸಂಭ್ರಮಗಳ ಮೂಲಕ ಆ ಸಂದರ್ಭಕ್ಕೆ ಸ್ಪಂದಿಸುವ ಪ್ರಕ್ರಿಯೆಯನ್ನು, ಮನಸ್‌ಶಾಸ್ತ್ರಜ್ಞನಾದ ಸಿ.ಜೆ. ಯೂಂಗ್, ಮತ್ತು ಭೂಮಾನುಭೂತಿಯನ್ನು ಕುರಿತು ಚಿಂತಿಸಿದ ರುಡಾಲ್ಫಾ ಓಟೋ ಅವರ ವಿಚಾರಗಳ ಹಾಗೂ ಭಾರತೀಯ ತತ್ವಶಾಸ್ತ್ರವು ಪ್ರತಿಪಾದಿಸುವ ಜನ್ಮಾಂತರ ಸಂಸ್ಕಾರಗಳ ಹಿನ್ನೆಲೆಯಲ್ಲಿ ಇಡೀ ಮನುಕುಲದ ಸೌಂದರ್ಯಪ್ರಜ್ಞೆಯ ವಿಕಾಸದ ಚರಿತ್ರೆಯ ಅರಿವಿನಿಂದ ಕುವೆಂಪು ವ್ಯಾಖ್ಯಾನಿಸಿರುವ ಈ ಕ್ರಮವು ಅದ್ಭುತವಾಗಿದೆ.

ಸುಬ್ಬಣ್ಣ ಹೆಗ್ಗಡೆಯವರಿಗೆ ಪ್ರತಿದಿನದ ಸೂರ್ಯೋದಯದ ಸಂದರ್ಭವೂ, ಈ ಬಗೆಯ ಪುಲಕ-ಸಂಭ್ರಮವನ್ನು ತರುವಂಥದಾಗಿತ್ತೆಂದೇನೂ ಕುವೆಂಪು ಅವರು ಹೇಳುತ್ತಿಲ್ಲ. ಅದು ಯಾವತ್ತೋ ಒಂದು ದಿನ ತೀರಾ ಆಕಸ್ಮಿಕವಾಗಿ ಆದ ಅನುಭವ. ಇದು ಇಂಥ ಅನುಭವದ ಒಂದು ಸಾಧ್ಯತೆಯ ನಿದರ್ಶನ ಅಷ್ಟೆ. ಜಗತ್ತಿನ ಬಹುಜನರ ಪ್ರಜ್ಞೆ ಯಾವ ನಿಸರ್ಗದ ಚೆಲುವಿನ ವ್ಯಾಪಾರಕ್ಕೂ ಸ್ಪಂದಿಸದೆ ತನ್ನ ಸ್ತರದಲ್ಲಿ ತಾನು ಇರುತ್ತದೆ ಎಂಬುದನ್ನು ಕುವೆಂಪು ಗುರುತಿಸದೆ ಇಲ್ಲ. ಕೋಣೂರಿನ ಅಡಕೆತೋಟದ ಕೂಲಿಯಾಳುಗಳು ಕೆಲಸಗಳಲ್ಲಿ ತೊಡಗಿಕೊಂಡ ಪರಿಯನ್ನು ಕುರಿತು:

ಅವರಲ್ಲಿ ಯಾರ ಪ್ರಜ್ಞೆಯೂ ಸುತ್ತಣ ನಿಸರ್ಗಸೌಂದರ್ಯಕ್ಕೆ ಒಂದಿನಿತಾದರೂ ಎಚ್ಚತ್ತಿರಲಿಲ್ಲ. ಅಡಕೆ ಮರದ ಪೊಟರೆಗಳಿಂದ ಹಾರುವ ಗಿಳಿಗಳ ಉಲಿಹ ಅವರ ದೈಹಿಕವಾದ ಕಿವಿಗಳಿಗೆ ಅನಿವಾರ್ಯವಾಗಿ ಕೇಳುತ್ತಿದ್ದರೂ ಅವರ ಮನಸ್ಸು ಅದನ್ನು ಆಲಿಸುವ ಗೋಜಿಗೂ ಹೋಗುತ್ತಿರಲಿಲ್ಲ; ಇನ್ನು ಗ್ರಹಿಸಿ ಸವಿಯುವ ಮಾತೆಲ್ಲಿ? ಹಿಂದಿನ ದಿನ ಸಂಜೆಯ ಮಳೆಯಲ್ಲಿ ತೊಯ್ದು ತೊಳೆದಿದ್ದ ಲಕ್ಷ ಲಕ್ಷ ವಿವಿಧ ವರ್ಣಚ್ಛಾಯೆಯ ಕಾಡಿನ ತೋಟದ ಅಡಕೆಯ ಬಾಳೆಯ ಎಲೆ ಹಸುರನ್ನು ಅವರ ಕಣ್ಣು ಅನಿವಾರ್ಯವಾಗಿ ನೋಡುತ್ತಿದ್ದರೂ, ಅದನ್ನು ಕಾಣುವ ಮಟ್ಟಕ್ಕೆ ಅವರ ಗಮನ ಒಂದಿನಿತೂ ಬೆಳೆದಿರಲಿಲ್ಲ, ಸೊಪ್ಪು ಮೇಯುವ ಪ್ರಾಣಿಯ ಪ್ರಜ್ಞೆಯಂತೆ
(ಮ.ಮ. ಪು.೧೧೦)

ಈ ಉಕ್ತಿಯಲ್ಲಿ, ಜಗತ್ತಿನ ಚೆಲುವನ್ನು ‘ನೋಡು’ತ್ತಿದ್ದರೂ, ಅದನ್ನು ‘ಕಾಣುವ’ ಮಟ್ಟಕ್ಕೆ ಪ್ರಜ್ಞೆ ಇನ್ನೂ ‘ಬೆಳೆದಿರ’ದ ವ್ಯಕ್ತಿಗಳ ಮನಃಸ್ಥಿತಿಯನ್ನು ಕುವೆಂಪು ವರ್ಣಿಸಿದ್ದಾರೆ. ಚೆಲುವನ್ನು ಸುಮ್ಮನೆ ಅದು ಅಲ್ಲಿದೆ ಎಂದು ‘ನೋಡು’ವವರೇ ಹೆಚ್ಚು, ‘ಕಾಣು’ವವರೇ ಕಡಮೆ. ಹೀಗೆ ಚೆಲುವನ್ನು ಕಾಣುವುದು ಎಂದರೆ ಅದನ್ನು ಒಂದು ರೀತಿಯಲ್ಲಿ ನಮ್ಮ ವಿಶೇಷ ಅರಿವಿಗೆ ತಂದುಕೊಳ್ಳುವುದು ಎಂದು ಅರ್ಥ. ಈ ಬಗೆಯ ತಟಸ್ಥಪ್ರಜ್ಞೆಯ ಸ್ಥಿತಿಯನ್ನು ಕುವೆಂಪು ಮತ್ತೆ–ಇದೇ ಕಾದಂಬರಿಯಲ್ಲಿ ಬೇರೊಂದೆಡೆ ಹೀಗೆ ಚಿತ್ರಿಸಿದ್ದಾರೆ: ದೊಳ್ಳ ಎಂಬ ಕೆಲಸದ ಹುಡುಗ, ಪುಡೀಸಾಬರಿಂದ ಪಡೆದುಕೊಂಡಿದ್ದ ಹುರಿಗಡಲೆಯನ್ನು ಅಗಿದು ತಿನ್ನುತ್ತಿದ್ದ ರೀತಿ ಹೇಗಿದ್ದಿತೆಂದರೆ–

