ಪೋತನತೆಲುಗಿನ ಅಮರ ಕವಿ. ಕಾವ್ಯವನ್ನು ರಾಜರಿಗೆ ಮಾರುವುದಿಲ್ಲ ಎಂದು ಸಾರಿದ ದಿಟ್ಟ ಕವಿ. ಆತನ ಭಾಗವತ ಶ್ರೇಷ್ಠ ಕೃತಿ. ಜನಪ್ರಿಯ ಕೃತಿ. ಋಷಿಯಂತೆ ಬಾಳಿದ ಪೋತನನ ಕಾವ್ಯ ಪ್ರತಿಭೆ ಎಷ್ಟು ಹಿರಿದೋ ಅಷ್ಟೇ ಹಿರಿದು ಅವನ ಸ್ವತಂತ್ರ, ನಿರ್ಮಲ ಜೀವನ.

ಪೋತನ

ಪೋತನ ಭಾಗವತವನ್ನು ಬರೆಯುತ್ತಿದ್ದಾನೆಂದು ಶ್ರೀನಾಥನಿಗೆ ತಿಳಿದು ಬಂದಿತು. ಅದನ್ನು ತನ್ನ ರಾಜನಿಗೆ ಅಂಕಿತಮಾಡು ಎಂದು ಕೇಳಲು ಕವಿಸಾರ್ವಭೌಮ ಶ್ರೀನಾಥ ಪೋತನನ ಮನೆಗೆ ಬಂದ. ಶ್ರೀನಾಥ ಪೋತನನ ಭಾವ. ವಯಸ್ಸಿನಲ್ಲಿ ಕೀರ್ತಿಯಲ್ಲಿ ಪೋತನನಿಗಿಂತ ದೊಡ್ಡವನು. ಆಗಿನ ಕಾಲದ ಪ್ರಸಿದ್ಧ ಕವಿ. ಹರವಿಲಾಸ, ಕಾಶೀಕಾಂಡ, ಆಂಧ್ರ ನೈಷಧ ಮುಂತಾದ ಕಾವ್ಯಗಳನ್ನು ರಚಿಸಿದವನು. ಅನೇಕ ರಾಜರಿಂದ ಗೌರವ, ಐಶ್ವರ್ಯಗಳನ್ನು ಪಡೆದವನು. ಇಂಥವನು ತನ್ನ ಮನೆಗೆ ಬರುವುದು ಎಂತಹ ಸಂತೋಷ! ಪೋತನ ಶ್ರೀನಾಥನನ್ನು ಉಪಚರಿಸಿದ.

ಸ್ನಾನ, ಊಟಗಳು ಮುಗಿದ ಮೇಲೆ ಶ್ರೀನಾಥ ಮೆಲ್ಲನೆ ಮಾತುತೆಗೆದ. ‘‘ಇನ್ನು ಎಷ್ಟು ದಿನ ನೀನು ಈ ರೀತಿಯ ಬಡತನದಲ್ಲಿ ಬೇಯುವುದು? ಭಾಗವತವನ್ನು ರಚಿಸುತ್ತಿದ್ದೀ ಎಂದು ಕೇಳಿದೆ. ಆ ಕಾವ್ಯವನ್ನು ನಮ್ಮ ರಾಜನಿಗೆ ಅಂಕಿತಮಾಡು. ಭಾಗವತವನ್ನು ಅವನ ಹೆಸರಿನಲ್ಲಿ ಬರೆ. ಬೇಕಾದಷ್ಟು ಭೂಮಿ, ಹಣ, ಒಡವೆ-ವಸ್ತ್ರಗಳನ್ನು ಕೊಡುತ್ತಾನೆ’’ ಎಂದು ಹೇಳಿದ.

ಪೋತನ ಹೇಳಿದ-‘‘ನೀವು ಹೇಳುವುದೇನೋ ಸರಿ. ಆದರೆ ಭಾಗವತ ಭಗವಂತನಿಗೆ ಸಂಬಂಧಪಟ್ಟ ಕಾವ್ಯ. ಅವನ ಲೀಲೆಗಳ ವರ್ಣನೆಯಿದೆ. ಭಕ್ತರ ಕಥೆಗಳನ್ನು ಹೇಳುವ ಭಕ್ತಿಕಾವ್ಯ. ಇದನ್ನು ರಾಜರ ಹೆಸರಿನಲ್ಲಿ ರಚಿಸುವುದಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ, ದಯವಿಟ್ಟು ಕ್ಷಮಿಸಿ.’’

‘‘ಹೆಂಡತಿ ಮಕ್ಕಳಿಗೆ ಎರಡು ಹೊತ್ತು ಊಟಕ್ಕೂ ತೊಂದರೆಪಡುತ್ತಾ ಇರುವಾಗ ನೀನು ಇನ್ನೂ ಎಷ್ಟು ದಿನ ಹೀಗೆ ಕಷ್ಟಪಡುತ್ತೀಯೆ? ಇದೇನು ನೀನು ಹೊಸದಾಗಿ ಮಾಡುವ ಕೆಲಸವಲ್ಲ. ನಮ್ಮ ಅನೇಕ ಹಿಂದಿನ ಕವಿಗಳೂ ಇದೇ ರೀತಿ ಕಾವ್ಯವನ್ನು ತಮ್ಮ ತಮ್ಮ ರಾಜರಿಗೆ ಅಂಕಿತಮಾಡಿದ್ದಾರೆ. ಇದರಲ್ಲಿ ತಪ್ಪಾಗಲೀ ಪಾಪವಾಗಲೀ ಇಲ್ಲ. ನಾನು ನಿನ್ನ ಒಳ್ಳೆಯದನ್ನೇ ಬಯಸುತ್ತೇನೆ. ನಮ್ಮ ರಾಜ ಉದಾರಿ. ನಿನ್ನ ಬಡತನವನ್ನು ಹೋಗಲಾಡಿಸಿಕೊ. ಇನ್ನು ಮುಂದೆ ಸುಖದಿಂದ ಬದುಕು’’ ಎಂದು ಶ್ರೀನಾಥ ಹೇಳಿದ.

ಪೋತನ ಇದಕ್ಕೆ ಏನೂ ಉತ್ತರ ಹೇಳಲಿಲ್ಲ. ಮತ್ತೆ ಶ್ರೀನಾಥ ಹೇಳಿದ-‘‘ಈಗಲೇ ನಿನ್ನ ನಿರ್ಧಾರವನ್ನು ಹೇಳಬೇಕೆಂದು ನಾನು ಬಲವಂತಪಡಿಸುವುದಿಲ್ಲ. ಇನ್ನೂ ಕೆಲವು ದಿನಗಳ ಮೇಲೆ ನಾನು ಪುನಃ ಬರುತ್ತೇನೆ. ಆಗ ನಿನ್ನ ಅಭಿಪ್ರಾಯ ತಿಳಿಸು.’’ ಹೀಗೆ ಹೇಳಿ ಶ್ರೀನಾಥ ಹೊರಟುಹೋದ.

ನಿನ್ನನ್ನು ಮಾರುವುದಿಲ್ಲ

ಶ್ರೀನಾಥ ಹೇಳಿದ ಮಾತುಗಳು ಪೋತನನಿಗೆ ಚಿಂತೆಯನ್ನು ಉಂಟುಮಾಡಿದವು. ಅವನು ಆ ಚಿಂತೆಯಲ್ಲಿಯೇ ಆ ದಿನ ಮಲಗಿದ. ಒಂದು ಕಡೆ ಸಂಸಾರದ ಚಿಂತೆ. ಶ್ರೀನಾಥ ಹೇಳಿದಂತೆ ಪೋತನ ಬಹು ಬಡತನದಲ್ಲಿ ದಿನಗಳನ್ನು ಕಳೆಯುತ್ತಿದ್ದ. ಮತ್ತೊಂದು ಕಡೆ ತನ್ನ ಕಾವ್ಯದ ಚಿಂತೆ. ಅರ್ಧರಾತ್ರಿ ಕಳೆದು ಸ್ವಲ್ಪ ಸಮಯವಾಗಿರಬಹುದು. ಅರ್ಧ ನಿದ್ರೆ, ಅರ್ಧ ಎಚ್ಚರ. ಆಗ ಇದ್ದಕ್ಕಿದ್ದಂತೆ ಬಿಳಿಯ ಉಡುಪನ್ನು ಧರಿಸಿದ, ಹೊಳೆಯುವ ಕಿರೀಟವನ್ನು ಹಾಕಿಕೊಂಡ, ತೇಜೋಮೂರ್ತಿಯಾದ ದೇವಿಯೊಬ್ಬಳನ್ನು ಕಂಡಂತೆ ಆಯಿತು ಪೋತನನಿಗೆ. ಸ್ವಲ್ಪ ಗಮನವಿಟ್ಟು ನೋಡಿದಾಗ ಅವಳು ಸರಸ್ವತಿ ಎಂದು ಗುರುತಿಸಿದ. ಆದರೆ ಸರಸ್ವತಿ ಅಳುತ್ತಿದ್ದಾಳೆ!

ಪೋತನನಿಗೆ ಆಶ್ಚರ್ಯವಾಯಿತು. ಇದೇನು ಬ್ರಹ್ಮನ ರಾಣಿ, ವಿದ್ಯಾಭಿಮಾನಿ ದೇವತೆಯ ಕಣ್ಣುಗಳಲ್ಲಿ ನೀರು! ಇದಕ್ಕೆ ಕಾರಣವೇನು? ತಾನು ಎಲ್ಲಿ ಭಾಗವತವನ್ನು ರಾಜನಿಗೆ ಅಂಕಿತ ಮಾಡಿಬಿಡುತ್ತೇನೆಯೋ ಎಂದು ಸರಸ್ವತಿ ಅಳುತ್ತಿದ್ದಾಳೆ ಎನ್ನಿಸಿತು. ಆಗ ಅವನು ಅವಳಿಗೆ ಹೇಳಿದ:

ತಾಯೇ, ರಾಕ್ಷಸರನ್ನು ಕೊಂದ ವಿಷ್ಣುವಿನ ಸೊಸೆ, ಭಾರತೀ, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗುವಂತೆ ಏಕೆ ಕಣ್ಣೀರು ಹರಿಸುತ್ತಿದ್ದೀಯಾ? ಹಸಿವನ್ನು ಕಳೆದುಕೊಳ್ಳುವುದಕ್ಕಾಗಿ ನಾನು ನಿನ್ನನ್ನು ದುಷ್ಟರಾದ ರಾಜರಿಗೆ ಮಾರುವುದಿಲ್ಲ. ನನ್ನ ಮಾತುಗಳನ್ನು ನಂಬು’’

ಅವನಿಗೆ ತಕ್ಷಣ ಪೂರ್ತಿಯಾಗಿ ಎಚ್ಚರವಾಯಿತು. ಇದೇನು ತಾನು ಕಂಡದ್ದು ಕನಸೋ ತನ್ನ ಭ್ರಮೆಯೋ ಎಂದು ಯೋಚಿಸುತ್ತಾ ಪುನಃ ಹಾಗೆಯೇ ಮಲಗಿದ. ಆದರೆ ನಿದ್ದೆ ಬರಲಿಲ್ಲ. ಮತ್ತೆ ಮತ್ತೆ ಶ್ರೀನಾಥನ ಮಾತುಗಳದೇ ಯೋಚನೆ. ಆಗ ತನಗೆ ಭಾಗವತ ಕಾವ್ಯವನ್ನು ಬರೆಯುವಂತೆ ಪ್ರೇರಣೆಯಾದ ಸಂದರ್ಭವನ್ನು ನೆನಪಿಗೆ ತಂದುಕೊಂಡ.

