||ಪಲ್ಲ||

ಬಾಯಿ ಮಾಡಬ್ಯಾಡ ಬಡತಿ ಹೇಳಬ್ಯಾಡ ಓದಿ ನೋಡ ಭಾರತ ಕಥಿ |
ಶೋಧ ಮಾಡಿ ನೀವು ಭೇದ ತಿಳಕೋರಿ ಹೇಳತೀನ ಕೌರವರ ಉತ್ಪತ್ತಿ |

ಚೌಕ – ೧

||ದುಡಿ||

ಬಾಡ್ದಿ ಹಿಡಿದ ನಾ ಹಾಡ್ಡಿ ಹೇಳತೀನ ಯಾವ ಊರ ಯಾವ ಶಾರ ಪಟ್ಟಣಾ
ದಡ್ಡರಂಗ ಸುಳ್ಳ ಗುಡ್ಡ ಕೆದರಬ್ಯಾಡ ದೊಡ್ಡ ಪಂಡಿತಕಾಣ ಸ್ತ್ರೀ ನೀನಾ||೧||

ಬ್ರಹ್ಮಶಾಪದಿಂದ ಬಂದಾಳ ಗಂಗಿ ನರಲೋಕಕ ಇಳದ ತಾನಾ |
ನದಿ ದಂಡೀಲೆ ನಡುಗಡ್ಯಾಗ ಕುಂತ ತಪಾ ಮಾಡತಿದ್ದಳ ನಿತ್ಯ ದಿನಾ||೨||

ಹರುಷನಾಗಿ ಹಸ್ತಿನಾಪೂರದ ಅರಸಾ ಶಂತನು ಚಕ್ರವರ್ತಿ ತಾನಾ |
ಶೋಧ ಮಾಡಿ ಆಕಿ ಭೇದ ತಿಳಕೊಂಡ ಮನಿಗೆ ತಂದ ಅದಾನ ಲಗ್ನಾ||೩||

||ಚಾಲ||ಮುಂದ ಗರ್ಭನಿಂತ ಆಕಿಗೆ ತುಂಬ್ಯಾವ ನವಮಾಸಾ |
ಆಕಿ ಹಡದಾಳ ಗಂಡಕೂಸಾ | ಹಿಂಗ ಏಳಕೂಸ ಆದಾವ ಬಹುಕಾಸಾ ||
ಅಷ್ಟೂಕೂಸಿನ ಕೊಂದ ಮಾಡಿದಾಳ ಮೋಸಾ |
ಎಂಟನೆ ಕೂಸ ಕೊಲ್ಲುವಾಗ ಮಾತಾಡಿದಾನ ಅರಸಾ |
ಬಾಲ ಹತ್ಯಾ ನಿನಗ ಹತ್ತುದು ದೋಷಾ||೨||

||ಶ್ಲೋಕ ||

ಕೇಳರಿ ಕೇಳ ಶಾವೀರಾ |
ಇಷ್ಟ ಶಬ್ದಕೇಳಿ ಗಂಗಾದೇವಿ ಹರದ ಹೋದಾಳ ಆಗಿ ನೀರಾ |
ಇತ್ತ ಶಂತನುರಾಜ ಆ ಕೂಸಿನ ಮಾಡಿ ವಿಚಾರಾ |
ಭೀಷ್ಮಾಚಾರಿ ಎಂದು ಹೆಸರಿಟ್ಟ ಧನುವಿದ್ಯಾ ಶಾಸ್ತ್ರಗಳನ್ನು ಕಲಿಸಿ ಬಿಟ್ಟ ಭರಪೂರ