ಅವನ ಪ್ರಜ್ಞೆಯ ಬಹುಪಾಲು ಅವನು ಅಗಿಯುತ್ತಿದ್ದ ಕಡಲೆಯ ರುಚಿಯ ಆಸ್ವಾದನೆಯಲ್ಲಿಯೆ ಮಗ್ನವಾಗಿತ್ತು. ಕಾಡಿನ ಸೌಂದರ್ಯವಾಗಲಿ, ಭಯಂಕರತೆ ಯಾಗಲಿ, ಹಕ್ಕಿಗಳ ಉಲಿಹವಾಗಲಿ ಹೂವುಗಳ ಬಣ್ಣವಾಗಲಿ, ಹಸುರಿನಲ್ಲಿ ಸೋಸಿ ಬರುತ್ತಿದ್ದ ಪೂರ್ವಾಹ್ನದ ಬಿಸಿಲಿನ ಬೆಚ್ಚನೆಯ ಸುಖವಾಗಲಿ, ಆಕಾಶದಲ್ಲಿ ತೇಲುತ್ತಿದ್ದ ಮುಮ್ಮಳೆಗಾಲದ ಮೋಡಗಳ ಚೆಲುವಾಗಲಿ ಯಾವುದಕ್ಕೂ ಅವನ ಒಳಮನಸ್ಸಿನ ವಲಯಕ್ಕೆ ಪ್ರಜ್ಞಾಪೂರ್ವಕವಾದ ಪ್ರವೇಶವಿರಲಿಲ್ಲ….
(ಮ.ಮ. ಪು.೩೬೭).

ಇದೇ ಸಾಮಾಜಿಕ ಸ್ತರಕ್ಕೆ ಸೇರಿದ ಹೊಲೆಯರ ಹುಡುಗಿ ತಿಮ್ಮಿಯ ಪಾತ್ರದಲ್ಲಿ ಇನ್ನೂ ಮುಂದುವರಿದ ಒಂದು ಮನಃಸ್ಥಿತಿಯನ್ನು ಅಥವಾ ಪ್ರಜ್ಞಾವಿಶೇಷವನ್ನು, ಸೂರ್ಯೋದಯದ ಸಂದರ್ಭವೊಂದಕ್ಕೆ ತಿಮ್ಮಿ ಪ್ರತಿಕ್ರಿಯಿಸಿದ ರೀತಿಯ ವರ್ಣನೆಯ ಮೂಲಕ ಕುವೆಂಪು ಚಿತ್ರಿಸುವ ರೀತಿ ಹೀಗಿದೆ:

ಇಬ್ಬರೂ ಪರಿಚಿತರಾರಿಗೂ ಕಾಣಿಸದಂತೆ ಕಾಡಿನ ಒಳದಾರಿಯಲ್ಲಿ ಹೊರಡಲು ಸಿದ್ಧರಾಗಿ ಇಳಿಯತೊಡಗಿದ್ದರು. ಹತ್ತಿಪ್ಪತ್ತು ಮಾರು ಹೋಗುವದರಲ್ಲಿಯೆ ಮತ್ತೆ ಅದ್ಭುತ ದರ್ಶನವಾದಂತೆ ಕೂಗಿಕೊಂಡಳು, ಗುತ್ತಿಗೆ ದಿಗಿಲಾಗುವಂತೆ. ಅಯ್ಯೋ ಅಯ್ಯೋ! ಬಾವ, ಬಾವ, ಬಾವ! ಅಲ್ನೋಡು ಅಲ್ನೋಡು…. ಮುಂದೆ ಮಾತು ನಿಂತು ಕೈಮುಗಿದುಕೊಂಡು ಭಾವಪರವಶಳಾಗಿ ನಿಂತುಬಿಟ್ಟಳು.

ಪೂರ್ವ ದಿಗಂತದಿಂದ ಕೆಂಡದುಂಡೆಯಾಗಿ ಕಿರಣವಿಲ್ಲದ ಸೂರ್ಯ ಮೇಲೇರುತ್ತಿದ್ದನು. ಕಣಿವೆಗಳನ್ನು ತುಂಬಿದ್ದ ಮಂಜಿನ ನೊರೆ ನೊರೆಯ ಸಮುದ್ರ, ಹಸಿರುದ್ವೀಪಗಳಂತೆ ನಡುನಡುವೆ ತಲೆಯೆತ್ತಿದ್ದ ಮಲೆ ನೆತ್ತಿಗಳು, ಮೂಡುಬಾನಿನಲ್ಲಿ ಸಾಗುತ್ತಿದ್ದ ವರ್ಣಲೀಲೆ, ಇವುಗಳ ಸುವಿಸ್ತೃತ ಭಿತ್ತಿ ವೇದಿಕೆಯಲ್ಲಿ ಆವಿರ್ಭವಿಸುತ್ತಿದ್ದ ಚೈತ್ರದ ರವಿಯ ಸೌಂದರ್ಯವು ತಿಮ್ಮಿಯಂತಹಳಿಗೂ ಹೃದಯದಲ್ಲಿ ಭೂಮಾನುಭೂತಿ ಸಂಚಾರವಾಗುವಂತೆ ಮಾಡಿತ್ತು (ಮ.ಮ. ಪು.೨೧೭).