ಭಾಗವತವನ್ನು ತೆಲುಗಿನಲ್ಲಿ ಬರೆ

ಪೋತನನ ಊರು ಈಗಿನ ಆಂಧ್ರಪ್ರಾಂತಕ್ಕೆ ಸೇರಿದ ಓರಂಗಲ್ಲಿಗೆ (ಏಕಶಿಲಾ ನಗರ) ಸಮೀಪದ ಬಮ್ಮೆರ ಗ್ರಾಮ. ಓರಂಗಲ್ಲಿಗೆ ಸ್ವಲ್ಪ ದೂರದಲ್ಲಿ ಗೋದಾವರಿ ನದಿ ಹರಿಯುತ್ತದೆ. ಆಂಧ್ರರು ಗೋದಾವರಿಯನ್ನು ಗಂಗೆಯೆಂದು ಭಾವಿಸುತ್ತಾರೆ. ಗಂಗೆಯೆಂದೇ ಕರೆದು ಪೂಜಿಸುತ್ತಾರೆ. ಒಂದು ಚಂದ್ರ ಗ್ರಹಣದ ಹುಣ್ಣಿಮೆಯ ಸಂಜೆ ಪೋತನ ಗೋದಾವರಿಗೆ ಸ್ನಾನಕ್ಕೆ ಹೋದ. ಅವನೊಡನೆ ಅವನ ಕೆಲವು ಬಂಧುಗಳು ಇದ್ದರು. ಗೋದಾವರಿಯಲ್ಲಿ ಸ್ನಾನ ಮಾಡಿ, ಸಂಧ್ಯಾವಂದನೆಯನ್ನು ಮಾಡಿದ ಅನಂತರ ನದಿಯ ಸಮೀಪದಲ್ಲೇ ಇದ್ದ ಒಂದು ದೊಡ್ಡ ಮಾವಿನ ಮರದ ಕೆಳಗೆ ಕುಳಿತ. ಸಂಜೆ ಕಳೆದು ರಾತ್ರಿಯಾಗುವ ಸಮಯ. ಸುತ್ತಲೂ ಬೆಳದಿಂಗಳು ಹಾಲು ಚೆಲ್ಲಿದಂತೆ ಹರಡಿತ್ತು. ಪವಿತ್ರವಾದ ಗೋದಾವರಿ ಜುಳು ಜುಳು ಶಬ್ದ ಮಾಡುತ್ತಾ ಸಮೀಪದಲ್ಲೇ ಹರಿಯುತ್ತಿದ್ದಾಳೆ. ಗೋದಾವರಿಯ ನುಣ್ಣನೆಯ ಮಳಲ ತೀರ. ಎಲ್ಲೆಲ್ಲೂ ಶಾಂತವಾದ ವಾತಾವರಣ. ಹಕ್ಕಿಗಳು ಶಬ್ದ ಮಾಡುತ್ತಾ ತಮ್ಮ ತಮ್ಮ ಗೂಡುಗಳನ್ನು ಸೇರಿಕೊಳ್ಳುತ್ತಿವೆ. ಆ ಸ್ಥಳವೆಲ್ಲ ರಾಮ, ಲಕ್ಷ್ಮಣ, ಸೀತೆಯರ ಪಾದಗಳ ಸ್ಪರ್ಶದಿಂದ ಪವಿತ್ರವಾದ ಭೂಮಿ. ಪೋತನ ಕುಳಿತಿದ್ದ ಮರದ ಮೇಲಿನಿಂದ ಗಿಣಿಗಳು, ‘ರಾಮ ರಾಮ’ ಎಂದು ಧ್ವನಿ ಮಾಡುತ್ತಿವೆ. ಪ್ರಕೃತಿಯ ರಮ್ಯವಾದ ದೃಶ್ಯವನ್ನು ಕಂಡು ಪೋತನನ ಕವಿಮನಸ್ಸು ಆನಂದದಿಂದಲೂ, ಉತ್ಸಾಹದಿಂದಲೂ ತುಂಬಿದೆ. ಇದೇ ಸಮಯದಲ್ಲಿ ಚಂದ್ರನನ್ನು ರಾಹು ಹಿಡಿದಿದ್ದಾನೆ. ಇನ್ನು ಕೆಲವು  ಕ್ಷಣಗಳಲ್ಲಿ ಚಂದ್ರ ಪೂರ್ಣವಾಗಿ ಮರೆಯಾಗಿ ಕತ್ತಲು ತುಂಬಿತು. ಇದಾವುದರ ಕಡೆಗೂ ಗಮನವೇ ಇಲ್ಲ ಪೋತನನಿಗೆ. ಅವನು ತನ್ನ ಮನೆದೈವವಾದ ಈಶ್ವರನ ಧ್ಯಾನದಲ್ಲಿ ಮುಳುಗಿದ್ದಾನೆ. ಇನ್ನೂ ಸ್ವಲ್ಪ ಸಮಯ ಕಳೆಯಿತು. ಆ ಕತ್ತಲೆಯನ್ನು ಸೀಳಿಕೊಂಡು ಪೋತನನ ಮುಂದೆ ಒಬ್ಬ ರಾಜಕುಮಾರ ನಿಂತಿದ್ದಾನೆ. ಅವನ ತಲೆಯ ಮೇಲೆ ಹೊಳೆಯುತ್ತಿರುವ ಕಿರೀಟ. ಅವನ ಶರೀರದ ಬಣ್ಣ ನೀಲಮೇಘವಾಗಿದೆ. ಕಮಲದಂತೆ ಕಣ್ಣುಗಳು. ಅಗಲವಾದ ಎದೆ. ಭುಜವನ್ನು ದೊಡ್ಡದಾದ ಬಿಲ್ಲು ಅಲಂಕರಿಸಿದೆ. ಅವನ ಮುಖದ ಮೇಲೆ ಬೆಳುದಿಂಗಳಿನಂತಹ ಮಂದಹಾಸ. ಪೋತನ ಅವನನ್ನು ಮಾತನಾಡಿಸಲು ಪ್ರಯತ್ನಿಸಿದ. ಆದರೆ ಅಷ್ಟರಲ್ಲಿ ಆ ರಾಜಕುಮಾರನೇ ಮಾತನಾಡಿದ.

‘ನಾನು ರಾಮಭದ್ರ. ನನ್ನ ನಾಮಾಂಕಿತ ಮಾಡಿ ಭಾಗವತವನ್ನು ತೆಲುಗಿನಲ್ಲಿ ಬರೆ. ನಿನ್ನ ಭವಬಂಧನಗಳು ಕಡಿದುಹೋಗುವುವು’’ ಎಂದು ಮೇಘಗಂಭೀರ ಧ್ವನಿಯಲ್ಲಿ ಅಪ್ಪಣೆ ಮಾಡಿದ.

ಹೀಗೆ ಅಪ್ಪಣೆ ಮಾಡಿ ಆ ಮೂರ್ತಿ ಮರೆಯಾಯಿತು.

ಹಿರಿಯರ ಆಶೀರ್ವಾದ

ಗ್ರಹಣ ಬಿಟ್ಟು ಚಂದ್ರ ಕೊಂಚ ಕೊಂಚ ಕಾಣಿಸಲು ಆರಂಭವಾಯಿತು. ರಾಹುವಿನಿಂದ ಬಿಡುಗಡೆಯಾದ ಚಂದ್ರನ ಬಿಂಬ ಪೂರ್ತಿಯಾಗಿ ಕಾಣಿಸಿತು. ಮತ್ತೆ ಮೊದಲಿನಂತೆ ಬೆಳದಿಂಗಳು. ತಾನು ಧ್ಯಾನಮಾಡುತ್ತಿದ್ದುದು ತನ್ನ ಮನೆದೇವರಾದ ಈಶ್ವರನನ್ನು. ಆದರೆ ತಾನು ಕಂಡುದು ಶ್ರೀರಾಮಚಂದ್ರನನ್ನು. ಇನ್ನೂ ಕಣ್ಣುಗಳನ್ನು ಹಾಗೆಯೇ ಮುಚ್ಚಿದ್ದ ಪೋತನ, ಆಶ್ಚರ್ಯದಿಂದ ಕಣ್ಣುಬಿಟ್ಟ. ಮೈಯೆಲ್ಲಾ ರೋಮಾಂಚನವಾಯಿತು. ಆನಂದದ ಕಟ್ಟೆಯೊಡೆಯಿತು. ಬಿಟ್ಟ ಕಣ್ಣು ಬಿಟ್ಟ ಬಾಯಿಯಲ್ಲಿ ಕದಲದೇ ಹಾಗೆಯೇ ಕುಳಿತಿದ್ದ ಪೋತನ.

ಅನಂತರ ಪೋತನ ತನ್ನ ಜೊತೆಯಲ್ಲಿ ಬಂದಿದ್ದ ನಂಟರಿಗೆಲ್ಲ ತನ್ನ ಅನುಭವವನ್ನು ವಿವರಿಸಿದ. ಅಲ್ಲಿಂದ ಅವರುಗಳೊಡನೆ ಓರಂಗಲ್ಲಿಗೆ ಹಿಂದಿರುಗಿದ. ಆ ಕಾಲದಲ್ಲಿ ಆ ಪಟ್ಟಣದಲ್ಲಿ ವಿದ್ಯಾಭಿಮಾನಿಗಳೂ, ಪಂಡಿತರೂ, ಕವಿಗಳೂ ಅನೇಕರಿದ್ದರು. ಪೋತನ ಅಲ್ಲಿ ವಿದ್ವಾಂಸರ ಸಭೆಯನ್ನು ಸೇರಿಸಿ, ಭಾಗವತವನ್ನು ಬರೆಯಬೇಕೆಂದಿರುವ ತನ್ನ ಅಭಿಲಾಷೆಯನ್ನು ತಿಳಿಸಿದ. ಹಾಗೆಯೇ ರಾಮಚಂದ್ರ ಪ್ರಭುವಿನ ಅಪ್ಪಣೆಯನ್ನೂ ತಿಳಿಸಿದ. ಅವರ ಅಪ್ಪಣೆಯನ್ನು ಕೋರಿದ. ಹಿರಿಯರ ಆಶೀರ್ವಾದವನ್ನು ಬೇಡಿದ. ಎಲ್ಲರೂ,

‘‘ನೀನು ದೇವರ ಭಕ್ತ, ಪುಣ್ಯವಂತ. ದೇವರ ಕೃಪೆ ನಿನ್ನ ಮೇಲಿದೆ. ನೀನು ಈ ಕಾವ್ಯವನ್ನು ರಚಿಸು. ತೆಲುಗು ಜನರ ಉದ್ಧಾರವಾಗುತ್ತದೆ. ನಿನ್ನ ಜನ್ಮ ಸಫಲವಾಗುತ್ತದೆ’’ ಎಂದು ತಮ್ಮ ಅನುಮತಿಯನ್ನು ನೀಡಿದರು.

ಹೀಗೆ ಓರಂಗಲ್ಲಿನಲ್ಲಿ ವಿದ್ವಾಂಸರ, ಹಿರಿಯರ ಅಪ್ಪಣೆ ಪಡೆದು ಬಮ್ಮೆರ ಗ್ರಾಮಕ್ಕೆ ಹಿಂದಿರುಗಿದ. ‘‘ನನ್ನ ಹಿಂದಿನ ಕವಿಗಳು ಭಾರತ ರಾಮಾಯಣಗಳನ್ನು ಬರೆದರು. ಭಾಗವತವನ್ನು ರಚಿಸದೆ ಬಿಟ್ಟರು. ಇದು ನನ್ನ ಪುಣ್ಯ. ಈಗ ನಾನು ಭಾಗವತವನ್ನು ಬರೆದು ನನ್ನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತೇನೆ.’’ ಹೀಗೆ ಆಲೋಚಿಸಿ ಪೋತನ ಭಾಗವತವನ್ನು ರಾಮಚಂದ್ರನ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿದ.

