||ಪಲ್ಲ||

ಅರಸಾ ಕೇಳ ನಿಮ್ಮ ಪೂರ್ವಜರೊಳು ಅದಂಥಾ ಕಪಟ ಕಾಳಗಾ ಕೃಷ್ಣ ಬೆಳಸಿದಾನು |
ಮಹಾಶ್ರೇಷ್ಠ ನರನ ಗರ್ವ ಇಳಸಿದಾನು |
ಜನಮೇಜಯಾ ಕೇಳ ಸೇಮಟೇದ ಯುದ್ಧವನು ||
ಮೂರು ಲೋಕದ ಗಂಡ ಅರ್ಜುನ ಭಂಡ ಆದ ಕಥಾ ಸಾರವನು |
ಪುಂಡ ವೃಷಕೇತುವಿನ ಪುರುಷಾರ್ಥವನು ||

ಚೌಕ – ೧

||ನುಡಿ||

ದಿಟ್ಟ ಬಬ್ರುವಾಹನ ಮಹಾಶ್ರೇಷ್ಠ ವೃಷಕೇತು ಉತ್ಕೃಷ್ಟ ಧನಂಜಯ ಇವರು ಮೂವರಾ|
ಬಹಳ ಸಿಟ್ಟಿನವ ಹಂಸಧ್ವಜ ವೀರ ಭಟರಾ |
ಈ ಪೊಡವಿಯೊಳು ಪ್ರಕಟ ಅವನ ಅಶ್ವಜಾಹೀರಾ ||
ವೀರ ನೀಲಧ್ವಜಾ ಶರಸೂರಿ ಮಾಡಿ ಪ್ರದ್ಯುಮ್ನ ಕಾಲಕೆದರಿ ನಿಂತ ಅನುಶಾಲ್ವರಾ |
ಯ್ಯಾರ‍್ಯಾರಿಲ್ಲ ನಿಂತರಲ್ಲಿ ಯುದ್ಧ ಮಾಡವರಾ||೧||

ನೋಡ ನೋಡ ದಂಡಿನೊಳಗ ಕೂಡಿ ಕೂಡಿ ಮಾತಾಡತಾರೆ ಅಂಜಿ
ಓಡಾವಲ್ಲ ವೃಷಕೇತು ಎಂಥಾಧೀರಾ |
ಹಡದ ತಂದಿ ಮಡದ ಹೋದ ಅವನ ನೋಡಬೇಕ ಯಾರಾ |
ಹೇಳತೀನ ಕೇಳರಿ ಇನ್ನ ಮುಂದ ಒಂದ ಮಜಕೂರಾ ||
ಭಪ್ಪರೆ ಕರ್ಣನ ಮಗಾ ಒಪ್ಪಾರೆ ಶಪತಶರಿ ಒಪ್ಪಿಟ್ಟ ಅಪ್ಪಿಕೊಂಡಾರ ಅವಗ ಎಲ್ಲಾರಾ |
ಈ ಪೃಥ್ವಿಯೊಳು ಕಾಣುದಿಲ್ಲ ನೋಡ ಯಾರ‍್ಯಾರಾ||೨||

ಇಷ್ಟ ಮಾತ ಕೇಳಿ ಪಾರ್ಥ ಸಿಟ್ಟಿಗೇರಿ ಥಟ್ಟನೆ ಎದ್ದ ಎಷ್ಟ ಬೆಳಸಿದಿರಿ
ಇವ ಯಾವ ಶೂರಾ |
ನನ್ನ ಬಿಟ್ಟ ಲಢಾಯಿ ಎಂದ ಮಾಡಿದ್ದ ಪೋರಾ |
ಈ ಪೊಡವಿಯೊಳು ಪ್ರಕಟ ಅಯ್ತಿ ನನ್ನ ಹೆಸರಾ ||
ಪಾಶುಪತಾಸ್ತ್ರ  ಈಶ್ವರ ನನಗ ಕೊಟ್ಟಿದಾನ ದ್ರೋಣಾಚಾರಿನ
ಭೀಷ್ಮಾಚಾರಿನ ಹೊಡದಿನ ಠಾರಾ |
ಆಯಾಸ ಇಲ್ದ ಕಡದಿನ ಜಯದ್ರಥನ ಶಿರಾ||೩||

