||ಪಲ್ಲ||

ಕೃಷ್ಣ ಗಯ ಮಾತ ಕೇಳರಿ ಸಾಕ್ಷಾತ ಸರ್ಪ ಒಂದ ಚಮತ್ಕಾರಾ |
ಮುಂದ ಲಢಾಯಿ ಆರಂಭ ಕೇವಳಾ ಸಂಬ ಮಾಡಿದಾನ ದಿಗಂಬರ

ಚೌಕ -೧

||ನುಡಿ||

ಸೋಳಾ ಸಾವಿರ ಗೋಪ್ಯಾರ ಕೃಷ್ಣಗ ದಯಾಳ ಗುಣಾ ಅವರೆಲ್ಲಾರ
ಯಜ್ಞ ಮಾಡಿರಿ ಮಹಾರಾಜ ಹೋಗೂನೂ ಸ್ನಾನಕ ಯಮುನಾ ತೀರದಲ್ಲಿ ||
ಮಾತಕೇಳಿ ಮಹಾರಾಜ ನಡದಾನೊ ಚಕ್ರತಗೊಂಡ ತಮ್ಮ ಹಸ್ತದ
ಭೂಮಿಮ್ಯಾಲ ಒಮ್ಮಿ ಹೊಡದ ನೋಡಿದ ಒಡದಂಗಾತ ಮಹಾಶೇಷನ ತೇಲಿ ||
ನದಿಯೊಳಗ ಜಲಕ್ರೀಡಾ ಆಡತಿದ್ದ ಸಂತೋಷವಾಗಿ ತಮ್ಮ ಮನಸಿನ
ಸೂರ್ಯ ಅಸ್ತಮಾನ ಸನಿಯ ಬಂದಿತು ಜಪಸಾದ್ನ ಜಪಸಿದರಲ್ಲಿ

||ಚಾಲ||

ಕುಬೇರನ ಪುತ್ರ ಗಯ ಅಂವ ಬಂದ |
ಅಂತ್ರ ಮಾರ್ಗದಿಂದ ಕುದರಿಯ ತಂದ||೧||

ಹಾಸಿದ ಅಬ್ಬರಲಿ ಬಾಯಾನ ನೊರಲಿ |
ಬಿದ್ದಿತ ಮ್ಯಾಲಿ ಕೃಷ್ಣನ ಕೈಯಲ್ಲಿ||೨||

||ಏರ||

ಹಲ್ಲ ತಿಂತಾನ ಕರಕರಾ | ಕುದರಿ ಹೊಂಟಿತ ಭರ ಭರರರಾ |
ಕಣ್ಣ ತಿರವಿದಾನ ಗರರರಾ ||
ಅವನ್ನ | ಜೀವನ್ನ | ನಾ ಇನ್ನ ||
ಹೊಡದ ಊಟಾ ಮಾಡಾಂವ ದ್ವಾದಶಿಗೆ | ಹಿಂಗ ಆಣಿ ಹಾಕೊ ತನ್ನ ಮನಸಿ
ಆ ಮಾತ ಹತ್ತಿತ ತನ್ನ ಕಾಶಿಗೆ ||

||ಕೂ.ಪ.||

ಸಿಗದಿದ್ದರ ನಾ ಜಿಗಿಯುದ ಅಗ್ನಿಕುಂಡದೊಳ ಕರಾರಾ || ಮುಂದ

ಚೌಕ – ೨

||ನುಡಿ|| ಗಯಾ ಅಂಬಾಂವಾ ಗಾಬರ‍್ಯಾಗಿ ಗಡಬಡಿಸಿ ಹೋದ ಮಾದೇವನ
ಮಾದೇವ ಅಂದ ನಮ್ಮಿಂದ ಆಗದ ಕೃಷ್ಣನ ಕ್ರೋಧ ಬೆಂಕಿಕಿಡಿ |
ದುಃಖ ಬಂದ ಅಡರಾಸಿ ಅಳುವಾಗ ಪಾರ್ವತಿ ಅಂತಾಳ ದಮ್ಮಹಿ
ಹಿಮಾಚಲದಲ್ಲಿ ಹೋಗ್ಯಾನ ನಾರದಾ ಹವಾ ತಿನ್ನಲಾಕ ಹಣಕುಡಿ
ಹೋಗಿ ಅವಗ ಗಂಟ ಬೀಳ ನಿನ್ನ ದೋಷ ದೂರ ಮಾಡ್ಯಾರ
ಕೈಕಾಲ ಕಟಿಕೊಂಡ ಬೀಳಹೋಗ ಅಡ್ಡ ಬಂದಂಥಾ ನುಡಿ ||೩||

