||ಪಲ್ಲ||

ಮೊದಲ ದ್ವಾಪಾರಕ-ಕೃಷ್ಣ ಹುಟ್ಟತಾನಾ-ಎಂಟನೆ ಅವತಾರಕ |
ಬಂದಿನ್ಯಾಗ ವಸುದೇವ ದೇವಕಿ ಮಾಡತಿದ್ದಾರ ದುಃಖ ||

ಚೌಕ -೧

||ನುಡಿ||

ಕಂಸಾಸುರ ಗೋಕುಲದ ಒಳಗ ಮಹಾ ಪುಂಡ ಪಳಿಂಕಾರಾ |
ದಂಡ ದಣಿ ದೌಲತ್ತ ಆತಗ ಯಾರ‍್ಯಾರ ಇಲ್ಲ ಇದರಾ||೧||

ತಂಗಿ ಹೊಟ್ಟಿಲೆ ವೈರಿ ಹುಟ್ಟಿ ವಧಾ ಮಾಡತಾನ ತಾರಾ |
ಹಿಂತಾ ಭವಿಷ್ಯಗಳ ಮುಂದ ಕಂಸಗ ಹೊಯ್ಕ ತಿಳಿತ ಪೂರಾ||೨||

ಮೂರ ತಿಂಗಳ ಗರ್ಭ ಹೊಟ್ಯಾಗ ಕೃಷ್ಣ ಮೂಡತಿದ್ದ ಜಾರಾ |
ಕರುವತಾನ ತಂಗಿ ಹೊಟ್ಟಿ ಸೀಳಲಾಕ ನಿಂತ ಕಂಸಾಸುರಾ||೩||

||ಚಾಲ||

ಬಳಲತಾಳ ದೇವಕಿ ಆವಾಗ-ಅಯ್ಯಯ್ಯೋ ಭೋಗ ||
ದಿಕ್ಕ ಇಲ್ಲ ಎನಗ ಕೊಲ್ಲಬ್ಯಾಡೊ ಈಗ||೧||

ಗುರುಗಳು ಹೇಳ್ಯಾರ ಕಂಸಗ-ಹೆಣ್ಣ ಮಗಳ ನಿನಗ |
ಕೊಂದ ಪಾಪ ನಿನ್ನ ಪದರಾಗ ಕಟ್ಟಿತೊ ಈಗ||೨||

ನವಮಾಸ ತುಂಬಲಿ ಹೊಟ್ಯಾಗ-ಮುಂದ ಹಡದ ಮ್ಯಾಗ |
ಕೂಸ ತಂದ ಕೊಡತಾರ ಕೈಯಾಗ ಕೊಲ್ಲ ಬೇಕಾದಾಗ||೩||

||ದುಯೇರಿ||

ಬಾಳ ಬಂದಿನ್ಯಾಗ ಇಟ್ಟಾರ ನೆಲಮನ್ಯಾಗ |
ಹಕ್ಕಿ ಸಿಕ್ಕಾಂಗ ಆಯ್ತ ಬಲಿಯಾಗ ||

||ಕೂ.ಪ.||

ಹಗಲಿ ಇರುಳ ಹಿಂಗ ಹಲಬತಾಳ ಬಿಡಸವರ ಇಲ್ಲರಿ ದಿಕ್ಕಾ || ಬಂದಿನ್ಯಾಗ ||

ಚೌಕ – ೨

ನುಡಿ||

ದಿನಕ ಒಂದ ತರ ಆಗತಾಗತ ಗರ್ಭದಲ್ಲಿ ಬೆಳದಾ |
ನವಮಾಸ ಎಂಬುದು ತುಂಬುತ ಬಂತು ಕಠಿಣ ಹೊತ್ತಗಳದಾ||೧||

ಕಪಟದಿಂದ ಕೊರವ್ಯಾದ ಕೃಷ್ಣ ತಾ ಬಂದಿ ಮನಿಗೆ ಹೋದಾ |
ತೆಲಿ ಕಟ್ಟಿ ಅಡ್ಡ ಸೆರಗ ಬುಟ್ಟಿ ಕಯ್ಯಾಗ ಬಾರಿಗಿ ಹಿಡದಾ||೨||

