||ಪಲ್ಲ||

ಜಯಮೆ ಜಯನ ಮುಂದ ಜಯಮುನಿ ಅಂತಾನ ಶಾಮಕರಣ ಬಿಟ್ಟಾರ ಪಂಚಪಾಂಡವರಾ |
ಚಂದ್ರಚೂಡಾಮಣಿ ಅಂಬಾವ ರಣಶೂರಾ |
ಚಪ್ಪನ್ನ ದೇಶದೊಳಗ್ಯಾರ‍್ಯಾರಿಲ್ಲ ಅವನಿದಿರಾ ||
ಕಪಟದಿಂದ ಅವನ ಹೊಡದ ಕೃಷ್ಣ ತಾ ಹೇಳುವೆನು ಸಾರಂವಸಾರಾ |
ಚಿತ್ತಗೊಟ್ಟ ಕೇಳರಿ ಸಣ್ಣದೊಡ್ಡವರಾ ||

ಚೌಕ -೧

||ನುಡಿ||

ದುಂದುಮಿರಾಜನ ನಗರದಾಟಿ ಸಾಗಿ ನಡದಾರ ವೃಷಕೇತು ಬಬ್ರುವಾಹನ
ಮುಂದಮುಂದಾ |
ಮನ್ಮಥ ಅನಿರುದ್ಧ ರಥ ನಡಸಿದ್ದಾ |
ಕೃಷ್ಣ ಸಾರಥಿ ಮಾರುತಿ ಧ್ವಜಸ್ಥಲದಲ್ಲಿದ್ದಾ ||
ತಾಮ್ರಧ್ವಜಾ ಮಯೂರಧ್ವಜಾ ಹಂಸಧ್ವಜಾ ಇರುವರು ಮನುಹೊಂಟಾ ನಗತಿದ್ದಾ |
ಗಿರಿರಾಜನ ಗೆದ್ದೀವಂತ ಹರುಷದಿಂದಾ||೧||

ಜಾಲಂದ್ರಪುರಕ ಹೋತ ಕುದರಿ ಹಿಡದಾರ ಚಂದ್ರಚೂಡಾಮಣಿ ಹಂತೀಕ
ದೂತರ ಬಂದಾ |
ವೃಷಕೇತು ಬಬ್ರುವಾಹನ ಇದ್ರ ಕುದರಿ ಹಿಂದ |
ಅವರಿವರಿಗಿ ಹತ್ತಿತ ಜಗಳದ ಸಂದಾ ||
ದೂತರೆಲ್ಲಾರು ಕೂಡಿ ವೃಷಕೇತು ಬಬ್ರುವಾಹನರನ್ನ ಹಾಕಿದಾರ ಬಡಬಡದಾ |
ಅವರಿಬ್ರು ಬಿದ್ದಾರ ನೆಲ ಹಿಡದಾ||೨||

ದ್ವಾರಪಾಲಕರು ತಗೊಂಡ ಹೋಗಿ ಆ ಕುದರಿ ನಿಲ್ಲಸ್ಯಾರ ಅರಸನ ಮುಂದಾ |
ಪಾಂಡವರ ಅರ್ಜುನ ಅಲ್ಲಿಗಿ ಬಂದ |
ಕೇಳಿ ಚಂದ್ರಚೂಡಾಮಣಿ ಏನಂದಾ |
ಮೈಮ್ಯಾಲಿನ ರೋಮನಿಗರಿ ನಿಂತಾವ ತನ್ನ ದಂಡಿಗಿ ಹೇಳತಾವ ಜಲದಿದಿಂದಾ |
ತಯಾರಾಗಲಿ ಕರ್ಬಲ ಸರ್ವಸಾಹಿತ್ಯದಿಂದಾ||೩||