ಹರಿಗೆ ಸಮರ್ಪಣೆ

ಈ ಎಲ್ಲ ವಿಷಯಗಳು ಒಂದಾದ ನಂತರ ಒಂದು ಇಂದು ನಡೆದಂತೆ ಅವನ ಕಣ್ಣಿನ ಮುಂದೆ ಸುಳಿಯಿತು. ತಕ್ಷಣ ಹಾಸಿಗೆಯಿಂದೆದ್ದ. ಬೆಳಗಿನ ಜಾವ. ಸೂರ್ಯೋದಯಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಸ್ನಾನ ಮಾಡಿ ಬರೆಯಲು ಕುಳಿತ. ಆಗ ಅವನು ಈ ಪದ್ಯವನ್ನು ಬರೆದ-

‘‘ಅಧಮರಾದ ರಾಜರ ಹೆಸರಿನಲ್ಲಿ ಕಾವ್ಯವನ್ನು ಬರೆಯುವುದು, ಅವರು ಕೊಟ್ಟ ಹಳ್ಳಿಗಳು, ವಾಹನಗಳು, ಹಣವನ್ನು ತೆಗೆದುಕೊಂಡು ಶರೀರವನ್ನು ಬೆಳೆಸಿಕೊಳ್ಳುವುದು. ಕವಿಗಳು ಈ ರೀತಿ ಇದ್ದಾರೆ. ಆದರೆ ಪೋತನ ತನ್ನ ಮನಸಾರೆ ಈ ಕಾವ್ಯವನ್ನು ಹರಿಗೆ ಸಮರ್ಪಿಸಿದ.’’

ಆಗ ಅವನ ಮನಸ್ಸು ಚಿಂತೆಯಿಂದ ಬಿಡುಗಡೆಯಾಯಿತು.

ಬೇಸಾಯಗಾರರಾದರೂ ಸರಿಯೆ

ಇದಾದ ಕೆಲವು ದಿನಗಳ ಮೇಲೆ ಪೋತನನನ್ನು ಕಾಣಲು ಶ್ರೀನಾಥ ಬಂದ. ಅವನು ಅಟ್ಟಹಾಸದಿಂದ, ರಾಜ ವೈಭವದಿಂದ ಪಲ್ಲಕ್ಕಿಯಲ್ಲಿ ಬರುತ್ತಿದ್ದ. ದಾರಿಯಲ್ಲಿ ಪೋತನ ಭೂಮಿಯನ್ನು ಉಳುತ್ತಿದ್ದ. ಪೋತನನನ್ನು ನೋಡಿ-

‘‘ಏನು ಹಾಲಿಕರೇ (ಬೇಸಾಯ ಮಾಡುವವರೆ) ಹೇಗೆ ನಡೆದಿದೆ ನಿಮ್ಮ ಬೇಸಾಯ?’’ ಎಂದು ಪ್ರಶ್ನಿಸಿದ ಶ್ರೀನಾಥ.

ಪೋತನನಿಗೆ ಅವನು ತನ್ನನ್ನು ಹಾಸ್ಯ ಮಾಡುತ್ತಿದ್ದಾನೆಂದು ತಿಳಿಯಿತು. ಆದರೂ ‘‘ಎಳೆಯ ಮಾವಿನಚಿಗುರಿನಂತೆ ಕೋಮಲವಾದ ಕಾವ್ಯವೆಂಬ ಹೆಣ್ಣನ್ನು ಖೂಳರಿಗೆ ಮಾರುವುದು; ಅದರಿಂದ ಸಿಕ್ಕುವ ನೀಚವಾದ ಕೂಳನ್ನು ತಿನ್ನುವುದು; ಅದಕ್ಕಿಂತ ಸತ್ಕವಿಗಳು ತಮ್ಮ ಹೆಂಡಿರು-ಮಕ್ಕಳನ್ನು ಸಾಕುವುದಕ್ಕಾಗಿ  ಬೇಸಾಯಗಾರ ರಾದರೂ ಸರಿಯೇ, ಗೆಡ್ಡೆ-ಗೆಣಸುಗಳನ್ನು ತಿಂದರೂ ಸರಿಯೆ’’ ಎಂದು ಸಮಾಧಾನದಿಂದ ಹೇಳಿದ.

ಶ್ರೀನಾಥನಿಗೆ ಪೋತನನ ನಿರ್ಧಾರ ತಿಳಿಯಿತು. ತಾನು ಕೇಳಬೇಕೆಂದು ಬಂದಿದ್ದ ಮಾತಿಗೆ ಉತ್ತರ ಸಿಕ್ಕಿತು. ಮರುಮಾತಾಡದೆ ಶ್ರೀನಾಥ ಹಿಂದಿರುಗಿದ.

ಕಾಲ, ಮನೆತನ

ಪೋತನ ಜೀವಿಸಿದ ಕಾಲದ ಬಗ್ಗೆ ವಿವಾದಗಳಿವೆ. ಆದರೂ ಅವನು ಹದಿನೈದನೆಯ ಶತಮಾನಕ್ಕೆ ಸೇರಿದವನು ಎನ್ನುವುದನ್ನು ಎಲ್ಲ ವಿದ್ವಾಂಸರೂ ಒಪ್ಪಿಕೊಳ್ಳುತ್ತಾರೆ. ಬಹು ಜನರ ಅಭಿಪ್ರಾಯದಂತೆ ಪೋತನ ಹದಿನೈದನೆಯ ಶತಮಾನದ ಮಧ್ಯಭಾಗದಿಂದ ಆ ಶತಮಾನದ ಕಡೆಯವರೆಗೂ ಜೀವಿಸಿದ್ದನೆಂದು ತಿಳಿದುಬರುತ್ತದೆ. ಇವನು ಕವಿ ಸಾರ್ವಭೌಮ ಶ್ರೀನಾಥನ ಕಿರಿಯ ಸಮಕಾಲೀನ. ಪೋತನನ ಊರು ಈಗಿನ ಆಂಧ್ರಪ್ರಾಂತಕ್ಕೆ ಸೇರಿದ ಓರಂಗಲ್ಲಿಗೆ ಸಮೀಪದಲ್ಲಿರುವ ಬಮ್ಮೆರ ಗ್ರಾಮ. ಬಮ್ಮೆರ ಗ್ರಾಮದ ನಿಯೋಗಿ ಬ್ರಾಹ್ಮಣ ಮನೆತನದಲ್ಲಿ ಪೋತನ ಹುಟ್ಟಿದ. ನಿಯೋಗಿಗಳು ಎಂದರೆ ರಾಯಭಾರಿಗಳು, ರಾಜಪ್ರತಿನಿಧಿಗಳು ಎಂದು ಹೇಳಬಹುದು. ಆದ್ದರಿಂದ ಪೋತನನ ಮನೆತನದವರ ಹೆಸರಿನೊಡನೆ ಅಮಾತ್ಯ ಎನ್ನುವುದು ಸೇರಿತ್ತು. ಪೋತನನ ತಂದೆ ಕೇಸನ ಅಥವಾ ಕೇಸನಾಮಾತ್ಯ. ಪೋತನ ಕೂಡಾ ತನ್ನನ್ನು ಪೋತನಾಮಾತ್ಯ ಎಂದೇ ಕರೆದುಕೊಂಡಿದ್ದಾನೆ. ಇವನು ಪೋತನ, ಪೋತನಾಮಾತ್ಯ, ಬಮ್ಮೆರ ಪೋತನ ಪೋತರಾಜು ಮೊದಲಾದ ಹೆಸರುಗಳಿಂದ ಪ್ರಸಿದ್ಧನಾಗಿದ್ದಾನೆ. ಪೋತನನ ಮನೆಯವರು ಈಶ್ವರನ ಆರಾಧಕರು.

ಪೋತನ ತನ್ನ ಕಾವ್ಯಗಳಲ್ಲಿ ತನ್ನ ವಿಷಯವನ್ನು ಮತ್ತು ತನ್ನ ವಂಶದ ವಿಷಯವನ್ನು ಸ್ವಲ್ಪ ಮಟ್ಟಿಗೆ ಹೇಳಿಕೊಂಡಿ ದ್ದಾನೆ. ತನ್ನ ತಂದೆ ಕೇಸನಾಮಾತ್ಯನನ್ನು ಕುರಿತು ಹೀಗೆ ಹೇಳಿದ್ದಾನೆ-ಕೇಸನ ಲಲಿತಮೂರ್ತಿ, ಬಹು ಕಳಾನಿಧಿ, ದಾನ ಧರ್ಮಗಳನ್ನು ಮಾಡುವವನು. ನೀತಿಯಲ್ಲಿ ನಡೆಯುವುದೇ ಅವನ ಐಶ್ವರ್ಯ. ಒಳ್ಳೆಯ ಗೃಹಸ್ಥ. ಶೈವಶಾಸ್ತ್ರಗಳನ್ನು ಬಲ್ಲವನು. ಇವನ ಮನೆಯ ಯಜಮಾನಿ, ಮನೆಯ ಗೃಹದೇವತೆ ಲಕ್ಕಮಾಂಬ, ಪೋತನನ ತಾಯಿ. ಅವಳು ಮನೆಯಿಂದ ಆಚೆ ಹೋಗುತ್ತಿರಲಿಲ್ಲ. ತನ್ನ ಗಂಡನ ಮಾತನ್ನು ಮೀರುತ್ತಿರಲಿಲ್ಲ. ಪಂಡಿತರು, ವಿದ್ವಾಂಸರುಗಳೆಲ್ಲ ಆಕೆಯನ್ನು ಹೊಗಳುತ್ತಿದ್ದರು. ಇಂತಹ ಉತ್ತಮ ಗಂಡ-ಹೆಂಡಿರ, ಶಿವಭಕ್ತರ ಹೊಟ್ಟೆಯಲ್ಲಿ ಹುಟ್ಟಿದವನು ಪೋತನ. ಪೋತನನಿಗೆ ಒಬ್ಬ ಅಣ್ಣ ಇದ್ದ. ಅವನ ಹೆಸರು ತಿಪ್ಪನ. ತಿಪ್ಪನ ಕೂಡಾ ಮಹಾ ಶಿವಭಕ್ತ. ಪೋತನನಿಗೆ ಒಬ್ಬ ಮಗನಿದ್ದ. ಅವನ ಹೆಸರು ಮಲ್ಲನ.

ಸಹಜ ಕವಿ

ಪೋತನ ಯಾರಲ್ಲಿಯೂ ವಿದ್ಯೆಯನ್ನು ಕಲಿತಂತೆ ತಿಳಿದು ಬರುವುದಿಲ್ಲ. ಆದರೆ ಕವಿತೆಯನ್ನು ರಚಿಸುವ ಶಕ್ತಿ ಅವನಿಗೆ ಹುಟ್ಟಿನಿಂದಲೇ ಬಂದಿತ್ತು. ಅದಕ್ಕೇ ಅವನು ತನ್ನನ್ನು ‘ಸಹಜ ಕವಿ’ ಎಂದು ಕರೆದುಕೊಂಡಿದ್ದಾನೆ. ಆದರೆ ಅವನು ಸ್ವಂತ ಶ್ರಮದಿಂದ ಸಂಸ್ಕೃತವನ್ನೂ, ತೆಲುಗನ್ನೂ ಓದಿ ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದ. ತನ್ನ ಹಿಂದಿನ ಕವಿಗಳ ಕಾವ್ಯಗಳನ್ನು ಗಮನವಿಟ್ಟು ಅಭ್ಯಾಸ ಮಾಡಿದ್ದ. ಆದ್ದರಿಂದ ತೆಲುಗು ಭಾಷೆಯ ಮೇಲೆ ಪ್ರಭುತ್ವವನ್ನು ಸಂಪಾದಿಸಿಕೊಂಡಿದ್ದ. ರಾಮಾಯಣ, ಮಹಾಭಾರತ, ಭಾಗವತ, ಹರಿವಂಶ ಮತ್ತು ಪುರಾಣಗಳನ್ನೂ ಕಾಳಿದಾಸ ಮೊದಲಾದವರ ಸಂಸ್ಕೃತ ಕಾವ್ಯಗಳನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದ.