ಇದೇ ಕಾದಂಬರಿಯಲ್ಲಿ ಜಮೀನ್ದಾರರೂ ವಯೋವೃದ್ಧರೂ ಆದ ಸುಬ್ಬಣ್ಣ ಹೆಗ್ಗಡೆಯವರು ಇಂಥದೇ ಸೂರ್ಯೋದಯದ ಅಥವಾ ‘ಮಳೆ ತೊಯ್ದ ಮಲೆನಾಡಿನ ಮೇಲೆ ಮೂಡಿದೆಳಬಿಸಿಲಿ’ನ ಸ್ಪರ್ಶದಿಂದ ಪಡೆದ ಅನುಭವದೊಂದಿಗೆ, ತಿಮ್ಮಿಯ ಪ್ರತಿಕ್ರಿಯೆಯನ್ನು ಹೋಲಿಸಿ ನೋಡಬಹುದು. ಸುಬ್ಬಣ್ಣಹೆಗ್ಗಡೆಯವರಿಗೆ, ಆದದ್ದು ಅವರು ಯಾಕೆ ಏನು ಎಂದು ಅರಿಯದಿದ್ದರೂ ಮನಸ್ಸಿಗೆ ಆದ ಒಂದು ಬಗೆಯ ಹಿತವಾದ ಅನುಭವ; ಆದರೆ ತಿಮ್ಮಿಯ ಪ್ರತಿಕ್ರಿಯೆ-ಸೂರ್ಯೋದಯದಂಥ ಘಟನೆಗೆ–ಮುಗ್ಧವಾದ ಹಾಗೂ ಮುಕ್ತವಾದ ಸಂಭ್ರಮೋದ್ಗಾರಗಳ ಮೂಲಕ ಅಭಿವ್ಯಕ್ತವಾದ ಸೌಂದರ್ಯಾನುಭವದ ಅತ್ಯುನ್ನತರೂಪದ ಭೂಮಾನುಭೂತಿಯ ಸಂಚಾರ.

