||ಪಲ್ಲ||

ಶಿಬಿ ಚಕ್ರವರ್ತಿ ರಾಜನ ಸತ್ಯಕ ಸರಿ ಇಲ್ಲ ವಚನ ಕಸರ ಇಲ್ಲ ಏನೇನು |
ಕೊಟ್ಟ ವಚನ ಹಿಂದಕ ತಿರಗಸದವನು |
ಪರಜನರ ವಿಘ್ನ ಪರಿಹಾರಕನು ||
ಪರರ ದೆಸೆಯಿಂದ ತನ್ನ ಪ್ರಾಣದಾಶೆ ಬಿಟ್ಟ ತನ್ನ ಶರೀರ ಕೊರೆದು ಕೊಟ್ಟಂಥವನು |
ಸತ್ಯ ಇಟ್ಟವನು ||

ಚೌಕ – ೧

||ನುಡಿ||

ಶಿಬಿಚಕ್ರವರ್ತಿರಾಜನ ಸ್ಥಿತಿ ಹೇಳತೀನ ಮತಿವಂತರು ಕೇಳರಿ ಇದನಾ |
ಶೂರಧೀರ ಗಂಭೀರ ಉದಾರತನಾ |
ಎಲ್ಲೆಲ್ಲಿ ಹ್ಯಾಗ ಇರಬೇಕ ಹಾಗೇಮನಾ ||
ಸಜ್ಜನರಲ್ಲಿ ಸತ್ಕೀರ್ತಿ ದುರ್ಜನರಲ್ಲಿ ಅತಿ ಕ್ರೂರತನಾ |
ದಯಾ ಸಂಪೂರ್ಣಾ||೧||

ನಮ್ರತ್ವ ಅಗದಿ ಕಿಂಕರತ್ವ ಸತಿ ನಡೆಸಬೇಕ ಅವರ ವಚನಾ |
ತಂದಿ ತಾಯಿ ಸೇವಾದಲ್ಲಿ ಅತಿ ನಿಪುಣಾ |
ಮುಖದಲ್ಲಿ ಯಾವತ್ತು ಹರಿ ಭಜನಾ ||
ದಯಾ ಮಾಯಾ ತನ್ಮಯ ಅವನಲ್ಲಿ ದಯದಿಂದ ಪಾಲಿಸಬೇಕ ಪ್ರಜಾಜನಾ |
ಬಡವ ಬಗ್ಗರನಾ||೨||

ರಾಜನಲ್ಲಿ ಸನ್ಮಾನ ರಣಕನಿಂತಲ್ಲಿ ಮಾಡಾವ ಪ್ರಾಣ ತ್ರಣ ಸಮಾನಾ |
ಧೈರ್ಯದಿಂದ ಜಯಿಸಬೇಕ ರಾಜನಾ |
ಗಾದಿ ಮೇಲೆ ಕೂತಾಗ ಬಹಳ ಉದಾರತನಾ |
ಜೋಗಿ ಜಂಗಮ ಬಂದ ಅತಿಥಿ ಅಭ್ಯಾಗತ ಕಂಡ ಕೂಡಲೆ ಮಾಡಬೇಕದಾನಾ |
ಅವರು ಬೇಡಿದ್ದನ್ನಾ||೩||

ಒಂದು ದಿವಸ ಬಂದ ನಾರದ ಎಲ್ಲಾ ನೋಡಿ ಹೋದಾನ ಇದನಾ |
ಶಿಬಿ ಚಕ್ರವರ್ತಿ ರಾಜ ಎಷ್ಟ ಪುಣ್ಯವಾನಾ |
ಹರಿ ವತನಾ ಬೇಡಾವ ಇಂದ್ರ ಸದನಾ ||
ಗಂಟ ಕಳದವರಂಗ ಲಗೂಮಾಡಿ ಓಡಿ ಹೋಗಿ ಇಂದ್ರಗ ಹೇಳಿದಾನ ಏನೇನಾ |
ಕೇಳ್ರಿ ಅದನಾ||೪||

||ಚಾಲ||

ಭೂಲೋಕದಲ್ಲಿ ಶಿಬಿ ಚಕ್ರವರತಿ-ಪುಣ್ಯೇಕ ಇಲ್ಲ ಅಳತಿ ನೋಡಿ ಬಂದೆ ಕಣಮುಟ್ಟಾ |
ಎಲ್ಲಾ ರಾಜರ ಒಳಗ ಅವನೆ ಶ್ರೇಷ್ಠಾ||೧||