||ಚಾಲ||

ಹೋಗಿ ಗಂಟ ಬಿದ್ದ ನಾರದಗ |
ಹಾಕಿ ಸಾಷ್ಟಾಂಗ ತಾನು ಅವಗ||೧||

ಕೊಡರಿ ಜೀವದಾನಾ ಒಂದು ವಚನಾ |
ನೀಂವ ಇನ್ನಾ ಮಾಧವನಾ||೨||

||ಏರ||

ಆಂತ್ರ ಮಾರ್ಗದಿಂದ ಸಳಳಳಾ | ಕುದರಿ ಹೊಂಟಿತೊ ಜಳಳಳಾ |
ಕುದರಿ ಜೊಲ್ಲ ಬಳಳಳಾ ||
ಅಟ್ಟಕ್ಕ | ತಟ್ಟಕ್ಕ | ಸಿಟ್ಟಕ್ಕ ||
ಕೃಷ್ಣ ಕುಂತಿದ್ದ ಸಂದ್ಯಾನಕ್ಕ | ಆ ಉಗಳ ಬಿದ್ದಿತ ಅವನ ಹಂತೀಕ |
ಕೃಷ್ಣ ನೋಡ್ಯಾನ ಬೇಶಕ್ಕ ||
||ಕೂ.ಪ.||ಬಿಸಿ ಹತ್ತಿ ದ್ವಾದಶಿ ದಿವಸ ನನ್ನ ಹೊಡಿತಾನ ಕರಾರಾ || ಮುಂದ ||

ಚೌಕ – ೩

||ನುಡಿ||

ನಗಿ ಮುಖದ ನಾರದ ಕುಸಿ ಹೇಳತಾನ ನಮ್ಮ ಕೈಲಿ ಬಗಿ ಹರುದಿಲ್ಲಾ |
ಕಾಮಿಕ ವನದಲ್ಲಿ ಅದಾನ ಧರ್ಮರಾಜಾ ದಾನಸೂರ ದಂಡ ಸಹಿತ
ಮಹಾಬಲಾ  ||೧||

ಅವರ ಸೇವಾ ಮಾಡುದಕ್ಕ ಅರ್ಜುನ ಪುಷ್ಪತರಾಕ ಹೋಗ್ಯಾನಕಮಲಾ |
ಗಂಟ ಬಿದ್ದ ಜೀವದಾನ ಬೇಡ ಅವನ ಹಸ್ತ ಇಡಿಸಿಕೊ ತೆಲಿಮ್ಯಾಲಾ ||
ಹುಡುಕಿದಾನ ಬಾಳ ಯತ್ನ ಮಾಡಿ ಪರಬ್ರಹ್ಮನ ಸರಿಮಾಡಿ ಹಿಡಿದ ಅವರ ಕಾಲಾ |
ಕೊಡ್ರಿ ನನಗ ಜೀವ ದಾನಾ ಹೇಳತೀನ ಬಾಳಮಾತ ಏನ ಜರೂರಿಲ್ಲಾ||೩||

||ಚಾಲ||

ಅರ್ಜುನ ಇಟ್ಟಾನ ಅಭಯ ಹಸ್ತಾ |
ಇರನೀ ಸ್ವಸ್ತ ಯಾವ ಗ್ರಹಸ್ಥಾ||೧||

ಅವರ ಹೆಸರ ಹೇಳ ಈ ಕ್ಷಣಕ |
ಮೆಟ್ಟಿ ತುಳಿಯತೀನ ಪಾತಾಳಕ||೨||

||ಏರ||

ಹದ್ದ ಹರಿದಾಂಗ ತಿರಿರಿ ರಿರೀ | ಬಿರಕಾಸಿ ಒಗದಿನ ಬಿರಿರಿ ರಿರಿ |
ಸೀಳಿ ಒಗಿಯತೀನ ಚಿರಿರಿರಿ ||
ಅಲಕ್ಕ | ಮಲಕ್ಕ | ತಲಕ್ಕ ||
ಇದ ಹೋಗಿ ಬಿದ್ದಾವ ಸಮುದರಕ್ಕ | ಗೊತ್ಕಿಲ್ಲೇನ ಇಲ್ಲಿ ಬರಲಾಕ |
ಹೊಡಿಯವರ ಹ್ಯಾಂತಾವರ ಹೇಳಾಕೊ ||

