ಕುದುರೆಯ ಮೇಲೆ ಸವಾರಿ ಮಾಡುತ್ತ ಕೈಯಲ್ಲಿರುವ ದಾಂಡಿನಿಂದ ಎದುರು ತಂಡದ ಗೋಲಿನಲ್ಲಿ ಚೆಂಡನ್ನು ನುಗಿಸುವ ಆಟ (ಪೋಲೋ). ಇದಕ್ಕೆ ಕುದುರೆಯ ಮೇಲೆ ಸವಾರಿಮಾಡುತ್ತ ಆಡುವ ಹಾಕಿ ಎಂದು ಹೇಳುತ್ತಾರೆ. ಪೋಲೋ ಪೂರ್ವದೇಶಗಳಲ್ಲಿ ಮೊದಲು ಬಳಕೆಗೆ ಬಂತು. ಈಗ ಪೋಲೋ ಹೆಚ್ಚಾಗಿ ಬಳಕೆಯಲ್ಲಿರುವ ರಾಷ್ಟ್ರಗಳೆಂದರೆ ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ದಕ್ಷಿಣ ಅಮೆರಿಕೆಯ ಅರ್ಜಂಟೀನದಲ್ಲಿದು ಜನಪ್ರಿಯ ಆಟ. ಟಿಬೆಟನ್ ಭಾಷೆಯಲ್ಲಿ ಪುಲು ಎಂದರೆ ಚೆಂಡು. ಪುಲು ಪದದಿಂದ ಪೋಲೋ ಬಂತು. ಪೋಲೋ ಬೆಳೆದುಬಂದ ಬಗೆ ತುಂಬ ಕುತೂಹಲಕಾರಿಯಾಗಿದೆ. ಟಿಬೆಟ್ಟಿನಲ್ಲಿ ನೂರಾರು ವರ್ಷಗಳ ವರೆಗೆ ಪೋಲೋ ಜನಪ್ರಿಯ ಆಟವಾಗಿತ್ತು. ಆದರೆ ಒಂದು ಪ್ರಾಚೀನ ದಾಖಲೆಯಂತೆ ಪ್ರಥಮವಾಗಿ ಪೋಲೋವನ್ನು ಇರಾನಿನಲ್ಲಿ ಆಡಲಾಯಿತೆಂದು ತಿಳಿದುಬಂದಿದೆ. ೧೬೧೩ರಲ್ಲಿ ಪ್ರಕಟವಾದ ಇರಾನ್ ಪ್ರವಾಸ ಗ್ರಂಥದಲ್ಲಿ ಆಮತೋನಿ ಶೆರ‍್ಲಿ ಇರಾನಿನ ಪೋಲೋ ಆಟವನ್ನು ಕುರಿತು ಬರೆದಿದ್ದಾನೆ. ಪಾರಸಿ ಕವಿ ಫಿರ್ದೂಸಿಯ ಶಹನಾಮ ಗ್ರಂಥದಲ್ಲಿಯೂ ಪೋಲೋ ಆಟದ ಉಲ್ಲೇಖವಿದೆ. ಪರ್ಷಿಯದಿಂದ ಈಜಿಪ್ಟ್, ಅನಂತರ ಚೀನ, ಜಪಾನ್, ಟಿಬೆಟ್ ಹಾಗೂ ಭಾರತಗಳಿಗೆ ಪೋಲೋ ತಲುಪಿತು. ಇರಾನಿನಲ್ಲಿ ಸುಮಾರು ೧೨ನೆಯ ಶತಮಾನದ ಆಟದ ಮೈದಾನವಿದೆ. ಇಲ್ಲಿ ಕಲ್ಲಿನ ಗೋಲುಕಂಬಗಳಿವೆ. ಹಿಂದೆ ಇಲ್ಲಿ ಪಾರಸೀಗಳು ಪೋಲೋ ಆಡುತ್ತಿದ್ದರು.
