ಒಂದನೇ ಚೌಕ

ಶ್ರೀಗೋಪಿಕಾ ಸ್ತ್ರೀಯರು | ಅಷ್ಟನಾಯಕಿಣೆರು |
ಬಾಲಗರುಡರು ಹುಡುಕತಾರ ಕೃಷ್ಣನ |
ಸಾವಿತ್ರಿ ಸತ್ಯಭಾಮೆ ಕೂಡಿ ಹುಡಕತಾರ
ಗೋಕುಲಷ್ಟಮಿ ದಿನಾ ||

ಆದಿನಾರಾಯಣ ನರಹರಿ ಅನಿಸಿದ ಬ್ರಹ್ಮಚಾರಿ |
ಮುಕುಂದ ಮುರಹರಿ | ಗೋವಿಂದ ಗಿರಿಧಾರಿ
ವಾಮನ ಲಂಬೋದರಿ ವಸುದೇವ ದೇವಕಿನಂದನ |

ಯಶೋದಾ ಕೇಳತಾಳ ಕಂಡಿರೇನ | ಗೋಪಾಲ ಬಾಲಪಾಲನ ||
ಮಾಯಾರೂಪದವ ತ್ರಿಲೋಕ ಸಂಚಾರಿ | ಪೀತಾಂಬರಧಾರಿ |

ಸಿಗವೊಲ್ಲ ಶ್ರೀಹರಿ | ಎಲ್ಲಿ ಕುಂತ ಮರ ಏರಿ |
ಮಾಡತಾನ ಮಸ್ಕರಿ | ನೀಲ ವರ್ಣ ನಿರ್ಗುಣ ||
ಗೋಗ್ರಾಣದೊಳಗ ಇರುವಂಥ ಗೋವಿಂದ ಅನಿಸಿದ ಗೋವರ್ಧನ ||

||ಇಳುವು||

ಮತ್ಸ್ಯಕೂರ್ಮ ವರಹ ವಾಮನ ಬಳಿಗೆ ಪಾತಾಳ ಮೆಟ್ಟಿದ ಕೇಶವಾ |
ನರಸಿಂಹ ಪರಶುರಾಮ ರಾಮನಾಮ ಹೆಚ್ಚಿಂದು ನಿಂದು ಮಾಧವಾ |
ಪಾಂಡವರ ಪ್ರತಿಯ ಪಾಲ ಮಾಡಿದಂಥ ಶ್ರೀಕೃಷ್ಣ ದೇವ ಭಾರ್ಗವಾ |
ಛಪ್ಪನ್ನ ಕೋಟಿ ಯಾದವರ ಮನಿಯ ಕುಲದೀಪ ಸ್ವಾಮಿ ಆದಂವ ||

||ಏರು||

ಸ್ವಾಮೀ ಗುಣ ವರ್ಣಿಸುತ ಹೊಂಟಾಳ ರಾಧಾರಾಣಿ |
ಅವಡಿ ಅಂಬಿ ಪದ್ಮಿಣಿ | ಭೀಮಿರಾಮಿ ನಾಗಿಣಿ |
ಚೋಳಿ ಮಾಳಿ ಚಿಂಚಿಣಿ | ಭೈರಾವಳಿ ಶಂಕಿಣಿ |
ಮಧುರ ಮೈನಿ ಹಸ್ತಿನೀ |
ನಾಗಕನ್ಯೆ ದೇವಕನ್ಯೆ ನೋಡೂನ ನೀರಾಟ |
ಸ್ತ್ರೀಯರ ಚೆಲ್ಲಾಟ | ಕೃಷ್ಣ ತಂದ ಸಂಕಟ |
ಕಂಡೀರೇನ ಅವನ ಮುಕುಟ | ಕಿರೀಟ ಕುಂಡಲ ಕುಂದನ ||
ಯಮುನಾದ ಹೊಳಿಯ ದಂಡೀಲಿ ಬಂದು, ನೆರದಾರ ಅಷ್ಟಮಿ ದಿನ ||