||ಕೂ.ಪ. ||

ತಂದಿ ಮಕ್ಕಳ ಮನ ಒಂದೇ ಆದೀತ ಚಂದದಿಂದ ಕೇಳರಿ ಮುಂದಿನ || ಶ್ಲೋಕ ||

ಚೌಕ – ೨

||ನುಡಿ||

ಸಹಜ ಹೊಂಟ ಆ ಶಂತನು ಅರಸ ಅಡವಿಯಲ್ಲಿ ಬ್ಯಾಟಿ ಆಡುದಕಾ |
ಅಡವಿ ಆರ‍್ಯಾಣಾ ಗಿಡ ಮಂಜಾಣಾ ವಾಸ ಬರತಿತ್ತ ಬಹುಸುವಾಸಿಕಾ
ವಾಸ ಹಿಡದ ಆ ಅರಸಾ ದಿಲಗೀರನಾಗಿ ಯಾವದಿದ್ದೀತ ಇದ ಹೆಂತಾಮಿ
ಶೋಧ ಮಾಡುತ ಅವ ಹೋದ ಹುಡುಕುತ ಸಮೀಪ ಇದ್ದ ಒಂದ ಪಟ್ಟಣಕಾ ||
ಇಲ್ಲಿ ಇದ್ದ ಬ್ರಾಹ್ಮಣರು ಬಲ್ಲಿರಿ ಎಲ್ಲಾರು ಯಾತರವಾಸ ಹೇಳರಿ ಸೊ
ಸುಳ್ಳ ಅಲ್ಲ ಇದು ಸುಗಂಧಿ ವಾಸಂತ ಎಲ್ಲಾ ಬ್ರಾಹ್ಮಣರು ಹೇಳ್ಯಾರ ಆಕ್ಷಣಕಾ||೩||

ಸನ್ನಿಧಿಯಲ್ಲಿ ಸುಗಂಧಿನ ಕರಸಿ ಲಗ್ನ ಆಗ ಅಂದ ತನಗ ಬೇಶಕ್ಕಾ |
ಪಟ್ಟದ ಅರಸಿನ ನಿನಗ ಮಾಡತೀನ ಸುಖದಿಂದ ಇರ ನನ್ನ ಹಂತೇಕ||೪|

||ಚಾಲ||

ಸುಗಂಧಿ ಹೇಳ್ಯಾಳ ಅರಸಗ | ಮುಂದ ಮಕ್ಕಳ ಆದರ ಹ್ಯಾಂಗ ||
ಪಟ್ಟಗಟ್ಟಬೇಕ ನನ್ನ ಮಗನೀಗ | ಹಿಂಗ ವಚನ ಕೊಡಬೇಕರಿ ನನಗ |
ಚಿಂತ್ಯಾದ ಅರಸ ಮನದಾಗ | ಅವ ಎದ್ದಹೋದ ಸುಮ್ಮ ಆಗ ||

||ಶ್ಲೋಕ||

ಕೇಳರಿ ಕೇಳ ಶಾವೀರಾ |
ಆ ಅರಸ ಚಿಂತ್ಯಾಗಿ ಕುಂತಿದ್ದಾ | ಇದನ್ನ ನೋಡಿ ಭೀಷ್ಮಾಚಾರಿ
ತಂದಿಯ ವೃತ್ತಾಂತವನ್ನು ಕೇಳಿದಾ | ಆವಾಗ ಆ ಅರಸ
ತನ್ನ ಚಿಂತಿ ಬಗಿ ಕೇಳಿದಾ | ಸುಗಂಧಿನಿ ಗುಡ ಆ ದಂತ
ಅರಸನ ವಾದಾ | ಇದನ್ನ ಕೇಳಿ ಭೀಷ್ಮಾಚಾರಿ ಸುಗಂಧಿನಿ
ಹತ್ತರ ಹೋದಾ | ಆಕಿ ಬೇಡಿದಂಥ ವಚನವನ್ನು ಕೊಟ್ಟ
ತನ್ನ ತಂದೆಯ ಲಗ್ನ ಮಾಡಿದಾ ||

||ಕೂ.ಪ.||

ಪರಮೇಶ್ವರನ ಕರುಣ ಛಾಯಾದಿಂದ ಆಕಿಗೆ ಆದಾವ ಎರಡ ಸಂತತಿ || ಶೋಧ ||

ಚೌಕ – ೩

||ನುಡಿ||

ಚಿತ್ರ ವೀರ‍್ಯ ವಿಚಿತ್ರ ವೀರ‍್ಯ ಅಂತ ಎರಡು ಕೂಸಿಗೆ ಇಟ್ಟ ನಾಮಕರಣಾ |
ಅವರ ಒಳಗ ಒಬ್ಬ ಮಗಾ ಬಿದ್ದ ಹೋದ ಯುದ್ಧದಲ್ಲಿ ಹೊಂದಿದ ಮರಣಾ||೧||