ಭಾರತದಲ್ಲಿ ಮೊಗಲರಸರ ಕಾಲದಲ್ಲಿ ೧೬ನೆಯ ಶತಮಾನದ ಪ್ರಾರಂಭದಲ್ಲಿ ಹಾಗೂ೧೮ನೆಯ ಶತಮಾನದ ಮಧ್ಯದಲ್ಲಿ ಪೋಲೋ ಪ್ರಸಿದ್ಧಿ ಪಡೆದಿತ್ತು. ಮೊಗಲರಸರಿಗೆ ಪೋಲೋ ಮೆಚ್ಚಿನ ಆಟವಾಗಿತ್ತು. ಜಾಗನ್ ಎಂಬ ಅವರೆ ಆಟ ಇಂದಿನ ಪೋಲೋವನ್ನು ಬಹಳ ಹೋಲುತ್ತಿತ್ತು. ಮೊಗಲರಸರಲ್ಲಿಯೇ ಜನಪ್ರಿಯನಾದ ಅರಸ ಅಕ್ಬರನಿಗೆ ಜಾಗನ್ ಎಂದರೆ ಮೆಚ್ಚಿನ ಆಟ. ಅದರಲ್ಲವನು ನಿಷ್ಣಾತ. ಆತನೇ ಆಟದ ಹೊಸನಿಯಮಗಳನ್ನು ರಚಿಸಿದನೆಂದು ತಿಳಿದುಬರುತ್ತದೆ. ಮೊಗಲರ ಅವನತಿಯ ಅನಂತರ ಭಾರತದಲ್ಲಿ ಸುಮಾರು ೧೦೦ ವರ್ಷಗಳ ವರೆಗೆ ಪೋಲೊ ಕಣ್ಮರೆಯಾಗಿತ್ತು. ಆದರೆ ಆಗ್ನೇಯ ಮತ್ತು ವಾಯುವ್ಯ ಸರಹದ್ದು ಪ್ರದೇಶಗಳಲ್ಲಿನ ಕೆಲವು ಜಮೀನುದಾರರು ತಮ್ಮದೇ ಆದ ಒಂದು ಬಗೆಯ ಪೋಲೋ ಆಟವನ್ನು ಆಡುತ್ತಿದ್ದರು. ಇಂಥ ಆಟವನ್ನು ಒಮ್ಮೆ ಅಸ್ಸಾಂ ರಾಜ್ಯದಲ್ಲಿನ ಚಹತೋಟದ ಆಂಗ್ಲ ಮಾಲಿಕರು ಕಂಡರು. ಆಟ ಅವರಿಗೆ ಮೆಚ್ಚಿಗೆಯಾಯಿತು. ಅವರೂ ಆಡಲು ಪ್ರಾರಂಭಿಸಿದರು. ೧೮೫೯ರಲ್ಲಿ ಅಸ್ಯಾಮಿನಲ್ಲಿ ಪೋಲೋ ಕ್ಲಬ್ ಸ್ಥಾಪನೆಯಾಯಿತು. ಆಟದ ಕೆಲವು ನಿಯಮಗಳು ಜಾರಿಗೆ ಬಂದುವು. ಕಲ್ಕತ್ತದಲ್ಲಿ (೧೮೬೦) ಪೋಲೋ ಕ್ಲಬ್ ಪ್ರಾರಂಭವಾಯಿತು. ಭಾರತದಲ್ಲಿನ ಆಂಗ್ಲರನ್ನನುಸರಿಸಿ ಇಂಗ್ಲೆಂಡಿನ ಆಂಗ್ಲರೂ ಪೋಲೋ ಆಟದಲ್ಲಿ ಆಸಕ್ತಿ ತೋರಿದರು. ಕಳೆದ ಶತಮಾನದ ಅಂತ್ಯದ ವೇಳೆಗೆ ಇನ್ನಾವ ದೇಶದಲ್ಲೂ ಬಳಕೆಯಲ್ಲಿರದಷ್ಟು ಪೋಲೋ ಭಾರತದಲ್ಲಿ ವ್ಯಾಪಕವಾಗಿತ್ತು. ೧೮೯೨ರಲ್ಲಿ ಇಂಡಿಯನ್ ಪೋಲೋ ಸಂಘದ ಸ್ಥಾಪನೆಯಾಯಿತು. ಜೋಧಪುರ ಬಿಕಾನೇರ್, ಪಾಟಿಯಾಲ ಮತ್ತು ಹೈದರಾಬಾದುಗಳಲ್ಲಿ ಹಲವಾರು ಜನರು ಪೋಲೋ ಆಡಲು ಪ್ರಾರಂಭಿಸಿದರು. ೧೯೩೦ರಿಂದ ೧೯೩೮ರ ವರೆಗೆ ಅಖಿಲಭಾರತ ಚಾಂಪಿಯನ್ ಷಿಪ್ ಗಳನ್ನು ಜಯಪುರದ ಪೋಲೋ ತಂಡ ಗೆದ್ದಿ ತಲ್ಲದೆ ೧೯೩೩ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಎಲ್ಲ ಸ್ಪರ್ಧಗಳಲ್ಲೂ ಜಯ ಪಡೆಯಿತು.
