ಭೋಗ ತಾತ್ಪರ್ಯ ಆಗಿ ತೀರುವುದು
ತಂದ ತನಗ ಆಗದು ಗೊತ್ತಾ
ದೇವಲೋಕದೊಳಗ ನಡದಂಥ ಕಥಾ
ನೀವು ಚಿತ್ತಗೊಟ್ಟ ಕೇಳಬೇಕ್ರಿ ಕೂತಾ ||
ಯೋಗಿ ಆದರೇನ ಭೋಗಿ ಇದ್ದರೇನ
ತಪ್ಪೊದಿಲ್ಲ ಬ್ರಹ್ಮನ ಲಿಖಿತಾ
ಇದು ಸಿದ್ಧಾಂತಾ ||

ಬ್ರಹ್ಮ ಪುತ್ರ ಭೃಗು ಋಷಿ ಸಭಾದೊಳು
ತಂದಿನ್ನ ಕೇಳತಾನ ಜಡಿ ಜಡಿತಾ
ನನ್ನ ಹಣಿಯೊಳು ಬರದದ್ದು ಏನಂತಾ
ನೋಡಿ ಹೇಳಂದ ಮುಂದಾಗೊ ಕಥಾ ||
ಚೆನ್ನ ಚೆಲವಾದಿ ಹೆಣ್ಣ ಲಗ್ನ ಆಗಿ ನೀನು
ಐದ ವರ್ಷ ಅಲ್ಲೆ ಇರವೂತಾ
ಮೋಹದೊಳಗ ಎಲ್ಲಾನ್ನು ಮರತಾ ||

ನೀವು ಒಂದಾದ ವರ್ಷದೊಳು ಹೆಣ್ಣ ಹುಟ್ಟುವದು
ಆ ಮಗಳ ಕೂಡ ಭೋಗ ಮಾಡುತಾ
ಆಗ ಗಂಡ ಫಲಾ ಆಗೋದ ಮತ್ತಾ
ಹದಿನಾಲ್ಕು ವರ್ಷದೊಳಗಿನ ಮಾತಾ ||
ಅದೃಷ್ಟದೊಳಗಿಂದ ಆಗಿ ತೀರುವದು
ಎಂಥೆಂಥವರು ಆಗ್ಯಾರ ತುತ್ತಾ
ಇಷ್ಟಹೇಳಿ ಬ್ರಹ್ಮ ಸುಮ್ಮನ ಕುಂತಾ ||

ಕೇಳಿ ಭೃಗು ಋಷಿ ತಾಳಲಾರದೆ
ತಂದಿ ಕೂಡ ಜಿದ್ದಿಗಿ ನಿಂತಾ
ಕುಲಗೋತ್ರ ಅಂಬೋದು ನಿನಗಿಲ್ಲ ಗೊತ್ತಾ
ಹದಿನಾಲ್ಕು ವರ್ಷ ಅಂದರೆಷ್ಟೊತ್ತಾ |
ನಾ ಲಗ್ನ ಆಗದಿದ್ರ ಇದ ಹೆಂಗ ಆಗತೈತಿ
ತಪ್ಪಿಸುವೆನು ನಿನ್ನ ವಿಧಿ ಲಿಖಿತಾ
ತೊಟ್ಟಾನ ಪಂಥಾ ||

ಒಂದನೇ ಚಾಲ

ಭೃಗು ಋಷಿ ಆದಾನು ಸಿಟ್ಟ ಮನಿ ಬಿಟ್ಟ ಹೊಂಟ
ನಡದ ಸಂಚಾರಾ
ದಾಟುತ ಗುಡ್ಡಗಂವಾರಾ ||

ನಾ ಅಂದ್ರ ಏನಂತ ತಿಳದ ಅದೃಷ್ಟ ಬರೆದ
ಇದ ಯಾವ ದೊಡ್ಡ ಗೋರಾ
ಗೆದ್ದ ದಾಟುವೆನು ಹಗರಾ ||

ಸುತ್ತಹಾದ ಮುಗಿತ ಎಲ್ಲಾ ನಾಡ ಮನಸಿಗಿಲ್ಲ ದೃಢಾ
ಚಂದ್ರಾವತಿ ಪಟ್ಟಣ ದೊಡ್ಡ ಊರಾ
ನದಿ ಹರೀತಿತ್ತ ಅಗಸಿಯ ಎದುರಾ ||