‘ಪ್ರಾಣಿಸದೃಶ ಸಂಸ್ಕಾರದ ಅಬುದ್ಧಿಜೀವಿ’ (ಮ.ಮ. ಪು.೫೫೫)ಯಾದ ತಿಮ್ಮಿಯಂಥ ವಳೂ ಹೀಗೆ ನಿಸರ್ಗಕ್ಕೆ ಸ್ಪಂದಿಸುವಾಗ, ಅತ್ಯಂತ ಸುಸಂಸ್ಕೃತ ವ್ಯಕ್ತಿಯಾದ ಹಾಗೂ ಸಹಜವಾಗಿಯೇ ಗಿರಿವನಪ್ರಿಯನಾದ ಮತ್ತು ಸೌಂದರ್ಯಪ್ರಜ್ಞೆ ತಕ್ಕ ಪ್ರಮಾಣದಲ್ಲಿ ಜಾಗ್ರತವಾದ, ‘ಕಾನೂರು ಹೆಗ್ಗಡಿತಿ’ಯ ಹೂವಯ್ಯನ ಪಾತ್ರದಲ್ಲಿ ಸೌಂದರ್ಯಾನುಭವದ ಸ್ವರೂಪ ಹೇಗಿರಬಹುದೆಂಬುನ್ನು ಕುವೆಂಪು ಚಿತ್ರಿಸಿರುವ ಪರಿಯನ್ನು ಪ್ರತ್ಯೇಕವಾಗಿಯೇ ಗುರುತಿಸಬಹುದು. ಕುವೆಂಪು ಅವರೇ ಹೇಳುವಂತೆ ಹೂವಯ್ಯ ‘ಭಾವಜೀವಿ’. ಖಗೋಲ ವಿಜ್ಞಾನದ ಪರಿಚಯದಿಂದ, ಜಗತ್ತಿನ ‘ಅಮೇಯತೆ’ಯ ಕಲ್ಪನೆಯ ಹಿನ್ನೆಲೆಯಲ್ಲಿ, ಮನುಷ್ಯನ ಅಲ್ಪತೆಯನ್ನು ಪರಿಭಾವಿಸುವ ಹೂವಯ್ಯ, ಇಡೀ ಪರಿಸರದಲ್ಲಿ ಏಕಾಂಗಿಯಾಗಿ ಒಂದು ರೀತಿಯಲ್ಲಿ ‘ಪರಕೀಯ’ನಾಗಿ ನಿಲ್ಲುತ್ತಾನೆ. ಅವನ ನಿಸರ್ಗಪ್ರೇಮ, ಈ ಕಾದಂಬರಿಯ ಇನ್ನಿತರರು ತಮ್ಮ ಸುತ್ತಣ ಅರಣ್ಯದೊಂದಿಗೆ ಹೊಂದಿರುವ ಸಂಬಂಧಗಳಿಂದ ಭಿನ್ನವಾದದ್ದು ಮತ್ತು ಉಳಿದವರ ಪಾಲಿಗೆ ಅರ್ಥವಾಗದ್ದು. ನಿಸರ್ಗ ಸಾನಿಧ್ಯದ ಸೌಂದರ್ಯ ಭವ್ಯತೆಗಳ ಎದುರು ಹೂವಯ್ಯ ‘ಭಾವಸಮಾಧಿಗೆ’ ಹೋಗುವುದಾಗಲಿ, ಕಣ್ಣೀರು ಸುರಿಸುವುದಾಗಲಿ, ಸುತ್ತಣವರ ಪಾಲಿಗೆ ವಿಲಕ್ಷಣವಾದ ನಡವಳಿಕೆಗಳಂತೆ ತೋರುತ್ತವೆಯೇ ಹೊರತು ಅದೊಂದು ವಿಶೇಷಾನುಭವ ಸ್ಥಿತಿಯ ಲಕ್ಷಣವೆಂದು ಅನ್ನಿಸುವುದೇ ಇಲ್ಲ. ಮುತ್ತಳ್ಳಿಯಿಂದ ಕಾನೂರಿಗೆ ಹೂವಯ್ಯನು ತನ್ನ ತಾಯಿ, ತಂಗಿ ಮತ್ತು ಕಿರಿಯ ತಮ್ಮನ ಸಹಿತ, ಎತ್ತಿನ ಬಂಡಿಯಲ್ಲಿ ಬರುತ್ತಿರುವಾಗ ನಡುದಾರಿಯಲ್ಲಿ, ಮುಂಗಾರುಮಳೆ ಪ್ರಾರಂಭವಾಗಿ, ಅದರ ‘ಸೌಂದರ್ಯ ರೌದ್ರಗಳ ಭೀಷಣ ಭವ್ಯತೆಯನ್ನು ನೋಡಿ’ ಹೂವಯ್ಯನ ಮನಸ್ಸು ಒಂದು ಬಗೆಯ ಭಾವಭೂಮಿಕೆಗೆ ಏರುತ್ತದೆ. ಅವನೊಂದು ನಿಷ್ಪಂದಮಾನ ಸ್ಥಿತಿಯಲ್ಲಿ ಕೂತು ಕಂಬನಿಗರೆಯುತ್ತಾನೆ. ಇದು ನಿಸರ್ಗದೊಂದಿಗೆ, ಜಾಗ್ರತವಾದ ಪ್ರಜ್ಞೆಯೊಂದರ ಅನುಸಂಧಾನದ ಚರಮಾವಸ್ಥೆ. ಇದನ್ನು ಕುರಿತು ಸಾಮಾನ್ಯಜನ ವಾಖ್ಯಾನಿಸಿದ್ದು, ‘ಹೂವಯ್ಯಗೌಡರಿಗೆ ಮೈಮೇಲೆ ಬಂದಿತ್ತು’! ಎಂದು (ಕಾ.ಹೆ. ಪು.೧೭೯). ಈ ಸ್ಥಿತಿ ಇನ್ನೂ ಮುಂದುವರಿದು ನಿಸರ್ಗದೊಂದಿಗೆ ಒಂದು ಬಗೆಯ ಅದ್ವೆ ತಾವಸ್ಥೆಯನ್ನು ತಲುಪುವ ಹಂತವೊಂದಿದೆ. ಅದು ಕೇವಲ ಸೌಂದರ್ಯಾನುಭವದ ಹಂತವಲ್ಲ, ಅದೊಂದು ಆಧ್ಯಾತ್ಮಿಕ ಚಿತ್ತಸ್ಥಿತಿ. ಕಾನೂರು ಹೆಗ್ಗಡಿತಿ ಕಾದಂಬರಿಯಲ್ಲಿ ಒಂದೆಡೆ ವಿವಿಕ್ತ ಪ್ರದೇಶದ ಬಂಡೆಯೊಂದರ ಮೇಲೆ ಧ್ಯಾನಸ್ಥನಾಗಿ ಕುಳಿತ ಹೂವಯ್ಯನ ವರ್ಣನೆ ಹೀಗಿದೆ:

ಹೂವಯ್ಯ ಕಡೆದಿಟ್ಟ ಕಲ್ಲಿನಂತೆ ಕುಳಿತಿದ್ದನು. ಉಸಿರಾಡುವುದೂ ಊಹಾಮಾತ್ರವಾಗಿ ಪರಿಣಮಿಸಿತ್ತು. ಆತನ ಆತ್ಮ ಭೂರ್ಭುವಸ್ಸುವರ್ಲೋಕಗಳನ್ನು ವ್ಯಾಪಿಸಿ ನುಂಗಿ ಜೀರ್ಣಿಸಿಕೊಂಡು ದಾಟಿ ಅನಿರ್ವಚನೀಯವೂ ಅಪ್ರಮೇಯವೂ ಆದ ಅನಂತದಲ್ಲಿ ವಿಹರಿಸುತ್ತಿತ್ತು. ಧ್ಯಾನಕ್ಕೆ ಆಳಅಗಲಗಳ ಪವಣಿರುವಂತೆ ತೋರುತ್ತಿರಲಿಲ್ಲ. ಅವನು ಅಲ್ಲಿ ಬೀಸುವ ಗಾಳಿಯಾಗಿದ್ದನು, ಅಲ್ಲಿ ಬೆಳೆದಿದ್ದ ಗಿಡ ಮರ ಬಳ್ಳಿಯಾಗಿದ್ದನು; ಕಾಡಾಗಿದ್ದನು, ಮರ್ಮರನಾದವಾಗಿದ್ದನು, ಅಲ್ಲಿಯ ಮೌನವಾಗಿದ್ದನು; ದೂರದ ಆಕಾಶವಾಗಿದ್ದನು; ಹತ್ತಿರದ ಭೂಮಿಯಾಗಿ ದ್ದನು. ಅಷ್ಟೇ ಅಲ್ಲ; ಹೂವಯ್ಯನಿಗೆ ತನ್ನ ವ್ಯಕ್ತಿತ್ವವೂ ನಿರಾಕಾರವಾಗುತ್ತಿದ್ದಂತೆ ಭಾಸವಾಯಿತು (ಕಾ.ಹೆ. ಪು.೩೬೧)

ಹೂವಯ್ಯನ ಈ ‘ನಿಸರ್ಗ-ಅನುಭಾವ’, ಮನಃಸ್ಥಿತಿಯೊಂದಿಗೆ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಹೊಲೆಯರ ಗುತ್ತಿಯ ವ್ಯಕ್ತಿತ್ವವನ್ನು ಕುವೆಂಪು ವರ್ಣಿಸಿರುವ ರೀತಿಯನ್ನು ಹೋಲಿಸಿ ನೋಡಬಹುದು:

ನಾಗರಿಕರಿಗೆ ಭೀಕರವಾಗಿ ಕಾಣುವ ವರ್ಷಾಕಾಲದ ಭಯಂಕರ ಪರ್ವತಾರಣ್ಯದ ರುದ್ರಪ್ರಕೃತಿ ಅವನಿಗೆ ಬಹುಕಾಲದ ಪರಿಚಯದಿಂದ ಸಾಧಾರಣವಾಗಿತ್ತು. ಅವನೂ ಪ್ರಕೃತಿಯ ಒಂದಂಗವಾಗಿದ್ದನುಬೆಟ್ಟದಲ್ಲಿ ಬಂಡೆಯಂತೆ, ಕಾಡಿನಲ್ಲಿ ಮರದಂತೆ ಅದರ ಒಂದಂಗವಾಗಿದ್ದನುಯಾವ ಆಲೋಚನೆಯನ್ನೂ ಮಾಡದೆ, ಶೂನ್ಯಮನಸ್ಸಿನಿಂದ ತೊರೆಯ ಮೊರೆಯನ್ನು ಆಲಿಸುತ್ತ, ಆಲಿಸುತ್ತಾ ತಾನೇ ತೊರೆಯ ಮೊರೆಯಾದನೋ ಎಂಬಂತೆ ಕುಳಿತಿದ್ದ ಗುತ್ತಿ (ಮ.ಮ. ಪು.೭ ಮತ್ತು ೯).

ಕುವೆಂಪು ಅವರು ನಿರೂಪಿಸುವ ಹೂವಯ್ಯ ಮತ್ತು ಗುತ್ತಿ ಇವರಿಬ್ಬರೂ ಬೇರೆ ಬೇರೆಯ ವ್ಯಕ್ತಿಗಳಾದರೂ ಅವರಿಬ್ಬರೂ ನಿಸರ್ಗ ಸಾನಿಧ್ಯದಲ್ಲಿ ಪಡೆದುಕೊಳ್ಳುವ ಅನುಭವ ಸಾಮ್ಯವು ಕುತೂಹಲಕರವಾಗಿದೆ. ಒಬ್ಬ ವಿದ್ಯಾವಂತ, ಸುಸಂಸ್ಕೃತ, ಮತ್ತೊಬ್ಬ ಅನಕ್ಷರಸ್ಥ ಮತ್ತು ಸಾಮಾಜಿಕವಾಗಿ ಅತ್ಯಂತ ಕೆಳಗಿನ ಸ್ತರಕ್ಕೆ ಸೇರಿದವನು. ಹೂವಯ್ಯನು ತನ್ನ ಧ್ಯಾನಸ್ಥಿತಿಯ ಮೂಲಕ ಅಥವಾ ತನ್ನ ದೈನಂದಿನ ಸರಳ ಸಾಧಾರಣ ಸ್ಥಿತಿಯನ್ನು ಮೀರಿದ ಒಂದು ನೆಲೆಯಲ್ಲಿ, ‘ಅಲ್ಲಿ ಬೀಸುವ ಗಾಳಿಯಾಗಿದ್ದನು. ಅಲ್ಲಿ ಬೆಳೆದಿದ್ದ ಗಿಡ ಮರ ಬಳ್ಳಿಯಾಗಿದ್ದನು, ಕಾಡಾಗಿದ್ದನು. ಮರ್ಮರ ನಾದವಾಗಿದ್ದನು, ಅಲ್ಲಿಯ ಮೌನವಾಗಿದ್ದನು, ದೂರದ ಆಕಾಶವಾಗಿದ್ದನು’. ಆದರೆ ಅದೇ ಗುತ್ತಿ ತನ್ನ ಸಹಜಸ್ಥಿತಿಯಲ್ಲಿಯೆ ‘ಪ್ರಕೃತಿಯ ಒಂದಂಗವಾಗಿದ್ದನು, ಬೆಟ್ಟದಲ್ಲಿ ಬಂಡೆಯಂತೆ ಕಾಡಿನಲ್ಲಿ ಮರದಂತೆ;’ ಅಷ್ಟೆ ಅಲ್ಲ ‘ತೊರೆಯ ಮೊರೆಯನ್ನಾಲಿಸುತ್ತ ಆಲಿಸುತ್ತ ತಾನೇ ತೊರೆಯಾದನೋ’ ಎಂಬಂತೆ ಕುಳಿತಿದ್ದನು.