ಹರಿನಾಮ ಯಾಹೊತ್ತು ಮುಖದಲ್ಲಿ-ರಾತ್ರಿ ಹಗಲಿ-ಭಜನಿ ಮುಖಪಾಟಾ |
ಹರಿ ಒಲಿಯುದೇನ ಬಿಕ್ಕಟ್ಟಾ||೨||

ಹರಿ ಒಲದ ಮೇಲೆ ಬೇಡಾವ ನಿನ್ನ ಸದನ-ಕೊಟ್ಟ ಮೇಲೆ ನೀ ಏನ-
ಮಾಡಾವ ಕಳದ ಗಂಟಾ |
ನಿರ್ವಾಣ ಇಲ್ದ ಹೋಗಬೇಕಾದಿತ ಹೊಂಟಾ||೩||

||ಕೂ.ಪ.||

ನಿನ್ನ ಮನಸಿಗಿ ಬಂದಾಂಗ ಮಾಡಿಕೊ ನಿನಗ ಬಹಳ ಹೇಳುವದೇನು |
ನಿನ್ನ ಯುಕ್ತಿಗೆ ಬಂದಾಂಗ ಮಾಡಿಕೊಳ್ಳ ನೀನು |
ಅದನೆಲ್ಲ ಹೇಳಾಕ ನಮಗ ಕೊಳ್ಯಾಮಿ ಏನು || ಪರರ ||

ಚೌಕ – ೨

||ನುಡಿ||

ಇಷ್ಟ ಹೇಳಿ ನಾರದ ಹೊಂಟ ಹೋದಾನು ಇಂದ್ರ ಸಿಟ್ಟ ಆದ ತನ್ನ ಮನದಲ್ಲಿ |
ನಾರದ ಹೇಳಿದ ಮಾತ ಎಂದಿಗಿ ಆಗಲಾರ‍್ದ ಖಾಲಿ |
ಏಕಾ ಏಕೀ ಬಿತ್ತ ನನಗೆ ಎಂಥಾ ಬಲಿ ||
ಅಗ್ನೀನ ಕರದ ಒಂದು ಅಕಲ ಹೇಳತಾನ ಯುಕ್ತಿ ತಗದ ಒಂದು ಕ್ಷಣದಲಿ |
ಹೋಗುನು ಅಲ್ಲಿ||೧||

ಅಗ್ನಿ ಅಂತಾನ ನೀ ಪಾರಿವಾಳ ಆಗ ನಾ ಗಿಡಗ ಆಗಿ ನಿನ್ನ ಹಿಂಬಾಲಿ |
ಕೊಂದ ತಿನ್ನುವುದಕ ಬರತೀನ ಹುಡುಕುತಲಿ |
ನೀ ಹೋಗಿ ಕುಂತೀರ ಅರಸನ ತೊಡಿ ಮ್ಯಾಲಿ ||
ಜೀವದಾನ ಕುಡ ಅಂತ ನೀರ ಬಿಡಿಸಿಕೊ ವಚನ ತಗೊ ಅರಸನ ಕೈಯಲಿ |
ಅವನ ಸಭಾದಲಿ||೨||

ಅದsಕ್ಷಣಕ ಇಂದ್ರ ಆದ ಕಪೋತ ಪಕ್ಷಿ ಖೊಟ್ಟಿತನಕಂತೂ ಇಲ್ಲ ಬೆಲಿ |
ಅರಸ ಸಭಾಮಾಡಿ ಕೂತ ಸಮಯದಲಿ |
ಬಂದ ಕೂತೀತ ಅವನ ಹಿಂಭಾಗದಲಿ ||
ಸತ್ಯ ಸಂದನಾ ದಯಾನಂದನಾ ಬಿಡಸ ಬಂಧನಾ ಹೀಗೆ ಅನ್ನುತಲಿ |
ಬೇಡಿ ಕೊಂಬುತಲಿ||೩||