ಪೋತನನ ವಂಶದಲ್ಲಿ ಮುಂದೆಯೂ ಅನೇಕ ಕವಿಗಳಾಗಿದ್ದಾರೆ. ಪೋತನನ ಮೊಮ್ಮಗ ಕೇಸನ. ಇವನು ‘ಪ್ರೌಢ ಸರಸ್ವತಿ’ ಎಂದು ಪ್ರಸಿದ್ಧನಾಗಿದ್ದಾನೆ. ಪ್ರೌಢ ಸರಸ್ವತಿಯ ಮಕ್ಕಳು ಕೇಸನ ಮತ್ತು ಮಲ್ಲನ ಕವಿಗಳು. ಇವರಿಬ್ಬರೂ ಕೂಡಿ ‘ದಾಕ್ಷಾಯಿಣಿ ಪರಿಣಯ’ ಮತ್ತು ‘ವಿಷ್ಣುಭಜನಾನಂದಮು’ ಎನ್ನುವ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಪೋತನನ ನಂತರ ಬಂದ ಎಲ್ಲ ಕವಿಗಳೂ ಪೋತನನನ್ನು  ಮನಸಾರೆ ಹೊಗಳಿದ್ದಾರೆ.

ಭಾಗವತ

ಭಾಗವತ ಹನ್ನೆರಡು ಸ್ಕಂಧ (ಅಧ್ಯಾಯ)ಗಳಿರುವ ಒಂದು ದೊಡ್ಡ ಕಾವ್ಯ. ಭಾರತೀಯರು ಪವಿತ್ರವೆಂದು ಗೌರವಿಸುವ ಕಾವ್ಯಗಳಲ್ಲಿ ಇದು ಒಂದು. ಇದನ್ನು ವ್ಯಾಸಮಹರ್ಷಿಗಳು ಪ್ರಪಂಚದ ಮಾನವರ ಒಳ್ಳೆಯದಕ್ಕಾಗಿ ರಚಿಸಿದರು. ಅನಂತರ ಇದನ್ನು ತಮ್ಮ ಮಗನಾದ ಶುಕಮಹರ್ಷಿಗಳಿಗೆ ಹೇಳಿದರು. ಆಮೇಲೆ ಇದು ಪ್ರಪಂಚದಲ್ಲಿ ಪ್ರಚಾರಕ್ಕೆ ಬಂದಿತು. ಈ ಕಾವ್ಯ ಪರಮಾತ್ಮನ ಹತ್ತು ಅವತಾರಗಳನ್ನು ವರ್ಣಿಸುತ್ತದೆ; ಇದರಲ್ಲಿ ಅನೇಕ ಭಕ್ತರ ಕಥೆಗಳನ್ನು ಹೇಳಿದೆ. ಭಕ್ತರು ಎಂದರೆ ದೇವರನ್ನು ‘ಕಾಯೇನ ವಾಚಾ ಮನಸಾ’  ನಂಬಿದವರು. ಹೀಗೆ ನಂಬಿದವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ, ಅವರನ್ನು ಎಲ್ಲ ಕಾಲದಲ್ಲಿಯೂ, ಎಲ್ಲ ಸ್ಥಿತಿಯಲ್ಲಿಯೂ ಕೈಹಿಡಿದು ಕಾಪಾಡುತ್ತಾನೆ-ಎನ್ನುವುದು ಭಾಗವತದಲ್ಲಿ ಚೆನ್ನಾಗಿ ಹೇಳಿದೆ. ವಯಸ್ಸು, ಲಿಂಗ, ಜಾತಿ, ಅಧಿಕಾರ, ಹಣ ಮೊದಲಾದವುಗಳನ್ನು ಭಗವಂತ ಗಮನಿಸುವುದಿಲ್ಲ. ಅವನಿಗೆ ಬೇಕಾದುದು ಭಕ್ತಿ. ಭಕ್ತಿಯಿಂದ ಪೂಜಿಸುವವರು ಯಾರಾದರೂ ಸರಿಯೇ, ಅವರನ್ನು ಕಾಪಾಡುತ್ತಾನೆ. ಇಂತಹ ಭಕ್ತರಿಗೆ ತೊಂದರೆಯಾಗುವುದನ್ನು ಅವನು ಸಹಿಸುವುದಿಲ್ಲ. ಎಷ್ಟೇ ಶಕ್ತಿವಂತರಾಗಲೀ ಎಷ್ಟೇ ದೊಡ್ಡವರಾಗಲೀ ಭಕ್ತರಿಗೆ ತೊಂದರೆಯನ್ನು ಕೊಡಲು ಸಾಧ್ಯವಾಗುವುದಿಲ್ಲ ಎನ್ನುವದನ್ನು ಭಾಗವತ ಚೆನ್ನಾಗಿ ತೋರಿಸುತ್ತದೆ.

ಇದರಲ್ಲಿ ಅನೇಕ ಭಕ್ತರು ಬರುತ್ತಾರೆ. ಧ್ರುವ, ಪ್ರಹ್ಲಾದ ಕೇವಲ ಬಾಲಕರು. ರುಕ್ಮಿಣಿ, ದ್ರೌಪದಿ-ಸ್ತ್ರೀಯರು, ಬಲಿ ಹುಟ್ಟಿನಿಂದ ರಾಕ್ಷಸ. ಏನೂ ತಿಳಿಯದ ಕೇವಲ ಮುಗ್ಧೆಯರು-ಗೋಕುಲದ ಗೋಪಿಕಾ ಸ್ತ್ರೀಯರು. ಶ್ರೀಕೃಷ್ಣನ ಸ್ನೇಹಿತನಾದ ಕುಚೇಲ ಕಡುಬಡವ. ಗಜೇಂದ್ರ ಕೇವಲ ಪ್ರಾಣಿ. ಇವರುಗಳನ್ನೆಲ್ಲ ಭಗವಂತ ಕಾಪಾಡಿದ.

ಪೋತನ ಭಾಗವತ

ತೆಲುಗು ಭಾಗವತ ಪೋತನ ಬರೆದಿರುವ ಕಾವ್ಯಗಳಲ್ಲೆಲ್ಲಾ ಬಹಳ ಮುಖ್ಯವಾದುದು ಮತ್ತು ಉತ್ತಮವಾದುದು. ಆಂಧ್ರ ಭಾಗವತ ಸಂಸ್ಕೃತ ಭಾಗವತದ ಅನುವಾದ. ಸಂಸ್ಕೃತ ಭಾಗವತಕ್ಕಿಂತ ಪೋತನನ ಭಾಗವತ ದೊಡ್ಡದಾಗಿ ಬೆಳೆದಿದೆ. ಪೋತನ ತನ್ನ ಕಾವ್ಯವನ್ನು ಚಂಪೂಕಾವ್ಯ ಪದ್ಧತಿಯಲ್ಲಿ ರಚಿಸಿದ್ದಾನೆ. ಚಂಪೂ ಪದ್ಧತಿಯೆಂದರೆ ಗದ್ಯಪದ್ಯಗಳೆರಡೂ ಬೆರೆತಿರುವ ಕಾವ್ಯ. ಆಂಧ್ರ ಭಾಗವತ ಬಹಳ ಜನಪ್ರಿಯವಾದ ಕಾವ್ಯ. ಆಂಧ್ರ ದೇಶದಲ್ಲಿ ಪೋತನನ ಭಾಗವತದಿಂದ ಕೆಲವಾದರೂ ಪದ್ಯಗಳನ್ನು ತಿಳಿಯದವರು ಅಪರೂಪ. ಇದನ್ನು ತೆಲುಗು ಸಾಹಿತ್ಯದಲ್ಲಿರುವ ಉತ್ತಮ ಕೃತಿಗಳಲ್ಲಿ ಒಂದು ಎಂದು ಭಾವಿಸಿ ಗೌರವಿಸುತ್ತಾರೆ.

ಪೋತನನ ಭಾಗವತ ಸುಂದರವಾಗಿಯೂ, ಲಲಿತವಾಗಿಯೂ ಅಡೆತಡೆಯಿಲ್ಲದೆ ಓಡುವುದೂ ಆಗಿದೆ; ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ. ಕಾವ್ಯವನ್ನು ಓದಿದವರನ್ನು ಪವಿತ್ರರನ್ನೂ, ಪರಿಶುದ್ಧರನ್ನೂ ಮಾಡುತ್ತದೆ. ಅಷ್ಟೇ ಅಲ್ಲ, ಪರಮಾತ್ಮನಲ್ಲಿ ನಂಬಿಕೆಯನ್ನು ದೃಢಪಡಿಸುತ್ತದೆ. ಇದು ಕೇವಲ ಸಾಮಾನ್ಯ ಕವಿಗೆ ಸಾಧ್ಯವಾದುದಲ್ಲ. ಪೋತನನಂತಹ ಭಕ್ತ ಕವಿಗೆ ಮಾತ್ರ ಸಾಧ್ಯವಾದುದು, ಸಾಧ್ಯವಾಯಿತು.

ಈಗ ದೊರಕಿರುವ ಪೋತನ ಭಾಗವತ ಪೂರ್ಣವಾಗಿಲ್ಲ. ಪೋತನ ಭಾಗವತವನ್ನು ಪೂರ್ತಿಯಾಗಿ ರಚಿಸಿರಬಹುದು, ಅದು ನಷ್ಟವಾಗಿದೆ ಎನ್ನುವುದು ಒಂದು ಮತ. ಅವನು ಭಾಗವತವನ್ನು ಪೂರ್ತಿಯಾಗಿ ರಚಿಸಲೇ ಇಲ್ಲ ಎನ್ನುವುದು ಒಂದು ಮತ. ಪೋತನ ಬರೆಯದೆ ಬಿಟ್ಟಿರುವ (ಅಥವಾ ನಷ್ಟವಾಗಿರುವ) ಭಾಗಗಳನ್ನು ಅವನ ಶಿಷ್ಯರಾದ ಗಂಗನ, ಸಿಂಗನ ಮತ್ತು ವೆಲಿಗಂದಲ ನಾರಯ ಎನ್ನುವವರು ಪೂರ್ತಿ ಮಾಡಿದ್ದಾರೆ. ಇವರೂ ಓರಂಗಲ್ಲು ಪ್ರಾಂತಕ್ಕೆ ಸೇರಿದವರು.

ಗಜೇಂದ್ರ ಮೋಕ್ಷ

ಭಾಗವತದಲ್ಲಿ ಬರುವ ಒಂದೆರಡು ಪ್ರಸಂಗಗಳ ಪರಿಚಯವನ್ನು ನಾವು ಮಾಡಿಕೊಳ್ಳೋಣ. ಗಜೇಂದ್ರ ಮೋಕ್ಷ ಪೋತನನ ಭಾಗವತದಲ್ಲಿ ಬಹಳ ಸುಂದರವಾದ, ವೈಶಿಷ್ಟ್ಯಪೂರ್ಣವಾದ ಭಾಗ. ಆ ಕಥೆ ಹೀಗಿದೆ:

ತ್ರಿಕೂಟವೆಂಬ ಪರ್ವತದಲ್ಲಿ ವಿಶಾಲವಾದ ಕಾಡು. ಆ ಕಾಡಿನಲ್ಲಿ ಅನೇಕ ಆನೆಗಳು ವಾಸಿಸುತ್ತಿದ್ದವು. ಆ ಆನೆಗಳಿಗೆ ಗಜೇಂದ್ರ ರಾಜ. ಗಜೇಂದ್ರ ಬಹಳ ಬಲಶಾಲಿ. ಅದನ್ನು ಕಂಡರೆ ಇತರ ಪ್ರಾಣಿಗಳಿಗೆ ಭಯ.