||ಚಾ-೧||

ಗಾಂಢೀವ ಧನುಷ್ಯದಿಂದ ಕಾಂಡವನಾ ದಹನ ಮಾಡಿ ಪುಂಡರನೆಲ್ಲಾ
ಹೊಡದಿನ ಧರಿಯ ಮ್ಯಾಗ |
ಪುಂಡರೀಕಾಕ್ಷ ನನ್ನ ಕೈಯಾಗ||೧||

ಭೂಪಕರ್ಣನ ರೂಪ ತೀರಿ ಚಾಪ ನಾಟಿ ಸಾಯುವಾಗ ನಿಮ್ಮ ಅಪ್ಪ-
ಕೊಟ್ಟ ನನ್ನ ಕೈಯಾಗ |
ಜ್ವಾಕಿ ಮಾಡೀದೀನ ಅಭಿಮನ್ಯುನಂಗ||೨||

||ಚಾ-೨||

ಇಂಥಾ ಲಢಾಯಿ ಮಾಡವರೆಲ್ಲಾ |
ಮಸ್ತ ಮಂದಿನ ಹಾಕಿನ ಬಕ್ಕ ಬರಲಾ||೧||
ಛಪ್ಪನ್ನ ದೇಶದ ರಾಜರೆಲ್ಲಾ |
ಮಸ್ತಕಟ್ಟಿ ಒಗಿಯತಿದ್ರ ಬಿಲ್ಲಾ||೨||

||ಕೂ.ಪ.||

ಹಿಂಡ ರಾಜರನೆಲ್ಲಾ ಭಂಡಮಾಡಿ ಪುಂಡ ಅನಿಸಿಕೊಂಡ ನಾನು ಕಂಡ
ಎಣ್ಣಿಯೊಳಗ ಮೀನ ಹೊಡದೀನು |
ಮೂರು ಲೋಕದೊಳಗ ಗಂಡ ಬಿರದ ಸಾರೀನು |
ಭೂಮಂಡಲ ತುಂಬ ಗದಗಲಸೀನು ||

ಚೌಕ-೨

||ನುಡಿ||

ತಂದಿನ ಕೊಂದ ಪಾಪ ಹಿಂದ ಕಂದ ವೃಷಕೇತು ಅಂದ ಎಂದ ಲಢಾಯಿ
ಮಾಡಿದ್ದಿರಿ ನೀವು ಪಾಂಡವರು |
ಮುಕುಂದ ಬಂದಾಗ ಅವನ ಮುಂದ ನೀವು ಹೇಳವರು |
ಅಯ್ದು ಮಂದಿ ಕೂಡಿ ಗೊಳೊ ಅಂತ ಅಳುವವರು ||
ಇಳದ ರಥಾ ಕೇಳೂವಾಗ ಕೇಳಲಿಲ್ಲ ಬಾಣ ಹೊಡದಿ ಇಳೆಯೊಳು ಖೂಳ
ನಿನಗ ಅಂಬುವರು |
ಕಪಟ ಕಾಳಗ ಮಾಡಿ ಬೆಳದೀದೀರಿ ನೀವು ಅಯ್ವರು||೧||