೨ನೆಯ ಚೌಕ

ನಾರ‍್ಯಾರ ಹೆಜ್ಜಿ ಗತ್ತ ಕೈಕೈ ಹಿಡಿವುದು |
ಪುಗಡಿ ಹಾಕಿ ಆಡುದು | ಗಾಯನ ಮಾಡುದು | ರಾಗ ಛೆತ್ತಿಸಿ ರಾಗಿಣೀ |
ಬಾವನ್ನ ತಾಳ ಮ್ಯಾಲ ರಾಗ ಮಾಡತಾಳ | ಬನದ ಕೋಗಿಲ್ಹಾಂಗ ಧನಿ ||
ಸ್ತ್ರೀಯರ ಚೆಲುವಿಕಿ ಒಬ್ಬರಿಗಿಂತ ಒಬ್ಬರು ಸೇಲ |
ನಾಮೇಲ ನೀಮೇಲ | ಬೇತಾಲ ಗುಲ್ಲಾಲ |
ಓಕಳಿ ಮೈ ಯೆಲ್ಲ | ಹಚ್ಚಿದಂಗ ಹಿಲ್ಲಾಲ | ಮೂಡಲ ತರಂಗಿಣೀ ||
ಭಂಗಾರ ಬಳಿ ಚಂದ್ರದ ಹಾರ ಕೊರಳಾಗ ರತ್ನದ ಮಣಿ ||

||ಇಳುವು||

ತಬಲ ತಂಬೂರಿ ವೀಣಾ ತಗೊಂಡು ನಾಚ ಮಾಡತಾಳ ನಾಯ್ಕಣೀ |
ತಾಳ ಮದಲಿ ಗತ್ತಿನ ಒಳಗ ರಾಧಕಿ ಕುಣಿಯತಾಳ ಶಿರೋಮಣೀ |
ನಾರದ ನೋಡಿಕೇರಿ ನಾಚಿಮಾರಿ ತಿರುವ್ಯಾನ ಕುಟಿಲ ಗುಣಮಣೀ |
ಇಂದ್ರಸಭಾತಂದು ಇಳಿವ್ಯಾರ ಕನ್ನೆರು ನೋಡತಾಳ ರುಕ್ಮಿಣೀ ||

||ಏರು||

ಪುಗಡಿ ಆಟ ಏನು ಹೇಳಲಿ | ತಾಳ ಗತ್ತ ಮಾಡಿದಂಗ |
ನಗಾರಿ ನುಡಿದಾಂಗ | ದುಮ ದುಮಿ ಹೊಡಿದಂಗ |
ನೌಬತ್ತ ಬಡಿದಾಂಗ | ಚಿಟ್ಟ ಔಡ್ಲ ಸಿಡಿದಂಗ |
ಕೊಂಬ ಕಾಳಿ ಹಿಡಿದಾಂಗ | ಸಿಡ್ಲ ಮಿಂಚ ಕಡಿದಂಗ |
ಮಗ್ಗಿ ಪಾಟ್ಲಿ ಹೆಣಿದಂಗ | ತಿಪ್ಪರಲಾಗ ಒಗೆದಾಂಗ
ಸುದ್ಧ ನವಿಲು ಕುಣಿದಾಂಗ | ತಂಡ ತಂಡ ನೆರೆದಿತೊ ಜನ |
ಕುಣಿಕುಣಿದು ದಣಿದು ಬ್ಯಾಸತ್ತು ನಿಂತಿದಾರ ಗೋಕುಲಷ್ಟಮೀ ದಿನ ||

