ಎಲ್ಲ ದೇವರಲ್ಲಿ ಎಂದೆಂದಿಗೂ ನೀ
ಕಲ್ಲು ಮನಸಿನವ ಕೇಶವಾ – ನಾ
ಬಲ್ಲೆನೋ ನಿನ್ನ ಮನಸಿನ ಭಾವಾ – ನಂಬಿ-
ದವರ ಘಾತ ಮಾತಿಸುವಾಂವಾ
ಕರುಣ ಹೀನ ನಿನ್ನ ಕಡೆತನ ನಂಬಿದ
ಯಾವ ಮನುಜ ಪಥ ಕಂಡಾವಾ-ಹೇಳಲೋ ದೇವಾ||ಪಲ್ಲ||

ಭಕ್ತರೊಳಗ ಬಲಿಚಕ್ರವರ್ತಿ ಆಂವ ಶುಕ್ರ ಶಿಶ್ಯ ಗುಣಸಂಪನ್ನಾ – ಅಲ್ಲ
ಹೋಗಿ ಆದಿ ವಟು ವಾಮನ ಮೂರುತಿ
ಪಾದಾ ಬೇಡಿಕೊಂಡಿ ಭೂಮಿದಾನಾ
ಕೊಟ್ಟ ಉಪಕಾರ ಕ್ಷಣ ತೀರಿಸದೆ
ಪಾತಾಳ ಲೋಕಕ್ಕೆ ತುಳಿದೆವನಾ ಕರುಣಾ ಹೀನಾ ||
ನಿನ್ನ ಹಡದ ಪರಿಪಾಲನೆ ಮಾಡಿದ
ಸಾಕ್ಷಾತ ರೇಣುಕಾ ತಾಯಿನಾ ಕರುಣಾ
ಇಲ್ಲದೆ ಕಡದ ಚೆಲ್ಲಿದಿ ಗೋಣಾ ಎ-
ಷ್ಟಂತ ಹೇಳಲಿ ನಿನ್ನ ಖೊಟ್ಟಿ ಗುಣಾ
ಇಪ್ಪೊತ್ತೊಂದು ಸಾರಿ ಭೂಮಿಯ ಜಯಿಸಿ
ನಿರ್ಮೂಲ ಮಾಡಿದಿ ಕ್ಷತ್ರಿಯರನ್ನಾ
ಸಹಸ್ರಾರ್ಜುನನಾ ||

ಸೀತಾನ ದಸಿಯಿಂದ ಸೇತುಗಟ್ಟಿಸಿ
ಘಾತ ಮಾಡಿದಿ ನೀ ದೈತ್ಯಾರನಾ ಕೋತಿ
ಯಿಂದ ಸುಡಸಿದಿ ಲಂಕಾ ಭುವನಾ ಪ್ರೀತಿ-
ಯಿಂದ ತಂದಿ ಆ ಜಾನಕಿನಾ
ಬಸುರ ತುಂಬಿ ಭಾರಾದ ಕಾಲಕ್ಕೆ
ಬಿಟ್ಟು ತಿರುಗಿಸಿದ ಘೋರವನಾ ಇಲ್ಲೋ ಅಭಿಮಾನಾ
ಸೈರಿಸಲಾರದೆ ಸಣ್ಣ ಬಾಲ ಅಭಿಮನ್ಯು ಕುಮಾರನ ಪ್ರಾಣವನಾ
ಗೊತ್ತಿದ್ದು ಕಾಯಲಿಲ್ಲೊ ದಯಾ ಘನಾ
ಅಣ್ಣ ಅಂತ ನಂಬಿದ್ದ ದ್ರೌಪದಿನ್ನ
ಭರ ಸಭಾದೊಳಗ ಕಳೆಸಿದ ಮಾನಾ ನಾಚಿದಿಯೇನಾ
ಚಕ್ರದಿಂದ ಸೂರ್ಯನ ಮರಿಮಾಡಿ
ನಿಂತು ಕೊಲ್ಲಸಿದಿ ಜಯದ್ರಥನಾ-ಎಂಥಾ
ಕಪಟತನಾ ಮಾಡಿದಿ ನೀನಾ

||ಚಾಲು||

ಆ ಬಬ್ರುವಾಹನನ ಕೈಯಲಿ ತಲಿ ಹೊಡಿಸಿದಿ
ಹೊಡಿಸಿದೆಯೋ ತಂದಿಯ ತಲಿ
ಉಪಪಾಂಡವರನ ರಾತ್ರಿಯಲಿ
ಗೊತ್ತಿದ್ದು ಕಾಯಲಿಲ್ಲ ಕೊಲಿ
ಎಷ್ಟು ಹೇಳಲಿ ನಿನ್ನ ಖೊಟ್ಟಿ ಗುಣಾ
ಒಟ್ಟಿಗೆ ನೀ ದಯಾ ಇಲ್ಲದಾಂವಾ
ಪ್ರತ್ಯಕ್ಷ ಕಂಸ ಸೋದರ ಮಾಂವಾ
ಹಕನಾಕ ಹೊಡೆದೆ ಆತನ ಜೀಂವಾ