ಹರಿ ಕುವಕ ಇಲ್ದ ಯಾರನ್ನ ಗೆದ್ದಿ ಖರೆ ಹೇಳ ಮೂರು ಲೋಕದಾಗ
ನಿನಗ ಗಂಡ ಯಾರ ಅನ್ನುವರು |
ನಿನ್ನ ಶೂರತನ ಇಲ್ಲಿ ನೋಡಬೇಕ ಯಾರು |
ಸ್ತ್ರೀ ರಾಜ್ಯದೊಳಗ ಸೋಲಿಸ್ಯಾರು ನಿನಗ ಹೆಂಗಸರು ||
ಕಾಕಾ ಅಂತ ಕಾಯತೀನ ನನ್ನ ಜೋಪಾನ ಮಾಡಿದನೆಂದು ಬೇಕಂತಲೆ
ಕಾಯತೀನ ನಿನ್ನ ಅಬರು |
ಈ ಲೋಕದೊಳು ನಿನ್ನಂಥ ಪುಕ್ಕನ್ಯಾರು||೨||

ಉತ್ರ ಕುಡಬ್ಯಾಡ ಪಾರ್ಥ ಮಾತ್ರ ವೃತದಿಂದ ಕೇಳಿ ಬಾರೊ ನೀವು ಕ್ಷತ್ರಿಯರು |
ಚಂದ್ರವಂಶದ ಖರೆ ಮಂದಿ ನಂಬಲಾರರು |
ಅಲ್ಲಿ ಪುತ್ರ ನೆಂಟ್ರ ಸೇರೂದಿಲ್ಲ ನಿಮ್ನ ಯಾರ‍್ಯಾರು ||
ಶೃಂಗಾರ ಆಗಿ ಹೆಂಗಸರ‍್ಹಾಂಗ ಮುಂಗಯ್ಯಾಗ ಬಳಿ ಇಟ್ಟ  ಹ್ಯಾಂಗ
ಹೋಗಿ ಸೇರಿದ್ರಿ ವಿರಾಟನಗರು |
ಅಲ್ಲಿ ತಂಗಿ ತಂಗಿ ಅಂತ ನಿಮ್ಮನ್ನ ಕರಿಯತಿದ್ದಾರು||೩||

||ಚಾ-೧||

ನೆನಪ ಮಾಡಿಕೊಟ್ಟ ನಮ್ಮ ಅಪ್ಪನ ಕೊಂದದ್ದ ಸಂತಾಪ ಆಗಿ ಹೊಡಿಯ ಬಾಣಾ |
ಚಾಪ ಹೂಡಿ ಕೊಯ್ಯತೀನ ಗೋಣಾ||೧||

ಸತಿಪತಿಗಳೈವರು ಮಿತಿ ತಪ್ಪಿ ಅತಿ ದುಃಖಬಂದ ಕ್ಷಿತಿಯೊಳು ತಿರಗೀರಿ ವನವನಾ |
ನಿಮ್ಮ ಸತ್ಕೀರ್ತಿ ಸುಡುಸುಡು ಫಾಲ್ಗುಣಾ||೨||

||ಚಾ-೨||

ಕೃಷ್ಣ ಇದ್ದಿದ್ದಿಲ್ಲ ಮಣಿಪೂರದಾಗ |
ನಿನ್ನ ಗೋಣ ಕೋದ ಬಬ್ರುವಾಹನ ಆಗ||೧||
ನೀನು ಎರಕೊಳ್ಳವರ ಬುಡಕ ಡೊಗ್ಗಿದಾಂಗ |
ನಾಯೇನ ಆಶ್ರಯ ಬೇಡಾವಲ್ಲ ನಿನ್ನಂಗ||೨||

||ಕೂ.ಪ.|

|ದುರುಳ ಪಾರ್ಥ ನಿನ್ನ ಕೊರಳ ಕೋದ ಹೊಟ್ಟಿಯೊಳಗಿನ ಕರಳ
ತಗದ ಉರಳಿಸಿ ಬಿಟ್ಟೇನು |
ಛೀ ಮರುಳಾ ಕಾಯಾಂವಲ್ಲ ನಿನ್ನ ಸಲಿಗೇನು |
ನಿನ್ನ ಹೊಡಿಯದಿದ್ರ ರವಿತರಳ ಹುಟ್ಟಿ ಫಲವೇನು ||