||ಕೂ.ಪ.||

ಕೃಷ್ಣ ಅಂತ ಅರ್ಜುನಗ ಹೇಳಿದಾನ ಇಳಿತ ಅವನ ಹಂಕಾರಾ || ಮುಂದ ||

ಚೌಕ – ೪

||ನುಡಿ||

ಬಂದ ದ್ವಾದಶಿ ಗಡುವ ಕೃಷ್ಣ ಗಯನ ಹುಡುಕಿದಾನ ದೇಶಾವರಿ |
ಸ್ವರ್ಗ ಮೃತ್ಯು, ಪಾತಾಳ ಹುಡಕಿದರ ಎಲ್ಲಿ ಹತ್ತವಲ್ದ ಗಯಾನ ಝರಿ||೧||

ಚಿಂತಿ ಪ್ರಾಪ್ತಿ ಆಗಿ ಕುಂತಾರೊ ಖಿನ್ನ ಆದಿತೊ ಮುಖಾ ಬಾಡಿಕ್ಯಾರಿ |
ನಾರದ ಬಂದಾನ ಕೃಷ್ಣನ ಮಂದಿರಕ್ಕ ಭೆಟ್ಟಿ ಆಗೂದಕ್ಕ ಸಹಜವಾರಿ||೨||

ಗೋಪಾಲಕೃಷ್ಣ ಏನ ಕಾರಣ ಕಡಿಮಿ ಆಗೇತಿ ನಿಮ್ಮ ಉಮೇದವಾರಿ |
ಮುನಿ ಮಹಾರಾಯನ ಮುಂದ ಹೇಳತಾನ ವ್ಯಾಳೆ ಘಡಾಸಿತ ಕೆಟ್ಟಕ್ಯಾರಿ||೩||

||ಚಾಲ||

ಗಯ ಮಾಡಿದ ಘಾತ |
ಕಾರಣದಿಂದ ಶಪಥ ದ್ವಾದಶಿ ಬಂತ||೧||

ಎಲ್ಲಿ ಸಿಗವಲ್ಲ ಅವನು |
ಕೂನ ಹೇಳಬೇಕ ನೀನು||೨||

||ಏರ||

ನಾರದ ನಗತಾನ ಅಲಲಲಾ | ಚುಂಗಾಣಿ ದಂಡ ಮಹಾ ಬಲಲಲಾ |
ಪಾಂಡವರ ನೆವರಿ ಬಂದ್ರ ಅಲಲಲಾ ||
ಒದರಿ | ಕೆದರಿ | ಚದರಿ ||
ಹಿಂಗ ತಾವು ಮಾಡಿಕ್ಯಾರ ಪರಿಪೂರ್ಣ | ಅಭಯ ಹಸ್ತ ಇಟ್ಟ ಅರ್ಜುನ
ಆ ಮಾತ ನನ್ನಿಂದ ಆಗದ ಕೇಳೋಣ ||
||ಕೂ.ಪ. ||ಬ್ಯಾಡ ಬ್ಯಾಡ ಕೊಡಾಕಿಲ್ಲ ಕೂತಲ್ಲೆ ಲಢಾಯಿ ಮಾಡಿ ಪಾಂಡವರಾ || ಮುಂದ

ಚೌಕ – ೫

||ನುಡಿ||

ಕೃಷ್ಣನ ತಂಗಿ ಸುಭದ್ರಾನ ಪುತ್ರ ಅಭಿಮನ್ಯು ಹುಡುಗ ಸಣ್ಣ ಬಾಲವಯಾ
ಗಂಡ ಅರ್ಜುನಗ ಸ್ಪಷ್ಟ ಹೇಳತಾಳ ಬಿಟ್ಟ ಬಿಡರಿ ಹೊಂಟೋಗಲಿಗಯಾ
ಪಂಚ ಪಾಂಡವರ ತಿಳದ್ರ ಮನಸಿಗೆ ಕೃಷ್ಣಗ ನಮಗ ಬಾಳ ಮಾಯಾ |
ಅನ್ನುಶಬ್ದ ಅಭಿಮನ್ಯು ಕೇಳಿ ಇವ ಮಾನಗೇಡಿ ಮಾತಾಡಿದ್ರ ಭಯಾ||೨||