ಗಿಡಕ ಕುಂತ ದಂಡಿಯಲ್ಲಿ ಹಾಲಕ್ಕಿ ನುಡಿತ ಚಿಲಿಬಿಲಿ
ಇಲ್ಲ ಖಬರಾ
ಜಳಕಾ ಮಾಡೋದಿವನ ಆತುರಾ ||

ಎರಡನೇ ಚಾಲ

ಚೆನ್ನ ಹೊಲಿಯ ಮಗಳು ನದೀಗಿ
ಕೊಡ ತಗೊಂಡ ಬಂದಾಳ ನೀರೀಗಿ ||

ಆಕಿನ್ನ ನೋಡಿ ಭೃಗು ಮನಕರಗಿ
ಮೈಮರತ ನಿಂತಾನು ಮರುಳಾಗಿ ||

ಇವನ ಮೇಲೆ ಆಕಿದು ಮನಸಾಗಿ
ಒಳಗಿಂದೊಳಗ ನಡದೀತು ಗುದಮುರಗಿ ||

ಕೊಡಾ ಹೊರಸಂತ ಕರದಾಳು ಸ್ವಾಮೀಗಿ
ನೋಡ್ಯಾನು ಶಿವದಾರಾ ಗುಂಡಗಡಿಗಿ ||

||ಏರ||

ಒಬ್ಬರನ್ನೊಬ್ಬರು ನೋಡುತ ನಿಂತಾರ
ಮನ ಮನಸ ಕೂಡ್ಯಾವ ಸರ್ತ
ಇಕಿ ಲಿಂಗವಂತರಾಕಿ ಖಚಿತಾ
ಲಗ್ನ ಆದರೆ ತಪ್ಪುವದು ವಿಧಿ ಲಿಖಿತಾ ||

ಯೋಗಿ ಅದರೇನು ಭೋಗಿ ಇದ್ದರೇನು
ತಪ್ಪೋದಿಲ್ಲ ಬ್ರಹ್ಮನ ಲಿಖಿತಾ
ಇದು ಸಿದ್ಧಾಂತಾ||೧||

ಯಾವೂರವರು ಸ್ವಾಮಿ ನೀವು ಇಲ್ಲಿಗ್ಯಾಕೆ ಬಂದೇರಂತ
ಸಡಕಾಸಿ ಕೇಳ್ಯಾಳ ಭಿಡೆ ಏನಿಲ್ಲಾ |
ಭೃಗು ಋಷಿಗೆ ಆತ ವಳ್ಳೆ ಕುಸಿಯಾಲಾ
ನಮ್ಮ ದೇಶ ದೂರ ರಾಜ್ಯದ ಮ್ಯಾಲಾ ||
ಮದಿವಿ ಆಗೋನು ಮನಿಗೆ ನಡೀರೆಂತ
ಕರಕೊಂಡ ನಡದಾಳ ಹಿಂಬಾಲಾ
ಬಿದ್ದ ದುಂಬಾಲಾ ||

ಕೈ ಹಿಡದ ಕರಕೊಂಡ ಹೋಗವಾಗ
ನೋಡುತ ನಿಂತಾರ ಜನರೆಲ್ಲಾ
ಈ ಸಾದೂಗಂತೂ ಅಭಿಮಾನವಿಲ್ಲಾ
ಏನ ಅನ್ನೊದೈತಿ ಕರ್ಮದ ಕಾಲಾ ||
ಹೆಣ್ಣು ಗಂಡು ಕಂಡಂಗ ಮಾತಾಡತಾರ
ಮೊದಲಿಗೆ ಇಕೀದು ಕಡಿಮಿ ಕುಲಾ
ಅಲ್ಲದ ಚಾಲಾ ||