ರಣವಾದ್ಯ ಹೊಡಿಸಿದ ಕರ್ಣಿಕಾಳಿಗಳ ಹಿಡಿಸಿದ ಡಂಕೆ ನುಡಿಸಿದ ಅರಭಾಟದಿಂದ |
ಮೂರುಲೋಕಕ್ಕ ಸಾರಿತ ಸ್ತುತಿ ರಾಜಂದಾ |
ಇದ್ನ ಕೇಳಿ ದೇವಿಂದ್ರ ಕುಂತ ದಿಂಗವರದಾ ||
ಎದ್ದನಿಂತ್ರ ಚಂದ್ರಚೂಡಾಮಣಿ ಸೂರ್ಯ ಹೊಂಕಳಕ ಬರುವನೊ ನಿತ್ಯ ಪೃಥ್ವಿದಿಂದಾ |
ಆವಗಿವಗ ಆಗೂದ ಯುದ್ಧ ಗರ್ದಿದಿಂದಾ||೪||

||ಚಾಲ||

ಸರ್ವಸೈನ್ಯ ತಗೊಂಡ ರಥ ಏರಿ ಕುಂತ ಅರಬಟಸಿ ನಡದಾರ ಆ ಕ್ಷಣಾ |
ನೋಡುವೆನು ಹೆಂತಾಂವ ಅರ್ಜುನಾ||೧||

ಮಹಾರಥಿಕರೆಲ್ಲಾರು ಕೂಡಿ ಏಕಾಗಿ ನಡದಾರ ಮುಂದಸಾಗಿ ಹಿಡದಾರ
ಗುರುಬಾಣಾ |
ಏರಿ ಹೊಡದಿ ಕಡದಿ ಕೆಡವಿದಾರ ಹೆಣಾ||೨||

ಕಾಲ ಬಲಕ್ಕ ಹತ್ತ ಸೆರಿಸೂರಿ ಬಿದ್ದ ಕಬರ‍್ಹಾರಿಬಿಡತಾವೊ ಪ್ರಾಣಾ |
ಮಹಾರಥಿಕರದೆಲ್ಲಾ ಆದಿತ ಮರುಣಾ||೩||

ದುಯರಿ||ಎಷ್ಟದಂಡ ಸತ್ತಿತ ಗಣಿತಾ |
ಭೂಮಿ ತುಂಬಿ ಹರಿತ ರಗತಾ||೧||

ಚಂದ್ರಚೂಡಾಮಣಿ ರಥ ಧುಮಕುತಾ |
ಬಂತ ಇದರಿಗಿ ಸನೀಕ ಸಾರಿಕೊಂತಾ||೨||

ಅರ್ಜುನಗಂತಾನ ಎಂದ ಮಾಡಿದ್ದ್ಯೊ ಶರತಾ |
ನನ್ನ ಕೈಯಾಗ ಸಾಯಾಕ ಬಂದಿ ವ್ಯರ್ಥಾ||೩||

||ಕೂ.ಪ. ||

ಕೃಷ್ಣನ ಬಡಿವ್ಯಾರದಿಂದ ಬಂದದಿ ಇಲ್ಲಿಗಿ ಖರೆ ಕೊಂದ ಹಾಕುವಷ್ಟ ನನ್ನಲ್ಲಿ ಧೀರಾ |
ಆ ತುಡಗ ಕೃಷ್ಣ ಯಾವ ದೊಡ್ಡ ರಣಶೂರಾ |
ಜರಾಸಂಧಗಂಜಿ ನಡಗುವ ಥರಥರಾ | ಕಪಟದಿಂದ ||

ಚೌಕ – ೨

||ನುಡಿ||

ದುಂದುಮಿರಾಜನ ಕಪಟತನದಿದ ಹೊಡದ ಕೃಷ್ಣ ಕೀರ್ತಿ ಬೆಳಸಿ ಬಂದಿ ರಣಶೂರಂತಾ |

ನಿನ್ನ ಲಢಾಯಿ ಗೋಪ್ಯಾರ ಒಳಗ ಬಾಳಸಿಸ್ತಾ |
ದನ ಕಾಯಕೊಂತ ಇರಾಂವ ಮರಡಿ ತಿರಗುತಾ ||
ಇಸವಾಸಗಾತಕದಿಂದ ಕಪಟ ಮಾಡೇದಿ ನೀ ಕಡಿಮ್ಯಾಂವ ಅದಿಯ ಹೆಂಗಸರಕಿಂತಾ |
ಸುಳ್ಳಲ್ಲ ಮಾತ ಇದ ಖಚಿತಾ||೧||