ಒಂದು ದಿನ ತನ್ನ ಪರಿವಾರವನ್ನು ಕಟ್ಟಿಕೊಂಡು ಕಾಡಿನಲ್ಲಿ ಅಲೆಯಲು ಹೊರಟಿತು. ಆಗ ಅದಕ್ಕೆ ದಾರಿ ತಪ್ಪಿತು. ಎಷ್ಟು ಹುಡುಕಿದರೂ ತಾನು ಇರುತ್ತಿದ್ದ ಸ್ಥಳ ಸಿಕ್ಕಲಿಲ್ಲ. ಅಲೆದು ಅಲೆದು ಆನೆಗಳಿಗೆಲ್ಲಾ ಬಹಳ ಆಯಾಸವೂ, ಬಾಯಾರಿಕೆಯೂ ಆಯಿತು. ಸಮೀಪದಲ್ಲಿಯೇ ಒಂದು ಸರೋವರವಿತ್ತು. ಆನೆಗಳ ಹಿಂಡು ಆ ಸರೋವರವನ್ನು ಪ್ರವೇಶಿಸಿತು. ಆನೆಗಳು ಹೊಟ್ಟೆ ತುಂಬಾ ನೀರನ್ನು ಕುಡಿದವು.

ಹೀಗೆ ಬಹಳ ಹೊತ್ತು ಆನೆಗಳು ನೀರಿನಲ್ಲಿ ಆಡುತ್ತಿರುವಾಗ, ಗಜೇಂದ್ರನನ್ನು ಸರೋವರದಲ್ಲಿದ್ದ ಮೊಸಳೆಗಳ ಒಡೆಯ ಹಿಡಿದುಬಿಟ್ಟಿತು. ತನ್ನ ಕಾಲನ್ನು ಬಿಡಿಸಿಕೊಳ್ಳಲು ಗಜೇಂದ್ರ ಬಹಳ ಪ್ರಯತ್ನಪಟ್ಟಿತು. ಆದರೆ ಸಾಧ್ಯವಾಗಲಿಲ್ಲ. ಸಹಾಯಕ್ಕೆ ತನ್ನ ಜೊತೆಯ ಆನೆಗಳನ್ನು ಕರೆಯಿತು. ಅವು ತಮ್ಮರಾಜನ ಅವಸ್ಥೆಯನ್ನು ನೋಡುತ್ತಿದ್ದವು. ಆದರೆ ಯಾವ ವಿಧವಾದ ಸಹಾಯವನ್ನೂ ಮಾಡಲಾಗಲಿಲ್ಲ. ಮೊಸಳೆ ಆನೆಯನ್ನು ನೀರಿನೊಳಕ್ಕೆ ಎಳೆಯುತ್ತಿದೆ. ಮೊಸಳೆ ನೀರಿನಲ್ಲಿರುವ ಪ್ರಾಣಿ. ನೀರಿನಲ್ಲಿ ಅದರ ಬಲ ಹೆಚ್ಚು. ಆನೆಯಬಲ ಕಡಿಮೆಯಾಗುತ್ತಾ ಬಂದಿತು.

ಆಗ ಗಜೇಂದ್ರನಿಗೆ ತನಗಿಂತ ಹಿರಿಯ ಶಕ್ತಿಯೊಂದಿದೆ ಎಂಬುದರ ಅರಿವಾಯಿತು. ಅದು ದೇವರನ್ನು ಪ್ರಾರ್ಥಿಸಿತು. ‘‘ನನ್ನ ದೊಡ್ಡಸ್ತಿಕೆ ಕೊಂಚ ಮಾತ್ರವೂ ಇಲ್ಲ. ಪ್ರಾಣಹೋಗುವ ಸ್ಥಿತಿಗೆ ಬಂದಿದೆ. ಧೈರ್ಯ ಕುಂದುತ್ತಿದೆ. ಮೂರ್ಛೆ ಬರುವಂತಾಗಿದೆ. ಈಗ ಏನು ಮಾಡಲೂ ನನಗೆ ತೋರುತ್ತಿಲ್ಲ. ಪರಮಾತ್ಮಾ, ಈ ಸಮಯದಲ್ಲಿ ನಿನ್ನನ್ನು ಬಿಟ್ಟರೆ ಬೇರೆ ಕಾಪಾಡುವವರನ್ನು ಕಾಣೆ. ನಾನು ಅನಾಥ. ಅನಾಥರನ್ನು ಕಾಪಾಡುವವನು ನೀನು. ನನ್ನನ್ನು ಕಾಪಾಡು, ಕಾಪಾಡು’’ಎಂದು ದೀನವಾಗಿ ಬೇಡಿಕೊಂಡಿತು.

ಭಕ್ತನ ಈ ಕೂಗನ್ನು ಕೇಳಿದ ವಿಷ್ಣು. ಆಗ ಅವನು ಲಕ್ಷ್ಮಿಯೊಡನೆ ವಿನೋದದ ಜಗಳದಲ್ಲಿ ತೊಡಗಿದ್ದ. ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಲಕ್ಷ್ಮಿಗೂ ಹೇಳಲಿಲ್ಲ. ಶಂಖ ಚಕ್ರಗಳನ್ನು ತೆಗೆದುಕೊಳ್ಳಲಿಲ್ಲ. ಸೇವಕರನ್ನು ಜೊತೆಗೆ ಬರುವಂತೆ ಕರೆಯಲಿಲ್ಲ. ಗರುಡನಿಗೆ ಸಿದ್ಧನಾಗೆಂದು ಅಪ್ಪಣೆ ಮಾಡಲಿಲ್ಲ. ಕಿವಿಯ ಮೇಲೆ ಜಾರಿಬಿದ್ದ ಕೂದಲುಗಳನ್ನು ಸರಿಪಡಿಸಿಕೊಳ್ಳಲಿಲ್ಲ. ಓಡಿ ಬಂದ ಪರಮಾತ್ಮ. ಭಕ್ತರನ್ನು ಕಾಪಾಡಲು ಅಷ್ಟು ಆತುರ ಭಗವಂತನಿಗೆ.

ಆದರೆ ವಿಷ್ಣು ಹಾಗೆ ಹೊರಟರೆ ಅವನ ಹಿಂದೆ ಲಕ್ಷ್ಮಿ. ಲಕ್ಷ್ಮಿಯ ಹಿಂದೆ ಅವನ ಪರಿವಾರ, ಪರಿವಾರದ ಹಿಂದೆ ಗರುಡ, ಗದೆ, ಶಂಖ, ಚಕ್ರಗಳು ಹೊರಟವು. ಹೀಗೆ ಭಗವಂತ ಪರಿವಾರ ಸಮೇತವಾಗಿ ಬರುತ್ತಿದ್ದರೆ ದೇವತೆಗಳು ಆಶ್ಚರ್ಯದಿಂದ ನೋಡುತ್ತಿದ್ದರು. ಅವರು ವಿಷ್ಣುವಿಗೆ ನಮಸ್ಕರಿಸಿದರು. ಆದರೆ ಅವನಿಗೆ ಅವರ ನಮಸ್ಕಾರಗಳನ್ನು ಸ್ವೀಕರಿಸುವಷ್ಟು ಸಮಯವೂ, ತಾಳ್ಮೆಯೂ ಇರಲಿಲ್ಲ.

ಓಡೋಡಿ ಬಂದ ಭಗವಂತ ತನ್ನ ಸುದರ್ಶನ ಚಕ್ರಕ್ಕೆ ಅಪ್ಪಣೆ ಮಾಡಿದ. ಅದು ಒಂದು ನಿಮಿಷದಲ್ಲಿ ಮೊಸಳೆಯ ಕತ್ತನ್ನು ಕತ್ತರಿಸಿತು. ಆಗ ವಿಷ್ಣು ತನ್ನ ಪಾಂಚಜನ್ಯವೆಂಬ ಶಂಖವನ್ನು ಊದಿದ. ಹೂವಿನ ಮಳೆ ಕರೆಯಿತು. ಎಲ್ಲರಿಗೂ ಸಂತೋಷವಾಯಿತು. ಎಲ್ಲ ಕಡೆಯೂ ಜಯ ಜಯ ಧ್ವನಿಯಾಯಿತು.

ವಿಷ್ಣು ಗಜೇಂದ್ರನ ಸೊಂಡಿಲನ್ನು ಹಿಡಿದು ಸರೋವರದಿಂದ ಹೊರಗೆ ಕರೆತಂದ. ಅದರ ಮೈ ತಡವಿದ. ವಿಷ್ಣುವಿನ ಕರುಣೆಯ ಕೈ ತಾಕಿದ ಕೂಡಲೇ ಆನೆಗೆ ದಾಹವಡಗಿತು. ಆಯಾಸವೆಲ್ಲಾ ಪರಿಹಾರವಾಯಿತು.

ಮೊಸಳೆಯ ರೂಪದಲ್ಲಿದ್ದುದು ಒಬ್ಬ ಗಂಧರ್ವ. ಅವನಿಗೆ ಶಾಪದಿಂದ ಮೊಸಳೆಯ ರೂಪ ಬಂದಿತ್ತು. ಆನೆಯ ರೂಪದಲ್ಲಿದ್ದುದು ಇಂದ್ರದ್ಯುಮ್ನನೆಂಬ ರಾಜ. ಅವನಿಗೆ ಅಗಸ್ತ್ಯಋಷಿಗಳ ಶಾಪದಿಂದ ಆನೆಯ ಜನ್ಮ ಬಂದಿತ್ತು. ಇಬ್ಬರಿಗೂ ಈಗ ವಿಷ್ಣುವಿನ ದಯೆಯಿಂದ ಶಾಪವಿಮೋಚನೆಯಾಯಿತು. ತಮ್ಮ ತಮ್ಮ ಮೊದಲಿನ ರೂಪಗಳನ್ನು ಪಡೆದರು. ವಿಷ್ಣುವಿಗೆ ನಮಸ್ಕರಿಸಿ ತೆರಳಿದರು.

‘‘ಇದು ಸಾಧ್ಯವೆ’’?

ಪೋತನ ತನ್ನ ಭಾಗವತವನ್ನು ಕೆಲವರು ಕವಿ ಮಿತ್ರರಿಗೆ ಓದಿದ. ಗಜೇಂದ್ರ ಮೋಕ್ಷದ ಕಥೆಯ ಭಾಗವನ್ನು ಕೇಳಿದ ಕವಿಯೊಬ್ಬ ಪೋತನನನ್ನು ಹಾಸ್ಯ ಮಾಡಿದ. ‘‘ನೀನು ಬರೆದಿರುವಂತೆ ವಿಷ್ಣು ಶತ್ರುವನ್ನು ಕೊಲ್ಲಲು ಯಾವ ಆಯುಧಗಳನ್ನೂ ತೆಗೆದುಕೊಳ್ಳದೆ ಹೇಗಿದ್ದನೋ ಹಾಗೆಯೇ ಹೊರಡುತ್ತಾನೆಯೇ? ಇದು ಕೇವಲ ಕಥೆಯಲ್ಲಿ ಮಾತ್ರ ಸಾಧ್ಯ’’ ಎಂದು ಹೇಳಿದ. ಇದಕ್ಕೆ ಪೋತನ ಯಾವ ಜವಾಬನ್ನೂ ಕೊಡಲಿಲ್ಲ.