ವಾಸುದೇವ ಕೇಳತಾನ ಕೊರವಿ ನೀ ಬಂದದಿ ಎಲ್ಲಿಂದಾ |
ಹೇಳತಾಳ ಅವರಿಗೆ ಬಂದಿದೀನಿ ನಾ ಸತ್ಯ ಲೋಕದಿಂದಾ||೩||

ನೋಟ ಹೇಳತಾನ ಕೃಷ್ಣ ತಾಯಿ ನಡುವಿನ ಬೆರಳ ಹಿಡದಾ |
ಕೇಳತಾಳ ದೇವಕಿ ದುಃಖ ಕಣ್ಣಿಗೆ ನೀರ ತಂದಾ||೪||

||ಚಾಲ||ಹಿಂಡ ದೈತ್ಯರ ಗಂಡ ವಜ್ಜರಾ – ಹುಟ್ಟತಾನ ಧೀರಾ |
ನಿನ್ನ ಪುತ್ತರಾ ನಿನಗ ಯಾಕೆ ಘೋರಾ||೧||

ಚತುರ್ಭುಜಾ ವಿಷ್ಣುನ ಅವತಾರ-ಶಂಖ ಪದ್ಮ ಚಕ್ರಾ |
ಬೋದವಾದ ಕುದರಿ ಸಂಹಾರಾ ಕಲಂಕಿ ದೂರಾ||೨||

ಮಾಂವ ಕಂಸನ ಹೊಡುದು ಕರಾರಾ – ತಿಳಿಯ ಮನಕ ಪೂರಾ |
ರಾಮರಾಮ ರಾಮನವತಾರಾ ಪುರುಷನವತಾರಾ||೩||

||ದುಯೇರಿ||

ಹಿಂಗ ಕೇಳುತ ಕುಂತಾಳ ಹರುಷದಿಂದ |
ಹಿಂಗ ಹೇಳುತ ಮನಿಯೊಳಗ ಮಾಯನಾದ ||

||ಕೂ.ಪ.||

ಕನಸ ಬಿದ್ದ ಕಣ್ಮುಚ್ಚಿ ತೆರುದರಾಗ ತೋರಿಸಿಹೋದ ಹೊಯ್ಕ || ಬಂದಿನ್ಯಾಗ |

ಚೌಕ – ೩

||ನುಡಿ||

ಬಂದಿಕಾನಿ ಮನಿಸುತ್ತ ಕಾವಲಾ – ಸುರಳಿ ಹಾಕಿತ ಸರ್ಪಾ |
ನೆಲದ ಮ್ಯಾಲ ಹರದಾಡಿ ಬಂದರ-ನುಂಗಿ ಬಿಡುದು ಸಾಪಾ||೧||

ಹಿರದ ಕತ್ತಿಗಳು ನೆವರಿ ನಿಂತಾವು-ಸುತ್ತ ಏಳು ತರ್ಪಾ |
ಬಾರಾ ತುಬಾಕಿ ಕಂದಕ ದೂರದಾಗ-ತುಂಬಿ ಇಟ್ಟಾವ ತೋಪ||೨||

ಏಳು ದರ್ವಾಜಾ ಹೋಗೂವಂಗ ಇಲ್ಲ-ಬಂದ ಕೋಲಿ ಕುಲುಪಾ |
ಇದರ ಒಳಗ ಇನ್ನ ಹ್ಯಾಂಗ ಹೋಗಬೇಕೆ-ಸ್ವಾಮಿ ನಿಮ್ಮ ಕಲ್ಪಾ||೩||