||ಏರು||

ಎಲ್ಲ ದೇವರಲಿ ಎಂದೆಂದಿಗೂ ನೀ
ಕಲ್ಲು ಮನಸಿನವಾ ಕೇಶವಾ ||೧ನೇ ಚೌಕ||

ನಿನ್ನ ಮಗಳ ಮಗಾ ಆದ ಭೀಷ್ಮಗ
ವಾದಿ ಆಗಿ ನಿಂತಿ ಪ್ರತಿವಾದಿ-ಮುಂದ
ಶಿಖಂಡಿನ ಮರಿ ಮಾಡಿ ನಿಲಿಸಿದ-ಹಿಂದ
ಮರಿಯಾಗಿ ಅರ್ಜುನಗ ಹೊಡಿ ಅಂದಿ
ಸತ್ಯ ಧರ್ಮ ನಿಂದ ಅಸತ್ಯ ನುಡಿಸಿ
ದ್ರೋಣನ ಪ್ರಾಣಕ ಮೂಲಾದಿ-ಇದು ನಿನ್ನ ಬುದ್ಧಿ
ಪರಿ ಪರಿಯಿಂದ ನಿನ್ನ ಭಕ್ತ ಕರ್ಣಗ
ಶಕ್ತಿ ಕ್ಷೀಣ ಮಾಡಿ ಬಳಲಿಸಿದಿ – ಶಾಪ-
ಕಾಗಿ ಭೂಮಿತಿ ರಥ ನುಂಗಿಸಿದಿ
ಬಾಂಧವನಂತ ಪಾಂಡವರಿಗೆ ತಿಳಿಗೊಡದೆ ಆತನ ಕೊಲಿಸಿದಿ
ಅಣ್ಣ ರಾಮನಿಂದ ಆಕಳ ಕೊಲ್ಲಿಸಿದಿ
ಪೃಥ್ವಿ ಪ್ರದಕ್ಷಣೆ ಮಾಡಿಸಿದಿ-ಕೈ ಸಾಧಿಸಿದಿ
ಸಾಂಬ ಕೊಟ್ಟ ಸಂಪತ್ತಿಗೆ ಸೈರಿಸದೆ
ಬಾಣಾಸುರನ ಭುಜ ಸವರ‍್ಯಾಡಿಸಿದಿ
ರಾಜ ಮಯೂರಧ್ವಜಗ ವಂಚಿಸಿದಿ
ಅರ್ಧಾಂಗ ದಾನ ಬೇಡಿ ಕಠಿಣ ಮನಸ್ಸಿನಿಂದ
ತಲೆಯ ಚರ್ಚೆ ಸೀಳಿಸಿದಿ
ಬಹಳ ನಿರ್ದಯದಿ
ಕಾಯ್ದ ಎಣ್ಣಿಯೊಳು ಎತ್ತಿ ಸುಧನ್ವರ
ಚಲ್ಲಿಸಿದನು ಆತನ ತಂದಿ
ಅಂತಾದರೊಳಗ ನೀ ಅವನ ರಕ್ಷಿಸಿದಿ
ನಿನ ಭಕ್ತನಂತ ಕೊಂಡಾಡಿಸಿದಿ
ಅದೇ ಸುಧನ್ವನ ಅಘೋರ ರಣದಲ್ಲಿ
ಕಲ್ಲು ಮನಸ್ಸಿನಿಂದ ಕೊಲ್ಲಿಸಿದಿ – ಬಾಳ ನಿರ್ದಯದಿ

||ಚಾಲ||

ತ್ರಿಪುರದ ದಾನವಾಂಗನಾ
ಪರಿವೃತಿ ಪರಮ ಪಾವನಾ
ಅಲ್ಲಿ ಪ್ರಗಟ ಮಾಡಿದಿ ನಿನ್ನ ಮನಾ
ವೃತಭಂಗ ಮಾಡಿದಿ ವಿನಾಕಾರಣಾ ||
ಅಶ್ವಾತ್ಥಾಮಗ ಶಾಪ ಕೊಡಿಸಿ ಬ್ರಹ್ಮ
ರಾಕ್ಷಸನ ಮಾಡಿಸಿದಾಂವಾ – ರಕ್ತ
ಪಿತ್ತ ರೋಗ ಹತ್ತಿಸಿದಾಂವ – ನೀ
ಯಾತಕ್ಹೇಳ ಹಿಂಜರಿದಾಂವಾ.