ಸಿಟ್ಟಿಗಿ ಏರಿದ ಆ ಮನ್ಮಥ ಅಂತಾನ ಹೆಂತಾಮಾತನಾಡೇದಿಯೊ ನಮ್ಮ
ತಂದಿಗಿ ನಿಂತಾ |
ನಿನ್ನ ಪ್ರಾಣತಗೊಳ್ಳುವಷ್ಟು ಸಮರ್ಥಾ |
ಏನ ಆಡಾಣಾ ಆಡೇದಿ ಕಡಿಮ್ಯಾಂವ ಅಂತಾ ||
ಇಷ್ಟಕೇಳಿ ಚೂಡಾಮಣಿ ಅಂತಾನ ಎಲ್ಲಾರೊಳಗ ಬಾಳಹೇಡಿ ಅದಿ ನೀನು ಮನ್ಮಥಾ |
ಬಾಳ ಬಡೇಜವ ಇಳಸ್ತಿ ಏನಂತಾ||೨||

ಹೆಂಗಸರ ಒಳಗ ನಿನ್ನ ಚಲ್ಲಾಟ ಕಾಮನಾಟ ಮಲ್ಲಿಗೂವಿನ ಹಾಸಿಗ್ಯಾಗ ಮಲಗೂತಾ |
ನೀನು ವಿಲಾಸದಿಂದ ಇರಬೇಕ ಸ್ವಸ್ತಾ |
ನನ್ನ ಕೈಯಾಗ ಸಾಯಾಕ ಬಂದಿ ಅನರ್ಥ ||
ದುಂದುಮಿರಾಜನ ಗೂಡ ಯುದ್ಧ ಮಾಡಿ ಓಡತಿದ್ದ ಅಂವ ಅಲ್ಲ ಮ್ಯಾಲಿನ
ಹಣಮಂತಾ |
ಇಲ್ಲಿ ಲಂಕಾಯಿಲ್ಲ ಬಂದಿ ಹಾರಿ ಜಿಗದಿನಂತ||೨||

ಎದ್ದಾನ ಅನಿರುದ್ಧ ಅಜ್ಜ ಕೃಷ್ಣಗ ಅಂತಾನ ಅಪ್ಪಣಿ ಕೊಟ್ಟರೆ ನೋಡಾಕೊ
ಒಂದ ಗಳಿಗೊತ್ತಾ |
ಬಾಳ ದಿಕ್ಕರಿಸಿ ಮಾತಾಡತಾನ ಬೇಕಂತಾ |
ಇಂವ ಯಾವ ದೊಡ್ಡ ರಣಶೂರಂತಾ ||
ಖರೆ ಮನ್ಮಥನ ಇರಸೇದಂವ ಇದ್ರ ಕಡದ ಹಾಕೀನ ಬಿಡಲಾಕಿಲ್ಲ ಈಗ ತುರತಾ |
ಎಲೊ ಕೇಳೊ ಅಸುರ ನೀ ನನ್ನ ಮಾತಾ||೪||

||ಚಾಲ||

ಬಂದ ಮಯೂರ ಧ್ವಜಾ ಅಂತಾನ ಸ್ವಾಮಿ ಕೃಷ್ಣ ಅಪಣಿಕೊಡ್ರಿ ಇನ್ನ್ಯಾಕ |
ಹೊಡ್ದ ಕಡ್ದ ಕೆಡೂತೀನ ನೆಲಕ||೧||

ಹೊಡಿ ಹೊಡಿ ಅಂತಾನ ತಡಾಮಾಡಬ್ಯಾಡ ಜಲ್ದಿ ತಡಾಮಾಡೂದ ಇನ್ನ ಯಾತಕ |
ಕಿಂವಿ ನಿಗರ‍್ಯಾವ ಅರ್ಜುನನುವ ಆ ಕ್ಷಣಕ||೨||