ಬಾಗಿಲ ಮುಂದ ಬಂದ ಬಾಗಿ ಕೊಡಾ ಇಳವಿ
ಭಕ್ತಿಯಿಂದ ತೊಳದಾಳ ಕಾಲಾ
ಕುಂಡ್ರಿಸ್ಯಾಳ ಒಳಗ ಮಂಚದ ಮ್ಯಾಲಾ
ನೋಡಿದವರಿಗೆ ಬಿದ್ದಿತ ದಿಗಿಲಾ ||
ತಾಯಿ ತಂದಿನ್ನ ಕರದ ಕದ್ದಿಲಿ ಹೇಳತಾಳ
ಇವನ ಮ್ಯಾಲ ನನ್ನ ಹಂಬಲಾ
ನಾನು ಬ್ಯಾರೆ ಲಗ್ನ ಆಗೂದಿಲ್ಲಾ ||

ಇವನ ಕೂಡಾ ನನ್ನ ಮದವಿ ಮಾಡರಿ
ಇಲ್ಲೆ ಇರತೇವ ಕಡಗಿನ ಕಾಲಾ
ನಿಮಗಾಸರಾಗಿ ನಾವು ಅನುಗಾಲಾ
ಹಿಂಗ ಹಟಾ ತೊಟ್ಟ ಹಿಡಿದಾಳ ಕಾಲಾ ||
ಹೊರಗ ಕೊಟ್ಟರ ನನ್ನ ಕರತಂದು ಕಳಿಸವರ‍್ಯಾರಿಲ್ಲಾ
ಮುಂದ ಹಗಲೆಲ್ಲಾ ||

ಒಂದನೇ ಚಾಲ

ಮಂದಿ ಬಳಗ ಎಲ್ಲಾರು ಕೂಡಿ ಸಂಭ್ರಮ ಹೂಡಿ
ಮದಿವಿ ಮಾಡ್ಯಾರು
ಸತಿ ಪತಿ ಒಂದು ಆದಾರು ||

ಮನಿಯೊಳಗ ಮಡಿ ಹುಡಿ ನೇಮ ಧರಿಸುವರು ಭಸ್ಮ
ಶೀಲವಂತರು
ಸದ್ಭಾವ ಶಿವನ ಭಕ್ತರು ||

ನಿತ್ಯಲಿಂಗಪೂಜಿ ನಡಿತೆತ್ತ ಭೃಗುಋಷಿ ನೋಡಿ ಆದಶಾಂತ
ಖರೆ ಲಿಂಗವಂತರು
ಜಂಗಮರ ಸೇವಾ ಮಾಡುವರು ||

ಭೃಗು ಋಷಿಗೆ ಅಗವಲ್ತಗೊತ್ತ ಎಲ್ಲಾನ್ನು ಮರತ
ಯಾರಿಲ್ಲ ನನ್ನಂತವರು
ಬ್ರಹ್ಮ ಲಿಖಿತ ತಪ್ಪಿಸಿಕೊಂಡವರು ||

ಎರಡನೇ ಚಾಲ

ಇಲ್ಲಿಗೆ ತುಂಬ್ಯಾವ ನವ ಮಾಸಾ
ಹತ್ತರೊಳಗ ಜನಿಸಿತು ಹೆಣ್ಣ ಕೂಸಾ ||
ಸರ್ವರಿಗೆ ಆದೀತು ಉಲ್ಲಾಸಾ
ನೋಡಿ ಸಂಶೆಗೊಂಡಾನು ಬ್ರಹ್ಮೇಶಾ ||
ಹಿಂಗ ನಡಿಯುತ ಸಾಗಿತ ದಿವಸಾ
ಇಲ್ಲಿಗೆ ಕಳದಾವು ಐದ ವರುಷಾ ||

||ಏರ||

ಹ್ಯಾಂಗ ಮಾಡಲಿನು ಹ್ಯಾಂಗ್ಯಾಂಗೋ ಕಾಣತೈತಿ
ಹೇಣತಿನ್ನ ಕೇಳತಾನ ನಗನಗತಾ
ಖರೆ ಹೇಳ ಅಂದ ನಿಮ್ಮದ್ಯಾವ ಮತಾ
ನಾನು ಹ್ಯಾಂಗ ತಿಳಿಯಲಿ ನೀವು ಯಾರಂತಾ ||

