ಶಿಬಿ ಚಕ್ರವರ್ತಿ ಮಹಾರಾಜ ಇದ್ದ ಕೇಳರಿ ಇದನು
ಹಿಡದ ಪಂಥ ಬಿಡದೆ ನಡೆಸಿದ ತಾನು |
ಪುಣ್ಯಶಾಲಿ ತೋರಿಸಿದ ಮಹಿಮವನು |
ಇಂದ್ರ ಅಗ್ನಿ ಅತಿ ವೇಗದಿ ಬಂದರು
ನೋಡಲಿಕ್ಕೆ ಇವನ ಮನಸನ್ನು ಮಾಡಿ ಮಾಯವನು ||

ಇಂದ್ರ ಬಂದು ತಾ ಗಿಡಗನಾದನು
ಅಗ್ನಿ ಪಕ್ಷಿ ಆದಾನಣ್ಣ | ಹಿಂಗ ಮಾಡಿಕೊಂಡರಾಗ
ಇಬ್ಬರು ಪಣಾ |
ಗಿಡಗಾಗಿ ಇಂದ್ರ ಹತ್ತಿದ ಬೆನ್ನಾ
ಅಗ್ನಿ ಹೋಗಿ ಶಿಬಿ ಚಕ್ರವರ್ತಿಗ್ಹೇಳತೈತಿ
ಕಾಯೋ ಇಂದ ಎನ್ನ ಪ್ರಣಾ ಬಂದಿತೋ ಮರಣ |
ಶಿಬಿ ಚಕ್ರವರ್ತಿ ಪಕ್ಷಿಗ್ಹೇಳತಾನ
ಚಿಂತಿ ಮಾಡಬ್ಯಾಡ ಏನೇನಾ
ಅಂತ ಅಭಯ ತೋರಿಸಿ ಕೊಟ್ಟಾನೋ ವಚನಾ |
ಪಕ್ಷಿ ಹರುಷವಾಗಿ ಕೂತಿತೋ ಸುಮ್ಮನಾ
ಅಷ್ಟರೊಳಗ ತಾ ಗರುಡ ಬಂದು
ಶಿಬಿ ಚಕ್ರವರ್ತಿಗೆ ಹೇಳಿತೋ ಕಥನಾ ಆದ ವರ್ತಮಾನಾ
ಇಂದಿನ ದಿನದಲ್ಲಿ ನಿರಂಕಾರ ಎಲ್ಲಿ ನನಗೆ ಸಿಕ್ಕಿಲ್ಲೊ ಅನ್ನಾ |
ಹಿಡದ ತಿನಬೇಕಂತ ಈ ಪಕ್ಷಿಯನಾ
ಬೆನ್ನ ಹತ್ತಿ ಬಂದೆ ಆತೋ ಮಧ್ಯಾನ್ಹಾ
ಬ್ಯಾಗದಿಂದ ಬಿಟ್ಟ ಬಿಡೋ ಪಕ್ಷಿಯನಾ |
ಬೆನ್ನಿಗೆ ಹಾಕಿಕೊಂಡಿ ಏನ ಕಾರಣಾ | ಎಲ್ಲಿಯ ಖೂನಾ
ಶಿಬಿ ಚಕ್ರವರ್ತಿ ಹೇಳತಾನ ಗರುಡಗ
ನನ್ನ ಮರಿಯ ಬಿದ್ದಂಥಾ
ವೈರಿಗೆ ಕೊಡುವುದಿಲ್ಲ ಹಿಂಗ ನನ್ನ ಪಂಥಾ
ಪ್ರಾಣ ಕಾಯತೇನಂತ ವಚನ ಕೊಟ್ಟೆ ಕಪೋಗತ
ಬಿಟ್ಟರ‍್ಹಾನಿಯಾಗುವದು ವೃಥಾ ಸುಳ್ಳ
ಮಾಡಿಕೊಳ್ಳಲಾರೆ ಶಪಥ
ಗರುಡ ಹೇಳತೈತಿ ಕೇಳೋ ರಾಜಾ
ಲಾಲಿಸೋ ನಂದ ಇಂದ ಒಂದ ಮಾತ
ಕೂಳಿಲ್ದ ಸಾಯುವೆನು ವ್ಯರ್ಥ |

||ಏರು||

ಚಕ್ರವರ್ತಿ ಗರುಡನಿಗೆ ಹೇಳತಾನ
ಮಾಡಬ್ಯಾಡ ನೀ ಚಿಂತಿಯನು
ಈಗ ತರಿಸಿ ಕೊಡುವೆನು ಆಹಾರವನು
ತೃಪ್ತಿ ಬಿಟ್ಟು ಹೋಗೋ ಹೊಂದಿ ಹರುಷವನು||೧||
ಗರುಡ ಹೇಳತೈತಿ ಕೇಳೋ ರಾಜಾ
ನನ್ನ ಆಶೆ ಇಲ್ಲಾ ಯಾತರ ಮ್ಯಾಗಾ
ಬಹಳ ಲಕ್ಷ ಪಕ್ಷಿ ತಿನ್ನೋದ ಎನಗ |
ಎನ್ನ ಕುಕ್ಷಿಗೊಪ್ಪಿಸೋ ಕಪೋತಾಗ
ಜೀರ‍್ಣ ಮನಸು ಏನ ಕಾರಣ ಮಾಡತಿ
ಕರುಣ ಇಟ್ಟ ಎನ್ನ ಮ್ಯಾಗ
ಕೊಟ್ಟು ಕಳುವೆನ್ನ ಕೈಯಾಗ
ನುಡಿದ ನುಡಿ ಕೇಳಿ ರಾಜ ಹೇಳತಾನ
ವಚನ ಕೊಟ್ಟು ಇಟ್ಟು ಕೊಂಡವಗ
ಏನಂತ ಕೊಡಲೊ ನಿನ್ನ ಕರದೊಳಗ
ಶಪಥ ಹಾನಿ ಮಾಡಿಕೊಳ್ಳಬೇಕ್ಯಾಂಗ
ಬೆನ್ನಿಲೆ ಬಿದ್ದವರನ್ನ ಪ್ರಾಣಾ ಕಾಯತೇನಂತ
ನನ್ನ ವಾಯಿನಿ ಸುತ್ತ ನಾಡಾಗ |
ಕೊಡಲಾರೆ ನಾ ನಿನಗ
ಇಷ್ಟ ಮಾತ ನಿಷ್ಟುರ ಯಾತಕೋ
ಹಿಡದ ತಿನ್ನ ಬೇಕಿತ್ತು ಹಾದ್ಯಾಗ
ಹೀಂಗಂದ ಶಿಬಿ ಚಕ್ರವರ್ತಿ ಗರುಡಗ
ಗರುಡ ಹೇಳತೈತಿ ಆಗ ಅರಸಗ
ನಿನ್ನ ಮರಿ ಬಂದ ಬೀಳತೈತಿ ಅಂತ
ಗೊತ್ತಾಗಲಿಲ್ಲೊ ಪೂರ‍್ವದಾಗ ಮಾಡಲಿ ಹ್ಯಾಂಗ

||ಇಳಿವು||

ಶಿಬಿ ಚಕ್ರವರ್ತಿ ಗರುಡಗ್ಹೇಳತಾನ
ಪಕ್ಷಿ ಶಾಖ ನನಮುಂದ
ತಗಿಬ್ಯಾಡ ಸುದ್ದಿ ಅದರದ
ಮತ್ತೇನ ನಿನಗ ಆಹಾರ ಬೇಕ
ಕೇಳೊ ಕ್ಷಣದ ಒಳಗ ನಾ ತಂದಾ
ಕೊಡುವೆನು ಬಾಯಿಲಾಡಿದಾ
ರಾಜನ ಮಾತಿಗೆ ನಸುನಕ್ಕು ಗರುಡ ಅಂತೈತಿ
ಎಂಥಾದೋ ಜಿದ್ದಾ ಕೊಡಬಾರದಂತ ಮಾಡಿಸಿ ಸಿದ್ಧಾ |