ಆಯುಷ್ಯ ಸರಿತಂತ ತಿಳದಿತ ಶಂತನು ಹೇಳಿದ ಭೀಷ್ಮಾಚಾರಿನ |
ಹಿಂದ ನಡದಂಗ ಮುಂದ ನಡಸರೆಂತ ವಚನ ತಗೊಂಡ ಬಿಟ್ಟಾನಪ್ರಾಣಾ ||
ಜನ ಅಯ್ತಿ ಅಂದ ತನ್ನ ತಮ್ಮಗ ಪಟ್ಟಗಟ್ಟಿಕೊಟ್ಟ ಸಿಂಹಾಸನಾ |
ತಾಯಿ ಮುಂದ ಕುಂತ ಆನಂದದಲ್ಲಿ ಶಾಸ್ತ್ರ ಪುರಾಣ ಹೇಳಾಂವ ನಿತ್ಯದಿನಾ ||
ಬಂದಿತ ಕಾಳಾ ಎಲ್ಲಾ ಮಾಡಿತ ಹಾಳಾ ವಿಚಿತ್ರನಲ್ಲಿ ದುರ್ಗುಣಾ |
ಅಪವಾದ ಇಟ್ಟ ಹೋದನೊ ಹೊಂಟ ಬೇಕಂತ ಹೊಂದಿದ ದುರಮರಣಾ||೪||

||ಚಾಲ||

ಸುಗಂಧಿ ಮಾಡತಾಳ ದುಃಖಾ | ಈ ಗಾದಿಗಿಲ್ಲರಿ ಯಾರು ದಿಕ್ಕಾ ||
ಭೀಷ್ಮ ವಚನದಲ್ಲಿ ಸಿಕ್ಕಾ | ಇನ್ನಾರ ಈ ಗಾದಿಗೆ ಮಾಲಕಾ ||
ಮತ್ತ ಮನಕ ಹಾಕಿದಾಳ ತರ್ಕಾ | ಗುರು ಸ್ತೋತ್ರ ಮಾಡ್ಯಾಳ ಆ ಕ್ಷಣಕಾ ||

||ಶ್ಲೋಕ ||

ಕೇಳರಿ ಕೇಳ ಶಾವಿರಾ |
ಸುಗಂಧಿಣಿ ಸೋತ್ರಕ ವೇದ ವ್ಯಾಸ ಬಂದರು | ಎಲ್ಲಾ ವೃತ್ತಾಂತವನ್ನ
ಕೇಳಿದರು | ಚಿತ್ರವೀರ‍್ಯ, ವಿಚಿತ್ರವೀರ‍್ಯರ ಹೆಂಡರನ್ನ ಕರಸಿದರು |
ಅವರಿಗೆ ಗುರು ಉಪದೇಶ ಮಾಡಿದರು | ಆವಾಗ ಒಬ್ಬಾಕಿ ಹೊಟ್ಟಿಲೆ
ಧೃತರಾಷ್ಟ್ರ ಎರಡನೆಯಾಕಿಗೆ ಪಂಡುರಾಜ ಹೀಗೆ ಇಬ್ಬರಿಗೆ ಮಕ್ಕಳಾ
ದರು | ಇವರಿಂದ ಕೌರವರು ಪಾಂಡವರು ಉತ್ಪತ್ತಿ ಬೆಳಿಸ್ಯಾರು ||

||ಕೂ.ಪ.||

ನರಸಿಂಗ ಬಾಪು ಹಿಂಗಹೇಳತಾರ ಭೇದಕೇಳರಿ ಬಾಡ್ದಿಯ ಕತಿ ||ಶೋಧ||

ರಚನೆ : ನರಸಿಂಗ ಬಾಪು
ಕೃತಿ : ಚಾಪ ಹಾಕತೀನಿ ದಪ್ಪಿನ ಮ್ಯಾಲ