ಯೋಗಿ ಆದರೇನು ಭೋಗಿ ಇದ್ದರೇನು
ತಪ್ಪೋದಿಲ್ಲ ಬ್ರಹ್ಮನ ಲಿಖಿತಾ
ಇದು ಸಿದ್ಧಾಂತಾ||೨||

ಮಾನುಳ್ಳವರೊ ನಾವು ನೀತಿವಂತರು
ಚೆನ್ನ ಚಲವಾದಿ ಜಾತಿ ಹೊಲಿಯರದಾ
ಕಪ್ಪಕಡಿ ಬಳಸೋದಿಲ್ಲ ಎಂದೆಂದಾ
ಯಾವ ದೋಷ ಸಿಗಾಣಿಲ್ಲಾ ನಮ್ಮಿಂದಾ ||
ಶಿವನ ಭಕ್ತರು ನಾವು ಜೋಗಿ ಜಂಗಮರು
ಊಟಾ ಮಾಡಿ ಹೋಗತಾರ ಬಂದಬಂದಾ
ಹಿಂಗ ನಡಿಯುತ ಬಂದೈತಿ ಮೊದಲಿಂದಾ ||

ಕೇಳಿ ಭೃಗು ಋಷಿಗೆ ದಿಂಗ ಬದಡಿತು
ತಪ್ಪಲಿಲ್ಲ ನನ್ನ ದೈವಾನದಿಂದಾ
ಹಿಂಗ ಇಲ್ಲಿತನಕಾ ಆದಿತ ಒಂದಾ
ಹ್ಯಾಂಗ ತಪ್ಪಿಸಲಿ ಉಳದೈತಿ ಇನ್ನೊಂದಾ ||

ಈ ಮಗಳ ಕೂಡ ಭೋಗ ಮಾಡೊದಲ್ಲ
ಮೊದಲಾ ಹಾಕಬೇಕಂತಾನ ಕೊಂದಾ
ದಾಟುವೆನಂದಾ ||

ಅರಗಿಳಿ ಹಂತಾ ಮಗಳು ನಾಕ ವರ್ಷದ್ದು
ಮಾತಾಡತಿತ್ತ ಚೆಂದ ಚೆಂದಾ
ಸುಳ್ಯ ಹೇಳಿ ಹೊರಗ ಕರಕೊಂಡ ನಡದಾ
ಅಡವಿ ಆರ‍್ಯಾಣದೊಳಗ ಅಡ್ಡದಾರಿ ಹಿಡದಾ ||
ಬಿಸಲ ಬಡದ ಬಾಳ ಗಾಳಿ ಆಗಿ ಆ ಮುದ್ದಕೂಸ
ತೊಳಲಿ ಬಳಸಿ ಬಾಯಾರಿ ಹಸದಾ
ಕಾಲ ರಕ್ತವಡದ ಕಲ್ಲಮುಳ್ಳ ತುಳದಾ ||

ಹಾಲ ಕುಡಸತಿದ್ಲ ಹಡದವ್ವ ನನಗ
ನೆನಪ ತಗೀತೈತಿ ತಾಯೀದಾ
ದಾರಿ ನೋಡತಾಳ ಮನಿಯಾಗ ನಂದಾ
ಅಪ್ಪಾ ಹೋಗೋಣ ನಡಿ ಇನ್ನ ಇಲ್ಲಿಂದಾ ||
ಕಂಗಾಲಾಗಿ ಕೂಸ ಕಾಲಹಿಡದ ಕೇಳೀತ
ಕರಕೊಂಡ ಹೋಗಬ್ಯಾಡ ಇನ್ನ ಮುಂದಾ
ಅಂವಾ ಇಲ್ಲೆ ಇಕಿನ್ನ ಕೊಲ್ಲಬೇಕಂದಾ ||

ಒಂದನೇ ಚಾಲ

ಅಲ್ಲೆ ಇತ್ತ ನೀರಲ ಗಿಡಾ ಜಾಗಾ ಅನಗಾಡಾ
ಹೊತ್ತ ಮುಳಗಿ ಆತ ಕತ್ತಲಾ
ಮಲಕೊಂಡ್ರ ಹಾಸಗಲ್ಲ ಮ್ಯಾಲಾ ||
ಮಗಳಿಗೆ ಹತ್ತಿತು ಜಂಪ ಎದ್ದು ಇವ ಗಪ್ಪ
ಬದಿಯಲಿ ಇತ್ತದೊಡ್ಡ ಕಲ್ಲಾ
ಎತ್ತಿ ಒಗದ ಮಗಳ ತಲಿಮ್ಯಾಲಾ ||
ವದ್ದಾಡಿ ಪ್ರಾಣ ಬಿಟ್ಟೀತ ನೋಡಿದಾನ ನಿಂತ
ಸಂಶೆ ಉಳಿಯಲಿಲ್ಲಾ
ಕಡಿತೆಂದ ಕರ್ಮದ ಕತ್ತಲಾ ||
ಪಕ್ಷಿಗಳು ದುಃಖ ಮಾಡುತ ಕಣ್ಣೀರ ಚೆಲ್ಲುತ
ಸರಿವಲ್ತ ಕಲ್ಲಾ
ಕರಡೆಪ್ಪ ಆದ ಅನುಕೂಲಾ ||

ಎರಡನೇ ಚಾಲ

ಬಾಯೊಳಗ ಇಟ್ಟಾವ ಅಮೃತಾ
ಉಸಲ ತಿರುಗಿ ಕೂಸ ಎದ್ದ ಕೂತಾ ||

ಬ್ಯಾಟಗಾರ ನೋಡ್ಯಾನು ಬಂದ ನಿಂತಾ
ಕಣ್ಣ ತಗದಾನು ಪುಣ್ಯೇಕ ಭಗವಂತಾ ||

ಮಾರಾಟಕ ಹಚ್ಚ್ಯಾನು ಪ್ಯಾಟಗಿ ನಿಂತಾ
ಕೂಸಿಗಿ ಬಂದಿತು ಭಾರಿ ಕಿಮ್ಮತ್ತಾ ||

ಪಾತರದವರ ಮನಿಯೊಳು ಬೆಳೆಯುತಾ
ಕಲತಾಳು ನೃತ್ಯ ಸಂಗೀತಾ ||

||ಏರ||

ಹದಿಮೂರು ವರುಷಕ್ಕ ಪ್ರಾಯಕ್ಕ ಬಂದಿದಾಳ
ನಾಟ್ಯ ರಂಗದಲ್ಲಿ ಪ್ರಖ್ಯಾತಾ
ದಿನಾ ಗಳಿಕಿ ಆಗತಿತ್ತ ವಿಪರೀತಾ
ಹಿಂಗ ನಡಿಸಿಕೊಟ್ಟ ಆಕಿಗಿ ಭಗವಂತಾ ||

ಯೋಗಿ ಆದರೇನು ಭೋಗಿ ಇದ್ದರೇನು
ತಪ್ಪೋದಿಲ್ಲ ಬ್ರಹ್ಮನ ಲಿಖಿತಾ
ಇದು ಸಿದ್ಧಾಂತಾ ||೩||

ಒಂದಾನೊಂದ ದಿನಾ ದೊಡ್ಡ ಸಭಾ ಇತ್ತ
ನೋಡಲಾಕ ಕೂಡ್ಯಾರ ಜನಾ
ಒಳ್ಳೆ ಇಂಪಾಗಿ ಹಾಡತಿದ್ಲ ಗಾಯನಾ
ರೂಪ ಒಣಪದಲ್ಲಿ ಕಡಿಮಿ ಇಲ್ಲ ಏನಾ ||

ಅದೇ ದಾರಿಯಲ್ಲಿ ಭೃಗು ಋಷಿ ಬಂದ
ಇಲ್ಯಾಕ ಕೂಡ್ಯಾರ ಇಷ್ಟ ಜನಾ
ಅಂಥ ಚಮತ್ಕಾರ ನಡದದ್ದು ಏನಾ ||

ಮಂದಿ ದಾಟಿ ಮುಂದ ಬಂದ ನಿಂತಾನು
ರೂಪ ಒಣಪ ನೋಡಿ ಮೆಚ್ಚುತ ಮನಾ
ತಾನು ಕೆಣಕಬೇಕಾಂತಾನು ಇಕಿನ್ನಾ
ಏನಂತಿ ಹೇಳ ಯಾರಾಕಿ ನೀನಾ ||
ನಿನ್ನ ಮ್ಯಾಲ ನನ್ನ ಹಂಬಲಾಗೇತಿ
ಬೇಕಷ್ಟ ಕೊಡತೇನ ಕೇಳ ನೀನಾ
ತಡಿವಲ್ತ ಮನಾ ||