ಕೆಲವು ದಿನಗಳ ನಂತರ ಒಂದು ದಿನ ಪೋತನ ಆ ಕವಿಯನ್ನು ಅವನ ಸಂಸಾರವನ್ನೂ ಊಟಕ್ಕೆ ಆಹ್ವಾನಿಸಿದ. ಅಂದು ಪೋತನ ಒಳ್ಳೆಯ ಅಡಿಗೆಯನ್ನು ಮಾಡಿಸಿದ್ದ. ಆ ಕವಿಯ ಮಗ ಸಣ್ಣ ಹುಡುಗನನ್ನು ಹಿತ್ತಲಿನ ಅಟ್ಟದ ಮೇಲೆ ಕೂಡಿಸಿದ. ಅವನಿಗೆ-‘‘ಒಂದು ದೊಡ್ಡ ಶಬ್ದವಾಗುತ್ತದೆ. ಆಗ ನೀನು ಅಯ್ಯಯ್ಯೋ ಸತ್ತೆ! ಎಂದು ಕಿರುಚು’’ ಎಂದು ಹೇಳಿಕೊಟ್ಟ. ಸೊಗಸಾದ ಊಟ. ಎಲ್ಲರೂ ಊಟದಲ್ಲಿ ತಲ್ಲೀನರಾಗಿದ್ದಾರೆ. ಆ ಸಮಯದಲ್ಲಿ ಪೋತನ ಬಾವಿಯಲ್ಲಿ ಒಂದು ದೊಡ್ಡ ಕಲ್ಲನ್ನು ಎತ್ತಿ ಹಾಕಿದ. ಆ ಶಬ್ದವನ್ನು ಕೇಳುತ್ತಿದ್ದಂತೆ ಕವಿಯ ಮಗ ‘ಅಯ್ಯಯ್ಯೋ ಸತ್ತೆ!’ ಎಂದು ಗಟ್ಟಿಯಾಗಿ ಕಿರುಚಿದ. ಊಟ ಮಾಡುತ್ತಿದ್ದ ಕವಿ ತನ್ನ ಮಗನ ಕೂಗನ್ನು ಕೇಳುತ್ತಿದ್ದಂತೆ ಎದ್ದು ಹಿತ್ತಲ ಕಡೆ ಓಡಲು ಮೊದಲು ಮಾಡಿದ. ತಕ್ಷಣ ಪೋತನ ಅವನನ್ನು ಅಡ್ಡಗಟ್ಟಿದ. ಕವಿಗೆ ಕೋಪ ಬಂದಿತು. ಅವನು ರೋಷದಿಂದ, ‘‘ಅಯ್ಯಾ ಪೋತನ ದಾರಿ ಬಿಡು. ನನ್ನ ಮಗ ಬಾವಿಯಲ್ಲಿ ಬಿದ್ದಿದ್ದಾನೆ’’ ಎಂದು ಹೇಳಿದ. ಅವನ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಅದಕ್ಕೆ ಪೋತನ-‘‘ಸ್ವಾಮಿ, ನಿಮ್ಮ ಊಟ ಇನ್ನೂ ಪೂರ್ತಿಯಾಗಿಲ್ಲ. ಎಂಜಲು ಕೈಯನ್ನೂ ತೊಳೆದಿಲ್ಲ. ಬಾವಿಯಲ್ಲಿ ಬಿದ್ದವನನ್ನು ಕಾಪಾಡಲು ಕಡೆಯ ಪಕ್ಷ ಒಂದು ಹಗ್ಗವನ್ನಾದರೂ ತೆಗೆದುಕೊಂಡಿಲ್ಲ. ತಾಳಿ ಅಷ್ಟು ಆತುರವೇಕೆ?’’ ಎಂದು ಸಮಾಧಾನವಾಗಿ ಹೇಳಿದ. ಅದಕ್ಕೆ ಕವಿ, ‘‘ನನ್ನ ಮಗನ ಪ್ರಾಣ ಹೋಗುತ್ತಿದೆ. ನಿನ್ನದೇನು ತಮಾಷೆ? ದಾರಿ ಬಿಡುತ್ತೀಯೋ ಇಲ್ಲವೋ? ಬಿಡು ದಾರಿ’’ ಎಂದು ಮತ್ತೆ ಜೋರಾಗಿ ಕಿರುಚಿ ಪೋತನನನ್ನು ದಾರಿಯಿಂದ ತಳ್ಳಿ ಹಿತ್ತಲಿಗೆ ಓಡಿದ ಕವಿ.

ಆಗ ಪೋತನ ಹೇಳಿದ. ‘‘ಸ್ವಾಮಿ ನಿಮ್ಮ ಮಗ ನಿಜವಾಗಿಯೂ ಬಾವಿಗೆ ಬಿದ್ದಿಲ್ಲ. ಇಲ್ಲಿಯೇ ಇದ್ದಾನೆ. ಆದರೂ ಅವನನ್ನು ಕಾಪಾಡಲು ಹೇಗೆ ಓಡಿದಿರಿ! ಇನ್ನು ನಿಜವಾಗಿಯೂ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿರುವ ಭಕ್ತನನ್ನು ಭಗವಂತ ಕಾಪಾಡಲು ಹೇಗೆ ಇದ್ದನೋ ಹಾಗೆ ಓಡೋಡಿ ಬಂದ ಎಂದರೆ ನಂಬುವುದಿಲ್ಲವೆ? ನಾವೆಲ್ಲ ಆ ದೇವರ ಮಕ್ಕಳು. ಅವನಿಗೆ ನಮ್ಮ ಯೋಗಕ್ಷೇಮದ ಬಗ್ಗೆ ಕಾತರವಿರುವುದಿಲ್ಲವೆ?’’ ಎಂದು ಕೇಳಿದ.

ಕವಿಯ ಸಂಶಯಕ್ಕೆ ಪೋತನ ಉತ್ತರ ಕೊಟ್ಟದ್ದು ಹೀಗೆ.

ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿದುದು

ಭಾಗವತದ ಹೃದಯ ದಶಮ ಸ್ಕಂಧ. ಶ್ರೀ ಕೃಷ್ಣನ ಚರಿತ್ರೆ ಇದರಲ್ಲಿ ಬರುತ್ತದೆ. ಪೋತನನ ಭಾಗವತದಲ್ಲಿ ಶ್ರೀಕೃಷ್ಣ ಗೋವರ್ಧನಗಿರಿಯನ್ನು ಎತ್ತಿದ ಕಥೆ ಹೀಗಿದೆ.

ಗೋಕುಲದಲ್ಲಿರುವ ಗೋಪಾಲಕರು ಪ್ರತಿವರ್ಷವೂ ಇಂದ್ರನನ್ನು ಪೂಜೆ ಮಾಡುತ್ತಿದ್ದರು. ಅದನ್ನು ಇಂದ್ರಯಾಗವೆಂದು ಕರೆಯುತ್ತಿದ್ದರು. ಇಂದ್ರ ಮೇಘಗಳನ್ನು ಉಂಟು ಮಾಡುತ್ತಾನೆ. ಅದರಿಂದ ಮಳೆ ಬರುತ್ತದೆ. ಮಳೆಯಿಂದ ಸಸ್ಯಗಳು ಬೆಳೆಯುತ್ತವೆ. ಸಸ್ಯಗಳು ಬೆಳೆಯುವುದರಿಂದ ಪಶುಗಳಿಗೂ ತಮಗೂ ಆಹಾರ ದೊರಕುತ್ತದೆ. ಆದ್ದರಿಂದ ಅವರು ಪ್ರತಿವರುಷವೂ ಇಂದ್ರನನ್ನು ಪೂಜಿಸುತ್ತಿದ್ದರು.

ಹಾಗೆಯೇ ಈ ವರುಷವೂ ಪೂಜೆ ಮಾಡಬೇಕೆಂದು ಮನಸ್ಸು ಮಾಡಿ ಬಾಲಕನಾದ ಶ್ರೀಕೃಷ್ಣನಿಗೆ ತಿಳಿಸಿದರು. ಆದರೆ ಕೃಷ್ಣ ಮಳೆ ಬೆಳೆಗಳಾಗುವುದು ಇಂದ್ರನಿಂದಲೇ ಎನ್ನುವ ಮಾತನ್ನು ಒಪ್ಪಲಿಲ್ಲ. ಇಂದ್ರಯಾಗವನ್ನು ಮಾಡುವುದು ಬೇಡ, ಬೆಟ್ಟಕ್ಕೆ ಪೂಜೆ ಮಾಡಿ ಎಂದು ಹೇಳಿದ. ಅವನ ಮಾತಿನಂತೆ ಅವರು ಬೆಟ್ಟಕ್ಕೆ ಪೂಜೆ ಮಾಡಿದರು.

ಇದರಿಂದ ದೇವತೆಗಳ ಒಡೆಯನಾದ ಇಂದ್ರನಿಗೆ ಬಹಳ ಕೋಪ ಬಂದಿತು. ‘ಹಾಲು, ಮೊಸರು, ತುಪ್ಪಗಳನ್ನುಂಡು ಲೋಕದ ಜನ ಕೊಬ್ಬಿಹೋಗಿದ್ದಾರೆ. ನನಗೆ ಪೂಜೆ ಮಾಡುವುದನ್ನು ನಿಲ್ಲಿಸಿದ ಇವರ ಅಹಂಕಾರಕ್ಕೆ ತಕ್ಕ ಶಿಕ್ಷೆಯನ್ನು ಮಾಡಬೇಕು’ ಎಂದು ಇಂದ್ರ ಯೋಚಿಸಿದ.  ಧಾರಾಕಾರವಾಗಿ ಮಳೆಯನ್ನು ಸುರಿಸುವಂತೆ ಮೋಡಗಳಿಗೆ ಹೇಳಿದ. ಆಕಾಶದಲ್ಲಿ ಮೋಡಗಳು ಕಲೆತು ಎಲ್ಲೆಲ್ಲೂ ಕತ್ತಲು ಕವಿಯಿತು. ಆಕಾಶದಿಂದ ಕಲ್ಲಿನ ಮಳೆ ಸುರಿಯಿತು. ಗುಡುಗು, ಸಿಡಿಲು, ಮಳೆಗೆ ಜನ, ದನಕರುಗಳು ತತ್ತರಿಸಿ ಹೋದವು. ಜನರು ಆಶ್ರಯವಿಲ್ಲದೆ ಚೆಲ್ಲಾಪಿಲ್ಲಿಯಾಗಿ ಓಡಲು ಮೊದಲು ಮಾಡಿದರು. ಎಲ್ಲ ಕಡೆಯೂ ಜಲಮಯ. ಎಲ್ಲಿ ನೋಡಿದರೂ ‘ಅಂಬಾ ಅಂಬಾ’ ಎಂದು ಕೂಗುವ ದನಗಳ ಆರ್ತನಾದ. ಚಳಿಯಿಂದ ನಡುಗುತ್ತಿದ್ದ ಗೋಪಿಕಾಸ್ತ್ರೀಯರು ಪುಟ್ಟ ಮಕ್ಕಳನ್ನು ಎತ್ತಿಕೊಂಡು ತಮ್ಮ ಹೃದಯದಲ್ಲಿ ಅವಚಿಕೊಂಡು ಆಶ್ರಯಕ್ಕಾಗಿ ಒದ್ದಾಡುತ್ತಿದ್ದರು.