ಇಂಗ್ಲೆಂಡಿನಲ್ಲಿ ೧೮೭೧ರಲ್ಲಿ ನಡೆದ ಪೋಲೋ ಸ್ಪರ್ಧೆಯ ತಂಡದಲ್ಲಿ ಎಂಟು ಆಟಗಾರರಿದ್ದರು. ೧೮೭೩ರಲ್ಲಿ ಆಟಗಾರರ ಸಂಖ್ಯೆಯನ್ನು ಐದಕ್ಕೆ ಇಳಿಸಲಾಯಿತು. ೧೮೮೨ರಲ್ಲಿ ಆ ಸಂಖ್ಯೆ ನಾಲ್ಕಕ್ಕೆ ಇಳಿಯಿತು.
ಅಮೆರಿಕದಲ್ಲಿ ೧೮೩೩ರಲ್ಲಿ ಪ್ರಥಮವಾಗಿ ಪೋಲೋ ಆಡಲಾಯಿತು.
ಪೋಲೋ ಆಟ ಹಾಕಿ, ಕಾಲ್ಚೆಂಡುಗಳಂತೆ ಎರಡು ತಂಡಗಳಲ್ಲಿ ನಡೆಯುತ್ತದೆ. ಪ್ರತಿಯೊಂದು ತಂಡದಲ್ಲಿ ನಾಲ್ಕು ಆಟಗಾರರಿರುತ್ತಾರೆ. ಆಟದ ಮೈದಾನ ೩೦೦ ಗಜ ಉದ್ದ ಮತ್ತು ೨೦೦ ಗಜ ಅಗಲವಿರುತ್ತದೆ. ಮರದ ಹಲಗೆ ಹಾಸಿದ ಮೈದಾನವಾದರೆ ಅಗಲ ೧೬೦ ಗಜ ಇರುತ್ತದೆ. ಆಟದ ದಾಂಡಿನ ಉದ್ದ ೪೮ರಿಂದ ೫೪ ಅಂಗುಲ. ಇದಕ್ಕೆ ಬಡಿಗೆಯನ್ನು ಹೋಲುವ ಅಡ್ಡ ಶಿರೋಭಾಗವಿರುತ್ತದೆ. ಈ ಭಾಗದಿಂದ ಚೆಂಡನ್ನು ಹೊಡೆಯುತ್ತಾರೆ. ದಾಂಡಿನ ಭಾರ ಸುಮಾರು ಒಂದು ಪೌಂಡು ಇರುತ್ತದೆ. ಚೆಂಡನ್ನು ವಿಲೋ ಮರದ ಬೇರಿನಿಂದಾಗಲಿ ದಿಂಡಿನಿಂದಾಗಲಿ ಮಾಡುತ್ತಾರೆ. ಇದರ ವ್ಯಾಸ ೩ ೧/೨ ಅಂಗುಲ. ಭಾರ ೪೩/೪ದಿಂದ ೪೩/೪ ಔನ್ಸುಗಳು, ಎರಡು ಕಡೆಯ ಗೋಲುಗಳ ನಡುವಿನ ಪರಮಾವಧಿ ದೂರ ೨೬೦ ೨೪ ಅಡಿ ಅಂತರವಿರುತ್ತದೆ. ಗೋಲುಕಂಬದ ಎತ್ತರ ೧೦ ಅಡಿ. ಪೋಲೋ ಆಟಕ್ಕೆ ನಿಶ್ಚಿತವಾದ ಅವಧಿ ಒಂದು ಗಂಟೆ. ಎಂಡು ಸುತ್ತುಗಳಲ್ಲಿ ಆಡುತ್ತಾರೆ. ಒಂದು ಸುತ್ತಿನ ಅವಧಿ ೭೧/೨ ಮಿನಿಟುಗಳು. ಪ್ರತಿಯೊಂದು ಸುತ್ತಿನ ಮಧ್ಯೆ ೩ ಮಿನಿಟುಗಳ ವಿರಾಮ. ನಾಲ್ಕು ಸುತ್ತುಗಳು ಮುಗಿದ ಅನಂತರ ೫ ಮಿನಿಟುಗಳ ವಿಶ್ರಾಂತಿ, ಈ ಸುತ್ತುಗಳಿಗೆ ಚಕ್ಕರ್ ಎನ್ನುತ್ತಾರೆ. ಚಕ್ಕರ್ ಭಾರತೀಯ ಪದ. ಇದು ಅಂತರರಾಷ್ಟ್ರೀಯ ಆಟಗಳಲ್ಲೂ ಬಳಕೆಯಲ್ಲಿದೆ. ಪೋಲೋ ಅತಿ ವೇಗವಾಗಿ ಸಾಗುವ ಆಟ. ಇದರಲ್ಲಿ ಕುದುರೆಸವಾರಿ ಮಾಡುವ ಇಬ್ಬರು ಅಂಪೈರುಗಳು ಆಟದ ಮೈದಾನದ ಒಂದೊಂದು ಬದಿಯಲ್ಲಿ ಇರುತ್ತಾರೆ. ಆಟಗಾರರು ನಿಯಮಗಳನ್ನು ಮೀರಿದಾಗ ಅಂಪೈರುಗಳು ವಿಚಾರ ವಿನಿಮಯ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ. ಅಂಪೈರುಗಳಲ್ಲಿ ಒಮ್ಮತವಾಗದಿದ್ದರೆ ರೆಫರಿ ಅಂತಿಮ ನಿರ್ಧಾರ ನೀಡುತ್ತಾನೆ. ರೆಫರಿ ಮೈದಾನದ ಪಾರ್ಶ್ವದ ಎಲ್ಲೆಯಲ್ಲಿದ್ದು ಆಟವನ್ನು ವೀಕ್ಷಿಸುತ್ತಾನೆ. ಪೋಲೋ ಆಟದಲ್ಲಿ ಆಟಗಾರರಿಗೆ ಮತ್ತು ಕುದುರೆಗಳಿಗೆ ಅಪಾಯವಾದಿರಲೆಂದು ಹಲವಾರು ಸಂರಕ್ಷಣಾ ನಿಯಮಗಳನ್ನು ರೂಪಿಸಲಾಗಿದೆ. ಪ್ರತಿ ತಂಡದಲ್ಲಿ ನಾಲ್ಕು ಆಟಗಾರರಿರುತ್ತಾರಷ್ಟೆ. ಅವರಿಗೆಲ್ಲ ೧, ೨, ೩, ೪ ಹೀಗೆ ಸಂಖ್ಯೆಗಳನ್ನು ಕೊಟ್ಟಿರುತ್ತಾರೆ. ಇದು ಆಟದ ಮೈದಾನದಲ್ಲಿ ಮಾಡುವಲ್ಲಿ ಮೊದಲನೆಯ ಆಟಗಾರನ ಪಾತ್ರ ಪ್ರಮುಖವಾದುದು. ಎರಡನೆಯ ಆಟಗಾರನು ಇತರ ಆಟಗಾರರಿಗಿಂತ ಹೆಚ್ಚು ಆಕ್ರಮಣ ಮಾಡುವುದರಿಂದ ಇವನದು ಕಷ್ಟದ ಸವಾರಿ ಎಂದು ಹೇಳಬಹುದು. ಮೂರನೆಯ ಆಟಗಾರ ಆಕ್ರಮಣ ಮಾಡುವನಲ್ಲದೇ ಎದುರಾಳಿ ತಂಡದವರು ಗೋಲ್ ಹೊಡೆಯದಂತೆ ನೋಡಿಕೊಳ್ಳಬೇಕಾಗುತ್ತದೆ. ನಾಲ್ಕನೆಯ ಆಟಗಾರನ ಪ್ರಮುಖ ಕಾರ್ಯವೆಂದರೆ ರಕ್ಷಣೆ. ಇವನು ಆಕ್ರಮಣಕ್ಕೆ ಹೋಗದೇ ಎದುರು ತಂಡದ ಆಟಗಾರರು ಗೋಲ್ ಹೊಡೆಯಬೇಕಾಗುತ್ತದೆ. ಚೆಂಡನ್ನು ನೇರವಾಗಿ ಹಿಂದಕ್ಕೆ ಅಥವಾ ಮುಂದಕ್ಕೆ ಹೊಡೆಯಬಹುದು. ಆಗ ಚೆಂಡಿಗೆ ಸಮನಾಂತರವಾಗಿ ಚೆಂಡು ತನ್ನ ಬಲ ಬದಿಗೆ ಬರುವಂತೆ ಆಟಗಾರ ಸರಿಯುತ್ತಾನೆ. ಒಂದು ಸುತ್ತಿನಲ್ಲಿ ಅಂದರೆ ೭೧/೨ ಮಿನಿಟುಗಳಲ್ಲಿ ಆಟಗಾರ ಅನೇಕ ಸಲ ಓಡಬೇಕಾಗುತ್ತದೆ. ತಿರುಗಬೇಕಾಗುತ್ತದೆ. ಆಗ ಕುದುರೆಗೆ ದಣಿವಾಗುವುದು ಸಹಜ, ಪ್ರತಿ ಸುತ್ತಿನ ಅನಂತರ ಕುದುರೆಯನ್ನು ಬದಲಾಯಿಸಲು ಅನುಕೂಲವಿದೆ. ಹೆಚ್ಚು ಗೋಲುಗಳನ್ನು ಪಡೆದ ತಂಡ ಆಟದಲ್ಲಿ ಗೆಲ್ಲುತ್ತದೆ. ಹ್ಯಾಂಡಿಕ್ಯಾಪ್ ಪೋಲೋದ ವೈಶಿಷ್ಟ್ಯ ಹೀಗಿದೆ: ಒಬ್ಬ ಆಟಗಾರ ತನ್ನ ತಂಡದ ಪರವಾಗಿ ಎಷ್ಟು ಗೋಲುಗಳನ್ನು ಪಡೆಯುತ್ತಾನೆ ಎಂಬ ಎಣಿಕೆಯ ಮೇಲೆ ಅವನಿಗೆ ಹ್ಯಾಂಡಿಕ್ಯಾಪ್ ಸಂಖ್ಯೆಯನ್ನು ಅನ್ವಯಿಸಲಾಗುತ್ತದೆ. ೯ ಹ್ಯಾಂಡಿಕ್ಯಾಪ್ ಆಟಗಾರನೆಂದರೆ ೯ ಗೋಲುಗಳನ್ನು ಗಳಿಸಿದವ ಎಂದರ್ಥ. ಆಟದ ಪ್ರಾರಂಭದಲ್ಲಿ ಮತ್ತು ಪ್ರತಿಯೊಂದು ಗೋಲಾದ ಅನಂತರ ಚೆಂಡನ್ನು ಮೈದಾನದ ಮಧ್ಯಕ್ಕೆ ಎಸೆದು ಆಟ ಪ್ರಾರಂಭಿಸುವವರು ಅಂಪೈರುಗಳು. ಆಗ ಎರಡೂ ಪಂಗಡದ ಆಟಗಾರರು ಅಂಪೈರಿನ ಎರಡು ಪಾರ್ಶ್ವಗಳಲ್ಲಿ ಸಾಲಾಗಿ ನಿಂತಿರುತ್ತಾರೆ. ಪ್ರತಿಗೋಲಿಗೂ ಪಂಗಡಗಳು ಬದಿ ಬದಲಾಯಿಸಿಕೊಳ್ಳುತ್ತಾರೆ. ಪೋಲೋದಲ್ಲಿ ಆಟಗಾರ ಪರಿಣತನಾಗಿರುವಂತೆ ಕುದುರೆ ಸಹ ಉತ್ತಮವಾಗಿರಬೇಕು, ಚುರುಕಿನದಾಗಿರಬೇಕು. ಆಟಗಾರನಿಗೂ ಕುದುರೆಗೂ ಹಲವಾರು ವರ್ಷಗಳ ತರಬೇತಿ ಅವಶ್ಯ. ಯೋಗ ತರಬೇತಿ ಪಡೆದ ಕುದುರೆ, ಸವಾರನ ಅಪೇಕ್ಷೆಯಂತೆ ಚೆಂಡಿನ ಓಟ ತಿಳಿದು ಓಡಬಲ್ಲುದು. ಆಟಗಾರ ಉತ್ತಮ ದೇಹದಾರ್ಢ್ಯ ಹೊಂದಿರಬೇಕಲ್ಲದೆ ತುಂಬ ಚುರುಕಿನವನಾಗಿರಬೇಕು. ಚೆಂಡು ಎತ್ತಸಾಗುತ್ತಿದೆ ಎಂಬುದನ್ನು ಆತ ಯಾವಾಗಲೂ ನೋಡುತ್ತಿರಬೇಕಾಗುವುದರಿಂದ ಆಟಗಾರನ ದೃಷ್ಟಿ ತೀಕ್ಷ್ಣವಾಗಿರಬೇಕು. ಪೋಲೋ ಶ್ರೀಮಂತರ ಆಟವೆಂದು ಹೇಳಲಾಗುತ್ತಿದೆ. ಪೋಲೋ ತುಂಬ ವೆಚ್ಚದಾಯಕವಾಗಿರುವುದೇ ಇದಕ್ಕೆ ಕಾರಣ. ಉತ್ತಮ ತಳಿಯ ಕುದುರೆಗೆ, ಅದರ ತರಬೇತಿಗೆ, ಅದಕ್ಕೆ ನೀಡಬೇಕಾದ ಪೌಷ್ಟಿಕ ಆಹಾರಕ್ಕೆ, ಕುದುರೆಯನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸುವುದಕ್ಕೆ ತುಂಬ ಹಣ ಖರ್ಚುಮಾಡಬೇಕಾಗುತ್ತದೆ.
ಇಪ್ಪತ್ತನೆಯ ಶತಮಾನದ ಮಧ್ಯದಲ್ಲಿ ಅರ್ಜಂಟೀನ ಮತ್ತು ಅಮೆರಿಕ ಪ್ರಪಂಚದ ಇತರ ರಾಷ್ಟ್ರಗಳನ್ನೆಲ್ಲ ಪೋಲೋದಲ್ಲಿ ಹಿಂದೆಹಾಕಿದ್ದುವು. ಕಳೆದ ಶತಮಾನದ ಅಂತ್ಯದವರೆಗೆ ಪೋಲೋ ಭಾರತದಲ್ಲಿ ವ್ಯಾಪಕವಾಗಿತ್ತು. ೧೯೩೬ರಲ್ಲಿ ಬರ್ಲಿನ್, ಒಲಂಪಿಕ್ ಕ್ರೀಡೆಗಳಲ್ಲಿ ಪೋಲೋ ಸೇರಿತ್ತು. ಈಗ ಅಂತರರಾಷ್ಟ್ರೀಯ ಪೋಲೋ ಕ್ರೀಡೆಗಳು ನಡೆಯುತ್ತಿವೆ. ಕರ್ನಲ್ ಪ್ರೇಮಸಿಂಗ್, ಜಯಪುರದ ಮಹಾರಾಜ, ಅಮೆರಿಕದ ಸೆಸಿಲ್ ಸ್ಮಿತ್ ಇವರೆಲ್ಲ ಶ್ರೇಷ್ಠ ಪೋಲೋ ಆಟಗಾರರು.
ಪೋಲೋ ಆಟಗಳಲ್ಲಿ ಕುದುರೆಯಂತೆ ಸೈಕಲ್ ಬಳಸುವುದೂ ಇದೆ. ನೀರಿನಲ್ಲಾಡುವ ಪೋಲೋಗಳೂ ಉಂಟು.