ಈಗಿಂದೀಗ ನನ್ನ ಪ್ರಾಣ ಹೋಗುತೈತಿ ದಾರು ಇಲ್ಲ ನನ್ನ ಬೆನ್ನ ಮ್ಯಾಲಿ |
ನಿನ್ನ ಕೀರ್ತಿ ಕೇಳಿ ಬಂದೀನ ನಾ ಇಲ್ಲಿ |
ಹ್ಯಾಂಗರೆಮಾಡಿ ಉಳಸರಿ ನನ್ನ ತೆಲಿ ||
ತಡಿಯು ಹಾಂಗಿಲ್ಲ ಬಂತ ಏನೋ ಅಂತ ಸುತ್ತಮುತ್ತಲೆ ನೋಡುತಲಿ |
ಶೋಕ ಮಾಡುತಲಿ||೪||

||ಚಾಲ||

ಕೇಳಿ ಅರಸಗ ಬಂದಿತ ಕಕಲಾತಿ-ಉಳಸತೀನ ಬಿಡ ನಿನ್ನ ಚಿಂತಿ-
ಹಿಂಗ ಅಂತ ನೀರ ಬಿಟ್ಟಾ |
ಅಭಯದಿಂದ ತಾ ವಚನ ಕೊಟ್ಟಾ||೧||

ಇಷ್ಟ ಆಗೂದರೊಳಗ ಗಿಡಗ ಬಂತ ಹಾರಿ-ಒಳೇ ಹಾತೋರಿ ಆಗಿ ಬಾಳ ಸಿಟ್ಟಾ |
ಅರಸನ ಮುಂದ ಕೂತೀತ ಮಾರಿ ಹಾಕ ಗಂಟಾ||೨||

ಅಂಜಿ ಪಾರಿವಾಳ ಅಂತೈತಿ ನೋಡ ಭೂಪಾ-ಗಿಡಗಂದ ಎಷ್ಟ
ಕೋಪಾ-ನನ್ನ ಮೇಲೆ ಆರ್ಭಾಟಾ |
ನಾ ಏನ ತಿಂದೀನ ಇದರ ಗಂಟಾ||೩||

||ಕೂ.ಪ.||

ಅರಸ ಅಂತಾನ ಅಂಜಬೇಡ ಕಪೋತ ಪಕ್ಷಿ ನಿನ್ನ ಎಂದೀಗಿ ಕುಡುದಿಲ್ಲ ನಾನು |
ನನ್ನ ಕೈಯಾಗಿಂದ ಗಿಡಗ ಒಯ್ಯು ತ್ರಾಣವೇನು |
ಕೇಳಿ ಗಿಡಗಕ್ಕ ಬಂದೀತ ಕೋಪವನು || ಪರರ ||

ಚೌಕ – ೩

||ನುಡಿ||

ಗಿಡಗ ಅಂತೈತಿ ಕೇಳ ರಾಜಾ ಚೂಡಾಮಣಿ ನಿನ್ನ ಕೀರ್ತಿ ಬಹಳ ಅಯ್ತಿ ನಾಡಾಗ |
ಎಂಟ ದಿವಸ ಆತ ಕೂಳ ಇಲ್ಲ ನನಗ |
ತಿರಗಿ ಬ್ಯಾಸತ್ತೀನ ಈ ಹಕ್ಕೀ ಕಾಲಾಗ ||
ನನ್ನ ಆಹಾರ ನನಗ ಕೊಟ್ಟ ಕೀರ್ತಿ ಪಡಿಬೇಕ ನಿಂದೇನ ಹೋಗತೈತಿ ಇದರಾಗ |
ಕುಡ ನಂದ ನನಗ||೧||

ಈಗಿಂದ ಈಗ ಜಗ್ಗಿ ಜೋಲಿ ಬಡಿಯತೀನ ಆಹಾರ ಬಂದ ಕೂತತಿ
ನಿನ್ನತೊಡಿ ಮ್ಯಾಗ |
ನೀನು ಸತ್ಯನ್ಯಾಯ ಮಾಡಾಂವಾ ಅಷ್ಟು ಅರಸರ ಒಳಗ |
ನಿನ್ನಲ್ಲಿ ಅಧಮ ಹುಟ್ಟಿದ್ದು ಅದು ಹ್ಯಾಂಗ ||
ರಾತ್ರಿ ಕಾಣುವ ನಕ್ಷತ್ರ ಹಗಲ ಕಂಡಾವ ತಿಳದ ನೋಡ ರಾಜಾ ನಿನ್ನ ಮನದಾಗ |
ಹೇಳುವೆನೀಗ||೨||