ಚೌಕ – ೩

||ನುಡಿ||

ಕೆಟ್ಟ ವೃಷಕೇತು ನಿನ್ನ ನೋಡಾವಲ್ಲ ದಿಟ್ಟತನ ಸಿಟ್ಟಬಂದ ಬಿಟ್ಟೀನ
ನಿನ್ನ ಹೊಟ್ಟಿSಕೋದಾ |
ಛೀ ಭ್ರಷ್ಟಾ ಹೇಳಬ್ಯಾಡ ಒಬ್ಬರ ಅನ್ನಾ ತಿಂದಾ |
ನಿನ್ನ ಬಿಟ್ಟಹೋದ ಕರ್ಣ ಅವ ಯಾತರಾಗ ಸುದ್ದಾ ||
ಹೇಳಿದ್ರ ಕೆಡತSತಿ ನಿಮ್ಮಪ್ಪ ಕೂಳಿಗಿ ಬಿದ್ದಾಂವ ಒಬ್ಬರ ಆಳಾಗಿ
ಅನಗಾಲ ಹೇಳಿದಾಂಗ ಕೇಳಿದಾ |
ಜಗಳಾ ಮಾಡಿ ದುರ್ಯೋಧನ ರಾಜ್ಯ ಕಳದಾ||೧||

ಸಣ್ಣಾವೆಂದು ಬಣ್ಣಿಸಿ ಪಾಲ ಬೆಣ್ಣಿ ಉಣ್ಣಿಸಿ ಜೋಕಿ ಮಾಡಿದ್ದಕ್ಕ ನನ್ನ
ಅಬರು ಕಳದಿ ಖಬರ ಇಲ್ಲದಾ |
ನಿನ್ನ ರಕ್ಷಣ ಮಾಡಿದ ಕುಂತಿದೇವಿ ಮರಗ್ಯಾಳ ಅಂದಾ |
ನಿನ್ನ ಪ್ರಾಣ ಬಿಡತೀನ ನಾನು ಅದರಿಂದಾ ||
ನುಚ್ಚಿಗಿ ಬಿದ್ದಾವ ನಿನಗ ಹೆಚ್ಚಿನಮಾತ ಯಾಕ ಹಲ್ಲ ಉಚ್ಚಿ ಒಗದಿನ ನಿನ್ನ   ಜೀವದಿಂದಾ |
ತೆಲಿ ಕಚಕಚ ಕಡದೀನ ನೀಚ ಮತಿ ಮಂದಾ||೨||

ಪುಂಡ ಬಬ್ರುವಾಹನ ನಿನ್ನ ಚಂಡ ತುಂಡ ಮಾಡಿ ಭೂಮಂಡಲಕ
ಒಕ್ಕೂಟ್ಟಿದ್ದ ನನ್ನ ಕಂದಾ |
ಭಂಡ ವೃಷಕೇತು ರುಂಡವಿಲ್ಲದ ಬಿದ್ದಾ |
ಕಣ್ಣ ಕೆಂಡದಂತೆ ಮಾಡಿ ಅರ್ಜುನ ನುಡದಾ ||
ಕೊಂದಿsವ ಆಗ ದುಷ್ಟರನೆಲ್ಲಾ ತುದಿಮಗಾ ಒಂದಗೂಡಿ ಒಂದ ಲಢಾಯಿ
ಮಾಡಲಿಲ್ಲ ನೀವೆಂದಾ |
ಮಂದಿ ಬೈದಾರಂತ ಬಿಡತಿsನ ನಿನ್ನ ಕೈಕಾದಾ||೩||

||ಚಾ-೧೧||

ಘಾತಕ ವೃಷಕೇತು ಯಾತಕ ಕೇಳೂದು ಮಹಾಪಾತಕ ನಿಮ್ಮ ಅಪ್ಪ ಹೋದ ಸತ್ತಾ |
ನಿನ್ನ ಕೊಲ್ಲೂದಿಲ್ಲ ಸೂತಕ ಬಂದೀತಂತಾ||೧||