ಹಿಡದ ಪಾರ್ಥ ಕೋದಂಡ ಹೆದಿಗೇರಿಸಿ ಕಿಂವಿಯ ಝೇಂಕರಿಸಿ ಬಿಟ್ಟಾರ
ಮೂರು ಲೋಕ |
ತಳಮಳಿಸಿತ ಅಷ್ಟ ಅರಭಟಕ||೩||

||ದುಯರಿ||

ಬಾಣ ಹೊಡದ ಪಾರ್ಥ ಜಲದಾ |
ಚಂದ್ರ ಚೂಡಾಮಣಿ ಕಡದ ಕೆಡವಿದಾ||೧||

ಮನ್ಮಥ ಮಯೂರ ಧ್ವಜ ಅನಿರುದ್ಧ ಅವಸರದಿಂದಾ |
ಶರಹೂಡಿ ಹೊಡದಾರ ಕೋಪದಿಂದಾ||೨||

ಬಾಣ ಹೊಡದಾರ ಭೂಮಿ ತುಂಬಿ ನಡದಿತ ಹಿಡಸದಾ |
ಹೇಳಲಾರೆ ನಿಂತ ಕಾಳಗದಾ||೩||

||ಕೂ.ಪ. ||

ಕತ್ತಲ ಬಿದ್ದಾಂಗಾತ ರಣಗಾಳಿ ಬಾಣಗಳಿಂದ ಕೂಡಿ ಮುತ್ತಿಗಿ ಹಾಕಿದಾರ ಯಲ್ಲಾರಾ ||
ಪೃಥ್ವಿ ಆಕಾಶಕ ಆದಿತ ಬಾಣ ಒಂದ ಬಾರಾ |
ಇಷ್ಟಾದ್ರ ಮಾಡಲಿಲ್ಲ ದರಕಾರಾ || ಕಪಟದಿದ ||

ಚೌಕ – ೩

||ನುಡಿ||

ಬರೂ ಬಾಣಾ ನೋಡಿ ಚಂದ್ರ ಚೂಡಾಮಣಿ ಗರ್ಜನಿಹೊಡದ
ಅರ್ಭಾಟದಿಂದ ಶೌರ್ಯದಿ ನಿಂತಾ |
ನೆಲಕ ಆಕಾಶಕ ಬಾಯ ತೆರಕೊಂತಾ |
ಉರಿಕಾರಿಕೊಂತಾನ ಏನಮಾಡಲೆಂತಾ ||
ಬಂದ ಬಂದ ಬಾಣಗಳನೆಲ್ಲಾನುಂಗಿ ನುಂಗಿಬಿಡತಾನ ಎಷ್ಟ ಬಾಣ
ಹೊಡಿತೀರಿ ನೀವು ಹೊಡಿರೆಂತಾ |
ಹಿಂದಿಗಡೆ ನನ್ನ ಕೈಯ ನೀವು ನೋಡೀರೆಂತ||೧||

ಇಷ್ಟ ಆಗೂದ್ರೊಳಗೆ ಹೋಗಿ ನಾರದ ಹೇಳಿದ ಎಲೊ ಸೂರ್ಯ ನೀ
ಒಬ್ಬ ಹೋಗ ಹೊಂಟ ತುರತಾ |
ಸೂರ್ಯ ಅಂದ್ರ ಎಲ್ಲಾರೊಳಗ ಶಮರಂತಾ |
ನಿಂದ್ರ ಬೇಕಂತ ನಿಂತೀನೊ ಮೋಜ ನೋಡಿಕೊಂತಾ ||
ಮಮ್ಮಗ ಆಗಬೇಕ ನಿನಗ ವೃಷಕೇತು ಬಬ್ರುವಾಹನ ಲಢಾಯಿ ಮಾಡಿ
ರಣದಾಗ ಸತ್ತಾ |
ಇದರ ಇರ್ಸೆ ಇಲ್ಲೇನಂತ ಕೇಳುತಾ||೨||

ಎಲ್ಲಾರೂ ಕೂಡಿ ಹೋಗಿ ಚಂದ್ರಚೂಡನ್ನ ಹೊಡೀರಿ ಸೂರ್ಯ ಓಡಿ
ಬಂದ ಕೇಳಿ ನಾರದನ ಮಾತಾ |
ಅಂವ ಬರೂದ ಕಂಡ ಚಂದ್ರ ಚೂಡಾಮಣಿ ನಿಂತಾ |
ಹಿಡ್ದ ಬಾಣ ಹೊಡ್ದ ಬಂತ ಭೋರ್ಗರೆಯುತಾ ||
ಮಯೂರಧ್ವಜಾ ಮನ್ಮಥ ಅನಿರುದ್ಧ ಕೃಷ್ಣಪಾರ್ಥ ವೀರ  ಹಣಮಂತಾ |
ಇವರು ಆರೂ ಮಂದಿ ಎಲ್ಲಾ ಬಿದ್ದಾರ ರಹಿತಾ||೩||