ಅರಸ ಇದ್ದಾವ ಘಾಬರಿ ಆಗಿ ಅಂತಾನ  ಕೂತಲ್ಲಿ ಬಂತ ಎಂಥಾ ಪ್ರಸಂಗ |
ಈ ಗಿಡಗಿನ ಮಾತ ಸುಳ್ಳ ಅನ್ನುದು ಹ್ಯಾಂಗ |
ಖರೆ ಕುಡಲಿ ಹ್ಯಾಂಗ ಬೆನ್ನಿಗಿ ಬಿದ್ದವಗ ||
ಕೊಟ್ರ ಘಾತ ಆತ ಕುಡದಿದ್ರ ಮಾತ ಹೋತ ಮಾತಹೋದ್ರ ಮನುಷ್ಯ ಇದ್ದೂ ಇಲ್ದಾಂಗ |
ಮಾಡಲಿ ಹ್ಯಾಂಗ||೩||

||ಚಾಲ||

ಕೂತ ಪಂಚರ‍್ನ ಕೇಳತಾನ ಭೂಪತಿ-ಹೇಳ್ರಿ ಅದಕ ಯುಕ್ತಿ ಬಂದತಿ ಸಂಕಟಾ |
ಪಂಚರ ಅಂತಾರ ಇದಕ ಯಾಕ ಚಿಂತಿ ಇಷ್ಟಾ||೧||

ಪಾರಿವಾಳ ಬಿದ್ದಿತ ನಿಮ್ಮ ಬೆನ್ನೀಗಿ-ಕುಡತೀರಿ ಹ್ಯಾಂಗ ತಿರಿಗಿ –
ಅದಕ ವಚನ ಕೊಟ್ಟಾ |
ಕುಡುದಿಲ್ಲ ಅನ್ನರಿ ಗಿಡಗ ಹೋಗಲಿ ಈಗ ಹೊಂಟಾ||೨||

ಇಷ್ಟ ಕೇಳಿ ಗಿಡಗ ಅಂತೈತಿ ನಾ ಏನ ನಿಮ್ಮ ಹಂತಿ ಬಂದಿಲ್ಲ ಆಶೆ ಇಟ್ಟಾ |
ಇಂಥ ನ್ಯಾಯ ಮಾಡವರ ನೀವು ಇದ್ದೀರಿ ಎಷ್ಟಾ||೩||

||ಕೂ.ಪ.||

ಇಂಥಾ ಕಾರಭಾರ ಮಾಡೂ ಮಂದಿಗೆಲ್ಲಾ ದರಬಾರ ಒಪ್ಪಿಸಿ ಹೋದರ ಒಬ್ಬರೂ
ಇರಬಾರ‍್ದ ಆದೀತ ಇದಕ ಅಂತೀರೇನು |
ಇಂಥ ನ್ಯಾಯ ಮಾಡಿದರ ಬಂದೀತ ಹ್ಯಾಂಗ ದೊಡ್ಡಿಸ್ತಾನು |
ದೇವರಕಿಂತ ಪೂಜಾರೀದ ಹಿರಿತಾನು   ||ಪರರ||

ಚೌಕ – ೪

||ನುಡಿ||

ತಾರಕ್ಕಿ ಅಂಥವರ ಎಲ್ಲಾ ನಿಮ್ಮ ಹ್ವಾರೇಕ ಹೊತ್ತ ಹೋಗೀರಿ
ಹೊಟ್ಟಿ ತುಂಬ ಸುದ್ದಾ ಹಾಕಿ ಇಟ್ಟಕೊಳಿಕ್ಕಿಲ್ಲ ಕೂಳಾ |
ಇಂಥ ನ್ಯಾಯ ಮಾಡು ಮಂದಿ ಸಭಾದಾಗ ಎಷ್ಟು ಆಯ್ತಿರಿ ಮೇಳಾ |
ಸತ್ಯವಂತರ ಮೇಲೆ ಬೀಳಬಾರದ ನಿಮ್ಮಂಥವರ ನೆರಳಾ ||
ಚಂದ್ರರಾಜಾ ಕೂತ ನಿಂದ್ರಂದ್ರ ನಿಂದ್ರತೀನ ಹೋಗಂದ್ರ
ಹೋಗತೀನ ನಿಮದ್ಯಾಕ ಇದರಾಗ ಬೆರಳಾ |
ನಂದೇನ ಸುಳ್ಳಾ||೧||