||ಚಾಲ||

ಶ್ರಾವಣದ ಬಂದಿತ ತಿಂಗಳ-ಅಷ್ಟಮಿಯ ಕಾಳ |
ಆರತಾಸ ರಾತ್ರಿ ಹುಟ್ಟಿದಾನ ನಿವಳಾ||೧||

ಮನಿಯೊಳಗ ಬಿದ್ದಾಂಗ ಬೆಳಕ-ರತ್ನದ ಹರಳ |
ಮೂಗ ಮಾರಿ ಕಪ್ಪಗೊರಳ ತಾರಿಪ ಬಹಳ||೨||

ವಾಸುದೇವ ದೇವಕಿ ಜೀವಾಳ-ನೋಡಿ ಕೃಷ್ಣ ಬರಳ |
ದೇವಕಿ ಅಳತಾಳ ಗಳಗಳಾ ಹ್ಯಾಂಗ ಕೊಡವುನ ಬಾಳಾ||೩||

ದುಯೇರಿ ||ತನ್ನ ಎದಿಗೆ ಅಮಚಿಕೊಂಡ ವಾಸುದೇವ |
ಬಂದಿಕೀಲಿ ತೆರದಾವ ಕಾದಶಿವಾ ||

||ಕೂ.ಪ.||

ಇಂತಾ ಪಾರೇದಾಗ-ಹೊರಗ ಬರುದರಾಗ-ಉಳದತಿ ಕಣ್ಣನಸಕಾ || ಬಂದಿನ್ಯಾಗ

ಚೌಕ – ೪

||ನುಡಿ||

ಯಮುನಾ ನದಿಯಾಗ-ನಡದ ವಾಸುದೇವ-ಹೆಂತಾದ ವನದೇಸಾ |
ಹೊಳಿಯ ತುಂಬಿ ಉಕ್ಕೇರಿತ ಮ್ಯಾಲಕ-ನೆಗುವಿ ಹಿಡಿದ ಕೂಸಾ ||
ಕೃಷ್ಣನ ಉಂಗಟ-ಮುಟ್ಟಿ ಭಾಗೀರಥಿ-ದರ್ಶನ ಉಪದೇಶಾ |
ಜರ್ರನ ಜರದಾಳು-ಜಾರಿ ಬಿದ್ದ ಮುಂದ-ಹಾದಿ ಆತ ಕಾಸಾ||೨||

ಮಧುರಾಪೂರದಾಗ-ಯಶೋದಾ ಹಡದಾಳ-ಹೆಣ್ಣ ಅದS ದಿವಸಾ |
ಬದಲ ಮಾಡಬೇಕಂತ-ತುಗೊಂಡರ ಎಲ್ಲಾರದೊಂದS ಮನಸಾ||೩||

ವಾಸುದೇವ ಹೆಣ್ಣ ಕೂಸ-ತಗೊಂಡ ಬಂದ ಕೀಲಿ ಅದಾವ ಸರಸಾ |
ಟ್ಯಾ ಅಂದಾಗ ಬಯಲವಾಣ್ಯಾಗ-ಒದರಿತ ಕೈಲಾಸಾ||೪||

||ಚಾಲ||

ಕಂಸಾಸುರ ಹಿಡದಾನ ಬಾಗಲ-ತರ್ಪಗಟ್ಟಿ ಸಾಲ |
ಕೂಸ ತಂದ ಕೊಡತಾರ ಕೈಯಾಗ ನೆಗವಿದಾನ ಮ್ಯಾಗ||೧||

ಕಯ್ಯಾಂದ ಸಿಡದಿತೊ ಸಿಡಲ-ಮಿಂಚಿತೊ ಮ್ಯಾಲ |
ನಿನ್ನ ವೈರಿ ಹುಟ್ಯಾನೊ ಗೋಪಾಲಾ ನಮಗ ಯಾಕ ಮೂಲಾ||೨||

ಹಿಂಗ ಹೇಳಿ ಹೋದಿತ ಸೌಚಾಲ-ಕಂಸಗ ಮೂಲ |
ಎಷ್ಟ ಚೌಕಿ ಪಾರಾ ಕಾವಲಾ ವ್ಯರ್ಥ ಆತ ಎಲ್ಲಾ||೩||

ದುಯೇರಿ||

ಜಾಗ ಮದರಖಂಡಿ ಮಾರುತಿ ಬಲಭೀಮ |
ಹುಸೇನಸಾಬ ವಸ್ತಾದ ಗುರುನಾಮ |

||ಕೂ.ಪ.||

ಹುಸೇನಸಾಬ ವಸ್ತಾದ ಅಣ್ಣಾರಾಮ ಕವಿಯಲ್ಲ ಪಕ್ಕಾ ||

ರಚನೆ : ಅಣ್ಣಾರಾಮ
ಕೃತಿ : ಚಾಪ ಹಾಕತೀವಿ ದಪ್ಪಿನ ಮ್ಯಾಲ