||ಏರು||

ಎಲ್ಲ ದೇವರಲಿ ಎಂದೆಂದಿಗೂ ನೀ
ಕಲ್ಲ ಮನಸಿನವಾ ಕೇಶವಾ||೨ನೇ ಚೌಕ||

ನಿನ್ನ ಹಾಸಿಗೆಯಾದ ಅದಿ ಶೇಷಗ
ಗಾಳಿ ಹೊರತ ಇಲ್ಲ ತಿನ್ನುದಕ – ಮ್ಯಾಲ
ಹಚ್ಚಿದಿ ಭೂಮಿ ಹೊರವುದಕ-ಸರಿ-
ಗಾಣೆನು ನಿನ್ನ ನಿರ್ದಯತನಕ
ನಿನ್ನ ವಾಹನ ಅನ್ನಿಸಿದ ಗರುಡಗ
ಮನಿಯಿಲ್ಲ ಪೃಥ್ವಿಯ ತಳಕ-ತುಸು ನಿಲ್ಲುದಕ ||
ನಿನ್ನ ದಾಸ ನಿಜದಾಸನೆಂದು ಹೆಸ
ರಾದ ಹನುಮ ಭುವನತ್ರಯಕ-ಅವನ
ದುಡಿಸಿಕೊಂಡಿ ಕೆಲಸಾಗೋತನಕ-ಮುಂದೆ
ಹಚ್ಚಿದಿ ಗ್ರಾಮದ ಕಾವಲಕ
ಪಂಚಪಾಂಡವರ ದುಃಖ ಹಿಂಗಲಿಲ್ಲ
ಕಡೆತನಕ-ನೀನಿರೋತನಕ ||
ಸೋಳಾ ಸಾವೀರದ ಪಟ್ಟದ ಸ್ತ್ರೀಯರನ
ಎತ್ತಿ ಚೆಲ್ಲಿಸಿದಿ ಸಮುದ್ರಕ-ದ್ವಾ-
ರಕಾ ಮುಳಗಿಸಿದಿ ಹಾಕನಾಕ – ಆಳ-
ಲಿಲ್ಲ ನಿನ್ನ ಘಾತಕತನಕ
ಛಪ್ಪನ್ನ ಕೋಟಿಯಾದವರ ಬಳಗ
ಮಣ್ಣುಗೂಡಿಸಿ ಮಾಡಿದಿ ಪಾಕಾ ಏನಾ ಬೇಬಾಕಾ
ಜಾಂಬುವಂತ ನಿನ್ನ ಭಕ್ತನಲ್ಲವೋ
ಕಸಗೊಂಡು ಬಂದಿ ಮಣಿ ಶಮಂತಕಾ
ಬೀಗ ರುಕ್ಮಾಂಗನ ಬಿಗಿಸಿದಿ ರಥಕಾ – ಅವನ
ಗಡ್ಡಾ ಮೀಸಿ ಬೋಳಿಸಿದಿ ಕೌತುಕಾ
ನಿನ್ನವಗುಣಕ ಸೇರದ ಲಕ್ಷ್ಮೀ
ಬಿಟ್ಟು ಹೋದಳು ಕೋಲ್ಹಾಪುರಕ-ನಿನ್ನ ದುರ್ಗುಣಕಾ