ಆಗ ಅವರುಗಳಿಗೆ ಶ್ರೀಕೃಷ್ಣ ಕಾಣಿಸಿದ. ಅವರು, ‘‘ಕೃಷ್ಣಾ, ಗೋಕುಲದ ದನಕರುಗಳೂ, ಹೆಂಗಸರೂ, ಮಕ್ಕಳೂ, ಗೋಪಾಲಕರೂ-ಮಳೆಯಲ್ಲಿ ಸಿಕ್ಕಿ ಕಷ್ಟಪಡುತ್ತಿದ್ದಾರೆ. ಇಲ್ಲಿಯವರೆಗೂ ನೀನು ಎಲ್ಲಿಗೆ ಹೋಗಿದ್ದೆ? ಈಗ ನೀನು ನಮಗೆ ಕಂಡದ್ದರಿಂದ ನಮಗೆ ಧೈರ್ಯಬಂದಿತು’’ ಎಂದು ಹೇಳಿದರು. ಏನೂ ತಿಳಿಯದ, ರಕ್ಷಕರಿಲ್ಲದ ತನ್ನ ಊರಿನ ಪ್ರಜೆಗಳು, ಪಶುಗಳು ಅವಸ್ಥೆ ಪಡುತ್ತಿರುವುದನ್ನು ಕಂಡು ಕೃಷ್ಣನಿಗೆ ಮರುಕ ಉಂಟಾಯಿತು.

ಆಗ ಕೃಷ್ಣ ಅವರಿಗೆ, ‘‘ಭಯಪಡಬೇಡಿ, ಓಡಬೇಡಿ. ಮಳೆಯಿಂದ ರಕ್ಷಣೆಯನ್ನು ಒದಗಿಸುತ್ತೇನೆ’’ ಎಂದು ಅಲ್ಲಿದ್ದ ಗೋವರ್ಧನ ಗಿರಿಯನ್ನು ತನ್ನ ಒಂದು ಕೈಯಿಂದ ಮೇಲೆತ್ತಿ  ಹಿಡಿದ. ‘‘ಗೋಪಾಲರೇ, ಗೋಪಿಯರೇ, ಈ ಛತ್ರಿಯ ಕೆಳಗೆ ನಿಲ್ಲಿ. ನಿಮ್ಮ ದನಕರುಗಳನ್ನೂ, ನಿಮ್ಮ ಮಕ್ಕಳುಮರಿಗಳನ್ನೂ ಕರೆತನ್ನಿ’’ ಎಂದು ಅವರನ್ನೆಲ್ಲಾ ಅದರ ಕೆಳಗೆ ಬರುವಂತೆ ಕರೆದ. ಅವರೆಲ್ಲಾ ಬೆಟ್ಟದ ಕೆಳಗೆ ಬರಲು ಅನುಮಾನಿಸಿದರು. ಆಗ ಬಾಲಕ ಕೃಷ್ಣ ಹೇಳಿದ, ‘‘ಇವನು ಬಾಲಕ. ಬೆಟ್ಟ ದೊಡ್ಡದು. ಮಹಾ ಭಾರವಾಗಿದೆ. ಇದನ್ನು ಎತ್ತಿ ಹಿಡಿದು ನಿಂತಿರಬಲ್ಲನೆ ಎಂದು ಅನುಮಾನಿಸಬೇಡಿ. ಈ ಬೆಟ್ಟವೂ ಸೇರಿದಂತೆ ಪ್ರಪಂಚವೆಲ್ಲಾ ಮೇಲೆ ಬಿದ್ದರೂ ನನ್ನ ದೇಹ ಕಿಂಚಿತ್ತೂ ಅಲ್ಲಾಡುವುದಿಲ್ಲ. ಬಂಧುಗಳೇ, ಯಾವ ಚಿಂತೆಯೂ ಇಲ್ಲದೆ ಈ ಬೆಟ್ಟದ ಕೆಳಗೆ ನಿಲ್ಲಿ.’’

ಶ್ರೀಕೃಷ್ಣ ಹೀಗೆ ಬೆಟ್ಟವನ್ನು ಹಿಡಿದು ನಿಂತಿದ್ದ. ಅದರ ಕೆಳಗೆ ಗೋಕುಲದ ಜನರು, ದನಕರುಗಳೂ ಆಶ್ರಯ ಪಡೆದಿದ್ದವು. ಇಂದ್ರ ತನ್ನ ಕೋಪವನ್ನು ತೀರಿಸಿಕೊಳ್ಳಲು ಏಳು ದಿನ ಒಂದೇ ಸಮನಾಗಿ ಪ್ರಪಂಚ ಕೊಚ್ಚಿ ಹೋಗುವಂತೆ ಮಳೆಯನ್ನು ಸುರಿಸಿದ. ದೊಡ್ಡ ಬೆಟ್ಟವೆ ಛತ್ರಿ. ಹಿಡಿದಿರುವವನು ಶ್ರೀಕೃಷ್ಣ. ಆದ್ದರಿಂದ ಇಂದ್ರನ ಆಟ ಏನೂ ಸಾಗಲಿಲ್ಲ. ಕಡೆಯಲ್ಲಿ ಇಂದ್ರ ಸೋಲನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಇಂದ್ರನ ಗರ್ವ ಮುರಿಯಿತು. ಮಳೆ ನಿಂತಿತು. ಜನರೆಲ್ಲ ಸಂತೋಷದಿಂದ ಬೆಟ್ಟದ ಬುಡದಿಂದ ಆಚೆ ಬಂದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

ಆಗ ಇಂದ್ರ ಶ್ರೀಕೃಷ್ಣನ ಮುಂದೆ ಕೈ ಮುಗಿದು ನಿಂತ. ಶ್ರೀಕೃಷ್ಣ ಹೇಳಿದ. ‘‘ಅಧಿಕಾರವಿದೆಯೆಂದು, ಬಲಾಢ್ಯನೆಂದು ಕೊಬ್ಬಬೇಡ. ನಿನ್ನ ಕೆಲಸವನ್ನು ನೀನು ಮುಂದುವರೆಸು.’’ ಹೀಗೆ ಅಪ್ಪಣೆ ಮಾಡಿ ಅವನನ್ನು ಕಳುಹಿಸಿದ.

ಎಷ್ಟೇ ಬಲಶಾಲಿಯಾಗಲಿ, ಅಧಿಕಾರ, ಹಣವಿರಲಿ ಗರ್ವಪಡಬಾರದು. ಅಹಂಕಾರಪಟ್ಟರೆ ಅದಕ್ಕೆ ತಕ್ಕದ್ದನ್ನು ಅನುಭವಿಸಲೇಬೇಕು ಎಂದು ತೋರಿಸುತ್ತದೆ ಭಾಗವತದ ಈ ಕಥೆ.

ಪೋತನ ಭಾಗವತವನ್ನಲ್ಲದೆ ಇನ್ನೂ ಕೆಲವು ಕಾವ್ಯಗಳನ್ನು ರಚಿಸಿದ್ದಾನೆ. ಅವುಗಳು (೧) ವೀರಭದ್ರ ವಿಜಯ (೨) ಭೋಗಿನಿ ದಂಡಕ.

ವೀರಭದ್ರವಿಜಯ

ಪೋತನನ ಕಾಲದಲ್ಲಿದ್ದ ರಾಜರೆಲ್ಲಾ ವೀರಶೈವ ಮತವನ್ನು ಅನುಸರಿಸುತ್ತಿದ್ದರು. ಇಲ್ಲವೇ ಆ ಮತದ ಪೋತ್ಸಾಹಕರಾಗಿದ್ದರು ಎಂಬುದು ತಿಳಿದು ಬರುತ್ತದೆ. ಪೋತನ ಕೂಡಾ ಚಿಕ್ಕಂದಿನಲ್ಲಿ ವೀರಶೈವ ಮತದ ಪಕ್ಷಪಾತಿಯಾಗಿದ್ದ. ಜೊತೆಗೆ ಪೋತನ ಈಶ್ವರನ ಪರಮಭಕ್ತ. ಇವನ ಮನೆತನದ ಗುರುಗಳು ವೀರಶೈವ ಮಠದ ಗುರುಗಳಾಗಿದ್ದ ಇವಟೂರು ಸೋಮನಾಥಾ ರಾಧ್ಯರು. ಅವರ ಸೂಚನೆಯಂತೆ ಪೋತನ ‘ವೀರಭದ್ರ ವಿಜಯ’ ವನ್ನು ಬರೆದ ಎಂದು ಹೇಳಬಹುದು.

ಈ ಕಾವ್ಯದಲ್ಲಿ ನಾಲ್ಕು ಅಧ್ಯಾಯಗಳಿವೆ. ಇದಕ್ಕೆ ವಿಷಯವನ್ನು ವಾಯುಪುರಾಣ, ಬ್ರಹ್ಮಪುರಾಣಗಳಿಂದ ತೆಗೆದುಕೊಂಡಿದ್ದಾನೆ. ‘ವೀರಭದ್ರವಿಜಯ’ ದ ಕಥೆಯ ಪ್ರಕಾರ ದಕ್ಷ ಎರಡು ಬಾರಿ ಯಜ್ಞವನ್ನು ಮಾಡಿದ.

ಈ ಕಾವ್ಯದಲ್ಲಿ ಪೋತನ ಶಿವನ ಪಾದಕಮಲಗಳನ್ನು ಭಜಿಸುವವರು, ಪ್ರಪಂಚದ ಬಂಧನಗಳನ್ನು ಕಳೆದುಕೊಂಡ ವರನ್ನು ಪ್ರಾರ್ಥಿಸಿದ್ದಾನೆ. ಕಾವ್ಯದ ಪ್ರಾರಂಭದಲ್ಲಿ ಶಿವ, ವೀರಭದ್ರ, ಗಣಪತಿ, ಸರಸ್ವತಿಯರ ಪ್ರಾರ್ಥನೆಯಿದೆ.

ಈ ಕಾವ್ಯದಲ್ಲಿ ವ್ಯಾಕರಣ ದೋಷಗಳಿವೆ. ಬೇಡದ ಪದಗಳನ್ನೂ, ಕಠಿಣ ಪದಗಳನ್ನೂ ಉಪಯೋಗಿಸಿದ್ದಾನೆ. ಕಥೆ ಭಾಗವತದ ಕಥೆಯಂತೆ, ಅಡೆತಡೆಯಿಲ್ಲದೆ ಓಡುವುದಿಲ್ಲ.

ಭೋಗಿನಿ ದಂಡಕ

ದಂಡಕ ಒಂದು ಬಗೆಯ ಛಂದಸ್ಸು. ದಂಡಕ ಛಂದಸ್ಸನ್ನು ಉಪಯೋಗಿಸಿ ಬರೆದ ಕಾವ್ಯವನ್ನು ದಂಡಕವೆಂದೇ ಕರೆಯುತ್ತಾರೆ. ಒಂದು ದೊಡ್ಡ ಕಾವ್ಯವನ್ನು ರಚಿಸುವಾಗ ಮಧ್ಯೆ ಅಲ್ಲಲ್ಲಿ ಈ ಛಂದಸ್ಸನ್ನು ಹಿಂದಿನ ಕವಿಗಳು ಉಪಯೋಗಿಸುತ್ತಿದ್ದರು. ಅಲ್ಲಿಯವರೆಗೂ ಯಾರೂ ಪೂರ್ತಿ ಕಾವ್ಯವನ್ನು ದಂಡಕದಲ್ಲಿ ಬರೆದಿರಲಿಲ್ಲ. ದಂಡಕ ಛಂದಸ್ಸಿನಲ್ಲಿ ರಚಿಸಿದ ಮೊದಲ ತೆಲುಗು ಕಾವ್ಯ ಪೋತನನ ‘ಭೋಗಿನಿ ದಂಡಕ’. ತೆಲುಗಿನಲ್ಲಿ ಇರುವಷ್ಟು ದಂಡಕ ಕಾವ್ಯಗಳು ಬೇರೆ ಯಾವ ಭಾಷೆಯಲ್ಲಿಯೂ ಇಲ್ಲವೆಂದು ಹೇಳಬಹುದು.