ಒತ್ತರದಿಂದ ಬಂಪ ನಿನ್ನ ನೆತ್ತರ ಸೀಟೂದ ಅಗಾಧ ಅಲ್ಲ ಉತ್ರ ಕುಡ
ಬ್ಯಾಡ ನನ್ನ ಎದುರಿಗಿ ನಿಂತಾ |
ಮಹಾ ಪಾತಕ ನಿಮ್ಮಪ್ಪ ಹೋದ ಸತ್ತಾ||೨||

||ಚಾ-೨ ||

ನೀ ಸಣ್ಣವ ಅಂದ ಕಾಯತೀನ ಬಿಡೆ |
ನನ್ನ ಕಣ್ಣಾಗ ನೀರ ಬಂದಾವು ಹಿಂದಿಗಡೆ||೧||

ಧರ್ಮ ಭೀಮ ನಕುಲ ಸಹದೇವ ಕೂಡಿ |
ವರ್ಮ ಸಾಧಿಸಿರೆಂತ ಬೈದಾರವರು ನೋಡಿ||೨||

||ಕೂ.ಪ.||

ಅಂಬಿಗ್ಯಾರ ತೊತ್ತಿನ ಮಗನ ನಂಬಿಗಿಲ್ಲ ವೃಷಕೇತು ಅಂಬು ಹೊಡದ
ತಗೋತೀನ ಪ್ರಾಣವನು |
ಕೇಳ ಜಂಬತನ ಬಿಡ ಸತ್ತ ಹೋದೀ ನೀನು |
ಹಂಬಲಿಟ್ಟ ಕುಂತೀದೇವಿ ನಿನಗ ಮರಿಗ್ಯಾಳಂತೀನು || ಮೂರು ||

ಚೌಕ – ೪

||ನುಡಿ||

ಬಣ್ಣದ ಮಾತ ಆಡಬ್ಯಾಡ ಕೇಳ ಫಲ್ಗುಣಾ ನಿಮ್ಮ ಅಣ್ಣ ಧರ್ಮರಾಜಾ
ಸುಳ್ಳ ನುಡದಾನು |
ಮಣ್ಣ ಕೂಡಿಸಿ ಬಿಟ್ಟೀರಿ ಸತ್ಯ ವಚನವನು |
ದ್ರೋಣಾಚಾರ್ಯನ ಕೊಲ್ಲುದಕ್ಕ ಹುಸಿ ನುಡದಾನು ||
ಅಶ್ವತ್ಥಾಮೋ ಹತಃ ನರೋವಾ ಕುಂಜರೋವಾ ಎಂದು ಧರ್ಮರಾಜಾ
ಲಢಾಯಿಯೊಳಗ ನಿಂತ ಒದರ‍್ಯಾನು |
ಮಗಾ ಸತ್ತಂತ ದ್ರೋಣಾಚಾರಿ ಅಲ್ಲಿ ಮಡಿದಾನು||೧||

ಎಷ್ಟ ಮಾತಾಡಿದರ ಪಾರ್ಥ ನಿನಗ ಸಿಟ್ಟ ಇಲ್ಲ ಎಂಥಾ ಕೆಟ್ಟ ಪಾಂಡವರ
ಹೊಟ್ಟೀಲೆ ಹುಟ್ಟೀದಿ ನೀನು |
ಕುದರಿ ಕಟ್ಟಿಹಾಕತೀನ ನೀ ಮಾಡೂದೇನು |
ಗಟ್ಟಿ ಮುಟ್ಟಿ ದರ್ಭಿಲೆ ಅಶ್ವಬಿಗದಾನು ||
ಪಾರ್ಥ ನಿನಗ ನಾಚಿಕಿಲ್ಲ ಛೀ ನೀನು ಆಚೀಕ ನಿಲ್ಲ ಹಚ್ಯಾ ಹುಚ್ಯಾ
ಮುಂಡೆಗಂಡ ನಿಮ್ಮಣ್ಣ ಧರ್ಮರಾಜಾ ವಚನ ಭ್ರಷ್ಟನು |
ಅಚ್ಚುತನ ಬಲದಿಂದ ಧರ್ಮ ಅನಸಿದಾನು||೨||