ಪಾತರದವಳೊ ನಾನು ದೈವ ಭಕ್ತಳು
ನಾ ಯಾರನ್ನು ಮುಟ್ಟಿಲ್ಲ ಇಲ್ಲಿತನಾ
ಸರ್ವರಿಂದ ಐತಿ ನನಗ ಸನ್ಮಾನಾ
ತನ್ನ ಮಗಳು ಅಂಬೋದು ಹತ್ತವಲ್ತ ಖುನಾ ||
ಪಾತಾರದವಳು ಅಂದ್ರ ಯಾತರದೇನ ಭಯಾ
ಹ್ಯಾಂಗ ಬಿಟ್ಟಿರಲಿ ಸುಮ ಸುಮನಾ
ಈಕಿನ್ನ ಹೊಂದುವೆನಾ ||

ಒಲ್ಲಿ ನನ್ನದ ಒಪ್ಪಿಕೊಂಡಾಳು ಹಿಂಗ
ಯಾರ‍್ಯಾರು ಕೇಳಿದ್ದಿಲ್ಲ ಇಲ್ಲಿತನಾ
ಬಂದ ನೋಡಿ ಹೋಗತಿದ್ರ ದಿನಾ ದಿನಾ
ನಾನು ಕಂಡಿಲ್ಲ ಅಂದ್ಲ ಇಂಥಾ ಎದಿಗಾರನಾ ||
ಕೈಹಿಡದ ಕರಕೊಂಡ ಹ್ವಾದಳ
ಊಟ ಆತ ಪಂಚಪಕ್ವಾನ್ನ
ಭೃಗು ಋಷಿಗೆ ಅಗವಲ್ತು ಸಮಾಧಾನಾ ||

ಒಂದನೇ ಚಾಲ

ಕೂತಾರು ಮಂಚಲ ಮ್ಯಾಗ ವಿಳ್ಳೇದೆಲಿ ಅಡಿಕಿ ಲವಂಗ
ಮಡಿಚಿ ತಿನ್ನೂತಾ
ಮನಸಿಗಿಲ್ಲ ಪುರಸೊತ್ತಾ ||

ಪುನಗ ಜವಾದಿ ಗಂದ ಮಲ್ಲಿಗಿ ಮಕರಂದ
ನಡಿತಾ ಗಮ್ಮತ್ತಾ
ಇಬ್ರು ಕೂಡಿ ಆದ್ರ ಏಕಾಂತಾ ||

ಒಂದ ವರಸ ಅಂವ ಅಲ್ಲೆ ಉಳದಾ ಮಗಾ ಹುಟ್ಟಿತ ಪಸಂದಾ
ಅಕ್ಕರತೀಲಿ ಎತ್ತ ಇಳಸೂತಾ
ಹಿಂದ ಮುಂದಿಂದೆಲ್ಲಾ ಅಲ್ಲೆ ಮರತಾ ||

ಒಂದ ದಿನಾ ಇಬ್ಬರು ಕೂಡಿ ಆಡತಿದ್ರ ಪಗಡಿ
ಚ್ಚಾಷ್ಟಿ ಮಾಡುತಾ
ಒಳ್ಳೆ ನಡದಿತ್ತ ಮಾಯದ ಮಮತಾ ||

ಎರಡನೇ ಚಾಲ

ನಿಮದು ಯಾವ ಊರ ಹೇಳರಿ ಖಾಸಾ
ನಗನಗತ ಕೇಳ್ಯಾಳು ಉಲ್ಲಾಸಾ ||

ನಾಡಮ್ಯಾಲ ದೂರೈತಿ ನಮ್ಮದೇಸಾ
ತಿಳಿಯಗೊಡಲಿಲ್ಲ ತನ್ನ ವಿಶ್ವಾಸಾ ||

ಇತ್ತಕಡಿಗಿ ಬಂದದ್ದು ಯಾವ ಕೆಲಸಾ
ಕಾಶಿಯಾತ್ರಿ ಮಾಡುವ ಉದ್ದೇಶಾ

ತಲಿಯ ಮ್ಯಾಲೆ ಹ್ವಾದೀತ ಇವನ ದ್ಯಾಸಾ
ಕಡಕೊಂಡ ಬಿದ್ದಾಂಗಾತು ಆಕಾಶಾ ||

||ಏರ||

ಕಲಿ ನೋಡಿ ಅವನ ನೆಲಿ ತಪ್ಪಿಹೋತ
ಕೇಳತಾನು ಇದು ಏನಂತಾ
ದುಂಬಾಲ ಬಿದ್ದ ಲಗೂ ಹೇಳಂತಾ
ನನಗ ಇಲ್ಲಿ ತನಕಾ ಆಗಿಲ್ಲ ಗೊತ್ತಾ ||

ಯೋಗಿ ಆದರೇನು ಭೊಗಿ ಇದ್ದರೇನು
ತಪ್ಪೋದಿಲ್ಲ ಬ್ರಹ್ಮನ ಲಿಖಿತಾ
ಇದು ಸಿದ್ಧಾಂತಾ ||||೪||

ಚೆನ್ನಚೆಲವಾದೇನ ಮನಿಯೊಳು ಹುಟ್ಟಿ ನಾನು
ದಿನಕ ದಿನಾ ಅಲ್ಲೆ ಬೆಳೆಯುತಲಿ
ತಂದಿ ಕರಕೊಂಡ ಹ್ವಾದ ಗುಡ್ಡದಲಿ
ಕಲ್ಲ ಒಗದ ಕೊಂದ ನನ್ನ ತಲಿಮ್ಯಾಲಿ ||
ಜೋಡ ಪಕ್ಷಿಗಳು ಪಾಲನಾ ಮಾಡಿದಾವ
ಅಮೃತ ಇಟ್ಟ ನನ್ನ ಬಾಯಲ್ಲಿ
ಅಂವ ಎತ್ತೋ ಹೋದ ರಾಜ್ಯದ ಮ್ಯಾಲಿ ||

ಕರಡಿ ಪಕ್ಷಿಗಳು ಉಪಚಾರ ನಡಸುತ
ಮನುಷರಂತೆ ಪ್ರೀತಿ ಮಾಡುತಲಿ
ಒಬ್ಬ ಬ್ಯಾಟಿಗಾರ ಬಂದ ನಿಂತ ನೋಡುತಲಿ
ಅಂವ ತಂದ ಮಾರಿದಾನ ಪಾತ್ರದವರಲ್ಲಿ ||
ಕೇಳಿ ಭೃಗು ಋಷಿ ಪಾತಾಳಕ ಇಳದಾನ
ತನ್ನ ಮಗಳು ಅಂಬುವ ಖೂನ ಹತ್ತುತದಲಿ
ಕೂಸ ತೊಟ್ಟಿಲದಲಿ ಎದ್ದ ಅಳೂತಲಿ ||

ನನ್ನ ಮಗನ ಮೊಮ್ಮಗನೆ ಮಗನ ಮಗನೆ
ಬ್ರಹ್ಮನ ಮರಿಮಗನೆ ಅನ್ನುತಲಿ
ಜೋ ಎಂದು ತೊಟ್ಟಿಲ ತೂಗುತಲಿ
ಇಲ್ಲಿ ನಿಲ್ಲಬಾರದಂತಾನ ಇನ್ನ ಮ್ಯಾಲಿ ||
ಮೃತ್ಯು ಲೋಕ ಬಿಟ್ಟ ನಡದ ಮಾರಾಯ
ದಾರಿ ಕಾಯುತಿದ್ರ ಸಭಾದಲ್ಲಿ
ದೇವ ಲೋಕದಲ್ಲಿ ||