||ಏರು||

ಬೇಡಿದ್ದನ್ನ ಕೊಡುವನೆಂಬುತಿದಿ
ಬಿಟ್ಟೆ ಇನ್ನು ಪಕ್ಷಿಯ ಆಸೆಯನು
ನಿನ್ನ ದೇಹದೊಳಗಿನ ಮಾಂಸವನು
ಕೊಡ ಭಾಗ್ಯ ಭಕ್ಷಿಸಿ ಹೋಗುವೆನು||೨||
ಬೇಡಿದ್ದನ್ನ ತಂದು ಕೊಡುವೆನೆಂದಿದ್ದಾ
ಚಕ್ರವರ್ತಿಗೆ ಬಂದೀತ ಗೋಳ
ಗರುಡನಿಗೆ ಕೊಡಬೇಕಾದೀತ ಕೂಳ
ಸಂಕಲ್ಪ ಹಿಡಿಯದೇ ಮನದೊಳ
ಕೊಟ್ಟ ವಚನಕ ಮುಟ್ಟಬೇಕೆಂದು
ಕೊಯ್ದ ಹೊಟ್ಟೆ ಹೊಂಟಾದ ಕರಳು
ಇಟ್ಟಾ ತ್ರಾಸಿನೊಳು
ಪಕ್ಷಿ ಬರೋಬರಿ ತೂಕ ಹಚ್ಚಿದಾನ
ತನ್ನ ದೇಹದ ರಕ್ತ ಕರಣಿಗಳು
ಮತ್ತು ಕಡಿಮೆ ಆದದ್ದ ನೋಡಿ ತೂಕದೊಳು
ಮತ್ತು ಕೊಯ್ದು ಕರಣಿ ಇಟ್ಟ ತ್ರಾಸಿನೊಳು
ಇಷ್ಟ ಕರಣಿ ತಗದ ತ್ರಾಸಿಗೆ ಹಚ್ಚಿದರ
ತೂಕ ಕಡಿಮೆ ಆದಿತ ಬಹಳ ತಪ್ಪಿತ ಮೇಳು |
ಶಿಬಿ ಚಕ್ರವರ್ತಿ ಏಕನಿಷ್ಠೆಯಿಂದ ಖಡ್ಗ
ತಕ್ಕೊಂಡು ತನ್ನ ಕರದೊಳು
ಶಿರ ಹೊಡೆದು ಕೊಂಬುವಂಥ ಸಮಯದೊಳು
ಇಂದ್ರ ಅಗ್ನಿ ಅಳೆದ ಮಾಯಾ ರೂಪಗಳು
ಸಿದ್ಧವಾಗಿ ನಿಜರೂಪ ತೊಟ್ಟು ಅಂದ್ರು
ನಿನ್ನ ಸರಿಯಾರು ಇಲ್ಲ ದಯಾಳು |
ಇಲ್ಲೋ ಕ್ಷಿತಿಜದೊಳು |

||ಇಳವು||

ಭಾವ ನೋಡಬೇಕೆಂದು ಬಂದಿದ್ದೆವು ನಾವು ಕೂಡಿ
ಅಗ್ನಿ ಇಂದ್ರರಾ |
ಪುಣ್ಯಶಾಲಿ ಪಂಥದಲಿವರಾ |
ನಿನ್ನ ಸರಿ ಸತ್ವದಲ್ಲಿ ಯಾರನ್ನ ಕಾಣಿವೊ
ನಿನ್ನಂಗಲ್ಲೋ ಹರಿಶ್ಚಂದ್ರರಾ
ಏಕ ವಚಕ ನೀ ನಿರ್ಧಾರಾ
ಇಂದ್ರ ಅಗ್ನಿ ಇಷ್ಟ ಹೇಳಿ
ಶಿಬಿಗೆ ತಾವು ಸೇರ‍್ಯಾರೊ ಹೋಗಿ ತಮ್ಮ ಪುರಾ
ಇನ್ನು ಬಿಟ್ಟೆ ಮಸ್ತ ಮಜಕೂರಾ |
ಹುಚ್ಚ ಕಲ್ಲ ಕವಿ ಮಾಡಿ ಹೇಳತಾನ ನಾಡಿನೊಳಗೆ ಇಲ್ಲಾ
ಯಾವ್ಯಾವನು | ಇವರ ಜೋಡಿ ಕಾಣೆ ಶಾಹೀರನ್ನನನು |
ಕುಂತಲ್ಲೆ ಕವಿ ಮಾಡಿ ಹಾಡುವನು||೩||

ರಚನೆ : ಹುಚ್ಚಕಲ್ಲ ಕವಿ
ಕೃತಿ : ಜಾನಪದ ಝೇಂಕಾರ