||ಚಾಲ||

ಮುರವೈರಿ ವಿಶ್ವ ವ್ಯಾಪಕಾ
ಸುರವಂದ್ಯ ಅಮರ ನಾಯಕಾ
ನೀವಾಡಿಸಿದಂತಾ ಕೃತ್ಯಕಾ
ಅಳತಿಲ್ಲೊ ಕಪಟ ನಾಟಕಾ
,,,,, ಪಾರ್ವತಿನ ಕೊಟ್ಟ ರಾವಣಗಾ
ನೋಡಿ ತಾಳಲಿಲ್ಲ ನಿನ್ನ ಜೀವಾ – ನಡುವ
ದಾರಿಯೊಳು ನೀ ಕಸಕೊಂಡಾಂವಾ – ಅವನ
ಪ್ರಾಣಲಿಂಗ ನೀ ಕೆಡಸಿದಾಂವಾ
ಎಲ್ಲ ದೇವರಲಿ ಎಂದೆಂದಿಗೂ ನೀ
ಕಲ್ಲ ಮನಸಿನವ ಕೇಶವಾ||೩ನೇ ಚೌಕ||
ಏನೇನು ಅನ್ಯಾಯವಿಲ್ಲದಂಥಾ ವಾಲೀನ
ಕಪಟತನದಿ ಕೊಂದಿ ರಣದಾಗ ಅವನ
ಹೆಣತಿನ ಕಸಕೊಟ್ಟಿ ಸುಗ್ರೀವನ ಖರೇ
ನ್ಯಾಯ ಪಾಕ್ಷಪಾತಿ ಅನಬೇಕ ಹ್ಯಾಂಗ
ಶಿಶುಪಾಲ ರುಕ್ಮೀಣಿನ ಲಗ್ನವಾಗುತ್ತಿದ್ದಾಗ – ನೀ
ಘಾತ ಮಾಡಿದಿ ಒಳ್ಳೆಯ ಸಮಯದಾಗ
ಹೊಕ್ಕು ಅದರಾಗ ಹೊಕ್ಕೆ ಅದರಾಗ
ಭಕ್ತರೊಳಗ ಅಗ್ರಗಣ್ಯ ಲಕ್ಷ್ಮಣಾ
ನೋಡಿದರೊಂದು ವಿಚಾರಿಸಿದಾಗ – ಪ್ರ-
ತ್ಯಕ್ಷ ತಮ್ಮನೋ ಅವ ನಿನಗ – ನಿಂತು
ರಕ್ಷಿಸಿದನೋ ಮಹಾವನದಾಗ
ಅವನ ಭಕ್ತಿ ಕಂಡು ಕರುಣ
ಹುಟ್ಟಲಿಲ್ಲ ಕಾಲ ಸಮಯದಾಗ
ಅನ್ಯಾಯಕಾರಿ ನೀ ಅವನ ಅನ್ನನ್ಯಗತಿ ಮಾಡಿ
ಉಪವಾಸ ಇಟ್ಟ ಧೇಟಿಕ ಬಕದಂಗ – ಸುಡ ನಿನ್ನ ಸಂಗದ
ಹರನ ಪ್ರಸನ್ನ ಮಾಡಿ ವರವ ಬೇಡಕೊಂಡ
ಹಿರಣ್ಯಕಶಪು ತಾ ಬಲ್ಲಂಗಾ – ನರ –
ಪಶು-ಮೃಗ-ಶಸ್ತ್ರದಿಂದ ಸಾಯದ್ಹಂಗ – ಸಾಂಬ
ಸಂತುಷ್ಟಾಗಿ ವರಕೊಟ್ಟ ಬೇಡಿದ್ಹಾಂಗ
ಕೊಟ್ಟ ಸುದ್ದಿ ಕೇಳಿ ನಿನ್ನ ಹೊಟ್ಟಿಯೊಳಗೆ ಬೆಂಕಿ ಬಿದ್ದು
ಸಿಟ್ಟಿನಿಂದ ಅರ್ಧಾ ಸಿಂಹನ್ಹಾಂಗ – ಸೀಳಿ ಹೊಸ್ತಲದಾಗ

||ಚಾಲ||

ನೀನಂತೂ ಯಾರಿಗೆ ಕೊಟ್ಟವನಲ್ಲಾ
ಒಬ್ಬರು ಕೊಟ್ಟರು ನಿನಗ ಸೇರಾಕಿಲ್ಲಾ
ನಿನ್ನ ಪೌತ್ರ ಸಾಂಬ ಯಾರಿಗೇನು ಕೊಟ್ಟರ
ಉರಿತಿ ನೀ ನಿನ್ನ ಮನದಾಗ
ಹಿರಣ್ಯಾಕ್ಷ ಭಸ್ಮಾಸೂರ ರಾವಣ ಕುಂಭಕರ್ಣ
ಮಣ್ಣು ಮುಕ್ಕಿದಾರೋ ನಿನ್ನ ಕಾಲಾಗ –
ದುರ್ಗುಣ ಹೀಂಗ –
ನಿನ್ನ ಭಕ್ತ ಹರಿಶ್ಚಂದ್ರನು
ದುರ್ದೈವಿಯಾಗಿ ಹೋದನು
ನಿನ್ನ ಸ್ಮರಣೆಗೈದು ಅಜಮೀಳನು
ಯಮಬಾಧೆಯಲಿ ಬಿದ್ದನು
ಪ್ರೀತಿಗೆ ಪಾತ್ರನೆಂದೆನಿಸಿದ ಏನು ಸುಡು-
ಗಾಡು ಸೇರಿದಾ ಸಾಂಬಶಿವಾ
ಬಡಕೊಂಡ ಬೂದಿ ಅನಿಸಿದ ಬಾವಾ
ಕರುಣಹೀನ ನಿನ್ನ ಕಡೆತನ ನಂಬಿದ
ಯಾವ ಮನುಜ ಪಥ ಕಂಡಾವಾ-
ಹೇಳೆಲೋ ದೇವಾ

||ಏರು||

ಎಲ್ಲ ದೇವರಲಿ ಎಂದೆಂದಿಗೂ ನೀ
ಕಲ್ಲು ಮನಸಿನವಾ ಕೇಶವಾ||೪ನೇ ಚೌಕ||

ಸಂಗ್ರಹ : ಎ.ಜಿ. ನೀಲಗಾರ
ಕೃತಿ : ಜಾನಪದ ಝೇಂಕಾರ