ಈ ಎರಡೂ ಮನಃಸ್ಥಿತಿಗಳನ್ನು ಜತೆಗಿರಿಸಿಕೊಂಡು ನೋಡಿದಾಗ ಒಂದು ವಿಚಾರವು ಸೂಚಿತವಾಗಿರುವಂತೆ ತೋರುತ್ತದೆ: ಅದೇನೆಂದರೆ, ನಾಗರಿಕತೆಯ ಪ್ರಾಚೀನತಮ ಘಟ್ಟಗಳಲ್ಲಿ ಮನುಷ್ಯ ನಿಸರ್ಗಕ್ಕೆ ಅತ್ಯಂತ ಸಮೀಪವಾಗಿದ್ದನು, ಅಷ್ಟೇ ಅಲ್ಲ ಅದರದೊಂದು ಭಾಗವಾಗಿದ್ದನು. ಹಾಗೆ ನಿಸರ್ಗದೊಂದಿಗೆ ಅಂದು ಅವನಿಗಿದ್ದ ಆತ್ಮೀಯತೆ ಹಾಗೂ ತಾದಾತ್ಮ ಭಾವವು ಮನುಷ್ಯ ನಾಗರಿಕನಾಗುತ್ತ ಆಗುತ್ತ, ಕಡಮೆಯಾಯಿತು; ಅಷ್ಟೇ ಅಲ್ಲ ಕಳಚಿಕೊಂಡೇಬಿಟ್ಟಿತು. ಹೀಗೆ ತನಗೂ ತನ್ನ ಸುತ್ತಣ ನಿಸರ್ಗಕ್ಕೂ ನಡುವೆ ಏರ್ಪಟ್ಟ ಈ ಕಂದರವನ್ನು ದಾಟಲು ಅಥವಾ ಸಂಬಂಧಗಳನ್ನು ಬೆಸೆಯಲು ಮನುಷ್ಯನು ನಾನಾ ವಿಧಾನಗಳನ್ನು ಕಂಡುಕೊಳ್ಳ ಬೇಕಾಯಿತು. ಅವುಗಳಲ್ಲಿ ಕಲೆಯೂ ಅಥವಾ ರಸಾನುಭೂತಿಯ ಮನಃಸ್ಥಿತಿಯೂ ಒಂದು. ಮೇಲೆ ಉಲ್ಲೇಖಿಸಿದ ಹೊಲೆಯರ ಗುತ್ತಿ, ನಿಸರ್ಗದ ಒಂದು ಭಾಗವಾಗಿರುವ ಮತ್ತು ತೀರಾ ಸಹಜವಾಗಿ ತಾದಾತ್ಮ ವನ್ನು ಪಡೆದುಕೊಳ್ಳುವ, ಆದರೆ ಅದಾವುದರ ಅರಿವೂ ಇಲ್ಲದ, ಮನುಷ್ಯನ ನಾಗರಿಕತೆಯ ‘ಪ್ರಾಕೃತ’ ಸ್ಥಿತಿಗೆ ಪ್ರತಿಮೆಯಾಗಿದ್ದಾನೆ ಎನ್ನುವುದಾದರೆ, ಹೂವಯ್ಯ ಹಾಗೆ ನಿಸರ್ಗದೊಂದಿಗೆ ಕಡಿದುಹೋದ ಸಂಬಂಧವನ್ನು ಪುನರ್ ಸ್ಥಾಪಿಸಿಕೊಳ್ಳುವ ಆಧುನಿಕ ಪ್ರಜ್ಞಾವಿಶೇಷದ ಪ್ರತಿಮೆಯಂತೆ ತೋರುತ್ತಾನೆ. ‘ಪೊದೆಯ ಹಕ್ಕಿ’ಗೂ ‘ಎದೆಯ ಹಕ್ಕಿ’ಗೂ ಸಂವಾದ ಸಾಧ್ಯವಾಗುವುದು ಇಂಥದೊಂದು ಮನಃಸ್ಥಿತಿಯಲ್ಲಿ ಎನ್ನಬಹುದು.

* * *