ಭೀಮಸೇನ ಹಲ್ಲ ತಿಂದ ಅರ್ಜುನ ಬಂದ ನಿಂತಿದ್ದ ತಲವಾರ ಕಯ್ಯಾ |
ಓಡಿ ಹೋಗಿ ಸುಭದ್ರಾ ಅಣ್ಣ ಸೋಮಿತ್ರಗ್ಹೇಳತಾಳ ಆದನ್ಯಾಯ||೩||

||ಚಾಲ||

ಕೃಷ್ಣಂದ ತಡಾ ಇನ್ನಯಾಕ |
ದಂಡ ಕೈಲಾಕ ಕಾಮಿಕ ವನಕ||೧||

ಕೂಡಸ್ಯಾರ ಸುತ್ತ ಅವಚಿತ |
ಆ ಹೊತ್ತ ಕೂಡಿತ ಮತ್ತ||೨||

||ಏರ||

ಭೀಮ ಬಂದ ಗಡಗಡಡಡ | ಗದಾ ತಗೊಂಡ ಕಡ್‌ಕಡಡಡ |
ಬಡದ ಚಲ್ಲಿದ ಪಡಪಡಡಡ ||
ಇರದ | ಹಿರದ | ಒರದ ||
ತಂದ ಚಲ್ಲಿದ ಬಲಮಂದಿ ಆದಿತ ಜಕಮ | ಕೈಕಾಲ ಮುರದ ಆದುವ | ಆಕಲಮ |
ಕೃಷ್ಣಕೊಟ್ಟ ಬಳರಾಮಗ ಹುಕಮ ||

||ಕೂ.ಪ.||

ಬಳಿರಾಮ ಜಗ್ಗ್ಯಾನ ನೇಗಿಲ ಹಾಕಿ ಭೀಮ ಬಾದ್ದೂರಾ || ಮುಂದ ||

ಚೌಕ – ೬

||ನುಡಿ||

ಅರ್ಜುನ ಹೊಡದ ಕೃಷ್ಣಗ ಬಾಣ ಪರ್ವತ ಗುಡ್ಡ ಒಂದ ಝಂಕಾರಾ |
ಕೃಷ್ಣ ಹೊಡದ ಪಶುಪತಿ ಬಾಣ ಅರ್ಜುನ ಹೋಗಿ ಬಿದ್ದ ಸಮುದರಾ||೧||

ಅರ್ಜುನ ಹೊಡದ ಪಶುಪತಿ ಬಾಣ ಅರ್ಜುನ ದುಃಖ ಮಾಡಿಕ್ಯಾರಾ |
ಈ ವರ್ತಮಾನ ತಂಗಿ ಕೇಳಿದರ ಏನ ಹೇಳಬೇಕ ಸುಭದ್ರಾ||೨||

ಹುಶಾರಾಗಿ ಅರ್ಜುನ ಎದ್ದ ಬಂದ ಬಾಣ ಬಿಡತಾನ ಇಲ್ಲ ಸ್ಥಿರಾ |
ಕೃಷ್ಣ ಕಪಟಲಿ ಸುದರ್ಶನ ಚಕ್ರ ಹಾರಸ್ಯಾನ ಗಯನ ಶಿರಾ||೩||

||ಚಾಲ||

ಬಂದ ಕೆಲಸಾತ ಕೈವರ್ತ |
ಕೃಷ್ಣ ಸಮರ್ಥ ತಿರಿಗಿ ಆ ಮಾತ||೧||

ಹೇಳಿದ ಅರ್ಜುನಗ ನಮನಿಮಗ |
ಇದರಾಗ ಬ್ಯಾಡಿನ್ನ ಹೋಗ||೨||

||ಏರ||

ಕೈಲಾಸ ಬಾಗಿಲ ಕಣ ಕಣಣಣ | ಝೇಂಕಾರ ಆದಾವ ಝಣಝಣಣಾ |
ಇಳದ ಮಾದೇವ ಆ ಕ್ಷಣ ಣಣಣ ||
ಇಳದ | ತಿಳದ | ಹೇಳಿದ ||
ಅವರಿಗಿ ಏನ ಕಾರಣ ಕಡದಾಡೂದ | ಆ ಗಯನ ಶಿರಾ ಬಿಟ್ರ ಪಡದಾ |
ಅವರು ಹೊದ್ರ ಮುಕ್ತಿ ಮಾರ್ಗವ ಹಿಡದಾ ||

||ಕೂ.ಪ.||

ತುಕಾರಾಮ ರಘುನಾಥಂದ ಯಂಕ ಮಾಡಿದ ಹೊಸತರಾ || ಮುಂದ ||

ರಚನೆ : ತುಕರಾಮ ರಘುನಾಥ
ಕೃತಿ : ಚಾಪ ಹಾಕತೀವಿ ದಪ್ಪಿನ ಮ್ಯಾಲ