ಕಡಕಡದ ಹಲ್ಲುಗಳ ಪಾರ್ಥ ಸಿಡಸಿಡದ ಮಾಡತಾನ ಶಪಥ ಫಡಫಡಲೆ
ನೂರಾರು ಶರಗಳ ಹರದಾನು |
ನಡುವ ಕಡಕಡದ ವೃಷಕೇತು ಕೆಡವಿದಾನು |
ರಥ ಒಡ ಒಡದ ಹೋಗತಾವು ನಡಿತ ಯುದ್ಧವನು |
ಜಿಗಜಿಗದ ಮಾಡತಾನ ಜಗಳಾ ತಗತಗದ ಒಗಿಯತಾರ ಸರಳಾ ಬಿಗಬಿಗದ
ಬಿಡತಾರ ಆಗ ಶಸ್ತ್ರವನು |
ಕೈಮುಗಯಬ್ಯಾಡ ಅಂತಿದ್ದ ಪ್ರದ್ಯುಮ್ನನ||೩||

||ಚಾ-೧||

ಬಹಳ ಸಿಟ್ಟಿಂದ ಬಿಟ್ಟಿದ್ದ ಬಾಣ ಅಷ್ಟ ಪರ್ವತ ನಡಗ್ಯಾವ ದಿಟ್ಟ ಮಾಡಿ ವೃಷಕೇತು |
ಸ್ಪಷ್ಟ ಪಾರ್ಥನ ಖಬರ ಹಾರೀತು||೧||

ಬಿದ್ದಾನ ಅರ್ಜುನ ಆಗ ಎದ್ದಾನ ಶ್ರೀಹರಿ ಬೇಗ ಅವರಿಗೆ ಸಾರಥಿ ಯಾವತ್ತು |
ತಂದಿ ಮಗನ ಮಾಡಿದ ಅಪಸಾತು||೨||

||ಚಾ-೨||

ನಿಮ್ಮ ನಿಮ್ಮ ಒಳಗ ಬ್ಯಾಡ ಕದನಾ |
ನಿನ್ನ ಪುತ್ರನ ಕರಕೊಂಡ ಹೋಗ ಅರ್ಜುನಾ ||
ಜಗಳಾ ಹಚ್ಚಿ ಮೋಜ ನೋಡಿದಾನ ತಾನ |
ನಿನ್ನ ಗರ್ವ ಇಳಿಸಿ ಬಿಟ್ಟಾನೊ ಅರ್ಜುsನಾ ||

||ಕೂ.ಪ. ||

ಬೀಗನ ಸಂಗಾಟ ಆಗ ನಗತಾನ ಶ್ರೀ ಹರಿ ಬೆಗ ನಾಗನಾಥ ಮಾಡಿದಂ ಕಪಟವನ
ಜಾಗ ಇಂಚಲದಲ್ಲಿ ನೆನದ ಸ್ವಾಮಿ ಬಂಕನಾಥನು |
ಸಕ್ಕರ ನಾಯಿಕ ಕವಿ ಮಾಡಿ ಹಿಂಗ ಹೇಳಾನು || ಮೂರು ||

ರಚನೆ : ಸಕ್ಕರ ನಾಯಿಕ
ಕೃತಿ : ಚಾಪ ಹಾಕತೀವ ಡಪ್ಪಿನ ಮ್ಯಾಲ