ಹಿಂದಕ ತಿರತಿರಗಿ ನೋಡಿ ಮುಂದಕ ಓಡತಾನ ಸೂರ್ಯ ನಾನೂ ಒಬ್ಬ
ಹಕನಕ ಸತ್ತೀನಂತಾ |
ಹೋದ ಚಂದ್ರಚೂಡಾಮಣಿ ಜೈವಾದ್ಯ ಹೊಡಕೊಂತಾ |
ಇಲ್ಲಿ ಕೃಷ್ಣ ಎಲ್ಲಾರ್ನ ಎಬ್ಬಿಸ್ಯಾನ ಸಹಿತಾ ||
ಪಾರ್ಥ ಅಂತಾನ ನನ್ನ ಕಡಿಂದ ಮರ‍್ಯೋ ಇಂವನ ಸರಿ ಲಢಾಯಿ ಮಾಡದಾಗದಂತಾ |
ಬ್ಯಾಡ ಬ್ಯಾಡ ತಿರಿಗಿ ಹೋಗೂನು ನಡಿರೆಂತಾ||೪||

||ಚಾಲ||

ಅರ್ಜುನಗ ಕೃಷ್ಣ ಅಂತಾನು ಕಪಟದಿಂದ ಬರುವೇನು ಅವನ ಹೊಡದಾ |
ಅಲ್ಲಿ ಬ್ರಾಹ್ಮಣನಾಗಿ ಹೋಗಿದ್ದಾ||೧||

ನೀ ಕೇಳೋ ರಾಜಾ ನಾ ದಾನಾ ಬೇಡತೀನ ಬಡತನ ಆಶೆಯಿಂದ |
ದಾನಾ ಮಾಡೊ ನೀನು ಭಕ್ತಿದಿಂದಾ||೨||

ದಾನಾ ನೀಡಲಾಕ ಚೂಡಾಮಣಿ ಬಂದ ಅವಸರದಿಂದ ಕೃಷ್ಣ ಏನಂದಾ |
ಸ್ನಾನ ಮಾಡಿ ನೀಡ ಮಡಿದಿಂದಾ||೩||

||ದುಯರಿ||

ನೀರ ಕಾಯಲಾಕ ಇಟ್ಟ ಆ ಕ್ಷಣಾ |
ಅಲ್ಲಿ ಕಪಟಮಾಡಿ ಆ ಬ್ರಾಹ್ಮಣಾ||೧||

ನೀರಿನಾಗ ಬಿಟ್ಟ ಸುದರ್ಶನಾ |
ಕುಂತ ಜಳಕಕೆ ಒದಗಿ ಬಂತ ಮರಣಾ||೨||

ನೀರ ಹಣಸಿಕೊಂಡ ಕತ್ತಿರಿಸಿ ಬಿತ್ತ ರುಂಡ ಬಿಟ್ಟ ಪ್ರಾಣ |
ವಿಜಯಾದ ಪಾಂಡವರ ಅರ್ಜುನಾ||೩||

||ಕೂ.ಪ.||

ಕುದರಿ ಬಿಟ್ಟಾರ ಸೂರ್ಯಮಂಡಲಕ ಹೋದೀತ ನಮ್ಮ ವಸ್ತಾದ
ಚಿನ್ನಪ್ಪ ಜ್ಞಾನದ ಬುದ್ಧಿ ಸಮುದ್ದರಾ |
ಕಲ್ತ ಹಾಡೂದಿಲ್ಲ ಸ್ಥಲಾ ಗೋಕಾಂವಿ ಶಹರಾ |
ಮಾಧು ಹೂವಣ್ಣ ಮಾಡಿದ ಸಣ್ಣ ಪಾರಾ || ಕಪಟದಿಂದ ||

ರಚನೆ : ಮಾಧು ಹೂವಣ್ಣ
ಕೃತಿ : ಚಾಪ ಹಾಕತೀವಿ ದಪ್ಪಿನ ಮ್ಯಾಲ