ಕೂತವರೆಲ್ಲಾ ಅಂತಾರ ಇದ ಎಂಥಾ ಗಿಡಗ ಬಂದಿತ್ರೆಪ್ಪಾ
ಎಂಥೆಂಥವರನಲ್ಲೆ ಮಾಡಿಬಿಟ್ಟಿತ ಮರಳಾ |
ಅರಸಗ ಅಂತೈತಿ ಪ್ರಜಾಪಾಲನ ಮಾಡುವಂಥಾ ಭೂಪ ಕೇವಳಾ |
ನಿನ್ನ ಕಿವಿಗಿಸುದ್ದಾ ಬೀಳಬಾರ‍್ದ ಇಂಥ ಕೆಟ್ಟ ಮಂದಿ ಸಪ್ಪಳಾ ||
ಕೊಟ್ಟಗಿಟ್ಟಿ ಇವರ ಹೊಟ್ಟಿಗಿಸುದ್ದಾ ಹಾಕಬ್ಯಾಡ ರಾಟ್ಟಿಕಿತ್ತ ಹೊರಗ ಹಾಕ ನಿರ್ಮಳಾ |
ಸುಳ್ಳಕಳ್ಳ ಬೇಡಾ ಸಂಬಳಾ||೨||

ಪಕ್ಷಿ ಒಳಗ ರಾಜಾ ನಾನು ಪ್ರಜರ ಒಳಗ ರಾಜಾ ನೀನು ಪಕ್ಷ
ಹಿಡಿಬಾರ‍್ದ ಮನಾ ಇರಬೇಕ ಸರಾಳ |
ಕೂಡ್ರು ಸಿಂಹಾಸನಕ ಕುಂದ ಹಚ್ಚಿದರ ಆಗೂದು ಅಮಂಗಳಾ |
ರಾಜನೀತಿ ಬಲ್ಲಿದರಿಗೆ ನಾವೇನ ಹೇಳೂದೈತಿ ಬಹಳಾ ||
ಶಿವಪೂಜಿ ಒಳಗ ಕರಡಿ ಬಿಟ್ಟಾಂಗ ಕಂಡ ಮಂದಿ ಕೂತ
ರಾಜವೈಭವ ಎಲ್ಲಾ ಮಾಡತಾರ ಹಾಳಾ |
ಇವರಿಗೆ ಎಲ್ಲಿ ಅಯ್ತಿ ತಾಳಾ||೩||

ಅರಸ ಅಂತಾನ ಆಗ ಇದು ಎಂಥಾ ಬುದ್ಧಿವಳಿತ ಪಕ್ಷಿಮಾತ
ಕೇಳಿದರ ಬಾಯಿಲೆ ಮಧುರ ಮಂಜುಳಾ |
ನನ್ನಕಿಂತ ಹೆಚ್ಚಿಗೆ ಅಯ್ತಿ ಇದಕ ರಾಜ ಕಳಾ |
ಇದರಗೂಡ ವಾದ ಹಾಕವರ ಎಲ್ಲೆರೆ ಇದ್ದಾರ ವಿರಳಾ ||
ಉನ್ಮತ್ತ ತರವಲ್ಲ ಇದಕ ಸನ್ಮಂತ ಹೇಳಿ ಕಳಸಬೇಕ
ಪಕ್ಷಿರಾಜಾ ನಿನಗ ಆದೀನ ಮರುಳಾ |
ನನ್ನ ಮೇಲೆ ಕರುಳಾ||೪||

||ಚಾಲ||

ಅರಸ ಅಂತಾನ ಪಾರಿವಾಳಕ-ವಚನ ಕೊಟ್ಟಾನ ಅದಕ-
ಏನಂತಿ ಹೇಳ ಲಗೂಬSಗಿ |
ಮಾಡ ಬಲ್ಲಾಂಗ ನಿನ್ನ ಮನಸೀಗಿ||೧||

ಗಿಡಗ ಅಂತೈತಿ ನಾ ಏನ ಹೇಳಲಿ – ನಂದ ನನಗೆ ಕುಡವಲ್ಲಿ ಮಾತಾಡತಿ ತಿರಗಿ |
ನೀನS ಮಾಡ ಬಲ್ಲಾಂಗ ಮನಸೀಗಿ||೨||

ಅರಸ ಅಂತಾನ ಪಾರಿವಾಳ ತೂಕಾತೂಕಾ-ಮಾಂಸ ಪ್ರತ್ಯೇಕ ಕುಡಲಿ ಏನ ಬದಲೀಗಿ |
ತಿಂದ ಹೋಗಲಿ ಅಂದ ಸಂತೋಷ ಆಗಿ||೩||

||ಕೂ.ಪ.||ಪಕ್ಷಿ ರಾಜಾ ಬದಲ ಉತ್ತರ ಆಡತೈತಿ ಬದಲ ಮಾಂಸ ತಿನ್ನಾವಲ್ಲ ನಾನು |
ಇದರ ಹೊರತ ನಾ ತಿನ್ನುದಿಲ್ಲ ಏನೇನು |
ಇದರ ತೂಕಾತೂಕ ನಿನ್ನ ಮಾಂಸ ಕೊಟ್ಟರ ತಿನ್ನುವೆನು || ಪರರ ||

ಚೌಕ – ೫

||ನುಡಿ||

ಅರಸ ಅಂತಾನ ಕೂತ-ಬಂತ ನನ್ನ ಜೀವದ ಸುತ್ತ-ಕುಡದಿದ್ದರ
ಬಗಿ ಏನ ಹರಿಯುದಿಲ್ಲಾ |
ಕುಡತೀನ ಅಂತ ಹೇಳಿದ ಅರಸ ಕುಶಿಯಾಲಾ |
ಆಗ ತರಿಸಿ ಕಟ್ಟಿದ ಒಂದ ಚಿಂತಾಲಾ |
ಒಂದ ಪರಡಿಯೊಳಗ ಪಾರಿವಾಳ ಕುಡ್ರಸಿದಾನು ಹರಿ ಎಂದು
ತಲವಾರ ಹಿರದಾನಲ್ಲಾ |
ತಡಮಾಡಲಿಲ್ಲಾ||೧||

ಮೊದಲ ತನ್ನ ಬಲದೊಡಿ ಹೆರ್ಚಿ ಹಾಕೀದಾ ತೊಗಲ ಸಹಿತ ಏನೂ ಉಳಿಯಲಿಲ್ಲಾ |
ಪಕ್ಷಿ ಜಡಾ ಆತ ನೆಲಾ ಬಿಟ್ಟ ಏಳಲಿಲ್ಲಾ |
ಕೂತ ನೋಡತಾರ ಸಭಾದವರ ಎಲ್ಲಾ ||
ಅರಸನ ಪತ್ನಿ ಕೇಳಿ ಆಕ್ರೋಶ ನಡಸಿದಾಳ ಬಂದ ಕೂಡಿತ ಊರ ಜನ ಎಲ್ಲಾ |
ಒಬ್ಬರು ಉಳಿಯಲಿಲ್ಲಾ||೨||

ಗಂಡನ ಕೊರಳಿಗಿ ತೆಕ್ಕಿಬಿದ್ದ ಅಳತಾಳ ಗಿಡಗ ಬಂದ ಆದೀತಪ್ಪಾ ಮೂಲಾ |
ಅವನ ಪ್ರಜರ ಬಂದ ಹತಿಯಾರ ಹಿರದಾರ ಗಿಡಗಿನ ಮ್ಯಾಲಾ |
ಕಂಡವರ ಗುಂಡ ಮದ್ದ ಹಾಕಿಕೊಂಡ ನಿಂತಾರ ಹಿಡದ ಬಾಣಬಿಲ್ಲಾ ||
ಅರಸ ಅಂತಾನ ಅಧಮ ಆಗತೈತಿ ಅದರ ಹೆಸರ ತಗಿಯ
ಬ್ಯಾಡ್ರಿ ಆಗೂದ ಆಗ್ಲಿ ಎಲ್ಲಾ |
ನಡುವ ನಿಮ್ಮದ ಯಾಕ ಗುಲ್ಲಾ||೩||

ಎರಡೂ ತೊಡಿಯೊಳಗ ಏನೂ ಕಸರ ಇಲ್ದೆ ಕೊರದ ಕೊಟ್ಟಿದಾನ-
ಆಗಲಿಲ್ಲ ಪಕ್ಷಿ ಸಮತೋಲಾ |
ತಾನು ಭಕ್ತಿಲೆ ಕೊರದ ಕೊಟ್ಟ ದೇಹ ಏನೂ ಉಳಿಯಲಿಲ್ಲಾ |
ಅದರ ಕಪಟತನ ಅರಸಗ ಏನೂ ತಿಳಿಲಿಲ್ಲಾ |
ಅರಸನ ಹೊಟ್ಟಿ ಎರಡೂ ರಟ್ಟಿ ಕೊರದ ಒಟ್ಟಿ ತೂಗಿದರ
ಆಗಲಿಲ್ಲ ಪಕ್ಷಿ ಸಮತೋಲಾ |
ಮಾಂಸದ ಪರಡಿ ನಿಂತಿತ ಮೇಲಾ||೪||

||ಚಾಲ||

ಅರಸ ಖಬರ ಹಾರಿ ಕಣ್ಣ ಮುಚ್ಚಿದಾನ-ತೂಕ ಬಂತ ಇಲ್ಲ ಅಂತಾನ
ಯಾವತ್ತು ಮ್ಯಾಲ ಮ್ಯಾಲಿ |
ಕೂತವರ ಅಂತಾರ ಬರವಲ್ಲದ ಎಲ್ಲೆಲ್ಲಿ||೧||

ಕೋದ ಹಾಕ್ರಿ ನನ್ನ ಕುತಗಿ-ತೂಕ ಸವನಾಗಿ-ಲಗು ಆಗಲಿ |
ಏಕಾಏಕಾ ನನ್ನ ಈ ಪ್ರಾಣ ಹೋಗಲಿ||೨||

ಅರಸ ಹಿಂಗ ಅಂತಿದ್ದ-ಪ್ರಜಾಜನರ ಮುಂದ-ಕೇಳ್ರಿ ನೀವು ಇಲ್ಲಿ |
ತಗದ ಹೇಳುವೆ ಮುಂದಿನ ದಾಖಲಿ||೩||

||ಕೂ.ಪ.||

ಇಷ್ಟರೊಳಗ ನಾರದ ಮನುಷ್ಯನ ಕೊಟ್ಟ ಕಳುಹಿದಾಂಗ ಬಂದ ನೋಡ ತಾನು |
ಇದನೆಲ್ಲಾ ಅರಸ ಪಂಥಕ್ಕಾಗಿ ವ್ಯರ್ಥ ಪ್ರಾಣ ಕಳಕೋತಾನು |
ಹೋಗಿ ನಿಂತ ಭಗವಂತಗ ತಿಳಿಸಿದಾನು  || ಪರರ ||

ಚೌಕ – ೬

||ನುಡಿ||

ನಿಮ್ಮ ಭಕ್ತಂದು ಘಾತ ಆಗುಪ್ರಸಂಗ ಬಂತ ಗೊತ್ತಾ ಇದ್ದೂ ಇಲ್ದಾಂಗ
ಕೂತಿರಿ ಬೇಸಿ |
ಇಂದ್ರ ಅಗ್ನಿ ಇಬ್ರು ಬಿಡತಾರ ಕೊರಸಿ |
ಕೇಳಿ ಕೃಷ್ಣಗ ಬಂದಿತ ಮಾತಿನ ದೋಸಿ ||
ಅದೇ ಕ್ಷಣಕ ಎದ್ದಹರಿ ಗರುಡನೇರಿ ಹಾತೋರಿ ಬಂದ
ನೋಡಿದರ ಒಳಗ ಅರಸ ಆಗಿದ್ದ ಘಾಸಿ |
ಬಿಟ್ಟ ಪ್ರಾಣದಾಸಿ||೧||

ಅರಸನ ಕಂಠ ಕಡದ ಹಾಕಿದಾರ ಮುಕುಂದ ಬಂದ ಅರಸನ ಮೇಲೆ
ಬಿದ್ದ ಅಡರಾಸಿ |
ಗರುಡನ ಕಳಿಸಿ ಅಮೃತ ಆಗ ಬೇಗ ತರಿಸಿ |
ತನ್ನ ಹಸ್ತದಿಂದ ಸ್ವಂತ ಮೈಗೆಲ್ಲಾ ಒರಸಿ ||
ಇದ್ದ ದೇಹ ಮೊದಲ ಇದ್ದಾಂಗ ಆದೀತು ಅರಸ ಎದ್ದಕೂತ ಆದ ಖುಸಿ |
ಅವನ ಪಾದಕ ನಮಿಸಿ||೨||

ಇಂದ್ರ ಅಗ್ನಿ ಇಬ್ರು ಕೂಡಿ-ಆಗಿಂದಾಗ ಹೋದಾರ ಓಡಿ-ತರಸ
ಲೇನ ಅಂತಾನ ಅವರನ ಹಿಡಿಸಿ |
ಆ ಇಂದ್ರ ಪದವಿ ಮ್ಯಾಲ ನಿನ್ನ ಓದ ಕೂಡ್ರಿಸಿ |
ಬಿಡುವೆನು ಅಂತಾನ ಆಗ ಋಷಿಕೇಶಿ ||
ಅವರು ನಿನ್ನ ಕಾಡಿದಾರ ಅಂದಮ್ಯಾಲ ತಿರಗಿ ಅವರು ನಿನ್ನ
ಕೈಯಾಗ ಇರುಹಾಂಗ ವರಾಕೊಡುವೇನು ಇಟ್ಟಕೊ ದುಡಸಿ |
ಇದರಂತೆ ಕುಡುವೆನು ನಡಸಿ||೩||

ಅರಸ ಅಂತಾನ ಅವರೇ ನನ್ನ ಗುರುಗಳು ಮೊದಲು ಹೋದಾರ
ನಿನ್ನ ಭೆಟ್ಟಿ ಮಾಡಿಸಿ |
ಅವರ ಇಂದ್ರ ಪದವಿ ಮ್ಯಾಲ ನಂದ ಇಲ್ಲ ಅಶಿ |
ನಿಮ್ಮ ಪಾದಕ್ಕಿಂತ ಹೆಚ್ಚಿಂದ ಯಾವದ ನನಗ ಕೃಪಾರಾಶಿ ||
ಉದ್ಧಾರ ಆದೀನ ನಾನು ಬ್ಯಾಡ ನನಗ ಯಾವುದೇನೂ ನಿಮ್ಮ
ಪಾದದಲ್ಲಿ ಇರಬೇಕ ನನ್ನ ಮನಾ ಭ್ರಮಸಿ |
ಇದರಂತೆ ಕುಡ್ರ ನಡಸಿ||೪||

||ಚಾಲ||

ಇಷ್ಟ ಕೇಳಿ ಅಂತಾನ ಆಗ ಕೃಷ್ಣಾ-ಯಾವತ್ತು ನಿನ್ನ ಮನಾ ನನ್ನ ಭಜಿಸಲಿ ||
ನಾನು ಇರತೀನ ನೀನು ಇದ್ದಲ್ಲಿ||೧||

ನಿನ್ನ ಸತ್ವಕ್ಕೆ ಬಾರದಂತೆ ಕುಂದ – ಇರದಂತೆ ವರಾ ನಂದ ನಿನಗ ನಡೆಯಲಿ |
ಇಷ್ಟ ಹೇಳಿ ಕೃಷ್ಣ ಮಾಯವಾದ ಅಲ್ಲಿ||೨||

ಗೋಕಾವಿ ಊರ ಮೋಜಿಂದ-ಸಂಬಣ್ಣ ಹಿಂಗ ಅಂದಭಕ್ತಿ ನಿಮ್ಮಲ್ಲಿ |
ಇಟ್ಟ ನಡೀರಿ ಮುಕ್ತಿದಾಯಕನಲ್ಲಿ||೩||

||ಕೂ.ಪ.||

ಪತ್ತಾರ ಮಲ್ಲೇಶನ ಪದಗಳ ಚಿತ್ರ ತಗದಾಂಗ ಅದರ ಮಲ
ಸೂತ್ರ ಹಚ್ಚಿ ಮ್ಯಾಲ ಇಟ್ಟಾಂಗ ಕಳಸವನು |
ಅಗದೀ ಮೂಡ ಜನರಿಗೆ ಸುದ್ದಾ ತಿಳಿಸುವನು |
ಸತ್ಯವಂತರ ಚರಿತ್ರ ಹೇಳಿ ಬೆಳಸುವನು  ||ಪರರ||

ರಚನೆ : ಪತ್ತಾರ ಮಲ್ಲೇಶ
ಕೃತಿ : ಚಾಪ ಹಾಕತೀವಿ ಡಪ್ಪಿನ ಮ್ಯಾಲ