‘ಭೋಗಿನಿ ದಂಡಕ’ ದ ನಾಯಕ-ನಾಯಕಿಯರು ರಾಜ ನಾದ ಸರ್ವಜ್ಞ ಸಿಂಗಭೂಪಾಲ ಮತ್ತು ಅವನ ಆಸ್ಥಾನದ ನರ್ತಕಿ. ಸಿಂಗಭೂಪಾಲ ಕೃಷ್ಣನಿಗೆ ಸಂಬಂಧಪಟ್ಟ ಒಂದು ಉತ್ಸವದಲ್ಲಿ ಭಾಗವಹಿಸಿದ್ದ. ಆ ಸಮಯದಲ್ಲಿ ಅರಮನೆಯ ಮಹಡಿಯಿಂದ ಅವನನ್ನು ರೂಪವತಿಯಾದ ಹೆಣ್ಣೊಬ್ಬಳು ನೋಡಿದಳು. ಅವಳು ರಾಜನನ್ನು ಮೋಹಿಸಿ ಅವನನ್ನು ಪಡೆಯಲು ಆಸೆಪಟ್ಟಳು. ಆದರೆ ಅವಳ ತಾಯಿ, ‘‘ಅವನು ರಾಜ, ಅವನು ನಮಗೆ ಎಟುಕುವವನಲ್ಲ. ಅವನ ರಾಜಪದವಿಗೆ ನಾವು ತಕ್ಕವರಲ್ಲ. ಈ ಆಸೆಯನ್ನು ಬಿಡು’’ ಎಂದು ಹೇಳಿದಳು. ಆದರೆ ಮಗಳು ಕೇಳಲಿಲ್ಲ, ಕಡೆಗೆ ರಾಜನನ್ನು ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದಳು. ರಾಜ ಆ ನರ್ತಕಿಯ ಮನೆಗೆ ಬಂದ. ನರ್ತಕಿಯ ತಾಯಿ ರಾಜನಿಗೆ ತನ್ನ ಮಗಳ ಇಷ್ಟವನ್ನು ತಿಳಿಸಿದಳು. ರಾಜ ಅವಳನ್ನು ಒಪ್ಪಿಕೊಂಡ. ಅಷ್ಟೇ ಅಲ್ಲ ಅವಳಿಗೆ ‘ಭೋಗಿನಿ’ ಎನ್ನುವ ಬಿರುದನ್ನು ಕೊಟ್ಟ. ಸ್ಥೂಲವಾಗಿ ಭೋಗಿನಿ ದಂಡಕ’ ದ ಕಥೆ ಇದು.

‘ಭೋಗಿನಿ ದಂಡಕ’ ಒಂದು ಶೃಂಗಾರ ಕಾವ್ಯ. ಭಕ್ತ ಕವಿಯಾದ ಪೋತನ ಇಂತಹ ಕಾವ್ಯವನ್ನು ಬರೆದನೇ ಎನ್ನುವುದು ಕೆಲವರ ಅನುಮಾನ. ಆದರೆ ಪೋತನ ತನ್ನ ತಾರುಣ್ಯದ ಆರಂಭದಲ್ಲಿ ರಾಜರನ್ನು ಆಶ್ರಯಿಸಿದ್ದ. ಆಗ ಅವನು ಪ್ರಪಂಚದ ಎಲ್ಲ ಭೋಗಗಳನ್ನು ಪಡೆದಿದ್ದ. ಅವನಿಗೆ ಊಟ-ತಿಂಡಿಗಳಿಗೆ, ಒಡವೆ-ವಸ್ತ್ರಗಳಿಗೆ ಕೊರತೆಯಿರಲಿಲ್ಲ. ಆಗ ಅವನ ಜೀವನ ಸುಖ ಸಂತೋಷಗಳಿಂದ ಕೂಡಿತ್ತು. ತನ್ನ ರಾಜನಾದ ಸರ್ವಜ್ಞ ಸಿಂಗಭೂಪಾಲನನ್ನು ಮೆಚ್ಚಿಸಲು ಅವನನ್ನು ನಾಯಕನಾಗಿ ಮಾಡಿಕೊಂಡು ‘ಭೋಗಿನಿ ದಂಡಕ’ ವನ್ನು ರಚಿಸಿದ. ಇದರಿಂದ ಅವನು ತಾರುಣ್ಯದಲ್ಲಿ ಇತರ ಕವಿಗಳಂತೆ ಭೋಗಭಾಗ್ಯಗಳನ್ನು ಅನುಭವಿಸುತ್ತಿದ್ದ ಎಂದು ಹೇಳಬಹುದು.

ನಾರಾಯಣ ಶತಕ

ಪೋತನ ರಚಿಸಿದನೆಂದು ಹೇಳುವ ಇನ್ನೊಂದು ಕಾವ್ಯ ‘ನಾರಾಯಣ ಶತಕ’. ಇದರಲ್ಲಿ ನಾರಾಯಣನನ್ನು ಸ್ತುತಿಸುವ ಪದ್ಯಗಳಿವೆ. ಇದು ಪೋತನನಿಂದ ರಚಿತವಾದದು ಎನ್ನುವ ವಿಷಯದಲ್ಲಿ ವಿದ್ವಾಂಸರಲ್ಲಿ ಒಂದೇ ಅಭಿಪ್ರಾಯವಿಲ್ಲ.

ಮೂರು ಘಟ್ಟಗಳು

ಪೋತನನ ಜೀವನದಲ್ಲಿ ನಾವು ಮುಖ್ಯವಾಗಿ ಮೂರು ಘಟ್ಟಗಳನ್ನು ಕಾಣಬಹುದು.

ಹುಡುಗನಾಗಿದ್ದಾಗ ವಯಸ್ಸಿನಿಂದಲೂ, ಮನಸ್ಸಿನಿಂದಲೂ ಇನ್ನೂ ಅಪಕ್ವ ಸ್ಥಿತಿಯಲ್ಲಿದ್ದವನು.

ಅನಂತರ ತಾರುಣ್ಯದ ಆರಂಭದ ದಿನಗಳು. ಈ ಕಾಲದಲ್ಲಿ ಅವನು ರಾಜರನ್ನು ಆಶ್ರಯಿಸಿದ್ದ. ಪಟ್ಟಣದಲ್ಲಿ ವಾಸ ಮಾಡುತ್ತಿದ್ದ. ಎಲ್ಲರಂತೆ ಸಂಸಾರವನ್ನು ಹಂಚಿಕೊಂಡಿದ್ದ. ಪ್ರಪಂಚದ ವಿಷಯಗಳಲ್ಲಿ ಆಸಕ್ತಿಯಿಂದ ಇರುತ್ತಿದ್ದ. ಎಲ್ಲ ಭೋಗಗಳನ್ನೂ, ಸುಖವನ್ನೂ ಅನುಭವಿಸಲು ಆಸೆ ಪಡುತ್ತಿದ್ದ. ಆಗ ಅವನು ‘ಭೋಗಿನಿ ದಂಡಕ’ವನ್ನು ತನ್ನ ರಾಜನ ಅಂಕಿತ ಮಾಡಿ ರಚಿಸಿದ.

ತಾರುಣ್ಯದ ಕಡೆಯಲ್ಲಿ ಎಲ್ಲ ಭೋಗ-ಭಾಗ್ಯಗಳನ್ನೂ ಕಡೆಗಣಿಸಿದ. ಭೋಗ-ಭಾಗ್ಯಗಳು ಶಾಶ್ವತವಲ್ಲ; ದೇವರೊಬ್ಬನೇ ನಿತ್ಯ ಎನ್ನುವ ದೃಢ ನಿರ್ಧಾರಕ್ಕೆ ಬಂದ. ದೇವರನ್ನು ಬಿಟ್ಟು ತನಗೆ ಬೇರೆ ಗತಿಯಿಲ್ಲ ಎಂದು ನಂಬಿದ. ಈಶ್ವರ ಬೇರೆಯಲ್ಲ. ವಿಷ್ಣು ಬೇರೆಯಲ್ಲ, ಹರಿ ಹರರಿಬ್ಬರೂ ಒಂದೇ. ಅವರಿಬ್ಬರಲ್ಲೂ ಭೇದಭಾವವನ್ನು ಎಣಿಸಬಾರದು-ಎನ್ನುವ ಮನಃಸ್ಥಿತಿಗೆ ಬಂದ; ಮತ್ತು ಅದರಂತೆ ನಡೆದುಕೊಂಡ.

ಅವನ ಮನಸ್ಸು ಬದಲಾಗಿ ಹೀಗೆ ಒಂದು ಹದಕ್ಕೆ ಬಂದಿತು. ಮೊದಲಿನ ವೈಭವದ ಜೀವನ ಬೇಡ ಎನ್ನಿಸಿತು. ಇನ್ನು ಮುಂದೆ ಸರಳ ಜೀವನವನ್ನು ನಡೆಸಬೇಕು ಎನ್ನುವ ನಿರ್ಧಾರವನ್ನು ಮಾಡಿದ. ಈ ನಿರ್ಧಾರವನ್ನು ಕೈಗೊಂಡ ಮೇಲೆ ತನ್ನ ಸ್ವಂತ ಗ್ರಾಮಕ್ಕೆ ಹಿಂದಿರುಗಿದ. ತನ್ನ ಸಂಸಾರವನ್ನು ಪೋಷಿಸುವುದಕ್ಕಾಗಿ ಬೇಸಾಯಗಾರನಾದ. ತನಗೆ ಇದ್ದ ಅಲ್ಪ ಸ್ವಲ್ಪ ಜಮೀನನ್ನು ತಾನೇ ಸ್ವತಃ ಉತ್ತು, ಬಿತ್ತು ಬೆಳೆ ಬೆಳೆಯುತ್ತಿದ್ದ. ಅದರಲ್ಲಿ ಬಂದ ಬೆಳೆಯಲ್ಲಿಯೇ ತೃಪ್ತಿಯ ಜೀವನವನ್ನು ಸಾಗಿಸಲು ಮೊದಲು ಮಾಡಿದ. ಈ ಸ್ಥಿತಿಗೆ ಬರುವ ವೇಳೆಗೆ ಅವನ ತಾರುಣ್ಯದ ಬಹುಭಾಗ ಕಳೆದಿತ್ತು. ಇಂತಹ ಪಕ್ವ ಸ್ಥಿತಿಗೆ ಅವನ ಮನಸ್ಸು ತಲುಪಿದಾಗ ಅವನು ಭಾಗವತವನ್ನು ತನ್ನ ಗ್ರಾಮದಲ್ಲಿರುವ ವೇಣುಗೋಪಾಲನ ಸನ್ನಿಧಿಯಲ್ಲಿ ರಚಿಸಲು ತೊಡಗಿದ.

ಋಷಿ – ಕವಿ

ಭಕ್ತನಾದ ಪೋತನ, ಸಹಜ ಕವಿಯಾದ ಪೋತನ ಭಾಗವತವನ್ನು ಬರೆದುದರಿಂದಲೇ ಅದು ರಸಪೂರ್ಣ ಕಾವ್ಯವಾಗಿದೆ; ಪೂಜ್ಯ ಗ್ರಂಥವಾಗಿದೆ. ಪೋತನ ಇಂದಿಗೂ, ಎಂದೆಂದಿಗೂ ಉಳಿಯುವ ಕವಿಯಾಗಿದ್ದಾನೆ. ಹಾಗೆಯೇ ಆಂಧ್ರ ಭಾಗವತ ಎಂದೆಂದಿಗೂ ಉಳಿಯುವ, ಭಕ್ತರ ಮನಸ್ಸನ್ನು ಅರಳಿಸುವ ಕಾವ್ಯವಾಗಿದೆ. ಋಷಿಯಲ್ಲದವನು ಕವಿಯಾಗಲಾರ ಎನ್ನುವ ಮಾತನ್ನು ನಿಜ ಮಾಡಿ ತೋರಿಸಿದ್ದಾನೆ ಸಂತಕವಿ ಭಕ್ತ ಪೋತನ.