೩ನೆಯ ಚೌಕ

ನೀರಾಟ ಜಕಣ್ಯಾರು ನಿಂತಾರ ನಿಸ್ಸಂಗ |
ಪೀತಾಂಬರ ಇಲ್ಲದಂಗ ಕೃಷ್ಣ ಹೋದ ಕಳ್ಳನಂಗ |
ಮರದ ಮ್ಯಾಲ ಹಾಸಿದ ||
ಹಾಸಗೊಂಡು ಮ್ಯಾಗ ಹೊಚಗೊಂಡು ಮಾರಿ ಮುಚಗೊಂಡು ಕೃಷ್ಣ ಮಲಗಿದ ||
ರಂಬಿ ನಿಂಬಿ ಸೀತಿ ಗೀತಿ | ಹಾಲ ಮೊಸರ ಮಡಿಕೀ ಎತ್ತಿ |
ಹೋಗತಾರ ಮಥುರಾ ಸಂತಿ | ಅಡ್ಡ ಬಂದು ತರುಬಿದ |
ಅವನ ಮುಂದ ಹೇಳತಾರ ಸುದ್ದಿ ನಿನಗ ಬಲು ಹುಡುಕತಾಳ ಯಶೋದಾ ||

||ಇಳುವು||

ಈ ಸುದ್ದಿ ಬಲ್ಲೆನಾ ಪದ್ದಿ | ತಗೊಂಡು ಬೆಣ್ಣಿ ಮುದ್ದಿ | ಮಸರ ಚೆಲ್ಲಿದಾ |
ಉಟ್ಟ ಶಾಲಿ ಪೀತಾಂಬರ ಸೆಳೆದ | ಮರದ ಮ್ಯಾಗ ಎಳೆದ ಮೈಯ ಮುಟ್ಟಿದಾ |
ಗೌಳಗಿತ್ತಿ ಶಂಖ ಹೊಡೆದಾಳ | ಶೋಕ ಮಾಡ್ಯಾಳ | ಜಿಗಿದು ಹಾರಿದಾ ||
ವನದಾಗ ಬಿಂದ್ರ ಬನದಾಗ ಹೋಗಿ ಶ್ರೀಕೃಷ್ಣಸ್ವಾಮಿ ಅಡಗಿದಾ ||

||ಏರು||

ನಾರದ ನೋಡಿಕೇರಿ ಹೇಳ್ಯಾನ ಕಿಡಿಗೇಡಿ |
ಬಾಲ್ಯಾರ ಗಡಿಬಿಡಿ | ನಾ ಹಿಡಿ ನೀ ಹಿಡಿ |
ಏರತಾರ ಗ್ವಾಡಿ ಹೂಡಿ | ನಾಕು ಕಡಿ ಒದ್ದಾಡಿ
ಇಂದ್ರವನ ಶೋಧ ಮಾಡಿ | ಶೋಧ ಮಾಡಿ ಶೋಕ ಮಾಡಿ |
ಒಬ್ಬರಿಗೊಬ್ರು ಮಾತನಾಡಿ | ಬಟ್ಟ ಮುರಿದು ಸಿಟ್ಟು ಮಾಡಿ |
ಒಂದಿನಾರೆ ಸಿಕ್ಕಾನ್ನಡಿ | ನೆಲನುಂಗಿತೇನ ಕೃಷ್ಣನ |
ಕುಣಿಕುಣಿದು ದಣಿದು ಬ್ಯಾಸತ್ತು ನಿಂತಿದಾರ ಗೋಕುಲಷ್ಟಮೀ ದಿನ
ಗುರು ಹರದಾಸರ ಕವಿ ಸಂಗಣ್ಣನ ಲಾವಣಿ ಕೇಳರಿ ಜನ |
ಕುಣಿಕುಣಿದು ದಣಿದು ಬ್ಯಾಸತ್ತು ನಿಂತಿದಾರ ಗೋಕುಲಾಷ್ಟಮಿ ದಿನಾ

ರಚನೆ : ಕವಿ ಸಂಗಣ್ಣ
ಕೃತಿ : ಜೀವನ ಸಂಗೀತ