ಹದಿನಾಲ್ಕು ವರ್ಷಗಳು ಹ್ಯಾಂಗ ಕಳದವು
ತಿಳಿಯಲಿಲ್ಲ ಮಾಯದ ಬಲಿ
ಸತ್ಯ ಲೋಕದ ದಾರಿ ಹಿಡದ ವತ್ತರಲಿ
ಹಿಂದ ಆದದ್ದು ನೆನಸುತ ದುಃಖದಲಿ ||
ಅಪಮಾನ ಬಾಳಾತ ಉಪಾಯಗಾಣದೆ
ನಿಂತಕೊಂಡ ಬ್ರಹ್ಮನ ಸಭಾದಲಿ
ಕೈ ಮುಗಿಯುತಲಿ ||

ಒಂದನೇ ಚಾಲ

ಕೂಡಿದ್ರ ಯಕ್ಷ ಗಂಧರ್ವರ ದೇವಾನು ದೇವತೇರ
ಕೇಳುವ ಆತುರಾ
ಭೃಗು ಋಷಿಗೆ ಆದ ಮಜಕೂರಾ ||
ಎದ್ದಬಂದ ಬ್ರಹ್ಮದೇವರ ಅಪ್ಪಿಕೊಂಡಾರ
ಸಮಾಧಾನ ಮಾಡ್ಯಾರು
ಕೇಳ್ಯಾರು ಮಾಡಿ ವಿಚಿಯಾರಾ ||

ಭೃಗು ಋಷಿ ಹೇಳತಾನ ನಿಂತ ಆಗೋದೆಲ್ಲಾ ಆತ
ತಪ್ಪಲಿಲ್ಲ ನನ್ನ ಹಣಿಬರಾ
ಒಂದು ಬಿಡದೆ ಮುಗದ ಹೋತ ಪೂರಾ ||
ಹೀಂಗೈತಿ ಅದೃಷ್ಟದ ನೇಮ ಹಿಂದಿನ ಕರ್ಮ
ತೊಳದ ಹೋತ ಪೂರಾ
ಭೃಗು ಋಷಿ ಆದ ಆಗ ಹಗರಾ ||

ಎರಡನೇ ಚಾಲ

ಕಾಡಿನ ಪಕ್ಷಿ ಮಾಡಿದ ಪುಣ್ಯೇಕ
ಹೊಸಾ ಹೆಸರ ಇಟ್ಟಾರ ತತ್‌ಕ್ಷಣಕ ||

ರತ್ನ ಪಕ್ಷಿ ಅನ್ನುತ ಸರ್ವಲೋಕ
ಕೈ ಮುಗೀಲಿ ಮುಂಜಾನೆ ಏಳುದಕ ||
ಕರಡಿ ವಾಸ ಮಾಡಿತ್ತ ನೀರಲ ಗಿಡಕ
ಜಾಂಬುವಂತ ಅನ್ನಲಿ ಕಡಿತನಕ ||

ಬಿಗಿ ಐತಿ ಅದೃಷ್ಟದ ತೊಡಕ
ಯಾರಿಂದ ಆಗದ ಬಿಡಸಾಕ ||

||ಏರ||

ಪ್ರಾಸ ಪಲ್ಲವಿ ಸೋಸಿನೋಡಿ ತ್ರಾಸ ಹಿಡದ ತೂಕಾಮಾಡಿ
ಪ್ರಾಸ ಇದ್ದರ ಅನಬೇಕ ಹೌದಹೌದಂತಾ
ತಿಗಡೊಳ್ಳ್ಯಾಗ ಹುಟ್ಟತಾವ ಹೊಸ ಹೊಸ ಕವಿತಾ
ಮರಿಕಲ್ಲ ಬರೀತಾನ ಆಕಳಗಳ ಕಾಯ್ಕೊಂತಾ ||

ಯೋಗಿ ಆದರೇನು ಭೋಗಿ ಇದ್ದರೇನು
ತಪ್ಪೋದಿಲ್ಲ ಬ್ರಹ್ಮನ ಲಿಖಿತಾ
ಇದು ಸಿದ್ಧಾಂತಾ ||||೫||

ಸಂಗ್ರಹ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು